Pratap Simha's Blog, page 19
June 16, 2017
June 14, 2017
June 13, 2017
May 7, 2017
ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರಕ್ಕೆ ಚಾಲನೆ
Published on May 07, 2017 00:15
May 6, 2017
ಹದಿನೆಂಟು ವರ್ಷಗಳ ಹಿಂದೆ ಈ ಹೊತ್ತಿಗೆ ಕಾರ್ಗಿಲ್ ಯುದ್ಧ ನಡೆಯುತ್ತಿತ್ತು!
ಹದಿನೆಂಟು ವರ್ಷಗಳ ಹಿಂದೆ ಈ ಹೊತ್ತಿಗೆ ಕಾರ್ಗಿಲ್ ಯುದ್ಧ ನಡೆಯುತ್ತಿತ್ತು!
ಮನಸ್ಸೇಕೋ ಕಾರ್ಗಿಲ್‌ನತ್ತ ಎಳೆಯುತ್ತಿದೆ. ಅಷ್ಟಕ್ಕೂ 18 ವರ್ಷಗಳ ಹಿಂದೆ ಇದೇ ವೇಳೆಯಲ್ಲಿ ಕಾರ್ಗಿಲ್‌ನಲ್ಲಿ ಯುದ್ಧ ನಡೆಯುತ್ತಿತ್ತು. ಮೇ 8ರಿಂದ ಜುಲೈ 14ರವರೆಗೂ ನಡೆದ ಕಾರ್ಗಿಲ್ ಯುದ್ಧಕ್ಕೆ ಹದಿನೆಂಟು ಸಂವತ್ಸರಗಳು ತುಂಬಿವೆ. ಆದರೆ ನಮ್ಮೆಲ್ಲರ ದೃಷ್ಟಿ ಕಳೆದ ಒಂದೂವರೆ ತಿಂಗಳಿನಿಂದ ರಾಜಕೀಯದ ಮೇಲೆಯೇ ನೆಟ್ಟಿದೆ. ಮುಂದಿನ ಸರಕಾರ ವನ್ನು ಯಾರು ರಚಿಸಬಹುದು, ಯಾರು ಅಧಿಕಾರಕ್ಕೆ ಬಂದರೆ ನಮ್ಮ ಭವಿಷ್ಯಕ್ಕೆ ಒಳ್ಳೆಯದು ಎಂದು ನಾವೆಲ್ಲ ಯೋಚಿಸುತ್ತಿದ್ದೇವೆ. ಆದರೆ ಒಬ್ಬ ಸೈನಿಕನ ಪಾಲಿಗೆ ಭವಿಷ್ಯವಾಗಲಿ, ನಾಳೆಗಳಾಗಲಿ ಅನಿಶ್ಚಿತ ಅಥವಾ ಕೆಲವೊಮ್ಮೆ ಇಲ್ಲ ಎಂದೇ ಹೇಳಬಹುದು. ಹಾಗಾಗಿ ಯಾವುದೇ ಸೇನಾ ಸಮಾಧಿಯನ್ನು ನೋಡಿದರೂ ಅದರ ಮೇಲೆ Their today for your tomorrow ಎಂಬುದನ್ನು ಕಾಣಬಹುದು. ಅವತ್ತು, 1999ರಲ್ಲಿ ನಮ್ಮ ನಾಳೆಗಳಿಗಾಗಿ 533 ಸೈನಿಕರು ತಮ್ಮ ಜೀವವನ್ನೇ ಬಲಿಕೊಟ್ಟರು. ಅಂತಹವರಲ್ಲಿ ಸುಧೀರ್ ವಾಲಿಯಾ ಕೂಡ ಒಬ್ಬ.
ಅವನು ಹೋಗುತ್ತಿದ್ದ ಶಾಲೆಯಲ್ಲಿ ಸಮವಸ್ತ್ರವೇ ಇರಲಿಲ್ಲ!
ಅಷ್ಟಕ್ಕೂ ಆ ಬಡಮಕ್ಕಳಿಗೆ ಮೈಮುಚ್ಚಿಕೊಳ್ಳುವುದೇ ಕಷ್ಟ ವಾಗಿತ್ತು. ಹಾಗಿರುವಾಗ ಸಮವಸ್ತ್ರವನ್ನು ಕಡ್ಡಾಯಗೊಳಿಸುವುದಾದರೂ ಹೇಗೆ? ಇತ್ತ ಅಪ್ಪನ ಕೈಹಿಡಿದುಕೊಂಡು ಶಾಲೆಗೆ ಹೋಗುವಾಗ ಕೆಂಪು ಬಣ್ಣದ ಯೂನಿಫಾರ್ಮ್ ಧರಿಸಿ ಬೇರೊಂದು ಶಾಲೆಗೆ ತೆರಳುತ್ತಿದ್ದ ಮಕ್ಕಳು ನಿತ್ಯವೂ ಎದುರಾಗುತ್ತಿದ್ದರು. ಎದ್ದುಕಾಣುತ್ತಿದ್ದ ಆ ಯೂನಿಫಾರ್ಮ್ ಆತನನ್ನು ಬಲವಾಗಿ ಆಕರ್ಷಿಸಿತ್ತು. ತಾನೂ ಅದೇ ಶಾಲೆಗೆ ಹೋಗಬೇಕೆನ್ನುವ ಆಸೆ ಮೊಳಕೆಯೊಡೆದಿತ್ತು. ಅದು ಮಿಲಿಟರಿ ಶಾಲೆಯಾಗಿತ್ತು. ಅಮ್ಮನ ಬಳಿ ಆಸೆಯನ್ನೂ ತೋಡಿಕೊಂಡ. ನಾನೇಕೆ ಅದೇ ಶಾಲೆಗೆ ಹೋಗಬಾರದು ಅಂತ ಅಪ್ಪನನ್ನು ಪ್ರಶ್ನಿಸಿಯೂ ಬಿಟ್ಟ. ‘ನನ್ನ ಮೇಲಧಿಕಾರಿಗಳ ಮಕ್ಕಳಷ್ಟೇ ಆ ಶಾಲೆಗೆ ಹೋಗುತ್ತಾರೆ. ಒಂದು ವೇಳೆ ಪರಿಶ್ರಮ ಪಟ್ಟು ಓದಿದರೆ ನೀನೂ ಹೋಗಬಹುದು’ ಎಂದು ಅಪ್ಪ ರುಲಿಯಾ ರಾಮ್ ಮಗನನ್ನು ಸಮಾಧಾನಪಡಿಸಿದ್ದ.
ಅವನೇ ಮೇಜರ್ ಸುಧೀರ್ ವಾಲಿಯಾ.
ಅದೊಂದು ಅಮೋಘ ಕಥನ. ರುಲಿಯಾ ರಾಮ್ ಹಿಮಾಚಲ ಪ್ರದೇಶದ ಕಾಂಗ್ರಾ ಕಣಿವೆಯ ನಿವಾಸಿ. ಆತನೊಬ್ಬ Hill dweller, ಪರ್ವತವಾಸಿ. ಆತನ ಕುಟುಂಬ 150 ವರ್ಷಗಳಿಂದ ಆ ಪರ್ವತ ಶ್ರೇಣಿಗಳಲ್ಲೇ ನೆಲೆಸಿತ್ತು. 1947ರಲ್ಲಿ ಸ್ವಾತಂತ್ರ್ಯ ಬಂದಾಗ ಚೀನಾ ಗಡಿಯ ಸಮೀಪದಲ್ಲಿರುವ ಆ ಪರ್ವತ ಶ್ರೇಣಿಯಲ್ಲಿದ್ದ ಭಾರತೀಯ ಸೇನಾಪಡೆ ಕಷ್ಟಪಟ್ಟು ದುಡಿಯುತ್ತಿದ್ದ ರುಲಿಯಾ ರಾಮ್ಗೆ ಸಿಪಾಯಿ ಕೆಲಸ ಕೊಟ್ಟು ಚಾಕರಿ ಮಾಡಿಕೊಂಡಿರಲು ನೇಮಿಸಿಕೊಂಡಿತು. ಆದರೆ ಸಿಪಾಯಿ ಕೆಲಸ ಆ ಬಡ ಕುಟುಂಬಕ್ಕೆ ಗೌರವಯುತವಾಗಿ ಅನ್ನ ದುಡಿಯುವ ಮಾರ್ಗವಾಯಿತು. ಸತತ 28 ವರ್ಷಗಳ ಕಾಲ ಚೀನಾ, ಬಾಂಗ್ಲಾದೇಶ, ಪಾಕಿಸ್ತಾನದ ಗಡಿಗಳಲ್ಲಿ ತನ್ನ ಮೇಲಧಿಕಾರಿಗಳು ಹಾಗೂ ತಾಯ್ನಾಡಿನ ಸೇವೆ ಮಾಡಿದ ರುಲಿಯಾ ರಾಮ್, 1976ರಲ್ಲಿ ಸುಬೇದಾರನಾಗಿ ನಿವೃತ್ತಿಹೊಂದಿದ.
ರುಲಿಯಾ ರಾಮ್‌ನ ಮೊದಲ ಮಗನೇ ಮೇಜರ್ ಸುರ್ಧೀ ವಾಲಿಯಾ. ಆದರೆ ಸ್ಥಳೀಯ ಸರಕಾರಿ ಶಾಲೆಯಲ್ಲಿ ನೆಲದ ಮೇಲೆ ಕುಳಿತು ಅಕ್ಷರ ಕಲಿತರೂ ಸುಧೀರ್ ಅಪ್ಪನಂತೆ ಚಾಕರಿ ಮಾಡಲಿಲ್ಲ. ಐದನೇ ಕ್ಲಾಸಿಗೆ ಮಿಲಿಟರಿ ಶಾಲೆ ಸೇರುವ ಸಲುವಾಗಿ ಪ್ರವೇಶ ಪರೀಕ್ಷೆಗೆಂದು ಸುಧೀರ್ ಪಂಜಾಬ್‌ನ ಜಲಂಧರ್‌ಗೆ ತೆರಳಿದ್ದ. ಪರೀಕ್ಷೆಯಲ್ಲೂ ಪಾಸಾದ. ಕೊನೆಗೆ ಆತನ ಕುಟುಂಬ ನೆಲೆಸಿದ್ದ ಬನೂರಿ ಗ್ರಾಮದಿಂದ 40 ಕಿ.ಮೀ. ದೂರದಲ್ಲಿದ್ದ ಸುಜಾನ್ಪುರ್ ತಿರಾ ಎಂಬಲ್ಲಿದ್ದ ಮಿಲಿಟರಿ ಶಾಲೆಯಲ್ಲಿ ಪ್ರವೇಶ ಸಿಕ್ಕಿತು. ಭಾರತದ 6ನೇ ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ ಆ ಶಾಲೆಯನ್ನು ಉದ್ಘಾಟಿಸಿದ್ದರು. ಸೇನಾಪಡೆಯಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಇಚ್ಛಿಸುವ ಮಕ್ಕಳಿಗೆ ಮಿಲಿಟರಿ ತರಬೇತಿ ನೀಡುವ ಶಾಲೆ ಅದಾಗಿತ್ತು. ಐದನೇ ತರಗತಿ ಪೂರೈಸಿದ ಸುಧೀರ್ ಎನ್ಡಿಎ(ನ್ಯಾಷನಲ್ ಡಿಫ್ಸ್ ಅಕಾಡೆಮಿ) ಪರೀಕ್ಷೆಯಲ್ಲೂ ಪಾಸಾದ. ಆದರೆ ಸಂದರ್ಶನ ಬೆಂಗಳೂರಿನಲ್ಲಿತ್ತು.
ಎಲ್ಲಿಯ ಹಿಮಾಚಲ, ಎಲ್ಲಿಯ ಬೆಂಗಳೂರು? ಆದರೂ ಸಂದರ್ಶನದಲ್ಲಿ ಪಾಲ್ಗೊಳ್ಳಲೇಬೇಕಿತ್ತು. ಇಂತಹ ದೀರ್ಘ ಪ್ರಯಾಣಕ್ಕಾಗಿ ಅಪ್ಪನ ಬಳಿ ಎರಡು ಸಾವಿರ ರುಪಾಯಿ ಕೇಳಿದ. ಬೆಂಗಳೂರಿನಲ್ಲಿ ನೆಂಟರು-ಸ್ನೇಹಿತರು ಯಾರೂ ಇರಲಿಲ್ಲ. ಚಿಂತಿತನಾದ ಅಪ್ಪ 3 ಸಾವಿರ ರು. ಕೊಟ್ಟು ಮಗನನ್ನು ಹಾರೈಸಿ ಕಳುಹಿಸಿದ. ಬೆಂಗಳೂರಿನ ರೈಲು ನಿಲ್ದಾಣಕ್ಕೆ ಬಂದಿಳಿದ 14 ವರ್ಷದ ಸುಧೀರ್, ಅಲ್ಲಿಯೇ ಇದ್ದ ಶೌಚಾಲಯದಲ್ಲಿ ಸಿದ್ಧಗೊಂಡು ನೇರವಾಗಿ ಸಂದರ್ಶನಕ್ಕೆ ತೆರಳಿದ. ನಾಲ್ಕು ದಿನಗಳನಂತರ ಟೆಲಿಗ್ರಾಂ ಬಂತು.
‘ನಾನು ಪಾಸಾಗಿದ್ದೇನೆ- ಸುಧೀರ್.’
ಖಡಕ್ವಾಸ್ಲಾದಲ್ಲಿನ ನ್ಯಾಷನಲ್ ಡಿಫ್ಸ್ ಅಕಾಡೆಮಿ ಸೇರಿದ್ದಾಯಿತು. ರಜೆಗೆಂದು ಮನೆಗೆ ಬಂದಾಗಲೆಲ್ಲ ರುಲಿಯಾ ರಾಮ್, ತನ್ನ ಮಗನನ್ನು ಇಂಗ್ಲಿಷ್ ಟ್ಯೂಷನ್‌ಗೆ ಕರೆದೊಯ್ಯುತ್ತಿದ್ದ. ಆದರೆ ರುಲಿಯಾ ರಾಮ್‌ನ ಹಣಕಾಸು ಪರಿಸ್ಥಿತಿಯ ಬಗ್ಗೆ ಅರಿತಿದ್ದ ಮಾಸ್ತರರು ಪುಕ್ಕಟೆಯಾಗಿ ಇಂಗ್ಲಿಷ್ ಕಲಿಸಲಾರಂಭಿಸಿದರು. ಸುಧೀರ್ ಸರಾಗವಾಗಿ ಮಾತನಾಡುವುದನ್ನು ಕಲಿತ. ಜತೆಗೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಆತ ತೋರಿದ ಶೈಕ್ಷಣಿಕ ಸಾಧನೆ ಡೆಹ್ರಾಡೂನ್‌ನಲ್ಲಿದ್ದ ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಪ್ರವೇಶ ದೊರಕಿಸಿಕೊಟ್ಟಿತು. ಸುಧೀರ್ ಹಿಂದಿರುಗಿ ನೋಡಲಿಲ್ಲ. ಅಂದು ಘಟಿಕೋತ್ಸವ ಸಮಾರಂಭದಲ್ಲಿ ಪಥಸಂಚಲನದಲ್ಲಿ ಸಾಗುತ್ತಿರುವ ಮಗನನ್ನು ಕಂಡು ತಾನೇ ಪಾಸಾದವನಂತೆ ಬೀಗಿದ್ದ ರುಲಿಯಾ ರಾಮ್.
1988ರಲ್ಲಿ ಸೇನಾಧಿಕಾರಿಯಾಗಿ 3ನೇ ಜಾಟ್ ರೆಜಿಮೆಂಟ್ ಸೇರಿದ ಸುಧೀರ್‌ನ ಮುಂದಿನ ಪಯಣ India’s Vietnam ಎಂದೇ ಕರೆಯಲಾಗುತ್ತಿದ್ದ ಶ್ರೀಲಂಕಾ ಆಗಿತ್ತು. ಆಗಿನ ಭಾರತದ ಪ್ರಧಾನಿ ರಾಜೀವ್ ಗಾಂಧಿ 70 ಸಾವಿರ ಸೈನಿಕರ ಭಾರತೀಯ ಶಾಂತಿಪಾಲನಾ ಪಡೆಯನ್ನು ಶ್ರೀಲಂಕಾಕ್ಕೆ ಕಳುಹಿಸಿದರು. ಅವರಲ್ಲಿ ಸುಧೀರ್ ಕೂಡ ಒಬ್ಬನಾಗಿದ್ದ. 1157 ಸೈನಿಕರನ್ನು ಕಳೆದುಕೊಂಡ ಭಾರತೀಯ ಶಾಂತಿಪಾಲನಾ ಪಡೆಯನ್ನು 1990ರಲ್ಲಿ ಹಿಂದಕ್ಕೆ ಕರೆಸಿಕೊಳ್ಳಲಾಯಿತು. ಆದರೆ jungle warfareನಲ್ಲಿ ತನ್ನ ಕೌಶಲ್ಯ ತೋರಿದ್ದ ಸುಧೀರ್‌ನನ್ನು ಅಸಾಂಪ್ರದಾಯಿಕ ಯುದ್ಧದಲ್ಲಿ ಪರಿಣತಿ ಸಾಧಿಸಿದವರಿಗೆಂದೇ ಇರುವ ‘9 ಪ್ಯಾರಾಚೂಟ್ ಕಮಾಂಡೋ’ ಪಡೆಗೆ ವರ್ಗಾಯಿಸಲಾಯಿತು. 6,300 ಮೀಟರ್ ಎತ್ತರದಲ್ಲಿರುವ ಜಗತ್ತಿನ ಅತ್ಯುನ್ನತ ರಣರಂಗವಾದ ಸಿಯಾಚಿನ್‌ನಲ್ಲಿ ಸುಧೀರ್ ಒಂದು ವರ್ಷ ಸೇವೆ ಸಲ್ಲಿಸಿದ. ಅದೇ ವೇಳೆಗೆ, ಭಾರತದ ಅತ್ಯಂತ ಪರಿಣತ ಕಮಾಂಡೋಗಳಲ್ಲಿ ಒಬ್ಬನನ್ನು ಆಯ್ಕೆ ಮಾಡಿ ವಿಶೇಷ ತರಬೇತಿಗಾಗಿ ಅಮೆರಿಕಕ್ಕೆ ಕಳುಹಿಸುವಂತಹ ಪ್ರಸಂಗ ಬಂತು. ಆಯ್ಕೆಯಾಗಿದ್ದು ಮತ್ತಾರೂ ಅಲ್ಲ ಸುಧೀರ್. ಆದರೆ 6 ತಿಂಗಳ ಕೋರ್ಸ್ ಮುಗಿದಾಗ ತರಬೇತಿಗಾಗಿ ಬಂದಿದ್ದ 80 ದೇಶಗಳ ಪರಿಣತ ಕಮಾಂಡರ್‌ಗಳಲ್ಲಿ ಸುರ್ಧೀ ಮೊದಲಿಗನಾಗಿದ್ದ!
ಯಾವುದೇ ತಂದೆತಾಯಂದಿರಾದರೂ ಹೆಮ್ಮೆ ಪಡುವ ವಿಚಾರವದು.‘ಮಗ ದೂರದ ಅಮೆರಿಕದಲ್ಲಿ ತರಬೇತಿ ಪಡೆಯುತ್ತಿದ್ದರೆ, ನಾನು ದಿನಗೂಲಿ ಹುಡುಕಿಕೊಂಡು 15 ಕಿ.ಮೀ. ನಡೆದು ಕೊಂಡು ಹೋಗಬೇಕಿತ್ತು. ಆದರೆ ಹಿಮಾಚಲದ ಹಳ್ಳಿಯಲ್ಲಿ ಹುಟ್ಟಿದ ನನ್ನ ಮಗ ಅಮೆರಿಕದ ಪೆಂಟಗನ್‌ನಲ್ಲಿ ಸೇನಾಧಿಕಾರಿಗಳನ್ನುದ್ದೇಶಿಸಿ ಮಾತನಾಡುವಷ್ಟು ಎತ್ತರಕ್ಕೆ ಏರಿದ್ದಾನೆ’ ಎಂದು ಮನೆಯ ವರಾಂಡದಲ್ಲಿ ಕುಳಿತು ನೆನಪುಗಳನ್ನು ಮೆಲುಕು ಹಾಕುತ್ತಿರುತ್ತಿದ್ದ ರುಲಿಯಾ ರಾಮ್.
ಈಗ ಉಳಿದಿರುವುದೂ ಅಷ್ಟೇ- ನೆನಪುಗಳು ಮಾತ್ರ, ಮಗನಲ್ಲ!
ಅಮೆರಿಕದಿಂದ ಹಿಂದಿರುಗಿದ ಸುಧೀರ್‌ನನ್ನು ಸೇನಾ ಜನರಲ್ ಅವರ ಸಹಾಯಕನಾಗಿ ತಾತ್ಕಾಲಿಕ ವರ್ಗಾವಣೆ ಮಾಡಲಾಯಿತು. ಅದಾಗಲೇ ಜಮ್ಮು-ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ತನ್ನ ಯುದ್ಧಕೌಶಲವನ್ನು ಪ್ರದರ್ಶಿಸಿದ್ದ ಸುಧೀರ್ ಎರಡು ಬಾರಿ ಶೌರ್ಯ ಪ್ರಶಸ್ತಿಗೆ ಭಾಜನನಾಗಿದ್ದ. ಇಷ್ಟೆಲ್ಲಾ ಸಾಧನೆ, ಅನುಭವದ ಹೊರತಾಗಿಯೂ ಕಾರ್ಗಿಲ್ ಯುದ್ಧದ ವೇಳೆ ಸುಧೀರ್ ರಾಜಧಾನಿ ದಿಲ್ಲಿಯಲ್ಲಿದ್ದ ಕೇಂದ್ರ ಕಚೇರಿಯಲ್ಲಿರಬೇಕಾಗಿತ್ತು. ಆದರೆ ಮನಸ್ಸು ಒಪ್ಪಲಿಲ್ಲ. ಯುದ್ಧರಂಗಕ್ಕೆ ತೆರಳಲು ಅವಕಾಶ ನೀಡಿ ಎಂದು ಆಗಿನ ಸೇನಾ ಜನರಲ್ ವೇದ್ಪ್ರಕಾಶ್ ಮಲಿಕ್ ಅವರಿಗೆ ಮೊರೆಯಿಟ್ಟ. ಮನವೊಲಿಸುವಲ್ಲಿ ಯಶಸ್ವಿಯೂ ಆದ. ಅದು ಕಾರ್ಗಿಲ್ ವಿಜಯ ದಿನಕ್ಕೆ ಮುನ್ನಾದಿನವಾದ 1999, ಜುಲೈ 25. 5,200 ಮೀಟರ್ ಎತ್ತರದಲ್ಲಿರುವ ಜಮ್ಮು-ಕಾಶ್ಮೀರದ ಝುಲು ಪರ್ವತಶ್ರೇಣಿಯಲ್ಲಿ ಇನ್ನೂ ಭಯೋತ್ಪಾದಕರು ಅಡಗಿರುವುದು ತಿಳಿದುಬಂತು. ಸುಧೀರ್ ನೇತೃತ್ವದ ಕಮಾಂಡೋ ಪಡೆ ಕಾರ್ಯಾಚರಣೆ ಆರಂಭಿಸಿತು. ಕೊನೆಗೊಂಡಾಗ 13 ಭಯೋತ್ಪಾದಕರು ನೆಲಕ್ಕುರುಳಿದ್ದರು. ಝುಲು ಪರ್ವತಶ್ರೇಣಿ ಮತ್ತೆ ಭಾರತದ ವಶವಾಗಿತ್ತು. ಜತೆಗೆ ಸುಧೀರ್ ಹೆಸರು ದೇಶದ ಅತ್ಯುತ್ತಮ ಹೋರಾಟಗಾರರ ಪಟ್ಟಿ ಸೇರಿತ್ತು. ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ವೀರಚಕ್ರ ಒಲಿದುಬಂದಿತ್ತು. ಅದರೊಂದಿಗೆ ಕಾರ್ಗಿಲ್ ಯುದ್ಧವೂ ಕೊನೆಗೊಂಡಿತು.
ಆದರೆ ಹೋರಾಟ ಮುಗಿಯಲಿಲ್ಲ. ಸುಧೀರ್ ನೇತೃತ್ವದ 9 ಪ್ಯಾರಾಚೂಟ್ ಕಮಾಂಡೋ ಪಡೆಗೆ ಕಾಶ್ಮೀರದಲ್ಲಿನ ಭಯೋತ್ಪಾದನೆ ನಿಗ್ರಹ ಜವಾಬ್ದಾರಿಯನ್ನು ವಹಿಸಲಾಯಿತು. ‘ನಾನು ಅಪಘಾತದಲ್ಲೂ ಸಾಯೊಲ್ಲ, ರೋಗಕ್ಕೂ ತುತ್ತಾಗಲ್ಲ. ವೀರ ಮರಣವನ್ನಪ್ಪುತ್ತೇನೆ’ ಅಂತಾ ಸುಧೀರ್ ಆಗಾಗ್ಗೆ ಅಮ್ಮನಿಗೆ ಹೇಳುತ್ತಿದ್ದ. ಕಾರ್ಗಿಲ್ ಯುದ್ಧ ಮುಗಿದು ತಿಂಗಳು ಕಳೆದಿತ್ತು. ಅವತ್ತು 1999, ಆಗಸ್ಟ್ 29. ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯ ದಟ್ಟವಾದ ಹಫ್ರುದಾ ಅರಣ್ಯದಲ್ಲಿ ಭಯೋತ್ಪಾದಕರು ಅಡಗಿರುವ ಸುಳಿವು ಬಂತು. ಮೇಜರ್ ಸುಧೀರ್ ವಾಲಿಯಾ ನೇತೃತ್ವದ ತುಕಡಿಗೆ ಆದೇಶವೂ ಬಂದಿತ್ತು. ರಾತ್ರಿಯಿಡೀ ಅರಣ್ಯವನ್ನು ತಡಕಾಡಿದರೂ ಭಯೋತ್ಪಾದಕರು ಗೋಚರಿಸಲಿಲ್ಲ. ಬೆಳಗಾಯಿತು. ಹೊಳೆಯೊಂದು ಅಡ್ಡವಾಯಿತು. ಹತ್ತಿರಕ್ಕೆ ಬಂದರೆ ಟೂಥ್ಪ್ಟ್ ನೊರೆ ಕಾಣಿಸಿತು. ಭಯೋತ್ಪಾದಕರು ಅಲ್ಲಿಯೇ ಎಲ್ಲೋ ಅಡಗಿರುವುದು ಖಚಿತವಾಯಿತು.
ಅಷ್ಟರಲ್ಲಿ ಗುಂಡಿನ ಹಾರಾಟವೂ ಆರಂಭವಾಯಿತು. 20 ಭಯೋತ್ಪಾದಕರಲ್ಲಿ 9 ಜನರನ್ನು ಸುಧೀರ್ ಏಕಾಂಗಿಯಾಗಿ ಕೊಂದುಹಾಕಿದ. ಈ ಮಧ್ಯೆ ಶತ್ರುವಿನ ಗುಂಡೊಂದು ಸುಧೀರ್‌ನ ಹೊಟ್ಟೆಯನ್ನೇ ಹಾದುಹೋಯಿತು. ಆದರೂ ತನ್ನನ್ನು ಬೇರೆಡೆ ಸಾಗಿಸಲು ಒಪ್ಪಿಗೆ ನೀಡಲಿಲ್ಲ. ಬದಲಿಗೆ ಕುಸಿದ ಸ್ಥಳದಲ್ಲೇ ಸಹೋದ್ಯೋಗಿಗಳಿಗೆ ನಿರ್ದೇಶನ ನೀಡಲಾರಂಭಿಸಿದ. 35 ನಿಮಿಷಗಳ ಹೋರಾಟದ ನಂತರ ಶತ್ರುಗಳ ಸದ್ದಡಗಿತ್ತು. ಕೂಡಲೇ ಸುಧೀರ್‌ನನ್ನು ಮಿಲಿಟರಿ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ಮಾರ್ಗ ಮಧ್ಯದಲ್ಲೇ ಮಗ ದೂರವಾಗಿದ್ದ. ಆದರೆ ತನ್ನ ಮಗನ ಅಂತ್ಯ ಆತ ಬಯಸಿದಂತೆಯೇ ಆಗುತ್ತದೆ ಎಂದು ಅಮ್ಮ ರಾಜೇಶ್ವರಿ ದೇವಿ ಬಹುಶಃ ಎಣಿಸಿರಲಿಲ್ಲ.
ಇತ್ತ 2000ರ ಗಣರಾಜ್ಯೋತ್ಸವದ ದಿನ ಶಾಂತಿ ವೇಳೆಯಲ್ಲಿ ನೀಡುವ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ತನ್ನ ಮಗನ ಪರವಾಗಿ ಸ್ವೀಕರಿಸಿದ ರುಲಿಯಾ ರಾಮ್‌ನ ಹೃದಯ ಉಕ್ಕಿಬಂದಿತ್ತು. ‘ನಾನು ಹೇಳಿಕೊಟ್ಟಿದ್ದು ಮೊದಲ ಹೆಜ್ಜೆ ಇಡುವುದನ್ನಷ್ಟೆ. ಉಳಿದದ್ದೆಲ್ಲ ಅವನದ್ದೇ ಪರಿಶ್ರಮ’ ಅಂತ ಕಂಬನಿ ಮಿಡಿಯುತ್ತಿದ್ದ. ಈ ದೇಶದ ಮಾನ ಕಾಪಾಡಿರುವುದು, ಸಮಗ್ರತೆ ಉಳಿದಿರುವುದು, ನಮ್ಮನ್ನು ಸುರಕ್ಷಿತವಾಗಿಟ್ಟಿರುವುದು ರಾಜೇಶ್ವರಿ ದೇವಿ ಮತ್ತು ರುಲಿಯಾ ರಾಮ್ ಅವರಂತಹ ಅಪ್ಪ-ಅಮ್ಮಂದಿರು ಮತ್ತು ಅವರ ಮಕ್ಕಳ ಬಲಿದಾನವೇ ಅಲ್ಲವೆ?
ಈ ಲೇಖನ ಹಿಂದೊಮ್ಮೆ ಇದೇ ಅಂಕಣದಲ್ಲಿ ಪ್ರಕಟವಾಗಿತ್ತು. ಮತ್ತೊಮ್ಮೆ ಓದಿ, ಬಲಿದಾನವನ್ನು ನೆನಪಿಸಿಕೊಳ್ಳಿ. ಅಷ್ಟಕ್ಕೂ ಭಯೋತ್ಪಾದಕರ ಸದ್ದಡಗಿಸುತ್ತಾ ನೆಲಕ್ಕುರುಳಿದ 533 ವೀರಯೋಧರು, ಕೈ, ಕಾಲು, ಕಣ್ಣು ಕಳೆದುಕೊಂಡ 1363 ಸೈನಿಕರನ್ನು ನೆನಪಿಸಿಕೊಳ್ಳದೇ ಇರಲಾದೀತೆ?
Published on May 06, 2017 00:07
May 5, 2017
Pratap Simha's Blog
- Pratap Simha's profile
- 58 followers
Pratap Simha isn't a Goodreads Author
(yet),
but they
do have a blog,
so here are some recent posts imported from
their feed.
