Pratap Simha's Blog, page 50

January 16, 2016

ಮುಖ್ಯಮಂತ್ರಿಯವರೇ , ಬಿಎಸ್‌ವೈ ಬೇಡವೆಂದಾದರೆ ಕನಿಷ್ಠ ‘ ಕೃಷ್ಣ ಮಾರ್ಗ ‘ ವನ್ನಾದರೂ ತುಳಿಯಿರಿ ..

ಮುಖ್ಯಮಂತ್ರಿಯವರೇ , ಬಿಎಸ್‌ವೈ ಬೇಡವೆಂದಾದರೆ ಕನಿಷ್ಠ ‘ ಕೃಷ್ಣ ಮಾರ್ಗ ‘ ವನ್ನಾದರೂ ತುಳಿಯಿರಿ ..


ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ­ನವರು ಅಧಿಕಾರಕ್ಕೆ ಬಂದು ಎರಡೂವರೆ ವರ್ಷದಲ್ಲೇ 2೦18ರಲ್ಲಿ 2೦೦8 ಪುನರಾವರ್ತನೆ­ಯಾಗುವ ಸ್ಪಷ್ಟ ಸೂಚನೆಗಳು ಸಿಗುತ್ತಿವೆ. ಎಲ್ಲೇ ಹೋದರೂ ಜನರ ಬಾಯಿಂದ ಬಿಎಸ್‌ವೈ ಹೆಸರು ಸಹಜ ಹಾಗೂ ಸ್ವಾಭಾವಿಕವಾಗಿ ಮೊಳಗುತ್ತಿದೆ. ಭಾಷಣದ ಆರಂಭದಲ್ಲಿ ವೇದಿಕೆಯ ಮೇಲಿರುವ ಗಣ್ಯರ ಹೆಸರು ಉಲ್ಲೇಖಿಸುವಾಗ ಬಿಎಸ್‌ವೈ ಹೆಸರನ್ನು ಉಲ್ಲೇಖಿಸಿದರೂ ಸಾಕು ಚಪ್ಪಾಳೆ ಮುಗಿಲು ಮುಟ್ಟುತ್ತಿದೆ. ಬರೀ ವೀರಶೈವರು ಮಾತ್ರ ವಲ್ಲ, ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲೂ ಬಿಎಸ್‌ವೈ ಮಾತು ಕೇಳಿ ಬರುತ್ತಿದೆ.


ಇನ್ನೊಂದೆಡೆ ಮಾಹಿತಿ ತಂತ್ರಜ್ಞಾನ ಅಥವಾ ಐಟಿಗೆ ಮೊದಲ ಆದ್ಯತೆ ಕೊಡುವ ಮೂಲಕ ಕರ್ನಾಟಕಕ್ಕೆ ವಿಶ್ವಮಾನ್ಯತೆ ತಂದುಕೊಟ್ಟ, ಕರ್ನಾಟಕ ವಿಶ್ವಸ್ತರದಲ್ಲಿ ಒಳ್ಳೆಯ ಕಾರಣಕ್ಕಾಗಿ ಚರ್ಚೆಗೆ ಗ್ರಾಸವಾಗುವಂತೆ ಮಾಡಿದ, ಬೆಂಗಳೂರಿನ ಗ್ರಹಗತಿಯನ್ನೇ ಬದಲು ಮಾಡಿದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಹಾಲಿ ಸರ್ಕಾರದ ಅಭಿವೃದ್ಧಿ ವಿರೋಧಿ ಧೋರ­ಣೆಯ ಬಗ್ಗೆ ನೊಂದು ಗುಡುಗಿದ್ದಾರೆ.


ಇಷ್ಟಕ್ಕೂ ಯಾಕಾಗಿ ಕೃಷ್ಣ ಬೇಸರ­ಗೊಂಡಿದ್ದಾರೆ ಹಾಗೂ ಯಾವ ಕಾರಣಕ್ಕಾಗಿ ಜನ ಬಿಎಸ್‌ವೈರನ್ನು ನೆನಪಿಸಿ ಕೊಳ್ಳುತ್ತಿದ್ದಾರೆ ಅಂದುಕೊಂಡಿರಿ?

ಖಂಡಿತ ಯಾರೂ ಅವರಿಗೆ ಶುದ್ಧಹಸ್ತದ ಸರ್ಟಿಫಿಕೆಟ್ ನೀಡುತ್ತಿಲ್ಲ. ಆದರೆ ಸಿಎಜಿ (ಮಹಾಲೆಕ್ಕ ಪರಿಶೋಧಕ) ರಿಪೋರ್ಟ್ ಬಂದಾಗ ಅದರಲ್ಲಿ ಸಾರ್ವಜನಿಕ ಹಣ ಪೋಲಾಗಿದ್ದು, ವ್ಯವಸ್ಥೆಯಲ್ಲಿ ವ್ಯತ್ಯಯಗಳಾಗಿದ್ದು ಕಂಡುಬಂದರೆ ಮೊದಲಿಗೆ ಅದು ಪಬ್ಲಿಕ್ ಅಕೌಂಟ್ಸ್ ಕಮಿಟಿ ಅಥವಾ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಹೋಗುತ್ತದೆ. ಅಲ್ಲಿಂದ ಶಾಸನಸಭೆಯ ಮುಂದೆ ಚರ್ಚೆಗೆ ಬರುತ್ತದೆ. ಅಲ್ಲೂ ವ್ಯತ್ಯಯಗಳು ಕಾಣುತ್ತಿರುವುದು ಸಾಬೀತಾದರೆ ಮುಂದಿನ ಕ್ರಮದತ್ತ ಸಾಗುತ್ತದೆ. ಆದರೆ ಬಿಎಸ್‌ವೈ ವಿಷಯದಲ್ಲಿ ಈ ಯಾವ ಪ್ರಕ್ರಿಯೆಗಳೂ ನಡೆಯಲಿಲ್ಲ.


ಅವರ ಮುಖ್ಯಮಂತ್ರಿ ಗಾದಿಯನ್ನು, ಇಮೇಜು, ವ್ಯಕ್ತಿತ್ವ, ವರ್ಚಸ್ಸನ್ನು -ಸಿಗೆ ಕಳುಹಿಸುವ ಸಲುವಾಗಿ ರಾಜ್ಯದ ಪಾಲಿಗೆ ಭಾರಧ್ವಾಜರಾಗಿದ್ದ ಕಾಂಗ್ರೆಸ್ ಏಜೆಂಟ್‌ರೊಬ್ಬರು ತನಿಖೆಗೆ ಅಸ್ತು ನೀಡಿದರು, ಸುಖಾಸುಮ್ಮನೆ ಖಾಸಗಿ ದೂರು ನೀಡಿದಾಗಲೂ ಸಂವಿಧಾನಬಾಹಿರವಾಗಿ ಎ-ಐಆರ್ ದಾಖಲಿಸಲು ಅನುಮತಿ ನೀಡಿದರು, ಜೈಲಿಗೆ ಹೋಗುವಷ್ಟರಮಟ್ಟಿಗೆ ನೋವು ತಂದರು. ಮತ್ತೊಂದು ಕಡೆ ಅದಿರು ಲಾಬಿ ಸತತವಾಗಿ ಬೆದರಿಸಿತು. ಇಷ್ಟಾಗಿಯೂ ವೈಯಕ್ತಿಕ ನೋವು ಹಾಗೂ ಕೆಲ­ವೊಂದು ಸ್ವಯಂ­ಕೃತಾಪರಾಧಗಳ ನಡುವೆಯೂ ರೈತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿಎಸ್‌ವೈ ರೈತರನ್ನು ಮರೆಯಲಿಲ್ಲ. ಉಪಮುಖ್ಯಮಂತ್ರಿಯಾಗಿದ್ದಾಗ ಸಾಲಮನ್ನಾ ಮಾಡಿದ್ದ ಅವರು, ಮುಖ್ಯಮಂತ್ರಿ ಯಾದ ನಂತರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿದ್ದ ಸಾಲವನ್ನೂ ಒಳಪಟ್ಟಂತೆ ರೈತನ ಬಡ್ಡಿ ಮನ್ನಾ ಮಾಡಿದರು. ಕರೆಂಟಿನ ಬಿಸಿಯಲ್ಲಿ ರೈತನ ಬದುಕು ಮತ್ತು ಬೆಳೆ ಸುಟ್ಟು ಹೋಗಬಾರದೆಂದು ಭಾವಿಸಿ ಆತನ ಲಕ್ಷಾಂತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಿದರು.


ಈ ಬರವೆನ್ನುವುದು ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಯಾದ ಮೇಲೆ ತಲೆದೋರಿರುವ ಸಮಸ್ಯೆಯಲ್ಲ. ಕಳೆದ 16 ವರ್ಷಗಳಿಂದ ದೇಶ ಹಾಗೂ ನಮ್ಮ ರಾಜ್ಯದ ಒಂದಿಲ್ಲೊಂದು ಭಾಗಗಳು ಬರ, ನೆರೆಗೆ ತುತ್ತಾಗುತ್ತಲೇ ಬಂದಿವೆ. ಆದರೆ ಮುಖ್ಯಮಂತ್ರಿಗೆ ದೂರದೃಷ್ಟಿ ಇರಬೇಕಾಗುತ್ತದೆ. ಎಸ್.ಎಂ. ಕೃಷ್ಣ ಮೂರು ವರ್ಷ ಸತತ ಬರ ಬಂದಾಗ ಅಂತರ್ಜಲಮಟ್ಟವನ್ನು ಹೆಚ್ಚಿಸಬೇಕಾದರೆ ಬೀಳುವ ಹನಿ ಹನಿ ನೀರನ್ನೂ ಕಾಪಿಟ್ಟು ಕೊಳ್ಳಬೇಕೆಂದು ಭಾವಿಸಿ ಕೆರೆಗಳ ಪುನಶ್ಚೇತನಕ್ಕೆಂದೇ ಕಾಯಕ ಕೆರೆ ಎಂಬ ಯೋಜನೆ ಜಾರಿಗೆ ತಂದಿದ್ದರು. ಅದೇ ರೀತಿ ಬರ ಎದುರಿಸುತ್ತಿದ್ದ ಮೈಸೂರು-ಚಾಮರಾಜನಗರ ಜಿಲ್ಲೆಗಳ ಕೆರೆಗಳು ನೀರಿಗಾಗಿ ಬಾಯ್ಬಿಟ್ಟುಕೊಂಡು ಕುಳಿತಿವೆ, ಬತ್ತಿದ ಕೆರೆಗಳಿಂದಾಗಿ ದನಕರುಗಳು ಬಳಲಿವೆ ಎಂಬುದನ್ನು ಕಂಡಕೂಡಲೇ ಎರಡೂ ಜಿಲ್ಲೆಗಳ ಕೆರೆಗಳಿಗೆ ಕಬಿನಿಯಿಂದ ನೀರು ತುಂಬಿಸಲು 219 ಕೋಟಿ ರೂಪಾಯಿಯನ್ನು ನಿಂತಲ್ಲೇ ಬಿಡುಗಡೆ ಮಾಡಿದವರು ಬಿಎಸ್‌ವೈ. ಇವತ್ತು ಮೈದುಂಬಿರುವ ಕೆರೆಗಳು ಬಿಎಸ್‌ವೈ ಹೆಸರು ಹೇಳುತ್ತಿವೆ.


ಆದರೆ ನಿಮ್ಮ ಕಥೆ ಹೇಗಿದೆ ಮುಖ್ಯಮಂತ್ರಿಯವರೇ? ಮೊನ್ನೆ ಮೊನ್ನೆ ನೀವು ಕೆಆರ್‌ಎಸ್‌ನಿಂದ ಚಾಮುಂಡೇಶ್ವರಿಯ 20 ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸುವ ಯೋಜನೆಗೆ ಅಡಿಗಲ್ಲು ಇಡಲು 4 ಸಾರಿ ನಿಮ್ಮನ್ನು ಶಾಸಕರನ್ನಾಗಿ ಮಾಡಬೇಕಾಗಿ ಬಂತಲ್ಲ ಆ ಕ್ಷೇತ್ರದ ಜನರ ದುರದೃಷ್ಟ?! ಎರಡು ಸಾರಿ ಉಪಮುಖ್ಯಮಂತ್ರಿಯಾಗಿ, 10 ಬಜೆಟ್ ಮಂಡಿಸಿ, ಎರಡೂ ವರ್ಷದ ನಂತರ ಇಪ್ಪತ್ತು ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ ಅಡಿಗಲ್ಲು ಇಟ್ಟಿದ್ದೇ ದೊಡ್ಡ ಸಾಧನೆಯೆಂದು ನಿಮ್ಮ ಬೆನ್ನನ್ನು ತಟ್ಟಿಕೊಳ್ಳುತ್ತಾ, ಹೃದಯವನ್ನು ಆರ್ದ್ರ ಮಾಡಿಕೊಂಡು ಭಾವುಕರಾಗಿ ಮುಂದಿನ ಸಾರಿ ವರುಣಾಕ್ಕೆ ಮಗನನ್ನು ನಿಲ್ಲಿಸಿ, ತಾನು ಚಾಮುಂಡೇಶ್ವರಿಗೆ ಮತ್ತೆ ಬರುತ್ತೇನೆ ಎಂದಿದ್ದೀರಿ. ನಿಜ ಹೇಳಿ, ಚಾಮುಂಡೇಶ್ವರಿಯಲ್ಲಿ ಏನು ಉಳಿದಿದೆ? ಅಡಿಗಡಿಗೂ ರಿಯಲ್ ಎಸ್ಟೇಟ್ ಕುಳಗಳ ಬಡಾವಣೆಗಳು. ಆರು ಕಾಸಿಗೆ, ಮೂರು ಕಾಸಿಗೆ ಕೃಷಿ ಭೂಮಿಯನ್ನು ಮಾರಿಕೊಂಡು ಕೂಲಿ ಕಾರ್ಮಿಕನಾಗಿರುವ ರೈತರ ದಂಡು. ಖಾಸಗಿಯವರಿಗೆ ರೆಡ್‌ಕಾರ್ಪೆಟ್ ಹಾಕಿ ನಿರುಮ್ಮಳವಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮೂಡಾ). ನೀವು ಪ್ರತಿನಿಧಿಸಿದ ಚಾಮುಂಡೇಶ್ವರಿ, ಖರ್ಗೆಯವರ ಗುರ್‌ಮಿಟ್ಕಲ್, ಧರ್ಮಸಿಂಗರ ಜೇವರ್ಗಿ, ಬಂಗಾರಪ್ಪನವರ ಸೊರಬದಂತೆ ಸೊರಗಿದ ಕ್ಷೇತ್ರಗಳ ಸಾಲಿಗೆ ಸೇರಿದೆಯೇ ಹೊರತು ಮೂರು ವರ್ಷಗಳಲ್ಲಿ ಇಡೀ ಚರ್ಯೆಯೇ ಬದಲಾದ ಬಿ.ಎಸ್. ಯಡಿಯೂರಪ್ಪನವರ ಶಿವಮೊಗ್ಗವಾಗಲಿಲ್ಲ! ಇಷ್ಟಾಗಿಯೂ, ಮಗನಿಗೆ ಭವಿಷ್ಯ ರೂಪಿಸಿಕೊಡುವ ಸಲುವಾಗಿ ಮತ್ತೆ ಚಾಮುಂಡೇಶ್ವರಿಗೆ ಜಿಗಿಯಲು ಸಿದ್ಧವಾಗಿರುವ ನೀವು ಒಂದು ಕಡೆಯಾದರೆ,


ಇನ್ನೊಂದೆಡೆ ರಾಜಕಾರಣದಲ್ಲಿ ಶೀಘ್ರ ಕೋಪಿಯಾದರೂ, ರೈತರ ವಿಷಯದಲ್ಲಿ ಮಗುವಾಗುತ್ತಿದ್ದರು ಬಿಎಸ್‌ವೈ. ಹಾಗಾಗಿಯೇ ರಾಜ್ಯದಲ್ಲಿರುವ ಬರಪೀಡಿತ ಪ್ರದೇಶಗಳಲ್ಲೆಲ್ಲ ಕುಡಿಯುವ ನೀರು ಪೂರೈಕೆ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಕಾಯಕಕ್ಕೆ ಕೈಹಾಕಿದರು. ಜೋಳಕ್ಕೆ, ಭತ್ತಕ್ಕೆ ಕೇಂದ್ರ ಸರ್ಕಾರ ಕೊಡುವ ಕನಿಷ್ಟ ಬೆಂಬಲ ಬೆಲೆಗೆ 150 ರೂ. ಸೇರಿಸಿಕೊಟ್ಟು ಖರೀದಿ ಮಾಡಿದರು. ಮನೆಯಲ್ಲಿ ಹೆಣ್ಣು ಮಗಳು ಹುಟ್ಟಿದರೆ ಅವಳು ಮನೆಗೆ ಭಾರವಲ್ಲ, ಅವಳು ಮನೆಯ ಭಾಗ್ಯಲಕ್ಷಿ ಎನ್ನುತ್ತಾ ಅವಳ ಭವಿಷ್ಯಕ್ಕಾಗಿ ಒಂದು ಲಕ್ಷ ರೂಪಾಯಿಯ ಯೋಜನೆ ತಂದರು. ಆ ಹೆಣ್ಣುಮಗಳ ಶಾದಿ ಬಗ್ಗೆ ಯೋಚಿಸಲಿಲ್ಲ, ಅವಳನ್ನ ಶಾಲೆಗೆ ಸೇರಿಸಿ ವಿದ್ಯಾಲಕ್ಷ್ಮಿಯನ್ನಾಗಿ ಮಾಡುವುದಕ್ಕಾಗಿ ಸೈಕಲ್ ಕೊಟ್ಟರು. ರೆಕ್ಕೆ ಪುಕ್ಕ ಬಂದ ಮೇಲೆ ಗೂಡು ತೊರೆದು ಹಾರಿಹೋಗುವ ಹಕ್ಕಿಗಳಂತೆ ವೃದ್ಧ ತಂದೆತಾಯಂದಿರನ್ನು ಊರಲ್ಲಿ ಬಿಟ್ಟು ಮಕ್ಕಳು ಪೇಟೆ ಸೇರಿದರೇನಂತೆ ಆಳುವ ಪಕ್ಷಕ್ಕೆ ಹಿರಿಯರನ್ನು ಸಾಕಿ ಸಲಹುವ ಸಾಮಾಜಿಕ ಜವಾಬ್ದಾರಿಯಿದೆಯೆಂದು ಅರಿತು ಸಂಧ್ಯಾಸುರಕ್ಷಾ ಯೋಜನೆಯನ್ನು ಜಾರಿಗೆ ತಂದರು. ವೃದ್ಧಾಪ್ಯ, ವಿಧವಾ ವೇತನವನ್ನು ಹೆಚ್ಚಿಸಿದರು. ನಲವತ್ತು ವರ್ಷ ದಾಟಿದ ಅವಿವಾಹಿತ ಹೆಣ್ಣುಮಕ್ಕಳನ್ನೂ ಪಿಂಚಣಿ ಯೋಜನೆಯ ವ್ಯಾಪ್ತಿಗೆ ತಂದರು.


ಮುಖ್ಯಮಂತ್ರಿಯವರೇ, ನಿಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಪ್ರಾರಂಭದಲ್ಲಿ ಬೆಳಗಾವಿ ಅಧಿವೇಶನದಲ್ಲಿ ಕಬ್ಬುಬೆಳೆಗಾರ ವಿಠ್ಠಲ ಅರಭಾವಿ ಆತ್ಮಹತ್ಯೆ ಮಾಡಿಕೊಂಡ, ನೀವು ವಾರಕ್ಕೊಮ್ಮೆ ಬರುವ ಮೈಸೂರಿನ ಮಾರ್ಗ ಮಧ್ಯದಲ್ಲಿ ಸಿಗುವ ಮಂಡ್ಯದಲ್ಲಿ ತಾನೇ ಬೆಳೆದ ಕಬ್ಬಿನ ಗದ್ದೆಗೆ ಬೆಂಕಿಕೊಟ್ಟು ರೈತ ಸುಟ್ಟುಕೊಂಡು ಸಾವಾದ. ಆದರೆ ನಿಮ್ಮ ಸ್ಪಂದನೆ ಹೇಗಿತ್ತು? ಬಿಎಸ್‌ವೈ ಕೂಡ ಕಬ್ಬು ಬೆಳೆಗಾರರ ಸಮಸ್ಯೆ ಎದುರಿಸಿದ್ದರು. ಕೂಡಲೇ ಕಬ್ಬಿನ ಕಾರ್ಖಾನೆಗಳ ಪುನಶ್ಚೇತನಕ್ಕೆ ಕೈಹಾಕಿದರು. ಬರ, ನೆರೆಯಂಥ ಪ್ರಕೃತಿ ವಿಕೋಪಗಳಾದರೆ ಕೂಡಲೇ ರೈತನ ಸಂಕಷ್ಟಕ್ಕೆ ಸ್ಪಂದಿಸಲು 500 ಕೋಟಿಯನ್ನು ಮೀಸಲಿಡುವ ಆವರ್ತ ನಿಧಿಯನ್ನು ಆರಂಭಿಸಿದರು. ಇಷ್ಟು ಸಾಕಾಗುವುದಿಲ್ಲ. ನಮ್ಮ ಹಿಂದುಳಿದ ಜಾತಿ, ವರ್ಗ, ಜನಾಂಗಗಳಲ್ಲಿ ಹೆಮ್ಮೆಯನ್ನು ಮೂಡಿಸಬೇಕೆಂದು ಕನಕ,

ವಾಲ್ಮೀಕಿ ಜಯಂತಿಯನ್ನು ಆರಂಭಿಸಿದರು. ಇಂತಹ ಆದರ್ಶ ವ್ಯಕ್ತಿಯನ್ನು ಮೇಲ್ಪಂಕ್ತಿಯಾಗಿಟ್ಟುಕೊಂಡು ಹೆಮ್ಮೆಯಿಂದ ಮುನ್ನಡೆಯಿರಿ ಎಂಬ ಸಂದೇಶ ಕೊಟ್ಟರು. 24 ಕೋಟಿ ಕೊಟ್ಟು ಕನಕ ಪ್ರಾಧಿಕಾರ ರಚಿಸಿದರು. ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟಗಳಲ್ಲಿ ಅಂಬೇಡ್ಕರ್, ಬಾಬು ಜಗಜೀವನ್‌ರಾಮ್, ವಾಲ್ಮೀಕಿ, ಕನಕ ಭವನಗಳ ನಿರ್ಮಾಣಕ್ಕೆ ಕೈಹಾಕುವ ಮೂಲಕ ಮದುವೆ, ಮುಂಜಿ ಅಥವಾ ಯಾವುದೇ ಸಮಾರಂಭವಿರಲಿ, ಎಲ್ಲರಂತೆ ಭವ್ಯ ಕಟ್ಟಡಗಳಲ್ಲೇ ಆಚರಿಸಿ ಎಂದು ಸಾಮಾಜಿಕ ನ್ಯಾಯ ಸ್ಥಾಪನೆಗೆ ಮುಂದಾದರು ಬಿಎಸ್‌ವೈ. ಖಂಡಿತ ಬಿಜೆಪಿಯವರು ಬೀದಿ ಜಗಳ ಮಾಡಿದ್ದಾರೆ, ಒಳಜಗಳ ಮಾಡಿದ್ದಾರೆ, ಆದರೆ ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಮಾತ್ರ ಜಗಳವಾಡಿಲ್ಲ. ಹಾಗಾಗಿ ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲೂ 5 ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ಮಾಡಿದ ಕನಿಷ್ಟ ನಾಲ್ಕೈದು ಗಣನೀಯ ಕೆಲಸ-ಕಾರ್ಯಗಳು ಕಾಣುತ್ತವೆ.


ಮುಖ್ಯಮಂತ್ರಿಯವರೇ, 14ನೇ ಹಣಕಾಸು ಆಯೋಗದ ಮುಖಾಂತರ ಪ್ರಧಾನಿ ನರೇಂದ್ರ ಮೋದಿಯವರು ಇತಿಹಾಸದಲ್ಲೇ ಮೊದಲ ಬಾರಿಗೆ ಗ್ರಾಮಪಂಚಾಯಿತಿಗಳಿಗೆ ಲಕ್ಷಾಂತರ ರೂ. ಅನುದಾನವನ್ನು ನೇರವಾಗಿ ನೀಡಿದರೆ, ನೀವು ಅದರಲ್ಲಿ ಕರೆಂಟು ಬಿಲ್ ಬಾಕಿಯನ್ನು ಕಟ್ಟಿ ಎಂದು ಪಂಚಾಯಿತಿಗಳಿಗೆ ಸುತ್ತೋಲೆ ಹೊರಡಿಸಿದ್ದೀರಿ! ನೀವು ಕಳೆದ ವರ್ಷ ಪ್ರತಿ ಪಂಚಾಯಿತಿಗೆ 5-6 ಮನೆಗಳನ್ನು ಕೊಟ್ಟಿರಿ, ಈ ವರ್ಷ 10-12ಕ್ಕೆ ಬಂದು ನಿಂತಿದೆ. ಆದರೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಬಸವ ವಸತಿ ಯೋಜನೆಯಡಿ ಪ್ರತಿ ಪಂಚಾಯಿತಿಗೆ ಗರಿಷ್ಠ 300 ಮನೆಗಳನ್ನು ಕೊಟ್ಟ ಉದಾಹರಣೆ ಪ್ರತಿ ಜಿಲ್ಲೆಗಳಲ್ಲೂ ಇದೆ. ಪ್ರತಿ ನಗರ ಸಭೆಗಳಿಗೆ 25 ಕೋಟಿ, ಮಹಾನಗರಪಾಲಿಕೆಗಳಿಗೆ ವಾರ್ಷಿಕ ತಲಾ 50 ಕೋಟಿ ನೀಡಿದ್ದರು ಯಡಿಯೂರಪ್ಪ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ನಿಮ್ಮ ಸೋನಿಯಾ ಗಾಂಧಿ ನಿಯಂತ್ರಿತ

ಯುಪಿಎ ಸರ್ಕಾರ ದುಡ್ಡೇ ಕೊಡದೇ ಹೋದಾಗ, ನೀವು ಕೊಡದಿದ್ದರೇನಂತೆ ನಾನೇ ಗ್ರಾಮಗಳ ರಸ್ತೆಯನ್ನು ಅಭಿವೃದ್ಧಿ ಮಾಡುತ್ತೇನೆಂದು ನಮ್ಮ ಗ್ರಾಮ; ನಮ್ಮ ರಸ್ತೆ ಯೋಜನೆಯನ್ನು ಜಾರಿಗೆ ತಂದರು. 4 ಸಾವಿರ ಸುವರ್ಣ ಗ್ರಾಮಗಳನ್ನು ತಲಾ 75 ಲಕ್ಷದಿಂದ 2 ಕೋಟಿವರೆಗೂ ನೀಡಿ ಅಭಿವೃದ್ಧಿಪಡಿಸಿದರು.


ಮುಖ್ಯಮಂತ್ರಿಯವರೇ, ನಿಮ್ಮ ಸರ್ಕಾರ ಮಾಡಿದ ಇಂಥ ಒಂದು ಉದಾಹರಣೆಯನ್ನು ಕೊಡಿ ನೋಡೋಣ? ಕೇಂದ್ರ ಸರ್ಕಾರ 32 ರೂಪಾಯಿಗೆ ಅಕ್ಕಿ, 25 ರೂ.ಗೆ ಸಕ್ಕರೆ, 22 ರೂ.ಗೆ ಗೋಧಿ ಖರೀದಿಸಿದ ನಿಮಗೆ 3 ರೂ.ಗೆ ಕೊಟ್ಟರೆ ಅದನ್ನು 2 ರೂ. ಕಡಿತ ಮಾಡಿ ರೂಪಾಯಿಗೊಂದು ಕೆ.ಜಿ. ಅಕ್ಕಿ ಕೊಟ್ಟೆ ಎಂದು ಎಣ್ಣೆ, ಸಕ್ಕರೆ, ಅಕ್ಕಿ, ಗೋಧಿ ಪ್ಯಾಕಿನ ಮೇಲೆ ನಿಮ್ಮ -ಟೋ ಹಾಕಿಕೊಂಡಿದ್ದನ್ನು ಬಿಟ್ಟರೆ ಬೇರೇನು ಮಾಡಿದ್ದೀರಿ? ಬಿಎಸ್‌ವೈ ಉದಾಹರಣೆಯಿಂದ ನಿಮಗೆ ಇರಿಸು-ಮುರಿಸಾಗ ಬಹುದು. ನಿಮ್ಮ ಪಕ್ಷದ್ದೇ ಒಂದು ಉಹಾಹರಣೆಯನ್ನು ತೆಗೆದುಕೊಳ್ಳಿ. “Nearly all men can stand adversity,

but if you want to test a man’s character, give

him power”, ಅಂದರೆ ಒಬ್ಬ ಮನುಷ್ಯನ ವ್ಯಕ್ತಿತ್ವ ಅಥವಾ ಗಟ್ಟಿತನವನ್ನು ಪರೀಕ್ಷಿಸಬೇಕಾದರೆ ಅವನಿಗೆ ಅಧಿಕಾರ ಕೊಟ್ಟು ನೋಡು ಎಂದಿದ್ದರು ಅಬ್ರಹಾಂ ಲಿಂಕನ್. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಮುತ್ಸದಿ ಎಸ್ .ಎಂ. ಕೃಷ್ಣ ಅವರನ್ನು ನೆನಪಿಸಿಕೊಂಡಾಗಲೆಲ್ಲ ಈ ಮಾತು ನೆನಪಿಗೆ ಬರುತ್ತೆ.


ರಾಜ್‌ಕುಮಾರ್ ಅಪಹರಣ ನಾಗಪ್ಪ ಹತ್ಯೆವಿಠಲೇನಹಳ್ಳಿ ಗೋಲಿಬಾರ್ಮೂರು ವರ್ಷ ಸತತ ಬರಮುನ್ನೂರಕ್ಕೂ ಹೆಚ್ಚು ರೈತರಆತ್ಮಹತ್ಯೆಕಾವೇರಿ ಗಲಾಟೆಜಯಲಲಿತಾ ಕಿರಿಕ್ಕುಬಹುಶಃ ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಅಡೆತಡೆಗಳನ್ನು, ಸಂಕಷ್ಟಗಳನ್ನು ಎದುರಿಸಿದ ಮುಖ್ಯಮಂತ್ರಿಯೆಂದರೆ ಎಸ್.ಎಂ. ಕೃಷ್ಣ ಅವರು. ಇಷ್ಟಾಗಿಯೂ ಸಾರ್ವಜನಿಕವಾಗಿ ಎಂದೂ ಅವರು ತಾಳ್ಮೆ ಕಳೆದುಕೊಳ್ಳಲಿಲ್ಲ. ಎಂದಿನ ಸಭ್ಯತೆ, ಸಜ್ಜನಿಕೆಯನ್ನು ಬಿಡಲಿಲ್ಲ. ಒಬ್ಬ ಮುಖ್ಯಮಂತ್ರಿ ಹೇಗಿರಬೇಕೆಂದರೆ ಕೃಷ್ಣ ಅವರಂತೆ ವಿದ್ಯಾವಂತ, ಬುದ್ಧಿವಂತ, ದೂರದೃಷ್ಟಿ ಹೊಂದಿರುವಾತ ಆಗಿರಬೇಕೆಂದು ಬೇರೆ ರಾಜ್ಯಗಳಿಗೆ ನಾವು ಉದಾಹರಣೆ ಕೊಡುವಂತೆ ಇದ್ದರು. ಅವರು ಉಡುಗೆ ತೊಡುಗೆಯಲ್ಲಿ ಮಾತ್ರ ಶಿಸ್ತನ್ನು ಹೊಂದಿದ್ದರು ಎಂದು ಭಾವಿಸಬೇಡಿ, ಕರ್ನಾಟಕದ ವಿತ್ತ ಸಚಿವಾಲಯಕ್ಕೂ ಶಿಸ್ತನ್ನು ತಂದರು. Kar-

nataka Fiscal Responsibility Act, 2002 ವಿತ್ತೀಯ ಹೊಣೆಗಾರಿಕೆ ಕಾಯಿದೆ ಅಂದರೆ ಆದಾಯದ ಆಧಾರದ ಮೇಲೆ ಖರ್ಚನ್ನು ಮಾಡಬೇಕು, ಖರ್ಚು ದುಡಿಮೆಗಿಂತ ಜಾಸ್ತಿಯಾಗಬಾರದು ಎಂದು ಚೌಕಟ್ಟು ಹಾಕಿಕೊಟ್ಟರು. ಮುಂದಿನ ಎಲ್ಲ ಮುಖ್ಯಮಂತ್ರಿಗಳೂ ಅದೇ ಚೌಕಟ್ಟಿನಲ್ಲಿ ನಡೆದರು ಸಿದ್ಧರಾಮಯ್ಯರೊಬ್ಬರನ್ನು ಬಿಟ್ಟು! ಅದರ ಪರಿಣಾಮವೇ ಬಿಜೆಪಿ ಸರ್ಕಾರ 5 ವರ್ಷಗಳಲ್ಲಿ ಮಾಡಿದ ಸಾಲದ ಎರಡು ಪಟ್ಟನ್ನು ಸಿದ್ದರಾಮಯ್ಯನವರು ಎರಡೂವರೆ ವರ್ಷದಲ್ಲೇ ಮಾಡಿದ್ದಾರೆ!

ಇದೇನೇ ಇರಲಿ, ರಾಜ್ಯದ ಖಜಾನೆಯನ್ನು ಭದ್ರಪಡಿಸಿದ್ದು, ಆರ್ಥಿಕತೆಯನ್ನು ಸರಿಪಡಿಸಿದ್ದು ಮಾತ್ರವಲ್ಲ, ಅಡಳಿತ ವ್ಯವಸ್ಥೆಯನ್ನೂ ತ್ವರಿತ ಹಾಗೂ ಭ್ರಷ್ಟಾಚಾರ ಮುಕ್ತವನ್ನಾಗಿ ಮಾಡುವ ಸಲುವಾಗಿ ಭೂ ದಾಖಲೆಗಳ ಗಣಕೀಕರಣಕ್ಕೆ ಕೈಹಾಕಿದರು ಕೃಷ್ಣ. ಪಹಣಿ, ಪಟ್ಟಾಗಳನ್ನು ಕೇಳಿದರೆ ತಿಂಗಳು ತಳ್ಳುತ್ತಿದ್ದರೆ, ಕಾಸು ಕೊಟ್ಟರಷ್ಟೇ ಕಾಪಿ ಕೊಡುತ್ತಿದ್ದರು. ಅಂತಹ ವ್ಯವಸ್ಥೆಗೆ ಚಾಟಿಯೇಟು ಕೊಟ್ಟು, ತಂತ್ರಜ್ಞಾನವನ್ನು ತಂದು ಬದಲಾಯಿಸಿದರು. ನಿಮಗೆ ತಿಳಿದಿರುವಂತೆ ಕರ್ನಾಟಕವನ್ನು ಒಂದಿಲ್ಲೊಂದು ಲಾಬಿಗಳೇ ಆಳುತ್ತಾ ಬಂದಿವೆ. ಮೊದಲಿಗೆ ಹೆಂಡದ ದೊರೆಗಳು, ಎಜುಕೇಶನ್ ಲಾಬಿ, ಮೈನಿಂಗ್ ಮಾಫಿಯಾ, ರಿಯಲ್ ಎಸ್ಟೇಟ್ ದಂಧಾ.


ಇವುಗಳಲ್ಲೊಂದಾದ ಹೆಂಡದ ದೊರೆಗಳು ಸೆಕೆಂಡ್ಸ್ ಮೂಲಕ ತೆರಿಗೆ ಕದಿಯುತ್ತಿದ್ದರು. ಇಂತಹ ಕಳ್ಳರನ್ನು ಮಟ್ಟಹಾಕಲು ಹಾಗೂ ರಾಜ್ಯದ ಆದಾಯವನ್ನು ಹೆಚ್ಚಿಸಲು 2003ರಲ್ಲಿ ಕರ್ನಾಟಕ ಸ್ಟೇಟ್ ಬೆವೆರೇಜಸ್ ಕಾರ್ಪೊರೇಶನ್ ಲಿಮಿಟೆಡ್ ಸ್ಥಾಪನೆ ಮಾಡುವ ಮೂಲಕ ಮದ್ಯ ವಿತರಣೆ ಹಾಗೂ ಮಾರಾಟ ವ್ಯವಸ್ಥೆಯನ್ನು ನಿಯಂತ್ರಣಕ್ಕೆ ತಂದು ಬೊಕ್ಕಸಕ್ಕೆ ಲಾಭ ಮಾಡಿದರು.


ಇವತ್ತು ಬೆಂಗಳೂರನ್ನು ಒಂದು ತಕ್ಕಡಿಗೆ, ಕರ್ನಾಟಕದ ಉಳಿದ ಭಾಗವನ್ನು ಮತ್ತೊಂದು ತಕ್ಕಡಿಗೆ ಇಟ್ಟರೆ ಬೆಂಗಳೂರೇ ಹೆಚ್ಚು ತೂಗುತ್ತದೆ! ಏಕೆಂದರೆ ಕೆಂಪೇಗೌಡ ಬೆಂಗಳೂರಿನ ನಿರ್ಮಾತೃವಾದರೂ ಆ ಬೆಂಗಳೂರಿಗೆ ಐಟಿ ಗರಿಯನ್ನು ಇಟ್ಟು ಜಾಗತಿಕ ಮಟ್ಟದಲ್ಲಿ ಬೆಂಗಳೂರು ಹೆಸರುವಾಸಿಯಾಗುವಂತೆ ಮಾಡಿದ್ದು ಕೃಷ್ಣ ಅವರು. ಅದು ಟ್ಯಾಕ್ಸ್ ಹಾಲಿಡೆ ಇರಬಹುದು, ಉಚಿತ ಭೂಮಿ ನೀಡಿಕೆ ಇರಬಹುದು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಹಾಗೂ ಉದ್ಯಮ ಕ್ಷೇತ್ರದ ಎಲ್ಲ ಬೇಡಿಕೆಗಳಿಗೂ ಸ್ಪಂದಿಸುವುದು ಇರಬಹುದು, ಇಂತಹ ಕೆಲಸಗಳಿಂದ ಜಗತ್ತಿನ ಪ್ರತಿಷ್ಠಿತ ಕಂಪನಿಗಳು ಬೆಂಗಳೂರಿನತ್ತ ಮುಖಮಾಡುವಂತೆ ಮಾಡಿದರು. ಹಾಗಾಗಿ ಇವತ್ತು ಬೆಂಗಳೂರೊಂದರಿಂದ ಬರುವ ಆದಾಯವನ್ನು ಇಡೀ ಕರ್ನಾಟಕ ಸರಿಗಟ್ಟಲು ಸಾಧ್ಯವಿಲ್ಲ.

ನಮ್ಮ ರಾಜ್ಯದ ಖಜಾನೆ ತುಂಬುವುದೇ ಬೆಂಗಳೂರಿನಿಂದ. ಅವರು ಐಟಿಗೆ ಬರೀ ಬೆಂಗಳೂರನ್ನೇ ಆಯ್ದುಕೊಳ್ಳಲಿಲ್ಲ, ಮೈಸೂರು, ಮಂಗಳೂರು, ಹುಬ್ಬಳ್ಳಿಗಳತ್ತಲೂ ದೃಷ್ಟಿಹಾಯಿಸಿದರು. ಹಾಗಾಗಿಯೇ ಈ ನಗರಗಳಲ್ಲೂ ಐಟಿ ತಾಣಗಳನ್ನು ಕಾಣುತ್ತಿದ್ದೇವೆ. ರೈತನೊಬ್ಬನಿಗೆ ಸಹಾಯ ಮಾಡಿದರೆ ಸಾಲದು ಅಂತ, ಆ ರೈತನ ಮಗ ಎಂಜಿನಿಯರಿಂಗ್ ಮಾಡಿದರೆ ಅವನಿಗೆ ಉದ್ಯೋಗ ನೀಡುವ, ಭವಿಷ್ಯ ಕಟ್ಟಿಕೊಳ್ಳಲು ವೇದಿಕೆ ಸೃಷ್ಟಿ ಮಾಡಿಕೊಡುವ ಕೆಲಸವನ್ನು ಕೃಷ್ಣ ಮಾಡಿದರು. ಹಾಗಾಗಿಯೇ ಸುಶಿಕ್ಷಿತರ, ವಿದ್ಯಾವಂತರ, ಮಧ್ಯಮವರ್ಗದವರ ಪ್ರೀತಿಗೆ ಪಾತ್ರರಾದರು.


ಅಂದು ಎಸ್.ಎಂ. ಕೃಷ್ಣ ಅವರು ಬೆಂಗಳೂರು ಅಜೆಂಡಾ ಟಾಸ್ಕ್ -ರ್ಸನ್ನು ರಚನೆ ಮಾಡಿದಾಗ ನಾರಾಯಣಮೂರ್ತಿ ಆದಿಯಾಗಿ ಉದ್ಯಮ ಕ್ಷೇತ್ರದ ಅತಿರಥ ಮಹಾರಥರು ಅದರ ಸದಸ್ಯರಾಗಲು ಒಪ್ಪಿಕೊಂಡಿದ್ದರು. ಅದು ಕೃಷ್ಣರ ಮೇಲಿದ್ದ ನಂಬಿಕೆ, ವಿಶ್ವಾಸವನ್ನು ತೋರುತ್ತದೆ. ಈ ನಡುವೆ ರಾಜ್‌ಕುಮಾರ್ ಅಪಹರಣ, ಬರ, ರೈತರ ಆತ್ಮಹತ್ಯೆ, ಗೋಲಿಬಾರ್, ನಾಗಪ್ಪ ಹತ್ಯೆ, ಜಯಾ ಕ್ಯಾತೆ, ಕಾವೇರಿ ಗಲಾಟೆಗಳು ನಡೆದವು. ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರೆ ಉಡುಗಿ ಹೋಗುತ್ತಿದ್ದರು. ಆದರೆ ಇಂತಹ ಸಮಸ್ಯೆಗಳ ನಡುವೆಯೂ ಕೆರೆಗಳಿಗೆ ಕಾಯಕಲ್ಪ ನೀಡಲು ಕಾಯಕ ಕೆರೆ ಯೋಜನೆ ಆರಂಭಿಸಿದರು. ಮೈಸೂರು-ಬೆಂಗಳೂರು ಹೆದ್ದಾರಿಯನ್ನು ಅಗಲೀಕರಣ ಮಾಡುವ ನಿರ್ಧಾರ ಕೈಗೊಳ್ಳುವುದಕ್ಕೇ ಸಿದ್ದರಾಮಯ್ಯನವರಿಗೆ ಎರಡೂವರೆ ವರ್ಷ ಬೇಕಾಯಿತು. ಆದರೆ ಕೃಷ್ಣ ನಾಲ್ಕುಪಥಗಳ ಆ ಹೈವೆಯನ್ನು ನಾಲ್ಕೂಮೂಕ್ಕಾಲು ವರ್ಷದ ಅಧಿಕಾರಾವಧಿಯಲ್ಲಿ ನಿರ್ಮಾಣವನ್ನೇ ಮಾಡಿಬಿಟ್ಟಿದ್ದರು! ಈಗಿನವರು ಅಡಿಗಲ್ಲು ಇಡುವುದಕ್ಕೇ ವರ್ಷಗಳು ಬೇಕು,


ಕೃಷ್ಣ ನೋಡನೋಡುತ್ತಲೇ ವಿಕಾಸಸೌಧವನ್ನು ಪೂರ್ಣಗೊಳಿಸಿದ್ದರು. ಬಡವರ ನರಳಿಕೆಯನ್ನು ನೋಡಲಾರದೆ ಆರೋಗ್ಯ ಸೇವೆಗೆ ಹೊಸ ಭಾಷ್ಯ ಬರೆದ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತಂದರು. ಖಾಸಗಿ ಆಸ್ಪತ್ರೆಗಳನ್ನೂ ಆ ಯೋಜನೆಯ ವ್ಯಾಪ್ತಿಗೆ ತಂದು ಕ್ಲಿಷ್ಟ ಸೇವೆಗಳೂ ಬಡವರಿಗೆ ಸಿಗುವಂತೆ ಮಾಡಿದರು. ಊರೂರಲ್ಲಿ ಸೀಶಕ್ತಿ ಸಂಘಗಳನ್ನು ಆರಂಭಿಸಿ ಸಾಲ ಸವಲತ್ತು ನೀಡಿ ಗ್ರಾಮೀಣ ಮಹಿಳೆಯರಲ್ಲಿ ಸ್ವಾವಲಂಬನೆ ತರಲು ಮುಂದಾದರು. ರೈತ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಿದರು, ಸ್ವಸಹಾಯ ಸಂಘಗಳನ್ನು ಆರಂಭಿಸಿದರು.


ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮಗೆ ಗೊತ್ತಾ, ನಿಮ್ಮಂತೆ ಎರಡೂವರೆ ವರ್ಷ ಅಧಿಕಾರಾವಧಿ ಪೂರೈಸಿದಾಗ ಎಸ್.ಎಂ. ಕೃಷ್ಣ ಅವರಿಗೆ ದೇಶದ ನಂಬರ್-1 ಮುಖ್ಯಮಂತ್ರಿ ಎಂದು ಪ್ರತಿಷ್ಠಿತ ಇಂಡಿಯಾ ಟುಡೆ ಮ್ಯಾಗಝಿನ್ ಎರಡನೇ ಬಾರಿಗೆ ಕಿರೀಟಕೊಟ್ಟಿತ್ತು!

“In two years and four

months as chief minister, Somanahalli Malaiah

Krishna continues to lead with elegance, clarity

and efficiency that have for the second succes-

sive year seen him being rated as India’s best

chief minister” ಎಂಬ ವಿವರಣೆ ಕೊಟ್ಟಿತ್ತು. ಸುಲಭವಾಗಿ ಸಿಗುವ ಹಾಗೂ ಹೊಸ ಯೋಚನೆ, ಯೋಜನೆಗಳ ಪ್ರಯೋಗಕ್ಕೆ ತೆರೆದುಕೊಳ್ಳುವ ವ್ಯಕ್ತಿ ಕೃಷ್ಣ ಎಂದು ನಾರಾಯಣಮೂರ್ತಿ ಹೊಗಳಿದ್ದರು. ಆದರೆ ಇವತ್ತು ಏನಾಗುತ್ತಿದೆ? ಯಾಕಾಗಿ

ಸಾಪ್ಟ್‌ವೇರ್ ಕಂಪನಿಗಳು, ಸ್ಟಾರ್ಟ್‌ಅಪ್‌ಗಳು ಆಂಧ್ರದತ್ತ ಮುಖ ಮಾಡಿವೆ? ಆಂಧ್ರದ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಅವರಷ್ಟೇ ಚತುರ ಹಾಗೂ ಕುಶಲ

ಮತ್ತು ಅವರಿಗಿಂತಲೂ ಬುದ್ಧಿವಂತ ಎಸ್ .ಎಂ. ಕೃಷ್ಣ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಆದರೆ ದುರದೃಷ್ಟ ವಶಾತ್ 10 ವರ್ಷಗಳ ನಂತರ ಚಂದಬಾಬು ನಾಯ್ಡು ಆಂಧ್ರದ ಮುಖ್ಯಮತ್ರಿ ಸ್ಥಾನಕ್ಕೆ ಮರಳಿದ್ದರೆ, ಕರ್ನಾಟಕದಲ್ಲಿ ಅಭಿವೃದ್ಧಿ ವಿಷಯದಲ್ಲಿ ಎಸ್.ಎಂ. ಕೃಷ್ಣ ಅವರನ್ನು ಮೇಲ್ಪಂಕ್ತಿಯಾಗಿ ಇಟ್ಟುಕೊಂಡು ನಡೆಯುವ ಬದಲು ನೀವು ರಿಗ್ರೆಸ್ಸಿವ್ ಮನಸ್ಥಿತಿಯನ್ನು ತೋರುತ್ತಿದ್ದೀರಿ.


ಮುಖ್ಯಮಂತ್ರಿಯವರೇ, ಯಾರೇನೇ ಅಂದರೂ ನೀವೊಬ್ಬ ಜನಪ್ರಿಯ ಮುಖ್ಯಮಂತ್ರಿ. ಆದರೆ ಕೊರತೆ ಕಾಣುತ್ತಿರುವುದು ಜನಾನುರಾಗಿಯಲ್ಲದ ನಿಮ್ಮ ಸರ್ಕಾರದ ಧೋರಣೆಯಲ್ಲಿ, ನಡೆದುಕೊಳ್ಳುತ್ತಿರುವ ರೀತಿಯಲ್ಲಿ. ಕಳೆದ 20 ವರ್ಷಗಳ ಕರ್ನಾಟಕದ ಆಡಳಿತವನ್ನು ನೋಡಿದರೆ ಮೂವರು ಅತ್ಯಂತ ಜನಪ್ರಿಯ ಮುಖ್ಯಮಂತ್ರಿಗಳಾಗಿ ಕಾಣುತ್ತಾರೆ. ದೂರದೃಷ್ಟಿಗೆ ಕೃಷ್ಣ, ಅಂತಃಕರಣಕ್ಕೆ ಕುಮಾರಸ್ವಾಮಿ, ಅಭಿವೃದ್ಧಿಗೆ ಬಿಎಸ್‌ವೈ. ಇನ್ನೂ ಕಾಲ ಮಿಂಚಿಲ್ಲ. ಮೇಲ್ಪಂಕ್ತಿಗೆ ಹೊರಗಡೆ ಹುಡುಕಬೇಕಿಲ್ಲ. ಕನಿಷ್ಟ ಕೃಷ್ಣ ಮಾರ್ಗವನ್ನಾದರೂ ತುಳಿಯಿರಿ. ಇಲ್ಲವಾದರೆ, ಆ ನಿಮ್ಮ ಬೋಳುಮಂಡೆ ಸಲಹೆಗಾರನ ಮಾತು ಕೇಳಿ ಸಮಾಜಘಾತುಕ ಶಕ್ತಿಗಳನ್ನು ಬೆಳೆಸುವ ಇಲ್ಲ-ಸಲ್ಲದ ಜಾತಿ ರಾಜಕೀಯವನ್ನು ಮುಂದುವರಿಸಿದ್ದೇ ಆದರೆ 2014ರ ಲೋಕಸಭೆ ಚುನಾವಣೆ, ತದನಂತರದ ಬಿಬಿಎಂಪಿ ಚುನಾವಣೆಯಲ್ಲಾದಂತೆ ಮುಂದಿನ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲೂ ಜನ ನಿಮ್ಮ ಸರ್ಕಾರದ ತಲೆಗೆ ‘ಮಟ್ಟು’ತ್ತಾರೆ, ಜೋಕೆ!


IMG_20160118_101335

 •  0 comments  •  flag
Share on Twitter
Published on January 16, 2016 02:44

January 13, 2016

January 12, 2016

January 7, 2016

December 27, 2015

December 26, 2015

December 25, 2015

Pratap Simha's Blog

Pratap Simha
Pratap Simha isn't a Goodreads Author (yet), but they do have a blog, so here are some recent posts imported from their feed.
Follow Pratap Simha's blog with rss.