Pratap Simha's Blog, page 26
January 24, 2017
January 22, 2017
January 21, 2017
ಹೊಸ ಸಿಇಒ ಬಗ್ಗೆ ಬರೆಯುವ ನೆಪ, ಮತ್ತೆ ಟಾಟಾ ಕೊಡುಗೆಯ ಜಪ!
ಹೊಸ ಸಿಇಒ ಬಗ್ಗೆ ಬರೆಯುವ ನೆಪ, ಮತ್ತೆ ಟಾಟಾ ಕೊಡುಗೆಯ ಜಪ!
ಕಬ್ಬಿಣ ಹಾಗೂ ಉಕ್ಕು ಕಂಪನಿ ಸ್ಥಾಪನೆ ಜಲವಿದ್ಯುತ್ ಉತ್ಪಾದನೆ ವಿಶ್ವದರ್ಜೆಯ ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣ ಈ ಮೂರೂ ಕನಸುಗಳು ಅವರ ಜೀವಿತಾವಧಿಯಲ್ಲಿ ಸಾಕಾರ ಗೊಳ್ಳಲಿಲ್ಲ. ಆದರೆ ಅವರ ಉತ್ತರಾಧಿಕಾರಿಗಳಿಗೆ ದಿಕ್ಸೂಚಿಯಾದವು, ದೃಷ್ಟಿಕೋನ ಕೊಟ್ಟವು, ದಾರಿ ದೀಪವಾದವು, ಭಾರತ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರವಹಿಸಿದವು. ಇಂತಹ ಕನಸುಗಳನ್ನು ಕಂಡಾತ ಈ ದೇಶ ಕಂಡ ಯಾವ ನಾಯಕನೂ ಅಲ್ಲ, ಪ್ರಧಾನಿ, ಮುಖ್ಯಮಂತ್ರಿಗಳೂ ಅಲ್ಲ. ಪಾರ್ಸಿ ಸಮುದಾಯದ ಅರ್ಚಕ ಅಥವಾ ಪೂಜಾರಿಯೊಬ್ಬರ ಮಗ. ಅವರೇ ಜೆ.ಎನ್. ಟಾಟಾ ಅಥವಾ ಜೆಮ್‌ಸೆಟ್‌ಜಿ ನಸರ್ ವಾನ್‌ಜಿ ಟಾಟಾ ಅವರ ಒಂದೊಂದು ಕನಸ್ಸಿನ ಹಿಂದೆಯೂ ಒಂದೊಂದು ಘಟನೆಗಳಿವೆ. ಒಮ್ಮೆ ಅವರು ಬ್ರಿಟನ್‌ನ ಮ್ಯಾಂಚೆಸ್ಟರ್‌ಗೆ ಹೋಗಿದ್ದರು, ಜವಳಿ ತಯಾರಿಸುವ ಯಂತ್ರದ ಖರೀದಿಗಾಗಿ. ಅದೇ ಮ್ಯಾಂಚೆಸ್ಟರ್‌ನಲ್ಲಿ ಥಾಮಸ್ ಕಾರ್ಲೈಲ್‌ನ ಭಾಷಣವಿತ್ತು.
ಅದನ್ನು ಆಲಿಸಲು ಜೆ.ಎನ್. ಟಾಟಾ ಕೂಡ ಹೋಗಿದ್ದರು. ಭಾಷಣವೇನೋ ಮುಗಿಯಿತು, ಆದರೆ ಹೊರಬರುವಷ್ಟರಲ್ಲಿ ಟಾಟಾ ಕಂಗಳಲ್ಲಿ ಭಾರತದ ಕೈಗಾರಿಕಾ ಕ್ಷೇತ್ರಕ್ಕೇ ಒಂದು ಮಹತ್ತರ ತಿರುವು ನೀಡುವಂಥ ಕನಸೊಂದು ಮೂಡಿತ್ತು. ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯನ್ನು ಭಾರತದಲ್ಲಿ ಸ್ಥಾಪನೆ ಮಾಡಬೇಕೆಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದರು. ಇವತ್ತು ಒಂದು ವೆಲ್ಡಿಂಗ್ ಅಂಗಡಿ ಆರಂಭಿಸುವುದಕ್ಕೇ ಹಿಂದೂ ಮುಂದೂ ಯೋಚನೆ ಮಾಡಬೇಕು. ಅಂಥದ್ದರಲ್ಲಿ 1880ರಲ್ಲೇ ಭಾರೀ ಬಂಡವಾಳ ಹೂಡಿಕೆ ಬೇಕಾದ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯನ್ನು ಸ್ಥಾಪಿಸಲು ಟಾಟಾ ಯೋಚಿಸಿದರು. ಒಬ್ಬನೇ ಮಗನಾದ ಜೆ.ಎನ್. ಟಾಟಾಗೆ ತಂದೆಯಂತೆ ಅರ್ಚಕನಾಗಬಹುದಿತ್ತು. ಆದರೆ ಅವರು ವ್ಯಾಪಾರೋದ್ಯಮದತ್ತ ಆಕರ್ಷಿತರಾದರು.
1868ರಲ್ಲಿ ಖಾಸಗಿ ವ್ಯಾಪಾರ ಸಂಸ್ಥೆಯೊಂದನ್ನು ಪ್ರಾರಂಭಿಸಿದಾಗ ಜೆ.ಎನ್. ಟಾಟಾಗೆ 29 ವರ್ಷ. ಕೈಯಲ್ಲಿದ್ದುದು 21 ಸಾವಿರ ರು. ಆದರೆ ಪರಿಶ್ರಮಕ್ಕೆ, ದೂರದೃಷ್ಟಿಗೆ, ಹಂಬಲಕ್ಕೆ, ಸಾಧಿಸುವ ಛಲಕ್ಕೆ ಎಂದಿಗೂ ಕೊರತೆಯಿರಲಿಲ್ಲ. ಇತ್ತ ಬ್ರಿಟಿಷರು ನಮ್ಮ ಗುಡಿಕೈಗಾರಿಕೆಗಳನ್ನು ವ್ಯವಸ್ಥಿತವಾಗಿ ಹೊಸಕಿ ಹಾಕುತ್ತಿದ್ದರು. ಏಕೆಂದರೆ ಬ್ರಿಟನ್‌ನಲ್ಲಿ ತಯಾರಾದ ಹತ್ತಿ ಬಟ್ಟೆಗಳಿಗೆ ಭಾರತದಲ್ಲಿ ಮಾರುಕಟ್ಟೆ ಬೇಕಿತ್ತು. ಇಂತಹ ಘೋರ ಅನ್ಯಾಯದ ಬಗ್ಗೆ ಜೆ.ಎನ್. ಟಾಟಾ ಹೋರಾಟಕ್ಕಿಳಿಯಲಿಲ್ಲ. ಆದರೆ ಯೂರೋಪ್ ಪ್ರವಾಸ ಕೈಗೊಂಡರು. ಜವಳಿ ಉದ್ಯಮಕ್ಕೆ ಹೆಸರಾಗಿದ್ದ ಬ್ರಿಟನ್‌ನ ಮ್ಯಾಂಚೆಸ್ಟರ್‌ಗೆ ಭೇಟಿ ನೀಡಿದರು. ಕಾರ್ಖಾನೆಗಳನ್ನು ಜಾಲಾಡಿ ದರು. ಸ್ವದೇಶಕ್ಕೆ ಮರಳಿದ್ದೇ ತಡ, 1877ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ‘ಎಂಪ್ರೆಸ್ ಮಿಲ್ಸ್’ ಕಾರ್ಖಾನೆ ಪ್ರಾರಂಭ ಮಾಡಿದರು. ಹೀಗೆ ಆಧುನಿಕ ತಂತ್ರಜ್ಞಾನ ಭಾರತಕ್ಕೆ ಬಂತು.
ಅದು ‘ಸ್ವದೇಶಿ ಮಿಲ್’ಗಳೆಂದೇ ಖ್ಯಾತಿ ಪಡೆಯಿತು. ದೇಶದಲ್ಲೇ ಹತ್ತಿ ಬಟ್ಟೆಗಳು ಸಿದ್ಧಗೊಳ್ಳತೊಡಗಿದವು. ವಿದೇಶಿ ಸರಕುಗಳನ್ನು ತಿರಸ್ಕರಿಸಿ ಎಂಬ ಕರೆಯನ್ನು ಟಾಟಾ ನೀಡಿದ ವಿಧಾನ ಅದು. ಸ್ವದೇಶಿ ಚಳವಳಿಯನ್ನು ಕೃತಿಯಲ್ಲಿ ತೋರಿದ ಕೀರ್ತಿ ಜೆ.ಎನ್. ಟಾಟಾಗೆ ಸಲ್ಲಬೇಕು. ಇನ್ನೊಂದು ಘಟನೆ ಕೇಳಿ, ಒಮ್ಮೆ ತಮ್ಮ ಇಬ್ಬರು ಬ್ರಿಟಿಷ್ ಸ್ನೇಹಿತರ ಜತೆ ಜೆ.ಎನ್. ಟಾಟಾ ಪ್ರತಿಷ್ಠಿತ ಹೋಟೆಲ್ಲೊಂದಕ್ಕೆ ಹೊರಟಿದ್ದರು. ಶ್ವೇತವರ್ಣೀಯರಾದ ಬ್ರಿಟಿಷರಿಗೇನೋ ನಗುಮುಖದ ಸ್ವಾಗತ ದೊರೆಯಿತು. ಆದರೆ ಭಾರತೀಯನೆಂಬ ಏಕೈಕ ಕಾರಣಕ್ಕೆ ಟಾಟಾ ಅವರನ್ನು ಹೊರದಬ್ಬಲಾಯಿತು. ಅದರ ಮೆಟ್ಟಿಲಿನಿಂದ ಕೆಳಗಿಳಿಯುವಾಗಲೇ ವಿಶ್ವದರ್ಜೆಯ ಹೋಟೆಲ್ ಗಳನ್ನು ನಿರ್ಮಿಸುವ, ನಡೆಸುವ ತಾಕತ್ತು ಭಾರತೀಯರಿಗೂ ಇದೆ ಎಂಬುದನ್ನು ಸಾಬೀತುಪಡಿಸುವ ಸಂಕಲ್ಪ ಮಾಡಿದರು. 1902ರಲ್ಲಿ ‘ತಾಜ್ ಗ್ರೂಪ್ ಆಫ್ ಹೋಟೆಲ್ಸ್’ ಪ್ರಾರಂಭವಾಯಿತು.
1903ರಲ್ಲಿ ‘ಹೋಟೆಲ್ ತಾಜ್‌ಮಹಲ್’ ಸಿದ್ಧಗೊಂಡಾಗ ಟಾಟಾ ಬರೀ ಆಡುವವರಲ್ಲ, ಮಾಡಿಯೂ ತೋರುವವರು ಎಂಬುದು ಮತ್ತೊಮ್ಮೆ ಸಾಬೀತಾಯಿತು. ಹಾಗಂತ ಟಾಟಾ ಕೇವಲ ಒಬ್ಬ ಶುದ್ಧ ಉದ್ಯಮಿಯಾಗಿರಲಿಲ್ಲ. ಆಳುವ ಸರಕಾರಕ್ಕೇ ಇರದಿದ್ದ ಸಾಮಾಜಿಕ ಕಾಳಜಿ ಅವರಲ್ಲಿತ್ತು. ಆದ್ದರಿಂದಲೇ 1886ರಷ್ಟು ಹಿಂದೆಯೇ ‘ನಿವೃತ್ತಿ ವೇತನ ನಿಧಿ’ ಯನ್ನು ಆರಂಭಿಸಿದರು. 1895ರಲ್ಲಿ ಅಪಘಾತ ಪರಿಹಾರ ಯೋಜನೆ ಆರಂಭವಾಯಿತು. ಇಂತಹ ಪ್ರಯತ್ನ ಭಾರತದಲ್ಲೇ ಮೊದಲನೆಯದಾಗಿತ್ತು. 1892ರಲ್ಲೇ ಟಾಟಾ ದಾನ ದತ್ತಿ ಸಂಸ್ಥೆ ಸ್ಥಾಪನೆ ಮಾಡಿ, ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುವವರಿಗೆ ಸ್ಕಾಲರ್‌ಷಿಪ್ ಆರಂಭಿಸಿದರು. ಒಂದು ಕಾಲಕ್ಕೆ ಎಂತಹ ಪರಿಸ್ಥಿತಿ ಸೃಷ್ಟಿಯಾಯಿತೆಂದರೆ ಪ್ರತಿಷ್ಠಿತ ಭಾರತೀಯ ನಾಗರಿಕ ಸೇವೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೊರಬರುತ್ತಿದ್ದ ಐವರಲ್ಲಿ ಇಬ್ಬರು ಟಾಟಾ ವಿದ್ಯಾರ್ಥಿವೇತನ ಪಡೆದವರಾಗಿರುತ್ತಿದ್ದರು! ಈ ನಡುವೆ 1893ರಲ್ಲಿ ‘ಎಂಪ್ರೆಸ್ ಆಫ್ ಇಂಡಿಯಾ’ ಹಡಗು ಜಪಾನ್‌ನಿಂದ ಅಮೆರಿಕದತ್ತ ಪಯಣ ಆರಂಭಿಸಿತ್ತು.
ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆ ಸ್ಥಾಪಿಸುವ ಆಸೆಯಿಂದ ತಾಂತ್ರಿಕ ಸಹಕಾರ ಯಾಚಿಸುವ ಸಲುವಾಗಿ ಟಾಟಾ ಅಮೆರಿಕಕ್ಕೆ ಹೊರಟು ನಿಂತಿದ್ದರು. ಇತ್ತ ವಿಶ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಸ್ವಾಮಿ ವಿವೇಕಾನಂದರೂ ಅದೇ ಹಡಗೇರಿದ್ದರು! ಅಲ್ಲಿ ಇಬ್ಬರೂ ಪರಸ್ಪರ ಭೇಟಿಯಾದರು. ಅಮೆರಿಕವನ್ನು ಸೇರುವ ವೇಳೆಗೆ ಜೆ.ಎನ್. ಟಾಟಾ ವಿವೇಕಾನಂದರ ಸ್ವಾವಲಂಬನೆ ತತ್ತ್ವಕ್ಕೆ ಮಾರು ಹೋಗಿದ್ದರು. ಅದು ಹೊಸ ಶಕೆಯ ಆರಂಭಕ್ಕೆ ನಾಂದಿಯಾಯಿತು. ವಿವೇಕಾನಂದರ ಆಶಯದಂತೆ ಎಲ್ಲ ವಿಧದ ವೈಜ್ಞಾನಿಕ ಸಂಶೋಧನೆಗೆ ಅವಕಾಶ ಕಲ್ಪಿಸುವ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡರು. ಭಾರತಕ್ಕೆ ವಾಪಸ್ಸಾದ ಟಾಟಾ, 1898 ಡಿಸೆಂಬರ್ 31ರಂದು ಲಾರ್ಡ್ ಕರ್ಝನ್ ಮುಂದೆ ರೂಪುರೇಷೆಯನ್ನಿಟ್ಟರು. ಆದರೆ ಆತ ಅಡ್ಡಗಾಲು ಹಾಕಿದ. ಆದರೂ ಛಲ ಬಿಡದ ಟಾಟಾ ಬ್ರಿಟನ್‌ನ ರಾಯಲ್ ಸೊಸೈಟಿ ಮುಂದೆ ಪ್ರಸ್ತಾವವನ್ನಿಟ್ಟರು.
ಮನವಿಯ ಮೇರೆಗೆ ಕೂಡಲೇ ಭಾರತ ಪ್ರವಾಸ ಕೈಗೊಂಡ ನೊಬೆಲ್ ಪ್ರಶಸ್ತಿ ವಿಜೇತ ವಿಲಿಯಂ ರಾಂಸೆ ಬೆಂಗಳೂರಿನ ಮಲ್ಲೇಶ್ವರ ಬಳಿ ಭಾರತೀಯ ವಿಜ್ಞಾನ ಮಂದಿರ (ಐಐಎಸ್‌ಸಿ) ವನ್ನು ನಿರ್ಮಿಸಲು ಸಮ್ಮತಿ ಸೂಚಿಸಿದ. ದುರದೃಷ್ಟವಶಾತ್ ಆಸೆ ಕೈಗೂಡುವ ಮೊದಲೇ 1904, ಮೇ 19ರಂದು ಜೆ.ಎನ್. ಟಾಟಾ ನಮ್ಮನ್ನಗಲಿದರು. ಆದರೇನಂತೆ ಅವರ ಉತ್ತರಾಧಿಕಾರಿಗಳಾಗಿ ಬಂದ ಸರ್ ದೊರಾಬ್ಜಿ ಟಾಟಾ, ಜೆ.ಆರ್.ಡಿ. (ಜಹಾಂಗೀರ್ ರತನ್‌ಜಿ ದಾದಾ ಭಾಯಿ ಟಾಟಾ) ಟಾಟಾ, ಜೆ.ಎನ್. ಟಾಟಾರ ಪರಂಪರೆಯನ್ನು ಮುಂದುವರಿಸಿದರು. 1907ರಲ್ಲಿ ಬಿಹಾರದ ಜೆಮ್‌ಷೆಡ್‌ಪುರದಲ್ಲಿ ಟಾಟಾ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ (ಟೆಸ್ಕೋ) ಸ್ಥಾಪನೆ ಮಾಡುವುದರೊಂದಿಗೆ ಜೆ. ಎನ್. ಟಾಟಾ ಅವರ ಕನಸುಗಳಲ್ಲೊಂದನ್ನು ಸಾಕಾರಗೊಳಿಸಿದರು.
1910ರಲ್ಲಿ ಟಾಟಾ ಜಲವಿದ್ಯುತ್ ಪೂರೈಕೆ ಕಂಪನಿ ಜನ್ಮ ತಳೆಯುವುದರೊಂದಿಗೆ ಬಾಂಬೆಗೆ ಕೈಗೆಟುಕುವ ಬೆಲೆಯಲ್ಲಿ ವಿದ್ಯುತ್ ಪೂರೈಕೆ ಮಾಡಬೇಕೆಂಬ ಕನಸೂ ಈಡೇರಿತು. ಅಷ್ಟೇ ಅಲ್ಲ, 1911ರಲ್ಲಿ ಬೆಂಗಳೂರಿನ ಮಲ್ಲೇಶ್ವರ ಬಳಿ 372 ಎಕರೆ ವಿಸ್ತಾರದಲ್ಲಿ ಭವ್ಯ ಭಾರತೀಯ ವಿಜ್ಞಾನ ಮಂದಿರ ಹೊರಹೊಮ್ಮಿತು. ಅದು ಈ ದೇಶದ ವೈಜ್ಞಾನಿಕ ಶಕೆಯನ್ನೇ ಆರಂಭಿಸಿತು. ಈ ದೇಶ ಕಂಡ ಮಹಾನ್ ವಿಜ್ಞಾನಿಗಳಾದ ಸಿ.ವಿ. ರಾಮನ್, ಹೋಮಿ ಜೆ. ಭಾಭಾ, ವಿಕ್ರಂ ಸಾರಾಭಾಯ್, ಜೆ.ಸಿ. ಘೋಷ್, ಎಂ.ಎಸ್ ಥಾಕರ್, ಎಸ್. ಭಗವಂತಮ್, ಸತೀಶ್ ಧವನ್, ಸಿ.ಎನ್.ಆರ್. ರಾವ್ ಮತ್ತು ನಮ್ಮ ರಾಜಾರಾಮಣ್ಣ ಇವರೆಲ್ಲರೂ ಟಾಟಾ ಕೂಸಾದ ಐಐಎಸ್‌ಸಿನ ಜತೆ ಗುರುತಿಸಿಕೊಂಡವರೇ ಆಗಿದ್ದಾರೆ. ಇತ್ತ 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂತು.
ನೆಹರು ಪ್ರಧಾನಿ ಗದ್ದುಗೆಯ ಕನಸು ಕಾಣುತ್ತಿದ್ದರು. ‘ರಾಷ್ಟ್ರಪಿತ’ ಗಾಂಧೀಜಿ ಕೋಮು ಸೌಹಾರ್ದತೆಯ ಮಂತ್ರ ಪಠಿಸುತ್ತಿದ್ದರು. ಆದರೆ ಜೆ. ಆರ್.ಡಿ. ಮತ್ತು ಅವರ ಪ್ರಾಣ ಸ್ನೇಹಿತ ಹೋಮಿ ಜೆ. ಭಾಭಾ ‘ಅಣು ತಂತ್ರಜ್ಞಾನ’ ರೂಪಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದರು. ಲಂಡನ್‌ನ ಕಿಂಗ್ ಕಾಲೇಜಿನಲ್ಲಿ ಭೌತಶಾಸ್ತ್ರ ಅಧ್ಯಯನ ಮಾಡುತ್ತಿದ್ದ ರಾಜಾರಾಮಣ್ಣನವರನ್ನು ಭೇಟಿ ಮಾಡಿದ ಹೋಮಿ ಭಾಭಾ, ನ್ಯೂಕ್ಲಿಯರ್ ಸೈನ್ಸ್ ಓದುವಂತೆ ಪ್ರೇರೇಪಣೆ ನೀಡಿದರು. ಅಷ್ಟೇ ಅಲ್ಲ, ಜೆ.ಎನ್. ಟಾಟಾ ಸ್ಕಾಲರ್‌ಷಿಪ್ ಕೊಡಿಸಿ ರಾಜಾರಾಮಣ್ಣನವ ರನ್ನು ಅಣುವಿಜ್ಞಾನಿಯಾಗಿಸಿ ಸ್ವದೇಶಕ್ಕೆ ಕರೆತಂದರು. ಅದೇ ರಾಮಣ್ಣ ಈ ದೇಶದ ನಿಜವಾದ ಅಣುಜನಕರಾದರು! ಕೇವಲ ಅಮೆರಿಕ, ರಷ್ಯಾಗಳಿಗೆ ಸಾಧ್ಯವಿದ್ದ ‘ನ್ಯೂಕ್ಲಿಯರ್ ರಿಯಾಕ್ಟರ್’ ಅನ್ನು ನಾವೇ ರೂಪಿಸುತ್ತೇವೆ ಎಂದು ಹೋಮಿ ಭಾಭಾ ಮುಂದಾದಾಗ ಸಕಲ ಪ್ರೋತ್ಸಾಹ ನೀಡುವುದನ್ನು ಬಿಟ್ಟು ಪ್ರಧಾನಿ ನೆಹರು ವಿರೋಧ ವ್ಯಕ್ತಪಡಿಸಿದರು. ಆದರೂ ಜೆ.ಆರ್.ಡಿ. ಟಾಟಾ ಧೃತಿಗೆಡಲಿಲ್ಲ. ಅಂತಹ ತಂತ್ರಜ್ಞಾನ ರೂಪಿಸಲು ಬೇಕಾಗಿದ್ದ ಸಕಲ ಸವಲತ್ತುಗಳನ್ನು, ಹಣಕಾಸು ಸೌಲಭ್ಯವನ್ನು ಸ್ವತಃ ಪೂರೈಸಿದರು.
ಆ ಪ್ರಯತ್ನದ ಫಲವಾಗಿ ಮೊದಲ ಅಣು ರಿಯಾಕ್ಟರ್ ರೂಪುಗೊಂಡಿತು. ಅದು ದೇಶದ ಅಣ್ವಸ್ತ್ರ ತಯಾರಿಕೆಗೆ ಭಾಷ್ಯ ಬರೆಯಿತು. ಇಂದು ಭಾರತ ಒಂದು ಅಣ್ವಸ್ತ್ರ ರಾಷ್ಟ್ರವಾಗಿ ಹೊರಹೊಮ್ಮಿದ್ದರೆ, ನಮ್ಮ ದೇಶದ ವಿರುದ್ಧ ದಾಳಿ ಮಾಡಲು ಶತ್ರುಗಳು ಹಿಂದೇಟು ಹಾಕುತ್ತಿದ್ದರೆ ಅದಕ್ಕೆ ಟಾಟಾ ಕಂಪನಿ ಕೂಡ ಕಾರಣ. ಅದು ದೇಶ ಕಟ್ಟುವ ಕಾರ್ಯದಲ್ಲಿ ಕೈಜೋಡಿಸಿದ ಕಂಪನಿ. ಒಂದಾನೊಂದು ಕಾಲದಲ್ಲಿ ಅಮೆರಿಕದಲ್ಲೊಂದು ಮಾತಿತ್ತು “What is good for General Motors is good for America”. ಆದರೆ ನಮ್ಮ ಟಾಟಾ ಮಾತ್ರ “What is good for India is good for TATA’ ಎಂದು ಭಾವಿಸಿರುವ ಕಂಪನಿ. ಇಂಥ ಕಂಪನಿ ಬಗ್ಗೆ ಹೊಸ ಸಿಇಒ ಚಂದ್ರಶೇಖರನ್ ನೆಪದಲ್ಲಿ ಮತ್ತೊಮ್ಮೆ ಬರೆಯಬೇಕೆನಿಸಿತು. ನಟರಾಜನ್ ಚಂದ್ರಶೇಖರನ್. ಈಗ ಟಾಟಾ ಸಮೂಹದ ಹೊಸ ಸಿಇಒ. ಜನವರಿ 12ಕ್ಕೆ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಇದ್ದ ಸಿಇಒ ಸೈರಸ್ ಮಿಸ್ಟ್ರಿ ಅವರನ್ನು ಅಕ್ಟೋಬರ್ 24ರಂದು ಸಿಇಒ ಸ್ಥಾನದಿಂದ ಟಾಟಾ ಕಂಪನಿ ವಜಾ ಮಾಡಿತ್ತು.
ಇದಾದ ನಂತರ ಬಂದವರೇ ನಟರಾಜನ್ ಚಂದ್ರಶೇಖರನ್. ಬೇರೆ ಇನ್ಯಾವುದೋ ಕಂಪನಿಗೆ ಸಿಇಒ ಬಂದರೆ ಅದು ಸುದ್ದಿಯಾಗುತ್ತಿರಲಿಲ್ಲ. ಆದರೆ ಟಾಟಾ ವಿಷಯದಲ್ಲಿ ಹಾಗಲ್ಲ. ದೊಡ್ಡ ಸುದ್ದಿ ಇದು. ಇದಕ್ಕೆ ಕಾರಣವೂ ಇದೆ. ನೀವು ಒಂದು ವಿಚಾರವನ್ನು ಗಮನಿಸಿ, ಟಾಟಾ ಸಂಸ್ಥೆಗೆ ಇದುವರೆಗೂ ಸಿಇಒ ಆದವರೆಲ್ಲರೂ ಪಾರ್ಸಿಗಳೇ. ಟಾಟಾ ಕಂಪನಿಯೇನು ಕುಟುಂಬದ ವ್ಯವಹಾರವಾಗಿರದಿದ್ದರೂ ಪಾರ್ಸಿಯಲ್ಲದವರನ್ನು ಸಿಇಒ ಆಗಿ ನೇಮಕ ಮಾಡಿಕೊಂಡಿರಲಿಲ್ಲ. ಆದರೆ ವಿಶೇಷವೆಂಬಂತೆ ಮೊದಲ ಬಾರಿ ಕಂಪನಿಯ ಇತಿಹಾಸದಲ್ಲೇ ಪಾರ್ಸಿಯಲ್ಲದವನೊಬ್ಬನನ್ನು ಸಿಇಒ ಆಗಿ ನೇಮಕ ಮಾಡಿದೆ.
ಚಂದ್ರಶೇಖರ್ ಯಾರಿಗೇನು ಕಡಿಮೆಯಿಲ್ಲ. ಅವರೂ ಒಳ್ಳೆಯ ಹಿನ್ನೆಲೆಯುಳ್ಳವರೇ. ಅವರ ಯಶೋಗಾಥೆ ಸಿನಿಮಾ ರೀತಿಯಲ್ಲಿದೆ. 1987ರಲ್ಲಿ ಸಾಧಾರಣ ಕಂಪ್ಯೂಟರ್ ಎಂಜಿನಿಯರ್ ಆಗಿ ಟಿಸಿಎಸ್ ಸೇರಿದ್ದರು. ಆದರೆ 2009ರಷ್ಟರ ಹೊತ್ತಿಗೆ ಅವರ ಸ್ಥಾನ ಬದಲಾಗಿತ್ತು. ಯಾವುದೋ ಟೀಂ ಲೀಡರ್ ಅಥವಾ ಇನ್ಯಾವುದೋ ಹೆಡ್ ಆಗಿ ಅಲ್ಲ. ಬದಲಿಗೆ ಸಿಇಒ ಆಗಿ. ತಾನು ಕೆಲಸ ಮಾಡಿದ ಕಂಪನಿಯಲ್ಲೇ ಸಿಇಒ ಆಗುತ್ತಾಾರೆ ಎಂದರೆ ಅದಕ್ಕಿಂತ ಸಾಧನೆ ಮತ್ತೊಂದು ಬೇಕಾ? ಆ ಸ್ಥಾನಕ್ಕೇರಬೇಕಾದರೆ ಅವರು ಕಂಪನಿಗೆ ಎಷ್ಟು ದಿನ ಬೆವರೊಂದೇ ಅಲ್ಲದೇ ರಕ್ತ ಸುರಿಸಿದ್ದಿರಬಹುದು? ಟಿಸಿಎಸ್‌ನ ಸಿಇಒ ಆದಮೇಲೆ ಸುಮ್ಮನೆ ಕೂರದೇ ಸತತ ಪ್ರಯತ್ನದಿಂದ ಕಂಪನಿಯನ್ನು ಉನ್ನತಮಟ್ಟಕ್ಕೆ ಕರೆದೊಯ್ದು, ಶೇರ್ ಮಾರುಕಟ್ಟೆಯಲ್ಲೂ ಕಂಪನಿಯನ್ನು ಒಳ್ಳೆಯ ಸ್ಥಾನದಲ್ಲಿರಿಸಿದವರು.
ಇನ್ನು ಟಾಟಾ ಕಂಪನಿಯ ಬಗ್ಗೆ ಹೇಳುವುದಾದರೆ, ಇದು ಬೇರೆಲ್ಲ ಕಂಪನಿಗಿಂತ ರಾಷ್ಟ್ರೀಯತಾವಾದದಲ್ಲಿ ಎತ್ತಿದ ಕೈ. ಜಗತ್ತಿನಲ್ಲಿ ಇನ್ಯಾವುದೇ ಸಮಸ್ಯೆಯಿರಲಿ, ಇದಕ್ಕೆ ದೇಶ ಮೊದಲು. ಮಿಕ್ಕಿದ್ದು ಆಮೇಲೆ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಸರಕಾರ ಎಲ್ಲ ಹಿಂದುಳಿದ ಅಥವಾ ಅಲ್ಪಸಂಖ್ಯೆಯಲ್ಲಿರುವ ಸಮುದಾಯಗಳನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಮೇಲೆತ್ತಲು ಮೀಸಲು ಕೊಡಲು ತೀರ್ಮಾನಿಸಿದರು. ಈ ಮೀಸಲಿನ ಜತೆಗೆ ವಿಶೇಷ ಸ್ಥಾನಮಾನವನ್ನೂ ಕೊಟ್ಟರು. ಆದರೆ ಒಂದು ಸಮುದಾಯ ಮಾತ್ರ ಇದನ್ನು ಸುತಾರಾಂ ಒಪ್ಪಲಿಲ್ಲ. ನಮಗೆ ಮೀಸಲು ಬೇಡ. ನಾವೇನು ವಿಶೇಷ ಅಲ್ಲ.
ಇತರ ದೇಶವಾಸಿಗಳಂತೆ ನಾವೂ ಬದುಕುತ್ತೇವೆ ಎಂದು ಹೇಳಿ, ಮೀಸಲನ್ನೇ ವಿರೋಧಿಸಿದ ಸಮುದಾಯ ಎಂದರೆ ಅದು ಪಾರ್ಸಿ ಸಮುದಾಯ. ಸಾಮಾನ್ಯವಾಗಿ ಭಾರತ ರತ್ನ ಕೊಡುವುದು ದೇಶ ಸೇವೆ ಮಾಡಿದವರಿಗೆ ಅಥವಾ ದೇಶಕ್ಕೆ ಕೀರ್ತಿ ತಂದಂಥ ವ್ಯಕ್ತಿಗಳಿಗೆ. ಉದ್ಯಮಿಗಳಿಗಂತೂ ಭಾರತರತ್ನ ಕೊಡುವ ಮಾತೇ ಇಲ್ಲ. ಆದರೆ ಜೆಆರ್‌ಡಿ ಟಾಟಾ ಅವರಿಗೆ ಭಾರತ ರತ್ನ ಗೌರವ ನೀಡಿದ್ದಾರೆ ಎಂದರೆ, ಟಾಟಾ ಕಂಪನಿ ದೇಶಸೇವೆಯಲ್ಲಿ ತನ್ನನ್ನು ತಾನು ಎಷ್ಟು ತೊಡಗಿಸಿಕೊಂಡಿದೆ ಎನ್ನುವುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ !
Published on January 21, 2017 06:34
January 20, 2017
January 19, 2017
January 14, 2017
ಭಾರತ ವಿಶ್ವಗುರುವಾಗಲಿದೆ ಎಂದಿದ್ದರು ಆ ನರೇಂದ್ರ, ಅದನ್ನು ನಿಜವಾಗಿಸಲು ಹೊರಟಿದ್ದಾರೆ ಈ ನರೇಂದ್ರ!
ಭಾರತ ವಿಶ್ವಗುರುವಾಗಲಿದೆ ಎಂದಿದ್ದರು ಆ ನರೇಂದ್ರ, ಅದನ್ನು ನಿಜವಾಗಿಸಲು ಹೊರಟಿದ್ದಾರೆ ಈ ನರೇಂದ್ರ!
ಮಹಾಭಾರತವೆಂದರೆ ಬರೀ ಕೌರವ, ಪಾಂಡವ, ಭೀಷ್ಮರಲ್ಲ. ಅದರ ಉಪಾಖ್ಯಾನದಲ್ಲಿ ಸಾಕಷ್ಟು ಸಾಹಸಗಾಥೆಗಳು, ಶೌರ್ಯ ಕಥೆಗಳು ಬರುತ್ತವೆ. ಅಂಥವುಗಳಲ್ಲಿ ಸಂಜಯ ಎಂಬ ರಾಜನೂ ಒಬ್ಬ. ಆತ ಶತ್ರುಗಳನ್ನು ಹಿಮ್ಮೆಟ್ಟಿಸಲಾಗದೆ ತನ್ನ ರಾಜ್ಯವನ್ನು ಕಳೆದುಕೊಂಡು, ಹೇಡಿಯಾಗಿ ಕುಳಿತಿರುತ್ತಾನೆ. ಇನ್ನು ತನ್ನಿಂದೇನೂ ಆಗದು, ರಾಜ್ಯವನ್ನು ಮರಳಿ ಗಳಿಸಲು ಸಾಧ್ಯವಾಗದು ಎಂದು ಕಣ್ಣೀರು ಸುರಿಸುತ್ತಿರುತ್ತಾನೆ. ಅದನ್ನು ಕಂಡ ಆತನ ತಾಯಿ ರಾಣಿ ವಿದುಲಾಳಿಗೆ ಅಸಾಧ್ಯ ಕೋಪವುಂಟಾಗುತ್ತದೆ.
ಇವನು ತನ್ನ ಮಗನೇ ಅಲ್ಲ, ನನ್ನ ಗಂಡನಿಗೂ ಹುಟ್ಟಿದವನಲ್ಲ ಎನ್ನುತ್ತಾ, ಮಗನನ್ನು ಉದ್ದೇಶಿಸಿ- ಮುಹೂರ್ತಂ ಜ್ವಲಿತಂ ಶ್ರೇಯೋ ನತು ಧೂಮಾಯಿತಂ ಚಿರಂ ಅಂದರೆ, ‘ನೂರಾರು ವರ್ಷ ಹೊಗೆಯಾಡುತ್ತಾ ಬಿದ್ದಿರುವುದಕ್ಕಿಂತ ಅಲ್ಪಕಾಲ ಬದುಕಿದರೂ ಪ್ರಜ್ವಲಿಸಿ ಬದುಕುವುದು ಶ್ರೇಯಸ್ಕರ’ ಎಂದು ಹೇಳುತ್ತಾಳೆ. ಆ ಮಾತುಗಳೇ ಸಂಜಯನಿಗೆ ಪ್ರೇರಣೆಯಾಗುತ್ತವೆ, ಮೇಲೆದ್ದು ಹೋರಾಡಿ ಮತ್ತೆ ರಾಜ್ಯ ಗಳಿಸುತ್ತಾನೆ. ಆಕೆಯ ಪ್ರೇರಣಾತ್ಮಕ ಮಾತುಗಳನ್ನು ನೆನಪಿಸಿಕೊಂಡಾಗಲೆಲ್ಲ ಅಲ್ಪಾಯುಷಿಗಳಾದರೂ ಅನಂತ ಕಾಲ ಉಳಿಯುವಂಥ ಕೆಲಸ ಮಾಡಿದ ಶಂಕರಾಚಾರ್ಯರು, ಸ್ವಾಮಿ ವಿವೇಕಾನಂದರು, ಸ್ವಾಮಿ ರಾಮತೀರ್ಥರು, ಜ್ಞಾನದೇವರು, ಶ್ರೀನಿವಾಸ ರಾಮಾನುಜನ್ ಕಣ್ಣಮುಂದೆ ಬರುತ್ತಾರೆ.ಇವರೆಲ್ಲ ‘ಮುಹೂರ್ತಂ ಜ್ವಲಿತಂ ಶ್ರೇಯೋ’ ಎಂಬಂತೆ ಪ್ರಜ್ವಲಿಸಿ ಹೋದವರು. ಅದರಲ್ಲೂ ಸ್ವಾಮಿ ವಿವೇಕಾನಂದರು ಬದುಕಿದ್ದು ಕೇವಲ 39 ವರ್ಷ.
1893
ಭಾರತೀಯರಾದ ನಾವು ಈ ವರ್ಷವನ್ನು ಮರೆಯಲು ಸಾಧ್ಯವೇ? “Sisters and Brothers of America’ ಎಂಬ ಮೊದಲ ಉದ್ಗಾಾರದಲ್ಲೇ ಸ್ವಾಮಿ ವಿವೇಕಾನಂದರು ಜಗತ್ತನ್ನು ಗೆದ್ದ ವರ್ಷವದು. ವಿವೇಕಾನಂದರು ಅಮೆರಿಕದಲ್ಲಿ ಮನೆಮಾತಾಗುವಂತೆ ಮಾಡಿತು ಆ ಭಾಷಣ. ಅಲ್ಲಿನ ಸಂಘ-ಸಂಸ್ಥೆಗಳು ಮುಗಿಬಿದ್ದು ಭಾಷಣಕ್ಕೆ ಆಹ್ವಾನ ನೀಡಲಾರಂಭಿಸಿದವು. ಹಾಗಾಗಿ ವಿಶ್ವಧರ್ಮ ಸಮ್ಮೇಳನ ಮುಗಿದ ನಂತರವೂ ಅವರು ಕೆಲಕಾಲ ಅಮೆರಿಕದಲ್ಲೇ ಉಳಿದುಕೊಂಡರು. ಒಂದಿಷ್ಟು ಜನರಿಗೆ ವಿವೇಕಾನಂದರನ್ನು ವಾದದಲ್ಲಿ ಸೋಲಿಸಿ ಬಿಡಬೇಕೆಂಬ ಹಠ ಬಂದುಬಿಟ್ಟಿತ್ತು. ಕ್ರಿಶ್ಚಿಯಾನಿಟಿಯೇ ಶ್ರೇಷ್ಠ ಎಂದು ಸಾಬೀತುಪಡಿಸುವ ಸಲುವಾಗಿ ಹಿಂದೂಧರ್ಮದ ಅವಹೇಳನದಲ್ಲಿ ತೊಡಗಿದ್ದರು. ವಿವೇಕಾನಂದರು ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರಲ್ಲೂ ಹಾಗೇ ಆಯಿತು. ಮಾತಿಗೆ ಎದ್ದು ನಿಂತ ವಿವೇಕಾನಂದರು ಒಂದಿಷ್ಟು ಕಾಲ ವಾಗ್ಝರಿ ಹರಿಸಿ ಸಭೆಯಲ್ಲಿ ನೆರೆದಿದ್ದವರಿಗೆಲ್ಲ ಒಂದು ಪ್ರಶ್ನೆ ಕೇಳಿದರು.
‘ನಿಮ್ಮಲ್ಲಿ ಎಷ್ಟು ಜನ ಹಿಂದೂ ಧರ್ಮವನ್ನು ಅಧ್ಯಯನ ಮಾಡಿದ್ದೀರಿ?’ಸಾವಿರಾರು ಜನ ನೆರೆದಿದ್ದ ಆ ಸಭೆಯಲ್ಲಿ ಕೈಮೇಲೇರಿದ್ದು ಒಂದಿಬ್ಬರದ್ದು ಮಾತ್ರ! ‘ನಮ್ಮ ಧರ್ಮದ ಬಗ್ಗೆ ಒಂದಿನಿತೂ ಓದಿ ತಿಳಿದುಕೊಳ್ಳದೆ ಹಿಂದೂ ಧರ್ಮ ಮೌಢ್ಯ, ಮೂಢನಂಬಿಕೆ, ಗೊಡ್ಡುಗಳಿಂದ ಕೂಡಿರುವ ಅನಾಗರಿಕ ಧರ್ಮ ಎಂದು ಅವಹೇಳನ ಮಾಡುತ್ತಿದ್ದೀರಲ್ಲಾ ನಿಮಗೆಷ್ಟು ಧಾರ್ಷ್ಟ್ಯ?!’ ಎಂದು ತರಾಟೆಗೆ ತೆಗೆದುಕೊಳ್ಳುತ್ತಾರೆ. ಇಡೀ ಸಭೆಯೇ ಮೂಕವಿಸ್ಮಿತವಾಗಿ ಕುಳಿತುಕೊಳ್ಳುತ್ತದೆ. ಅಲ್ಲಿಂದ ಬ್ರಿಟನ್‌ಗೆ ಬಂದರು. ಹತ್ತಾರು ಭಾಷಣ, ಸಂವಾದ, ಚರ್ಚಾಕೂಟಗಳಿಗೆ ಅಲ್ಲೂ ಆಹ್ವಾನ ಬಂತು. ಹಾಗೊಂದು ಚರ್ಚೆಯಲ್ಲಿ ಪಾಲ್ಗೊಂಡಿದ್ದ ವಿವೇಕಾನಂದರು ಬ್ರಿಟಿಷ್ ಆಡಳಿತದ ವಿರುದ್ಧ ಕಟು ಟೀಕೆ ಮಾಡುತ್ತಿದ್ದರು. ಅದನ್ನು ಕಂಡ ಬ್ರಿಟಿಷ್ ಪತ್ರಕರ್ತರು ಸಿಡಿಮಿಡಿಗೊಂಡಿದ್ದರು. ಆದರೇನಂತೆ ವಿವೇಕಾನಂದರು ಮಾತ್ರ ಟೀಕಾಪ್ರಹಾರವನ್ನು ಮುಂದುವರಿಸಿಯೇ ಇದ್ದರು. ಹಾಗೆ ಟೀಕೆ ಮಾಡುತ್ತಿದ್ದ ಅವರು ಮಾತಿನ ಮಧ್ಯೆ, ‘ಆದರೂ ನಾನು ಬ್ರಿಟನ್ ರಾಣಿಯ ವಿಧೇಯ ಪ್ರಜೆ’ ಎಂದುಬಿಟ್ಟರು!!
ಮೊದಲೇ ಕುಪಿತಗೊಂಡಿದ್ದ ಬ್ರಿಟಿಷ್ ಪತ್ರಕರ್ತರಿಗೆ ಬ್ರಹ್ಮಾಸ್ತ್ರ ಸಿಕ್ಕಿದಂತಾಯಿತು. ‘ಇದುವರೆಗೂ ಬ್ರಿಟಿಷ್ ಸರಕಾರವನ್ನು ಭಾರೀ ಭಾರೀ ಟೀಕೆ ಮಾಡುತ್ತಿದ್ದಿರಲ್ಲಾ, ಇದ್ದಕ್ಕಿದ್ದಂತೆಯೇ ನಾನು ಬ್ರಿಟನ್ ರಾಣಿಯ ವಿಧೇಯ ಪ್ರಜೆ ಎಂದಿದ್ದೇಕೆ? ಭಯವಾಯಿತೇ?!’ ಎಂದು ಕಿಚಾಯಿಸಿದರು. ವಿವೇಕಾನಂದರು ನಿರುತ್ತರರಾಗಿ ನಿಲ್ಲುತ್ತಾರೆ, ಅವಮರ್ಯಾದೆಗೆ ಒಳಗಾಗುತ್ತಾರೆ ಎಂದು ಎಲ್ಲರೂ ಭಾವಿಸಿದರು. ಹಸನ್ಮುಖಿಯಾಗಿಯೇ ನಿಂತಿದ್ದ ವಿವೇಕಾನಂದರು ಬಾಯಿ ತೆರೆದರು? ‘ನೋಡಿ, ಬ್ರಿಟನ್ ರಾಣಿ ವಿಕ್ಟೋರಿಯಾ ವಿಧವೆ. ನಮ್ಮ ಭಾರತದಲ್ಲಿ ವಿಧವೆಯರಿಗೆ ಬಹಳ ಗೌರವ ಕೊಡುತ್ತೇವೆ’ ಎಂದರು! ಗಪ್ಪಾಾಗುವ ಸರದಿ ಪತ್ರಕರ್ತರದ್ದಾಗಿತ್ತು. ವಿವೇಕಾ ನಂದರು ಬರೀ ಒಬ್ಬ ಸ್ವಾಮೀಜಿ, ಹಿಂದೂಧರ್ಮವನ್ನು ಉದ್ಧಾರ ಮಾಡಲು ಅವತರಿಸಿ ಬಂದ ಮಹಾಪುರುಷ,Messiah ಮಾತ್ರ ಎಂದು ಭಾವಿಸಬೇಡಿ. ಅವರಿಗೆ ತುಂಬಾ ಹಾಸ್ಯಪ್ರಜ್ಞೆಯೂ ಇತ್ತು, Presence of Mind ಅಂತಾರಲ್ಲಾ ಅದಂತೂ ಅದ್ಭುತ.
ಗಂಭೀರವಾದ, ಅವಹೇಳನಕಾರಿಯಾದ ಪ್ರಶ್ನೆಗಳು, ಟೀಕೆಗಳು ಎದುರಾದಾಗಲೂ ಕೋಪಿಸಿಕೊಳ್ಳದೆ ತುಂಬಾ witty ಆಗಿ ಉತ್ತರಿಸುತ್ತಿದ್ದರು. ಬ್ರಿಟನ್‌ನಲ್ಲೇ ಮತ್ತೊಂದು ಸಭೆ ನಡೆಯುತ್ತಿತ್ತು. ವಿವೇಕಾನಂದರು ನಿರರ್ಗಳವಾಗಿ ಮಾತನಾಡುತ್ತಿದ್ದರು. ಎಲ್ಲರೂ ಆಶ್ಚರ್ಯಚಕಿತರಾಗಿ ಮಾತು ಕೇಳುತ್ತಿದ್ದರೆ ಒಬ್ಬ ಫಿರಂಗಿ ಮಾತ್ರ ವಿವೇಕಾನಂದರ ಕಾಲೆಳೆಯಲು ಹವಣಿಸುತ್ತಿದ್ದ. ಫಿರಂಗಿ: What is the difference between Monk and a Monkey??
ವಿವೇಕಾನಂದ: Just Arms difference! ಪ್ರಶ್ನಿಸಿದ ಫಿರಂಗಿ ವಿವೇಕಾನಂದರಿಂದ ಸರಿಸುಮಾರು ಮೊಳಕೈ ದೂರದಲ್ಲಿದ್ದ!! ಹಾಗಂತ ಎಲ್ಲ ಪ್ರಶ್ನೆಗಳಿಗೂ ಅವರು ತಿಳಿಹಾಸ್ಯದಲ್ಲೇ ಉತ್ತರಿಸುತ್ತಿದ್ದರು ಎಂದರ್ಥವಲ್ಲ. ಒಮ್ಮೆ ಹೀಗೂ ಆಯಿತು. ವಿವೇಕಾನಂದರು ಬುದ್ಧನ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು. ಇಂಗ್ಲೆಂಡ್ ಪ್ರವಾಸದ ವೇಳೆ ಭಾಷಣವೊಂದರಲ್ಲಿ ಬುದ್ಧನ ಬಗ್ಗೆಯೇ ಹೇಳುತ್ತಿದ್ದರು, ಬಹುವಾಗಿ ಹೊಗಳುತ್ತಿದ್ದರು. ಇದನ್ನು ಕಂಡ ಬ್ರಿಟಿಷನೊಬ್ಬ ಕೇಳುತ್ತಾನೆ- ‘ಬುದ್ಧ ಅಷ್ಟು ಗ್ರೇಟ್, ಇಷ್ಟು ಗ್ರೇಟ್ ಎನ್ನುತ್ತಿದ್ದೀರಲ್ಲಾ, ಜಗತ್ತಿನ ಮಹಾನ್ ವ್ಯಕ್ತಿಗಳೆಲ್ಲರೂ ಬ್ರಿಟನ್‌ಗೆ ಬಂದು ಹೋಗಿದ್ದಾರೆ. ನಿಮ್ಮ ಬುದ್ಧ ಗ್ರೇಟ್ ಆಗಿದ್ದನೆನ್ನುವುದಾದರೆ ಆತನೇಕೆ ಬ್ರಿಟನ್‌ಗೆ ಭೇಟಿ ಕೊಡಲೇ ಇಲ್ಲ?!’ ವಿವೇಕಾನಂದ: ಬುದ್ಧ ಬದುಕಿದ್ದಾಗ ನಿನ್ನ ಯುರೋಪ್ ಎಲ್ಲಿತ್ತು? ನಿನ್ನ ಬ್ರಿಟನ್ ಎಲ್ಲಿತ್ತು? ಅಮೆರಿಕವೆಲ್ಲಿತ್ತು?! ಅದಕ್ಕಿಂತ ತಪರಾಕಿ ಬೇಕೆ?! ಬುದ್ಧ ಅವತರಿಸಿದ್ದು ಕ್ರಿಸ್ತ ಪೂರ್ವದಲ್ಲಿ. ಆಗ ಬ್ರಿಟನ್ನೂ ಇರಲಿಲ್ಲ, ಯುರೋಪೂ ಇರಲಿಲ್ಲ, ಅಷ್ಟೇಕೆ ಕ್ರಿಶ್ಚಿಯಾನಿಟಿಯೇ ಇರಲಿಲ್ಲ!! ವಿವೇಕಾನಂದರ ಜತೆ ಬ್ರಿಟನ್‌ಗೂ ಆಗಮಿಸಿದ್ದ ಸಿಸ್ಟರ್ ನಿವೇದಿತಾ ಎಷ್ಟು ಪ್ರಭಾವಿತಳಾಗಿದ್ದಳೆಂದರೆ, ‘ನಾನೂ ಭಾರತಕ್ಕೆ ಬರುತ್ತೇನೆ, ನಿಮ್ಮ ದೇಶಸೇವೆಗೆ ನಾನೂ ಸಹಾಯ ಮಾಡುತ್ತೇನೆ’ ಎಂದಳು.
‘ನೋಡು? ಇತರ ಧರ್ಮಗಳ ಕಟ್ಟುಪಾಡುಗಳು, ಕಟ್ಟಳೆಗಳು ಅಷ್ಟಾಗಿ ತಾರ್ಕಿಕವಾಗಿರುವುದಿಲ್ಲ, ವಿಜ್ಞಾನಕ್ಕೆ ಹತ್ತಿರವಾಗಿರುವುದಿಲ್ಲ. ಹಾಗಾಗಿ ಮೊದಲು ಪರಾಮರ್ಶೆ ಮಾಡಿ, ನಂತರ ಒಪ್ಪಿಕೊಳ್ಳಬೇಕು. ಆದರೆ ಹಿಂದೂ ಧರ್ಮದ ರೀತಿ ರಿವಾಜುಗಳು ತರ್ಕಬದ್ಧವಾಗಿರುತ್ತವೆ, ವಿಜ್ಞಾನಕ್ಕೆ ಅನುಗುಣವಾಗಿರುತ್ತವೆ. ಅವುಗಳನ್ನು ಮೊದಲು ಒಪ್ಪಿಕೊಂಡು ಅನುಸರಿಸಬೇಕು, ಕ್ರಮೇಣ ಆ ಕಟ್ಟುಪಾಡುಗಳ ಹಿಂದೆ ಇರುವ ತರ್ಕ, ಆಶಯ ಅರಿವಾಗುತ್ತದೆ. ಪಾಶ್ಚಿಮಾತ್ಯಳಾದ ನೀನು ಭಾರತಕ್ಕೆ ಬಂದ ನಂತರ ಅದೇಕೆ, ಇದೇಕೆ ಎಂದು ಪ್ರಾರಂಭದಲ್ಲೇ ಪ್ರಶ್ನಿಸಬೇಡ’ ಎನ್ನುತ್ತಾ ಹೀಗೆ ಹೇಳುತ್ತಾರೆ- Anything that is western origin, first you verify it, then accept it. Anything that is Indian origin, first accept it, then verify it if necessary. ಅವರಿಗೆ ಹಿಂದೂ ಧರ್ಮದ ಬಗ್ಗೆ ಅಷ್ಟೊಂದು ಬಲವಾದ ನಂಬಿಕೆಯಿತ್ತು.
ನೀವು ರೋಮಿ ರೋಲ್ಯಾಂಡ್(Romain Rolland) ಹೆಸರು ಕೇಳಿರಬಹುದು. ಆತ ಫ್ರೆಂಚ್ ನಾಟಕಕಾರ, ಇತಿಹಾಸಕಾರ, ಕಾದಂಬರಿಕಾರ. ಒಮ್ಮೆ ಈ ರೋಮಿ ರೋಲ್ಯಾಂಡ್ ಹಾಗೂ ರವೀಂದ್ರನಾಥ ಟಾಗೋರ್ ಪರಸ್ಪರ ಭೇಟಿಯಾಗುತ್ತಾರೆ. ಇಬ್ಬರೂ ಹೆಚ್ಚೂಕಡಿಮೆ ಸಮಕಾಲೀನರು. ರವೀಂದ್ರನಾಥ್ ಟಾಗೋರರಿಗೆ 1913ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪುರಸ್ಕಾರ ದೊರೆತರೆ, ರೋಮಿ ರೋಲ್ಯಾಂಡ್ 1915ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪಡೆದವರು. ಇಂಥ ದಿಗ್ಗಜರ ಭೇಟಿ ಚರ್ಚೆಗೆ ತಿರುಗುತ್ತದೆ. ‘ನನಗೆ ಭಾರತದ ಬಗ್ಗೆ ತಿಳಿದುಕೊಳ್ಳಬೇಕು, ಅದಕ್ಕೆ ಯಾವ ಪುಸ್ತಕವನ್ನು ಓದಬೇಕು’ ಎಂದು ರೋಮಿ ರೋಲ್ಯಾಂಡ್ ಕೇಳುತ್ತಾರೆ. “If you want to know India, study Vivekananda. In him everything is positive, nothing negative‘’ ಎನ್ನುತ್ತಾರೆ ರವೀಂದ್ರನಾಥ ಟಾಗೂರ್!!
ರೋಮಿ ರೋಲ್ಯಾಂಡ್‌ಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಆದರೆ ವಿವೇಕಾನಂದರ ಎಲ್ಲ ಭಾಷಣ, ಚಿಂತನೆಗಳಿದ್ದಿದ್ದು ಇಂಗ್ಲಿಷ್‌ನಲ್ಲಿ ಮಾತ್ರ. ಕೊನೆಗೆ ತನ್ನ ಅಕ್ಕನಿಂದ ಓದಿಸಿ, ಹೇಳಿಸಿಕೊಂಡು ವಿವೇಕಾನಂದರ ಬಗ್ಗೆ ತಿಳಿದುಕೊಳ್ಳುತ್ತಾರೆ. ಅಂಥ ನೊಬೆಲ್ ಪುರಸ್ಕೃತನೇ ವಿವೇಕಾನಂದರ ಬಗ್ಗೆ ಎಷ್ಟು ಸಮ್ಮೋಹಿತನಾಗುತ್ತಾನೆಂದರೆ, “The Life of Vivekananda and The universal Gospel’ ಎಂಬ ಪುಸ್ತಕ ಬರೆಯುತ್ತಾನೆ. “I look upon Swamy Vivekananda as a fire of spiritual energy’ ಎಂದು ತನ್ನ ಮೇಲಾದ ಪ್ರಭಾವವನ್ನು ಹೇಳಿಕೊಳ್ಳುತ್ತಾನೆ. ಅಂಥ ವಿವೇಕಾನಂದರು ಜನಿಸಿದ ನಾಡು ನಮ್ಮದು. ನಾವು ಆಗಾಗ ಉದಾಹರಿಸುವ Indianness, ಭಾರತೀಯತೆ ಎಂಬ ಕಾನ್ಸೆಪ್ಟ್ ಕೊಟ್ಟಿದ್ದೇ ವಿವೇಕಾನಂದ. ಅವರನ್ನು ‘ಹಿಂದೂ ಧರ್ಮದ ರಾಯಭಾರಿ’ ಎಂದು ಸುಖಾಸುಮ್ಮನೆ ಹೇಳಿದ್ದಲ್ಲ.
ಶಂಕರಾಚಾರ್ಯ, ರಾಜಾರಾಮ್ ಮೋಹನ್ ರಾಯ್ ಮುಂತಾದವರೂ ದೇಶ ಸುತ್ತಿ, ಸಾಮಾಜಿಕ ಬದಲಾವಣೆ ತರಲು ಯತ್ನಿಸಿದರಾದರೂ ಹಿಂದೂ ಧರ್ಮದ ಹಿರಿಮೆಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟ ಮೊದಲ ವ್ಯಕ್ತಿ ವಿವೇಕಾನಂದ. ಯಾವ ಧರ್ಮಗಳನ್ನೂ ತೆಗಳದೆ ಆ ಕೆಲಸ ಮಾಡಿದ್ದು ಇನ್ನೂ ದೊಡ್ಡ ಸಾಧನೆ. ವಿವೇಕಾನಂದರಿಗಿಂತ ಮೊದಲು ಯಾರೂ ಕೂಡ ವಿದೇಶಗಳಿಗೆ ಹೋಗಿ ಧರ್ಮಪ್ರಚಾರ, ಪ್ರಸಾರ ಮಾಡಿರಲಿಲ್ಲ. ಶಿಷ್ಯಂದಿರು ಹೋಗಿದ್ದರೇ ಹೊರತು ಬುದ್ಧನೂ ಕೂಡ ಹೊರದೇಶಗಳಲ್ಲಿ ಧರ್ಮಪ್ರಚಾರ ಮಾಡಿರಲಿಲ್ಲ.
ಶಂಕರಾಚಾರ್ಯರು ದೇಶ ಸುತ್ತಿದರೇ ಹೊರತು ವಿದೇಶಕ್ಕೆ ಹೋದವರಲ್ಲ. ಈ ಹಿನ್ನೆಲೆಯಲ್ಲಿ, He was the global face of India. He was the first ambassador of modern India to the world ಎಂದು ಅನುಮಾನವೇ ಇಲ್ಲದೆ ಹೇಳಬಹುದು. ಅವರೊಬ್ಬ ಸಾಂಸ್ಕೃತಿಕ ರಾಯಭಾರಿಯೂ ಹೌದು. ಸಾಂಸ್ಕೃತಿಕ ರಾಷ್ಟ್ರೀಯತೆ(ಕಲ್ಚರಲ್ ನ್ಯಾಷನಲಿಸಂ) ಎಂಬ ಹೊಸ ಕಲ್ಪನೆಯನ್ನು ಕೊಟ್ಟಿದ್ದೂ ಅವರೇ. ಬುದ್ಧನ ನಂತರ Indian ethos, ಭಾರತೀಯ ಮೌಲ್ಯಗಳನ್ನು ಜಗತ್ತಿಗೆ ಕೊಂಡೊಯ್ದ ಹಾಗೂ ಅರಿವು ಮೂಡಿಸಿದ ಮೊದಲ ವ್ಯಕ್ತಿಯೂ ವಿವೇಕಾನಂದರೇ. ’’Hands that serve are holier than the lips that pray’’ (ಪ್ರಾರ್ಥಿಸುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳೇ ಮೇಲು)- ಈ ಮಾತನ್ನು ಹೇಳಿದ್ದು ಗಾಂಧಿ ಎನ್ನುವವರಿದ್ದಾರೆ. ಅಲ್ಲಾ? ಅಲ್ಲಾ? ಮದರ್ ತೆರೇಸಾ ಎಂದು ಆಕೆಯ ತಲೆಗೆ ಕಟ್ಟುವವರಿದ್ದಾರೆ. ಸ್ವಾಮಿ ಸುಖಬೋಧಾನಂದ ಹಾಗೂ ‘ಯು ಕೆನ್ ವಿನ್’ ಪುಸ್ತಕ ಬರೆದ ಶಿವ ಖೇರಾ ತಮ್ಮದೇ ಆದ ಪದಗಳಲ್ಲಿ ಅದೇ ವಾಕ್ಯವನ್ನು ರೀಸೈಕ್‌ಲ್ ಮಾಡಿದ್ದೂ ಇದೆ. Make no mistake, ಆ ಮಾತನ್ನು ಹೇಳಿದ್ದು ಸ್ವಾಮಿ ವಿವೇಕಾನಂದರು! ತುಂಬ articulate ಆಗಿ, extempore ಆಗಿ ಮಾತನಾಡುತ್ತಿದ್ದ ವಿವೇಕಾನಂದರ ನುಡಿಗಳು ನಮ್ಮ ಸುಪ್ರೀಂಕೋರ್ಟ್‌ನ ಐತಿಹಾಸಿಕ ತೀರ್ಪಿಗೂ ದಿಗ್ಜೋತಿಯಾಗಿವೆ.
ಹೌದು, ’’Hinduism is not just a religion, it’s a way of life’’ (ಹಿಂದುತ್ವವೆಂಬುದು ಒಂದು ಧರ್ಮ ಮಾತ್ರವಲ್ಲ, ಜೀವನ ವಿಧಾನವೂ ಹೌದು) ಎಂದು ಜಗತ್ತಿಗೆ ಹೇಳಿದ್ದು, ಮನವರಿಕೆ ಮಾಡಿಕೊಟ್ಟಿದ್ದೂ ವಿವೇಕಾನಂದ ಅವರೇ. ಭಾರತದಲ್ಲಿ ಇಷ್ಟೆಲ್ಲಾ ಅಲ್ಪಸಂಖ್ಯಾತರನ್ನು ಕಾಣಲು ಹಿಂದೂಗಳು ಬಹುಸಂಖ್ಯಾತರಾಗಿರುವುದೇ ಕಾರಣ. ಹಿಂದೂಯಿಸಂ ಎಂಬುದು ಧರ್ಮಮಾತ್ರವಲ್ಲ, ಅದೊಂದು ಸ್ಪಿರಿಚ್ಯುಯಾಲಿಟಿ ಎಂದವರು ಅವರು. ಸ್ಪಿರಿಚ್ಯುಯೆಲ್ ಅಂದರೆ ತನ್ನ ಹಿತವೇ ಮುಖ್ಯ ಎಂಬ ಆಲೋಚನೆ ಬಿಟ್ಟು ಇತರರ ಶ್ರೇಯೋಭಿವೃದ್ಧಿಯ ಬಗ್ಗೆಯೂ ಯೋಚಿಸಬೇಕು ಎಂಬುದು.
ಅವತ್ತು ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತೀಯತೆ, ಹಿಂದೂ ಧರ್ಮದ ಹಿರಿಮೆ, ಸಹಿಷ್ಣುತೆ ಬಗ್ಗೆ ವಿವೇಕಾನಂದರು ಆಡಿದ ಮಾತುಗಳನ್ನು ಕೇಳಿದ ಅಮೆರಿಕದ ಪ್ರತಿಷ್ಠಿತ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ತನ್ನ ಮರುದಿನದ ಆವೃತ್ತಿಯಲ್ಲಿ ‘Church should be ashamed for sending its preachers to India?’ ಎಂದು ಬರೆದಿತ್ತು!! ಹಾಗಂತ ವಿವೇಕಾನಂದರು ಹಿಂದೂ ಧರ್ಮವನ್ನು ಬರೀ ರೋಮ್ಯಾಂಟಿಸೈಝ್ ಮಾಡಲಿಲ್ಲ, ಹುಳುಕುಗಳನ್ನೂ ಹೇಳಿದರು. ‘Hinduism should reform, if not it will collapse on its own weight’ ಎಂದು ಅದರ ಲೋಪಗಳನ್ನು ಎತ್ತಿ ತೋರಿದರು. ಇವತ್ತು ಒಬ್ಬ ಸಮಾಜವಾದಿ, ಸಮತಾವಾದಿ ಕೂಡ ಅವರನ್ನು ಒಪ್ಪಿಕೊಳ್ಳುತ್ತಾನೆ. ಗಾಂಧಿಯನ್ನು ಟೀಕಿಸುವವರಿದ್ದಾರೆ, ಆದರೆ ವಿವೇಕಾನಂದರನ್ನು ಟೀಕಿಸುವವರನ್ನು ಕಾಣುವುದು ಕಷ್ಟ. ಈಗೀಗ ನಮ್ಮ ಪಾರ್ಲಿಮೆಂಟನ್ನು ನೋಡಿಕೊಂಡು ಎಲ್ಲರೂ ಯೂತ್ ಪವರ್ ಬಗ್ಗೆ ಮಾತನಾಡುತ್ತಿದ್ದಾರೆ, ಯೂತ್ ಬಂದರೆ ಭಾರತ ಬದಲಾಗುತ್ತದೆ ಎನ್ನುತ್ತಿದ್ದಾರೆ. ವಿವೇಕಾನಂದರು 120 ವರ್ಷಗಳ ಹಿಂದೆಯೇ ಯುವಶಕ್ತಿ ಬಗ್ಗೆ ಹೇಳಿದ್ದರು. ಯೂತ್ ಎಂದರೆ ಯೌವನವಲ್ಲ, Free from prejudice, ಬೇರೆಯವರ ಒಳಿತನ್ನೂ ಬಯಸುವ ಮನಃಸ್ಥಿತಿ ಎಂದಿದ್ದರು.
1000 ವರ್ಷಗಳ ಕಾಲ ಬಾಹ್ಯಶಕ್ತಿಗಳ ಆಕ್ರಮಣ, ಆಡಳಿತ, ನಮ್ಮ ಜನರ ಕಗ್ಗೊಲೆ, ಅತ್ಯಾಚಾರ, ಮತಾಂತರ ಇವುಗಳನ್ನು ತಡೆಯಲು ಒಂದು ವಿಜಯನಗರ ಸಾಮ್ರಾಜ್ಯ, ಒಬ್ಬ ಶಿವಾಜಿ, ಒಬ್ಬ ರಾಣಾ ಪ್ರತಾಪ್, ಒಬ್ಬ ಗುರು ಗೋವಿಂದ ಸಿಂಗ್, ದಯಾನಂದ ಸರಸ್ವತಿ ಅವತರಿಸಿ ಬಂದರು. ಅವರ ನಂತರ ಭಾರತದ Global face ಆಗಿ ಬಂದವರೇ ವಿವೇಕಾನಂದ. ಇಂಥವರು ಹುಟ್ಟಿಬಂದ ಕಾರಣವೇ ಬಾಹ್ಯಶಕ್ತಿಗಳು ಭಾರತೀಯರನ್ನು ಕೊಂದರೂ ‘ಭಾರತೀಯತೆ’ಯನ್ನು ನಾಶಪಡಿಸಲು ಅವರಿಗೆ ಸಾಧ್ಯವಾಗಲಿಲ್ಲ.
ಮೊನ್ನೆ ಜನವರಿ 12ರಂದು ವಿವೇಕಾನಂದರ ಜನ್ಮದಿನವಿತ್ತು. ಆ ದಿನದಿಂದ ನಾವು ಬಿಜೆಪಿ ಯುವ ಮೋರ್ಚಾದ ವತಿಯಿಂದ ರಾಜ್ಯಾದ್ಯಂತ “I am with Narendra’ ಎಂಬ ಅಭಿಯಾನ ಮಾಡುತ್ತಿದ್ದೇವೆ. ಇಷ್ಟಕ್ಕೂ 100 ವರ್ಷಗಳ ಹಿಂದೆ ಮುಂದೊಂದು ದಿನ ಭಾರತ ವಿಶ್ವಗುರುವಾಗಿ ಹೊರಹೊಮ್ಮುತ್ತದೆ ಎಂದು ಆ ನರೇಂದ್ರ(ವಿವೇಕಾನಂದ) ಹೇಳಿದ್ದರು, ಅವರ ಮಾತು-ಆಶಯವನ್ನು 100 ವರ್ಷಗಳ ನಂತರ ನಿಜವಾಗಿಸಲು ಶ್ರಮಿಸುತ್ತಿದ್ದಾರೆ ಈ ನರೇಂದ್ರ(ಮೋದಿ).
Published on January 14, 2017 06:18
January 13, 2017
January 12, 2017
Pratap Simha's Blog
- Pratap Simha's profile
- 58 followers
Pratap Simha isn't a Goodreads Author
(yet),
but they
do have a blog,
so here are some recent posts imported from
their feed.
