Pratap Simha's Blog, page 16
August 18, 2017
ಹುಡುಗಿಯರೇ ಹುಷಾರ್! ಅದು ‘ಲವ್’ ಅಲ್ಲ, ‘ಜಿಹಾದ್’!!
ಹುಡುಗಿಯರೇ ಹುಷಾರ್! ಅದು ‘ಲವ್’ ಅಲ್ಲ, ‘ಜಿಹಾದ್’!!
ಆ ಪ್ರಕರಣಗಳು ಹೇಗಿವೆಯೆಂದರೆ ಹೈಕೋರ್ಟ್ ಕೂಡ ತಲೆಕೆಡಿಸಿಕೊಂಡಿದೆ! ‘ಲವ್ ಜಿಹಾದ್’ ಅಥವಾ ‘ರೋಮಿಯೋ ಜಿಹಾದ್’ ಎಂಬ ಕಾರ್ಯಸೂಚಿ ನಿಜಕ್ಕೂ ನಡೆಯುತ್ತಿದೆಯೇ? ಹೌದೆಂದಾದರೆ ಅದರ ಉದ್ದೇಶ ಹಾಗೂ ಯೋಜನೆಗಳೇನು? ಆ ಕಾರ್ಯದಲ್ಲಿ ಯಾವ ಯಾವ ಸಂಘಟನೆಗಳು ಭಾಗಿಯಾಗಿವೆ? ಅಂತಹ ಚಟುವಟಿಕೆಗಳಿಗೆ ಎಲ್ಲಿಂದ ಹಣ ಬರುತ್ತಿದೆ? ಕಳೆದ ಮೂರು ವರ್ಷಗಳಲ್ಲಿ ಶಾಲೆ, ಕಾಲೇಜುಗಳ ಎಷ್ಟು ವಿದ್ಯಾರ್ಥಿಗಳು ಹಾಗೂ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ? ಈ ಆರೋಪಿತ ಯೋಜನೆ ರಾಷ್ಟ್ರವ್ಯಾಪಿಯಾಗಿ ನಡೆಯುತ್ತಿದೆಯೇ? ಅದಕ್ಕೆ ವಿದೇಶಗಳಿಂದ ಹಣ ಹರಿದು ಬರುತ್ತಿದೆಯೇ? ‘ಲವ್ ಜಿಹಾದ್’ಗೂ ನಕಲಿ ನೋಟು, ಮಾದಕವಸ್ತು ಕಳ್ಳಸಾಗಣೆ ಜಾಲ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೂ ಸಂಬಂಧ, ಸಂಪರ್ಕ ಇದೆಯೇ? ಹಾಗಂತ ಕೇರಳ ಹೈಕೋರ್ಟ್ ಎಂಟು ವರ್ಷದ ಹಿಂದೆಯೇ ಪ್ರಶ್ನಿಸಿತ್ತು. ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ 2009, ಸೆಪ್ಟೆಂಬರ್ 30ರಂದು ನಿರ್ದೇಶನ ನೀಡಿದ್ದ ಕೇರಳ ಹೈಕೋರ್ಟ್, ಕೂಲಂಕಷ ತನಿಖೆ ನಡೆಸಿ, ಈ ಮೇಲಿನ ಆಯಾಮಗಳ ಬಗ್ಗೆ ದೃಷ್ಟಿ ಹಾಯಿಸಿ ಮೂರು ವಾರಗಳೊಳಗೆ ತನಗೆ ವರದಿಯೊಪ್ಪಿಸ ಬೇಕೆಂದು ಆಗ ಆದೇಶ ನೀಡಿತ್ತು. ಅದಕ್ಕೂ ಕಾರಣವಿದೆ.
ಅಂದು ಕೇರಳದ ಪಟ್ಟಣಂತಿಟ್ಟ ಕಾಲೇಜಿನ ಇಬ್ಬರು ಎಂಬಿಎ ವಿದ್ಯಾರ್ಥಿನಿಯರು ಇದ್ದಕ್ಕಿದ್ದಂತೆಯೇ ಕಾಣೆಯಾದರು. ಅವರ ಪೋಷಕರು ಎಷ್ಟೇ ಪ್ರಯತ್ನಿಸಿದರೂ ಪತ್ತೆ ಮಾಡಲಾಗಲಿಲ್ಲ. ಕೊನೆಗೆ ಹೈಕೋರ್ಟ್‌ನ ಕದತಟ್ಟಿದ ಅವರು ‘ಹೇಬಿಯಸ್ ಕಾರ್ಪಸ್’(ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ) ಮೊಕದ್ದಮೆ ಹಾಕಿದರು. ಅನಿವಾರ್ಯಕ್ಕೆ ಸಿಲುಕಿದ ಪೊಲೀಸರು ಕಾರ್ಯಪ್ರವೃತ್ತರಾಗಲೇಬೇಕಾಯಿತು. ಇಬ್ಬರನ್ನೂ ಪತ್ತೆಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಸತ್ಯ ತೆರೆದುಕೊಳ್ಳುತ್ತಾ ಹೋಯಿತು. ಸುಮಾರು ವರ್ಷಗಳ ಹಿಂದೆ ಕೆಲವು ನಿರ್ದಿಷ್ಟ ದಿನಗಳಂದು ಇಂಟರ್‌ನೆಟ್ ಮೂಲಕ ಕಂಪ್ಯೂಟರ್‌ಗಳಿಗೆ ಬಗ್(ವೈರಸ್)ಗಳನ್ನು ಹರಿಬಿಡುತ್ತಿದ್ದುದನ್ನು ನೀವು ಕೇಳಿರಬಹುದು ಅಥವಾ ನಿಮಗೂ ಅನುಭವಕ್ಕೆ ಬಂದಿರಬಹುದು. ಜನವರಿ 1, ಫೆಬ್ರವರಿ 14 ಹೀಗೆ ಕೆಲವು ದಿನಗಳಂದು ಇಂಟರ್‌ನೆಟ್ ಕನೆಕ್ಟ್ ಮಾಡಿಕೊಳ್ಳಲು ಜನ ಹೆದರುತ್ತಿದ್ದರು, ಆ ದಿನಗಳಂದು ಇಂಟರ್‌ನೆಟ್ ಮುಟ್ಟಬೇಡಿ ಎಂದು ಮೊದಲೇ ಸಂದೇಶಗಳನ್ನು ರವಾನಿಸುವುದನ್ನು ಕಾಣಬಹುದಿತ್ತು.
ಫೆಬ್ರವರಿ 14ರಂದು ‘ಲವ್ ಬಗ್’ ಬಂದೇ ಬರುತ್ತದೆ, ನಿಮ್ಮ ಕಂಪ್ಯೂಟರ್ ಅನ್ನು ಹಾಳುಮಾಡಿಯೇ ಮಾಡುತ್ತದೆ ಎಂಬ ನಂಬಿಕೆಯಿತ್ತು. ಪ್ರಸ್ತುತ ಕೇರಳದಲ್ಲಿ ‘ರೋಮಿಯೋ ಜಿಹಾದ್’, ‘ಲವ್ ಜಿಹಾದ್’ ಎಂಬ ವೈರಸ್‌ಗಳು ಓಡಾಡುತ್ತಿವೆ! ಈ ವೈರಸ್‌ಗಳ ವೈಶಿಷ್ಟ್ಯವೇನೆಂದರೆ ಅವು ನಿಮ್ಮ ಕಂಪ್ಯೂಟರ್ ಮೇಲೆ ದಾಳಿ ಮಾಡುವುದಿಲ್ಲ, ಅಮಾಯಕ ಹಿಂದೂ ಮತ್ತು ಕ್ರೈಸ್ತ ಯುವತಿಯರ ಮನಸ್ಸಿನ ಮೇಲೆ ‘ಪ್ರೀತಿ’ಯ ಹೆಸರಿನಲ್ಲಿ ದಾಳಿ ಮಾಡುತ್ತಿವೆ! ಮಲೆಯಾಳಿ ಮುಸ್ಲಿಮರಲ್ಲಿನ ಒಂದು ವರ್ಗ ತಮ್ಮ ಸಮುದಾಯದ ಸುಂದರ ಯುವಕರನ್ನು ಛೂ ಬಿಟ್ಟಿದೆ. ಆ ಯುವಕರು ಮಾಡಲು ಉದ್ಯೋಗವಿಲ್ಲದ್ದರೂ, ಸರಿಯಾಗಿ ನಾಲ್ಕು ಅಕ್ಷರ ಕಲಿಯದಿದ್ದರೂ ಕಾಲೇಜು ಕ್ಯಾಂಪಸ್‌ಗಳಲ್ಲಿ ಅಡ್ಡಾಡುತ್ತಿರುತ್ತಾರೆ. ಮುಸ್ಲಿಮ್ ವಿದ್ಯಾರ್ಥಿನಿಯರ ಮೂಲಕ ಅವರ ಹಿಂದೂ-ಕ್ರೈಸ್ತ ಸ್ನೇಹಿತೆಯರ ಪರಿಚಯ ಮಾಡಿಕೊಳ್ಳುತ್ತಾರೆ, ಚೆನ್ನಾಗಿ ಹಣ ಖರ್ಚು ಮಾಡುತ್ತಾರೆ, ನಿಧಾನವಾಗಿ ಪ್ರೀತಿಯ ಗಾಳ ಹಾಕುತ್ತಾರೆ.
ಬಲೆಗೆ ಬಿದ್ದ ಮೇಲೆ ವಿವಾಹದ ನೆಪದಲ್ಲಿ ಇಸ್ಲಾಂಗೆ ಮತಾಂತರ ಮಾಡುತ್ತಾರೆ, ತದನಂತರ ಧರ್ಮಾಂಧತೆಯನ್ನು ತಲೆಗೆ ತುಂಬಿ ದೇಶವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಹುನ್ನಾರ ರೂಪಿಸಿದ್ದಾರೆ! ಸಿರಾಜುದ್ದೀನ್ ಹಾಗೂ ಶೇನ್‌ಶಾ ಮಾಡಿದ್ದೂ ಅದನ್ನೇ. ಪಟ್ಟಣಂತಿಟ್ಟ ಕಾಲೇಜಿನ ಇಬ್ಬರು ಅನ್ಯಧರ್ಮೀಯ ವಿದ್ಯಾರ್ಥಿನಿಯರ ಜತೆ ಮೊದಲು ಸ್ನೇಹದ ನಾಟಕವಾಡಿದರು. ಕ್ರಮೇಣ ಪ್ರೀತಿಯನ್ನು ತಲೆಗೆ ತುಂಬಿದರು. ಅವರಿಬ್ಬರೂ ಒಂದು ದಿನ ಸಿರಾಜುದ್ದೀನ್ ಹಾಗೂ ಶೇನ್ ಶಾ ಜತೆ ಪಲಾಯನ ಮಾಡಿದರು. ಒಬ್ಬಳನ್ನು ವಿವಾಹ ಮಾಡಿಕೊಂಡು ಇಚ್ಛೆಗೆ ವಿರುದ್ಧವಾಗಿ ಇಸ್ಲಾಂಗೆ ಮತಾಂತರ ಮಾಡಲಾಯಿತು. ಆತನ ಸ್ನೇಹಿತನೊಬ್ಬನನ್ನು ವಿವಾಹವಾಗುವಂತೆ ಹಾಗೂ ಇಸ್ಲಾಂಗೆ ಮತಾಂತರಗೊಳ್ಳುವಂತೆ ಇನ್ನೊಬ್ಬಳ ಮೇಲೆ ಒತ್ತಡ ಹೇರಲಾಯಿತು. ಹೈಕೋರ್ಟ್ ಮುಂದೆ ಹಾಜರುಪಡಿಸಿದಾಗ ಇಬ್ಬರೂ ವಿದ್ಯಾರ್ಥಿನಿಯರು ತಮ್ಮ ಗೋಳಿನ ಕಥೆಯನ್ನು ತೋಡಿಕೊಂಡಿದ್ದಾರೆ.
ಇಸ್ಲಾಂ ಧಾರ್ಮಿಕ ಕೃತಿಗಳನ್ನು ಓದುವಂತೆ ಬಲವಂತಪಡಿಸಿದ್ದನ್ನು ನ್ಯಾಯಾಲಯದಲ್ಲಿ ಅಲವತ್ತುಕೊಂಡಿದ್ದಾರೆ. ನಮ್ಮನ್ನು ಅಪಹರಿಸಿ ಮಲಪ್ಪುರಂಗೆ ಕರೆದೊಯ್ದು ಮತಾಂತರ ಮಾಡಲು ಪ್ರಯತ್ನಿಸಲಾಯಿತು ಎಂದು ಹೇಳಿದ್ದಾರೆ. ದಕ್ಷಿಣ ಭಾರತ, ಅದರಲ್ಲೂ ಕೇರಳ ಹಾಗೂ ಕರ್ನಾಟಕದ ಕರಾವಳಿ ಭಾಗದಲ್ಲಿ ಕ್ರಿಯಾಶೀಲವಾಗಿರುವ ಮಲೆಯಾಳಿ ಮುಸ್ಲಿಮರ(ಬ್ಯಾರಿ) ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಎಂಬ ಸಂಘಟನೆಯ ಮಹಿಳಾ ವಿಭಾಗದ ಸಂಘಟಕನೊಬ್ಬ ಮತಾಂತರ ಮಾಡಲು ಪ್ರಯತ್ನಿಸಿದ ಎಂದು ದೂರಿದ್ದಾರೆ. ಪಾಪುಲರ್ ಫ್ರಂಟ್ ಆಫ್ ಇಂಡಿಯಾದ ‘ಕ್ಯಾಂಪಸ್ ಫ್ರಂಟ್’ ಎಂಬ ವಿದ್ಯಾರ್ಥಿ ಸಂಘಟನೆ ಇಂತಹ ಕೆಲಸದಲ್ಲಿ ತೊಡಗಿದೆ ಎಂಬ ಬಲವಾದ ಅನುಮಾನಗಳು ಕಾಡಲಾರಂಭಿಸಿವೆ. ಇದು ಕೇವಲ ಒಂದು ಘಟನೆಯಲ್ಲ. ಕಳೆದ ಎಂಟು-ಹತ್ತು ವರ್ಷಗಳಲ್ಲಿ ಇಂತಹ ಸಾವಿರಾರು ಘಟನೆಗಳು ಕೇರಳದಲ್ಲಿ ನಡೆದಿವೆ!
ಪೊಲೀಸ್ ದೂರು ಪ್ರಕರಣಗಳ ಪಟ್ಟಿಯನ್ನು ತರಿಸಿಕೊಂಡು ನ್ಯಾಯಾಲಯ ಪರಾಮರ್ಶೆ ನಡೆಸಿದೆ. ಇದನ್ನೆಲ್ಲಾ ದೃಷ್ಟಿಯಲ್ಲಿಟ್ಟುಕೊಂಡೇ, ತನಿಖೆ ನಡೆಸಿ ವರದಿಯೊಪ್ಪಿಸುವಂತೆ ಕೇರಳ ಹೈಕೋರ್ಟ್ ಪೊಲೀಸ್ ಮಹಾನಿರ್ದೇಶಕರಿಗೆ ಎಂಟು ವರ್ಷಗಳ ಹಿಂದೆಯೇ ಸೂಚಿಸಿ ಗಡುವು ನೀಡಿತ್ತು. ಜತೆಗೆ ಮೂಲತಃ ಕೊಚ್ಚಿ ಮತ್ತು ತಿರುವನಂತಪುರಂನವರಾದ ಆ ವಿದ್ಯಾರ್ಥಿನಿಯರು ಪೋಷಕರ ಜತೆ ಮನೆಗೆ ತೆರೆಳಲು ಅನುಮತಿ ನೀಡಿತ್ತು. ‘ಸಂವಿಧಾನದ 25ನೇ ವಿಧಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. ಅಂದಮಾತ್ರಕ್ಕೆ ಮತ್ತೊಂದು ಧರ್ಮಕ್ಕೆ ಮತಾಂತರಗೊಳ್ಳುವಂತೆ ಇನ್ನೊಬ್ಬರ ಮೇಲೆ ಒತ್ತಡ ಹೇರುವ ಹಕ್ಕು ಯಾರಿಗೂ ಇಲ್ಲ’ ಎಂದು ನ್ಯಾಯಾಲಯ ಹೇಳಿದೆ. ಹಲವಾರು ಪ್ರಕರಣಗಳಲ್ಲಿ ‘ಲವ್ ಜಿಹಾದ್’ ನಡೆದಿರುವುದಕ್ಕೆ ಸ್ಪಷ್ಟ ಸಂಕೇತಗಳೂ ಕಾಣುತ್ತಿವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೆ.ಟಿ. ಶಂಕರನ್ ಹೇಳಿದ್ದರು.
ಈ ಮಧ್ಯೆ ಆಮಿಷ, ಬಲವಂತದ ಮೂಲಕ ಹುಡುಗಿಯರನ್ನು ಪುಸಲಾಯಿಸುವ ಹಾಗೂ ಪ್ರೇಮದ ಖೆಡ್ಡಾದಲ್ಲಿ ಬೀಳಿಸುವ ತಂತ್ರದ ವಿರುದ್ಧ ‘ಕೇರಳ ಕ್ಯಾಥೋಲಿಕ್ ಬಿಶಪ್ಸ್ ಕಾನ್ಫೆರೆನ್ಸ್’(ಅಖಿಲ ಕೇರಳ ಕ್ಯಾಥೋಲಿಕ್ ಬಿಶಪ್ಪರ ಸಂಘಟನೆ) ಕೆಲವು ವರ್ಷಗಳ ಹಿಂದೆ ಪ್ರಚಾರಾಂದೋಲನವೊಂದನ್ನು ಆರಂಭಿಸಿತ್ತು. ‘ಲವ್ ಜಿಹಾದಿ’ಗಳ “Holy war of love’ ಬಗ್ಗೆ ಹೆಣ್ಣು ಹೆತ್ತಿರುವ ಪೋಷಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿತ್ತು. ಅದರಲ್ಲೂ ಕ್ರೈಸ್ತರ ಪತ್ರಿಕೆಯಾದ ‘ಜಾಗ್ರತಾ’ದಲ್ಲಿ ದೊಡ್ಡ ಲೇಖನವನ್ನೇ ಬರೆದು ಸ್ವಧರ್ಮೀಯರನ್ನು ಎಚ್ಚರಿಸಲಾಗಿತ್ತು. ‘ಈ ಸಾಮಾಜಿಕ ಪೀಡೆಯ ವಿರುದ್ಧ ನಾವು ವಿಶ್ವಹಿಂದೂ ಪರಿಷತ್(ವಿಎಚ್‌ಪಿ) ಜತೆಗೂ ಕೈಜೋಡಿಸುತ್ತಿದ್ದೇವೆ’ ಎಂದು ಕ್ರಿಶ್ಚಿಯನ್ ಅಸೋಸಿಯೇಶನ್ ಫಾರ್ ಸೋಷಿಯಲ್ ಆಕ್ಷನ್(ಇದು ಹಿಂದೂಗಳ ವಿಎಚ್‌ಪಿ-ಶ್ರೀರಾಮಸೇನೆ, ಬ್ಯಾರಿಗಳ ಕೆಎಫ್‌ಡಿ ಇದ್ದಂತೆ ಕ್ತೈಸ್ತರ ನೈತಿಕ ಪೊಲೀಸ್!) ಪದಾಧಿಕಾರಿ ಕೆ.ಎಸ್. ಸ್ಯಾಮ್ಸನ್ ಹೇಳಿದ್ದರು!
‘ಈ ಧೂರ್ತ ತಂತ್ರಕ್ಕೆ ಹಿಂದೂ-ಕ್ರೈಸ್ತ ಎರಡೂ ಧರ್ಮದ ಯುವತಿಯರು ಬಲಿಯಾಗಿದ್ದಾರೆ. ಹಾಗಾಗಿ ನಾವು ಪರಸ್ಪರ ಸಹಕರಿಸುತ್ತಿದ್ದೇವೆ. ಯಾವುದೇ ಹಂತದವರೆಗಾದರೂ ನಾವು ಒಟ್ಟಾಗಿ ಕಾರ್ಯನಿರ್ವಹಿಸುತ್ತೇವೆ. ಕೆಲವು ದಿನಗಳ ಹಿಂದೆ ಕ್ರೈಸ್ತ ಬಾಹುಳ್ಯದ ಸ್ಥಳವೊಂದಲ್ಲಿ ಹಿಂದೂ ಶಾಲಾ ವಿದ್ಯಾರ್ಥಿನಿಯೊಬ್ಬಳು ಬಲಿಪಶುವಾಗಿದ್ದಾಳೆ ಎಂದು ತಿಳಿದುಬಂತು. ನಾವು ಕೂಡಲೇ ವಿಎಚ್‌ಪಿಗೆ ತಿಳಿಸಿದೆವು. ಅದೇ ರೀತಿ ವಿಎಚ್‌ಪಿ ಕೂಡ ಹಲವು ಪ್ರಕರಣಗಳಲ್ಲಿ ನಮಗೆ ಸಹಾಯ ಮಾಡಿದೆ’ ಎಂದೂ ಹೇಳಿದ್ದರು. ಇತ್ತ ಆಪತ್ತಿನಲ್ಲಿ ಸಿಕ್ಕಿಹಾಕಿಕೊಂಡವರಿಗೆ, ನೊಂದವರಿಗೆ ಸಹಾಯ ಮಾಡುವ ಸಲುವಾಗಿ ಕೇರಳದ ವಿಶ್ವಹಿಂದೂ ಪರಿಷತ್ ‘ಹಿಂದೂ ಹೆಲ್ಪ್‌ಲೈನ್’ ಆರಂಭಿಸಿದೆ. ಅದಕ್ಕೆ ಕಳೆದ ಮೂರು ತಿಂಗಳಿನಲ್ಲಿ ಸಹಾಯಯಾಚನೆ ಹಾಗೂ ಬೆದರಿಕೆ ಸೇರಿದಂತೆ 1500 ಕರೆಗಳು ಬಂದಿತ್ತೆಂದರೆ, ನೀವು ನಂಬಲೇ ಬೇಕು.
ಇಷ್ಟೇ ಅಲ್ಲ? ‘ಪ್ರೀತಿ-ಪ್ರೇಮದ ನೆಪದಲ್ಲಿ ಧಾರ್ಮಿಕ ತೀವ್ರವಾದಿಗಳು ನಡೆಸುತ್ತಿರುವ ಲವ್ ಜಿಹಾದ್ ಬಗ್ಗೆ ಕ್ರೈಸ್ತರು ನಿಗಾವಹಿಸ ಬೇಕು. ಲವ್ ಜಿಹಾದ್ ಅಥವಾ ಪವಿತ್ರ ಯುದ್ಧದ ಮೂಲಕ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರನ್ನು ಮತಾಂತರ ಮಾಡಲಾಗಿದೆ. ಈ ಲವ್ ಜಿಹಾದಿಗಳು ಕಾಲೇಜು ಕ್ಯಾಂಪಸ್‌ಗಳಲ್ಲೇ ಇರುತ್ತಾರೆ. ನಿಧಾನವಾಗಿ ಹುಡುಗಿಯರ ಮನಸೆಳೆದು ನಂತರ ವಿವಾಹದ ಪ್ರಸ್ತಾಪವನ್ನಿಡುತ್ತಾರೆ. ಆಕೆ ವಿವಾಹ ಪ್ರಸ್ತಾವವನ್ನು ಒಪ್ಪಿಕೊಂಡ ಕೂಡಲೇ ಮತಾಂತರ ಮಾಡಿಬಿಡುತ್ತಾರೆ. ಆನಂತರ ಆ ಹುಡುಗಿಯರು ಏನಾದರು, ಅವರಿಗೆ ಏನಾಯಿತು ಎಂದು ಯಾರಿಗೂ ಗೊತ್ತಾಗುವುದಿಲ್ಲ’ ಎಂದು ಕೇರಳ ಕ್ಯಾಥೋಲಿಕ್ ಬಿಶಪ್ಸ್ ಕೌನ್ಸಿಲ್‌ನ ‘ಸಾಮಾಜಿಕ ಸೌಹಾರ್ದ ಹಾಗೂ ನಿಗಾ ಆಯೋಗ’ದ ಕಾರ್ಯದರ್ಶಿ ಫಾದರ್ ಆಗಿದ್ದ ಜೋನಿ ಕೊಚ್ಚುಪರಂಬಿಲ್ ಹೇಳಿದ್ದರು. ‘ತಂದೆ- ತಾಯಂದಿರು ಪೊಲೀಸರಿಗೆ ದೂರು ಕೊಡುವುದೂ ವಿರಳ.
ಏಕೆಂದರೆ ಓಡಿ ಹೋಗುವ ಹೆಣ್ಣುಮಕ್ಕಳು ಸಾಮಾನ್ಯವಾಗಿ 18 ವರ್ಷ ಮೀರಿರುತ್ತಾರೆ. ಅವರ ನಿರ್ಧಾರಕ್ಕೆ ಕಾನೂನಿನಡಿ ಸವಾಲೆಸೆಯುವುದಕ್ಕೂ ಆಗುವುದಿಲ್ಲ. ಬಹಳಷ್ಟು ಸಂದರ್ಭದಲ್ಲಿ ಕುಟುಂಬ ಗೌರವಕ್ಕೆ ಅಂಜಿ ಓಡಿಹೋದವಳು ಏನು ಬೇಕಾದರೂ ಆಗಲಿ ಎಂದು ಪೋಷಕರು ಕೈಚೆಲ್ಲಿಬಿಡುತ್ತಾರೆ’ ಎಂದು ಪರಿಸ್ಥಿತಿಯನ್ನು ಜೋನಿ ವಿವರಿಸಿದ್ದರು. ಹೆಣ್ಣು ಮಕ್ಕಳನ್ನು ರಕ್ಷಿಸಿಕೊಳ್ಳುವ ವಿಷಯದಲ್ಲಿ ಪೋಷಕರಿಗೆ ಸಹಾಯ ಮಾಡುವ ಸಲುವಾಗಿ ಕೇರಳದ ಎಲ್ಲ ಚರ್ಚ್ ಹಾಗೂ ಚರ್ಚ್ ಪೋಷಿತ ಶಾಲಾ-ಕಾಲೇಜುಗಳಲ್ಲೂ ಈ ಕ್ರೈಸ್ತ ಆಯೋಗ ಮಾರ್ಗ ಸೂಚಿಗಳನ್ನು ವಿತರಿಸಿದೆ. ಅಲ್ಲ, ಮತಾಂತರದ ಬಗ್ಗೆ ಕ್ಯಾಥೋಲಿಕ್ಕರಿಗೇಕೆ ಭಯ ಅನ್ನುತ್ತೀರಾ?!
ಪಟ್ಟಣಂತಿಟ್ಟ ಕಾಲೇಜಿನಿಂದ ಅಪಹರಣಗೊಂಡಿದ್ದ ಇಬ್ಬರು ಎಂಬಿಎ ವಿದ್ಯಾರ್ಥಿನಿಯರಲ್ಲಿ ಒಬ್ಬಳು ಹಿಂದೂವಾದರೆ, ಮತ್ತೊಬ್ಬಳು ಇಸಾಯಿ! ಮಲಪ್ಪುುರಂ ಜಿಲ್ಲೆಯಲ್ಲಿ ‘ಲವ್ ಜಿಹಾದ್’ಗೆ ಅತಿಹೆಚ್ಚು ಬಲಿಯಾಗಿರುವವರು, ಮತಾಂತರಕ್ಕೊಳಗಾಗಿರುವವರು ಕ್ರೈಸ್ತ ಯುವತಿಯರೇ! 2005ರಿಂದೀಚೆಗೆ ಕೇರಳದಲ್ಲಿ ಸುಮಾರು 4,500ಕ್ಕೂ ಹೆಚ್ಚು ಯುವತಿಯರು ‘ರೋಮಿಯೋ ಜಿಹಾದ್’, ‘ಲವ್ ಜಿಹಾದ್’ಗೆ ಸಿಲುಕಿ ಮುಸ್ಲಿಮರನ್ನು ಮದುವೆಯಾಗಿ, ಬಲವಂತ ಅಥವಾ ಅನಿವಾರ್ಯವಾಗಿ ಮತಾಂತರಗೊಂಡಿದ್ದಾರೆ. ಅದರಲ್ಲಿ ಹಿಂದೂಗಳಷ್ಟೇ ಗಣನೀಯ ಸಂಖ್ಯೆಯಲ್ಲಿ ಕ್ರೈಸ್ತ ಯುವತಿಯರೂ ಇದ್ದಾರೆ. ಈ ಪಿತೂರಿ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿದೆ. ಈ ಘಟನೆಗಳ ಬಗ್ಗೆ ಬ್ರಿಟನ್‌ನ ಪ್ರತಿಷ್ಠಿತ ‘ಟೆಲಿಗ್ರಾಫ್’ ಪತ್ರಿಕೆ ‘”Handsome Muslim men
accused of waging ‘love jihad’ in India’’ ಎಂಬ ಶೀರ್ಷಿಕೆಯಡಿ ದೊಡ್ಡ ಸುದ್ದಿ ಪ್ರಕಟಿಸಿತ್ತು.
ಅಷ್ಟೆಲ್ಲಾ ದೂರ ಏಕೆ ಹೋಗಬೇಕು? ಎಲ್ಲೋ ದೂರದ ಕೇರಳ, ಗಡಿಯ ದಕ್ಷಿಣ ಕನ್ನಡದಲ್ಲಿ ಇಂತಹ ಘಟನೆಗಳಾಗುತ್ತಿವೆ ಎಂದುಕೊಳ್ಳಬೇಡಿ. ನಮ್ಮ ಚಾಮರಾಜನಗರ ಜಿಲ್ಲೆಯಲ್ಲೇ ಒಬ್ಬ ಹುಡುಗಿ ಕೂಡ ‘ಲವ್ ಜಿಹಾದ್’ನಲ್ಲಿ ಸಿಕ್ಕಿಹಾಕಿಕೊಂಡಿದ್ದಳು. ಚಾಮರಾಜನಗರದ ಕುವೆಂಪು ನಗರದ ಸೆಲ್ವರಾಜ್ ಎಂಬವರ ಮಗಳು ಕಳೆದ 2009ರ ಆಗಸ್ಟ್ 8ರಂದು ಇದ್ದಕ್ಕಿದ್ದಂತೆಯೇ ಕಾಣೆಯಾದಳು. ಈ ಬಗ್ಗೆ ಅವರು ಪೋಲಿಸರಿಗೆ ದೂರನ್ನೂ ನೀಡಿದರು. ಆಗಸ್ಟ್ 15ರಂದು ಅಸ್ಗರ್ ಎಂಬಾತ ಕರೆ ಮಾಡಿದ. ನಿಮ್ಮ ಮಗಳನ್ನು ಮದುವೆಯಾಗುತ್ತಿದ್ದೇನೆಂದು ಹೇಳಿದ. ಆನಂತರ ಕೆ.ಪಿ. ಪರಿತ್ ಕುಟ್ಟಿ ಎಂಬಾತನಿಂದ ಕರೆ ಬಂತು. ನಿಮ್ಮ ಮಗಳು ಇಸ್ಲಾಂಗೆ ಮತಾಂತರಗೊಂಡಿದ್ದಾಳೆ, ಆಕೆಯ ಜತೆ ಇನ್ನು ಮುಂದೆ ನೀವು ಯಾವ ಸಂಪರ್ಕವನ್ನೂ ಇಟ್ಟುಕೊಳ್ಳುವಂತಿಲ್ಲ, ಮಾತನಾಡುವಂತಿಲ್ಲ ಎಂದು ತಾಕೀತು ಹಾಕಿದ. ಆದರೆ ಹೆತ್ತಜೀವ ಕೇಳಬೇಕಲ್ಲ? ಸೆಲ್ವರಾಜ್ ಅವರು ಮಗಳನ್ನು ಹುಡುಕುತ್ತ ಪೋಲಿಸರ ಜತೆ ಕೇರಳದ ಕೊಟ್ಟಾಯಂ ಜಿಲ್ಲೆಯ ಎರತ್ತುಪಟ್ಟಿಗೆ ಹೋದರು.
‘ಪೊಲೀಸರ ಜತೆ ನಾನು ಹೊರಟ ಕೂಡಲೇ ಐದಾರು ತಂಡಗಳು ನಮ್ಮನ್ನು ಹಿಂಬಾಲಿಸತೊಡಗಿದವು. ಆ ಮೂಲಕ ಬೆದರಿಸಲು ಆರಂಭಿಸಿದರು. ಪೊಲೀಸರನ್ನೂ ಲೆಕ್ಕಿಸಲಿಲ್ಲ. ಹೇಗೋ ಮಾಡಿ ಮಗಳನ್ನು ಭೇಟಿ ಮಾಡಿದೆ. ಸ್ವಲ್ಪ ಹೊತ್ತು ಮಾತನಾಡಲು ಅವಕಾಶ ಕೊಟ್ಟರು. ನನಗೆ ದನದ ಮಾಂಸ ತಿನ್ನು ಎಂದು ಒತ್ತಾಾಯಿಸುತ್ತಾಾರೆ. ಹೇಗೆ ತಿನ್ನಲಿ? ಎಂದು ನೋವು ತೋಡಿಕೊಂಡಳು. ನಾನು ತಪ್ಪುು ಮಾಡಿದೆ ಎಂದು ರೋಧಿಸಿದಳು’ ಎನ್ನುತ್ತಾರೆ ಸೆಲ್ವರಾಜ್. ಈ ಬಗ್ಗೆ ಕನ್ನಡದ ಜನಪ್ರಿಯ ಚಾನೆಲ್‌ಗಳು ವಿಶೇಷ ವರದಿ ಪ್ರಸಾರ ಮಾಡಿದ್ದನ್ನು ನೀವು ನೋಡಿರಬಹುದು.
ಮಗಳನ್ನು ವಾಪಸ್ ಕರೆದುಕೊಂಡು ಬರುವುದು ಬಿಡಿ, ಹೆಚ್ಚು ಹೊತ್ತು ಮಾತನಾಡುವುದಕ್ಕೂ ಅವಕಾಶ ನೀಡದೇ ಸೆಲ್ವರಾಜ್‌ರನ್ನು ಬೆದರಿಸಿ ಕಳುಹಿಸಲಾಗಿದೆ. ದಾರಿಕಾಣದೇ ಅವರು ಕರ್ನಾಟಕ ಹೈಕೋರ್ಟ್‌ನ ಮೊರೆಹೋಗಿದ್ದರು. ಈ ಬಗ್ಗೆ ಸೂಕ್ತ ದೂರು ಸಲ್ಲಿಸುವಂತೆ ಕೋರ್ಟ್ ಸೂಚಿಸಿತ್ತು. ಇದೊಂದೇ ಅಲ್ಲ, ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ಜರುಗಿರುವ ಇಂತಹ ಮೂರ್ನಾಲ್ಕು ಪ್ರಕರಣಗಳು ಕರ್ನಾಟಕ ಹೈಕೋರ್ಟ್ ಮೊರೆಹೋಗಲು ಮುಂದಾಗಿವೆ. ಮುಂದಿನ ಗುರಿ ಮಡಿಕೇರಿ, ಬೆಳಗಾವಿ, ರಾಯಚೂರು. ಇತ್ತೀಚಿನ ದಿನಗಳಲ್ಲಿ ರಿಯಾಝ್ ಭಟ್ಕಳನಿಂದ ಹಿಡಿದು ದೇಶಬಾಹಿರ ಚಟುವಟಿಕೆಗಳಲ್ಲಿ ಹೆಚ್ಚುಹೆಚ್ಚಾಗಿ ತೊಡಗುತ್ತಿರುವವರೆಲ್ಲ ಕರಾವಳಿ ಭಾಗದವರೇ ಎಂಬ ಅಪಾಯಕಾರಿ ಅಂಶ ಬೆಳಕಿಗೆ ಬರುತ್ತಿದೆ. ಈಗ ಅವರು ‘ಲವ್ ಜಿಹಾದ್’ ಎಂಬ ಹೊಸ ಜಾಡು ಹಿಡಿದಿದ್ದಾರೆ ಅಷ್ಟೇ.
ಹಾದಿಯಾ ಲವ್ ಜಿಹಾದ್ ಪ್ರಕರಣದಲ್ಲಿ ಲವ್ ಜಿಹಾದ್ ಎಂಬುದು ನಿಜಕ್ಕೂ ಇದೆಯೋ ಇಲ್ಲವೋ? ಇದ್ದರೆ ಏನದು? ಸ್ವರೂಪವೇನು? ಹೇಗೆ ನಡೆಯುತ್ತದೆ ಎಂದೆಲ್ಲ ಎನ್‌ಐಎಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಮೊನ್ನೆ ಸುಪ್ರೀಂ ಕೋರ್ಟ್ ಸೂಚಿಸಿದಾಗ ಇವೆಲ್ಲ ನೆನಪಾಯ್ತು. ಅಂದು ಕೇರಳ ಹೈ ಕೋರ್ಟ್ ಯಾವ್ಯಾವ ಪ್ರಶ್ನೆ ಕೇಳಿತ್ತೋ ಹೆಚ್ಚೂಕಡಿಮೆ ಸುಪ್ರೀಂ ಕೋರ್ಟ್ ಈಗ ಅದನ್ನೇ ಕೇಳಿದೆ. ಅಖಿಲಾ ಅಲಿಯಾಸ್ ಹಾದಿಯಾ ಪ್ರಕರಣವೂ ಕೇರಳ ಹೈ ಕೋರ್ಟ್‌ನಿಂದಲೇ ಸುಪ್ರೀಂ ಕೋರ್ಟ್‌ಗೆ ಬಂದದ್ದು. ಕೇರಳ ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿ ಹಾದಿಯಾ ಮತ್ತು ಶೆಫನ್ ಜಹಾನ್ ಮದುವೆಯನ್ನು ಅಸಿಂಧುಗೊಳಿಸಿತ್ತು. ಅದಕ್ಕೆ ಶೆಫನ್ ಜಹಾನ್ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.
ಇದೇನೇ ಇರಲಿ, ಖಂಡಿತ ಪ್ರೀತಿಸುವುದು ತಪ್ಪಲ್ಲ. ಪ್ರೀತಿ, ಪ್ರೇಮಕ್ಕೆ ಜಾತಿ-ಧರ್ಮದ ತಾರತಮ್ಯವೂ ಇಲ್ಲ. ಆದರೆ ಕೆಲವು ಉದ್ದೇಶ, ಗುರಿಗಳನ್ನಿಟ್ಟುಕೊಂಡು ಮಾಡುವ ‘ಪ್ರೀತಿ’, ಪಿತೂರಿಯಾಗಿ ಯುವತಿಯರ ಬದುಕನ್ನೇ ಸುಟ್ಟು ಬಿಡುತ್ತದೆ. ವಿವಾಹ ಭರವಸೆ ನೀಡಿ, ಲೈಂಗಿಕ ಸಂಬಂಧ ಬೆಳೆಸಿ ಅದನ್ನು ಚಿತ್ರೀಕರಿಸಿ ಬ್ಯ್ಲಾಕ್‌ಮೇಲ್ ಮಾಡಿದ ಉಹಾಹರಣೆಗಳೂ ಇವೆ. ಹೀಗೆ ಹೇಳುವ ಹಿಂದಿರುವ ಕಾಳಜಿಯನ್ನು ಅರ್ಥಮಾಡಿಕೊಳ್ಳಿ. ಪ್ರೀತಿಸುವ ಮೊದಲು ನೀವು ಎಂತಹ ವ್ಯಕ್ತಿಯನ್ನು ಪ್ರೀತಿಸಲು ಹೊರಟಿದ್ದೀರಿ ಎಂಬ ಬಗ್ಗೆಯೂ ಯೋಚನೆ ಮಾಡಿ. ಅಷ್ಟಕ್ಕೂ ವಿವೇಚನೆಯಿಲ್ಲದ ಪ್ರೀತಿ ನಿಮ್ಮ ಬದುಕಿನ ಜತೆಗೆ ಹೆತ್ತು-ಹೊತ್ತು, ಸಾಕಿ-ಸಲಹಿದ ಅಪ್ಪ-ಅಮ್ಮನನ್ನೂ ಮಾನಸಿಕವಾಗಿ ಹಿಂಸಿಸಿ ಸಾಯಿಸುತ್ತದೆ.
ಹುಡುಗಿಯರೇ ಹುಷಾರ್!
August 17, 2017
August 16, 2017
August 14, 2017
August 11, 2017
ಬಲಿದಾನಿಗಳ ಸ್ಮರಣೆ ಮಾಡೋಣ, ನವ ಭಾರತದ ಸಂಕಲ್ಪ ಕೈಗೊಳ್ಳೋಣ
ಬಲಿದಾನಿಗಳ ಸ್ಮರಣೆ ಮಾಡೋಣ, ನವ ಭಾರತದ ಸಂಕಲ್ಪ ಕೈಗೊಳ್ಳೋಣ
ಐತಿಹಾಸಿಕ ಘಟನೆಯೊಂದನ್ನು ಹೀಗೂ ವಿಶ್ಲೇಷಿಸಲ್ಪಡುತ್ತವೆ ಎಂಬ ವಿಚಿತ್ರವನ್ನು ನಾವು ಕಳೆದ ಮೂರ್ನಾಲ್ಕು ದಿನಗಳಿಂದ ನೋಡುತ್ತಿದ್ದೇವೆ. ಐತಿಹಾಸಿಕವಾದ ಪ್ರೇರಣೆ ಒಬ್ಬರಿಗೆ ಗುರುವಾಗಿಯೂ ಕಾಣಬಹುದು ಮತ್ತು ಮತ್ತೊಬ್ಬರಿಗೆ ಅದು ಗುರಿ ಇಡಲೂ ಬಳಸಲ್ಪಡಬಹುದು ಎಂಬುದನ್ನು ದೇಶ ನೋಡಿತು. ಒಬ್ಬರು ಮುಂದಿನ ಗುರಿಗೆ ಹಿಂದೊಬ್ಬ ಗುರು ಇರಬೇಕೆನ್ನುವ ವಾದವನ್ನಿಟ್ಟರೆ ಮತ್ತೊಬ್ಬರು, ಹಿಂದಿನ ಪ್ರೇರಣೆಯನ್ನು ತಮಗರಿವಿಲ್ಲದೆ ಹಳಿಯುತ್ತಿದ್ದರು. ಕ್ವಿಟ್ ಇಂಡಿಯಾ ಚಳವಳಿಯ 75ನೇ ವರ್ಷಾಚರಣೆಯಲ್ಲಿ ಕಾಂಗ್ರೆಸ್ ಆರೆಸ್ಸೆಸ್ ಅನ್ನು ಟೀಕಿಸಲು ಆ ಪ್ರೇರಣೆಯನ್ನು ಬಳಸಿಕೊಂಡರೆ ಪ್ರಧಾನಿ ನರೇಂದ್ರ ಮೋದಿಯವರು ಕ್ವಿಟ್ ಇಂಡಿಯಾಕ್ಕೊಂದು ಸ್ಪಷ್ಟತೆಯಿತ್ತು, ಗುರಿಯಿತ್ತು ಎಂಬುದನ್ನು ತಿಳಿಸಿದ್ದರು.
75ವರ್ಷಗಳ ನಂತರವೂ ಆ ಆಶಯವನ್ನು ಈಡೇರಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂಬುದನ್ನು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತಾಡುತ್ತಾ ಹೇಳಿದರು. ದೇಶದ ಸಂಪೂರ್ಣ ಸ್ವರಾಜ್ಯದ ಬೇಡಿಕೆಯಿಂದ ನಡೆದ ಮಹಾ ಘಟನೆಯೊಂದನ್ನು ಹೇಗೆ ವ್ಯಾಖ್ಯಾನಿಸಬೇಕೋ ಹಾಗೆ ಪ್ರಧಾನಿಗಳು ವ್ಯಾಖ್ಯಾನಿಸಿದ್ದರು. ‘ಕ್ವಿಟ್ ಇಂಡಿಯಾ ನಮ್ಮ ಇತಿಹಾಸದ ಒಂದು ಮೈಲಿಗಲ್ಲು. ಮಹಾತ್ಮಾ ಗಾಂಧೀಜಿಯವರ ಮಾಡು ಇಲ್ಲವೇ ಮಡಿ ಎಂಬ ಕರೆಯಿಂದ ಪ್ರೇರಿತರಾಗಿ ದೇಶಾದ್ಯಂತದ ಜನತೆ ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡುವ ಪಣತೊಟ್ಟರು. ಇಂದು ಕ್ವಿಟ್ ಇಂಡಿಯಾದ 75ನೇ ವರ್ಷದ ಆಚರಣೆಯ ಸಂದರ್ಭದಲ್ಲಿ ಅದರಲ್ಲಿ ಪಾಲ್ಗೊಂಡ ಎಲ್ಲರನ್ನೂ ನಾನು ವಂದಿಸುತ್ತೇನೆ.
ಎಲ್ಲರೂ ಭುಜಕ್ಕೆ ಭುಜ ಕೊಟ್ಟು ನಮ್ಮ ಸ್ವಾತಂತ್ರ್ಯ ಯೋಧರು ಹೆಮ್ಮೆ ಪಡುವ ನವ ಭಾರತ ಸೃಷ್ಟಿಸುವತ್ತ ನಮ್ಮನ್ನು ನಾವೇ ಸಮರ್ಪಿಸಿಕೊಳ್ಳುವ ಪ್ರತಿಜ್ಞೆ ಮಾಡೋಣ’ ಎಂಬ ಪ್ರಧಾನಿಯವರ ಮಾತುಗಳನ್ನು ಕೇಳುತ್ತಿದ್ದರೆ ಐತಿಹಾಸಿಕ ಘಟನೆಯನ್ನು ಸರಿಯಾಗಿ ಅರ್ಥೈಸಿಕೊಳ್ಳುವ ಮಾಧರಿಯನ್ನು ಹೇಳುತ್ತಿದ್ದಾರೆ ಎಂದು ದೇಶಕ್ಕೆ ಅನಿಸುತ್ತಿತ್ತು. ಕಾಂಗ್ರೆಸಿನ ಪೂರ್ವಗ್ರಹ ಮತ್ತು ಆರೋಪವನ್ನು ಪಕ್ಕಕ್ಕಿಟ್ಟು ಕ್ವಿಟ್ ಇಂಡಿಯಾ ಚಳವಳಿಯನ್ನು ನೋಡಿದರೆ ಪ್ರಧಾನಿಯವರ ಮಾತುಗಳ ಶಕ್ತಿಯ ಅಂದಾಜಾಗುತ್ತದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದಾಗ ಅವರಲ್ಲಿದ್ದ ಗುರಿಯೇನು? ಅವರಲ್ಲಿ ಭವ್ಯ ಭಾರತದ ಸಂಕಲ್ಪವಿರಲಿಲ್ಲವೇ? ಆ ಸಂಕಲ್ಪದಿಂದ 47ರಲ್ಲಿ ಸ್ವಾತಂತ್ರ್ಯ ಸಿಕ್ಕಿದ್ದು ಸುಳ್ಳೇ? ಅಂಥಾ ಪೂಜನೀಯವಾದ ಪ್ರೇರಣೆಯನ್ನು 75 ವರ್ಷಗಳ ನಂತರ ಕಾಂಗ್ರೆಸ್ ಉಪಯೋಗಿಸಿಕೊಂಡಿದ್ದು ಹೇಗೆ?
ಮೋದಿಯವರು ಮತ್ತು ಅವರು ಪ್ರತಿನಿಧಿಸುವ ಪಕ್ಷ 75 ವರ್ಷದ ಹಿಂದಿನ ಪ್ರೇರಣೆಯನ್ನು ಇಂದಿಗೂ ಕಾಪಿಟ್ಟುಕೊಳ್ಳಲು ಶಕ್ತವಾಗುವುದಾದರೆ ತಾವು ಕ್ವಿಟ್ ಇಂಡಿಯಾದ ವಾರಸುದಾರರು ಎಂದುಕೊಳ್ಳುವವರಿಗೆ ಅದೇಕೆ ಸಾಧ್ಯವಾಗುವುದಿಲ್ಲ. ಸಾಧ್ಯವಾಗಿದೆ ಎನ್ನುವುದಾದರೆ 75ರ ಹೊತ್ತಲ್ಲಿ ಅವರೆಲ್ಲರೂ ಅಪದ್ಧ ನುಡಿದಿದ್ದಾದರೂ ಏಕೆ? ಸ್ವಾತಂತ್ರ್ಯಾನಂತರ ದೀರ್ಘ ಕಾಲಾವಧಿಯಲ್ಲಿ ಆಳಿದವರಿಗೆ ಆ ಪ್ರೇರಣೆಯಿಂದ ಒಂದು ಸಂಕಲ್ಪವೇ ಹುಟ್ಟಲಿಲ್ಲ ಯಾಕೆ? ಅದು ಮೋದಿಯವರಿಗೇ ಹುಟ್ಟಿತ್ತು ಹೇಗೆ? ಆ ಸಂಕಲ್ಪಕ್ಕೇನು ಸಾವಿರ ವರ್ಷ ತಪಸು ಮಾಡಬೇಕಿತ್ತೇ?
ನಾವೆಲ್ಲರೂ 2022ರ ಹೊತ್ತಿಗೆ ನವ ಭಾರತ ನಿರ್ಮಿಸುವ ಸಂಕಲ್ಪ ಮಾಡೋಣ
ನಾವೆಲ್ಲರೂ ಒಂದಾಗಿ ಸ್ವಚ್ಚ ಭಾರತದ ಸಂಕಲ್ಪ ಮಾಡೋಣ
ನಾವೆಲ್ಲರೂ ಒಂದಾಗಿ ಬಡತನ ಮುಕ್ತ ಭಾರತದ ಸಂಕಲ್ಪ ಮಾಡೋಣ
ನಾವೆಲ್ಲರೂ ಒಂದಾಗಿ ಭ್ರಷ್ಟಾಚಾರ ಮುಕ್ತ ಭಾರತದ ಸಂಕಲ್ಪ ಮಾಡೋಣ
ನಾವೆಲ್ಲರೂ ಒಂದಾಗಿ ಭಯೋತ್ಪಾದನಾ ಮುಕ್ತ ಭಾರತದ ಸಂಕಲ್ಪ ಮಾಡೋಣ
ನಾವೆಲ್ಲರೂ ಒಂದಾಗಿ ಕೋಮುವಾದ ಮುಕ್ತ ಭಾರತದ ಸಂಕಲ್ಪ ಮಾಡೋಣ
ನಾವೆಲ್ಲರೂ ಒಂದಾಗಿ ಜಾತಿಯತೆ ಮುಕ್ತ ಭಾರತದ ಸಂಕಲ್ಪ ಮಾಡೋಣ
ನಾವೆಲ್ಲರೂ ಒಂದಾಗಿ ನವಭಾರತದ ಈ ಸಂಕಲ್ಪ ಸಾಧನೆಗಾಗಿ ಶ್ರಮಿಸೋಣ
ಈ ಸಂಕಲ್ಪ ಯಾವ ಸಿದ್ಧಾಂತ? 1942ರ ಹೋರಾಟಗಾರರಲ್ಲಿದ್ದ ಸಂಕಲ್ಪ ಇದಕ್ಕಿಂತ ಹೇಗೆ ಭಿನ್ನ? ಅಂಥಲ್ಲಿ 75ರ ಹೊತ್ತಲ್ಲಿ ಕಾಂಗ್ರೆಸಿಗರ ಭಾಷಣಗಳೇನಿದ್ದವು? ಕ್ವಿಟ್ ಇಂಡಿಯಾ ಚಳವಳಿಯ 75 ವರ್ಷಗಳ ಆಚರಣೆಯಲ್ಲಿ ಮೂಡಿಬಂದ ಈ ಸಂಕಲ್ಪದ ಹೊತ್ತಲ್ಲೇ 70ನೇ ಸ್ವಾಾತಂತ್ರ್ಯೋತ್ಸವವೂ ಬಂದಿದೆ. ಅದನ್ನು ಪಡೆದ ರೀತಿ, ಹೋರಾಟದ ಮಾದರಿಗಳಲ್ಲಿ ರಾಷ್ಟ್ರೀಯತೆಯನ್ನು ಕಾಣುವವರಿಗೆ ಸಂಕಲ್ಪದಲ್ಲೇನೂ ಗೊಂದಲ ಕಾಣುವುದಿಲ್ಲ. ಏಕೆಂದರೆ ಸ್ವಾತಂತ್ರ್ಯದ ಉದ್ದೇಶ ಏನೇನಿತ್ತೋ ಆ ಎಲ್ಲಾ ಆಶೋತ್ತರಗಳು ಈ ಸಂಕಲ್ಪಗಳ ರೂಪದಲ್ಲಿ ಮೂಡಿಬಂದಿವೆ. ಅಂದರೆ ಪೂರ್ಣ ಸ್ವರಾಜ್ಯವನ್ನು 2022ರಲ್ಲಾದರೂ ಸಾಧಿಸುವ ಗುರಿ ಪ್ರಧಾನಿಗಳದ್ದು. ಮೇಲಿನ ಎಲ್ಲಾ ಸಂಕಲ್ಪಗಳನ್ನು ಮತ್ತೊಮ್ಮೆ ಅವಲೋಕಿಸಿದರೂ ಅವುಗಳನ್ನು ಈಡೇರಿಸುವ ಆವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿವೆ ಎನಿಸುತ್ತವೆ. 1942ಕ್ಕಿಂತಲೂ ಮೊದಲು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಇದ್ದಿದ್ದು ಕೂಡಾ ಇಂಥದ್ದೇ ಸಂಕಲ್ಪ.
ಸ್ವಾತಂತ್ರ್ಯ ಹೋರಾಟದ ಎಲ್ಲಾ ಮಜಲುಗಳಲ್ಲಿ ಏಕರೂಪವಾಗಿ ಇವು ಹರಳುಗಟ್ಟಿದ್ದನ್ನು ನಾವು ಚರಿತ್ರೆಯಲ್ಲಿ ಕಾಣುತ್ತೇವೆ. ಅದರ ಜತೆಗೆ ಸ್ವಾತಂತ್ರ್ಯ ಎಂಬ ಸಂಕಲ್ಪದಿಂದ ದೇಶ ಜಾತಿ, ಮತ, ಪಂಥಗಳನ್ನು ದಾಟಿ ಹೋರಾಟಗಾರರು ಉದಿಸಿ ಬಂದದ್ದನ್ನೂ ನಾವು ಇತಿಹಾಸದಲ್ಲಿ ಕಾಣುತ್ತೇವೆ. ಆ ಚರಿತ್ರೆಯ ನೆನಪು ಮಾತ್ರ ಇಂಥ ಸಂಕಲ್ಪವನ್ನು ಮೂಡಿಸುತ್ತದೆ. ಮತೀಯವಾದದ ಆರ್ಭಟದ ಇಂದಿನ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಅದು ಗೌಣವಾಗಿತ್ತು ಎಂಬ ಸಂಗತಿ ಕೂಡಾ ಈ ಸಂಕಲ್ಪದ ಹೊತ್ತಲ್ಲಿ ಮುಖ್ಯವಾಗುತ್ತದೆ.
ಇನ್ನೇನು ಕೆಲವೇ ದಿನಗಳಲ್ಲಿ 70ನೇ ಸ್ವಾತಂತ್ರ್ಯೋತ್ಸವ ಬರಲಿದೆ. ಈ ಹೊತ್ತಲ್ಲಿ ಪ್ರಧಾನಿಯವರ ಸಂಕಲ್ಪ ಮತ್ತು ಆ ಸಂಕಲ್ಪಕ್ಕಾಗಿ ಕ್ವಿಟ್ ಇಂಡಿಯಾಕ್ಕಿಂತಲೂ ಮುಂಚೆ ಹೋರಾಟ ಮಾಡಿದ ಮಹಾತ್ಮನೊಬ್ಬನ ನೆನಪು ಮಾಡಿಕೊಳ್ಳಬೇಕೆನಿಸುತ್ತದೆ. ಅಂಥವರ ನೆನಪು ಕಾಂಗ್ರೆಸಿನ ಟೀಕೆಗಳು ಹೇಗೆ ಹುರುಳಿಲ್ಲದವು ಎಂಬುದನ್ನೂ ಬಿಚ್ಚಿಡುತ್ತವೆ. ಏಕೆಂದರೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರತೀ ಹೋರಾಟಗಾರರನ್ನೂ ಆರೆಸ್ಸೆಸ್ ತಮ್ಮವ ಎಂದುಕೊಳ್ಳುತ್ತದೆ. ನಿಜ, ಅಂಥವರು ಸಮಸ್ತ ದೇಶದ ಆಸ್ತಿ. ಅವರೆಲ್ಲರೂ ಆರೆಸ್ಸೆಸ್ಸಿನ ಆಸ್ತಿ ಕೂಡಾ.
ಅಂಥವರಲ್ಲೊಬ್ಬರು ಆಶ್ಫಾಕುಲ್ಲಾ ಖಾನ್.
1900, ಅಕ್ಟೋಬರ್ 22ರಂದು ಜನಿಸಿದ ಆಶ್ಫಾಕ್‌ನ ತಂದೆ ಶಫೀಕುಲ್ಲಾ ಖಾನ್ ಬ್ರಿಟಿಷ್ ಆಡಳಿತದಲ್ಲಿ ಪೊಲೀಸ್ ಕೆಲಸದಲ್ಲಿದ್ದರು. ಮೂಲತಃ ಉತ್ತರ ಪ್ರದೇಶದ ಶಹಜಹಾನ್‌ಪುರದವರು. 1921ರಲ್ಲಿ ಮಹಾತ್ಮ ಗಾಂಧೀಜಿಯವರು ಅಸಹಕಾರ ಚಳವಳಿ ಆರಂಭಿಸಿದರು. ಬ್ರಿಟಿಷರಿಗೆ ಯಾರೂ ತೆರಿಗೆ ನೀಡಬೇಡಿ, ಬ್ರಿಟಿಷ್ ಆಡಳಿತದೊಂದಿಗೆ ಸಹಕರಿಸಬೇಡಿ ಎಂದು ಗಾಂಧೀಜಿ ನೀಡಿದ ಕರೆ ಇಡೀ ದೇಶವಾಸಿಗಳನ್ನು ಬಡಿದೆಬ್ಬಿಸಿತು. ಯುವಕ ಆಶ್ಫಾಕ್ ಮನ ಕೂಡ ಚಳವಳಿಯತ್ತ ಸೆಳೆಯಿತು. ಹೀಗೆ ದೇಶಕ್ಕೆ ದೇಶವೇ ಚಳವಳಿಗೆ ಧುಮುಕಿ ಬ್ರಿಟಿಷರಿಗೆ ನಡುಕು ಹುಟ್ಟಿಸಲಾರಂಭಿಸಿತು. ಅದು ಕೆಲವೊಮ್ಮೆ ಹಿಂಸಾಚಾರಕ್ಕೆ ತಿರುಗುವ ಲಕ್ಷಣವನ್ನೂ ತೋರಿತು. 1922, ಫೆಬ್ರವರಿ 4ರಂದು ಹಾಗೇ ಆಯಿತು. ಚೌರಿಚೌರಾ ಎಂಬಲ್ಲಿ ನಿಶ್ಶಸ್ತ್ರಧಾರಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡುಹಾರಿಸಿ ಮೂವರನ್ನು ಹತ್ಯೆಗೈದಾಗ ರೊಚ್ಚಿಗೆದ್ದ ಜನ ಪೊಲೀಸ್ ಠಾಣೆಯನ್ನು ದಹಿಸಿದ ಕಾರಣ 22 ಪೊಲೀಸರು ಪ್ರಾಣ ಕಳೆದುಕೊಳ್ಳಬೇಕಾಗಿ ಬಂತು. ಪ್ರತಿಭಟನೆ ಕೈಮೀರಿ ಹೋಗುವುದು, ಕೆಲವೊಮ್ಮೆ ಹಿಂಸಾಚಾರಕ್ಕೆ ತಿರುಗುವುದು ಸಹಜ ಹಾಗೂ ನಿರೀಕ್ಷಿತ. ಆದರೆ ಇಂಥದ್ದೊಂದು ಕ್ಷುಲ್ಲಕ ಕಾರಣವನ್ನೇ ದೊಡ್ಡದು ಮಾಡಿದ ಕಾಂಗ್ರೆಸ್ ಪಕ್ಷ ಅಸಹಕಾರ ಚಳವಳಿಯನ್ನೇ ಕೈಬಿಟ್ಟಿತು!
ಇಂಥ ನಿರ್ಧಾರದಿಂದಾಗಿ ಲಕ್ಷಾಂತರ ಯುವಕರು ನಿರಾಸೆಗೊಂಡರು. ಅವರಲ್ಲಿ ಆಶ್ಫಾಕುಲ್ಲಾ ಖಾನ್ ಕೂಡ ಒಬ್ಬ. ಈ ದೇಶ ಆದಷ್ಟು ಬೇಗ ಸ್ವತಂತ್ರಗೊಳ್ಳಬೇಕು. ಅಂಥದ್ದೊಂದು ನಿರೀಕ್ಷೆ, ಉದ್ದೇಶವನ್ನಿಟ್ಟುಕೊಂಡಿದ್ದ ಆಶ್ಫಾಕ್ ಕ್ರಾಂತಿಕಾರಿಗಳ ಪಡೆ ಸೇರಲು ಮುಂದಾದ. ಆ ಕಾಲದಲ್ಲಿ ಶಹಜಹಾನ್‌ಪುರದಲ್ಲಿ ದೊಡ್ಡ ಕ್ರಾಂತಿಕಾರಿಯೆಂದರೆ ರಾಮ್‌ಪ್ರಸಾದ್. ಹೌದು, ಪಂಡಿತ್ ರಾಮ್‌ಪ್ರಸಾದ್ ಬಿಸ್ಮಿಲ್! ಆತನ ಜತೆ ದೋಸ್ತಿ ಬೆಳೆಸಲು ದೊಡ್ಡ ಅಡಚಣೆಯೊಂದಿತ್ತು. ರಾಮ್‌ಪ್ರಸಾದ್ ‘ಆರ್ಯಸಮಾಜ’ದ ಸದಸ್ಯ. ಕ್ರಾಂತಿಕಾರಿಗಳಿಗೆ ಹಿಂದೂ ಧರ್ಮದ ಹಿರಿಮೆ, ಮಹಿಮೆಯನ್ನು ಸಾರುತ್ತಿದ್ದ. ಇಚ್ಛಿಸಿದವರನ್ನು ಮರಳಿ ಮಾತೃಧರ್ಮಕ್ಕೆ ಕರೆತರುವ ಕಾರ್ಯವನ್ನೂ ಮಾಡುತ್ತಿದ್ದ. ಅಂತಹ ಪ್ರತಿಜ್ಞೆಯನ್ನೂ ಗೈದಿದ್ದ. ಇತ್ತ ಆಶ್ಫಾಕ್ ಅಷ್ಟೇ ದೈವನಿಷ್ಠ, ಶ್ರದ್ಧಾವಂತ ಮುಸ್ಲಿಂ. ಹಾಗಂತ ರಾಮ್‌ಪ್ರಸಾದ್‌ನ ಸ್ನೇಹಕ್ಕೆ ಕೈಚಾಚಲು ಆತನಿಗೆ ಧರ್ಮ ಅಡ್ಡಿ ಬರಲಿಲ್ಲ. ಹಾಗೆ ನೋಡಿದರೆ ಆಶ್ಫಾಕ್ ಜತೆ ದೋಸ್ತಿ ಮಾಡಲು ರಾಮ್‌ಪ್ರಸಾದ್‌ಗೇ ಇಷ್ಟವಿರಲಿಲ್ಲ, ಅಳುಕು, ಅನುಮಾನ ತೋರತೊಡಗಿದ, ಪ್ರಾರಂಭದಲ್ಲಿ ನಿರಾಕರಣೆಯನ್ನೂ ಮಾಡಿದ. ಸಾವನ್ನು ಎದುರು ನೋಡುತ್ತಾ ಜೈಲಿನಲ್ಲಿ ಕುಳಿತಿರುವಾಗ ಗೌಪ್ಯವಾಗಿ ಬರೆದ ತನ್ನ ಆತ್ಮಚರಿತ್ರೆಯಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್, ತಮ್ಮಿಬ್ಬರ ನಡುವಿನ ಮೊದಲ ಭೇಟಿ ಹಾಗೂ ತನ್ನೊಳಗೆ ತಲೆಯೆತ್ತಿದ ಅನುಮಾನದ ಬಗ್ಗೆ ಹೀಗೆ ಹೇಳುತ್ತಾನೆ.
‘ನಾವಿಬ್ಬರು ಶಹಜಹಾನ್‌ಪುರದ ಶಾಲೆಯಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದು ನನಗೆ ಚೆನ್ನಾಗಿ ನೆನಪಿದೆ. ಬ್ರಿಟಿಷರು ಶಾಶ್ವತವಾಗಿ ಭಾರತವನ್ನಾಳುವ ಉದ್ದೇಶವನ್ನು ಬಹಿರಂಗಪಡಿಸಿದ ನಂತರ ನಮ್ಮ ಭೇಟಿ ನಡೆಯಿತು. ನೀನು ನನ್ನನ್ನು ಭೇಟಿಯಾಗಲು, ಬಹುಮುಖ್ಯ ವಿಷಯವೊಂದರ ಬಗ್ಗೆ ಮಾತುಕತೆ ನಡೆಸಲು ಪ್ರಾಮಾಣಿಕವಾಗಿಯೇ ಪ್ರಯತ್ನಿಸುತಿದ್ದೆ. ಆದರೆ ಮುಸ್ಲಿಮನಾದ ಕಾರಣ ನಿನ್ನ ಉದ್ದೇಶದ ಬಗ್ಗೆ ನಾನು ಸಂಶಯ ಹೊಂದಿದೆ. ನಿನ್ನ ಜತೆ ನಾನು ಅವಮಾನಕಾರಿಯಾಗಿ ಮಾತನಾಡಿದಾಗ ನೀನು ತುಂಬಾ ನೊಂದುಕೊಂಡೆ ಎಂದು ನನಗೆ ಗೊತ್ತು. ಇಷ್ಟಾಗಿಯೂ ನೀನು ಸೋಗುಹಾಕುತ್ತಿಲ್ಲ, ಪ್ರಾಮಾಣಿಕ ಕಾಳಜಿ ಹೊಂದಿದ್ದೀಯಾ ಎಂಬುದನ್ನು ಸ್ನೇಹಿತರ ಮೂಲಕ ಮನವರಿಕೆ ಮಾಡಿಕೊಡಲು ಯತ್ನಿಸಿದೆ. ನೀನು ಈ ದೇಶಕ್ಕಾಗಿ ಹೋರಾಡಲು ಕಟಿಬದ್ಧವಾಗಿದ್ದೆ. ಕೊನೆಗೆ ಜಯ ನಿನ್ನದಾಯಿತು. ನಿನ್ನ ಪ್ರಯತ್ನದಿಂದ ನನ್ನ ಹೃದಯದಲ್ಲೂ ಸ್ಥಾನ ಪಡೆದೆ’
ಹಾಗೆನ್ನುವ ರಾಮ್‌ಪ್ರಸಾದ್ ಹಾಗೂ ಆಶ್ಫಾಕ್ ನಡುವೆ ಕೊನೆಗೂ ಸ್ನೇಹ ಬೆಳೆಯಿತು. ಒಟ್ಟಿಗೇ ವಾಸ, ಒಟ್ಟಿಗೇ ಊಟ ಆರಂಭವಾಯಿತು. ರಿವಾಲ್ವರ್, ಬಾಂಬ್ ಹಾಗೂ ಇತರ ಶಸ್ತ್ರಾಸ್ತ್ರಗಳಿಂದ ಮಾತ್ರ ಬ್ರಿಟಿಷರನ್ನು ಬಗ್ಗುಬಡಿಯಲು ಸಾಧ್ಯ ಎಂದು ಭಾವಿಸಿದರು. ಅವರ ಎಲ್ಲ ಚಟುವಟಿಕೆಗಳ ಮುಖ್ಯ ಕೇಂದ್ರ ಕಾಶಿ(ವಾರಾಣಸಿ) ಆಗಿತ್ತು. ಎಲ್ಲರೂ ಸೇರಿ ‘ಹಿಂದೂಸ್ಥಾನ್ ರಿಪಬ್ಲಿಕನ್ ಆರ್ಮಿ’ ಎಂಬ ಸಂಘಟನೆ ಆರಂಭಿಸಿದರು. ಶಸ್ತ್ರಾಸ್ತ್ರ ಕ್ರಾಂತಿಯ ಮೂಲಕ ದೇಶವನ್ನು ದಾಸ್ಯದಿಂದ ವಿಮೋಚನೆ ಮಾಡುವುದು ಅದರ ಉದ್ದೇಶವಾಗಿತ್ತು. 1925ರಲ್ಲಿ ಸಂಘಟನೆ ತನ್ನ ಪ್ರಣಾಳಿಕೆಯನ್ನು ಹೊರತಂದಿತು. ಅದರ ಹೆಸರು ‘ಕ್ರಾಂತಿಕಾರಿ’. ಶಹಜಹಾನ್‌ಪುರದ ಮುಖ್ಯ ಸಂಘಟಕ ರಾಮ್‌ಪ್ರಸಾದ್ ಬಿಸ್ಮಿಲ್ಲಾನೇ ಆಗಿದ್ದ. ತಮ್ಮ ಕ್ರಾಂತಿಕಾರಿ ಚಟುವಟಿಕೆಯನ್ನು ಮುಂದುವರಿಸಲು ಬೇಕಾದ ಹಣ ಸಂಗ್ರಹಣೆಗಾಗಿ ಸುತ್ತಮುತ್ತಲಿನ ಗ್ರಾಮಗಳ ಶ್ರೀಮಂತರ ಮನೆಗಳನ್ನು ಲೂಟಿ ಮಾಡಲಾರಂಭಿಸಿದರು. ಪರವಾನಗಿ ಹೊಂದಿದ್ದ ಅಣ್ಣನ ರೈಫಲ್‌ನ ಹೊತ್ತು ತಂದ ಆಶ್ಫಾಕ್ ಲೂಟಿಯಲ್ಲಿ ಮುಖ್ಯಪಾತ್ರ ವಹಿಸತೊಡಗಿದ. ಆದಾಗ್ಯೂ ಇಂತಹ ಲೂಟಿಗಳಿಂದ ದೊರೆಯುತ್ತಿದ್ದ ಹಣದ ಪ್ರಮಾಣ ತೀರಾ ಕಡಿಮೆಯಾಗಿರುತ್ತಿತ್ತು. ರಿವಾಲ್ವರ್, ಬಾಂಬ್ ತಯಾರಿಸುವ ಚಟುವಟಿಕೆಗೆ ಅಪಾರ ನಿಧಿ ಬೇಕಿತ್ತು.
ಆಗ ಹೊಳೆದಿದ್ದೇ ‘ಕಾಕೋರಿ ಟ್ರೇನ್ ರಾಬರಿ’!
ಒಮ್ಮೆ ಶಹಜಹಾನ್‌ಪುರದಿಂದ ಲಖನೌಗೆ ಪ್ರಯಾಣಿಸುತ್ತಿದ್ದ ರಾಮ್‌ಪ್ರಸಾದ್, ಪ್ರತಿ ಠಾಣೆಯಲ್ಲೂ ಹಣದ ಚೀಲವನ್ನು ರೈಲಿನ ಗಾರ್ಡ್‌ಗಳ ವ್ಯಾನಿಗೆ ತುಂಬುವುದನ್ನು ಗಮನಿಸಿದ. ಲಖನೌದಲ್ಲಿ ಅಷ್ಟೇನು ಪೊಲೀಸ್ ಭದ್ರತೆ ಇಲ್ಲ ಎಂಬುದನ್ನೂ ಖಾತ್ರಿ ಮಾಡಿಕೊಂಡ. ಕನಿಷ್ಠ 10 ಸಾವಿರ ರೂ.ಗಳಾದರೂ ಚೀಲದಲ್ಲಿರುತ್ತದೆ ಎಂದು ಅಂದಾಜು ಮಾಡಿದ. ರೈಲಿನ ನಂಬರ್ ಹಾಗೂ ಸಮಯವನ್ನು ದಾಖಲು ಮಾಡಿಕೊಂಡ. ಖ್ಯಾತ ‘ಕಾಕೋರಿ ರೈಲು ಲೂಟಿ’ ಪಿತೂರಿ ಸ್ಕೆಚ್ ಆರಂಭವಾಗಿದ್ದೇ ಅಲ್ಲಿಂದ. ಕಾಶಿ, ಕಾನ್ಪುರ, ಲಖನೌ ಹಾಗೂ ಆಗ್ರಾದ ಕ್ರಾಂತಿಕಾರಿಗಳ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ರಾಮ್‌ಪ್ರಸಾದ್, ಲೂಟಿ ಯೋಜನೆಯನ್ನು ಮುಂದಿಟ್ಟ. ಒಂದು ವೇಳೆ, ರಾಬರಿಯಲ್ಲಿ ನಾವು ಯಶಸ್ವಿಯಾದರೆ ನಮ್ಮ ಚಟುವಟಿಕೆಗೆ ಬೇಕಾದ ಸಂಪೂರ್ಣ ಹಣ ದೊರೆಯುತ್ತದೆ. ಪ್ರಯಾಣಿಕರಿಗೆ ತೊಂದರೆಯಾಗದಂತೆಯೇ ಯೋಜನೆಯನ್ನು ಕಾರ್ಯಗತ ಮಾಡಿಕೊಳ್ಳಬಹುದು. ಆದರೆ ಕೆಲಸ ಸ್ವಲ್ಪ ಕಷ್ಟ ಹಾಗೂ ಬಹಳ ಎಚ್ಚರಿಕೆಯಿಂದ ಮಾಡಬೇಕು ಎಂದು ಮಾತು ಮುಗಿಸಿದ ಆಶ್ಫಾಕ್ ವಿರೋಧ ವ್ಯಕ್ತಪಡಿಸಿದ. ಇದೊಂದು ಆತುರದ ಕ್ರಮ. ನಮ್ಮ ಬಲಾಬಲಕ್ಕೂ ಸರಕಾರದ ಸಾಮರ್ಥ್ಯಕ್ಕೂ ತಾಳೆಹಾಕಲು ಸಾಧ್ಯವೇ? ಸಣ್ಣಪುಟ್ಟ ಕಳ್ಳತನ ಮಾಡಿ ಸಿಕ್ಕಿಬಿದ್ದಾಗಲೇ ಪೊಲೀಸರ ಆತಿಥ್ಯ ಸ್ವೀಕರಿಸಬೇಕಾಗುತ್ತದೆ. ಇನ್ನು ಸರಕಾರದ ಹಣ ಲೂಟಿ ಮಾಡಿದರೆ ಇಡೀ ಪೊಲೀಸ್ ಪಡೆಯನ್ನೇ ಬಳಸಿ ನಮ್ಮನ್ನು ಹತ್ತಿಕ್ಕಲು ಮುಂದಾಗುತ್ತದೆ. ಈ ಐಡಿಯಾ ಬೇಡ, ಬಂಧನದಿಂದ ತಪ್ಪಿಸಿಕೊಳ್ಳಲು ಖಂಡಿತ ಸಾಧ್ಯವಿಲ್ಲ ಎಂದ ಆಶ್ಫಾಕ್. ಆದರೆ ಭಾವವೇಶದಿಂದಿದ್ದ ಕ್ರಾಂತಿಕಾರಿಗಳು ಒಂದು ಕೈ ನೋಡಿ ಬಿಡೋಣ ಎಂದ ಕಾರಣ ಯೋಜನೆಯನ್ನು ಜಾರಿಗೆ ತರುವ ನಿರ್ಧಾರ ಕೈಗೊಳ್ಳಲಾಯಿತು. ಆಶ್ಫಾಕ್ ಕೂಡ ಶಿಸ್ತಿನ ಸಿಪಾಯಿಯಂತೆ ತಲೆಯಾಡಿಸಿದ. ಅಲ್ಲಿಗೆ ಅಂದಿನ ಮಾತುಕತೆ ಮುಗಿಯಿತು.
1925, ಆಗಸ್ಟ್ 9.
ಶಹಜಹಾನ್‌ಪುರದಿಂದ ಲಖನೌಗೆ ಹೊರಟಿದ್ದ ಎಂಟನೇ ನಂಬರ್‌ನ ರೈಲು ಕಾಕೋರಿಯನ್ನು ಸಮೀಪಿಸುತ್ತಿರುವಾಗ ಯಾರೋ ಎಮರ್ಜೆನ್ಸಿ ಚೈನು ಎಳೆದರು. ರೈಲು ನಿಂತಿತು. ಎರಡನೇ ದರ್ಜೆ ಬೋಗಿಯಲ್ಲಿದ್ದ ಆಶ್ಫಾಕ್, ಸಚೀಂದ್ರ ಬಕ್ಷಿ ಹಾಗೂ ರಾಜೇಂದ್ರ ಲಹಿರಿ ಕೂಡಲೇ ಕೆಳಗಿಳಿದರು. ಅಲ್ಲಿಗೆ ಯೋಜನೆಯ ಮೊದಲ ಹಂತ ಮುಗಿಯಿತು. ಚೈನು ಎಳೆದಿದ್ದು ಯಾವ ಭೋಗಿಯಲ್ಲಿ ಎಂದು ತಪಾಸಣೆ ಮಾಡಲು ಗಾರ್ಡ್ ಕೆಳಗಿಳಿದ. ಮೂವರೂ ಆತನನ್ನು ನೆಲಕ್ಕುರುಳಿಸಿದರು. ಇನ್ನಿಬ್ಬರು ಚಾಲಕನನ್ನು ರೈಲಿನಿಂದ ಕೆಳದಬ್ಬಿದರು. ರೈಲಿನ ತುದಿಯಲ್ಲಿ ನಿಂತ ಕ್ರಾಂತಿಕಾರಿ ಪಿಸ್ತೂಲ್ ತೆಗೆದು ಗುಂಡಿನ ಶಬ್ದಗೈದ. ಪ್ರಯಾಣಿಕರು ಬೆಚ್ಚಿಬಿದ್ದಿದ್ದನ್ನು ನೋಡಿ, ‘ನೀವ್ಯಾರೂ ಭಯಪಡಬೇಡಿ. ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಕ್ರಾಂತಿಕಾರಿಗಳು. ನಿಮಗೆ ಯಾವುದೇ ತೊಂದರೆ ಮಾಡುವುದಿಲ್ಲ. ಕದಲದೇ ಕುಳಿತುಕೊಳ್ಳಿ’ ಎಂದು ಕೂಗಿ ಹೇಳಿದರು.
ಹಣದ ಚೀಲವನ್ನು ಹೊಂದಿದ್ದ ಕಬ್ಬಿಣದ ಕಪಾಟನ್ನು ಕೆಳಕ್ಕೆ ಹಾಕಿದರು. ಸುತ್ತಿಗೆ ತೆಗೆದು ಎಷ್ಟೇ ಬಡಿದರೂ ಪೆಟ್ಟಿಗೆ ಬಾಯಿ ತೆರೆಯುತ್ತಿಲ್ಲ? ಇದ್ದವರಲ್ಲಿ ಆಶ್ಫಾಕ್‌ನೇ ಕಟ್ಟುಮಸ್ತು. ಸುತ್ತಿಗೆ ತೆಗೆದುಕೊಂಡು ಜೋರಾಗಿ ಏಟು ಹಾಕತೊಡಗಿದ. ಕೊನೆಗೂ ಪೆಟ್ಟಿಗೆ ಒಡೆಯಿತು. ರಗ್ಗುಗಳಲ್ಲಿ ಹಣವನ್ನು ಸುತ್ತಿಕೊಂಡು, ತಲೆಮೇಲೆ ಹೊತ್ತು ಲಖನೌದತ್ತ ಹೊರಟರು. ಸ್ವಾತಂತ್ರ್ಯಗಳಿಸಲು ಯಾವ ಕಾರ್ಯಕ್ಕೂ, ಯಾವ ತ್ಯಾಗಕ್ಕೂ ಸಿದ್ಧರಾಗಿದ್ದ ಕ್ರಾಂತಿಕಾರಿಗಳ ಅಚಲ ನಂಬಿಕೆ, ಅಚಲ ನಿರ್ಧಾರ ಅಸಾಧ್ಯವನ್ನೂ ಸಾಧ್ಯವಾಗಿಸಿತು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೊಸ ಅಧ್ಯಾಯವೊಂದಕ್ಕೆ ನಾಂದಿ ಹಾಡಿತು. ಇಷ್ಟೆಲ್ಲಾ ಸಾಧಿಸಿದ್ದು ಕೇವಲ 10 ಜನ!
ರಾಮ್‌ಪ್ರಸಾದ್ ಬಿಸ್ಮಿಲ್, ಆಶ್ಫಾಕುಲ್ಲಾ ಖಾನ್, ರಾಜೇಂದ್ರ ಲಹಿರಿ, ಠಾಕೂರ್ ರೋಶನ್ ಸಿಂಗ್, ಸಚೀಂದ್ರ ಬಕ್ಷಿ, ಚಂದ್ರ ಶೇಖರ್ ಆಝಾದ್, ಕೇಶವ ಚಕ್ರವರ್ತಿ, ಬನ್ವಾರಿ ಲಾಲ್, ಮುಕುಂದಿ ಲಾಲ್ ಮತ್ತು ಮನ್ಮಥ್ ನಾಥ್ ಗುಪ್ತಾ. ಕಾಕೋರಿ ರೈಲು ರಾಬರಿ ನಡೆದು ಒಂದು ತಿಂಗಳು ಕಳೆದರೂ ಸರಕಾರಕ್ಕೆ ಯಾರೊಬ್ಬರನ್ನೂ ಬಂಧಿಸಲಾಗಲಿಲ್ಲ. ಆದರೆ ಅವರನ್ನೆಲ್ಲಾ ಹಿಡಿಯಲು ಸರಕಾರ ದೊಡ್ಡ ಬಲೆಯನ್ನೇ ಬೀಸಿತ್ತು, ಜಾಲವನ್ನೇ ಹರಡಿತ್ತು. 1925, ಆಗಸ್ಟ್ 26ರಂದು ರಾಮ್‌ಪ್ರಸಾದ್ ಬಿಸ್ಮಿಲ್ ಸಿಕ್ಕಿಬಿದ್ದ. ಅರೆಸ್ಟ್ ಮಾಡುವಷ್ಟರಲ್ಲಿ ಆಶ್ಫಾಕ್ ಪರಾರಿಯಾಗಿಬಿಟ್ಟ. ಎಲ್ಲರೂ ಸಿಕ್ಕಿಬಿದ್ದರೂ ಆಶ್ಫಾಕ್ ಮಾತ್ರ ಸಿಗಲಿಲ್ಲ. ಕಾಶಿಗೆ ಹೋಗುವಲ್ಲಿ ಯಶಸ್ವಿಯಾದ ಆತನನ್ನು ಬನಾರಸ್ ವಿಶ್ವವಿದ್ಯಾಲಯದ ಸ್ನೇಹಿತರು ಭೇಟಿಯಾದರು. ಸ್ವಲ್ಪ ಕಾಲ ಎಲ್ಲಾದರೂ ತಲೆಮರೆಸಿಕೊಂಡಿರು ಎಂದು ಸಲಹೆ ನೀಡಿದರು. ಸ್ನೇಹಿತರ ಸಹಾಯದಿಂದ ಬಿಹಾರ ತಲುಪಿದ ಆಶ್ಫಾಕ್ ಅಲ್ಲಿನ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ಹತ್ತು ತಿಂಗಳು ಕಳೆದವು. ಅದೆಕೋ ಜೀವನ ಬೇಸರವೆನಿಸತೊಡಗಿತು.
ಹೇಗಾದರೂ ಮಾಡಿ ದಿಲ್ಲಿಗೆ ಹೋಗಿ ಅಲ್ಲಿಂದ ವಿದೇಶಕ್ಕೆ ತೆರಳಿ, ಚಳವಳಿಗೆ ಸೂಕ್ತ ತಯಾರಿ ಮಾಡಿಕೊಳ್ಳಬೇಕೆನಿಸಿತು. ಆಶ್ಫಾಕ್ ಮೂಲತಃ ಒಬ್ಬ ಪಠಾಣ. ಶಹಜಹಾನ್‌ಪುರದಲ್ಲಿ ಆತನ ಸಹಪಾಠಿಯಾಗಿದ್ದ ಪಠಾಣ್ ಒಬ್ಬ ಅನಿರೀಕ್ಷಿತವಾಗಿ ಸಿಕ್ಕಿದ. ತನ್ನ ಮನೆಗೆ ಕರೆದೊಯ್ದ ಆತ, ಆಶ್ಫಾಕ್‌ಗೆ ಒಳ್ಳೆಯ ಉಪಚಾರವನ್ನೇ ಮಾಡಿದ. ಬೆಳಗ್ಗೆ ಯಾರೋ ಬಾಗಿಲು ತಟ್ಟಿದಂತಾಯಿತು. ಎದುರಿಗೆ ಪೊಲೀಸರು! ಆ ಪಠಾಣ್ ಹಣದಾಸೆಗೆ ಸ್ನೇಹಿತನನ್ನೇ ಪೊಲೀಸರಿಗೊಪ್ಪಿಸಿದ. ಜೈಲಿನಲ್ಲಿ ತಸದ್ರುಕ್ ಖಾನ್ ಎಂಬ ಅಧಿಕಾರಿ ಎದುರಾದ. ನಿನ್ನ ಸ್ನೇಹಿತರ ವಿರುದ್ಧ ಸಾಕ್ಷ್ಯ ಹೇಳಿದರೆ ನಿನಗೆ ಮಾಫಿ ಕೊಡಿಸುವೆ ಎಂದು ಪುಸಲಾಯಿಸಿದ. ಆಶ್ಫಾಕ್ ಒಪ್ಪಲಿಲ್ಲ. ಆತನ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದರು. ಆ ವೇಳೆಗಾಗಲೇ ಕಾಕೋರಿ ರೈಲು ರಾಬರಿ ಕೇಸಿನ ವಿಚಾರಣೆ ನಡೆದು ತೀರ್ಪಿನ ಹಂತಕ್ಕೆ ಬಂದಿತ್ತು. ಮೋತಿಲಾಲ್ ನೆಹರು ನೇತೃತ್ವದಲ್ಲಿ ವಕೀಲರ ಸಮಿತಿಯೊಂದು ಆರೋಪಿಗಳ ಪರವಾಗಿ ವಾದಿಸಿದರೂ ಪ್ರಯೋಜನವಾಗಲಿಲ್ಲ. ರಾಮ್‌ಪ್ರಸಾದ್ ಬಿಸ್ಮಿಲ್, ಆಶ್ಫಾಕುಲ್ಲಾ ಖಾನ್, ರಾಜೇಂದ್ರ ಲಹಿರಿ ಹಾಗೂ ರೋಶನ್ ಸಿಂಗ್‌ಗೆ ಗಲ್ಲಾಯಿತು. ಉಳಿದವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
1927, ಡಿಸೆಂಬರ್ 18.
ಗೋರಖ್‌ಪುರ ಸೆಂಟ್ರಲ್ ಜೈಲ್ ಎದುರು ಮಹಿಳೆಯೊಬ್ಬರು ಕಾಯುತ್ತಾ ನಿಂತಿದ್ದಾಳೆ. ಅವಳ ಮುಖವನ್ನು ನೋಡಿದರೇ ಗೊತ್ತಾಗುತ್ತಿತ್ತು, ಜೈಲಿನೊಳಕ್ಕೆ ಹೋಗಲು ಅನುಮತಿಗಾಗಿ ಕಾದಿದ್ದಳು. ಅವಳು ಮಗನಿಗಾಗಿ ಕಾದಿದ್ದಳು. ಆ ಕಾಲದಲ್ಲಿ ಬಂಧಿತರ ಕೈ-ಕಾಲುಗಳನ್ನು ಸರಪಳಿಯಲ್ಲಿ ಬಂಧಿಸಿರುತ್ತಿದ್ದರು. ಅವುಗಳೇ ಕೈದಿಗಳ ಆಭರಣಗಳು. ಅಂದು ರಾಮ್‌ಪ್ರಸಾದ್ ಬಿಸ್ಮಿಲ್ ಅಮ್ಮನ ಎದುರು ಗದ್ಗದಿತನಾಗಿ ನಿಂತಿದ್ದ. ‘ಅಮ್ಮಾ’ ಎಂದು ಕರೆಯಲು ಇದ್ದ ಕಡೆಯ ಅವಕಾಶವದು. ಕಣ್ಣೀರು ಬಳಬಳ ಸುರಿಯಲಾರಂಭಿಸಿದವು.
‘ಏಕೆ ಅಳುತ್ತೀಯಾ ಮಗನೇ?’ ಎಂದಳು. ಅಮ್ಮ ಮುಂದುವರಿದು, ‘ನನ್ನ ಮಗ ದೊಡ್ಡ ಹೀರೋ, ಅವನ ಹೆಸರು ಕೇಳುತ್ತಲೇ ಬ್ರಿಟಿಷ್ ಸರಕಾರ ಥರಥರ ನಡುಗುತ್ತದೆ ಎಂದು ಭಾವಿಸಿದ್ದೆ. ನನ್ನ ಮಗ ಸಾವಿಗೆ ಹೆದರುತ್ತಾನೆ ಎಂದು ಯಾವತ್ತೂ ಊಹಿಸಿರಲಿಲ್ಲ. ಈ ರೀತಿ ಅಳುತ್ತಾ ಸಾಯುವುದೇ ನಿನ್ನ ಜಾಯಮಾನವಾಗಿದ್ದರೆ ಏಕೆ ಸ್ವಾತಂತ್ರ್ಯ ಹೋರಾಟದಂತಹ ಕಾರ್ಯಕ್ಕೆ ಕೈಹಾಕಿದೆ?’ ಎಂದಳು. ‘ಅಮ್ಮಾ, ಇದು ಭಯದಿಂದ ಬರುತ್ತಿರುವ ಕಣ್ಣೀರಧಾರೆಯಲ್ಲ? ನಿನ್ನಂಥ ಧೈರ್ಯಶಾಲಿ ಅಮ್ಮನನ್ನು ಪಡೆದುಕೊಂಡಿದ್ದೆನಲ್ಲಾ ಎಂದು ಸುರಿಯುತ್ತಿರುವ ಆನಂದಬಾಷ್ಪಗಳು’ ಎನ್ನುತ್ತಾನೆ ಆ ಧೈರ್ಯ ಶಾಲಿ ಅಮ್ಮನ ಧೈರ್ಯಶಾಲಿ ಮಗ ರಾಮ್‌ಪ್ರಸಾದ್ ಬಿಸ್ಮಿಲ್.
1927, ಡಿಸೆಂಬರ್ 19.
ಕುಣಿಕೆಗೆ ತಲೆಕೊಡುವ ಸಮಯ ಆಗಮಿಸಿತು. ಒಂದೆಡೆ ಎತ್ತರದ ಧ್ವನಿಯಲ್ಲಿ, ‘ಭಾರತ್ ಮಾತಾ ಕೀ ಜೈ, ಬ್ರಿಟಿಷ್ ಆಡಳಿತಕ್ಕೆ ಧಿಕ್ಕಾರ’ ಎಂದು ರಾಮ್‌ಪ್ರಸಾದ್ ನೇಣಿಗೆ ತಲೆಕೊಟ್ಟರೆ, ಇನ್ನೊಂದೆಡೆ ‘ಈ ದೇಶದ ಸ್ವಾತಂತ್ರ್ಯಕ್ಕಾಗಿ ನೇಣಿಗೇರುತ್ತಿರುವ ಮೊದಲ ಮುಸ್ಲಿಂ ನಾನೆಂಬ ಬಗ್ಗೆ ಹೆಮ್ಮೆಯೆನಿಸುತ್ತಿದೆ? ಲಾ ಇಲಾಹ ಇಲ್ಲಲ್ಲಾಹು ಮುಹಮ್ಮದುರ್ ರಸೂಲುಲ್ಲ್ಲಾಹ್?’ ಎನ್ನುತ್ತಾ ಆಶ್ಫಾಕುಲ್ಲಾ ಖಾನ್ ಕೂಡ ಅದೇ ದಿನ, ಆದರೆ ಬೇರೆ ಜೈಲಿನಲ್ಲಿ ನೇಣಿಗೇರಿದ.
ಪ್ರತಿ ಸಾರಿ ಸ್ವಾತಂತ್ರ್ಯೋತ್ಸವ ಬಂದಾಗಲೂ ಅದೇ ಕಾಂಗ್ರೆಸ್‌ನ ಗುಣಗಾನ ಮಾಡಲಾಗುತ್ತದೆ. ಆದರೆ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವುದರಲ್ಲಿ ಕಾಂಗ್ರೆಸ್‌ನಂತೆಯೇ ಹೋರಾಡಿದ ಹಲವಾರು ಸಂಘ-ಸಂಘಟನೆಗಳೂ ಇವೆ, ಬಲಿದಾನವನ್ನು ಮಾಡಿದವರೂ ಇದ್ದಾರೆ. ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯದ ಹಿಂದೆ ಲಕ್ಷಾಂತರ ಜನರ ನಿಸ್ವಾರ್ಥ ಹೋರಾಟವಿದೆ. ಜೈಲು ಸೇರಿದವರೂ ಇದ್ದಾರೆ, ಜೈಲಲ್ಲೇ ಬದುಕು ಕಳೆದು ಮಡಿದವರೂ ಇದ್ದಾರೆ. ಸುಭಾಷ್‌ಚಂದ್ರ ಬೋಸ್, ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಆಶ್ಫಾಕುಲ್ಲಾ ಖಾನ್, ರಾಮ್‌ಪ್ರಸಾದ್ ಬಿಸ್ಮಿಲ್, ಮದನ್‌ಲಾಲ್ ಧಿಂಗ್ರಾ, ರಾಜಗುರು, ಸುಖದೇವ್ ಇವರ ತ್ಯಾಗವನ್ನು ಮರೆಯುವುದಾದರೂ ಹೇಗೆ? ಕನಿಷ್ಠ ನಾವಾದರೂ ಅವರನ್ನು ನೆನಪಿಸಿಕೊಳ್ಳೋಣ. ನರೇಂದ್ರ ಮೋದಿಯವರ ಸಂಕಲ್ಪವನ್ನು ನಾವೆಲ್ಲರೂ ಮಾಡೋಣ. 2022ರಂದು ಕಾಂಗ್ರೆಸಿನೊಡನೆ ಮುಖಾಮುಖಿಯಾಗೋಣ.
August 2, 2017
August 1, 2017
Pratap Simha's Blog
- Pratap Simha's profile
- 58 followers
