Pratap Simha's Blog, page 17

July 30, 2017

July 29, 2017

ಉದ್ಘಾಟನೆಯಾಯಿತು ಕಲಾಂ ಸ್ಮಾರಕ, ಮರೆಯಲಾಗದು ಕಡೆತನಕ!

ಉದ್ಘಾಟನೆಯಾಯಿತು ಕಲಾಂ ಸ್ಮಾರಕ, ಮರೆಯಲಾಗದು ಕಡೆತನಕ!


ಇದುವರೆಗೂ ಭಾರತ 14 ರಾಷ್ಟ್ರಪತಿಗಳನ್ನು ಕಂಡಿದೆ. ಆದರೆ ಇಂದಿಗೂ ಜನರ ಮನಸ್ಸಲ್ಲಿ ಉಳಿದವರು ಸರ್ವೇಪಲ್ಲಿ ರಾಧಾಕೃಷ್ಣನ್, ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಮಾತ್ರ. ಒಂದೇ ಮಾತಿನಲ್ಲಿ ಹೇಳುವುದಾದರೆ ಇವತ್ತು ನಮ್ಮ ಸ್ಯಾಂಡಲ್‌ವುಡ್ ಚಿತ್ರರಂಗ ಎಷ್ಟೇ ಮುಂದುವರಿದಿರಲಿ, ಕನ್ನಡ ಸಿನಿಮಾ ಎಂದರೆ ರಾಜ್‌ಕುಮಾರ್ ಎಂದು ಹೇಗೆ ಹೇಳುತ್ತಾರೋ ಹಾಗೇ ರಾಷ್ಟ್ರಪತಿ ಎಂದರೆ ಅಬ್ದುಲ್ ಕಲಾಂ ಎನ್ನುತ್ತಾರೆ. ಕಲಾಂ ಬದುಕಿರಲಿ, ಬಿಡಲಿ ಅದೆಲ್ಲ ಲೆಕ್ಕಕ್ಕೇ ಇಲ್ಲ, ರಾಷ್ಟ್ರಪತಿ ಎಂದರೆ ಅಬ್ದುಲ್ ಕಲಾಮೇ ಎನ್ನುವಷ್ಟರ ಮಟ್ಟಿಗೆ ಅವರು ನಮ್ಮನ್ನೆಲ್ಲ ಆವರಿಸಿಕೊಂಡಿದ್ದರು.


ಮೊನ್ನೆ ಜುಲೈ 27ಕ್ಕೆ ನಾವು ಕಲಾಂ ಅಜ್ಜರನ್ನು ಕಳೆದುಕೊಂಡು ಎರಡು ವರ್ಷಗಳು ಕಳೆಯಿತು. ಆದರೂ ಜನರು ಇವರನ್ನು ಯಾಕಷ್ಟು ನೆನಪು ಮಾಡಿಕೊಳ್ಳುತ್ತಾರೆ? ಅವರ ಹುಟ್ಟು ಹಬ್ಬಕ್ಕೆ ದೇಶಾದ್ಯಂತ ಆಶ್ರಮದಲ್ಲಿ , ಶಾಲೆಗಳಲ್ಲಿ ಸ್ವೀಟ್ ಹಂಚಿ ಸಂಭ್ರಮಿಸುವವರೆಷ್ಟೋ, ಪುಣ್ಯ ತಿಥಿಯಂದು ಶ್ರದ್ಧಾಭಕ್ತಿಗಳಿಂದ ನಮಿಸುವವರೆಷ್ಟೋ. ಇವಕ್ಕೆಲ್ಲ ಕಾರಣ ಅವರು ರಾಷ್ಟ್ರಪತಿಯೆಂಬ ಸಾಂವಿಧಾನಿಕ ಹುದ್ದೆ ಅಲಂಕರಿಸಿದ್ದರೂ ಅತ್ಯಂತ ಕ್ರಿಯಾಶೀಲರಾಗಿದ್ದಿದ್ದರಿಂದ. ವಿಜ್ಞಾನಿಯಾಗಿ ಅಣು ತಂತ್ರಜ್ಞಾನ, ಅಗ್ನಿ ಕ್ಷಿಪಣಿಗೆ ಅವರ ಕೊಡುಗೆ ಅಪಾರವಾಗಿದ್ದಿದ್ದರಿಂದ. ಎಲ್ಲದಕ್ಕಿಂತ ಹೆಚ್ಚಾಗಿ ಭವಿಷ್ಯದ ಭಾರತದಲ್ಲಿ ಮಕ್ಕಳ ಪಾತ್ರವೇನು ಎಂದು ಸ್ಪಷ್ಟವಾಗಿ ಅವರಿಗೆ ಅರ್ಥವಾಗುವ ಹಾಗೆ ಬಿಡಿಸಿ ಹೇಳುತ್ತಿದ್ದಿದ್ದರಿಂದ.


ಮೊನ್ನೆ ಗುರುವಾರದಂದು ಪ್ರಧಾನಿ ನರೇಂದ್ರ ಮೋದಿಯವರು ಚೆನ್ನೈನಲ್ಲಿ ಡಿಆರ್‌ಡಿಒ ಅವರು ನಿರ್ಮಿಸಿದ ಕಲಾಂ ಸ್ಮಾರಕವನ್ನು ಉದ್ಘಾಟಿಸಿದರು. ಇದರ ಜತೆಗೆ ನರೇಂದ್ರ ಮೋದಿಯವರು ಕಲಾಂ ಕುಟುಂಬದ ಜತೆಗೆ ಆರಾಮಾಗಿ ಮಾತನಾಡುತ್ತಾ, ಕುಟುಂಬದವರು ಪ್ರಧಾನಿ ಜತೆ ಮಾತಾಡುತ್ತಿದ್ದೇವೆಂಬುದೇ ತಿಳಿಯದಷ್ಟು ಹತ್ತಿರವಾಗಿಬಿಟ್ಟರು. ಅತ್ಯಂತ ವೇಗದಲ್ಲಿ ನಿರ್ಮಾಣಗೊಂಡ ಕಲಾಂರ ಆ ಸ್ಮಾರಕವನ್ನು ನೋಡಿದಾಗ ಅನಿಸಿದ್ದು, ಕಲಾಂರಲ್ಲಿ ಜನರು ಅಂಥದ್ದೇನು ಕಂಡುಕೊಂಡಿದ್ದಾರೆ.


ಯಾಕೆ ಅವರನ್ನು ಇಷ್ಟು ಆರಾಧಿಸುತ್ತಾರೆ ಎಂದು. ಉತ್ತರ ಅಂಗೈಯಲ್ಲೇ ಇತ್ತು. ನಮ್ಮ ದೇಶ ಕಂಡ ಅನೇಕ ರಾಷ್ಟ್ರಪತಿಗಳ ಪೈಕಿ ಕೆಲವರು ಬುದ್ಧಿಜೀವಿಗಳಿದ್ದರು, ದಾರ್ಶನಿಕರೂ ಇದ್ದರು. ಅಬ್ದುಲ್ ಕಲಾಂ ಕೃತಿಯಲ್ಲಷ್ಟೇ ಅಲ್ಲದೇ ಮಾತಿನಲ್ಲೂ ಜನರನ್ನು ಸೆಳೆಯುತ್ತಿದ್ದರು. ಇವರು ನಮ್ಮ ರಾಷ್ಟ್ರಪತಿ ಎಂಬ ಭಾವ ಅವರ ಮಾತು ಕೇಳುತ್ತಿದ್ದ ಪ್ರತಿಯೊಬ್ಬ ಭಾರತೀಯನಲ್ಲೂ ಹುಟ್ಟುತ್ತಿತ್ತು. 2020ರಲ್ಲಿ ನಮ್ಮ ದೇಶ ಹೇಗಿರಬೇಕು, ನಮ್ಮ ದೇಶದ ಶ್ರೀಮಂತಿಕೆಯೇನು ಎಂದು ಹೇಳುತ್ತಿದ್ದರೆ ಎದೆಯುಬ್ಬುತ್ತಿತ್ತು. ಅದು ಎಂಥ ನಿರ್ಭಾವುಕನಲ್ಲೂ ದೇಶ ಪ್ರೇಮದ ಹಸಿರನ್ನು ಚಿಗುರಿಸಬಲ್ಲ ಶಕ್ತಿ ಅವರ ಮಾತು. ಅವರು ಹೇಗೆ ಮಾತನಾಡುತ್ತಿದ್ದರು ಎಂಬುದನ್ನು ನೀವೇ ಕೇಳಿ:


***

ನಮ್ಮ ಮಾಧ್ಯಮಗಳೇಕೆ ಈ ಪರಿ ನಕಾರಾತ್ಮಕವಾಗಿ ಬಿಟ್ಟಿವೆ? ಭಾರತೀಯರಾದ ನಾವು ನಮ್ಮ ಶಕ್ತಿ ಸಾಮರ್ಥ್ಯ ಮತ್ತು ಸಾಧನೆಗೇ ಮನ್ನಣೆ ಕೊಡಲು ಏಕೆ ಹಿಂದೇಟು ಹಾಕುತ್ತೇವೆ? ನಮ್ಮದು ಎಂಥ ಮಹಾನ್ ದೇಶ, ಅತ್ಯದ್ಭುತ ಸಾಹಸಗಾಥೆಗಳು ನಮ್ಮಲ್ಲಿವೆ. ಆದರೂ ಅವುಗಳನ್ನು ಗುರುತಿಸಲು, ಒಪ್ಪಿಕೊಳ್ಳಲು ನಾವೇಕೆ ಸಿದ್ಧರಿಲ್ಲ? ಹಾಲಿನ ಉತ್ಪಾದನೆಯಲ್ಲಿ ನಾವು ಜಗತ್ತಿನಲ್ಲಿಯೇ ಮುಂದು. ರಿಮೋಟ್ ಸೆನ್ಸಿಂಗ್ ಉಪಗ್ರಹಗಳ ಚಾರದಲ್ಲೂ ನಾವು ಜಗತ್ತಿನಲ್ಲಿಯೇ ನಂಬರ್ 1. ಗೋಧಿ ಉತ್ಪಾದನೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದ್ದೇವೆ. ಅಕ್ಕಿ ಉತ್ಪಾದನೆಯಲ್ಲೂ ಜಗತ್ತಿನ ಎರಡನೇ ಅತಿ ದೊಡ್ಡ ರಾಷ್ಟ್ರ. ಡಾ. ಎಚ್. ಸುದರ್ಶನ್ ಅವರನ್ನು ನೋಡಿ, ಬುಡಕಟ್ಟು ಜನಾಂಗದವರ ಗ್ರಾಮವನ್ನು ಒಂದು ಸ್ವಾವಲಂಬಿ ನಾಡಾಗಿಸಿದ್ದಾರೆ. ಇಂಥ ಕೋಟ್ಯಂತರ ಯಶೋಗಾಥೆಗಳಿವೆ. ಆದರೂ ನಮ್ಮ ಮಾಧ್ಯಮಗಳು ಮಾತ್ರ ಕೆಟ್ಟ ಸುದ್ದಿ, ಕೆಟ್ಟ ವೈಫಲ್ಯ, ಅವಘಡಗಳ ಬಗ್ಗೆ ಆಸಕ್ತಿ, ಗೀಳು ಬೆಳೆಸಿಕೊಂಡಿವೆ.


ನಾನೊಮ್ಮೆ ಇಸ್ರೇಲ್ ರಾಜಧಾನಿ ಟೆಲ್ ಅವಿವ್‌ಗೆ ಹೋಗಿದ್ದೆ. ಅದೇ ದಿನ ಇಸ್ರೇಲ್‌ನಾದ್ಯಂತ ಹಲವಾರು ಬಾಂಬ್ ದಾಳಿಗಳು, ದುರ್ಘಟನೆಗಳು ಸಂಭಸಿದ್ದವು. ಸಾಕಷ್ಟು ಜನರ ಸಾವು-ನೋವುಗಳಾಗಿದ್ದವು. ಹಮಾಸ್ ಸಂಘಟನೆಯ ಭಯೋತ್ಪಾದಕರು ದಾಳಿಗೈದಿದ್ದರು. ಆಶ್ಚರ್ಯವೆಂದರೆ ಮರುದಿನ ಇಸ್ರೇಲಿ ಪತ್ರಿಕೆಯನ್ನು ಕೈಗೆತ್ತಿಕೊಂಡರೆ ಮೊದಲ ಪುಟದಲ್ಲಿ ಐದು ವರ್ಷಗಳಲ್ಲಿ ಮರುಭೂಮಿಯೊಂದನ್ನು ಹೂದೋಟವಾಗಿಸಿದ್ದ ಯಹೂದಿಯೊಬ್ಬನ ಫೋಟೋ ಇತ್ತು. ಬೆಳಗ್ಗೆ ಎದ್ದ ಕೂಡಲೇ ಎಂಥವರಿಗೂ ಪ್ರೇರಣೆ ಕೊಡುವ ಫೋಟೋ ಅದಾಗಿತ್ತು. ಬಾಂಬ್ ಸ್ಫೋಟದ, ಸತ್ತವರ ಚಿತ್ರ ಮತ್ತು ಸುದ್ದಿಗಳು ಒಳಪುಟಗಳಲ್ಲಿ ಇತರೆ ವರದಿಗಳ ಮಧ್ಯೆ ಸೇರಿಹೋಗಿದ್ದವು. ನಮ್ಮ ಭಾರತದಲ್ಲಿ ಸಾವು, ಸಂಕಷ್ಟ, ರೋಗರುಜಿನ, ಆಕ್ರಮಣ, ದಾಳಿಗಳ ಸುದ್ದಿಗಳನ್ನೇ ಮುಖಪುಟದಲ್ಲಿ ಕಾಣುತ್ತೇವೆ. ನಾವೇಕೆ ಇಷ್ಟೊಂದು ಋಣಾತ್ಮಕ?


ಮತ್ತೊಂದು ಪ್ರಶ್ನೆ: ನಾವು ಒಂದು ರಾಷ್ಟ್ರವಾಗಿ ಏಕೆ ವಿದೇಶಿ ವಸ್ತುಗಳ ಬಗ್ಗೆ ಮೋಹ ಬೆಳೆಸಿಕೊಂಡಿದ್ದೇವೆ? ನಮಗೆ ವಿದೇಶಿ ಟಿ, ವಿದೇಶಿ ಶರ್ಟ್‌ಗಳೇ ಬೇಕು ಏಕೆ ವಿದೇಶಿ ತಂತ್ರಜ್ಞಾನವೇ ಆಗಬೇಕು? ಎಲ್ಲವೂ ಆಮದು ವಸ್ತುಗಳೇ ಆಗಿರಬೇಕೆಂಬ ಗೀಳೇಕೆ ಸ್ವಾವಲಂಬನೆಯಿಂದ ಸ್ವಾಭಿಮಾನ ಬರುತ್ತದೆ ಎಂಬುದು ನಮಗೆ ಅರ್ಥವೇ ಆಗುವುದಿಲ್ಲವೆ? ನಾನು ಹೈದರಾಬಾದ್‌ನಲ್ಲಿ ಉಪನ್ಯಾಸವೊಂದನ್ನು ಕೊಡುತ್ತಿದ್ದಾಗ, 14 ವರ್ಷದ ಬಾಲಕಿಯೊಬ್ಬಳು ಬಂದು ನನ್ನ ಹಸ್ತಾಕ್ಷರ ಕೇಳಿದಳು. ನಿನ್ನ ಜೀವನದ ಗುರಿಯೇನು ಎಂದು ನಾನವಳನ್ನು ಕೇಳಿದಾಗ, ‘ನಾನು ಅಭಿವೃದ್ಧಿ ಹೊಂದಿದ ಭಾರತದಲ್ಲಿ ಬದುಕಲು ಬಯಸುತ್ತೇನೆ’ಎಂದಳು. ಅವಳಿಗಾಗಿ ನಾನು ಮತ್ತು ನೀವು ಬಲಿಷ್ಠ ಭಾರತವನ್ನು ಕಟ್ಟಬೇಕು. ಭಾರತ ಹಿಂದುಳಿದ ರಾಷ್ಟ್ರವಲ್ಲ, ಅದೂ ಅತ್ಯಂತ ಮುಂದುವರಿದ ರಾಷ್ಟ್ರ ಎಂದು ನೀವು ಘೋಷಿಸಬೇಕು. ನಿಮ್ಮ ಬಳಿ 10 ನಿಮಿಷ ಕಾಲಾವಕಾಶವಿದೆಯೇ? ಈ ದೇಶಕ್ಕಾಗಿ ನಿಮ್ಮಲ್ಲಿ 10 ನಿಮಿಷ ಸಮಯವಿದೆಯೇ? ಹಾಗಿದ್ದರೆ ಮಾತ್ರ ಕೇಳಿ, ಇಲ್ಲವಾದರೆ ನಿಮ್ಮಿಷ್ಟ?


ನೀವು ಹೇಳುತ್ತೀರಿ, ನಮ್ಮದು ಅದಕ್ಷ ಸರಕಾರ. ನೀವು ಹೇಳುತ್ತೀರಿ, ನಮ್ಮ ಕಾನೂನುಗಳು ಓಬೀರಾಯನ ಕಾಲದವು. ನೀವು ಹೇಳುತ್ತೀರಿ, ನಮ್ಮ ನಗರಪಾಲಿಕೆಯವರು ಕಸವನ್ನೇ ವಿಲೇವಾರಿ ಮಾಡುವುದಿಲ್ಲ. ನೀವು ಹೇಳುತ್ತೀರಿ, ನಿಮ್ಮ ಮನೆಯ ಫೋನ್ ಹಾಳಾಗಿದೆ, ಮಿಂಚಂಚೆಗಳು ತಲುಪುವುದಿಲ್ಲ. ನೀವು ಹೇಳುತ್ತೀರಿ, ನಮ್ಮ ದೇಶ ನಾಯಿಪಾಲಾಗಿ, ಕೊಚ್ಚೆ ಗುಂಡಿಯಾಗಿದೆ. ನೀವು ಹೇಳುತ್ತೀರಿ, ಹೇಳುತ್ತಲೇ ಇರುತ್ತೀರಿ. ಆದರೆ ಅದನ್ನು ಸರಿಪಡಿಸಲು ನೀವೇನು ಮಾಡುತ್ತಿದ್ದೀರಿ?


ಇಂಥ ಭಾಷಣ ಕೇಳಿ 10 ವರ್ಷಗಳೇ ಕಳೆದವು ಅಲ್ವಾ?

2007, ಜುಲೈ 24ರಂದು ಎಪಿಜೆ ಅಬ್ದುಲ್ ಕಲಾಂ ರಾಷ್ಟ್ರಪತಿ ಭವನವನ್ನು ತೊರೆದ ನಂತರ ಒಂದು ಪ್ರೇರಕ ಶಕ್ತಿಯೇ ಹೊರಟು ಹೋದಂತಾಯಿತು. ಹೊಸ ಸರಕಾರಗಳು ರಚನೆಯಾಗುವಾಗ, ಹಾಲಿ ಸರಕಾರ ಸಂಕಷ್ಟಕ್ಕೆ ಸಿಕ್ಕಾಗ, ಬಿದ್ದು ಹೋಗುವಾಗ ಮಾತ್ರ ಸುದ್ದಿಯಾಗುತ್ತಿದ್ದ, ಉಳಿದಂತೆ ಭೂತ ಬಂಗಲೆಯಂತಿರುತ್ತಿದ್ದ ರಾಷ್ಟ್ರಪತಿ ಭವನವನ್ನೂ ಚಟುವಟಿಕೆಯ ಕೇಂದ್ರವಾಗಿಸಿದ, ದೇಶವಾಸಿಗಳು ತಮ್ಮ ನೋವನ್ನು ಆಲಿಸುವ ದೈವವೊಂದಿದೆ ಎಂಬಂತೆ ರಾಷ್ಟ್ರಪತಿ ಭವನದತ್ತ ಮುಖ ಮಾಡುವಂತೆ ಮಾಡಿದ ವ್ಯಕ್ತಿ ಕಲಾಂ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಎಸ್. ರಾಧಾಕೃಷ್ಣನ್ ಹೊರತುಪಡಿಸಿ ರಾಷ್ಟ್ರಪತಿಯೊಬ್ಬರ ಹೆಸರು ರಾಷ್ಟ್ರವಾಸಿಗಳ ನಾಲಗೆ ತುದಿಯಲ್ಲಿ ಹರಿದಾಡಿದ್ದರೆ ಅದು ಕಲಾಂ ಬಿಟ್ಟರೆ ಬೇರಾರದ್ದು ಹೇಳಿ ನೋಡೋಣ? ಈ ದೇಶದ ಉದ್ದಗಲವನ್ನು ಕಲಾಂ ಕ್ರಮಿಸಿದಷ್ಟು ಯಾರು ತಿರುಗಿದ್ದಾರೆ? ಪದ್ಮಶ್ರೀ, ಪದ್ಮಭೂಷಣ, ಪದ್ಮಭೂಷಣ ಮುಂತಾದ ಪದ್ಮಾ ಅವಾರ್ಡ್‌ಗಳ ಪ್ರದಾನ ಸಮಾರಂಭ, ಅರ್ಜುನ್, ದ್ರೋಣಾಚಾರ್ಯ, ರಾಜೀವ್ ಖೇಲ್ ರತ್ನ ಮುಂತಾದ ಪ್ರಶಸ್ತಿಗಳನ್ನು ಕೊಡ ಮಾಡುವಾಗ, ಗಣರಾಜ್ಯೋತ್ಸವದ ದಿನ, ಸಂಸತ್ ಅಧಿವೇಶನದ ಆರಂಭ ದಿನ ಮಾತ್ರ ಈ ನಮ್ಮ ಸೋಕಾಲ್ಡ್‌ ರಾಷ್ಟ್ರಪತಿಗಳು ದೇಶವಾಸಿಗಳಿಗೆ ತಮ್ಮ ಮುಖದರ್ಶನ ಮಾಡಿಸುತ್ತಾರೆ.


ಆದರೆ ಅಬ್ದುಲ್ ಕಲಾಂ ಇಂಥ ರೂಢಿಗತ ಪರಂಪರೆಗೆ ತದ್ವಿರುದ್ಧವಾಗಿದ್ದರು. ರಾಷ್ಟ್ರಪತಿ ಭವನದಿಂದ ಹೊರ ಬಂದ ನಂತರವೂ ಜೀವನದ ಕಟ್ಟ ಕಡೇ ಕ್ಷಣದವರೆಗೂ ಅತ್ಯಂತ ಕ್ರಿಯಾಶೀಲರಾಗಿದ್ದರು. ಮಕ್ಕಳಿಗೆ ಪಾಠ ಹೇಳುವುದೆಂದರೆ ದೇಶ ವಾಸಿಗಳಿಗೆ ಪ್ರೇರಣೆ ಕೊಡುವಂಥ ಭಾಷಣ ಮಾಡುವುದೆಂದರೆ ಅವರಿಗೆ ಅಚ್ಚು ಮೆಚ್ಚು, ಆ ಕಾರಣಕ್ಕಾಗಿಯೇ ಅವರು ಅಗಲಿ ಎರಡು ವರ್ಷಗಳಾದರೂ ನಮ್ಮ ಸ್ಮತಿ ಪಟಲದಿಂದ ಮರೆಯಾಗಿಲ್ಲ. ಒಬ್ಬರು ಒಳ್ಳೆಯ ರಾಷ್ಟ್ರಪತಿ ಹೇಗಿರಬೇಕೆಂದು ಎಂದು ಯೋಚಿಸಿದರೆ, ಕಣ್ಣ ಮುಂದೆ ಬರುವುದು ಕಲಾಂ ಮೇಲ್ಪಂಕ್ತಿಯೇ. ಮೊನ್ನೆ ಗುರುವಾರ ತಮಿಳುನಾಡಿನಲ್ಲಿ ಅವರ ಸ್ಮಾರಕ ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿಯವರು ಹೋದಾಗ ಮತ್ತೆ ಕಲಾಂರನ್ನು ನೆನಪಿಸಿಕೊಳ್ಳಬೇಕೆನಿಸಿತು.


 •  0 comments  •  flag
Share on Twitter
Published on July 29, 2017 06:29

July 27, 2017

July 22, 2017

ಬರುತ್ತಿದೆ ಜುಲೈ ಇಪ್ಪತ್ತಾರು, ಮತ್ತೆ ನೆನಪಾಗುತ್ತಿದ್ದಾರೆ ಅವರು!

ಬರುತ್ತಿದೆ ಜುಲೈ ಇಪ್ಪತ್ತಾರು, ಮತ್ತೆ ನೆನಪಾಗುತ್ತಿದ್ದಾರೆ ಅವರು!


ಕ್ಯಾಪ್ಟನ್ ವಿಕ್ರಂ ಬಾತ್ರಾ

ಕ್ಯಾಪ್ಟನ್ ಹನೀಫುದ್ದೀನ್

ಲೆಫ್ಟಿನೆಂಟ್ ಸೌರಭ್ ಕಾಲಿಯಾ

ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ

ಮೇಜರ್ ಮರಿಯಪ್ಪನ್ ಸರವಣನ್

ಗ್ರನೇಡಿಯರ್ ಯೋಗೇಂದ್ರ ಸಿಂಗ್ ಯಾದವ್

ಲೆಫ್ಟಿನೆಂಟ್ ಕೀಸಿಂಗ್ ಕ್ಲಿಫೋರ್ಡ್ ನೊಂಗ್ರುಮ್

ರೈಫಲ್ಮನ್ ಮೊಹಮದ್ ಅಸ್ಲಾಂ


ಈ ಒಂದೊಂದು ಹೆಸರುಗಳೂ ನಮ್ಮ ಸಮಾಜದಲ್ಲಿ ಜನಪದ ಕಥೆಗಳಂಥ ಸ್ಥಾನ ಪಡೆದುಕೊಂಡಿವೆ, ಪ್ರೇರಣೆ ಕೊಡುತ್ತವೆ, ಅತ್ಯುನ್ನತ ತ್ಯಾಗವೇನನ್ನುವುದನ್ನು ಸೂಚಿಸುತ್ತವೆ, ವೀರಗಾಥೆಗಳನ್ನು ಹೇಳುತ್ತವೆ. ಪ್ರತಿವರ್ಷ ಮೇ-ಜೂನ್-ಜುಲೈಗಳು ಬಂತೆಂದರೆ ಮನಸ್ಸು ಕಾರ್ಗಿಲ್ ಬಗ್ಗೆ ಯೋಚಿಸಲಾರಂಭಿಸುತ್ತದೆ, ನಮಗಾಗಿ ಮಡಿದ 527 ವೀರಯೋಧರನ್ನು ನೆನಪಿಸಿಕೊಂಡು ಧನ್ಯತೆಯಿಂದ ತಲೆಬಾಗುತ್ತದೆ. ಇಷ್ಟಕ್ಕೂ ಇವರು ಮಾಡಿದ ತ್ಯಾಗ, ತೋರಿದ ಧೈರ್ಯ ಸಾಮಾನ್ಯವೇನು?


ಎಕ್ ಪಲ್ ಮೇ ಹೈ ಸಚ್ ಸಾರೀ ಝಿಂದಗೀ ಕಾ

ಇಸ್ ಪಲ್ ಮೇ ಜೀ ಲೋ ಯಾರೋ

ಯಹ ಕಲ್ ಹೈ ಕಿಸ್ನೆ ದೇಖಾ

ಇಪ್ಪತ್ನಾಲ್ಕು ವರ್ಷದ ಕ್ಯಾಪ್ಟನ್ ಹನೀಫುದ್ದೀನ್ ಬದುಕಿಗೂ ಆತನ ಕಿರಿಯ ಸಹೋದರ ಸಮೀರ್ ಬರೆದಿದ್ದ ಈ ಮೇಲಿನ ಹಾಡಿಗೂ ತಾಳ, ಮೇಳ, ಅರ್ಥ ಹಾಗೂ ಬದುಕಿನ ಅನಿಶ್ಚತತೆ ಎಲ್ಲವೂ ಒಂಥರಾ ಹೊಂದಾಣಿಕೆಯಾಗಿದ್ದವು. ದುರದೃಷ್ಟವಶಾತ್, ಅಪ್ಪನನ್ನು ಕಳೆದುಕೊಂಡಾಗ ಹನೀಫುದ್ದೀನ್‌ಗೆ ಕೇವಲ 8 ವರ್ಷ. ಜೀವಕ್ಕೆ ಆಸರೆಯಾಗುವ, ಬದುಕಿಗೆ ದಿಕ್ಕು ದೆಸೆ ತೋರುವ ತಂದೆಯನ್ನು ಕಳೆದುಕೊಂಡ ಕ್ಷಣದಲ್ಲೂ ಹನೀಫುದ್ದೀನ್ ಮನದ ಗುರಿಯನ್ನು ಬಿಡಲಿಲ್ಲ.


ಆತನಿಗೆ ‘ಸಮವಸ್ತ್ರ’ದ(ಯೂನಿಫಾರ್ಮ್) ಮೇಲೆ ಅದೇನೋ ಅಪರಿಮಿತ ಗೌರವ, ಆಸೆ. ಯೂನಿಫಾರ್ಮ್ ಎಂಬುದು ಕೇವಲ ಒಂದು ವಸ್ತ್ರವಲ್ಲ, ಅದರಲ್ಲಿ ಗುರುತರ ಜವಾಬ್ದಾರಿ, ಸೇವಾ ನಿರೀಕ್ಷೆ ಇದೆ ಎಂದು ಆತ ಭಾವಿಸಿದ್ದ. ಹಾಗಾಗಿ ಇಂಡಿಯನ್ ಮಿಲಿಟರಿ ಅಕಾಡೆಮಿಯತ್ತ ದೃಷ್ಟಿ ನೆಟ್ಟಿದ್ದ. ‘ಗಂಡನನ್ನು ಕಳೆದುಕೊಂಡ ಮೇಲೆ ನಾನು ವೃತ್ತಿ ಅರಸಬೇಕಾಯಿತು. ಮನೆಯಿಂದ ಹೊರಗೇ ಹೆಚ್ಚು ಕಾಲ ಕಳೆಯುತ್ತಿದ್ದೆ. ಆದರೆ ನನ್ನ ಮಗ ಮಾತ್ರ ಜವಾಬ್ದಾರಿಯುತನಾಗಿದ್ದ, ಮಹತ್ವಾಕಾಂಕ್ಷಿಯಾಗಿದ್ದ ಹಾಗೂ ಸ್ವಂತ ಪರಿಶ್ರಮದಿಂದ ಇಂಡಿಯನ್ ಮಿಲಿಟರಿ ಅಕಾಡೆಮಿ ಸೇರಿದ ಎನ್ನುತ್ತಾರೆ ತಾಯಿ ಹೇಮಾ ಅಝೀಝ್.


ಭದ್ರತಾ ಪಡೆಗಳಲ್ಲಿ ಸೇವೆ ಸಲ್ಲಿಸಿದ ಯಾರ ಪರಿಚಯವಾಗಲಿ, ಅಂತಹ ಕೌಟುಂಬಿಕ ಹಿನ್ನೆಲೆಯಾಗಲಿ ಯಾವುದೂ ಆತನಿಗಿರಲಿಲ್ಲ. ಆದರೂ ಮಿಲಿಟರಿ ಅಕಾಡೆಮಿಗೆ ಸೇರುವಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲ, ಒಬ್ಬ ಅನುಭವಿ ಸೈನಿಕನಂಥ ಪರಿಣತಿಯನ್ನೂ ಪಡೆದುಕೊಂಡ. ಹನೀಫುದ್ದೀನ್ ಭಾರತೀಯ ಸೇನೆಯನ್ನು ಸೇರಿದ್ದು 1997, ಜೂನ್ 7ರಂದು. ಎರಡು ವರ್ಷ ತುಂಬುವ ಮೊದಲೇ ಕಾರ್ಗಿಲ್ ಯುದ್ಧ ಆರಂಭವಾಯಿತು. ಅದಕ್ಕೂ ಮೊದಲು ಆತನನ್ನು ನರನಾಡಿಗಳು ಮಡುಗಟ್ಟುವಂಥ ಚಳಿಯ ಸಿಯಾಚಿನ್‌ನಲ್ಲಿ ನಿಯೋಜಿಸಲಾಗಿತ್ತು.


ಹನೀಫುದ್ದೀನ್‌ಗೆ ಹಾಡಿನ ಹುಚ್ಚು. ಅವನು ಬೆಟ್ಟದ ಮೇಲಿರಲಿ, ನಮ್ಮ ಜತೆಗಿರಲಿ ಮ್ಯೂಸಿಕ್ ಸಿಸ್ಟಮ್ ಮಾತ್ರ ಬಗಲಲ್ಲಿರುತ್ತಿತ್ತು ಎನ್ನುತ್ತಾರೆ ಆತನ ಹಿರಿಯಣ್ಣ ನಫೀಸ್. ಹನೀಫುದ್ದೀನ್ ತಾಯಿ ಹೇಮಾ ಅಝೀಝ್ ಶಾಸ್ತ್ರೀಯ ಸಂಗೀತ ಕಲಿತವರು. ಮಕ್ಕಳಿಗೂ ಸಂಗೀತ ರಕ್ತಗತವಾಗಿಯೇ ಬಂದಿತ್ತು. ಸಹೋದ್ಯೋಗಿ ಸೈನಿಕರಿಗೆ ಹನೀಫುದ್ದೀನ್‌ನದ್ದೇ ಮನರಂಜನೆ. ಕಿರಿಯ ಸಹೋದರ ಬರೆದಿದ್ದ ‘ಎಕ್ ಪಲ್ ಮೇ ಹೈ ಸಚ್ ಸಾರೀ ಝಿಂದಗೀ ಕಾ’ ಹಾಡನ್ನು ಇಂಪಾಗಿ ಹಾಡಿ ರಂಜಿಸುತ್ತಿದ್ದ.


ಹೀಗಿರುವಾಗ?

ಒಂದು ದಿನ ಹನೀಫುದ್ದೀನ್‌ನಿಂದ ಮನೆಗೆ ದೂರವಾಣಿ ಕರೆ ಬಂತು. ‘ಬಂದೂಕಿನ ನಳಿಕೆಯಿಂದ ಗುಂಡುಗಳು ಯಾವ ಕ್ಷಣದಲ್ಲೂ, ಯಾವ ದಿಕ್ಕಿನಿಂದಲೂ ಸೀಳಿ ಬರಬಹುದು. ಯಾವುದಕ್ಕೂ ಫೋನನ್ನು ಎಂಗೇಜ್‌ನಲ್ಲಿಡಬೇಡ ಅಮ್ಮಾ, ನಾನು ಸಿಯಾಚಿನ್‌ನಿಂದ ಕೆಳಕ್ಕೆ ಬರುತ್ತಿದ್ದೇನೆ’ ಎಂದ. ಅಷ್ಟರಲ್ಲಿ ಸಿಯಾಚಿನ್ ಬಿಟ್ಟು ಲದ್ದಾಕ್‌ನ ನುಬ್ರಾ ಕಣಿವೆಯಲ್ಲಿ ಬರುವ ತುರ್ತುಕ್ ಅನ್ನು ಶತ್ರುಗಳಿಂದ ವಶಪಡಿಸಿಕೊಳ್ಳಬೇಕೆಂದು ಅವರ ಸೇನಾ ತುಕಡಿಗೆ ಆದೇಶ ಬಂದಿತ್ತು. ಹೀಗೆ ಹಿಮಾಚ್ಛಾದಿತ ಕಣಿವೆಗಳನ್ನು ದಾಟಿ ಬಂದು ಶತ್ರುಗಳನ್ನು ಮಟ್ಟಹಾಕಲು ಮುಂದಾದರು. ಎಂತಹ ವೈಪರಿತ್ಯವೆಂದರೆ ಬೆಟ್ಟದ ತುದಿಯಲ್ಲಿ ಕುಳಿತಿರುವ ಶತ್ರುಗಳಿಗೆ ಸ್ವಾಭಾವಿಕ ಮೇಲುಗೈ ಜತೆಗೆ ಸಂಖ್ಯಾ ಬಲದಲ್ಲೂ ಮೇಲುಗೈ ದೊರೆತಿತ್ತು. ಆದರೂ ತನ್ನ ಸೇನಾ ತುಕಡಿಯನ್ನು ಮುನ್ನಡೆಸಿದ ಹನೀಫುದ್ದೀನ್.


ಹೊಸ ದಿಲ್ಲಿಯ ಶಿವಾಜಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ‘ಮಿಸ್ಟರ್ ಶಿವಾಜಿ’ ಪುರಸ್ಕಾರಕ್ಕೆ ಹನೀಫುದ್ದೀನ್ ಭಾಜನನಾಗಿದ್ದ. ಕಾರ್ಗಿಲ್ ರಣರಂಗದಲ್ಲೂ ಅದೇ ರೀತಿ ಹೋರಾಡಿದ. ಸಂಖ್ಯೆಯಲ್ಲಿ, ಮದ್ದುಗುಂಡಿನಲ್ಲಿ ಶತ್ರುಗಳಿಂತ ತೀರಾ ಕಡಿಮೆ ಇದ್ದರೂ ಶೌರ್ಯಕ್ಕೆ ಮಾತ್ರ ಕೊರತೆಯಾಗಿರಲಿಲ್ಲ. ಕೊನೆಗೆ ಚಿರಸ್ಥಾಯಿಯಾಗಿ ಉಳಿದಿದ್ದೂ ಅವರು ತೋರಿದ ಶೌರ್ಯವೇ ಹೊರತು, ಜೀವವಲ್ಲ! ಕಾರ್ಗಿಲ್ ರಣರಂಗದಲ್ಲೇ ಕ್ಯಾಪ್ಟನ್ ಹನೀಫುದ್ದೀನ್ ಮಡಿದಿದ್ದರು. ಅದೆಂಥ ಭಯಾನಕ ಪರ್ವತಶ್ರೇಣಿಯಾಗಿತ್ತೆಂದರೆ ಯುದ್ಧ ಮುಗಿಯುವವರೆಗೂ ಅವರ ಪಾರ್ಥಿವ ಶರೀರವನ್ನು ವಾಪಸ್ ತರಲು ಸಾಧ್ಯವಾಗಿರಲಿಲ್ಲ!


‘ಒಬ್ಬ ತಂದೆಯಾದವನ ಜೀವನದಲ್ಲಿ ಬರುವ ಅತ್ಯಂತ ದುಃಖಕರ ದಿನವೆಂದರೆ ಮಗನ ಚಟ್ಟಕ್ಕೆ ಹೆಗಲು ಕೊಡಬೇಕಾದ ಕ್ಷಣ’ ಎಂದಿದ್ದರು ದಿವಂಗತ ಪ್ರಮೋದ್ ಮಹಾಜನ್. ಹನೀಫುದ್ದೀನ್ ಹೆಣವಾಗಿ ತ್ರಿವರ್ಣ ಧ್ವಜದಲ್ಲಿ ಸುತ್ತಿಕೊಂಡು ಬಂದಾಗ ‘ಅಗತ್ಯ ಬಂದರೆ ತಾಯ್ನಾಡಿಗಾಗಿ ಅತ್ಯುನ್ನತ ತ್ಯಾಗವನ್ನೂ ಮಾಡುತ್ತೇನೆಂದು ನನ್ನ ಮಗನಿಂದ ಪ್ರಮಾಣ ಮಾಡಿಸಿಕೊಂಡಿದ್ದೆ. ನನ್ನ ಮಗ ಸಮವಸ್ತ್ರ ಧರಿಸಿ ಜೀವವನ್ನೇ ಕೊಟ್ಟು ದೇಶದ ಋಣ ತೀರಿಸಿದ್ದಾನೆ’ ಎಂಬ ಬಗ್ಗೆ ನನಗೆ ಹೆಮ್ಮೆಯಾಗುತ್ತದೆ ಎಂದಿದ್ದರು ಅಮ್ಮ ಹೇಮಾ ಅಝೀಝ್. ಇಂತಹ ತ್ಯಾಗಕ್ಕಾಗಿ ಸರಕಾರ ವೀರ ಚಕ್ರವನ್ನು ನೀಡಿತು; ಹನೀಫುದ್ದೀನ್ ದೇಶಪ್ರೇಮ ಸಾರುವ ವೀರಗಾಥೆಯೊಂದನ್ನು ಬಿಟ್ಟು ಹೋದರು. ಅಂದು ಕಾರ್ಗಿಲ್‌ನಲ್ಲಿ ಮಡಿದ 527 ಸೈನಿಕರ ಬದುಕೂ ಒಂದೊಂದು ಕಥೆ ಹೇಳುತ್ತವೆ!


If death strikes before I prove my blood, I promise (swear), I will kill death’ ಒಂದು ವೇಳೆ ನಾನು ನನ್ನ ತಾಕತ್ತನ್ನು ತೋರುವ ಮೊದಲೇ ಸಾವೇನಾದರೂ ಎದುರಾದರೆ ಮೊದಲು ಸಾವನ್ನೇ ಕೊಲ್ಲುತ್ತೇನೆ ಎನ್ನುತ್ತಿದ್ದ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ! 1975, ಜೂನ್ 25ರಂದು ಜನಿಸಿದ ಪಾಂಡೆ ಕಲಿತಿದ್ದು ಉತ್ತರ ಪ್ರದೇಶದ ಲಕ್ನೋ ಸೈನಿಕ ಶಾಲೆಯಲ್ಲಿ. ಆತ ಶಾಲೆಯಲ್ಲಿ ಪಡೆಯದ ಸರ್ಟಿಫಿಕೆಟ್‌ಗಳೇ ಇರಲಿಲ್ಲ. ಅತ್ಯಂತ ಕ್ಲಿಷ್ಟಕರವಾದ ನ್ಯಾಷನಲ್ ಡಿಫೆನ್ಸ್‌ ಅಕಾಡೆಮಿ ಪರೀಕ್ಷೆಯನ್ನು ಮೊದಲ ಯತ್ನದಲ್ಲೇ ಪಾಸು ಮಾಡಿದ.


ಆರ್ಮಿಯನ್ನು ಸೇರಿದ ಮೇಲೆ ಗೂರ್ಖಾ ರೈಫಲ್ಸ್‌‌ನಲ್ಲಿದ್ದ ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆಯ ತುಕಡಿಗೆ ಬಟಾಲಿಕ್ ಸೆಕ್ಟರ್‌ನಿಂದ ಭಯೋತ್ಪಾದಕರನ್ನು ಬಡಿದೋಡಿಸುವ ಜವಾಬ್ದಾರಿಯನ್ನು ನೀಡಲಾಯಿತು. ಅದು 1999, ಜೂನ್ 11. ಜುಬರ್ ಶಿಖರವನ್ನು ಮರುವಶಪಡಿಸಿಕೊಳ್ಳುವ ಕಾರ್ಯಾಚರಣೆಯೊಂದಿಗೆ ತನ್ನ ತುಕಡಿಯನ್ನು ಮುನ್ನೆಡೆಸಲಾರಂಭಿಸಿದರು. ಅದು ಸೇನಾ ಕಾರ್ಯಾಚರಣೆ ದೃಷ್ಟಿಯಿಂದ ಅತ್ಯಂತ ಮಹತ್ವದ ತುದಿಯಾಗಿತ್ತು. ಆತನ ಜೀವನದ ಅತ್ಯಂತ ಪ್ರಮುಖ ಕ್ಷಣವೆಂದರೆ 1999, ಜುಲೈ 3ರ ಬೆಳಗಿನ ಜಾವ.


ಖಲುಬಾರ್ ಶಿಖರದ ಮರುವಶವದು. ಮಧ್ಯರಾತ್ರಿಯ ವೇಳೆಗೆ ಅವರ ಬೆಟಾಲಿಯನ್ ಅಂತಿಮ ಗುರಿಯತ್ತ ಮುಂದಡಿಯಿಡುತ್ತಿತ್ತು. ಆದರೆ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತಿದ್ದ ಶತ್ರುಗಳು ತಡೆದು ನಿಲ್ಲಿಸಿದರು. ಆದರೆ ರಾತ್ರಿ ಕಳೆದು ಬೆಳಕು ಹರಿಯುವಷ್ಟರಲ್ಲಿ ವಿಘ್ನವನ್ನು ದೂರ ಮಾಡಲೇಬೇಕಿತ್ತು. ಬೆಳಕಿನಲ್ಲಿ ಶತ್ರುಗಳ ಕಣ್ಣಿಗೆ ಬಿದ್ದು ಉಳಿಗಾಲವಿಲ್ಲದಂತಾಗುವ ಅಪಾಯವಿತ್ತು. ಲೆಫ್ಟಿನೆಂಟ್ ಪಾಂಡೆಯವರೇ ಮುಂದೆ ಮುಂದೆ ಸಾಗತೊಡಗಿದರು. ಒಂದು ಕಿರಿದಾದ ಭಾಗದ ಮೂಲಕ ಶತ್ರುವಿನ ಸಮೀಪಕ್ಕೆ ತಮ್ಮ ತುಕಡಿಯನ್ನು ಕರೆತಂದರು. ಆದರೆ ಗುರಿ ಇನ್ನೂ ದೂರವಿತ್ತು. ಎಚ್ಚೆತ್ತ ಶತ್ರುಗಳು ಗುಂಡಿನ ಸುರಿಮಳೆಗೈಯ್ಯಲಾರಂಭಿಸಿದರು. ಆದರೆ ಪಾಂಡೆ ಅಧೀರರಾಗಲಿಲ್ಲ. ಅಷ್ಟರಲ್ಲಿ ಹೆಗಲು, ಕಾಲಿಗೆ ತೀವ್ರ ಗಾಯಗಳಾಗಿದ್ದವು.


ಆದರೂ ಮುನ್ನುಗ್ಗುವುದನ್ನು ನಿಲ್ಲಿಸಲಿಲ್ಲ. ಇಬ್ಬರು ಶತ್ರುಗಳನ್ನು ಹೊಡೆದುರುಳಿಸಿ ಮೊದಲ ಬಂಕರ್ ವಶಪಡಿಸಿಕೊಂಡರು. ತಮ್ಮ ನಾಯಕನ ಶೌರ್ಯ, ಛಲವನ್ನು ಕಂಡು ಉತ್ತೇಜಿತರಾದ ಸೈನಿಕರೂ ವೀರಾವೇಶ ತೋರಲಾಂಭಿಸಿದರು. ಕೊನೆಯ ಬಂಕರ್ ಕೂಡ ವಶವಾಯಿತು, ಶತ್ರುಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಯಿತು. ಆ ವೇಳೆಗಾಗಲೇ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ ಕಡೆಯ ಬಂಕರ್ ಬಳಿ ಕುಸಿದರು, ಮತ್ತೆ ಮೇಲೇಳಲಿಲ್ಲ!


ನ್ಯಾಷನಲ್ ಡಿಫೆನ್ಸ್‌ ಅಕಾಡೆಮಿ ಪರೀಕ್ಷೆಯನ್ನು ಪಾಸು ಮಾಡಿದ ಸಂದರ್ಭದಲ್ಲಿ ನಡೆದ ಸಂದರ್ಶನದ ವೇಳೆ, ‘ನೀನು ಏಕಾಗಿ ಸೇನೆಯನ್ನು ಸೇರಲು ಬಯಸುತ್ತೀಯಾ’ ಎಂದು ಕೇಳಿದಾಗ ‘ಪರಮವೀರ ಚಕ್ರ ಪಡೆಯಲು’ ಎಂದಿದ್ದರು ಪಾಂಡೆ! ಈ ದೇಶ ಯುದ್ಧ ಕಾಲದಲ್ಲಿ ನೀಡುವ ಅತ್ಯುಚ್ಛ ಶೌರ್ಯ ಪ್ರಶಸ್ತಿಯಾದ ‘ಪರಮವೀರ ಚಕ್ರ’ವನ್ನು ಅಪ್ಪ ಗೋಪಿಚಂದ್ ಪಾಂಡೆ ಮಗನ ಪರವಾಗಿ ಪಡೆದುಕೊಂಡರು. ಅಣಕವೆಂದರೆ “Some goals are so worthy, it’s glorious even to fail’ ಎನ್ನುತ್ತಿದ್ದ ಪಾಂಡೆ ಹೋರಾಟದಲ್ಲಿ ಗೆದ್ದರೂ ಪರಮವೀರ ಚಕ್ರವನ್ನು ಪಡೆದಿದ್ದು ಮಾತ್ರ ಮರಣೋತ್ತರವಾಗಿ!


ಕ್ಯಾಪ್ಟನ್ ಹನೀಫುದ್ದೀನ್, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಪ್ರಾಣತೆತ್ತಾಗ ಇಬ್ಬರಿಗೂ 24 ವರ್ಷ. ಸಾಮಾನ್ಯರಿಗೆ ಸರಿಯಾಗಿ ಬುದ್ಧಿ, ಜವಾಬ್ದಾರಿ ಬೆಳೆಯುವ ವಯಸ್ಸಿಗೆ ಇವರಿಬ್ಬರೂ ದೇಶಕ್ಕಾಗಿ ಅತ್ಯುನ್ನತ ತ್ಯಾಗವನ್ನೇ ಮಾಡಿದ್ದರು. ಬಂದೇ ಬಿಟ್ಟಿತು ಇಪ್ಪತ್ತಾರು, ಹಾಗಾಗಿ ಮತ್ತೆ ನೆನಪಾಗುತ್ತಿದ್ದಾರೆ ಅವರು.

 •  0 comments  •  flag
Share on Twitter
Published on July 22, 2017 06:24

July 19, 2017

July 15, 2017

ಹುಲ್ಲುಹಾಸಿನ ಅಂಕಣ ಹಸುಗಳಿಗೆ ಎನ್ನುತ್ತಿದ್ದವರ ಕನಸ್ಸೂ ವಿಂಬಲ್ಡನ್ ಗೆಲ್ಲಬೇಕು ಎಂದೇ ಆಗಿರುತ್ತಿತ್ತು!

ಹುಲ್ಲುಹಾಸಿನ ಅಂಕಣ ಹಸುಗಳಿಗೆ ಎನ್ನುತ್ತಿದ್ದವರ ಕನಸ್ಸೂ ವಿಂಬಲ್ಡನ್ ಗೆಲ್ಲಬೇಕು ಎಂದೇ ಆಗಿರುತ್ತಿತ್ತು!




Grass is for the cows!
ಟೆನಿಸ್ ದಂತಕಥೆ ರಾಡ್ ಲೆವರ್‌ರಿಂದ”He is a magician on clay’ ಎಂದು ಹೊಗಳಿಸಿಕೊಂಡಿದ್ದ ಸ್ಪೇನ್‌ನ ಖ್ಯಾತ ಆಟಗಾರ ಮ್ಯಾನ್ಯುಯೆಲ್ ಸಂಟಾನಾಗೆ ಗ್ರಾಸ್ ಕೋರ್ಟ್ (ಹುಲ್ಲುಹಾಸು) ಬಹಳ ಕಸಿವಿಸಿಯನ್ನುಂಟುಮಾಡುತ್ತಿತ್ತು. ಹಾಗಾಗಿ ಮೊದಲ ಸಲ ವಿಂಬಲ್ಡನ್ ಆಡಲು ಬಂದಾಗ ಈ ಮೇಲಿನ ಹೇಳಿಕೆ ನೀಡಿದ್ದರು ಸಂಟಾನಾ! ನಾಲ್ಕು ಗ್ರಾನ್‌ಸ್ಲಾಮ್‌ಗಳಲ್ಲಿ ವಿಂಬಲ್ಡನ್ ಮಾತ್ರ ಇಂಥದ್ದೇ ನಿಗದಿತ ತಾರೀಖಿನಂದು ಆರಂಭವಾಗುವುದಿಲ್ಲ. ಅಗಸ್ಟ್‌ ತಿಂಗಳ ಮೊದಲ ಸೋಮವಾರಕ್ಕೆ ಸರಿಯಾಗಿ 6 ವಾರಗಳ ಮೊದಲು ವಿಂಬಲ್ಡನ್ ಟೂರ್ನಿ ಆರಂಭವಾಗುತ್ತದೆ. ವಿಂಬಲ್ಡನ್ ಆರಂಭಕ್ಕೆ ಕನಿಷ್ಠ 2 ವಾರ ಮೊದಲು ಪೂರ್ಣಗೊಳ್ಳುವಂತೆ ಫ್ರೆಂಚ್ ಓಪನ್ ಅನ್ನು ಆಯೋಜಿಸಿರುತ್ತಾರೆ. ಬಹಳ ನಿಧಾನಗತಿಯಲ್ಲಿ ಬಾಲ್ ಆಗಮಿಸುವ ಫ್ರೆಂಚ್ ಓಪನ್‌ನ ಮಣ್ಣಿನಲ್ಲಿ ಮಿಂದೆದ್ದು ಬಂದು ಕ್ಷಿಪಣಿಯಂತೆ ಬರುವ ವಿಂಬಲ್ಡನ್‌ನ ಸರ್ವ್‌ಗಳನ್ನು ಎದುರಿಸಲು ಬಹಳಷ್ಟು ಆಟಗಾರರು ತಡವರಿಸುತ್ತಾರೆ.

ಇನ್ನು ಕೆಲವರಂತೂ ಎಷ್ಟು ಕುಪಿತಗೊಳ್ಳುತ್ತಾರೆಂದರೆ ಮ್ಯಾನ್ಯುಯೆಲ್ ಸಂಟಾನಾನ ಹೇಳಿಕೆಯನ್ನು ಪುನರಾವರ್ತನೆ ಮಾಡಿ ವಿಂಬಲ್ಡನ್‌ಗೇ ಚಕ್ಕರ್ ಹೊಡೆದು ಬಿಡುತ್ತಾರೆ. 1982ರಲ್ಲಿ ವಿಂಬಲ್ಡನ್‌ನಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸುವಾಗ ಖ್ಯಾತ ಟೆನಿಸ್ ತಾರೆ ಇವಾನ್ ಲೆಂಡ್‌ಲ್‌ ಕೊಟ್ಟ ಸಬೂಬು ಕೂಡ- Grass is for the cows! ಅಂದಿನಿಂದ ಈ ಮಾತಿಗೆ ಅನಂತತೆ ಬಂದು ಬಿಟ್ಟಿದೆ. ವಿಂಬಲ್ಡನ್‌ಗೆ ಬೈ ಬೈ ಹೇಳುವಾಗ ಗುಸ್ತಾವೋ ಕುರ್ಟನ್ ಇದೇ ಮಾತನ್ನು ಹೇಳಿದ್ದರು. ಯಾವೊಂದೂ ಗ್ರಾನ್‌ಸ್ಲಾಮ್ ಗೆಲ್ಲದಿದ್ದರೂ 1998ರಲ್ಲಿ ಎಟಿಪಿ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದ ಹಾಗೂ ಕ್ಲೇ ಕೋರ್ಟ್‌ಗಳಲ್ಲಷ್ಟೇ ತಮ್ಮ ಸಾಮರ್ಥ್ಯ ಮೆರೆಯುತ್ತಿದ್ದ ಚಿಲಿಯ ಮಾರ್ಸಿಲೋ ರಿಯೋಸ್ ಕೂಡ, Grass is for cows and soccer! ಎಂದಿದ್ದರು. ಮೊದಲ ಹಾಗೂ ಎರಡನೇ ಸುತ್ತಿನಿಂದಲೇ ಹೊರಬೀಳುತ್ತಿದ್ದ ರಷ್ಯಾದ ಮರಾಟ್ ಸಾಫಿನ್ ಗ್ರಾಸ್ ಬಗ್ಗೆ ಎಷ್ಟು ಕೋಪಿಸಿಕೊಂಡಿದ್ದರೆಂದರೆ “Grass is best left for the cows’ ಎನ್ನುವ ಮೂಲಕ ತಮ್ಮ ಹತಾಶೆಯನ್ನು ಹೊರಹಾಕಿದ್ದರು.

ಆದರೇನಂತೆ, ವಿಂಬಲ್ಡನ್ ಗೆಲ್ಲುವುದು ಪ್ರತಿಯೊಬ್ಬ ಟೆನಿಸ್ ಆಟಗಾರನ ದೊಡ್ಡ ಕನಸು! ಸ್ಯಾಂಪ್ರಾಸ್ ತನ್ನ ಕ್ರೀಡಾ ಜೀವನದಲ್ಲಿ ಎಂದೂ ಫ್ರೆಂಚ್ ಓಪನ್ ಗೆಲ್ಲಲಿಲ್ಲ. ಆದರೂ ಸಾರ್ವಕಾಲಿಕ ಶ್ರೇಷ್ಠ ಟೆನಿಸ್ ಆಟಗಾರರಲ್ಲಿ ಒಬ್ಬನೆಂಬ ಹೆಗ್ಗಳಿಕೆ ಗಳಿಸುವುದಕ್ಕೆ ಅದೆಂದೂ ಅಡ್ಡವಾಗಲಿಲ್ಲ. ಆದರೆ ಒಬ್ಬ ಫ್ರೆಂಚ್, ಆಸ್ಟ್ರೇಲಿಯನ್ ಹಾಗೂ ಯುಎಸ್ ಓಪನ್‌ಗಳನ್ನು ಎಷ್ಟು ಸಲ ಗೆದ್ದರೂ ವಿಂಬಲ್ಡನ್ ಗೆಲ್ಲದೇ ಹೋದರೆ ಅದು ಅವನನ್ನು ಜೀವನವಿಡೀ ದೊಡ್ಡ ಕೊರಗಾಗಿ ಕಾಡುತ್ತದೆ. ವಿಶ್ವವಿಖ್ಯಾತ ಜೋರ್ನ್ ಬೋರ್ಗ್ 6 ಬಾರಿ ಫ್ರೆಂಚ್ ಓಪನ್ ಗೆದ್ದರೂ ಆತನ ಗ್ರೇಟ್ನೆಸ್ ಅನ್ನು ಅಳೆದಿದ್ದು, ಗ್ರೇಟ್ ಆಟಗಾರ ಅಂತ ಕರೆಸಿಕೊಂಡಿದ್ದು 1976ರಿಂದ 1980ರವರೆಗೂ ಸತತ 5 ಬಾರಿಗೆ ವಿಂಬಲ್ಡನ್ ಗೆದ್ದಾಗಲೇ. ಫ್ರೆಂಚ್ ಓಪನ್‌ನಲ್ಲಿ ಆತನಿಗೆ ಸಾಟಿಯೇ ಇರಲಿಲ್ಲ. ಆದರೆ ವಿಂಬಲ್ಡನ್‌ನಲ್ಲಿ ಅತ್ಯಂತ ಕಠಿಣ ಸ್ಪರ್ಧೆ, ಪ್ರತಿರೋಧ ಎದುರಾಗುತ್ತಿತ್ತು. ಹಾಲಿ ಪರಿಸ್ಥಿತಿಯನ್ನೇ ನೋಡಿ, 6 ಸಲ ಫ್ರೆಂಚ್ ಓಪನ್ ಗೆದ್ದಿದ್ದರೂ ರಾಫೆಲ್ ನಡಾಲ್‌ನನ್ನು ಟೆನಿಸ್ ಪ್ರೇಮಿಗಳು ಗೌರವಿಸಲಾರಂಭಿಸಿದ್ದು ಆತ ವಿಂಬಲ್ಡನ್ ಗೆದ್ದ ಮೇಲೆಯೇ. ಮಣ್ಣಿನ ಅಂಕಣದ ಮೇಲೆ ಸಾಮಾನ್ಯರಲ್ಲಿ ಸಾಮಾನ್ಯರೆಂಬಂತೆ ಕಾಣುವ ರೋಜರ್ ಫೆಡರರ್, ಜೋಕೋವಿಚ್, ಆ್ಯಂಡಿ ಮರ್ರೆ ಹುಲ್ಲು ಹಾಸಿನ ಮೇಲೆ ಅತ್ಯಂತ ಕಠಿಣ ಎದುರಾಳಿಗಳಾಗಿ ಬಿಡುತ್ತಾರೆ. ವಿಂಬಲ್ಡನ್‌ನ ವೈಶಿಷ್ಟ್ಯವೇ ಅದು.

200, 210, ಕೆಲವೊಮ್ಮೆ 220 ಕಿ.ಮೀ. ವೇಗದಲ್ಲಿ ಬರುವ ಮೊದಲ ಸರ್ವ್‌ಗಳನ್ನು ನೋಡುವುದೇ ಒಂದು ಅದ್ಭುತ ಸುಖ. ಸರ್ವ್ ಹಾಕಿ ನೆಟ್ ಬಳಿಗೆ ಧಾವಿಸಿ ವಾಲಿ ಮಾಡುವುದಂತೂ ಬಣ್ಣಿಸಲಸದಳ. ಜಾನ್ ಮೆಕೆನ್ರೊ ಅದರಲ್ಲಿ ಮಾಸ್ಟರ್. ಇಂತಹ ಮೆಕೆನ್ರೊ ಹಾಗೂ ಬೋರ್ಗ್ ನಡುವೆ 1980ರಲ್ಲಿ ನಡೆದ ವಿಂಬಲ್ಡನ್ ಫೈನಲ್ ಪಂದ್ಯವನ್ನು ಯಾವ ಟೆನಿಸ್ ಪ್ರೇಮಿಯೂ ಮರೆಯಲು ಸಾಧ್ಯವಿಲ್ಲ. ಪ್ರತಿ ವರ್ಷ ವಿಂಬಲ್ಡನ್ ಟೂರ್ನಿ ಆರಂಭವಾಗುವ ಪೂರ್ವಭಾವಿ Build up ಸಮಯದಲ್ಲಿ ಇಎಸ್ಪಿಎನ್-ಸ್ಟಾರ್? ಸ್ಪೋರ್ಟ್ಸ್‌ ಚಾನೆಲ್‌ನಲ್ಲಿ ಕಡ್ಡಾಯವಾಗಿ ಈ ಪಂದ್ಯವನ್ನು ಮರುಪ್ರಸಾರ ಮಾಡಿಯೇ ಮಾಡುತ್ತಾರೆ. ಇಲ್ಲವಾದರೆ ಯುಟ್ಯೂಬ್‌ನಲ್ಲೂ ವೀಕ್ಷಿಸಬಹುದು. ಅದನ್ನು ವಿಂಬಲ್ಡನ್ ಇತಿಹಾಸದಲ್ಲೇ ಅತ್ಯುತ್ತಮ ಫೈನಲ್ ಎಂದು ಪರಿಗಣಿಸಲಾಗಿದೆ. 1980ರ ವೇಳೆಗಾಗಲೇ ಬೋರ್ಗ್ ಟೆನಿಸ್‌ನ ಜೀವಂತ ದಂತಕಥೆಯಾಗಿದ್ದ. ಸತತ 4 ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದ ಆತ, ಐದನೆಯದಕ್ಕಾಗಿ ಕಾಯುತ್ತಿದ್ದ. ಇತ್ತ ಯುವಕ ಜಾನ್ ಮೆಕೆನ್ರೊ ಆಗಿನ್ನೂ ಟೆನಿಸ್ ಅಂಗಳದಲ್ಲಿ ಕಣ್ಣುಬಿಡುತ್ತಿದ್ದ. ಇವರಿಬ್ಬರೂ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು. ಬೋರ್ಗ್ ಪ್ರತಿಭೆಯ ಜತೆ ಉತ್ತಮ ನಡತೆಯಿಂದಲೂ ಹೆಸರಾಗಿದ್ದರೆ, ಮೆಕೆನ್ರೊನ ಕ್ಯಾತೆಗಳು ಅದಾಗಲೇ ಆರಂಭವಾಗಿದ್ದವು.

ಜಿಮ್ಮಿ ಕಾನರ್ಸ್ ಜತೆಗಿನ ಸೆಮಿಫೈನಲ್ ಹಣಾಹಣಿ ವೇಳೆ ಅಂಪೈರ್ ಹಾಗೂ ಇತರ ಅಧಿಕಾರಿಗಳ ಜತೆ ಕಿತ್ತಾಡಿಕೊಂಡಿದ್ದ ಮೆಕೆನ್ರೊ, ಫೈನಲ್ ಆಡಲು ‘ಸೆಂಟರ್ ಕೋರ್ಟ್’ಗೆ ಕಾಲಿಡುತ್ತಿದ್ದಂತೆಯೇ ಪ್ರೇಕ್ಷಕರು ಅಣಕಿಸಿ ಸ್ವಾಗತ ನೀಡಿದರು. ಆದರೆ ಪಂದ್ಯ ಆರಂಭವಾದ ನಂತರ ಪರಿಸ್ಥಿತಿಯೇ ಬದಲಾಗತೊಡಗಿತು. ಇಪ್ಪತ್ನಾಲ್ಕು ವರ್ಷದ ಬೋರ್ಗ್ ಒಬ್ಬ ಮಾಸ್ಟರ್ ಆದರೆ, 21 ವರ್ಷದ ಮೆಕೆನ್ರೊ ಪ್ರಳಯಾಂತಕ. ಒಬ್ಬ ಸೌಮ್ಯವಾದಿಯಾದರೆ, ಮತ್ತೊಬ್ಬ ಗಲಾಟೆ ಸ್ವಭಾವದವ. ಇವರಿಬ್ಬರ ಸೆಣಸಾಟ ಆಟವನ್ನೇ ರಂಗೇರಿಸಿತು. ಎಲ್ಲರನ್ನೂ ನೇರ ಸೆಟ್‌ಗಳಲ್ಲಿ ಸೋಲಿಸುತ್ತಿದ್ದ ಬೋರ್ಗ್ ಮೊದಲನೇ ಸೆಟ್ಟನ್ನು 1-6ರಿಂದ ಸೋತು ಬಿಟ್ಟ! ಎರಡನೇ ಸೆಟ್ ಟೈ ಬ್ರೇಕರ್?ಗೆ ಹೋಯಿತು. ಆತನ ನಾಗಾಲೋಟಕ್ಕೆ ಕಡಿವಾಣ ಬಿತ್ತು ಎಂದು ಎಲ್ಲರೂ ಅಂದುಕೊಳ್ಳಲಾರಂಭಿಸಿದರು. ಅಷ್ಟರಲ್ಲಿ ಹೇಗೋ ಪರದಾಡಿ ಎರಡನೆ ಸೆಟ್ ಗೆದ್ದುಕೊಂಡ ಬೋರ್ಗ್, ಮೂರನೇ ಸೆಟ್ಟನ್ನು 6-3ರಿಂದ ತನ್ನದಾಗಿಸಿಕೊಂಡ.

ಮತ್ತೆ ನಿರೀಕ್ಷೆಗಳು ಬೋರ್ಗ್ ಪರ ವಾಲತೊಡಗಿದವು. ಆದರೆ ನಾಲ್ಕನೇ ಸೆಟ್ ವಿಂಬಲ್ಡನ್ ಟೆನಿಸ್ ಇತಿಹಾಸಕ್ಕೆ ಒಂದು ಅದ್ಭುತ ಅಧ್ಯಾಯವನ್ನು ಸೇರ್ಪಡೆ ಮಾಡಲಿದೆ ಎಂದು ಬಹುಶಃ ಯಾರೂ ಊಹಿಸಿರಲಿಲ್ಲ. ಮಾಮೂಲಿನಂತೆ ಬೇಸ್‌ಲೈನ್‌ನಲ್ಲಿ ನಿಂತು ಆಡತೊಡಗಿದ ಬೋರ್ಗ್‌ನ ಪ್ರತಿ ಹೊಡೆತಕ್ಕೂ ಮೆಕೆನ್ರೊ ತಕ್ಕ ಪ್ರತ್ಯುತ್ತರ ನೀಡಲಾರಂಭಿದ. ಆ ಸೆಟ್‌ನಲ್ಲಿ ಒಟ್ಟು 34 ಪಾಯಿಂಟ್‌ಗಳು ಜಿದ್ದಾಜಿದ್ದಿಯಿಂದ ಕೂಡಿದ್ದವು. ಒಂದೊಂದು ಪಾಯಿಂಟ್‌ಗೂ ದೊಡ್ಡ ಹೋರಾಟವನ್ನೇ ಮಾಡಿದರು. ಹಾಗಾಗಿ ನಾಲ್ಕನೆ ಸೆಟ್ ಕೂಡ ಟೈಬ್ರೇಕರ್‌ಗೆ ಹೋಯಿತು. ಒಂದೇ ಒಂದು ಟೈಬ್ರೇಕರ್ 22 ನಿಮಿಷಗಳ ಕಾದಾಟಕ್ಕೆ ಕಾರಣವಾಯಿತು ಎಂದರೆ ನಂಬುತ್ತೀರಾ? ಈ ಕಾದಾಟದಲ್ಲಿ ಬೋರ್ಗ್‌ಗೆ 5 ಚಾಂಪಿಯನ್‌ಶಿಪ್ ಪಾಯಿಂಟ್‌ಗಳು ದೊರಕಿದ್ದವು. ಅಷ್ಟನ್ನೂ ಮೆಕೆನ್ರೊ ನಿಷ್ಫಲಗೊಳಿಸಿದ. ಮೆಕೆನ್ರೊಗೆ 7 ಸೆಟ್ ಪಾಯಿಂಟ್?ಗಳು ದೊರೆತಿದ್ದವು. ಒಂದನ್ನೂ ಸದುಪಯೋಗಪಡಿಸಿಕೊಳ್ಳಲು ಬೋರ್ಗ್ ಬಿಡಲಿಲ್ಲ. ಕೊನೆಗೆ ಟೈಬ್ರೇಕರ್‌ನಲ್ಲಿ 18-16ರಲ್ಲಿ ಸೆಟ್ ಗೆದ್ದ ಮೆಕೆನ್ರೊ, ಪಂದ್ಯವನ್ನು ಐದನೇ ಸೆಟ್‌ಗೆ ಕೊಂಡೊಯ್ದ. ಐದನೇ ಸೆಟ್ ಮತ್ತೆ ಟೈಬ್ರೇಕರ್‌ಗೆ ಹೋಯಿತು.

ಇಷ್ಟಾಗಿಯೂ 8-6 ಸೆಟ್ ಗೆದ್ದ ಬೋರ್ಗ್ 5ನೇ ಬಾರಿಗೆ ವಿಂಬಲ್ಡನ್ ಚಾಂಪಿಯನ್ ಆಗಿ ಹೊರಹೊಮ್ಮಿದ. ಅಷ್ಟರಲ್ಲಿ ಮೆಕೆನ್ರೊ, ಬೋರ್ಗ್‌ನ ಆತ್ಮಸ್ಥೈರ್ಯವನ್ನೇ ಉಡುಗಿಸಿದ್ದ. ಆಡಲು ಆಗಮಿಸಿದಾಗ ಮೆಕೆನ್ರೊನನ್ನು ಯಾವ ಪ್ರೇಕ್ಷಕರು ಅಣಕಿಸಿದ್ದರೋ ಅದೇ ಪ್ರೇಕ್ಷಕರು ಎದ್ದು ನಿಂತು ಮೆಕೆನ್ರೊಗೆ ಗೌರವ ಸೂಚಿಸಿದರು. ಅದೇ ವರ್ಷದ ಕೊನೆಯಲ್ಲಿ ನಡೆದ ಯುಎಸ್ ಓಪನ್ ಫೈನಲ್‌ನಲ್ಲಿ ಮೆಕೆನ್ರೊ-ಬೋರ್ಗ್ ಮತ್ತೆ ಮುಖಾಮುಖಿಯಾದರು. ಆ ಪಂದ್ಯ ಕೂಡ ಐದು ಸೆಟ್‌ಗಳಿಗೆ ಸಾಗಿತು. ಈ ಬಾರಿ ಗೆದ್ದ ಮೆಕೆನ್ರೊ ಸೇಡು ತೀರಿಸಿಕೊಂಡ. ಮರು ವರ್ಷ ವಿಂಬಲ್ಡನ್ ಹಾಗೂ ಯುಎಸ್ ಓಪನ್ ಎರಡರಲ್ಲೂ ಫೈನಲ್‌ನಲ್ಲಿ ಇವರಿಬ್ಬರೇ ಎದುರಾಳಿಗಳಾದರು. ಎರಡರಲ್ಲೂ ಗೆದ್ದ ಮೆಕೆನ್ರೊ ನವತಾರೆಯಾಗಿ ಹೊರಹೊಮ್ಮಿದರೆ ಬೋರ್ಗ್ ನಿವೃತ್ತಿ ಘೋಷಣೆ ಮಾಡಿಬಿಟ್ಟ. ಆಗ ಆತನಿಗೆ ಕೇವಲ 26 ವರ್ಷ!

ಟೆನಿಸ್‌ನ ಇತಿಹಾಸದಲ್ಲೇ ಅತಿ ದೊಡ್ಡ Rivalry ಗಳು ಸೃಷ್ಟಿಯಾಗಿದ್ದು, ಅತಿ ದೊಡ್ಡ ಸೆಣಸಾಟಗಳು ನಡೆದಿದ್ದು ವಿಂಬಲ್ಡನ್‌ನಲ್ಲಿ! ಯಾವುದೇ ಒಂದು ಆಟ ರಂಗೇರಬೇಕಾದರೆ, ಆಟವನ್ನೇ ಎತ್ತರಿಸುವಂಥ ಸೆಣಸಾಟಗಳನ್ನು ಏರ್ಪಡಿಸುವಂಥ ಕ್ರೀಡಾಂಗಣದ ವೈರತ್ವಗಳಿರಬೇಕು. ಬೋರ್ಗ್- ಮೆಕೆನ್ರೊ, ಲೆಂಡ್ಲ್‌-ಮೆಕೆನ್ರೊ, ಬೆಕರ್-ಎಡ್ಬರ್ಗ್, ಫೆಡರರ್-ನಡಾಲ್, ಕ್ರಿಸ್ ಎವರ್ಟ್-ಮಾರ್ಟಿನಾ ನವ್ರಾತಿಲೋವಾ, ಸ್ಟೆಫಿ-ಸೆಲೆಸ್, ಹಿಂಗಿಸ್-ಡೆವನ್‌ಪೋರ್ಟ್, ಸ್ಯಾಂಪ್ರಾಸ್ ಒಂದು ಕಡೆಯಾದರೆ, ಆತನ ಪಟ್ಟು ಹಾಕಿ ಬೀಳಿಸಲು ಒಬ್ಬರ ನಂತರ ಒಬ್ಬರಂತೆ ಮುಗಿಬೀಳುತ್ತಿದ್ದ ಆ್ಯಂಡ್ರೆ ಅಗಾಸಿ, ಗೊರಾನ್ ಇವಾನಿಸೆವಿಚ್, ಪ್ಯಾಟ್ರಿಕ್ ರ್ಯಾಫ್ಟರ್, ಏಸ್‌ಗಳೇ ತಮ್ಮ ಆಟದ ಜೀವಾಳವಾಗಿಟ್ಟುಕೊಂಡಿದ್ದ ಮಾರ್ಕ್ ಫಿಲಿಫ್ಪೋಸಿಸ್, ಸೆಮಿಫೈನಲ್‌ನವರೆಗಷ್ಟೇ ಬರುತ್ತಿದ್ದ ಟಿಮ್ ಹೆನ್ಮನ್ ಆಟವನ್ನು ರಂಗೇರಿಸಿದ್ದರು.

ಇವರೆಲ್ಲರಿಗಿಂತ ಮುಖ್ಯವಾಗಿ ಅತಿಸುಂದರ ಬೋರಿಸ್ ಬೆಕರ್, ಸ್ಟೀಫನ್ ಎಡ್ಬರ್ಗ್, ಜಿಮ್ ಕುರಿಯರ್ ಹಾಗೂ ಸತತ ಎರಡು ಭಾರಿ ಫೈನಲ್‌ನಲ್ಲಿ ಸೋತ ಇವಾನ್ ಲೆಂಡ್ಲ್‌ ವಿಂಬಲ್ಡನ್‌ಗೆ ಒಂದು ಕಳೆ ತಂದುಕೊಟ್ಟಿದ್ದರು. ಇಲ್ಲಿ ತಾರೆಗಳ ಆಟದ ಸೊಗಸೇ ಬೇರೆ. ವಿಂಬಲ್ಡನ್ ಗೆಲ್ಲಲು ಬೇಕಾದ ಅತ್ಯಂತ ದೊಡ್ಡ ಅಸ್ತ್ರ ಯಾವುದು ಅಂತ ಕೇಳಿದ್ದಕ್ಕೆ “You need big second serve’ ಎಂದಿದ್ದರು ಸ್ಯಾಂಪ್ರಾಸ್. ಅಂದರೆ ವಿಂಬಲ್ಡನ್‌ನಲ್ಲಿ ಒಳ್ಳೆಯ ಆಟಗಾರರ ಫಸ್ಟ್‌ ಸರ್ವ್‌ಗಳು ಸಾಮಾನ್ಯವಾಗಿ 200 ಕಿ.ಮೀ. ವೇಗವನ್ನು ದಾಟುತ್ತವೆ. ಒಂದು ವೇಳೆ ಫಸ್ಟ್‌ ಸರ್ವ್ ವಿಫಲವಾದರೆ ಡಬಲ್ ಫಾಲ್ಟ್‌ ಭಯದಿಂದ ಸೆಕೆಂಡ್ ಸರ್ವ್ ಅನ್ನು ನಿಧಾನವಾಗಿ ಹಾಕುತ್ತಾರೆ. ಹಾಗಾಗಿ ಎದುರಾಳಿಗಳು ಸೆಕೆಂಡ್ ಸರ್ವ್ ಅನ್ನು ಅಟ್ಯಾಕ್ ಮಾಡುತ್ತಾರೆ. ಆದರೆ ಸ್ಯಾಂಪ್ರಾಸ್‌ನ ಸೆಕೆಂಡ್ ಸರ್ವ್‌ಗಳೇ ಬಲಿಷ್ಠವಾಗಿರುತ್ತಿದ್ದವು, ಸೆಕೆಂಡ್ ಸರ್ವ್‌ನಲ್ಲಿ ಏಸ್ ಹಾಕಿಬಿಡುತ್ತಿದ್ದ.

ಆತನ ಆಟದ ಬಗ್ಗೆ ಖ್ಯಾತ ಕ್ರೀಡಾ ವಿಶ್ಲೇಷಕ ನಿರ್ಮಲ್ ಶೇಖರ್ ಎಷ್ಟು ಮನಸೋತಿದ್ದರೆಂದರೆ, “Federer all class, but Sampras the king on grass’ ಎಂದು ಒಂದು ಲೇಖನವನ್ನೇ ಬರೆದು ಹೊಗಳಿದ್ದರು. ವಿಂಬಲ್ಡನ್‌ನಲ್ಲಿ ಸರ್‌ಪ್ರೈಸ್ ವಿನ್ನರ್ಸ್ ಬಹಳ ವಿರಳ, ಶಾಕ್ ಡಿಫೀಟ್‌ಗಳು ಇಲ್ಲಿ ತುಂಬಾ ಕಡಿಮೆ. ಒಳ್ಳೆಯ ಆಟಗಾರರು ಮಾತ್ರ ಸೆಮಿಫೈನಲ್, ಫೈನಲ್‌ಗೆ ತಲುಪುತ್ತಾರೆ. ಇಲ್ಲಿನ ಮತ್ತೊಂದು ಗಮನಾರ್ಹ ಅಂಶವೆಂದರೆ ಗ್ರೇಟ್ ರೈವಲ್ರಿ ಜತೆಗೆ ಸಸ್ಟೈನ್ಡ್‌ ರೈವಲ್ರಿಯನ್ನು ಕಾಣಬಹುದು. ವರ್ಷಕ್ಕೊಬ್ಬ ಎದುರಾಳಿಗಳು ಉದ್ಭವಿಸುವುದಿಲ್ಲ. ಅತ್ಯುತ್ತಮ ಆಟಗಾರರೇ ವರ್ಷಂಪ್ರತಿ ಜಿದ್ದಾಜಿದ್ದಿಗೆ ಬೀಳುತ್ತಾರೆ.

ಇಲ್ಲಿನ ಇನ್ನೊಂದು ಉಲ್ಲೇಖಾರ್ಹ ವಿಶೇಷತೆಯೆಂದರೆ ಇಂಗ್ಲಿಷರು ಇಂದಿಗೂ “Purist’ಗಳು, ಮಡಿವಂತಿಕೆ ಬಿಟ್ಟಿಲ್ಲ! ಆಸ್ಟ್ರೇಲಿಯನ್, ಫ್ರೆಂಚ್, ಯು.ಎಸ್. ಓಪನ್‌ಗಳಲ್ಲಿ ಆಟಗಾರರು ತಮಗಿಷ್ಟ ಬಂದ ಬಣ್ಣದ ಉಡುಪು ಧರಿಸಬಹುದು. ಆದರೆ ವಿಂಬಲ್ಡನ್‌ನಲ್ಲಿ White-only!! ಬಿಳಿ ವಸ್ತ್ರವನ್ನೇ ಧರಿಸಬೇಕು. ವೀಕ್ಷಕರೂ ಕೂಡ ‘ಎಲ್ಲೆ ಮೀರದ’ ಉಡುಪು ಧರಿಸಿ ವಿಶಿಷ್ಟವಾದ ಫ್ಯಾಶನ್ ಸ್ಟೇಟ್‌ಮೆಂಟ್ ಕೊಡುತ್ತಾರೆ. ಇತರ ಗ್ರಾನ್‌ಸ್ಲಾಮ್‌ಗಳಲ್ಲಿ ‘ವಿಮೆನ್ಸ್‌ ಸಿಂಗಲ್ಸ್‌’, ‘ಮೆನ್ಸ್‌ ಸಿಂಗಲ್ಸ್‌’ ಎಂದರೆ ವಿಂಬಲ್ಡನ್‌ನಲ್ಲಿ ಮಾತ್ರ ‘ಲೇಡೀಸ್ ಸಿಂಗಲ್ಸ್‌?’ ಹಾಗೂ ‘ಜೆಂಟಲ್‌ಮನ್ಸ್‌ ಸಿಂಗಲ್ಸ್‌’ ಎನ್ನಲಾಗುತ್ತದೆ.

ಟೆನಿಸ್ ನೋಡಲು ಬರುವವರೂ ಕೂಡ ಜೆಂಟಲ್‌ಮನ್‌ಗಳಂತೆಯೇ ವರ್ತಿಸುತ್ತಾರೆ. ರಾಯಲ್ ಹ್ಯಾಟ್ ಹಾಕಿಕೊಂಡು ಬರುವುದು, ಮುಂಗಾರು ಆರಂಭವಾದ ಮೇಲೆ ಬಿಟ್ಟು ಬಿಟ್ಟು ಸುರಿಯುವ ಮಳೆಯಂತೆ Rhythmical ಆಗಿ ಚಪ್ಪಾಳೆ ತಟ್ಟುವುದು ಕಣ್ಣು, ಕಿವಿಗಳಿಗೊಂದು ಹಬ್ಬ. ಅಷ್ಟೇ ಅಲ್ಲ, ಬಾಲ್‌ಬಾಯ್ಸ್‌ ಕೂಡ ಬಾಲನ್ನು ಮೇಲಿಂದ ಬಿಸಾಡುವಂತಿಲ್ಲ, ನೆಲದಿಂದಲೇ ಟಾಸ್ ಮಾಡಬೇಕು. ಬಾಲನ್ನು ಹೆಕ್ಕಿ ಹಿಂದಿರುಗುವಾಗಲೂ ಬ್ಯಾಕ್ವರ್ಡ್ ಸ್ಟೆಪ್ಸ್‌ ಹಾಕಬೇಕು, ಬೆನ್ನು ತೋರಿಸುವಂತಿಲ್ಲ. ಸ್ಕೋರ್ ಬೋರ್ಡ್ ಮೇಲೆ ಆಟಗಾರರ ಹೆಸರು ಬರೆಯುವಾಗಲೂ ‘ಮಿಸ್ಟರ್’ ಫೆಡರರ್, ‘ಮಿಸ್ಟರ್’ ನಡಾಲ್, ‘ಮಿಸ್’ ಶರಪೋವಾ, ‘ಮಿಸೆಸ್’ ಕಿಮ್‌ಕ್ಲೈಸರ್ಸ್ ಹೀಗೆ ಬಹಳ ಡಿಗ್ನಿಫೈಡ್ ಆಗಿ ಬರೆಯುತ್ತಾರೆ. ಆಟ ಚಾಲ್ತಿಯಲ್ಲಿರುವಾಗ ಕೂಡ ಪಾಯಿಂಟ್ಸ್‌ ಹೇಳುವಾಗ ಫೆಡರರ್, ನಡಾಲ್ ಎನ್ನುವುದಿಲ್ಲ. ಮಿಸ್ಟರ್ ಫೆಡರರ್, ಮಿಸ್ಟರ್ ನಡಾಲ್ ಎಂದೇ ಸಂಬೋಧಿಸುತ್ತಾರೆ. ಇಂತಹ ವಿಂಬಲ್ಡನ್‌ನ ಈ ಸಲದ ಚಾಂಪಿಯನ್‌ಶಿಪ್‌ಗೆ 131ರ ಸಂಭ್ರಮ!

ಆದರೂ ಮುಪ್ಪಡರದ ಮುತ್ತೈದೆಯಂತಿದೆ. ಇಷ್ಟಕ್ಕೂ ಒಬ್ಬ ಟೆನಿಸ್ ಆಟಗಾರನಾಗಿ ವಿಂಬಲ್ಡನ್ ಅನ್ನು ಮಾತ್ರ ತನ್ನ ಗುರಿಯಿಂದ ಹೊರಗಿಡಲು ಯಾವೊಬ್ಬನಿಗೂ ಸಾಧ್ಯವಿಲ್ಲ. ಅಣಕವೆಂದರೆ Grass is for the cows ಎಂದಿದ್ದ ಮ್ಯಾನ್ಯುಯೆಲ್ ಸಂಟಾನಾನೇ 1966ರಲ್ಲಿ ವಿಂಬಲ್ಡನ್ ಗೆದ್ದುಬಿಟ್ಟ! ಪ್ರಸ್ತುತ ನಡೆಯುತ್ತಿರುವ ವಿಂಬಲ್ಡನ್ ಟೂರ್ನಿ ಕಡೆಯ ಹಂತಕ್ಕೆ ಬಂದಿದೆ. ಬಿಡುವು ಮಾಡಿಕೊಂಡು ನೋಡಿ.

 •  0 comments  •  flag
Share on Twitter
Published on July 15, 2017 02:03

July 14, 2017

Pratap Simha's Blog

Pratap Simha
Pratap Simha isn't a Goodreads Author (yet), but they do have a blog, so here are some recent posts imported from their feed.
Follow Pratap Simha's blog with rss.