Pratap Simha's Blog, page 37

August 12, 2016

ತೊಟ್ಟಿಲು ಕಾದ ಅಪ್ಪನಿಗೆ ಯಾವತ್ತೂ ಬರಬಾರದು ಮಗನ ಹೆಣ ಕಾಯುವ ಹೊತ್ತು!

ತೊಟ್ಟಿಲು ಕಾದ ಅಪ್ಪನಿಗೆ ಯಾವತ್ತೂ ಬರಬಾರದು ಮಗನ ಹೆಣ ಕಾಯುವ ಹೊತ್ತು!


ಅಮ್ಮಾ ನಿನ್ನ ಎದೆಯಾಳದಲಿ

ಗಾಳಕ್ಕೆ ಸಿಕ್ಕ ಮೀನು

ಮಿಡುಕಾಡುತಿರುವೆ ನಾನು

ಕಡಿಯಲೊ ನೀ ಕರುಳ ಬಳ್ಳಿ-ಒಲವೂಡುತ್ತಿರುವ ತಾಯೆಬಿಡದ ಬುವಿಯ ಮಾಯೆ?


ತಾಯಿಯ ಮಮತೆಯನ್ನು ಖ್ಯಾತ ಕವಿ ಬಿ.ಆರ್. ಲಕ್ಷ್ಮಣ್‌ರಾವ್ ತಮ್ಮ ಕವಿತೆಯೊಂದರಲ್ಲಿ ಹಿಡಿದಿಟ್ಟ ರೀತಿ ಇದು. ಮಗುವೊಂದು ಜಾರಿ ಬಿದ್ದಾಗ ಬಾಯಲ್ಲಿ ಬರುವ ಮೊದಲನೇ ಕೂಗು ಅದೇ ‘ಅಮ್ಮಾ?’. ಅದಕ್ಕೇ ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ‘ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಏನಿದೆ’ ಎಂದು ಬಹಳ ಅರ್ಥಪೂರ್ಣವಾಗಿ ಬರೆಯುತ್ತಾರೆ. ಮಗುವಿನ ಆ ಧ್ವನಿ ಕೇಳಿದ ಕೂಡಲೇ ಅದೆಲ್ಲಿದ್ದರೂ ಅಮ್ಮ ಓಡಿ ಬರುತ್ತಾಳೆ, ‘ಅಯ್ಯೋ ಮಗನೇ ಬಿದ್ದಾ?’, ‘ಮಗಳೇ ಪೆಟ್ಟಾಯ್ತಾ?’ ಅಂತ ಎತ್ತಿ ಎದೆಗವುಚಿಕೊಳ್ಳುತ್ತಾಳೆ. ಆ ಅಪ್ಪುಗೆಯಲ್ಲಿ ಅದೆಂಥ ಆಪ್ತತೆ, ಭದ್ರತೆ, ನೋವು ಮರೆಸುವ ಶಕ್ತಿ! ಇನ್ನು ಅಪ್ಪನಾದವನು…? ಹರೆಯದಲ್ಲಿ ಒರಟನಾಗಿ ಕಾಣುವ, ಬಾಲ್ಯದಲ್ಲಿ ವಿಲನ್ ಎನಿಸುವ ಅಪ್ಪನೂ ಕೂಡಾ ಜಾರಿಬಿದ್ದ ಮಗುವಿಗೆ ಹಾರಿಬರುತ್ತಾನೆ.


ಇದಲ್ಲದೆ ಬೇಂದ್ರೆಯವರ ‘ನೀ ಹಿಂಗೆ ನೋಡಬೇಡಾ ನನ್ನಾ…’ ಕವನ ಬಿಂಬಿಸುವ ಧ್ವನಿ ಆಮ್ಮನಿಗಿಂತ ಅಪ್ಪನ ಮನಸ್ಸನ್ನು ತೋರಿಸುತ್ತದೆ.

ಅಂದರೆ ಬೇಂದ್ರೆಯಂಥಾ ಬೇಂದ್ರೆಯಜ್ಜನಿಗೇ ಪುತ್ರಶೋಕವನ್ನು ಸಹಿಸಲಾಗಲಿಲ್ಲ! ಮತ್ತು ಕವನದಲ್ಲಲ್ಲದೇ ಆ ಕವಿಗೆ ಬೇರಾವ ರೀತಿಯಲ್ಲೂ ಆ ಶೋಕವನ್ನು ಹೇಳಲಾಗಲಿಲ್ಲ. ಪುತ್ರಶೋಕವೆಂದರೆ ಆಂಥದ್ದೇ? ಆ ಶೋಕ ಅಷ್ಟೊಂದು ತೀವ್ರವೇ?


ಪ್ರೈಮರಿ ಶಾಲೆಯ ಒಂದು ಪಾಠ ನಮಗೆಲ್ಲಾ ನೆನಪಿರಬಹುದು. ರಾಜನ ಮೀಸೆ ಎಳೆಯುವ ಧೈರ್ಯ ಯಾರಿಗಿದೆ? ಎಂದು ಮಂತ್ರಿಯೊಬ್ಬ ಪ್ರಶ್ನೆ ಮಾಡುತ್ತಾನೆ. ರಾಜನ ಮೀಸೆ ಎಳೆದವನಿಗೆ ಮರಣದಂಡನೆಯ ಶಿಕ್ಷೆಯನ್ನಲ್ಲದೆ ಇನ್ನಾವ ಶಿಕ್ಷೆಯನ್ನೂ ನೀಡಬಾರದು ಎಂದು ಆಸ್ಥಾನದ ಸರ್ವರೂ ಹೇಳುತ್ತಾರೆ. ಆದರೆ ರಾಜಾ ಅಕ್ಬರನ ಮಂತ್ರಿ ಬೀರಬಲ್ಲ ರಾಜನ ಮೀಸೆ ಎಳೆದವನ ಬಾಯಿಗೆ ಮಿಠಾಯಿಯನ್ನು ಕೊಡಬೇಕು ಎನ್ನುತ್ತಾನೆ. ಹೌದಲ್ಲಾ! ರಾಜನ ಮೀಸೆ ಎಳೆದವನಿಗೆ ಮಿಠಾಯಿಯನ್ನಲ್ಲದೆ ಇನ್ನೇನನ್ನು ಕೊಡಬೇಕು? ರಾಜನ ಮೀಸೆ ಎಳೆಯುವ ಹಕ್ಕು, ಧೈರ್ಯ ರಾಜನ ಮಗನಿಗಲ್ಲದೆ ಇನ್ನಾರಿಗೆ ತಾನೇ ಇದ್ದೀತು? ಆತನಿಗೆ ಮಿಠಾಯಿ ಯನ್ನಲ್ಲದೆ ಇನ್ನೇನನ್ನು ತಾನೇ ಕೊಡಬೇಕು? ಆತ ರಾಜನಾದರೂ ಅಪ್ಪನೇ ತಾನೇ? ಅಪ್ಪನೆಂಬವನು ರಾಜನಾದರೂ ಮಕ್ಕಳ ಮುಂದೆ ಆತ ಗುಲಾಮನೇ ತಾನೇ? ಯಾವ ಅಪ್ಪತಾನೇ ಮಗುವಿನ ಮುಂದೆ ಮಂಡಿಯೂರಿಲ್ಲ? ಯಾವ ಅಪ್ಪ ತಾನೇ ಪುಟ್ಟ ಕಂದನಿಗಾಗಿ ನಿದ್ದೆಗೆಟ್ಟಿಲ್ಲ? ಯಾವ ಅಪ್ಪ ತಾನೇ ತನ್ನ ಕಂದನಿಗಾಗಿ ಪಾಡುಪಟ್ಟಿಲ್ಲ?


ಅಪ್ಪ ಎಂಬ ಆತ ರಾಜನೇ ಆಗಿರಲಿ, ಸೇವಕನೇ ಆಗಿರಲಿ ಅಪ್ಪ ಎಂದರೆಲ್ಲರಿಗೂ ಒಂದೇ. ಊರಿಗೆ ದೊರೆಯಾದರೂ ಆತ ತಾಯಿಗೆ ಮಗ ಎಂಬ ನಾಣ್ಣುಡಿ ಹೇಳುತ್ತೇವೆ.

ಆದರೆ ಆ ದೊರೆಯೂ ಒಬ್ಬ ಅಪ್ಪ ಎನ್ನುವುದನ್ನು ಸಮಾಜ ಅಷ್ಟು ಸುಲಭಕ್ಕೆ ಹೇಳುವುದಿಲ್ಲ. ಆಸ್ಪತ್ರೆಯ ಹೆರಿಗೆ ವಾರ್ಡಿನ ಹೊರಗೆ ಚಡಪಡಿಸುವ ಅಪ್ಪ, ಮಗುವಿನ ಮೊದಲ ಅಳುವಿಗೆ ಹೊಸ ಹುಟ್ಟನ್ನು ಧರಿಸುತ್ತಾನೆ. ತಾಯಿಗೆ ಹೇಗೆ ಹೆರಿಗೆ ಎನ್ನುವುದು ಮರುಜನ್ಮವೋ ತಂದೆಗೂ ಅದು ಮರುಜನ್ಮ. ಬಟ್ಟೆಯಲ್ಲಿ ಸುತ್ತಿದ ಪುಟ್ಟ ಜೀವವನ್ನು ಕೈಯಲ್ಲಿ ಹಿಡಿದ ಘಳಿಗೆ ಪ್ರತೀ ಮನುಷ್ಯನಿಗೂ ಜೀವಮಾನದ ಸಾರ್ಥಕ ಕ್ಷಣ. ಆ ಕ್ಷಣದ ಪುಳಕಕ್ಕೆ ಬಡವ-ಬಲ್ಲಿದನೆಂದ ವ್ಯತ್ಯಾಸವಿಲ್ಲ. ಆತನಿಗೆ ಜೀವನದಲ್ಲಿ ಏನೋ ಒಂದು ಅಮೂಲ್ಯ ಸಂಪತ್ತನ್ನು ಗಳಿಸಿದ ಭಾವ. ಆ ಭಾವ ಹುಟ್ಟದ ಅಪ್ಪನೇ ಈ ಪ್ರಪಂಚದಲ್ಲಿಲ್ಲ.

ತೊಟ್ಟಿಲಲ್ಲಿ ಮಲಗಿ ತನ್ನ ಪಾಡಿಗೆ ನಗುವ, ಇದ್ದಕ್ಕಿದ್ದಂತೆ ಅಳುವ ಮಗು ವನ್ನು ನೋಡುವ ಅಪ್ಪನೊಳಗೆ ಹುಟ್ಟುವ ಭಾವಸೆಲೆಯನ್ನು ಯಾವ ಕವಿಯೂ ಇದುವರೆಗೆ ಕಟ್ಟಿಕೊಟ್ಟಿಲ್ಲ. ಮಲಗಿದ ಮಗು ನಿದ್ರೆ ಮಾಡುತ್ತಿದ್ದರೆ ಅಪ್ಪನಾದವನ ಅರ್ಧ ಮನಸ್ಸು ತೊಟ್ಟಿಲಲ್ಲಿರುತ್ತದೆ. ತೂಗುವ ತೊಟ್ಟಿಲಲ್ಲಿ ಮತ್ತೆ ಮಗುವಾಗುವ ಆ ಕ್ಷಣವನ್ನು ಅನುಭವಿಸಿದವರೇ ಬಲ್ಲರು. ಇನ್ನೂ ಪ್ರಪಂಚ ಕಾಣದ ಮಗುವಿನ ಕಣ್ಣಲ್ಲಿ ಅಪ್ಪ ತನ್ನ ನಾಳೆಯನ್ನು, ತನ್ನ ಭವಿಷ್ಯವನ್ನು ಕಾಣುತ್ತಾನೆ. ತಾಯಿಯಾ ದವಳು ತನ್ನ ಹುಟ್ಟುವ ಮಗುವಿಗೆ ಕುಲಾವಿ ಹೊಲಿಸಿದರೆ ಅಪ್ಪನಾದವನು ಅದಾಗಲೇ ಮಗು ತನ್ನ ಎದೆಯೆತ್ತರಕ್ಕೆ ಬೆಳೆದಂತೆ, ಆ ಮಗು ತನ್ನ ಗೆಳೆಯನಾದಂತೆ, ತನ್ನ ಸರ್ವಸ್ವವೂ ಆದಂತೆ ಕನಸ್ಸು ಕಾಣುತ್ತಿರುತ್ತಾನೆ.


ಅಂಥ ಮಕ್ಕಳ ಬದುಕನ್ನು ರೂಪಿಸುವ ಅಪ್ಪನಿಗೆ ಮಕ್ಕಳು ಸರದಿ ಮುರಿದು ಹೊರಟರೆ ಏನಾಗಬೇಡ? ಮಗು ತೊಟ್ಟಿಲಲ್ಲಿ ಮಲಗಿದ್ದರೂ ಹೊಲಸಾಗಲು ಬಿಡದೆ ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಅಪ್ಪನಿಗೇ ಮಕ್ಕಳ ಹೆಣ ಕಾಯುವ ಪರಿಸ್ಥಿತಿ ಬಂದರೆ ಏನಾಗಬೇಡ? ತನ್ನ ಮತ್ತೊಂದು ಜೀವ ಎಂದುಕೊಂಡ ತನ್ನ ಕುಡಿಗಳೇ ಚಿತೆಯಲ್ಲಿ ಮಲಗಿದರೆ ಏನನ್ನಿಸಬೇಡ? ಅಂಥ ಹೊತ್ತಲ್ಲಿ ಅಪ್ಪ ಮತ್ತೆ ಮತ್ತೆ ಸಾಯುತ್ತಾನೆ. ದಿನೇ ದಿನೆ ಸಾಯುತ್ತಾನೆ. ಯಾವ ಅಪ್ಪ-ಅಮ್ಮಂದಿರಿಗೂ ಬರಬಾರದ ಅತ್ಯಂತ ಕೆಟ್ಟ ಪರಿಸ್ಥಿತಿ ಈ ಪುತ್ರಶೋಕ. ಇದಕ್ಕಿಂತ ಕೆಟ್ಟ ಸಮಯ ಇನ್ನಾವುದಿದೆ? ಪುತ್ರಶೋಕವೆಂಬುದು ಗಾದೆ ಹೇಳಿದಂತೆ ನಿರಂತರ. ತೊಂಭತ್ತು ದಾಟಿದ ಮುದುಕರೂ ಪುತ್ರಶೋಕದಿಂದ ಮಕ್ಕಳಂತೆ ಅತ್ತಿದ್ದನ್ನು ನಾವು ನೋಡಿದ್ದೇವೆ.

ಪ್ರಪಂಚವನ್ನು ಸಾಕಷ್ಟು ಕಂಡ ಮಹಾ ವ್ಯಕ್ತಿಗಳೂ ಪುತ್ರಶೋಕದಿಂದ ಅಲ್ಲಾಡಿಹೋಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರನ ಅಂತಿಮಸಂಸ್ಕಾರವನ್ನು ನೋಡಿದಾಗ ಯಾಕೋ ಇವೆಲ್ಲವೂ ನೆನಪಾದವು.


ಸಿದ್ದರಾಮಯ್ಯರಂಥಾ ಸಿದ್ದರಾಮಯ್ಯರೇ ಅಂದು ಅಲ್ಲಾಡಿ ಹೋದರು. ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಅಂದಿನ ಅವರ ಸ್ಥಿತಿಯ ಬಗ್ಗೆ ಕೆಲವರು ಕಣ್ಣೀರಾದರು. ಸಿದ್ಧಾಂತ ಬೇರೆಯಾಗಿದ್ದರೂ ಅಂದು ಬಿಜೆಪಿಯ ಸದಾನಂದ ಗೌಡರು ಸಿದ್ದರಾಮಯ್ಯನವರಿಗೆ ಸಮಾನ ಮನಸ್ಕರಾದರು. ಅಂದರೆ ಸದಾನಂದ ಗೌಡರಿಗೂ ಸಿದ್ದರಾಮಯ್ಯನವರಿಗೂ ಪುತ್ರಶೋಕವೆಂದರೆ ಏನೇನೂ ವ್ಯತ್ಯಾಸವಿಲ್ಲ. ಇಬ್ಬರ ಶೋಕವೂ ಒಂದೇ! ಇಂದಿರಾಗಾಂಧಿಗೂ, ಜನಾರ್ದನ ಪೂಜಾರಿಯವರಿಗೂ ಮನಸ್ಸು ಒಂದೇ. ಎಲ್ಲರೂ ಪುತ್ರಶೋಕದಿಂದ ಬಳಲಿದವರೇ. ಎಲ್ಲರೂ ನಿರಂತರವೆನ್ನುವ ಶೋಕ ಹೊತ್ತವರೆ! ಹಾಗಾದರೆ ಪುತ್ರಶೋಕವೆಂಬುದು ಅಷ್ಟೊಂದು ಕಠಿಣವೇ? ಅದಕ್ಕೆ ಸಿದ್ಧಾಂತಗಳ ಹಂಗಿಲ್ಲವೇ? ಜಾತಿಯ, ಅಂತಸ್ತಿನ ಹಂಗಿಲ್ಲವೇ?


ಒಂದು ಕ್ಷಣ ಸಿದ್ದರಾಮಯ್ಯನವರ ಬದುಕನ್ನು ನೋಡೋಣ.

ಸಿದ್ದರಾಮಯ್ಯನವರು ಕಾಂಗ್ರೆಸ್ ನಾಯಕರು, ಸಮಾಜವಾದಿ ಅನುಷ್ಠಾನಕರು, ಅಹಿಂದದ ಮುಂದಾಳುಗಳು, ಒರಟು ಮನುಷ್ಯ. ಇವೆಲ್ಲವನ್ನೂ ಒಮ್ಮೆ ಬದಿಗಿಟ್ಟು ನೋಡೋಣ. ಅವರು ಮುಖ್ಯಮಂತ್ರಿ ಎಂಬುದನ್ನೂ ಮರೆಯೋಣ. ಎಲ್ಲಕ್ಕಿಂತಲೂ ಮೊದಲು ಅವರು ಮಗನಿಗೆ ಅಪ್ಪ ತಾನೇ? ಸಿದ್ದರಾಮಯ್ಯನವರ ಮುಲಾಜಿಲ್ಲದ ಸ್ವಭಾವ ಸುಮ್ಮಸುಮ್ಮನೆ ಗಳಿಸಿಕೊಂಡಿದ್ದೇ? ಸಿದ್ದರಾಮನ ಹುಂಡಿಯಿಂದ ವಿಧಾನಸೌಧದವರೆಗೆ ಅವರ ಬೆಳವಣಿಗೆಯನ್ನು ನೋಡಿದರೆ ಅವರ ಒರಟುತನದ ನಡುವೆ ಒಬ್ಬ ಟಿಪಿಕಲ್ ಭಾರತೀಯ ಅಪ್ಪ ನಮಗೆ ಕಾಣಿಸುತ್ತಾರೆ. ಅವರ ಸಿದ್ಧಾಂತಗಳೇನೇ ಇರಲಿ. ಅವರ ಸಮಾಜವಾದಿ ಗುಣ ಅತ್ತಲಿರಲಿ. ಮಗನ ಚಿತೆಯ ಎದುರು ಕಂಡ ಸಿದ್ದರಾಮಯ್ಯನವರು ನಮಗೆ ಒರಟ ಮುಖ್ಯಮಂತ್ರಿಯನ್ನು ತೋರಿಸಿತ್ತೇ? ಆಂದು ಕಂಡ ಮುಖ್ಯಮಂತ್ರಿಗಳ ಮುಖ ಎಂಥವರ ಕಣ್ಣಲ್ಲೂ ನೀರು ಜಿನುಗಿಸಿತ್ತು.

ಸಿದ್ದರಾಮಯ್ಯನವರಿಗೆ ಏನು ತಾನೇ ಇತ್ತು? ಜಾತಿಯ ಬಲವಿರಲಿಲ್ಲ, ದೊಡ್ಡವರ ಬೆಂಬಲವಿರಲಿಲ್ಲ. ಆದರೂ ಸಣ್ಣ ಹಳ್ಳಿಯಿಂದ ಬದುಕು ಕಟ್ಟಿಕೊಂಡ ಅವರ ಬದುಕು ಎಂಥವರಿಗೂ ಅಚ್ಚರಿ ಹುಟ್ಟಿಸುತ್ತದೆ. ಕೃಷಿಕ ಎಂಬ ಪಟ್ಟವನ್ನು ಜನ ಕೊಟ್ಟರೂ ಬಡತನ ಕೃಷಿಯೊಡನೆ ಪುಕ್ಕಟೆಯಾಗಿ ಎಲ್ಲರಂತೆ ಬಂದಿತ್ತು. ಹೊಸದನ್ನು ಕಲಿಯುವ ಹುಮ್ಮಸ್ಸು, ಏರಬೇಕು, ಎತ್ತರಕ್ಕೇರಬೇಕು. ಜಾತಿಯ ಸಂಕೋಲೆ ಯನ್ನು ಕಿತ್ತೊಗೆಯಬೇಕು ಎಂಬ ಅವರ ಹಠವನ್ನು ಯಾರಾದರೂ ಅಲ್ಲಗಳೆಯಲಾಗುತ್ತದೆಯೇ? ಹಿಂದುಳಿದ ವರ್ಗದ ವ್ಯಕ್ತಿಯೊಬ್ಬ ಶ್ರಮದಿಂದ ವಕೀಲನಾಗುವುದು, ರಾಜಕಾರಣಿಯಾಗುವುದು, ಜನರ ನಾಯಕನಾಗುವುದನ್ನು ಜನ ಹೊಗಳಬಹುದು. ಜನ ಅವರನ್ನು ಮತ್ತೊಬ್ಬ ದೇವರಾಜ ಅರಸು ಎಂದು ಕರೆದಿರಲೂಬಹುದು. ಆದರೆ ಹೊರನೋಟಕ್ಕೆ ಕಾಣುವ ಅವರ ಒರಟುತನದಲ್ಲಿ ಒಂದು ಹೂವಿನ ಮನಸ್ಸೂ ಇದೆ ಎನ್ನುವುದನ್ನು ಜನ ಅವರ ಮಗನ ಹೆಣದ ಮುಂದೆ ನೋಡಬೇಕಾದುದು ದುರಂತ. ಅವರ ಬದುಕನ್ನು ಕೂಲಂಕುಶವಾಗಿ ನೊಡಿದರೂ ಹೋರಾಟ ಇಲ್ಲದ ದಿನ ಯಾವುದಿತ್ತು? ಲೆಕ್ಕಕ್ಕುಂಟು ಆದರೆ ತಿನ್ನಲಿಲ್ಲ ಎನ್ನುವ ಆಸ್ತಿ, ಆದರೆ ಎದೆಯಲ್ಲಿ ಸಿದ್ಧಾಂತದ ಛಲ.

ಕಾಲಭಾಹಿರ ಸಿದ್ಧಾಂತವಾದರೂ ತನ್ನದು ಸರಿ ಎನ್ನುವ ಉದ್ಧಟತನ, ತಾನು ನಡೆದಿದ್ದೇ ದಾರಿ ಎನ್ನುವ ತಾಕತ್ತು ಎಷ್ಟು ರಾಜಕಾರಣಿಗಳಿಗೆ ಸಿದ್ಧಿಸುವ ಗುಣ? ಹೇಗೆ ಯಡಿಯೂರಪ್ಪನವರು ತಾವು ನಂಬಿದ ಸಿದ್ಧಾಂತಕ್ಕೆ ನಿಷ್ಠರಾಗಿ ಅಂಟಿಕೊಂಡರೋ ಹಾಗೆ ತಮ್ಮ ಸಿದ್ಧಾಂತಕ್ಕೆ ಅಂಟಿಕೊಂಡವರು ಸಿದ್ದರಾಮಯ್ಯನವರು. ಅದರ ನಡುವೆ ಮನೆ ಮಕ್ಕಳು ಎಂಬುದೂ ಇತ್ತ. ಎಲ್ಲಾ  ಅಪ್ಪಂದಿರಂತೆ ತಾನು ಪಟ್ಟ ಕಷ್ಟ ಮಕ್ಕಳು ಪಡಬಾರದು ಎಂದು ಸಾಕಿದರು. ಉತ್ತಮ ವಿದ್ಯಾಭ್ಯಾಸ ಕೊಡಿಸಿದರು. ಸುಖದ ಬದುಕನ್ನು ಎಲ್ಲಾ ಅಪ್ಪಂದಿರಂತೆ ಅವರೂ ಕೊಟ್ಟರು. ಇದರ ನಡುವೆ ರಾಜಕಾರಣದಲ್ಲೂ ಬೆಳೆದರು. ಜೆಡಿಎಸ್ ಸರಕಾರದಲ್ಲಿ ಉಪಮುಖ್ಯಮಂತ್ರಿಯಾದರೂ ನಂತರ ಪಕ್ಷ ಬಿಟ್ಟರು. ಕಾಂಗ್ರೆಸಿಗೆ ಸೇರಿದರು. ಮೂಲ ಕಾಂಗ್ರೆಸಿಗರು ವಲಸಿಗ ಎಂದು ಕರೆದರೂ ಮುಂದೆ ಅದೇ ಪಕ್ಷದ ನಾಯಕರಾದರು. ಅದೇ ಪಕ್ಷದಿಂದ ಮುಖ್ಯಮಂತ್ರಿಯೂ ಆದರು. ಅಂಥ ವ್ಯಕ್ತಿ ಮೊನ್ನೆ ಮಗನ ಹೆಣದ ಮುಂದೆ ನಿಂತಾಗ ರಾಜ್ಯದ ಜನರ ಎದೆ ಭಾರವಾಗಿತ್ತು.

ಮೂರುದಶಕದ ಹಿಂದೆ ತೊಟ್ಟಿಲಲ್ಲಿ ಮಲಗಿದ್ದ ಮಗುವನ್ನು ಕಾದಂತೆ ಕಾದ ಅದೇ ಸಿದ್ದರಾಮಯ್ಯನವರು ಮಗನ ಹಣೆವನ್ನು ಮೂರು ದಿನ ಕಾದರು!


ಮಕ್ಕಳೆಲ್ಲರೂ ಏಕೆ ಹೀಗೆ ಸರದಿ ಮುಗಿದು ಹೋಗುತ್ತಾರೆ? ಹೋರಾಟಗಾರ ಅಪ್ಪನ ಸ್ಥಿತಿ ಮಗನಿಗೆ ತಿಳಿಯದೇ ಇದ್ದದ್ದೇ ಕಾರಣವೇ? ಅಪ್ಪನ ಪ್ರಭಾವಳಿ ಮಕ್ಕಳನ್ನು ಹಾಳುಮಾಡಿತೇ? ಬದುಕನ್ನು ಅಪ್ಪಂದಿರಂತೆ ಅರಿಯಲು ಎಡವಿದರೇ? ಅಥವಾ ವಿಧಿಯಾಟವೇ? ಪುತಶೋಕಂ ನಿರಂತರಂ ಎನ್ನುವುದು ದ್ವಾಪರಯುಗದಿಂದಲೇ ಇದೆ. ಆದರೆ ಪುತ್ರಶೋಕಂ ಕ್ಷಣಾತ್ಯತ್ವ ತತ್ವೇ ಚಿತ್ತಮಧಾರಯೇತ್ (ಪುತ್ರಶೋಕವನ್ನು ಕ್ಷಣಿಕ ಎಂದುಕೋ, ನಿನ್ನ ಬುದ್ಧಿಯ ಸ್ಥಿರತೆಯನ್ನು ತಂದುಕೋ) ಎನ್ನುವ ಮಾತೂ ಇದೆ. ಪುತ್ರಶೋಕ ದಶರಥನನ್ನೇ ಬಿಡಲಿಲ್ಲ. ಪುತ್ರವಿಯೋಗವಾಗದೆಯೂ ದಶರಥ ನಿಧನನಾದ.


ಕೆಲವರ್ಷಗಳ ಹಿಂದೆ ಆಗ ಲೋಕಾಯುಕ್ತ ಎಸ್ಪಿ ಆಗಿದ್ದ ಕೆ. ಮಧುಕರ್ ಶೆಟ್ಟಿಯವರನ್ನು ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಲು ಹೋಗಿದ್ದೆ. ಅವರು ನಯಾಪೈಸೆ ಲಂಚವನ್ನೂ ಮುಟ್ಟದ ಕರ್ನಾಟಕದ ಅತ್ಯಂತ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರು.

ಭ್ರಷ್ಟ ಅಧಿಕಾರಿಗಳನ್ನು ರೆಡ್‌ಹ್ಯಾಂಡ್ ಆಗಿ ಹಿಡಿದರೂ ಹೇಗೆ ತಪ್ಪಿಸಿಕೊಳ್ಳುತ್ತಾರೆಂಬುದಕ್ಕೆ ಇತ್ತೀಚೆಗೆ ತಲೆದೋರುತ್ತಿರುವ ಒಂದು ವಿಚಿತ್ರ ಸವಾಲಿನ ಬಗ್ಗೆ ವಿವರಿಸಿದರು.


“ನೋಡಿ? ಅಪ್ಪ-ಅಮ್ಮ ಎರಡೋ, ಮೂರೋ ಎಕರೆ ಹೊಲ ಗದ್ದೆಗಳಲ್ಲಿ ಕಷ್ಟ ಪಟ್ಟು ದುಡಿದು, ಮಕ್ಕಳನ್ನು ಓದಿಸಿ, ಮೇಲೆ ತರುತ್ತಾರೆ. ಅದೇ ಮಕ್ಕಳು(ಕೆಲವರು) ಸರಕಾರಿ ಕೆಲಸಕ್ಕೆ ಸೇರಿ, ಒಳ್ಳೆಯ ಸಂಪಾದನೆ ಮಾಡಿ ಮದುವೆಯಾದ ನಂತರ ಎಷ್ಟು ಬದಲಾಗುತ್ತಾರೆಂದರೆ ಹಳ್ಳಿಯಿಂದ ಮಗನ್ನು ನೋಡಲು ಅಪ್ಪ-ಅಮ್ಮ ಬಂದರೆ ಹೆಂಡತಿ ಕಿರಿಕಿರಿ ಮಾಡುತ್ತಾಳೆ, ಇಲ್ಲವೆ ಟಾಯ್ಲೆಟ್ ಗಲೀಜು ಮಾಡುತ್ತಾರೆ ಎಂದು ಔಟ್‌ಹೌಸ್‌ನಲ್ಲಿ ಇರಿಸುತ್ತಾರೆ. ಅಣಕವೆಂದರೆ ಲೋಕಾಯುಕ್ತ ದಾಳಿಯಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಕೊಂಡಾಗ ಮಕ್ಕಳಿಗೆ ಮತ್ತೆ ನೆನಪಾಗುವುದು, ಕಷ್ಟಕಾಲದಲ್ಲಿ ಮತ್ತೆ ಸಹಾಯಕ್ಕೆ ಬರುವುದು ಅಪ್ಪ-ಅಮ್ಮನ ಆ ಮೂರು ಎಕರೆ ಜಮೀನೇ! ಅಂದರೆ ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ ಬಂಗಲೆ ಕಟ್ಟಿಸಿರುವುದು ಅಪ್ಪನ ಮೂರು ಎಕರೆ ಕೃಷಿ ಭೂಮಿಯಲ್ಲಿ ಗಳಿಸಿದ ಆದಾಯದಿಂದಲೇ ಎನ್ನುತ್ತಾರೆ.

ಇತ್ತೀಚೆಗೆ ಬಹಳಷ್ಟು ಪ್ರಕರಣಗಳಲ್ಲಿ ಭ್ರಷ್ಟ ಅಧಿಕಾರಿಗಳು ಕೊಡುತ್ತಿರುವ ಅತ್ಯಂತ ಸ್ಟ್ರಾಂಗ್ ಡಿಫೆನ್ಸ್ ಇದೇ” ಎಂದರು. ಅಪ್ಪನನ್ನು ವಿಚಾರಿಸಿದರೆ, ‘ಹೌದು ಸ್ವಾಮಿ? ಹೊಲದಲ್ಲಿ ಶೇಂಗಾ ಹಾಕಿದ್ದಾ, ಪಕ್ಕದ ಸೂರ್ಯಕಾಂತಿ ಬೀಜ ಬೆಳೆದಿದ್ದಾ, ಅದರ ಬುಡದ ಎಳ್ಳು ಹಾಕಿದ್ದಾ, 10 ಲಕ್ಷ ಲಾಭ ಬಂತು’ ಎನ್ನುತ್ತಾರೆ! ಅಂದರೆ ಮಕ್ಕಳು ಹೆತ್ತವರನ್ನು ಅನಾಥಾಶ್ರಮಕ್ಕೆ ಕಳಿಸಬಹುದು. ಆಸ್ತಿ ವಿಷಯಕ್ಕೆ ಕ್ಯಾತೆ ತೆಗಿಯಬಹುದು, ಆದರೆ ಪೋಷಕರು ಇದುವರೆಗೂ ಮಕ್ಕಳ ವಿರುಧ್ದ ಹೋದ ಒಂದೇ ಒಂದು ಉದಾಹರಣೆ ಇಲ್ಲ ಯಾಕೆ? ಎಲ್ಲವನ್ನೂ ಮಾಡಿದ್ದು ಮಕ್ಕಳಿಗಾಗಿ ಎನ್ನುವ ಅಪ್ಪ ಕೊನೆ ಘಳಿಗೆವರೆಗೂ ಮಕ್ಕಳಿಗಾಗಿ ಹಾತೊರೆಯುತ್ತಾನೆ. ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ಅಪ್ಪಂದಿರನ್ನೋ ಕೆಟ್ಟ ಅಮ್ಮಂದಿರನ್ನೋ ಎಂದಾದರೂ ನೀವು ಕಂಡಿದ್ದೀರಾ? ಪೋಷಕರು ತನ್ನ ಬೆವರು ಹರಿಸಿ ಬೆಳೆಸುವುದು ಮಕ್ಕಳಿಗಾಗಿ ಹೊರತು ಇನ್ನಾರಿಗೆ? ಅಂಥ ಮಕ್ಕಳೇ ಸರದಿ ಮುರಿದುಹೋದರೆ ಯಾವ ಪೋಷಕರಿಗಾದರೂ ಏನನ್ನಿಸಬೇಕು?


2006ರ ಡಿಸೆಂಬರ್‌ನಲ್ಲಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಿಂದ ಉಪ ಚುನಾವಣೆ ಎದುರಿಸುತ್ತಿದ್ದರು.ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಯಡಿಯೂರಪ್ಪನವರು ಜತೆಜತೆಯಾಗಿ ಸಿದ್ದರಾಮಯ್ಯನವರ ವಿರುದ್ಧ ಪ್ರಚಾರಕ್ಕೆ ಧುಮುಕಿದ್ದರು. ಕುಮಾರಸ್ವಾಮಿ ಅವರಿಗಂತೂ ಸಿದ್ದರಾಮಯ್ಯನವರ ರಾಜಕೀಯ ಅಂತ್ಯಸಂಸ್ಕಾರ ಮಾಡಬೇಕೆಂಬ ತವಕವಿತ್ತು. ಇಡೀ ಆಡಳಿತ ಯಂತ್ರ ಸಿದ್ದರಾಮಯ್ಯನವರನ್ನು ಸೋಲಿಸಲು ಸಿದ್ಧವಾಗಿ ನಿಂತಿತ್ತು. ಇಂತಹ ಅಬ್ಬರಕ್ಕೂ ಅಂಜದೆ, ಆಗಿನ ರಾಜ್ಯ ಸರಕಾರದ ದರ್ಪವನ್ನು ಸೋಲಿಸಿ ಮರು ಆಯ್ಕೆಯಾದ ಸಿದ್ದರಾಮಯ್ಯನವರು ಮೊನ್ನೆ ಮಗನ ಶವದ ಮುಂದೆ ಸೋತು ನಿಂತಿದ್ದನ್ನು ಕಂಡು ಮನಸ್ಸು ಆರ್ದ್ರವಾಯಿತು!


 rakesh siddaramaiah

 •  0 comments  •  flag
Share on Twitter
Published on August 12, 2016 23:38

August 11, 2016

August 10, 2016

August 6, 2016

ಆರು ದಶಕ ಆಳಿದವರು ಕೊಡಗಿನ ಸೈನಿಕ ಪ್ರಜ್ಞೆಗೆ ಕೊಟ್ಟಿದ್ದೇನು?

ಆರು ದಶಕ ಆಳಿದವರು ಕೊಡಗಿನ ಸೈನಿಕ ಪ್ರಜ್ಞೆಗೆ ಕೊಟ್ಟಿದ್ದೇನು?


ಕೊಡಗಿನಲ್ಲೀಗ ನಾಟಿ ಕೆಲಸದ ಬಿರುಸು. ಗದ್ದೆ ಕೆಲಸದ ಹೊತ್ತಲ್ಲಿ ಕೊಡಗಿನ ಪೇಟೆಗಳು ಎಂದಿಗಿಂತ ಖಾಲಿಯಾಗಿ ಕಾಣುತ್ತವೆ. ಏಕೆಂದರೆ ಮಳೆ ಇದ್ದಾಗಲೇ ಗದ್ದೆಗಿಳಿದುಬಿಡಬೇಕು ಎನ್ನುವ ರೈತರ ತುರಾತುರಿ. ಅಂಥ ತುರಾತುರಿಯ ನಡುವೆ ಕೊಡಗಿನ ಮಾಜಿ ಸೈನಿಕರು ಬೇರೊಂದು ಕಾಯ೯ದಲ್ಲಿ ತುರಾತುರಿಯಲ್ಲಿದ್ದರು. ಈ ತುರಾತುರಿಯಲ್ಲಿ ಅವರಿಗೆ ಕೃಷಿ ಮರೆತುಹೋಗಿತ್ತು. ಮನೆಗೆ ಮರಳುವುದು ತಡವಾಗುತ್ತಿತ್ತು. ಪೇಟೆಯ ಸ್ಮಾರಕಗಳ ಅಲಂಕಾರ, ಪ್ರತಿಮೆಗಳಿಗೆ ಬಣ್ಣ, ಆಗಮಿಸುವ ಅತಿಥಿಗಳ ಸತ್ಕಾರಕ್ಕೆ ಸಮಿತಿಗಳ ರಚನೆ ಕಳೆದೊಂದು ತಿಂಗಳ ಹಿಂದಿನಿಂದಲೇ ನಡೆಯುತ್ತಿತ್ತು. ದೂರದ ಕುಟ್ಟ ಪೊನ್ನಂಪೇಟೆಯಿಂದ, ಇತ್ತ ನಾಪೋಕ್ಲು, ಭಾಗಮಂಡಲಗಳಿಂದ ಮಾಜಿ ಸೈನಿಕರು ಮಡಿಕೇರಿಗೆ ದಿನನಿತ್ಯವೆನ್ನುವಂತೆ ಬಂದು ತಯಾರಿ ನಡೆಸುತ್ತಿದ್ದರು. ಮಾಜಿ- ಗಳೆಲ್ಲರಿಗೂ ತಮ್ಮ ಗದ್ದೆಯ ನಾಟಿ ಕೆಲಸಕ್ಕಿಂತ ಮಡಿಕೇರಿಯ ಕಾಯ೯ಕ್ರಮದ ಸಿದ್ಧತೆಯೇ ಹೆಚ್ಚಾಗಿತ್ತು. ಇಷ್ಟೆಲ್ಲಾ ಸಿದ್ಧತೆ ಏಕೆಂದರೆ ಮಡಿಕೇರಿಗೆ ಚೀಫ್ ಆಫ್ ಆಮಿ೯ ಸ್ಟಾಫ್ ಬರುವವರಿದ್ದರು!


  1972ರಲ್ಲಿ ಫೀಲ್ಡ್ ಮಾಷ೯ಲ್ ಮಾಣಿಕ್ ಷಾ

1979-80ರಲ್ಲಿ ಜನರಲ್ ಓಂ ಪ್ರಕಾಶ್ ಮಲೊತ್ರಾ

1991-91ರಲ್ಲಿ ಜನರಲ್ ಸುನಿತ್ ಫ್ರಾನ್ಸಿಸ್ ರೋಡ್ರಿಗಸ್

1996ರಲ್ಲಿ ಜನರಲ್ ಶಂಕರ್ ರಾವ್ ಚೌಧರಿ

ಇಂದು ಜನರಲ್ ದಲ್ಬಿರ್ ಸಿಂಗ್ ಸುಹಾಗ್


  ಮಡಿಕೇರಿ ಪಟ್ಟಣ ಇಂದು ದೇಶದ 25ನೇ ಚೀಫ್ ಆಫ್ ಆಮಿ೯ ಸ್ಟಾಫ್ ಆಗಮನಕ್ಕೆ ಲವಲವಿಕೆಯಿಂದ ಸಜ್ಜುಗೊಂಡಿದೆ. ಎಲ್ಲವೂ ನಿವೃತ್ತರ ಶ್ರಮ, ಶ್ರದೆಟ್ಧ. ಮಡಿಕೇರಿಗೆ ಜನರಲ್‍ಗಳು ಬರುವುದೆಂದರೆ ಜನರಿಗೆಲ್ಲಾ ಒಂದು ಹಬ್ಬದಂತೆ. ಈವರೆಗೆ ಬಂದ ಎಲ್ಲಾ ಜನರಲ್‍ಗಳ ಲೆಕ್ಕವನ್ನೂ ಮಡಿಕೇರಿ ಇಟ್ಟುಕೊಂಡಿದೆ. ಎಲ್ಲಾ ಕಾಯ೯ಕ್ರಮಗಳ ನೆನಪುಗಳೆಲ್ಲವೂ ಮಡಿಕೇರಿಗೆ ಇನ್ನೂ ಹಸಿರಾಗಿದೆ. ಏಕೆ ಹೀಗೆ? ಮಿಲಿಟರಿ ಮುಖ್ಯಸ್ಥರು ದೇಶದ ನಾನಾ ಭಾಗಗಳಿಗೆ ಕಾಯ೯ನಿಮಿತ್ತ ಪ್ರವಾಸ ಕೈಗೊಳ್ಳುತ್ತಾರೆ. ನಾನಾ ಭಾಗಗಳಲ್ಲಿ ಮಾಜಿಗಳನ್ನು ಭೇಟಿಯಾಗುತ್ತಾರೆ. ಆದರೆ ಮಡಿ- ಕೇರಿಯೇಕೆ ಈ ಪರಿಯಲ್ಲಿ ಜನರಲ್ ಆಗಮನಕ್ಕೆ ಸಿದ್ಧವಾಗುತ್ತದೆ?

ಇಲ್ಲಿ ಇನ್ನೂ ಒಂದು ವಿಷಯವಿದೆ. ಈ ಜನರಲ್‍ಗಳ ಭೇಟಿಯಿಂದ ಕೊಡಗಿನ ಜನ ಎಷ್ಟೋಂದು ಪುಳಕಗೊಳ್ಳುತ್ತಾರೋ ಭೇಟಿ ನೀಡಿದ ಜನರಲ್‍ಗಳೂ ವೀರಭೂಮಿಯ ನೆಲವನ್ನು ಸ್ಪಶಿ೯ಸಿ ಪುಳಕಗೊಳ್ಳುತ್ತಾರೆ. ಈ ಐದು ಜನ ಜನರಲ್‍ಗಳು ಮಾತ್ರ ಅಲ್ಲ. ಇದುವರೆಗೆ ಆಗಿಹೋದ 23 (ಇಬ್ಬರು ಕೊಡಗಿನ ಸೇನಾ ಮುಖ್ಯಸ್ಥರನ್ನು ಬಿಟ್ಟು) ಜನರಲ್‍ಗಳೆಲ್ಲರಿಗೂ ಕೊಡಗು ಎಂದರೆ ಅದೇನೋ ಕುತೂಹಲ, ಸೆಳೆತ. ಎಲ್ಲರಿಗೂ ಇಲ್ಲಿನ ಮಾಜಿಗಳೊಡನೆ ಬೆರೆಯುವ ಹಂಬಲ. ವೀರಯೋಧರ ವಿಧವೆ ಪತ್ನಿಯರೊಡನೆ, ಮಕ್ಕಳೊಡನೆ ಮಾತಾಡುವ ಉಮೇದು. ಹಳೆಯ ಗೆಳೆಯರೊಡನೆ ಕುಳಿತು ಊಟ ಮಾಡುವ ಆಸೆ. ಅವರೊಡನೆ ಹಳೆಯ ದಿನಗಳ ನೆನಪು, ಹರಟೆಗಳಿಗೆ ಜೊತೆಯಾಗಲು ಮನಸ್ಸು. ಕೊಡಗಿಗೆ ಬಂದ ಎಲ್ಲಾ ಜನರಲ್‍ಗಳೂ ಮಡಿಕೇರಿಯಲ್ಲಿ ನಡೆಸಿದ್ದು ಇಂಥ ಕಾಯ೯ಕ್ರಮವನ್ನೇ. ಹೆಸರಿಗೆ ಅದು ಸೈನಿಕ ಸಮ್ಮೇಳನವಾದರು ಅಲ್ಲಿ ನೆರೆದವರಿಗೆ ಅದೊಂದು ಸಂತೋಷ ಕೂಟ. ಇಂದು ಮಡಿಕೇರಿಯಲ್ಲಿ ಅಂಥ ಸಂತೋಷ ಕಾಣಲಿದೆ. ಮಾಜಿ ಯೋಧರು ತಿಂಗಳ ಹಿಂದಿನಿಂದಲೇ ಕಾತರದಿಂದ ಕಾಯುತ್ತಿದ್ದ ದಿನ ಬಂದೇಬಿಟ್ಟಿದೆ. ಎರಡನೆ ಮಹಾಯುದ್ಧದಲ್ಲಿ ಭಾಗವಹಿಸಿದ ವೃದ್ಧರು, 62ರ ಚಳಿಯಲ್ಲಿ ನಲುಗಿದವರು, 71ರ ವಿಜಯವನ್ನು ಕಂಡವರು, ಶಾಂತಿ ಪಾಲನೆಗೆ ವಿದೇಶಕ್ಕೆ ಹೋದವರೆಲ್ಲರನ್ನೂ ಮಡಿಕೇರಿ ಇಂದು ಕಣ್ಣುತುಂಬಿಕೊಳ್ಳಲಿದೆ. ಎರಡು ಸಾವಿರಕ್ಕೂ ಹೆಚ್ಚಿನ ಮಾಜಿ ಸೈನಿಕರು ಇಂದಿನ ಸಮ್ಮೇಳನದಲ್ಲಿ ಜಮಾವಣೆಯಾಗಲಿದ್ದಾರೆ.


  ಆದರೆ ಮತ್ತದೇ ಪ್ರಶ್ನೆ! ಕೊಡಗಿನಲ್ಲೇಕೆ ಮಿಲಿಟರಿ ಎಂದರೆ ಅಷ್ಟೊಂದು  ಉತ್ಸಾಹ?

ಮಹಾನಗರಗಳ ಮಿಲಿಟರಿ ಕಾಯ೯ಕ್ರಮಗಳಲ್ಲಿ ಕಾಣದ ಉ ಲ್ಲಾ ಸ ಕೊಡಗಿನಲ್ಲಿ ಮಾತ್ರ ಏಕೆ ಕಾಣುತ್ತದೆ?


  ಏಕೆಂದರೆ ಅದು ಕೊಡಗು. ಇದಕ್ಕಿಂತ ಹೆಚ್ಚಿನ ಉತ್ತರವನ್ನೇನೂ ಅದಕ್ಕೆ ನೀಡಲಾಗದು. ಪ್ರಪಂಚದ ಯಾವ ಪ್ರದೇಶವನ್ನಾದರೂ ತೆಗೆದುಕೊಳ್ಳಿ. ಅಲ್ಲಿನ ಭೌಗೋಳಿಕ ಪರಿಸರ, ರಾಜಕೀಯ ಚಟುವಟಿಕೆ, ಸಾಮಾಜಿಕ ವ್ಯವಸ್ಥೆಗಳಿಂದ ಅಲ್ಲಿನ ಪರಿಸರವನ್ನು ಅರಿಯಬಹುದು. ಆದರೆ ಕೊಡಗನ್ನಲ್ಲ. ಕೊಡಗು ತನ್ನ ಪರಿಚಯವನ್ನು ಮಾಡಿಕೊಳ್ಳುವುದೇ ಯೋಧರ ನಾಡು ಎಂಬುದರ ಮೂಲಕ. ಕೊಡಗಿನ ಇತಿಹಾಸ, ಕೊಡಗಿನ ಸಾಮಾ ಜಿಕ ವ್ಯವಸ್ಥೆ, ಅವಿಭಕ್ತ ಮನೆತನಗಳು, ಕೊಡಗಿನ ಕಾಫಿ, ಜಮ್ಮಾ ಎಂಬ ಆಸ್ತೀಯ ಹಕ್ಕು, ಅವರ ಕೋವಿಯ ಹಕ್ಕು… ಎಲ್ಲವೂ ಸೈನಿಕ ಪರಂಪರೆಯಿಂದ ಹೊರತಾಗಿ ಕಾಣುವುದಿಲ್ಲ. ಇಲ್ಲಿ ಯೋಧರನ್ನು ಹೊರತಾಗಿಸಿ ಕೊಡಗನ್ನು ಪೂಣ೯ ಹೇಳಿದಂತಾಗುವುದಿಲ್ಲ, ಹೇಳಲಾಗುವುದೂ ಇಲ್ಲ. ನೀವು ಕೊಡಗಿನ ಬಗ್ಗೆ ಯಾವುದೇ ವಿವರಣೆಗಳನ್ನು ಬೇಕಾದರೂ ಕೊಡಬಹುದು. ಆದರೆ ಕೊಡಗಿನ ಜನರ ದೇಶಭಕ್ತಿಯ ಬಗ್ಗೆ ಸಂದೇಹ ಪಡಲಾರಿರಿ. ಆತ ಯೋಧ, ಮಾಜಿ ಯೋಧನೇ ಆಗಬೇಕಿಲ್ಲ. ಸಾಮಾನ್ಯ ವ್ಯಕ್ತಿಯೂ ದೇಶ ಎಂದರೆ ಎರಡು ಹೆಮ್ಮೆಯ ಮಾತಾಡುತ್ತಾನೆ. ಆಥವಾ ಪಾಕಿಸ್ಥಾನಕ್ಕೆ ವಾಚಾಮಗೋಚರ ಬಯ್ಯುತ್ತಾನೆ! ಮುಲಾಜಿಲ್ಲದೆ ವಾರ್ ಆಗಬೇಕು ಎನ್ನುತ್ತಾನೆ!


  ಆಷ್ಟೇ ಏಕೆ ನೀವೆಂದಾದರೂ ಮಡಿಕೇರಿಗೆ ಪ್ರವಾಸ ಹೋಗಿದ್ದರೆ ಕೊಡಗಿನ ಮಿಲಿಟರಿಯ ಹೆಜ್ಜೆ ಗುರುತುಗಳನ್ನು ಕಂಡೇ ಇರುತ್ತೀರಿ. ಫಿ.ಮಾ. ಕಾಯ೯ಪ್ಪನವರ ಮನೆ, ಪ್ರತಿಮೆ, ತಿಮ್ಮಯ್ಯ ಮನೆ ಪ್ರತಿಮೆ, ಮುಂದೆ ಸಾಗಿದರೆ ಮೇಜರ್ ಮಂಗೇರಿರ ಮುತ್ತಣ್ಣ ಪ್ರತಿಮೆ, ಬಸ್ ಸ್ಟಾಂಡಿನಲ್ಲಿ ಕಾಣುವ ಸ್ಕಾ.ಲಿ. ಎಬಿ ದೇವಯ್ಯ ವೃತ್ತ, ಕೋಟೆಯ ಬಳಿಯ ಮಹಾಯುದ್ಧದ ಸ್ಮಾರಕ, ರಾಜಾಸೀಟು ಮೂಲಕ ಕೊಡವರ ಸೇನೆ ಇಳಿದುಹೋಗುತ್ತಿದ್ದ ದಾರಿ, ಯೋಧರ ಕಥೆಯನ್ನು ಬಚ್ಚಿಟ್ಟುಕೊಂಡ ಕುಂದುರುಮೊಟ್ಟೆ ಅಮ್ಮನ ಗುಡಿ, ಕೋಟೆಯೊಳಗಿನ ಮುರಿದ ಕಲ್ಲಿನ ಕಂಬ, ಕನ್ನಂಡ ಬಾಣೆ ಎಂಬ ವೀರ ಯೋಧನ ವಂಶಸ್ಥರ ಮನೆ… ಹೀಗೆ ಒಂದು ಪೇಟೆಯಲ್ಲಿ ಯೋಧತನದ ಎಷ್ಟೋ ಕುರುಹುಗಳು. ಇದು ಮಡಿಕೇರಿಯೊಂದರ ಕುರುಹುಗಳು ಮಾತ್ರ. ಕೊಡಗಿನ ಪ್ರತೀ ಊರಲ್ಲೂ ಎಲ್ಲವೂ ಮಿಲಿಟರಿಮಯ. ಯಾವ ಮನೆಗೆ ಹೋದರೂ ಅಲ್ಲೊಬ್ಬ ಮಿಲಿಟರಿ ಮನುಷ್ಯನಿರುತ್ತಾನೆ. ಅಥವಾ ಪುರಾತನ ಯೋಧತನದ ಇತಿಹಾಸವನ್ನು ಆ ಮನೆ ಹೊತ್ತುಕೊಂಡಿರುತ್ತವೆ. ಕೊಡಗಿನ ಎ ಲ್ಲಾ ಪೇಟೆಗಳಲ್ಲಿ ಒಂದಲ್ಲಾ ಒಂದು ಅಂಗಡಿಯ ಹೆಸರು ಜೈ ಜವಾನ್ ಸ್ಟೋರ್ ಎಂದಿರುತ್ತದೆ. ಮಾಜಿ ಸೈನಿಕರ ಸಂಘ ಎಂಬ ಬಸ್ಸೊಂದು ಮಡಿಕೇರಿಯಿಂದ ವೀರಾಜಪೇಟೆಗೆ ಓಡಾಡುತ್ತದೆ. ಪೇಟೆಯಲ್ಲಿ ಕಾರು ಹತ್ತುವ ಹುರಿ ಮೀಸೆಯ ಅಂಕಲ್‍ಗಳು ಖಂಡಿತ ಕನ೯ಲ್ಲೋ ಮೇಜರೋ, ಬ್ರಿಗೇಡಿಯರೋ ಆಗಿರುತ್ತಾರೆ. ಶಿಸ್ತೀನಿಂದ ಹ್ಯಾಟು ಹಾಕಿರುವ ಅಜ್ಜರು ಯಾವುದೋ ಯುದ್ಧದಲ್ಲಿ ಭಾಗವಹಿಸಿದ ಮಾಜಿ ಯೋಧರಾಗಿರುತ್ತಾರೆ. ಇದು ಕೊಡಗಿನ ಎಲ್ಲಾ ಪೇಟೆಗಳ ಸಾಮಾನ್ಯ ದ್ರಶ್ಯ. ಪರಿಸ್ಥಿತಿ ಇಂಥಿರುವಾಗ ತಮ್ಮ ಚೀಫ್ ಆಫ್ ಆಮಿ೯ ಸ್ಟಾಫ್ ಬಂದರೆ ಕೊಡಗಿನ ಜನ ಪುಳಕಗೊಳ್ಳದೆ ಹೇಗಿದ್ದಾರು?


  ಕೊಡಗಿನ ಯೋಧ ಸಂಸ್ಕೃತಿಯ ಬಗ್ಗೆ ಹಲವು ಕಥೆಗಳಿವೆ. ಆದರೆ ಅವೆಲ್ಲವೂ ದಂತೆಕತೆಗಳೋ, ಗಾಳಿ ಸುದ್ಧಿಗಳೋ ಖಂಡಿತಾ ಅಲ್ಲ. ಕೊಡಗಿನಲ್ಲಿ ಯಾರಾದರೋಬ್ಬ ಸಾಮಾನ್ಯ ಮಾಜಿ ಸೈನಿಕ ಚೀಫ್ ಆಫ್ ಆಮಿ೯ ಸ್ಟಾಫ್ ನನ್ನ ಗೆಳೆಯ ಎಂದರೆ ಅದು ನೂರಕ್ಕೆ ನೂರು ಸತ್ಯ! ಏಕೆಂದರೆ ದಲ್ವೀರ್ ಸಿಂಗ್ ಸುಹಾಗರ ಗೆಳೆಯರನೇಕರು ಕೊಡಗಿನಲ್ಲಿದ್ದಾರೆ. ಸುಹಾಗ್ ಆಮಿ೯ ಚೀಫ್ ಆದರೂ ಇಂದಿಗೂ ಅವರೆಲ್ಲರ ಸಂಪಕ೯ದಲ್ಲಿದ್ದಾರೆ. ಪೇಟೆಯಲ್ಲಿ ಸಿಕ್ಕ ಮಾಜಿ ಯೋಧರೊಬ್ಬರು ನಾನು ಚೀನಾ ಯುದ್ಧದಲ್ಲಿ ಸೆರೆಸಿಕ್ಕಿದ್ದೆ ಎಂದರೂ ಅದಕ್ಕೆ ಆಧಾರಗಳಿವೆ. ಏಕೆಂದರೆ ಚೀನಾ ಯುದ್ಧದಲ್ಲಿ ಸುಮಾರು ನಲ್ವತ್ತಕ್ಕೂ ಹೆಚ್ಚಿನ ಕೊಡಗಿನ ಯೋಧರು ಸೆರೆಸಿಕ್ಕಿದ್ದರು. ಇನ್ನೊಬ್ಬ ನನ್ನ ದೊಡ್ಡಪ್ಪ ಯುದ್ಧಕ್ಕೆ ಹೋದವರು ಮರಳಲೇ ಇಲ್ಲ ಎಂದರೆ ಆತ ಸುಳ್ಳು ಹೇಳುತ್ತಿದ್ದಾನೆ ಎಂದಥ೯ವಲ್ಲ. ಇಂದಿಗೂ ತವಾಂಗ್ ಪ್ರದೇಶದಲ್ಲಿ ಮುದ್ದಪ್ಪ, ಮಾದಪ್ಪ ಹೆಸರಿನ ಗೋರಿಗಳಿವೆ. ಕೊಡವರ ಮನೆ ಮನೆಗಳು ಹೇಳುವ ಪ್ರತೀ ಸೈನ್ಯದ ಕತೆಗಳೂ ಅವರ ಪರಂಪರೆಯನ್ನು ರೂಪಿಸಿವೆ. ಯೋಧತನ ಕೊಡಗಿನ ಸಂಸ್ಕೃತಿಯನ್ನು ರೂಪಿಸಿದೆ. ಇಲ್ಲಿನ ಜನರಿಗೆ ಸೈನಿಕ ಪ್ರಜ್ಞೆಯಿದೆ.


  ಖ್ಯಾತ ಸಂಶೋಧಕ ಡಾ. ಐ.ಎಂ ಮುತ್ತಣ್ಣನವರು 11ನೇ ಶತಮಾನದಲ್ಲೇ ಹೊಯ್ಸಳ ಸೈನ್ಯದ ದಂಡನಾಯಕನಾಗಿ ಮಾದಪ್ಪ ಎಂಬ ಕೊಡವನಿದ್ದ ಎಂಬುದನ್ನು ಎತ್ತಿತೋರಿಸುತ್ತಾರೆ. ಮುಂದೆ ಕೊಡಗು ರಾಜಾಡಳಿತಕ್ಕೆ ಒಳಪಟ್ಟಾಗ ಕುಲ್ಲೇಟಿ ಪೊನ್ನಣ್ಣ, ಅಪ್ಪಚ್ಚೀರ ಮಂದಣ್ಣ, ಕನ್ನಂಡ ದೊಡ್ಡಯ್ಯ ಮುಂತಾದ ಮಹಾ ಮಹಾಯೋಧರನ್ನು ಕೊಡಗು ನೋಡಿತು. ಆದರೂ ಕೊಡಗಿನ ಸೈನಿಕ ಪ್ರಜ್ಞೆಯನ್ನು ಮೊದಲು ಕಂಡುಹುಡುಕಿದವರು ಬ್ರಿಟಿಷರು. ಮೊದಲ ಮಹಾಯುದ್ಧದ ಕಾಲದಲ್ಲಿ ಕೊಡವರ ಮಾಷ೯ಲ್ ಗುಣವನ್ನು ಮನಗಂಡ ಬ್ರಿಟಿಷರು ಕೂಗ್‍೯ ರೆಜಿಮೆಂಟ್ ಅನ್ನು ಸ್ಥಾಪಿಸಿದ್ದರು. ಮೊದಲ ಮಹಾಯುದ್ಧದಲ್ಲಿ ಸಾವಿರಾರು ಸಂಖ್ಯೆಯ ಕೊಡವ ಯೋಧರು ವಿದೇಶಗಳಲ್ಲಿ ಹೋರಾಡಿ ಬ್ರಿಟಿಷರಿಗೆ ಜಯವನ್ನು ತಂದಿತ್ತರು. ಮೊದಲ ಮಹಾಯುದ್ಧದ ಬಳಿಕ ಬ್ರಿಟಿಷರು ಕೂಗ್‍೯ ರೆಜಿಮೆಂಟನ್ನು ವಿಸಜಿ೯ಸಿದ್ದರು. ಆದರೆ ಎರಡನೆ ಮಹಾಯುದ್ಧದ ಹೊತ್ತಿಗೆ ಬ್ರಿಟಿಷರ ಪರಿಸ್ಥಿತಿ ಕುತ್ತಿಗೆಗೆ ಬಂದಿತ್ತು. ವಿಸಜಿ೯ಸಲಾಗಿದ್ದ ಕೂಗ್‍೯ ರೆಜೆಮೆಂಟನ್ನು ಮತ್ತೆ ಸ್ಥಾಪಿಸಲಾಯಿತು. ಕೊಡವ ಸೈನಿಕರು ಬಮಾ೯, ಜಪಾನ್, ಆಫ್ರಿಕಾ ದೇಶಗಲ್ಲಿ ಮತ್ತು ಫ್ರಾನ್ಸ್‍ಗಳಲ್ಲಿ ತಮ್ಮದಲ್ಲದ ವಾತಾವರಣದಲ್ಲಿ ಸೆಣಸಿದರೂ ಹೆಚ್ಚಿನ ಕ್ಯಾಶ್ವ ಲ್ಟೀಸ್ ಆಗದೆ ಮರಳಿ ಕೊಡಗಿಗೆ ಬಂದಿದ್ದರು. ಅಷ್ಟರವರೆಗೂ ಬ್ರಿಟಿಷ್ ಸೈನ್ಯದಲ್ಲಿದ್ದ ನೇಟಿವ್ ಇಂಡಿಯನ್ಸ್ ಎಂಬ ಪಕ್ಷಪಾತ ಧೋರಣೆಯ ಬಿಸಿ ಬ್ರಿಟಿಷರಿಗೆ ತಟ್ಟಿತು. ಅದಕ್ಕೆ ಮೊದಲು ನೇಟಿವ್‍ಗಳನ್ನು ಅಧಿಕಾರಿಗಳನ್ನಾಗಿ ನೇಮಿಸಲು ಹಿಂದೇಟು ಹಾಕುತ್ತಿದ್ದ ಬ್ರಿಟಿಷರು ಕೊಡವ ಯೋಧರನ್ನು ಸೈನ್ಯದಲ್ಲಿ ಅಧಿಕಾರಿಗಳನ್ನಾಗಿ ನೇಮಿಸಲು ಆರಂಭೀಸಿದ್ದರು. ಈ ಹೊತ್ತಲ್ಲಿ ಹಲವು ಕೊಡಗಿನ ಸೈನಿಕರು ಅಧಿಕಾರಿಗಳಾಗಿ ಹೆಸರುವಾಸಿಯಾದರು. ಡೆಹರಾಡೂನಿನ ಇಂಡಿಯನ್ ಆಫೀಸಸ್‍೯ ಕೆಡೆಟ್‍ಗೆ ಕೊಡಗಿನ ಕಾಯ೯ಪ್ಪ ಮತ್ತು ತಿಮ್ಮಯ್ಯ ಇಬ್ಬರೂ ಆಯ್ಕೆಯಾಗಿ ದೇಶದಲ್ಲೇ ಹೆಸರು ಮಾಡಿದ್ದರು. ಮುಂದೆ ಅವರಿಬ್ಬರೂ ಚೀಫ್ ಆಫ್ ಆಮಿ೯ ಸ್ಟಾಫ್ ಆಗಿ ಇತಿಹಾಸ ರಚನೆ ಮಾಡಿದರು. ಸ್ವಾತಂತ್ರ್ಯಾನಂತರ ಭಾರತೀಯ ಸ್ವತಂತ್ರ ಸೇನೆಯಲ್ಲಿ ಅಂತಾರಾಷ್ಟ್ರೀಯ ದಜೆ೯ಯ ಅಧಿಕಾರಿಗಳನ್ನು ಸರಕಾರ ಹುಡುಕುತ್ತಿದ್ದಾಗ ಕಂಡವರು ಕೂಡಾ ನಮ್ಮ ಕೊಡಗಿನ ಅಧಿಕಾರಿಗಳೆ. ಇನ್ನೂ ಸ್ವಾತಂತ್ರ್ಯ ದ ಭಾಷಣದ ಬಿಸಿ ಆರದೇ ಇದ್ದ ಹೊತ್ತಲ್ಲೂ ಕಾಶ್ಮೀರದ ಬಂಡಾಯವನ್ನು ಹತ್ತಿಕ್ಕಿ ಲೇಹ…, ಲಡಾಕ್, ಶ್ರೀನಗರಗಳನ್ನು ರಕ್ಷಿಸಿ, ಉತ್ತರದ ಕಾಶ್ಮೀರದತ್ತ ಸೈನ್ಯವನ್ನು ನುಗ್ಗಿಸಿದವರು ನಮ್ಮ ಕನ್ನಡನಾಡಿನ ಹೆಮ್ಮೆಯ ಕೊಡಗಿನ ಅಧಿಕಾರಿಗಳು. ಇಬ್ಬರು ಚೀಫ್ ಆಫ್ ಆಮಿ೯ ಸ್ಟಾಫ್ ಗಳು, ಮೂವತ್ತಕ್ಕೂ ಹೆಚ್ಚಿನ ಲೆಫ್ಟಿನೆಂಟ್ ಜನರಲ್‍ಗಳು, ಅವರಲ್ಲಿ ಆಮಿ೯ ಮುಖ್ಯಸ್ಥರ ವಿಶೇಷ ಅಧಿಕಾರಿಗಳಾಗಿದ್ದ ಹಲವರು, ನಲ್ವತ್ತಕೂ ಹೆಚ್ಚಿನ ಮೇಜರ್ ಜನರಲ್‍ಗಳು, ಅಷ್ಟೇ ಸ೦ಮಂಖ್ಯೆಯ ಬ್ರಿಗೇಡಿಯರುಗಳು, ಲೆಕ್ಕಕ್ಕೆ ಸಿಗದಷ್ಟು ಲೆ.ಕನ೯ಲ್‍ಗಳು, ಮೇಜರ್ ಗಳು ದೇಶದಲ್ಲಿ ಕಾಣಸಿಗುವುದು ನಮ್ಮ ಕನಾ೯ಟಕದ ಕೊಡಗಿನಲ್ಲಿ ಮಾತ್ರ.


ಕನಾ೯ಟಕಕ್ಕೆ ಸಿಕ್ಕ ಎರಡು ಮಹಾವೀರ ಚಕ್ರ ಪದಕಗಳಲ್ಲಿ ಇಬ್ಬರೂ ಕೊಡಗಿನ ವೀರರೇ ಎನ್ನುವುದು ಹೆಮ್ಮೆಯಲ್ಲವೇ?


ಸ್ವತಂತ್ರ್ಯ ಭಾರತದಲ್ಲಿ ಇದುವರೆಗೆ ಕೊಡಗಿನ ನಲ್ವತ್ತೇಳು ಯೋಧರು ಯುದ್ಧರಂಗದಲ್ಲಿ ವೀರಮರಣ ಅಪ್ಪಿದ್ದಾರೆ ಎನ್ನುವುದೊದೇ ಕೊಡಗಿನ ಯೋಧ ಸಂಸ್ಕೃತಿಯ ಬಗ್ಗೆ ಗೌರವ ತಾಳಲು ಸಾಕು. ಅಂಥ ಮಹಾನ್ ಯೋಧ ಇತಿಹಾಸವನ್ನು ಹೊತ್ತುಕೊಂಡ ನಾಡಿಗೆ ಇಂದು  ಸ್ಟಾಫ್ ಆಫ್ ಆಮಿ೯ ಸ್ಟಾಫ್ ಬರುತ್ತಿದ್ದಾರೆ. ಬಹುವಷ೯ಗಳ ನ೦ತರ ಸೇನಾ ಮುಖ್ಯಸ್ಥರ ಜಿಲ್ಲೆಯ ಆಗಮನಕ್ಕೆ ಜಿಲ್ಲೆಗೆ ಜಿಲ್ಲೆಯೇ ಕಾಯುತ್ತಿದೆ.


  ಆದರೆ ಆರು ದಶಕಗಳನ್ನಾಳಿದವರು ಜಿಲ್ಲೆಯ ಸೈನಿಕ ಪ್ರಜ್ಞೆಗೇನು ಕೊಟ್ಟಿದೆ? ಜಿಲ್ಲೆಯಲ್ಲೊಂದು ಆಮಿ೯ಶಾಲೆ ಇರುವುದೊಂದು ಬಿಟ್ಟರೆ ಕೊಡಗಲ್ಲಿ ಯೋಧರಿಗಾಗಲೀ, ಸೈನಿಕ ಪ್ರಜ್ಞೆಗಾಗಲೀ ಏನೆಂದರೆ ಏನನ್ನೂ ಕೊಟ್ಟಿಲ್ಲ.


  ದೇಶದ ಮೂರು ಏರ್ ಫೋಸ್‍೯ ಸೆಲೆಕ್ಷನ್ ಬೋಡ್‍೯ಗಳಲ್ಲಿ ಒಂದನ್ನು ಮ್ಯೆಸೂರಿಗೆ ಕೊಟ್ಟಿದ್ದು ಬಿಟ್ಟರೆ ಕೊಡಗು ಮತ್ತು ಕೊಡಗಿನ ಒತ್ತಿನ ಮ್ಯೆಸೂರಿನಲ್ಲಿ ಯೋಧರಿಗೆ ಏನೇನೂ ಇಲ್ಲ. ಮಡಿಕೇರಿಯಲ್ಲಿ ಮಿಲಿಟರಿ ಕ್ಯಾಂಟಿನ್ ಒಂದಿದೆಯಾದರೂ ಅದಕ್ಕಿಂತ ಸೂಪರ್ ಮಾಕೆ೯ಟುಗಳೇ ವಾಸಿ. ಬಿಎಸ್‍ಎಫ್ ಯೋಧರ ಕ್ಯಾಂಟಿನ್ ಮತ್ತು ವೈದ್ಯಕೀಯ ಸೌಲಭ್ಯಕ್ಕೆ ಕೊಡಗಿನ ಯೋಧ ಬೆಂಗಳೂರಿಗೆ ತೆರಳಬೇಕು. ಕೊಡಗಿನಲ್ಲಿ ಮೊದಲಿನಿಂದಲೂ ಕಮಿಶನ್ಡ್ ಪರೀಕ್ಷೆ ತೆಗೆದುಕೊಳ್ಳುವ ಯುವಕರ ಸಂಖ್ಯೆ ಹೆಚ್ಚಿತ್ತು. ಆದರೆ ಕಳೆದ ಅರವತ್ತು ವಷ೯ಗಳಿಂದ ಕೊಡಗಿನಲ್ಲಿ ರೆಜಿಮೆಂಟಲ್ ರೆಕಾಡ್‍೯ ಆಫೀಸ್ ಸ್ಥಾಪನೆ ಮಾಡಲು ಇಲ್ಲಿ ಆಳಿದವರಿಗೆ ಆಗಲಿಲ್ಲ. ರೆಜಿಮೆಂಟಲ್ ರೆಕಾಡ್‍೯ ಆಫೀಸ್ ಬಿಡಿ ಸೈನ್ಯಕ್ಕೆ ಇಷ್ಟೊಂದು  ಸಂಖ್ಯೆಯಲ್ಲಿ ಯೋಧರನ್ನು ಕೊಟ್ಟ ಊರಲ್ಲಿ ರೆಜಿಮೆಂಟಲ್ ಸೆಂಟರೇ ಇಲ್ಲ! ಕೊಡಗಿನ ಸೈನಿಕ ಇತಿಹಾಸಕ್ಕೆ ಇಲ್ಲೊಂದು ಸೈನ್ಯದ ಊನಿಟ್ಟೇ ಇರಬೇಕಿತ್ತು. ತರಬೇತಿ ಕೇಂದ್ರ ಎಂದೋ ಸ್ಥಾಪನೆಯಾಗಿ ಅದು ಹಳೆಯದಾಗಿರಬೇಕಿತ್ತು. ಕನಿಷ್ಠ ಇಬ್ಬರು ಜನರಲ್‍ಗಳ ಮನೆಗಳನ್ನಾದರೂ ವ್ಯವಸ್ಥಿತ ಮ್ಯೂಸಿಯಂ ಆಗಿ ಮಾಡಬಹುದಿತ್ತು. ಅವರ ಪಠ್ಯಗಳನ್ನು ಹೊರತರಬಹುದಿತ್ತು. ಆದರೆ ಕೆಲವರು ಅರವತ್ತು ವಷ೯ಗಳಿಂದ ಕೈಕಟ್ಟಿ ಕುಳಿತು ನಾಳೆ ರಾತ್ರಿಯೊಳಗಾಗಿ ಇವೆಲ್ಲವನ್ನೂ ಮೋದಿ ಸರಕಾರ ಮಾಡಬೇಕು ಎಂದು ಆರೋಪಿಸುತ್ತಿದ್ದಾರೆ!


  ಕಳೆದ ಮೇ ನಲ್ಲಿ ಜಿಲ್ಲೆಗೆ ಭೇಟಿ ನೀಡಿದ ರಕ್ಷಣಾ ಸಚಿವರ ಸೇನಾ ಅಕಾಡೆಮಿ ಸ್ಥಾಪಿಸುವ ನಿಧಾ೯ರ, ಇದೀಗ ಸೇನಾ ಮುಖ್ಯಸ್ಥರ ಮಡಿಕೇರಿ ಭೇಟಿಗಳು ಜಿಲ್ಲೆಯ ಯೋಧ ಪ್ರಜ್ಞೆಗೆ ಹೊಸ ಭರವಸೆಯನ್ನು ಹುಟ್ಟಿಸಿವೆ. ಕಳೆದ ಆರು ದಶಕಗಳಲ್ಲಿ ನಡೆಯದಿರುವುದೆಲ್ಲವೂ ಸಾಧ್ಯವಾಗುತ್ತಿವೆ.


 kodagu army

 •  0 comments  •  flag
Share on Twitter
Published on August 06, 2016 05:07

August 4, 2016

August 3, 2016

Pratap Simha's Blog

Pratap Simha
Pratap Simha isn't a Goodreads Author (yet), but they do have a blog, so here are some recent posts imported from their feed.
Follow Pratap Simha's blog with rss.