Pratap Simha's Blog, page 25
February 11, 2017
2017 ರ ಅಂತರಾಷ್ಟ್ರೀಯ ಯೋಗ ದಿನದ ಉದ್ಘಾಟನೆಗೆ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜಿ ರವರಿಗೆ ಆಹ್ವಾನ
Published on February 11, 2017 04:02
February 6, 2017
February 5, 2017
February 4, 2017
ಜ್ಞಾನ ವರದ ಮೋಹನ ರಾಗ!
ಜ್ಞಾನ ವರದ ಮೋಹನ ರಾಗ!
ಮೊದಲನೆಯವನು ಸ್ಯಾಮ್, ಎರಡನೆಯವನು ಜಾನ್ ಹಾಗೂ ಮೂರನೆಯವನು ಎರಿಕ್. ಈ ಮೂವರೂ ರಾಲ್ಫ್ ಎಂಬ ರಾಜನ ಮಕ್ಕಳು. ಇತ್ತ ರಾಲ್ಫ್‌ಗೆ ಮುಪ್ಪು ಆವರಿಸಿದೆ. ಕೈಕಾಲುಗಳು ತ್ರಾಣ ಕಳೆದುಕೊಂಡಿವೆ. ಹಾಸಿಗೆ ಹಿಡಿದಿದ್ದಾನೆ. ಇನ್ನು ಕೆಲವೇ ದಿನಗಳಲ್ಲಿ ಸಾಯಲಿದ್ದಾನೆ. ಆ ಬಗ್ಗೆ ರಾಲ್ಫ್‌ಗೆ ಯಾವ ಅಳುಕೂ ಇಲ್ಲ, ಪಶ್ಚಾತಾಪವಂತೂ ಇಲ್ಲವೇ ಇಲ್ಲ. ಆದರೂ ಆತನ ಮುಖದಲ್ಲಿ ಚಿಂತೆ ಎದ್ದು ಕಾಣುತ್ತಿರುತ್ತದೆ. ಉತ್ತರಾಧಿಕಾರಿಯನ್ನಾಗಿ ಯಾರನ್ನು ನೇಮಕ ಮಾಡಬೇಕೆಂಬ ಪ್ರಶ್ನೆ ಆತನನ್ನು ಕಾಡುತ್ತಿರುತ್ತದೆ. ತನ್ನ ಮೂವರೂ ಮಕ್ಕಳನ್ನು ಬರಮಾಡಿಕೊಂಡ ರಾಲ್ಫ್ ಮಕ್ಕಳೇ ನನಗೆ ಸಾವು ಸಮೀಪಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಸಾಯಲಿದ್ದೇನೆ. ಹಾಗಾಗಿ ನಾನು ಬದುಕಿರುವಾಗಲೇ ಉತ್ತರಾದಿಕಾರಿಯನ್ನು ನೇಮಕ ಮಾಡಬೇಕೆಂಬ ಗೊಂದಲವುಂಟಾಗಿದೆ. ಆದ್ದರಿಂದ ಒಂದು ಪರೀಕ್ಷೆಯನ್ನಿಟ್ಟಿದ್ದೇನೆ. ಅಗೋ ಅಲ್ಲೊಂದು ಕೋಣೆಯಿದೆ. ಯಾವ ವಸ್ತುವೇ ಆಗಿದ್ದರೂ ಅದರಿಂದ ಯಾರು ಆ ಕೋಣೆಯನ್ನು ಮೊದಲು ತುಂಬಿಸುತ್ತಾರೋ ಅವರೇ ಮುಂದಿನ ರಾಜ ಎಂದು ಹೇಳುತ್ತಾನೆ.
ಹೀಗೆ ಹೇಳಿದ ಕೂಡಲೇ ಕಾರ್ಯ ಪ್ರವೃತ್ತನಾದ ಮೊದಲನೆಯ ಮಗ ಸ್ಯಾಮ್, ಅಮೂಲ್ಯವಾದ ವಜ್ರಗಳಿಂದ ಕೋಣೆಯನ್ನು ತುಂಬಿಸಲು ಮುಂದಾಗುತ್ತಾನೆ. ಆದರೆ ಅರ್ಧ ತುಂಬುವಷ್ಟರಲ್ಲಿ ಇದ್ದ ವಜ್ರವೆಲ್ಲ ಬರಿದಾಗುತ್ತದೆ. ಎರಡನೇಯ ಮಗ ಚಿನ್ನವನ್ನು ತಂದು ತುಂಬಿಸುತ್ತಾನೆ. ಆದರೂ ಕೋಣೆ ತುಂಬುವುದಿಲ್ಲ. ಅಣ್ಣಂದಿರಿಬ್ಬರನ್ನೂ ನೋಡುತ್ತಾ ನಿಂತಿದ್ದ ಕೊನೆಯ ಮಗ ಎರಿಕ್, ನಿಧಾನವಾಗಿ ದೀಪವೊಂದನ್ನು ಹಚ್ಚಿ ಕೋಣೆಯ ಮಧ್ಯದಲ್ಲಿಡುತ್ತಾನೆ. ಕತ್ತಲೆ ಮರೆಯಾಗುತ್ತದೆ. ಕೋಣೆಯ ತುಂಬ ಬೆಳಕು ಆವರಿಸುತ್ತದೆ. ಎರಿಕ್ ಉತ್ತರಾದಿಕಾರಿಯಾಗುತ್ತಾನೆ . ವಿದ್ಯೆಯೂ ಕೂಡ ಒಂದು ಬೆಳಕು. ಅಂತಹ ಬೆಳಕನ್ನು ಚೆಲ್ಲುವುದು ಒಂದು ಪವಿತ್ರ ಕಾರ್ಯವೇ ಸರಿ.
ಡಾ ಮೋಹನ್ ಆಳ್ವ ನಮಗೆ ಆಪ್ತವಾಗುವುದು ಇದೇ ಕಾರಣಕ್ಕೆ. ಆಳ್ವಾಸ್ ನುಡಿಸಿರಿ ಎನ್ನುವ ಪರ್ಯಾಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಿ ಆಳುವ ಸರಕಾರವನ್ನೇ ನಾಚಿಸುತ್ತಿರುವ ಆಳ್ವ ಅವರನ್ನು ಹೊಸದಾಗಿ ಪರಿಚಯಿಸುವ ಅಗತ್ಯವಿಲ್ಲ. ಆದರೆ ಬರೆಯಲು ಕುಳಿತರೆ ಅವರ ಸಭ್ಯತೆಯ ಬಗ್ಗೆ ಬರೆಯಬೇಕೋ, ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಬೇಕೋ, ಪ್ರತಿಭೆಯ ಬಗ್ಗೆ ಹೇಳಬೇಕೋ ಅಥವಾ ಶಕ್ತಿ ಹಾಗೂ ಸಂಪನ್ಮೂಲ ಸದ್ವಿನಿಯೋಗವಾದರೆ ಏನಾಗುತ್ತದೆ ಎಂಬುದನ್ನು ವರ್ಣಿಸಬೇಕೋ? ಎಂಬ ಗೊಂದಲ ಕಾಡಲಾರಂಭಿಸುತ್ತದೆ. 63 ವರ್ಷದ ಡಾ. ಮೋಹನ್ ಆಳ್ವ ವೃತ್ತಿಯಲ್ಲಿ ವೈದ್ಯರು. ಉಡುಪಿಯ ಎಸ್‌ಡಿಎಂ ಕಾಲೇಜಿನಲ್ಲಿ ಆಯುರ್ವೇದದಲ್ಲಿ ವೈದ್ಯಕೀಯ ಪದವಿ ಮುಗಿಸಿದ ಅವರು 1980ರಲ್ಲಿ ಮೂಡಬಿದ್ರೆಯಲ್ಲಿ ಪುಟ್ಟ ಕ್ಲಿನಿಕ್ ತೆರೆದಾಗ ಇಡೀ ನಗರದಲ್ಲಿ ಒಂದೆ ಒಂದು ಕ್ಲಿನಿಕ್ ಇರಲಿಲ್ಲ. ಆ ಕಾಲದಲ್ಲಿ ಹಾವು ಕಡಿತ ವ್ಯಾಪಕ ಸಮಸ್ಯೆಯಾಗಿ ಪರಿಣಮಿಸಿತ್ತು. ಈ ಹಿನ್ನೆಲೆಯಲ್ಲಿ ಒಂದು ಸುಸಜ್ಜಿತ ಆಸ್ಪತ್ರೆಯನ್ನು ಮುಂದಾದ ಆಳ್ವ ಅವರ ಪಾಲಿಗೆ 1980-84ರ ಅವಧಿ ಒಂದು Testing Time ಆಗಿತ್ತು. ಸಾಲ ಮಾಡಿ ಆಸ್ಪತ್ರೆ ಕಟ್ಟಿದರು.
ಸಕಲ ವೈದ್ಯಕೀಯ ಸೇವೆಗಳನ್ನೂ ಒದಗಿಸುವ ಸಲುವಾಗಿ ಎಲ್ಲ ವಿವಿಧ ವೈದ್ಯರನ್ನೂ ಕರೆತಂದರು. ಅಲ್ಲಿಂದ ಸುಮಾರು ಇದುವರೆಗೂ ಸುಮಾರು 6 ಸಾವಿರ ಹಾವು ಕಡಿತ ಪ್ರಕರಣಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಆಳ್ವರು ವಿಫಲವಾಗಿದ್ದು ಒಮ್ಮೆ ಮಾತ್ರ. ಕೊನೆಗೆ ‘ಆಳ್ವಾಸ್ ಫಾರ್ಮಸಿ’ಯನ್ನು ತೆರೆದ ಅವರ ದೂರದೃಷ್ಟಿಯ ಫಲವಾಗಿ ಇಂದು ಮಿಜಾರುನಂತಹ ಕುಗ್ರಾಮದಲ್ಲಿ 150 ವಿಧದ ಆಯುರ್ವೇದ ಔಷಧಗಳನ್ನು ತಯಾರಿಸಲಾಗುತ್ತಿದೆ. ಆಸ್ಪತ್ರೆ, ಫಾರ್ಮಸಿ ತೆರೆದ ಮಾತ್ರಕ್ಕೆ ಸಾಧಿಸಿದ್ದು ಸಾಕು ಎಂದು ಅವರು ಸುಮ್ಮನಾಗಲಿಲ್ಲ. ಒಬ್ಬ ಸಾಮಾನ್ಯ ರೈತನ, ನಿರ್ಗತಿಕನ ಮಕ್ಕಳೂ ಕಾಲೇಜು ಮೆಟ್ಟಿಲು ಹತ್ತುವಂತಾಗಬೇಕು ಎಂಬ ಕನಸು ಕಂಡರು. ಅಂತಹ ಕನಸಿನ ಬೆನ್ನುಹತ್ತಿ ಹೊರಟ ಆಳ್ವರ ಪ್ರಯತ್ನದ ಫಲವಾಗಿ ಇಂದು ವಿದ್ಯಾಗಿರಿಯಲ್ಲಿ ಹತ್ತಾರು ಕಟ್ಟಡಗಳನ್ನು ಹೊಂದಿರುವ ಒಂದು ಭವ್ಯ ಕ್ಯಾಂಪಸ್ ತಲೆಯತ್ತಿದೆ.
ಇದು ಉತ್ಪ್ರೇಕ್ಷೆಯ ಮಾತಲ್ಲ. ಜೈನ ಬಸದಿಗಳಿಗಾಗಿ, ಸಾವಿರ ಕಂಬಗಳ ದೇವಾಲಯಕ್ಕಾಗಿಯೇ ಪ್ರಸಿದ್ಧಿಯಾಗಿದ್ದ ಮೂಡಬಿದ್ರೆಯನ್ನು ಇಂದು ಆಳ್ವಾಸ್ ನುಡಿಸಿರಿ ಮತ್ತು ಆಳ್ವಾಸ್ ವಿರಾಸತ್‌ಗಳಿಂದಾಗಿ ಗುರುತಿಸುವಂತಹ ವಾತಾವರಣ ಸೃಷ್ಟಿಯಾಗಿದೆ. ವಿದ್ಯಾಗಿರಿಯಲ್ಲಿರುವ ‘ಆಳ್ವಾಸ್ ಕಾಲೇಜ್’ ಕ್ಯಾಂಪಸನ್ನು ಒಮ್ಮೆ ನೋಡಿದರೆ ಆಳ್ವ ಅವರ ಸಾಧನೆ ಏನೆಂಬುದು ಅರಿವಾಗುತ್ತದೆ. 30 ಸಾವಿರ ವಿದ್ಯಾರ್ಥಿಗಳಿಗೆ ಅಲ್ಲಿ ವಿದ್ಯಾದಾನ ಮಾಡಲಾಗುತ್ತಿದೆ! ನಮ್ಮ ಮಠ-ಮಂದಿರಗಳೂ ಸೇರಿದಂತೆ ಎಲ್ಲರೂ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳನ್ನಷ್ಟೇ ಕಟ್ಟಿ ಕಾಸು ಮಾಡುತ್ತಿದ್ದರೆ ಆಳ್ವ ಅವರು ಭಾರತೀಯ ವೈದ್ಯ ಪದ್ಧತಿಗಳಾದ ಆಯುರ್ವೇದ ಹಾಗೂ ಪ್ರಕೃತಿ ಚಿಕಿತ್ಸೆ ಕೋರ್ಸ್‌ಗಳನ್ನೂ ತೆರೆದಿದ್ದಾರೆ.
ಪಿಯುಸಿ ಹಾಗೂ ಡಿಗ್ರಿ ಕಾಲೇಜುಗಳನ್ನು ಸ್ಥಾಪನೆ ಮಾಡಿದ್ದಾರೆ, ಜೈವಿಕ ತಂತ್ರಜ್ಞಾನದಲ್ಲಿ ಪದವಿ ಆರಂಭಿಸಿದ್ದಾರೆ. ಇಂದು ರಾಜ್ಯದ ಯಾವುದೇ ಕಾಲೇಜುಗಳಲ್ಲಿ ಕಾಣಿಸಿಗದಂತಹ ಅತ್ಯುತ್ತಮ ವಿಜ್ಞಾನ ಪ್ರಯೋಗಾಲಯಗಳನ್ನು ಆಳ್ವಾಸ್ ಕಾಲೇಜಿನಲ್ಲಿ ಕಾಣಬಹುದು, ಇಷ್ಟೆಲ್ಲಾ ಸವಲತ್ತುಗಳನ್ನು ಕಲ್ಪಿಸಿರುವ ಆಳ್ವಾಸ್ ಕಾಲೇಜಿನ ವಿಶೇಷತೆಯೆಂದರೆ ಸಾಮನ್ಯ ವ್ಯಕ್ತಿಯ ಮಕ್ಕಳೂ ಅಲ್ಲಿ ಕಲಿಯಬಹುದಾಗಿದೆ. ಇತರೆ ಕಾಲೇಜುಗಳಿಗಿಂತ ಕಡಿಮೆ ಫೀ ತೆಗೆದುಕೊಳ್ಳುತ್ತಾರೆ. ಅಷ್ಟೇ ಅಲ್ಲ, ಅದು ಯಾವುದೇ ತರಗತಿಯಾಗ ಬಹುದು ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗಲ್ಲರಿಗೂ ಉಚಿತ ಶಿಕ್ಷಣ ನೀಡಲಾಗುತ್ತದೆ! ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಓದಿಸುವಂತಹ ಪದ್ದತಿಯೂ ಇದೆ. ಸಾಮಾನ್ಯವಾಗಿ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುತ್ತಾರೆ. ಆದರೆ ಡಾ ಮೋಹನ್ ಆಳ್ವ ಅವರ ಬಹುದೊಡ್ಡ ಹೆಗ್ಗಳಿಕೆಯಂದರೆ ಅವರು ಮೂಡಬಿದ್ರೆಯಲ್ಲಿಯೇ ಅತ್ಯಂತ ಜನಪ್ರಿಯ ವ್ಯಕ್ತಿ. ಅವರು ಕಟ್ಟಿರುವುದು ಎಲ್ಲರಿಗೂ ಮಾದರಿಯಾಗಬಲ್ಲ ಕಾಲೇಜು, ಆ ಕಾಲೇಜು ವಿದ್ಯಾದಾನವೊಂದೇ ಅಲ್ಲ, ಕ್ರೀಡೆಯಲ್ಲೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುತ್ತಿದೆ.
2006ರಲ್ಲಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಕೂಟದಲ್ಲಿ ಅರೆ ಮ್ಯಾರಥಾನ್‌ನಲ್ಲಿ ಕರ್ನಾಟಕಕ್ಕೆ ಬಂದ ಏಕೈಕ ಚಿನ್ನದ ಪದಕವನ್ನು ಗಳಿಸಿದ ಗುರುನಾಥ್ ಕಲ್ಯಾಣಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ, ಆ ಅಥ್ಲೆಟಿಕ್ ಕೂಟದಲ್ಲಿ ಕಾಲೇಜಿನ 55 ಕ್ರೀಡಾಪಟುಗಳು ಭಾಗವಹಿಸಿದ ದಾಖಲೆಯನ್ನೇ ನಿರ್ಮಿಸಿದ್ದಾರೆ. ಅಖಿಲ ಭಾರತ ಯೂತ್ ಫೆಸ್ಟ್‌ನಂತಹ ಸಾಂಸ್ಕೃತಿಕ ಸ್ಪರ್ಧೆಯಲ್ಲೂ ಪದಕ ಗೆಲ್ಲುವ ಮೂಲಕ ಆಳ್ವಾಸ್ ತನ್ನ ಛಾಪು ಮೂಡಿಸಿದೆ. ಇದೇನು ಮ್ಯಾಜಿಕ್ ಅಲ್ಲ ಪಾಳುಬಿದ್ದಿದ್ದ ಮೂಡಬಿದ್ರೆಯ ಸರಕಾರಿ ಕ್ರೀಡಾಂಗಣವನ್ನು ಸ್ವಂತ ಪಾಕೆಟ್‌ನಿಂದ 25 ಲಕ್ಷ ರು., ಖರ್ಚು ಮಾಡಿ ಅಭಿವೃದ್ಧಿಗೊಳಿಸಿರುವ ಡಾ. ಮೋಹನ್ ಆಳ್ವ, ಕ್ರೀಡಾ ತರಬೇತುದಾರರನ್ನು ನೇಮಕ ಮಾಡಿ ವಿದ್ಯಾರ್ಥಿಗಳನ್ನು ಅಣಿಗೊಳಿಸುತ್ತಿದ್ದಾರೆ. ಆಳ್ವಾಸ್ ಕಾಲೇಜಿನಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ನೂತನ ಉಪನ್ಯಾಸಕರೆಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಏಕರೂಪದ ಪ್ರಾರಂಭಿಕ ಸಂಬಳವನ್ನು ನೀಡಲಾಗುತ್ತದೆ. ಹೀಗೆ ಹೊಸದಾಗಿ ವೃತ್ತಿಗೆ ಕಾಲಿಡುವ ಎಲ್ಲ ಉಪನ್ಯಾಸಕರಿಗೂ ಸಾರಾಸಗಟವಾಗಿ ಅತಿ ಹೆಚ್ಚು ಸಂಬಳ ನೀಡುವ ಖಾಸಗಿ ಕಾಲೇಜು ಇದಾಗಿದೆ. ಇಂತಹ ಆಲ್ ರೌಂಡ್ ಡೆವೆಲಪ್‌ಮೆಂಟ್ ಮತ್ತು ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಆಳ್ವಾಸ್ ದಕ್ಷಿಣ ಕನ್ನಡದಲ್ಲಿಯೇ ನಂಬರ್ ಒನ್ ಕಾಲೇಜು.
ಇಷ್ಟೆಲ್ಲಾ ಜನಾನೂರಾಗಿ ಕಾರ್ಯ ಮಾಡುತ್ತಿರುವ ಮೊಹನ್ ಆಳ್ವ ಅವರು ಕುಬೇರರೇನಲ್ಲ! ಕೋಟಿ ಕೋಟಿ ರು., ಸಾಲ ಮಾಡಿ ಜ್ಞಾನ ದೇಗುಲಗಳನ್ನು ಕಟ್ಟಿದ್ದಾರೆ. ಸಾಲದ ಹೊರೆಯಿದ್ದರೂ ಆಳ್ವಾಸ್ ವಿರಾಸತ್ ಎಂಬ ಸಂಗೀತ ಸುಧೆಯನ್ನು ಕಳೆದ 20 ವರ್ಷಗಳಿಂದ ಹರಿಸುತ್ತಾ ಬಂದಿದ್ದಾರೆ. ತಲಾ ನಾಲ್ಕು ಲಕ್ಷ ರು., ಗೌರವ ಧನ ನೀಡಿ ಜಾಕಿರ್ ಹುಸೇನ್ ಹಾಗೂ ಬಾಲಸುಬ್ರಹ್ಮಣ್ಯಂ ಅವರಂತಹ ಮಹಾನ್ ಕಲಾವಿದರನ್ನು ಕರೆಸಿ ಸೈ ಎನಿಸಿಕೊಂಡಿದ್ದಾರೆ. ಸೋನಾಲ್ ಮಾನ್ ಸಿಂಗ್, ಕುನ್ನುಕುಡಿ, ವೈದ್ಯನಾಥನ್ ಅವರಂತಹವರು ಮೂಡಬಿದ್ರೆಗೆ ಬಂದು ಮೆಚ್ಚಿ ಹೋಗಿದ್ದಾರೆ. ಇಂತಹ ಪ್ರತಿ ವಿರಾಸತ್‌ಗೆ ಕನಿಷ್ಠ 35 ಲಕ್ಷ ರು., ಬೇಕಾಗುತ್ತದೆ. ಮೂರು ವರ್ಷದಿಂದ ನಡೆಸಿಕೊಡು ಬರುತ್ತಿರುವ ಆಳ್ವಾಸ್ ನುಡಿಸಿರಿಗೆ 25 ಲಕ್ಷ ರು., ಖರ್ಚಾಗುತ್ತದೆ.
ಮೈಸೂರು, ಬೆಂಗಳೂರುಗಳಿಗೆ ಮಾತ್ರ ಸೀಮಿತವಾಗಿದ್ದ ಸಾಂಸ್ಕೃತಿಕ ವಾತಾವರಣ ಮೋಹನ್ ಆಳ್ವರಿಂದಾಗಿ ದಕ್ಷಿಣ ಕನ್ನಡಕ್ಕೂ ಬರುವಂತಾಗಿದೆ. ಮನಸ್ಸಿದ್ದರೆ ಏನೂ ಬೇಕಾದರೂ ಮಾಡಬಹುದು ಎಂಬುದಕ್ಕೆ ಆಳ್ವ ಅವರಿಗಿಂತ ಉದಾಹರಣೆ ಬೇಕಿಲ್ಲ. ಅಷ್ಟೆ ಅಲ್ಲಾ, ಡಾ. ಮೋಹನ್ ಆಳ್ವ ಅವರು ಒಬ್ಬ ಭರತನಾಟ್ಯ ಕಲಾವಿದ. ರಂಗೋಲಿ ಹಾಕುತ್ತಾರೆ. ಭೂತದ ಕೋಲಾ ಕಟ್ಟುತ್ತಾರೆ. ವೇದಿಕೆ ನಿರ್ಮಾಣದಲ್ಲಿ ಎತ್ತಿದ ಕೈ. ಸುಮಾರು ಎರಡು ಸಾವಿರ ಗಣೇಶನ ವಿಭಿನ್ನ ವಿಗ್ರಹಗಳನ್ನು ಸಂಗ್ರಹಿಸಿರುವ ಅವರು ನೈಜ್ಯ ಅರ್ಥದಲ್ಲಿ ಬಹುಮುಖ ಪ್ರತಿಭೆ. 1998ರಲ್ಲಿ ಪತ್ನಿಯನ್ನು ಕಳೆದುಕೊಂಡ ಮೊಹನ್ ಆಳ್ವರು ಹೆಂಡತಿಯ ಹೆಸರಿನಲ್ಲಿ ಶೋಭಾವನ ಎಂಬ ಸಸ್ಯಧಾಮವನ್ನು ನಿರ್ಮಿಸಿದ್ದಾರೆ. ಇಲ್ಲಿ ಸಂಪಿಗೆ ಸೇರಿದಂತೆ ಹಲವಾರು ಅಮೂಲ್ಯ ಸಸ್ಯಗಳ ವಿಬಿನ್ನ ತಳಿಗಳನ್ನು ಬೆಳೆಸಿದ್ದಾರೆ.
ಹದಿನಾರು ವಿಧದ ತುಳಸಿ ಗಿಡಗಳಿವೆ. ಅಷ್ಟದಿಕ್ಪಾಲಕರ ಸಂಕೇತವಾಗಿ ಎಂಟು ವಿಧದ ಮರಗಳನ್ನು ಬೆಳೆಸಿದ್ದಾರೆ. ನಿಯಮದಂತೆ ಸತ್ಯನಾರಾಯಣ ಪೂಜೆಗೆಂದೇ ಮೀಸಲಾದ 24 ಪುಷ್ಪಗಳಿದ್ದು, ಇವು ದುರ್ಲಭವಾದ್ದರಿಂದ ನಮ್ಮ ಅರ್ಚಕರು ತುಳಸಿಯೊಂದರಿಂದಲೇ 24 ಬಾರಿ ಪ್ರೋಕ್ಷಣೆ ಮಾಡುತ್ತಾರೆ. ಆದರೆ ಶೋಬಾವನದಲ್ಲಿ 24 ಪುಷ್ಪಗಳ ಗಿಡಗಳನ್ನು ಬೆಳೆಸಿದ್ದಾರೆ. ಒಂದು ಸಂಸ್ಥೆಯನ್ನು ಕಟ್ಟುವುದಕ್ಕ್ಕೂ, ಸಮಾಜವನ್ನು ಕಟ್ಟುವುದಕ್ಕೂ ಬಹಳ ವ್ಯತ್ಯಾಸವಿದೆ. ಶಿಕ್ಷಣ ಕ್ಷೇತ್ರವನ್ನೂ ಒಂದು ಉದ್ಯಮವನ್ನಾಗಿ ಪರಿವರ್ತಿಸಿರುವವರ ನಡುವೆ ಅದನ್ನು ದ್ಯೇಯವಾಗಿಟ್ಟುಕೊಂಡು ಸಮಾಜವನ್ನು ಕಟ್ಟುತ್ತಿರುವ ಡಾ. ಮೋಹನ್ ಆಳ್ವ ಅವರ ಬಗ್ಗೆ ಬರೆಯಲು ಕಾರಣಗಳಾಗಲಿ, ಸಂದರ್ಭವಾಗಿಲಿ ಬೇಕಿಲ್ಲ. ಆದರೆ ಮೊನ್ನೆ ನಡೆದ ಗಣರಾಜೋತ್ಸವದ ದಿನದಂದು ಆಳ್ವಾಸ್ 30 ಸಾವಿರ ವಿದ್ಯಾರ್ಥಿಗಳು ಒಂದೆಡೆ ನಿಂತು ರಾಷ್ಟ್ರಗೀತೆಯನ್ನು ಹಾಡುತ್ತಿರುವ ವಿಹಂಗಮ ನೋಟವನ್ನು ಚಿತ್ರದಲ್ಲಿ ಕಂಡಾಗ ಆಳ್ವರ ಸಾಧನೆ ಬಗ್ಗೆ ಬರೆಯಬೇಕೆಂಬ ತುಡಿತವನ್ನು ತಡೆದುಕೊಳ್ಳಲಾಗಲಿಲ್ಲ. ಈ ‘ಮೋಹನ’ರಾಗ ನಾಡಿನಾದ್ಯಂತ ಮೊಳಗಲಿ.
Published on February 04, 2017 03:34
February 1, 2017
January 29, 2017
January 28, 2017
ಈ ಸುದಿನ ಕಾರ್ಯಪ್ಪನವರ ಜನ್ಮದಿನ!
ಈ ಸುದಿನ ಕಾರ್ಯಪ್ಪನವರ ಜನ್ಮದಿನ!
ಅದು 1965ರ ಭಾರತ-ಪಾಕಿಸ್ತಾನದ ನಡುವಿನ ಯುದ್ಧ!
ಆಗ ಫ್ಲೈಟ್ ಲೆಫ್ಟಿನೆಂಟ್ ಆಗಿದ್ದ ಕಾರ್ಯಪ್ಪನವರ ಪುತ್ರ ಕೆ.ಸಿ. ನಂದ ಕಾರ್ಯಪ್ಪನವರಿದ್ದ ಹಂಟರ್ ವಿಮಾನವನ್ನು ಪಾಕ್ ಕೆಳಗುರುಳಿಸಿತು. ನಂದ ಅವರು ಕಾರ್ಯಪ್ಪನವರ ಪುತ್ರ ಎಂದು ತಿಳಿದ ಕೂಡಲೇ ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಯೂಬ್ ಖಾನ್ ಜನರಲ್ ಕಾರ್ಯಪ್ಪನವರಿಗೆ ಕರೆ ಮಾಡಿ, ಮಗನನ್ನು ಬಿಡುಗಡೆಗೊಳಿಸುವ ಪ್ರಸ್ತಾಪವನ್ನಿಟ್ಟರು. ಏಕೆಂದರೆ ಅವಿಭಜಿತ ಭಾರತವಿದ್ದಾಗ ಅಯೂಬ್ ಖಾನ್ ಬ್ರಿಟಿಷ್ ಸೇನೆಯಲ್ಲಿ ನಮ್ಮ ಜನರಲ್ ಕಾರ್ಯಪ್ಪನವರ ಕೆಳಗೆ ಸೇವೆ ಸಲ್ಲಿಸುತ್ತಿದ್ದರು. ಹೀಗಾಗಿ ಹಳೆಯದ್ದನ್ನು ನೆನೆದುಕೊಂಡು ಅಯೂಬ್ ಖಾನ್ ನಂದರನ್ನು ಬಿಡುಗಡೆ ಮಾಡಲು ಮುಂದಾಗಿದ್ದರು.
ಆದರೆ…
“He is my son no longer… He is the child of this country, a soldier fighting for his motherland like a true patriot.
ಅವನೀಗ ಕೇವಲ ನನ್ನ ಮಗನಲ್ಲ… ನಮ್ಮ ದೇಶದ ಪುತ್ರ. ನಿಜವಾದ ದೇಶಭಕ್ತನಂತೆ ತಾಯ್ನೆಲದ ರಕ್ಷಣೆಗಾಗಿ ಹೋರಾಡುತ್ತಿರುವ ಸೈನಿಕ ಅವನು. ನಿಮ್ಮ ಕೊಡುಗೆಗೆ ನನ್ನ ಧನ್ಯವಾದಗಳು. ಬಿಡುಗಡೆ ಮಾಡುವುದಾದರೆ ಎಲ್ಲರನ್ನೂ ಮಾಡಿ. ಇಲ್ಲವಾದರೆ ಯಾರನ್ನೂ ಬೇಡ. ನನ್ನ ಮಗನನ್ನು ವಿಶೇಷವಾಗಿ ನಡೆಸಿಕೊಳ್ಳುವ ಅಗತ್ಯವಿಲ್ಲ ಎಂದು ಫೋನ್ ಕೆಳಗಿಟ್ಟರು ಕಾರ್ಯಪ್ಪ. ಇಂಥ ಘಟನೆಗಳನ್ನು ನೆನಪಿಸಿಕೊಂಡರೆ ಹೆಮ್ಮೆಯಿಂದ ಎದೆಯುಬ್ಬುತ್ತದೆ. ಈ ರೀತಿಯ ಗುಣ ಕೊಡಗಿನ ಜನರ ರಕ್ತದಲ್ಲೇ ಇದೆ. ದೇಶದ ಅತ್ಯಂತ ಪುಟ್ಟ ಜಿಲ್ಲೆಗಳಲ್ಲಿ ಒಂದಾಗಿದ್ದರೂ ಕೊಡುವ ನಮ್ಮ ದೇಶದ ಸೇನಾಪಡೆಗೆ ಇಬ್ಬರು ಜನರಲ್‌ಗಳನ್ನು ಕೊಟ್ಟಿದೆ. 26 ಲೆಫ್ಟಿನೆಂಟ್ ಜನರಲ್‌ಗಳನ್ನು ಕೊಟ್ಟಿದೆ. ಅಸಂಖ್ಯ ಸೈನಿಕರನ್ನು ನೀಡಿದೆ. ನಾವೆಲ್ಲ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಹಾಕಿಗೆ 5 ಕ್ಯಾಪ್ಟನ್‌ಗಳನ್ನು, 56 ಆಟಗಾರರನ್ನು ಕೊಟ್ಟಿದೆ!
ಇತ್ತ ಪ್ರಧಾನಿ ನರೇಂದ್ರ ಮೋದಿಯವರು ವಾರಾಣಸಿಯಿಂದ ಸಂಸತ್ತಿಗೆ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಅಹಮದಾಬಾದಿಗೆ ಹೋಗಿದ್ದರು. ಪ್ರಧಾನಮಂತ್ರಿಗಳನ್ನು ಸ್ವಾಗತಿಸಲು ಅಂದು ಊರಿಗೆ ಊರೇ ಸೇರಿತ್ತು. ಆ ಜನಸ್ತೋಮವನ್ನು ಉದ್ದೇಶಿಸಿ ಮಾತಾನಾಡಿದ ಪ್ರಧಾನಮಂತ್ರಿಗಳು ನಮ್ಮೂರು ಯಾವತ್ತಿಗೂ ನಮಗೆ ಅತ್ಯಂತ ಪ್ರೀತಿಪಾತ್ರವಾಗಿರುತ್ತದೆ ಎಂಬುದಕ್ಕೆ ಉದಾಹರಣೆಯನ್ನು ಕೊಡುತ್ತಾ ‘ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು ದೇಶ ವಿದೇಶಗಳಲ್ಲಿ ಖ್ಯಾತರಾಗಿದ್ದರೂ ತಮ್ಮ ನಿವೃತ್ತ ಜೀವನವನ್ನು ತಮ್ಮ ಊರಿನಲ್ಲಿ ಕಳೆಯಲು ಇಷ್ಟಪಟ್ಟಿದ್ದರು’ ಎಂದಿದ್ದರು! ಕಾರ್ಯಪ್ಪನವರು ಅಂದು ಮಡಿಕೇರಿಗೆ ಬಂದು ನೆಲೆಸಲು ತೀರ್ಮಾನಿಸಿದಾಗ ಹಲವರಿಗೆ ಆಶ್ಚರ್ಯವೆನಿಸಿತ್ತು.
ಅಂದು ಆ ಸಂಗತಿ ದೇಶಾದ್ಯಂತ ಸುದ್ದಿಯೂ ಆಗಿತ್ತು. ‘ನಾನು ಹುಟ್ಟಿದ ಮಣ್ಣಲ್ಲೇ ಕೊನೆ ದಿನಗಳನ್ನು ಕಳೆಯುತ್ತೇನೆ’ ಎಂದಿದ್ದ ಕೊಡಂದೇರ ಮುದ್ದಪ್ಪ ಕಾರ್ಯಪ್ಪ, ಮನೆಯವರ-ನೆಂಟರಿಷ್ಟರ ನೆಚ್ಚಿನ ‘ಚಿಪ್ಪ’, ಬ್ರಿಟಿಷ್ ಗೆಳೆಯರೊಡನೆ ಪೋಲೋ ಆಡುತ್ತಿದ್ದ ‘ಕ್ಯಾರಿ’, ಸಮಸ್ತ ಭಾರತೀಯ ಸೈನ್ಯದ ಪ್ರೀತಿಯ ‘ಕಿಪ್ಪರ್’! ಅವರು ಮಡಿಕೇರಿಗೆ ಬಂದು ಹಳೆಯ ಬಂಗಲೆಯನ್ನು ದುರಸ್ತಿ ಮಾಡಿಸಿ ಹಿತ್ತಲಿನಿಂದ ತಲಕಾವೇರಿ ಕಾಣುವಂತೆ ‘ರೋಷನಾರಾ’ಕ್ಕೆ ಸೇರಿಕೊಂಡರು. ಇಡೀ ಜಿಲ್ಲೆಯ ಜನರಿಗೆ ‘ಅಜ್ಜ’ ಆಗಿಹೋದರು. ದಂತಕತೆಯಾದರು. ಅವರು ದೇಶಕ್ಕೆ ಕಮಾಂಡರ್ ಇನ್ ಚೀಫ್ ಆಗಿರಬಹುದು, ಮಿಲಿಟರಿಗೆ ‘ಕಿಪ್ಪರ್’ ಆಗಿರಬಹುದು. ಆದರೆ ಕಾರ್ಯಪ್ಪನವರು ಮಡಿಕೇರಿಯ ರೋಷನಾರಾದಲ್ಲಿ ನೆಲೆಸಿದ್ದಂದಿನಿಂದ ಇಂದಿನವರೆಗೂ ಕೊಡಗಿನ ಜನರಿಗೆ ಅವರು ಪ್ರೀತಿಯ ‘ಅಜ್ಜ’ನೇ. ಕೊಡಗಿನಲ್ಲಿ ಅಜ್ಜ ಎಂದರೆ ಮತ್ತೊಂದು ಅಜ್ಜನೇ ಇಲ್ಲವೆನ್ನುವಂತೆ ಎಲ್ಲಾ ಜನರು ಹೇಳುವುದು ಒಬ್ಬನೇ ಒಬ್ಬ ಕಾರ್ಯಪ್ಪಜ್ಜರನ್ನು. ಆ ಅಜ್ಜ ಕಮಾಂಡರ್ ಇನ್ ಚೀಫ್‌ಗಿಂತ ಜನರಿಗೆ ಅಪ್ಯಾಯಮಾನವಾದ ಪದ.
ಕಾರ್ಯಪ್ಪನವರೂ ಹಾಗೆ ಕರೆಸಿಕೊಳ್ಳಲು ಖುಷಿ ಪಡುತ್ತಿದ್ದರು. ನಿವೃತ್ತಿಯ ನಂತರ ಊರಲ್ಲಿರುವೆ ಎಂದುಕೊಂಡು ಬಂದ ಅಜ್ಜ ಬಂಗಲೆ ಸೇರಿಕೊಳ್ಳಲಿಲ್ಲ. ಊರವರೊಡನೆ ಸೇರಿದರು, ಜನರೊಡನೆ ಬೆರೆತರು. ಕೋಟಿನ ಜೇಬು ತುಂಬಾ ಚಾಕಲೇಟುಗಳನ್ನು ಇಟ್ಟುಕೊಂಡು ನಿಜವಾದ ಅಜ್ಜನಾದರು. ರಸ್ತೆಯಲ್ಲಿ ಕಾರು ನಿಲ್ಲಿಸಿ ಮಕ್ಕಳಿಗೆ ಚಾಕಲೇಟು ಕೊಟ್ಟರು. ಧ್ವಜಕ್ಕೆ ಸೆಲ್ಯೂಟ್ ಮಾಡುವುದನ್ನು ಕಲಿಸಿಕೊಟ್ಟರು. ಮದುವೆ, ನಾಮಕರಣ, ಗೃಹಪ್ರವೇಶಗಳಿಗೆ ಕೊಡವರ ಸಾಂಪ್ರದಾಯಿಕ ಕುಪ್ಯ-ಚೇಲೆಗಳನ್ನು ಉಟ್ಟು ಕೆಂಪು ಪೇಟ ಧರಿಸಿ ನೆಂಟನಂತೆ ಹೋದರು. ಕೊಡವರ ಓಲಗಕ್ಕೆ ಟಿಪಿಕಲ್ ಕೊಡವರಂತೆ ಕುಣಿದರು.
ಆಗ….
ಕಾರ್ಯಪ್ಪನವರು ನಿವೃತ್ತರಾಗಿ ಹಲವು ವರ್ಷಗಳೇ ಆಗಿದ್ದವು. ಒಂದು ದಿನ ರೋಷನಾರಾಕ್ಕೆ ಮಿಲಿಟರಿ ಚಿಹ್ನೆ ಇರುವ ಲಕೋಟೆಯೊಂದು ಬಂತು. ಅದು ಆಗಿನ ಮೇಜರ್ ಜನರಲ್ ತಾರಾಸಿಂಗ್ ಬಾಲ್ ಎಂಬವರು ಬರೆದ ಪತ್ರವಾಗಿತ್ತು. ತಾರಾಸಿಂಗ್ ಬಾಲ್ ಅಪ್ರತಿಮ ಸಾಹಸೀ ಯೋಧ. ತಲೆ ಬೆಳ್ಳಗಾಗುವ ಸಾಕಷ್ಟು ಮೊದಲೇ ಸೇನೆಯ ಮೂರನೇ ಅತಿ ಎತ್ತರದ ರ್ಯಾಂಕ್ ಪಡೆದಿದ್ದವರು ತಾರಾ ಸಿಂಗ್ ಬಾಲ್. ಸಾಕಷ್ಟು ಕಾರ್ಯಾಚರಣೆಗಳಲ್ಲಿ ಅವರ ಹೆಸರು ಕೇಳಿಬಂದಿತ್ತು. ಕಿರಿಯ ಅಧಿಕಾರಿಗಳೊಂದಿಗೆ ಸ್ನೇಹಮಯಿ ವ್ಯಕ್ತಿತ್ವವನ್ನು ಹೊಂದಿದ್ದ ತಾರಾಸಿಂಗ್ ಬಾಲ್ ಅವರ ಹೆಸರು ಸೈನ್ಯದಲ್ಲಿ ದಿನೇ ದಿನೆ ಜನಪ್ರಿಯವಾಗತೊಡಗುತ್ತಿತ್ತು. ತಮ್ಮ ನೇರಾ ನೇರಾ ಮಾತಿನಿಂದ ತಾರಾಸಿಂಗ್ ಬಾಲ್ ಶತ್ರುಗಳನ್ನು ಕೂಡಾ ಸೃಷ್ಟಿಸಿಕೊಂಡಿದ್ದರು.
ನೆಹರು ಸಂಪುಟದ ಕೆಲವು ಮಂತ್ರಿಗಳು ಮತ್ತು ರಕ್ಷಣಾ ಮಂತ್ರಾಲಯದ ಕೆಲವು ಸಿಬ್ಬಂದಿಗಳು ತಾರಾಸಿಂಗ್ ಬಾಲ್ ಅವರನ್ನು ತಣ್ಣಗೆ ದ್ವೇಷಿಸುತ್ತಿದ್ದರು. ಒಂದು ದಿನ ಇವರೆಲ್ಲರೂ ಸೇರಿ ಪ್ರಧಾನ ಮಂತ್ರಿ ನೆಹರು ಅವರಲ್ಲಿ ತಾರಾಸಿಂಗ್ ಬಾಲ್ ಅವರ ಬಗ್ಗೆ ಕಿವಿಯೂದಿದರು. ಪೂರ್ವಾಪರಗಳನ್ನು ನೋಡದೆ ನೆಹರು ತಾರಾಸಿಂಗ್ ಅವರಿಗೆ ‘ತಾವು ಇನ್ನು ನಾಲ್ಕು ವಾರಗಳಲ್ಲಿ ಸೇನೆಯಿಂದ ನಿವೃತ್ತಿ ಹೊಂದಬೇಕು’ ಎಂದು ಪತ್ರವನ್ನೂ ಕೂಡಾ ಬರೆದರು! ಸೇನೆಯೇ ಸರ್ವಸ್ವ ಎಂದುಕೊಂಡ ತಾರಾಸಿಂಗ್ ಬಾಲ್ ಪ್ರಧಾನಮಂತ್ರಿಗಳ ಈ ಪತ್ರದಿಂದ ಬಹುವಾಗಿ ನೊಂದುಕೊಂಡರು. ಸಾಕ್ಷಾತ್ ಪ್ರಧಾನಮಂತ್ರಿಗಳೇ ಪತ್ರ ಬರೆದಿರುವುದರಿಂದ ಯಾರೇನೂ ಮಾಡುವಂತಿಲ್ಲ, ಹೇಳುವಂತಿಲ್ಲ. ತಮ್ಮ ಜನರಲ್ ಕೂಡಾ ಈ ಬಗ್ಗೆ ತಮಗೆ ನ್ಯಾಯ ಒದಗಿಸುವಂತಿಲ್ಲ ಎಂಬುದು ತಾರಾಸಿಂಗ್ ಬಾಲ್ ಅವರಿಗೆ ಗೊತ್ತಿತ್ತು. ಎರಡು ದಿನ ಸುಮ್ಮನೆ ಕುಳಿತ ಬಾಲ್ ಅವರಿಗೆ ಆಶಾಕಿರಣದಂತೆ ಹೊಳೆದಿದ್ದು ದೇಶದ ಪ್ರಪ್ರಥಮ ಮಹಾದಂಡನಾಯಕರಾಗಿದ್ದ ಕೆ. ಎಂ. ಕಾರ್ಯಪ್ಪನವರು. ಈ ದೇಶದಲ್ಲಿ ತನಗೆ ನ್ಯಾಯವನ್ನು ದೊರಕಿಸಿಕೊಡುವ ಏಕೈಕ ವ್ಯಕ್ತಿ ಕಾರ್ಯಪ್ಪ ಒಬ್ಬರೇ ಎಂದುಕೊಂಡ ತಾರಾಸಿಂಗ್ ಅವರು ತಮ್ಮ ಪಾಡನ್ನು ವಿವರಿಸಿ ರೋಷನಾರಾಕ್ಕೆ ಪತ್ರ ಬರೆದಿದ್ದರು. ‘ತಾವು ನನಗೆ ಗೌರವದ ನಿವೃತ್ತಿಯನ್ನು ಒದಗಿಸಿಕೊಡಬೇಕು’ ಎಂದು ಅವರು ಕಾರ್ಯಪ್ಪನವರಲ್ಲಿ ಬೇಡಿಕೊಂಡಿದ್ದರು.
ಕಾರ್ಯಪ್ಪನವರು ಮಡಿಕೇರಿಯಿಂದಲೇ ತಾರಾಸಿಂಗ್ ಅವರ ವಿಷಯದಲ್ಲಿ ಸತ್ಯವನ್ನು ತಿಳಿದುಕೊಂಡರು. ತಾರಾಸಿಂಗ್ ಅವರಿಗೆ ಅನ್ಯಾಯವಾಗಿರುವುದು ಹೌದು ಎಂಬುದು ಅವರಿಗೆ ಗೊತ್ತಾಯಿತು ಮಾತ್ರವಲ್ಲ ಅವರ ಬಗ್ಗೆ ಗೌರವವೂ ಬೆಳೆಯಿತು. ಕಾರ್ಯಪ್ಪನವರು ನೇರವಾಗಿ ಪ್ರಧಾನಿ ನೆಹರು ಅವರಿಗೆ ಖಾರವಾದ ಪತ್ರವನ್ನು ಬರೆದರು. ‘ಮೇ.ಜ. ತಾರಾಸಿಂಗ್ ಬಾಲ್ ಅವರಂಥ ಯೋಧರು ನಮ್ಮ ಸೈನ್ಯಕ್ಕೆ ಹೆಮ್ಮೆ. ಇಂದು ನಮ್ಮ ಸೇನೆ ಹೀಗಿರುವುದಕ್ಕೆ ತಾರಾಸಿಂಗ್ ಅವರ ಕೊಡುಗೆಯನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂಬುದನ್ನು ನಾನು ನಿಮಗೆ ತಿಳಿಸುತ್ತಿದ್ದೇನೆ . ಒಬ್ಬ ಯೋಧನ ಮನಸ್ಸನ್ನು ಅರ್ಥಮಾಡಿಕೊಳ್ಳದ ಅಧಿಕಾರಿಗಳ ಮಾತುಗಳನ್ನು ನೀವೇಕೆ ನಂಬುತ್ತೀರಿ? ಸಂಗತಿ ನಿಮಗೆ ಅರ್ಥವಾಗಿರುತ್ತದೆ ಎಂದು ನಾನು ನಂಬುತ್ತೇನೆ’ ಮಡಿಕೇರಿಯಿಂದ ಬಂದ ಪತ್ರ ನೋಡಿದ ನೆಹರು ದಂಗಾದರು. ಈ ಮನುಷ್ಯ ಕಮಾಂಡರ್ ಇನ್ ಚೀಫ್ ಆಗಿದ್ದವರಿಗೆ ಪತ್ರ ಬರೆಯುತ್ತಾನೆಂದು ಯಾವ ಸಚಿವನಿಗೂ ಅಧಿಕಾರಿಗೂ ಹೊಳೆದಿರಲಿಲ್ಲ. ಎಲ್ಲರೂ ಗಾಬರಿಗೊಂಡರು. ಕಾರ್ಯಪ್ಪರ ಪತ್ರಕ್ಕೆ ನೆಹರು ಅಚಾತುರ್ಯದಿಂದ ಈ ಘಟನೆ ನಡೆಯಿತೆಂದು ಕಾರ್ಯಪ್ಪನವರಲ್ಲಿ ಕ್ಷಮಾಪಣೆಯನ್ನು ಕೇಳಿದ್ದರು. ತಾರಾಸಿಂಗ್ ಬಾಲ್ ಅವರ ನಿವೃತ್ತಿ ಮುಂದೆಹೋಯಿತು.
ಯೋಧ ಎಂದೂ ನಿವೃತ್ತನಾಗುವುದಿಲ್ಲ ಎಂಬುದನ್ನು ಕಾರ್ಯಪ್ಪನವರು ತೋರಿಸಿಕೊಟ್ಟಿದ್ದರು. ಯಾರಿಂದಲೂ ಸಾಧ್ಯವಾಗದ ಕೆಲಸವನ್ನು ಕಾರ್ಯಪ್ಪನವರು ಸೇನೆಗಾಗಿ, ಯೋಧನಿಗಾಗಿ ಮಾಡಿದ್ದರು! ಕೊಡವರ ಕೊಡಂದೇರ ಮನೆತನ ಮೊದಲಿನಿಂದಲೂ ಕೊಡಗಿನ ಶ್ರೀಮಂತ ಮನೆತನಗಳಲ್ಲಿ ಒಂದು. ವಿದ್ಯೆ ಮತ್ತು ವಿನಯವಂತಿಕೆಗಳಿಗೂ ಕೊಡಂದೇರ ಮನೆತನ ಹೆಸರುವಾಸಿಯಾದುದು. ಬ್ರಿಟಿಷ್ ಸ್ಟೇಟ್ ಆಗಿದ್ದ ಕೊಡಗಿನಲ್ಲಿ ಕೊಡಂದೇರ ಮನೆತನದ ಹಲವರು ಅಧಿಕಾರಿಗಳಾಗಿದ್ದರು. ಇಂತಹ ಕೊಡಂದೇರ ಮನೆಯಲ್ಲಿ ಹುಟ್ಟಿದ ಇಬ್ಬರು ವ್ಯಕ್ತಿಗಳು ಭಾರತೀಯ ಸೇನೆಗೆ ಮಹಾನ್ ಯೋಧರನ್ನು ಕೊಟ್ಟಿತು. ಅವರಲ್ಲಿ ಒಬ್ಬರು ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ ಮತ್ತೊಬ್ಬರು ನಮ್ಮ ಅಜ್ಜ ಕೊಡಂದೇರ ಮಾದಪ್ಪ ಕಾರ್ಯಪ್ಪ. ಈ ಎರಡೂ ಹೆಸರುಗಳು ಇಂದಿಗೂ ಭಾರತೀಯ ಸೇನೆಯಷ್ಟೇ ಜನರಿಗೆ ಅಕ್ಕರೆಯ, ಹೆಮ್ಮೆಯ ಹೆಸರುಗಳು. 1900ರಲ್ಲಿ ಶನಿವಾರಸಂತೆಯಲ್ಲಿ ಜನಸಿದ ಕಾರ್ಯಪ್ಪನವರು ಕುಶಾಲನಗರ, ವಿರಾಜಪೇಟೆ, ಮಡಿಕೇರಿಗಳಲ್ಲಿ ವ್ಯಾಸಂಗ ಮಾಡಿದರು. ಕ್ರೀಡೆಯಲ್ಲಿ ಅತ್ಯುತ್ತಮ ವಿದ್ಯಾರ್ಥಿ ಎಂದು ಹೆಸರು ಗಳಿಸಿದ್ದವರು. ಕಿರಿ ವಯಸ್ಸಲ್ಲೇ ಅವರು ಹಾಕಿ, ಕ್ರಿಕೆಟ್, ಟೆನ್ನಿಸ್, ಪೋಲೋದಂಥ ಆಟವನ್ನು ಮಡಿಕೇರಿಯಲ್ಲಿ ಆಡುತ್ತಿದ್ದರು.
ಭಾರತೀಯ ಸೈನ್ಯವನ್ನು ವಿಶ್ವದರ್ಜೆಯ ಸೈನ್ಯ ಮಾಡಬೇಕೆಂದು ಅವರ ಕನಸ್ಸನ್ನು ಅವರ ಸಾವಿರಾರು ಶಿಷ್ಯರು ಇಂದಿಗೂ ಈಡೇರಿಸುತ್ತಿದ್ದಾರೆ. ಪ್ರತಿಯೊಬ್ಬ ಯೋಧನೂ ಕಾರ್ಯಪ್ಪ ಎಂದಾಗ ಇಂದಿಗೂ ಮುಖ ಅರಳಿಸುತ್ತಾನೆ. ಯಾವುದೇ ಲೇಖಕ ಭಾರತೀಯ ಸೇನೆಯನ್ನು ಉಲ್ಲೇಖಿಸುವಲ್ಲಿ ಕಾರ್ಯಪ್ಪನವರನ್ನು ಉಲ್ಲೇಖಿಸದೇ ಇರಲಾರ ಎಂಬಷ್ಟರಮಟ್ಟಿಗೆ ಇಂಡಿಯನ್ ಆರ್ಮಿ ಮತ್ತುFMKMC(ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ) ನಂಟಿದೆ.
ಕಾರ್ಯಪ್ಪನವರು ಮಹಾದಂಡನಾಯಕರಾಗಿ ಅಧಿಕಾರ ವಹಿಸಿಕೊಂಡ ಕಾಲಘಟ್ಟವನ್ನು ಒಮ್ಮೆ ನೆನಪಿಸಿಕೊಳ್ಳಿ…
ಒಂದು ದೇಶ ಮೂರು ದೇಶವಾಗಿದ್ದರೆ ಮತ್ತೊಂದು ಕಡೆ ದೇಶದೊಳಗೇ ಹಲವು ಸಂಸ್ಥಾನಗಳು ಸ್ವಾತಂತ್ರ್ಯವನ್ನು ಘೋಷಿಸಿಕೊಳ್ಳುವ ಹುನ್ನಾರದಲ್ಲಿದ್ದವು. ಕಾಶ್ಮೀರದ ರಾಜನ ದ್ವಂದ್ವ ಮಾನಸಿಕತೆಯ ಲಾಭ ಪಡೆದ ಪಾಕಿಸ್ತಾನಿಗಳು ಕಾಶ್ಮೀರಕ್ಕೆ ನುಗ್ಗಲು ಹವಣಿಸುತ್ತಿದ್ದರು. ದಿನಂಪ್ರತಿ ಪಾಕಿಸ್ಥಾನದ ಉಪಟಳ ಹೆಚ್ಚಾಗುತ್ತಲೇ ಇತ್ತು. ಇನ್ನೊಂದೆಡೆ ವಿದೇಶಾಂಗ ವ್ಯವಹಾರಗಳ ಗೊಂದಲಗಳೂ ತಾರಕಕ್ಕೇರುತ್ತಿತ್ತು. ಸರಕಾರ ಮತ್ತು ರಕ್ಷಣೆ ಇವೆರಡರ ನಡುವೆ ಸೇನೆ ಅಡಕತ್ತರಿಯಲ್ಲಿ ಸಿಕ್ಕಿಬಿದ್ದಂತಾಯಿತು.
ಗಾಂಧೀಜಿ ಪಾಕಿಸ್ತಾನದ ಮೇಲೆ ಸೈನಿಕ ಕಾರ್ಯಾಚರಣೆಯನ್ನು ನಡೆಸಬಾರದೆಂದು ಪಟ್ಟುಹಿಡಿದಿದ್ದರು. ಜಮ್ಮು ಮತ್ತು ಕಾಶ್ಮೀರದ ಉತ್ತರ ಭಾಗಗಳು ಪಾಕಿಗಳ ಕೈವಶವಾಗಿದ್ದವು. ಲೇಹ್, ಲದ್ದಾಕ್, ಜೋಜಿಲಾದವರೆಗೂ ಪಾಕ್ ಸೈನಿಕರು ಮುಂದುವರಿದಿದ್ದವು. ಭಾರತದ ಒಂದೊಂದೇ ಭೂಭಾಗವನ್ನು ಆಕ್ರಮಿಸುತ್ತಾ ಪಾಕ್ ಜನಮತಗಣನೆಯ ಅಸ್ತ್ರವನ್ನು ಅಂತಾರಾಷ್ಟ್ರೀಯ ಸಮುದಾಯದ ಮುಂದಿಡುತ್ತಿತ್ತು. ಇವೆಲ್ಲಕ್ಕೂ ಒಂದು ಅಂತ್ಯ ಕಾಣಿಸಬೇಕೆಂದು ಕಾರ್ಯಪ್ಪನವರು ಮಹಾತ್ಮ ಗಾಂಧಿಯವರನ್ನು ಭೇಟಿಯಾಗಲು ತೀರ್ಮಾನಿಸಿದರು. ಆಗ ಗಾಂಧೀಜಿ ಅಹಿಂಸೆಯ ಪ್ರತಿಪಾದನೆಗಾಗಿ ಮೌನ ವೃತವನ್ನು ಆಚರಿಸುತ್ತಿದ್ದರು. ಬಿರ್ಲಾ ಭವನಕ್ಕೆ ತೆರಳಿದ ಕಾರ್ಯಪ್ಪನವರು ಚರಕ ತಿರುಗಿಸುತ್ತಾ ಮೌನದಲ್ಲಿದ್ದ ಗಾಂಧಿ ಎದುರಿನ ಜಮಖಾನಾದಲ್ಲಿ ಕುಳಿತರು.
ಕಾರ್ಯಾಚರಣೆ ನಡೆಸಲು ಸೈನ್ಯ ಸನ್ನದ್ಧವಾಗಿದೆ ಎಂಬ ವಿಷಯವನ್ನು ಗಾಂಧೀಜಿಗೆ ತಿಳಿಸಿದರು. ಗಾಂಧೀಜಿ ಪೇಪರಿನ ತುಂಡಿನಲ್ಲಿ ‘ನೀವು ನನ್ನ ಅಹಿಂಸೆಯ ಬಗೆಗಿನ ಪುಸ್ತಕವನ್ನು ಓದಿದ್ದಿರಾ?’ ಎಂದು ಬರೆದು ಕಾರ್ಯಪ್ಪನವರ ಮುಂದಿಟ್ಟರು. ಅದರ ಅಂತರಾಳ ಕಾರ್ಯಪ್ಪನವರಿಗೆ ತಿಳಿದಿತ್ತು. ಕಾರ್ಯಪ್ಪನವರು ಗಾಂಧೀಜಿಗೆ ‘ಮಹಾತ್ಮ, ನಾವು ಯುದ್ಧ ಮಾಡುವುದೇ ಅಹಿಂಸೆಯ ಪ್ರತಿಷ್ಠಾಪನೆಗಾಗಿ. ಜಗತ್ತಿನಲ್ಲಿ ಯುದ್ಧ ನಡೆಯದಿರಲಿ ಎಂದು ಪ್ರಾರ್ಥಿಸುವ ಏಕೈಕ ಜನಗಳು ಎಂದರೆ ಅದು ನಮ್ಮ ಸೈನ್ಯದವರು ಮಾತ್ರ’ ಎಂದು ಮಾರ್ಮಿಕವಾದ ಉತ್ತರವನ್ನು ಕೊಟ್ಟರು! ಗಾಂಧೀಜಿಯವರಿಗೆ ಆ ಮಾತು ನಾಟಿತು. ಮೂರು ದಿನಗಳು ಕಳೆದು ಬರುವಂತೆ ಅವರು ಕಾರ್ಯಪ್ಪನವರಿಗೆ ತಿಳಿಸಿದರು. ಮೂರು ದಿನದ ನಂತರ ಪುನಃ ಕಾರ್ಯಪ್ಪನವರು ಗಾಂಧೀಜಿ ಬಳಿಗೆ ಹೋದರು. ಆಗ ಅವರ ಮೌನವೃತ ಕೊನೆಗೊಂಡಿತ್ತು. ಕಾರ್ಯಾಚರಣೆಯ ಮಾತೊಂದನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಮಾತಾಡಿದ ಗಾಂಧೀಜಿ ‘ಕಾರ್ಯಪ್ಪನವರೇ ನಾನು ಮೊನ್ನೆಯೇ ನಿಮ್ಮನ್ನು ಗಮನಿಸಿದೆ. ನೀವು ಒಳಬರುವಾಗ ನಿಮ್ಮ ಶೂಗಳನ್ನು ಕಳಚಿ ಬಂದಿರಿ. ನನ್ನ ಕಾಲಿಗೆ ನಮಸ್ಕಾರ ಮಾಡಿದ್ದೀರಿ. ಏಕೆ?’ ಕಾರ್ಯಪ್ಪನವರು ‘ಅದು ನನ್ನ ಊರಿನ ಪದ್ಧತಿ. ಹಿರಿಯರನ್ನು ಭೇಟಿಯಾದಾಗ ನಮ್ಮೂರಲ್ಲಿ ಕಾಲಿಗೆ ನಮಸ್ಕಾರ ಮಾಡುವ ಪದ್ಧತಿ ಇದೆ’ ಎಂದು ತಿಳಿಸಿದರು. ಹೀಗೆ ಕೊಡಗಿನ ಸಂಸ್ಕೃತಿಯನ್ನು ಮಹಾತ್ಮ ಗಾಂಧೀಜಿಗೂ ಮನವರಿಕೆ ಮಾಡಿಕೊಟ್ಟರು.
ಇದೇನೇ ಇರಲಿ, ಗಾಂಧೀಜಿಯನ್ನು ಭೇಟಿ ಮಾಡಿ ಬಂದ ಕಾರ್ಯಪ್ಪನವರು ಕಾರ್ಯಾಚರಣೆಯ ರೂಪುರೇಷೆಗಳನ್ನು ನಿರ್ಧರಿಸತೊಡಗಿದರು. ಹಿರಿಯ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು. ಮಾತುಕತೆ ನಡೆಯುತ್ತಿದ್ದಂತೆಯೇ ಅಜಾನುಭಾಹು ಮೇ. ಜನರಲ್ ಒಬ್ಬರು ಒಳಪ್ರವೇಶಿಸಿದರು. ಅವರನ್ನು ಉದ್ದೇಶಿಸಿ ಕಾರ್ಯಪ್ಪನವರು ‘ಜನರಲ್ ತಾರಿಕ್ ಇನ್ನಷ್ಟು ಮುಂದೆ ಬರುವುದನ್ನು ನಾನು ಸಹಿಸುವುದಿಲ್ಲ. ಲೇಹ್, ಕಾರ್ಗಿಲ್, ಜೋಜಿ ಪಾಸ್ ಮೂಲಕ ನಾವು ಅವರನ್ನು ಹಿಮ್ಮೆಟ್ಟಿಸಬೇಕು. ಸಮುದ್ರ ಮಟ್ಟದಿಂದ ಕನಿಷ್ಟ 10,500 ಅಡಿ ಎತ್ತರದಲ್ಲಿ ನಾವು ಸೆಣಸಬೇಕಾಗುತ್ತದೆ. ಇದುವರೆಗೆ ಇಂಥ ಯುದ್ಧ ನಡೆದಿಲ್ಲ ಎಂಬುದನ್ನು ಮರೆಯದಿರಿ. ಏ ಡುಬ್ಬು, ನೀನು ಇದರ ಹೊಣೆಯನ್ನು ಹೊತ್ತುಕೊಳ್ಳಬೇಕು’ ಎಂದರು. ಕಿಪ್ಪರ್ ಹೇಳಿದರೆಂದರೆ ಮುಗಿಯಿತು.
ಆ ಅಜಾನುಭಾಹು ಯುವಕ ಸೆಟೆದು ನಿಂತು ಸೆಲ್ಯೂಟ್ ಹೊಡೆದ. ಆ ‘ಡುಬ್ಬು’ ಬೇರಾರೂ ಆಗಿರದೆ ಇಡೀ ಭಾರತೀಯ ಸೇನೆಯಲ್ಲಿ ಹೆಸರುವಾಸಿಯಾಗಿದ್ದ ನಮ್ಮ ಕೊಡಗು ದೇಶಕ್ಕೆ ಕೊಟ್ಟ ಅಮೂಲ್ಯ ರತ್ನ ಕೆ. ಎಸ್. ತಿಮ್ಮಯ್ಯ! ಸೈನ್ಯದಲ್ಲಿ ಡುಬ್ಬು ಎಂದೇ ಖ್ಯಾತರಾಗಿದ್ದ ತಿಮ್ಮಯ್ಯನವರು ಈ ಕಾರ್ಯಾಚರಣೆಯ ಮೂಲಕ ಜಗತ್ತೇ ಭಾರತದತ್ತ ನೋಡುವಂತೆ ಮಾಡಿದರು. ಕೊರೆಯುವ ಚಳಿಯಲ್ಲಿ ಸಮುದ್ರ ಮಟದ್ಟದಿಂದ 18,000 ಅಡಿ ಎತ್ತರದಲ್ಲಿ ಟ್ಯಾಂಕರುಗಳನ್ನು ಹತ್ತಿಸಿ ಶತ್ರು ಸೈನಿಕರನ್ನು ಹಿಮ್ಮೆಟ್ಟಿಸಿದರು. ಹೀಗೆ ಗುಬ್ರಿ, ಜೋಜಿಲಾ, ಲದ್ದಾಕ್, ದ್ರಾಸ್, ಫಿಯಾಂಕ್ ಗೊಂಪಾ, ಲೇಹ್ ಸಸರ್ಲಾ, ಚಿಪ್‌ಚಾಪ್‌ಗಳನ್ನು ಭಾರತೀಯ ಸೇನೆ ಮುಕ್ತಗೊಳಿಸಿತು. ಇದರ ಹಿಂದೆ ಇದ್ದ ಶಕ್ತಿ ಕಾರ್ಯಪ್ಪನವರು. ಕಾರ್ಯಪ್ಪನವರು ತಮ್ಮ ಸೈನ್ಯದ ಮೇಲೆ ಎಷ್ಟೊಂದು ನಂಬಿಕೆ ಇಟ್ಟಿದ್ದರೆಂದರೆ ರಾಜಕೀಯ ಮೇಲಾಟಗಳ ಹಂಗಿಲ್ಲದಿರುತ್ತಿದ್ದರೆ ಗಿಲ್ಗಿಟ್, ಬಾಲ್ಟಿಸ್ಥಾನ್‌ಗಳನ್ನೂ ಭಾರತದ ಮುಕ್ತ ಮಾಡಿರುತ್ತಿದ್ದರು. ಅಂಥ ಚಾಕಚಕ್ಯತೆ, ಸಾಹಸ ಪ್ರವೃತ್ತಿ, ನಿಪುಣ ರಣತಂತ್ರ, ಧೈರ್ಯವಂತ ಸೈನಿಕರು ಎಲ್ಲವೂ ಕಾರ್ಯಪ್ಪನವರ ಜತೆಗಿತ್ತು.
ಅವರು ನಮ್ಮ ಸೈನ್ಯಕ್ಕೆ ಹಲವು ಮೊದಲುಗಳನ್ನು ಕೊಟ್ಟವರು. ಸಾಧಾರಣವಾಗಿ ಬಿಳಿಯರೇ ತುಂಬಿರುತ್ತಿದ್ದ ಆರ್ಮಿ ಸ್ಟಾಫ್ ಕಾಲೇಜಿಗೆ ಆಯ್ಕೆಯಾದ ಮೊದಲ ಭಾರತೀಯ, ಭಾರತೀಯ ಸೈನ್ಯದ ಮೊಟ್ಟಮೊದಲ ಕಮಾಂಡಿಂಗ್ ಆಫೀಸರ್ (1942), ಮೊಟ್ಟ ಮೊದಲ ಭಾರತೀಯ ಬ್ರಿಗೇಡಿಯರ್ (1944), ಮೊಟ್ಟ ಮೊದಲ ಭಾರತೀಯ ಜನರಲ್ ಆಫೀಸರ್ (1947), ಮೊಟ್ಟ ಮೊದಲ ಆರ್ಮಿ ಕಮಾಂಡರ್ ಇನ್ ಚೀಫ್ (1948)! ಕಾರ್ಯಪ್ಪನವರಿಗಿಂತ ಮೊದಲು ಡೆಹರಾಡೂನಿನ ಸೈನಿಕ ಶಾಲೆಗೆ ಭಾರತೀಯರು ಪ್ರವೇಶ ಪಡೆದಿದ್ದೇ ಇಲ್ಲ. ಅಂಥಲ್ಲಿ ಕಾರ್ಯಪ್ಪ ಮತ್ತು ತಿಮ್ಮಯ್ಯ ಇಬ್ಬರೂ ಪ್ರವೇಶವನ್ನು ಪಡೆದಿದ್ದು ದಾಖಲೆ. ಮುಂದೆ ಈ ಒಬ್ಬರು ಯೋಧರು ಭಾರತೀಯ ಸೇನೆಯ ಧ್ರುವ ತಾರೆಗಳಾದರು. ಇವತ್ತು ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಜನ್ಮದಿನ.
Published on January 28, 2017 03:23
January 26, 2017
January 25, 2017
Pratap Simha's Blog
- Pratap Simha's profile
- 58 followers
Pratap Simha isn't a Goodreads Author
(yet),
but they
do have a blog,
so here are some recent posts imported from
their feed.
