Pratap Simha's Blog, page 18

July 13, 2017

July 12, 2017

July 11, 2017

July 10, 2017

June 18, 2017

June 17, 2017

ಅಪ್ಪ ಎಂಬ ಅಗೋಚರ ಪ್ರೀತಿ ಮತ್ತು ನಿಸ್ವಾರ್ಥ ಜೀವಿಯನ್ನು ನೆನೆ ನೆನೆದು…!

ಅಪ್ಪ  ಎಂಬ ಅಗೋಚರ  ಪ್ರೀತಿ ಮತ್ತು   ನಿಸ್ವಾರ್ಥ  ಜೀವಿಯನ್ನು  ನೆನೆ ನೆನೆದು…!

ಇತ್ತೀಚೆಗೆ  ಬಿಡುಗಡೆಯಾಗಿದ್ದ “ಚೌಕ” ಚಿತ್ರದ ನಾನು ನೋಡಿದ  ಮೊದಲ ವೀರ,  ಬಾಳು ಕಲಿಸಿದ ಸಲಹೆಗಾರ,  ಬೆರಗು  ಮೂಡಿಸೋ ಜಾದುಗಾರ ಅಪ್ಪಾ …. ಅಪ್ಪಾ ಐ ಲವ್ ಯೂ  ಹಾಡು ಕೇಳಿ ಕಣ್ಣು ಜಿನುಗದ  ಹೆಣ್ಣುಮಕ್ಕಳೇ ಇರಲಿಕ್ಕಿಲ್ಲ.  ನಿನ್ನಂಥ ಅಪ್ಪಾ ಇಲ್ಲಾ,  ಒಂದೊಂದು ಮಾತು ಬೆಲ್ಲ ಹಾಡಿನ  ರಾಜ್ ಕುಮಾರ್ ರನ್ನು ನೆನಪಿಸಿಕೊಂಡಾಗಲೂ ಕಣ್ಣ ಮುಂದೆ ಬರುವುದೂ ಅಪ್ಪ-  ಮಗಳ ಚಿತ್ರಣವೇ.  ಆದರೆ  ಅಪ್ಪ-  ಮಗನ ಆಪ್ತ  ಸಂಬಂಧ ಕಲ್ಪನೆಗೂ ಕಾಣದ ವಿರಳ ವಿಚಾರವಾಗಿ ಬಿಟ್ಟಿದೆ.  ವಂಶೋದ್ಧಾರಕ ಮಗನೇ  ಹುಟ್ಟಬೇಕೆಂದು ಅಪ್ಪ  ಎಷ್ಟೇ  ಹಂಬಲಿಸಿದರೂ ಮಗ  ಹತ್ತಿರವಾಗುವುದು ಅಮ್ಮನಿಗೇ . ಗಂಡು  ಮಕ್ಕಳಾದ  ನಾವು ಭಾವುಕರಾಗುವುದು  ಅಮ್ಮನ ವಿಚಾರದಲ್ಲಿ ಮಾತ್ರ.  ಆ … ಮಗ, ಈ… ಮಗ, ಹ… ಮಗ, ರ.. ಮಗ …  ಹೀಗೆ  ಯಾವುದೇ ಬೈಗುಳಗಳನ್ನು ಬೇಕಾದರೂ ತೆಗೆದುಕೊಳ್ಳಿ. ಬಹುತೇಕ ಎಲ್ಲ ಬೈಗುಳಗಳೂ ಅಮ್ಮನನ್ನೇ ಗುರಿಯಾಗಿಸಿಕೊಂಡಿರುತ್ತವೆ. ಅಪ್ಪನ ವಿರುದ್ಧದ ಅವಾಚ್ಯ ಪದಗಳನ್ನು ಹುಡುಕಿದರೂ, ತಲೆಕೆರೆದುಕೊಂಡು ಯೋಚಿಸಿದರೂ ತಟ್ಟನೆ ಯಾವುದೇ ಹೊಲಸು ಬೈಗುಳಗಳು ನೆನಪಾಗುವುದಿಲ್ಲ. ಅತ್ಯಂತ ಹೀನಾತಿ ಹೀನ ಬೈಗುಳಗಳಿರುವುದೇ ಅಮ್ಮನ ವಿರುದ್ಧ. ಬಹುಶಃ ಉದ್ದೇಶಪೂರ್ವಕವಾಗಿಯೇ ಇಂತಹ ಬೈಗುಳಗಳನ್ನು ಸೃಷ್ಟಿ ಮಾಡಿದ್ದಾರೇನೋ! ಅಷ್ಟಕ್ಕೂ ಒಬ್ಬ ಹುಡುಗನಿರಬಹುದು, ಗಂಡಸಾಗಿರಬಹುದು. ಆತನಿಗೆ ಹೆಚ್ಚಾಗಿ ಸಿಟ್ಟು ಬರುವುದು ಅಮ್ಮನಿಗೆ ಬೈದಾಗಲೇ.

ಈ ಅಮ್ಮ-ಮಗನ ಸಂಬಂಧವೇ ಅಂಥದ್ದು.

ಅದಕ್ಕೇ ‘Mama’s Boy’ ಎಂಬ ಮಾತಿದೆಯೇ ಹೊರತು, ಯಾರೂ ‘Papa’s son’ ಅಂತ ಯಾರನ್ನೂ ಕರೆಯುವುದಿಲ್ಲ. ಸಾಮಾನ್ಯವಾಗಿ ಪ್ರತಿಯೊಬ್ಬ ಅಪ್ಪನೂ, ಸಂತಾನ ಮುಂದುವರಿಸಿದುಕೊಂಡು ಹೋಗಲು ಗಂಡು ಮಗುವೇ ಬೇಕೆಂದು ಯೋಚಿಸಿದರೂ, ದೇವರಲ್ಲಿ ಮೊರೆಯಿಟ್ಟು, ಹರಕೆ ಹೊತ್ತು ಗಂಡು ಮಗುವನ್ನು ಪಡೆದುಕೊಂಡರೂ ಮಗ ಯಾವತ್ತೂ ಅಮ್ಮನ ಸ್ವತ್ತೇ. “ಮುತ್ತು ಕೊಡುವವಳು ಬಂದಾಗ ತುತ್ತು ಕೊಟ್ಟವಳನ್ನು ಮರೆಯದಿರು” ಎನ್ನುತ್ತಾರೆಯೇ ಹೊರತು, “ತುತ್ತು ಕೊಟ್ಟವನನ್ನು” ಎನ್ನುವುದಿಲ್ಲ! ಅಮ್ಮನನ್ನೇ ಕೀಳಾಗಿ ಕಾಣುವವರು ಖಂಡಿತ ಇದ್ದಾರೆ. ಸಾಮಾನ್ಯವಾಗಿ ಅಮ್ಮನ ವಿಷಯದಲ್ಲಿ ಗಂಡು ಮಕ್ಕಳ ಮನದಲ್ಲಿ ಯಾವತ್ತೂ ಮೃದು ಧೋರಣೆ ಇರುತ್ತದೆ. ತನ್ನ ಪತ್ನಿಗೇ ಕಿರುಕುಳ ಕೊಟ್ಟರೂ ಗಂಡು ಮಕ್ಕಳು ಅಮ್ಮನನ್ನು ಬಿಟ್ಟುಕೊಡುವುದಿಲ್ಲ. ಅಮ್ಮನದ್ದೇ ತಪ್ಪಿದ್ದರೂ ಹೆಂಡತಿಯನ್ನು ಬೆದರಿಸುವುದು, ಸಹಿಸಿಕೊಂಡು ಹೋಗು ಎಂದು ಬುದ್ಧಿವಾದ ಹೇಳುವುದನ್ನು ಕಾಣಬಹುದು. ‘ಮಾವ ಪರ್ವಾಗಿಲ್ಲ, ಅತ್ತೆಯದ್ದೇ ಕಿರಿಕ್ಕು’ ಎನ್ನುವವರನ್ನೇ ನೀವು ಬಹುವಾಗಿ ನೋಡಿರುತ್ತೀರಿ. ಆದರೂ ಮಗನ ಪಾಲಿಗೆ ಅಮ್ಮ ಯಾವತ್ತೂ ಕೆಟ್ಟವಳಂತೆ ಕಾಣುವುದಿಲ್ಲ. ‘ಮುಂಗಾರು ಮಳೆ’ ಚಿತ್ರದ ನವಿರಾದ ಪ್ರೇಮಗೀತೆಗಳು ನಮಗೆಷ್ಟೇ ಖುಷಿಕೊಟ್ಟರೂ, ಕೈಕೊಟ್ಟ ಹುಡುಗಿಯನ್ನು ನೆನಪಿಸಿಕೊಂಡು ಆ ನೋವು ಕೊಡುವ ಆಹ್ಲಾದವನ್ನು ನಾವೆಷ್ಟೇ ಸವಿದರೂ ಅವು ‘ಜೋಗಿ’ ಚಿತ್ರದ ‘ಬೇಡುವೆನು ವರವನ್ನು, ಕೊಡೆ ತಾಯೆ ಜನುಮವನು’ ಗೀತೆಯಂತೆ ಮನಕಲಕುವುದಿಲ್ಲ. ಮುಂದೊಂದು ದಿನ ನಾವೆಷ್ಟೇ ದೊಡ್ಡ ವ್ಯಕ್ತಿಗಳಾದರೂ ಅಮ್ಮನ ಜತೆಗಿನ ಸಂಬಂಧ ಬದಲಾಗುವುದಿಲ್ಲ. ಹುಟ್ಟಿನ ಜತೆ ಬರುವ ಹೊಕ್ಕಳ ಬಳ್ಳಿಯನ್ನು ಕಡಿದುಕೊಂಡು ಪ್ರತ್ಯೇಕಗೊಂಡರೂ ಅಮ್ಮನಿಂದ ಭಾವನಾತ್ಮಕವಾಗಿ ಬೇರ್ಪಡುವುದಿಲ್ಲ. ಅಂತಹ ಅಮೆರಿಕದ  ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಅಮ್ಮನನ್ನು ನೆನಪಿಸಿಕೊಳ್ಳುತ್ತಾರೆಯೇ ಹೊರತು, ಅಮ್ಮ ಅಮ್ಮ ಎಂದು ಈಗಲೂ ಕನವರಿಸುತ್ತಾರೆಯೇ ವಿನಾಃ ಅಪ್ಪಿ-ತಪ್ಪಿಯೂ ಅಪ್ಪನ ಬಗ್ಗೆ ಮಾತನಾಡುವುದಿಲ್ಲ. ಒಬಾಮ ಅಧ್ಯಕ್ಷರಾಗಿ ಆಯ್ಕೆಯಾದಾಗ ಅವರ ತಂದೆ ಕೀನ್ಯಾದವರೆಂಬ ಕಾರಣಕ್ಕೆ ಆ ದೇಶದವರು ಸಂಭ್ರಮಪಟ್ಟರು. ಆದರೆ ಒಬಾಮ ಯಾವತ್ತೂ ಅಪ್ಪನ ಬಗ್ಗೆ ಮಾತನಾಡಲಿಲ್ಲ. ‘ಊರಿಗೆ ಒಡೆಯನಾದರೂ ತಾಯಿಗೆ ಮಗ’ ಎಂಬ ಮಾತೇ ಇದೆಯಲ್ಲವೆ?!

ನಾವು ಚಿಕ್ಕವರಿದ್ದಾಗ ಇರಬಹುದು, ಅಪ್ಪನ ಎದೆಯೆತ್ತರಕ್ಕೆ ಬೆಳೆದ ನಂತರವಾಗಿರಬಹುದು, ಏನಾದರೂ ಕೆಲಸವಾಗಬೇಕು, Favour ಬೇಕೆಂದಾದರೂ ಅಪ್ಪನಿಗೆ ಸಂದೇಶ ತಲುಪುವುದು ಮಾತ್ರ ಅಮ್ಮನ ಮೂಲಕವೇ. ಮಗಳು ಪಾಕೆಟ್ ಮನಿ ಬೇಕೆಂದಾದರೆ ನೇರವಾಗಿ ಅಪ್ಪನ ಕಿಸೆಗೇ ಕೈಹಾಕುವ ಧೈರ್ಯತೋರಿಸಿಬಿಡುತ್ತಾಳಾದರೂ ನಾವು ಮಾತ್ರ ಶಾಲೆ, ಕಾಲೇಜಿಗೆ ಫೀ ಕಟ್ಟುವಾಗಲೂ ಅಮ್ಮನ ಮೂಲಕವೇ ಕೇಳುತ್ತೇವೆ. ಅಪ್ಪನ ಬಗ್ಗೆ ಯೋಚನೆ ಮಾಡಿದಾಗಲೆಲ್ಲ ಪೆಟ್ಟು, ಲಾತಾ, ಗದರಿಕೆ, ಸಿಡುಕು, ಕೆಂಗಣ್ಣುಗಳೇ ನೆನಪಾಗಿ ಬಿಡುತ್ತವೆ. ಹಾಗಂತ ಅಮ್ಮ ಪೆಟ್ಟು ಕೊಟ್ಟೇ ಇರುವುದಿಲ್ಲ ಎಂದಲ್ಲ. ಮೊದಲು ಕೊಟ್ಟ ಪೆಟ್ಟಿಗಿಂತ, ನಂತರ ಕೊಟ್ಟ ಅಕ್ಕರೆಯ ಮುತ್ತು, ಮುದ್ದು, ಚಾಕಲೇಟು ತಿನ್ನಲು ಕೊಟ್ಟ ನಾಲ್ಕಾಣೆಗಳೇ ನೆನಪಿನಲ್ಲಿ ಉಳಿದು ಬಿಡುತ್ತದೆ. ಅಪ್ಪ ಅನ್ನುವವನು ಒಂಥರಾ ಮನೆಯೊಳಗಿನ ‘ಪಿಟಿ’ ಮೇಷ್ಟ್ರು. ಪೆಟ್ಟಿನ ರುಚಿ ತೋರಿಸುವವನು, ದಂಡಿಸುವವನು ಅವನು. ಅಮ್ಮ ಮಾತ್ರ ನಾವು ತಪ್ಪು ಮಾಡಿದಾಗಲೂ ಸಮರ್ಥಿಸಿಕೊಳ್ಳುತ್ತಾಳೆ. ಹಾಗಾಗಿಯೇ ಅಮ್ಮನ ಜತೆ ಅಪ್ಪ ನಡೆದುಕೊಳ್ಳುವ ರೀತಿ ಕೂಡ ಮುಂದೆ ಆತನ ಬಗ್ಗೆ ನಾವು ರೂಢಿಸಿಕೊಳ್ಳುವ ಅಭಿಪ್ರಾಯವನ್ನು ನಿರ್ಧರಿಸಿ ಬಿಡುತ್ತದೆ. ಬಹಳಷ್ಟು ಬಾರಿ ನಾವು ಅಪ್ಪನನ್ನು ದ್ವೇಷಿಸಲು ಆತ ಅಮ್ಮನ ಜತೆ ಕೆಟ್ಟದಾಗಿ ನಡೆದುಕೊಳ್ಳುವುದೇ ಮುಖ್ಯ ಕಾರಣ. ಅದಕ್ಕೆ “The most important thing that a father can do for his children is to love their mother” ಎಂದು ಥಿಯೋಡರ್ ಎಂ. ಹೆಸ್ಬರ್ಗ್ ಹೇಳಿರುವುದು.

ಅಪ್ಪ ಯಾವತ್ತೂ ನಮ್ಮ “Emotional Frame” ನೊಳಗೆ ಬರುವುದೇ ಇಲ್ಲ. ಬಂದರೂ ತೀರಾ ವಿರಳ ಹಾಗೂ ಸೀಮಿತವಾಗಿ. ತುಂಬಾ Irony ಎಂದರೆ ಮುಂದೊಂದು ದಿನ ನಾವೂ ಅಪ್ಪ ಆಗುತ್ತೇವೆ, ಬೈಯಿಸಿಕೊಳುವ ಸರದಿ ನಮ್ಮದಾಗುತ್ತದೆ ಎಂದು ಗೊತ್ತಿದ್ದರೂ ಅಪ್ಪನನ್ನು ಬೈದುಕೊಳ್ಳುತ್ತೇವೆ, ಆತನ ಬಗ್ಗೆ ಇರುಸು-ಮುರುಸುಗೊಳ್ಳು ವುದನ್ನು ನಿಲ್ಲಿಸುವುದಿಲ್ಲ. ಅಮ್ಮನನ್ನು ಬಹುವಾಗಿ ಪ್ರೀತಿಸುವ ನಾವೇ ಅವಳ ಬದುಕಿನಲ್ಲಿ ಅಷ್ಟು ವರ್ಷಗಳಿಂದ ಸಾಗಿ ಬಂದ ಅಪ್ಪನ ಬಗ್ಗೆ ಹಗುರವಾಗಿ, ಉಡಾಫೆಯಿಂದ ಕೂಡಿದ ಮಾತುಗಳನ್ನಾಡಿ ಬಿಡುತ್ತೇವೆ. ದುಡ್ಡು ಕೊಡುವುದಕ್ಕೆ, ಬಟ್ಟೆ ಕೊಡಿಸುವುದಕ್ಕೆ, ಫೀ ಕಟ್ಟುವುದಕ್ಕೆ ಆತ ಸೀಮಿತವಾಗಿ ಬಿಡುತ್ತಾನೆ. ನಮ್ಮ ಬೈಗುಳಕ್ಕೂ ಭಾಜನನಾಗಬೇಕಾಗುತ್ತದೆ. ನಮ್ಮೆಲ್ಲ ಕುಂದು-ಕೊರತೆಗಳಿಗೆ ಅವನ ಮೇಲೆಯೇ ಗೂಬೆ ಕೂರಿಸುತ್ತೇವೆ. ಬಾಲ್ಯದಲ್ಲಾಗಲಿ, ಕಾಲೇಜಿಗೆ ಕಾಲಿಟ್ಟ ಸಂದರ್ಭದಲ್ಲಾಗಲಿ ಕೇಳಿದ್ದನ್ನು ಕೊಡಿಸಲಿಲ್ಲ ಅಂದರೂ ಅವನನ್ನೇ ದೂರುತ್ತೇವೆ, ಹೆಂಡತಿ ಬಂದ ನಂತರ ಜೀವನ ಸಾಗಿಸುವುದು ಕಷ್ಟವಾದಾಗಲೂ “ನಮ್ಮಪ್ಪ ಸರಿಯಾಗಿ ಮಾಡಿಟ್ಟಿದ್ದರೆ ನಮಗೇಕೆ ಇಂತಹ ಗತಿ ಬರುತ್ತಿತ್ತು” ಎಂದು ಆಗಲೂ ಅಪ್ಪನನ್ನು ಶಪಿಸುವುದನ್ನು ಬಿಡುವುದಿಲ್ಲ!!

ನಿಜಕ್ಕೂ ಅಪ್ಪ ಎಂಬ ಸ್ಥಾನವೇ ಒಂದು Thankless position. ಮಗನ ವಿಷಯದಲ್ಲಿ ಮಾತ್ರವಲ್ಲ, ಕುಂಟುಂಬಕ್ಕೇ ಕೂಳು ಕೊಟ್ಟರೂ ಕುಟುಂಬದ ನಂಬರ್-1 ಶತ್ರು ಅವನೇ ಆಗಿರುತ್ತಾನೆ. ಆತ ಎಲ್ಲರ common enemy!

ಗಂಡು ಮಕ್ಕಳಾದ ನಾವು ಅಪ್ಪನನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ, ಅಪಾರ್ಥ ಮಾಡಿಕೊಳ್ಳುವುದೇ ಹೆಚ್ಚು. ಮಗನ ಎದುರೇ ಪೆಗ್ ಹಾಕುವ, ಬೀಡಿ-ಸಿಗರೇಟು ಸೇದುವ ಅಪ್ಪ, ಮಗ ಕದ್ದುಮುಚ್ಚಿ ಅದೇ ಕೆಲಸ ಮಾಡಿ ಸಿಕ್ಕಿಹಾಕಿಕೊಂಡರೆ ಪೆಟ್ಟು ಕೊಡದೇ ಬಿಡುವುದಿಲ್ಲ! ಹೀಗೆ ಜೈಲಿನ ಮೇಲ್ವಿಚಾರಕನಂತೆ ವರ್ತಿಸುವ ಆತನನ್ನು ಅರ್ಥಮಾಡಿಕೊಳ್ಳುವ ಹೊತ್ತಿಗೆ ನಾವೇ ಅಪ್ಪನಾಗಿ ಬಿಟ್ಟಿರುತ್ತೇವೆ. “By the time a man realizes that maybe his father was right, he usually has a son who thinks he’s wrong” ಎಂಬ ಚಾರ್ಲ್ಸ್ ವ್ಯಾಡ್ಸ್‌ವರ್ತ್ ಮಾತಿನಲ್ಲಿ ಅದೆಷ್ಟು ಸತ್ಯ ಅಡಗಿದೆಯಲ್ಲವೆ?! ಅಪ್ಪನಾದವನು ನಮ್ಮ ಜತೆ ಕಟುವಾಗಿಯೇ ನಡೆದುಕೊಳ್ಳಬಹುದು, ನಮ್ಮ ಇತಿ-ಮಿತಿ, ಚಟಗಳನ್ನೂ ಅವನೇ ನಿರ್ಧರಿಸಬಹುದು, ಅಪ್ಪ ಎಂದ ಕೂಡಲೇ ನಮಗೆ ಕೆಂಗಣ್ಣು, ಗದರಿಕೆ, ಲಾತಾಗಳೇ ನೆನಪಾಗಬಹುದು, ಆದರೂ ಅವನದ್ದು ಗುರುತರ ಸ್ಥಾನ. ಅಮ್ಮನ ಜತೆ ನಮಗೆ  ಭಾವನಾತ್ಮಕ ಕೊಂಡಿ ಇರುತ್ತದಷ್ಟೆ. ಅಪ್ಪ ನಮ್ಮ ಭವಿಷ್ಯ, ಬದುಕು, ಕೆರಿಯರ್ ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾನೆ. ಮಗಳು ಬೆಳೆದು ಮದುವೆಗೆ ಸಿದ್ಧಳಾಗಿ ನಿಂತಾಗ ಭಾವಿ ಪತಿಯಲ್ಲಿ ಅಪ್ಪನ ಗುಣಗಳನ್ನು ಹುಡುಕುತ್ತಾಳೆ. ಅಪ್ಪನಾದವನು ಯಾವತ್ತೂ ಮಗನಿಗೆ ‘ತನ್ನಂತಾಗು’ ಎಂದು ಹೇಳಿಕೊಡುವುದಿಲ್ಲ. ಮಗಳ ವಿಷಯದಲ್ಲಿ ಬಹಳ protective ಆಗಿ ನಡೆದುಕೊಂಡರೂ, ಅವಳಿಗೆ ಮಾತ್ರ ಭವಿಷ್ಯದ ಬಗ್ಗೆ assurance ಕೊಡುತ್ತಾನಾದರೂ, ಅದೇ ನಮಗೆ ಕಿರಿಕಿರಿಯನ್ನುಂಟು ಮಾಡಿದರೂ, ತಾರತಮ್ಯದ ವಾಸನೆ ನಮ್ಮ ಮೂಗಿಗೆ ಬಡಿದರೂ ಅಪ್ಪನ ಉದ್ದೇಶ ಮಾತ್ರ ಬೇರೆಯೇ ಆಗಿರುತ್ತದೆ. ನೀನು ಓದಿ, ಕೆಲಸಕ್ಕೆ ಸೇರಿ ನಿನ್ನ ಕಾಲ ಮೇಲೆ ನಿಂತುಕೋ ಎನ್ನುವ ಆತನ ಮಾತಿನ ಹಿಂದೆ ಸ್ವಾವಲಂಬನೆಯ ಪಾಠವೇ ಇರುತ್ತದೆ. ಆತ ದುಡಿದದ್ದೆಲ್ಲಾ ಗಂಡು ಮಕ್ಕಳಿಗೇ ಎಂದಾಗಿದ್ದರೂ ಅದನ್ನೆಂದೂ ಆತ ಬಾಯಿ ಬಿಟ್ಟು ಹೇಳುವುದಿಲ್ಲ. ಹಾಗಾಗಿ ಆತನ ಬಗ್ಗೆ ನಮ್ಮಲ್ಲಿ ಸದಭಿಪ್ರಾಯ ಮೂಡುವುದು ಕಡಿಮೆ. ನಮ್ಮ ಬೇಕು-ಬೇಡಗಳನ್ನು ಅವನೇ ನಿರ್ಧರಿಸುತ್ತಾನೆ ಎಂದು ಸಿಟ್ಟಿಗೇಳುತ್ತೇವೆ. ನಮ್ಮ ಅನುಭವಕ್ಕೆ ಬರುವುದು ಅವನ ಗದರಿಕೆ, ಗೂಸಾಗಳೇ ಹೊರತು, ಅವುಗಳ ಹಿಂದಿರುವ ಪ್ರೀತಿಯಲ್ಲ.

ಅಮ್ಮ ಯಾವತ್ತೂ ತನ್ನ ಪ್ರೀತಿಯನ್ನು ಅಭಿವ್ಯಕ್ತಿಗೊಳಿಸು ತ್ತಾಳೆ. ಹಾಗಾಗಿ ಅವಳು ನಮಗೆ ಪ್ರಿಯವಾಗಿ ಬಿಡುತ್ತಾಳೆ. ಅಪ್ಪನ ಪ್ರೀತಿ ಕಟ್ಟು-ಪಾಡುಗಳಲ್ಲೇ ವ್ಯಕ್ತವಾಗುವುದರಿಂದ ಅದು ನಮಗೆ ಅರ್ಥವಾಗುವುದಿಲ್ಲ. ನಾವು ತಪ್ಪು ಮಾಡಬಾರದು, ಎಡವಿ ಬೀಳಬಾರದು ಎಂದು ಆತ ತೆಗೆದುಕೊಳ್ಳುವ ಮುಂಜಾಗ್ರತೆ, ಕೊಡುವ ಪೆಟ್ಟು, ಎಚ್ಚರಿಕೆಗಳು ನಮಗೆ ಕಾನೂನು, ಕಟ್ಟಳೆಗಳಂತೆ ಕಂಡುಬಿಡುತ್ತವೆ, ಆತ ದಂಡಾಧಿಕಾರಿಯಂತೆ ಗೋಚರಿಸ ಲಾರಂಭಿಸುತ್ತಾನೆ. ಅಮ್ಮ ಕ್ಯಾರಿಯರ್ ತುಂಬ ಬಿಸಿ ಬಿಸಿ ಊಟ ತುಂಬಿ ಕೊಡಬಹುದು, ಯಾವ ಕೋರ್ಸಿಗೆ, ಯಾವ ಕಾಲೇಜಿಗೆ ಸೇರಬೇಕು ಎಂಬ ಮಹತ್ವದ ನಿರ್ಧಾರ ಕೈಗೊಳ್ಳುವುದು ಅಪ್ಪನೇ ಆಗಿರುತ್ತಾನೆ. ನಿಜ ಹೇಳಬೇಕೆಂದರೆ, ವಿಶ್ವೇಶ್ವರಯ್ಯನವರಂತಹ   ವಿಜನರಿಯೋ, ಎಂಜಿನಿಯರ್, ಡಾಕ್ಟರೋ, ದೇಶ ರಕ್ಷಣೆ ಮಾಡುವ ಸೈನಿಕನೋ ಆಗಬೇಕು ನೀನು ಎಂದು ಗುರಿಹಾಕಿಕೊಡುವವನು ಹಾಗೂ ನಮಗೆ ಪ್ರೇರಣೆ ನೀಡುವವನು ಅಪ್ಪನೇ ಹೊರತು ಅಮ್ಮನಲ್ಲ. ಅಮ್ಮ ಹೋಂ ವರ್ಕ್ ಮಾಡುವಾಗ ಸಹಾಯ ಮಾಡಬಹುದು, ಲೆಕ್ಕ ಹೇಳಿಕೊಡಬಹುದು, ಗ್ರಾಮರ್ ಕಲಿಸಬಹುದು, ಇಲ್ಲವೇ ಮುದ್ದು ಮಾಡಿ ಶಾಲೆಗೆ ಕಳುಹಿಸಬಹುದು. ಪ್ರೇರಕ ಶಕ್ತಿ ಹೆಚ್ಚಾಗಿ ಅಪ್ಪನೇ ಆಗಿರುತ್ತಾನೆ. ಕೆಲವೊಬ್ಬರ ವಿಷಯದಲ್ಲಿ ಅಮ್ಮನೇ ಅಪ್ಪನ ಸ್ಥಾನವನ್ನು ತುಂಬಬಹುದು, ಆದರೆ ನಮ್ಮ ಭವಿಷ್ಯ ನಿರ್ಧಾರದಲ್ಲಿ ಅಪ್ಪನದ್ದೇ ಮಹತ್ವದ ಪಾತ್ರವಿರುತ್ತದೆ.

ನೆಹರು-ಇಂದಿರಾಗಾಂಧಿ
ಮಿಲ್ಖಾಸಿಂಗ್-ಜೀವ್
ಎಸ್‌ಡಿ ಬರ್ಮನ್-ಆರ್‌ಡಿ ಬರ್ಮನ್
ರಮೇಶ್ ತೆಂಡೂಲ್ಕರ್-ಸಚಿನ್ ತೆಂಡೂಲ್ಕರ್
ಶಿವರಾಮ ಹೆಗಡೆ-ಶಂಭು ಹೆಗಡೆ
ಅಮಿತಾಭ್ ಬಚ್ಚನ್- ಅಭಿಷೇಕ್ ಬಚ್ಚನ್
ಕುವೆಂಪು-ತೇಜಸ್ವಿ
ಅಪ್ಜಿತ್ ಸಿಂಗ್ ಭಿಂದ್ರಾ-ಅಭಿನವ್ ಬಿಂದ್ರಾ

ಇವರೆಲ್ಲರ ಜೀವನದಲ್ಲೂ ಪ್ರಮುಖ ಪಾತ್ರ ವಹಿಸಿರು ವುದು ಅಪ್ಪನೇ.  ಇಷ್ಟಾಗಿಯೂ ಎಷ್ಟೇ ಒಳ್ಳೆಯ ಉದ್ದೇಶವಿಟ್ಟುಕೊಂಡಿದ್ದರೂ ನಮ್ಮನ್ನು ತಿದ್ದಿ-ತೀಡುವ, ಕಿವಿ ಹಿಂಡಿ ಬುದ್ಧಿ ಹೇಳುವ ಅಪ್ಪ ನಮಗೆ ಆಪ್ಯಾಯಮಾನವಾಗುವುದು ಬಹಳ ಕಡಿಮೆ. ತಾನು ದುಡಿದ ಪಿಎಫ್ ಹಣವನ್ನು ಕೂಡ ಮಗನ ಭವಿಷ್ಯಕ್ಕೆಂದೇ ಮೀಸಲಿಟ್ಟು ಬಿಡುತ್ತಾನೆ. ಆದರೂ ಅಪ್ಪನನ್ನು ಅಪಾರ್ಥ ಮಾಡಿಕೊಳ್ಳುವುದು ಗಂಡು ಮಕ್ಕಳೇ. ನಮ್ಮ ಚಲನಚಿತ್ರಗಳನ್ನೇ ತೆಗೆದುಕೊಳ್ಳಿ. ‘ನಿನ್ನಂಥ ಅಪ್ಪ ಇಲ್ಲ…’ ಅಂತ ಮಗಳು ಹಾಡುತ್ತಾಳೆಯೇ ಹೊರತು ಮೀಸೆ ಬಂದ ಮಗ ಅಪ್ಪನನ್ನು ಸ್ತುತಿಸುವುದನ್ನು ಕಾಣಲು ಕಷ್ಟ. ಅಷ್ಟಕ್ಕೂ ಅಪ್ಪನ ಪ್ರೀತಿಯನ್ನು ನಾವು Feel  ಮಾಡುವುದು ತೀರಾ ವಿರಳ. ಮಿಗಿಲಾಗಿ, ಮಗನ ಮೇಲಿನ ಪ್ರೀತಿಯನ್ನು ಆತ ಹೆಚ್ಚಾಗಿ ವ್ಯಕ್ತಪಡಿಸುವುದೇ ಇಲ್ಲ. ಹೀಗಿದ್ದರೂ ನಾವು ದುಡಿಯಲು ಪ್ರಾರಂಭಿಸಿ ನಮ್ಮ ಕಾಲ ಮೇಲೆ ನಿಂತುಕೊಂಡ ನಂತರವೂ ತನ್ನ ಜವಾಬ್ದಾರಿ ಮುಗಿಯಿತೆಂದು ಅಪ್ಪ ಭಾವಿಸುವುದಿಲ್ಲ. ಜವಾಬ್ದಾರಿಯನ್ನು ವರ್ಗಾಯಿಸಲಾಗದ ಹಾಗೂ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದ ಸ್ಥಾನ ಅವನದ್ದು. “A king, realizing his incompetence, can either delegate or abdicate his duties. A father can do neither. If only sons could see the paradox… they would understand the dilemma…..” ಎಂಬ ಮರ್ಲಿನ್ ಮನ್ರೋ ಮಾತನ್ನು ನೆನಪಿಸಿಕೊಳ್ಳಿ. ‘ಅರೇಂಜ್ಡ್ ಮ್ಯಾರೇಜ್’ ಸಂದರ್ಭದಲ್ಲಿ ವಧುವನ್ನು ನೋಡಿ ಒಪ್ಪಿಗೆ ಸೂಚಿಸುವುದಷ್ಟೇ ನಮ್ಮ ಕೆಲಸ. ಆನಂತರದ ಜವಾಬ್ದಾರಿ ಅಪ್ಪನ ಹೆಗಲೇರಿ ಬಿಡುತ್ತದೆ. ಅದಕ್ಕೇ ಹೇಳುವುದು ಅಪ್ಪನದ್ದು “Thankless position’. ನಾವು ನಮ್ಮದೇ ಆದ ಗೂಡು ಕಟ್ಟಿಕೊಂಡು ಪ್ರತ್ಯೇಕಗೊಂಡ ನಂತರವೂ ಜೀವನವೆಂಬ ದೀರ್ಘ ಹಾದಿಯಲ್ಲಿ ಹೇಗೆ ಸಾಗಬೇಕು ಎಂದು ಅಪ್ಪ ಸಲಹೆ ಕೊಡುತ್ತಿರುತ್ತಾನೆ.

ಅಮೆರಿಕದಲ್ಲಿ ಮಗ ಅಥವಾ ಮಗಳು 12-13 ವರ್ಷಕ್ಕೆ ಕಾಲಿಟ್ಟಾಗ ‘Breaking the plate’ ಎಂಬ ಒಂದು ಕಾರ್ಯಕ್ರಮ ಮಾಡುತ್ತಾರೆ. ಅಂದರೆ ಮಕ್ಕಳು ಪ್ರವರ್ಧಮಾನಕ್ಕೆ ಕಾಲಿಟ್ಟರೆಂದರೆ ಅವರ ಅನ್ನವನ್ನು ಅವರೇ ದುಡಿದುಕೊಳ್ಳಬೇಕು, ಇನ್ನು ಮುಂದೆ ಅಪ್ಪ-ಅಮ್ಮನನ್ನು ಅವಲಂಬಿಸಬಾರದು ಎಂದರ್ಥ. ಹೀಗೆ 13ನೇ ವರ್ಷಕ್ಕೇ ಮನೆಯಿಂದ ಹೊರಹಾಕುವ ಅಮೆರಿಕದಲ್ಲೇ ಮಕ್ಕಳು ‘ಮದರ್‍ಸ್ ಡೇ’, ‘ಫಾದರ್‍ಸ್ ಡೇ’ ಆಚರಿಸುತ್ತಾರೆ! ಹಾಗಿರುವಾಗ ಭಾರತೀಯರಾದ ನಮ್ಮಲ್ಲಿ ಕೊನೆಯುಸಿರುವವರೆಗೂ ಮಕ್ಕಳ ಅಭ್ಯುದಯದ ಬಗ್ಗೆಯೇ ಯೋಚಿಸುವ ಅಪ್ಪ-ಅಮ್ಮನನ್ನು ನೆನಪಿಸಿಕೊಳ್ಳದಿರುವುದು ಥರವೇ?! ಇದೆಲ್ಲಾ ವೆಸ್ಟ್‌ರ್ನ್ ಕಾನ್ಸೆಪ್ಟ್, ಗ್ರೀಟಿಂಗ್ಸ್ ಕಾರ್ಡ್ ಕಂಪನಿಯವರ ವ್ಯಾಪಾರ ತಂತ್ರ ಎಂದು ಯಾರೇನೇ ಬೊಬ್ಬೆ ಹಾಕಲಿ. ನಾಳೆ ಜೂನ್ 18 ‘ಫಾದರ್ ಸ್ ಡೇ’. ನಾವು ಅಂಬೆಗಾಲಿಡುವಾಗ ಕೈಹಿಡಿದು ಮುನ್ನಡೆಸಿದ, ನಾವೇ ಜನ್ಮಕೊಟ್ಟಾಗ ಮೊಮ್ಮಕ್ಕಳಿಗೂ ಪುಟ್ಟ ಪುಟ್ಟ ಹೆಜ್ಜೆಯಿಡುವುದನ್ನು ಕಲಿಸುವ ಅಪ್ಪನ ಅಗೋಚರ ಪ್ರೀತಿ, ನಿಸ್ವಾರ್ಥತೆಯನ್ನು ನೆನೆದು ಕನಿಷ್ಠ ಕೃತಜ್ಞತೆಯನ್ನಾದರೂ ಹೇಳೋಣ. ಮರೆಯದಿರಿ.

Happy Father’s Day!

 •  0 comments  •  flag
Share on Twitter
Published on June 17, 2017 02:20

June 16, 2017

Pratap Simha's Blog

Pratap Simha
Pratap Simha isn't a Goodreads Author (yet), but they do have a blog, so here are some recent posts imported from their feed.
Follow Pratap Simha's blog with rss.