Pratap Simha's Blog, page 28

December 30, 2016

December 24, 2016

ನ್ಯಾಶ್, ವಿಲ್‌ರನ್ನು ರಾಮಾನುಜನ್‌ಗೆ ಹೋಲಿಸಬಹುದು ಎನ್ನುವುದಾದರೆ ನಮ್ಮ ರಾಮಾನುಜನ್ ಎಂಥ ಮಹಾನ್ ವ್ಯಕ್ತಿಯಿದ್ದಿರಬಹುದು?!

ನ್ಯಾಶ್, ವಿಲ್‌ರನ್ನು ರಾಮಾನುಜನ್‌ಗೆ ಹೋಲಿಸಬಹುದು ಎನ್ನುವುದಾದರೆ ನಮ್ಮ ರಾಮಾನುಜನ್ ಎಂಥ ಮಹಾನ್ ವ್ಯಕ್ತಿಯಿದ್ದಿರಬಹುದು?!





“He can be compared to a great mathematician like Srinivasa Ramanujan!’ಹಾಗಂತ ಅಮೆರಿಕದ ಖ್ಯಾತ ಗಣಿತಶಾಸ್ತ್ರಜ್ಞ ಜಾನ್ ಫೋರ್ಬ್‌ಸ್‌ ನ್ಯಾಶ್ ಅವರನ್ನು ಉಲ್ಲೇಖಿಸಿ “Beautiful Mind’ ಎಂಬ ಅವರ ಜೀವನಚರಿತ್ರೆಯಲ್ಲಿ ಹೇಳಲಾಗುತ್ತದೆ. 1997ರಲ್ಲಿ ಬಿಡುಗಡೆಯಾದ “Good Will Hunting’  ಎಂಬ ಚಿತ್ರದಲ್ಲೂ ಅದರ ಮುಖ್ಯ ಪಾತ್ರಧಾರಿ ವಿಲ್ ಹಂಟಿಂಗ್ ಬಗ್ಗೆ  “Will might have the potential to be as great a mathematician as the legendary Srinivasa Ramanujan’  ಎಂಬ ಹೋಲಿಕೆ ಬರುತ್ತದೆ! ಅಂದರೆ ನಮ್ಮ ಶ್ರೀನಿವಾಸ ರಾಮಾನುಜನ್ ಎಂಥ ಮಹಾನ್ ವ್ಯಕ್ತಿಯಾಗಿದ್ದಿರಬಹುದು? ನೀವೇ ಯೋಚನೆ ಮಾಡಿ, ‘ಸಚಿನ್ ತೆಂಡೂಲ್ಕರ್‌ನನ್ನು ಡಾನ್ ಬ್ರಾಡ್ಮನ್‌ಗೆ ಹೋಲಿಸಬಹುದು ಅಂದರೆ’ ಡಾನ್ ಬ್ರಾಡ್ಮನ್  Bench mark ಎಂದಂತಾಯಿತು. ಅದನ್ನೇ ಸರಳವಾಗಿ ಹೇಳುವುದಾದರೆ 100 ಅಂಕಗಳಿಗೆ ಪರೀಕ್ಷೆ ನಡೆಯುತ್ತಿದೆ ಎಂದಾದರೆ ಗರಿಷ್ಠ ಮಿತಿಯಾದ ‘100’  Bench mark! ಅಷ್ಟಕ್ಕೂ ನೂರಕ್ಕಿಂತ ಹೆಚ್ಚು ಅಂಕ ಪಡೆಯಲು ಸಾಧ್ಯವಿಲ್ಲ.

ಹಾಗಿರುವಾಗ ‘ಗುಡ್ ವಿಲ್ ಹಂಟಿಂಗ್’ ಚಿತ್ರದಲ್ಲಿ ಬರುವ ಯುವ ಗಣಿತಶಾಸ್ತ್ರಜ್ಞ ವಿಲ್ ಹಂಟಿಂಗ್‌ನದ್ದು ಕಾಲ್ಪನಿಕ ಪಾತ್ರವೇ ಆಗಿದ್ದರೂ ಆತ ಶ್ರೀನಿವಾಸ ರಾಮಾನುಜನ್ ಅವರಂಥ ಮಹಾನ್ ಗಣಿತಶಾಸ್ತ್ರಜ್ಞನಾಗುವ ಶಕ್ಯತೆ ಹೊಂದಿದ್ದಾನೆ ಎನ್ನುತ್ತಾರೆಂದರೆ ರಾಮಾನುಜನ್ ಅವರೇ  Bench mark ಎಂದಾಗುತ್ತದಲ್ಲವೆ? ಅಷ್ಟೇ ಅಲ್ಲ, 1994ರಲ್ಲಿ ಅರ್ಥಶಾಸ್ತ್ರಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಮ್ಯಾಥಮೆಟೀಶಿಯನ್ ಜಾನ್ ನ್ಯಾಶ್ ಅವರನ್ನು ‘ಮಹಾನ್ ಗಣಿತಜ್ಞ ರಾಮಾನುಜನ್‌ರಿಗೆ ಹೋಲಿಸಬಹುದು’ಎನ್ನುತ್ತಾರೆಂದರೆ ರಾಮಾನುಜನ್ ಎಷ್ಟು ಗ್ರೇಟ್ ಇರಬಹುದು? ಅಬ್ಬಾ! ಅವರದ್ದು ಗಣಿತದ ಇತಿಹಾಸದಲ್ಲೇ ಅತ್ಯಂತ ಕುತೂಹಲಕಾರಿ ಕಥೆ. ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿದ್ದ ಜಿ.ಎಚ್. ಹಾರ್ಡಿಂಗ್ ಅದಾಗಲೇ ವಿಶ್ವವಿಖ್ಯಾತ ಗಣಿತ ಶಾಸ್ತ್ರಜ್ಞನೆನಿಸಿಕೊಂಡಿದ್ದರು. ಅಂಥ ಗಣಿತಶಾಸ್ತ್ರಜ್ಞರಿಗೆ ಉತ್ತರ ಬಯಸಿ ಪತ್ರಗಳು ಬರುವುದು ಸಹಜ.

ಭಾರತದಿಂದಲೂ ಒಂದು ಪತ್ರ ಬಂದಿತ್ತು. ಮದ್ರಾಸ್ ಪೋರ್ಟ್ ಟ್ರಸ್ಟ್ ನಲ್ಲಿ ಗುಮಾಸ್ತರಾಗಿರುವ ಶ್ರೀನಿವಾಸ ರಾಮಾನುಜನ್ ಎಂಬ ಹೆಸರಿನಲ್ಲಿ ಬಂದಿದ್ದ ಆ ಹತ್ತು ಪುಟಗಳ ಪತ್ರದಲ್ಲಿ 120 ಥೇರಮ್‌ಗಳಿದ್ದವು ಹಾಗೂ ಅವುಗಳನ್ನು ರೂಪಿಸಿದ್ದು ತಾನೇ ಎಂದು ಪ್ರತಿಪಾದಿಸಲಾಗಿತ್ತು. ನಿರಾಸಕ್ತಿಯಿಂದಲೇ ಅವುಗಳತ್ತ ಕಣ್ಣುಹಾಯಿಸಿದ ಹಾರ್ಡಿ ಪತ್ರವನ್ನು ಪಕ್ಕಕ್ಕೆ ಹಾಕಿದರು. ಆದರೆ ಆ ಪತ್ರದಲ್ಲಿ ಗಣಿತದ ಸೂತ್ರಗಳ ಬಗ್ಗೆ ಬರೆಯಲಾಗಿದ್ದ ವಿಷಯಗಳು ಹಾರ್ಡಿಯವರು ಮತ್ತೆ ಅದರತ್ತ ದೃಷ್ಟಿಹಾಯಿಸುವಂತೆ ಮಾಡಿದವು. ಈ ಬಾರಿ ಸಹ ಗಣಿತಶಾಸ್ತ್ರಜ್ಞ ಜೆ.ಇ. ಲಿಟ್ಲಿ‌ವುಡ್ ಅವರನ್ನೂ ಬರಮಾಡಿಕೊಂಡ ಹಾರ್ಡಿ, ರಾಮಾನುಜನ್ ಕಳುಹಿಸಿದ್ದ ಪತ್ರವನ್ನು ಕೂಲಂಕಷವಾಗಿ ಪರಾಮರ್ಶೆ ಮಾಡಿದರು. 1913ರಲ್ಲಿ ನಡೆದ ಈ ಘಟನೆ ಗಣಿತ ಜಗತ್ತಿನ ಹೊಸ ಮೈಲುಗಲ್ಲು. ರಾಮಾನುಜನ್ ವಿವರಿಸಿದ್ದ ಕೆಲವು ಥೇರಮ್‌ಗಳು ವಿಚಿತ್ರವಾಗಿ ಕಾಣುತ್ತಿದ್ದರೂ ಅವುಗಳಲ್ಲಿ ನಿಜಾಂಶ ವಿಲ್ಲದೇ ಹೋಗಿದ್ದರೆ ಅವುಗಳನ್ನು ಸೃಷ್ಟಿಸುವ ಕಲ್ಪನೆಯೇ ಹೊಳೆಯುತ್ತಿರಲಿಲ್ಲ ಎಂಬುದು ಹಾರ್ಡಿಯವರಿಗೆ ಮನವರಿಕೆ ಯಾಯಿತು.

ಹೀಗೆ ಮದ್ರಾಸ್‌ನ ಯಾವುದೋ ಮೂಲೆಯಲ್ಲಿ ಕೊಳೆಯುತ್ತಿದ್ದ ಪ್ರತಿಭೆಗೆ ಜಾಗತಿಕ ಮನ್ನಣೆ ದೊರೆಯು ವಂತಾಯಿತು. 1887, ಡಿಸೆಂಬರ್ 22ರಂದು ತಮಿಳುನಾಡಿನಲ್ಲಿ ಜನಿಸಿದ ರಾಮಾನುಜನ್ ಅವರದ್ದು ತೀರಾ ಬಡ ಕುಟುಂಬ. ಕುಂಬಕೋಣಂನಲ್ಲಿ ಅಕೌಂಟೆಂಟ್ ಆಗಿದ್ದ ಅವರ ತಂದೆಗೆ ಬರುತ್ತಿದ್ದ ಸಂಬಳದಲ್ಲಿ ಕುಟುಂಬ ನಿರ್ವಹಣೆಯೇ ಕಷ್ಟವಾಗಿತ್ತು. ಆದರೆ ಓದಿನಲ್ಲಿ ಮುಂದಿದ್ದ ರಾಮಾನುಜನ್, 1903ರಲ್ಲಿ ನಡೆದ ಹೈಸ್ಕೂಲ್‌ನ ಅಂತಿಮ ಪರೀಕ್ಷೆಯಲ್ಲಿ ಮೊದಲಿಗರಾಗಿ ಪಾಸಾದ ಕಾರಣ ಕಾಲೇಜಿಗೆ ಸೇರಲು ಸ್ಕಾಲರ್‌ಶಿಪ್ ಸಿಕ್ಕಿತು. ಅದರಲ್ಲೂ A Synopsis of Elementary Results in Pure and Applied Mathematics  ಎಂಬ ಪುಸ್ತಕ ರಾಮಾನುಜನ್ ಅವರನ್ನು ಚಿಂತೆಗೆ ಹಚ್ಚಿತು.

ಆ ಪುಸ್ತಕ ಗಣಿತದ ಲೆಕ್ಕಗಳ ಫಲಿತಾಂಶವನ್ನೇನೋ ನೀಡುತ್ತಿತ್ತು. ಆದರೆ ಅದರಲ್ಲಿ ಪ್ರೂಫ್‌ಗಳೇ ಇರಲಿಲ್ಲ. ಅಂದರೆ ತರ್ಕ ಸಮೇತ ವಿವರಿಸುವ ಬದಲು ಬರೀ ಫಲಿತಾಂಶಗಳನ್ನಷ್ಟೇ ನೀಡಲಾಗಿತ್ತು. ಹಾಗಾಗಿ ಸ್ವತಃ ಲಾಜಿಕ್ ಹುಡುಕಲು ಹೊರಟ ರಾಮಾನುಜನ್ ಗಣಿತದೊಳಗೇ ಮುಳುಗಿಹೋದರು. ಹಾಗೆ ಗಣಿತದಲ್ಲಿ ಅತಿ ಹೆಚ್ಚು ಅಂಕ ಪಡೆದರೂ ಇತರ ಸಬ್ಜೆಕ್ಟ್‌ಗಳನ್ನು ನಿರ್ಲಕ್ಷಿಸಿದ ಕಾರಣ ಪರೀಕ್ಷೆಯಲ್ಲಿ ಪಲ್ಟಿ ಹೊಡೆದರು. ಮರಳಿ ಯತ್ನ ಮಾಡಿದರೂ ಪಾಸಾಗಲಿಲ್ಲ. ಜತೆಗೆ ಸ್ಕಾಲರ್‌ಶಿಪ್ ನಿಂತುಹೋದ ಕಾರಣ ಓದನ್ನೇ ನಿಲ್ಲಿಸಬೇಕಾಗಿ ಬಂತು. ಈ ನಡುವೆ ಇನ್ನಿಬ್ಬರು ತಮ್ಮಂದಿರು ಜನಿಸಿದ ಕಾರಣ ಮನೆಯ ಹಣಕಾಸು ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಫೇಲಾಗಿದ್ದ ಮಗನ ಬಗ್ಗೆ ಸಿಟ್ಟಿಗೆದ್ದ ಅಮ್ಮ-ಅಪ್ಪ ಕನಿಷ್ಠ ಮನೆಪಾಠವನ್ನಾದರೂ ಹೇಳಿಕೊಟ್ಟು ಒಂದಿಷ್ಟು ಸಂಪಾದನೆ ಮಾಡು ಎಂದರು. ಆದರೆ ರಾಮಾನುಜನ್ ಅವರ ಉತ್ಕೃಷ್ಟವಾದ ಮನೆಪಾಠ ಮಕ್ಕಳ ತಲೆಯೊಳಕ್ಕೇ ಹೋಗುತ್ತಿರಲಿಲ್ಲ.

ಆಸ್ಟ್ರೇಲಿಯಾದ ಬ್ರೆಟ್ ಲೀಯ ಬೌನ್ಸರ್‌ನಂತೆ ತಲೆ ಮೇಲೇ ಹೋಗುತ್ತಿತ್ತು! ಮಕ್ಕಳು ಪಾಠಕ್ಕೆ ಬರುವುದನ್ನೇ ನಿಲ್ಲಿಸಿದರು. ಆದರೇನಂತೆ, ಮನೆಪಾಠ ಹೇಳಿಕೊಡುತ್ತಿದ್ದಾಗ ದೊರೆಯುತ್ತಿದ್ದ ಬಿಡುವಿನ ವೇಳೆಯಲ್ಲಿ ಗಣಿತದ ಲೆಕ್ಕಗಳನ್ನು ಬಿಡಿಸುತ್ತಿದ್ದ ರಾಮಾನುಜನ್, ಹೊಸ ಹೊಸ ಥಿಯರಮ್ ಬರೆಯಲು ಮನೆದೇವಿಯಾದ ‘ನಾಮಗಿರಿ ಲಕ್ಷ್ಮಿ’ಯೇ ತನಗೆ ಪ್ರೇರಣೆ ಎಂದು ಸ್ನೇಹಿತರ ಜತೆ ಹೇಳಿಕೊಳ್ಳುತ್ತಿದ್ದರು. ಇತ್ತ ಉದ್ಯೋಗವಿಲ್ಲದೆ ಹತಾಶರಾಗಿದ್ದ ರಾಮಾನುಜನ್ ಅವರ ಗಣಿತದ ದಾಹವನ್ನು ಅರಿತು ಸ್ನೇಹಿತರು, ಹಿತೈಷಿಗಳೇ ಅಷ್ಟಿಷ್ಟು ಸಹಾಯ ಮಾಡುತ್ತಿದ್ದರು. ಅಂಥ ಸಹಾಯ ಹಾಗೂ 1912ರಲ್ಲಿ ಮದ್ರಾಸ್ ಪೋರ್ಟ್ ಟ್ರಸ್ಟ್‌ನಲ್ಲಿ ದೊರೆತ ಗುಮಾಸ್ತನ ಹುದ್ದೆಯ ಬಲದಿಂದ ಹಲವಾರು ಥಿಯರಮ್‌ಗಳನ್ನು ಬರೆಯಲು ಸಾಧ್ಯವಾಯಿತು. ಅವುಗಳನ್ನು ಇಂಗ್ಲೆಂಡಿನಲ್ಲಿರುವ ಪರಿಣತರಿಗೆ ಕಳುಹಿಸಿ ಕೊಡು ಎಂದು ಸ್ನೇಹಿತರೇ ಒತ್ತಾಯಿಸಿದರು. ಆದರೆ ಮೂರು ಬಾರಿ ಕಳುಹಿಸಿದರೂ ಯಾವ ಉತ್ತರವೂ ಬರಲಿಲ್ಲ. ಕೊನೆಗೆ 1913, ಜನವರಿ 16ರಂದು ಜಿ.ಎಚ್. ಹಾರ್ಡಿಯವರಿಗೆ ಪತ್ರ ಬರೆದರು. ಅದು ರಾಮಾನುಜನ್ ಜೀವನವನ್ನು ಮಾತ್ರವಲ್ಲ, ಗಣಿತಶಾಸ್ತ್ರದ ಇತಿಹಾಸವನ್ನೇ ಬದಲಾಯಿಸಿ ಬಿಟ್ಟತು! ಇಂಗ್ಲೆಂಡಿಗೆ ಬರುವಂತೆ ಹಾರ್ಡಿಯವರಿಂದ ಕರೆ ಬಂತು. ಆದರೆ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದ್ದ ರಾಮಾನುಜನ್ ಸಾಗರೋಲ್ಲಂಘನ ಮಾಡಲು ಆತನ ಅಮ್ಮ ಕೋಮಲತಮ್ಮಾಳ್ ತೀವ್ರ ವಿರೋಧ ವ್ಯಕ್ತಪಡಿಸಿದಳು. ಹಾಗಾಗಿ ತಾತ್ಕಾಲಿಕ ತಡೆ ಸೃಷ್ಟಿಯಾಯಿತು.

ಆದರೇನಂತೆ ‘ಬೆಳಗ್ಗೆ ನಾನೊಂದು ಕನಸು ಕಂಡೆ. ಒಂದು ದೊಡ್ಡ ಕೊಠಡಿಯೊಳಗೆ ತನ್ನ ಮಗ ಕುಳಿತಿದ್ದ. ಆತನ ಸುತ್ತ ಯುರೋಪಿಯನ್ನರಿದ್ದರು. ಇದ್ದಕ್ಕಿದ್ದಂತೆಯೇ ಪ್ರತ್ಯಕ್ಷಳಾದ ನಾಮಗಿರಿ ದೇವಿ, ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಹೊರಟಿರುವ ನಿನ್ನ ಮಗನಿಗೆ ಅಡ್ಡಿಪಡಿಸಬೇಡ ಎಂದಳು’ ಎಂದ ಕೋಮಲತಮ್ಮಾಳ್ ಮಗನಿಗೆ ಅನುಮತಿ ನೀಡಿದಳು. 1914, ಏಪ್ರಿಲ್‌ನಲ್ಲಿ ಬ್ರಿಟನ್‌ಗೆ ಬಂದಿಳಿದ ರಾಮಾನುಜನ್, ಕೇಂಬ್ರಿಡ್ಜ್‌ನ ಟ್ರಿನಿಟಿ ಕಾಲೇಜು ಸೇರಿದರು. ಯಾರ ಸಹಾಯವೂ ಇಲ್ಲದೆ ತಮಗಿಷ್ಟ ಬಂದಹಾಗೆ ಗಣಿತವನ್ನು ಕರಗತ ಮಾಡಿಕೊಂಡಿದ್ದ ರಾಮಾನುಜನ್‌ಗೆ ಶಾಸ್ತ್ರಬದ್ಧವಾಗಿ ಗಣಿತವನ್ನು ಕಲಿಸಲು ಹಾರ್ಡಿಯವರೇ ಮುಂದಾದರು. ಆದರೆ ನಾನು ಹೇಳಿಕೊಟ್ಟಿದ್ದಕ್ಕಿಂತ ರಾಮಾನುಜನ್ ಅವರಿಂದ ಕಲಿತಿದ್ದೇ ಹೆಚ್ಚು ಎನ್ನುತ್ತಾರೆ ಹಾರ್ಡಿ.

ಐದು ವರ್ಷಗಳ ಕಾಲ ಬ್ರಿಟನ್‌ನಲ್ಲಿದ್ದ ರಾಮಾನುಜನ್ ಅವರ ಜತೆ ಸೇರಿದ ಹಾರ್ಡಿ ಗಣಿತ ಶಾಸ್ತ್ರದ ಇತಿಹಾಸದಲ್ಲೇ ಅತ್ಯುತ್ತಮ ಸಂಶೋಧನಾ ಪ್ರಬಂಧಗಳನ್ನು ಬರೆದು ಜಗತ್ತಿನ ಹುಬ್ಬೇರಿಸಿದರು. ಕೇಂಬ್ರಿಡ್ಜ್‌ನಲ್ಲಿ ತನ್ನ ಕಲಿಕೆಯ ದಾಹವನ್ನು ಇಂಗಿಸಿಕೊಳ್ಳುತ್ತಾ ಹೋದ ರಾಮಾನುಜನ್ ಅವರು ಕಂಡುಹಿಡಿದ ಗಣಿತದ ಫಲಿತಾಂಶಗಳು 21ನೇ ಶತಮಾನದಲ್ಲಿ ಕಂಪ್ಯೂಟರ್ ಸೈನ್ಸ್, ಭೌತಶಾಸ್ತ್ರ, ಕ್ಯಾನ್ಸರ್ ಸಂಶೋಧನೆ, ಪಾಲಿಮರ್ ಕೆಮಿಸ್ಟ್ರಿಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವಲ್ಲಿ ಸಹಕಾರಿಯಾಗುತ್ತಿವೆ! ಸಾಮಾನ್ಯವಾಗಿ ವಿಜ್ಞಾನಿಗಳು ದೇವರನ್ನು ನಂಬುವುದಿಲ್ಲ ಎನ್ನುತ್ತಾರೆ.

ಆ ಮಾತಿಗೆ ಒಂದು ಉದಾಹರಣೆಯೆಂಬಂತೆ ಹಾರ್ಡಿಯವರು ಕಟ್ಟಾ ನಾಸ್ತಿಕ. ಆದರೆ ವೈರುಧ್ಯವೆಂದರೆ ರಾಮಾನುಜನ್ ಅವರು ಅಷ್ಟೇ ಕಟ್ಟಾ ದೈವಭಕ್ತ. ರಾಮಾನುಜನ್ ಹಾಗೂ ಹಾರ್ಡಿ ಸ್ನೇಹದ ಬಗ್ಗೆ ಡೆವಿಡ್ ಲೀವಿಟ್ ಬರೆದಿರುವ ‘ದಿ ಇಂಡಿಯನ್ ಕ್ಲರ್ಕ್’ ಪುಸ್ತಕದಲ್ಲಿ ಇಂಥ ವೈರುಧ್ಯದ ಬಗ್ಗೆಯೇ ಬೆಳಕು ಚೆಲ್ಲಲಾಗಿದೆ. ‘ರಾಮಾನುಜನ್ ಅವರು ತಮ್ಮ ಮನೆಯವರನ್ನು ಮೆಚ್ಚಿಸುವುದಕ್ಕೋಸ್ಕರ ಆಸ್ತಿಕನಂತೆ ಸೋಗು ಹಾಕುತ್ತಾರೆ. ಅವರೊಬ್ಬ ವಿಚಾರವಾದಿ’ ಎಂದೇ ಹಾರ್ಡಿ ಹೇಳುತ್ತಿದ್ದರು. ಆದರೆ ‘An equation has no meaning unless it expresses a thought of God’ ಎನ್ನುತ್ತಿದ್ದರು ರಾಮಾನುಜನ್. ‘ವಿಜ್ಞಾನ ಎಂದಿಗೂ ದೇವರ ಅಸ್ತಿತ್ವವನ್ನು ನಿರಾಕರಿಸುವುದಿಲ್ಲ. ಅದು ಯಾವತ್ತೂ ಅತ್ಯುನ್ನತ ಶಕ್ತಿಯ(ಸುಪ್ರೀಂ ಪವರ್) ಇರುವನ್ನು ಒಪ್ಪಿಕೊಳ್ಳುತ್ತದೆ ಎಂದು ‘ಏಂಜೆಲ್ಸ್ ಆಂಡ್ ಡೆಮೊನ್ಸ್’ನಲ್ಲಿ ಡಾನ್ ಬ್ರೌನ್  ಹೇಳಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇದೇನೇ ಇರಲಿ, ಕಟ್ಟಾ ಸಸ್ಯಾಹಾರಿಯೂ ಆಗಿದ್ದ ರಾಮಾನುಜನ್ ಅವರು ಆಹಾರ ಮತ್ತು ಹವಾಮಾನ ವೈಪರಿತ್ಯದಿಂದಾಗಿ ಲಂಡನ್‌ನಲ್ಲಿ ಹಾಸಿಗೆ ಹಿಡಿದಿದ್ದರು. ಅವರನ್ನು ಕಾಣಲು ಬಂದ ಹಾರ್ಡಿಯವರು ತಾವು ಆಗಮಿಸಿದ ಟ್ಯಾಕ್ಸಿ ನಂಬರ್ ಬಗ್ಗೆ ಚರ್ಚಿಸಲು ಆರಂಭಿಸಿದರು. ‘ಅದೊಂದು ಸಪ್ಪೆನಂಬರ್(1729) ಎಂದರು ಹಾರ್ಡಿ!

ಆದರೆ ‘ಇಲ್ಲಾ, ಇಲ್ಲಾ ಹಾರ್ಡಿ…ಅದು ತುಂಬಾ ಒಳ್ಳೆಯ ನಂಬರ್. ಅದರಲ್ಲಿ ಎರಡು ಕ್ಯೂಬ್‌ಗಳ ಒಟ್ಟು ಮೊತ್ತವನ್ನು ಎರಡು ವಿಭಿನ್ನ ವಿಧಗಳಲ್ಲಿ ವಿವರಿಸಬಹುದು. 1729=(12x12x12)+(1x1x1) ಮತ್ತು (9x9x9)+(10x10x10)’ ‘ ಎಂದರು ರಾಮಾನುಜನ್!! ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರೂ ಅಷ್ಟು ಶೀಘ್ರವಾಗಿ, ಮತ್ತೊಬ್ಬ ಮಹಾನ್ ಹಾಗೂ ತನ್ನನ್ನು ಜಗತ್ತಿಗೆ ಪರಿಚಯಿಸಿದ ಗಣಿತಶಾಸ್ತ್ರಜ್ಞನ ಮಾತನ್ನೇ ತಪ್ಪೆಂದು ಸಾಬೀತು ಪಡಿಸುತ್ತಾರೆಂದರೆ ರಾಮಾನುಜನ್ ಅವರ ಚಿಂತನೆಯ ಮಟ್ಟ ಎಂಥದ್ದಿರಬಹುದು? ಕ್ಯಾಲ್ಕುಲೇಟರ್ ಇಲ್ಲದ ಕಾಲದಲ್ಲಿ ಅಷ್ಟು ಶೀಘ್ರವಾಗಿ ವಿವರಿಸುತ್ತಿದ್ದರೆಂದರೆ ಅವರೆಷ್ಟು ಪರಿಶ್ರಮ ಪಟ್ಟಿರಬಹುದು? ಗಣಿತದ ಬಗ್ಗೆ ಎಷ್ಟು ತಲೆಕೆಡಿಸಿಕೊಂಡಿರಬಹುದು?ಆದರೆ ಅವರು ಹುಟ್ಟಿದ ನಾಡಾದ ಭಾರತದಲ್ಲಿ ಈಗ ಎಂಥ ಪರಿಸ್ಥಿತಿ ಸೃಷ್ಟಿಯಾಗಿದೆ? ಎರಡೊಂದ್ಲಿ ಎರಡು, ಎರಡೆರಡ್ಲಿ ನಾಲ್ಕು ಅಂಥ ಈಗಿನ ಮಕ್ಕಳಿಗೆ ಬಾಯಿಪಾಠ ಮಾಡಿಸುತ್ತಾರೆ. ಉನ್ನತ ಶಿಕ್ಷಣದ ಹಂತಕ್ಕೆ ಬಂದಾಗಲೂ Rote memorization ಮಾಡಲಾಗುತ್ತದೆ. ಅಂದರೆ ಸೂತ್ರಗಳನ್ನು ಬಾಯಿಪಾಠ ಮಾಡಿಕೊಂಡರಷ್ಟೇ ಪರೀಕ್ಷೆಯಲ್ಲಿ ಲೆಕ್ಕಗಳನ್ನು ಬಿಡಿಸಲು ಹಾಗೂ ಪಾಸಾಗಲು ಸಾಧ್ಯ ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ. ಖಂಡಿತ ಬಾಯಿಪಾಠ ಮಾಡಲೇಬಾರದು ಎಂದು ಹೇಳುತ್ತಿಲ್ಲ. ಆದರೆ ಸೂತ್ರದಲ್ಲಿರುವ ತರ್ಕವನ್ನು ಅರ್ಥಮಾಡಿಕೊಂಡು ಬಾಯಿಪಾಠ (memorization) ಮಾಡುವುದಕ್ಕೂ ಸುಮ್ಮನೆ ಬಾಯಿಪಾಠ (Rote memorization) ಮಾಡಿಕೊಂಡು ಪರೀಕ್ಷೆ ವೇಳೆ ನೆನಪಿಸಿಕೊಂಡು ಬರೆಯುವುದಕ್ಕೂ ಭಾರೀ ವ್ಯತ್ಯಾಸವಿದೆ. ಅಷ್ಟಕ್ಕೂ ತರ್ಕವನ್ನು ಅರ್ಥಮಾಡಿಕೊಂಡು ಬಾಯಿಪಾಠ ಮಾಡಿದರಷ್ಟೇ ಚಿರಕಾಲ ನೆನಪಿನಲ್ಲಿ ಉಳಿಯಲು ಸಾಧ್ಯ.

ಇತ್ತ ತರ್ಕವನ್ನು ಹೇಳಿಕೊಡುವಂಥ ಸಾಮರ್ಥ್ಯವೂ ಹೆಚ್ಚಿನ ಮೇಷ್ಟ್ರಿಗಿಲ್ಲ! ಎರಡನ್ನ ಮೂರು ಸಲ ಕೂಡಿಸಿದರೆ (2×3=6) ಆರಾಗುತ್ತದೆ- ಇಂಥ ಸರಳ ಲಾಜಿಕ್ಕನ್ನು ಸಾಮಾನ್ಯವಾಗಿ ಎಲ್ಲರೂ ಹೇಳಿಕೊಡುತ್ತಾರೆ. ಆದರೆ ಮೈನಸ್ ಡ ಮೈನಸ್ ಏಕೆ ಪ್ಲಸ್ ಆಗುತ್ತದೆ? ಮೈನಸ್ ಡ ಪಸ್ಲ್ ಏಕೆ ಮೈನಸ್ ಆಗುತ್ತದೆ ನೀವೇ ಹೇಳಿ? ಅದರ ಹಿಂದಿರುವ ಲಾಜಿಕ್ ಏನು? ಆ ಲಾಜಿಕ್ಕನ್ನು ಹೇಳಿಕೊಟ್ಟರೆ, ಅದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಂಡರೆ ಕಬ್ಬಿಣದ ಕಡಲೆ ಎನಿಸಿಕೊಳ್ಳುವ ಗಣಿತವೂ ಅತ್ಯಂತ ಕುತೂಹಲಕಾರಿ ಸಬ್ಜೆಕ್ಟ್ ಆಗಬಲ್ಲದು. ಹಾಗೆ ಆಸಕ್ತಿ ಹುಟ್ಟಿಸುವ ಬದಲು ನಮ್ಮ ಈಗಿನ ಶಿಕ್ಷಣದಲ್ಲಿ ಪರೀಕ್ಷೆ ಬರೆಯುವುದಕ್ಕೂ ಕ್ಯಾಲ್ಕುಲೇಟರ್ ಬಳಸಲು ಅವಕಾಶ ಕಲ್ಪಿಸಲಾಗಿದೆ ಎಂದರೆ ನಾವೆತ್ತ ಸಾಗುತ್ತಿದ್ದೇವೆ ಎಂಬುದನ್ನು ಯೋಚಿಸಿ? ಜ್ಞಾನಾರ್ಜನೆಗೆ ಬದಲಾಗಿ ಪರೀಕ್ಷೆಗೆ ಸೀಮಿತವಾಗಿರುವ ನಮ್ಮ ಕಲಿಕೆಯಿಂದಾಗಿ ಬಾಯಿಪಾಠ ಮಾಡುವ ಜಾಡ್ಯ ಅಂಟಿಕೊಂಡಿದೆ.

ಇಂಥ ತಪ್ಪನ್ನು ಸರಿಪಡಿಸಿಕೊಳ್ಳದೇ ಹೋದರೆ ಈ ದೇಶದಲ್ಲಿ ರಾಮಾನುಜನ್ ಅವರಂಥ ಮತ್ತೊಬ್ಬ ಜೀನಿಯಸ್ ಹುಟ್ಟುವುದು ಬಿಡಿ, ಒಬ್ಬ ಮ್ಯಾಥಮೆಟೀಶಿಯನ್ ಕೂಡ ಜನಿಸುವುದಿಲ್ಲ. ಜಗತ್ತಿಗೆ ಸೊನ್ನೆ ಕೊಟ್ಟಿದ್ದು ನಾವೇ, ಆರ್ಯಭಟ, ವರಾಹ ಮಿಹಿರ, ಭಾಸ್ಕರ ನಮ್ಮವರೇ ಅಂತ ಹಳೆಯದನ್ನೇ ಜಪ ಮಾಡಬೇಕಾಗುತ್ತದೆ. ಜಗತ್ತಿಗೆ ಸೊನ್ನೆಯನ್ನು ಕೊಟ್ಟವರು ನಾವೇ ಆಗಿದ್ದರೂ ಬಾಯಿಪಾಠ ಮಾಡುವ ಜಾಡ್ಯದಿಂದಾಗಿ ಈಗ ಜಗತ್ತಿಗೆ ನಾವು ಕೊಡುತ್ತಿರುವ ಕೊಡುಗೆಯೂ ‘ಸೊನ್ನೆಯೇ ಆಗಿದೆ! ಈ ದೇಶ ಹೋಮಿ ಜೆ. ಭಾಭಾ, ಸಿ.ವಿ. ರಾಮನ್, ವಿಕ್ರಮ್ ಸಾರಾಭಾಯ್, ರಾಜಾರಾಮಣ್ಣ, ವಿಶ್ವೇಶ್ವರಯ್ಯ ಅವರಂಥ ಮಹಾನ್ ವ್ಯಕ್ತಿಗಳಿಗೆ ಜನ್ಮ ನೀಡಿದೆ. ಅದರಲ್ಲೂ ಸ್ವಾಮಿ ವಿವೇಕಾನಂದ (39 ವರ್ಷ), ಶ್ರೀನಿವಾಸ ರಾಮಾನುಜನ್(32 ವರ್ಷ) ಅವರು ಬದುಕಿದ್ದು ಕೆಲವೇ ವರ್ಷಗಳಾದರೂ ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುವಂಥ ಸಾಧನೆ ಮಾಡಿ ಹೋಗಿದ್ದಾರೆ.

ಒಬ್ಬರು ನಮ್ಮ ಧರ್ಮದ ಹಿರಿಮೆಯನ್ನು ಸಾರುವ ಮೂಲಕ ಜಗತ್ತಿನ ಕಲ್ಪನೆಯನ್ನೇ ಬದಲಾಯಿಸಿದರೆ, ಮತ್ತೊಬ್ಬರು ಗಣಿತದ ತರ್ಕಕ್ಕೆ ಹೊಸ ಅರ್ಥವನ್ನೇ ಕೊಟ್ಟು ಹೋಗಿದ್ದಾರೆ. ಇನ್ನೂ ಹತ್ತು- ಹಲವು ಸಹಸ್ರಮಾನಗಳು ಬಂದರೂ, ಗಣಿತ ಇರುವವರೆಗೂ ರಾಮಾನುಜನ್ ಕೊಟ್ಟ ಸೂತ್ರಗಳನ್ನು ಪ್ರತಿಯೊಬ್ಬರೂ ಓದಿಯೇ ಓದುತ್ತಾರೆ. ಹಾಗೆ ರಾಮಾನುಜನ್ ಹೆಸರನ್ನು ನೆನಪಿಸಿಕೊಳ್ಳುವಾಗಲೆಲ್ಲ ಅವರಿಗೆ ಜನ್ಮ ನೀಡಿದ ಭಾರತವನ್ನೂ ನೆನಪಿಸಿಕೊಳ್ಳಬೇಕಾಗುತ್ತದೆ. ಅಂದಹಾಗೆ, ರಾಮಾನುಜನ್ ಜನ್ಮತಳೆದ ದಿನ ಡಿಸೆಂಬರ್ 22. ಹಾಗಾಗಿ ಅವರ ಬಗ್ಗೆ ಬರೆಯಬೇಕೆನಿಸಿತು. ಸಾಧ್ಯವಾದರೆ  ‘The man who knew infinity’ ಪುಸ್ತಕವನ್ನೊಮ್ಮೆ ಓದಿ.

ramanujam

 •  0 comments  •  flag
Share on Twitter
Published on December 24, 2016 07:55

December 22, 2016

December 20, 2016

December 18, 2016

December 17, 2016

ಹೆಮ್ಮೆಯ ಡಿಸೆಂಬರ್ ಹದಿನಾರು, ಹುತಾತ್ಮನಾದಾಗ ಆತನಿಗೆ ಬರೀ ಇಪ್ಪತ್ತಾರು!

ಹೆಮ್ಮೆಯ ಡಿಸೆಂಬರ್ ಹದಿನಾರು, ಹುತಾತ್ಮನಾದಾಗ ಆತನಿಗೆ ಬರೀ ಇಪ್ಪತ್ತಾರು!




ಡಿಸೆಂಬರ್ 14, 1971. ಭಾರತೀಯ ವಾಯು ಸೇನೆಗೆ ಆ ದಿನ ಎಂದರೆ ಅದೇನೋ ಹರುಷ ಜತೆಗೆ ಅಷ್ಟೇ ಬೇಸರ ಸಹ. ನೀವು ಯಾವೊಬ್ಬ ಯೋಧನನ್ನಾದರೂ ಕೇಳಿ. ಈ ವ್ಯಕ್ತಿಯ ಬಗ್ಗೆ ಗೊತ್ತಿಲ್ಲದೇ ಇರಲಿಕ್ಕೆ ಸಾಧ್ಯವೇ ಇಲ್ಲ. ನಮಗೆ ಈಗಲೂ ವಿವೇಕಾನಂದರ, ಚಂದ್ರಶೇಖರ್ ಆಜಾದ್ ಅವರ ಕಥೆಗಳನ್ನು ಕೇಳಿದರೆ ಹೇಗೆ ಪುಳಕಿತರಾಗುತ್ತೇವೆಯೋ, ಎನ್‍ಸಿಸಿಯಲ್ಲಿ ಏರ್‍ ಪೊರ್ಸ್ ವಿಂಗ್‍ನಲ್ಲಿರುವ  ಈ ವ್ಯಕ್ತಿಯ ಬಗ್ಗೆ ಕೇಳಿದರೆ ಅಷ್ಟೇ ಕುತೂಹಲ, ಖುಷಿ. ವಾಯುಸೇನೆಯವರಿಗಂತೂ ಈತ ರೋಲ್ ಮಾಡೆಲ್. ನಾನು ಆ ರೀತಿ ಶೌರ್ಯವಂತನೋ ಇಲ್ಲವೋ ಗೊತ್ತಿಲ್ಲ, ಆತನಿಗೆ ಸಿಕ್ಕಂಥ ಅವಕಾಶ ನಂಗೆ ಸಿಗುತ್ತೋ ಇಲ್ಲವೋ ಎಂಬುದೂ ಗೊತ್ತಿಲ್ಲ. ಆದರೆ ಸಾವು ಎಂಬುದೇನಾದರೂ ಬಂದರೆ ಸಾಧಾರಣವಾಗಿ ಸಾಯೋದು ಬೇಡ, ನಿರ್ಮಲ್‍ಜಿತ್ ಸಿಂಗ್ ಸೆಖೋನ್ ರೀತಿಯಾದರೂ ಪ್ರಾಣ ಕೊಡಬೇಕು ಎಂದು ಇಂದಿಗೂ ಕನಸು ಕಾಣುವವರು ಸೇನೆಯಲ್ಲಿದ್ದಾರೆ. ಆತ ಹುತಾತ್ಮನಾಗಿ ದಶಕಗಳೇ ಕಳೆದರೂ ಫ್ಲೈಯಿಂಗ್ ಆಫೀಸರ್ ನಿರ್ಮಲ್‍ಜಿತ್ ಸಿಂಗ್ ಸೆಖೋನ್ ಎಂಬ ಹೆಸರು ಕೇಳಿದರೂ ಸಾಕು ರೋಮ ರೋಮಗಳೆಲ್ಲ ಎದ್ದು ನಿಲ್ಲುತ್ತವೆ. ಆ ವ್ಯಕ್ತಿಯೊಬ್ಬ ಪಾಕಿಸ್ತಾನೀಯರ ಜತೆ ಸೆಣಸಾಡಲು ಒಂದು ಕ್ಷಣ ಹಿಂದೇಟು ಹಾಕಿದ್ದರೂ, ಪಾಕ್ ಸೇನೆ ಭಾರತದೊಳಕ್ಕೆ ನುಗ್ಗಿ ದರ್ಬಾರ್ ಶುರು ಮಾಡಿಕೊಂಡುಬಿಡುತ್ತಿದ್ದರು. ಪಾಕಿಸ್ತಾನಕ್ಕೆ ಭಾರತದೊಳಕ್ಕೆ ನುಗ್ಗುವಷ್ಟು ತಾಕತ್ತು ಮತ್ತು ಅದಕ್ಕೆ ಬೇಕಾಗುವ ಶಸ್ತ್ರಾಸ್ತ್ರಗಳಿತ್ತಾ ಎಂದು ನೀವು ಕೇಳಬಹುದು. ಹೌದು, ಅಂಥ ಶಸ್ತ್ರಾಸ್ತ್ರ ಇತ್ತು. ಉತ್ತರ ಅಮೆರಿಕದ ಎಫ್-86 ಸೇಯ್ಬರ್ ಫೈಟರ್ ಜೆಟ್‍ಗಳು ಪಾಕಿಸ್ತಾನೀಯರ ದೊಡ್ಡ ನಂಬಿಕೆ, ಆಸ್ತಿ, ಶಸ್ತ್ರಾಸ್ತ್ರ. ಎಜಾರ್ ಶ್ಮೂ ಡಿಸೈನ್ ಮಾಡಿದ ಈ ಯುದ್ಧ  ವಿಮಾನ ಭಾರತದ ವಿರುದ್ಧ 1965 ಮತ್ತು 1971ರ ಯುದ್ಧದಲ್ಲಿ ಬಳಸಿದ ದೊಡ್ಡ ಅಸ್ತ್ರ.

ಅವತ್ತು 1971ರ ಡಿಸೆಂಬರ್ 14. ಅರ್ಧ ದಿನ ಕಳೆದ ಮೇಲೆ, ಪಾಕಿಸ್ತಾನದ ವಿಂಗ್ ಕಮಾಂಡರ್ ಶಾರ್ಬತ್ ಅಲಿ ಚೇಂಜಝಿ ನೇತೃತ್ವದಲ್ಲಿ ಲೆಫ್ಟಿನೆಂಟ್ ಎಚ್ ಕೆ ದೊತಾನಿ, ಅಮ್ಜದ್ ಅಂದ್ರಭಿ ಮತ್ತು ಮಾರೂಫ್ ಮಿರ್, ನಾಲ್ಕು ಎಫ್-86 ಯುದ್ಧ ವಿಮಾನಗಳಲ್ಲಿ 226ಕೆಜಿಯ ಎರಡು ಬಾಂಬ್ ಮತ್ತು ಒಂದು ದಾಳಿಗೆ ಸಾಕಾಗುವಷ್ಟು ಗುಂಡುಗಳನ್ನು ತುಂಬಿಕೊಂಡು ಪೇಶಾವರ್‍ನಿಂದ ಟೇಕ್ ಆಫ್ ಆಗುತ್ತಾರೆ. ಶ್ರೀನಗರದಿಂದ ಮುನ್ನೂರಿಪ್ಪತ್ತು ಕಿಲೋಮೀಟರ್ ದೂರದಲ್ಲಿರುತ್ತಿದ್ದಂತೆ ಆಪರೇಷನ್‍ಗೆ ತೊಂದರೆಯಾಗದಿರಲಿ ಎಂದು ಲೆಫ್ಟಿನೆಂಟ್ ಸಲೀಮ್ ಬೇಗ್ ಮತ್ತು ರಹೀಮ್ ಯುಸುಫ್‍ಝಾಯ್ ತಲಾ ಒಂದೊಂದರಂತೆ ಎರಡು ಎಫ್-86 ವಿಮಾನದಲ್ಲಿ ಹೆಚ್ಚುವರಿ 760 ಲೀಟರ್ ಇಂಧನ ತುಂಬಿಸಿ, ಎಮ್3 ಮಷೀನ್ ಗನ್‍ಗಳನ್ನು ಕಳುಹಿಸಲಾಗಿತ್ತು.
ಎಲ್ಲ ವಾಯುನೆಲೆಗಳಲ್ಲೂ, ಬಾರ್ಡರ್‍ಗಳಲ್ಲೂ ವಿಮಾನ ಹಾರಾಟವನ್ನು ಪತ್ತೆಹಚ್ಚಲು ಒಂದು ಸಿಮೆಂಟ್ ಸೂರಿನಡಿಯಲ್ಲಿ ಇಂಟರ್‍ಸೆಪ್ಟರ್ ಇಟ್ಟಿರುತ್ತಾರೆ. ಅದಕ್ಕೆ ಬ್ಲಾಸ್ಟ್ ಪೆನ್ಸ್ ಎನ್ನುತ್ತಾರೆ. ಇದು ಅಸಹಜ ಹಾರಾಟವನ್ನು ಪತ್ತೆ ಹಚ್ಚಿ ಸೇನೆಗೆ ಅಲರ್ಟ್ ಮಾಡುತ್ತದೆ. ವಾಯು ಸೇನೆಯ ಭಾಷೆಯಲ್ಲಿ ಇದಕ್ಕೆ  operational Readliness Platform  (ORP ) ಎನ್ನುತ್ತಾರೆ. ಆದರೆ ಕಾಶ್ಮೀರದ ಕಣಿವೆಯಲ್ಲಿ ಅಂಥ ಇಂಟರ್‍ಸೆಪ್ಟರ್ ಆಗ ಇದ್ದಿರದ ಕಾರಣ, ಅತ್ಯಂತ ಎತ್ತರದಲ್ಲಿ ಒಂದು ಪೋಸ್ಟ್ ನಿರ್ಮಿಸಿಕೊಂಡು  ಅಲ್ಲಿ ಯೋಧರನ್ನು ಕಾವಲಿಟ್ಟು ಅವರ ಮಾಹಿತಿ ಪಡೆಯುತ್ತಿದ್ದರು. ನಾಲ್ಕು ಯುದ್ಧ ವಿಮಾನಗಳ ಅಸಹಜ ಹಾರಾಟ ಕಂಡ ಯೋಧರು, ತಕ್ಷಣ ಮಾಹಿತಿ ನೀಡಿದರು.

ಶ್ರೀನಗರದ ವಾಯುನೆಲೆಗೆ ಈ ವಿಷಯ ತಲುಪಿದ ಕೂಡಲೇ Operational Readliness  Platform ದಲ್ಲಿದ್ದ  ಜಿಮ್ಯಾನ್ ಎಂದೇ ಕರೆಯಿಸಿಕೊಳ್ಳುತ್ತಿದ್ದ ಫ್ಲೈಟ್ ಲೆಫ್ಟಿನೆಂಟ್ ಬಲ್ದೀರ್ ಸಿಂಗ್ ಘುಮನ್, ಫ್ಲೈಯಿಂಗ್ ಆಫೀಸರ್ ನಿರ್ಮಲ್ ಜಿತ್ ಸಿಂಗ್ ಸೆಖೋನ್ ತಯಾರಾಗಿ ನಿಂತಿದ್ದರು. ನಮ್ಮ ಬಳಿ ಆಗ ಇದ್ದಿದ್ದು ಜಿನ್ಯಾಟ್ ಎಂಬ ಯುದ್ಧ ವಿಮಾನ ಮಾತ್ರ. ಇದು ಎಫ್-86 ವಿಮಾನಕ್ಕಿಂತ ಎಷ್ಟೋ ಪಟ್ಟು ಕೆಳಮಟ್ಟದ್ದಾಗಿತ್ತು. ಆದರೆ ನಿರ್ಮಲ್‍ಜಿತ್ ಸಿಂಗ್‍ರ ಉತ್ಸಾಹ ಮಾತ್ರ ಕುಸಿಯಲಿಲ್ಲ. ಆಗ ರಾತ್ರಿ ಎಂಟು ಗಂಟೆ ದಾಟಿತ್ತು. ನಮ್ಮ ದೇಶದ ನಿಯಮವೇನೆಂದರೆ, ನಾವು ಮೊದಲು ದಾಳಿ ಮಾಡುವುದಿಲ್ಲ. ನಮ್ಮತ್ತ ಒಂದು ಗುಂಡು ಬಿದ್ದರೂ ಸಾಕು ನಾವು ಪ್ರತಿಕ್ರಿಯೆ ನೀಡಲು ಶುರು ಮಾಡಬಹುದಿತ್ತು. ಹೊತ್ತಿಕೊಳ್ಳಬೇಕಿದ್ದ ಆ ಒಂದು ಕಿಡಿಗಾಗಿ ಎಲ್ಲರೂ ಕಾದು ಕುಳಿತಿದ್ದರು. ಪಾಕಿಸ್ತಾನದಿಂದ ಬಂದ ವಿಮಾನಗಳು ದಾಳಿ ಮಾಡಲು ಶುರು ಮಾಡಿಕೊಂಡಿತು. ಈಗ ಭಾರತದ ಸರದಿ. ನಿರ್ಮಲ್‍ಜಿತ್ ಸಿಂಗ್ ಮನಸ್ಸಲ್ಲಿ ಆಕ್ರೋಶ ಕ್ಷಣ ಕ್ಷಣವೂ ಹೆಚ್ಚಾಗುತ್ತಿತ್ತು. ಇನ್ನೇನು ನಮ್ಮ ವಿಮಾನ ಹಾರಾಟ ಶುರು ಮಾಡುವುದಕ್ಕೆ ಎರಡು ನಿಮಿಷವಿದೆ ಎನ್ನುವಷ್ಟರಲ್ಲಿ ಒಂದು ಸಮಸ್ಯೆ ಎದುರಾಯಿತು. Operational Readliness Platform  ಇಂದ ಜಿನ್ಯಾಟ್ ವಿಮಾನ ಹಾರಾಟಕ್ಕೆ ಹಸಿರುನಿಶಾನೆ ಸಿಕ್ಕಲಿಲ್ಲ. ಆ ಕ್ಷಣ ಹೇಗಿತ್ತು ಎಂದರೆ, ವಿಮಾನ ಹಾರಾಟ ಮಾಡಲೇಬೇಕು ಆದರೆ, ಬ್ಯಾಟರಿ ಸಂಬಂಧಿತ ದೋಷದಿಂದ ಹಾರಾಟ ನಡೆಸಲು ಸಾಧ್ಯವಾಗುತ್ತಿಲ್ಲ. ಆದರೂ ಹೇಗೋ ಮಾಡಿ ಹಾರಾಟ ಶುರು ಮಾಡಿಯೇ ಬಿಟ್ಟರು ನಿರ್ಮಲ್‍ಜಿತ್ ಸಿಂಗ್ ಮತ್ತು ಬಲ್ದೀರ್ ಸಿಂಗ್. ಇಲ್ಲೊಂದು ಸಮಸ್ಯೆಯಿತ್ತು. ನಮ್ಮ ಜಿ-ನ್ಯಾಟ್ ಯುದ್ಧವಿಮಾನ ರಾತ್ರಿಯಲ್ಲಿ ಚಲಿಸುವಂಥ ತಂತ್ರಜ್ಞಾನ ಹೊಂದಿರಲಿಲ್ಲ. ರಷ್ಯಾದಿಂದ ಆಮದು ಮಾಡಿಕೊಂಡಿದ್ದ ವಿಮಾನವದು. ನಮ್ಮ ವೈಮಾನಿಕ ಸೈನಿಕರು ಅದನ್ನು `ಅವಳು’ ಎಂದೇ ಸಂಬೋಧಿಸುತ್ತಿದ್ದ ಜಿ-ನ್ಯಾಟ್ ಬಳಸಿಯೇ ಸೆಖೋನ್ ಹೋರಾಟಕ್ಕಿಳಿದ್ದಿದ್ದ. ಪಾಕಿಸ್ತಾನದ ವಿಮಾನಗಳು ನಮ್ಮ ಗಡಿಭಾಗಗಳಲ್ಲೆಲ್ಲ ಕಡೆಯೂ ಬಾಂಬ್ ಮತ್ತು ಗುಂಡಿನ ದಾಳಿ ಶುರು ಹಚ್ಚಿಕೊಂಡಿತ್ತು. ಇನ್ನು ಆ ರಾತ್ರಿಯಲ್ಲಿ ಕಣ್ಣಿಗೆ ಏನೂ ಗೋಚರವಾಗದಷ್ಟು  ಮಂಜು ಆವರಿಸಿತ್ತು. ಅದು ಅಲ್ಲಿದ್ದ ಎಲ್ಲರಿಗೂ ಗೊತ್ತಿದ್ದರೂ ನಿರ್ಮಲ್‍ಜಿತ್ ಸಿಂಗ್‍ನ ಬಿಸಿ ರಕ್ತ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ವಿಮಾನವನ್ನು ಸ್ವಲ್ಪ ಕೆಳಮಟ್ಟದಲ್ಲೇ ಹಾರಾಟ ಮಾಡಿ, ಟೇಕ್ ಆಫ್ ಆಗಿ ಕೇವಲ ಇಪ್ಪತ್ತೇ ಸೆಕೆಂಡಿನಲ್ಲಿ ಪಾಕ್‍ನ ಸೇಯ್ಬರ್ ವಿಮಾನಗಳನ್ನು ಪತ್ತೆ ಹಚ್ಚಿದ್ದ.  ಪಾಕಿಸ್ತಾನ ಸೇಯ್ಬರ್‍ಗಳು ಗೇಟ್‍ವೇಯತ್ತ ವೇಗವಾಗಿ ಧಾವಿಸಲು ಆರಂಭಿಸಿದವು. ಬುದ್ಧಿವಂತಿಕೆಯಿಂದ ಸೇಯ್ಬರ್‍ನ ಹಿಂದೆ ಹಾರಾಟ ಶುರು ಮಾಡಿದ ನಿರ್ಮಲ್‍ಜಿತ್ ಸಿಂಗ್, ಪಾಕ್‍ನ ಸೇಯ್ಬರ್ ಇನ್ನೇನು ಎಟುಕುತ್ತವೆ ಎನ್ನುವಾಗಲೇ ಆತ ” I am behind two sabres . I won’t let the bastards get away  (ನಾನು ಎರಡು ಸೇಯ್ಬರ್‍ಗಳ  ಹಿಂದಿದ್ದೇನೆ.  ಈ ಸೂ… ಮಕ್ಕಳು ತಪ್ಪಿಸಿಕೊಂಡು ಹೋಗಲು ಬಿಡಲ್ಲ’ ಎಂದು ರೇಡಿಯೋದಲ್ಲಿ ಘರ್ಜಿಸಿದ್ದ. ಇನ್ನೊಂದು ಬದಿಯಲ್ಲಿದ್ದ ಜಿಮ್ಯಾನ್ ಬಲ್ದೀರ್ ಸಿಂಗ್ ” Good show Brother , where are you ?   (ಒಳ್ಳೇದಾಯ್ತು, ಈಗ ನೀನೆಲ್ಲಿದ್ದೀಯ)’ ಎಂದು ಕೇಳುತ್ತಾನೆ. ಇವರಿಬ್ಬರು ಈ ಮಾತುಕತೆಯನ್ನು ಆಲಿಸುತ್ತಿದ್ದ ಕ್ಯಾಪ್ಟನ್, ಹವಾಮಾನ ವೈಪರೀತ್ಯದ ಕುರಿತು ಗಮನಿಸಿ ಸ್ವಲ್ಪ ವಿರಾಮ ತೆಗೆದುಕೊ ಎಂದು ಸೆಖೋನ್‍ಗೆ ಸೂಚಿಸಿದ್ದರು. ಆದರೆ ಸೆಖೋನ್‍ನ ಉತ್ಸಾಹಕ್ಕೆ ಪಾರವೇ ಇರಲಿಲ್ಲ. ಆತ ವಿಮಾನವನ್ನು ಹಾರಿಸಲೇಬೇಕು ಎಂದು ನಿರ್ಧರಿಸಿದಂತಿದ್ದ, ಒಂದು ಸೇಯ್ಬರ್ ಹಿಂದಿದ್ದ, ಇನ್ನೊಂದು ಸೇಯ್ಬರ್ ಸಹ ಮುನ್ನುಗ್ಗುತ್ತಿತ್ತು. `ನಾನು ಎರಡು ಸೇಯ್ಬರ್ ಹತ್ತಿರವಿದ್ದೇನೆ ನನಗೆ ಯಾವುದೇ ಅಪಾಯವಿಲ್ಲ. ಒಂದು ಪಕ್ಕದಲ್ಲಿದೆ, ಇನ್ನೊಂದು ಜಿ-ನ್ಯಾಟ್‍ನ ತುದಿಯಲ್ಲಿದೆ’ ಎಂದು ಮತ್ತೆ ರೇಡಿಯೋದಲ್ಲಿ ಉದ್ಗರಿಸಿದ. ನಮ್ಮವರು ಸ್ವಲ್ಪ ನಿರಾಳರಾದಂತಾದರು. ಆದರೆ ಯಾರು ಏನೇ ಹೇಳಿದರೂ ಸುಮ್ಮನಾಗದ ನಿರ್ಮಲ್‍ಜಿತ್ ಸಿಂಗ್, ಪಾಕ್ ಸೇಯ್ಬರ್ ಮೇಲೆ ಗುಂಡಿನ ದಾಳಿಗರೆಯಲು ಶುರು ಮಾಡಿದ. ಆತನ ಗುರಿ ತಪ್ಪಿರಲಿಲ್ಲ, ಒಂದು ಸೇಯ್ಬರ್ ಧ್ವಂಸವಾಗಿತ್ತು. ಅತ್ತ ಅಂದ್ರಾಬಿ ಸಹ ಗುಂಡಿನ ದಾಳಿ ನಡೆಸಿದರು. ಇಬ್ಬರೂ ಸಮಯಕ್ಕೆ ತಕ್ಕ ಹಾಗೆ ಗುಂಡು ಹಾರಿಸಿದ್ದರಿಂದ ಪಾಕಿಸ್ತಾನಕ್ಕೆ ಮೊದಲ ಪೆಟ್ಟು ಬಿದ್ದಿತ್ತು. ಅಷ್ಟು ಸಾಮಥ್ರ್ಯವಿಲ್ಲದ ಜಿನ್ಯಾಟ್ ವಿಮಾನದಲ್ಲೇ ಶತ್ರು ಸೈನ್ಯ ಬೆನ್ನತ್ತಿದ್ದ ನಿರ್ಮಲ್‍ಜಿತ್ ಸಿಂಗ್ ಬಲಿಷ್ಠ ಸೇಯ್ಬರ್‍ಗಳನ್ನು ಹೊಡೆದುರುಳಿಸಿದ್ದ. ಅಷ್ಟಕ್ಕೂ ಅವನ  ನೇತೃತ್ವದಲ್ಲಿ ಒಂದಲ್ಲ-ಎರಡಲ್ಲ ಮೂರು ಯುದ್ಧ ವಿಮಾನ ಹೊಡೆದುರುಳಿಸಲಾಗಿತ್ತು.

ಆದರೆ, ಎಲ್ಲ ಸಮಯದಲ್ಲೂ ಹಾಗಾಗುವುದಿಲ್ಲ. ಅದೃಷ್ಟ ಸದಾ ನಿರ್ಮಲ್ ಜತೆಯೇ ಇರುವುದಿಲ್ಲ ನೋಡಿ, ಸೇಯ್ಬರ್ ವಿಮಾನ ಬರುತ್ತಿರುವುದನ್ನು ನೋಡಿ ಬಲ್ದೀರ್ ಸಿಂಗ್ ವಿಮಾನವನ್ನು ಎಡಬದಿಗೆಳೆದುಕೊಂಡು ಬಿಡುತ್ತಾನೆ. ಸೇಯ್ಬರ್‍ನಿಂದ ಹೊರಟ ಗುಂಡು ಒಂದೊಂದಾಗಿ ನಿರ್ಮಲ್‍ಜಿತ್ ಇರುವ ವಿಮಾನ ಹೊಕ್ಕುತ್ತಿರುತ್ತದೆ. ಆದರೂ ಕೊನೇ ಕ್ಷಣದವರೆಗೂ ನಿರ್ಮಲ್ ಫೈರ್ ಮಾಡುತ್ತಲೇ ಇದ್ದ. ಪಾಕ್‍ನ ಅಷ್ಟೂ ವಿಮಾನಗಳನ್ನು ಧ್ವಂಸ ಮಾಡುತ್ತೇನೆ ಎಂದು ಶಪಥ ಮಾಡಿ ಬಂದಿದ್ದ ನಿರ್ಮಲ್ ಕೆಲಸ ಮುಗಿಸಿದ್ದ. ತಾನಿದ್ದ ವಿಮಾನ ಇನ್ನೇನು ಕೆಳಗೆ ಬೀಳುತ್ತಿರುವಾಗ ಅದರಿಂದ ಹೊರಗೆ ಹಾರಿ ಪ್ಯಾರಾಚೂಟ್ ಎಳೆಯುತ್ತಾನೆ. ಆದರೆ, ಅದು ಸರಿಯಾಗಿ ತೆರೆದುಕೊಳ್ಳದೇ, ನಿರ್ಮಲ್‍ಗೂ ಅದನ್ನು ಸರಿಯಾಗಿ ನಿಭಾಯಿಸಲಾಗದೇ ವಿಮಾನದ ಜತೆಯಲ್ಲೇ ಚೂರು ಚೂರಾಗಿ ಹೋದ. ಜಿ-ನ್ಯಾಟ್‍ಗೆ ಶತ್ರುಸೈನ್ಯದ ಬರೋಬ್ಬರಿ 37 ಗುಂಡುಗಳು ತಗುಲಿದ್ದವು. ಅದರಲ್ಲೊಂದಿಷ್ಟು ಗುಂಡು ನಿರ್ಮಲ್‍ಜಿತ್ ಸಿಂಗ್‍ರ ದೇಹ ಹೊಕ್ಕಿದ್ದವು.

ಅದೇ ಡಿಸೆಂಬರ್ 14, 1971ರಂದು ಪಾಕಿಸ್ತಾನದ ನಾಲ್ಕು ಬಲಿಷ್ಠ ಸೇಯ್ಬರ್ ವಿಮಾನಗಳು ಭಾರತದ ಸೈನಿಕರ ಎದುರು ಸೋತು ಬಿದ್ದಿದ್ದವು. ಅತ್ತ ನಿರ್ಮಲ್‍ಜಿತ್ ಸಿಂಗ್ ಸಹ ಯುದ್ಧದಲ್ಲಿ ಹೋರಾಡಿ, ತಾಯಿ ನೆಲದ ಋಣ ತೀರಿತು ಎಂಬಂತೆ ಸತ್ತು ಮಲಗಿದ್ದ. ಆತನ ಪ್ರೀತಿಯ ಜಿ-ನ್ಯಾಟ್ ಸಹ ಮಕಾಡೆ ಮಲಗಿತ್ತು. ಯಾವ ವಾಯುನೆಲೆಗೆ ಸೇರಿ ಅಪಾರ ಹೆಸರು ಮಾಡಬೇಕು ಎಂದು ಬಯಸಿದ್ದ ನಿರ್ಮಲ್‍ಜಿತ್ ಸಿಂಗ್ ಸೇನೆ ಸೇರಿ ಮೂರೇ ವರ್ಷಕ್ಕೇ ಮೃತಪಟ್ಟಿದ್ದ. ಆದರೇನಂತೆ ಪರಮವೀರ ಚಕ್ರ ಪಡೆದ ದೇಶದ ಮೊದಲ ವೈಮಾನಿಕ ಅಧಿಕಾರಿ ಎನಿಸಿದ್ದ. ಆ ಅಧಿಕಾರಿಗೆ ಅದೆಷ್ಟು ಅವಸರವಿತ್ತೋ ಗೊತ್ತಿಲ್ಲ, ಜೀವನವಿಡೀ ಇದ್ದು ಸಾಧಿಸಬೇಕಾದುದ್ದನ್ನು ಮೂರೇ ವರ್ಷದಲ್ಲಿ ಸಾಧಿಸಿಬಿಟ್ಟಿದ್ದ.

ಆಗ ಫ್ಲೈಯಿಂಗ್ ಆಫೀಸರ್ ಆಗಿದ್ದ  ಎಂ.ಪಿ. ಅನಿಲ್‍ಕುಮಾರ್ ನಿರ್ಮಲ್‍ಜಿತ್ ಸಿಂಗ್ ಬಗ್ಗೆ ಭಾವುಕರಾಗಿ `ಆ ದಿನ ಅವನದ್ದಾಗಿರಲಿಲ್ಲ, ಆದರೆ ಆತ ಅದನ್ನು ತನ್ನ ಸ್ವಂತ ಮಾಡಿಕೊಂಡ. ವೈಮಾನಿಕ ದಾಳಿಯಲ್ಲಿ ಆತ ತೋರಿಸಿದ ಶೌರ್ಯ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ’ ಎಂದಿದ್ದರು. ಆತನನ್ನು ಸಹೋದ್ಯೋಗಿಗಳು ಪ್ರೀತಿಯಿಂದ `ಬ್ರದರ್’ ಎಂದು ಕರೆಯುತ್ತಿದ್ದರು. ಆತನ ಶೌರ್ಯದ ನಾನು ಕೇಳಿದಾಗ ಹೆಮ್ಮೆಯೆನಿಸಿತು. ಆತ ಸ್ನೇಹಿತರೊಂದಿಗೆ ಮುಕ್ತವಾಗಿ ಬೆರೆಯುವ ಗುಣ ಹೊಂದಿದ್ದ. ಬೇರೆಯವರಿಗೆ ಸಹಾಯ ಮಾಡಲು ಹಿಂಜರಿಯದ ಹುಚ್ಚನಾಗಿದ್ದ ಆತ ಎಂದು ಎಂ.ಪಿ. ಅಶೋಕ್ ಕುಮಾರ್ ನೆನೆಪಿಸಿಕೊಳ್ಳುತ್ತಾರೆ. ಇಂಥ ಬಹಳಷ್ಟು ಸಂಗತಿಗಳು ರೆಡಿಫ್.ಕಾಂನಲ್ಲಿ ಐದಾರು ವರ್ಷಗಳ ಹಿಂದೆ ಸ್ವಾರಸ್ಯಕರವಾಗಿ ಹೇಳಿದ್ದನ್ನು ಮೊನ್ನೆ ಡಿಸೆಂಬರ್ 14ರಂದು ನೆನಪು ಮಾಡಿಕೊಳ್ಳಬೇಕಾಗಿ ಬಂತು.
ಇಂಥ ವೀರ ಯೋಧ ನಿರ್ಮಲ್‍ಜಿತ್ ಸಿಂಗ್ ಸೆಖೋನ್ 1945ರ ಜುಲೈ 17ರಂದು ಭಾರತದ ಸೈನಿಕರ ರಾಜಧಾನಿ ಅಥವಾ ಮಾತೃಭೂಮಿ ಎಂದೇ ಖ್ಯಾತಿಯಾದ ಪಂಜಾಬ್‍ನಲ್ಲಿ ಜನಿಸಿದ್ದು. ಅವರ ತಂದೆ ಸರ್ದಾರ್ ತ್ರಿಲೋಕ್ ಸಿಂಗ್ ಸಹ ವಾಯುದಳದಲ್ಲಿ ಲೆಫ್ಟಿನೆಂಟ್ ಆಗಿದ್ದವರು. ಸಹಜವಾಗಿಯೇ ಮಗ ನಿರ್ಮಲ್ ಸಿಂಗ್ ಸಹ ಸೇನೆ ಸೇರುವ ಬಯಕೆ ಹೊಂದಿದ್ದ. ಅದರಲ್ಲೂ ತಂದೆಯಂತೆಯೇ ವಾಯುದಳ ಸೇರಲು ಹಂಬಲಿಸಿದ್ದ. ಕೊನೆಗೆ 1968ರಲ್ಲಿ ವೈಮಾನಿಕ ಅಧಿಕಾರಿಯಾಗಿ ಸೇರಿದ. ಸೇರಿದ ಮೂರನೇ ವರ್ಷಕ್ಕೇ ಪಾಕ್ ದಾಳಿಯಲ್ಲಿ ಭಾರತ ಎಂದೆಂದಿಗೂ ಮರೆಯದ ಹೀರೋ ಸಹ ಆಗಿಬಿಟ್ಟ. ಸೈನಿಕರಿಗೆ ಸಿಗುವ ಅತ್ಯುನ್ನತ ಗೌರವವಾದ `ಪರಮವೀರ ಚಕ್ರ’ ಪಡೆದು ತಂದೆಗೆ ತಕ್ಕ ಮಗ ಎನಿಸಿಕೊಂಡ. ಯೋಧ ಎಂಬ ಪದಕ್ಕೆ ಅರ್ಥ ತಂದುಕೊಟ್ಟ. ಸಾಯುವಾಗ  ಅವನ ವಯಸ್ಸು ಕೇವಲ 26! ಆ ಪೋರ ಇಡೀ ದೇಶವನ್ನೇ ರಕ್ಷಿಸಿ, ಧನ್ಯವಾದವನ್ನೂ ತೆಗೆದುಕೊಳ್ಳದೇ ಹೋಗಿಬಿಟ್ಟ.

ಪ್ರತಿವರ್ಷ ಡಿಸೆಂಬರ್ 16 ಬಂತೆಂದರೆ ಪಾಕಿಸ್ತಾನವನ್ನು ಸೋಲಿಸಿ ಬಾಂಗ್ಲಾವನ್ನು ವಿಮೋಚನೆ ಮಾಡಿದ್ದನ್ನು ನೆನಪಿಸಿಕೊಂಡಾಗ ಹೆಮ್ಮೆಯಿಂದ ಎದೆಯುಬ್ಬುತ್ತದೆ. ಆದರೆ ಮರುಕ್ಷಣವೇ ಸೆಖೋನ್ ನೆನಪಾಗಿ ಅದೇ ಎದೆ ದುಃಖದಿಂದ ಮಡುಗಟ್ಟುತ್ತದೆ.

nirmaljith-singh-af

 •  0 comments  •  flag
Share on Twitter
Published on December 17, 2016 07:24

Pratap Simha's Blog

Pratap Simha
Pratap Simha isn't a Goodreads Author (yet), but they do have a blog, so here are some recent posts imported from their feed.
Follow Pratap Simha's blog with rss.