Pratap Simha's Blog, page 40

July 5, 2016

June 25, 2016

ಏಳೇಳು ಜನ್ಮಕೂ ಮರೆಯಲಾಗದ ಅವನು ಅಗಲಿ ಇಂದಿಗೆ ಏಳು ವರ್ಷಗಳಾದವು !

ಏಳೇಳು ಜನ್ಮಕೂ ಮರೆಯಲಾಗದ ಅವನು ಅಗಲಿ ಇಂದಿಗೆ ಏಳು ವರ್ಷಗಳಾದವು !


Like A Comet

Blazing ‘Cross The Evening Sky

Gone Too Soon

Like A Rainbow

Fading In The Twinkling Of An Eye

Gone Too Soon

Like A Sunset

Dying With The Rising Of The Moon

Gone Too Soon…


ವಿಶ್ವವಿಖ್ಯಾತ ‘Gone Too Soon’ ಎಂಬ ಇಂಥದ್ದೊಂದು ಹಾಡಿದೆ. ಭಾರತೀಯರಾದ ನಾವು ಶುಕ್ರವಾರ ಬೆಳಗ್ಗೆ ಕಣ್ಣುಬಿಡುವಷ್ಟರಲ್ಲಿ ಆ ಗೀತೆಯನ್ನು ಬರೆದು ಹಾಡಿದ್ದ ವ್ಯಕ್ತಿಯೇ ಅನ್ವರ್ಥವಾಗಿದ್ದ. ಐವತ್ತು ವರ್ಷ ಖಂಡಿತ ಸಾಯುವ ವಯಸ್ಸಲ್ಲ. “He never missed the beat, But the beat missed him today’ ಎಂದು ಹೃದಯಾಘಾತಕ್ಕೆ ತುತ್ತಾಗಿದ್ದ ಆತನ ಅಕಾಲಿಕ ಮರಣದ ಬಗ್ಗೆ ಸಿಎನ್‌ಎನ್ ಚಾನೆಲ್‌ನಲ್ಲಿ ಲ್ಯಾರಿ ಕಿಂಗ್ ಭಾವನಾತ್ಮಕವಾಗಿ ವರ್ಣಿಸಿದ್ದು ನಿಜಕ್ಕೂ ಅರ್ಥಗರ್ಭಿತವಾಗಿತ್ತು. ಆದರೆ ಅವನ ಅಗಲಿಕೆಯನ್ನು ಒಪ್ಪಿಕೊಳ್ಳಲು ಮನಸ್ಸಿಗೆ ಮಾತ್ರ ಕಷ್ಟವಾಗುತ್ತಿತ್ತು. ಅಷ್ಟಕ್ಕೂ ಅವನು ನಮ್ಮ ತಲೆಮಾರಿನವರ ಹೀರೋ. ಬ್ರೂಸ್‌ಲೀ, ಜಾಕಿ ಚಾನ್, ಸ್ಟ್ಯಾಲನ್, ಆರ್ನಾಲ್ಡ್, ವಿವಿಯನ್ ರಿಚರ್ಡ್ಸ್, ಸಚಿನ್, ಬೆಕರ್, ಸ್ಯಾಂಪ್ರಾಸ್, ಅಗಾಸಿ, ರೊಮಾರಿಯೋ, ಬ್ಯಾಜಿಯೋ, ಸೆನ್ನಾ, ಶುಮಿ, ಕಾರ್ಲ್ ಲೂಯಿಸ್, ಮೈಕೆಲ್ ಜಾಕ್ಸನ್, ಟೈಸನ್ ಇವರೆಲ್ಲ ನಮಗೆ ಬರೀ ತಾರೆಗಳಾಗಿ ಉಳಿದವರಲ್ಲ. ಅವರಂತೆ ಫೂಟ್ ಮಾಡುವುದನ್ನು, ಸಿಕ್ಸರ್ ಹೊಡೆಯುವುದನ್ನು, ಫುಟ್ಬಾಲ್ ಆಡುವುದನ್ನು, ಕಾರು ಚಾಲನೆ ಮಾಡುವುದನ್ನು, ಓಡುವುದನ್ನು ಮನದಲ್ಲೇ ಕಲ್ಪಿಸಿಕೊಂಡು, ಆ ಕಲ್ಪನೆ ಕೊಡುವ ಸುಖವನ್ನು ಸವಿದವರು, ಅದೇ ವಾಸ್ತವವೆಂಬಂತೆ ಬೀಗಿದವರು ನಾವು. ಈಗಿನವರಂತೆ ನಾವೆಂದೂ ಅಂಕಿ-ಅಂಶಗಳನ್ನು ತುಲನೆ ಮಾಡಿ, ನಿರ್ಭಾವುಕರಾಗಿ ಗ್ರೇಟ್‌ನೆಸ್ ಅಳೆದವರಲ್ಲ. ಹೃದಯದ ಗೂಡೊಳಗೆ ಅವರನ್ನು ಬಿಟ್ಟುಕೊಂಡು ಆರಾಧನೆ ಮಾಡುತ್ತಾ ಬಂದಿದ್ದೇವೆ. ನಮ್ಮ ಹಿಂದಿನ ತಲೆಮಾರಿನವರಿಗೆ ಎಲ್ವಿಸ್ ಪ್ರೆಸ್ಲಿ ಹೇಗೋ, ನಮ್ಮ ತಲೆಮಾರಿನವರಿಗೆ ಮೈಕೆಲ್ ಜಾಕ್ಸನ್ ಹಾಗೇ. Lyrics ಅರ್ಥವಾಗದಿದ್ದರೂ ಬೀಟ್ಸ್ ಗಾಗಿ ಅವನ ಹಾಡುಗಳನ್ನು ಕೇಳುತ್ತಿದ್ದೆವು. ‘ನಾನೇನಾಗಿದ್ದೇನೋ ಅದಕ್ಕೆ ಮೈಕೆಲ್ ಜಾಕ್ಸನ್ ಕಾರಣ. ನನ್ನ ನೆನಪಿಗೆ ಬರುವುದು ಆತನ ಹಾಡು ಮತ್ತು ನೃತ್ಯ ಮಾತ್ರ’ ಎನ್ನುತ್ತಿದ್ದಾರೆ ‘ಕಾದಲನ್’ ಚಿತ್ರದ ಮೂಲಕ ನಮ್ಮ ಚಿತ್ರರಂಗದ ನೃತ್ಯಕ್ಕೆ ಹೊಸ ಆಯಾಮ ನೀಡಿದ ಪ್ರಭುದೇವ. ‘ಮೈಕೆಲ್ ಜಾಕ್ಸನ್ ಇಲ್ಲದಿದ್ದರೆ ನಾನು ‘ಡಿಸ್ಕೋ ಡಾನ್ಸರ್’ ಚಿತ್ರವನ್ನು ಮಾಡುವುದಕ್ಕೇ ಆಗುತ್ತಿರಲಿಲ್ಲ’ ಎಂದು ಮಿಥುನ್ ಹೇಳುತ್ತಿದ್ದಾರೆ.


ಆತನ ಮೋಡಿಗೆ ಒಳಗಾಗದವರೇ ಇಲ್ಲ.

1996ರಲ್ಲಿ ಮೈಕೆಲ್ ಜಾಕ್ಸನ್‌ನನ್ನು ಮುಂಬೈಗೆ ಕರೆಸಿದ್ದು ಹಿಂದೂ ರಾಷ್ಟ್ರವಾದಿ ಬಾಳಾ ಠಾಕ್ರೆ ಎಂದರೆ ಈಗಿನವರಿಗೆ ನಂಬಲು ಸಾಧ್ಯವಿದೆಯೆ?! ‘ಯಾರವನು ಮೈಕೆಲ್ ಜಾಕ್ಸನ್? ಹಿಂದೂ ಸಂಸ್ಕೃತಿಗೂ ಆತನಿಗೂ ಏನು ಸಂಬಂಧ?’ ಎಂದು ಕೆಲವು ಟೀಕಾಕಾರರು ಪ್ರಶ್ನಿಸಿದಾಗ, ‘ಜಾಕ್ಸನ್ ಒಬ್ಬ ಮಹಾನ್ ಕಲಾವಿದ. ಆತನನ್ನು ಕಲಾವಿದನನ್ನಾಗಿಯೇ ಒಪ್ಪಿಕೊಳ್ಳಬೇಕು. ಆತನಂತೆ ಡಾನ್ಸ್ ಮಾಡಲು ಯಾರಿಗೂ ಸಾಧ್ಯವಿಲ್ಲ. ಪ್ರಯತ್ನಿಸಿದರೆ ಮೂಳೆ ಮುರಿದುಕೊಳ್ಳಬೇಕಾಗುತ್ತದೆ’, ‘ಇನ್ನು ಸಂಸ್ಕೃತಿ ಎಂದರೇನು? ಮೈಕೆಲ್ ಜಾಕ್ಸನ್ ಅಮೆರಿಕದ ಒಂದಿಷ್ಟು ಮೌಲ್ಯಗಳನ್ನು ಪ್ರತಿನಿಧಿಸುತ್ತಾನೆ. ಅದನ್ನು ಒಪ್ಪಿಕೊಳ್ಳಲು ಭಾರತೀಯರಿಗೆ ಯಾವ ಹಿಂಜರಿಕೆಯೂ ಇರಬಾರದು’ ಎಂದು ಬಾಳಾ ಠಾಕ್ರೆ ಮಾರುತ್ತರ ನೀಡಿದ್ದರು.


    ‘ಆತನ ಅಭಿಮಾನಿಗಳು ಎಂಟು ವರ್ಷದವರಿಂದ ಎಂಬತ್ತೆಂಟು ವರ್ಷದವರವರೆಗೂ ಇದ್ದಾರೆ’ ಎನ್ನುವ ಪತ್ರಕರ್ತ ರಶೋದ್ ವಲ್ಲಿಸನ್ ಅವರ ಮಾತುಗಳು ನಿಜಕ್ಕೂ ಅರ್ಥ ಗರ್ಭಿತ. ಒಬ್ಬ ಅಪ್ರಾಪ್ತ ವಯಸ್ಸಿನ ಬಾಲಕ ಕೂಡ ಮೈಕೆಲ್ ಜಾಕ್ಸನ್‌ನೊಂದಿಗೆ ತನ್ನನ್ನು ರಿಲೇಟ್ ಮಾಡಿಕೊಳ್ಳಬಹುದು. ಆತನ ಜೀವನೋತ್ಸಾಹವೇ ಅಂಥದ್ದಾಗಿತ್ತು. ಮೈಯಲ್ಲಿ ಮೂಳೆಯೇ ಇಲ್ಲದವನಂತೆ ಆತ ಮಾಡುತ್ತಿದ್ದ ರೋಬೋ, ಬ್ರೇಕ್‌ಡಾನ್ಸ್, ಮೂನ್‌ವಾಕ್‌ಅನ್ನು ಮರೆಯಲು ಯಾರಿಗೆ ತಾನೇ ಸಾಧ್ಯ? ನಮಗಿಂತ ಮೊದಲಿನ ತಲೆಮಾರಿನವರು ಎಲ್ವಿಸ್ ಪ್ರೆಸ್ಲಿ, ಬಾಬ್ ಡೈಲಾನ್, ಜಾನ್ ವಿನ್ ಸ್ಟನ್ ಲೆನಾನ್, ಪಾಲ್ ಮೆಕಾರ್ಟ್ನಿ, ಫಿಲ್ ಕಾಲಿನ್ಸ್ ಮುಂತಾದವರನ್ನು ಇಷ್ಟಪಟ್ಟಿರಬಹುದು. ಆದರೆ ಚಾರ್ಲಿ ಚಾಪ್ಲಿನ್ ನಂತರ ಎಷ್ಟೇ ಒಳ್ಳೆಯ ಹಾಸ್ಯ ನಟರು ಬಂದಿದ್ದರೂ ಹೇಗೆ ಯಾರೂ ಚಾಪ್ಲಿನ್‌ನಷ್ಟು ಇಷ್ಟವಾಗುವುದಿಲ್ಲವೋ ಹಾಗೆಯೇ ಮೈಕೆಲ್ ಜಾಕ್ಸನ್ ಯಾವತ್ತೂ ನಮಗೆ ಸ್ಪೆಷಲ್‌ ABC, The Love You Save, I’ll Be There ಮುಂತಾದ ಐದು ಹಾಡುಗಳನ್ನು ಹೊಂದಿದ್ದ ‘ಜಾಕ್ಸನ್ 5’ ಆಲ್ಬಮ್‌ನೊಂದಿಗೆ 1969 ಅಕ್ಟೋಬರ್ ನಲ್ಲಿ ಪಾಪ್ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟಾಗ ಜಾಕ್ಸನ್‌ಗೆ 11 ವರ್ಷ.


    ಇವತ್ತು ಯಾವುದಾದರೂ ಹುಡುಗ ಚೆನ್ನಾಗಿ ಡಾನ್ಸ್ ಮಾಡಿದರೆ ಹೃತಿಕ್ ರೋಶನ್, ಪ್ರಭುದೇವ ನೆನಪಾಗಬಹುದು. ಆದರೆ ಹತ್ತು ವರ್ಷಗಳ ಹಿಂದಿನವರೆಗೂ ಜಾಕ್ಸನ್ ಎಂದರೆ ಬ್ರೇಕ್ ಡಾನ್ಸ್, ಮೂನ್ ವಾಕ್ ನೆನಪಾಗುತ್ತಿತ್ತು. ‘ಏನೋ ಜಾಕ್ಸನ್ ಥರಾ ಕುಣಿಯುತ್ತೀಯಾ? ಅವನು ಮೈಕೆಲ್ ಜಾಕ್ಸನ್, ನೀನು ಸೈಕಲ್ ಜಾಕ್ಸನ್ನಾ?’ ಎಂದು ಕಿಚಾಯಿಸುತ್ತಿದ್ದರು. ಮೈಕೆಲ್ ಜಾಕ್ಸನ್ ಎಂದೋ ಮಾಡಿದ ಡಾನ್ಸ್‌ನ ಕಳಪೆ ಕಾಪಿಯೇ ‘ಕ್ರೇಝಿ-4’ ಚಿತ್ರದಲ್ಲಿ ಹೃತಿಕ್ ರೋಶನ್ ಮಾಡಿರುವುದು!! ಪ್ರಭುದೇವನ ‘ಮುಖಾಬಲ’ ಹಾಡಿನ ನೃತ್ಯವೂ ನಕಲೇ ಆಗಿದೆ. ಹಾಗಂತ ಮೈಕೆಲ್ ಜಾಕ್ಸನ್ ಕೇವಲ ಒಬ್ಬ ಉತ್ತಮ ಡಾನ್ಸರ್ ಆಗಿರಲಿಲ್ಲ. ಮನಮುಟ್ಟುವ ಸಾಹಿತ್ಯ ರಚನೆಯ ಮೂಲಕ ಪಾಪ್ ಸಂಗೀತವೆಂದರೆ ಬರೀ ಸದ್ದು ಗದ್ದಲವಲ್ಲ ಎಂಬುದನ್ನು ಸಾಬೀತು ಮಾಡಿದವರಲ್ಲಿ ಅವನೂ ಒಬ್ಬ.


She’s Out Of My Life

She’s Out Of My Life

And I Don’t Know Whether To Laugh Or Cry

I Don’t Know Whether To Live Or Die

And It Cuts Like A Knife

She’s Out Of My Life

I Don’t Need No Dreams When I’m By Your

Side

Every Moment Takes Me To Paradise

Darlin’, Let Me Hold You

Warm You In My Arms And Melt Your Fears

Away

Show You All The Magic That A Perfect Love

Can Make

I Need You Night And Day


ಅವನ ಹಾಡುಗಳಲ್ಲಿ ನೋವೂ ಇದೆ, ನಲಿವೂ ಇದೆ, ಹತಾಶೆಯೂ ವ್ಯಕ್ತವಾಗುತ್ತದೆ, Foot Tapping ಕೂಡ ಆಗಿವೆ. ನಮ್ಮಂತೆ ಹಾಡು ಬರೆಯುವುದು ಯಾರೋ, ಹಾಡುವುದು ಇನ್ಯಾರೋ, ತುಟಿ ಪಿಟಿಪಿಟಿ ಮಾಡುವುದು ಮತ್ಯಾರೋ ಅಲ್ಲ. ಈ ಎಲ್ಲವೂ ಅವನು ಸ್ವತಃ ಬರೆದು, ಹಾಡಿ, ಕುಣಿದ ಹಾಡುಗಳೇ. 1982 ಡಿಸೆಂಬರ್ 1 ರಂದು ಬಿಡುಗಡೆಯಾದ ಆತನ ‘ಥ್ರಿಲ್ಲರ್’ ಆಲ್ಬಮ್ ಸತತ 37 ವಾರಗಳ ಕಾಲ ನಂಬರ್-1 ಸ್ಥಾನದಲ್ಲಿತ್ತು. 10 ಕೋಟಿ ಕಾಪಿಗಳು ಮಾರಾಟವಾದವು. ಇಂದಿಗೂ ಆ ದಾಖಲೆಯನ್ನು ಮುರಿಯಲು ಯಾರಿಗೂ ಸಾಧ್ಯವಾಗಿಲ್ಲ. ಥ್ರಿಲ್ಲರ್ ನಲ್ಲಿದ್ದ “Beat It’ ಹಾಡಿನ ಬಗ್ಗೆ ಬರೆಯುತ್ತಾ ‘ಆ ಹಾಡು ಸಂಗೀತವನ್ನು ಶಾಶ್ವತವಾಗಿ ಬದಲಾಯಿಸಿ ಬಿಟ್ಟಿತು’ ಎಂದಿತು ‘ರೋಲಿಂಗ್ ಸ್ಟೋನ್’ ಮ್ಯಾಗಝಿನ್. ಮತ್ತೊಂದು ಹಾಡು “Billie Jean’ 7 ವಾರಗಳ ಕಾಲ ನಂಬರ್-1 ಪಟ್ಟ ಆಕ್ರಮಿಸಿತು. ‘ಬ್ಯಾಡ್’ಗಿಂತ ಮೊದಲು ಬಿಡುಗಡೆಯಾದ ಸೀಡ್ಹಾ ಗ್ಯಾರೆಟ್ ಜತೆಗಿನ “I Just Can’t Stop Loving You’ ಯುಗಳ ಗೀತೆ ಜನರನ್ನು ವಾಸ್ತವದಲ್ಲಿ ಹುಚ್ಚೆಬ್ಬಿಸಿತು. 1992ರಲ್ಲಿ ಅಮೆರಿಕದ ರಾಷ್ಟ್ರೀಯ ಫುಟ್ಬಾಲ್ ಲೀಗ್‌ನ ಫೈನಲ್ ಪಂದ್ಯದ ಮಧ್ಯಂತರ ಅವಧಿಯಲ್ಲಿ ಆಯೋಜನೆಯಾಗಿದ್ದ ಮೈಕೆಲ್ ಜಾಕ್ಸನ್ ಶೋವನ್ನು ಅಮೆರಿಕದ ಇತಿಹಾಸದಲ್ಲೇ ಅತಿ ಹೆಚ್ಚು ಜನರು ವೀಕ್ಷಿಸುವ ಮೂಲಕ ಯಾರೂ ಮುರಿಯಲಾಗದ ದಾಖಲೆ ಸೃಷ್ಟಿಯಾಯಿತು.

Zoom to Zenith, Fall to Nadir!

ಅನ್ನುವ ಹಾಗೆ, ಜನಪ್ರಿಯತೆಯ ಉತ್ತುಂಗದಲ್ಲಿರುವಾಗಲೇ ಮೈಕೆಲ್ ಜಾಕ್ಸನ್ ವಿವಾದಗಳ ಸುಳಿಗೆ ಸಿಲುಕಿ ಕೊಳಕನೆನಿಸಿಕೊಂಡ. 1993, ಸೆಪ್ಟೆಂಬರ್ 15ರಂದು 13 ವರ್ಷದ ಬಾಲಕನೊಬ್ಬ ಜಾಕ್ಸನ್ ವಿರುದಟಛಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ಕೋರ್ಟ್ ಮೆಟ್ಟಿಲೇರಿದ. ಅದು ಜಾಕ್ಸನ್ನನ್ನು ಎಷ್ಟು ಪೇಚಿಗೀಡು ಮಾಡಿತೆಂದರೆ 22 ದಶಲಕ್ಷ ಡಾಲರ್ ಪರಿಹಾರ ಕೊಟ್ಟು ಕೋರ್ಟ್ನ ಹೊರಗೆ ವಿವಾದಕ್ಕೆ ತೆರೆ ಎಳೆಯಬೇಕಾಗಿ ಬಂತು. ಆದರೂ ವಿವಾದಗಳು ಬಿಡಲಿಲ್ಲ. ಇವತ್ತು ಜಾಕ್ಸನ್ನ ಹೆಸರೆತ್ತಿದರೆ ಬಹುಶಃ ಈಗಿನ ತಲೆಮಾರಿಗೆ ಆತನ ವಿಕೃತ ಮುಖವೇ ನೆನಪಾಗುತ್ತದೆ. 2005ರವರೆಗೂ ನಡೆದ ಕೋರ್ಟ್ ವಿಚಾರಣೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಗಳೇ ಕಣ್ಣಮುಂದೆ ಬರುತ್ತವೆ.


   ಇಂತಹ ಪರಿಸ್ಥಿತಿ ಸೃಷ್ಟಿಯಾಗಲು ಕಾರಣವಾದರೂ ಏನು? ಹಗಲು ಉಕ್ಕಿನ ಕಾರ್ಖಾನೆಯಲ್ಲಿ ದುಡಿದು ರಾತ್ರಿ ಸಂಗೀತ ನುಡಿಸುತ್ತಿದ್ದ ಜೋ ಜಾಕ್ಸನ್ ಒಬ್ಬ Failed ಆರ್ ಆಂಡ್ Rhythm and Blues) ಪರ್ಫಾರ್ಮರ್. ಎಷ್ಟೋ ಅಪ್ಪ-ಅಮ್ಮಂದಿರು ತಮ್ಮಿಂದಾಗದ್ದನ್ನು ಮಕ್ಕಳ ಮೂಲಕ ಸಾಧಿಸಲು ಹಂಬಲಿಸುತ್ತಾರೆ. ಹಾಗೆಯೇ ಜೋ ಜಾಕ್ಸನ್ ಮಕ್ಕಳ ಮೂಲಕ ತನ್ನ ಆಸೆಯನ್ನು ಈಡೇರಿಸಿಕೊಳ್ಳಬೇಕೆಂದು ಹಂಬಲಿಸತೊಡಗಿದ. ಇಂತಹ ಹಂಬಲ ಮತ್ತೆ ಹತಾಶೆಯಾಗಿ ಪರಿಣಮಿಸಿ ಕೆಲವು ಸಲ ಮಕ್ಕಳ ಜತೆ ವಿಚಿತ್ರವಾಗಿ ವರ್ತಿಸುತ್ತಿದ್ದ. ಒಮ್ಮೆ ಮೈಕೆಲ್ ಜಾಕ್ಸನ್ ತನ್ನ ಕೊಠಡಿಯಲ್ಲಿ ಮಲಗಿದ್ದಾಗ ಭೂತದ ವೇಷ ಹಾಕಿಕೊಂಡು ಕಿಟಕಿಯ ಮೂಲಕ ಆಗಮಿಸಿದ ಜೋ ಜಾಕ್ಸನ್ ಮಗನನ್ನು ಭಯ ಭೀತಗೊಳಿಸಿದ್ದ. ರಾತ್ರಿ ವೇಳೆ ಕಿಟಕಿ ಮುಚ್ಚಿ ಮಲಗಬೇಕು ಎಂಬುದನ್ನು ಮನವರಿಕೆ ಮಾಡಿ ಕೊಡುವ ಸಲುವಾಗಿ ಹಾಗೆ ಮಾಡಿದೆ ಎಂದು ಸಮಜಾಯಿಷಿ ನೀಡಿದ. ಆದರೆ ಆ ಘಟನೆ ಮೈಕೆಲ್ ಜಾಕ್ಸನ್ನನ್ನು ಎಷ್ಟು ಅಧೀರನನ್ನಾಗಿ ಮಾಡಿತು ಎಂದರೆ ಎಷ್ಟೋ ವರ್ಷಗಳವರೆಗೂ ಬೆಡ್‌ರೂಮ್‌ನಿಂದ ತನ್ನನ್ನು ಯಾರೋ ಅಪಹರಿಸುತ್ತಿರುವಂತೆ ದುಃಸ್ವಪ್ನಗಳು ಬೀಳಲಾರಂಭಿಸಿದವು. ಆತನ ಥ್ರಿಲ್ಲರ್ ಆಲ್ಬಮ್‌ನಲ್ಲಿ ಈ ಭಯದ ಛಾಯೆಗಳಿವೆ. ಅಪ್ಪನ ವಿಚಿತ್ರ ವರ್ತನೆ ಮತ್ತು ಶ್ವೇತವರ್ಣೀಯರಿಂದ ಕೂಡಿದ್ದ ತಾರತಮ್ಯಯುತ ಜಗತ್ತು ಕಪ್ಪು ವರ್ಣೀಯನಾದ ಆತನ ಮೇಲೆ ಕೆಟ್ಟ ಪರಿಣಾಮ ಬೀರಿದವು. ಅದಕ್ಕಾಗಿಯೇ ಪ್ಲಾಸ್ಟಿಕ್ ಸರ್ಜರಿ ಮೂಲಕ ತನ್ನ ತೊಗಲಿನ ಬಣ್ಣವನ್ನೇ ಬದಲಾಯಿಸಿಕೊಳ್ಳಲು ಹೊರಟ!


I Said If

You’re Thinkin’ Of

Being My Brother

It Don’t Matter If You’re

Black Or White

ಅಥವಾ

Beat me, hate me

You can never break me

Will me, thrill me

You can never kill me

Jew me, sue me

Everybody do me

Kick me, kick me

Don’t you black or white me

All I wanna say is that

They don’t really care about us


ಈ ಗೀತೆಗಳಲ್ಲಿ ಆತನ ನೋವು, ಹತಾಶೆಯನ್ನು ಕಾಣಬಹುದು. ಇವತ್ತು ಕಾಣುವ ಇಂಟರ್ನೆಟ್, ಸೆಲ್‌‌ಫೋ‌ನ್, ಐ ಪಾಡ್‌ಗಳಿಲ್ಲದ ಕಾಲದಲ್ಲೇ ಅವನ ಹಾಡುಗಳು ಮಾಡಿದ ದಾಖಲೆಯನ್ನು ಇಂದಿಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ ಎಂದರೆ ಮೈಕೆಲ್ ಜಾಕ್ಸನ್‌ನ ಹಾಡುಗಳ ಜನಪ್ರಿಯತೆ ಹೇಗಿದ್ದಿರಬಹುದು ಊಹಿಸಿಕೊಳ್ಳಿ. ದುರದೃಷ್ಟವೆಂದರೆ ಜನಪ್ರಿಯತೆ ಹೆಚ್ಚಾದಂತೆ ಆತನ ಹುಚ್ಚುತನಗಳೂ ಹೆಚ್ಚಾದವು. 1988ರಲ್ಲಿ ಬೃಹತ್ ತೋಟವನ್ನು ಖರೀದಿ ಮಾಡಿ, ‘ನೆವರ್ ಲ್ಯಾಂಡ್’ ಹೆಸರು ಕೊಟ್ಟ. ಸ್ನೇಹಿತರು, ಕುಟುಂಬದಿಂದ ದೂರವಾದ. ಅಂತಹ ಏಕಾಂತ ಆತನಿಗೇ ಮುಳುವಾಯಿತು. ನಾಳೆ ಎಂಬುದೇ ಇಲ್ಲವೇನೋ ಎಂಬಂತೆ ಹಣ ವ್ಯಯ ಮಾಡತೊಡಗಿದ. ‘ನೆವರ್ ಲ್ಯಾಂಡ್’ನೊಳಕ್ಕೆ ಪ್ರಾಣಿಗಳು ಹಾಗೂ ಮಕ್ಕಳಿಗಷ್ಟೇ ಪ್ರವೇಶ ನೀಡಿ “False Reality’ ಯಲ್ಲಿ ಬದುಕ ತೊಡಗಿದ ಆತ, ವಿವಾದಗಳನ್ನೂ ಮೈಮೇಲೆಳೆದುಕೊಂಡ. 1993ರಲ್ಲಿ ಮೊಟ್ಟಮೊದಲ ಬಾರಿಗೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದರೂ 2003ರಲ್ಲಿ ಮತ್ತೆ ಭುಗಿಲೆದ್ದ ಇದೇ ಆರೋಪವಂತೂ ಆತನ ಭವಿಷ್ಯವನ್ನು ಶಾಶ್ವತವಾಗಿ ಹಾಳುಗೆಡಹುವ ಅಪಾಯ ತಂದೊಡ್ಡಿತು. ಆತನ ಮೇಲೆ 50 ವಿಧದ ಆರೋಪಗಳು ಕೋರ್ಟ್‌ನಲ್ಲಿ ಪಟ್ಟಿಯಾದವು. ದೀರ್ಘ ಕಾಲದವರೆಗೂ ನಡೆದ ನ್ಯಾಯಾಂಗ ವಿಚಾರಣೆಯಿಂದಾಗಿ ಜಾಕ್ಸನ್ ತತ್ತರಿಸಿ ಹೋದ. ಆತ ಎಷ್ಟು ಕುಂದಿಹೋದನೆಂದರೆ ಕೂಲಂಕಷ ವಿಚಾರಣೆಯ ನಂತರ ಕೋರ್ಟ್ ಆತನನ್ನು ದೋಷ ಮುಕ್ತನೆಂದು ಘೋಷಿಸಿದಾಗ ನಿಟ್ಟುಸಿರು ಬಿಡುವ ತಾಕತ್ತೂ ಆತನಲ್ಲಿರಲಿಲ್ಲ, ಮುಖ ನಿರ್ಭಾವುಕವಾಗಿತ್ತು. ಎಂದೆಂದೂ ಚೇತರಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದ.


ಇಂದು ಮೈಕೆಲ್ ಜಾಕ್ಸನ್ ಎಂದರೆ ಒಬ್ಬ ಹುಚ್ಚ ಅಂತ ಅನ್ನಿಸಬಹುದು. ಆದರೆ ಅವನ ಹುಚ್ಚುತನದ ಹಿಂದೆ ಕರಾಳ ಬಾಲ್ಯದ ಕರಿಛಾಯೆ ಇದೆ. ಕರಿಯರ ಆರ್ತನಾದವಿದೆ.

We are the world, we are the children

We are the ones who make a brighter day

So lets start giving

Theres a choice we’re making

We’re saving our own lives

its true we’ll make a better day

Just you and me

ಅಥವಾ

Heal The World

Make It A Better Place

For You And For Me

And The Entire Human Race

There Are People Dying

If You Care Enough

For The Living

Make A Better Place

For You And For Me


ಇಂತಹ ಹಾಡುಗಳನ್ನು ಕೇಳಿ, ಅವನ ಮನದಾಳದ ತುಡಿತ ಅರ್ಥವಾಗುತ್ತದೆ. ನಿಮ್ಮ ಕಣ್ಣುಗಳೂ ತುಂಬಿಕೊಳ್ಳುತ್ತವೆ. ಇವತ್ತು ದುಡಿದಿದ್ದೆಲ್ಲವನ್ನೂ ಕೊಡಲು ಮುಂದಾದ ಉದ್ಯಮಿ ವಾರೆನ್ ಬಫೆಟ್ ಅವರನ್ನು ಮಹಾದಾನಿ ಎಂದು ಜಗತ್ತು ಹಾಡಿ ಹೊಗಳುತ್ತಿದೆ. ಮೈಕೆಲ್ ಜಾಕ್ಸನ್ 1980ರ ದಶಕದಲ್ಲಿ ದಾನ, ಸಹಾಯ ಮಾಡುವುದಕ್ಕಾಗಿಯೇ “We are the world’, “Heal The World’, “Man In The Mirror’ ಹಾಡುಗಳನ್ನು ಬರೆದು, ಲಯೋನೆಲ್ ರಿಚಿ, ಕೆನ್ನಿ ರೋಜರ್ಸ್ , ಡಯಾನಾ ರೋಸ್, ಬ್ರೂಸ್ ಸ್ಟ್ರಿಂಗ್ಸ್ಟೀನ್, ಬಾಬ್ ಡೈಲಾನ್ ಅವರಂತಹ ಖ್ಯಾತನಾಮ ಕಲಾವಿದರನ್ನು ಕರೆಸಿ ತನ್ನ ಜತೆ ಹಾಡಿಸಿದ. “USA for Africa’ ಸಂಗೀತ ಕಾರ್ಯಕ್ರಮ, ” Heal the World Foundation’ ಸ್ಥಾಪನೆ ಮೊದಲಾದುವುಗಳ ಮೂಲಕ 300 ದಶಲಕ್ಷ ಡಾಲರ್‌ಗೂ ಅಧಿಕ ಹಣ ಸಂಗ್ರಹಣೆ ಮಾಡಿಕೊಟ್ಟ. ಎಚ್ ಐವಿ/ಏಯ್ಡ್ಸ್ ಪೀಡಿತರನ್ನು ಗೌರವದಿಂದ ಕಾಣಬೇಕು ಎಂದು ಜಗತ್ತಿಗೆ ಜೋರಾಗಿ ಕಿವಿಮಾತು ಹೇಳಿದವನೇ ಅವನು. ಅದರಲ್ಲೂ ರೆಯಾನ್ ವೈಟ್ ಎಂಬ 19 ವರ್ಷದ ಯುವಕ 1991ರಲ್ಲಿ ಏಯ್ಡ್ಸ್‌ಗೆ  ಬಲಿಯಾದಾಗ ಜಾಕ್ಸನ್ ಎಷ್ಟು ನೊಂದು ಕೊಂಡನೆಂದರೆ, ಚಿಕಿತ್ಸೆಯ ಸಂಶೋಧನೆಗಾಗಿ ಹೋದಲೆಲ್ಲ ಹಣಸಂಗ್ರಣೆ ಮಾಡಿದ. ಹಣಸಂಗ್ರಹಣೆಗಾಗಿಯೇ ಸಂಗೀತ ಕಾರ್ಯಕ್ರಮಗಳನ್ನು ನಡೆಸಲಾರಂಭಿಸಿದ. ನೆಲ್ಸನ್ ಮಂಡೇಲಾ ಮಕ್ಕಳ ನಿಧಿ, ರೆಡ್‌ಕ್ರಾಸ್, ಯುನೆಸ್ಕೋ ರಾಯಭಾರಿಯಾಗಿ ಕೆಲಸ ಮಾಡಿದ. ಇಷ್ಟೆಲ್ಲಾ ಪ್ರೀತಿ, ಅನುಕಂಪವನ್ನು ಹೊಂದಿದ್ದ ಆತ ವೈಯಕ್ತಿಕ ಜೀವನದಲ್ಲಿ ಮಾದಕವಸ್ತುಗಳಿಗೆ ದಾಸನಾಗಿ ಜೀವನವನ್ನೇ ಹಾಳುಮಾಡಿಕೊಂಡ. ನಮ್ಮ ಹೃದಯದ ಬಡಿತ ಹೆಚ್ಚಿಸುತ್ತಿದ್ದ ಆತನ ಕಾಲುಗಳೇ ಸೋತು ಹೋದವು. ಆತನ ಕೊಳಕುತನವನ್ನು ಟೀಕಿಸಲು ಖಂಡಿತ ಬೇಕಾದಷ್ಟು ಕಾರಣಗಳು ಸಿಗುತ್ತವೆ. ಆದರೆ ನೀವೊಬ್ಬ ಮೈಕೆಲ್ ಜಾಕ್ಸನ್ ಅಭಿಮಾನಿಯಾಗಿದ್ದರೆ ಆತನನ್ನು ಶಪಿಸಲು ಮನಸ್ಸು ಮಾತ್ರ ಒಪ್ಪುವುದಿಲ್ಲ. ಅವನು ಏರಿದ ಎತ್ತರವನ್ನು, ಗಳಿಸಿದ ಖ್ಯಾತಿ, ಕೀರ್ತಿಯನ್ನು, ಪ್ರೇಕ್ಷಕರಿಗೆ ನೀಡಿದ ಉದ್ವೇಗ, ಆನಂದವನ್ನು ನೀಡಲು Lesser Mortals ಗಳಿಂದ ಸಾಧ್ಯವಿಲ್ಲ. ಇದೊಂದೇ ಕಾರಣಕ್ಕಾಗಿ ಆತ ನಮ್ಮ ಹೃದಯಕ್ಕೆ ಹತ್ತಿರವಾಗುತ್ತಾನೆ. 1991ರಲ್ಲಿ ಆತನ ‘ಬ್ಲ್ಯಾಕ್ ಆರ್ ವೈಟ್’ ಆಲ್ಬಮ್ ಬಿಡುಗಡೆಯಾದಾಗ ಅಮೆರಿಕ, ಆಸ್ಟ್ರೇಲಿಯಾ, ಬೆಲ್ಜಿಯಂ, ಕ್ಯೂಬಾ, ಡೆನ್ಮಾರ್ಕ್, ಫಿನ್ಲ್ಯಾಂಡ್, ಫ್ರಾನ್ಸ್, ಇಸ್ರೇಲ್, ಇಟಲಿ, ಮೆಕ್ಸಿಕೋ, ನ್ಯೂಜಿಲ್ಯಾಂಡ್, ನಾರ್ವೆ, ಸ್ಪೇನ್, ಸ್ವೀಡನ್, ಜಿಂಬಾಬ್ವೆ ಹಾಗೂ ಬ್ರಿಟನ್ ಇಷ್ಟು ದೇಶಗಳಲ್ಲಿ ನಂಬರ್-1 ಸ್ಥಾನದಲ್ಲಿತ್ತು ಎಂದರೆ ನಂಬುತ್ತೀರಾ?


    ಇಂತಹ ವ್ಯಕ್ತಿ, ಜನರ ಎದೆಬಡಿತ ಹೆಚ್ಚಿಸಲು ಮತ್ತೊಂದು ವಿಶ್ವಪರ್ಯಟನೆಗೆ 2009ರಲ್ಲಿ ಸಿದ್ಧವಾಗಿದ್ದ ಸಂದರ್ಭದಲ್ಲೇ ಏಕಾಏಕಿ ಆತನ ಎದೆಬಡಿತವೇ ನಿಂತುಹೋಗಿ ನಮ್ಮನ್ನಗಲಿದ. ಆ ಘಟನೆ ನಡೆದು, ಮೈಕೆಲ್ ಜಾಕ್ಸನ್ ನಮ್ಮನ್ನಗಲಿ ಇಂದಿಗೆ 7 ವರ್ಷಗಳಾದವು. 1969ರಲ್ಲಿ ಸಂಗೀತ ಪ್ರಪಂಚಕ್ಕೆ ಕಾಲಿಟ್ಟಾಗ ಆತ ಹಾಡಿದ ಮೊದಲ ಗೀತೆ- I want you back .ಹಾಗಂತ ನಾವು ಹೇಳಿದರೂ ಆತ ವಾಪಸ್ ಬರುವುದಿಲ್ಲ. ಕನಿಷ್ಠ ನೆನಪನ್ನಾದರೂ ಮಾಡಿಕೊಳ್ಳೋಣವೆನಿಸಿತು.


  mj

 •  0 comments  •  flag
Share on Twitter
Published on June 25, 2016 03:10

June 24, 2016

June 22, 2016

June 18, 2016

‘ನಿನ್ನಂಥ ಅಪ್ಪ ಇಲ್ಲ ‘ ಅಂತ ಮಗನೇಕೆ ಹೇಳಲ್ಲ?!

‘ನಿನ್ನಂಥ ಅಪ್ಪ ಇಲ್ಲ ‘   ಅಂತ ಮಗನೇಕೆ ಹೇಳಲ್ಲ?!


ಆ ?  ಮಗ, ಈ? ಮಗ, ಹ? ಮಗ, ರ?ಮಗ?  ಯಾವುದೇ ಬೈಗುಳಗಳನ್ನು ಬೇಕಾದರೂ ತೆಗೆದುಕೊಳ್ಳಿ. ಬಹುತೇಕ ಎಲ್ಲ ಬೈಗುಳಗಳೂ ಅಮ್ಮನನ್ನೇ ಗುರಿಯಾಗಿಸಿಕೊಂಡಿರುತ್ತವೆ. ಅಪ್ಪನ ವಿರುದ್ಧದ ಅವಾಚ್ಯ ಪದಗಳನ್ನು ಹುಡುಕಿದರೂ, ತಲೆಕೆರೆದುಕೊಂಡು ಯೋಚಿಸಿದರೂ ತಟ್ಟನೆ ಯಾವುದೇ ಹೊಲಸು ಬೈಗುಳಗಳು ನೆನಪಾಗುವುದಿಲ್ಲ. ಅತ್ಯಂತ ಹೀನಾತಿ ಹೀನ ಬೈಗುಳಗಳಿರುವುದೇ ಅಮ್ಮನ ವಿರುದ್ಧ. ಬಹುಶಃ ಉದ್ದೇಶಪೂರ್ವಕವಾಗಿಯೇ ಇಂತಹ ಬೈಗುಳಗಳನ್ನು ಸೃಷ್ಟಿ ಮಾಡಿದ್ದಾರೇನೋ! ಅಷ್ಟಕ್ಕೂ ಒಬ್ಬ ಹುಡುಗನಿರಬಹುದು, ಗಂಡಸಾಗಿರಬಹುದು. ಆತನಿಗೆ ಹೆಚ್ಚಾಗಿ ಸಿಟ್ಟು ಬರುವುದು ಅಮ್ಮನಿಗೆ ಬೈದಾಗಲೇ.

ಈ ಅಮ್ಮ-ಮಗನ ಸಂಬಂಧವೇ ಅಂಥದ್ದು.


ಅದಕ್ಕೇ ‘Mama’s Boy’ ಎಂಬ ಮಾತಿದೆಯೇ ಹೊರತು, ಯಾರೂ ‘Papa’s son’ ಅಂತ ಯಾರನ್ನೂ ಕರೆಯುವುದಿಲ್ಲ. ಸಾಮಾನ್ಯವಾಗಿ ಪ್ರತಿಯೊಬ್ಬ ಅಪ್ಪನೂ, ಸಂತಾನ ಮುಂದುವರಿಸಿದುಕೊಂಡು ಹೋಗಲು ಗಂಡು ಮಗುವೇ ಬೇಕೆಂದು ಯೋಚಿಸಿದರೂ, ದೇವರಲ್ಲಿ ಮೊರೆಯಿಟ್ಟು, ಹರಕೆ ಹೊತ್ತು ಗಂಡು ಮಗುವನ್ನು ಪಡೆದುಕೊಂಡರೂ ಮಗ ಯಾವತ್ತೂ ಅಮ್ಮನ ಸ್ವತ್ತೇ. “ಮುತ್ತು ಕೊಡುವವಳು ಬಂದಾಗ ತುತ್ತು ಕೊಟ್ಟವಳನ್ನು ಮರೆಯದಿರು” ಎನ್ನುತ್ತಾರೆಯೇ ಹೊರತು, “ತುತ್ತು ಕೊಟ್ಟವನನ್ನು” ಎನ್ನುವುದಿಲ್ಲ! ಅಮ್ಮನನ್ನೇ ಕೀಳಾಗಿ ಕಾಣುವವರು ಖಂಡಿತ ಇದ್ದಾರೆ. ಸಾಮಾನ್ಯವಾಗಿ ಅಮ್ಮನ ವಿಷಯದಲ್ಲಿ ಗಂಡು ಮಕ್ಕಳ ಮನದಲ್ಲಿ ಯಾವತ್ತೂ ಮೃದು ಧೋರಣೆ ಇರುತ್ತದೆ. ತನ್ನ ಪತ್ನಿಗೇ ಕಿರುಕುಳ ಕೊಟ್ಟರೂ ಗಂಡು ಮಕ್ಕಳು ಅಮ್ಮನನ್ನು ಬಿಟ್ಟುಕೊಡುವುದಿಲ್ಲ. ಅಮ್ಮನದ್ದೇ ತಪ್ಪಿದ್ದರೂ ಹೆಂಡತಿಯನ್ನು ಬೆದರಿಸುವುದು, ಸಹಿಸಿಕೊಂಡು ಹೋಗು ಎಂದು ಬುದ್ಧಿವಾದ ಹೇಳುವುದನ್ನು ಕಾಣಬಹುದು. ‘ಮಾವ ಪರ್ವಾಗಿಲ್ಲ, ಅತ್ತೆಯದ್ದೇ ಕಿರಿಕ್ಕು’ ಎನ್ನುವವರನ್ನೇ ನೀವು ಬಹುವಾಗಿ ನೋಡಿರುತ್ತೀರಿ. ಆದರೂ ಮಗನ ಪಾಲಿಗೆ ಅಮ್ಮ ಯಾವತ್ತೂ ಕೆಟ್ಟವಳಂತೆ ಕಾಣುವುದಿಲ್ಲ. ‘ಮುಂಗಾರು ಮಳೆ’ ಚಿತ್ರದ ನವಿರಾದ ಪ್ರೇಮಗೀತೆಗಳು ನಮಗೆಷ್ಟೇ ಖುಷಿಕೊಟ್ಟರೂ, ಕೈಕೊಟ್ಟ ಹುಡುಗಿಯನ್ನು ನೆನಪಿಸಿಕೊಂಡು ಆ ನೋವು ಕೊಡುವ ಆಹ್ಲಾದವನ್ನು ನಾವೆಷ್ಟೇ ಸವಿದರೂ ಅವು ‘ಜೋಗಿ’ ಚಿತ್ರದ ‘ಬೇಡುವೆನು ವರವನ್ನು, ಕೊಡೆ ತಾಯೆ ಜನುಮವನು’ ಗೀತೆಯಂತೆ ಮನಕಲಕುವುದಿಲ್ಲ. ಮುಂದೊಂದು ದಿನ ನಾವೆಷ್ಟೇ ದೊಡ್ಡ ವ್ಯಕ್ತಿಗಳಾದರೂ ಅಮ್ಮನ ಜತೆಗಿನ ಸಂಬಂಧ ಬದಲಾಗುವುದಿಲ್ಲ. ಹುಟ್ಟಿನ ಜತೆ ಬರುವ ಹೊಕ್ಕಳ ಬಳ್ಳಿಯನ್ನು ಕಡಿದುಕೊಂಡು ಪ್ರತ್ಯೇಕಗೊಂಡರೂ ಅಮ್ಮನಿಂದ ಭಾವನಾತ್ಮಕವಾಗಿ ಬೇರ್ಪಡುವುದಿಲ್ಲ. ಅಂತಹ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಅಮ್ಮನನ್ನು ನೆನಪಿಸಿಕೊಳ್ಳುತ್ತಾರೆಯೇ ಹೊರತು, ಅಮ್ಮ ಅಮ್ಮ ಎಂದು ಈಗಲೂ ಕನವರಿಸುತ್ತಾರೆಯೇ ವಿನಾಃ ಅಪ್ಪಿ-ತಪ್ಪಿಯೂ ಅಪ್ಪನ ಬಗ್ಗೆ ಮಾತನಾಡುವುದಿಲ್ಲ. ಒಬಾಮ ಅಧ್ಯಕ್ಷರಾಗಿ ಆಯ್ಕೆಯಾದಾಗ ಅವರ ತಂದೆ ಕೀನ್ಯಾದವರೆಂಬ ಕಾರಣಕ್ಕೆ ಆ ದೇಶದವರು ಸಂಭ್ರಮಪಟ್ಟರು. ಆದರೆ ಒಬಾಮ ಯಾವತ್ತೂ ಅಪ್ಪನ ಬಗ್ಗೆ ಮಾತನಾಡಲಿಲ್ಲ. ‘ಊರಿಗೆ ಒಡೆಯನಾದರೂ ತಾಯಿಗೆ ಮಗ’ ಎಂಬ ಮಾತೇ ಇದೆಯಲ್ಲವೆ?!


ನಾವು ಚಿಕ್ಕವರಿದ್ದಾಗ ಇರಬಹುದು, ಅಪ್ಪನ ಎದೆಯೆತ್ತರಕ್ಕೆ ಬೆಳೆದ ನಂತರವಾಗಿರಬಹುದು, ಏನಾದರೂ ಕೆಲಸವಾಗಬೇಕು, Favour ಬೇಕೆಂದಾದರೂ ಅಪ್ಪನಿಗೆ ಸಂದೇಶ ತಲುಪುವುದು ಮಾತ್ರ ಅಮ್ಮನ ಮೂಲಕವೇ. ಮಗಳು ಪಾಕೆಟ್ ಮನಿ ಬೇಕೆಂದಾದರೆ ನೇರವಾಗಿ ಅಪ್ಪನ ಕಿಸೆಗೇ ಕೈಹಾಕುವ ಧೈರ್ಯತೋರಿಸಿಬಿಡುತ್ತಾಳಾದರೂ ನಾವು ಮಾತ್ರ ಶಾಲೆ, ಕಾಲೇಜಿಗೆ ಫೀ ಕಟ್ಟುವಾಗಲೂ ಅಮ್ಮನ ಮೂಲಕವೇ ಕೇಳುತ್ತೇವೆ. ಅಪ್ಪನ ಬಗ್ಗೆ ಯೋಚನೆ ಮಾಡಿದಾಗಲೆಲ್ಲ ಪೆಟ್ಟು, ಲಾತಾ, ಗದರಿಕೆ, ಸಿಡುಕು, ಕೆಂಗಣ್ಣುಗಳೇ ನೆನಪಾಗಿ ಬಿಡುತ್ತವೆ. ಹಾಗಂತ ಅಮ್ಮ ಪೆಟ್ಟು ಕೊಟ್ಟೇ ಇರುವುದಿಲ್ಲ ಎಂದಲ್ಲ. ಮೊದಲು ಕೊಟ್ಟ ಪೆಟ್ಟಿಗಿಂತ, ನಂತರ ಕೊಟ್ಟ ಅಕ್ಕರೆಯ ಮುತ್ತು, ಮುದ್ದು, ಚಾಕಲೇಟು ತಿನ್ನಲು ಕೊಟ್ಟ ನಾಲ್ಕಾಣೆಗಳೇ ನೆನಪಿನಲ್ಲಿ ಉಳಿದು ಬಿಡುತ್ತದೆ. ಅಪ್ಪ ಅನ್ನುವವನು ಒಂಥರಾ ಮನೆಯೊಳಗಿನ ‘ಪಿಟಿ’ ಮೇಷ್ಟ್ರು. ಪೆಟ್ಟಿನ ರುಚಿ ತೋರಿಸುವವನು, ದಂಡಿಸುವವನು ಅವನು. ಅಮ್ಮ ಮಾತ್ರ ನಾವು ತಪ್ಪು ಮಾಡಿದಾಗಲೂ ಸಮರ್ಥಿಸಿಕೊಳ್ಳುತ್ತಾಳೆ. ಹಾಗಾಗಿಯೇ ಅಮ್ಮನ ಜತೆ ಅಪ್ಪ ನಡೆದುಕೊಳ್ಳುವ ರೀತಿ ಕೂಡ ಮುಂದೆ ಆತನ ಬಗ್ಗೆ ನಾವು ರೂಢಿಸಿಕೊಳ್ಳುವ ಅಭಿಪ್ರಾಯವನ್ನು ನಿರ್ಧರಿಸಿ ಬಿಡುತ್ತದೆ. ಬಹಳಷ್ಟು ಬಾರಿ ನಾವು ಅಪ್ಪನನ್ನು ದ್ವೇಷಿಸಲು ಆತ ಅಮ್ಮನ ಜತೆ ಕೆಟ್ಟದಾಗಿ ನಡೆದುಕೊಳ್ಳುವುದೇ ಮುಖ್ಯ ಕಾರಣ. ಅದಕ್ಕೆ “The most important thing that a father can do for his children is to love their mother” ಎಂದು ಥಿಯೋಡರ್ ಎಂ. ಹೆಸ್ಬರ್ಗ್ ಹೇಳಿರುವುದು.


ಅಪ್ಪ ಯಾವತ್ತೂ ನಮ್ಮ “Emotional Frame” ನೊಳಗೆ ಬರುವುದೇ ಇಲ್ಲ. ಬಂದರೂ ತೀರಾ ವಿರಳ ಹಾಗೂ ಸೀಮಿತವಾಗಿ. ತುಂಬಾ Irony ಎಂದರೆ ಮುಂದೊಂದು ದಿನ ನಾವೂ ಅಪ್ಪ ಆಗುತ್ತೇವೆ, ಬೈಯಿಸಿಕೊಳುವ ಸರದಿ ನಮ್ಮದಾಗುತ್ತದೆ ಎಂದು ಗೊತ್ತಿದ್ದರೂ ಅಪ್ಪನನ್ನು ಬೈದುಕೊಳ್ಳುತ್ತೇವೆ, ಆತನ ಬಗ್ಗೆ ಇರುಸು-ಮುರುಸುಗೊಳ್ಳು ವುದನ್ನು ನಿಲ್ಲಿಸುವುದಿಲ್ಲ. ಅಮ್ಮನನ್ನು ಬಹುವಾಗಿ ಪ್ರೀತಿಸುವ ನಾವೇ ಅವಳ ಬದುಕಿನಲ್ಲಿ ಅಷ್ಟು ವರ್ಷಗಳಿಂದ ಸಾಗಿ ಬಂದ ಅಪ್ಪನ ಬಗ್ಗೆ ಹಗುರವಾಗಿ, ಉಡಾಫೆಯಿಂದ ಕೂಡಿದ ಮಾತುಗಳನ್ನಾಡಿ ಬಿಡುತ್ತೇವೆ. ದುಡ್ಡು ಕೊಡುವುದಕ್ಕೆ, ಬಟ್ಟೆ ಕೊಡಿಸುವುದಕ್ಕೆ, ಫೀ ಕಟ್ಟುವುದಕ್ಕೆ ಆತ ಸೀಮಿತವಾಗಿ ಬಿಡುತ್ತಾನೆ. ನಮ್ಮ ಬೈಗುಳಕ್ಕೂ ಭಾಜನನಾಗಬೇಕಾಗುತ್ತದೆ. ನಮ್ಮೆಲ್ಲ ಕುಂದು-ಕೊರತೆಗಳಿಗೆ ಅವನ ಮೇಲೆಯೇ ಗೂಬೆ ಕೂರಿಸುತ್ತೇವೆ. ಬಾಲ್ಯದಲ್ಲಾಗಲಿ, ಕಾಲೇಜಿಗೆ ಕಾಲಿಟ್ಟ ಸಂದರ್ಭದಲ್ಲಾಗಲಿ ಕೇಳಿದ್ದನ್ನು ಕೊಡಿಸಲಿಲ್ಲ ಅಂದರೂ ಅವನನ್ನೇ ದೂರುತ್ತೇವೆ, ಹೆಂಡತಿ ಬಂದ ನಂತರ ಜೀವನ ಸಾಗಿಸುವುದು ಕಷ್ಟವಾದಾಗಲೂ “ನಮ್ಮಪ್ಪ ಸರಿಯಾಗಿ ಮಾಡಿಟ್ಟಿದ್ದರೆ ನಮಗೇಕೆ ಇಂತಹ ಗತಿ ಬರುತ್ತಿತ್ತು” ಎಂದು ಆಗಲೂ ಅಪ್ಪನನ್ನು ಶಪಿಸುವುದನ್ನು ಬಿಡುವುದಿಲ್ಲ!!


ನಿಜಕ್ಕೂ ಅಪ್ಪ ಎಂಬ ಸ್ಥಾನವೇ ಒಂದು Thankless position. ಮಗನ ವಿಷಯದಲ್ಲಿ ಮಾತ್ರವಲ್ಲ, ಕುಂಟುಂಬಕ್ಕೇ ಕೂಳು ಕೊಟ್ಟರೂ ಕುಟುಂಬದ ನಂಬರ್-1 ಶತ್ರು ಅವನೇ ಆಗಿರುತ್ತಾನೆ. ಆತ ಎಲ್ಲರ common enemy!


ಗಂಡು ಮಕ್ಕಳಾದ ನಾವು ಅಪ್ಪನನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ, ಅಪಾರ್ಥ ಮಾಡಿಕೊಳ್ಳುವುದೇ ಹೆಚ್ಚು. ಮಗನ ಎದುರೇ ಪೆಗ್ ಹಾಕುವ, ಬೀಡಿ-ಸಿಗರೇಟು ಸೇದುವ ಅಪ್ಪ, ಮಗ ಕದ್ದುಮುಚ್ಚಿ ಅದೇ ಕೆಲಸ ಮಾಡಿ ಸಿಕ್ಕಿಹಾಕಿಕೊಂಡರೆ ಪೆಟ್ಟು ಕೊಡದೇ ಬಿಡುವುದಿಲ್ಲ! ಹೀಗೆ ಜೈಲಿನ ಮೇಲ್ವಿಚಾರಕನಂತೆ ವರ್ತಿಸುವ ಆತನನ್ನು ಅರ್ಥಮಾಡಿಕೊಳ್ಳುವ ಹೊತ್ತಿಗೆ ನಾವೇ ಅಪ್ಪನಾಗಿ ಬಿಟ್ಟಿರುತ್ತೇವೆ. “By the time a man realizes that maybe his father was right, he usually has a son who thinks he’s wrong” ಎಂಬ ಚಾರ್ಲ್ಸ್ ವ್ಯಾಡ್ಸ್‌ವರ್ತ್ ಮಾತಿನಲ್ಲಿ ಅದೆಷ್ಟು ಸತ್ಯ ಅಡಗಿದೆಯಲ್ಲವೆ?! ಅಪ್ಪನಾದವನು ನಮ್ಮ ಜತೆ ಕಟುವಾಗಿಯೇ ನಡೆದುಕೊಳ್ಳಬಹುದು, ನಮ್ಮ ಇತಿ-ಮಿತಿ, ಚಟಗಳನ್ನೂ ಅವನೇ ನಿರ್ಧರಿಸಬಹುದು, ಅಪ್ಪ ಎಂದ ಕೂಡಲೇ ನಮಗೆ ಕೆಂಗಣ್ಣು, ಗದರಿಕೆ, ಲಾತಾಗಳೇ ನೆನಪಾಗಬಹುದು, ಆದರೂ ಅವನದ್ದು ಗುರುತರ ಸ್ಥಾನ. ಅಮ್ಮನ ಜತೆ ನಮಗೆ  ಭಾವನಾತ್ಮಕ ಕೊಂಡಿ ಇರುತ್ತದಷ್ಟೆ. ಅಪ್ಪ ನಮ್ಮ ಭವಿಷ್ಯ, ಬದುಕು, ಕೆರಿಯರ್ ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾನೆ. ಮಗಳು ಬೆಳೆದು ಮದುವೆಗೆ ಸಿದ್ಧಳಾಗಿ ನಿಂತಾಗ ಭಾವಿ ಪತಿಯಲ್ಲಿ ಅಪ್ಪನ ಗುಣಗಳನ್ನು ಹುಡುಕುತ್ತಾಳೆ. ಅಪ್ಪನಾದವನು ಯಾವತ್ತೂ ಮಗನಿಗೆ ‘ತನ್ನಂತಾಗು’ ಎಂದು ಹೇಳಿಕೊಡುವುದಿಲ್ಲ. ಮಗಳ ವಿಷಯದಲ್ಲಿ ಬಹಳ protective ಆಗಿ ನಡೆದುಕೊಂಡರೂ, ಅವಳಿಗೆ ಮಾತ್ರ ಭವಿಷ್ಯದ ಬಗ್ಗೆ assurance ಕೊಡುತ್ತಾನಾದರೂ, ಅದೇ ನಮಗೆ ಕಿರಿಕಿರಿಯನ್ನುಂಟು ಮಾಡಿದರೂ, ತಾರತಮ್ಯದ ವಾಸನೆ ನಮ್ಮ ಮೂಗಿಗೆ ಬಡಿದರೂ ಅಪ್ಪನ ಉದ್ದೇಶ ಮಾತ್ರ ಬೇರೆಯೇ ಆಗಿರುತ್ತದೆ. ನೀನು ಓದಿ, ಕೆಲಸಕ್ಕೆ ಸೇರಿ ನಿನ್ನ ಕಾಲ ಮೇಲೆ ನಿಂತುಕೋ ಎನ್ನುವ ಆತನ ಮಾತಿನ ಹಿಂದೆ ಸ್ವಾವಲಂಬನೆಯ ಪಾಠವೇ ಇರುತ್ತದೆ. ಆತ ದುಡಿದದ್ದೆಲ್ಲಾ ಗಂಡು ಮಕ್ಕಳಿಗೇ ಎಂದಾಗಿದ್ದರೂ ಅದನ್ನೆಂದೂ ಆತ ಬಾಯಿ ಬಿಟ್ಟು ಹೇಳುವುದಿಲ್ಲ. ಹಾಗಾಗಿ ಆತನ ಬಗ್ಗೆ ನಮ್ಮಲ್ಲಿ ಸದಭಿಪ್ರಾಯ ಮೂಡುವುದು ಕಡಿಮೆ. ನಮ್ಮ ಬೇಕು-ಬೇಡಗಳನ್ನು ಅವನೇ ನಿರ್ಧರಿಸುತ್ತಾನೆ ಎಂದು ಸಿಟ್ಟಿಗೇಳುತ್ತೇವೆ. ನಮ್ಮ ಅನುಭವಕ್ಕೆ ಬರುವುದು ಅವನ ಗದರಿಕೆ, ಗೂಸಾಗಳೇ ಹೊರತು, ಅವುಗಳ ಹಿಂದಿರುವ ಪ್ರೀತಿಯಲ್ಲ.


ಅಮ್ಮ ಯಾವತ್ತೂ ತನ್ನ ಪ್ರೀತಿಯನ್ನು ಅಭಿವ್ಯಕ್ತಿಗೊಳಿಸು ತ್ತಾಳೆ. ಹಾಗಾಗಿ ಅವಳು ನಮಗೆ ಪ್ರಿಯವಾಗಿ ಬಿಡುತ್ತಾಳೆ. ಅಪ್ಪನ ಪ್ರೀತಿ ಕಟ್ಟು-ಪಾಡುಗಳಲ್ಲೇ ವ್ಯಕ್ತವಾಗುವುದರಿಂದ ಅದು ನಮಗೆ ಅರ್ಥವಾಗುವುದಿಲ್ಲ. ನಾವು ತಪ್ಪು ಮಾಡಬಾರದು, ಎಡವಿ ಬೀಳಬಾರದು ಎಂದು ಆತ ತೆಗೆದುಕೊಳ್ಳುವ ಮುಂಜಾಗ್ರತೆ, ಕೊಡುವ ಪೆಟ್ಟು, ಎಚ್ಚರಿಕೆಗಳು ನಮಗೆ ಕಾನೂನು, ಕಟ್ಟಳೆಗಳಂತೆ ಕಂಡುಬಿಡುತ್ತವೆ, ಆತ ದಂಡಾಧಿಕಾರಿಯಂತೆ ಗೋಚರಿಸ ಲಾರಂಭಿಸುತ್ತಾನೆ. ಅಮ್ಮ ಕ್ಯಾರಿಯರ್ ತುಂಬ ಬಿಸಿ ಬಿಸಿ ಊಟ ತುಂಬಿ ಕೊಡಬಹುದು, ಯಾವ ಕೋರ್ಸಿಗೆ, ಯಾವ ಕಾಲೇಜಿಗೆ ಸೇರಬೇಕು ಎಂಬ ಮಹತ್ವದ ನಿರ್ಧಾರ ಕೈಗೊಳ್ಳುವುದು ಅಪ್ಪನೇ ಆಗಿರುತ್ತಾನೆ. ನಿಜ ಹೇಳಬೇಕೆಂದರೆ, ವಿಶ್ವೇಶ್ವರಯ್ಯನವರಂತಹ   ವಿಜನರಿಯೋ, ಎಂಜಿನಿಯರ್, ಡಾಕ್ಟರೋ, ದೇಶ ರಕ್ಷಣೆ ಮಾಡುವ ಸೈನಿಕನೋ ಆಗಬೇಕು ನೀನು ಎಂದು ಗುರಿಹಾಕಿಕೊಡುವವನು ಹಾಗೂ ನಮಗೆ ಪ್ರೇರಣೆ ನೀಡುವವನು ಅಪ್ಪನೇ ಹೊರತು ಅಮ್ಮನಲ್ಲ. ಅಮ್ಮ ಹೋಂ ವರ್ಕ್ ಮಾಡುವಾಗ ಸಹಾಯ ಮಾಡಬಹುದು, ಲೆಕ್ಕ ಹೇಳಿಕೊಡಬಹುದು, ಗ್ರಾಮರ್ ಕಲಿಸಬಹುದು, ಇಲ್ಲವೇ ಮುದ್ದು ಮಾಡಿ ಶಾಲೆಗೆ ಕಳುಹಿಸಬಹುದು. ಪ್ರೇರಕ ಶಕ್ತಿ ಹೆಚ್ಚಾಗಿ ಅಪ್ಪನೇ ಆಗಿರುತ್ತಾನೆ. ಕೆಲವೊಬ್ಬರ ವಿಷಯದಲ್ಲಿ ಅಮ್ಮನೇ ಅಪ್ಪನ ಸ್ಥಾನವನ್ನು ತುಂಬಬಹುದು, ಆದರೆ ನಮ್ಮ ಭವಿಷ್ಯ ನಿರ್ಧಾರದಲ್ಲಿ ಅಪ್ಪನದ್ದೇ ಮಹತ್ವದ ಪಾತ್ರವಿರುತ್ತದೆ.


ನೆಹರು-ಇಂದಿರಾಗಾಂಧಿ

ಮಿಲ್ಖಾಸಿಂಗ್-ಜೀವ್

ಎಸ್‌ಡಿ ಬರ್ಮನ್-ಆರ್‌ಡಿ ಬರ್ಮನ್

ರಮೇಶ್ ತೆಂಡೂಲ್ಕರ್-ಸಚಿನ್ ತೆಂಡೂಲ್ಕರ್

ಶಿವರಾಮ ಹೆಗಡೆ-ಶಂಭು ಹೆಗಡೆ

ಅಮಿತಾಭ್ ಬಚ್ಚನ್- ಅಭಿಷೇಕ್ ಬಚ್ಚನ್

ಕುವೆಂಪು-ತೇಜಸ್ವಿ

ಅಪ್ಜಿತ್ ಸಿಂಗ್ ಭಿಂದ್ರಾ-ಅಭಿನವ್ ಬಿಂದ್ರಾ


ಇವರೆಲ್ಲರ ಜೀವನದಲ್ಲೂ ಪ್ರಮುಖ ಪಾತ್ರ ವಹಿಸಿರು ವುದು ಅಪ್ಪನೇ.  ಇಷ್ಟಾಗಿಯೂ ಎಷ್ಟೇ ಒಳ್ಳೆಯ ಉದ್ದೇಶವಿಟ್ಟುಕೊಂಡಿದ್ದರೂ ನಮ್ಮನ್ನು ತಿದ್ದಿ-ತೀಡುವ, ಕಿವಿ ಹಿಂಡಿ ಬುದ್ಧಿ ಹೇಳುವ ಅಪ್ಪ ನಮಗೆ ಆಪ್ಯಾಯಮಾನವಾಗುವುದು ಬಹಳ ಕಡಿಮೆ. ತಾನು ದುಡಿದ ಪಿಎಫ್ ಹಣವನ್ನು ಕೂಡ ಮಗನ ಭವಿಷ್ಯಕ್ಕೆಂದೇ ಮೀಸಲಿಟ್ಟು ಬಿಡುತ್ತಾನೆ. ಆದರೂ ಅಪ್ಪನನ್ನು ಅಪಾರ್ಥ ಮಾಡಿಕೊಳ್ಳುವುದು ಗಂಡು ಮಕ್ಕಳೇ. ನಮ್ಮ ಚಲನಚಿತ್ರಗಳನ್ನೇ ತೆಗೆದುಕೊಳ್ಳಿ. ‘ನಿನ್ನಂಥ ಅಪ್ಪ ಇಲ್ಲ…’ ಅಂತ ಮಗಳು ಹಾಡುತ್ತಾಳೆಯೇ ಹೊರತು ಮೀಸೆ ಬಂದ ಮಗ ಅಪ್ಪನನ್ನು ಸ್ತುತಿಸುವುದನ್ನು ಕಾಣಲು ಕಷ್ಟ. ಅಷ್ಟಕ್ಕೂ ಅಪ್ಪನ ಪ್ರೀತಿಯನ್ನು ನಾವು Feel  ಮಾಡುವುದು ತೀರಾ ವಿರಳ. ಮಿಗಿಲಾಗಿ, ಮಗನ ಮೇಲಿನ ಪ್ರೀತಿಯನ್ನು ಆತ ಹೆಚ್ಚಾಗಿ ವ್ಯಕ್ತಪಡಿಸುವುದೇ ಇಲ್ಲ. ಹೀಗಿದ್ದರೂ ನಾವು ದುಡಿಯಲು ಪ್ರಾರಂಭಿಸಿ ನಮ್ಮ ಕಾಲ ಮೇಲೆ ನಿಂತುಕೊಂಡ ನಂತರವೂ ತನ್ನ ಜವಾಬ್ದಾರಿ ಮುಗಿಯಿತೆಂದು ಅಪ್ಪ ಭಾವಿಸುವುದಿಲ್ಲ. ಜವಾಬ್ದಾರಿಯನ್ನು ವರ್ಗಾಯಿಸಲಾಗದ ಹಾಗೂ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದ ಸ್ಥಾನ ಅವನದ್ದು. “A king, realizing his incompetence, can either delegate or abdicate his duties. A father can do neither. If only sons could see the paradox… they would understand the dilemma…..” ಎಂಬ ಮರ್ಲಿನ್ ಮನ್ರೋ ಮಾತನ್ನು ನೆನಪಿಸಿಕೊಳ್ಳಿ. ‘ಅರೇಂಜ್ಡ್ ಮ್ಯಾರೇಜ್’ ಸಂದರ್ಭದಲ್ಲಿ ವಧುವನ್ನು ನೋಡಿ ಒಪ್ಪಿಗೆ ಸೂಚಿಸುವುದಷ್ಟೇ ನಮ್ಮ ಕೆಲಸ. ಆನಂತರದ ಜವಾಬ್ದಾರಿ ಅಪ್ಪನ ಹೆಗಲೇರಿ ಬಿಡುತ್ತದೆ. ಅದಕ್ಕೇ ಹೇಳುವುದು ಅಪ್ಪನದ್ದು “Thankless position’. ನಾವು ನಮ್ಮದೇ ಆದ ಗೂಡು ಕಟ್ಟಿಕೊಂಡು ಪ್ರತ್ಯೇಕಗೊಂಡ ನಂತರವೂ ಜೀವನವೆಂಬ ದೀರ್ಘ ಹಾದಿಯಲ್ಲಿ ಹೇಗೆ ಸಾಗಬೇಕು ಎಂದು ಅಪ್ಪ ಸಲಹೆ ಕೊಡುತ್ತಿರುತ್ತಾನೆ.


ಅಮೆರಿಕದಲ್ಲಿ ಮಗ ಅಥವಾ ಮಗಳು 12-13 ವರ್ಷಕ್ಕೆ ಕಾಲಿಟ್ಟಾಗ ‘Breaking the plate’ ಎಂಬ ಒಂದು ಕಾರ್ಯಕ್ರಮ ಮಾಡುತ್ತಾರೆ. ಅಂದರೆ ಮಕ್ಕಳು ಪ್ರವರ್ಧಮಾನಕ್ಕೆ ಕಾಲಿಟ್ಟರೆಂದರೆ ಅವರ ಅನ್ನವನ್ನು ಅವರೇ ದುಡಿದುಕೊಳ್ಳಬೇಕು, ಇನ್ನು ಮುಂದೆ ಅಪ್ಪ-ಅಮ್ಮನನ್ನು ಅವಲಂಬಿಸಬಾರದು ಎಂದರ್ಥ. ಹೀಗೆ 13ನೇ ವರ್ಷಕ್ಕೇ ಮನೆಯಿಂದ ಹೊರಹಾಕುವ ಅಮೆರಿಕದಲ್ಲೇ ಮಕ್ಕಳು ‘ಮದರ್‍ಸ್ ಡೇ’, ‘ಫಾದರ್‍ಸ್ ಡೇ’ ಆಚರಿಸುತ್ತಾರೆ! ಹಾಗಿರುವಾಗ ಭಾರತೀಯರಾದ ನಮ್ಮಲ್ಲಿ ಕೊನೆಯುಸಿರುವವರೆಗೂ ಮಕ್ಕಳ ಅಭ್ಯುದಯದ ಬಗ್ಗೆಯೇ ಯೋಚಿಸುವ ಅಪ್ಪ-ಅಮ್ಮನನ್ನು ನೆನಪಿಸಿಕೊಳ್ಳದಿರುವುದು ಥರವೇ?! ಇದೆಲ್ಲಾ ವೆಸ್ಟ್‌ರ್ನ್ ಕಾನ್ಸೆಪ್ಟ್, ಗ್ರೀಟಿಂಗ್ಸ್ ಕಾರ್ಡ್ ಕಂಪನಿಯವರ ವ್ಯಾಪಾರ ತಂತ್ರ ಎಂದು ಯಾರೇನೇ ಬೊಬ್ಬೆ ಹಾಕಲಿ. ನಾಳೆ ಜೂನ್ 19 ‘ಫಾದರ್‍ಸ್ ಡೇ’. ನಾವು ಅಂಬೆಗಾಲಿಡುವಾಗ ಕೈಹಿಡಿದು ಮುನ್ನಡೆಸಿದ, ನಾವೇ ಜನ್ಮಕೊಟ್ಟಾಗ ಮೊಮ್ಮಕ್ಕಳಿಗೂ ಪುಟ್ಟ ಪುಟ್ಟ ಹೆಜ್ಜೆಯಿಡುವುದನ್ನು ಕಲಿಸುವ ಅಪ್ಪನ ಅಗೋಚರ ಪ್ರೀತಿ, ನಿಸ್ವಾರ್ಥತೆಯನ್ನು ನೆನೆದು ಕನಿಷ್ಠ ಕೃತಜ್ಞತೆಯನ್ನಾದರೂ ಹೇಳೋಣ. ಮರೆಯದಿರಿ.


Happy Father’s Day!


fathers day

 •  0 comments  •  flag
Share on Twitter
Published on June 18, 2016 00:33

Pratap Simha's Blog

Pratap Simha
Pratap Simha isn't a Goodreads Author (yet), but they do have a blog, so here are some recent posts imported from their feed.
Follow Pratap Simha's blog with rss.