Pratap Simha's Blog, page 24
February 25, 2017
ಈ ಸ್ಫುರದ್ರೂಪಿಯನ್ನು ಕಾಲೇಜಿನ ಕಾಮನೆಗಿಂತ ಕೇಶವ ಬಲರಾಮನೇ ಹೆಚ್ಚು ಆಕರ್ಷಿಸಿದ !
ಈ ಸ್ಫುರದ್ರೂಪಿಯನ್ನು ಕಾಲೇಜಿನ ಕಾಮನೆಗಿಂತ ಕೇಶವ ಬಲರಾಮನೇ ಹೆಚ್ಚು ಆಕರ್ಷಿಸಿದ !
ಮಂಗಳವಾರ ಸಂಜೆಯವರೆಗೂ ಮೈಸೂರಿನಲ್ಲಿದ್ದು, ಅಂತ್ಯಸಂಸ್ಕಾರ ಮುಗಿಸಿ ಬೆಂಗಳೂರಿಗೆ ತೆರಳಿದ ಆರೆಸ್ಸೆಸ್‌ನ ಅಖಿಲ ಭಾರತ ಸಹ ಬೌದ್ಧಿಕ್ ಪ್ರಮುಖ್ ಮುಕುಂದರಿಂದ ರಾತ್ರಿ ಕರೆಬಂತು. ನನಗೆ ಸಮಾಧಾನದ ಒಂದೆರಡು ಮಾತನಾಡಲು ಕರೆ ಮಾಡಿದ್ದ ಅವರ ಧ್ವನಿಯಲ್ಲೇ ನೋವು, ಸಂಕಟ, ಒಂಥರಾ ಅನಾಥ ಪ್ರಜ್ಞೆ ವ್ಯಕ್ತವಾಗುತ್ತಿತ್ತು. ಜಯದೇವರು 45 ದಿನಗಳ ಹಿಂದೆ ಆಸ್ಪತ್ರೆ ಸೇರಿದಾಗಲೇ ಮುಕುಂದರಿಗೆ ಸಂಕಟ ಶುರುವಾಗಿತ್ತು. ಅಂದಮಾತ್ರಕ್ಕೆ ಜಯದೇವರು ಅಕಾಲಿಕವಾಗಿ ದೂರವಾದರು ಎಂದಲ್ಲ. ಎಂಬತ್ಮೂರು ವರ್ಷದ ಅವರದ್ದು ತುಂಬು ಹಾಗೂ ಸಾರ್ಥಕ ಬದುಕು. ಅವರ ಅಂತ್ಯ ಅನಿರೀಕ್ಷಿತವಾಗಿ ಬಂದಿದ್ದೂ ಅಲ್ಲ. 2013ರಲ್ಲೇ ಪರಲೋಕದ ಕದತಟ್ಟಿ ವಾಪಸು ಬಂದಿದ್ದರು. ಹಾಗಾಗಿ ಅಂತ್ಯ ಅನಿರೀಕ್ಷಿತವಾಗಿರಲಿಲ್ಲ. ಆದರೂ… ಮುಕುಂದರನ್ನು ಕಾಡುತ್ತಿದ್ದುದು ಜಯದೇವರ ಅನುಪಸ್ಥಿತಿ ತಂದೊಡ್ಡಿದ್ದ ಖಾಲಿ ಖಾಲಿ ಭಾವನೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಅನಾರೋಗ್ಯ ಮತ್ತು ವಯೋಮಾನದ ಇತಿಮಿತಿಗಳಿಂದಾಗಿ ಅವರೇನು ಸಂಘದ ಚಟುವಟಿಕೆಗಳಲ್ಲಿ ಅಷ್ಟಾಗಿ ತಮ್ಮನ್ನು ತೊಡಗಿಸಿಕೊಂಡಿರಲಿಲ್ಲ.
ಎಗ್ಗಿಲ್ಲದೆ ಸಾಗುತ್ತಿದ್ದ ಬಿಜೆಪಿಯನ್ನು ಸರಿದಾರಿಗೆ ತರಲು ಸಂತೋಷ್ ಜಿಯವರು ಹೆಗಲು ಕೊಟ್ಟ ನಂತರ ಸಂಘದ ಕಾರ್ಯ ಭಾರವನ್ನು ಮುಂಕುಂದರೇ ನಿಭಾಯಿಸುತ್ತಿದ್ದರು. ಆದರೂ ಭದ್ರತೆಯ ಭಾವನೆಯಿಂದ ಸಂಘದ ರಥ ಎಳೆಯಲು ಕೇಶವಕೃಪದ ಮೊದಲ ಮಹಡಿಯ ಮೂಲೆ ರೂಮಿನಲ್ಲಿ ಜಯದೇವರಿದ್ದಾರೆ ಎಂಬ ಒಂದೇ ವಿಚಾರ ಸಾಕಿತ್ತು. ಹಾಗಾಗಿ ಏನನ್ನೋ ಕಳಕೊಂಡ ಭಾವನೆ ಮುಕುಂದರನ್ನು ಆವರಿಸಿತ್ತು. ಇವತ್ತು ಸಂಘವನ್ನು, ಸಂಘಟನೆಯನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಮುಕುಂದ್‌ಜಿ, ಸಂತೋಷ್‌ಜಿ, ಅರುಣ್‌ಜಿ, ಅವರೊಂದಿಗೆ ವಾದಿರಾಜರು ಜಯದೇವರ ಗರಡಿಯಲ್ಲಿ ಪಳಗಿ ಈಗಾಗಲೇ ಕಣದಲ್ಲಿದ್ದಾರೆ. ಆದರೆ ಇವರೆಲ್ಲ ಹಲವು ಜವಾಬ್ದಾರಿ ಹೊತ್ತು, ಒಂದಿಲ್ಲೊಂದು ಕಡೆ ಸದಾ ಸಂಚಾರದಲ್ಲೇ ಇರುವುದರಿಂದ, ಜಯದೇವರೂ ದೂರವಾಗಿದ್ದರಿಂದ ಪ್ರೇರಣೆಯ ತಾಣವಾಗಿದ್ದ ಕೇಶವಕೃಪ ಮಾತ್ರ ಮೊದಲಿನಂತೆ ಕೈಬೀಸಿ ಕರೆಯುತ್ತಿಲ್ಲ.
ಒಂದು ಸ್ವಗತದೊಂದಿಗೆ ಜಯದೇವರ ಬಗ್ಗೆ ಮಾತು ಆರಂಭಿಸೋಣ ಎಂದನಿಸುತ್ತಿದೆ. ಅದು 2007, ಅದುವರೆಗೂ ಇ-ಮೇಲ್, ಫೋನ್ ಕರೆಗಳಿಗೆ ಸೀಮಿತವಾಗಿದ್ದ ಧಮಕಿ ಹಾಗೂ ಕೊಲೆ ಬೆದರಿಕೆಗಳು ನೇರವಾಗಿ ನನ್ನನ್ನು ಮುಖಾಮುಖಿಯಾಗಲು ಬಂದಿದ್ದವು. ಅಂದರೆ ಖಂಡನೆ-ಮಂಡನೆಯಲ್ಲೇ ಕಾಲ ಕಳೆಯುತ್ತಿರುವ, ಅನ್ಯ ಧರ್ಮೀಯರ ಬಗ್ಗೆ ಅಸಹನೆಯನ್ನೇ ಒಡಲಲ್ಲಿಟ್ಟುಕೊಂಡು ಹುಟ್ಟಿದವರಂತೆ ವರ್ತಿಸುವ, ಪ್ರೆರಣೆಗಾಗಿ ಪಾಕಿಸ್ತಾನದತ್ತ ನೋಡುವ ಒಂದಿಷ್ಟು ವ್ಯಕ್ತಿಗಳ ಗುಂಪು ವಿಜಯ ಕರ್ನಾಟಕ ಪತ್ರಿಕಾ ಕಚೇರಿಯನ್ನು ನುಗ್ಗಿತು. ಅಂದು ವಾರದ ರಜೆಯಲ್ಲಿದ್ದ ನನ್ನನ್ನು ಕಾಣದಿದ್ದಾಗ ಅವನನ್ನು ಬಿಡುವುದಿಲ್ಲ ಎಂದು ಕಚೇರಿಯಲ್ಲಿ ಬೊಬ್ಬೆಹಾಕಿದರು. ಈ ಘಟನೆಯ ಬೆನ್ನಲ್ಲೇ ಪತ್ರಿಕಾ ಕಚೇರಿಯ ಮುಂದೆ ಪೊಲೀಸ್ ವ್ಯಾನೊಂದು ಶಸ್ತ್ರಸಜ್ಜಿತವಾಗಿ ಬಂದು ನಿಂತಿತು. ಕಿಟಕಿ, ಬಾಗಿಲು, ಗಾಜು, ಕಂಪ್ಯೂಟರ್‌ಗಳಿಗೆ ರಕ್ಷಣೆ ಒದಗಿಸಿತು. ಆದರೆ ಅಂಕಣ ಬರೆದ ನನಗೆ ಮಾತ್ರ ಯಾರೂ ಭದ್ರತೆ ನೀಡಲಿಲ್ಲ! ಕಿಟಕಿ, ಬಾಗಿಲು, ಕಂಪ್ಯೂಟರ್ ಹಾಳಾದರೆ ಹೊಸದು ತರಬಹುದು, ರಿಪೇರಿ ಮಾಡಿಸಬಹುದು. ಆದರೆ ನನ್ನ ಕಥೆ? ಅಂದು ನನ್ನ ಜೀವದ ಯೋಚಿಸಿದವರು ಮೈ. ಚ. ಜಯದೇವರು ಮಾತ್ರ! ನನ್ನನ್ನು ಕರೆಸಿ, ಕೂಡಲೇ ಶಸ್ತ್ರಾಸ್ತ್ರ ಪರವಾನಗಿಗೆ ಅರ್ಜಿ ಹಾಕು, ಉಳಿದದ್ದನ್ನು ಸುಬ್ಬಣ್ಣ ನೋಡಿಕೊಳ್ಳುತ್ತಾರೆ, ನಾ ಮಾತನಾಡಿದ್ದೇನೆ ಎಂದರು.
ಹಾಗೆಯೇ ಮಾಡಿದೆ. ಸ್ವಲ್ಪ ವಿಳಂಬವಾದರೂ ಜಯದೇವ್‌ಜಿ ಪ್ರಯತ್ನದಿಂದಾಗಿ ವೆಪನ್ ಲೈಸೆನ್ಸ್ ಬಂತು. ಆದರೆ ಬಂದೂಕು? ಆಗ ನನಗೆ ಬರುತ್ತಿದ್ದ ಸಂಬಳಕ್ಕೆ ಯೋಗ್ಯ ಬದುಕು ನಡೆಸುವುದೇ ಕಷ್ಟವಾಗಿತ್ತು. ಅಂಥ ಪರಿಸ್ಥಿತಿ! ಲೈಸೆನ್ಸ್ ಬಂದ ಒಂದೆರಡು ತಿಂಗಳಲ್ಲೇ ಮತ್ತೆ ಜಯದೇವ್ ಜಿಯಿಂದ ಕರೆ ಬಂತು. ಅದಕ್ಕೂ ಮೊದಲೇ ಒಂದಷ್ಟು ರಿವಲ್ವಾರ್, ಪಿಸ್ತೂಲ್‌ಗಳನ್ನು ತರಿಸಿ ಪರೀಕ್ಷಿಸಿ ಕೆಲವನ್ನು ಆಯ್ಕೆ ಮಾಡಿದ್ದರು. ಇವುಗಳಲ್ಲಿ ನಿನಗೆ ಯಾವುದು ಬೇಕು ತಗೋ ಎಂದರು. ನಾನು ಆಯ್ಕೆ ಮಾಡಿದ ಫ್ರೆಂಚ್ ನಿರ್ಮಿತ .26 ಪಿಸ್ತೂಲ್ ಒಂದೆರಡು ದಿನಗಳಲ್ಲೇ ಕೈ ಸೇರಿತು. ಇವತ್ತು ನನ್ನ ಬಳಿ ಬಲಿಷ್ಠವಾದ ಬೇರೊಂದು ಆಯುಧವಿರಬಹುದು. ಆದರೆ ಒಬ್ಬ ತಂದೆ ಮಗನ ಜೀವದ ಬಗ್ಗೆ ತೋರುವಂಥ ಕಾಳಜಿ, ಕಳಕಳಿಯನ್ನು ಅಂದು ತೋರಿದ್ದು ಜಯದೇವರು. ನನ್ನ ‘ನರೇಂದ್ರ ಮೋದಿ; ಯಾರೂ ತುಳಿಯದ ಹಾದಿ’ ಪುಸ್ತಕದ ಬಿಡುಗಡೆಗೆ ಅರುಣ್ ಜೇಟ್ಲಿಯವರನ್ನು ಕರೆಸಿ ಹುರಿದುಂಬಿಸಿದ್ದೂ ಅವರೇ. ಇಂತಹದ್ದು ನನ್ನೊಬ್ಬನ ಕಥೆಯಲ್ಲ.
ಜಯದೇವರ ಮಾರ್ಗದರ್ಶನದಲ್ಲಿ ಬದುಕು ಕಟ್ಟಿಕೊಂಡ, ಸಂಘಟನೆಯಲ್ಲಿ ತೊಡಗಿಕೊಂಡ ಅಸಂಖ್ಯ ಯುವಜನರಿದ್ದಾರೆ. ನಿಮಗೆ ರಾಷ್ಟ್ರೋತ್ಥಾನ ಸಾಹಿತ್ಯ ಹೊರತಂದ ಭಾರತ ಭಾರತಿ ಪುಸ್ತಕ ಮಾಲೆ ಗೊತ್ತಲ್ಲವೆ? ತಾತ್ಯಾ ಟೋಪೆ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಸಾವರ್ಕರ್, ರಾಜರಾಮಮೋಹನ ರಾಯ್, ದಯಾನಂದ ಸರಸ್ವತಿ, ಸುಭಾಷ್‌ಚಂದ್ರ ಬೋಸ್, ಭಗತ್‌ಸಿಂಗ್, ಖುದೀರಾಮ್, ಮದನ್‌ಲಾಲ್ ಧಿಂಗ್ರಾರಿಂದ ಡಾ. ಕೋಟ್ನಿಸ್‌ವರೆಗೂ ಸುಮಾರು 512 ಮಹಾನ್ ಚೇತನಗಳ, ನಾಯಕರ, ದಿಗ್ಗಜರ, ಸ್ವಾತಂತ್ರ್ಯ ಕಲಿಗಳ ಸಂಕ್ಷಿಪ್ತ ಪುಸ್ತಕ ಸರಣಿ ಅದು. ಜಯದೇವರು ಸ್ವತಃ ಒಬ್ಬ ಬರಹಗಾರರಲ್ಲ. ಆದರೆ ಬರಹದ ಆಳ ವಿಸ್ತಾರ, ಆಗಾಧ ಶಕ್ತಿ, ಪರಿಣಾಮ ಅವರಿಗೆ ಗೊತ್ತಿತ್ತು. ಹಾಗಾಗಿ 512 ಆದರಣೀಯ ವ್ಯಕ್ತಿಗಳ ಹೆಸರನ್ನು ಪಟ್ಟಿ ಮಾಡಿ, 512 ಲೇಖಕರನ್ನೂ ತಡಕಿ ಭಾರತ ಭಾರತಿ ಸಂಪುಟವನ್ನು ತಂದ ವ್ಯಕ್ತಿ ಜಯದೇವರು. ಒಂದು ಕೋಟಿಗೂ ಅಧಿಕ ಪುಸ್ತಕಗಳು ಮುದ್ರಣಗೊಂಡವು, ಪ್ರತಿಯೊಂದು ಶಾಲೆ, ಲೈಬ್ರರಿಯನ್ನೂ ಸೇರಿದವು. ಅದರಿಂದ ಒಂದೆರಡು ತಲೆಮಾರುಗಳೇ ಜೀವನಕ್ಕೆ ಬೇಕಾದ ಪ್ರೇರಣಿ ಪಡೆದುಕೊಂಡವು.
ರಾಷ್ಟ್ರೋತ್ಥಾನ ಸಾಹಿತ್ಯ ಎಂಬುದು ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವ ಒಂದು ವಿಶ್ವವಿದ್ಯಾಲಯದಂತೆ ಕೆಲಸ ಮಾಡತೊಗಿತು. ಇಂದು ರಾಷ್ಟ್ರೋತ್ಥಾನ ಭಾರತದ ಪ್ರಮುಖ ಪ್ರಕಾಶನಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ನಮ್ಮಂಥ ಎಷ್ಟೋ ಮನಸ್ಸುಗಳಿಗೆ ಪ್ರೇರಣೆ ಕೊಡುತ್ತಿದೆ. ಜಯದೇವರು ಸಂಘದ ಮೂಲ ಕಾರ್ಯಾಲಯ ವಾದ ಕೇಶವ ಶಿಲ್ಪದ ಒಂದು ಸಣ್ಣ ಕೊಠಡಿಯಲ್ಲಿ ಕುಳಿತು ನಮಗೆ ಸಾಹಿತ್ಯ ಹಾಗೂ ಸ್ವಾತಂತ್ರ್ಯ ಹೋರಾಟದ ಜಗತ್ತನ್ನೇ ತೆರೆದುಕೊಟ್ಟರು. ನೀವು ಭಾರತ ಭಾರತಿ ಪುಸ್ತಕ ಸರಣಿಯ ಒಂದೊಂದು ಪುಸ್ತಕಗಳಲ್ಲೂ ಒಬ್ಬ ಲೇಖಕರ ಹೆಸರನ್ನು ನೋಡಬಹುದು. ಆದರೆ 512 ಪುಸ್ತಕಗಳ ಪ್ರತಿಪುಟಗಳಲ್ಲೂ ಕಾಣದ ಒಂದು ಹೆಸರಿದೆ, ಅದು ಜಯದೇವರದ್ದು. ಅವರೊಬ್ಬ ಸಂಘದ ಪ್ರಚಾರಕನೋ, ಕಟ್ಟಾಳೋ ಮಾತ್ರವಾಗಿರಲಿಲ್ಲ! ಇಂದು ರಾಷ್ಟ್ರೋತ್ಥಾನ ಟ್ರಸ್ಟ್ 30ಕ್ಕೂ ಹೆಚ್ಚು ಶಾಲೆ-ಕಾಲೇಜುಗಳನ್ನು ನಡೆಸುತ್ತಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ನಡೆಯುತ್ತಿದೆ. ಅವುಗಳ ಕೇಶವ ಶಿಲ್ಪಿ ಜಯದೇವ್. ಸಾಹಿತ್ಯ, ಶಾಲೆ ಮಾತ್ರವಲ್ಲ, ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್! ನಿಮಗೆ ಗೊತ್ತಾ ನಮ್ಮ ಮೈಸೂರಿನ ಸುತ್ತೂರು ಮಠದಲ್ಲಿ ಯುವ ಯತಿಗಳಿಗೆ ತರಬೇತಿ ನೀಡುವ ಭಾರತೀಯ ಸಂಸ್ಕೃತಿ ಪ್ರತಿಷ್ಠಾನವಿದೆ.
ವರ್ಷಕ್ಕೊಮ್ಮೆ ಅಲ್ಲಿ ಎಲ್ಲ ಜಾತಿ, ವರ್ಗದ ಯುವ ಯತಿಗಳಿಗೂ ಕಾರ್ಯಾಗಾರ ನಡೆಯುತ್ತದೆ. ಸುಖಾಸುಮ್ಮನೆ ಕಾವಿ ಹಾಕಿ ಯತಿಗಳಾಗುವುದಲ್ಲ. ನಮ್ಮ ಧರ್ಮದ ರೀತಿ-ರಿವಾಜು, ಆಚಾರ- ಪದ್ಧತಿಗಳು ಗೊತ್ತಿರಬೇಕು, ಅವುಗಳ ಮಹತ್ವ ತಿಳಿದಿರಬೇಕು. ಭಕ್ತರಿಗೆ ಬುದ್ಧಿವಾದ ಹೇಳುವ ಮೊದಲು ಯತಿಗಳು ಮೊದಲು ತಮ್ಮ ಜೀವನದಲ್ಲಿ ಅವುಗಳನ್ನು ಶ್ರದ್ಥೆಯಿಂದ ಪಾಲಿಸಬೇಕು. ಇಂತಹ ಅಂಶಗಳನ್ನು ಹೇಳಿ ಕೊಟ್ಟು ಅಣಿಗೊಳಿಸಬೇಕಾದ ಅಗತ್ಯವಿದೆ ಎಂಬುದನ್ನು ಮನಗಂಡು ಭಾರತೀಯ ಸಂಸ್ಕೃತಿ ಪ್ರತಿಷ್ಠಾನದ ಸ್ಥಾಪನೆಗೆ ಪ್ರೇರಣೆ ಕೊಟ್ಟ ವ್ಯಕ್ತಿ ಜಯದೇವ್. ಇನ್ನೂ ಸ್ವಲ್ಪ ಹಿಂದಕ್ಕೆ ಹೋಗಿ. ನಮ್ಮ ಸ್ವಾಮೀಜಿಗಳ ನಡುವೆಯೇ ಒಮ್ಮತವಿರಲಿಲ್ಲ! ಒಂದೇ ಕಾರ್ಯಕ್ರಮಕ್ಕೆ ಎರಡು, ಮೂರು ಜಾತಿಯ ಸ್ವಾಮಿಗಳನ್ನು ಕರೆದರೆ ಹಠಕ್ಕೆ ಬಿದ್ದವರಂತೆ ತಾನೂ ಲೇಟೋ, ಅವರು ಲೇಟೋ ಎಂಬಂತೆ ವಿಳಂಬವಾಗಿ ಬರುತ್ತಿದ್ದರು. ಏಕೆಂದರೆ ಮೊದಲು ಬಂದರೆ ನಂತರ ಬಂದವರಿಗೆ ಎದ್ದುನಿಂತು ಗೌರವ ಕೊಡಬೇಕಾಗುತ್ತದೆ ಎಂಬ ಅಹಂ ಅಡ್ಡಬರುತ್ತಿತ್ತು.
ಇಂತಹ ಪರಿಸ್ಥಿತಿ ಇರುವಾಗ ಸ್ವಾಮೀಜಿಗಳು ಪರಸ್ಪರ ಗೌರವ ಪ್ರೀತಿಯಿಂದ ಒಂದೇ ವೇದಿಕೆಯಲ್ಲಿ ಸೇರುವಂತೆ ಮಾಡಿದ ಸಂಧಾನಕಾರ ಮತ್ತಾರೂ ಅಲ್ಲ ಜಯದೇವ್. ಸುತ್ತೂರು, ಸಿದ್ಧಗಂಗಾ, ಆದಿಚುಂಚ ನಗಿರಿ ಎಲ್ಲರಿಗೂ ಬೇಕಾದ, ಎಲ್ಲರೂ ಆದರದಿಂದ ಕಾಣುತ್ತಿದ್ದ ವ್ಯಕ್ತಿ ಅವರು. ಆದಿಚುಂಚನಗಿರಿಯ ಬಾಲಗಂಗಾಧರ ಸ್ವಾಮೀಜಿಯವರಂತೂ ಜಯದೇವರ ಪ್ರೀತಿಗೆ ಕರಗಿ ಬೆಂಗಳೂರಿನಲ್ಲಿ ನಡೆದ ಹಿಂದು ಸಮರಸತಾ ಸಂಗಮಕ್ಕೆ ಆಗಮಿಸಿ, ಹಿಂದುಗಳು ಎಲ್ಲಿಗೆ ಹೋಗುವುದಕ್ಕಾಗುತ್ತದೆ, ಹಿಂದುಗಳಿಗೆ ಇರುವುದೊಂದೇ ಭಾರತ ಎಂದು ಗುಡುಗಿದ್ದರು! ಇಂದಿಗೂ ಸಂಘ ಹಾಗೂ ಒಕ್ಕಲಿಗರ ಮಠದ ನಡುವೆ ಅವಿನಾಭಾವ ಸಂಬಂಧವಿದ್ದರೆ ಅದರ ಕೊಂಡಿ ಜಯದೇವ್. ಮಾದಾರ ಚೆನ್ನಯ್ಯ ಸ್ವಾಮೀಜಿಯವರು ಮೈಸೂರಿನಲ್ಲಿ ಬ್ರಾಹ್ಮಣ ಬೀದಿಗಳಲ್ಲಿ ಪಾದಯಾತ್ರೆ ಮಾಡಿದರೆ ಅದರ ಹಿಂದೆಯೂ ಜಯದೇವರ ಮಾರ್ಗದರ್ಶನ ಮತ್ತು ಮುಂದಾಲೋಚನೆ ಇತ್ತು. ನಿಮಗೆ ಗೊತ್ತಾ, ಬರೀ ಇತಿಹಾಸಕಾರರು ಮಾತ್ರ ಸದಸ್ಯರಾಗಬಹುದಾದ ಶತಮಾನ ಕಂಡಿರುವ ಮಿಥಿಕ್ ಸೊಸೈಟಿಯೆಂಬ ಎಡಬಿಡಂಗಿಗಳ ತಾಣ, ಎಡಕ್ಕೆ ವಾಲುತ್ತಿದ್ದ ಬಸವನಗುಡಿಯ ಗೋಖಲೆ ಇನ್ಸ್ಟಿಟ್ಯೂಟ್, ಅಬಲಾಶ್ರಮ, ಶಿಶುಮಂದಿರ ಇವ್ಯಾವುವೂ ಆರೆಸ್ಸೆಸ್ಸಿನ ಸಂಸ್ಥೆಗಳಲ್ಲ. ಆದರೆ ಇಂದು ಅವು ಆರಸ್ಸೆಸ್ಸಿನ ಮಾರ್ಗದರ್ಶನದಲ್ಲಿವೆ! ಅದರ ಹಿಂದಿರುವ ಮೆದುಳೂ ಜಯದೇವರದ್ದೇ. ಒಬ್ಬ ಕುಶಲಮತಿ ಕಾರ್ಯತಂತ್ರಜ್ಞ, ಸ್ಟ್ರಾಟಜಿಸ್ಟ್!! ಲೆಕ್ಕದಲ್ಲಿ ಬಹಳ ಕಟ್ಟುನಿಟ್ಟು. ಹಾಗಾಗಿ ಸಂಘದ ಕಟ್ಟಡಗಳೂ ಹೆಚ್ಚಾದವು, ಸಂಸ್ಥೆಗಳೂ ಬೆಳೆದವು. ಸ್ವಂತಕ್ಕೆ ಏನೂ ಇಲ್ಲ, ಸಂಘದ ಮೂಲಕ ಸಮಾಜಕ್ಕೆ ಎಲ್ಲ.
ಮತ್ತೊಂದು ಬಹುದೊಡ್ಡ ವಿಶೇಷತೆಯೆಂದರೆ ಅವರ ದಾಢಸಿತನ. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪನವರು ಬಂದರೂ ಕೇಶವ ಕೃಪದ ಮೊದಲ ಮಹಡಿ ಮೂಲೆ ರೂಮಿನಿಂದ ಕೆಳಗಿಳಿದು ಬರುತ್ತಿರಲಿಲ್ಲ. ಜಯದೇವರು ಕುರ್ಚಿಯಲ್ಲಿ ಆಸೀನರಾಗಿದ್ದರೆ ಬಿಎಸ್‌ವೈ, ಈಶ್ವರಪ್ಪ, ಸದಾನಂದ ಗೌಡರು ಜಮಖಾನದ ಮೇಲೆ ಕಾಲು ಮಡಚಿ ಕುಳಿತಿರುತ್ತಿದ್ದರು. ಅನಂತ ಕುಮಾರರಂತೂ ಜಯದೇವರ ಮುಂದೆ ಯಾವತ್ತೂ ಮಾತನಾಡಿದ್ದು ನಿಂತುಕೊಂಡೇ. ಸ್ವಾಮೀಜಿ ಸಾಧುಗಳಾದಿಯಾಗಿ ಯಾರೇ ಬಂದರೂ ಜಯದೇವರನ್ನು ಮೊದಲ ಮಹಡಿಗೆ ಬಂದೇ ಕಾಣಬೇಕಿತ್ತು. ಖಡಕ್ ಮಾತಿನ ಸಂತೋಷ್‌ಜಿ, ಮೃದುಮಾತು ದೃಢ ನಿಲುವಿನ ಮುಕುಂದರು ಯಾರಿಗಾದರೂ ಅಂಜಿದ್ದರೆ ಅದು ಜಯದೇವರಿಗೆ ಮಾತ್ರ.
ವಾದಿರಾಜರಂತೂ ಜಯದೇವರನ್ನು ಕೇಳದೆ ಏನೂ ಮಾಡುತ್ತಿರಲಿಲ್ಲ. ಜಯದೇವರು ಇಂತಹ ಗೌರವ ಪ್ರೀತಿಯನ್ನು ಗಳಿಸಿದ್ದು ಅವರು ನಡೆದುಕೊಂಡ ರೀತಿ ಹಾಗೂ ಕೊಟ್ಟ ಕೊಡುಗೆಯಿಂದಲೇ. ಜಯದೇವರು ಸುಮಾರು 6 ಅಡಿ 2 ಇಂಚು ಎತ್ತರದ ಸುಂದರಾಂಗ. ಆಕರ್ಷಕ ಯುವಕ ಯುವತಿಯರ ಅಡ್ಡಾ ಎಂದೇ ಹೇಳಬಹುದಾದ ನಮ್ಮ ಮೈಸೂರಿನ ಮಹಾಜನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. 65 ವರ್ಷದ ಹಿಂದೆಯೇ ಅಪ್ಪ ಸೈಕಲ್ ಕೊಡಿಸಿದ್ದರು. ಕಾಲೇಜಿನ ಕಣ್ಮಣಿಯಾಗಲು ಇದಕ್ಕಿಂತ ಇನ್ನೇನು ಬೇಕು? ಆದರೆ ಈ ಸ್ಫುರದ್ರೂಪಿಗೆ ಕಾಲೇಜಿನ ಸಹಜ ಕಾಮನೆಗಳಿಂತ ಕೇಶವ ಬಲಿರಾಮನೇ ಹೆಚ್ಚು ಆಕರ್ಷಿಸಿದ.
ಓದು ಮುಗಿದ ಮೇಲೆ ಮದುವೆಯಾಗಿ ಸುಂದರ ಸಂಸಾರದ ಬದುಕು ಕಟ್ಟಿಕೊಳ್ಳುವ ಬದಲು ಒಂದಿಡೀ ತಲೆಮಾರಿನ ಬದುಕನ್ನೇ ಬದಲಿಸಲು ಹೊರಟರು, ಎಷ್ಟೋ ಜನರ ಜೀವನದಲ್ಲಿ ತಂದೆಯ ಸ್ಥಾನ ತುಂಬಿದರು. ಆದರೂ ಅಕಾಲಿಕವಾಗಿ ವಿದ್ಯಾನಂದ ಶೆಣೈ, ಅದಾದ ನಂತರ ನಾ. ಕೃಷ್ಣಪ್ಪನವರು, ಈಗ ಜಯದೇವರು ಒಬ್ಬೊಬ್ಬರೇ ಹೊರಟು ಹೋಗುತ್ತಿದ್ದರೆ, ಸಾವು ಸಹಜವಾದರೂ ಮನಸ್ಸಿಗೆ ಸಂಕಟವಾಗುತ್ತಿದೆ. ಮಂಗಳವಾರ ಮೈಸೂರಿನಲ್ಲಿ ಜಯದೇವರ ಅಂತಿಮಯಾತ್ರೆ ಸಾಗುತ್ತಿದ್ದಾಗ ರುದ್ರಭೂಮಿಗೆ ರಸ್ತೆಯಲ್ಲಿ ಖಿನ್ನವಾಗಿ ನಡೆದುಕೊಂಡು ಬರುತ್ತಿದ್ದ ಬಿ.ಎಸ್. ಯಡಿಯೂರಪ್ಪನವರ ಮುಖ ನೋಡಿದವರಿಗೆ ಆ ಸಂಕಟ ಎಂಥಾದ್ದು ಎಂಬುದು ಅರ್ಥವಾಗುತ್ತದೆ.
February 24, 2017
February 23, 2017
ದಿನೇಶ್ ಗುಂಡೂರಾವ್ ಅವರೇ, ಸಿಕ್ಕ ಸಿಕ್ಕವರನ್ನೆಲ್ಲಾ ಜೈಲಿಗೆ ಹಾಕಿದ್ದು ನಿಮ್ಮ ಇಂದಿರಾ ಗಾಂಧಿ!
ದಿನೇಶ್ ಗುಂಡೂರಾವ್ ಅವರೇ, ಸಿಕ್ಕ ಸಿಕ್ಕವರನ್ನೆಲ್ಲಾ ಜೈಲಿಗೆ ಹಾಕಿದ್ದು ನಿಮ್ಮ ಇಂದಿರಾ ಗಾಂಧಿ!
ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪ, ಅಭಿಪ್ರಾಯಭೇದ, ಟೀಕೆ-ಟಿಪ್ಪಣಿಗಳು ಸಹಜ ಹಾಗೂ ಸಹ್ಯ ಕೂಡ ಹೌದು. ಆದರೆ ಮಾತುಗಳು ಅಥವಾ ಟೀಕೆ ಎಲ್ಲೆ ಮೀರಿದಾಗ ಅಸಹ್ಯವೆನಿಸಿಬಿಡುತ್ತದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರು, ತಮ್ಮ ಮುಖ್ಯಮಂತ್ರಿಯನ್ನು ಸಮರ್ಥಿಸಿಕೊಳ್ಳಲೇಬೇಕು. ಸಾರ್ವಜನಿಕ ಜೀವನದಲ್ಲಿ ಇವೆಲ್ಲ ಮಾಮೂಲು. ಆದರೆ ತಮ್ಮ ನಾಯಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಅವರ ಬಾಯಿಂದ ಬಂದಿರುವ ಮಾತುಗಳು ಖಂಡಿತ ಅವರಿಗೆ ಶೋಭೆ ತರುವುದಿಲ್ಲ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಚೆಕ್ ಅಪ್ ಮಾಡಿಸಿಕೊಳ್ಳಬೇಕು’ ಇವೆಲ್ಲ ಒಬ್ಬ ಕೆಪಿಸಿಸಿ ಕಾರ್ಯಾಧ್ಯಕ್ಷರು ಆಡುವಂಥ ಮಾತುಗಳೇ? ‘ಯಡಿಯೂರಪ್ಪನವರ ಆರೋಪದಲ್ಲಿ ಯಾವುದೇ ಹುರುಳಿಲ್ಲ, ನಿರಾಧಾರ ಆರೋಪ ಮಾಡಬಾರದು’ ಅಥವಾ ‘ನಾವು ಯಾವುದೇ ತನಿಖೆಗೆ ಸಿದ್ಧ’ ಎಂದು ಮರುತ್ತರ ನೀಡಬಹುದಿತ್ತು. ಅದನ್ನು ಬಿಟ್ಟು ವೈಯ್ಯಕ್ತಿಕ ನಿಂದನೆಗೆ ಇಳಿದಿದ್ದೇಕೆ? ಈ ರಾಜ್ಯವನ್ನು ಸಮರ್ಥವಾಗಿ ಹಾಗೂ ಜನಾನುರಾಗಿಯಾಗಿ ಆಳಿರುವ ಬಿಎಸ್‌ವೈರಂಥ ಹಿರಿಯ ವ್ಯಕ್ತಿಯ ವಯಸ್ಸಿಗಾದರೂ ಬೆಲೆ ಕೊಡಬಹುದಿತ್ತಲ್ಲವೆ?
ಇವರ ಮಟ್ಟಕ್ಕೇ ಇಳಿದು ನಾವೂ ಕೇಳುವುದಾದರೆ, ಸನ್ಮಾನ್ಯ ಯಡಿಯೂರಪ್ಪನವರಂತೆ ದಿನೇಶ್ ಅವರ ತಂದೆ ಗುಂಡೂರಾಯರೂ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು ತಾನೆ? ಇವತ್ತು ಯಡಿಯೂರಪ್ಪನವರೆಂದರೆ ಭಾಗ್ಯಲಕ್ಷ್ಮಿ ಯೋಜನೆ, ಸೈಕಲ್ ಕೊಟ್ಟಿದ್ದು, ರೈತರ ಸಾಲ ಮತ್ತು ಬಡ್ಡಿ ಮನ್ನಾ, ಕೆರೆಗಳಿಗೆ ನೀರು ತುಂಬಿಸಿದ್ದು, ಸುವರ್ಣಗ್ರಾಮ, ನಮ್ಮ ಊರು-ನಮ್ಮ ರಸ್ತೆ, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ವಿತರಣೆ, ಸಕ್ಕರೆ ಕಾರ್ಖಾನೆಗಳ ಪುನರುಜ್ಜೀವನ ಮತ್ತು ರೈತನ ಬೆಳೆಗೆ ಉತ್ತಮ ಬೆಂಬಲ ಬೆಲೆ, ಪ್ರತಿ ಲೀಟರ್ ಹಾಲಿಗೆ ರೈತನಿಗೆ 2 ರು. ಹೆಚ್ಚುವರಿ ನೀಡಿದ್ದು, ಸಂಧ್ಯಾಸುರಕ್ಷಾ ಯೋಜನೆ, ಯಕ್ಷಗಾನ ಮತ್ತು ಚಲನಚಿತ್ರ ಅಕಾಡೆಮಿ ಸ್ಥಾಪನೆ ಇನ್ನು ಮುಂತಾದ ಹತ್ತಾರು ಜನಪರ ಯೋಜನೆಗಳು ನೆನಪಿಗೆ ಬರುತ್ತವೆ. ಆದರೆ ಗುಂಡೂರಾಯರೆಂದರೆ? ಲಂಗೋಟಿ ಹಾಕಿಕೊಂಡು ಬೆಂಗಳೂರಿನ ಬಸವನಗುಡಿ ಈಜುಕೋಳಕ್ಕೆ ಜಿಗಿದಿದ್ದು ಮತ್ತು ರೌಡಿಗಳನ್ನು ಹುಟ್ಟುಹಾಕಿದ್ದು ಮಾತ್ರ ನೆನಪಿಗೆ ಬರುತ್ತದೆ ಅಷ್ಟೇ! ಯಡಿಯೂರಪ್ಪನವರ ಬಗ್ಗೆ ಹಗುರವಾಗಿ ಮಾತನಾಡುವ ಮೊದಲು ನಿಮ್ಮ ತಂದೆ ಮಾಡಿದ್ದೇನು ಎಂಬುದನ್ನೂ ಸ್ವಲ್ಪ ನೆನಪು ಮಾಡಿಕೊಳ್ಳಿ!
ಇನ್ನು ದಿನೇಶ್ ಗುಂಡೂರಾವ್ ಅವರ ವಿಚಾರಕ್ಕೇ ಬರುವುದಾದರೆ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವರಾಗಿದ್ದಾಗ ತಾವು ಮಾಡಿದ ಘನ ಕಾರ್ಯವಾದರೂ ಏನು? ಮುಖ್ಯಮಂತ್ರಿ ಸಿದ್ದರಾಮಯ್ಯನವರು, ನೀವೊಬ್ಬ ನಿಷ್ಕ್ರಿಯ ಮಂತ್ರಿ ಎಂಬ ಕಾರಣಕ್ಕೇ ಅಲ್ಲವೆ ಸಚಿವ ಸ್ಥಾನದಿಂದ ನಿಮ್ಮನ್ನು ಪದಚ್ಯುತಿಗೊಳಿಸಿದ್ದು? ಕೇಂದ್ರ ಸರಕಾರ ಒಂದೆರಡು ರುಪಾಯಿಗೆ ಕೊಡುವ ಅಕ್ಕಿ, ಗೋಧಿ, ಸಕ್ಕರೆ, ಉಪ್ಪು, ಎಣ್ಣೆ ಪ್ಯಾಕ್ ಮೇಲೆ ತಮ್ಮ ಭಾವಚಿತ್ರ ಹಾಕಿಕೊಂಡು ಪುಕ್ಕಟೆ ಪ್ರಚಾರ ಗಿಟ್ಟಿಸಿದ್ದು ಬಿಟ್ಟು ಯಾವ ಕೆಲಸ ಮಾಡಿದ್ದೀರಿ ಸ್ವಾಮಿ?
ಬಿ.ಎಸ್. ಯಡಿಯೂರಪ್ಪನವರನ್ನು ಉಗಾಂಡದ ಇದಿ ಅಮೀನ್‌ಗೆ ಹೋಲಿಸುತ್ತಾ, ಅವನೊಬ್ಬ ಸರ್ವಾಧಿಕಾರಿ, ಸಿಕ್ಕ ಸಿಕ್ಕವರನ್ನೆಲ್ಲ ಜೈಲಿಗೆ ಹಾಕುತ್ತಿದ್ದ ಎಂದಿದ್ದೀರಲ್ಲಾ ನಿಮಗೇನಾಗಿದೆ? ಸ್ವತಂತ್ರ ಭಾರತದ ಇತಿಹಾಸದಲ್ಲಿ ಸರ್ವಾಧಿಕಾರಿಗಳಂತೆ ನಡೆದುಕೊಂಡವರು ಯಾರು? 1975ರಲ್ಲಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ, ಸಿಕ್ಕ ಸಿಕ್ಕವರನ್ನೆಲ್ಲಾ ಅರೆಸ್ಟ್ ಮಾಡಿದ್ದು ಯಾರು ಸಾರ್? ಒಂದೂವರೆ ಲಕ್ಷಕ್ಕೂ ಹೆಚ್ಚು ಜನರನ್ನು ಬಂಧಿಸಿ ವರ್ಷಗಟ್ಟಲೆ ಜೈಲಿನಲ್ಲಿಟ್ಟಿದ್ದ ಇಂದಿರಾ ಗಾಂಧಿಯವರಲ್ಲವೇ? ಅವರಲ್ಲವೇ ನಿಜವಾದ ಸರ್ವಾಧಿಕಾರಿ? ಅಕ್ಸಯ್‌ಚಿನ್ ಚೀನಾದ ವಶವಾದರೂ, ಅಲ್ಲಿ ಹುಲ್ಲುಕಡ್ಡಿಯೂ ಹುಟ್ಟುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದ ನೆಹರು, ಇಂದಿರಾ ಗಾಂಧಿ ಸಾವಿನ ಬೆನ್ನಲ್ಲೇ ದೊಡ್ಡ ಮರ ಉರುಳಿದಾಗ ಭೂಮಿ ಅಲುಗುವುದು ಸಹಜ ಎಂದು ಸಿಖ್ ಹತ್ಯಾಂಕಾಂಡವನ್ನು ಸಮರ್ಥಿಸಿಕೊಂಡಿದ್ದ ರಾಜೀವ್ ಗಾಂಧಿ ಮತ್ತು ಕಾಮನ್‌ವೆಲ್ತ್, 2 ಜಿ, ಕಲ್ಲಿದ್ದಲು ಹಗರಣದಲ್ಲಿ ಲಕ್ಷಾಂತರ ರು. ಲೂಟಿಯಾದರೂ ಯಾರಿಗೂ ಉತ್ತರ ಕೊಡದ ಸೋನಿಯಾ ಗಾಂಧಿ ನಿಜವಾದ ಸರ್ವಾಧಿಕಾರಿಗಳೇ ಹೊರತು ಬಿಎಸ್‌ವೈ ಅಲ್ಲ.
ಯಡಿಯೂರಪ್ಪನವರನ್ನು ಯಾವಾಗಲೂ ‘ಜೈಲಿಗೆ ಹೋಗಿ ಬಂದವರಿಂದ ಪಾಠ ಬೇಕಿಲ್ಲ’ ಎಂದು ಜರಿಯುತ್ತೀರಲ್ಲಾ, ಕೆಲವರ ಪಿತೂರಿಯಿಂದ ಅವರ ಜೈಲಿಗೆ ಹೋಗಬೇಕಾಗಿ ಬಂತೇ ಹೊರತು ಕೋರ್ಟಿನಿಂದ ದೋಷಿಯೆಂದು ಘೋಷಣೆಯಾಗಿಲ್ಲ. ಇಷ್ಟಾಗಿಯೂ ಕುಹಕವಾಡುವ ನೀವು ಕೋರ್ಟಿನಿಂದ ದೋಷಿ ಎಂದು ಘೋಷಣೆಯಾಗಿ ಒಂದೂವರೆ ವರ್ಷ ಜೈಲಲ್ಲಿದ್ದು ಬಂದ ದೇಶದ ಏಕಮಾತ್ರ ಪ್ರಧಾನಿ ಇಂದಿರಾ ಗಾಂಧಿಯವರನ್ನು ಯಾವ ನೈತಿಕತೆಯೊಂದಿಗೆ ಆರಾಧನೆ ಮಾಡುತ್ತಿದ್ದೀರಿ? ಮುಖ್ಯಮಂತ್ರಿ ವಿರುದ್ಧ ಎಷ್ಟೇ ಗುರುತರ ಆರೋಪಗಳಿದ್ದರೂ ಪ್ರಕರಣ ದಾಖಲಾಗಿಲ್ಲ ಎಂಬ ಒಂದೇ ಕಾರಣಕ್ಕೆ ಸಿದ್ದರಾಮಯ್ಯನವರಿಗೆ ಸಾಚಾ ಎಂದು ಸರ್ಟಿಫಿಕೆಟ್ ಕೊಡುತ್ತಿದ್ದೀರಲ್ಲಾ, ಕೇಸು ದಾಖಲು ಮಾಡಬೇಕಾದ ಲೋಕಾಯುಕ್ತವನ್ನೇ ಕತ್ತು ಹಿಸುಕಿ ಸಾಯಿಸಿದ್ದೇಕೆ?
ಭ್ರಷ್ಟಾಚಾರವನ್ನು ಮಟ್ಟಹಾಕಬೇಕಾದ ಲೋಕಾಯುಕ್ತವನ್ನೇ ಬರ್ಖಾಸ್ತು ಮಾಡಿದ ಸಿದ್ದರಾಮಯ್ಯನವರಲ್ಲಿ ಯಾವ ನೈತಿಕತೆ ನಿಮಗೆ ಕಾಣುತ್ತಿದೆ? ಮರಿಗೌಡನನ್ನು ಒಂದೂವರೆ ತಿಂಗಳ ಕಾಲ ಬಚ್ಚಿಟ್ಟಿದ್ದು ಹಾಗೂ ಎಲ್ಲಿ ಬಂಡವಾಳ ಬಯಲಾಗುತ್ತದೋ ಎಂಬ ಭಯದಿಂದ ಚಿಕ್ಕರಾಯಪ್ಪನವರನ್ನು ಅಡಗಿಸಿಟ್ಟಿರುವುದು ಮುಖ್ಯಮಂತ್ರಿಯವರಲ್ಲದೆ ಮತ್ತಾರು? ಡೈರಿಯಲ್ಲಿ ನನ್ನ ಹೆಸರಿಲ್ಲ ಎಂದು ಮುಖ್ಯಮಂತ್ರಿ ಹೇಳಲಿ ನೋಡೋಣ? ಬಡವರಿಗೆ ಆರೋಗ್ಯ ಸೇವೆ ನೀಡುವ ಯಶಸ್ವಿನಿಗೆ ಬಾಕಿ ಕೊಡುವುದಕ್ಕೆ ದುಡ್ಡಿಲ್ಲ, ಆದರೆ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಸಾವಿರಾರು ಕೋಟಿ ಹಣ ಎಲ್ಲಿಂದ ಬರುತ್ತದೆ? ನರೇಂದ್ರ ಮೋದಿಯವರನ್ನು ನರಹಂತಕ ಎಂದ ಸಿದ್ದರಾಮಯ್ಯನವರಿಗೆ ಜನ ಯಾವ ಪಾಠ ಕಲಿಸಿದರು ಎಂಬುದು ಗೊತ್ತಲ್ಲವೆ? ಬಿಎಸ್‌ವೈರನ್ನು ನಿಂದಿಸುವುದನ್ನು ನಿಲ್ಲಿಸದಿದ್ದರೆ 2018ರಲ್ಲಿ ಜನ ಮತ್ತೊಮ್ಮೆ ಪಾಠ ಕಲಿಸುತ್ತಾರೆ, ಜೋಕೆ!
February 22, 2017
February 18, 2017
ಖರ್ಗೆ ಸಾಹೇಬ್ರೇ, 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್‌ನ ಎಷ್ಟು ನಾಯಿಗಳು ಸತ್ತಿದ್ದವು?
ಖರ್ಗೆ ಸಾಹೇಬ್ರೇ, 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್‌ನ ಎಷ್ಟು ನಾಯಿಗಳು ಸತ್ತಿದ್ದವು?
ದಯವಿಟ್ಟು ಕ್ಷಮಿಸಿ, ಸಭ್ಯತೆಯ ಗೆರೆ ಮೀರಿ ಹೀಗೆ ಪ್ರಶ್ನಿಸುತ್ತಿರುವುದಕ್ಕೆ. ಮನಸ್ಸು ಒಲ್ಲೆ ಎನ್ನುತ್ತಿದ್ದರೂ ಏಕೆ ಹೀಗೆ ಕೇಳಬೇಕಾಗಿದೆಯೆಂದರೆ ನಮ್ಮ ಮಹಾನ್ ನೇತಾರ ಮಲ್ಲಿಕಾರ್ಜುನ ಖರ್ಗೆ ಹಾಗೂ ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಆರೆಸ್ಸೆಸ್ ಬ್ರಿಟಿಷರ ಜತೆ ಕೈಜೋಡಿಸಿತ್ತು ಎಂಬ ಅವಿವೇಕದ ಹೇಳಿಕೆಯನ್ನು ಆಗಾಗ್ಗೆ ಕೊಡುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಅರ್ಥವಾಗುವುದು ಇದೇ ಭಾಷೆ! ಸಾಮಾನ್ಯವಾಗಿ ಮಲ್ಲಿಕಾರ್ಜುನ ಖರ್ಗೆಯವರು ಮಾತಿಗೆ ನಿಂತರೆ ಅದು ಲೋಕಸಭೆ ಇರಬಹುದು, ಸಾರ್ವಜನಿಕ ಸಭೆಗಳಿರಬಹುದು, ಪ್ರಧಾನಿಯನ್ನು ಕುಟುಕದೆ, ಆರೆಸ್ಸೆಸ್ಸನ್ನು ಎಳೆದು ತಂದು ಹೀಗಳೆಯದೇ ಅವರ ಮಾತು ಪೂರ್ಣಗೊಳ್ಳುವುದೇ ಇಲ್ಲ.
ಫೆಬ್ರವರಿ 1ರಂದು ಬಜೆಟ್ ಮಂಡನೆಯಾಯಿತು. ಒಂದು ದಿನ ಕಳೆದ ನಂತರ ರಾಷ್ಟ್ರಪತಿ ಭಾಷಣದ ಮೇಲೆ ಲೋಕಸಭೆಯಲ್ಲಿ ಚರ್ಚೆ ಆರಂಭವಾಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ನಿರರ್ಗಳವಾಗಿ ಮಾತನಾಡಿದ ಖರ್ಗೆಯವರು, ನಮ್ಮ ಪಕ್ಷ ಸ್ವಾತಂತ್ರ್ಯಕ್ಕಾಗಿ ಇಂದಿರಾಗಾಂಧಿ, ರಾಜೀವ್ ಗಾಂಧಿಯವರನ್ನು ಬಲಿದಾನ ಮಾಡಿದೆ, ನಿಮ್ಮ ಬಿಜೆಪಿ, ಆರೆಸ್ಸೆಸ್ಸಿನ ಒಂದು ನಾಯಿಯೂ ಸತ್ತಿಲ್ಲ ಎಂದು ಬಿಟ್ಟರು. ತಕ್ಷಣ ಪ್ರತಿಭಟನೆ ಮಾಡಿದ ಬಿಜೆಪಿ ಸಂಸದರು, ಕಾಶ್ಮೀರಕ್ಕಾಗಿ ನಾವು ಶಾಮ ಪ್ರಸಾದ ಮುಖರ್ಜಿಯವರನ್ನು, ದೇಶಕ್ಕಾಗಿ ದೀನ ದಯಾಳ ಉಪಾಧ್ಯಾಯರನ್ನು ಕಳೆದುಕೊಂಡಿದ್ದೇವೆ. ಮಾತನ್ನು ವಾಪಸ್ಸು ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು.
ಪಕ್ಕದಲ್ಲೇ ಇದ್ದ ಸೋನಿಯಾ ಗಾಂಧಿಯವರನ್ನು ಮೆಚ್ಚಿಸುವುಕ್ಕಾಗಿ ಸ್ವಾತಂತ್ರ್ಯಾನಂತರ ಯಾವ್ಯಾವುದೋ ಕಾರಣಕ್ಕೆ ಹತ್ಯೆಯಾದ ಇಂದಿರಾ, ರಾಜೀವ್‌ರನ್ನು ದೇಶಕ್ಕಾಗಿ ಬಲಿದಾನ ಮಾಡಿದರು ಎಂದು ಖರ್ಗೆಯವರು ಮಾತಿನ ಭರಾಟೆಯಲ್ಲಿ ಹೇಳಿರಬಹುದೆಂದು, ವಾಪಸ್ಸು ಪಡೆಯುತ್ತಾರೆಂದು ಎಲ್ಲರೂ ಭಾವಿಸಿದರು. ಉಹೂಃ, ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ ಎಂದು ಖರ್ಗೆ ಮತ್ತೆ ವೀರಾವೇಶದಿಂದ ಕೂಗಾಡಿದರು. ಇಷ್ಟೆಲ್ಲಾ ದಾರ್ಷ್ಟ್ಯದಿಂದ ಮಾತನಾಡುತ್ತಿರುವ ಖರ್ಗೆಯವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕೋ ಬೇಡವೋ, ನೀವೇ ಹೇಳಿ? ಸ್ವಾತಂತ್ರ್ಯಕ್ಕಾಗಿ ಬಿಜೆಪಿ, ಆರೆಸ್ಸೆಸ್‌ನ ಒಂದು ನಾಯಿಯೂ ಸತ್ತಿಲ್ಲ ಎನ್ನುತ್ತೀರಲ್ಲಾ ಖರ್ಗೆಯವರೇ, 1857ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿಮ್ಮ ಕಾಂಗ್ರೆಸ್‌ನ ಎಷ್ಟು ನಾಯಿಗಳು ಸತ್ತಿದ್ದವು?!
ಇಂದು ಇಟಲಿ ಮೂಲದ ಸೋನಿಯಾ ಗಾಂಧಿ ಕೈಯಲ್ಲಿರುವ ಕಾಂಗ್ರೆಸ್, ಎ.ಓ. ಹ್ಯೂಮ್ ಎಂಬ ಬ್ರಿಟಿಷನಿಂದ ಅಂದು ಸ್ಥಾಪನೆಯಾಗಿದ್ದು 1885ರಲ್ಲಿ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದಿದ್ದು 1857ರಲ್ಲಿ. ಹುಟ್ಟುವುದಕ್ಕಿಂತ ಮೊದಲೇ ನಡೆದ ಹೋರಾಟದಲ್ಲಿ ಏಕೆ ಸಾಯಲಿಲ್ಲ ಎಂದು ನಾವು ಕಾಂಗ್ರೆಸನ್ನು ಕೇಳಿದರೆ ಎಷ್ಟು ಅಸಂಬದ್ಧವಾಗುತ್ತದೋ 1951ರಲ್ಲಿ ಜನಿಸಿದ ಜನ ಸಂಘವೇಕೆ 1947ರಲ್ಲಿ ಅಂತ್ಯವಾದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಲಿಲ್ಲ, ಬಲಿದಾನ ಮಾಡಲಿಲ್ಲ ಎಂದು ಕೇಳಿದರೂ ಅಷ್ಟೇ ಅವಿವೇಕವಾಗುತ್ತದೆ ಅಲ್ಲವೆ? ಇನ್ನು 1925ರಲ್ಲಿ ಡಾ. ಹೆಡಗೆವಾರರು ಆರೆಸ್ಸೆಸ್ಸನ್ನು ಸ್ಥಾಪನೆ ಮಾಡಿದಾಗ ಭಾರತಕ್ಕೆ ಸ್ವಾತಂತ್ರ್ಯ ಬರುವುದು ಖಚಿತವಾಗಿತ್ತು, ಅದೇ ವೇಳೆಯಲ್ಲಿ ಧರ್ಮದ ಆಧಾರದ ಮೇಲೆ ದೇಶ ಒಡೆಯುವ ಶಕ್ತಿಗಳೂ ರಾರಾಜಿಸುತ್ತಿದ್ದವು.
ಅವುಗಳು ಒಡ್ಡಿದ್ದ ಆತಂಕ ತೀವ್ರವಾಗಿತ್ತು. ಹಾಗಾಗಿ ಸ್ವಾತಂತ್ರ್ಯ ಬಂದ ಮೇಲೆ ಅದನ್ನು ರಕ್ಷಣೆ ಮಾಡಿಕೊಳ್ಳಬೇಕಲ್ಲಾ, ಅದೇ ಆರೆಸ್ಸೆಸ್ ಸ್ಥಾಪನೆಯ ಹಿಂದಿರುವ ಉದ್ದೇಶ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದರು. ಇಷ್ಟಾಗಿಯೂ ಆರೆಸ್ಸೆಸ್ಸನ್ನು ಏಕೆ ವಿನಾಕಾರಣ ಟೀಕಿಸುತ್ತೀರಿ? ಅದಿರಲಿ, ಸ್ವಾತಂತ್ರ್ಯ ಹೋರಾಟ, ಬಲಿದಾನ ಎಂದ ಕೂಡಲೇ ನೆಹರು, ಇಂದಿರಾ, ರಾಜೀವ್ ಗಾಂಧಿಯವರನ್ನು ಬಿಟ್ಟರೆ ಬೇರಾರ ಹೆಸರೂ ನಿಮ್ಮ ಬಾಯಿಂದ ಏಕೆ ಬರುವುದಿಲ್ಲ? ವಿದೇಶಿ ನೆಲದಲ್ಲಿ ಗಲ್ಲುಶಿಕ್ಷೆಗೆ ಗುರಿಯಾದ ಮದನ್ ಲಾಲ್ ಧಿಂಗ್ರಾ, ಬ್ರಿಟಿಷರ ಲಾಠಿ ಏಟು ತಿಂದು ತೀರಿಕೊಂಡ ಲಾಲಾ ಲಜಪತರಾಯ್, ಭಗತ್ ಸಿಂಗ್, ರಾಜಗುರು, ಸುಖದೇವ್, ಆಶ್ಫಾಕುಲ್ಲಾ ಖಾನ್, ಚಂದ್ರಶೇಖರ ಆಝಾದ್, ನಿಗೂಢವಾಗಿ ಕಣ್ಮರೆಯಾದ ಸುಭಾಷ್‌ಚಂದ್ರ ಬೋಸ್ ಹೆಸರು ನಿಮಗೆ ನೆನಪಾಗುವುದೇ ಇಲ್ಲ ಏಕೆ ಖರ್ಗೆಯವರೇ? ಬಾಲಗಂಗಾಧರ ತಿಲಕರ ಮರಣದ ನಂತರ ಕಾಂಗ್ರೆಸ್‌ನಲ್ಲೂ ಎರಡು ಬಣಗಳಿದ್ದವು. ಗಾಂಧಿಯವರ ಸೌಮ್ಯವಾದಿ ಬಣ, ಬ್ರಿಟಿಷರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕೆಂಬ ಕ್ರಾಂತಿಕಾರಿಗಳ ಬಣ.
ಅಹಿಂಸೆಯಿಂದ ಸ್ವಾತಂತ್ರ್ಯ ಪಡೆಯಲು ಸಾಧ್ಯವಿಲ್ಲ ಎಂದವರನ್ನು ಮೂಲೆಗುಂಪು ಮಾಡಲು ಕಾಂಗ್ರೆಸ್‌ನಲ್ಲೇ ಪ್ರಯತ್ನ ನಡೆದಾಗ ಅಲ್ಲಿಂದ ಹೊರಹೋದವರೇ ಮುಂದೆ ದೇಶಕ್ಕಾಗಿ ಹೆಚ್ಚಾಗಿ ಬಲಿದಾನ ಮಾಡಿದವರು ಎಂಬುದು ನಿಮ್ಮ ನೆನಪಿನಲ್ಲಿರಲಿ. ಮತ್ತೊಂದು ಪ್ರಶ್ನೆ: ನಿಮ್ಮ ರಾಹುಲ್ ಗಾಂಧಿಯವರು ಆರೆಸ್ಸೆಸ್ ಬ್ರಿಟಿಷರ ಜತೆ ಕೈಜೋಡಿಸಿತ್ತು ಎಂದು ಜರಿಯುತ್ತಾರಲ್ಲಾ, ಅವರ ಮುತ್ತಜ್ಜ ನೆಹರು ವಿರುದ್ಧ ಬ್ರಿಟಿಷರು ಒಂದು ಹುಲ್ಲುಕಡ್ಡಿಯನ್ನೂ ಎತ್ತಲಿಲ್ಲವಲ್ಲಾ ಏಕೆ?! ಭಾರತವನ್ನು ಆಳಲು ಬಂದಿದ್ದ ವೈಸರಾಯ್ ಬಗ್ಗೆ ಇಡೀ ದೇಶವಾಸಿಗಳಿಗೆ ಭಯವಿತ್ತು. ಆದರೆ ನಿಮ್ಮ ನೆಹರು ವೈಸರಾಯ್ ಪತ್ನಿಯ ಸಿಗಾರ್‌ಗೆ ಬೆಂಕಿಕಡ್ಡಿ ಗೀರುವಷ್ಟು ನಿರಾಳವಾಗಿದ್ದರಲ್ಲಾ ಹೇಗೆ ಸ್ವಾಮಿ?! ನಿಮಗೆ ಇನ್ನೂ ಕೆಲವು ಪ್ರಶ್ನೆಗಳನ್ನು ಕೇಳಬೇಕು.
ಅಸಹಕಾರ ಚಳವಳಿಕಾರರ ಮೇಲೆ ದೌರ್ಜನ್ಯ ಎಸಗಿದರೆಂಬ ಕಾರಣಕ್ಕೆ ಗೋರಖ್‌ಪುರ ಜಿಲ್ಲೆಯ ಚೌರಿ ಚೌರಾ ಎಂಬಲ್ಲಿ ಠಾಣೆಯನ್ನು ಸುಟ್ಟು 22 ಪೊಲೀಸರು ಸತ್ತಿದ್ದು ಗೊತ್ತಲ್ಲವೆ? ಅದರಲ್ಲಿ 170ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿದ ಬ್ರಿಟಿಷರು, ತಪ್ಪಿತಸ್ಥರೆಂದು ಗಲ್ಲುಶಿಕ್ಷೆ ವಿಧಿಸಿದರು. ಆ ಕಾಲಕ್ಕೆ ನಿಮ್ಮ ಜವಾಹರಲಾಲ್ ನೆಹರು, ಅವರಪ್ಪ ಮೋತಿಲಾಲ್ ನೆಹರು, ಅಷ್ಟೇಕೆ ಗಾಂಧೀಜಿ ಕೂಡಾ ಪ್ರಸಿದ್ಧ ವಕೀಲರೇ ಆಗಿದ್ದರಲ್ಲವೆ? ಅವತ್ತು ಈ 170 ನಿಸ್ವಾರ್ಥ ಸ್ವಾಾತಂತ್ರ್ಯ ಹೋರಾಟಗಾರರನ್ನು ಗಲ್ಲು ಶಿಕ್ಷೆಯಿಂದ ತಪ್ಪಿಸಲು ನಿಮ್ಮ ನೆಹರು ಮತ್ತು ಅವರಪ್ಪ ಏಕೆ ಕರಿಕೋಟು ಹಾಕಿ ಕೋರ್ಟಿಗೆ ಬರಲಿಲ್ಲ? ಭಗತ್ ಸಿಂಗ್, ರಾಜಗುರು, ಸುಖದೇವರಿಗೆ ಮರಣದಂಡನೆ ವಿಧಿಸಿದಾಗ ಇಡೀ ದೇಶವೇ ದುಃಖದ ಮಡುವಿನಲ್ಲಿತ್ತು. ಗಲ್ಲುಶಿಕ್ಷೆ ತಪ್ಪಿಸಲು ನೆಹರು ಏಕೆ ಕೋರ್ಟಿಗೆ ಬಂದು ವಾದ ಮಾಡಲಿಲ್ಲ. ಚೌರಿಚೌರಾದಲ್ಲಿ ಗಲ್ಲುಶಿಕ್ಷೆಗೆ ಗುರಿಯಾದ 170 ಜನರಲ್ಲಿ 155ರನ್ನು ನಿರ್ದೋಷಿಗಳೆಂದು ಸಾಬೀತು ಮಾಡಿದ್ದು, 15 ಜನರ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಮಾರ್ಪಡಿಸಿದ್ದು ವಕೀಲಿಕೆ ಬಿಟ್ಟು ಮನೆಯಲ್ಲಿದ್ದ ಪಂಡಿತ ಮದನ ಮೋಹನ ಮಾಳವೀಯರೇ ಹೊರತು, ನಿಮ್ಮ ನೆಹರು ಗಾಂಧಿಯರಲ್ಲ!
ಖರ್ಗೆ ಸಾಹೇಬ್ರೇ, ನೀವು ಎಷ್ಟೇ ಜೋರಾಗಿ ನೆಹರು, ಇಂದಿರಾ, ರಾಜೀವ್ ಗಾಂಧಿ ಎಂದು ಬೊಬ್ಬೆ ಹಾಕಿದರೂ ಈಗಿನ ಯುವ ಜನತೆಗೆ ಇತಿಹಾಸದ ಪುಟಗಳು ಸಲೀಸಾಗಿ ಸಿಕ್ಕಿ ಯಾರ್ಯಾಾರು ಏನೇನು ಎಂಬುದು ತಿಳಿದು ಬಿಟ್ಟಿದೆ. ಅಲ್ಲಾ ಸ್ವಾಮಿ, ಇಂದಿರಾ ಗಾಂಧಿಯವರನ್ನು ಭಜಿಸುತ್ತೀರಲ್ಲಾ, ನಮ್ಮ ದೇಶದ ಇತಿಹಾಸದಲ್ಲೇ ನ್ಯಾಯಾಲಯದಿಂದ ದೋಷಿ ಎಂದು ಘೋಷಣೆಯಾದ ಹಾಗೂ ಜೈಲಿಗೆ ಹೋದ ಮೊದಲ ಪ್ರಧಾನಿ ಯಾರು?! ನ್ಯಾಯಾಲಯದಿಂದ ದೋಷಿಯೆಂದು ಘೋಷಣೆಯಾಗಿರುವ ಆಕೆಯ ಹೆಸರಿನಲ್ಲೂ ಯೋಜನೆಗಳನ್ನೂ ಆರಂಭಿಸುತ್ತೀರಲ್ಲಾ ನಿಮಗೆ ಏನೆನ್ನಬೇಕು? ಯುಪಿಎನ 10 ವರ್ಷಗಳ ಆಡಳಿತದಲ್ಲಿ 256 ಯೋಜನೆಗಳನ್ನು ನೆಹರು, ಇಂದಿರಾ, ರಾಜೀವ್ ಗಾಂಧಿಯವರ ಹೆಸರಿನಲ್ಲಿ ಘೋಷಣೆ ಮಾಡಿದರಲ್ಲಾ ನಿಮಗೆ ಕಾಂಗ್ರೆಸ್‌ನ ಉಳಿದ ಯಾವ ಮಹಾನ್ ನಾಯಕರ ಹೆಸರೂ ನೆನಪಾಗಲಿಲ್ಲವೆ? ಸುಭಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್, ಶಾಸ್ತ್ರಿ, ತಿಲಕ್, ಲಜಪತರಾಯ್ ಕೂಡಾ ಕಾಂಗ್ರೆಸ್ಸಿನ ನಾಯಕರೇ ಆಗಿದ್ದರಲ್ಲವೆ? ಅವರ ಹೆಸರಲ್ಲಿ ಯಾವ್ಯಾವ ಯೋಜನೆಗಳನ್ನು ಘೋಷಣೆ ಮಾಡಿದ್ದೀರಿ ದಯವಿಟ್ಟು ಹೇಳಿ? ಖರ್ಗೆ ಸಾರ್, ನಿಮಗೆ ವಂದೇ ಮಾತರಂ ಹಾಗೂ ಗಾಂಧೀಜಿಯವರ ಅಚ್ಚುಮೆಚ್ಚಿನ ರಘುಪತಿ ರಾಘವ ರಾಜಾರಾಂ ಗೀತೆಗಳು ನೆನಪಿವೆಯೇ? ಅದು 1923, ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ಅಧಿವೇಶನ ನಡೆಯುತ್ತಿತ್ತು.
ಆಗ ಪ್ರತಿ ಅಧಿವೇಶನದಲ್ಲಿ ವಂದೇ ಮಾತರಂ ಹಾಡುವ ಸಂಪ್ರದಾಯ ಬೆಳೆದು ಬಂದಿತ್ತು. ಪಂಡಿತ್ ವಿಷ್ಣು ದಿಗಂಬರ ಫಲುಸ್ಕರ್ ಪ್ರತಿ ವರ್ಷದಂತೆ ವಂದೇ ಮಾತರಂ ಹಾಡ ಹೊರಟಾಗ ಆಗಿನ ಕಾಂಗ್ರೆಸ್ ಅಧ್ಯಕ್ಷ (ಮುಸ್ಲಿಂ ಲೀಗ್‌ನ ಸ್ಥಾಪಕರಲ್ಲೊಬ್ಬರಾದ) ಮೌಲಾನ ಅಹಮದ್ ಅಲಿ ಮತ್ತು ಆತನ ಸಹೋದರ ಶೌಕತ್ ಅಲಿ ತಡೆದರು. ಇಸ್ಲಾಂನ ಕಾನೂನಿನಂತೆ ಸಂಗೀತ ನಿಷಿದ್ಧ ಎಂಬುದು ಅವರು ಕೊಟ್ಟ ಕಾರಣವಾಗಿತ್ತು. ಹಠಾತ್ ಬೆಳವಣಿಗೆಯಿಂದ ಕೆಂಡಾ ಮಂಡಲರಾದ ಫಲುಸ್ಕರ್ ಇದು ಕಾಂಗ್ರೆಸ್‌ನ ಅಧಿವೇಶನ, ಒಂದು ಧರ್ಮದ ಸಭೆಯಲ್ಲ.. ಮುಸ್ಲಿಮರ ದರ್ಗಾ, ಮಸೀದಿಯೂ ಅಲ್ಲ.. ಈ ರಾಷ್ಟ್ರೀಯ ವೇದಿಕೆ ಮೇಲೆ ವಂದೇ ಮಾತರಂಗೆ ಅಡ್ಡಿಪಡಿಸಲು ನಿಮಗೇನು ಅಧಿಕಾರವಿದೆ? ಅಧಿವೇಶನ ಪ್ರಾರಂಭವಾಗುವ ಮೊದಲು ಅಧ್ಯಕ್ಷೀಯ ಮೆರವಣಿಗೆಯಲ್ಲಿ ವಿಜೃಂಭಣೆಯ ಸಂಗೀತ ವಾದ್ಯಗಳೊಂದಿಗೆ ಬರುವಾಗ ನಿಮಗೆ ಹಿಡಿಸಿತೇ?! ವಂದೇ ಮಾತರಂಗೆ ವಿರೋಧ ಇರುವವರು ಧಾರಾಳವಾಗಿ ಹೊರ ನಡೆಯಬಹುದು ಎಂದು ಅಲಿ ಸಹೋದರರನ್ನು ಜಾಡಿಸಿದರು. ನಂತರ ವಂದೇ ಮಾತರಂ ಅನ್ನು ಪೂರ್ತಿಯಾಗಿ ಹಾಡಿ ವಂದಿಸಿ ಕೆಳಗಿಳಿದಿದ್ದರು!
ಅಂದಿನ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕ್ರಾಂತಿ ಗೀತೆಯಾಗಿ ಜನರನ್ನು ಉತ್ತೇಜಿಸಿದ್ದು ಇದೇ ವಂದೇ ಮಾತರಂ.. 1905ರಲ್ಲಿ ಬಂಗಾಳ ವಿಭಜನೆ ಮಾಡಲು ಹೊರಟ ಸಂದರ್ಭದಲ್ಲಿ ವಂಗಭಂಗ ಚಳವಳಿಗೆ ಇದೇ ವಂದೇ ಮಾತರಂ ಸ್ಫೂರ್ತಿ. ತಿಲಕರ ನೇತೃತ್ವದಲ್ಲಿ ನಡೆದ ಈ ಚಳವಳಿಯಲ್ಲಿ ಹಿಂದೂ ಮುಸ್ಲಿಮರೆಲ್ಲರೂ ಭಾಗವಹಿಸಿ ವಂದೇ ಮಾತರಂ ಅನ್ನು ಸಾರ್ವಜನಿಕವಾಗಿ ಹಾಡಿ ಚಳವಳಿಯ ಕಿಚ್ಚು ಹೆಚ್ಚಿಸಿದ್ದರು. ಇದೇ ಕಿಚ್ಚು ಆಗ ಬಂಗಾಳ ವಿಭಜನೆಯನ್ನು ತಡೆದು ಯಶಸ್ವಿಯಾಗಿತ್ತು. ಅಂದಿನಿಂದ 1947 ರ ಸ್ವಾತಂತ್ರ್ಯ ಸಿಗುವವರೆಗೆ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿ ಗೀತೆಯಾಗಿ ವಿರಾಜಮಾನವಾದದ್ದು ಇದೇ ವಂದೇ ಮಾತರಂ. ಇಂತಹ ವಂದೇ ಮಾತರಂ… ಹಾಗೂ ಗಾಂಧೀಜಿಯವರ ಮೆಚ್ಚಿನ ರಘುಪತಿ ರಾಘವ ರಾಜಾರಾಂ.. ಪತಿತ ಪಾವನ ಸೀತಾರಾಂಗಳನ್ನು ಬಹಳ ಸುಶ್ರಾವ್ಯವಾಗಿ ಕಾಂಗ್ರೆಸ್ಸಿನ ಸಭೆ- ಸಮಾರಂಭಗಳಲ್ಲಿ, ಅಧಿವೇಶನಗಳಲ್ಲಿ ಹೇಳಿಕೊಡುತ್ತಿದ್ದರಲ್ಲಾ ಅವೆಲ್ಲ ಕಾಂಗ್ರೆಸಿಗರ ಬಾಯಿಂದ ಹೊರಡುವುದೇ ಇಲ್ಲವಲ್ಲಾ ಈಗ, ಏಕೆ ಸಾರ್?! ಯಾವಾಗ ಕಾಂಗ್ರೆಸ್ ನೆಹರು ಕುಟುಂಬದ ದಾಸ್ಯಕ್ಕೆ ಬಿತ್ತೋ, ಅಂದೇ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಜತೆ ಅದು ಸಂಬಂಧ ಕಡಿದುಕೊಂಡಿದೆ!
ಸ್ವಾತಂತ್ರ್ಯ ಬಂದ ಕೂಡಲೇ ಕಾಂಗ್ರೆಸನ್ನು ವಿಸರ್ಜನೆ ಮಾಡಿ ಎಂದು ಗಾಂಧೀಜಿ ಹೇಳಿದ್ದು ಏಕೆ? ಸ್ವಾತಂತ್ರ್ಯ ಕೊಡಿಸಿದ್ದು ನಾವೇ, ನಾವೇ ಎನ್ನುತ್ತಾ ದೇಶ ಲೂಟಿ ಮಾಡುತ್ತಾರೆ ಎಂಬ ಭಯದಿಂದಲೇ. ಒಂದು ಮಾತು ನೆನಪಿರಲಿ, ಸ್ವಾತಂತ್ರ್ಯ ಬಂದಾಗ ಬಿಜೆಪಿ ಜನಿಸಿಲ್ಲದಿರಬಹುದು. ಆದರೆ ಸ್ವಾತಂತ್ರ್ಯ ತಂದುಕೊಟ್ಟ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ತಾತ್ಯಾ ಟೋಪೆಯಿಂದ ಹಿಡಿದು, ತಿಲಕ್, ಲಜಪತರಾಯ್, ಸಾವರ್ಕರ್, ಸುಭಾಷ್, ಭಗತ್, ಆಜಾದ್, ಧಿಂಗ್ರಾ, ಪಟೇಲ್, ಶಾಸ್ತ್ರಿಯವರನ್ನು ಅವರು ಹುಟ್ಟಿದ ದಿನ, ಅಗಲಿದ ದಿನ ಇಂದಿಗೂ ಶ್ರದ್ಧೆಯಿಂದ, ಭಕ್ತಿಯಿಂದ, ಧನ್ಯತೆಯಿಂದ ನೆನಪಿಸಿಕೊಳ್ಳುವುದು ಬಿಜೆಪಿ ಕಚೇರಿಗಳಲ್ಲೇ. ವಂದೇ ಮಾತರಂ ಸುಶ್ರಾವ್ಯವಾಗಿ, ರೋಮಾಂಚನಗೊಳ್ಳುವಂತೆ ಮೊಳಗುವುದು ಆರೆಸ್ಸೆೆಸ್ ಹಾಗೂ ಬಿಜೆಪಿ ಸಭೆಗಳಲ್ಲೇ. ನಿಮ್ಮದೇನಿದ್ದರೂ ನೆಹರು ಕುಟುಂಬದ ಭಜನೆ!
ಒಮ್ಮೆ ಪಾರ್ವತಿ ಪರಮೇಶ್ವರರು ತಮ್ಮ ಮಕ್ಕಳಾದ ಗಣಪತಿ, ಸುಬ್ರಹ್ಮಣ್ಯರಿಗೆ ಯಾರು ಮೊದಲು ತ್ರಿಲೋಕ ಸಂಚರಿಸಿ, ಜನರ ಯೋಗಕ್ಷೇಮ ವಿಚಾರಿಸಿಕೊಂಡು ಬರುತ್ತೀರಿ ನೋಡೋಣ ಎಂದು ಸ್ಪರ್ಧೆ ಇಟ್ಟರು. ಸುಬ್ರಹ್ಮಣ್ಯ ನವಿಲು ಏರಿ ತ್ರಿಲೋಕ ಸಂಚಾರಕ್ಕೆ ಹೊರಟೇ ಬಿಟ್ಟ. ಆದರೆ ಎಷ್ಟು ಹೊತ್ತಾದರೂ ಗಣೇಶ ಮಾತ್ರ ಕುಂತಲ್ಲೇ ಇದ್ದ! ಪಾರ್ವತಿ ಪರಮೇಶ್ವರರಿಗೇ ಆಶ್ಚರ್ಯವಾಗಿ, ನೀನೇಕೆ ಇನ್ನೂ ಹೋಗಿಲ್ಲ ಎಂದು ಕೇಳಿದರು. ಮೇಲೆದ್ದ ಗಣೇಶ, ತ್ರಿಲೋಕವನ್ನು ಬಲ್ಲ ನೀವೇ ಇಲ್ಲಿದ್ದೀರಲ್ಲಾ ಎಂದು ಪಾರ್ವತಿ ಪರಮೇಶ್ವರರಿಗೇ ಮೂರು ಸುತ್ತು ಹಾಕಿ ಕುಳಿತ!!
ನಮ್ಮ ಖರ್ಗೆಯವರ ಕಥೆಯೂ ಹೀಗೆ. ಕಲಬುರ್ಗಿಯಲ್ಲಿ 1300 ಕೋಟಿ ಇಎಸ್‌ಐ ದುಡ್ಡಿನಲ್ಲಿ ‘ಖರ್ಗೆ ಗುಂಬಝ್’ ಕಟ್ಟಿರುವ ಅವರಿಗೆ, ನೆಹರು ಕುಟುಂಬವೇ ಬ್ರಹ್ಮಾಂಡ! ಸೋನಿಯಾ ಗಾಂಧಿಯವರ ಸುತ್ತ ಸುತ್ತಿದರೆ ತನಗೆ ಸ್ವತ್ತು, ಸವಲತ್ತು, ಮಗನಿಗೆ ಮಂತ್ರಿಗಿರಿ ಸಿಗುತ್ತದೆ ಎಂದು ಚೆನ್ನಾಗಿ ತಿಳಿದಿದೆ! ಸ್ವಾಮಿ ಖರ್ಗೆಯವರೇ, ರಾಜೀವ್ ಗಾಂಧಿಯವರ ‘ಮಗಳ’ ಹೆಸರನ್ನು ‘ಮಗ’ನಿಗೆ(ಪ್ರಿಯಾಂಕ) ಇಟ್ಟಿರುವ ನಿಮ್ಮ ಮಾನಸಿಕ ದಾಸ್ಯ ಯಾವ ಮಟ್ಟದ್ದು ಅಂತ ನಮಗೆ ಗೊತ್ತು, ನಿಮ್ಮ ಮಾತುಗಳಲ್ಲಿ ತೂಕವಿರಲಿ.
February 16, 2017
February 13, 2017
ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನ – ಕ್ರಮ ಕೈಗೊಳ್ಳದಿದ್ದರೆ ಉಗ್ರಹೋರಾಟ
February 11, 2017
ಸಾವಿನ ವ್ಯಾಪಾರಿ ಅನ್ನುವಾಗ, ಬಂದು ಟೀ ಮಾರು ಎಂದು ಹೀಗಳೆಯುವಾಗ, ಫತ್ವಾ ಹೊರಡಿಸಿದಾಗ ಎಲ್ಲಿ ಸತ್ತು ಬಿದ್ದಿತ್ತು ಈ ಘನತೆ, ಸಭ್ಯತೆಯ ಮಾತು?
ಸಾವಿನ ವ್ಯಾಪಾರಿ ಅನ್ನುವಾಗ, ಬಂದು ಟೀ ಮಾರು ಎಂದು ಹೀಗಳೆಯುವಾಗ, ಫತ್ವಾ ಹೊರಡಿಸಿದಾಗ ಎಲ್ಲಿ ಸತ್ತು ಬಿದ್ದಿತ್ತು ಈ ಘನತೆ, ಸಭ್ಯತೆಯ ಮಾತು?
ಕಳೆದ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಆರಂಭವಾದ ಪ್ರಧಾನಿ ಮೋದಿಯವರ ಉತ್ತರ ಸುದೀರ್ಘ 2 ಗಂಟೆಗಳ ಕಾಲ ನಡೆದು ಮೂರು ಗಂಟೆಗೆ ಮುಕ್ತಾಯವಾದಾಗ ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ನಿರ್ಜೀವ ಭಾವ ಮೂಡಿತ್ತು, ಸಾಮಾನ್ಯವಾಗಿ ಸದಾ ಸಭ್ಯತೆಯ ಗೆರೆ ದಾಟಿಯೇ ಮಾತನಾಡುವ ಮಲ್ಲಿಕಾರ್ಜುನ ಖರ್ಗೆಯವರು ಪೆಚ್ಚುಮುಖ ಹಾಕಿಕೊಳ್ಳುವಷ್ಟು ದಾಳಿ ಮಾಡಿದ್ದರು ಮೋದಿ. ಮರುದಿನ ಸಂಜೆ ರಾಜ್ಯಸಭೆಯಲ್ಲಿ ಮೋದಿಯವರ ಉತ್ತರವಿತ್ತು. ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ನೋಟು ರದ್ದತಿಯ ಬಗ್ಗೆ ಭಾರೀ ಭಾರೀ ಮಾತನಾಡಿದ್ದರು. ಅವರನ್ನು ಎದುರಿಸಲು ಮೋದಿಯವರಿಗೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹುರುಪಿನಲ್ಲಿತ್ತು.
‘ಹೆಚ್ಚೂಕಡಿಮೆ ಕಳೆದ 35 ವರ್ಷಗಳಿಂದ ಭಾರತದ ಅರ್ಥವ್ಯವಸ್ಥೆ ಮತ್ತು ಆರ್ಥಿಕ ನೀತಿಗಳ ಮೇಲೆ ಡಾ. ಮನಮೋಹನ್ ಸಿಂಗ್ ಅತೀವ ಪ್ರಭಾವ ಬೀರಿದ್ದಾರೆ. ಎಷ್ಟಾದರೂ ಲಕ್ಷ ಕೋಟಿ ಹಗರಣಗಳು ಸಂಭವಿಸಲಿ, ಅವರ ಮೇಲೆ ಸಣ್ಣ ಭ್ರಷ್ಟಾಚಾರ ಹಗರಣವೂ ಇಲ್ಲ! ರೈನ್‌ಕೋಟ್ ಹಾಕಿಕೊಂಡು ಸ್ನಾನ ಮಾಡುವ ಕಲೆಯನ್ನು ಬಹುಶಃ ಡಾ. ಸಿಂಗ್ ಅವರಿಂದ ಮಾತ್ರ ಕಲಿಯಬಹುದಷ್ಟೇ!’ಪ್ರಧಾನಿ ಮೋದಿ ಹೇಳಿದ್ದು ಇಷ್ಟೇ. ಎರಡೇ ನಿಮಿಷದಲ್ಲಿ ಸಭಾತ್ಯಾಗ ಮಾಡಿ ಪಲಾಯನ ಮಾಡಿತು ಕಾಂಗ್ರೆಸ್. ಎರಡೇ ನಿಮಿಷದಲ್ಲಿ ಇಂಥ ಹೊಡೆತ ಬಿದ್ದರೆ, ಮುಂದಿನ ಒಂದೂವರೆ ಗಂಟೆಗಳಲ್ಲಿ ಇನ್ನು ಎಂತೆಂಥಾ ಹೊಡೆತ ಬೀಳಬಹುದೋ ಎಂಬ ಭಯ ಕಾಡಿತ್ತು! ರಾಜ್ಯಸಭೆಯಿಂದ ಹೊರ ನಡೆದ ಕಾಂಗ್ರೆಸ್, ಪ್ರಧಾನಿ ಸ್ಥಾನದ ಘನತೆ, ಗೌರವ, ಸಭ್ಯತೆ, ಸಂಸ್ಕಾರಗಳ ಮಾತನಾಡುತ್ತಿದೆ!
1962ರ ಯುದ್ಧದಲ್ಲಿ ಅಕ್ಸಯ್-ಚಿನ್ ಚೀನಾ ಪಾಲಾದಾಗ, ತಪ್ಪನ್ನು ಒಪ್ಪಿಕೊಳ್ಳುವ ಬದಲು ಅಲ್ಲಿ ಹುಲ್ಲುಕಡ್ಡಿಯೂ ಹುಟ್ಟುವುದಿಲ್ಲ (Not a blade of grass grows in Aksai Chin) ಎಂದು ತಾನು ಪ್ರಧಾನಿ ಎಂಬುದನ್ನೂ ಮರೆತು ಲಜ್ಜೆಗೆಟ್ಟು ಹೇಳಿದ್ದ ನೆಹರು ಮತ್ತು 1984ರ ಸಿಖ್ ಹತ್ಯಾಕಾಂಡವನ್ನು ಒಂದು ದೊಡ್ಡ ಮರ ಉರುಳಿದಾಗ ಭೂಮಿ ಅಲುಗುವುದು ಸಹಜ ಎಂದು ಸಮರ್ಥಿಸಿಕೊಂಡಿದ್ದ ರಾಜೀವ್ ಗಾಂಧಿಯವರನ್ನು ಆದರ್ಶವಾಗಿಟ್ಟುಕೊಂಡಿರುವ ಕಾಂಗ್ರೆಸ್‌ನಿಂದ ನೀಚತನವನ್ನಲ್ಲದೆ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ?
ರೈನ್‌ಕೋಟ್ ಹಾಕಿಕೊಂಡು ಸ್ನಾನ ಮಾಡುವ ಕಲೆಯನ್ನು ಬಹುಶಃ ಡಾ. ಸಿಂಗ್‌ರಿಂದ ಮಾತ್ರ ಕಲಿಯಬಹುದಷ್ಟೇ ಎಂಬುದನ್ನೇ ಘನತೆಗೆ ತಕ್ಕುದಲ್ಲದ ಮಾತುಗಳು ಎನ್ನುವುದಾದರೆ, 1998ರಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಮಾತನಾಡುತ್ತಾ ಪ್ರಧಾನಿ ಅಟಲ್ ಬಿಹಾರಿಯವರನ್ನು ‘ಗದ್ದಾರ್’ (ದೇಶದ್ರೋಹಿ) ಎಂದು, 2007ರಲ್ಲಿ ಮೋದಿಯವರನ್ನು ‘ಸಾವಿನ ವ್ಯಾಪಾರಿ’ ಎಂದು ಸೋನಿಯಾ ಗಾಂಧಿಯವರು ಕರೆದಾಗ ಅವು ಘನವೆತ್ತ ಮಾತುಗಳಾಗಿದ್ದವೇ? ನರೇಂದ್ರ ಮೋದಿ ಭಾರತದ ಪ್ರಧಾನಿಯಂತೂ ಆಗೋಲ್ಲ, ಎಐಸಿಸಿ ಸಭೆಯಲ್ಲಿ ಮೋದಿ ಟೀ ಮಾರಲು ಒಪ್ಪಿದರೆ ಅದಕ್ಕೆ ಅವಕಾಶ ಮಾಡಿ ಕೊಡುತ್ತೇವೆ ಎಂದು ಮಣಿಶಂಕರ್ ಅಯ್ಯರ್ ಜರಿದಾಗ, ಮೋದಿ ಅವರು ‘ಆರೆಸ್ಸೆಸ್’ನ ಗೂಂಡಾ, ರಾಜನಾಥ್ ಸಿಂಗ್ ಅವರ ಗುಲಾಮ ಎಂದು ಬೇಣಿ ಪ್ರಸಾದ್ ವರ್ಮಾ ತುಚ್ಛ ಮಾತುಗಳನ್ನಾಡಿದಾಗ, ಮೋದಿಯವರ ವಿರುದ್ಧ ಫತ್ವಾ ಹೊರಡಿಸಿದಾಗ ಎಲ್ಲಿ ಹೋಗಿತ್ತು ಈ ಘನತೆ, ಗೌರವ, ಸಾರ್ವಜನಿಕ ಜೀವನದ ಸಭ್ಯತೆಯ ಮಾತುಗಳು?ಒಂದು ಮಾತಿಗೆ ಇಷ್ಟೆಲ್ಲಾ ಬೊಬ್ಬೆ ಹಾಕುತ್ತಿದ್ದಾರಲ್ಲಾ, 2002ರಿಂದ ಇದುವರೆಗೂ ಸತತ 15 ವರ್ಷಗಳಿಂದ ಎಲ್ಲ ಥರದ ಟೀಕೆ, ನಿಂದನೆ, ಬೈಗುಳ, ಅಸಭ್ಯ ಮಾತುಗಳಿಗೆ ಗುರಿಯಾಗುತ್ತಾ ಬಂದಿರುವ ನರೇಂದ್ರ ಮೋದಿಯವರ ಸ್ಥಾನದಲ್ಲಿ ನಿಂತು ಅವರಿಗೆ ಏನನಿಸಬಹುದು ಎಂದು ಒಮ್ಮೆಯಾದರೂ ಯೋಚಿಸಿದ್ದಾರಾ?
You may write me down in history
With your bitter, twisted lies,
You may trod me in the very dirt
But still, like dust, I’ll rise.
Does my sassiness upset you?
Why are you beset with gloom?
‘Cause I walk like I’ve got oil wells
Pumping in my living room.
Just like moons and like suns,
With the certainty of tides,
Just like hopes springing high,
Still I’ll rise. Did you want to see me broken?
Bowed head and lowered eyes?
Shoulders falling down like teardrops.
Weakened by my soulful cries.
Does my haughtiness offend you?
Don’t you take it awful hard
‘Cause I laugh like I’ve got gold mines
Diggin’ in my own back yard.
You may shoot me with your words,
You may cut me with your eyes,
You may kill me with your hatefulness,
But still, like air, I’ll rise.
ಅಮೆರಿಕದ ಕಪ್ಪುವರ್ಣೀಯ ಕವಯತ್ರಿ ಮಾಯಾ ಏಂಜೆಲೋ ಬರೆದ”Still I’ll rise’ ಎಂಬ ಈ ಕವಿತೆಯನ್ನು ಓದಿದಾಗಲೆಲ್ಲ ಪ್ರಧಾನಿ ನರೇಂದ್ರ ಮೋದಿ ಕಣ್ಣಮುಂದೆ ಬರುತ್ತಾರೆ. ಹಾಗೆಯೇ ಮೋದಿಯವರ ಬಗ್ಗೆ ಬರೆಯಲು ಕುಳಿತಾಗಲೆಲ್ಲ ಮಾಯಾ ಏಂಜೆಲೋಳ ಈ ಕವಿತೆ ನೆನಪಾಗುತ್ತದೆ. ಆಕೆ ಬರೆದಿದ್ದು ವರ್ಣಭೇದ ನೀತಿಯ ವಿರುದ್ಧ, ಶ್ವೇತ ವರ್ಣೀಯರ ಮೇಲು-ಕೀಳೆಂಬ ಭಾವನೆಯನ್ನು ಧಿಕ್ಕರಿಸಿಯಾದರೂ ಅದರಲ್ಲಿನ ಬಹುತೇಕ ಪದ, ಪಂಕ್ತಿಗಳು ಮೋದಿಯವರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಬರೆದಂತೆ ಭಾಸವಾಗುತ್ತವೆ! ಅದರಲ್ಲೂ ಕವಿತೆಯ ಮೊದಲ ಪಲ್ಲವಿಯ ಮೊದಲೆರಡು ಸಾಲುಗಳಾದ “You may write me down in history With your bitter, twisted lies’ ಯಾರಿಗಾದರೂ ನೂರಕ್ಕೆ ನೂರರಷ್ಟು ಅನ್ವಯವಾಗುವುದೇ ಆದರೆ ಅದು ನರೇಂದ್ರ ಮೋದಿಯವರಿಗೆ ಮಾತ್ರ. ಕಳೆದ 15 ವರ್ಷಗಳಿಂದ, ಅಂದರೆ 2002ರಿಂದ ಮೋದಿಯವರ ವಿರುದ್ಧ ಮಾಡದ ಅಪವಾದ, ಆರೋಪಗಳೇ ಇಲ್ಲ. ಅವರನ್ನು ದೂಷಿಸುವಲ್ಲಿ ಬಳಸದೇ ಉಳಿದ ಕೆಟ್ಟ ಶಬ್ದಗಳೂ ಇಲ್ಲ.
ಕಾಂಗ್ರೆಸ್ ಹಾಗೂ ಕಾಂಗ್ರೆಸ್‌ನಿಂದ ಕುಮ್ಮಕ್ಕು ಪಡೆದಿರುವ ಮಾಧ್ಯಮದ ಬಹುದೊಡ್ಡ ವರ್ಗ ಬಹಳ ಜತನದಿಂದ ಮೋದಿ ಚಾರಿತ್ರ್ಯವಧೆ ಕೆಲಸ ಮಾಡಿಕೊಂಡು ಬರುತ್ತಿದೆ. ಇಷ್ಟಾಗಿಯೂ ಅವರ ಉದ್ದೇಶ ಈಡೇರಿಲ್ಲ. ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ಚುನಾವಣೆಯಲ್ಲೂ ಮೂರನೇ ಎರಡರಷ್ಟು ಬಹುಮತದಿಂದ ಪುನರಾಯ್ಕೆಯಾಗುತ್ತಾ ಬಂದರು. ಅಷ್ಟು ಮಾತ್ರವಲ್ಲ, 2014ರ ಲೋಕಸಭೆ ಚುನಾವಣೆಯಲ್ಲಿ ವಿರೋಧಿಗಳು ಮಾತ್ರವಲ್ಲ, ಸ್ವಪಕ್ಷೀಯ ಶತ್ರುಗಳನ್ನೂ ಮೆಟ್ಟಿ ಕಳೆದ 30 ವರ್ಷಗಳಲ್ಲಿ ಒಂದು ಪಕ್ಷ ಸ್ವಂತ ಶಕ್ತಿಯಿಂದ ಕೇಂದ್ರದಲ್ಲಿ ಅಧಿಕಾರ ಬಂದ ಕೀರ್ತಿಯನ್ನು ಬಿಜೆಪಿಗೆ ತಂದುಕೊಟ್ಟು ಪ್ರಧಾನಿಯಾದರು! ಇಷ್ಟಾಗಿಯೂ ಮಾಧ್ಯಮಗಳು ಹಾಗೂ ವಿರೋಧಿಗಳಿಂದ ಅವರ ಮೇಲಿನ ಆಕ್ರಮಣ ನಿಂತಿಲ್ಲ.
2012ರ ಗುಜರಾತ್ ಚುನಾವಣೆಗೆ ಮುನ್ನಾ ಸನ್ನಿವೇಶಕ್ಕೆ ಸ್ವಲ್ಪ ಹೋಗೋಣ. ಡಿಸೆಂಬರ್‌ನಲ್ಲಿ ಗುಜರಾತ್ ವಿಧಾನಸಭೆ ಚುನಾವಣೆಯಿದ್ದು, 182 ಸದಸ್ಯ ಸಂಖ್ಯೆಯ ಸದನದಲ್ಲಿ ಮೋದಿ ಮತ್ತೆ ಬಹುಮತ ಪಡೆಯುವುದು ನೂರಕ್ಕೆ ನೂರರಷ್ಟು ಖಚಿತವಾಗಿತ್ತು. ಬಹುಮತಕ್ಕೆ 92 ಸೀಟುಗಳನ್ನು ಗೆದ್ದರೆ ಸಾಕು. ಆದರೆ 100ಕ್ಕೂ ಕಡಿಮೆ ಸ್ಥಾನಗಳು ಬಂದರೆ ಅದನ್ನು ಮೋದಿ ಪರಾಜಯ ಎಂದೇ ಬಿಂಬಿಸಲು ಯೋಚಿಸಿದರು. ಆ ಕಾರಣಕ್ಕಾಗಿಯೇ ಯಾವ ಮಟ್ಟಕ್ಕಾದರೂ ಇಳಿದು ಬಿಜೆಪಿ ಬಲಾಬಲವನ್ನು 100ಕ್ಕೂ ಕಡಿಮೆಗೊಳಿಸಲು ಕಾಂಗ್ರೆಸ್ ಹವಣಿಸಿತು. ಅದೇ ಸಂದರ್ಭದಲ್ಲಿ ‘ದಿ ಸಂಡೇ ಗಾರ್ಡಿಯನ್’ನಲ್ಲಿ ಮಾಧವ ನಳಪತ್ ಬರೆದ Ü”Congress plans sleaze campaign against Modi’, ಟೈಮ್ಸ್ ಬ್ಲಾಗ್‌ನಲ್ಲಿ ಮಿನಾಝ್ ಮರ್ಚೆಂಟ್ ಬರೆದ “Target Modi’ ಹಾಗೂ ‘ದಿ ಇಂಟರ್ ನ್ಯಾಷನಲ್ ಹೆರಾಲ್ಡ್ ಟ್ರಿಬ್ಯೂನ್’ನ ಭಾರತೀಯ ಆವೃತ್ತಿಯಲ್ಲಿ ಆಕಾರ್ ಪಟೇಲ್ ಬರೆದ “Spent guns target Modi’ ಲೇಖನಗಳನ್ನು ಇಂದಿಗೂ ಓದಿದರೆ ಮೋದಿಯವರನ್ನು ಹಣಿಯಲು ಕಾಂಗ್ರೆಸ್ ಎಂತೆಂಥಾ ಹೀನ ಹಾದಿ ಹಿಡಿದಿತ್ತು ಎಂಬುದು ಗೊತ್ತಾಗುತ್ತದೆ.
2014ರಲ್ಲಿ ಮೋದಿಯವರು ಪ್ರಧಾನಿಯಾಗಿದ್ದನ್ನು ಸಹಿಸಿಕೊಳ್ಳಲಾಗದ ಮಾಧ್ಯಮಗಳು ಮೊದಲು ಇನ್‌ಟಾಲರೆನ್ಸ್ ನ ವರಾತ ತೆಗೆದವು. ಬಳಿಕ ರೋಹಿತ್ ವೇಮುಲ, ಅದಾದ ನಂತರ ಕನ್ಹಯ್ಯ ಕುಮಾರನೆಂಬ ಸೋಮಾರಿಯನ್ನು ಹೀರೋನಂತೆ ಬಿಂಬಿಸಿದವು. ಕೊನೆಗೆ ಹಾರ್ದಿಕ್ ಪಟೇಲ್, ಕೇಜ್ರಿವಾಲ್. ಎಲ್ಲಾ ಸಾಕಾಗಿ ಸಭ್ಯತೆ, ಘನತೆಯ ಪ್ರಶ್ನೆಗಳನ್ನೆತ್ತಿಕೊಂಡು ಕುಟುಕಲು ಪ್ರಯತ್ನಿಸುತ್ತಿವೆ. ಆದರೆ ಮೋದಿ ಜಗ್ಗುವ ವ್ಯಕ್ತಿಯಲ್ಲ. ಸಾಮಾನ್ಯವಾಗಿ ಎಲ್ಲ ಯಶಸ್ವಿ ರಾಜಕಾರಣಿಗಳ ಹಿಂದೆ ಒಂದು ಚಾಣಾಕ್ಷ ಮಿದುಳು ಅಥವಾ ಒಳ್ಳೆಯ ಸಲಹೆಗಾರರು ಇರುತ್ತಾರೆ. ಮಹಾರಾಜ ಚಂದ್ರಗುಪ್ತನ ಹಿಂದೆ ಚಾಣಕ್ಯ, ಹಕ್ಕ-ಬುಕ್ಕರ ಹಿಂದೆ ಯತಿಶ್ರೇಷ್ಠ ವಿದ್ಯಾರಣ್ಯರು, ಶಿವಾಜಿ ಹಿಂದೆ ಸಮರ್ಥ ರಾಮದಾಸರು, ವಿವೇಕಾನಂದರ ಹಿಂದೆ ರಾಮಕೃಷ್ಣ ಪರಮಹಂಸರು, ನೆಹರು ಹಿಂದೆ ಗಾಂಧಿ ಇದ್ದಂತೆ. ಈಗಿನ ರಾಜಕಾರಣಿಗಳನ್ನು ತೆಗೆದುಕೊಂಡರೂ ಮಾಯಾವತಿ ಹಿಂದೆ ಸತೀಶ್ಚಂದ್ರ ಮಿಶ್ರಾ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಿಂದೆ ಪ್ಯಾರಿಮೋಹನ್ ಮಹಾಪಾತ್ರ ಇದ್ದಾರೆ. ಮುಲಾಯಂ ಸಿಂಗ್ ಹಿಂದೆ ಜ್ಞಾನೇಶ್ವರ್ ಮಿಶ್ರಾ, ತದನಂತರ ಅಮರ್‌ಸಿಂಗ್ ಇದ್ದರು. ಎನ್.ಟಿ. ರಾಮ್‌ರಾವ್ ಹಾಗೂ ಚಂದ್ರಬಾಬು ನಾಯ್ಡು ಹಿಂದೆ ರಾಮೋಜಿರಾವ್ ತಲೆ ಕೆಲಸ ಮಾಡುತ್ತಿದ್ದರೆ, ಕರುಣಾನಿಧಿ ಕೂಡ ಎಸ್. ಗುಹನ್ ಹಾಗೂ ಪ್ರೊ. ನಾಗನಾಥನ್ ಅವರನ್ನು ನೆಚ್ಚಿಕೊಂಡಿದ್ದರು. ಲಾಲು ಪ್ರಸಾದ್ ಯಾದವ್ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಅವರ ಬೆನ್ನಹಿಂದೆ ಇದ್ದವರು ಹಾಗೂ ನಿಷ್ಠೆ ಬದಲಿಸಿ ನಿತೀಶ್ ಕುಮಾರ್ ಹಿಂದೆ ಈಗ ಇರುವುದು ಶಿವಾನಂದ್ ತಿವಾರಿ. ಜಯಲಲಿತಾ ಹಿಂದೆ ಚೋ. ರಾಮಸ್ವಾಮಿ, ಅಟಲ್ ಬಿಹಾರಿ ವಾಜಪೇಯಿಯವರ ಹಿಂದೆ ಬ್ರಜೇಶ್ ಮಿಶ್ರಾ. ಈ ನಾಯಕರು ತಮ್ಮ ಚಾಣಕ್ಯರನ್ನು ಕೇಳದೇ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಅವರ ಒಂದೊಂದು ನಡೆಯ ಹಿಂದೆಯೂ ಈ ಚಾಣಕ್ಯರ ತಲೆ ಕೆಲಸ ಮಾಡಿರುತ್ತದೆ.
ಆದರೆ ಚಾಣಕ್ಯ-ಚಂದ್ರಗುಪ್ತ ಒಬ್ಬನೇ ವ್ಯಕ್ತಿಯಲ್ಲಿದ್ದರೆ ಆತ ನರೇಂದ್ರ ಮೋದಿಯಾಗುತ್ತಾನೆ! ಹಾಗಾಗಿಯೇ ನೀವು ಘನತೆಯ ಗೆರೆ ದಾಟಿದರೆ, ಅದಕ್ಕೆ ದೊರೆಯುವ ಪ್ರತಿಕ್ರಿಯೆಯನ್ನೂ ಕೇಳಿಸಿಕೊಳ್ಳುವ ಧೈರ್ಯ ನಿಮಗಿರಬೇಕಾಗುತ್ತದೆ. ಅದೇ ನಾಣ್ಯದಲ್ಲಿ ವಾಪಸ್ ಕೊಡುವ ತಾಕತ್ತು ನಮಗಿದೆ ಎಂದು ಮೋದಿ ಹೇಳಿರುವುದು ಸುಖಾಸುಮ್ಮನೆಯಲ್ಲ, ಜೋಕೆ!
ಮುಳುಗೇಳುವ ಸೂರ್ಯ, ಚಂದ್ರರಂತೆ
ಉಕ್ಕೇರುವ ಸಮದ್ರದ ಅಲೆಗಳಂತೆ
ಆಸೆಯ ಸೆಲೆ ಚಿಮ್ಮುವಂತೆ
ನಾ ಎದ್ದು ಬರುವೆ!
ನಿನ್ನ ಪದಗಳು ನನ್ನನ್ನು ಕೊಲ್ಲಬಹುದು
ನಿನ್ನ ನೋಟ ನನ್ನ ಸುಡಬಹುದು
ನಿನ್ನ ಈರ್ಷೆಗೆ ನಾ ಬಲಿಯಾಗಬಹುದು
ಆದರೂ ಸುಳಿಯಾಗಿ ಬರುವ ತಂಗಾಳಿಯಂತೆ
ನಾ ಎದ್ದು ಬರುವೆ.
ಎಂಬ ಮಾಯಾ ಏಂಜೆಲೋಳ ಕವಿತೆಯಂತೆ ನರೇಂದ್ರ ದಾಮೋದರ ದಾಸ್ ಮೋದಿಯವರೂ ಶತ್ರುಗಳನ್ನು ಮೆಟ್ಟಿ ಈ ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ಯುತ್ತಾರೆ, ಅನುಮಾನ ಬೇಡ.
2017 ರ ಅಂತರಾಷ್ಟ್ರೀಯ ಯೋಗ ದಿನದ ಉದ್ಘಾಟನೆಗೆ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜಿ ರವರಿಗೆ ಆಹ್ವಾನ
Pratap Simha's Blog
- Pratap Simha's profile
- 58 followers
