Pratap Simha's Blog, page 21
April 8, 2017
ಅವರೊಬ್ಬ ಹಠವಾದಿ ಮಾತ್ರವಲ್ಲ, ಹಿಡಿದಿದ್ದನ್ನು ಸಾಧಿಸಿ ತೋರಿಸುವ ಛಲವಾದಿ!
ಅವರೊಬ್ಬ ಹಠವಾದಿ ಮಾತ್ರವಲ್ಲ, ಹಿಡಿದಿದ್ದನ್ನು ಸಾಧಿಸಿ ತೋರಿಸುವ ಛಲವಾದಿ!
ಸ್ವಗತದಿಂದಲೇ ಮಾತು ಆರಂಭಿಸುವುದಾದರೆ, ಬಹುಶಃ ವಿಜಯ ಸಂಕೇಶ್ವರರಿಂದ ಅತಿ ಹೆಚ್ಚು ಸಲ ಬಯ್ಯಿಸಿಕೊಂಡಿರುವುದು ನಾನೇ. ಅಷ್ಟು ಮಾತ್ರವಲ್ಲ, ವಿಶ್ವೇಶ್ವರಭಟ್ಟರನ್ನು ಹೊರತುಪಡಿಸಿ ಸಂಕೇಶ್ವರರಿಂದ ಅತಿ ಹೆಚ್ಚು ಬಾರಿ ಮೆಚ್ಚುಗೆಗೆ ಗುರಿಯಾದ ವಿಜಯ ಕರ್ನಾಟಕದ ಯಾವುದಾದರೂ ಪತ್ರಕರ್ತನಿದ್ದರೆ ಅದೂ ನಾನೇ ಎಂದು ಹೆಮ್ಮೆಯಿಂದ ಹೇಳಬಲ್ಲೆ!! ಅವರಿಂದ ಬೈಯಿಸಿಕೊಳ್ಳುವುದು ಹಾಗೂ ಹೊಗಳಿಸಿಕೊಳ್ಳುವುದು ಎರಡೂ ಸುಲಭವಲ್ಲ. ಅವರೊಬ್ಬ Perfectionist ಕೆಲಸದ ವಿಷಯದಲ್ಲಿ ಕಾಂಪ್ರೊಮೈಸ್ ಇಲ್ಲವೇ ಇಲ್ಲ. ಸಂಕೇಶ್ವರರೆಂದರೆ ಸೀರಿಯಸ್‌ನೆಸ್. ನೌಟಂಕಿತನಕ್ಕೆ ಅವರ ಬಳಿ ಜಾಗವೇ ಇಲ್ಲ. ಅವರ ಮುಖ ನೋಡಿ ರಿಯಾಕ್ಷನ್ ಏನಿರಬಹುದೆಂದು ಊಹಿಸುವುದಕ್ಕಂತೂ ಸಾಧ್ಯವೇ ಇಲ್ಲ. ನಿಂತಲ್ಲೇ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ನಿಸ್ಸೀಮ.
ಹುಬ್ಬಳ್ಳಿ ಮೂಲದ ಪತ್ರಿಕೆಯೊಂದರ ಧೋರಣೆ ಹಿಡಿಸದೇ ಹೋದಾಗ ಬರೀ ಗರಂ ಆಗಲಿಲ್ಲ, ರಾಜ್ಯದ ನಂಬರ್-1 ಪತ್ರಿಕೆಯಾಗಿ ವಿಜಯ ಕರ್ನಾಟಕವನ್ನು ಕಟ್ಟಿ ಬೆಳೆಸಿದರು. ನನ್ನಂಥ ಸಾವಿರಾರು ಯುವಕರಿಗೆ ಉದ್ಯೋಗ ಕೊಟ್ಟು ಬದುಕಿಗೊಂದು ದಾರಿ ತೋರಿಸಿದರು. ಅಂಥ ಪತ್ರಿಕೆಯನ್ನೇ ಮಾರಾಟ ಮಾಡಿದ್ದು ತದನಂತರ ಮನಸ್ಸಿಗೆ ಸರಿ ಕಾಣಿಸಲಿಲ್ಲ ಎಂದ ಕೂಡಲೇ ಮತ್ತೊಂದು ಪತ್ರಿಕೆ ವಿಜಯವಾಣಿಯನ್ನು ಆರಂಭಿಸಿ, ತಾನೇ ಆರಂಭಿಸಿ ನಂಬರ್-1 ಮಾಡಿದ್ದ ಪತ್ರಿಕೆಯನ್ನು ಹಿಂದೆ ಹಾಕಿ 8 ಲಕ್ಷ ಪ್ರಸಾರ ಸಂಖ್ಯೆ ದಾಟಿಸಿ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದರು. ಅವರೊಬ್ಬ ಹಠವಾದಿ ಮಾತ್ರವಲ್ಲ, ಹಿಡಿದಿದ್ದನ್ನು ಸಾಧಿಸಿ ತೋರಿಸುವ ಛಲವಾದಿ.
ವಿಶ್ವೇಶ್ವರ ಭಟ್ಟರು ಸಂಕೇಶ್ವರರ ಬಗ್ಗೆ ಮಾತನಾಡಲು ಆರಂಭಿಸಿದರೆ ಒಂದು ಅದ್ಭುತ ಯಶೋಗಾಥೆ ಕಣ್ಣೆದುರಿಗೇ ತೆರೆದುಕೊಳ್ಳುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ. ಸಂಕೇಶ್ವರರ ಸಾಧನೆ ಹಾಗೂ ಕರ್ತೃತ್ವ ಶಕ್ತಿಯ ಬಗ್ಗೆ ಅವರು ಆರಂಭಿಸಿದ ಪತ್ರಿಕೆಗಳು ಹಾಗೂ ಕಂಪನಿಯ ಹಿನ್ನೆಲೆ ಇಟ್ಟು ಕೊಂಡು ಒಂದು ರೋಚಕ ಚಲನಚಿತ್ರ ತಯಾರಿಸಬಹುದು, ಒಂದು ಅಮೋಘ ಸಂಶೋಧನಾ ಪ್ರಬಂಧ ಬರೆಯಬಹುದು, ಇಲ್ಲವೇ ಒಂದು ಆತ್ಮಚರಿತ್ರೆ ಬರೆದರೆ ಎಂಥವರಿಗೂ ಜೀವನಕ್ಕೊಂದು ಪ್ರೇರಣೆ ದೊರೆತು ಬಿಡುತ್ತದೆ. ಖಂಡಿತ ಈ ಯಾವ ಮಾತುಗಳೂ ಅತಿಶಯೋಕ್ತಿಗಳಲ್ಲ. ಪತ್ರಿಕೋದ್ಯಮವೆಂಬುದು ಜಾತ್ಯತೀತತೆಯೆಂಬ ಒಂದು ವರ್ಗವನ್ನು ಮಾತ್ರ ಓಲೈಸುವ ಜಾಡ್ಯದಿಂದ ನರಳುತ್ತಿದ್ದಾಗ ರಾಷ್ಟ್ರೀಯತೆಯನ್ನು ಪತ್ರಿಪಾದಿಸುವವರಿಗೆ ವಿಜಯಕರ್ನಾಟಕ ವನ್ನು ವೇದಿಕೆಯಾಗಿ ಕೊಟ್ಟಿದ್ದು ಸಂಕೇಶ್ವರರ ಸಾಮಾನ್ಯ ಸಾಧನೆಯಲ್ಲ. ಎಲ್ಲ ರೀತಿಯ ಟೀಕೆಗೆ ಗುರಿಯಾದರೂ ಎದೆಗುಂದದೆ ನಮ್ಮನ್ನೆಲ್ಲ ಬೆಳೆಸಿದರು.
ವಿಶ್ವೇಶ್ವರ ಭಟ್ಟರಲ್ಲಿದ್ದ ಒಬ್ಬ ಮಹಾನ್ ಸಂಪಾದಕನನ್ನು ಜಗತ್ತಿಗೆ ಪರಿಚಯಿಸಿದ್ದೇ ಸಂಕೇಶ್ವರರು. ಅಷ್ಟು ಮಾತ್ರವಲ್ಲ, ಕಷ್ಟದಲ್ಲಿ ಕೈಹಿಡಿದು, ಬೆನ್ನಿಗೆ ನಿಂತು ಪ್ರೋತ್ಸಾಹಿಸಿದರು. ಇವತ್ತು ಬಿಜೆಪಿ ಕರ್ನಾಟಕದಲ್ಲಿ ವ್ಯಾಪಿಸಿಕೊಂಡಿದ್ದರೆ ಅದಕ್ಕೆ ರಾಷ್ಟ್ರೀಯತೆಯನ್ನು ಪ್ರತಿಪಾದಿಸಿದ ಸಂಕೇಶ್ವರರ ವಿಜಯ ಕರ್ನಾಟಕವೇ ಮೂಲ ಕಾರಣ. ಕೆಲವರು ಮುಟ್ಟಿದ್ದೆಲ್ಲ ಚಿನ್ನ ಅಂತಾರಲ್ಲ ಹಾಗೇನೇ ಸಂಕೇಶ್ವರರು ಕೈಹಾಕಿದ್ದೆಲ್ಲ ಯಶಸ್ಸೇ! ಅವರ ಬಗ್ಗೆ ಹೇಳುತ್ತಾ ಹೋದರೆ ಒಂದು ಸಂಶೋಧನಾ ಪ್ರಬಂಧವನ್ನೇ ಮಂಡಿಸಬಹುದು. ಅವರನ್ನು ನೂರಾರು ವ್ಯಾಖ್ಯಾನಗಳ ಮೂಲಕ ಹೇಳಬಹುದು, ಜಗತ್ತಿನ ಮಹಾ ಮಹಾ ಸಾಧಕರ ಪಟ್ಟಿಯಲ್ಲಿಟ್ಟು ಹೇಳಬಹುದು. ಅಷ್ಟಾದರೂ ಅವರ ಬಗ್ಗೆ ಹೇಳುವುದು ಇನ್ನೇನೋ ಬಿಟ್ಟುಹೋಗಿದೆ ಎನಿಸಿಬಿಡುತ್ತವೆ. ಅವರು ರಾಜಕಾರಣಿಯೂ ಹೌದು, ಖ್ಯಾತ ಉದ್ಯಮಿಯೂ ಹೌದು, ಉದ್ಯಮದಲ್ಲಿ ಸದಾ ಪ್ರಯೋಗಕ್ಕೆ, ಸಾಹಸಕ್ಕೆ ಇಳಿಯುವ ಛಲಗಾರನೂ ಹೌದು, ಮಹತ್ವಾಕಾಂಕ್ಷಿಯೂ ಹೌದು. ಆದರೆ ಅವರು ಉದ್ಯಮಕ್ಕಾಗಿ, ಅದನ್ನು ಬೆಳೆಸುವುದಕ್ಕಾಗಿ ರಾಜಕಾರಣಕ್ಕೆ ಬಂದವರಲ್ಲ. ಉದ್ಯಮದಲ್ಲಿ ಪಕ್ಕಾ ವ್ಯವಹಾರಸ್ಥ, ಆದರೆ ರಾಜಕಾರಣದಲ್ಲಿ ನಿಜವಾದ ಸಮಾಜ ಸೇವಕ. ಅವರಿಗೆ ರಾಜಕಾರಣಕ್ಕೆ ಬಂದು ತನ್ನನ್ನು ಗುರುತಿಸಿಕೊಳ್ಳಬೇಕೆಂಬ ಅನಿವಾರ್ಯ ಇರಲಿಲ್ಲ.
ರಾಜಕಾರಣದ ಹೊರತಾಗಿಯೂ ಅಧಿಕಾರ ಪಡೆಯಬಲ್ಲ ಕ್ಷಮತೆಯಿದ್ದವರು. ಉದ್ಯಮಿಗಳು ಹೊಟ್ಟೆ ತುಂಬಿದ ಮೇಲೆ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತನ್ನು ಅವರು ಸುಳ್ಳು ಮಾಡಿದವರು. ರಿಯಲ್ ಎಸ್ಟೇಟ್ ಜನಗಳು, ಹೆಂಡದ ದೊರೆಗಳು, ಲಾಟರಿ ದಂಧೆಯವರು ರಾಜಕೀಯಕ್ಕೆ ಬರುವುದನ್ನು ರಾಜ್ಯ ಸಾಕಷ್ಟು ನೋಡಿದೆ. ಅವರ ಅಸಲಿ ಉದ್ದೇಶವನ್ನು ಅತೀ ಶೀಘ್ರದಲ್ಲೇ ಜನ ಅರಿತಿರುವುದನ್ನೂ ನಾವು ನೋಡಿದ್ದೇವೆ. ಆದರೆ ವಿಜಯ ಸಂಕೇಶ್ವರರು ರಾಜಕಾರಣಕ್ಕೆ ಬಂದಾಗ ಜನ ಕಿಂಚಿತ್ ಕೂಡಾ ಅನ್ಯಥಾ ಭಾವಿಸಲಿಲ್ಲ. ಅವರು ಕೂಡಾ ರಾಜಕಾರಣ ಮತ್ತು ಉದ್ಯಮವನ್ನು ಒಂದರೊಳಗೊಂದು ಬೆರೆಸಲಿಲ್ಲ. ಉದ್ಯಮ ದಲ್ಲಿ ವ್ಯಸ್ತರಾದಾಗ ರಾಜಕಾರಣಕ್ಕೆ ಕೈಹಾಕಲಿಲ್ಲ. ಹಾಗಾಗಿ ನೂರಾರು ರಾಜಕಾರಣಿಗಳ ನಡುವೆ ವಿಜಯ ಸಂಕೇಶ್ವರರು ವಿಭಿನ್ನರಾಗಿ ನಿಲ್ಲುತ್ತಾರೆ. ನೂರಾರು ಉದ್ಯಮಗಳ ನಡುವೆ ಅವರು ಸಾಹಸಿಯಾಗಿ ಕಾಣುತ್ತಾರೆ. ಅವರ ಬದುಕೇ ಒಂಥರಾ ದಿಗ್ವಿಜಯ. ಆ ದಿಗ್ವಿಜಯ ಆರಂಭವಾಗಿದ್ದು 1967ರಲ್ಲಿ. ವಿಜಯ ಸಂಕೇಶ್ವರರು ತಮ್ಮ ಮನೆತನದ ವ್ಯಾಪಾರ- ಉದ್ಯಮಗಳನ್ನು ಬಿಟ್ಟು ಹೊಸ ಉದ್ಯಮ ಆರಂಭಿಸಲು ಹೊರಟಾಗ ಎಲ್ಲರೂ ಹುಬ್ಬೇರಿಸಿದ್ದರು. ಅಷ್ಟೇಕೆ ಮನೆಯಲ್ಲೂ ಆತಂಕ ಶುರುವಾಗಿತ್ತು.
ಬಿಸಿ ರಕ್ತದ ಯುವಕ ಹುಮ್ಮಸ್ಸಿನಿಂದ ಹೊರಟು ಕೈಸುಟ್ಟುಕೊಂಡಾನು ಎಂದು ಸಹಜ ಆತಂಕ ಪಟ್ಟಿದ್ದರು. ಏಕೆಂದರೆ ಆ ಯುವಕನಿಗೆ ಹೊಸ ಉದ್ಯಮ ಆರಂಭಿಸಿ ಕುಟುಂಬ ಸಾಕಬೇಕಿರಲಿಲ್ಲ. ಸಾಕಷ್ಟು ಸ್ಥಿತಿವಂತರ ಮನೆತನ. ಕಂಫರ್ಟ್ ಜೋನನ್ನು ದಾಟುವ ರಿಸ್ಕೆಂಬುದೇ ಇರಲಿಲ್ಲ. ಇರುವುದನ್ನು ಸುಧಾರಿಸಿಕೊಂಡು ಹೋಗಿದ್ದರೂ ಜೀವನವನ್ನು ಚೆನ್ನಾಗೇ ಸಾಗಿಸಬಹುದಿತ್ತು. ಅದಕ್ಕಾಗಿ ತಂದೆ ಮಗನ 16ನೇ ವಯಸ್ಸಿಗೇ ಪ್ರಿಂಟಿಂಗ್ ಪ್ರೆಸ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ ಆ ಯುವಕನಿಗೆ ಆಗಲೇ ಕಂಫರ್ಟ್‌ಜೋನನ್ನು ದಾಟುವ ತುಡಿತ ಹೆಚ್ಚಾಗಿತ್ತು. ಅದನ್ನು ದಾಟದೆ ಜೀವನದಲ್ಲಿ ಸ್ವಾರಸ್ಯವಿಲ್ಲ ಎಂದುಕೊಂಡರು. ಅಷ್ಟಕ್ಕೂ ಆ ಯುವಕ ಅದುವರೆಗೆ ಬೇರಾರೂ ಇಳಿಯದ ಕ್ಷೇತ್ರಕ್ಕೇನೂ ಕೈಹಾಕಿರಲಿಲ್ಲ. ಆ ಹೊತ್ತಿಗಾಗಲೇ ಆ ಊರಲ್ಲಿ ಆ ಉದ್ಯಮಕ್ಕೆ ಕೈಹಾಕಿದ ಸಾಕಷ್ಟು ಜನರಿದ್ದರು. ಲಾಭ ಮಾಡಿಕೊಂಡವರೂ ಇದ್ದರು, ನಷ್ಟ ಹೊಂದಿದವರೂ ಇದ್ದರು. ಯುವಕನ ಉದ್ದೇಶ ತಿಳಿದು ಅವರು ಕೂಡಾ ಅಪಸ್ವರ ನುಡಿದರು. ಅದರ ಪರಿಪಾಟಲುಗಳನ್ನು ವಿವರಿಸಿದರು. ಆದರೆ ಯುವಕ ಮಾತ್ರ ಪಟ್ಟುಬಿಡಲಿಲ್ಲ.
ಆ ಉದ್ಯಮದ ಬಗ್ಗೆ ಏನೂ ಗೊತ್ತಿಲ್ಲದೆ ಒಂದೂವರೆ ಲಕ್ಷ ಸಾಲ ಪಡೆದು ಲಾರಿ ಖರೀದಿಸಿ ರೋಡಿಗಿಳಿಸಿಯೇ ಬಿಟ್ಟರು. ಅಲ್ಲಿಂದ ಆ ಲಾರಿ ಮತ್ತೆಂದೂ ಓಡುವುದನ್ನು ನಿಲ್ಲಿಸಲಿಲ್ಲ. ಗದಗ್‌ನಿಂದ ಹುಬ್ಬಳ್ಳಿವರೆಗೆ ಓಡುತ್ತಿದ್ದ ಅವರ ಸರಕು ಸಾಗಾಟದ ಲಾರಿಗಳಿಂದು ದೇಶದ ಮೂಲೆ ಮೂಲೆಗಳಿಗೂ ಓಡುತ್ತಿವೆ. ಆಗ ಆ ಯುವಕನ ವಯಸ್ಸು ಕೇವಲ 28. ಆಡಿಕೊಂಡವರು ಸುತ್ತಲೂ ಇದ್ದರು, ಯಶಸ್ವಿಯಾಗಬೇಕೆಂಬ ಛಲವಿತ್ತು. ಬಾಡಿಗೆ ಮನೆ ಹಿಡಿದರು. ಪರಿಚಿತವಲ್ಲದ ಉದ್ಯಮದಿಂದ ಪದೇ ಪದೆ ನಷ್ಟಗಳನ್ನು ಅನುಭವಿಸಿದರು. ಆದರೆ ಆರಂಭದ ದಿನ ಇದ್ದ ಅಗ್ನಿಯನ್ನು ಆತ ಆರಲು ಬಿಡಲೇ ಇಲ್ಲ. ಕ್ರಮೇಣ ಉದ್ಯಮ ಚಿಗಿತುಕೊಳ್ಳಲಾರಂಭಿಸಿತು. ಎಷ್ಟೆಂದರೆ ಅವರ 28ನೇ ವಯಸ್ಸಿನಲ್ಲಿ ಆರಂಭಿಸಿದ ಆ ಉದ್ಯಮ 65 ಆಗುವ ಹೊತ್ತಿಗೆ ದೇಶದ ಪ್ರಮುಖ ಖಾಸಗಿ ರಂಗದ ಸರಕು ಮತ್ತು ಪ್ರಯಾಣಿಕರನ್ನು ಸಾಗಿಸುವ ಪ್ರತಿಷ್ಠಿತ ಉದ್ಯಮ ಎಂದು ಹೆಸರಾಯಿತು. ಅಂದು ಒಂದೂವರೆ ಲಕ್ಷದಿಂದ ಆರಂಭಿಸಿದ ಉದ್ಯಮ ಇಂದು ಸಾವಿರಾರು ಕೋಟಿಗಳ ವಹಿವಾಟನ್ನು ನಡೆಸುವಷ್ಟು ಬೆಳೆಯಿತು.
ಇದೆಲ್ಲೋ ದೂರದ ಊರಲ್ಲಿ ನಡೆದ ಯಶೋಗಾಥೆಯಲ್ಲ. ಗದಗ ಎಂಬ ಸಾಹಿತ್ಯ ಕಾಶಿಯಲ್ಲಿ ನಡೆದ ಉದ್ಯಮ ಕ್ರಾಂತಿ.
ವಿಆರ್‌ಎಲ್ ಎಂಬ ಸಂಸ್ಥೆಯ ಜೈತಯಾತ್ರೆ. ಕರ್ನಾಟಕದಲ್ಲಿ ಛಲಕ್ಕೆ, ಹುಮ್ಮಸ್ಸಿಗೆ, ಮುನ್ನುಗ್ಗುವುದಕ್ಕೆ ಮತ್ತು ರಿಸ್ಕ್ ತೆಗೆದುಕೊಳ್ಳುವುದಕ್ಕೆ ಉತ್ತಮ ಉದಾಹರಣೆ ಕೊಡಬೇಕೆಂದರೆ ನಮಗೆ ಕಾಣುವ ವ್ಯಕ್ತಿ ವಿಜಯ ಸಂಕೇಶ್ವರರು. ಅಂದು ಅಪ್ಪ ಕೊಟ್ಟ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ದಿನದ 14 ಗಂಟೆ ದುಡಿಯುತ್ತಿದ್ದ, ಪ್ರಿಂಟಿಂಗಿನಲ್ಲಿ ಪ್ರಯೋಗಗಳನ್ನು ಮಾಡುತ್ತಿದ್ದ ವಿಜಯ ಸಂಕೇಶ್ವರರು ಅದೇ ಕ್ಷೇತ್ರದಲ್ಲಿ ಮುನ್ನಡೆದಿದ್ದರೂ ಕೋಟ್ಯಾಧಿಪತಿಯಾಗುತ್ತಿದ್ದರು. ಅಂದಿನ ಕಾಲಕ್ಕೆ ಅವರ ಡಿಕೆ ಭಾರಾದ್ವಾಜ ಡಿಕ್ಸನರಿ ನಾಡಿನಾದ್ಯಂತ ಜನಪ್ರಿಯವಾಗಿತ್ತು. ಅಲ್ಲದೆ ಪಠ್ಯ ಪುಸ್ತಕಗಳ ಮುದ್ರಣವೂ ಅವರ ಮುದ್ರಣಾಲಯದಲ್ಲಿ ಪ್ರಕಟವಾಗುತ್ತಿತ್ತು. ಮುದ್ರಣಾಲಯವನ್ನೇ ವಿಸ್ತರಿಸಿ ಸಾಮ್ರಾಜ್ಯ ನಿರ್ಮಿಸುವ ಎಲ್ಲ ಅವಕಾಶಗಳೂ ಅವರ ಮುಂದಿತ್ತು. ಆದರೆ ವಿಜಯ ಸಂಕೇಶ್ವರರು ಇರುವುದೆಲ್ಲವನ್ನೂ ಬಿಟ್ಟು ಇಲ್ಲದುದರೆಡೆಗೆ ಸಾಗಿದರು.
ಕಠಿಣ ಹಾದಿಯಲ್ಲಿ ಸವಾಲುಗಳನ್ನು ಎದುರಿಸಲು ಸಿದ್ಧರಾದರು. ಪರಿಣಾಮ ಇಂದು ವಿಆರ್‌ಎಲ್ ಅನ್ನುವ ಹೆಸರನ್ನು ಕೇಳದ, ನೋಡದ ಜನ ದೇಶದಲ್ಲಿಲ್ಲ. 3,900 ಲಾರಿಗಳ 400 ಬಸ್ಸುಗಳ ಒಡೆಯ ವಿಜಯ ಸಂಕೇಶ್ವರರ ಆರಂಭದ ದಿನದ ಎದೆಯೊಳಗಿನ ಅಗ್ನಿ ಇನ್ನೂ ಆರಿಲ್ಲ. ಇಂದಿಗೂ ನೀವು ವಿಆರ್‌ಎಲ್ ಬಸ್ಸು, ಟ್ರಕ್ಕುಗಳ ಹಿಂಬದಿಯಲ್ಲಿ ಚಾಲಕರು ಬೇಕಾಗಿದ್ದಾರೆ ಎನ್ನುವ ಫಲಕ ನೋಡಿರುತ್ತೀರಿ. ಅಂದರೆ ವಿಆರ್‌ಎಲ್ ಇನ್ನೂ ಬೆಳೆಯುತ್ತಲೇ ಇದೆ, ಕಸುವು ಇನ್ನೂ ಕಳೆದುಹೋಗಿಲ್ಲ ಎಂದರ್ಥ. ಲಾರಿ, ಬಸ್ಸುಗಳನ್ನು ರಸ್ತೆಗಿಳಿಸಿದ ಸಂಕೇಶ್ವರರು ಅಷ್ಟಕ್ಕೇ ಸುಮ್ಮನಾಗಲಿಲ್ಲ. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಒತ್ತು ನೀಡಿದರು. ಸರಕು ಮತ್ತು ಪ್ರಯಾಣಿಕರ ಸಾಗಾಟ ಕ್ಷೇತ್ರದಲ್ಲಿ ಎಷ್ಟೋ ಕಂಪನಿಗಳಿರಬಹುದು. ಆದರೆ ವಿಆರ್‌ಎಲ್‌ನ ಸೇವೆಯ ತೂಕ ಒಂದಂಗುಲ ಹೆಚ್ಚೇ. ಕೊರಿಯರ್ ಸೇವೆಗೂ ವಿಸ್ತರಿಸಿಕೊಂಡ ವಿಆರ್‌ಎಲ್ ಇಂದು ರಾಜ್ಯದ ಅತ್ಯಂತ ವಿಶ್ವಾಸಾರ್ಹ ಸಂಸ್ಥೆ.
ಸುಮಾರು 15,000ಕ್ಕೂ ಹೆಚ್ಚಿನ ಜನರಿಗೆ ಅನ್ನದಾತ ಈ ವಿಆರ್‌ಎಲ್. ಯೌವನದಲ್ಲಿ ಉತ್ಸಾಹ ಸಹಜ. ವಯಸ್ಸು ಏರುತ್ತಾ ಬಂದಂತೆ ಮೆಲ್ಲಮೆಲ್ಲನೆ ಅಧೈರ್ಯ, ಅಳುಕು ಕಾಣುತ್ತಾ ಹೋಗುವುದು ಪ್ರಕೃತಿ ಸಹಜ. ಆದರೆ ವಿಜಯ ಸಂಕೇಶ್ವರರು ವಯಸ್ಸು ಹೆಚ್ಚಾದಂತೆ ಇನ್ನಷ್ಟು ಛಲಗಾರರಾಗುತ್ತಿದ್ದಾರೆ. ಕಂಪನಿ ವಿಶಾಲ ಸಾಮ್ರಾಜ್ಯವಾಗಿ ಬೆಳೆದು ನಿಂತಮೇಲೆ ಮಾಧ್ಯಮ ರಂಗಕ್ಕೆ ಧುಮುಕುವ ಧೈರ್ಯ ಮಾಡಿದ ಸಾಹಸಿ ಸಂಕೇಶ್ವರರು. ಲಾರಿ, ಬಸ್ಸುಗಳಿವೆ ಎಂಬ ಮಾತ್ರಕ್ಕೆ ಪತ್ರಿಕೆ ಯಶಸ್ವಿಯಾಗುತ್ತದೆ ಎಂದೇನಿಲ್ಲ. ಅಲ್ಲದೆ ಲಾರಿ, ಬಸ್ಸು ನಡೆಸುವುದಕ್ಕೂ ಪತ್ರಿಕಾರಂಗಕ್ಕೂ ಅಜಗಜಾಂತರ. ಆಗಲೂ ಜನ ಪ್ರಿಂಟಿಂಗ್ ಪ್ರೆಸ್ ಬಿಟ್ಟು ಲಾರಿ ಓಡಿಸಿದಾಗ ನಗಾಡಿದಂತೆಯೇ ನಗಾಡಿದರು. ಏಕೆಂದರೆ ಅಂದು ಕನ್ನಡದಲ್ಲಿ ಇದ್ದ ಪತ್ರಿಕೆಗಳನ್ನೇ ಓದುವವವರ ಸಂಖ್ಯೆ ಕಡಿಮೆಯಾಗಿತ್ತು. ಅಲ್ಲದೆ ಇದ್ದ ಪತ್ರಿಕೆಗಳು ಇನ್ನೊಂದು ಪತ್ರಿಕೆಗೆ ಆಸ್ಪದವಿಲ್ಲದಂತೆ ಗಟ್ಟಿಯಾಗಿ ಬೇರೂರಿದ್ದವು. ಆದರೂ ಸಂಕೇಶ್ವರರು ವಿಜಯ ಕರ್ನಾಟಕ ವನ್ನು ಆರಂಭಿಸಿದರು.
ಕೆಲವೇ ದಿನಗಳಲ್ಲಿ ಪತ್ರಿಕೆ ಇತರ ಪತ್ರಿಕೆಗಳ ಜಾಗವನ್ನು ಆಕ್ರಮಿಸಿಕೊಳ್ಳುವುದರ ಜೊತೆಗೆ ಕನ್ನಡದಲ್ಲಿ ಪತ್ರಿಕೆ ಓದುವ ಹೊಸ ಸಂಸ್ಕೃತಿಯನ್ನೇ ಹುಟ್ಟು ಹಾಕಿತು. ಒಂದು ವೇಳೆ ಅಂದು ಸಂಕೇಶ್ವರರು ಪತ್ರಿಕೆ ಆರಂಭಿಸದೇ ಇದ್ದಿದ್ದರೆ, ಆ ಪತ್ರಿಕೆ ಹೊಸತನದೊಂದಿಗೆ ಪ್ರಕಟವಾಗದೇ ಇರುತ್ತಿದ್ದರೆ ಇವತ್ತಿನ ಹೊತ್ತಿಗೆ ಕನ್ನಡದಲ್ಲಿ ಓದುಗರ ಮತ್ತು ಬರಹಗಾರರ ಸಂಖ್ಯೆ ಸಾಕಷ್ಟು ಕಡಿಮೆಯಾಗುತ್ತಿತ್ತು ಎಂಬುದನ್ನು ವಿದ್ವಾಂಸರೇ ಹೇಳುತ್ತಾರೆ. ಆ ಮಾತೇನೂ ಅತಿಶಯೋಕ್ತಿಯಲ್ಲ. ಅದಕ್ಕೆ ವಿಜಯ ಸಂಕೇಶ್ವರರ ಪತ್ರಿಕೆ ಸೃಷ್ಟಿಸಿದ ಇತಿಹಾಸವೇ ಸಾಕ್ಷಿ. ಸಂಕೇಶ್ವರರು ಯಾವುದೇ ರಂಗಕ್ಕೆ ಕೈಹಾಕಲಿ, ಅಲ್ಲೊಂದು ಛಾಪು ಮೂಡಿಸದೆ ಬಿಡಲಾರರು. ಪತ್ರಿಕೆ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗಲೇ ಮತ್ತೊಂದು ಕನ್ನಡ ಪತ್ರಿಕೆಯನ್ನು ಆರಂಭಿಸಿ ರಾಜ್ಯದಲ್ಲಿ ಅಚ್ಚರಿ ಮೂಡಿಸಿದ್ದರು. ಒಂದು ಆಂಗ್ಲ ಪತ್ರಿಕೆಯನ್ನೂ ಆರಂಭಿಸಿ ಪ್ರಯೋಗ ಮಾಡಿದರು.
ಅವರ ಸುಲಭಕ್ಕೆ ಬಿಟ್ಟುಕೊಡದ ವ್ಯಾವಹಾರಿಕ ಗುಟ್ಟುಗಳಿಂದ ಹಲವಾರು ಉದ್ಯಮಿಗಳು ತಲೆಕೆಡಿಸಿಕೊಂಡಾಗಲೇ ನಂಬರ್ ಒಂದು ಪತ್ರಿಕೆಯನ್ನು ಬೃಹತ್ ಕಂಪನಿಯೊಂದಕ್ಕೆ ಮಾರಾಟ ಮಾಡಿ ಪತ್ರಿಕಾ ರಂಗದಿಂದ ನಿರ್ಗಮಿಸಿದರು. ಆಗಲೂ ಜನ ಆಡಿಕೊಂಡರು. ಆದರೆ ಅದಾಗಲೇ ಸಂಕೇಶ್ವರರು ಮತ್ತೊಂದು ಆಲೋಚನೆಯಲ್ಲಿ ವ್ಯಸ್ತರಾಗಿದ್ದರು. ರಾಜಕೀಯಕ್ಕೆ ಇಳಿದರು. ಸಂಸದರೂ ಆದರು. ಒಂದು ಕಾಲದಲ್ಲಿ 600 ರುಪಾಯಿಗಳ ಬಾಡಿಗೆ ಮನೆಯಲ್ಲಿದ್ದ ಮನುಷ್ಯ ತನ್ನ ಧೈರ್ಯ, ಶ್ರಮದಿಂದ ರಾಜ್ಯದಲ್ಲಿ ಅತೀ ಎತ್ತರಕ್ಕೆ ಏರಿದ್ದರು. ಜನ ರಸ್ತೆಗಳಲ್ಲಿ ಹಳದಿ ಬಣ್ಣದ ಬಸ್ಸುಗಳನ್ನು ನೋಡಿದಾಗಲೆಲ್ಲಾ ಅವರ ಬಗ್ಗೆ ಮಾತಾಡಿಕೊಂಡರು. ಹಲವು ವರ್ಷ ಮೌನವಾಗಿದ್ದ ವಿಜಯ ಸಂಕೇಶ್ವರರು ಇದ್ದಕ್ಕಿದ್ದಂತೆ ಮತ್ತೊಮ್ಮೆ ಸುದ್ದಿಯಾದರು. ಮತ್ತೊಂದು ಕನ್ನಡ ಪತ್ರಿಕೆಯನ್ನು ಆರಂಭಿಸುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಡಿತು. ಆ ಒಂದು ಸುದ್ದಿಗೇ ಕನ್ನಡದ ಮಾಧ್ಯಮ ರಂಗ ಒಮ್ಮೆ ಮಿಸುಕಾಡಿತು. ಸುದ್ದಿ ಇನ್ನೇನು ಆರಬೇಕು ಅನ್ನುವಷ್ಟರಲ್ಲೇ ಪತ್ರಿಕೆಯನ್ನು ತಂದೇಬಿಟ್ಟರು ಸಂಕೇಶ್ವರರು.
ಮತ್ತೊಮ್ಮೆ ಯುವ ಪತ್ರಕರ್ತರ ತಂಡ ಕಟ್ಟಿ ಕೆಲವೇ ಸಮಯದಲ್ಲಿ ಪತ್ರಿಕೆಯನ್ನು ನಂಬರ್ ಒನ್ ಮಾಡಿದರು. ಕನ್ನಡ ಪತ್ರಿಕೆಗಳು ಮಲಯಾಳಂ, ತೆಲುಗುಗಳಷ್ಟು ಪ್ರಸಾರ ಸಂಖ್ಯೆಯ ಸಮೀಪವೂ ಸುಳಿಯದು ಎಂಬಂತಿದ್ದ ಕಾಲದಲ್ಲೇ ಅವುಗಳ ಸಮಕ್ಕೆ ಪ್ರಸಾರವನ್ನು ಮುಟ್ಟಿಸಿದ್ದರ ಹಿಂದೆ ಕಾಣುವುದು ಸಂಕೇಶ್ವರರ ಉದ್ಯಮನೀತಿ, ಕಾಳಜಿ ಮತ್ತು ಶ್ರಮ. ಒಂದೆಡೆ ಬೆಳೆಯುತ್ತಿರುವ ಸಾರಿಗೆ ಸಂಸ್ಥೆ, ಇನ್ನೊಂದೆಡೆ ಪತ್ರಿಕೆಯ ಬಿಡುವಿಲ್ಲದ ಕೆಲಸಗಳ ಮಧ್ಯೆ ಹಳೆಯ ಸಂಕೇಶ್ವರರು ತಟಸ್ಥರಾದರು ಎಂದುಕೊಂಡಾಗಲೇ ವಿಜಯ ಸಂಕೇಶ್ವರರು ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ. ಕನ್ನಡದಲ್ಲಿ ಹೊಸ ಚಾನೆಲ್ ಆರಂಭಿಸಿ ಹೊಸ ದಾಖಲೆ ಬರೆದಿದ್ದಾರೆ. ಇರುವ ಚಾನೆಲ್‌ಗಳೇ ಹೆಚ್ಚಾಯಿತು ಎಂದುಕೊಂಡ ಕಾಲದಲ್ಲೇ ಅವರ ಹೊಸ ಚಾನೆಲ್ ಬಂದಿದೆ. ಎಂದಿನಂತೆ ವಿಜಯ ಸಂಕೇಶ್ವರರು ಜನರು ಅನಗತ್ಯ ಎಂದುಕೊಳ್ಳುವ ಹೊತ್ತಲ್ಲೇ ಎಲ್ಲ ಹೊಸತನ್ನೂ ಆರಂಭಿಸುತ್ತಾರೆ. ಆದರೆ ಕ್ರಮೇಣ ಅನಗತ್ಯ ಎಂದುಕೊಂಡಿದ್ದನ್ನು ಜನ ಅಗತ್ಯ ಎನ್ನುವಂತೆ ಮಾಡುತ್ತಾರೆ.
ಅತ್ಯಾಧುನಿಕ ಸ್ಟುಡಿಯೊ, ಹೊಸಬರ ತಂಡ ದಿಗ್ವಿಜಯಕ್ಕೆ ಹೊರಟಿದೆ. ಸಂಕೇಶ್ವರರ ಬದುಕಿನ ದಿಗ್ವಿಜಯವನ್ನು ಅರಿತವರಿಗೆ ಅವರ ಎಲ್ಲ ಸಾಹಸಗಳೂ ಒಂದು ದಿಗ್ವಿಜಯವೇ ಎನ್ನುವಂತೆ ಕಾಣುತ್ತವೆ. ಜಾಗತಿಕ ಮಾಧ್ಯಮ ರಂಗಕ್ಕೆ ಮುರ್ಡೋಕ್ ಹೇಗೋ ಹಾಗೆ ನಮ್ಮ ಕನ್ನಡ ಮಾಧ್ಯಮ ರಂಗಕ್ಕೆ ವಿಜಯ ಸಂಕೇಶ್ವರರು. ಇಂಥ ವಿಜಯ ಸಂಕೇಶ್ವರರು ರಾಮನವಮಿಯಂದು ದಿಗ್ವಿಜಯಕ್ಕೆ ಹೊರಟಿದ್ದಾರೆ. ನಿಮಗೆ ಗೊತ್ತಾ ದಿಗ್ವಿಜಯವೆಂ ಬುದು ಅವರ ಹುಟ್ಟು ಹೆಸರು. ನನ್ನಂಥ ಸಾವಿರಾರು ಯುವಕರಿಗೆ ವೇದಿಕೆ ಕಲ್ಪಿಸಿಕೊಟ್ಟ, ಬದುಕಲು ಮಾರ್ಗ ತೋರಿದ, ಕೋಪ ಬಂದಾಗ ಬಯ್ದರೂ ಒಳ್ಳೆಯ ಕೆಲಸ ಮಾಡಿದಾಗ ಬೆನ್ನುತಟ್ಟಿ ಆತ್ಮವಿಶ್ವಾಸ ತುಂಬಿದ ವಿಜಯ ಸಂಕೇಶ್ವರರು ದಿಗ್ವಿಜಯಕ್ಕೆ ಹೊರಟಾಗ ಕೃತಜ್ಞತೆಯಿಂದ ಅವರಿಗೆ ಯಶಸ್ಸನ್ನು ಬಯಸದೇ ಇದ್ದರೆ ಹೇಗಾದೀತು. ಆಲ್ ದಿ ಬೆಸ್ಟ್ ಸರ್.
Published on April 08, 2017 04:46
April 6, 2017
ಅಖಿಲ ಮೈಸೂರು ಮರಾಠ ಸಂಘದ ವಿದ್ಯಾರ್ಥಿ ನಿಲಯದ ಮುಂದುವರಿದ ಕಾಮಗಾರಿಗೆ ರೂ 10 ಲಕ್ಷಗಳನ್ನು ನೀಡಲಾಗಿದೆ .
Published on April 06, 2017 02:18
ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮ ಸಾಧು ನಿವಾಸದ ಕಟ್ಟಡಕ್ಕೆ ರೂ 10 ಲಕ್ಷಗಳನ್ನು ನೀಡಲಾಗಿದೆ .
Published on April 06, 2017 02:14
April 5, 2017
ಕೇಂದ್ರ ಸರ್ಕಾರ 15 ಎಕರೆ ಜಾಗ ಮಂಜೂರು ಮಾಡಿದ ಫಲವಾಗಿ ಮೈಸೂರು ಜಿಲ್ಲಾಧಿಕಾರಿಗಳ ನೂತನ ಕಚೇರಿಯ ಕಟ್ಟಡ ನಿರ್ಮಾಣದ ಹಂತದಲ್ಲಿ..
Published on April 05, 2017 02:27
ಕೇಂದ್ರ ಸರ್ಕಾರ 15 ಎಕರೆ ಜಾಗ ಮಂಜೂರು ಮಾಡಿದ ಫಲವಾಗಿ ಮೈಸೂರು ಜಿಲ್ಲಾಧಿಕಾರಿಗಳ ನೂತನ ಕಚೇರಿಯ ಕಟ್ಟಡ ನಿರ್ಮಾಣದ ಹಂತದಲ್ಲಿ..
Published on April 05, 2017 02:24
April 1, 2017
ವಯಸ್ಸು ನೂರಾಹತ್ತು, ಹಸಿದು ಬಂದವರಿಗೆ ಕೊಡದೆ ಕಳಿಸಿಲ್ಲ ತುತ್ತು!
ವಯಸ್ಸು ನೂರಾಹತ್ತು, ಹಸಿದು ಬಂದವರಿಗೆ ಕೊಡದೆ ಕಳಿಸಿಲ್ಲ ತುತ್ತು!
ಅಮೆರಿಕದಲ್ಲೊಂದು ರಿಮೋಟ್ ವಿಲೇಜ್. ಆ ದೂರದ, ದುರ್ಗಮ ಹಳ್ಳಿಯಲ್ಲೊಬ್ಬಳು ಹಣ್ಣು ಹಣ್ಣು ಮುದುಕಿಯಿದ್ದಾಳೆ. ಮುದುಕಿಗೆ ಎರಡೂ ಕಣ್ಣು ಕಾಣುವುದಿಲ್ಲ. ಕುರುಡು, ಆದರೆ ಅಜ್ಜಿಗೆ ಅದ್ಭುತವಾದ ಗ್ರಹಣ ಶಕ್ತಿ ಇರುತ್ತದೆ. ಅಜ್ಜಿ ಹಾಗೆ.. ಅಜ್ಜಿ ಹೀಗೆ… ಅಂತೆಲ್ಲಾ ಪ್ರತೀತಿ ಇರುತ್ತದೆ. ಆದರೂ ಅಲ್ಲಿನ ಸ್ಥಳೀಯ ಚರ್ಚ್‌ನಲ್ಲಿ ಬಿಳಿಯರದ್ದೇ ದರ್ಬಾರು. ಕರಿಯ ಜನಾಂಗಕ್ಕೆ ಸೇರಿದ ಆ ಅಜ್ಜಿ ಬಗ್ಗೆ ಸಹಜವಾಗಿಯೇ ಎಲ್ಲರ ಕಣ್ಣು ಕೆಂಪಾಗಿರುತ್ತದೆ.
ಒಂದು ದಿನ ಅಜ್ಜಿ ಮನೆಯಲ್ಲಿರುತ್ತಾಳೆ. ಐವರು ಶ್ವೇತ ವರ್ಣೀಯ ಹುಡುಗರು ಅಜ್ಜಿ ಮನೆಗೆ ಬರುತ್ತಾರೆ. ಅವರಲ್ಲೊಬ್ಬ ತನ್ನ ಕೈಯನ್ನು ಮುಂದೆ ಚಾಚಿ.. ಏ ಮುದುಕಿ, ನನ್ನ ಕೈಯಲ್ಲೊಂದು ಹಕ್ಕಿ ಇದೆ. ಅದು ಸತ್ತಿದೆಯೋ, ಬದುಕಿದೆಯೋ? ಹೇಳು ಎನ್ನುತ್ತಾನೆ. ಕಣ್ಣೇ ಕಾಣದ ಅಜ್ಜಿ ಹೇಗೆ ತಾನೇ ಅಂತಹ ಪ್ರಶ್ನೆಗೆ ಉತ್ತರಿಸಲು ಸಾಧ್ಯ? ಆದರೆ ಅಜ್ಜಿಗೆ ಆ ಹುಡುಗರ ಉದ್ದೇಶ ಅರ್ಥವಾಗುತ್ತದೆ. ಕರಿಯಳಾದ ತನ್ನನ್ನು ಅವಮಾನಿಸಲು, ಕುರುಡಿಯಾಗಿರುವ ತನ್ನ ದೈಹಿಕ ಊನವನ್ನು ಹಂಗಿಸಲು, ಅವಹೇಳನ ಮಾಡಲು ಬಂದಿದ್ದಾರೆ ಎಂಬುದು ಗೊತ್ತಾಗುತ್ತದೆ. ಅಜ್ಜಿ ಒಂದು ನಿಮಿಷ ಏನನ್ನೂ ಮಾತಾಡುವುದಿಲ್ಲ. ಆಕೆಗೆ ನಗು ಬರುತ್ತದೆ. ನಿನ್ನ ಕೈಯಲ್ಲಿರುವ ಹಕ್ಕಿ ಸತ್ತಿದೆಯೋ, ಬದುಕಿದೆಯೋ ನನಗೆ ಗೊತ್ತಿಲ್ಲ. ಆದರೆ ಅದು ನಿನ್ನ ಕೈಯಲ್ಲಿರುವುದಂತೂ ನಿಜ. ಒಂದು ವೇಳೆ ಸತ್ತಿದ್ದರೆ, ಅದು ಸತ್ತ ರೂಪದಲ್ಲೇ ನಿನಗೆ ಸಿಕ್ಕಿರಬಹುದು ಇಲ್ಲವೇ ನೀನೇ ಸಾಯಿಸಿರಬಹುದು. ಅಕಸ್ಮಾತ್ ಬದುಕಿದ್ದರೆ ಈಗಲೂ ಅದನ್ನು ನೀನು ಸಾಯಿಸಬಹುದು ಇಲ್ಲವೇ ಬದುಕಲು ಬಿಡಬಹುದು. ಎಲ್ಲವೂ ನಿನ್ನ ಕೈಯಲ್ಲಿದೆ ಎಂದು ಅಜ್ಜಿ ಹೇಳುತ್ತಾಳೆ.
1993ರಲ್ಲಿ ಸಾಹಿತ್ಯಕ್ಕಾಗಿನ ನೊಬೆಲ್ ಪ್ರಶಸ್ತಿ ಪಡೆಯುವಾಗ ಕರಿಯ ಜನಾಂಗಕ್ಕೆ ಸೇರಿದ ಅಮೆರಿಕದ ಟೋನಿ ಮಾರಿಸನ್ ಹೇಳಿದ ಕಥೆಯ ಸಾರಾಂಶವಿಷ್ಟೆ. ಭಾಷೆ, ವಿದ್ಯೆ ಅನ್ನೋದು ಕೂಡ ನಮ್ಮ ಕೈಯಲ್ಲೇ ಇದೆ. ನಮ್ಮನ್ನು ಮೀರಿದ್ದಲ್ಲ. ನಮ್ಮ ಕಲ್ಪನೆ ಮತ್ತು ಪರಿಶ್ರಮದ ಆಧಾರದ ಮೇಲೆ ಅವು ರೂಪ ತಳೆಯುತ್ತವೆ. ಅಂದರೆ ಭಾಷೆಗೆ, ವಿದ್ಯೆಗೆ ಕರಿ-ಬಿಳಿ ತೊಗಲೆಂಬ ಭೇದವಿಲ್ಲ. ಜಾತಿ-ಧರ್ಮಗಳಿಲ್ಲ. ಮತದ ತಾರತಮ್ಯವಿಲ್ಲ. ಬೆಂಗಳೂರಿನಿಂದ 66 ಕಿ.ಮೀ ದೂರದಲ್ಲಿರುವ ಸಿದ್ಧಗಂಗಾ ಮಠದೊಳಕ್ಕೆ ಕಾಲಿಟ್ಟರೆ ಹೀಗನಿಸದೇ ಇರದು. ಇದು ಮಠವೋ, ಬಡಬಗ್ಗರ ಕಾಲೊನಿಯೋ, ವಿದ್ಯಾಕೇಂದ್ರವೋ ಅಥವಾ 110ನೇ ವರ್ಷಕ್ಕೆ ಕಾಲಿಡುತ್ತಿರುವ ಶ್ರೀ ಶಿವಕುಮಾರ ಸ್ವಾಮೀಜಿಗಳೆಂಬ ಅನ್ನದಾತನ, ವಿದ್ಯಾದಾತನ ನೆಲೆವೀಡೋ ಎಂಬ ಗೊಂದಲಗಳು ಕಾಡುತ್ತವೆ. ಆದರೆ ಎಲ್ಲವೂ ಸತ್ಯ.
ಸದ್ದುಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆಯೇರಿದೆ
ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ
ಕಾವಿಯುಡುಗೆಯನ್ನುಟ್ಟು ನಭವೇ ಕಿರಣ ಹತವೇ ಕಣ್ತೆರೆದಿದೆ
ಎಂಬ ಡಾ. ಜಿ.ಎಸ್. ಶಿವರುದ್ರಪ್ಪನವರ ನಾಲ್ಕು ಸಾಲುಗಳೇ ಸಾಕು ಸಿದ್ಧಗಂಗಾ ಮಠದ ಮಹಾತ್ಮೆಯನ್ನು ಸಾರಲು. ಇದು ಹೆಸರಿಗೆ ಲಿಂಗಾಯತರ ಮಠವಾಗಿದ್ದರೂ ಅನ್ನ ಮತ್ತು ವಿದ್ಯಾದಾನಕ್ಕೆ ಜಾತಿ ಎಂದೂ ಅಳತೆಗೋಲಾಗಿಲ್ಲ!
ಹೆಳವ, ಬೆಸ್ತ, ಅಂಬಿಗ, ಗೊಲ್ಲ, ಯಾದವ ಮುಂತಾದ ಜಾತಿಗಳಿಗೆ ಸೇರಿದ 610, ಅಗಸ, ಧೋಬಿ, ಈಡಿಗ, ಕುಂಬಾರ, ದೇವಾಂಗ, ರಜಪೂತ್, ಕ್ಷತ್ರಿಯ ಜನಾಂಗಕ್ಕೆ ಸೇರಿದ 2039, ಅದರಲ್ಲೂ ಕುರುಬ ಜನಾಂಗಕ್ಕೆ ಸೇರಿದ 1138, ಒಕ್ಕಲಿಗ, ಕಮ್ಮ, ನಾಯ್ಡು, ರೆಡ್ಡಿ ಮುಂತಾದ 3ನೇ ಎ ಕೆಟಗರಿಗೆ ಸೇರಿದ 930, ಲಿಂಗಾಯತ, ಮರಾಠ, ಕ್ರೈಸ್ತ, ಜೈನ ಹಾಗೂ ವೈಷ್ಣವ ಜನಾಂಗಕ್ಕೆ ಸೇರಿದ 3006 ಬ್ರಾಹ್ಮಣ, ಮೊದಲಿಯಾರ್, ವೈಶ್ಯ ಜಾತಿಗೆ ಸೇರಿದ 67, ಪರಿಶಿಷ್ಟ ಜಾತಿಗೆ ಸೇರಿದ 552 ಹಾಗೂ 68 ಮುಸಲ್ಮಾನರೂ ಸೇರಿದಂತೆ ಎಂಟು ಸಾವಿರಕ್ಕೂ ಅಧಿಕ ಮಕ್ಕಳಿಗೆ ಊಟ, ವಸತಿ ಮತ್ತು ವಿದ್ಯೆಯನ್ನು ಮಾತ್ರ ಉಚಿತವಾಗಿ ನೀಡುತ್ತಿಲ್ಲ. ಶೇ.50 ಮಕ್ಕಳು ದಿಕ್ಕು-ದಿಸೆಯಿಲ್ಲದ, ಅಪ್ಪ-ಅಮ್ಮ ದೂರ ಮಾಡಿದ ಅನಾಥರೇ ಆಗಿದ್ದರೂ ಪ್ರೀತಿಗೆ ಎಂದೂ ಕೊರತೆ ಮಾಡಿಲ್ಲ. ಶ್ರೀ ಶಿವಕುಮಾರ ಸ್ವಾಮೀಜಿಗಳ ಉತ್ತರಾಧಿಕಾರಿಯಾಗಿ ನಿಯುಕ್ತಿಗೊಂಡಿರುವ ಕಿರಿಯರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ವಾರಕ್ಕೊಮ್ಮೆ ಸ್ವತಃ ನೂರಾರು ಮಕ್ಕಳಿಗೆ ಬಿಸಿನೀರಿನ ಸ್ನಾನ ಮಾಡಿಸುತ್ತಾರೆ. ಅನಾಥರಾಗಿದ್ದರೂ ಅನಾಥ ಪ್ರಜ್ಞೆ ಮಕ್ಕಳನ್ನು ಕಾಡಲು ಬಿಟ್ಟಿಲ್ಲ. ಪ್ರತಿ ದಿನ ಸಾಯಂಕಾಲ ಬಿಳಿ ಪಂಚೆ, ಕೆಂಪು ಉತ್ತರೀಯ ಹಾಗೂ ಹಣೆಗೆ ವಿಭೂತಿ ಧರಿಸಿದ ಮಕ್ಕಳು ಜಾತಿ-ಮತಗಳ ಭೇದವಿಲ್ಲದೆ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗುತ್ತಾರೆ. ಹಾಗಂತ ಕಟ್ಟುಪಾಡುಗಳನ್ನು ಹಾಕಿಲ್ಲ. ಶಿಸ್ತಿನ ಹೆಸರಿನಲ್ಲಿ ಮಕ್ಕಳ ಉಸಿರು ಕಟ್ಟಿಸುವುದಿಲ್ಲ. ಅದಕ್ಕೇ ಹೇಳಿದ್ದು ಇದು ಮಠವೋ ಬಡಬಗ್ಗರ ಕಾಲೊನಿಯೋ ಎಂಬ ಅನುಮಾನ ಕಾಡುತ್ತದೆ ಎಂದು. ಪ್ರತಿ ಭಾನುವಾರ ಇಷ್ಟಬಂದ ಆಟವಾಡುವ, ಎಲ್ಲೆಂದರಲ್ಲಿ ಕುಣಿದು ಕುಪ್ಪಳಿಸುವ, ಟೀವಿ ನೋಡುವ ಮುಕ್ತ ಸ್ವಾತಂತ್ರ್ಯವನ್ನು ಮಕ್ಕಳಿಗೆ ಕಲ್ಪಿಸಲಾಗಿದೆ.ಇಲ್ಲಿನ ಮತ್ತೊಂದು ವಿಶೇಷವೆಂದರೆ, ಮೇಲುಕೀಳೆಂಬ ಭೇದವಿಲ್ಲದೆ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಸಂಸ್ಕೃತ ಕಲಿಸಲಾಗುತ್ತದೆ.
ಪ್ರಸ್ತುತ 66 ಮುಸ್ಲಿಂ ವಿದ್ಯಾರ್ಥಿಗಳೂ ಸಂಸ್ಕೃತ ವ್ಯಾಸಂಗ ಮಾಡುತ್ತಿದ್ದಾರೆ. ನಿಮಗೆ ಆಶ್ಚರ್ಯವಾಗಬಹುದು. ಪ್ರಥಮಾ, ಕಾವ್ಯ, ಸಾಹಿತ್ಯ, ವಿದ್ವನ್ಮಧ್ಯಮಾ ಹಾಗೂ ವಿದ್ವದುತ್ತಮಾ ತರಗತಿಗಳಲ್ಲಿ ಒಟ್ಟು 6075 ವಿದ್ಯಾರ್ಥಿಗಳು ಸಂಸ್ಕೃತ ಕಲಿಯುತ್ತಿದ್ದಾರೆ. ವೇದ-ಉಪನಿಷತ್ತುಗಳನ್ನು ಬೋಧಿಸ ಲಾಗುತ್ತದೆ. ಆದರೆ ವಿದ್ಯೆಯೊಂದನ್ನೇ ಇಲ್ಲಿ ಕಲಿಸುವುದಿಲ್ಲ. ಕಚೇರಿಯಲ್ಲಿ ಕುಳಿತು ಕಡತಗಳನ್ನು ತಿರುವಿ ಹಾಕುವ ಗುಮಾಸ್ತರನ್ನೋ, ಅಧಿಕಾರಿಗಳನ್ನೋ ಮಾತ್ರ ಇಲ್ಲಿ ರೂಪಿಸುತ್ತಿಲ್ಲ.
ಮಕ್ಕಳಿಗೆ ಪ್ರಾಯೋಗಿಕ ಕೃಷಿ ಪಾಠವಿದೆ. ಮಕ್ಕಳೇ ಕೃಷಿ ಮಾಡುತ್ತಾರೆ. ದವಸ-ಧಾನ್ಯ ಬೆಳೆಯುತ್ತಾರೆ.ಮುಂದೊಂದು ದಿನ ಕಚೇರಿಯಲ್ಲಿ ಕೆಲಸ ಸಿಗದಿದ್ದರೂ ದುಡಿದು ತಿನ್ನುವ ಮಾರ್ಗವನ್ನು ಮಠದಲ್ಲಿ ತೋರಿಸುತ್ತಾರೆ. ಹಾಗಾಗಿಯೇ ಪರೀಕ್ಷೆಯಲ್ಲಿ ಫೇಲಾದರೆಂದು ಮಠದಿಂದ ಹೊರಹಾಕುವುದಿಲ್ಲ. ಜತೆಗೆ ಮಕ್ಕಳನ್ನು ಮಠಕ್ಕೆ ಬಿಡಲು ಕರೆದುಕೊಂಡು ಬಂದು ವಾಪಸ್ ಕರೆದುಕೊಂಡುಹೋದ ಪ್ರಸಂಗವನ್ನು ಇಲ್ಲಿ ಕಾಣಲು ಸಾಧ್ಯವೇ ಇಲ್ಲ. ಜಗತ್ತೇ ದೂರ ಮಾಡಿದವರಿಗೂ ಮಠದ ಬಾಗಿಲು ಮಾತ್ರ ಸದಾ ತೆರೆದೇ ಇರುತ್ತದೆ. ಮಠದಲ್ಲಿ ಹೆಚ್ಚಾಗಿ ಉತ್ತರ ಕರ್ನಾಟಕದ ಬಡ ಮತ್ತು ಅನಾಥ ಮಕ್ಕಳೇ ಕಂಡುಬರುತ್ತಾರೆ. ಅದರಲ್ಲೂ ಗುಲ್ಬರ್ಗ ಮತ್ತು ಬಳ್ಳಾರಿಯದ್ದೇ ಮೇಲುಗೈ. ಸಾಕಲು ಕಷ್ಟವಾಗುತ್ತದೆ ಎಂದು ಮಠಕ್ಕೆ ಬಿಟ್ಟು ಗುಳೆ ಹೋಗುವ ಇಲ್ಲಿನ ಜನರು ಏಳೆಂಟು ವರ್ಷಗಳಾದರೂ ಮಕ್ಕಳ ಮುಖ ನೋಡಲೂ ಬರುವುದಿಲ್ಲ. ಅಂತಹ ಮಕ್ಕಳನ್ನು ಸ್ವಂತ ಕುಡಿಗಳೆಂಬಂತೆ ಸಾಕಿ-ಸಲಹಿ, ವಿದ್ಯೆ ನೀಡಿ ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡುವ ಮಹತ್ಕಾಾರ್ಯ ಮಠದಲ್ಲಿ ನಡೆಯುತ್ತಿದೆ. ಪುಕ್ಕಟೆ ಎಂದ ಮಾತ್ರಕ್ಕೆ ಯಾವುದೂ ಇಲ್ಲಿ ಕಳಪೆಯಾಗಿಲ್ಲ.ನಮ್ಮ ಮನೆಗಳಿಗಿಂತಲೂ ಯೋಗ್ಯ ಕೊಠಡಿಗಳನ್ನು ಮಕ್ಕಳಿಗೆ ಕಟ್ಟಿಸಿ ಕೊಡಲಾಗಿದೆ. ಊಟದ ಹಾಲ್ ಕೂಡ ಅಷ್ಟೇ ಸುಸಜ್ಜಿತವಾಗಿದೆ.
ಅತ್ಯಾಧುನಿಕ ಗ್ರಂಥಾಲಯ, ಕಂಪ್ಯೂಟರ್ ಕೇಂದ್ರಗಳಿವೆ. ಇಲ್ಲಿ 8 ಸಾವಿರಕ್ಕೂ ಅಧಿಕ ಮಕ್ಕಳಿಗೆ ಮಾತ್ರವಲ್ಲ, ನಿತ್ಯವೂ ಮಠಕ್ಕೆ ಭೇಟಿ ಕೊಡುವ ಸಾವಿರಾರು ಭಕ್ತಾದಿಗಳಿಗೂ, ಪ್ರವಾಸಿಗಳಿಗೂ ದಿನದ ಇಪ್ಪತ್ನಾಲ್ಕು ಗಂಟೆಗಳೂ ಊಟದ ಸೌಲಭ್ಯವಿದೆ! ಅಷ್ಟು ಮಾತ್ರವಲ್ಲ.
ಸಿದ್ಧಗಂಗಾ ಎಂಜಿನಿಯರಿಂಗ್ ಕಾಲೇಜು, ಸಿದ್ಧಗಂಗಾ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್, ಸಿದ್ಧಗಂಗಾ ಪಾಲಿಟೆಕ್ನಿಕ್, ಸಿದ್ಧಗಂಗಾ ಕಾಲೇಜ್ ಆಫ್ ಫಾರ್ಮಸಿ, ಸಿದ್ಧಗಂಗಾ ಸ್ಕೂಲ್ ಆಫ್ ನರ್ಸಿಂಗ್, ಐಟಿಐ, ಡಿ.ಎಡ್ ಕಾಲೇಜುಗಳು, ಪ್ರಥಮ ದರ್ಜೆ ಕಾಲೇಜುಗಳು, ಪದವಿಪೂರ್ವ ಕಾಲೇಜುಗಳು, ಸಂಸ್ಕೃತ ಕಾಲೇಜು, ಪ್ರೌಢಶಾಲೆಗಳು, ನರ್ಸರಿ ಶಾಲೆಗಳು, ಅಂಧ ಮಕ್ಕಳ ಪಾಠಶಾಲೆ, ದೈಹಿಕ ಶಿಕ್ಷಣ ಮಹಾವಿದ್ಯಾಲಯ ಸೇರಿದಂತೆ 123 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ವಿದ್ಯಾದಾನ ಮಾಡಲಾಗುತ್ತಿದೆ
. ಕರ್ನಾಟಕದಲ್ಲಿರುವ ಏಕೈಕ ಕನ್ನಡ ಪಂಡಿತ ತರಬೇತಿ ಸಂಸ್ಥೆಯೂ ಸಿದ್ಧಗಂಗಾದ್ದೇ ಆಗಿದೆ. ಹೀಗೆ ಶಿವಕುಮಾರ ಸ್ವಾಮಿಗಳು ಪ್ರಸ್ತುತ ಸುಮಾರು 45 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ! ಕಾಯಕವೇ ಕೈಲಾಸ ಎಂದ ಬಸವಣ್ಣನೇನಾದರೂ ಇಂದು ಬದುಕಿದ್ದರೆ ಶ್ರೀ ಶಿವಕುಮಾರ ಸ್ವಾಮೀಜಿ ಮತ್ತು ಸಿದ್ಧಗಂಗಾ ಮಠದ ಬಗ್ಗೆ ಖಂಡಿತ ಹೆಮ್ಮೆ ಪಡುತ್ತಿದ್ದರು. ಮಠಕ್ಕೆ 600 ವರ್ಷಗಳ ಇತಿಹಾಸವಿದೆ.ಶ್ರೀ ಗೋಸಲ ಸಿದ್ಧೇಶ್ವರರು ಅದರ ಸ್ಥಾಪಕರು. ಸಿದ್ಧಗಂಗಾವನ್ನು ತಮ್ಮ ಕಾರ್ಯುಕ್ಷೇತ್ರವನ್ನಾಗಿಸಿಕೊಂಡು ಧರ್ಮಪ್ರಚಾರ ಮಾಡಿದವರು. ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಸಂಚರಿಸಿದ ಇವರ ಪ್ರಭಾವದಿಂದಲೇ ಕರ್ನಾಟಕದಲ್ಲಿ ಜಂಗಮ ಪರಂಪರೆ ಬೆಳೆದಿದ್ದು.
ಇದರ ನಂತರ ಅದರಲ್ಲೂ 18ನೇ ಶತಮಾನದಿಂದೀಚೆಗೆ ಶ್ರೀ ನಂಜುಂಡಸ್ವಾಮಿ, ಶ್ರೀ ರುದ್ರಸ್ವಾಮಿ, ಶ್ರೀ ಸಿದ್ಧಲಿಂಗಸ್ವಾಮಿ, ಶ್ರೀ ಉದ್ವಾನಸ್ವಾಮಿಗಳು ಬಂದುಹೋಗಿದ್ದಾರೆ. ಆದರೆ 1930ರಲ್ಲಿ ಬ್ರಹ್ಮಚರ್ಯ ದೀಕ್ಷೆ ಪಡೆದು ಮಠಾಧೀಶರಾದ ಶ್ರೀ ಶಿವಕುಮಾರ ಸ್ವಾಮೀಜಿ ವಿಶಿಷ್ಟವೆನಿಸುತ್ತಾರೆ. ಮಕ್ಕಳಲ್ಲಿ ದೇವರಿದ್ದಾನೆ ಎಂಬ ಮಾತನ್ನು ನೀವು ಒಪ್ಪುವುದಾದರೆ, ಅನ್ಯರ ಮಕ್ಕಳ ಅಭ್ಯುದಯದ ಜೀವನದ ಸರ್ವಸ್ವ ಕಾಣುತ್ತಿರುವ ಶಿವಕುಮಾರ ಸ್ವಾಮೀಜಿಗಳನ್ನು ಒಮ್ಮೆಯಾದರೂ ನೋಡಲೇಬೇಕು. ಒಂದು ಸರಕಾರ ಮಾಡಬೇಕಾದ ಕೆಲಸವನ್ನು ಸ್ವಾಮೀಜಿ ಮಾಡುತ್ತಿದ್ದಾರೆ. ಒಂದು ಸರಕಾರ ಮಾಡಬೇಕಾದ ಕೆಲಸವನ್ನು ಸ್ವಾಮೀಜಿ ಮಾಡುತ್ತಿದ್ದಾರೆ.
ಒಂದು ಸರಕಾರ ತೋರಬೇಕಾದ ಸಾಮಾಜಿಕ ಕಾಳಜಿಯನ್ನು ಸ್ವಾಮೀಜಿ ತೋರುತ್ತಿದ್ದಾರೆ. ಬೂದಿ, ವಾಚು, ಉಂಗುರ ಕೊಡುವ, ಮಾಂತ್ರಿಕ ಶಕ್ತಿಯ ಮೂಲಕ ರೋಗ ಗುಣ ಪಡಿಸುತ್ತೇನೆ ಎನ್ನುವ ಸೋಗಲಾಡಿಗಳು, ಎಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳನ್ನು ಕಟ್ಟಿ ಕಾಲೇಜೇ ಕಾಮಧೇನು ಎಂಬಂತೆ ವರ್ತಿಸುವ ಸ್ವಾಮೀಜಿಗಳೇ ನಮ್ಮ ಸುತ್ತಲೂ ಇರುವ ಇಂತಹ ಪರಿಸ್ಥಿತಿಯಲ್ಲೂ ಶ್ರೀ ಶಿವಕುಮಾರ ಸ್ವಾಮೀಜಿಯಂತಹವರು ಇರುವುದು ನಮ್ಮ ಅದೃಷ್ಟ. ದೇಹ ಕುಗ್ಗಿದೆ, ಧ್ವನಿ ತಗ್ಗಿದೆ. ಆದರೆ ಅವರ ಪ್ರೀತಿಗೆ, ಕಾಳಜಿಗೆ, ಉತ್ಸಾಹಕ್ಕೆ, ಸ್ಫೂರ್ತಿಗೆ ಮುಪ್ಪು ಬಂದಿಲ್ಲ. ಹಾಗಾಗಿಯೇ ನಿತ್ಯವೂ 10 ರಿಂದ 12 ಸಾವಿರ ಜನರಿಗೆ ಹಗಲು ರಾತ್ರಿಯೆನ್ನದೇ ಅನ್ನಸಂತರ್ಪಣೆ ನಡೆಯುತ್ತಿದೆ.
ಅಂತಹ ಶ್ರೀ ಶಿವಕುಮಾರ ಸ್ವಾಮಿಗಳು ಏಪ್ರಿಲ್ 1ರಂದು 110ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಹ್ಯಾಪಿ ಬರ್ತ್‌ಡೇ!
Published on April 01, 2017 05:32
March 31, 2017
March 29, 2017
March 28, 2017
March 27, 2017
Pratap Simha's Blog
- Pratap Simha's profile
- 58 followers
Pratap Simha isn't a Goodreads Author
(yet),
but they
do have a blog,
so here are some recent posts imported from
their feed.
