Pratap Simha's Blog, page 27

January 12, 2017

January 7, 2017

ಕ್ರಿಕೆಟ್‌ನ ಇಂದ್ರ ಚಂದ್ರರನ್ನೆಲ್ಲ ನಮಗೆ ತಂದುಕೊಟ್ಟ ಈ ಮಹೇಂದ್ರ!

ಕ್ರಿಕೆಟ್‌ನ ಇಂದ್ರ ಚಂದ್ರರನ್ನೆಲ್ಲ ನಮಗೆ ತಂದುಕೊಟ್ಟ ಈ ಮಹೇಂದ್ರ!



2013ರಲ್ಲಿ ಭಾರತ, ಶ್ರೀಲಂಕಾ ಮತ್ತು ವೆಸ್ಟಿಂಡೀಸ್ ತ್ರಿಕೋನ ಸರಣಿ ಫೈನಲ್ ಪಂದ್ಯ.
ಬಾಲಿಂಗ್ ಪಿಚ್.uneven bounce. ಸಂಗಕ್ಕರ ಅವರ 71ರನ್‌ಗಳ ನೆರವಿನಿಂದ ಶ್ರೀಲಂಕಾ ಕೇವಲ 201 ರನ್‌ಗಳನ್ನು ಗಳಿಸಿತ್ತು. ಅದನ್ನು ಬೆನ್ನತ್ತಿದ ಭಾರತ ತಂಡ 152ರನ್‌ಗಳಿಗೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಇನ್ನೊಂದು ಬದಿಯಲ್ಲಿ 16 ಬಾಲ್‌ಗಳಲ್ಲಿ ಕೇವಲ 4 ರನ್‌ಗಳಿಸಿ ಆಡುತ್ತಿದ್ದ. ಕೆಲವೇ ಹೊತ್ತಿನಲ್ಲಿ ತಂಡದ ಮೊತ್ತ 167ಕ್ಕೆ 8 ವಿಕೆಟ್ ಆಯಿತು. ಆಗ ಸುಲಭವಾದ ಒಂದು ರನ್‌ಗಳನ್ನೂ ಧೋನಿ ನಿರಾಕರಿಸಲಾರಂಭಿಸಿದರು.

ಎಲ್ಲ ಜವಾಬ್ದಾರಿಯನ್ನೂ ತಾವೇ ಹೊತ್ತಿದ್ದರು. ಆದರೂ ಸ್ಕೋರ್ 182ಕ್ಕೆ 9 ವಿಕೆಟ್ ಆಗಿಬಿಟ್ಟಿತು. ಇನ್ನುಳಿದಿದ್ದು ಒಂದೇ ವಿಕೆಟ್. ಇಶಾಂತ್ ಶರ್ಮ ಹೇಗೆ ಬ್ಯಾಟಿಂಗ್ ಮಾಡುತ್ತಾನೆಂದು ನಿಮಗೆಲ್ಲ ಗೊತ್ತು. ಈ ಪರಿಸ್ಥಿತಿಯಲ್ಲಿ 9 ಬಾಲ್‌ಗಳಲ್ಲಿ 17ರನ್‌ಗಳು ಬೇಕು. ಮುಂದಿನ ಎರಡು ಬಾಲ್‌ಗಳಲ್ಲಿ ಎರಡು ರನ್‌ಗಳು ಬಂದವು. 49ನೇ ಓವರ್‌ನ ಕೊನೆಯ ಎಸೆತವನ್ನು ಇಶಾಂತ್ ಶರ್ಮ ಮುಟ್ಟುವ ಗೋಜಿಗೆ ಹೋಗಲಿಲ್ಲ.

ಧೋನಿ ಡ್ರೆಸ್ಸಿಂಗ್ ರೂಂ ಕಡೆ ಸನ್ನೆ ಮಾಡಿ ಭಾರವಾದ ಬ್ಯಾಟ್ ತರಿಸಿಕೊಂಡರು. ಶ್ರೀಲಂಕಾ ತಂಡದ ಎರಂಗಾ ಕೊನೆಯ ಓವರ್ ಎಸೆಯಲು ಸಿದ್ಧರಾಗುತ್ತಿದ್ದರು. ಈ ಪಂದ್ಯದಲ್ಲಿ ಎರಂಗಾ ಒಂಬತ್ತು ಓವರ್ ಎಸೆದು ಕೇವಲ 23 ರನ್ ನೀಡಿ ಎರಡು ವಿಕೆಟ್ ಕಬಳಿಸಿದ್ದರು. ಕೊನೆಯ ಓವರ್‌ನಲ್ಲಿ 15 ರನ್ ಬೇಕು.ಎರಂಗಾ ಎಸೆದ ಮೊದಲ ಬಾಲ್ ಧೋನಿ ಬ್ಯಾಟಿಗೆ ಎಟುಕಲಿಲ್ಲ. ಎರಡನೇ ಎಸೆತ ಸಿಕ್ಸ್. ಅಲ್ಲಿಗೆ ನಾಲ್ಕು ಬಾಲ್‌ಗಳಲ್ಲಿ 9 ರನ್ ಬೇಕಿತ್ತು. ಮುಂದಿನ ಎಸೆತವನ್ನು ಧೋನಿ ಪಾಯಿಂಟ್ ಮೇಲಿನಿಂದ ಬೌಂಡರಿಗಟ್ಟಿದ. ಮೂರು ಎಸೆತದಲ್ಲಿ ಐದು ರನ್ ಬೇಕಿತ್ತು. ಮುಂದಿನ ಎಸೆತವನ್ನು ಧೋನಿ ಎಕ್ಸ್ ಟ್ರಾಕವರ್‌ನಲ್ಲಿ ಸಿಕ್ಸ್ ಎತ್ತಿ ಜಯಭೇರಿ ಬಾರಿಸಿದ. ಧೋನಿ ಮ್ಯಾಚ್ ವಿನ್ನರ್ ಎಂದು ನಾವೆಲ್ಲ ಅಂದುಕೊಂಡಿದ್ದೇ ಈ ಕಾರಣಕ್ಕಲ್ಲವೇ?

ಇಂತಹ ಅವೆಷ್ಟು ಪಂದ್ಯಗಳನ್ನು ಧೋನಿ ಭಾರತಕ್ಕೆ ಜಯಗಳಿಸಿಕೊಟ್ಟಿಲ್ಲ. ತಂಡ ಯಾವುದೇ ಇರಲಿ. ಬೌಲರ್ ಯಾರೇ ಆಗಿರಲಿ. ಯಾವುದೇ ದೇಶದಲ್ಲಿರಲಿ. ಯಾವ ಪಂದ್ಯಾವಳಿ ಬೇಕಾದರೂ ಇರಲಿ. ಧೋನಿ ಇದ್ದಾನೆಂದರೆ ನಮಗೆಲ್ಲ ಏನೋ ಧೈರ್ಯ. ಕೊನೆಯ ಒಂದೆರಡು ಓವರ್‌ನಲ್ಲಿ ಅವೆಷ್ಟು ರನ್ ಬೇಕಿರಲಿ. ಧೋನಿ ಪಂದ್ಯ ಗೆದ್ದು ಕೊಟ್ಟಿದ್ದಾನೆ.

2011ರ ವಿಶ್ವಕಪ್ ಫೈನಲ್ ಪಂದ್ಯ ನೆನಪಿಸಿಕೊಳ್ಳಿ. ಆ ಪಂದ್ಯದಲ್ಲಿ ಧೋನಿ 79 ಎಸೆತಗಳಲ್ಲಿ ಗಳಿಸಿದ 91 ರನ್‌ಗಳು, 1975ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕ್ಲೈವ್ ಲಾಯ್ಡ್ ಗಳಿಸಿದ 102 ರನ್‌ಗಳಿಗೆ ಸಮವಾಗಿತ್ತು ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಅಥರ್ಟನ್ ಹೇಳಿದ್ದಾರೆ. ವಿಶೇಷವೆಂದರೆ 2011ರ ವಿಶ್ವಕಪ್ ಫೈನಲ್ ಪಂದ್ಯದ ನಂತರ ನಡೆದ ಸಮಾರಂಭದಲ್ಲಿ ಐಸಿಸಿ ಅಧ್ಯಕ್ಷ ಕ್ಲೈವ್ ಲಾಯ್ಡ್ ಇದ್ದರು. ಅವರೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಮಹೇಂದ್ರ ಸಿಂಗ್ ಧೋನಿಗೆ ನೀಡಿದ್ದು!

2011ರಲ್ಲಿ ಭಾರತ ತಂಡ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಆಟವನ್ನು ಹೆಚ್ಚು ಅವಲಂಬಿಸಿತ್ತು. ಆದರೆ 2011ರ ವಿಶ್ವಕಪ್ ಫೈನಲ್‌ನಲ್ಲಿ ವೀರೇಂದ್ರ ಸೆಹ್ವಾಗ್ (0) ಹಾಗೂ ತೆಂಡೂಲ್ಕರ್ (18), ವಿರಾಟ್ ಕೊಹ್ಲಿ (35) ಬೇಗನೆ ಔಟಾಗಿದ್ದರು. ಅಂತಹ ಸಂದರ್ಭದಲ್ಲಿ ಯಾವಾಗಲೂ ಬರುವುದಕ್ಕಿಂತ ಮೇಲಿನ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗ್‌ಗೆ ಇಳಿದಿದ್ದರು. ಅದು ವಿಶ್ವಕಪ್ ಇತಿಹಾಸದಲ್ಲಿ ನಾಯಕನೊಬ್ಬನ ಅತ್ಯುತ್ತಮ ಆಟಗಳಲ್ಲಿ ಒಂದೆಂದು ದಾಖಲಾಗಿದೆ.

ಭಾರತಕ್ಕೆ ಏಕದಿನ ಹಾಗೂ ಟ್ವೆಂಟಿ- ಟ್ವೆಂಟಿ ಎರಡೂ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಹಾಗೂ ಏಷ್ಯಾಕಪ್‌ನಲ್ಲಿ ಇಷ್ಟೂ ಪ್ರಶಸ್ತಿಗಳನ್ನು ಗೆದ್ದುಕೊಟ್ಟ ಏಕೈಕ ನಾಯಕ. ಇನ್ನು ಐಪಿಎಲ್ ಹಾಗೂ ಚಾಂಪಿಯನ್ಸ್ ಲೀಗ್ ಎರಡನ್ನೂ ಗೆದ್ದ ನಾಯಕನೂ ಹೌದು. ಧೋನಿ ಕೇವಲ ಭಾರತ ಕಂಡ ಅತ್ಯುತ್ತಮ ನಾಯಕನಷ್ಟೇ ಅಲ್ಲ, ವಿಶ್ವದ ಅತ್ಯುತ್ತಮ ನಾಯಕರಲ್ಲಿ ಒಬ್ಬ. ಕೇವಲ ಒಬ್ಬರಾಗಿದ್ದರೆ ಇಷ್ಟೆಲ್ಲ ಬರೆಯಬೇಕಾಗಿರಲಿಲ್ಲ. ಅವರು ವಿಶ್ವದ ಅತ್ಯುತ್ತಮ ನಾಯಕರಲ್ಲಿ ಪ್ರತಿಯೊಂದು ವಿಭಾಗದಲ್ಲೂ ಒಂದರಿಂದ ಮೂರನೇ ಸ್ಥಾನದಲ್ಲಿದ್ದಾರೆ.

ನಾಯಕನಾಗಿ ಧೋನಿಯ ರನ್‌ಗಳಿಕೆಯ ಸರಾಸರಿ 53.93. ಈ ಪಟ್ಟಿಯಲ್ಲಿ ಧೋನಿಗಿಂತ ಮೇಲಿರುವವರು ದಕ್ಷಿಣ ಆಫ್ರಿಕಾದ ಡಿ.ವಿಲಿಯರ್ಸ್ (ಸರಾಸರಿ 65.92) ಮಾತ್ರ. ವಿವಿಯನ್ ರಿಚರ್ಡ್ಸ್ ವಿಶ್ವ ಕಂಡ ಅತ್ಯುತ್ತಮ ಕ್ರಿಕೆಟ್ ಬ್ಯಾಟ್ಸ್‌ಮನ್‌ಗಳಲ್ಲೊಬ್ಬರು. ಅವರ ಜೀವಮಾನದ ರನ್‌ಗಳಿಕೆಯ ಸರಾಸರಿ 57.39 ಇದ್ದರೂ, ನಾಯಕರಾಗಿ ಅವರ ಸರಾಸರಿ 38.81 ಇತ್ತು. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ನಾಯಕತ್ವದ ಒತ್ತಡ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬೇಕು.

ವಿಕೆಟ್ ಕೀಪಿಂಗ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಧೋನಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ನಾಯಕನಾಗಿ ಅವರು 15 ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಇನ್ನೊಂದು ವಿಷಯದಲ್ಲಿ ನಂ.1. ಅದೇನೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಟವಾಡಿದ ಸಮಯದ ಬಹುತೇಕ ಅವಧಿ ಅವರು ನಾಯಕನಾಗಿಯೇ ಆಡಿದ್ದಾರೆ. ಅವರು 199 ಪಂದ್ಯಗಳಲ್ಲಿ ನಾಯಕನಾಗಿ ಆಡಿದ್ದರೆ, ಆಟಗಾರನಾಗಿ 84 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಇದರರ್ಥ ನಾಯಕನ ಮೇಲಿರುವ ಒತ್ತಡವನ್ನು ಧೋನಿ ಅತ್ಯಂತ ಚೆನ್ನಾಗಿ ನಿಭಾಯಿಸಿದ್ದಾರೆ. ನಾಯಕನಾಗಿ ಅತಿಹೆಚ್ಚು ಅರ್ಧ ಶತಕ ಗಳಿಸಿದವರ ಪಟ್ಟಿಯಲ್ಲಿ ಧೋನಿಗೆ ಎರಡನೇ ಸ್ಥಾನ. ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ನಾಯಕನೂ ಹೌದು.

ನಾಯಕನಾಗಿ ಅತಿಹೆಚ್ಚು ಏಕದಿನ ಪಂದ್ಯದಲ್ಲಿ ಗೆಲವು ಸಾಧಿಸಿದ ನಾಯಕರ ಪಟ್ಟಿಯಲ್ಲಿ ಧೋನಿಗೆ ಎರಡನೇ ಸ್ಥಾನ. ಅತಿಹೆಚ್ಚು ಏಕದಿನ ಪಂದ್ಯಗಳನ್ನು ಗೆದ್ದು ವಿಶ್ವದ ಅತ್ಯುತ್ತಮ ನಾಯಕರ ಸ್ಥಾನದಲ್ಲಿ ರಿಕಿ ಪಾಂಟಿಂಗ್ ನಂ.1 ಸ್ಥಾನದಲ್ಲಿದ್ದಾರೆ. ಅದು ಅಂಕಿ ಸಂಖ್ಯೆಯ ಲೆಕ್ಕ. ಆದರೆ ನನ್ನ ಪ್ರಕಾರ ಧೋನಿಗೆ ಮೊದಲ ಸ್ಥಾನ ಸಿಗಬೇಕು. ಯಾಕೆಂದರೆ ಧೋನಿ ಕೀಪರ್ ಕೂಡ ಹೌದು. ಏಕದಿನ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಪ್ರತಿ ಬಾಲ್ ಮೇಲೂ ಗಮನ ಕೇಂದ್ರೀಕರಿಸಬೇಕು. ಜತೆಗೆ ನಾಯಕ ಸ್ಥಾನದ ಒತ್ತಡ. ರಿಕಿ ಪಾಂಟಿಂಗ್ ಒನ್‌ಡೌನ್ ಆಟಗಾರ. ಆದರೆ ಧೋನಿ ಐದು- ಆರನೇ ಆಟಗಾರನಾಗಿ ಬ್ಯಾಟಿಂಗ್ ಇಳಿಯುತ್ತಿದ್ದರು. ಒಳ್ಳೆಯ ಬ್ಯಾಟಿಂಗ್ ಪಿಚ್‌ನಲ್ಲಿ ಮೇಲಿನ ಕ್ರಮಾಂಕದ ಆಟಗಾರರು ಭರ್ಜರಿ ಆಟ ಪ್ರದರ್ಶಿಸುವುದರಿಂದ ಕೆಳ ಕ್ರಮಾಂಕದಲ್ಲಿ ಆಡುವವರಿಗೆ ಅವಕಾಶವೇ ಸಿಗುವುದಿಲ್ಲ. ಸಿಕ್ಕರೂ ಕೊನೆಯ ಐದಾರು ಓವರ್‌ಗಳು ಮಾತ್ರ. ಹೆಚ್ಚು ಬ್ಯಾಟಿಂಗ್ ಮಾಡುವ ಅವಕಾಶ ಸಿಗುವುದೇ ಅತ್ಯಂತ ಕಡಿಮೆ ರನ್‌ಗಳಿಗೆ ಹೆಚ್ಚು ವಿಕೆಟ್ ಕಳೆದುಕೊಂಡ ಒತ್ತಡದ ಸಮಯದಲ್ಲಿ. ಹೀಗಿರುವಾಗಲೂ ಹೆಚ್ಚು ರನ್ ಗಳಿಸುವುದರ ಜತೆಗೆ ಉತ್ತಮ ನಾಯಕತ್ವವನ್ನೂ ತೋರಿರುವುದು ಧೋನಿಯ ಹೆಗ್ಗಳಿಕೆ.

ಸಾಕಷ್ಟು ಜನ ದಿಗ್ಗಜರು ಕ್ರಿಕೆಟ್ ಆಡಿದ್ದಾರೆ. ಆದರೆ ಮಹೇಂದ್ರ ಸಿಂಗ್ ಧೋನಿ ಎಂಬ ಜಾರ್ಖಂಡ್ ರಾಜ್ಯದ ರಾಂಚಿ ಎಂಬ ಸಣ್ಣ ಊರಿನಿಂದ ಕ್ರಿಕೆಟ್ ವಿಶ್ವಕ್ಕೆ ಕಾಲಿಡುವವರೆಗೂ ಹೆಲಿಕಾಫ್ಟರ್ ಶಾಟ್ ಎಂಬ ಹೆಸರೇ ಇರಲಿಲ್ಲ. ಅಲ್ಲಿಯವರೆಗೂ ಯಾರ್ಕರ್ ಎಂದರೆ ಬೌಲರ್‌ಗಳ ಬ್ರಹ್ಮಾಸ್ತ್ರ ಎಂದೇ ಭಾವಿಸಲಾಗಿತ್ತು. ಯಾರ್ಕರ್ ಹಾಕಿದರೆ ಅದರಿಂದ ಬೋಲ್ಡ್ ಆಗದೇ ಬಚಾವ್ ಆಗುವುದೊಂದೇ ಮಾರ್ಗ ವಾಗಿತ್ತು. ಆದರೆ ಯಾರ್ಕರ್ ಬಾಲನ್ನೂ ಸಿಕ್ಸರ್ ಬಾರಿಸುವುದು ಹೇಗೆ ಎಂಬ ಅನೂಹ್ಯ ಕಲೆಯನ್ನು ಧೋನಿಯೇ ತೋರಿಸಿದ್ದು. ಬೌಲರ್‌ಗಳು ಬ್ರಹ್ಮಾಸ್ತ್ರ ಪ್ರಯೋಗ ಮಾಡಲೇ ಹೆದರುವಂತೆ ಮಾಡಿದ್ದು ಧೋನಿಯ ಹೆಗ್ಗಳಿಕೆ. ಇದೇ ಹೆಲಿಕಾಫ್ಟರ್ ಶಾಟ್ ಮೂಲಕ ಹಲವು ಗೆಲುವುಗಳನ್ನು ತಂದುಕೊಟ್ಟಿದ್ದಾರೆ. 2011ರ ವಿಶ್ವಕಪ್ ಫೈನಲ್‌ನಲ್ಲಿ ಸಿಕ್ಸರ್ ಹೊಡೆದ ರೀತಿ ಎಂದಿಗೂ ಮರೆಯಲು ಸಾಧ್ಯವಿಲ್ಲ.

ಧೋನಿಗೂ ಉಳಿದ ಕ್ರಿಕೆಟ್ ಆಟಗಾರರಿಗೂ ಇದ್ದ ವ್ಯತ್ಯಾಸವೆಂದರೆ ಲೆಕ್ಕಾಚಾರ. ಕೊನೇ ಕ್ಷಣದಲ್ಲಿ ಯಾವ ಯಾವ ಬೌಲರ್‌ಗಳಿದ್ದಾಾರೆ? ಎಷ್ಟು ಬಾಲ್‌ಗಳಿವೆ? ಎಷ್ಟು ರನ್ ಬೇಕು? ಯಾವ ಬೌಲರ್‌ಗೆ ಕೊನೆಯ ಓವರ್ ನೀಡಬಹುದು? ಯಾವ ಬೌಲರ್‌ನನ್ನು ಟಾರ್ಗೆಟ್ ಮಾಡಬೇಕು? ಎಂಬಿತ್ಯಾದಿ ಲೆಕ್ಕವೆಲ್ಲ ಅವರ ತಲೆಯಲ್ಲಿ ಸರಾಗವಾಗಿ ಸುತ್ತುತ್ತಿತ್ತು. ಎಷ್ಟೇ ಒತ್ತಡವಿದ್ದರೂ ಅದನ್ನು ಎಂದು ಧೋನಿ ತೋರಿಸಿಕೊಂಡಿದ್ದೇ ಇಲ್ಲ. ಕೊನೆಯ ಓವರ್‌ನಲ್ಲಿ 20 ರನ್ ಬೇಕಿದ್ದರೂ ಅತ್ಯಂತ ನಿರಾಳವಾಗಿ ಬ್ಯಾಟಿಂಗ್ ನಿಲ್ಲುತ್ತಿದ್ದ. ಬಹುಶಃ ಈ ನಿರಾಳ ಅಥವಾ ಸ್ಥೈರ್ಯವೇ ಬೌಲರ್‌ನನ್ನು ಕುಗ್ಗಿಸುತ್ತಿತ್ತು.
ಅದೇ ಅವರ ಯಶಸ್ಸಿನ ಗುಟ್ಟು.

ಅವರು ಎಷ್ಟು ನಿರಾಳವಾಗಿರುತ್ತಿದ್ದರು ಎಂಬುದನ್ನು ಮೊನ್ನೆ ಮೊನ್ನೆ ಸಂಜಯ್ ಮಾಂಜ್ರೇಕರ್ ಹೇಳಿದ ಮಾತುಗಳಿಂದ ಅರ್ಥಮಾಡಿಕೊಳ್ಳಬಹುದು. ಮಾಂಜ್ರೇಕರ್ ಆಗ ಆಯ್ಕೆ ಸಮಿತಿಯಲ್ಲಿದ್ದರು. ಅವರು ಧೋನಿಯನ್ನು ನಾಯಕನ್ನಾಗಿ ಮಾಡುವ ಬಗ್ಗೆ ಯೋಚಿಸುತ್ತಿದ್ದರು. ಅದಕ್ಕೂ ಮೊದಲು ಅವರ ಜತೆ ಒಂದಷ್ಟು ಸಂಗತಿಗಳನ್ನು ಚರ್ಚಿಸಲು ಬಯಸಿದ್ದರು. ಇಬ್ಬರೂ ಒಂದೇ ದಿನ ಕೋಲ್ಕತಾಗೆ ಹೋಗುತ್ತಿರುವ ವಿಷಯ ತಿಳಿಯಿತು. ಆಗ ಮಾಂಜ್ರೇಕರ್ ಅವರೇ ತಮ್ಮ ವಿಮಾನ ಬದಲಿಸಿ ಧೋನಿ ಜತೆಗೆ ಪ್ರಯಾಣ ಬೆಳೆಸಿದರು. ಎರಡು ತಾಸು ವಿಮಾನದಲ್ಲಿ ಮಾತಾಡಬಹುದು ಎಂಬದು ಮಾಂಜ್ರೇಕರ್ ಅವರ ಇರಾದೆಯಾಗಿತ್ತು. ಆದರೆ ವಿಮಾನ ನೆಲ ಬಿಟ್ಟು ಹಾರುತ್ತಿದ್ದಂತೆ ನಿದ್ರೆಗೆ ಜಾರಿದ ಧೋನಿ ಕೋಲ್ಕತಾದಲ್ಲಿ ವಿಮಾನ ಲ್ಯಾಂಡ್ ಆದಾಗಲೇ ಎಚ್ಚರಗೊಂಡಿದ್ದು!

ಚಿಂತೆ ಇಲ್ಲದವನಿಗೆ ನಿದ್ರಿಸಲು ಸಂತೆಯಾದರೇನು ವಿಮಾನವಾದರೇನು! ಎಲ್ಲರೂ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುತ್ತಾರೆ. ಆದರೆ ಧೋನಿ ಆ ಮಾತಿಗೆ ಅಪವಾದ. ಯಾಕೆಂದರೆ ಅವರು ಮೊದಲು ಆಡುತ್ತಿದ್ದುದು ಹಾಕಿ. ಅವರು ಶಾಲೆಯಲ್ಲಿ ಹಾಕಿ ತಂಡದ ಗೋಲ್‌ಕೀಪರ್ ಆಗಿದ್ದರು! ಗೋಲ್‌ಕೀಪರ್ ಆಗಿದ್ದ ಅನುಭವದ ಆಧಾರದಲ್ಲಿ ಕ್ರಿಕೆಟ್ ಆಡುವಾಗ ವಿಕೆಟ್ ಕೀಪಿಂಗ್ ಸಿಗುತ್ತಿತ್ತು. ವಿಕೆಟ್ ಕೀಪಿಂಗ್‌ಗಾಗಿಯೇ ಧೋನಿ ಭಾರತ ತಂಡಕ್ಕೂ ಆಯ್ಕೆಯಾಗಿದ್ದು. 1997-9816 ವರ್ಷದೊಳಗಿನವರ ವಿನು ಮಂಕಡ್ ಪಂದ್ಯಾವಳಿಯಲ್ಲಿ ಧೋನಿಯ ಆಟ ಆಯ್ಕೆೆದಾರರ ಗಮನ ಸೆಳೆಯಿತು. ಅಲ್ಲಿಂದ 19 ವರ್ಷದೊಳಗಿನವರ ತಂಡ, ನಂತರ ಬಿಹಾರ ರಣಜಿ ತಂಡಕ್ಕೆ ಆಯ್ಕೆಯಾದರು. ರಣಜಿಯಲ್ಲಿ ಅಸ್ಸಾಂ ವಿರುದ್ಧದ ಮೊದಲ ಪಂದ್ಯದಲ್ಲಿ ಗಳಿಸಿದ್ದು 68 ರನ್. ಆದರೂ ರಣಜಿಯಲ್ಲಿ 2003ರವರೆಗೂ ಧೋನಿಯ ಸರಾಸರಿ 40 ರನ್ ಮಾತ್ರ. ಧೋನಿ ಕ್ರಿಕೆಟ್ ಜೀವನದಲ್ಲಿ ತಿರುವು ನೀಡಿದ್ದು ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದು. 2003ರಲ್ಲಿ ಕೀನ್ಯಾದಲ್ಲಿ ನಡೆದ ಪಾಕಿಸ್ತಾನ, ಭಾರತ ಮತ್ತು ಕಿನ್ಯಾದ ಎ ತಂಡಗಳ ತ್ರಿಕೋನ ಸರಣಿಯಲ್ಲಿ ಧೋನಿ 70 ರನ್‌ಗಳ ಸರಾಸರಿಯಲ್ಲಿ ಒಟ್ಟು 362 ರನ್‌ಗಳಿಸಿದರು. ಅದರಲ್ಲಿ ಪಾಕಿಸ್ತಾನದ ವಿರುದ್ಧದ ಎರಡು ಶತಕ ಸೇರಿತ್ತು. ಇದು ಭಾರತ ಕ್ರಿಕೆಟ್ ತಂಡದ ಆಯ್ಕೆದಾರರ ಗಮನ ಸೆಳೆಯಿತು.

ಬಾಂಗ್ಲಾದೇಶದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಧೋನಿ ಮೊದಲ ಪಂದ್ಯದಲ್ಲಿ ಸೊನ್ನೆಗೆ ರನ್‌ಔಟ್! ಧೋನಿಯ ನಿಜವಾದ ಪರಿಚಯವಾಗಿದ್ದು ಅವರ ಐದನೇ ಏಕದಿನ ಪಂದ್ಯದಲ್ಲಿ ಅವರು ಪಾಕಿಸ್ತಾನ ವಿರುದ್ಧ 123 ಎಸೆತಗಳಲ್ಲಿ 148 ರನ್ ಗಳಿಸಿದಾಗ. ಆಗ ಭಾರತದ ಕ್ರಿಕೆಟ್ ಅಭಿಮಾನಿಗಳೆಲ್ಲ ಒಮ್ಮೆ ಈ ಉದ್ದ ಕೂದಲಿನ ಹುಡುಗನತ್ತ ಅಚ್ಚರಿಯ ದೃಷ್ಟಿ ಬೀರಿದರು. 2005ರಲ್ಲಿ ನವೆಂಬರ್‌ನಲ್ಲಿ ಪಂದ್ಯವೊಂದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 299 ರನ್‌ಗಳ ಗುರಿ ನೀಡಿತ್ತು. ಆ ಪಂದ್ಯದಲ್ಲಿ ಧೋನಿಯೊಬ್ಬರೇ 143 ಎಸೆಗಳಲ್ಲಿ 183 ರನ್ ಬಾರಿಸಿ, ಗೆಲುವು ತಂದಿತ್ತರು.
ಸಾಮಾನ್ಯವಾಗಿ ವಿಕೆಟ್ ಕೀಪರ್‌ಗಳು ಒಳ್ಳೆಯ ಬ್ಯಾಟಿಂಗ್ ಮಾಡಿದರೆ ಅದು ಬೋನಸ್. ಆದರೆ ಧೋನಿಯ ವಿಷಯದಲ್ಲಿ ಕೀಪಿಂಗೇ ಬೋನಸ್ ಎಂಬಂತಾಗಿದೆ. ಧೋನಿ ಇಷ್ಟೆಲ್ಲ ಗೆಲುವುಗಳನ್ನು ತಂದುಕೊಟ್ಟರೂ ಗೆದ್ದಾಗ ಬೀಗಲಿಲ್ಲ. ಸೋತಾಗ ಜರ್ಜರಿತರಾಗಲಿಲ್ಲ. ಸೋಲು ಗೆಲುವನ್ನು ಸಾಮನವಾಗಿ ಸ್ವೀಕರಿಸುವ ಗುಣ ಧೋನಿಯಲ್ಲಿತ್ತು. ಅವರ ಬ್ಯಾಟಿಂಗ್ ಎಷ್ಟು ಅಗ್ರೆಸ್ಸೀವ್ ಆಗಿತ್ತೋ ಅವರು ಅಷ್ಟೇ ಕೂಲ್ ಕ್ಯಾಪ್ಟನ್ ಆಗಿರುತ್ತಿದ್ದರು.ಅದಕ್ಕೇ ಅವರಿಗೆ ಕ್ಯಾಪ್ಟನ್ ಕೂಲ್ ಎಂಬ ಹೆಸರು.

ಧೋನಿ ಈಗ ಭಾರತ ತಂಡದ ನಾಯಕತ್ವ ಬಿಟ್ಟಿರಬಹುದು. ಆದರೆ ಕ್ರಿಕೆಟ್ ಅಲ್ಲ. ಅವರು ತಂಡದಲ್ಲಿ ಆಟಗಾರನಾಗಿ ಮುಂದುವರಿಯಲಿದ್ದಾರೆ. ಅವರೀಗ ಅನುಭವೀ ಆಟಗಾರನ ಸ್ಥಾನ ನಿಭಾಯಿಸಬೇಕಿದೆ. ಅವರಿಂದ ಇನ್ನಷ್ಟು ಕೊನೆಯ ಓವರ್‌ಗಳ ಆಟ, ಹೆಲಿಕಾಫ್ಟರ್ ಶಾಟ್‌ಗಳನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ ಸದಾ ಅವರೇ ಬಂದು ಕೊನೆಯ ಓವರ್‌ನಲ್ಲಿ ಪಂದ್ಯ ಗೆಲ್ಲಿಸುತ್ತಾರೆಂದು ನಿರೀಕ್ಷಿಸುವುದು ತಪ್ಪಾದೀತು. ಕಾಲಕ್ಕೆ ತಕ್ಕಂತೆ ಅವರ ಆಟ, ಜವಾಬ್ದಾರಿ ಬದಲಾಗಬಹುದು. ಅವರ ಜವಾಬ್ದಾರಿಯನ್ನು ಹೊಸಬರು ನಿಭಾಯಿಸಬಲ್ಲರೇನೊ.

ಇಲ್ಲಿ ಇನ್ನೊಂದು ಪ್ರಸಂಗ ಹೇಳಲೇಬೇಕು.
ಧೋನಿ ಮೈದಾನದಲ್ಲಿ ಮಾತ್ರ ಭರ್ಜರಿ ಬ್ಯಾಟ್ ಬೀಸುತ್ತಿದ್ದರು ಎಂದು ಭಾವಿಸಬೇಡಿ. ಪತ್ರಿಕಾಗೋಷ್ಠಿಗಳಲ್ಲೂ ಅವರು ಬಾರಿಸಿದ ಸಿಕ್ಸರ್‌ಗಳಿಗೆ ಕೊರತೆಯಿಲ್ಲ. ಒಮ್ಮೆ ವಿದೇಶದಲ್ಲಿ ಪತ್ರಕರ್ತನೊಬ್ಬ ಅವರಿಗೆ ಇತ್ತೀಚೆಗೆ ‘ನೀವು ಯಾವಾಗ ನಿವೃತ್ತಿಯಾಗುತ್ತೀರಾ?’ ಎಂಬ ಪ್ರಶ್ನೆ ಕೇಳಿದ್ದ. ಬಹುಶಃ ಬೇರೆಯವರಾಗಿದ್ದರೆ ಸಿಟ್ಟಿಗೇಳುತ್ತಿದ್ದರೇನೊ. ಆದರೆ ಧೋನಿ ಆ ಪತ್ರಕರ್ತನನ್ನೇ ವೇದಿಕೆಗೆ ಕರೆದು. ಅವನ ಬಳಿ ‘ಮೈದಾನದಲ್ಲಿ ನಾನು ರನ್‌ಗಾಗಿ ಓಡುವುದನ್ನು ನೋಡಿದಾಗ ನಾನು ಫಿಟ್ ಇದ್ದೇನೆಂದು ಅನ್ನಿಸುವುದಿಲ್ಲವೇ?’ ಎಂದು ಪ್ರಶ್ನಿಸಿದರು. ಆತ ‘ಖಂಡಿತ ಫಿಟ್ ಇದ್ದೀರಿ’ ಅಂದ. ‘ನನ್ನ ಫಿಟ್‌ನೆಸ್ ಮತ್ತು ರನ್‌ಗಳಿಕೆಗಳನ್ನು ನೋಡಿದರೆ ನಾನು 2019ರ ವಿಶ್ವಕಪ್ ತನಕ ಆಡಬಲ್ಲೆ ಎನಿಸುತ್ತದೆಯೇ?’ ಎಂದು ಪ್ರಶ್ನಿಸಿದರು. ಅದಕ್ಕೂ ಆ ಪತ್ರಕರ್ತರ ‘ಖಂಡಿತ ಆಡಬಲ್ಲರಿ’ ಎಂದ.

ನೀವು ಕೇಳಿದ ಪ್ರಶ್ನೆಗೆ ನೀವೇ ಉತ್ತರಿಸಿದ್ದೀರಿ ಎಂದು ಹೇಳಿ ಧೋನಿ ಪತ್ರಿಕಾಗೋಷ್ಠಿ ಮುಗಿಸಿದ್ದರು. ಕ್ರಿಕೆಟ್ ಇಷ್ಟಪಡುವವರು ಧೋನಿಯಿಂದ ಕ್ರಿಕೆಟ್ ಕಲಿಯಬಹುದು. ಆದರೆ ನಾವೆಲ್ಲರೂ ಅವರಿಂದ ಕಲಿಯಬೇಕಾದ್ದು ಸಾಕಷ್ಟಿದೆ. ಜೀವನದಲ್ಲೂ ಕ್ರಿಕೆಟ್‌ನಂತೆ ಸೋಲು ಗೆಲುವುಗಳಿರುತ್ತವೆ. ಹೇಗೆ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಬೇಕು. ಸೋಲು ಬಂದಾಗ ಕುಗ್ಗದೆ, ಗೆಲುವು ಸಿಕ್ಕಾಗ ತುಂಬ ಹಿಗ್ಗದಿರುವುದನ್ನು ಧೋನಿಯಿಂದ ಕಲಿಯಬೇಕು. ನಾವು ಚಿಕ್ಕ ಚಿಕ್ಕ ವಿಷಯಕ್ಕೆ ಕೂಗಾಡುತ್ತೇವೆ. ಸಿಟ್ಟಾಗುತ್ತೇವೆ. ಎಂತಹ ಒತ್ತಡದ ಪರಿಸ್ಥಿತಿಯೇ ಇರಲಿ, ಯಾರೇ ಕ್ಯಾಚ್ ಬಿಡಲಿ, ಪಂದ್ಯ ಸೋಲಲಿ ಧೋನಿ ಕೂಗಾಡಿದ್ದು, ಕೈ ತೋರಿಸಿದ್ದು, ಮುಖದಲ್ಲಿ ಅಸಹನೆ ತೋರಿದ್ದನ್ನು ಯಾರೂ ನೋಡಿಲ್ಲ. ಧೋನಿಯ ಅಸಹನೆಯ ಮುಖವನ್ನು ಬಹುಶಃ ಯಾರೂ ನೋಡಿಯೇ ಇಲ್ಲ. ಧೋನಿಯ ಕ್ರಿಕೆಟ್‌ನಲ್ಲಿ ಜೀವನದ ಪಾಠವೂ ಇದೆ.

ms-dhoni-c

 •  0 comments  •  flag
Share on Twitter
Published on January 07, 2017 00:23

January 4, 2017

ಹಣ ಜಮೆ ವಿವರ

mpacc

 •  0 comments  •  flag
Share on Twitter
Published on January 04, 2017 00:12

December 31, 2016

ಇಪ್ಪತ್ತು ಸಾವಿರ ಎನ್‌ಜಿಒಗಳ ಲೈಸನ್ಸ್ ರದ್ದು, ಮತಾಂತರ ಮತ್ತು ದೇಶವಿರೋಧಿಗಳಿಗೆ ಮೋದಿ ಗುದ್ದು!

ಇಪ್ಪತ್ತು ಸಾವಿರ ಎನ್‌ಜಿಒಗಳ ಲೈಸನ್ಸ್ ರದ್ದು, ಮತಾಂತರ ಮತ್ತು ದೇಶವಿರೋಧಿಗಳಿಗೆ ಮೋದಿ ಗುದ್ದು!



ಡಿಸೆಂಬರ್ 27ಕ್ಕೆ ಮಾಧ್ಯಮಗಳಲ್ಲಿ ಒಂದು ವರದಿ ಪ್ರಕಟವಾಗುತ್ತದೆ. ಅದನ್ನು ನೋಡಿ ಕಳ್ಳಬೆಕ್ಕುಗಳ ಎದೆ ಒಡೆದು ಹೋಗುತ್ತವೆ. ‘ಭಾರತದಲ್ಲಿರುವ 33,000 ಎನ್‌ಜಿಓಗಳ ಪರಿಶೀಲನೆ ಮಾಡಿ, 20,000 ಎನ್‌ಜಿಒಗಳು ಎಫ್‌ಸಿಆರ್ ಎ (Foreign Contribution Regulation Act) ನಿಯಮಗಳನ್ನು ಉಲ್ಲಂಸಿದ್ದರಿಂದ ಅವುಗಳ ಪರವಾನಗಿಯನ್ನು ರದ್ದು ಮಾಡಲಾಗಿದೆ.’ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರಿಂದ ಇಂಥ ಒಂದು ಮಾತು ಕೇಳಿದೊಡನೆಯೇ, ಲಕ್ಷಾಂತರ ಮತಾಂತರಿಗಳು, ದೇಶದ್ರೋಹಿಗಳು, ಮಿಷನರಿಗಳು ವಿಷ ಹೊರ ಹಾಕಲೂ ಆಗದೆ, ಒಳಗಿಟ್ಟುಕೊಳ್ಳಲೂ ಆಗದೇ ಪರದಾಡಿದರು. ಎನ್‌ಜಿಒಗಳು ರದ್ದಾದರೆ ಮತಾಂತರಿಗಳು, ದೇಶದ್ರೋಹಿಗಳಿಗೇನು ಮಂಡೆಬಿಸಿ ಎಂದು ಕೇಳಬಹುದು.

ಆದರೆ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಇತರ ಬದುಕುವ ಹಕ್ಕುಗಳ ರಕ್ಷಣೆ ಮತ್ತು ಜಾಗೃತಿಗಾಗಿ ಕೆಲಸ ಮಾಡುತ್ತವೆ ಎಂದುಕೊಳ್ಳುವ ಸರಕಾರೇತರ ಸಂಸ್ಥೆ (ಎನ್‌ಜಿಒ)ಗಳ ಸಾಮ್ರಾಜ್ಯದ ಅಸಲಿ ಕಥೆಗಳ ಬಗ್ಗೆ ಸಾಮಾನ್ಯ ಮನುಷ್ಯನಿಗೆ ಏನೆಂದರೆ ಏನೇನೂ ತಿಳಿದಿಲ್ಲ. ಏಕೆಂದರೆ ಸದಾ ಜನಸಾಮಾನ್ಯನ ಬೆನ್ನ ಹಿಂದೆ ಇರುತ್ತೇವೆ ಎಂದು ಹೇಳಿಕೊಳ್ಳುವ ಇವು ಸಾಮಾನ್ಯನನ್ನು ಎಲ್ಲಿಡಬೇಕೋ ಅಲ್ಲೇ ಇಟ್ಟಿವೆ. ಅಲ್ಲದೆ ಲಾಭರಹಿತ ಚಟುವಟಿಕೆ ನಡೆಸುತ್ತಿದ್ದೇವೆ ಎಂದುಕೊಳ್ಳುವ ಬಹುತೇಕ ಎನ್‌ಜಿಒಗಳ ನಡೆ ಯಾಕೋ ಯಾವಾಗಲೂ ತೀರಾ ನಿಗೂಢವಾಗಿಯೇ ಇರುತ್ತವೆ.

ಹಾಗಾಗಿ ಈ ಸರಕಾರೇತರ ಸಂಸ್ಥೆಗಳ ಬಗ್ಗೆ ಜನ ತಿಳಿದುಕೊಂಡ ಸಂಗತಿಗಳು ತೀರಾ ಕಡಿಮೆ. ಮೊನ್ನೆ ತಾನೇ ಕೇಂದ್ರ ಸರಕಾರ ಇಪ್ಪತ್ತು ಸಾವಿರ ಎನ್ ಜಿಒಗಳ ಪರವಾನಗಿಯನ್ನು ರದ್ದು ಮಾಡಿದಾಗ ಇದೇಕೆ ಎಂದು ಕೆಲವರಿಗೆ ಅನಿಸಿರಲೂಬಹುದು. ಪರವಾನಗಿ ರದ್ದು ಸರಿಯೇ ಎಂಬ ಪ್ರಶ್ನೆ ಮೂಡಿರಲೂಬಹುದು. ಎನ್‌ಜಿಒಗಳಿಂದ ಆಡಳಿತಕ್ಕೆ, ದೇಶಕ್ಕೆ ಆದ ಪ್ರಯೋಜನಗಳೇನು ಎಂಬ ಜಿಜ್ಞಾಸೆಗಳೂ ಆರಂಭವಾಗಿರಬಹುದು. ಪರವಾನಗಿ ರದ್ದು ದೇಶದ ಆರ್ಥಿಕ, ಸಾಮಾಜಿಕ ರಂಗಕ್ಕೆ ಹೊಡೆತ ಬೀಳಲಿದೆಯೇ? ಅವುಗಳ ಕಾರ್ಯಗಳಿಗೆ ಹರಿದು ಬರುವ ಸಂಪನ್ಮೂಲಗಳ ಮೂಲವೆಲ್ಲಿದೆ? ಹಾಗಾದರೆ ಸರಕಾರದ ನಿರ್ಧಾರಕ್ಕೆ ಕಾರಣಗಳೇನು? ಎಂಬ ಗೊಂದಲಗಳೂ ಮೂಡಿರಬಹುದು. ಎನ್‌ಜಿಒಗಳೆಂದರೆ ಹಾಗೆ. ಆವು ಜನರನ್ನು ಹಾಗೆ ಇಟ್ಟಿವೆ. ಜಾಗತಿಕವಾಗಿ ಇಂದು 10 ದಶಲಕ್ಷ ಎನ್‌ಜಿಒಗಳು ವಿವಿಧ ಧ್ಯೇಯೋದ್ದೇಶವಿಟ್ಟು ಕಾರ್ಯಾಚರಿಸುತ್ತಿವೆ.

ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಪ್ರತೀ 400 ಜನರಿಗೆ ಒಂದು ಎನ್‌ಜಿಒ ಕಾರ್ಯಾಚರಿಸುತ್ತಿದೆ! ಅಂದರೆ ನಾವು ಸೇರುವ ಮದುವೆ, ಸಭೆ, ಸಣ್ಣ ಕಾರ್ಯಕ್ರಮಗಳಿಗೆ ಸೇರುವ ಸಣ್ಣ ಸಂಖ್ಯೆಯ ಗುಂಪಿನಷ್ಟು ಜನಕ್ಕೂ ಒಂದೊಂದು ಎನ್‌ಜಿಒಗಳಿವೆ! ಸ್ಥಳೀಯ ಸಂಸ್ಥೆಗಳಿಂತಲೂ ನಮ್ಮಲ್ಲಿ ಎನ್‌ಜಿಒಗಳಿವೆ. ನಮ್ಮ-ನಿಮ್ಮೆಲ್ಲರ ಉದ್ಧಾರದ ನೆಪದಲ್ಲೂ ಎನ್‌ಜಿಒಗಳಿವೆ ಎಂದರೆ ಆಶ್ಚರ್ಯವಾಗುತ್ತದಲ್ಲವೇ? ತಮಾಷೆ ಯೆಂದರೆ ಸಮಾಜ ತನ್ನ ಪಾಡಿಗೆ ಮುಂದೆ ಸಾಗುತ್ತಿದೆ. ಆದರೆ ನಮ್ಮ ತಲೆಯೆಣಿಸುತ್ತಾ ಯಾವುದೋ ಒಂದು ಸಂಸ್ಥೆ ನಡೆಯುತ್ತಿದೆ. ಇನ್ನು ಈ ಎನ್‌ಜಿಒಗಳು ಅದೆಷ್ಟು ಶ್ರೀಮಂತವೆಂದರೆ ಇವುಗಳ ಸಂಪತ್ತನ್ನು ದೇಶವೊಂದರ ಪಟ್ಟಿಯಲ್ಲಿಟ್ಟರೆ ಐದನೆಯ ದೊಡ್ಡ ಜಿಡಿಪಿ ಹೊಂದಿರುವ ದೇಶಗಳ ಸಾಲಿನಲ್ಲಿ ಅವು ನಿಲ್ಲುತ್ತದೆ. ಹಾಗಾದರೆ ಪ್ರತೀ 400 ಜನಕ್ಕೆ ಒಂದು ಎನ್‌ಜಿಒ ಇರುವ ಭಾರತದಲ್ಲಿ ಅದರ ಸಂಪತು ಇನ್ನೆಷ್ಟಿರಬಹುದು? 2015ರಲ್ಲಿ ಪ್ರಪಂಚದ ಶೇ.31.5 ರಷ್ಟು ಜನರು ಸ್ವಯಂಪ್ರೇರಿತರಾಗಿ ಈ ಎನ್‌ಜಿಒಗಳಿಗೆ ದೇಣಿಗೆಗಳನ್ನು ನೀಡಿದ್ದರು. ಅಂದರೆ ದಾನಿಗಳು ಸ್ವಯಂಪ್ರೇರಿತ ರಾಗಿ ಶ್ರೀಮಂತ ಸಾಮ್ರಾಜ್ಯವೊಂದನ್ನು ಕಟ್ಟಿದ್ದರು.

ಎನ್‌ಜಿಒಗಳಲ್ಲಿ ಕೆಲಸ ಮಾಡುವವರಲ್ಲಿ ಶೇ.75ರಷ್ಟು ಉದ್ಯೋಗಿಗಳು ಮಹಿಳೆಯರೇ ಇದ್ದಾರೆ. ಎನ್‌ಜಿಒಗಳು ಹೆಚ್ಚಿರುವ ದೇಶಗಳೆಲ್ಲವೂ ಇಂದಿಗೂ ಮುಂದುವರಿಯುತ್ತಿರುವ/ಅಬಿವೃದ್ಧಿಶೀಲ ದೇಶಗಳು ಎಂದೇ ಕರೆಸಿಕೊಳ್ಳುತ್ತಿವೆ. ಇವಿಷ್ಟು ಎನ್‌ಜಿಒಗಳ ಬಗ್ಗೆ ಸಾಮಾನ್ಯರಿಗೆ ಅಚ್ಚರಿ ಹುಟ್ಟಿಸಿರುವ ಮಾಹಿತಿಗಳು. ಮುಂದುವರಿಯುತ್ತಿರುವ ದೇಶಗಳಲ್ಲಿ ಎಲ್ಲವನ್ನೂ ಅಭಿವೃದ್ಧಿ ಪಡಿಸುತ್ತೇವೆ ಎಂದುಕೊಂಡು ಹಲವು ವಿದೇಶಿ ಸಂಸ್ಥೆಗಳು ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಗಳ ದೇಶಗಳಿಗೆ ಲಗ್ಗೆ ಇಟ್ಟವು. ಆದರೆ ಅರೆಶತಮಾನಗಳು ಕಳೆದರೂ ಅಲ್ಲಿನ ದೇಶಗಳನ್ನು ಅವು ಕರೆಯುವ, ಭಾವಿಸುವ ದಾಟಿಯಲ್ಲಿ ಕಿಂಚಿತ್ತೂ ವ್ಯತ್ಯಾಸವಾಗಿಲ್ಲ. ಇನ್ನೂ ಅವುಗಳಿಗಿರುವ ಮುಂದುವರಿಯುತ್ತಿರುವ ಎನ್ನುವ ಹಣೆಪಟ್ಟಿ ಹೋಗಿಲ್ಲ. ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಏಕಾಗಿ ಈ ಎನ್ ಜಿಒಗಳು ಎಂಬ ಪ್ರಶ್ನೆಗಳು ಮೂಡುವ ಹೊತ್ತಿಗೆ ಅವು ತಮ್ಮ ಬುಡವನ್ನು ಭದ್ರಪಡಿಸಿಕೊಂಡಾಗಿದ್ದವು. ಅವುಗಳ ಸಂಶಯಾಸ್ಪದ ನಡೆಗಳು, ಆಡಳಿತ ವಿರೋಧಿ ವರ್ತನೆಗಳನ್ನೂ ಕೆಲವು ವಿದೇಶಿ ಮೂಲದ ಎನ್‌ಜಿಒಗಳು ಇಟ್ಟುಕೊಂಡಾಗ ಕೆಲವರು ಅವುಗಳ ಬಗ್ಗೆ ಧ್ವನಿ ಎತ್ತಲಾರಂಭಿಸಿದ್ದರು.

ಕೆಲವು ವಿದೇಶಿ ಮೂಲದ ಎನ್ ಜಿಒಗಳ ಆಕ್ಷೇಪಣೀಯ ವರ್ತನೆಗಳಿಂದ ಪ್ರಾಮಾಣಿಕ ಉದ್ದೇಶ ಹೊಂದಿರುವ ಎನ್‌ಜಿಒಗಳು ಮುಖ ತಗ್ಗಿಸುವಂತಾದವು. ಆಗಲೂ ಇಲ್ಲಿನ ಉದ್ಧಾರಕ್ಕೆ ಬಂದ ಎನ್ ಜಿಒಗಳೇಕೆ ಹೀಗೇಕೆ ವರ್ತಿಸುತ್ತವೆ ಎಂಬುದು ಯಾರಿಗೂ ಸ್ಪಷ್ಟವಾಗಲಿಲ್ಲ. ಅವುಗಳ ಹಣದ ಮೂಲ ತಿಳಿಯಲಿಲ್ಲ. ಹಾಗಾದರೆ ನಿಜಕ್ಕೂ ಈ ಎನ್‌ಜಿಒಗಳ ಪರಿಕಲ್ಪನೆ ಎಲ್ಲಿಯದ್ದು? ಅಸಲಿಗೆ ಅವುಗಳೇಕೆ ಇಲ್ಲಿವೆ? ಅಸಲಿ ಉದ್ದೇಶವೇನು? ಎಂಬುದರ ಹುಡುಕಾಟ ಆರಂಭವಾಯಿತು. ಆ ಹುಡುಕಾಟದ ಹಾದಿಯಲ್ಲಿ ಹಲವು ಭಯಾನಕ ಸತ್ಯಗಳು ತೆರೆದುಕೊಂಡವು. ಒಮ್ಮೆ ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಎನ್ ಜಿಒಗಳನ್ನು ಉಲ್ಲೇಖಿಸುತ್ತಾ, ಬಹಿರಂಗವಾಗಿ ನಾವು ಜಗತ್ತಿನ ಮೂಲೆ ಮೂಲೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವೇನು ಕತ್ತಲಲ್ಲಿ ಕೆಲಸ ಮಾಡುತ್ತಿಲ್ಲ, ಬಹಿರಂಗವಾಗಿಯೇ ಮಾಡುತ್ತಿದ್ದೇವೆ ಎಂದು ಹೇಳಿದ್ದರು. ಜಾರ್ಜ್ ನಿನ ಪ್ರೊಫೇಸರಾಗಿದ್ದ ಅಲ್ಲೆನ್ ವಿನ್ಸ್‌ಟನ್ ಈಗ ನಾವು ಮಾಡುತ್ತಿರುವ ಹಲವು ಪ್ರಯೋಗಗಳನ್ನು ಸಿಐಎ 25 ವರ್ಷಗಳ ಹಿಂದೆಯೇ ಮಾಡಿತ್ತು ಎಂದು ಅಮೆರಿಕ ತಂತ್ರಗಾರಿಕೆಯನ್ನು ಕೊಚ್ಚಿಕೊಂಡಿದ್ದರು. ಅಂದರೆ ಈ ಎನ್‌ಜಿಒ ಎಂಬುದು ಅಮೆರಿಕದ ಕಲ್ಪನೆಯ ಕೂಸು.

1940ರಲ್ಲಿ ಅಮೆರಿಕ ವಿವಿಧ ದೇಶಗಳಲ್ಲಿ ತನ್ನ ಬೇಹುಗಾರಿಕೆ ಜಾಲವನ್ನು ಹುಟ್ಟುಹಾಕಲು ಬೆಳೆಸಿದ ಸಂಸ್ಥೆಗಳೇ ಮುಂದೆ ಎನ್‌ಜಿಒಗಳಾಗಿ ಬದಲಾದವು ಎಂಬ ವಾದವೂ ಇದೆ. ಅದಕ್ಕೆ ಪೂರಕವಾಗಿ ಎನ್‌ಜಿಒಗಳೆಂಬ ಲಾಭರಹಿತ ಸಂಸ್ಥೆಗಳು ಯತೇಚ್ಚವಾಗಿ ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಿಗೆ ಎಕನಾಮಿಕ್ ಹಿಟ್ಮನ್‌ಗಳಾಗಿ ನುಗ್ಗಿದ ಸಾಕ್ಷಿಗಳೂ ಇವೆ. ಅಲ್ಲಿನ ನಾಗರಿಕ ದಂಗೆಗಳು ಹಾಗೂ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಅಧ್ಯಯನ ಮಾಡಿ ಅಲ್ಲಿನ ಸೂಕ್ಷ್ಮವನ್ನು ಅರಿಯಲು ಇಂಥ ಸಂಸ್ಥೆಗಳ ತಂತ್ರಗಾರಿಕೆಯನ್ನು ಅನುಸರಿಸಿದವು. ಅಂಥ ತಂತ್ರಗಾರಿಕೆಯ ಫಲವೇ ಈ ಎನ್‌ಜಿಗಳು ಎಂಬ ವಾದವನ್ನೂ ಹಲವರು ಇಡುತ್ತಾರೆ. ಅಂದರೆ ಇವೆಲ್ಲವುಗಳ ಅಂತಿಮ ಗುರಿ ಜಗತ್ತನ್ನು ತನ್ನ ಬೆರಳಲ್ಲಿ ಕುಣಿಸುವಂತೆ ಮಾಡುವುದು. ತನ್ನ ಧೋರಣೆಯನ್ನು ಹರಡುವುದು, ವಿಶ್ವದ ದೊಡ್ಡಣ್ಣನ ಸ್ಥಾನವನ್ನು ಅಲಂಕರಿಸುವುದು. ಮುಂದೆ ಅದೇ ತಂತ್ರವನ್ನು ಹಲವು ಶ್ರೀಮಂತ ದೇಶಗಳು ಅನುಸರಿಸಿದವು.

ಶ್ರೀಮಂತ ದೇಶಗಳ ನೀತಿಗಳೇ ಮುಂದೆ ಎಲ್ಲಾ ವಿದೇಶಿ ಎನ್ ಜಿಒಗಳ ಪ್ರಣಾಳಿಕೆಗಳಾಗಿ ಬದಲಾದವು. ಅಂದರೆ ಇಂದು ನಾವು ಕಾಣುವ ಯಾವುದೇ ವಿದೇಶಿ ಮೂಲದ ಎನ್‌ಜಿಒಗಳ ಉದ್ದೇಶ ಮತ್ತು ಗುರಿ ಶ್ರೀಮಂತಿಕೆಯ ಅಹಂಕಾರದಿಂದ ಪಡಿಮೂಡಿದ ಅಚ್ಚುಗಳಂತೆಯೇ ಕಾಣುತ್ತವೆ. ಎಲ್ಲಾ ವಿದೇಶಿ ಎನ್‌ಜಿಒಗಳೂ ಅಲ್ಲಿನ ಸಾಮಾಜಿಕ, ಸಾಂಸ್ಕೃತಿಕ ವಾತಾವರಣವನ್ನೇ ಮುಖ್ಯ ಉದ್ದೇಶಗಳಾಗಿ ಇಟ್ಟುಕೊಳ್ಳುತ್ತವೆ. ಮಕ್ಕಳ ಹಕ್ಕುಗಳು, ಮಹಿಳಾ ಹಕ್ಕುಗಳು, ಬಡತನ, ರೋಗಮುಕ್ತ ಸಮಾಜ, ಸಮಾನತೆ, ಸಹಭಾಳ್ವೆ, ಪರಿಸರಗಳನ್ನು ತಾವು ತೆರಳುವ ದೇಶಗಳಿಗೆ ಅವು ಹೊತ್ತೊಯ್ಯುತ್ತವೆ. ಅಂಥ ವಾತಾವರಣ ತಾವು ಲಗ್ಗೆ ಇಡುವ ದೇಶಗಳಲ್ಲಿ ಇರದಿದ್ದರೂ ಅದರ ವಿರುದ್ಧ ಹೋರಾಟ, ಜಾಗೃತಿ ಎನ್ನುವ ಧೋರಣೆ ಈ ಎನ್‌ಜಿಒಗಳದ್ದು. ಅಂಥಲ್ಲಿ ಸಹಜವಾಗಿ ವಿದೇಶಿ ಹಿತಾಸಕ್ತಿ ಕೆಲಸ ಮಾಡುತ್ತವೆ.

ಶಿಕ್ಷಣವನ್ನು ಅಳವಡಿಸುತ್ತೇವೆ ಎಂದು ಧಾವಿಸುವ ಎನ್‌ಜಿಒಗಳು ತಮ್ಮ ದೇಶದ ಶಿಕ್ಷಣ ಪದ್ಧತಿ, ತನ್ನ ದೇಶದ ಸಮಾನತೆಯ ವ್ಯಾಖ್ಯಾನ, ತನ್ನ ದೇಶ ಅಂದುಕೊಳ್ಳುವ ಬಡತನ, ತಮ್ಮ ನಾಗರಿಕ ಹಕ್ಕುಗಳು, ತನ್ನ ದೇಶದ ಕಾನೂನು, ಅಲ್ಲಿನ ಸಾಮಾಜಿಕ ಮನಸ್ಥಿತಿ, ತನ್ನ ದೇಶದ ಸಮಸ್ಯೆಗಳನ್ನೇ ತಲೆತುಂಬಿಕೊಂಡು ಆಯಾಯ ದೇಶಗಳನ್ನು ನೋಡತೊಡಗುತ್ತದೆ. ಇಂಥ ಇತಿಹಾಸ ಹೊಂದಿರುವ ವಿದೇಶಿ ಮೂಲದ ಎನ್‌ಜಿಒಗಳ ಚಟುವಟಿಕೆ ಮತ್ತು ವರ್ತನೆಗಳನ್ನು ನೋಡಿದರೆ ನಿಜಕ್ಕೂ ಭಾರತಕ್ಕೆ ಅಂಥವುಗಳ ಆವಶ್ಯಕತೆ ಇದೆಯೇ ಎನಿಸತೊಡಗುತ್ತವೆ. ಅಷ್ಟಕ್ಕೂ ಇಲ್ಲಿ ಈ ವಿದೇಶಿ ಹಣ ಹರಿದುಬರುವ ಎನ್‌ಜಿಒಗಳಿಂದ ಸಾಧಿಸಿದ ಒಂದಾದರೂ ಮೈಲಿಗಲ್ಲನ್ನು ತೋರಿಸಲಾಗುವುದಿಲ್ಲ?

ನಾಯಿಕೊಡೆಗಳಂತೆ ಹುಟ್ಟಿರುವ ಎನ್‌ಜಿಒಗಳ ಅಬ್ಬರವನ್ನು ನೋಡಿದರೆ ಈ ಹೊತ್ತಿಗೆ ಭಾರತದಲ್ಲಿ ಎಲ್ಲರೂ ಬಡತನ ಮುಕ್ತರಾಗಿ ಅಲ್ಲದಿದ್ದರೂ ಕನಿಷ್ಟ ಎಲ್ಲರೂ ಬ್ಯಾಂಕ್ ಖಾತೆಯನ್ನಾದರೂ ಹೊಂದಿರಬೇಕಿತ್ತು. ದೇಶದ ಎಲ್ಲಾ ಹೆಣ್ಣು ಮಕ್ಕಳು ಶಿಕ್ಷಣ ಪಡೆದಿರಬೇಕಿತ್ತು, ಹೆಣ್ಣು ಭ್ರೂಣಹತ್ಯೆಯ ವಿರುದ್ಧ ಬ್ರಹತ್ ಜನಜಾಗ್ರತಿಯಾಗಬೇಕಿತ್ತು. ದೇಶದ ಎಲ್ಲಾ ಅಡುಗೆ ಮನೆಗಳೂ ಹೊಗೆಮುಕ್ತವಾಗಬೇಕಿತ್ತು, ಪರಿಸರ ರಕ್ಷಣೆ ಸರಕಾರಗಳ ಯೋಜನೆಗಳ ಹೊರತಾಗಿಯೂ ಅನುಷ್ಠಾನವಾಗಬೇಕಿತ್ತು, ವನವಾಸಿಗಳು ತಮ್ಮ ಹಕ್ಕುಗಳನ್ನು ಯಾವತ್ತೋ ಪಡೆದಿರಬೇಕಿತ್ತು. ಆದರೆ ಆಶ್ಚರ್ಯ!

ಗ್ರಾಮೀಣ ಭಾರತದ ಅಡುಗೆ ಮನೆ ಹೊಗೆ ಮುಕ್ತವಾಗಲು ನರೇಂದ್ರ ಮೋದಿ ಪ್ರಧಾನಿಯಾಗಬೇಕಾಯಿತು. ಹೆಣ್ಣುಮಕ್ಕಳ ಶಿಕ್ಷಣ ಜಾಗ್ರತಿಗೆ, ಹೆಣ್ಣು ಭ್ರೂಣ ಹತ್ಯೆ ತಡೆಯಲು ನರೇಂದ್ರ ಮೋದಿ ಬರುವವರೆಗೂ ಯಾವ ಎನ್‌ಜಿಒಗಳಿಗೂ ಸಾಧ್ಯವಾಗಲಿಲ್ಲ. ಇನ್ನು ಅಂಥ ಸರಕಾರೇತರ ಸಂಸ್ಥೆಗಳು ಇದ್ದರೆಷ್ಟು ಬಿಟ್ಟರೆಷ್ಟು? ಕೆಲವು ಹಳೆಯ ಉದಾಹರಣೆಗಳನ್ನೇ ನೋಡಿ ಪ್ರಿಸನ್ ಮಿನಿಷ್ಟ್ರಿ ಆಫ್ ಇಂಡಿಯಾ ಸರಕಾರೇತರ ಸಂಸ್ಥೆಯ ಹೆಸರು ಕೇಳಿದೊಡನೆಯೇ ಒಮ್ಮೆ ಗೊಂದಲ ಉಂಟಾಗುತ್ತದೆ. ಇದನ್ನು ಯಾವುದೋ ಸರಕಾರದ ಒಂದು ಅಂಗಸಂಸ್ಥೆ ಎಂದುಕೊಳ್ಳುವವರೇ ಹೆಚ್ಚು. ಆದರೆ ಪ್ರಿಸನ್ ಮಿನಿಷ್ಟ್ರಿ ಆಫ್ ಇಂಡಿಯಾದ ಉದ್ದೇಶವೇ ಬೇರೆ. ದೇಶದ ಬಹುತೇಕ ಎಲ್ಲಾ ಜೈಲುಗಳಿಗೆ ಲಗ್ಗೆ ಇಟ್ಟಿರುವ ಈ ಸಂಸ್ಥೆ, ಖೈದಿಗಳ ಮನಪರಿವರ್ತನೆಯ ಹೆಸರಲ್ಲಿ ಮತಪರಿವರ್ತನೆ ಮಾಡುತ್ತಿದೆ ಎಂಬ ಆಪಾದನೆಯನ್ನು ಹೊತ್ತುಕೊಂಡಿದೆ.

ಖೈದಿಗಳ ಏಕತಾನತೆ, ಖಿನ್ನತೆ, ಜಡತ್ವ, ಮಾನಸಿಕ ವೇದನೆ ಮೊದಲಾದವನ್ನು ಹೋಗಲಾಡಿಸು ವುದು, ಬಿಡುಗಡೆಗೊಂಡ ಖೈದಿಗಳ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಅದರ ಉದ್ದೇಶ ಎಂದು ಅದು ಹೇಳಿಕೊಳ್ಳುತ್ತದೆ. ಕೆಲ ವರ್ಷಗಳ ಹಿಂದೆ ದೆಹಲಿ ಮೂಲದ  India policy foundation ಎಂಬ ಸಂಸ್ಥೆ ಈ ಬಗ್ಗೆ ಅಧ್ಯಯನವೊಂದನ್ನು ಮಾಡಿ ಈ ಎನ್‌ಜಿಒದ ನಿಗೂಢ ನಡೆಯನ್ನು ವರದಿ ಮಾಡಿತ್ತು. Gospel for asia ಎಂಬ ವೆಬ್‌ಸೈಟೊಂದಿದೆ. ಭಾರತದಿಂದ ಈ ಜಾಲತಾಣವನ್ನು ನೋಡಿದರೆ ತಾಯಿಯೊಬ್ಬಳು ಮಗುವನ್ನು ಎತ್ತಿಕೊಂಡ ಚಿತ್ರ ಮತ್ತು ಅದರ ಕೆಳಗೆ ಮಕ್ಕಳ ಪೌಷ್ಠಿಕತೆ, ಭವಿಷ್ಯ, ಶಿಶು ಮರಣ ಮೊದಲಾದ ಸಂಗತಿಗಳ ಬಗ್ಗೆ ಪ್ರಸ್ತಾಪವಿದೆ. ಆದರೆ ಅದೇ ವೆಬ್‌ಸೈಟನ್ನು ವಿದೇಶದಿಂದ ನೋಡಿದರೆ ಅಲ್ಲಿರುವುದೆಲ್ಲವೂ ಸುವಾರ್ತೆಗಳು!

ದೇಶದಿಂದ ಮತಪ್ರಚಾರಕ್ಕಾಗಿ ಹಣತರುವುದು ಮತ್ತು ಭಾರತದಲ್ಲಿ ಕಾಳಜಿಯ ಮುಖ ಹೊತ್ತು ಅದನ್ನು ಅನುಷ್ಠಾನ ಮಾಡುವುದು ಅದರ ಉದ್ದೇಶ. ಇಂಗ್ಲೆಂಡ್ ಮೂಲದ ಮತ್ತೊಂದು ಸಂಘಟನೆ action aid ಭಾರತದ ಮಕ್ಕಳಿಗೆ ಶೌಚಾಲಯವಿಲ್ಲ, ಪೌಷ್ಠಿಕ ಆಹಾರವಿಲ್ಲ ಎಂಬ ನೆಪವೊಡ್ಡಿ ಭಾರತದ ವಿವಿಧ ಎನ್ ಜಿಒಗಳಿಗೆ ಹಣ ಸರಬರಾಜು ಮಾಡುತ್ತದೆ. ಹಾಗಾದರೆ ಇನ್ನೂ ಆ ಎನ್‌ಜಿಒಗೆ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಲಿಲ್ಲವೇಕೆ? 2006-11ರ ಅವಧಿಯಲ್ಲಿnorth Karnataka Jesuit educational and charitable society  ಎಂಬ ಎನ್ ಜಿಒ 236 ಕೋಟಿ ರು. ವಿದೇಶಿ ದೇಣಿಗೆಯನ್ನೂ,  children fund inc ಎಂಬ ಎನ್‌ಜಿಒ 174 ಕೋಟಿ ರು.ಗಳನ್ನೂ, the church council for child and youth care ಕೂಡಾ 174 ಕೋಟಿ ರು. ವಿದೇಶಿ ದೇಣಿಗೆಯನ್ನು ಪಡೆದಿದೆ ಎಂದು ಈ ವರದಿ ತಿಳಿಸುತ್ತದೆ. ಇಷ್ಟೊಂದು ಬೃಹತ್ ಮೊತ್ತದ ತೆರಿಗೆ ಮುಕ್ತ ಹಣದ ಹೊರೆಯನ್ನು ಹೊರುವವರು ಯಾರು? ಇದು ಕಪ್ಪು ಹಣದ ಕೇಂದ್ರವಾದರೇ ಇದ್ದೀತೇ?

ದೇಶದಲ್ಲಿ ಕೆಲವು ಎನ್‌ಜಿಒಗಳ ಧ್ಯೇಯೋದ್ದೇಶಗಳನ್ನು ನೋಡಿದರೆ ಇಲ್ಲಿ ನಿಜಕ್ಕೂ ಇಂಥ ಸಮಸ್ಯೆಗಳು ಇವೆಯೇ ಎಂದು ಅಚ್ಚರಿಯಾಗುತ್ತದೆ. ವಿದೇಶಿ ಮೂಲದ ಎನ್‌ಜಿಒ ಒಂದು ಭಾರತದಲ್ಲಿ ಕಪ್ಪುು ಬಣ್ಣದ ಜನರು ಸಾಕಷ್ಟು ಕೀಳರಿಮೆಯನ್ನು ಅನುಭವಿಸುತ್ತಿದ್ದಾರೆಂದೂ, ಕಪ್ಪುವರ್ಣ ದೇಶದ ಜಾಗತಿಕ ಸಮಸ್ಯೆಯೆಂದೂ ಪ್ರಚಾರ ಮಾಡುತ್ತಿದೆ. ಅಮೆರಿಕ ಅಥವಾ ಯೂರೋಪುಗಳಂತೆ ವರ್ಣಭೇದದ ಸಮಸ್ಯೆಯನ್ನು ಅನುಭವಿಸಿದ ಉದಾಹರಣೆಗಳನ್ನು ನಾವೆಂದಾದರೂ ಭಾರತದಲ್ಲಿ ಕಂಡಿದ್ದೇವೆಯೇ? ಅಥವಾ ಕೇಳಿದ್ದೇವೆಯೇ? ವರ್ಣಭೇದ ಭಾವನೆಯಿಂದ ಘಟಿಸಿದ ಒಂದಾದರೂ ಆವಾಂತರ ನಮಗೆ ನೆನಪಿದೆಯೇ? ಹಾಗಾದರೆ ನಮ್ಮ ದೇಶಕ್ಕೆ ಅಂಥದ್ದೊಂದು ಎನ್‌ಜಿಒದ ಆವಶ್ಯಕತೆಯೇನಿದೆ? ಹಾಗಾದರೆ ಅದು ಹುಟ್ಟಿಕೊಂಡ ಅಸಲಿ ಉದ್ದೇಶವಾದರೂ ಏನು? ದೇಶದಲ್ಲಿ ಅತ್ಯಂತ ಹೆಚ್ಚು ಕ್ರಿಶ್ಚಿಯನ್ ಮತಾಂತರಕ್ಕೆ ಹಣ ಸಂದಾಯ ಮಾಡುತ್ತಿರುವುದೇ ಈ ಎನ್‌ಜಿಒಗಳು. ನೀವು ಮತಾಂತರದ ಮಾಫಿಯಾ ನೋಡಬೇಕೆಂದರೆ ತಮಿಳುನಾಡು, ಕೇರಳ ಕಡೆ ಹೋಗಬೇಕು.

ಮಿಷನರಿಗಳ ಸಾರ್ವಜನಿಕ ಕಾರ್ಯಕ್ರಮಕ್ಕೆ ಬರುವ ಅರ್ಧಕ್ಕರ್ಧ ಜನ ಮೈಮೇಲೆ ದೆವ್ವ ಬಂದವರಂತೆ ಆಡಿ ಸಮೂಹ ಸನ್ನಿ ಸೃಷ್ಟಿ ಮಾಡಿ, ಆ ನಾಟಕದ ದೆವ್ವ ಬಂದವರಿಗೆಲ್ಲ ಸರಿ ಮಾಡುವಂತೆ ಮಾಡಿ, ಇತರರ ತಲೆಯನ್ನೂ ಹಾಳು ಮಾಡುತ್ತಾರೆ. ಇವರಿಗೆಲ್ಲ ತಿಂಗಳಿಗೆ ಇಂತಿಷ್ಟು ಎಂದು ಸಂಬಳವನ್ನು ಸಹ ಎನ್‌ಜಿಒಗಳು ಫಿಕ್ಸ್ ಮಾಡುತ್ತವೆ. ಇವರೆಲ್ಲರ ಮುಖ್ಯ ಗುರಿ ಹಿಂದೂಗಳನ್ನು ಮತಾಂತರ ಮಾಡುವುದು ಮತ್ತು ಅದೊಂದೇ! ಈ ಕೆಲಸದಲ್ಲಿ ತೊಡಗಿರುವ ಆರೋಪ ಎದುರಿಸುತ್ತಿರುವ ಇನ್ನೂ 3,000 ಎಂಜಿಒಗಳ ಪರವಾನಗಿಯನ್ನು ಕೇಂದ್ರ ಸರಕಾರ ಪರಿಶೀಲಿಸುತ್ತಿದೆ. ಇಂಥ ಸರಕಾರೇತರ ಸಂಸ್ಥೆಗಳನ್ನು ರದ್ದು ಮಾಡಿದರೆ ತಪ್ಪೇನು?

ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಎಂಬ ಎನ್‌ಜಿಒ ಕಾರ್ಯಕ್ರಮ ದಲ್ಲಿ ಭಾರತ ವಿರೋಧಿ ಘೋಷಣೆ ಏಕೆ ಮೊಳಗುತ್ತವೆ? ಗ್ರೀನ್ ಪೀಸ್ ನಡೆಸುವ ಪರಿಸರ ಹೋರಾಟದ ಹಿಂದೆ ಪರಿಸರ ರಕ್ಷಣೆಗೂ ಹೆಚ್ಚಾಗಿ ಆಡಳಿತ ವಿರೋಧಿ ಧೋರಣೆಗಳೇ ಏಕಿರುತ್ತವೆ? ಪ್ರೊಟೆಕ್ಟ್ ದ ಹ್ಯೂಮನ್, ಸೇವ್ ಗರ್ಲ್ ಚೈಲ್ಡ್, ಡಾರ್ಕ್ ಈಸ್ ಬ್ಯೂಟಿಫುಲ್ ಎಂಬ ನಾನಾ ಘೋಷಣೆಗಳು ಅನಾವಶ್ಯಕವಾಗಿ ಏಕೆ ಕೇಳಿಬರುತ್ತವೆ? ದೇಶದ ಬಲ ಹೆಚ್ಚಿಸುವ ಅಭಿವೃದ್ಧಿ ಕಾರ್ಯಗಳು ಶಂಕುಸ್ಥಾಪನೆಯಾದ ಕೂಡಲೇ ವಿದೇಶಿ ಮೂಲದ ಎನ್‌ಜಿಒಗಳು ರಣಹದ್ದುಗಳಂತೆ ಎಗರೆಗರಿ ಬೀಳುತ್ತವೇಕೆ? ಸರಕಾರ ವಿರೋಧಿ ನಕ್ಸಲರಿಗೆ ಬೆಂಬಲ, ಕಾನೂನು ವಿರೋಧಿ ಕೃತ್ಯಗಳಿಗೆ ಬೆಂಬಲ ನೀಡುವ ಎನ್‌ಜಿಒಗಳನ್ನು ನಿಷೇಧಿಸದೇ ಅವುಗಳಿಗೆ ಬಿರುದು ಕೊಡಬೇಕೆ?

ಭಾರತದಲ್ಲಿ ಎನ್‌ಜಿಒಗಳು ಸೃಷ್ಟಿಸಿದ ಆವಾಂತರಗಳು ಇವಿಷ್ಟೇ ಅಲ್ಲ. ಡೋಂಗಿ ಸೆಕ್ಯುಲರಿಸಮ್ಮಿನ ಅರಚಾಟಕ್ಕೆ ಈ ಎನ್‌ಜಿಒಗಳ ಪಾತ್ರ ಬಹಳ ದೊಡ್ಡದು. ಕಪ್ಪು ಬಣ್ಣವಿರಲಿ, ಬಡತನವಿರಲಿ, ಮಹಿಳಾ ಹಕ್ಕುಗಳಿರಲಿ ಅವೆಲ್ಲದರ ಬಗ್ಗೆ ಹೋರಾಟ-ಜಾಗ್ರತಿ ಮೂಡಿಸುತ್ತೇವೆಂದುಕೊಳ್ಳುವ ಎಲ್ಲಾ ಎನ್‌ಜಿಒಗಳ ಅಂತಿಮ ವಾದ ಭಾರತದಲ್ಲಿ ಏನೆಂದರೆ ಏನೂ ಸರಿ ಇಲ್ಲ. ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ. ಅದಕ್ಕೆ ಕಾರಣ ಭಾರತದ ಸಾಂಪ್ರದಾಯಿಕತೆ, ಇಲ್ಲಿನ ಸಂಸ್ಕೃತಿ. ಹಾಗಾಗಿ ಆ ಸಂಸ್ಕೃತಿಯನ್ನು ಮೀರುವುದೇ ಸಮಾನತೆಗೆ ಇರುವ ಮುಖ್ಯ ದಾರಿ ಎನ್ನುವುದು! ಇಂಥ ಎನ್ ಜಿಒಗಳು ಎಂದಾದರೂ ಭಾರತದ ಇತಿಹಾಸ-ಪರಂಪರೆಯನ್ನು ಅಧ್ಯಯನ ಮಾಡಿತ್ತೇ ಎಂದರೆ ಅದೂ ಇಲ್ಲ. ಅವರಿಗೆ ಅದರ ಬಗ್ಗೆ ಕಿಂಚಿತ್ ಜ್ಞಾನವೂ ಇರುವುದಿಲ್ಲ. ದೇಶದ ಪರಂಪರೆಯನ್ನು ವಿರೋಧಿಸುವ ದೇಶದ ಹಲವು ಗುಂಪುಗಳು ಅಂಥ ಎನ್ ಜಿಒಗಳೊಡನೆ ನಂಟು ಹೊಂದಿ ದೇಶದ ವ್ಯವಸ್ಥೆಯನ್ನು ಕಿತ್ತು ತಿನ್ನತೊಡಗುತ್ತಿದ್ದವು.

ಈಗ ಅಂಥ ಎನ್‌ಜಿಒಗಳ ಕೈ ಕತ್ತರಿಸಿ ಹಾಕಲಾಗಿದೆ. ದೇಶ ಮೊದಲು ಎನ್ನುವ ನಾಯಕ ಮಾಡುವುದನ್ನೇ ಮೋದಿ ಸರಕಾರ ಮಾಡಿದೆ. ಎನ್‌ಜಿಒಗಳು ಇಂದು ಎಂಥೆಂಥಾ ಸಿಹಿ ಮಾತುಗಳನ್ನಾಡುತ್ತಿವೆಯೋ ಅವೆಲ್ಲವನ್ನೂ ಮೋದಿ ಸರಕಾರ ಈಗಾಗಲೇ ಭಾಗಶಃ ಈಡೇರಿಸಿಯಾಗಿದೆ. ಇನ್ನು ಅಂಥವುಗಳ ಉಪಸ್ಥಿತಿಯೇಕೆ? ಇನ್ನೂ ಅಂಥ ಎನ್‌ಜಿಒಗಳು ಇದ್ದರೆ ಸರಕಾರ ತಾನು ನಿರುಪಯೋಗಿ ಎಂದು ಒಪ್ಪಿಕೊಂಡಂತೆ ಮತ್ತು ಸರಕಾರದ ಅಂಗಗಳಿಗೆ ಅವು ಸೆಡ್ಡು ಹೊಡೆದಂತೆ. ಈಗಾಗಲೇ ಹಲವು ದೇಶಗಳು ಅಂಥ ವಿದೇಶಿ ಮೂಲದ ಎನ್‌ಜಿಒಗಳನ್ನು ದೇಶದ ಹಿತದೃಷ್ಟಿಗೆ ಆಕ್ಷೇಪಣೀಯ ಎಂಬ ಕಾರಣಕ್ಕೆ ದೇಶದಿಂದ ಹೊರಗಟ್ಟಿದೆ. ಈಗ ಭಾರತದ ಪಾಳಿ. ಆಡಳಿತದ ರಚನೆಯಲ್ಲಿ ಮೂಗು ತೂರಿಸುವ, ಸರಕಾರಗಳ ತಲೆ ಮೇಲೆ ಕೂರುವ ಆದರೆ ಸಮಸ್ಯೆಯನ್ನು ಸದಾ ಜೀವಂತ ಇರಿಸುವ ಎನ್‌ಜಿಒಗಳು ಏಕ್ ಭಾರತ್, ಶ್ರೇಷ್ಠ ಭಾರತ್ ತತ್ತ್ವಕ್ಕೆ ಸದಾ ವಿರುದ್ಧ. ಅಲ್ಲವೇ? ಮೋದಿ ಕೊಟ್ಟ ಏಟಿಗೆ 20,000 ಎನ್‌ಜಿಒಗಳು ಕಾಲು ಮುರಿದುಕೊಂಡು ಬಿದ್ದಿವೆ. ಎಲ್ಲ ನಾಟಕಗಳನ್ನು ಬಂದ್ ಮಾಡಿ, ತಮ್ಮ ದೇಶದತ್ತ ಮುಖ ಮಾಡಿವೆ. ಇದು ಬರೀ ಟ್ರೇಲರ್ ಅಷ್ಟೇ ಸಿನಿಮಾ ಇನ್ನು ಬಾಕಿದೆ.

ngo-ban-20k

 •  0 comments  •  flag
Share on Twitter
Published on December 31, 2016 00:08

Pratap Simha's Blog

Pratap Simha
Pratap Simha isn't a Goodreads Author (yet), but they do have a blog, so here are some recent posts imported from their feed.
Follow Pratap Simha's blog with rss.