Pratap Simha's Blog, page 23
March 22, 2017
March 18, 2017
ಶತ್ರು ಸ್ವತ್ತು ಕಿತ್ತುಕೊಂಡರೆ ಕಾಂಗ್ರೆಸ್‌ಗೇಕೆ ಆಪತ್ತು?
ಶತ್ರು ಸ್ವತ್ತು ಕಿತ್ತುಕೊಂಡರೆ ಕಾಂಗ್ರೆಸ್‌ಗೇಕೆ ಆಪತ್ತು?
ಸಾಮಾನ್ಯವಾಗಿ ಶುಕ್ರವಾರ ಮಧ್ಯಾಹ್ನದ ನಂತರ ಸಂಸತ್ತಿನ ಎರಡೂ ಸದನಗಳು, ಅದು ರಾಜ್ಯಸಭೆ ಇರಬಹುದು, ಲೋಕಸಭೆಯಾಗಿರಬಹುದು, ಬಿಕೋ ಎನ್ನುತ್ತಿರುತ್ತವೆ. ಶನಿವಾರ, ಭಾನುವಾರ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಆಯೋಜನೆಯಾಗಿರುವ ಸಭೆ, ಸಮಾರಂಭ, ಮೀಟಿಂಗ್‌ಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ ಹೆಚ್ಚಿನ ಸಂಸದರು ಶುಕ್ರವಾರ ಕ್ಷೇತ್ರಕ್ಕೆ ತೆರಳುವುದರ ಬಗ್ಗೆಯೇ ಹೆಚ್ಚು ಚಿಂತಿತರಾಗಿರುತ್ತಾರೆ. ರಾಜ್ಯಸಭೆ ಸದಸ್ಯರಿಗೆ ಅಂಥ ಅನಿವಾರ್ಯ, ದರ್ದು ಇಲ್ಲ. ಆದರೂ ರಾಜ್ಯಸಭೆಯೂ ಹೆಚ್ಚೂಕಡಿಮೆ ಖಾಲಿಯಾಗಿ ಬಿಡುತ್ತದೆ. ಅಲ್ಲಿ ತುಂಬಿದ ಸಭೆಯನ್ನು ನೋಡಬೇಕೆಂದರೆ ಪ್ರಧಾನಿ ನರೇಂದ್ರ ಮೋದಿಯವರ ಸರಕಾರ ಯಾವುದಾದರೂ ಬಹುಮುಖ್ಯ ವಿಧೇಯಕ ತರುತ್ತಿದೆಯೆಂದಾದರೆ ಅದನ್ನು ತಡೆಯಲು ತೋರುವ ಅಭಿವೃದ್ಧಿ ವಿರೋಧಿ ಉತ್ಸಾಹದ ಸಂದರ್ಭದಲ್ಲಿ ಮಾತ್ರ. ಕಳೆದ ಶುಕ್ರವಾರ(ಮಾರ್ಚ್ 10) ರಾಜ್ಯಸಭೆಯಲ್ಲಿದ್ದುದು ಕೇವಲ 31 ಸದಸ್ಯರು. ಅವರಲ್ಲಿ ಹೆಚ್ಚಿನವರು ನಮ್ಮ ಬಿಜೆಪಿ, ಎನ್‌ಡಿಎ ಅವರೇ!
ಕಳೆದ ಎರಡೂವರೆ ವರ್ಷಗಳಿಂದ ಇಂಥದ್ದೊಂದು ಅವಕಾಶಕ್ಕಾಗಿ ಬಿಜೆಪಿ ಕಾದು ಕುಳಿತಿತ್ತು!
ಅದಕ್ಕೂ ಮಿಗಿಲಾಗಿ ಅಂದು ಆ ವಿಧೇಯಕವನ್ನು ಪಾಸು ಮಾಡದಿದ್ದರೆ ಮಾರ್ಚ್ 14ಕ್ಕೆ ಅದು ತನ್ನ ಅಸ್ತಿತ್ವ ಕಳೆದುಕೊಂಡು ಸಾವಿರಾರು ಕೋಟಿ ರುಪಾಯಿ ಮೌಲ್ಯದ ಆಸ್ತಿ ಈ ದೇಶ ವಿಭಜನೆಗೆ ಕಾರಣವಾದ ಮುಸ್ಲಿಂ ಲೀಗ್‌ನ ಸ್ಥಾಪನೆಯ ರೂವಾರಿಗಳಲ್ಲೊಬ್ಬನಾದ ರಾಜಾ ಮೊಹಮದ್ ಅಮೀರ್ ಮೊಹಮದ್ ಖಾನ್ ಅಥವಾ ಮೊಹಮದಾಬಾದ್ ರಾಜಾನ ಉತ್ತರಾಧಿಕಾರಿಗಳ ಪಾಲಾಗುತ್ತಿತ್ತು! ಬಹುಶಃ ಕಾಂಗ್ರೆಸ್ಸಿಗೆ ಅದೇ ಬೇಕಿತ್ತು. ಹಾಗಾಗಿಯೇ ಐದು ಬಾರಿ ಮೋದಿ ಸರಕಾರ ಸುಗ್ರೀವಾಜ್ಞೆ ಹೊರಡಿಸಬೇಕಾಗಿ ಬಂತು. ಇಷ್ಟಾಗಿಯೂ ವಿಧೇಯಕವನ್ನು ಪಾಸು ಮಾಡಲು ಕಾಂಗ್ರೆಸ್ ರಾಜ್ಯಸಭೆಯಲ್ಲಿ ಬಿಡುತ್ತಿರಲಿಲ್ಲ. ಹಾಗಾಗಿ ಸೂಕ್ತ ಸಮಯಕ್ಕಾಗಿ ಕಾದು ಕುಳಿತಿದ್ದ ಮೋದಿ ಸರಕಾರ, ಕೇವಲ 31 ಸದಸ್ಯರು ಇದ್ದ ಸಂದರ್ಭವನ್ನು ಬಳಸಿಕೊಂಡು ಕಳೆದ ಶುಕ್ರವಾರ ‘ಎನಿಮಿ ಪ್ರಾಪರ್ಟಿ ಬಿಲ್’ ಅಥವಾ ಶತ್ರು ಸ್ವತ್ತು ವಿಧೇಯಕವನ್ನು ರಾಜ್ಯಸಭೆಯಲ್ಲಿ ಪಾಸು ಮಾಡಿಕೊಂಡಿತ್ತು. ಮಾರ್ಚ್ 14ರಂದು ಲೋಕಸಭೆಯಲ್ಲೂ ಈ ವಿಧೇಯಕ ಪಾಸಾಯಿತು. ಅಲ್ಲಿಗೆ ಒಟ್ಟಾರೆ ಐದೂವರೆ ಲಕ್ಷ ಕೋಟಿ ರುಪಾಯಿ ಮೌಲ್ಯದ ಆಸ್ತಿ, 1962ರ ಚೀನಾ ಯುದ್ಧ ಹಾಗೂ 1965ರ ಪಾಕ್ ಯುದ್ಧದ ನಂತರ ಪಾಕಿಸ್ತಾನ ಹಾಗೂ ಚೀನಾಕ್ಕೆ ಪಲಾಯನ ಮಾಡಿ, ಈಗ ಆಸ್ತಿ ವಾಪಸ್ ಕೇಳಲು ಬಂದಿದ್ದವರ ಬದಲು ಭಾರತ ಸರಕಾರದ ಪಾಲಾಯಿತು!!
ಇಷ್ಟಕ್ಕೂ ಎನಿಮಿ ಪ್ರಾಪರ್ಟಿ ಬಿಲ್ ಅಥವಾ ಶತ್ರು ಸ್ವತ್ತು ವಿಧೇಯಕ ಎಂದರೇನು?
1965ರ ಯುದ್ಧದ ನಂತರ 1968ರಲ್ಲಿ ಮೊದಲಿಗೆ ಈ ಕಾಯಿದೆಯನ್ನು ಜಾರಿಗೆ ತರಲಾಯಿತು. ಅಂದರೆ ಭಾರತ-ಪಾಕಿಸ್ತಾನ ಹಾಗೂ ಭಾರತ-ಚೀನಾ ಯುದ್ಧದ ನಂತರ ಅದಕ್ಕೂ ಮೊದಲು ಭಾರತದಲ್ಲೇ ಉಳಿದಿದ್ದ ಕೆಲ ಪಾಕಿಸ್ತಾನಿಯರು ಹಾಗೂ ಚೀನಿಯರು ಆಯಾ ದೇಶಗಳಿಗೆ ವಾಪಸ್ ಹೊರಟು ಹೋದರು. ಆಗ ಅವರು ಭಾರತದಲ್ಲಿ ಹೊಂದಿದ್ದ ಆಸ್ತಿಯ ಪ್ರಶ್ನೆ ಎದುರಾಯಿತು. ದೇಶ ಇಬ್ಭಾಗವಾದ ನಂತರ, ಯುದ್ಧಗಳ ನಂತರ ಭಾರತಕ್ಕೆ ಬಂದ ನಮ್ಮವರ ಆಸ್ತಿಯನ್ನು ಪಾಕಿಸ್ತಾನ ಮುಲಾಜಿಲ್ಲದೆ ಮುಟ್ಟುಗೋಲು ಹಾಕಿಕೊಂಡಿತ್ತು. ಭಾರತವೂ ಹಾಗೆ ಮುಟ್ಟುಗೋಲು ಹಾಕಿಕೊಳ್ಳುವ ಕಾಯಿದೆಯನ್ನು 1968ರಲ್ಲಿ ಜಾರಿಗೆ ತಂದಿತು. ಆದರೆ ಪಾಕಿಸ್ತಾನಕ್ಕೆ ತೆರಳಿದ್ದ ಮೊಹಮದಾಬಾದ್ ರಾಜಾ ಭಾರತಕ್ಕೆ ವಾಪಸಾಗಿ ಆಸ್ತಿಯ ಮೇಲೆ ಹಕ್ಕು ಸ್ಥಾಪನೆ ಮಾಡತೊಡಗಿದ! ಆದರೆ 1968ರ ಕಾಯಿದೆ ದೇಶದಿಂದ ಹೊರಹೋದ ಮೇಲೆ ಆಸ್ತಿ ಸರಕಾರದ ಸ್ವತ್ತಾಗುತ್ತದೆ ಎಂದು ಸ್ಪಷ್ಟಪಡಿಸಿದರೂ, 1973ರಲ್ಲಿ ಮೊಹಮದಾಬಾದ್ ರಾಜಾ ಸತ್ತುಹೋದ ಮೇಲೆ ಆತನ ಪತ್ನಿ ಮತ್ತು ಪುತ್ರ ಉತ್ತರಾಧಿಕಾರತ್ವದ ಪ್ರಶ್ನೆ ಎತ್ತಿಕೊಂಡು ಕೋರ್ಟ್ ಮೇಟ್ಟಿಲೇರಿದರು. ಬಹಳ ದೀರ್ಘ ಕಾಲದ ವಿಚಾರಣೆ ನಡೆದು 2005ರಲ್ಲಿ ಮೊಹಮದಾಬಾದ್ ರಾಜಾನ ಕುಟುಂಬಕ್ಕೆ ಆಸ್ತಿಯನ್ನು ಸರಕಾರ ತಕ್ಷಣ ಖಾಲಿ ಮಾಡಿಕೊಡಬೇಕೆಂದು ಕೋರ್ಟ್ ಸೂಚಿಸಿತು.
ಮತ್ತೆ ಸಮಸ್ಯೆ ಆರಂಭವಾಯಿತು. ಏಕೆಂದರೆ ಉತ್ತರ ಪ್ರದೇಶದ ಸಾವಿರಾರು ಎಕರೆ ಸರಕಾರಿ ಭೂಮಿಯನ್ನು ದೇಶವಿರೋಧಿ ಕುಟುಂಬಕ್ಕೆ ಬಿಟ್ಟುಕೊಡಬೇಕಾಯಿತು. ಹಾಗಾಗಿ 2010ರಲ್ಲಿ 1968ರ ಕಾಯಿದೆಗೆ ತಿದ್ದುಪಡಿ ತರುವ ವಿಧೇಯಕ ನನೆಗುದಿಗೆ ಬಿದ್ದಿತು. ಆಗಿನ ಗೃಹಸಚಿವ ಚಿದಂಬರಂ ಸೂಕ್ತ ನಿರ್ಧಾರವನ್ನೇ ಕೈಗೊಂಡು, ಒಮ್ಮೆ ಸರಕಾರಿ ಆಸ್ತಿ ಎಂದ ಮೇಲೆ ಉತ್ತರಾಧಿಕಾರತ್ವದ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದರು. ಆದರೆ ಆ ತಿದ್ದುಪಡಿಗೆ ಅಂಗೀಕಾರ ದೊರೆಯಲು ಅಥವಾ ಸದನದ ಮುಂದಿಡಲು ಕಾಂಗ್ರೆಸ್ಸೇ ಬಿಡಲಿಲ್ಲ.
ಇಷ್ಟಕ್ಕೂ ಈ ಮೊಹಮದಾಬಾದ್ ರಾಜಾ ಅಥವಾ ಆತನಿಗೆ ಆಸ್ತಿ ಬಳುವಳಿಯಾಗಿ ಬಂದ ಆತನ ಪೂರ್ವಜ ರಾಜಾ ಮೊಹಮದ್ ಹಸನ್ ಖಾನ್ ಯಾರೆಂದು ಗೊತ್ತೆ? ಬ್ರಿಟಿಷರು ಯಾರನ್ನು ತಾಲೂಕುದಾರ ಎಂದು ಘೋಷಣೆ ಮಾಡಿ ಆಸ್ತಿ ಕೊಡುತ್ತಿದ್ದರು ಎಂದುಕೊಂಡಿರಿ? ಇಲ್ಲಿಂದ ಒಂದು ಸ್ವಾರಸ್ಯಕರ ಅಧ್ಯಾಯ ತೆರೆದುಕೊಳ್ಳುತ್ತದೆ. 1857ರಲ್ಲಿ ಭಾರತೀಯರು ಬ್ರಿಟಿಷರ ವಿರುದ್ಧ ಮೊದಲು ತಿರುಗಿ ಬಿದ್ದಿದ್ದು. ಇದಕ್ಕೆ ಅವರು ಸಿಪಾಯಿ ದಂಗೆ ಎಂದು ಹೆಸರಿಟ್ಟರು. ಈಸ್ಟ್ ಇಂಡಿಯಾ ಕಂಪನಿ ಬಹಳ ಪ್ರಯತ್ನ ಪಟ್ಟು, ಇಲ್ಲಿನ ಭಾರತೀಯರದ್ದೇ ಬೆಂಬಲ ಪಡೆದುಕೊಂಡು ಬಹಳ ಘೋರವಾಗಿ ದಂಗೆಯನ್ನು ಹತ್ತಿಕ್ಕಿತು.
ಬ್ರಿಟಿಷರು ಇಂತಿಷ್ಟು ಭೂಮಿ ತೆಗೆದುಕೊಂಡು ತಾಲೂಕು ಎಂದು ಘೋಷಣೆ ಮಾಡಿ, ಈ ದಂಗೆಯ ಬೆಂಕಿ ಆರುವುದಕ್ಕೆ ಯಾರ್ಯಾರು ಸಹಾಯ ಮಾಡಿದ್ದರೋ ಅವರಿಗೆಲ್ಲರಿಗೂ ಆ ಭೂಮಿಯನ್ನು ಹಂಚಿತ್ತು. ಆ ಭಾರತೀಯರೆಲ್ಲರೂ ಹೆಸರಿಗಷ್ಟೇ ಭಾರತೀಯರು. ಬೆಂಬಲ ಪೂರ್ತಿ ಬ್ರಿಟಿಷರಿಗೆ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವವರ ಬಗ್ಗೆ ಮಾಹಿತಿ ಕೊಟ್ಟು ಬೂಟು ನೆಕ್ಕುವುದೇ ಅವರ ಕೆಲಸ.
ಯಾರ್ಯಾರು ತಾಲೂಕುದಾರರಾಗಬೇಕೋ ಅವರೆಲ್ಲರೂ ಸನಾದ್ ಕಾಬುಲಿಯತ್ ಎಂಬ ಬಾಂಡ್ ಸಹಿ ಮಾಡಬೇಕಿತ್ತು. ಬ್ರಿಟಿಷರಿಗೆ ಯಾವಾಗಲೂ ನಿಯತ್ತಾಗಿರುವುದು, ನಿಷ್ಠೆ ಪ್ರದರ್ಶನ, ಯಾವುದೇ ಸಮಯದಲ್ಲೂ ಕಂಪನಿ ಸರಕಾರದ ಪರವಾಗೇ ಇರಬೇಕಿತ್ತು. ಒಟ್ಟಾರೆಯಾಗಿ ಜೀವನ ಪೂರ್ತಿ ಬ್ರಿಟಿಷ್ ಸರಕಾರ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸಿಕೊಂಡು ಬಿದ್ದಿರಬೇಕು. ಅಂಥವರಿಗೆ ತಾಲೂಕುದಾರ ಎಂಬ ಅಧಿಕಾರ ಸಿಗುತ್ತಿತ್ತು. ಒಮ್ಮೆ ಈ ಮೇಲಿನ ನಿಯಮಗಳಲ್ಲಿ ಒಂದು ಸ್ವಲ್ಪ ವ್ಯತ್ಯಾಸವಾದರೂ ಕೊಟ್ಟಿದ್ದೆಲ್ಲವನ್ನೂ ಕಿತ್ತುಕೊಂಡು ಬ್ರಿಟಿಷರು ಬರಿಗೈಯಲ್ಲಿ ವಾಪಸ್ ಕಳಿಸುತ್ತಿದ್ದರು.
ಈ ರಾಜಾ ಮೊಹಮ್ಮದ್ ಆಮಿರ್‌ನ ಪೂರ್ವಜರಾದ ಮೊಹಮದಾಬಾದ್ ರಾಜ, ಸನಾದ್ ಬಾಂಡ್‌ಗೆ ಸಹಿ ಮಾಡಿ ತಾಲೂಕುದಾರಿ ಅಧಿಕಾರವನ್ನು ಪಡೆದಿದ್ದರು. ತಾಲೂಕುದಾರರ ಪಟ್ಟಿಯ ನೋಂದಣಿ ಸಂಖ್ಯೆ 86ರಲ್ಲಿ ಅವರ ಹೆಸರು ಇನ್ನೂ ಇದೆ. ವಿಭಜನೆಯ ನಂತರ ರಾಜ್ ಮೊಹಮ್ಮದ್ ಆಮಿರ್‌ನ ಅಪ್ಪ ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ನಾಗರಿಕರಾದರು. ನಮ್ಮ ಶತ್ರು ರಾಷ್ಟ್ರದಲ್ಲೂ ಅವರು ಆಸ್ತಿ ಹೊಂದಿ, ಭಾರತದ ಏಕೀಕರಣದ ವಿರುದ್ಧ ಸತತವಾಗಿ ವಿಷ ಕಾರುತ್ತಾ ಬಂದರು. ಇದಲ್ಲದೇ ಕೇವಲ ಆಸ್ತಿಗಾಗಿ ಮತ್ತೆ ಭಾರತಕ್ಕೆ ಬಂದು ಹಕ್ಕು ಚಲಾಯಿಸಲು ನಿಂತರು. ಇದು ಹೇಗೆ ಎಂದರೆ, ಪಾಕಿಸ್ತಾನಿಯನೊಬ್ಬ ಭಾರತಕ್ಕೆ ಬಂದು ಅಧಿಕಾರ ನಡೆಸಿದಂತೆ.
ಮೊಹಮದಾಬಾದ್ ರಾಜ ಪಕ್ಕಾ ಪಾಕಿಸ್ತಾನ ಪ್ರೇಮಿ ಮತ್ತು ಭಾರತ ವಿರೋಧಿ. ಆತ 1973ರಲ್ಲಿ ಲಂಡನ್‌ನಲ್ಲಿ ಮೃತಪಟ್ಟ. ಆತನ ಮಗನಾಗಿರುವ ರಾಜಾ ಮೊಹಮ್ಮದ್ ಆಮಿರ್ ಕೇಂಬ್ರಿಜ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದವರು ಭಾರತಕ್ಕೆ ಬಂದು ತನ್ನ ಅಪ್ಪನ ಆಸ್ತಿಯನ್ನು ತನಗೆ ಕೊಡಿ ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಇವರು ಕೊಡುವ ಕಾರಣವೇನೆಂದರೆ, ಅವರ ತಂದೆ ಪಾಕಿಸ್ತಾನಕ್ಕೆ ಹೋಗಿದ್ದರು. ಆದರೆ ಮಗ ರಾಜಾ ಮೊಹಮ್ಮದ್ ಆಮಿರ್ ಭಾರತದಲ್ಲೇ ಇದ್ದರು. ಹಾಗಾಗಿ ಅವರ ಹೆಸರಿಗೇ ಆಸ್ತಿ ಕೊಡಬೇಕೆಂಬುದು ಅವರ ವಾದವಾಗಿತ್ತು.
ಆದರೆ 1968ರ ಎನಿಮಿ ಪ್ರಾಪರ್ಟಿ ಆ್ಯಕ್ಟ್ ಹೇಳುವುದೇನೆಂದರೆ, ಶತ್ರು ರಾಷ್ಟ್ರಗಳ ಆಸ್ತಿಯನ್ನು ಯಾರೂ ಖರೀದಿಸುವಂತೆಯೂ ಇಲ್ಲ ಅಥವಾ ಅದು ಪೂರ್ವಜರ ಆಸ್ತಿಯಾಗಿದ್ದರೂ ಅವರವರ ಕುಟುಂಬಕ್ಕೆ ಸೇರುವುದೂ ಇಲ್ಲ, ಮಾಲೀಕತ್ವವೂ ಸಿಗುವುದಿಲ್ಲ ಎಂದು. ಅದರ ಪ್ರಕಾರವೇ ಕೋಟ್ಯಂತರ ರುಪಾಯಿ ಮೌಲ್ಯದ ಭೂಮಿ, ಆಸ್ತಿಯನ್ನು ಸರಕಾರ ವಶಪಡಿಸಿಕೊಂಡಿತ್ತು. ರಾಜಾ ಮೊಹಮ್ಮದ್ ಆಮಿರ್ ಕಾಂಗ್ರೆಸ್‌ನವರು ಎಂಬ ಒಂದೇ ಒಂದು ಕಾರಣಕ್ಕೆ, ವಿಧೇಯಕ ತಿದ್ದುಪಡಿಯನ್ನು ರಾಜ್ಯಸಭೆಯಲ್ಲಿ ಮಂಡಿಸುವುದಕ್ಕೆ ಕಾಂಗ್ರೆಸ್ ಬಿಡಲೇ ಇಲ್ಲ. ಹಾಗಾಗಿ ಎರಡು ಬಾರಿ ಕಾಂಗ್ರೆಸ್ ಶಾಸಕರಾಗಿರುವ ರಾಜಾ ಮೊಹಮ್ಮದ್ ಆಮಿರ್, ಲಕನೌ ಹೊರವಲಯದಲ್ಲಿರುವ, ತಂದೆ ರಾಜಾ ಮೊಹಮದಾಬಾದ್ ಅವರ ಮೊಹಮದಾಬಾದ್ ಕೋಟೆ ಸೇರಿದಂತೆ ಕೋಟ್ಯಂತರ ಆಸ್ತಿಯು ತಮಗೇ ಸೇರಬೇಕು ಎಂದು ಸತತವಾಗಿ ರಿಟ್ ಪೆಟಿಶನ್ ಸಲ್ಲಿಸುತ್ತಲೇ ಬಂದರು. 1997ರಲ್ಲಿ ಬಾಂಬೆ ಹೈ ಕೋರ್ಟ್‌ನಲ್ಲಿ ಸಲ್ಲಿಸಿದ ರಿಟ್ ಪೆಟಿಶನ್‌ಗೆ 2001ರಲ್ಲಿ ಜಯ ಸಿಕ್ಕಿ, ಕೇಂದ್ರ ಸರಕಾರ ಮುಂಬೈನಲ್ಲಿ ಶತ್ರು ಆಸ್ತಿ ಎಂದು ವಶಪಡಿಸಿಕೊಂಡಿರುವುದನ್ನು ವಾಪಸ್ ಕೊಡಬೇಕು ಎಂದು ಆದೇಶಿಸಿತು. ಇದನ್ನು ಬಿಜೆಪಿ ಪ್ರಶ್ನಿಸಿತ್ತು. ಪುನಃ 2005ರಲ್ಲಿ ರಾಜಾ ಮೊಹಮ್ಮದ್‌ಗೇ ಜಯ ಸಿಕ್ಕಿತ್ತು.
ರಾಜಾ ಮೊಹಮದಾಬಾದ್ ಭಾರತ ಬಿಟ್ಟು ಪಾಕಿಸ್ತಾನ ಸೇರಿದ ದಿನದಿಂದಲೇ, ಅವರ ಆಸ್ತಿಯೆಲ್ಲವೂ ಭಾರತದ ಸ್ವತ್ತಾಯಿತೇ ಹೊರತು, ಮೊಹಮದಾಬಾದ್‌ನ ಹೆಂಡತಿ, ಮಕ್ಕಳು ಇಲ್ಲಿಯೇ ಉಳಿದುಕೊಂಡರು ಎಂದ ಮಾತ್ರಕ್ಕೆ ಅಪ್ಪನ ಆಸ್ತಿಯನ್ನು ಅವರಿಗೆ ವರ್ಗಾಯಿಸುವುದಕ್ಕೆ ಹೇಗೆ ಸಾಧ್ಯ?
1947 ಇಂಡಿಪೆಂಡೆನ್ಸ್ ಆಫ್ ಇಂಡಿಯಾ ಆ್ಯಕ್ಟ್ ಯಾವಾಗ ಬಂತೋ ಆಗಲಿಂದ ಬ್ರಿಟಿಷ್ ಸರಕಾರ ಎಂಬ ಪದವೂ ದೇಶ ಬಿಟ್ಟು ತೊಲಗಿತ್ತು. ಹೀಗಾಗಿ ರಾಜಾ ಮೊಹಮ್ಮದ್ ಆಮಿರ್‌ರ ತಂದೆ ರಾಜಾ ಮೊಹಮದಾಬಾದ್ ಭಾರತಕ್ಕೆ ಶತ್ರುವಾಗಿ, ಅವರ ಅಧಿಕಾರ, ಅವರ ತಾಲೂಕುದಾರಿ ಆಸ್ತಿಯನ್ನು ಕಳೆದುಕೊಂಡು ಅದು ಭಾರತ ಸರಕಾರದ ಪಾಲಾಗಿರುತ್ತದೆ. ಈ ತಾಲೂಕುದಾರಿ ಆಸ್ತಿಯ ಮೇಲೆ ರಾಜಾ ಮೊಹಮದಾಬಾದ್ ಆಗಲಿ ಅವನ ಮಗ ರಾಜಾ ಮೊಹಮ್ಮದ್ ಆಮಿರ್‌ಗಾಗಲೀ ಯಾವುದೇ ಹಕ್ಕಿಲ್ಲ. ಹಾಗೆ ತೆಗೆದುಕೊಂಡರೆ, ಅದು ಸ್ಪಷ್ಟವಾಗಿ ಕಾನೂನಿಗೆ ವಿರುದ್ಧ.
ಭಾರತ ಸ್ವಾತಂತ್ರ್ಯದ ವಿರುದ್ಧ ಇರುವ ಭಾರತೀಯರನ್ನು ಮಾತ್ರ ಬ್ರಿಟಿಷ್ ಸರಕಾರ ತಾಲೂಕುದಾರರನ್ನಾಗಿ ಮಾಡುತ್ತಿತ್ತು ಎಂಬುದಂತೂ ಇತಿಹಾಸವೇ ನಮಗೆ ತಿಳಿಸಿದೆ. ಹೀಗೆ ಬ್ರಿಟಿಷರಿಗೆ ಸಹಾಯ ಮಾಡಿ ತಾಲೂಕುದಾರಿ ಆಸ್ತಿ ಗಳಿಸಿ ಮತ್ತೆ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಹೋಗಿ, ಯಾವಾಗ ಭಾರತದ ಏಕೀಕರಣದ ವಿರುದ್ಧ ಮಾತಾಡಿದರೋ ಆಗಲೇ ಇಲ್ಲಿರುವ ಅವರ ಆಸ್ತಿಯ ಮೇಲಿನ ಹಕ್ಕನ್ನು ಅವರು ಕಳೆದುಕೊಂಡು ಬಿಟ್ಟರು. ವಿಭಜನೆಯ ಸಮಯದಲ್ಲಿ ಕೆಲವರು ಭಾರತದಲ್ಲಿರಲು ಇಚ್ಛಿಸಿದಾಗ ಅವರೆಲ್ಲರೂ ತಮ್ಮ ಆಸ್ತಿಯನ್ನು ಪಾಕಿಸ್ತಾನದಲ್ಲೇ ಬಿಟ್ಟು ಬಂದಿದ್ದರು. ಆಗ ಪಾಕಿಸ್ತಾನ ಆ ಭೂಮಿ, ಆಸ್ತಿಯನ್ನೆೆಲ್ಲ ಮುಟ್ಟುಗೋಲು ಹಾಕಿಕೊಂಡು, ಸರಕಾರಿ ಜಾಗವನ್ನಾಗಿ ಮಾಡಿಕೊಂಡಿತು. ಅದೇ ರೀತಿ ಭಾರತದಲ್ಲು ಸಹ ಆಗುತ್ತಿರುವುದು. ಆದರೆ ಶತ್ರು ರಾಜನ ಮಗನೊಬ್ಬ, ಅಪ್ಪ ಭಾರತೀಯರ ವಿರುದ್ಧದ ಮಸಲತ್ತಿನಿಂದಲೇ ಮಾಡಿದ ಆಸ್ತಿಗಾಗಿ ಈ ಪಾಟಿ ಪೆಟಿಶನ್ ಮೇಲೆ ಪೆಟಿಶನ್ ಸಲ್ಲಿಸಿ ಆಸ್ತಿ ಲಪಟಾಯಿಸುವುದಕ್ಕೆ ಮಾಡುತ್ತಿರುವ ಪ್ರಯತ್ನವೇ ಅಚ್ಚರಿ ತರಿಸುತ್ತದೆ. ಅದು ಒಂದೆರಡು ಎಕರೆ ಅಲ್ಲ ನೋಡಿ, ಸಾವಿರಾರು ಎಕರೆ. ಇಂದು ಅವುಗಳ ಬೆಲೆ ಲಕ್ಷ ಕೋಟಿಯಷ್ಟಿದೆ.
ಹೇಳಿ, ಇಂಥವರ ಆಸ್ತಿಯನ್ನು ಭಾರತ ಸರಕಾರ ವಶಪಡಿಸಿಕೊಂಡಿದ್ದರಲ್ಲಿ ತಪ್ಪೇನಿದೆ?
ಕೊನೆಯದಾಗಿ ಒಂದು ವಿಚಾರ ಗಮನಿಸಿ: ಒಬ್ಬ ದೇಶದ ಆಸ್ತಿಯನ್ನು ಲಪಟಾಯಿಸುತ್ತಿರುವಾಗ ಅದನ್ನು ತಡೆದು, ದೇಶಕ್ಕೆ ನ್ಯಾಯ ಒದಗಿಸುವ ಬದಲು, ವಿಧೇಯಕ ತಿದ್ದುಪಡಿಯನ್ನು ಪಾಸು ಮಾಡಲು ಬಿಡದೇ, ಅಂಥವರಿಗೆ ಬೆಂಬಲಿಸುತ್ತಿರುವ ಕಾಂಗ್ರೆಸಿಗರ ಮನಸ್ಥಿತಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ! ಛೇ!
March 17, 2017
March 11, 2017
ಪತ್ರಕರ್ತರಲ್ಲಿ ಅವರಿಗೇ ಅಗ್ರಪಂಕ್ತಿ, ಪ್ರಾಮಾಣಿಕತೆಗೂ ಅವರೇ ಮೇಲ್ಪಂಕ್ತಿ!
ಪತ್ರಕರ್ತರಲ್ಲಿ ಅವರಿಗೇ ಅಗ್ರಪಂಕ್ತಿ, ಪ್ರಾಮಾಣಿಕತೆಗೂ ಅವರೇ ಮೇಲ್ಪಂಕ್ತಿ!
ಇತ್ತೀಚೆಗೆ ಖ್ಯಾತ ಐಪಿಎಸ್ ಅಧಿಕಾರಿ ಹಾಗೂ ಪ್ರಸ್ತುತ ನಮ್ಮ ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿಯ ಚುಕ್ಕಾಣಿ ಹಿಡಿದಿರುವ ಡಾ. ಮಧುಕರ್ ಶೆಟ್ಟಿಯವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಅವರನ್ನು ಭೇಟಿಯಾಗುವುದೆಂದರೆ ಒಬ್ಬ ಪ್ರಖ್ಯಾತ ಪ್ರೊಫೆಸರ್‌ನ ಬಳಿ ಕುಳಿತು ಜ್ಞಾನವರ್ಧನೆ ಮಾಡಿಕೊಂಡಂತೆ. ಒಂಥರಾ enriching experience ಆಗುತ್ತದೆ. ಮೊನ್ನೆ ಸಿಕ್ಕಾಗಲೂ ಅದೇ ತೆರನಾದ ಅನುಭವವಾಯಿತು. ಒಬ್ಬ ರಾಜಕಾರಣಿ, ಆತ ಎಂಎಲ್‌ಎಯೋ, ಎಂಪಿಯೋ ಅಥವಾ ಸಚಿವರೋ, ಯಾರೇ ಆಗಿದ್ದರೂ ಪ್ರಾಮಾಣಿಕರಾಗಿದ್ದರೆ ಅಧಿಕಾರಿಗಳೂ ಮಾತು ಕೇಳುತ್ತಾರೆ, ಅದರಿಂದ ಒಳ್ಳೆಯ ಕೆಲಸಗಳೂ ಆಗುತ್ತವೆ, ನಮಗೂ ಯೋಗ್ಯರ ಜತೆ ಕೆಲಸ ಮಾಡುತ್ತಿದ್ದೇವೆ ಹಾಗೂ ಯೋಗ್ಯ ಕೆಲಸ ಮಾಡಿದರೆ ಮನ್ನಣೆ ಸಿಗುತ್ತದೆ ಎಂಬ ಒಳ್ಳೆಯ ಭಾವನೆಯೂ ಇರುತ್ತದೆ ಎಂದರು.
ಒಬ್ಬ ರಾಜಕಾರಣಿ ಪ್ರಾಮಾಣಿಕನಾಗಿದ್ದರೆ ಸಮಾಜಕ್ಕೆ ಎಷ್ಟೆಲ್ಲಾ ಒಳ್ಳೆಯದಾಗಬಹುದು ಎಂಬ ಯೋಚನೆ ಕಾಡತೊಡಗಿತು. ಅವರ ಮಾತನ್ನು ಕೇಳಿ ಹೊರಬಂದಾಗ ಪ್ರಾಮಾಣಿಕತೆ ಎಂದ ಕೂಡಲೇ ಕಣ್ಣಮುಂದೆ ಬಂದವರು ಡಿವಿಜಿ! ಆಗಷ್ಟೇ ಡಿವಿಜಿ 80ಕ್ಕೆ ಕಾಲಿಟ್ಟಿದ್ದರು. ಸ್ನೇಹಿತರು, ಹಿತೈಷಿಗಳು, ಅಭಿಮಾನಿಗಳು ಒಟ್ಟು ಸೇರಿ ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಒಂದು ಸನ್ಮಾನ ಸಮಾರಂಭವನ್ನು ಆಯೋಜಿಸಿದ್ದರು. ಬರವಣಿಗೆಯಲ್ಲಿ ದೊಡ್ಡ ಹೆಸರು ಮಾಡಿದ್ದರೂ ಆರ್ಥಿಕತೆ ಅಷ್ಟೇ ದೊಡ್ಡ ಸಮಸ್ಯೆಯಾಗಿ ಡಿವಿಜಿ ಅವರನ್ನು ಕಾಡುತ್ತಿತ್ತು. ಅದು ಸ್ನೇಹಿತರೆಲ್ಲರಿಗೂ ತಿಳಿದ ವಿಚಾರವೇ ಆಗಿತ್ತು. ಸ್ವಲ್ಪವಾದರೂ ಸಹಾಯವಾಗಲಿ, ಗೌರವಧನ ನೀಡೋಣ ಎಂದು ಒಂದಿಷ್ಟು ಹಣವನ್ನು ಒಟ್ಟು ಹಾಕಿದ್ದರು. ಕಾರ್ಯಕ್ರಮದ ವೇಳೆ ಗೌರವ ಹಾಗೂ ಪ್ರೀತಿಪೂರ್ವಕವಾಗಿ ಅದನ್ನು ಡಿವಿಜಿಯವರಿಗೆ ಅರ್ಪಿಸಲಾಯಿತು. ಅದೇನು ಸಾಮಾನ್ಯ ಮೊತ್ತವಾಗಿರಲಿಲ್ಲ-ಒಂದು ಲಕ್ಷ ರುಪಾಯಿ!
ನೀವೇ ಯೋಚನೆ ಮಾಡಿ, ನಲವತ್ಮೂರು ವರ್ಷಗಳ ಹಿಂದೆ ಒಂದು ಲಕ್ಷ ರುಪಾಯಿ?! ಡಿವಿಜಿಯವರ ಮನೆಯಿದ್ದಿದ್ದು ಬೆಂಗಳೂರಿನ ಬಸವನಗುಡಿಯ ನಾಗಸಂದ್ರ ರಸ್ತೆಯಲ್ಲಿ (ಈಗಿನ ಡಿವಿಜಿ ರಸ್ತೆ). ಅಲ್ಲೊಂದು ದಿನಸಿ ಅಂಗಡಿಯಿತ್ತು. ಡಿವಿಜಿಯವರು ಅಗತ್ಯ ವಸ್ತುಗಳನ್ನು ಖರೀದಿ ಮಾಡುತ್ತಿದ್ದುದು ಅಲ್ಲಿಯೇ. ಸನ್ಮಾನ ಸಮಾರಂಭದ ಮರುದಿನ ಡಿವಿಜಿ ಮನೆಗೆಲಸದ ಹುಡುಗ ಕರುಬಯ್ಯ ಚೀಟಿ ಹಿಡಿದುಕೊಂಡು ದಿನಸಿ ಅಂಗಡಿಗೆ ಬಂದ. ಸುಧಾ ಪತ್ರಿಕೆಯ ಸಂಪಾದಕರಾಗಿದ್ದ ಇ.ಆರ್. ಸೇತುರಾಮ್ ಅಲ್ಲೇ ಸಿಗರೇಟು ಸೇದುತ್ತಾ ನಿಂತಿದ್ದರು. ಆ ಹುಡುಗ ಡಿವಿಜಿ ಮನೆಯವನು ಎಂದು ಗೊತ್ತಾಯಿತು. ಚೀಟಿಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕುತೂಹಲ ಮೂಡಿತು. ಅಂಗಡಿಯಾತನ ಬಳಿ ಕೇಳಿಯೇ ಬಿಟ್ಟರು. ‘ಮನೆಗೆ ಅತಿಥಿಗಳು ಬಂದಿದ್ದಾರೆ. ನೀವು ಕಾಫಿ ಪುಡಿ, ಸಕ್ಕರೆ ಕೊಟ್ಟರೆ ನಾಳೆ ಬಿಲ್ ಕೊಡುತ್ತೇನೆ’!
ಮುಂದೊಂದು ದಿನ ಈ ಘಟನೆಯ ಬಗ್ಗೆ ಸೇತುರಾಮ್ ಹೀಗೆ ಬರೆಯುತ್ತಾರೆ-‘ನಿನ್ನೆ ಒಂದು ಲಕ್ಷ ರುಪಾಯಿ ಕೊಟ್ಟಾಗ ಅದು ನನ್ನದಲ್ಲ ಎಂದು ಕೊಟ್ಟವರು, ಆ ಬಗ್ಗೆ ಯಾವ ಬೇಸರವೂ ಇಲ್ಲದವರು ಡಿವಿಜಿ. ಇವತ್ತು ಕಾಫಿ ಪುಡಿ ಖರ್ಚಿಗೂ ಅವರ ಬಳಿ ದುಡ್ಡಿಲ್ಲ. ಇದು ಅವರ ನಿಸ್ಪಹತೆಯನ್ನು ತೋರಿಸುತ್ತದೆ’. ಹೌದು, ಸನ್ಮಾನದ ಸಂದರ್ಭದಲ್ಲಿ ಡಿವಿಜಿಗೆ 1 ಲಕ್ಷ ರುಪಾಯಿ ನೀಡಿದ್ದು ನಿಜ. ಅದನ್ನು ನೋಡಿ ಅವರು ಹಿರಿಹಿರಿ ಹಿಗ್ಗಲಿಲ್ಲ. ಬಹುಶಃ ಮೊತ್ತ ಈ ಪರಿ ಇರಬಹುದೆಂದು ಅವರು ಊಹಿಸಿದ್ದಿಲ್ಲವಾದರೂ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ಡಿವಿಜಿಗೆ ಮೊದಲೇ ಗೊತ್ತಾಗಿತ್ತು. ಏನನ್ನೂ ಕೊಡಕೂಡದು, ನಾನು ಸ್ವೀಕರಿಸುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದ್ದರು.
ಇಷ್ಟಾಗಿಯೂ ಒಂದು ಲಕ್ಷವನ್ನು ಕೈಗಿತ್ತಾಗ ಅದರಲ್ಲಿ ಚಿಕ್ಕಾಸನ್ನೂ ತೆಗೆದುಕೊಳ್ಳದೆ ಇಡಿಯಾಗಿ ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆಯ ಅಭಿವೃದ್ಧಿಗೆ ಕೊಟ್ಟು ವೇದಿಕೆಯಿಂದ ಕೆಳಗಿಳಿದಿದ್ದರು ಡಿವಿಜಿ! ಇವತ್ತು Paid News ಹಾಗೂ Journa ಗಳ ಬಗ್ಗೆ, ಅದನ್ನು ತಡೆಯುವ ಪರಿಯ ಬಗ್ಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಇನ್ನೊಂದು ಕಡೆ ನಮ್ಮ ದರಿದ್ರ ರಾಜಕೀಯವಂತೂ ರಿಯಲ್ ಎಸ್ಟೇಟು, ಕಾಂಟ್ರ್ಯಾಕ್ಟು, ಕಮಿಷನ್ನು ಎನ್ನುವ ಭ್ರಷ್ಟರ ಕೂಪವಾಗಿದೆ. ಆದರೆ ಅವತ್ತು ಕೈಗಿತ್ತ 1 ಲಕ್ಷ, ಇವತ್ತಿನ ಕೋಟಿಗೂ ಮೀರಿದ ಮೊತ್ತ. ಬಡತನ ಬೆನ್ನಿಗೆ ಅಂಟಿಕೊಂಡಿದ್ದ ಸಂದರ್ಭದಲ್ಲೂ ಡಿವಿಜಿ ದುಡ್ಡಿನ ಮುಂದೆ ಶರಣಾಗಲಿಲ್ಲ. ಈ ದೇಶದ ಅಗ್ರಮಾನ್ಯ ಪತ್ರಕರ್ತರಲ್ಲಿ ಒಬ್ಬರೆನಿಸಿಕೊಂಡಿದ್ದ ಡಿವಿಜಿಯವರ ಬದುಕಿನಲ್ಲಿ ಸಾಕಷ್ಟು ಏರುಪೇರುಗಳನ್ನು ಕಾಣಬಹುದು. ಬಡತನ ಬೆನ್ನಿಗಂಟಿಕೊಂಡಿತ್ತು.
ಒಮ್ಮೆ ವಿಶ್ವೇಶ್ವರಯ್ಯನವರು ಡಿವಿಜಿ ಅವರೊಡನೆ ಮಾತನಾಡುತ್ತಾ ‘ನಾನು ನಿನ್ನ ಮನೆಗೊಂದು ದಿನ ಭೇಟಿ ನೀಡಬೇಕು’ ಎಂದರು. ಕೂಡಲೇ ಎದ್ದು ವಂದಿಸಿದ ಡಿವಿಜಿ ‘ಕ್ಷಮಿಸಬೇಕು, ತಾವು ನನ್ನ ಮನೆಗೆ ಬರಬಾರದು’ ಎಂದು ವಿನಂತಿಸಿದರು. ವಿಶ್ವೇಶ್ವರಯ್ಯನವರಿಗೆ ಅಚ್ಚರಿ, ಕೌತುಕ. ತಮ್ಮನ್ನು ಮನೆಗೆ ಬರಬೇಡಿರೆಂದು ಹೇಳಿದವರು ಯಾರೂ ಇಲ್ಲ. ‘ಇದೇನಿದು! ಯಾರಾದರೂ ಬರುತ್ತೇನೆನ್ನುವ ಗೆಳೆಯರನ್ನು ನೇರವಾಗಿಯೇ ತಡೆಯುವುದುಂಟೇ?’ ಎಂದು ತತ್‌ಕ್ಷಣ ಪ್ರಶ್ನಿಸಿದ್ದರು. ಡಿವಿಜಿ ಇದೀಗ ವಿವರಿಸಿದರು ‘ದಿಟವೇ, ತಾವು ಕಾಲಿಟ್ಟ ಕಡೆ ಶುಭ, ಸಂಪದ, ಸೌಖ್ಯಗಳು ಬೆಳಗುತ್ತವೆ. ಆದರೆ ನನ್ನ ಕಾರಣ ಬೇರೆಯಿದೆ. ತಾವು ನನ್ನ ಮನೆಗೆ ಬಂದರೆ ತಮಗೆ ಮುರುಕಲು ಕುರ್ಚಿ- ಹರಕಲು ಚಾಪೆಗಳಲ್ಲದೆ ಬೇರೆ ಇಲ್ಲ. ನನ್ನ ಚಿಂದಿ ಬದುಕು ನಿಮಗೆ ದುಃಖ ತರುತ್ತದೆ. ನನ್ನನ್ನು ಒಳ್ಳೆಯ ಸಂಪಾದನೆಯ ತಾಣಗಳಿಗೆ ಸೇರಿಸಬೇಕೆಂದು ತಾವು ಹಿಂದೆ ಮಾಡಿದ ಪ್ರಯತ್ನಗಳೂ ನನ್ನ ಮೂರ್ಖತನವು ಅವುಗಳನ್ನೆಲ್ಲ ಒಲ್ಲೆನೆಂದ ಪರಿಯೂ ತಮಗೆ ನೆನಪಾಗಿ ಬೇಸರವಾಗುತ್ತದೆ. ಅದಕ್ಕೆಲ್ಲ ಅವಕಾಶವಾಗಬಾರದು.
ಹೀಗಾಗಿ ತಾವಿದ್ದಲ್ಲಿಗೆ ನಾನು ಬಂದು ತಮ್ಮ ಯಾವ ಆದೇಶವನ್ನೂ ನಡೆಸುತ್ತೇನೆ, ಮನ್ನಿಸಬೇಕು?’. ‘ಹೌದು, ಹೌದು. ನೀನು ಮೂರ್ಖ, obstinate’ ಎಂದು ನಿರುಪಾಯಕರಾದ ಮೆಚ್ಚುಗೆಯ ಪೆಚ್ಚುನಗೆಯಿಂದ ವಿಶ್ವೇಶ್ವರಯ್ಯನವರು ಮಾತು ಮುಗಿಸಿದರು.
ನಮಗೆಲ್ಲರಿಗೂ ತಿಳಿದಂತೆ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರು ಪ್ರಾಮಾಣಿಕತೆ, ಪರಿಶುದ್ಧತೆ ಹಾಗೂ ನಿಸ್ವಾರ್ಥಗಳ ಪರಮಾದರ್ಶ. ಅವರು ಮೈಸೂರು ಸಂಸ್ಥಾನದ ದಿವಾನರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ತಮ್ಮ ಬಂಧುಗಳೆಲ್ಲರನ್ನೂ ಮನೆಯ ಹಜಾರದಲ್ಲಿ ಸೇರಿಸಿ ತಾಯಿ ವೆಂಕಜ್ಜಮ್ಮನವರನ್ನು ‘ನೀನು ಇವರ್ಯಾರ ಪರವಾಗಿ ಕೂಡ ಶಿಫಾರಸು ಮಾಡಲು ನನ್ನ ಬಳಿ ಬರಬಾರದು’ ಎಂದು ಮಾತು ತೆಗೆದುಕೊಂಡೇ ಮುಂದಿನ ಕೆಲಸಕ್ಕೆ ಕೈ ಹಾಕಿದ ಮಹನೀಯರು. ಇಂಥ ವಿಶ್ವೇಶ್ವರಯ್ಯನವರಿಗೂ ಸವಾಲಾಗುವಂಥ ನಿಸ್ಪಹತೆ ಡಿವಿಜಿಯವರದು.
ಲಾಹೋರಿನ ‘ಟ್ರಿಬ್ಯೂನ್’ ಎಂಬ ರಾಷ್ಟ್ರಮಟ್ಟದ ಪ್ರತಿಷ್ಠಿತ ಆಂಗ್ಲ ದಿನಪತ್ರಿಕೆಯ ಸಂಪಾದಕರಾಗಲು ಅರ್ಹ ವ್ಯಕ್ತಿಗಳನ್ನು ಸೂಚಿಸಬೇಕಾಗಿ ಅದರ ಮಾಲೀಕರು ವಿಶ್ವೇಶ್ವರಯ್ಯನವರನ್ನು ಕೇಳಿದರು. ಇವರಿಗಾಗ ಮೊದಲು ಹೊಳೆದ ಹೆಸರು ಡಿವಿಜಿ. ಈ ಸೂಚನೆಯನ್ನು ಟ್ರಿಬ್ಯೂನ್ ಪತ್ರಿಕೆಯ ವ್ಯವಸ್ಥಾಪಕರೂ ಬಹುವಾಗಿ ಸಂತೋಷಿಸಿ ಒಪ್ಪಿದರು. ದೊಡ್ಡ ಸ್ಥಾನ, ಹೆಸರು, ಹಣ, ಸಂಪರ್ಕಗಳೆಲ್ಲ ಸಿದ್ಧಿಸುವ ಆ ಉದ್ಯೋಗವು ಅಂದು ಯಾವುದೇ ಪತ್ರಕರ್ತನಿಗೆ ಪ್ರಲೋಭನೀಯವಾಗಿತ್ತು. ಡಿವಿಜಿಯವರ ಆರ್ಥಿಕ ಪರಿಸ್ಥಿತಿಯಂತೂ ಎಂದಿನಂತೆ ತೀರಾ ಅತಂತ್ರವಾಗಿಯೇ ಇತ್ತು. ಈ ಕಾರಣದಿಂದಲಾದರೂ ಅವರು ಒಪ್ಪಿಯಾರೇ ಎಂಬ ಕುಡಿಯಾಶೆ ವಿಶ್ವೇಶ್ವರಯ್ಯನವರದು. ಆದರೆ ಡಿವಿಜಿ ಖಂಡತುಂಡವಾಗಿ ಈ ಅವಕಾಶವನ್ನು ನಿರಾಕರಿಸಿದರು.
‘ನಾನು ಹೇಗೋ ಹೊಟ್ಟೆ ಹೊರೆದುಕೊಳ್ಳುತ್ತೇನೆ. ಬೀದಿಯಲ್ಲಿ ಬಿದ್ದು ಒದ್ದಾಡಿ ತೊಂಡುತೊಂಡಾಗಿ ಬೆಳೆದ ಈ ಜೀವಕ್ಕೆ ಅಂಥ ದೊಡ್ಡ ಪದವಿ- ಪ್ರತಿಷ್ಠೆಗಳು ಒಗ್ಗುವುದಿಲ್ಲ’ ಎಂದಿದ್ದರು. ಈ ಮೂಲಕವಾಗಿ ಅವರು ತಮ್ಮ ಸ್ವಾತಂತ್ರ್ಯ, ನಿರ್ಭೀತಿ, ನಿಸ್ಪಹತೆಗಳನ್ನೂ ಕಾಯ್ದುಕೊಂಡರು. ಹೀಗಾಗಿಯೇ ಮಹಾರಾಜರಿಗಾಗಲಿ, ದಿವಾನರುಗಳಾಗಲಿ ರೆಸಿಡೆಂಟ್- ವೈಸ್‌ರಾಯ್ ವರ್ಗದವರಿಗಾಗಲಿ ತಮ್ಮ ನಿಷ್ಪಾಕ್ಷಿಕವೂ ನಿಷ್ಠುರವೂ ಆದ ಅಭಿಪ್ರಾಯಗಳನ್ನು ಕೊಡಲು ಸಾಧ್ಯವಾಯಿತು.
ಗಾಂಧೀಜಿಯವರ ಬಗೆಗೆ ಗುಂಡಪ್ಪನವರಿಗೆ ತುಂಬ ಗೌರವ. ಬೆಂಗಳೂರಿಗೆ ಅವರನ್ನು ಮೊತ್ತ ಮೊದಲು (1915ರಲ್ಲಿ) ಕರೆಯಿಸಿದವರೆ ಡಿವಿಜಿ. ಗಾಂಧಿಯವರು ಅಂದು ಅನಾವರಣ ಮಾಡಿದ ಗೋಪಾಲಕೃಷ್ಣ ಗೋಖಲೆಯವರ ಭಾವಚಿತ್ರವು ಇಂದೂ ಡಿವಿಜಿಯವರು ಕಟ್ಟಿದ ಸಂಸ್ಥೆಯ ಸಭಾಮಂಟಪದಲ್ಲಿ ದರ್ಶನೀಯ ಮಾತ್ರವಲ್ಲ, ಅನೇಕ ರಾಜನೈತಿಕ ವಿಚಾರಗಳಲ್ಲಿ, ಸಾಮಾಜಿಕ ಕಾರ್ಯಗಳಲ್ಲಿ ಗಾಂಧಿಯವರೊಡನೆ ಡಿವಿಜಿ ಪ್ರತ್ಯಕ್ಷ- ಪರೋಕ್ಷ ರೀತಿಗಳಿಂದ ತೊಡಗಿಕೊಂಡಿದ್ದರು. ಅವರ ಪ್ರಥಮ ಕವಿತಾ ಸಂಗ್ರಹ ವಸಂತ ಕುಸುಮಾಂಜಲಿಯಲ್ಲಿಯೇ ಗಾಂಧಿಯವರ ಬಗೆಗೊಂದು ಸೀಸ ಪದ್ಯವುಂಟು. ಅಲ್ಲದೇ ಗಾಂಧೀಜಿ ತೀರಿಕೊಂಡಾಗ ‘ಗಾಂಧಿಜ್ಞಾಪಕ ಪದ ಸಂಗ್ರಹವೆಂಬ ಮತ್ತೊಂದು ಕಂದಪದ್ಯಗಳ ಕವಿತೆಯನ್ನು ಪ್ರಕಟಿಸಿದ್ದರು. ಅಷ್ಟೇಕೆ, ಗಾಂಧಿಯವರ ಐತಿಹಾಸಿಕವಾದ ಇಪ್ಪತ್ತೊಂದು ದಿನಗಳ ದೀರ್ಘೋಪವಾಸ ಸತ್ಯಾಗ್ರಹವು ಮುಗಿದು ಅವರು ಪ್ರಾಣಾಪಾಯವಿಲ್ಲದೆ ಹೊರ ಬಂದಾಗ ‘ಧನ್ಯವಾದ ಸಮರ್ಪಣೆ’ ಎಂಬ ಕವಿತೆಯನ್ನು ಡಿವಿಜಿ ಬರೆದಿದ್ದಾರೆ. ಇದು ಅವರ ಉಪವಾಸ ಮುಗಿದಂದೇ ರಚಿತವಾಗಿ, ಮುದ್ರಿತವೂ ಆಗಿತ್ತು. Not for publicaion (ಬಹಿರಂಗ ಪ್ರಕಟಣೆಯಲ್ಲವೆಂಬ) ಒಕ್ಕಣೆ ಕೂಡ ಆ ಕರಪತ್ರದ ಮೇಲೆ ಅಚ್ಚಾಗಿದೆ. ‘ನಮ್ಮುಸಿರ ಹೂವು, ನಮ್ಮ ಬಾಳ್ ಅವನು, ನಮ್ಮೊಬ್ಬ ಗುರು, ನರಕುಲದ ಶಿರ, ದೈವ ಸಂಪನ್ಮಾರ್ಗದರ್ಶಕಂ ಗಾಂಧಿಯಲ್ತೇ’ ಎಂದು ಅವರನ್ನೆಷ್ಟು ಬಗೆಯಲ್ಲಿ ಗೌರವಿಸಿದ್ದರೂ ಅವರ ಕೆಲವು ನಿಲುವುಗಳ ಬಗೆಗೆ ಡಿವಿಜಿಯವರ ತೀವ್ರ ವಿರೋಧವಿದ್ದಿತು. ಇದನ್ನವರು ದಾಖಲಿಸಿಯೂ ಇದ್ದಾರೆ.
ಒಮ್ಮೆ ಆಕಾಶವಾಣಿಯವರು ಗುಂಡಪ್ಪನವರನ್ನು ಗಾಂಧಿಯವರ ಉಪವಾಸಗಳನ್ನು ಕುರಿತು ಮಾತನಾಡಬೇಕಾಗಿ ಕೋರಿದಾಗ ಇವರು ಬರೆದ ಪತ್ರ ತುಂಬ ಮಾರ್ಮಿಕವಾಗಿದೆ. ‘ನನಗೆ ಉಪವಾಸಗಳಲ್ಲಿ ನಂಬಿಕೆಯಿಲ್ಲ. ನಾನು ಚೆನ್ನಾಗಿ ತಿಂದುಂಡು ದಷ್ಟಪುಷ್ಟವಾಗಿ ಬೆಳೆದವನು. ಅಲ್ಲದೆ, ನಾನು ಗಾಂಧಿಯವರ ಅನುಯಾಯಿಯೂ ಅಲ್ಲ. ಹೀಗಾಗಿ, ತಮ್ಮ ಆಹ್ವಾನವನ್ನು ಸ್ವೀಕರಿಸಲಾಗುತ್ತಿಲ್ಲ.
ಸುಪ್ರಸಿದ್ಧ ಅಂಕಣಕಾರರೂ ಕನ್ನಡದ ಕಟ್ಟಾಳು ಆಗಿದ್ದ ಹಾ.ಮಾ. ನಾಯಕರು ಅದೊಮ್ಮೆ ಡಿವಿಜಿಯವರನ್ನು ಕಾಣಲು ಹೋದರು. ಆಗಷ್ಟೇ ಹಸನಾದ ಬಿಸಿ ಬಿಸಿ ಜಿಲೇಬಿಯನ್ನು ತಾವೊಲಿದ ಅಂಗಡಿಯಿಂದ ತರಿಸಿ ಇನ್ನೇನು, ತಿನ್ನುವ ಹವಣಿನಲ್ಲಿ ಗುಂಡಪ್ಪನವರಿದ್ದರು. ನಾಯಕರನ್ನು ಕಂಡೊಡನೆಯೇ ಸ್ವಾಗತಿಸಿ ಅವರಿಗೂ ಜಿಲೇಬಿಗಳನ್ನು ಕೊಟ್ಟರು. ನಾಯಕರು ರಸ ತುಂಬಿದ ಆ ಬಂಗಾರದ ಬಣ್ಣದ ಗರಿಗರಿ ಸುರುಳಿಗಳನ್ನು ಸವಿಯುತ್ತಲೇ ಕೇಳಿದರು: ‘ಸರ್! ಈ ಪಾಟಿ ಜಿಡ್ಡು, ಸಕ್ಕರೆ ಎಲ್ಲ ತುಂಬಿದ ಈ ತಿಂಡಿಗಳು ನಿಮ್ಮ ಆರೋಗ್ಯಕ್ಕೆ ಅಪಥ್ಯ ಅಂತ ವೈದ್ಯರು ಹೇಳಿದ್ದಾರಲ್ಲಾ! ಮತ್ತಿದು ಹೇಗೆ?’ ಡಿವಿಜಿಯವರಾದರೋ ತಮ್ಮ ಬಲಗೈಯಿಂದ ಆ ಮಧುರ ಖಾದ್ಯವನ್ನು ಲೀಲಾಜಾಲವಾಗಿ ಕಬಳಿಸುತ್ತಲೇ ಸವಿನಗುವಿನೊಡನೆ ನುಡಿದರಂತೆ: ‘ನೋಡಿ ನಾಯಕರೆ! ಇಲ್ಲೆಲ್ಲ ಅದ್ವೈತ ಮಾಡಬಾರದು.
ಆರೋಗ್ಯ ಬೇರೆ, ಬಾಯಿ ರುಚಿಯೇ ಬೇರೆ! ಇದು ಅಪ್ಪಟ ದ್ವೈತ. ಅನಾರೋಗ್ಯ ಚಿಕಿತ್ಸೆಗಾಗಿ ಕಹಿಯಾದ ಔಷಧ, ನೋಯಿಸುವ ಚುಚ್ಚುಮದ್ದು ಮತ್ತು ತೀವ್ರವಾದ ಶಸ್ತ್ರಚಿಕಿತ್ಸೆಗಳ ‘ಕೋಟಾ'(quota)ನೇ ಬೇರೆ. ಜಿಲೇಬಿ, ಬೋಂಡ, ಪಕೋಡ, ಹಲ್ವಗಳಂಥ ರುಚಿ ರುಚಿಯಾದ ಪರುಠವಣೆಗಳ ಕೋಟಾನೇ ಬೇರೆ. ಎರಡನ್ನೂ ಬೆರೆಸಬಾರದು. ಅದರ ಪಾಡಿಗೆ ಅದು, ಇದರ ಪಾಡಿಗೆ ಇದು. ಒಂದು ಮತ್ತೊಂದನ್ನು ಪ್ರಶ್ನಿಸುವಂತಿಲ್ಲ. ನನ್ನ ದೇಹದಲ್ಲಿ ಇವೆರಡಕ್ಕೂ ಬೇರೆ ಬೇರೆ ಚಾನಲ್‌ಗಳೇ ಇವೆ’!
ಹಾ.ಮಾ. ನಾಯಕರು ಹತಾಶೆಯ ನಗೆ ನಕ್ಕು ಸುಮ್ಮನಾಗಿರಬೇಕು. ಡಿವಿಜಿಯವರಲ್ಲಿ ಅಪರಿಮಿತ ಹಾಸ್ಯಪ್ರಜ್ಞೆ ಇತ್ತು. ಕೆಲವೊಮ್ಮೆ ತಮ್ಮನ್ನೇ ವಸ್ತುವಾಗಿಸಿಕೊಳ್ಳುತ್ತಿದ್ದರು. ಬನ್ನೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಏನಾದರೂ ಸಂದೇಶ ಬರೆದುಕೊಡಿ ಎಂದು ಬಂದಾಗ, ಗುಂಡಪ್ಪನಾದೊಡೇಂ ಕುಂಡೆಯದು ನೋಯದೇ? ಎಂದು ಬರೆದುಕೊಟ್ಟು, ತಾಕತ್ತಿದ್ದರೆ ಓದಿ ಎಂದಿದ್ದರು. ಆ ಸಂದರ್ಭದಲ್ಲಿ ಡಿವಿಜಿಯವರಿಗೆ ಮೂಲವ್ಯಾಧಿಯಾಗಿತ್ತು! ವಿಶ್ವೇಶ್ವರಯ್ಯನವರಿಗಾಗಲಿ ಮಿರ್ಜಾ ಇಸ್ಮಾಯಿಲರಿಗಾಗಲಿ ಪುಟ್ಟಣ ಚೆಟ್ಟಿಯವರೇ ಮುಂತಾದ ಇನ್ನಿತರ ಅನೇಕ ಸಾರ್ವಜನಿಕ ಮಹನೀಯರಿಗಾಗಲಿ ರಾಜ್ಯಶಾಸ್ತ್ರ-ಅರ್ಥಶಾಸ್ತ್ರ-ಪತ್ರಿಕೋದ್ಯಮ-ಸಮಾಜಶಾಸ್ತ್ರವೇ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಪರಿಪರಿಯಾದ ಸಲಹೆ- ಸೂಚನೆಗಳನ್ನೂ ನೆರವು- ನೇರ್ಪುಗಳನ್ನೂ ಮಾಡಿಕೊಡುತ್ತಿದ್ದವರು ಡಿವಿಜಿ.
ಇಂಥ ಕೆಲಸಗಳಿಗೆ ತುಂಬ ಸಮಯ- ಶ್ರದ್ಧೆ- ಅಧ್ಯಯನಗಳೂ ಮೇಲ್ಮಟ್ಟದ ವಿವೇಚನೆ- ವಿಶ್ಲೇಷಣೆಗಳೂ ಬೇಕಾಗುತ್ತಿದ್ದವು. ಈ ಎಲ್ಲ ಪರಿಶ್ರಮ- ಸಹಕಾರಕ್ಕಾಗಿ ಇಂಥ ಹಿರಿಯರು ಗುಂಡಪ್ಪನವರಿಗೆ ಗೌರವಧನವೆಂದು ಎಷ್ಟನ್ನೂ ಕೊಡಲು ಸಿದ್ಧವಿರುತ್ತಿದ್ದರು. ಆದರೆ, ಡಿವಿಜಿ ಮಾತ್ರ ಇವಾವುದನ್ನೂ ಒಲ್ಲೆನೆಂದು ಖಂಡ- ತುಂಡವಾಗಿ ನಿರಾಕರಿಸುತ್ತಿದ್ದರು: ‘ನಿಮ್ಮಂಥ ಹಿರಿಯರಿಗೆ, ಈ ತೆರನಾದ ಸಾರ್ವಜನಿಕ ಹಿತಕಾರ್ಯಗಳಿಗೆ ನೆರವಾಗುವುದೇ ಒಂದು ಸೌಭಾಗ್ಯ. ಇದಕ್ಕೆ ಮಿಗಿಲಾಗಿ ಮತ್ತೇನೂ ಬೇಡ! ಸೇವೆಗೆ ಪ್ರತಿಫಲವಿಲ್ಲ- ಇದು ಡಿವಿಜಿಯವರದೇ ಧ್ಯೇಯ ವಾಕ್ಯ. ಆದರೆ ವಿಶ್ವೇಶ್ವರಯ್ಯನವರಿಗಾಗಲಿ ಮಿರ್ಜಾ ಅವರಾಗಲಿ ಇದನ್ನೊಪ್ಪಲು ಸಿದ್ಧವಿರಲಿಲ್ಲ: ‘ಯಾವುದೇ ಯುಕ್ತ ರೀತಿಯ ನೆರವಿಗೆ ಸೂಕ್ತ ಗೌರವ ಸಲ್ಲಬೇಕು. ಇಲ್ಲವಾದಲ್ಲಿ ಮುಂದೆ ನಿಮ್ಮಿಂದ ನಾವು ಇನ್ನಾವ ರೀತಿಯ ನೆರವನ್ನೂ ಪಡೆಯುವುದು ಕಷ್ಟವಾಗುತ್ತದೆ. ಅಲ್ಲದೆ ಇಂಥ ತಜ್ಞಸಂಭಾವನೆ- ಗೌರವ ಧನಗಳೂ ವಿವಿಧ ಸಾರ್ವಜನಿಕ ಕಾರ್ಯಗಳ ಬಜೆಟ್ಟಿನಲ್ಲಿ ಸೇರಿರುತ್ತವೆ. ಆದುದರಿಂದ ನಮ್ಮ ಮನ್ನಣೆಯನ್ನು ಒಪ್ಪಿಸಿಕೊಳ್ಳಲೇಬೇಕು’ ಎಂದು ಆಗ್ರಹಿಸುತ್ತಿದ್ದರು.
ಇದರಿಂದ ಡಿವಿಜಿ ಮತ್ತೂ ಜಾಣ್ಮೆಯ ಹಾದಿಯೊಂದನ್ನು ತುಳಿದರು. ಅದೆಂದರೆ ಈ ಎಲ್ಲ ಹಿರಿಯರಿಂದ ಧನಾದೇಶ ಪತ್ರ ರೂಪದಲ್ಲಿ (ಚೆಕ್) ಸಂಭಾವನೆಯನ್ನೇನೋ ಸ್ವೀಕರಿಸುವುದು, ಆದರೆ ಯಾವೊಂದನ್ನೂ ನಗದಾಗಿ ಪರಿವರ್ತಿಸಿಕೊಳ್ಳದೆ ಹಾಗೆಯೇ ತಮ್ಮ ಪೆಟ್ಟಿಗೆಯಲ್ಲಿ ಶಾಶ್ವತವಾಗಿ ಉಳಿಸಿಕೊಳ್ಳುವುದು! ಹೀಗೆ ದಶಕಗಳ ಕಾಲ ಈ ‘ಜಾಣತನ’ ಸಾಗಿತು, ಲಕ್ಷಗಟ್ಟಲೆ ಹಣ ನಗದಾಗಿಯೇ ಉಳಿಯಿತು, ಡಿವಿಜಿಯವರ ನಿಸ್ಪಹತೆ ಮಾತ್ರ ನಗುತ್ತಿತ್ತು. ಡಿವಿಜಿ ಕೇವಲ ಚೆಕ್ಕುಗಳನ್ನಷ್ಟೇ ಅಲ್ಲ ಯಾರ ಸ್ನೇಹವನ್ನೂ ಯಾವ ಅವಕಾಶವನ್ನೂ ಮತ್ತಾವುದೇ ಸ್ಥಾನ-ಮಾನ- ಪರಿಚಯಗಳನ್ನು ಎನ್‌ಕ್ಯಾಷ್ ಮಾಡಿಕೊಳ್ಳಲಿಲ್ಲ.
ಇಂಥ ನೂರಾರು ಘಟನೆ, ನಿದರ್ಶನಗಳನ್ನು ಡಿವಿಜಿಯವರ ಜೀವನದಲ್ಲಿ ಕಾಣಬಹುದು. ಒಂದೊಂದು ಘಟನೆಗಳು ಡಿವಿಜಿಯವರ ಪ್ರಾಮಾಣಿಕತೆ, ನಿಸ್ವಾರ್ಥತೆಯ ದ್ಯೋತಕಗಳಾಗಿವೆ. ಅವಧಾನ ಕಲೆಯನ್ನು ನಾಡಿನ ಮೂಲೆ ಮೂಲೆಗೆ ಕೊಂಡೊಯ್ಯುತ್ತಿರುವ ಖ್ಯಾತ ಬಹುಭಾಷಾ ವಿದ್ವಾಂಸ ಶತಾವಧಾನಿ ಆರ್. ಗಣೇಶ್ ಅವರು ಈ ಘಟನೆ, ನಿದರ್ಶನಗಳನ್ನು ‘ಬ್ರಹ್ಮಪುರಿಯ ಭಿಕ್ಷುಕ’ ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈ ಕಾಲದಲ್ಲಿ ನ್ಯಾಯ ನೀತಿಗೆ, ಪ್ರಾಮಾಣಿಕತೆಗೆ, ಸಚ್ಚಾರಿತ್ರ್ಯಕ್ಕೆ ಯಾವ ಬೆಲೆಯೂ ಇಲ್ಲ ಎಂಬ ಸಿನಿಕತೆ ಆವರಿಸಿರುವ ಸಂದರ್ಭದಲ್ಲಿ ಡಿವಿಜಿ ಅವರಂಥವರನ್ನು ನೆನಪಿಸಿಕೊಂಡಾಗ ಮಾತ್ರ ನೈತಿಕತೆ ಎಂಬುದು ಮತ್ತೆ ಜಾಗೃತಗೊಳ್ಳಲು ಸಾಧ್ಯ.
ಅಂದಹಾಗೆ, ಬರುವ ಮಾರ್ಚ್ 17 ಡಿವಿಜಿಯವರ ಜನ್ಮದಿನ!
March 9, 2017
March 4, 2017
ವಯಸ್ಸಿಗೆ ಬಂದ ಒಬ್ಬನೇ ಮಗನನ್ನು ದೇಶಕ್ಕೆ ಬಲಿಕೊಟ್ಟು ಜೀವಂತ ಶವದಂತೆ ಬದುಕುತ್ತಿರುವ ತಂದೆಯರೂ ಇದ್ದಾರೆ, ಗುರ್ ಮೆಹರ್!
ವಯಸ್ಸಿಗೆ ಬಂದ ಒಬ್ಬನೇ ಮಗನನ್ನು ದೇಶಕ್ಕೆ ಬಲಿಕೊಟ್ಟು ಜೀವಂತ ಶವದಂತೆ ಬದುಕುತ್ತಿರುವ ತಂದೆಯರೂ ಇದ್ದಾರೆ, ಗುರ್ ಮೆಹರ್!
‘ಕಿಸಿಕೋ ರಿಸರ್ವೇಶನ್ ಚಾಹಿಯೇ ತೋ ಕಿಸಿಕೋ ಆಝಾದಿ! ಹಮೇ ಕುಚ್ ನಹೀ ಚಾಹಿಯೇ ಭಾಯಿ, ಬಸ್ ಅಪ್ನಿ ರೆಜಾಯಿ!’ ಕೆಲವರಿಗೆ ಮೀಸಲು ಬೇಕಾದರೆ ಇನ್ನು ಕೆಲವರಿಗೆ ಸ್ವಾತಂತ್ರ್ಯ ಬೇಕಂತೆ. ಅಣ್ಣಾ, ನನಗೆ ಏನೂ ಬೇಡ ಹೊದ್ದುಕೊಳ್ಳಲು ಒಂದು ಕಂಬಳಿ ಬಿಟ್ಟು! ಹಾಗಂತ ಹೇಳಿದ್ದು ಯಾರು ಅಂತ ನೆನಪಾಯಿತಾ?! 2016, ಫೆಬ್ರವರಿ 21. ಅಂದರೆ ಸರಿಯಾಗಿ ಒಂದು ವರ್ಷದ ಹಿಂದೆ ಕಾಶ್ಮೀರ ಕಣಿವೆಯ ಪ್ಯಾಂಪೊರ್‌ನಲ್ಲಿ ಸರಕಾರಿ ಕಚೇರಿಯೊಳಗೆ ಅಡಗಿ ಕುಳಿತಿದ್ದ ಉಗ್ರರನ್ನು ಸದೆ ಬಡಿಯಲು ಹೋಗಿದ್ದ ಐವರು ಭಾರತೀಯ ಸೈನಿಕರು ಹುತಾತ್ಮರಾದರು. ಅವರನ್ನು ಮುನ್ನಡೆಸುತ್ತಿದ್ದ ಪ್ಯಾರಾ ಕಮ್ಯಾಂಡೋ ಮತ್ತಾರೂ ಅಲ್ಲ ರಾಜಧಾನಿ ದಿಲ್ಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ 23 ವರ್ಷದ ಪದವೀಧರ ಕ್ಯಾಪ್ಟನ್ ಪವನ್ ಕುಮಾರ್.
ಮೇಲೆ ಉಲ್ಲೇಖಿಸಿರುವುದು ಆತ ಹುತಾತ್ಮ ನಾಗುವ ಮೊದಲು ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೋಸ್ಟಿಂಗ್. ಹಗಲು ರಾತ್ರಿಯೆನ್ನದೆ ಕೊರೆಯುವ ಚಳಿಯಲ್ಲಿ ಗಡಿ ಕಾಯುವ ಆತ ನನಗೊಂದು ಕಂಬಳಿಯಷ್ಟೇ ಕೊಡಿ ಎಂದು ಕೇಳಿದ್ದ, ಹಾಗೆ ಕೇಳಿ ಎರಡೇ ದಿನದಲ್ಲಿ ಆತನ ದೇಹ ತ್ರಿವರ್ಣ ಧ್ವಜ ಹೊದ್ದು ನಿರ್ಜೀವವಾಗಿ ಬಂತು. ಇದ್ದವನು ಒಬ್ಬನೇ ಮಗ. ಕಾಲೇಜಿಗೆ ಹೋಗು ವಾಗ, ಮನೆಗೆ ಬಂದಾಗ ಓಡಾಡುತ್ತಿದ್ದುದು ಹಾರ್ಲೆ ಡೇವಿಡ್‌ಸನ್ ಬೈಕು, ಫ್ಯಾನ್ಸಿ ಜೀಪು. ವಯಸ್ಸಿಗೆ ಬಂದ ಅಂಥ ಒಬ್ಬನೇ ಮಗನನ್ನು ಕಳೆದುಕೊಂಡರೆ ಆ ತಂದೆ-ತಾಯಿಯ ಸ್ಥಿತಿ ಏನಾಗಬಹುದು?. ಆದರೂ ‘ “I had one child, I gave him to the Army, to the nation. No father can be prouder’’. ನನಗಿದ್ದವನು ಒಬ್ಬನೇ ಮಗ. ಅವನನ್ನು ಸೇನೆಗೆ, ದೇಶಕ್ಕೆ ಕೊಟ್ಟೆ. ಒಬ್ಬ ತಂದೆಯಾದವನಿಗೆ ಅದಕ್ಕಿಂತ ಹೆಮ್ಮೆಯುಂಟೇ ಎಂದರು ಆತನ ಅಪ್ಪ ರಾಜ್‌ವೀರ್ ಸಿಂಗ್. ಅವತ್ತು ಜಿನುಗದ ಕಣ್ಣುಗಳು, ಮರುಗದ ಹೃದಯಗಳು ಯಾವುವೂ ಇರಲಿಕ್ಕಿಲ್ಲ!
ನಮ್ಮ ಯೋಧ ಹನುಮಂತಪ್ಪ ಕೊಪ್ಪದ್ 20 ಅಡಿ ಹಿಮದ ಕೆಳಗೆ ಜೀವ ಹಿಡಿದಿಟ್ಟುಕೊಂಡಿದ್ದನ್ನು ಕಂಡು ಆತನನ್ನು ಉಳಿಸಿಕೊಳ್ಳಲೇಬೇಕು ಎಂದು ಎಷ್ಟು ಜನ ದೇವರ ಮುಂದೆ ದೀಪ ಹಚ್ಚಲಿಲ್ಲ ಹೇಳಿ? ಆಳುವ ಪ್ರಧಾನಿ ನರೇಂದ್ರ ಮೋದಿ ಆಸ್ಪತ್ರೆಗೆ ದೌಡಾಯಿಸಿದ್ದನ್ನು ನಾವು ನೋಡಿದ್ದೇವೆ. ಕಾರ್ಗಿಲ್ ಕದನ ಎಂದ ಕೂಡಲೇ ಮದುವೆಗೆ ಮುನ್ನ ಯುದ್ಧ ಮುಗಿಸಿ ಬರುತ್ತೇನೆಂದು ಹೋದವನು ಟೈಗರ್ ಹಿಲ್ ಗೆದ್ದುಕೊಟ್ಟನಾದರೂ ಕೊನೆಗೆ ಹೆಣವಾಗಿ ಬಂದ ವಿಕ್ರಮ್ ಬಾತ್ರಾ, ಮೇಜರ್ ಸುಧೀರ್ ವಾಲಿಯಾ, ಕ್ಯಾಪ್ಟನ್ ಸೌರಭ್ ಕಾಲಿಯಾ, ವಿಜಯಂತ್ ಥಾಪರ್, ಕ್ರೀಡಾಪಟು ವಾದವನು ಕೊನೆಗೆ ಲೆಜೆಂಡರಿ ಸೈನಿಕನಾದ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ, ಸುಬೇದಾರ್ ಯೋಗೇಂದ್ರ ಸಿಂಗ್ ಯಾದವ್, ಕ್ಯಾಪ್ಟನ್ ಅನೂಜ್ ನಯ್ಯರ್. ಒಬ್ಬೊಬ್ಬರೂ ಮೂವತ್ತೊರಳಗೇ ಮರೆಯಾದವರು. ಹೌದು, ಕುಪ್ವರಾದಲ್ಲಿ ಸೇನಾ ನೆಲೆ ರಕ್ಷಿಸುವ ಸಂದರ್ಭದಲ್ಲಿ ಹುತಾತ್ಮರಾದ ಗುರ್‌ಮೆಹರ್ ತಂದೆ ಮನ್‌ದೀಪ್ ಸಿಂಗ್ ಬಗ್ಗೆಯೂ ನಮಗೆ ಅಷ್ಟೇ ಗೌರವವಿದೆ. ಅವರ ಕುಟುಂಬ ಮಾಡಿದ ತ್ಯಾಗ, ಅನುಭವಿಸಿದ ನೋವು ನಮಗೆ ಅರ್ಥವಾಗುತ್ತದೆ. ಯುದ್ಧ, ಸಂಘರ್ಷಗಳು ಅತೀವ ಪ್ರಾಣಹಾನಿ, ನೋವು, ಸಂಕಟ ತರುತ್ತವೆ.
ಕದನಗಳೇ ಇಲ್ಲದ ಜಗತ್ತು ನಮ್ಮೆಲ್ಲರಿಗೂ ಬೇಕು. ಆ ಕಾರಣಕ್ಕಾಗಿಯೇ ಅಟಲ್ ಬಿಹಾರಿ ವಾಜಪೇಯಿ ಅವರು ಲಾಹೋರ್‌ಗೆ ಬಸ್‌ಯಾತ್ರೆ ಕೈಗೊಂಡಿದ್ದರು. ಕೊನೆಗೆ ಪಾಕಿಸ್ತಾನದಿಂದ ಸಿಕ್ಕಿದ್ದು ಕಾರ್ಗಿಲ್ ಯುದ್ಧದ ಬಳುವಳಿ ಮತ್ತು ನಮ್ಮ 527 ಸೈನಿಕರ ಪ್ರಾಣಹರಣ. “Pakistan Did Not Kill My Dad, War Killed Him’ ಎನ್ನುವ ಮೊದಲು ಕಾರ್ಗಿಲ್ ಯೋಧನ ಮಗಳೆಂದು ಹೇಳಿಕೊಳ್ಳುವ ಗುರ್‌ಮೆಹರ್ ಕೌರ್ ಗೆ ಇದು ಗೊತ್ತಿರಲೇಬೇಕಲ್ಲವೆ? ಅಫ್ಘಾನಿಸ್ತಾನದ ಭೇಟಿಗೆ ಹೋದ ಪ್ರಧಾನಿ ನರೇಂದ್ರ ಮೋದಿಯವರು ಅಚಾನಕ್ಕಾಗಿ ಕರಾಚಿಯಲ್ಲಿ ವಿಮಾನ ನಿಲ್ಲಿಸಿ ನವಾಜ್ ಷರೀಫರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ವಾಪಸ್ಸಾದ ಕೂಡಲೇ ಪಾಕಿಸ್ತಾನದಿಂದ ಸಿಕ್ಕಿದ್ದು ಪಠಾಣ್‌ಕೋಟ್ ಅಟ್ಯಾಕ್ ಎಂಬುದೂ ತಿಳಿದಿರಲೇಬೇಕು ತಾನೇ? 2008ರ ಮುಂಬೈ ದಾಳಿಯ ರೂವಾರಿ ಹಫೀಸ್ ಸಯೀದ್‌ನನ್ನು ಸಾಕಿ ಸಲಹುತ್ತಿರುವ ಪಾಕಿಸ್ತಾನದ ಜತೆ ‘ಅಮನ್ ಕಿ ಆಶಾ’ ಎಂದು ಅಭಿಯಾನ ಮಾಡಿದವರಿಗೆ ಕೊನೆಗೆ ಉಳಿದಿದ್ದು ಖರ್ಚಾಗದ ಕಾಪಿಗಳೆಂಬ ರದ್ದಿ ಪೇಪರ್ ಅಷ್ಟೇ! ಸಿಖ್ಖಳಾದ ಗುರ್‌ಮೆಹರ್‌ಗೆ ಸಿಖ್ಖಪಂಥದ ಇತಿಹಾಸ, ಗುರುಗೋವಿಂದ್ ಸಿಂಗ್, ಅವರ ಮಕ್ಕಳನ್ನು ಕೊಂದವರ ಮತ ಇವೆಲ್ಲ ಗೊತ್ತಿರಲೇಬೇಕು ಅಲ್ಲವೆ? ಕನಿಷ್ಠ ಪಕ್ಷ, ಸಾಹಿತ್ಯದ ವಿದ್ಯಾರ್ಥಿಯಾದ ಆಕೆಗೆ ಖುಷವಂತ್ ಸಿಂಗರ Train To Pakistan’ ಪುಸ್ತಕದ ಪರಿಚಯವಾದರೂ ಇರಬೇಕಲ್ವಾ? ಹೋಗಲಿ ಬಿಡಿ, ಆಕೆ ಒಬ್ಬ ಅಚಲ ಶಾಂತಿದೂತೆ ಎಂದೇ ಭಾವಿಸೋಣ. ತಂದೆಯನ್ನು ಎರಡು ವರ್ಷದವಳಾಗಿದ್ದಾಗಲೇ ಕಳೆದುಕೊಂಡ ನೋವು ಆಕೆಯಲ್ಲಿ ಸಾವು, ಸಂಕಟ ತರುವ ಸಂಘರ್ಷ, ಯುದ್ಧಗಳು ಭಯ ಸೃಷ್ಟಿಸಿರಬಹುದು. ಅದರ ಬಗ್ಗೆ ಎರಡು ಮಾತಿಲ್ಲ.
ಆಕೆ 11 ತಿಂಗಳ ಹಿಂದೆ ಯುದ್ಧ, ಸಂಘರ್ಷದ ವಿರುದ್ಧ ಹಾಕಿರುವ ನಾಲ್ಕೂವರೆ ನಿಮಿಷದ ವಿಡಿಯೊವನ್ನು ಸಾರಾಸಗಟಾಗಿ ತಿರಸ್ಕರಿಸಲು ಸಾಧ್ಯವಿಲ್ಲ. ಆಕೆಯ ವಾದವೂ ಒಪ್ಪುವಂಥದ್ದೇ ಮತ್ತು ಹಾಗೆ ವಾದ ಮಾಡಲು ಆಕೆಗೆ ಎಲ್ಲ ಹಕ್ಕಿದೆ. ಆದರೂ ಏಕಾಗಿ ಆಕೆಯ ಹಳೆಯ ವಿಡಿಯೊ, ಫೇಸ್‌ಬುಕ್ ಪೋಸ್ ಪುಟಗಳನ್ನು ಈಗ ಎಳೆದುತಂದು ಟೀಕಿಸಲಾಗುತ್ತಿದೆ ಎಂದುಕೊಂಡಿರಿ? ಕೆಲವರು ನಾರೀ ತುನಾರಾಯಣಿ(ಹೆಣ್ಣು ದೇವರಿಗೆ ಸಮಾನ) ಎನ್ನುತ್ತಾ ಮೋದಿಯವರನ್ನೇ ಪ್ರಶ್ನಿಸಲು ಮುಂದಾದರೆ, ಸಾಮಾನ್ಯವಾಗಿ ಬಹಳ ಗಂಭೀರವಾಗಿ, ಅರ್ಥಪೂರ್ಣವಾಗಿ ಮಾತನಾಡುವ ನಿವೃತ್ತ ವಿಂಗ್ ಕಮಾಂಡರ್ ಅತ್ರಿಯವರು, ಹೆಣ್ಣು ಮಗಳು…ಹೆಣ್ಣು ಮಗಳು… ಎನ್ನುತ್ತಾ ಭಾವೋದ್ರೇಕದಲ್ಲಿ ವಾಸ್ತವವನ್ನೇ ಮರೆತಂತೆ ಮಾತನಾಡತೊಡಗಿದ್ದಾರೆ!
ವೀರೇಂದ್ರ ಸೆಹವಾಗ್, ನಾನು ತ್ರಿಶತಕ ಹೊಡೆಯಲಿಲ್ಲ, ನನ್ನ ಬ್ಯಾಟು ಹೊಡೆಯಿತು ಎಂದು ಮಾರ್ಮಿಕವಾಗಿ ಹೇಳಿದ್ದು, ಫೋಗೋಟ್ ಸಹೋದರಿಯರು, ಒಲಂಪಿಯನ್ ಯೋಗೇಶ್ವರ ದತ್, ನಟ ರಣದೀಪ್ ಹೂಡಾ ಧ್ವನಿಗೂಡಿಸಿದ್ದು ಸುಖಾಸುಮ್ಮನೆಯೇ? ಕಶ್ಮೀರ್ ಮಾಂಗೇ ಆಝಾದಿ ಬಸ್ತರ್ ಮಾಂಗೇ ಆಝಾದಿ ಹಮ್‌ಕೊ ಚಾಹಿಯೇ ಆಝಾದಿ ಎನ್ನುತ್ತಾ ದಿಲ್ಲಿಯ ರಾಮ್ಜಸ್ ಕಾಲೇಜಿನಲ್ಲಿ ಘೋಷಣೆ ಕೂಗುತ್ತಿದ್ದವರೇನು ಶಾಂತಿದೂತರೇ? ಆಝಾದಿಗಾಗಿ ಕಾಶ್ಮೀರದಲ್ಲಿ ಅವರು ಹಿಡಿದಿರುವ ಎಕೆ-47ನ ನಳಿಕೆಯಿಂದ ಹೊರಬರುವುದು ಶಾಂತಿಯ ಸಂಕೇತದದ ಬಿಳಿ ಗುಲಾಬಿ ಹೂವುಗಳೇ? ಇದುವರೆಗೂ 15 ಸಾವಿರಕ್ಕೂ ಅಧಿಕ ಸೈನಿಕರು ದೇಶಕ್ಕಾಗಿ ಪ್ರಾಣ ಕಳೆದುಕೊಂಡರಲ್ಲ ಅವರನ್ನು ಬಲಿ ತೆಗೆದುಕೊಂಡಿದ್ದು ಇದೇ ಆಝಾದಿಗಾಗಿನ ಸಂಘರ್ಷವೇ ಅಲ್ಲವೆ? ಒಂದು ವರ್ಷದ ಹಿಂದೆ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ‘ಭಾರತ್ ತೇರೆ ಟುಕ್ಡೆ ಹೋಂಗೆ, ಇನ್ಸಾಲ್ಹಾ’ (ಭಾರತವನ್ನು ತುಂಡರಿಸುತ್ತೇವೆ), ‘ಅಫ್ಜಲ್‌ಗುರು ಹಮ್ ಶರ್ಮಿಂದಾ ಹೈ, ತೇರೆ ಖಾತಿಲ್ ಜಿಂದಾ ಹೈ’(ಅಫ್ಜಲ್ ಗುರು ನಮಗೆ ನಾಚಿಕೆಯಾಗುತ್ತಿದೆ, ನಿನ್ನನ್ನು ಕೊಂದವರು ಇನ್ನೂ ಬದುಕಿದ್ದಾರೆಂದು) ಎಂದು ಘೋಷಣೆ ಕೂಗಿದವರು ಇದೇ ಆಝಾದಿ ಚಳವಳಿಕಾರರೇ ಅಲ್ಲವೆ? ಇವನ್ನೆಲ್ಲ ನೋಡಿ ಕೊಂಡು ಎಬಿವಿಪಿ ಸುಮ್ಮನಿರಬೇಕಿತ್ತೇ? ಇದರ ಹಿಂದಿರುವ ವ್ಯಕ್ತಿ ದೇಶದ್ರೋಹದ ಆರೋಪ ಎದುರಿಸುತ್ತಿರುವ ಉಮರ್ ಖಾಲಿದ್ ತಾನೆ? ಹೀಗಿದ್ದರೂ ‘ನಾನು ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ. ನಾನೇನು ಎಬಿವಿಪಿಗೆ ಹೆದರುವುದಿಲ್ಲ.
ನಾನು ಏಕಾಂಗಿಯಲ್ಲ, ನನ್ನ ಜತೆ ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಯೂ ಇದ್ದಾನೆ’ ಎನ್ನುತ್ತಾ ‘ಎಬಿವಿಪಿ ವಿರುದ್ಧ ವಿದ್ಯಾರ್ಥಿಗಳು’ ಎಂಬ ಹ್ಯಾಶ್‌ಟ್ಯಾಗ್ ಹಾಕುತ್ತಾಳಲ್ಲಾ ಈ ಗುರ್ ಮೆಹರ್, 20 ವರ್ಷದ ಅಮಾಯಕ ಹೆಣ್ಣುಮಗಳೇ? ನಾನು ಏಕಾಂಗಿಯಲ್ಲ, ನನ್ನ ಜೊತೆ ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಯೂ ಇದ್ದಾನೆ ಎನ್ನುತ್ತಾಳಲ್ಲಾ ಆಕೆ ಓದುತ್ತಿರುವ ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಚುನಾವಣೆಯಲ್ಲೇ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಹೀಗೆ ನಾಲ್ಕರಲ್ಲಿ ಮೂರನ್ನು ಗೆದ್ದುಕೊಂಡಿರುವ ಎಬಿವಿಪಿ ಜತೆ ವಿದ್ಯಾರ್ಥಿಗಳಿದ್ದಾರೋ ಅಥವಾ ಈ ಪೋಸ್ಟರ್ ಪ್ರವೀಣೆಯ ಜತೆಗೋ? ಕಳೆದ ವರ್ಷ ಆಝಾದಿ ಹೆಸರಿನಲ್ಲಿ ಯಾವ ರೀತಿ ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದರು ಎಂಬುದು ಗೊತ್ತಿದ್ದ ಕಾರಣಕ್ಕೇ ಅಲ್ಲವೆ ಈ ಬಾರಿ ಎಬಿವಿಪಿ ಅವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದು? ಅದರಲ್ಲಿ ತಪ್ಪೇನಿದೆ? ಕಳೆದ ವರ್ಷ ಆಝಾದಿ, ಮಹಿಳಾ ಹಕ್ಕು ಎಂದೆಲ್ಲ ಮಾತನಾಡುತ್ತಿದ್ದ ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆಯ ಸದಸ್ಯ ಅನಮೋಲ್ ರತನ್, ಸಹಪಾಠಿಗೆ ಮತ್ತು ಬರುವ ಪಾನೀಯ ಕುಡಿಸಿ ರೇಪ್ ಮಾಡಿ ಈಗ ಜೈಲಿನಲ್ಲಿದ್ದಾನೆ. ಈ ಕಮ್ಯುನಿಸ್ಟರು ಹೇಳುವುದು ವೇದ, ತಿನ್ನುವುದು ಬದನೆಕಾಯಿ. ಇಂಥವರ ಮತ್ತು ಆಮ್ ಆದ್ಮಿ ಪಾರ್ಟಿಯ ಜತೆ ಸಂಪರ್ಕ ಇಟ್ಟುಕೊಂಡಿರುವ ಗುರಮೆಹರ್ ಕೌರ್‌ಳೇನು ಅಮಾಯಕಳು ಎಂದುಕೊಳ್ಳಬೇಡಿ! ಹನ್ನೊಂದು ತಿಂಗಳ ಹಿಂದೆ ಹಾಕಿದ ವಿಡಿಯೊ ನೋಡುತ್ತಾ, ಮುಂದಿನ ದಿನಗಳಲ್ಲಿ ಆಕೆ ಹೇಗೆ ನಡೆದುಕೊಂಡಿದ್ದಾಳೆ ಎಂಬುದನ್ನು ಮರೆಯಬೇಡಿ. ಡಿಲೀಟ್ ಮಾಡಲಾಗಿರುವ ಆಕೆಯ ಫೇಸ್‌ಬುಕ್ ಟೈಮ್ ಲೈನ್ ನೋಡಿದ್ದರೆ ಅವಳ ನಿಜಬಣ್ಣ ನಿಮಗೆ ಅರ್ಥವಾಗುತ್ತಿತ್ತು!
ಪಾಕಿಸ್ತಾನದ ಗಡಿಯೊಳಕ್ಕೆ ನುಗ್ಗಿ ನಮ್ಮ ಸೈನಿಕರು ಮಾಡಿದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ನೀವೆಲ್ಲ ಹೆಮ್ಮೆಪಟ್ಟಿದ್ದಿರಿ ತಾನೇ? ಆದರೆ ಗುರ್‌ಮೆಹರ್ ಕೌರ್‌ಳ 2016, ನವೆಂಬರ್ 2ರ ಫೇಸ್‌ಬುಕ್ ಪೋಸ್ಟಿಂಗ್ ನೋಡಿ. ಕಮ್ಯುನಿಸ್ಟ ರಾದ ಕವಿತಾ ಕೃಷ್ಣನ್ ಹಾಗೂ ಮತಾಂತರಿ ಜಾನ್ ದಯಾಳ್ ಜತೆ ಪತ್ರಿಕಾಗೋಷ್ಠಿಯಲ್ಲಿ ಕುಳಿತು ಸರ್ಜಿಕಲ್ ಸ್ಟ್ರೈಕನ್ನು ಈಕೆ ಟೀಕಿಸುತ್ತಿರುವ ಫೋಟೊವಿದೆ! ಸರ್ಜಿಕಲ್ ಸ್ಟ್ರೈಕ್ ವಿರೋಧಿಸಿ ನವೆಂಬರ್ 9ರಂದು ನಡೆದ ಹೋರಾಟಕ್ಕೆ ಎಲ್ಲರಿಗೂ ಆಹ್ವಾನವನ್ನೂ ಕೊಟ್ಟಿದ್ದಾಳೆ!! ಈ ಶಾಂತಿಧೂತೆ ಪಠಾಣ್‌ಕೋಟ್ ದಾಳಿ ವಿರೋಧಿಸಿ ಪ್ರತಿಕಾಗೋಷ್ಠಿಯಾಗದಿದ್ದರೂ ಕನಿಷ್ಠ ಫೇಸ್ ಬುಕ್‌ನಲ್ಲಿ ಒಂದು ಪೋಸ್ಟನ್ನಾದರೂ ಹಾಕಬಹುದಿತ್ತಲ್ಲವೆ? ಈಕೆಯ ಇಬ್ಬಂದಿ ನಿಲುವಿಗೆ ಇನ್ನೊಂದು ನಿದರ್ಶನ ಕೊಡಲೇ? 2016, ಡಿಸೆಂಬರ್ 20ರಂದು ಟರ್ಕಿಯಲ್ಲಿದ್ದ ರಷ್ಯಾ ರಾಯಭಾರಿ ಆ್ಯಂಡ್ರೆ ಕಾರ್ಲೋವ್‌ರನ್ನು ಕೊಂದ ನಂತರ ‘You killed million V/s One’ಶೀರ್ಷಿಕೆಯಡಿ ಪೋಸ್ಟಿಂಗ್ ಹಾಕಿಕೊಂಡು ಸೇಡಿನ ಹತ್ಯೆ ಎಂದು ಸಮರ್ಥಿಸಿಕೊಂಡಿದ್ದಳು! ಈಕೆಯ ನಿಲುವು, ಫೇಸ್‌ಬುಕ್ ಪೋಸ್ಟಿಂಗ್, ಪಾಲ್ಗೊಂಡಿರುವ ಪತ್ರಿಕಾಗೋಷ್ಠಿಗಳು ಆಕೆಯಲ್ಲಿ ಒಬ್ಬ ಶಾಂತಿಧೂತೆಯನ್ನು ಬಿಂಬಿಸುತ್ತಿಲ್ಲ.
ಆಕೆ ಕಮ್ಯುನಿಸ್ಟರ ಪ್ರಭಾವಕ್ಕೆ ಒಳಗಾಗಿದ್ದಾಳೆ ಅಷ್ಟೇ. ಯಾವಾಗ ಬಣ್ಣ ಬಯಲಾಯಿತೋ ಆಗ ನಾನೊಬ್ಬ ಹುತಾತ್ಮನ ಮಗಳು ಎನ್ನುತ್ತಾ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ ಅಷ್ಟೇ. ಎರಡು ವರ್ಷದ ಹಿಂದಷ್ಟೇ ಭಯೋತ್ಪಾದಕರ ಗುಂಡು ತಗುಲಿ ಹುತಾತ್ಮರಾದ ಕರ್ನಲ್ ಎಂ.ಎನ್. ರಾಯ್ ಅವರ 11 ವರ್ಷದ ಮಗಳು ಅಲಕಾ, ಅಪ್ಪನನ್ನು ಕಳೆದುಕೊಂಡ ದುಃಖದ ಕ್ಷಣದಲ್ಲೂ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮೊದಲು ಗೂರ್ಖಾ ರೆಜಿಮೆಂಟಿನ ಯುದ್ಧ ಕಹಳೆಯನ್ನು ಮೊಳಗಿಸಿದ್ದನ್ನು ಮೆಚ್ಚಿ ಕಣ್ಣೀರಾಗಿದ್ದೇವೆ. ಈ ದೇಶದಲ್ಲಿ ಸಾವಿರಾರು ಸೈನಿಕರ ಮಕ್ಕಳು ಅಪ್ಪನನ್ನು ಕಳೆದುಕೊಂಡು ಬೆಳೆಯುತ್ತಿದ್ದಾರೆ. ‘ಪುತ್ರ ವಿಯೋಗಂ ನಿರಂತರಂ’ ಎನ್ನುತ್ತಾರೆ.
ಮಗನ ಸಾವು ಬದುಕಿನ ಕಡೇವರೆಗೂ ಕಾಡುತ್ತದೆ ಎಂಬ ಮಾತಿದೆ. ಇದ್ದೊಬ್ಬ ಮಗನನ್ನು ಕಳೆದುಕೊಂಡ ಸಂದರ್ಭದಲ್ಲೂ ದೇಶಕ್ಕಾಗಿ ಮಗನನ್ನು ಕೊಟ್ಟೆ ಎಂದ ಕ್ಯಾಪ್ಟನ್ ಪವನ್ ಕುಮಾರ್ ತಂದೆ ರಾಜ್‌ವೀರ್ ಸಿಂಗರನ್ನು ಕಂಡು ಹೆಮ್ಮೆಪಟ್ಟಿದ್ದೇವೆ. ದಯವಿಟ್ಟು ಹುತಾತ್ಮ ಯೋಧನ ಮಗಳು ಎಂಬ ಒಂದೇ ಕಾರಣಕ್ಕೆ ಹಂಡೆಗಟ್ಟಲೆ ಕಣ್ಣೀರು ಸುರಿಸಬೇಡಿ. ಏಕೆಂದರೆ…. ಕಾಶ್ಮೀರದಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಯುತ್ತಿರುವಾಗ ನೆರೆಹೊರೆಯವರೆಲ್ಲ ಬಂದು ನಮ್ಮ ಸೈನಿಕರ ಮೇಲೆಯೇ ಕಲ್ಲೆಸೆಯಲು ಆರಂಭಿಸುತ್ತಾರೆ. ನಮ್ಮ ಸೇನಾಪಡೆ ನಾಗರಿಕರ ಮೇಲೆ ಗುಂಡು ಹಾರಿಸುವುದಿಲ್ಲ ಎಂಬ ಕಾರಣಕ್ಕೆ. ಆ ಮೂಲಕ ಭಯೋತ್ಪಾದಕರು ತಪ್ಪಿಸಿಕೊಳ್ಳಲು ಅನುವು ಮಾಡಿಕೊಡುತ್ತಾರೆ. ಇಂಥ ಕಲ್ಲುತೂರಾ ಟಗಾರರನ್ನೂ ಭಯೋತ್ಪಾದಕರ ಪರವಾಗಿ ಕೆಲಸ ಮಾಡುವವರು (over-ground workers or terrorists) ಅಥವಾ ಭಯೋತ್ಪಾದಕರೆಂದೇ ಪರಿಗಣಿಸಬೇಕಾಗುತ್ತದೆ ಎಂದು ಜನರಲ್ ಬಿಪಿನ್ ರಾವತ್ ಇತ್ತೀಚೆಗೆ ಹೇಳಿರುವುದನ್ನು, ಕಲ್ಲು ತೂರುವವರ ಮೇಲೂ ಬಂದೂಕು ತಿರುಗಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದನ್ನು ನೀವೂ ನೋಡಿರಬಹುದು.
ದಿಲ್ಲಿಯಲ್ಲಿ ಆಝಾದಿ ಹೆಸರಿನಲ್ಲಿ ಬೊಬ್ಬೆ ಹಾಕುವವರೂ ಬೌದ್ಧಿಕ ಭಯೋತ್ಪಾದಕರಲ್ಲದೆ ಮತ್ತೇನು? ಅಂಥವರನ್ನು ಹೆಡೆಮುರಿಕಟ್ಟಲು ಮುಂದಾದ ರಾಷ್ಟ್ರಭಕ್ತ ಎಬಿವಿಪಿ ವಿರುದ್ಧವೇ ಹರಿಹಾಯುವವರನ್ನು ಏನೆನ್ನಬೇಕು ನೀವೇ ಹೇಳಿ?!
March 3, 2017
March 1, 2017
Pratap Simha's Blog
- Pratap Simha's profile
- 58 followers
