Pratap Simha's Blog, page 12

October 18, 2017

October 17, 2017

October 16, 2017

October 15, 2017

October 14, 2017

ಪುರೋಹಿತಶಾಹಿ ಆಲಾಪವಾದಾಗಲೆಲ್ಲಾ ನಮ್ಮ ಅಪ್ಪಚ್ಚಕವಿ ನೆನಪಾಗುತ್ತಾರೆ!

ಪುರೋಹಿತಶಾಹಿ ಆಲಾಪವಾದಾಗಲೆಲ್ಲಾ ನಮ್ಮ ಅಪ್ಪಚ್ಚಕವಿ ನೆನಪಾಗುತ್ತಾರೆ!


ಒಂದು ಸುಂದರ, ಸಮರಸ ಸಮಾಜದ ನಿರ್ಮಾಣ ಕಾರ್ಯವನ್ನು ಒಬ್ಬ ಸಾಹಿತಿ ತನ್ನ ಬಡತನ, ಕಷ್ಟ ಕಾರ್ಪಣ್ಯದ ನಡುವೆಯೂ ಮಾಡಬಹುದು ಎಂಬುದಕ್ಕೆ ಅಪ್ಪಚ್ಚಕವಿ ಸಾಕ್ಷಿ. ಕೊಡಗು ಅಪ್ಪಚ್ಚಕವಿಯ ಕೊಡುಗೆಯನ್ನು, ಅದಕ್ಕೆ ಕಾರಣಕರ್ತರಾದವರನ್ನು ಮರೆತಿಲ್ಲ. ಇಂದಿಗೂ ಕೊಡಗು ಬ್ರಾಹ್ಮಣರನ್ನು ಸ್ವಾಮಿ ಎಂಬ ಗೌರವಸೂಚಕ ಪದದಿಂದಲೇ ಸಂಬೋಧಿಸುತ್ತಿರುವುದು ಇದಕ್ಕೆ ಸಾಕ್ಷಿ.

ಕೊಡಗಿನ ವಿರಾಜಪೇಟೆಯಿಂದ ನಾಪೋಕ್ಲುವಿಗೆ ಸಾಗುವ ದಾರಿ ಮಧ್ಯೆ ಕಿರುಂದಾಡು ಗ್ರಾಮ ಎಂಬ ಫಲಕ ಕಂಡಾಗಲೆಲ್ಲಾ ಬಳಿಯಲ್ಲಿರುವವರು ಇದೇ ಮಹಾಕವಿ ಅಪ್ಪಚ್ಚನ ಊರು ಎಂದು ಹೇಳುತ್ತಾರೆ. ಕಳೆದ ಒಂದುಮುಕ್ಕಾಲು ವರ್ಷದಿಂದ ಆ ಭಾಗ ನನಗೆ ಪರಿಚಿತ. ಪ್ರತಿಬಾರಿಯೂ ನನಗೆ ಆ ಊರನ್ನು ಜನ ಹೀಗೆಯೇ ಪರಿಚಯ ಮಾಡಿಕೊಡುತ್ತಾರೆ.


ಹೊರನೋಟಕ್ಕೆ ಆ ಗ್ರಾಮ ಕೊಣಂಜಗೇರಿ ಪಂಚಾಯತಿಗೆ ಒಳಪಟ್ಟ, ಬೆಟ್ಟದ ತಪ್ಪಲಿನ ಸುಂದರ ಊರು, ಅಷ್ಟೆ. ಇದೇ ಊರಲ್ಲಿ ಹರದಾಸ ಅಪ್ಪಚ್ಚ ಕವಿ ಹುಟ್ಟಿದರು ಎಂದು ಹೇಳುವಾಗ ಕೊಡಗಿನ ಜನರ ಕಣ್ಣಲ್ಲಿ ಹೊಳಪೊಂದು ಮೂಡುತ್ತವೆ. ಆ ಹೊಳಪಿನ ಕಾರಣ ಹುಡುಕಲೆಂದೇ ಕವಿಯನ್ನು ಹುಡುಕ ತೊಡಗಿದೆ. ಒಂದಿಷ್ಟು ಪುಸ್ತಕಗಳು, ಬಲ್ಲವರೊಡನೆ ಮಾತುಕತೆಗಳ ನಂತರ ಅಪೂರ್ವವಾದ ಸಂಗತಿಯೊಂದನ್ನು ತಿಳಿದ ಅನುಭವವಾಯಿತು. ನಿಜಕ್ಕೂ ಅಪ್ಪಚ್ಚ ಮಹಾಕವಿ ಎನಿಸಿದರು. ಕಾವ್ಯಕ್ಕೂ ಮಿಗಿಲಾಗಿ ನಿಂತವರಂತೆ ಅವರು ಕಂಡರು. ಕಮ್ಯುನಿಸ್ಟರು, ಪೆರಿಯಾರ್ ಅನುಯಾಯಿಗಳು ತೀವ್ರವಾಗಿ ಪ್ರತಿಪಾದಿಸುತ್ತಿರುವ ಬ್ರಾಹ್ಮಣ ವಿರೋಧಿ ಧೋರಣೆಗಳಿಗೆ ತಕ್ಕ ಉತ್ತರವಾಗಿ ಕಂಡರು, ಸಮರಸ ಸಮಾಜಕ್ಕೆ ನಿದರ್ಶನವಾಗಿ ಕಂಡರು. ಕೊಡಗಿನ ವಿಭಿನ್ನ ಸಮಾಜ ಸಂರಚನೆಯ ಸ್ಪಷ್ಟ ಚಿತ್ರಣ ಸಿಗತೊಡಗಿತು.


ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ. ಕೊಡಗಿನ ಜನ ಅವರನ್ನು ಹೇಳುವುದೇ ಹೀಗೆ. ಒಬ್ಬರು ಫೀಲ್ಡ್‌ ಮಾರ್ಷಲ್, ಒಬ್ಬರು ಜನರಲ್, 6 ಏರ್ ಮಾರ್ಷಲ್‌ಗಳು, 26 ಲೆಫ್ಟಿನೆಂಟ್ ಜನರಲ್‌ಗಳು, 30 ಮೇಜರ್ ಜನರಲ್‌ಗಳು, 50ಬ್ರಿಗೇಡಿಯರುಗಳು, ನೂರಕ್ಕೂ ಹೆಚ್ಚಿನ ಕರ್ನಲ್‌ಗಳು, ಅದೆಷ್ಟೋ ಜನ ಫ್ಲೈಟ್ ಲೆಫ್ಟಿನೆಂಟ್‌ಗಳು, ಎರಡು ಮಹಾವೀರ ಚಕ್ರ, ಮೂರು ವೀರಚಕ್ರಗಳ ಗರಿಯ ಯೋಧರ ಕೊಡಗಿನ ಭೂಮಿಯಲ್ಲೊಬ್ಬ ಮಹಾಕವಿ! ಬಹುತೇಕ ಜನರಿಗೆ ಕೊಡಗಿನಲ್ಲೂ ಸಾಹಿತ್ಯವೇ ಎಂಬ ಅಚ್ಚರಿ ಮೂಡಿದರೂ ಮೂಡೀತು. ಅದೂ ಹರದಾಸನಾಗಿ, ನಾಟಕಕಾರನಾಗಿ, ತ್ರಿಭಾಷಾ ಸಾಹಿತಿ ಜಗದ್ವಿಖ್ಯಾತರಾಗಿದ್ದ ಐ.ಎಂ. ಮುತ್ತಣ್ಣ ನಂಥವರ ಆರಾಧ್ಯ ಗುರು ಕವಿ ಅಪ್ಪಚ್ಚ.

ಕಿರುಂದಾಡು ಗ್ರಾಮದ ಅಪ್ಪನೆರವಂಡ ಕುಟುಂಬ ಊರಿನ ಪ್ರತಿಷ್ಠಿತ ಮನೆತನ.


ಆ ಕುಟುಂಬದಲ್ಲಿ 1868ರಲ್ಲಿ ಅಪ್ಪಚ್ಚನೆಂಬ ಬಾಲಕ ಹುಟ್ಟಿದ. ಊರ ಶಾಲೆಗೆ ಬಾಲಕನನ್ನು ಸೇರಿಸಿದರು. ಅಪ್ಪಚ್ಚನಿಗೆ ಊರ ಅರ್ಚಕರ ಮಗ ಗೆಳೆಯನಾದ. ಮುಂದೆ ಆ ಗೆಳೆತನವೇ ಅಪ್ಪಚ್ಚ ಕವಿಯನ್ನು ರೂಪುಗೊಳಿಸಿತು. ಏಕೆಂದರೆ ಈ ಅರ್ಚಕರ ಮಗ ಮತ್ತು ಕೊಡವ ಬಾಲಕನ ಗೆಳೆತನ ಶಾಲೆಗೆ ಮಾತ್ರ ಸೀಮಿತವಾಗದೆ ಮನೆಯವರೆಗೂ ಮುಂದುವರಿಯಿತು. ಆ ಬ್ರಾಹ್ಮಣ ಹುಡುಗನ ತಾಯಿಗೆ ಮನೆಯಲ್ಲಿ ಜೈಮಿನಿ ಭಾರತ ಓದುವ ಅಭ್ಯಾಸವಿತ್ತು. ಆಕೆ ತನ್ನ ಮಗನೊಂದಿಗೆ ಅಪ್ಪಚ್ಚನನ್ನೂ ಕೂರಿಸಿ ಜೈಮಿನಿ ಭಾರತವನ್ನು ಹೇಳಿಕೊಡುತ್ತಿದ್ದಳು. ಅಪ್ಪಚ್ಚನಿಗೆ ಜೈಮಿನಿ ಭಾರತ ಅದೆಷ್ಟು ಹುಚ್ಚು ಹಿಡಿಸಿತೆಂದರೆ ದಿನವೂ ಶಾಲೆ ಬಿಟ್ಟೊಡನೆ ಅರ್ಚಕನ ಮನೆಗೆ ಓಡುತ್ತಿದ್ದ. ಅಂದು ಜೈಮಿನಿ ಭಾರತ ಕಲಿಯಲು ಓಡೋಡಿ ಬರುತ್ತಿದ್ದ ಕೊಡವ ಅಪ್ಪಚ್ಚನಿಗೆ ಯಾವ ಬ್ರಾಹ್ಮಣರೂ ಕಿವಿಗೆ ಸೀಸ ಕಾಯಿಸಿ ಸುರಿಯಲಿಲ್ಲ! ಯಾವ ಬ್ರಾಹ್ಮಣನೂ ಹಂದಿ ತಿನ್ನುವ ಕೊಡವನೆಂದು ನಿಂದಿಸಿ ಕಳುಹಿಸಲಿಲ್ಲ, ಯಾವ ಕೊಡವನೂ ಬ್ರಾಹ್ಮಣನ ಮನೆಗೆ ಹೋಗುವ ಕೊಡವ ಬಾಲಕನನ್ನು ಆಕ್ಷೇಪಿಸಲಿಲ್ಲ.


ಜೈಮಿನಿ ಕಲಿಯುತ್ತಿದ್ದ ಹೊತ್ತಲ್ಲೇ ಹುಡುಗ ಅಪ್ಪಚ್ಚ ಶಾಲೆ ಬಿಟ್ಟ. ಆದರೆ ಜೈಮಿನಿಯ ಓದು ಅಪ್ಪಚ್ಚನಿಗೆ ಕಾವ್ಯದ ಹುಚ್ಚನ್ನು ಹಿಡಿಸಿ ಬಿಟ್ಟಿತ್ತು. ಮತ್ತಷ್ಟು ಕಾವ್ಯಾಧ್ಯಯನಕ್ಕಾಗಿ ಅಪ್ಪಚ್ಚ ಹುಡುಕಿದಾಗ ಅವರಿಗೆ ಮತ್ತೆ ಸಿಕ್ಕವರು ಅದೇ ಅಕ್ಕಪಕ್ಕದ ಊರಿನ ಅರ್ಚಕರು. ಅಂದರೆ ಅದೇ ಬ್ರಾಹ್ಮಣರು. ಯಾರನ್ನು ಕಮ್ಯುನಿಸ್ಟರು ಪುರೋಹಿತಶಾಹಿ ಎಂದರೋ, ಯಾರನ್ನು ವಿದ್ಯೆಯನ್ನು ಬಚ್ಚಿಟ್ಟುಕೊಂಡವರು ಎಂದರೋ, ಯಾರನ್ನು ಹರಟೆಮಲ್ಲ ಬುದ್ಧಿಜೀವಿಯೊಬ್ಬ ಇತ್ತೀಚೆಗೆ ದೇಶ ಬಿಡಬೇಕೆಂದು ಹೇಳಿದರೋ ಅದೇ ಬ್ರಾಹ್ಮಣರು! ಅಪ್ಪಚ್ಚ ಅರ್ಚಕರ ಮಂತ್ರಗಳನ್ನು ಬೆರಗಿನಿಂದ ನೋಡುತ್ತಿದ್ದ, ಮಂತ್ರಗಳ ಕಾವ್ಯಗುಣವನ್ನು ತನ್ಮಯತೆಯಿಂದ ಆಲಿಸುತ್ತಿದ್ದ. ಹಿರಿಯ ಅರ್ಚಕರಿಂದ ಪುರಾಣ ಕಥೆಗಳನ್ನು ಕಲಿತ. ಆದರೂ ಅಪ್ಪಚ್ಚನಿಗೆ ಸಾಕೆನಿಸಲಿಲ್ಲ. ಇನ್ನೂ ಏನೋ ಬೇಕು ಎಂದೇ ಅನಿಸುತ್ತಿತ್ತು. ಅದೇ ಅರ್ಚಕ ಗೆಳೆಯರಿಂದ ಸಂಸ್ಕೃತವನ್ನು ಕಲಿಯಲು ಪ್ರಾರಂಭಿಸಿದ. ಪುರಾಣಗಳನ್ನು ಮೂಲದಲ್ಲೇ ಓದಬೇಕೆಂಬ ಛಲದಿಂದ ಸಂಸ್ಕೃತ ಕಲಿತ. ದಿನಗಟ್ಟಲೆ ಬ್ರಾಹ್ಮಣರ ಜತೆ ಕಾಲಕಳೆಯುತ್ತಿದ್ದ ಅಪ್ಪಚ್ಚನನ್ನು ಜನ ಹಂಗಿಸಿದರೇ ಹೊರತು, ಕೊಡವನೊಬ್ಬ ಸಂಸ್ಕೃತ ಕಲಿಯುವಾಗಲೂ ಯಾವೊಬ್ಬ ಬ್ರಾಹ್ಮಣನೂ ಅಪ್ಪಚ್ಚನಿಗೆ ವಿದ್ಯೆ ವಂಚಿಸಲಿಲ್ಲ. ಶಾಪ ಹಾಕಲಿಲ್ಲ.


ಅಂದಿನ ಕಾಲಮಾನದಲ್ಲಿ ಕೊಡಗಿನಲ್ಲಿ ಸ್ಮಾರ್ತ ಹವ್ಯಕರೂ, ಮಾಧ್ವ ಶಿವಳ್ಳಿಗಳೂ ಮತ್ತು ಸ್ಥಾನಿಕರು ಎಂಬ ಬ್ರಾಹ್ಮಣ ಪಂಗಡಗಳಿದ್ದವು. ಅವರೆಲ್ಲರ ಸಂಪೂರ್ಣ ಒಡನಾಟ ಅಪ್ಪಚ್ಚನಿಗೆ ಲಭಿಸಿತ್ತು. ಆದರೆ ಅಪ್ಪಚ್ಚ, ಕೊನೆಯವರೆಗೂ ಅಪ್ಪನೆರವಂಡ ಕುಟುಂಬದ ಕೊಡವನಾಗಿಯೇ ಬದುಕಿದರು. ತನ್ನ ಅರ್ಚಕ ಮಿತ್ರರು ಅಪ್ಪಚ್ಚನ ಬಗ್ಗೆ ಎಷ್ಟೊಂದು ಗೌರವಾಧರಗಳನ್ನಿಟ್ಟಿದ್ದರೆಂದರೆ ಅಪ್ಪಚ್ಚನ ಸಂಸ್ಕೃತ ಪ್ರೇಮ ಮತ್ತು ಸಾಹಿತ್ಯಾಸಕ್ತಿಯನ್ನು ಗಮನಿಸಿ ಮುಜರಾಯಿ ಇಲಾಖೆಗೆ ಕೆಲಸಕ್ಕೆ ಸೇರುವಂತೆ ಆಗ್ರಹಿಸಿದರು. ಯುವಕ ಅಪ್ಪಚ್ಚ ಸರಕಾರದ ಮುಜರಾಯಿ ಇಲಾಖೆಗೆ ಕೆಲಸಕ್ಕೆ ಸೇರಿದರು. ಅಲ್ಲೂ ಅಪ್ಪಚ್ಚರಿಗೆ ಹಲವು ಬ್ರಾಹ್ಮಣ ಪಂಡಿತರ ಒಡನಾಟ ಲಭ್ಯವಾಯಿತು. ವೆಂಕಟಾದ್ರಿ ಶ್ಯಾಮರಾವ್ ಎಂಬ ಪಂಡಿತರು ಅಪ್ಪಚ್ಚನನ್ನು ಸಾಹಿತ್ಯ ಲೋಕದೊಳಗೆ ಕೈಹಿಡಿದು ನಡೆಸಿದರು. ಭಾಗಮಂಡಲ ಮತ್ತು ಮಡಿಕೇರಿ ಓಂಕಾರೇಶ್ವರ ದೇವಸ್ಥಾನದಲ್ಲಿ ಹಲವು ವರ್ಷಗಳ ಕಾಲ ಪಾರುಪತ್ತೇಗಾರರಾಗಿದ್ದ ಸಮಯ ಅಪ್ಪಚ್ಚರ ಸಾಹಿತ್ಯಾ ಧ್ಯಯನದ ಮಹತ್ವಪೂರ್ಣ ವರ್ಷಗಳು.


ಆ ಹೊತ್ತಿನ ಕೊಡಗಿನ ಪರಿಸ್ಥಿತಿಯನ್ನು ನೋಡಿ ಅಪ್ಪಚ್ಚ ನೊಂದಿದ್ದರು. ಭಕ್ತಿಯಿಲ್ಲದ ಆಚರಣೆಗಳು ಅವರನ್ನು ಚಿಂತೆಗೆ ದೂಡಿದ್ದವು. ಪುರಾಣಗಳ ಅಧ್ಯಯನದಿಂದ ಅವರಿಗೆ ಕೊಡವರಿಗೆ ಕಾವೇರಿ ತಾಯಿಯೇ ಆರಾಧ್ಯ ದೇವತೆ ಎಂಬುದು ತಿಳಿದಿತ್ತು. ಆದರೆ ಎಲ್ಲೆಲ್ಲೂ ವಿಸ್ಮತಿ. ಭಕ್ತಿಯಿಲ್ಲದ ಸಮಾಜ ಸಂಸ್ಕಾರದ ಕೊರತೆಯನ್ನು ಅನುಭವಿಸುತ್ತದೆ ಎಂಬುದನ್ನು ಅಪ್ಪಚ್ಚಕವಿ ಮನಗಂಡರು. ಹಲವು ಊರಿನ ಮುಖ್ಯಸ್ಥರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದರೂ ಪ್ರಯೋಜನವಾಗಲಿಲ್ಲ. ನೇರವಾಗಿ ತಿಪಟೂರಿಗೆ ಹೊರಟರು. ಆ ಹೊತ್ತಲ್ಲಿ ತಿಪಟೂರು ನಾಟಕ ಮಂಡಳಿಗಳಿಗೆ ಹೆಸರುವಾಸಿಯಾಗಿತ್ತು. ತಿಪಟೂರಿನಲ್ಲಿ ಪೌರಾಣಿಕ ನಾಟಕಗಳ ಬಗ್ಗೆ ಅಧ್ಯಯನ ನಡೆಸಿ ಮರಳಿ ಕೊಡಗಿಗೆ ಬಂದರು ಅಪ್ಪಚ್ಚ. ಆಗಿನ್ನೂ ಅವರು ಕವಿಯಾಗಿರಲಿಲ್ಲ.


ಅದು 1891. ತಿಪಟೂರಿನಿಂದ ಮರಳಿದವರೇ ನಾಟಕ ರಚನೆ ಮತ್ತು ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. 1906ರಲ್ಲಿ ಯಯಾತಿ ರಾಜನ ನಾಟಕವನ್ನು ಬರೆದರು. 1906 ರಲ್ಲಿ ಸಾವಿತ್ರಿ ಮತ್ತು ಸುಬ್ರಹ್ಮಣ್ಯ ನಾಟಕಗಳನ್ನು ಬರೆದರು. ಭಕ್ತಿ ಪ್ರಧಾನವಾದ ಈ ನಾಟಕಗಳನ್ನು ಕೊಡವ ಭಾಷೆಯಲ್ಲಿ ಪ್ರಕಟಿಸಿದ್ದು ಮಾತ್ರವಲ್ಲದೆ, ಉದಾರಿಗಳ ಸಹಾಯದಿಂದ ಅವು ಗಳ ರಂಗಪ್ರಯೋಗಗಳನ್ನೂ ಮಾಡಿದರು. ನಂತರ ಅವುಗಳ ಕನ್ನಡ ಪ್ರಯೋಗವನ್ನು ನಮ್ಮ ಪಿರಿಯಾಪಟ್ಟಣ, ಹುಣಸೂರಿ ನಲ್ಲೂ ಕೂಡಾ ಮಾಡಿದರು. 1917ರಲ್ಲಿ ತಮ್ಮ ಪಾರುಪತ್ತೇಗಾರ ಹುದ್ದೆಗೆ ರಾಜೀನಾಮೆ ಕೊಟ್ಟ ಅಪ್ಪಚ್ಚ ಕವಿ ಪೂರ್ಣ ಪ್ರಮಾಣದ ಸಾಹಿತಿಯಾದರು. ಮರುವರ್ಷವೇ ಶ್ರೀ ಕಾವೇರಿ ನಾಟಕ ಬರೆದು ಕೊಡಗಿನ ಊರೂರುಗಳಲ್ಲಿ ಪ್ರದರ್ಶನ ಮಾಡಿದರು. ಈ ನಾಟಕ ಎಷ್ಟೊಂದು ಪ್ರಭಾವಿಯಾಯಿತೆಂದರೆ ಕೊಡವರು ತಮಗೂ ಕಾವೇರಿ ತಾಯಿಗೂ ಇರುವ ಸಂಬಂಧವನ್ನು ಅರಿತರು. ಕಾವೇರಿಯಮ್ಮನೇ ನಮ್ಮ ಕುಲದೇವಿ ಎಂದು ಕಾವೇರಿ ತೀರ್ಥೋದ್ಬವವನ್ನು ಕಾವೇರಿ ಸಂಕ್ರಮಣ ಎಂಬುದಾಗಿ ವಿಜೃಂಭಣೆಯಿಂದ ಆಚರಿಸಲು ತೊಡಗಿದರು. ತಲಕಾವೇರಿ ತೀರ್ಥಕ್ಷೇತ್ರವಾಯಿತು.


ಇದೇ ಅಲ್ಲದೆ ಎಷ್ಟೆಷ್ಟೋ ಕೀರ್ತನೆಗಳು, ಭಕ್ತಿಪ್ರಧಾನ ಕಥೆಗಳ ರಚನೆಯೂ ಅಪ್ಪಚ್ಚರಿಂದ ನಡೆಯಿತು. ಭಕ್ತಿ ರತ್ನಾಕರ ಕೀರ್ತನೆ ಎಂಬ ಕೃತಿಯನ್ನು ರಚಿಸಿದರು (ಅಪ್ರಕಟಿತ). ಈ ನಡುವೆ ಕವಿಯ ಮನೆಗೆ ಬೆಂಕಿ ಬಿದ್ದು ಹಲವು ಅಪ್ರಕಟಿತ ಕೃತಿಗಳು ಭಸ್ಮವಾದವು. ಭಕ್ತ ಸುಕನ್ಯಾ ಎಂಬ ನಾಟಕ ಬೆಂಕಿಗಾಹುತಿಯಾಯಿತು. ಆದರೆ ಜ್ಞಾನ ಸುಟ್ಟಿರಲಿಲ್ಲ. ಅಪ್ಪಚ್ಚಕವಿ ಹರಿಕಥೆಗಳ ಮೂಲಕ ಊರೂರು ತಿರುಗತೊಡಗಿದರು. ಕನಕ-ಪುರಂದರರ ರಚನೆಗಳು ಕೊಡವ ಭಾಷೆಗೆ ಬಂದವು. ಪುತ್ತೂರು, ಸುಳ್ಯ, ಮಂಗಳೂರುಗಳಲ್ಲೂ ಅವರ ಹರಿಕಥೆಗಳು ನಡೆದವು. ಅಪ್ಪಚ್ಚಕವಿ ಭಗಂಡೇಶ್ವರನ ಬಗ್ಗೆ ನೂರಾರು ಕೀರ್ತನೆಗಳನ್ನು ಕೊಡವ ಭಾಷೆಯಲ್ಲಿ ಬರೆದರು.

ನೀವೆಂದಾದರೂ ಕೊಡಗಿನ ಯಾವುದಾದರೂ ಕಾರ್ಯಕ್ರಮಗಳಿಗೆ ಹೋಗಿದ್ದರೆ ಶಂಭುವೇ ನಿನ್ನ ಅಥವಾ ಜಗದಂಬಿಕೇ ಎನ್ನುವ ಪ್ರಾರ್ಥನಾ ಗೀತೆಯನ್ನು ಕೇಳಿಯೇ ಕೇಳಿರುತ್ತೀರಿ. ಅವು ಅಪ್ಪಚ್ಚಕವಿಯ ರಚನೆಗಳು.


ಅಪ್ಪಚ್ಚಕವಿಯ ನಾಲ್ಕು ನಾಟಕಗಳು ಎಂದೇ ಖ್ಯಾತವಾದ ನಾಟಕ ಸಂಗ್ರಹ ಕನ್ನಡಕ್ಕೂ ಬಂತು. ಮುಂದೆ ಯಾರ್ಯರೋ ಯಯಾತಿ ಬರೆದರು. ಕೆಲವರು ಮೂಲಕಥೆಯನ್ನು ತಿರುಚಿಯೂ ಬರೆದರು. ಭಾಷೆಯ ದೃಷ್ಟಿಯಿಂದ, ನಿರೂಪಣೆಯ ದೃಷ್ಟಿಯಿಂದ ಅಪ್ಪಚ್ಚಕವಿಯ ನಾಟಕಗಳು ಅವೆಲ್ಲಕ್ಕಿಂತಲೂ ಮುಂದು. ಹರಿಕಥೆ, ನಾಟಕಗಳ ಮೂಲಕ ಅಪ್ಪಚ್ಚಕವಿ ಮತ್ತೊಂದು ಕೊಡುಗೆಯನ್ನು ನಾಡಿಗೆ ನೀಡಿದ್ದಾರೆ. ಅದು ನಮ್ಮ ಸುಂದರ ಕೊಡವ ಭಾಷೆ. ಅಲ್ಲೂ ಅವರು ಹಲವು ಪ್ರಯೋಗಗಳನ್ನು ಮಾಡಿದರು. ಹೊಸ ಪದಗಳ ಸೃಷ್ಟಿ ಮಾಡಿದರು. ಗ್ರಾಂಥಿಕ ಪದಗಳನ್ನು ಜನಸಾಮಾನ್ಯರೂ ಆಡ ಬಹುದೆನ್ನುವುದನ್ನು ತೋರಿಸಿಕೊಟ್ಟರು.


ಇಂದು ಕೊಡವ ಭಾಷೆಯ ಲಾಸ್ಯದಲ್ಲಿ ಕಾಣುವ ಹಲವಂಶಗಳು ಅಪ್ಪಚ್ಚಕವಿಯ ಕೊಡುಗೆಗಳು. ಜೊತೆಗೆ ಇಂದು ಕೊಡವ ಭಾಷೆಯಲ್ಲಿ ಮಿಳಿತವಾಗಿಹೋಗಿರುವ ಸಾವಿರಾರು ನಾಣ್ನುಡಿಗಳು, ಗಾದೆ ಗಳು ಅವರ ನಾಟಕಗಳ ಉಕ್ತಿಗಳು. ಎಷ್ಟು ಭಾಷೆಗಳಿಗೆ ಇಂಥ ಭಾಗ್ಯ ದೊರೆತಿದೆ? ಕೆಲವರು ಬರೆದಿದ್ದನ್ನು ಓದಲು ತ್ರಾಸ ಪಡ ಬೇಕೆನ್ನುವ ಈ ಕಾಲದಲ್ಲಿ ಅಪ್ಪಚ್ಚ ಕವಿಯ ಸಾಹಸ ಬೆರಗು ಹುಟ್ಟಿಸುತ್ತವೆ. ಅವೆಲ್ಲಕ್ಕೂ ಕಾರಣ ಅವರ ಸಂಸ್ಕೃತ ಅಧ್ಯಯನ. ಅದಕ್ಕೆ ಕಾರಣರಾದ ಬ್ರಾಹ್ಮಣಶಾಹಿ ಎಂದು ಯಾವ ಸಂದೇಹಗಳಿಲ್ಲದೆ ಹೇಳಬಹುದು. ದೇಶ ಬಿಟ್ಟು ತೊಲಗಿ, ಸಂಸ್ಕೃತ ಎಂಬುದು ಹೇರಿಕೆ, ಆದಿಲ್‌ಶಾಹಿ ಅಪಾಯಕಾರಿ ಯಾಗಿರಲಿಲ್ಲ ಈ ಪುರೋಹಿತಶಾಹಿ ಅಪಾಯಕಾರಿಯಾಗಿತ್ತು, ಜ್ಞಾನವನ್ನು ತಮ್ಮ ಸ್ವತ್ತು ಮಾಡಿಕೊಂಡರು? ಎನ್ನುವುದು ಕೆಲವರಿಗೆ ಹೊಟ್ಟೆಪಾಡಾಗಿರಬಹುದು. ಆದರೆ ಕೊಡಗು ಅಪ್ಪಚ್ಚಕವಿಯ ಕೊಡುಗೆಯನ್ನು, ಅದಕ್ಕೆ ಕಾರಣಕರ್ತರಾದವರನ್ನು ಮರೆತಿಲ್ಲ. ಇಂದಿಗೂ ಕೊಡಗು ಬ್ರಾಹ್ಮಣರನ್ನು ಸ್ವಾಮಿ ಎಂಬ ಗೌರವಸೂಚಕ ಪದದಿಂದಲೇ ಸಂಬೋಧಿಸುತ್ತಿರುವುದು ಇದಕ್ಕೆ ಸಾಕ್ಷಿ.


ಒಂದು ಸುಂದರ, ಸಮರಸ ಸಮಾಜದ ನಿರ್ಮಾಣ ಕಾರ್ಯ ವನ್ನು ಒಬ್ಬ ಸಾಹಿತಿ ತನ್ನ ಬಡತನ, ಕಷ್ಟ ಕಾರ್ಪಣ್ಯದ ನಡುವೆಯೂ ಮಾಡಬಹುದು ಎಂಬುದಕ್ಕೆ ಅಪ್ಪಚ್ಚಕವಿ ಸಾಕ್ಷಿ. ಅಪ್ಪಚ್ಚ ಕವಿ ಕಥೆಯನ್ನು ಅಪ್ರಸ್ತುತ ಸಮಯದಲ್ಲಿ ಹೇಳಲಾಗುತ್ತಿದೆ ಎಂದು ಭಾವಿಸಬೇಡಿ. ಇತ್ತೀಚೆಗೆ ಎಲ್ಲದಕ್ಕೂ ಮೇಲ್ವರ್ಗ ದವರನ್ನು, ಅದರಲ್ಲೂ ಬ್ರಾಹ್ಮಣರನ್ನು ದೂರುವ, ವಿನಾಕಾರಣ ಟೀಕಿಸುವ ಪ್ರವೃತ್ತಿ ಮತ್ತೆ ಕಂಡುಬರುತ್ತಿದೆ. ‘ಮೊದಲು ದೇಶ ಬಿಡಬೇಕಾದವರು ಬ್ರಾಹ್ಮಣರು’ ಎಂದು ಬುದ್ಧಿಜೀವಿಯೊಬ್ಬರು ಹೇಳಿದ್ದಾರೆ. ಹಾಗಾಗಿ ಅಪ್ಪಚ್ಚ ಕವಿ ನೆನಪಾದರು.


 •  0 comments  •  flag
Share on Twitter
Published on October 14, 2017 05:05

October 13, 2017

October 5, 2017

Pratap Simha's Blog

Pratap Simha
Pratap Simha isn't a Goodreads Author (yet), but they do have a blog, so here are some recent posts imported from their feed.
Follow Pratap Simha's blog with rss.