Pratap Simha's Blog, page 13
September 28, 2017
September 27, 2017
September 23, 2017
ಇಲ್ಲಿ ಸಲ್ಲದ ವ್ಯಕ್ತಿಯಿಂದ ಇಲ್ಲ ಸಲ್ಲದ ಭಾಷಣ!
ಇಲ್ಲಿ ಸಲ್ಲದ ವ್ಯಕ್ತಿಯಿಂದ ಇಲ್ಲ ಸಲ್ಲದ ಭಾಷಣ!
ಕೆಲವರ್ಷಗಳ ಹಿಂದೆ ಅಂಕಣವೊಂದರಲ್ಲಿ ಹೀಗೆ ಬರೆದಿದ್ದೆ. ಅದಕ್ಕೆ ನಾನು ಈಗಲೂ ಬದ್ಧ ಎನ್ನುವುದಕ್ಕಿಂತಲೂ ಆ ಲೇಖನದ ವಸ್ತು ಈಗಲೂ ಹಾಗೇ ಇದೆ ಎನ್ನುವುದು ಹೆಚ್ಚು ಸೂಕ್ತ. ಅಂದು ನಾನು ಬರೆದಿದ್ದು ಇಷ್ಟು. ನಮ್ಮ ಹಳಬರಲ್ಲಿ ಕೆಲ Notions presumpons ಇರುತ್ತವೆ. ಅತ್ಯುತ್ತಮ ಹಾಸಿಗೆಯೆಂದರೆ ಅದು ‘ಕರ್ಲಾನ್ ಬೆಡ್’. ಮಿನರಲ್‌ವಾಟರ್ ಬೇಕಿದ್ದರೆ ಬಿಸ್ಲರಿ ಕೊಡಿ ಎನ್ನುತ್ತಾರೆ. ಬೀರು ಬೇಕಿದ್ದರೆ ಗೊದ್ರೆಜ್ ಎನ್ನುತ್ತಾರೆ. ಹಳ್ಳಿ ಕಡೆ ಬಟ್ಟೆ ತೊಳೆಯುವ ಸೋಪು ಬೇಕಿದ್ದರೆ 501 ಬಾರ್ ಸೋಪು ಕೇಳುತ್ತಾರೆ. ಅಂಗಡಿಯವನು ಕರ್ಲಾನ್ ಬದಲು ಸ್ಲೀಪ್‌ವೆಲ್ ಕೊಟ್ಟರೂ, ಬಿಸ್ಲರಿ ಬದಲು ಕಿನ್ಲೇ ಕೊಟ್ಟರೂ, 501 ಬಾರ್ ಸೋಪು ಬದಲು ರಿನ್ ಕೊಟ್ಟರೂ ಜನ ಮರು ಮಾತನಾಡದೇ ತೆಗೆದುಕೊಂಡು ಹೋಗುತ್ತಿದ್ದರು.
ಕಾರಣ, ಅವರಿಗೆ ಮಿನರಲ್‌ವಾಟರ್ ಎನ್ನುವುದಕ್ಕೆ ಬಿಸ್ಲರಿ ಎನ್ನುತ್ತಾರೇನೋ ಎನ್ನುವಷ್ಟು ಆಯಾ ಬ್ರಾಂಡ್‌ಗಳು ಮನಸ್ಸಿನಲ್ಲಿ ಮನೆ ಕಟ್ಟಿಿಕೊಂಡಿದ್ದವು. ಹಾಗೆಯೇ, ಕಾಂಗ್ರೆಸ್ ಸಹ. ಹಳಬರಲ್ಲಿ ಈಗಲೂ ವೋಟ್ ಮಾಡುವಾಗ ಅವರ ಬಳಿ ಹೋಗಿ ‘ಯಾರಿಗೆ ವೋಟ್ ಮಾಡ್ಬೇಕು ಅನ್ಕಂಡಿದ್ಯಪ್ಪಾ?’ ಎಂದು ಕೇಳಿ ನೋಡಿ… ಅವರು ಹೇಳುವುದು ಇನ್ಯಾರಿಗೆ? ಕಾಂಗ್ರೆಸ್‌ಗೆ. ‘ಕೈ ಇಲ್ಲದೇ ಮನ್ಸ ಬದುಕಕ್ಕಾಯ್ತದಾ?’ಎನ್ನುತ್ತಿದ್ದರು. ನಾವು ಸಣ್ಣವರಿದ್ದಾಗಿನ ಕಾಲವದು. ಕಾಂಗ್ರೆಸ್‌ನಿಂದ ಎಲೆಕ್‌ಟ್ರಿಕ್ ಕಂಬ ಚುನಾವಣೆಗೆ ನಿಂತರೂ ಗೆಲ್ಲುತ್ತದೆ ಎಂಬ ಮಾತಿತ್ತು. ಆಗಿನ ಸ್ಥಿತಿಯೂ ಹಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಕಾಂಗ್ರೆಸ್ ದೇಶದಲ್ಲಿ ದಯನೀಯ ಸ್ಥಿತಿಯಲ್ಲಿದೆ. ಕಾಂಗ್ರೆಸಿನಲ್ಲಿ ನಾಯಕರಾರು ಎಂದು ನೋಡಿದರೆ ತೂಕದ ಕಲ್ಲು ಮೇಲೇಳದಷ್ಟು ಕುಸಿದುಹೋಗಿದೆ. ಆ ಬಿಸ್ಲೆರಿ ಮಾನಸಿಕತೆ ಹುಟ್ಟಿದ ಕಾಲವನ್ನೊಮ್ಮೆ ನೋಡಿ.
1951ರ ಸಾರ್ವತ್ರಿಕ ಚುನಾವಣೆಯಲ್ಲಿ ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆಗಳು ನಡೆದಿದ್ದವು. ಎಲ್ಲೆಲ್ಲೂ ನಿರೀಕ್ಷೆಯಂತೆ ಕಾಂಗ್ರೆಸ್ ಗೆಲುವು ಸಾಧಿಸಿತು. ಕಾರಣ ಆಗಷ್ಟೆ ಸ್ವಾತಂತ್ರ್ಯ ಸಿಕ್ಕಿ ದೇಶದ ಜನಕ್ಕೆ ಕಾಂಗ್ರೆಸ್ ಎಂಬ ಪ್ರತಿಮೆಯೇ ಬೇರೆಯಾಗಿತ್ತು. ಒಟ್ಟು 4,500 ಸ್ಥಾನಗಳಿಗೆ ನಡೆದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವನ್ನು ಅಚ್ಚರಿಯಿಂದ ಗಮನಿಸಿದ ವಿಶ್ವ ಇದೊಂದು ದಾಖಲೆ ಎಂದು ಪರಿಗಣಿಸಿದ್ದರು. ಬರೋಬ್ಬರಿ 2,24,000 ಚುನಾವಣಾ ಕೇಂದ್ರಗಳು ಮತ್ತು ಎರಡು ದಶಲಕ್ಷ ಮತಪೆಟ್ಟಿಗೆಗಳಲ್ಲೂ ಒಂದು ಪಕ್ಷ ಗೆಲ್ಲುವುದೆಂದರೆ ಅಂದಿನ ಕಾಂಗ್ರೆಸಿನ ಬಗ್ಗೆ ಜನರಿಗೆ ಎಂಥಾ ಭರವಸೆಯಿದ್ದಿರಬೇಕು? 1967ರ ಚುನಾವಣೆಯ ನಂತರ ಕಾಂಗ್ರೆಸಿನ ಸೋಲಿನ ಇತಿಹಾಸ ಪ್ರಾರಂಭವಾಯಿತು.
ಎಲ್ಲಾ ಕಾಲದಲ್ಲೂ ಎಲ್ಲರನ್ನೂ ಮೋಸಗೊಳಿಸುವುದು ಸಾಧ್ಯವಿಲ್ಲವಲ್ಲಾ. 1967ರಲ್ಲಿ ಬಿಹಾರ, ಕೇರಳ, ಒರಿಸ್ಸಾ, ಮದ್ರಾಸ್, ಪಂಜಾಬ್ ಮತ್ತು ಪ.ಬಂಗಾಳಗಳಲ್ಲಿ ಕಾಂಗ್ರೆಸೇತರ ಮುಖ್ಯಮಂತ್ರಿಗಳು ನೇಮಕವಾಯಿತು. ಹಳೆಯ ದೊಡ್ಡ ಪಕ್ಷವೆಂಬ ಹಣೆಪಟ್ಟಿ ಹೊತ್ತ ಕಾಂಗ್ರೆಸ್ ಬಹುತೇಕ ರಾಜ್ಯಗಳಲ್ಲಿ ಶೇ.60ರಷ್ಟು ಸೀಟುಗಳನ್ನು ಗೆಲ್ಲುವಲ್ಲಿ ವಿಫಲವಾಯಿತು. ಹಲವು ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಕೂಡಾ ಜಾರಿಯಾಯಿತು. ಜತೆಗೆ ಇಂದಿರಾ ಗಾಂಧಿ ಕಾಂಗ್ರೆಸಿನ ಆಂತರಿಕ ಕಿತ್ತಾಟಗಳಿಂದ 1970ರ ಮುಂಚಿತವಾಗಿ ಚುನಾವಣೆಗಳನ್ನು ನಡೆಸಲು ನಿರ್ಧರಿಸಿಬಿಟ್ಟಿದ್ದರು. ಕ್ರಮೇಣ ಜನ, ಅವರ ಮನೋಭಾವ, ನಿರೀಕ್ಷೆಗಳು ಬದಲಾಗುತ್ತಾ ಹೋದಂತೆ ಕಾಂಗ್ರೆಸ್‌ನ ಸ್ಥಿತಿ ಹಳೆಯ ಮರವೊಂದು ನಿಧಾನಕ್ಕೆ ಒಣಗುತ್ತಿರುವಂತೆ ಭಾಸವಾಗುತ್ತಿದೆ.
ಹಳೆಯ ಮಾತು ಈಗ ನೆನಪಾಗಿದ್ದಕ್ಕೆ ಕಾರಣವಿದೆ. ಇಂದು ಪ್ರತೀ ವರ್ಷ ಒಂದಲ್ಲಾ ಒಂದು ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯುತ್ತಿರುತ್ತವೆ. ಇತ್ತೀಚಿನ ಕೆಲ ವರ್ಷಗಳಲ್ಲಿ ನಡೆದ ಶೇ. 90ರಷ್ಟು ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲನ್ನನುಭವಿಸಿದೆ. ಉತ್ತರ ಪ್ರದೇಶದ ಸೋಲು ಅದನ್ನು ಇನ್ನಿಲ್ಲದಂತೆ ಕಂಗೆಡಿಸಿದೆ. ಜತೆಗೆ ಖಾಸಗೀ ಸಂಸ್ಥೆಗಳು ನಡೆಸುವ ಸಮೀಕ್ಷೆಗಳೂ ಅದನ್ನು ಅದುರುವಂತೆ ಮಾಡುತ್ತಿದೆ. ಮುಂಬರುವ ಗುಜರಾತ್ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಗಳೆರಡೂ ಕಾಂಗ್ರೆಸಿನ ಮಾಡು ಇಲ್ಲವೇ ಮಡಿ ಕದನದಂತಿದೆ. ಏಕೆಂದರೆ ನರೇಂದ್ರಮೋದಿಯನ್ನು ಇನ್ನಿಲ್ಲದಂತೆ ಟೀಕಿಸುತ್ತಾ ಬಂದ ಕಾಂಗ್ರೆಸಿಗೆ ಗುಜರಾತಿನಲ್ಲಿ ಬಿಜೆಪಿಯ ಸೋಲು ನೇರ ನರೇಂದ್ರ ಮೋದಿಯವರ ಸೋಲು ಎಂದುಕೊಳ್ಳುವುದು, ಪ್ರಧಾನ ಮಂತ್ರಿಗಳ ರಾಜಿನಾಮೆಯನ್ನು ಕೇಳುವುದು.
ಇನ್ನೊಂದು ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ದೊಡ್ಡ ಮತ್ತು ಕೇಂದ್ರ ಕಾಂಗ್ರೆಸಿಗೆ ಲಾಭದಾಯಕವಾದ ರಾಜ್ಯ ಕರ್ನಾಟಕವೊಂದೇ. ಅದನ್ನು ಏನಕೇನ ಉಳಿಸಿಕೊಳ್ಳಬೇಕು ಎಂಬ ಧಾವಂತ. ಕರ್ನಾಟಕ ಮತ್ತು ಗುಜರಾತಿನಲ್ಲಿ ಬಿಜೆಪಿಯನ್ನು ಸೋಲಿಸಿ 2018ಕ್ಕೆ ನಡೆಯುವ ಏಳು ರಾಜ್ಯಗಳ, 2019ಕ್ಕೆ ನಡೆಯುವ 10 ರಾಜ್ಯಗಳ, 2020 ನಡೆಯುವ 3 ರಾಜ್ಯಗಳ, 2021ಕ್ಕೆ ನಡೆಯುವ 1 ರಾಜ್ಯ ಹಾಗೂ 2019ರ ಲೋಕಸಭಾ ಚುನಾವಣೆಗಳನ್ನು ಗೆದ್ದು ಕಣ ಗಟ್ಟಿ ಮಾಡಿಕೊಳ್ಳಬೇಕು. ಮೋದಿ-ಅಮಿತ್ ಷಾರವರ ಕಾಂಗ್ರೆಸ್ ಮುಕ್ತ ಭಾರತ ಯೋಜನೆ ಈಗಾಗಲೇ ಯಶಸ್ವಿಯಾಗಿ ಕಾಂಗ್ರೆಸಿಗೆ ದೇಶದಿಂದಲೂ ಮತ್ತು ವಿದೇಶದಿಂದಲೂ ಹರಿದುಬರುತ್ತಿದ್ದ ಸಂಪನ್ಮೂಲದ ಬಾಗಿಲು ಮುಚ್ಚಿಹೋಗಿದೆ. ಕಾರ್ಪೊರೇಟ್ ದಿಗ್ಗಜರು ಕಾಂಗ್ರೆಸನ್ನು ತ್ಯಜಿಸಿ ವರ್ಷಗಳಾಗಿವೆ. ಹಾಗಾಗಿ ಕಾಂಗ್ರೆಸಿನಲ್ಲೊಬ್ಬರು ಯಾತ್ರೆ ಹೊರಟಿದ್ದಾರೆ. ಗುಂಡುಕಲ್ಲನ್ನು ಹೊತ್ತು ಮಾಡುವ ಯಾತ್ರೆ ಎಂದಾದರೂ ಯಶಸ್ವಿಯಾಗಲು ಸಾಧ್ಯವೇ?
ಕಾಂಗ್ರೆಸಿಗೆ ತನ್ನ ಈ ಪರಿಯ ಸೋಲಿಗೆ ಅಸಲಿ ಕಾರಣ ಸ್ಪಷ್ಟವಾಗಿಲ್ಲದೇ ಇಲ್ಲ. ರಾಹುಲ್ ಗಾಂಧಿ! ಸಂಸತ್ತಿನಲ್ಲಿ 44 ಸದಸ್ಯಬಲಕ್ಕೆ ಕುಸಿದು, ನರೇಂದ್ರ ಮೋದಿ ಪ್ರಧಾನಿಯಾದ ನಂತರ ಕಾಂಗ್ರೆಸ್ ವರ್ತಿಸಿದ ರೀತಿ, ಅದರ ಉಪಾಧ್ಯಕ್ಷರಾಗಿ ರಾಹುಲ್ ಗಾಂಧಿ ಆಯ್ಕೆ ಮಾಡಿಕೊಂಡ ಸಂಗತಿಗಳು ಕೂಡ ಕಾಂಗ್ರೆಸ್ ಅವನತಿಗೆ ಕೊಡುಗೆ ಕೊಟ್ಟಿವೆ. ರಾಹುಲ್ ಗಾಂಧಿ ಹೆಚ್ಚು ಕಡಿಮೆ ಎಡಪಕ್ಷಗಳ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಜೆನ್‌ಯು ವಿವಾದ, ರೋಹುತ್ ವೇಮುಲ ಆತ್ಮಹತ್ಯೆ, ‘ಭಾರತ್ ಮಾತಾಕಿ ಜೈ’ ವಿವಾದ ಎಲ್ಲದರಲ್ಲೂ ರಾಹುಲ್ ಗಾಂಧಿ ಚುರುಕಾಗಿ ಭಾಗವಹಿಸಿದ್ದರು. ರಾಜ್ಯಸಭೆಯಲ್ಲಂತೂ ಸರಕಾರದ ಒಂದು ಮಸೂದೆಯೂ ಪಾಸಾಗದಂತೆ ಮಾಡಲು ಹರ ಸಾಹಸ ಮಾಡಿದರು. ಅನಗತ್ಯವಾಗಿ ಗದ್ದಲ ಎಬ್ಬಿಸಿ ಅಧಿವೇಶನಕ್ಕೆ ಅಡ್ಡಿ ಮಾಡಿದರು. ಈ ಎಲ್ಲ ರಣನೀತಿಗಳೂ ಕಾಂಗ್ರೆಸ್‌ಗೆ ಮಾರಕವಾಗಿ ಪರಿಣಮಿಸಿರುವುದು ಚುನಾವಣೆ ಫಲಿತಾಂಶದಿಂದ ಸಾಭೀತಾಗಿದೆ. ಯಾಕಂದರೆ ಜನ ರಾಹುಲ್ ಗಾಂಧಿಗಿಂತ ಬುದ್ಧಿವಂತರು!
ಮೋದಿ ಪ್ರಧಾನಿ ಆಭ್ಯರ್ಥಿಯಾಗುವುದಕ್ಕಿಂತ ಮೊದಲೇ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಕಾಂಗ್ರೆಸ್ ಹೇಳುತ್ತಿತ್ತು. ಅಲ್ಲಿಂದಲೇ ಅವರ ಅವನತಿ ಆರಂಭವಾಯಿತು. ಕಾಂಗ್ರೆಸ್ ಸೋತಲ್ಲೆಲ್ಲಾ ರಾಹುಲ್ ಗಾಂಧಿ ಪ್ರಚಾರಕ್ಕೆ ತೆರಳಿದ್ದರು ಎಂಬುದು ಗಮನಾರ್ಹ. ವಿಚಿತ್ರವೆಂದರೆ ಬಿಹಾರದ ಚುನಾವಣೆ ಪ್ರಚಾರದಿಂದ ರಾಹುಲ್ ಗಾಂಧಿಯನ್ನು ದೂರವೇ ಇಡಲಾಗಿತ್ತು. ಆರ್‌ಜೆಡಿ ನಾಯಕ ಲಾಲೂಪ್ರಸಾದ್ ಯಾದವ್ ಇದನ್ನು ಬಹಿರಂಗವಾಗಿಯೇ ಹೇಳಿದ್ದರು. ಅಲ್ಲಿ ಕಾಂಗ್ರೆಸ್ ಫಲಿತಾಂಶ ಪರವಾಗಿಲ್ಲ. ಹೀಗಿದ್ದ ಕಾಂಗ್ರೆಸ್ ಇಂದು ಧೂಳಿಪಟ ಆಗುವುದಕ್ಕೆ ಕಾರಣ ಅವರ ನೂತನ ನಾಯಕ ರಾಹುಲ್ ಗಾಂಧಿಯೇ ಹೊರತು ಇನ್ಯಾರೂ ಅಲ್ಲ. ಇತಿಹಾಸದಿಂದ ಒಂದು ಚೂರೂ ಬುದ್ಧಿ ಕಲಿಯದ ಕಾಂಗ್ರೆಸ್, ಎಲ್ಲೋ ಆಟವಾಡಿಕೊಂಡಿದ್ದ ರಾಹುಲ್ ಗಾಂಧಿಯನ್ನು ತಂದು ಇವರೇ ಮುಂದಿನ ಯುವರಾಜ ಎಂದರೆ, ಜನ ಒಪ್ಪಿಕೊಳ್ಳುವುದಾದರೂ ಹೇಗೆ? ಯುವರಾಜನಾಗಲು ಗಾಂಧಿ ಕುಟುಂಬದಲ್ಲಿ ಹುಟ್ಟಿದವ ಎಂಬ ಒಂದು ಅರ್ಹತೆ ಸಾಕೇ? ಪ್ರಧಾನಿ ಅಭ್ಯರ್ಥಿಯಾದವರ ಬಳಿ ದೇಶವನ್ನಾಳುವ ಅರ್ಹತೆ ಬಿಡಿ ದೇಶದ ಜನರನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಾದರೂ ಇರಬೇಡವೇ?
ಭಾರತದಲ್ಲಿ ಬುದ್ಧಿವಂತ ವಿದ್ಯಾರ್ಥಿಗಳಿಂದ ನಗೆಪಾಟಲಿಗೀಡಾಗುವ ವ್ಯಕ್ತಿ ಇದೀಗ ವಿದೇಶ ತಿರುಗುತ್ತಿದ್ದಾರೆ! ಕಳೆದ ವಾರ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಭಾರತದಲ್ಲಿ ವಂಶಾಡಳಿತ ಎಲ್ಲಾ ಕಾಲದಲ್ಲೂ ಇರುವಂಥದ್ದೇ ಎಂದು ವಿದೇಶದಲ್ಲಿ ಮಾನ ಕಳೆದು, ಭಾರತದಲ್ಲಿ ನಗೆಪಾಟಲಾದ ವ್ಯಕ್ತಿದೇಶವನ್ನಾಳಬೇಕು ಎಂದು ಅಪೇಕ್ಷಿಸುವುದು ತಪ್ಪಲ್ಲವೇ? ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ, ಅವರು ಸಾಕಷ್ಟು ಕಡೆ ತಿರುಗಿ ಜನರನ್ನು ಸಂಘಟಿಸಿದರು. ಹೋದ ಕಡೆ ಭಾಷಣ ಮಾಡುವಾಗ ಕಾಂಗ್ರೆಸ್ ಬಗ್ಗೆ ಇಲ್ಲ ಸಲ್ಲದ್ದು ಹೇಳಲಿಲ್ಲ. ಅವರ ಮಾತಲ್ಲಿ ದೇಶ, ಅಭಿವೃದ್ಧಿ ಕುರಿತ ಹೊಸ ಐಡಿಯಾಗಳಿದ್ದವು. ಜನರನ್ನು ಹುರಿದುಂಬಿಸುವ ಮಾತುಗಳಿದ್ದವು. ಭವಿಷ್ಯದ ಬಗ್ಗೆ ಕನಸುಗಳಿದ್ದವು. ಆದರೆ ರಾಹುಲ್ ಗಾಂಧಿ ಮೋದಿ ಬಗ್ಗೆ ಪ್ರತಿ ಬಾರಿ ಮಾತಾಡುವಾಗಲೂ ಟೀಕಿಸುತ್ತಿದ್ದರು. ರಾಹುಲ್ ಗಾಂಧಿಯವರ ನಾರ್ವೆ ಮತ್ತು ಅಮೆರಿಕಾ ಪ್ರವಾಸದಲ್ಲಿ ಅವರು ಮಾತಾಡಿದ ರೀತಿಯನ್ನೇ ಗಮನಿಸಿ. ವಂಶಾಡಳಿತದ ಮಾತಾಡಿದ ನೆನಪು ಜನರಲ್ಲಿ ಮಾಸುವ ಮುನ್ನವೇ ಟೈಮ್ಸ್ ಸ್ಕ್ವಯರಿನಲ್ಲಿ ಅನಿವಾಸಿಗಳನ್ನುದ್ದೇಶಿಸಿ ಮಾತಾಡಿದರು.
ಮಾತಾಡುತ್ತಾ ಆಡುತ್ತಾ ದೇಶದ ಮಾಹಾಪುರುಷರನ್ನೆಲ್ಲಾ ಅನಿವಾಸಿಗಳೆಂದುಬಿಟ್ಟರು. ನಿಜಕ್ಕೂ ಅವರಿಗೆ ನಿವಾಸಿಗೂ, ಅನಿವಾಸಿಗೂ ವ್ಯತ್ಯಾಸ ತಿಳಿದಿಲ್ಲವೇ ಎಂಬ ಸಂಶಯ ಬರುತ್ತದೆ. ಆದರೆ ಮೋದಿಯವರು ವಿಶ್ವದ ಎಲ್ಲೇ ಹೋಗಲಿ ಅನಿವಾಸಿಗಳಿಗೆ ದೇಶವನ್ನು ವಿವರಿಸುತ್ತಾರೆ. ಯಾವ ಕಾರಣದಿಂದಲೋ ದೇಶದ ಬಗ್ಗೆ ವ್ಯತಿರಿಕ್ತ ಭಾವನೆಗಳನ್ನು ಬೆಳೆಸಿಕೊಂಡು ತಾಯಿಬೇರಿನಿಂದ ದೂರವಿದ್ದವರನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಾರೆ. ಅನಿವಾಸಿಗಳು ಅವರ ಮಾತಿಗೆ ಕಾಯುತ್ತಾರೆ ಮತ್ತು ಸಮ್ಮೋಹನಕ್ಕೊಳಗಾದವರಂತೆ ಮಾತು ಕೇಳುತ್ತಾರೆ. ಆದರೆ ರಾಹುಲ್ ಗಾಂಧಿಯವರ ಮಾತು ಅನಿವಾಸಿಗಳಿಗೆ ಮಾತ್ರವಲ್ಲ, ಸ್ವತಃ ಅವರ ಪಕ್ಷದ ನಾಯಕರಿಗೂ ಅರ್ಥವಾಗಿರುವುದಿಲ್ಲ. ಪ್ರತಿ ಬಾರಿ ರಾಹುಲ್ ಬಿಜೆಪಿ ವಿರುದ್ಧ ಭಾಷಣ ಮಾಡಿದಾಗಲೂ ಏನಾದರೊಂದು ಎಡವಟ್ಟು ಮಾಡಿಕೊಂಡು, ಅದು ಭಾಷಣಕ್ಕಿಂತ ‘ಕಾಮಿಡಿ ವಿತ್ ರಾಹುಲ್ ಗಾಂಧಿ’ ಥರ ಆಗುತ್ತಿತ್ತು. ವಿದೇಶಿ ವಿವಿಗಳಲ್ಲಿ ಮಾತಾಡಲು ಪಕ್ವತೆ ಬೇಕು. ಅದು ಅನುಭವ ಮತ್ತು ಅಧ್ಯಯನಗಳಿಂದ ಹುಟ್ಟಬೇಕು. ಇವೆರಡರಲ್ಲಿ ಯಾವುದು ರಾಹುಲ್ ಗಾಂಧಿಗಿದೆ? ಮಾತಾಡುವ ಕಲೆ ಇದೆಯಾ? ಸಂಘಟನಾ ಚಾತುರ್ಯ ಇದೆಯಾ? ಚೀಟಿಯಲ್ಲಿ ಬರೆದುಕೊಟ್ಟಂತೆ ಓದುತ್ತಾರೆ.
ಸಂಜೆಯೇ ಆಗಿದ್ದರೂ ಚೀಟಿಯಲ್ಲಿ ಇದ್ದಂತೆ ಮಾರ್ನಿಂಗ್ ಎಂದೇ ಓದುತ್ತಾರೆ. ಬರೆದುಕೊಳ್ಳದೆ ಪಕ್ಷದವರ ಹೆಸರನ್ನೂ ಹೇಳಲಾರರು. ಇನ್ನು ಎಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದಾದರೂ ತಿಳಿದಿದೆಯಾ? ಅದೂ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಗೆದ್ದಾಗ ಅದರ ಬಗ್ಗೆ ಸೋನಿಯಾ ಗಾಂಧಿ ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದರು. ಅವರ ಹಿಂದೆಯೇ ನಿಂತಿದ್ದ ರಾಹುಲ್ ಬಹಳ ಖುಷಿಯಾದವರಂತೆ ಹಲ್ಲು ಗಿಂಜುತ್ತಿದ್ದರು. ಆ ವೀಡಿಯೋ ಮತ್ತು ಫೋಟೋ ಟ್ವಿಟ್ಟರ್‌ನಲ್ಲಿ ಬಹಳ ಹರಿದಾಡಿತ್ತು. ಈಗ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ರಾಹುಲ್ ಮಾತಾಡಿದ ಭಾಷಣ ಕೂಡಾ ಸ್ಮೈಲಿ ಜತೆಗೆ ಹರಿದಾಡುತ್ತಿದೆ. ಇಂಥ ರಾಹುಲ್‌ಗೆ ಪಕ್ಷ ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಅದಕ್ಕೆ ಕಾಂಗ್ರೆಸ್ ಪೂರ್ತಿ ರಾಹುಲ್ ತಲೆಗೇ ಕಟ್ಟುತ್ತಿದೆ. ಸೋಲನ್ನು ಮಾತ್ರ ರಾಹುಲ್‌ಗೆ ನೀಡುತ್ತಿಲ್ಲ. ಕೇರಳದಲ್ಲಿ ಮತ್ತು ಅಸ್ಸಾಮ್‌ನಲ್ಲಿ ಸೋತ ಕಾಂಗ್ರೆಸ್ ‘ಈ ಸೋಲನ್ನು ರಾಹುಲ್ ಗಾಂಧಿ ಮೇಲೆ ಹಾಕುವುದು ಸರಿ ಅಲ್ಲ’ ಎಂದು ಈಗಾಗಲೇ ಮಾತುಗಳು ಆರಂಭವಾಗಿವೆ.ಇನ್ನು ಎಷ್ಟು ದಿನ ರಾಹುಲ್‌ರನ್ನು ಬಚಾವ್ ಮಾಡಲು ಸಾಧ್ಯ? ಇತ್ತ ಚುನಾವಣೆಯಲ್ಲೂ ಸಲ್ಲದವರು ಅತ್ತ ವಿದೇಶದಲ್ಲಾದರೂ ಸಲ್ಲುತ್ತಾರೆ ಎಂದು ಊಹಿಸುವುದು ಕಷ್ಟ. ಈಗ ರಾಹುಲ್ ತಮ್ಮ ಪಕ್ಷವನ್ನು ಅಧೋಗತಿಗೆ ಇಳಿಸಿರುವುದನ್ನು ನೋಡಿದರೆ ಕಾಂಗ್ರೆಸ್ ಮುಕ್ತ ಭಾರತ ಆಗುವುದರಲ್ಲಿ ಅನುಮಾನವೇ ಇಲ್ಲ. ಕಾಂಗ್ರೆಸ್ ಮುಕ್ತ ಭಾರತಕ್ಕೆ ಮೋದಿಯೇ ಇಳಿದು ಬರಬೇಕಿಲ್ಲ. ರಾಹುಲ್ ಗಾಂಧಿ ಒಬ್ಬರೇ ಅದಕ್ಕೆ ಈಗಾಗಲೇ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮುಂದೆಯೂ ಕೊಡಲಿದ್ದಾರೆ ಎಂಬ ನಂಬಿಕೆ ನಮಗಿದೆ. ಅವರು ಮತ್ತಷ್ಟು ವಿಶ್ವವಿದ್ಯಾಲಯಗಳಿಗೆ ಹೋಗುತ್ತಿರಲಿ, ಭಾಷಣ ಮಾಡುತ್ತಿರಲಿ. ಅಷ್ಟೇ ಸಾಕು.
Published on September 23, 2017 03:47
September 21, 2017
September 19, 2017
September 16, 2017
ಒಂದೇ ಒಂದು ಗುಂಡು ಹಾರಿಸದೆ ಯುದ್ಧ ಗೆದ್ದ ಮೋದಿ
ಒಂದೇ ಒಂದು ಗುಂಡು ಹಾರಿಸದೆ ಯುದ್ಧ ಗೆದ್ದ ಮೋದಿ
ತಿಂಗಳುಗಟ್ಟಲೇ ಡೊಕಾ ಲಾ ನಲ್ಲಿ ಕಣ್ಣೆವೆ ಮುಚ್ಚದೆ ಮುಖಾಮುಖಿಯಾಗಿ, ಇನ್ನೇನು ಸ್ಫೋಟಿಸಿಯೇ ಬಿಡುತ್ತದೆಂಬಂತೆ ಸೃಷ್ಟಿಯಾಗಿದ್ದ ವಾತಾವರಣ ಈಗ ಮಂಜಿನಂತೆ ಕರಗಿದೆ. ಉಭಯ ದೇಶಗಳಷ್ಟೇ ಅಲ್ಲದೆ ವಿಶ್ವದ ಬಲಾಢ್ಯ ದೇಶಗಳಲ್ಲೂ ಬಿಗುವನ್ನು ಉಂಟುಮಾಡಿದ್ದ ಬಿಕ್ಕಟ್ಟು ಇಷ್ಟು ಸರಳವಾಗಿ ಪರಿಹಾರವಾಗಿದ್ದು ಹೇಗೆ? ಒಂದೇ ಒಂದು ಗುಂಡು ಹಾರದೆ ವಿಸ್ತರಣಾವಾದಿ ಮಾನಸಿಕತೆ ಹಿಂದಕ್ಕೆ ತೆರಳಲು ಕಾರಣರಾದವರು ಯಾರು? ಬೆಟ್ಟದಂಥ ವಿಪತ್ತು ಕಡ್ಡಿಯಂತೆ ಸುಲಲಿತಗೊಳಿಸಿದ್ದರ ಹಿಂದಿನ ರಣತಂತ್ರವಾದರೂ ಏನು?
ಡೊಕಾ ಲಾ ಬಿಕ್ಕಟ್ಟು ಮುಗಿದಾಗ ದೇಶದೆಲ್ಲೆಡೆ ಎದ್ದ ಪ್ರಶ್ನೆ ಇದು.
ಡೊಕಾ ಲಾ ಪ್ರಕರಣದ ಉತ್ತರ ರಂಗವನ್ನು ಗಮನಿಸೋಣ. ಗಡಿಯಲ್ಲಿ ಎರಡೂ ದೇಶಗಳು ಸೇನೆ ವಾಪಾಸು ಕರೆಸಿಕೊಂಡ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಚೀನಾದ ಕ್ಸಿಯಾಮೆನ್‌ನಲ್ಲಿ ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸಲು ಹೊರಟುಹೋದರು. ಇತ್ತ ನಾವೆಲ್ಲರೂ ಡೊಕಾ ಲಾ ಸುಖಾಂತ್ಯವಾಯಿತು ಎಂದುಕೊಳ್ಳುತ್ತಿದ್ದರೆ ಮೋದಿಯವರಿಗೆ ಅದಿನ್ನೂ ಸಂಪೂರ್ಣ ಮುಗಿದಿಲ್ಲ ಎಂಬುದು ಗೊತ್ತಿತ್ತು. ಏಕೆಂದರೆ ಚೀನಾ ಸುಲಭಕ್ಕೆ ಬಗ್ಗುವ ಆಸಾಮಿಯಲ್ಲ ಎಂಬುದು ಅದರ ಪೂರ್ವಾಪರವನ್ನು ಅರಿತವರಿಗೆ ಸ್ಪಷ್ಟ. ಯಾವತ್ತೂ ವಿಸ್ತರಣಾವಾದದ ಮಾನಸಿಕತೆ ಅಷ್ಟೊಂದು ಸುಲಭಕ್ಕೆ ಮಣಿಯುವುದಿಲ್ಲ. ಎಲ್ಲೆಲ್ಲಿ ಭಾರತವನ್ನು ದುರ್ಬಲಗೊಳಿಸಬಲ್ಲದೋ ಆ ಎಲ್ಲಾ ರಂಧ್ರಗಳನ್ನು ಚೀನಾ ಹುಡುಕುತ್ತದೆ. ಡೊಕಾ ಲಾನಲ್ಲಿ ಸೇನೆ ವಾಪಾಸು ಕರೆಸಿಕೊಂಡ ಚೀನಾ ಇನ್ನೇನು ಬ್ರಿಕ್ಸ್ ಆರಂಭವಾಗಬೇಕು ಎನ್ನುವಾಗ ಸಮ್ಮೇಳನದಲ್ಲಿ ಭಯೋತ್ಪಾದನೆಯ ಬಗ್ಗೆ ಚರ್ಚೆ ಬೇಡ ಎಂದು ಹೇಳಿಕೆ ಕೊಟ್ಟಿತು.
ಹೊರನೋಟಕ್ಕೆ ಈ ಹೇಳಿಕೆಗೂ ಮತ್ತು ಡೊಕಾ ಲಾ ಪ್ರಕರಣಕ್ಕೂ ಏನೇನೂ ಸಂಬಂಧವಿರದಂತೆ ಕಂಡರೂ ಚೀನಾದ ತಂತ್ರಗಾರಿಕೆಯಂತೂ ಇದ್ದೇ ಇತ್ತು. ಅಂದರೆ ಚೀನಾ ತನ್ನ ಎದುರಾಳಿಗಳನ್ನು ಮಣಿಸುವುದೇ ಇಂಥ ತಂತ್ರಗಳ ಮೂಲಕ. ಬ್ರಿಕ್ಸ್‌ನಲ್ಲಿ ಭಯೋತ್ಪಾದನೆಯ ಪ್ರಸ್ತಾಪ ಕೂಡ ಅದರ ಒಂದು ಭಾಗ. ಭಯೋತ್ಪಾದನೆಯ ಪ್ರಸ್ತಾಪ ಮತ್ತು ಚರ್ಚೆ ಕೂಡದು ಎಂದರೆ ತನ್ನ ಮತ್ತು ಪಾಕಿಸ್ತಾನದ ಗೆಳೆತನ ಎಂದೆಂದಿಗೂ ಗಟ್ಟಿಯಾಗಿ ಇರಲಿದೆ ಎಂದು ಪರೋಕ್ಷವಾಗಿ ಭಾರತವನ್ನು ಎಚ್ಚರಿಸಿದಂತೆ ಎಂಬುದು ಭಾರತ ಸರ್ಕಾರಕ್ಕೆ ಚೆನ್ನಾಗಿ ತಿಳಿದಿತ್ತು. ಹಾಗಾಗಿ ಬ್ರಿಕ್ಸ್ ಸಮ್ಮೇಳನದಲ್ಲಿ ಮೋದಿಯವರು ಬ್ರಿಕ್ಸ್ ಮುಖಂಡರ ಎದುರು ನೇರವಾಗಿ ಎಲ್ಲಾ ಬಗೆಯ ಉಗ್ರವಾದ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ಖಂಡಿಸಿ ಘೋಷಣಾ ಪತ್ರವನ್ನು ಬಿಡುಗಡೆ ಮಾಡಿದರು.
ಅದನ್ನು ಕೆಲವು ವಿಶ್ಲೇಷಕರು ಡೊಕಾ ಲಾ ನಂತರ ಭಾರತಕ್ಕೆ ಎರಡನೆ ಗೆಲುವು ಎಂದು ಬಣ್ಣಿಸಿದರು. ಆದರೆ ನಿಜಕ್ಕೂ ಅದು ಡೊಕಾ ಲಾ ನಡೆಯ ಮುಂದುವರಿದ ಭಾಗ ಮತ್ತು ಆದರದ್ದೇ ಗೆಲುವು! ಏಕೆಂದರೆ ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವುದು, ಒಪ್ಪಂದಗಳನ್ನು ಮುರಿಯುವುದು ಮತ್ತು ಮಾತುಕತೆಗಳನ್ನು ಮೀರಿ ಸರ್ಕಾರ ನಡೆದುಕೊಳ್ಳುವುದನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಅದು ಅದರ ಸಾಮಾನ್ಯವಾದ ಅಭ್ಯಾಾಸ. ಚೀನಾವನ್ನು ನೇರಾ ನೇರಾ ಎದುರಿಸುವುದೊಂದೇ ಉತ್ತರ ಮತ್ತು ಪರಿಹಾರ ಎಂದು ಅದರ ಮಾನಸಿಕತೆಯನ್ನೂ, ಅಲ್ಲಿನ ಕಮ್ಯುನಿಸಮ್ಮನ್ನೂ ಅರ್ಥ ಮಾಡಿಕೊಂಡವರು ನರೇಂದ್ರ ಮೋದಿ. ಇದೂ ಕೂಡಾ ಒಂದು ಪ್ರಬುದ್ಧ ನಡೆ. ಅಷ್ಟೇ ಅಲ್ಲ ಚೀನಾದ ನೆಲದಲ್ಲಿ ಚೀನಾ ಅಧ್ಯಕ್ಷ ಕ್ಸಿಜಿನ್ ಪಿಂಗ್ ಅವರೊಡನೆ ಮಾತುಕತೆ ನಡೆಸಿದ್ದು ಕೂಡಾ ಭಾರತದ ಶಕ್ತಿ ಪ್ರದರ್ಶನದ ಒಂದು ಭಾಗವೇ.
ಬ್ರಿಕ್ಸ್ ಮುಗಿದ ಕೆಲವೇ ದಿನಗಳಲ್ಲಿ ಚೀನಾದ ಪರಮ ಶತ್ರು ಜಪಾನ್ ಪ್ರಧಾನಿ ಶಿಂಜೋ ಅಬೆ ಭಾರತಕ್ಕೆ ನೀಡಿದ ಭೇಟಿಯಿಂದ ಚೀನಾಕ್ಕೆ ಹಸಿ ಮೆಣಸನ್ನು ಅರೆದು ಕುಡಿದಂತಾಗಿರುವುದು ಸುಳ್ಳಲ್ಲ. ಜಪಾನಿನ ಬುಲ್ಲೆಟ್ ರೈಲಿಗಿಂತ ಉತ್ತಮ ಗುಣಮಟ್ಟದ ರೈಲುಗಳನ್ನು ನಾವು ತಯಾರಿಸುತ್ತೇವೆಂದುಕೊಳ್ಳುವ ಚೀನಾ ಗುಜರಾತಿನಲ್ಲಿ ನಡೆದ ಬುಲ್ಲೆಟ್ ಶಿಲಾನ್ಯಾಸದಿಂದ ಕಂಪಿಸುತ್ತಿದೆ. ಚೀನಾಕ್ಕೆ ಇಂಥ ನೇರಾ ನೇರಾ ಸವಾಲನ್ನು ಈ ಮೊದಲು ಯಾವ ದೇಶವೂ ಹಾಕಿರಲಿಲ್ಲ. ಶೀತಲ ಸಮರದ ಕಾಲದಲ್ಲೂ ಚೀನಾ ಇಂಥ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ. ಚೀನಾಕ್ಕೀಗ ತನ್ನ ಸುತ್ತಲೂ ಇರುವ ಅನೇಕ ಶತ್ರುದೇಶಗಳ ನಾಯಕನಂತೆ ಭಾರತ ನಿಂತಿರುವಂತೆ ಗೋಚರಿಸುತ್ತಿದೆ. ಏಕೆಂದರೆ ಭಾರತದ ಸುಲಭಕ್ಕೆ ಅರ್ಥವಾಗದ ನಡೆಗಳು. 50 ವರ್ಷಗಳ ಹಿಂದೆ ಚೀನಾ ಭಾರತ ಎಂದರೆ ಹೀಗೀಗೆ ಎಂದು ಯಾವುದನ್ನು ಅಂದುಕೊಂಡಿತ್ತೋ ಅವೆಲ್ಲವನ್ನೂ ಒಂದೇ ಏಟಿಗೆ ಬದಲಿಸಿಕೊಳ್ಳಬೇಕಾದ ಒತ್ತಡದಲ್ಲಿದೆ. ಅಂದರೆ ಅಂತಾರಾಷ್ಟ್ರೀಯ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡ ಭಾರತದ ನಡೆ ನಿಜಕ್ಕೂ ಅದಕ್ಕೆ ಆಘಾತ ಸೃಷ್ಟಿಸಿದೆ. ಭಾರತದಲ್ಲಿ ತನ್ನ ಬುಲ್ಲೆಟ್ ರೈಲನ್ನು ನಿರ್ಮಿಸಲು ತುದಿಗಾಲಲ್ಲಿ ನಿಂತಿದ್ದ ಚೀನಾಕ್ಕೆ ಇದು ಮಾರಣಾಂತಿಕ ಹೊಡೆತ. ಭಾರತ ತನ್ನ ಹಳೆಯ ವಿಳಂಬ ನೀತಿ, ಸಮಸ್ಯೆಯ ಮೂಲವನ್ನು ಅರಿಯಲು ಎಡವಿ ಮಾಡಿಕೊಂಡ ಎಡವಟ್ಟುಗಳು ದೇಶದಲ್ಲಿ ಸಮಸ್ಯೆಗಳನ್ನು ಬಿಡಿಸಲಾರದ ಸಿಕ್ಕುಗಳಂತೆ ಮಾಡಿರುವುದನ್ನು ನಾವು ಹಿಂದೆ ಕಂಡಿದ್ದೇವೆ.
ಕೆಲವು ಉದಾಹರಣೆಗಳನ್ನೇ ನೋಡಿ.
1947 ರ ಸೆಪ್ಟೆಂಬರ್ 19ರಂದು ಜಮ್ಮು-ಕಾಶ್ಮೀರದ ಮಹಾರಾಜ ಹರಿಸಿಂಗ್ ತನ್ನ ಸಂಸ್ಥಾನವನ್ನು ಭಾರತದೊಂದಿಗೆ ವಿಲೀನಗೊಳಿಸುವ ಪ್ರಸ್ತಾಪವನ್ನು ಭಾರತ ಸರ್ಕಾರದ ಮುಂದಿಟ್ಟರು. ಆದರೆ ನೆಹರೂ ಒಪ್ಪಲಿಲ್ಲ. ಏಕೆಂದರೆ ನೆಹರೂಗೆ ಜಮ್ಮು ಮತ್ತು ಕಾಶ್ಮೀರದ ಮಹತ್ವ ತಿಳಿದಿರಲಿಲ್ಲ. ಆಶ್ಚರ್ಯವೆಂದರೆ ಜಮ್ಮು ಮತ್ತು ಕಾಶ್ಮೀರದ ಮಹತ್ವ ನೆಹರೂಗಿಂತ ಚೆನ್ನಾಗಿ ಪಾಕಿಸ್ತಾನಕ್ಕೆ ತಿಳಿದಿತ್ತು. ಇದಾದ ಐದೇ ವಾರಗಳಲ್ಲಿ ಕಾಶ್ಮೀರದ ಮೇಲೆ ಪಾಕಿಸ್ತಾನ ಆಕ್ರಮಣ ಮಾಡಿತು. ಹರಿಸಿಂಗ್ ಮತ್ತೆ ಭಾರತಕ್ಕೆ ಆಹ್ವಾನ ನೀಡಿದರು. ಆಗ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸಲು ನೆಹರೂ ಸಮ್ಮತಿಸಿದರು. ಆದರೆ ಕಾಲ ಮಿಂಚಿಹೋಗಿತ್ತು. ವಿಲೀನ ಪ್ರಕ್ರಿಯೆಗಿಂತ ಮೊದಲು ಪಾಕ್ ಸೇನೆಯನ್ನು ಕಾಶ್ಮೀರದಿಂದ ಹೊರದಬ್ಬಬೇಕಿತ್ತು. ಒಂದು ವೇಳೆ ಹರಿಸಿಂಗ್ ಮೊದಲ ಬಾರಿಗೆ ಪ್ರಸ್ತಾಪ ಮುಂದಿಟ್ಟಿದ್ದಾಗಲೇ ವಿಲೀನಕ್ಕೆ ಮುಂದಾಗಿದ್ದರೆ ಸಂಪೂರ್ಣ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿರುತ್ತಿತ್ತು.
ವಿಲೀನದ ನಂತರ ಆಕ್ರಮಣ ಮಾಡುವ ಧೈರ್ಯವನ್ನು ಪಾಕ್ ಖಂಡಿತಾ ತೋರುತ್ತಿರಲಿಲ್ಲ. ಏಕೆಂದರೆ ಧರ್ಮದ ಆಧಾರದ ಮೇಲೆ ದೇಶದ ಜತೆಗೆ ಸೇನೆಯನ್ನೂ ವಿಭಜನೆ ಮಾಡಲಾಗಿತ್ತು. ಹಾಗಾಗಿ ಭಾರತೀಯ ಸೇನೆ, ಸಂಖ್ಯೆ ಮತ್ತು ಸಾಮರ್ಥ್ಯದ ದೃಷ್ಟಿಯಿಂದ ಬಲಿಷ್ಠವಾಗಿತ್ತು. ಇಂತಹ ಸೇನೆಯನ್ನು ಎದುರಿಸುವ ಎದೆಗಾರಿಕೆಯನ್ನು ಪಾಕ್ ಖಂಡಿತಾ ತೋರುತ್ತಿರಲಿಲ್ಲ. ಎದೆಗಾರಿಕೆಯ ಕೊರತೆ ದೇಶವನ್ನು ಇಂದಿಗೂ ಯಾವ ಸ್ಥಿತಿಯಲ್ಲಿಟ್ಟಿದೆ ಎಂಬುದನ್ನು ನಾವು ಇಂದಿಗೂ ಅನುಭವಿಸುತ್ತಿದ್ದೇವೆ.
ನೆಹರೂ ಮುಂದೆ ಕೂಡಾ ಎದೆಗಾರಿಕೆಯನ್ನು ಬೆಳೆಸಿಕೊಳ್ಳಲಿಲ್ಲ. ತಪ್ಪನ್ನು ತಿದ್ದಿಕೊಳ್ಳಲಿಲ್ಲ. ಸ್ವತಂತ್ರ ಭಾರತದ ಮೊದಲ ಮಹಾ ದಂಡನಾಯಕ ಜನರಲ್ ರಾಬರ್ಟ್ ಲಕ್ಹಾರ್ಟ್, ದೇಶದ ಸೇನೆಯ ಬಲಾಬಲವನ್ನು ಹೆಚ್ಚಿಸುವ ಪ್ರಸ್ತಾಪವನ್ನು ಪ್ರಧಾನಿ ನೆಹರೂ ಅವರ ಮುಂದಿಟ್ಟರು. ಆದರೆ ನಮ್ಮದು ಅಹಿಂಸಾ ನೀತಿ, ಯಾವುದೇ ಬಾಹ್ಯ ಬೆದರಿಕೆಗಳು ಗೋಚರಿಸುತ್ತಿಲ್ಲ. ಹಾಗಾಗಿ ಸೇನೆಯ ಅಗತ್ಯವಿಲ್ಲ. ರಕ್ಷಣೆ ಜವಾಬ್ದಾರಿಯನ್ನು ನಿರ್ವಹಿಸಲು ಪೊಲೀಸರು ಸಾಕು ಎಂದಿದ್ದರು ನೆಹರು. 1947ರ ಸೆಪ್ಟೆಂಬರ್ 16 ರಂದು ನಿರ್ದೇಶನವೊಂದನ್ನು ನೀಡಿದ ನೆಹರೂ, 2,80,000ರಷ್ಟಿದ್ದ ಸೇನಾಬಲವನ್ನು 1,50,000ಕ್ಕಿಳಿಸಲು ಸೂಚಿಸಿದರು. ಇದಾದ ಮೂರು ದಿನಗಳಲ್ಲಿಯೇ ಕಾಶ್ಮೀರದ ಮೇಲೆ ಪಾಕ್ ಆಕ್ರಮಣ ಮಾಡಿತು. ದೇಶಕ್ಕೆ ಸೇನೆಯ ಅಗತ್ಯದ ಅರಿವಾಯಿತು. ಆಗಲೂ ನೆಹರೂ ಎಚ್ಚೆತ್ತುಕೊಳ್ಳಲಿಲ್ಲ.
ಇದೆಲ್ಲವನ್ನೂ ಹಿಮಾಲಯದ ಬಗಲಲ್ಲಿ ಕುಳಿತು ಗಮನಿಸುತ್ತಿದ್ದ ಚೀನಾಕ್ಕೆ ಭಾರತ ನಮ್ಮ ಸುಲಭದ ತುತ್ತು ಎಂದೆನಿಸಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. 1949ರಲ್ಲಿ ಸ್ವತಂತ್ರಗೊಂಡ ಚೀನಾ ತನ್ನ ಗಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಸಲುವಾಗಿ ದಕ್ಷಿಣ ಏಷ್ಯಾ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ, ಬರ್ಮಾ, ಪಾಕ್ ಮತ್ತು ನೇಪಾಳಗಳಿಗೆ ಮಾತುಕತೆಯ ಪ್ರಸ್ತಾಪ ಕಳುಹಿಸಿತು. ನೆಹರೂ ಆ ಪ್ರಸ್ತಾಪವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಏಕೆಂದರೆ ನೆರೆಯ ಸಮಾಜವಾದಿ ರಾಷ್ಟ್ರವಾದ ಚೀನಾ ಯಾವುದೇ ಕಾರಣಕ್ಕೂ ನಮ್ಮ ಮೇಲೆ ಆಕ್ರಮಣ ಮಾಡುವುದಿಲ್ಲ. ಜತೆಗೆ ಹಿಮಾಲಯವೆಂಬ ತಡೆಗೋಡೆಯಿದೆ ಎಂದು ಬಲವಾಗಿ ನಂಬಿದ್ದರು. ಆದರೆ ನೆಹರೂ ಉದಾಸೀನ ಬಗ್ಗೆ ಚೀನಾ ಕುಪಿತಗೊಂಡಿತು. ಆಗಲೂ ಇತಿಹಾಸ ತನ್ನ ಮೂರ್ಖತನವನ್ನು ಸರಿಪಡಿಸಿಕೊಳ್ಳಲು ನೆಹರೂ ಅವರಿಗೆ ಮತ್ತೊಂದು ಅವಕಾಶ ಕಲ್ಪಿಸಿತು. ಆದರೂ ಪಾಠ ಕಲಿಯಲಿಲ್ಲ.
ಈ ಘಟನೆ ನಡೆದ ವರ್ಷವೇ 50 ಸಾವಿರ ಭಾರತೀಯ ಸೈನಿಕರನ್ನು ಕಿತ್ತೊಗೆದ ನೆಹರೂ ತಪ್ಪನ್ನು ಪುನರಾವರ್ತಿಸಿದರು. 1954ರಲ್ಲಿ ಚೀನಾಕ್ಕೆ ಭೇಟಿ ನೀಡಿದ ನೆಹರೂ, ಪರಸ್ಪರರ ಮೇಲೆ ದಾಳಿ ಮಾಡಬಾರದೆಂಬ ಮೂಲಮಂತ್ರವನ್ನು ಹೊಂದಿದ್ದ ಪಂಚಶೀಲ ತತ್ವಕ್ಕೆ ಸಹಿ ಹಾಕಿ ಯಾವುದೇ ಅಪಾಯ ಇಲ್ಲ ಎಂದು ನಿಟ್ಪುಸಿರುಬಿಟ್ಪರು. ಜತೆಗೆ ಟಿಬೆಟ್ ಸಾರ್ವಭೌಮ ಚೀನಾದ ಒಂದು ಭಾಗವೆಂದು ಘೋಷಣೆ ಮಾಡಿದರು. ಪರಿಣಾಮವೇನು? 1959ರಲ್ಲಿ ಆಕ್ರಮಿತ ಟಿಬೆಟ್‌ನಲ್ಲಿ ಜನ ದಂಗೆ ಎದ್ದರು. ಚೀನಿ ಸೇನೆ ಬಂಡಾಯವನ್ನು ಹಿಂಸೆಯ ಮೂಲಕ ಹತ್ತಿಕ್ಕಿತು. ಹೆದರಿದ ಟಿಬೆಟ್ ಧರ್ಮಗುರು ದಲೈಲಾಮಾ, 1ಲಕ್ಷ ಅನುಯಾಯಿಗಳೊಂದಿಗೆ ಭಾರತಕ್ಕೆ ಪಲಾಯನ ಮಾಡಿದರು. ಹೀಗೆ ಬಂದವರಿಗೆ ಅನುಕಂಪದ ಮೇಲೆ ನೆಹರೂ ಆಶ್ರಯ ನೀಡಿದ್ದೇನೋ ಸರಿ. ಆದರೆ ಟಿಬೆಟ್ ಚೀನಾದ ಒಂದು ಭಾಗವೆಂದು 1954ರಲ್ಲಿಯೇ ಒಪ್ಪಿಕೊಂಡ ಮೇಲೆ, ನಮ್ಮ ರಾಷ್ಟ್ರದಲ್ಲಿ ದಲೈಲಾಮಾ ನೇತೃತ್ವದ ಅಜ್ಞಾತವಾಸಿ ಟಿಬೆಟ್ ಸರಕಾರದ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದ್ದೇಕೆ? ಇದು ಚೀನಿ ನಾಯಕ ಮಾವೋ ಝೆಡಾಂಗ್ ಅವರನ್ನು ತಾಳ್ಮೆ ಕಳೆದುಕೊಳ್ಳುವಂತೆ ಮಾಡಿತು. ಈ ನಡುವೆ ಜೀಪ್ ಹಗರಣದ ಸುಳಿಗೆ ಸಿಲುಕ್ಕಿದ್ದ ವಿದೇಶಾಂಗ ಸಚಿವ ಕೃಷ್ಣ ಮೆನನ್ ಅವರನ್ನು ಕಿತ್ತೊಗೆಯುವ ಬದಲು ರಕ್ಷಣಾ ಸಚಿವನನ್ನಾಗಿ ಮಾಡಿದರು! ಹೀಗೆ ಒಂದರ ಹಿಂದೆ ಒಂದರಂತೆ ನೆಹರೂ ತಪ್ಪೆಸಗುತ್ತಲೇಹೋದರು.
ಇತ್ತ ದಲೈಲಾಮಗೆ ಭಾರತದ ನೆಲದಿಂದ ಚೀನಾ ವಿರೋಧಿ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಿದ ನೆಹರೂ ಅವರಿಗೆ ತಕ್ಕ ಪಾಠ ಕಲಿಸಲು ಮಾವೋ ಸಮಯ ಕಾಯುತ್ತಿದ್ದರು. ಚೀನಾದಲ್ಲಿ ಮಾವೋ ನಾಯಕತ್ವಕ್ಕೆ ಡೆಂಗ್ ಕ್ಷಿಯಾಪಿಂಗ್ ಸವಾಲು ಎಸೆದಿದ್ದರು. ವಿರೋಧಿಗಳನ್ನು ಬಾಯಿ ಮುಚ್ಚಿಸಲು ಭಾರತದ ಮೇಲೆ ಯುದ್ಧ ಸಾರುವುದು ಯೋಗ್ಯ ಮಾರ್ಗ ಎಂದು ಮಾವೋ ಭಾವಿಸಿದರು. ಅದೇ ವೇಳೆಯಲ್ಲಿ 1962 ರ ಅಕ್ಟೋಬರ್‌ನಲ್ಲಿ ಕ್ಯೂಬಾಕ್ಕೆ ಅಣ್ವಸ್ತ್ರ ಸಜ್ಜಿತ ಕ್ಷಿಪಣಿಗಳನ್ನು ವರ್ಗಾಯಿಸಿ ನಿಯೋಜನೆ ಮಾಡಿದ್ದಕ್ಕಾಗಿ, ಸೋವಿಯತ್ ರಷ್ಯಾ ನಾಯಕ ನಿಕಿತಾ ಕ್ರುಶ್ಚೇವ್ ಮತ್ತು ಅಮೇರಿಕ ಅಧ್ಯಕ್ಷ ಜಾನ್ ಕೆನಡಿ ನಡುವೆ ತೀವ್ರ ಭಿನ್ನಾಾಭಿಪ್ರಾಯವುಂಟಾಗಿತ್ತು. ಕ್ಷಿಪಣಿಗಳನ್ನು ಹಿಂತೆಗೆದುಕೊಳ್ಳದಿದ್ದರೆ ಅಣ್ವಸ್ತ್ರ ದಾಳಿ ಮಾಡುವುದಾಗಿ ಕೆನಡಿ ಬೆದರಿಕೆ ಹಾಕಿದ್ದರು. ಹೀಗೆ ಜಗತ್ತಿನ ಗಮನವೆಲ್ಲ ಕ್ಯೂಬಾದತ್ತ ಕೇಂದ್ರೀಕೃತವಾಗಿತ್ತು. ಇಂತಹ ಸಂದರ್ಭದಲ್ಲಿ ಆಕ್ರಮಣ ಮಾಡಿದರೆ ಜಗತ್ತಿನ ಎರಡು ಬೃಹತ್ ಶಕ್ತಿಿಗಳಾಗಿದ್ದ ರಷ್ಯಾವಾಗಲಿ ಅಥವಾ ಅಮೆರಿಕವಾಗಲಿ ಭಾರತದ ಸಹಾಯಕ್ಕೆ ಮುಂದಾಗುವುದಿಲ್ಲ ಎಂಬುದು ಮಾವೋ ಲೆಕ್ಕಾಚಾರವಾಗಿತ್ತು.
1962ರ ಅಕ್ಟೋಬರ್ 20 ರಂದು ಲಡಾಕ್ ಮೂಲಕ ಆಕ್ರಮಣ ಮಾಡಿದ ಚೀನಾ ನಮ್ಮ 37 ಸಾವಿರ ಚದರ ಕಿ.ಮೀ. ಜಾಗವನ್ನು ಕಬಳಿಸಿತು. ಕಟ್ಟಾ ವಾಮವಾದಿಯಾಗಿದ್ದ ರಕ್ಷಣಾ ಸಚಿವ ಮೆನನ್ ಆಕ್ರಮಣದ ಬಗ್ಗೆ ಸರಿಯಾಗಿ ಮಾಹಿತಿ ನೀಡದೆ, ದೇಶವನ್ನು ದಾರಿ ತಪ್ಪಿಸಿದರು. ದಿಕ್ಕೆಟ್ಟ ನೆಹರೂ ಸಹಾಯ ಯಾಚಿಸಿದರೂ ಲಭ್ಯವಾಗಲಿಲ್ಲ. ಮೂರೂ ವಾರಗಳ ನಂತರ ಈಶಾನ್ಯ ಭಾಗದ ಮೇಲೆ ಆಕ್ರಮಣ ಮಾಡಿದ ಚೀನಾ, ನವೆಂಬರ್ 21 ರಂದು ಏಕಪಕ್ಷೀಯ ಕದನ ವಿರಾಮ ಘೋಷಿಸಿತು. ಏಕೆಂದರೆ ಆ ವೇಳೆಗಾಗಲೇ ಕ್ರುಶ್ಚೇವ್ ಹಿಮ್ಮೆಟ್ಪುವುದರೊಂದಿಗೆ ಕ್ಯೂಬಾ ಬಿಕ್ಕಟ್ಟು ಪರಿಹಾರದತ್ತ ಸಾಗಿತ್ತು. ಅದೆಲ್ಲಕ್ಕಿಂತ ಮುಖ್ಯವಾಗಿ, ರಷ್ಯಾ ಮೀನ-ಮೇಷ ಎಣಿಸಿದಾಗ ನೆಹರೂ ಅಮೆರಿಕಾದ ಸಹಾಯ ಯಾಚಿಸಿದರು. ಕರೆಗೆ ಓಗೊಟ್ಟು ಅಮೆರಿಕ ಅಧ್ಯಕ್ಷ ಜಾನ್ ಕೆನಡಿ ಸೇನಾ ತುಕಡಿಯೊಂದನ್ನು ಹೊತ್ತ ಹಡಗನ್ನು ಬಂಗಾಳ ಕೊಲ್ಲಿಯತ್ತ ಕಳುಹಿಸಿದರು. ಹೀಗೆ ಅಮೆರಿಕದ ಹಸ್ತಕ್ಷೇಪದ ಭೀತಿಯಿಂದ ಚೀನಾ ಕದನ ವಿರಾಮ ಘೋಷಿಸಿತು.
ಡೊಕಾ ಲಾ ಬಿಕ್ಕಟ್ಟು ಮತ್ತು ಬ್ರಿಕ್ಸ್ ಸಮ್ಮೇಳನದಲ್ಲಿ ಮೋದಿಯವರು ನಡೆದುಕೊಂಡ ರೀತಿ ಇಂಥ ತಪ್ಪು ನಡೆಗಳ ನೆನಪಿನಲ್ಲಿ ಮಹತ್ವದ್ದಾಗಿ ಕಾಣುತ್ತದೆ. ಚೀನಾದೊಂದಿಗೆ ಹೇಗೆ ನಡೆದುಕೊಳ್ಳಬೇಕೋ ಹಾಗೆ ಮೋದಿಯವರು ನಡೆದುಕೊಂಡಿದ್ದಾರೆ. ತಪ್ಪಿನಿಂದ ಪಾಠ ಕಲಿಯದ ನೆಹರೂ ಸಮಸ್ಯೆಗಳ ಗೊಂಚಲನ್ನು ದೇಶಕ್ಕೆ ಬಿಟ್ಟುಹೋದರು. ಇತಿಹಾಸದ ಎಚ್ಚರದಿಂದ ಮೋದಿ ಡೋಕ್ಲಾಂ ಅನ್ನು ಪ್ರಬುದ್ಧತೆಯಿಂದ ನಿಭಾಯಿಸಿದರು. ಅದನ್ನು ನಿಭಾಯಿಸಲು ಪ್ರಧಾನಮಂತ್ರಿಗಳೇನೂ ವಿಶೇಷ ಕಾರ್ಯತಂತ್ರವನ್ನು ಹೆಣೆದಿರಲಿಲ್ಲ. 60ರ ದಶಕದಲ್ಲಿ ಭಾರತ ಹೇಗೆ ನಡೆದುಕೊಂಡಿತ್ತೋ ಅದರ ಬಗ್ಗೆ ಎಚ್ಚರದಿಂದಿದ್ದರು ಅಷ್ಟೆ.
Published on September 16, 2017 05:09
Pratap Simha's Blog
- Pratap Simha's profile
- 58 followers
Pratap Simha isn't a Goodreads Author
(yet),
but they
do have a blog,
so here are some recent posts imported from
their feed.
