Pratap Simha's Blog, page 33
October 15, 2016
ವಡಿಕ್ಕಲ್ ರಾಮಕೃಷ್ಣನ್, ಕಣ್ಣೂರಿನ ವಿಜಯನ್, ಪಾಲಕ್ಕಾಡಿನ ಕೃಷ್ಣನ್, ಎರಡೂ ಕಾಲು ಕಳೆದುಕೊಂಡ ಸದಾನಂದನ್, ಯಾರ್ಯಾರ ಕಥೆ ಹೇಳಲಿ?!
ವಡಿಕ್ಕಲ್ ರಾಮಕೃಷ್ಣನ್, ಕಣ್ಣೂರಿನ ವಿಜಯನ್, ಪಾಲಕ್ಕಾಡಿನ ಕೃಷ್ಣನ್, ಎರಡೂ ಕಾಲು ಕಳೆದುಕೊಂಡ ಸದಾನಂದನ್, ಯಾರ್ಯಾರ ಕಥೆ ಹೇಳಲಿ?!
ಮೂವತ್ತು ವರ್ಷ ವಯಸ್ಸಿನ ಸುಂದರ ಯುವಕ ವಡಿಕ್ಕಲ್ ರಾಮಕೃಷ್ಣನ್. ತಲಶೇರಿಯಲ್ಲಿ ಟೈಲರಿಂಗ್ ಮಾಡಿಕೊಂಡಿದ್ದರು. ಬಿಡುವಿನ ವೇಳೆಯಲ್ಲಿ ಆರೆಸ್ಸೆಸ್ ಶಾಖೆ ನಡೆಸುತ್ತಿದ್ದದ್ದು ಬಿಟ್ಟರೆ ತಾನಾಯಿತು ತನ್ನ ಪಾಡಾಯಿತು ಎಂದು ಇರುತ್ತಿದ್ದರು ವಡಿಕ್ಕಲ್ ರಾಮಕೃಷ್ಣನ್. ಒಂದು ದಿನ ಎಂದಿನಂತೆ ರಾಮಕೃಷ್ಣನ್ ರಾತ್ರಿ ಟೈಲರಿಂಗ್ ಅಂಗಡಿಯನ್ನು ಮುಚ್ಚಿ, ಸಂಪಾದನೆಯ ಪುಡಿ ಹಣವನ್ನು ಎಣಿಸಿ ಜೇಬಿಗೆ ಹಾಕಿ ಅಕ್ಕಿಯೋ ಬೇಳೆಯೋ ಖರೀದಿಸಬೇಕೆಂದು ಅಂದಾಜಿಸುತ್ತಾ ಮನೆಗೆ ಮರಳುತ್ತಿದ್ದರು. ದಾರಿ ಮಧ್ಯೆ ಇದ್ದಕ್ಕಿದ್ದಂತೆ ಕಮ್ಯುನಿಸ್ಟ್ ಗೂಂಡಾಗಳು ಎರಗಿದರು. ರಾಮಕೃಷ್ಣನ್ ಅವರಿಗೆ ಯದ್ವಾತದ್ವಾ ಮಾರಕಾಯುಧಗಳಿಂದ ಕೊಚ್ಚಿದರು. ಕೆಲವೇ ಕೆಲವು ನಿಮಿಷಗಳಲ್ಲಿ ಆ ರಾಷ್ಟ್ರಭಕ್ತನ ಪ್ರಾಣಪಕ್ಷಿ ಹಾರಿಹೋಯಿತು. ತಾವು ನಡೆಸುತ್ತಿದ್ದ ಶಾಖೆಯ ಮಕ್ಕಳನ್ನೂ ಶಾಖೆಯ ಧ್ಯೇಯಗಳನ್ನೂ ಅತಿಯಾಗಿ ಹಚ್ಚಿಕೊಂಡಿದ್ದ ರಾಮಕೃಷ್ಣನ್ ಅವರ ಆ ಸಾವನ್ನು ಕೇರಳದ ಸಂಘಪರಿವಾರ ಮತ್ತು ಭಾಜಪದ ಕಾರ್ಯಕರ್ತರು ಇಂದಿಗೂ ಮರೆತಿಲ್ಲ.
ಅದು 1969ನೇ ಇಸವಿ ಏಪ್ರಿಲ್ 28.
ಅದಾಗಿ ಇನ್ನೂ ಆರು ತಿಂಗಳಾಗಿರಲಿಲ್ಲ. ಕಮ್ಯುನಿಸ್ಟರ ರಕ್ತದಾಹ ಆರಲಿಲ್ಲ. ಕೊಟ್ಟಾಯಂ ಜಿಲ್ಲೆಯ ಪಿ.ಎಸ್ ಶ್ರೀಧರನ್ ನಾಯರ್ ಎಂಬ ಭಾಜಪದ ಕಾರ್ಯಕರ್ತರನ್ನು ಅಮಾನುಷವಾಗಿ ಕೊಚ್ಚಿ ಕೊಲ್ಲಲಾಯಿತು. 71ರ ಫೆಬ್ರವರಿಯಲ್ಲಿ ಪಾಲಕ್ಕಾಡ್ ಜಿಲ್ಲೆಯ ಪುತ್ತುಪೆರಿಯಾರಂ ಗ್ರಾಮದ ಸಂಘದ ಶಾರೀರಿಕ್ ಪ್ರಮುಖ್ ವಿ ರಾಮಕೃಷ್ಣ ಅವರನ್ನು ಸಂಘದ ಶಾಖಾಸ್ಥಾನದಲ್ಲೇ ಕೊಚ್ಚಿ ಕೊಲ್ಲಲಾಯಿತು. 1970ರಲ್ಲಿ ವೆಳಿಯತ್ತುನಾಡು ಚಂದ್ರಶೇಖರನ್, 71ರಲ್ಲಿ ಮುಸ್ಲಿಂ ಮೂಲಭೂತವಾದಿಗಳಿಂದ ಹತ್ಯೆಯಾದ ಉನ್ನಿಚೋಯಿಕುಟ್ಟಿ, 73ರಲ್ಲಿ ತ್ರಿಶೂರಿನಲ್ಲಿ ಮಾರ್ಕಿಸ್ಟ್ ಗೂಂಡಾಗಳಿಂದ ಹತ್ಯೆಯಾದ ಶಂಕರನಾರಾಯಣನ್, ಕಣ್ಣೂರಿನ ಕೆ. ವಿಜಯನ್, ನಾಣು ಮಾಷ್ಟರ್, ಅಲ್ಲಪುಳದ ಗೋಪಾಲಕೃಷ್ಣನ್, ಕರಿಂಪಿಲ್ ಸತೀಸನ್, ಪಾಲಕ್ಕಾಡಿನ ಎಂ.ಟಿ ಕೃಷ್ಣನ್, ವಯನಾಡಿನ ಕರಿನ್ಗಾರಿ ಚಂದ್ರನ್, ವಿದ್ಯಾರ್ಥಿ ಪರಿಷತ್ತಿನ ಅನು, ಸುಜಿತ್, ಕಿಮ್, ಮತ್ತು ಮಕ್ಕಳಿಗೆ ಪಾಠ ಮಾಡಿದ ‘ಅಪರಾಧ’ಕ್ಕೆ ಕಾಲು ಕಳೆದುಕೊಂಡ ಜಯಕೃಷ್ಣನ್ ಮಾಷ್ಟರ್… ಬರೆದಷ್ಟೂ ಮರೆಯಲಾಗದ ಅವೇ ಮುಖಗಳು ನೆನಪಾಗುತ್ತವೆ.
ಕೇರಳದ ಕೆಂಪು ಉಗ್ರರ ರಕ್ತ ಚರಿತ್ರೆ 60ರ ದಶಕದಲ್ಲಿ ಆರಂಭವಾದರೂ ಅದಿನ್ನೂ ನಿಂತಿಲ್ಲ. ಎರಡು ದಿನದ ಹಿಂದೆ ರೆಮಿತ್‍ನ ಜೀವವನ್ನು ಆಹುತಿ ತೆಗೆದುಕೊಂಡಿದ್ದಾರೆ ಕಮ್ಯುನಿಸ್ಟ್ ಪಾರ್ಟಿಯ ಗೂಂಡಾಗಳು. ಕೇರಳದಲ್ಲಿ ಎಂತಹ ಪರಿಸ್ಥಿತಿ ನಿರ್ಮಾಣವಾಗಿದೆಯೆಂದರೆ, ನೀವು ಕಣ್ಣೂರು ಜಿಲ್ಲೆಯ ಯಾವ ಊರಿಗೆ ಹೋದರೂ ಕಮ್ಯುನಿಸ್ಟರು, ಇಸ್ಲಾಮಿಕ್ ಉಗ್ರರಿಂದ ಪ್ರಾಣ ಕಳೆದುಕೊಂಡ ಹಲವು ಹಿಂದೂ ಮನೆಗಳನ್ನು ನೀವು ಕಾಣದೇ ಇರಲಾರಿರಿ. ಇವರ ರಕ್ತ ಚರಿತ್ರೆಯ ಇತಿಹಾಸವನ್ನು ನೋಡಬೇಕೆಂದರೆ ಒಮ್ಮೆ ಕಣ್ಣೂರು ಜಿಲ್ಲೆಯ ಆರೆಸ್ಸೆಸ್ ಕಾರ್ಯಾಲಯವನ್ನೊಮ್ಮೆ ನೋಡಿ ಬರಬೇಕು. ಅಲ್ಲಿ ನೇತುಹಾಕಿದ ನೂರಾರು ಕಾರ್ಯಕರ್ತರ ಪೋಟೋಗಳಿಗೆ ಹೂವಿನ ಹಾರ ಬಿದ್ದಿದೆ. ಪ್ರತಿ ದಿನ ಬೆಳಗ್ಗೆ ಆ ಪೋಟೋಗಳೆದುರಿಗೆ ನಿಂತು ಕಾರ್ಯಕರ್ತರು ದೇಶಭಕ್ತಿಯ ಹಾಡನ್ನು ಹಾಡುತ್ತಾರೆ. ಈ ಪೋಟೋಗಳಾಗಿರುವ ಕಾರ್ಯಕರ್ತರು ಧಾರುಣವಾಗಿ ಸತ್ತರೇಕೆ? ಇವರು ಮಾಡಿದ ತಪ್ಪಾದರೂ ಏನು? ಕೊಂದವರಾದರೂ ಯಾರು?
ಜಯಕೃಷ್ಣ ಮಾಷ್ಟರ್ ಆ ಊರಿನಲ್ಲಿ ಖ್ಯಾತರಾಗಿದ್ದ ಮನುಷ್ಯ. ಮೇಷ್ಟ್ರರೆಂದರೆ ಜಯಕೃಷ್ಣ ಮೇಷ್ಟ್ರರಂತಿರಬೇಕು ಎಂದು ಜನ ಮಾತಾಡಿಕೊಳ್ಳುತ್ತಿದ್ದರು. ತಪ್ಪದೆ ಆರೆಸ್ಸೆಸ್ ಶಾಖೆಗೆ ಹೋಗುತ್ತಿದ್ದ ಜಯಕೃಷ್ಣ ಮಾಷ್ಟರ್ ಮಕ್ಕಳಿಗೆ ಭ್ರಮೆಗಳಿಗೆ ಬಲಿಯಾಗದಂತೆ ಪೀಳಿಗೆಯನ್ನು ರೂಪಿಸುವ ಕೆಲಸ ಮಾಡುತ್ತಿದ್ದರು. ಅವರ ಮುಂದೆ ಕೇರಳದ ಭವಿಷ್ಯ ನಿಂತಿತ್ತು. ಆದರೆ ಮಾರ್ಕ್ಸ್ ವಾದಿಗಳಿಗೆ ಅವರಿಗಿದ್ದ ಕಾಳಜಿ ಇರಲಿಲ್ಲ. ದಿನ ಕಾಯುತ್ತಿದ್ದ ಕಮ್ಯುನಿಸ್ಟರು ಒಂದು ದಿನ ಜಯಕೃಷ್ಣ ಮಾಷ್ಟರ್ ಅವರನ್ನು ಹಿಡಿದು ಗರಗಸದಿಂದ ಕಾಲನ್ನು ಕತ್ತರಿಸಿಯೇ ಬಿಟ್ಟರು. ಕತ್ತರಿಸಿದರು ಎಂದರೆ ಕಾಲು ಅವರ ದೇಹದಿಂದ ಪ್ರತ್ಯೇಕವಾಯಿತು! ಈ ಕಮ್ಯುನಿಸ್ಟರೆಷ್ಟು ಕ್ರೂರಿಗಳೆಂದರೆ ಕತ್ತರಿಸಿ ಬಿದ್ದಿದ್ದ ಕಾಲನ್ನು ಹಿಡಿದು ಡಾಂಬರು ರಸ್ತೆಗೆ ಗರಗರ ಉಜ್ಜಿದರು. ಅರೆಸ್ಸೆಸ್ಸಿಗನ ತುಂಡಾಗಿ ಬಿದ್ದಿದ್ದ ಕಾಲುಗಳೂ ಅವರಿಗೆ ಹೆದರಿಕೆ ಹುಟ್ಟಿಸಿತ್ತು. ಅಂದರೆ ಈ ಆರೆಸ್ಸೆಸ್ಸಿಗರ ನಿರ್ಜೀವ ದೇಹವೂ ದೇಶಪ್ರೇಮವನ್ನು ಸಾರುತ್ತದೆ ಎಂಬುದು ಅವರಿಗೆ ಗೊತ್ತಿತ್ತು. ಆದರೇನು ಜಯಕೃಷ್ಣ ಮೇಷ್ಟರು ಯಮನನ್ನು ಗೆದ್ದು ಬಂದರು. ಪ್ರಾಣ ಉಳಿಸಿಕೊಂಡರು. ಒಂಟಿ ಕಾಲಲ್ಲಿ ಕೇರಳಾದ್ಯಂತ ಪ್ರವಾಸ ಮಾಡಿದರು. ಕೇರಳದಲ್ಲಿ ನಡೆಯುವ ಕಮ್ಯುನಿಸ್ಟರ ದೌರ್ಜನ್ಯವನ್ನು ದೆಹಲಿಗೆ ಮುಟ್ಟಿಸಿದರು. ಆ ಒಂಟಿ ಕಾಲಿಗೂ ಕಮ್ಯುನಿಸ್ಟರು ಹೆದರಿದರು. ಮತ್ತೆ ಬೆದರಿಕೆಗಳು ಬಂದವು. ದಿಟ್ಟ ಜಯಕೃಷ್ಣ ಮಾಷ್ಟರ್ ನನ್ನ ಪ್ರಾಣದ ಮೇಲೆ ನಿಮಗಷ್ಟು ಭಯವೇ ಎಂದು ಕಮ್ಯುನಿಸ್ಟರ ವಿರುದ್ಧ ಗುಡುಗಿದರು. ಕೇರಳವನ್ನು ದೇವರ ನಾಡು ಎನ್ನುವುದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಆದರೆ ಇಂಥ ದೇವರಂಥಾ ಮನುಷ್ಯರಿರುವುದರಿಂದಲೇ ಕೇರಳ ದೇವರ ನಾಡಾಗಿದೆ ಎಂದು ನನಗನಿಸುತ್ತದೆ.
ಇಂಥ ಎಷ್ಟೋ ಉದಾಹರಣೆಗಳು ಕೇರಳದಲ್ಲಿವೆ!
ಒಮ್ಮೆ ಕಮ್ಯುನಿಸ್ಟರ ರಕ್ಕಸರ ಮುಷ್ಠಿಯಿಂದ ಹೊರಬಂದು ಆರೆಸ್ಸೆಸ್ ಶಾಖೆಗೆ ಸೇರ್ಪಡೆಯಾದ ಒಬ್ಬ ದೇಶಭಕ್ತನನ್ನು ನಡುರಸ್ತೆಯಲ್ಲೇ ಹೆಡೆಮುರಿ ಕಟ್ಟಲಾಯಿತು. ಕಮ್ಯುನಿಸ್ಟ್ ಕಚೇರಿಯಿಂದ ತಂದ ಭಯಂಕರ ವಿಷವನ್ನು ಅವರ ಬಾಯಿಗೆ ಸುರಿಯಲಾಯಿತು. ವಿಷ ಆ ವ್ಯಕ್ತಿಯ ದೇಹವನ್ನು ವ್ಯಾಪಿಸುವವರೆಗೂ ಆತನ ಕಟ್ಟನ್ನು ಕಮುನಿಸ್ಟರು ಬಿಚ್ಚಲಿಲ್ಲ. ಆದರೆ ಆ ಮಹಾಪುರುಷ ವಿಷ ತನ್ನ ದೇಹಕ್ಕಿಡೀ ವ್ಯಾಪಿಸಿ ಸ್ಮ್ರತಿ ತಪ್ಪುವವರೆಗೂ ಭಾರತ ಮಾತೆಗೆ ಜಯಕಾರ ಹಾಕುತ್ತಲೇ ಪ್ರಾಣಬಿಟ್ಟರು. ದೇಶ ಸ್ವತಂತ್ರಗೊಂಡು ಹತ್ತಿರ ಹತ್ತಿರ ಒಂದು ಶತಮಾನಗಳಾಗುತ್ತಿರುವ ಈ ಹೊತ್ತಿನಲ್ಲಿ, ಜಗತ್ತೇ ಕಮ್ಯುನಿಸಮ್ಮಿನತ್ತ ಹೇಸಿಗೆಯ ಮುಖಭಾವದೊಂದಿಗೆ ನೋಡುತ್ತಿರುವ ಹೊತ್ತಿನಲ್ಲಿ ಕೇರಳದಲ್ಲಿ ಇಂದಿಗೂ ಇಂಥ ಘಟನೆಗಳು ನಡೆಯುತ್ತವೆ.
ರಾಷ್ಟ್ರವಾದಿಗಳನ್ನು ಕೇರಳದ ಕಮ್ಯುನಿಸ್ಟರು ಯಾವ ಯಾವ ಪರಿಯಲ್ಲಿ ಹಿಂಸೆ ಕೊಟ್ಟರೆಂದರೆ ಅದನ್ನು ನೋಡಿದರೆ ಸ್ವತಃ ಹಿಟ್ಲರನೇ ನಾಚಿಕೊಳ್ಳಬೇಕು. ಒಮ್ಮೆ ತಲಶೇರಿ ಸಮೀಪದ ವಿಧವೆ ತಾಯಿಯೊಬ್ಬಳು ತನ್ನ ಮಕ್ಕಳನ್ನು ಕಮ್ಯುನಿಸ್ಟರ ಸಹವಾಸದಿಂದ ಬಿಡಿಸಿ ಅವರನ್ನು ಆರೆಸ್ಸೆಸ್ ಶಾಖೆಗೆ ಕಳುಹಿಸತೊಡಗಿದಳು. ಕಮ್ಯುನಿಸ್ಟರ ಕೋಪ ಆ ವಿಧವೆ ತಾಯಿಯತ್ತ ತಿರುಗಿತು. ಒಂದು ದಿನ ಆಕೆ ತನ್ನ ಮಕ್ಕಳನ್ನು ಶಾಖೆಗೆ ಕಳುಹಿಸಿ ದಿನಸಿ ಖರೀದಿಸಲು ಅಂಗಡಿಗೆ ನಡೆದು ಬರುತ್ತಿದಳು. ಹಳೆಯ ಜೀಪೋಂದು ಭಾರೀ ವೇಗವಾಗಿ ಆಕೆಯ ಮೇಲೆ ಹರಿಯಿತು. ಆಕೆ ಸ್ಥಳದಲ್ಲೇ ಸತ್ತಳು. ಶಾಖೆಗೆ ಹೋದ ಒಂದೇ ಕಾರಣಕ್ಕೆ ಕಮ್ಯುನಿಸ್ಟರು ಆ ಪುಟ್ಟ ಮಕ್ಕಳನ್ನು ಅನಾಥ ಮಾಡಿದ್ದರು. ಇನ್ನೊಮ್ಮೆ ಅದೇ ತಲಶೇರಿಯಲ್ಲಿ ಕಮ್ಯುನಿಸ್ಟರ ಸಂಗ ಬಿಟ್ಟ ಅಟೋ ಚಾಲಕರೊಬ್ಬರು ಸಂಘದ ಸಿದ್ಧಾಂತಕ್ಕೆ ವಾಲಿದ್ದರು. ಅವರನ್ನು ಕೊಲ್ಲಲು ಕಮ್ಯುನಿಸ್ಟರಿಗೆ ಜೀಪು ಅಥವಾ ವಿಷದ ಅಗತ್ಯ ಬೀಳಲಿಲ್ಲ. ನೇರ ಮನೆಗೇ ನುಗ್ಗಿ ಮನಬಂದಂತೆ ಮಚ್ಚಿನೇಟು ಹಾಕಿದರು. ಅವರ ಸುಂದರ ಮುಖ ಗುರುತು ಸಿಗಲಾರದಂತೆ ಬದಲಾಯಿತು. ಸೆಪ್ಟಂಬರ್ 17, 1996ರ ದಿನ ಕೇರಳದ ಪರುಮಲ ಜಿಲ್ಲೆಯ ದೇವಸ್ವೋಮ್ ಕಾಲೇಜಿನ ಕ್ಯಾಂಪಸ್ಸಿಗೆ ಲಗ್ಗೆಯಿಟ್ಟ ಕಮ್ಯುನಿಸ್ಟರು ಅನು, ಸುಜಿತ್, ಕಿಮ್ ಎಂಬ ಎಬಿವಿಪಿಯ ಕಾರ್ಯಕರ್ತರ ಮೇಲೆ ಮುಗಿಬಿದ್ದರು. ಎಬಿವಿಪಿಯೊಂದಿಗೆ ಗುರುತಿಸಿಕಂಡಿದ್ದೇ ಈ ಹುಡುಗರು ಮಾಡಿದ ಮಹಾಪರಾಧ. ಕಾಲೇಜಿಗೆ ಲಗ್ಗೆ ಇಟ್ಟ ಕಮ್ಯುನಿಸ್ಟ್ ಗೂಂಡಾಗಳು ಮಚ್ಚು ಹಿಡಿದು ಸಿನೆಮಾ ಶೈಲಿಯಲ್ಲಿ ನುಗ್ಗಿದರು. ಪ್ರಾಣ ಉಳಿಸಿಕೊಳ್ಳಲು ಕಾಲೇಜಿನ ಕಿಟಕಿಯಿಂದ ಹಾರಿದ ಹುಡುಗರು ಪಂಪಾನದಿಯತ್ತ ಧುಮುಕಿ ಈಜಲಾರಂಭಿಸಿದರು. ನೀರಿಗೂ ಈ ಗೂಂಡಾಗಳು ಕಲ್ಲೆಸೆಯಲಾರಂಭಿಸಿದರು. ಅಲ್ಲೇ ದಡದಲ್ಲಿ ಬಟ್ಟೆ ಒಗೆಯುತ್ತಿದ್ದ ಹೆಂಗಸರು ಈ ಹುಡುಗರಿಗೆ ಸೀರೆಗಳನ್ನು ಎಸೆದು ಬದುಕಿಕೊಳ್ಳುವಂತೆ ಅವಕಾಶ ನೀಡಿದರೂ ಕಮ್ಯುನಿಸ್ಟ್ ಗೂಂಡಾಗಳು ಹೆಂಗಸರಿಗೂ ಕೊಲೆ ಬೆದರಿಕೆ ಒಡ್ಡಿದರು. ಹುಡುಗರು ನದಿಯಲ್ಲಿ ಈಜಲಾರದೆ, ದಡ ಸೇರಲಾರದೆ ಧಾರುಣವಾಗಿ ಸತ್ತರು. ಮರುದಿನ ಪೆರುಮುಲ ಜಿಲ್ಲಾ ಕಮ್ಯುನಿಸ್ಟ್ ಕಛೇರಿಯಲ್ಲಿ ‘ನಂಗಳ್ ಕೊಯ್ಯುಂ ವಯಲೆಲ್ಲಾ ನಂಗಳದಾವು ಪೈಂಗಿಳೆಯೇ’ ಕ್ರಾಂತಿಗೀತೆಯನ್ನು ಕಮ್ಯುನಿಸ್ಟರು ರಾಗಾವಾಗಿ ಹಾಡಿ ಲಾಲ್ ಸಲಾಂ ಘೋಷಣೆ ಮೊಳಗಿಸಿ ಚಹಾ ಪಾರ್ಟಿ ನಡೆಸಿ ಖುಷಿ ಪಟ್ಟರು.
ಕಮ್ಯುನಿಸ್ಟರ ಆರದ ರಕ್ತದಾಹದಿಂದ ಇಂದು ದೇವರ ಸ್ವಂತ ನಾಡು ದೇಶದಲ್ಲೇ ಕುಖ್ಯಾತಿಯನ್ನು ಪಡೆಯುತ್ತಿದೆ. ಭಿನ್ನ ರಾಜಕೀಯ ಸಿದ್ಧಾಂತಗಳಿಗಾಗಿ ಒಬ್ಬನ ಕೊಲೆಯನ್ನೇ ನಡೆಸುವುದಾದರೆ ಈ ಕಮ್ಯುನಿಸ್ಟರು ಕಟ್ಟುವ ಸಮಾಜದ ಸ್ವರೂಪವಾದರೂ ಎಂಥಾದ್ದು? ಸರಾಸರಿ ತಿಂಗಳಿಗೆರಡರಂತೆ ನಡೆಯುತ್ತಿರುವ ರಾಷ್ಟ್ರೀಯವಾದಿಗಳ ಕೊಲೆಯ ನಡುವೆಯೂ ಕೇರಳದ ಅಂತಸತ್ವವೊಂದು ಇನ್ನೂ ಮಿಡಿಯುತ್ತಿದೆ. ಕಮ್ಯುನಿಸ್ಟರ ಕ್ರೌರ್ಯದ ನಡುವೆಯೂ ಕೇರಳದ ಶಕ್ತಿ ಬತ್ತದ ಒರತೆಯಂತೆ ಇನ್ನೂ ಹರಿಯುತ್ತಲೇ ಇದೆ. ತನ್ನ ನೆರೆಕರೆಯ ವ್ಯಕ್ತಿ, ಕಾಲೇಜಿನ ಸಹಪಾಠಿಯ ಬರ್ಬರ ಕೊಲೆಯಾದರೂ ಕೇರಳದಲ್ಲಿ ಸಂಘವಾಗಲೀ, ವಿದ್ಯಾರ್ಥಿ ಪರಿಷತ್ ಆಗಲೀ, ಭಾಜಪವಾಗಲೀ ಹೆದರಿ ಮೂಲೆಯಲ್ಲಿ ಕುಳಿತಿಲ್ಲ. ಇಂದು ಕೇರಳ ದೇಶದಲ್ಲೇ ಅತಿ ಹೆಚ್ಚಿನ ಆರೆಸ್ಸೆಸ್ ಶಾಖೆಗಳನ್ನು ಹೊಂದಿರುವ ರಾಜ್ಯ. ಬಾಲಗೋಕುಲಂ ಎಂಬ ಯೋಜನೆ ಕೇರಳದ ಮನೆಮನೆಯನ್ನೂ ಮುಟ್ಟಿದೆ. ವಿವೇಕಾನಂದ ಕೇಂದ್ರದ ಮೂಲಕ ಪ್ರತಿ ಮನೆಯೂ ಸಂಘದ ಮನೆಗಳಾಗಿ ಬದಲಾಗುತ್ತಿದೆ. ಕಮ್ಯುನಿಸ್ಟರಿಗೆ ಗೊತ್ತಿಲ್ಲದಂತೆಯೇ ಅವರು ಆರೆಸ್ಸೆಸ್ ಆಗಿಹೋಗುತ್ತಿದ್ದಾರೆ. ಒಳ್ಳೆಯದು ಯಾವುದೆಂಬುದು ಗೊತ್ತಿದ್ದರೂ ಕೆಟ್ಟದ್ದನ್ನು ಬಿಡಲಾರದ ಕಮ್ಯುನಿಸ್ಟರ ಈ ಚಾಳಿ ಕೇರಳದಲ್ಲಿ ರಕ್ತಹರಿಸುತ್ತಿದೆ. ಅಂದರೆ ತಮ್ಮ ಬುಡ ಅಲ್ಲಾಡುತ್ತಿರುವಾಗ ಅವರಿಗೆ ಕಂಡ ಕಟ್ಟಕಡೆಯ ಉಪಾಯ ಆರೆಸ್ಸೆಸ್ಸಿಗರನ್ನು ಕಂಡಲ್ಲಿ ಕೊಲ್ಲುವ ರಾಕ್ಷಸ ಮಾರ್ಗ.
ನೀವು ಕಮ್ಯುನಿಸ್ಟರನ್ನು ಎಲ್ಲೇ ನೋಡಿ. ಅವರು ತಮ್ಮ ನೆಲೆಯನ್ನು ಕಂಡುಕೊಂಡಿರುವುದು ಹಿಂಸೆಯ ಮೂಲಕವೇ. ಎಷ್ಟಾದರೂ ಸಿದ್ಧಾಂತ ಅವರಿಗೆ ಎರಡನೆಯ ಸಂಗತಿ. ಅಧಿಕಾರ ಹಿಡಿಯಲು ಕಮ್ಯುನಿಸ್ಟರು ಏನನ್ನು ಬೇಕಾದರೂ ಮಾಡುತ್ತಾರೆನ್ನುವುದನ್ನು ಇಡೀ ಜಗತ್ತೇ ನೋಡಿದೆ. ರಷ್ಯಾದಲ್ಲಿ, ಚೀನಾದಲ್ಲಿ, ಮಧ್ಯ ಅಮೆರಿಕಾದ ದೇಶಗಳಲ್ಲಿ ಕಮ್ಯುನಿಸ್ಟರು ಬಡವರ ಮೇಲೆ ನಡೆಸಿದ ಸುಲಿಗೆ, ಅಮಾಯಕರ ಮೇಲೆ ನಡೆಸಿದ ಕ್ರೌರ್ಯಗಳನ್ನು ಇಡೀ ಜಗತ್ತೇ ಕಂಡು ಟೀಕಿಸಿದೆ. ನಮ್ಮ ಭಾರತದಲ್ಲೂ ಕಳೆದ ಅರೆ ಶತಮಾನಗಳಿಂದ ಬಂಗಾಳದಂಥ ಫಲವತ್ತಾದ ನೆಲವನ್ನು ಗೊಬ್ಬರದ ಗುಂಡಿಯನ್ನಾಗಿ ಮಾಡಿದ ಶ್ರೇಯಸ್ಸು ಈ ಕಮ್ಯುನಿಸ್ಟರಿಗೆ ಸಲ್ಲಬೇಕು. ಅವರು ಸಂಪತ್ತಿನ ಹಂಚಿಕೆಯ ಮಾತಾಡುತ್ತಲೇ ನೆಲದ ಅಂತಸತ್ವವನ್ನು ಕಿತ್ತೊಗೆಯುತ್ತಾರೆ. ಸಮಾನತೆಯ ಮಾತಾಡುತ್ತಲೇ ಸಮಾಜದಲ್ಲಿ ಒಡಕು ಮೂಡಿಸುತ್ತಾರೆ. ಆದರೆ ಅವರ ರಕ್ತಚರಿತ್ರೆಯ ಹೊರತಾಗಿಯೂ ಉಳಿದುಕೊಂಡಿದ್ದು ಕೇರಳವೊಂದೇ. ಕೇರಳವನ್ನು ಕೇರಳವಾಗಿ ಉಳಿಸಲು ಇಟ್ಟಿಗೆಯಾಗಿ ಬಳಕೆಯಾದವರು ನಮ್ಮ ರಾಷ್ಟ್ರೀಯವಾದಿ ಸಂಘಟನೆಗಳ ಕಾರ್ಯಕರ್ತರು. ಕೇರಳದಲ್ಲಿ ನಡೆದಷ್ಟು ರಕ್ತಪಾತ, ಕಗ್ಗೊಲೆಗಳು ಜಗತ್ತಿನ ಯಾವ ಭಾಗದಲ್ಲೇ ನಡೆದಿದ್ದರೂ ಆ ನೆಲ ಮೂಲಸ್ವರೂಪವನ್ನು ಬದಲಾಯಿಸಿ ಕೊಂಡು ಇನ್ನೇನೋ ಆಗಿಹೋಗುತ್ತಿತ್ತು.
ಕಳೆದ ತಿಂಗಳು ಕೇರಳದಲ್ಲಿ ನಮ್ಮ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪರಿಷತ್ತಿನ ಕಾರ್ಯಕಾರಣಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿಯವರೂ ಆಗಮಿಸಿದ್ದರು. ಅಲ್ಲೊಂದು “ಅಹುತಿ” ಹೆಸರಿನ ಪ್ರದಕ್ಷಿಣೆಯನ್ನು ಆಯೋಜನೆ ಮಾಡಲಾಗಿತ್ತು. ಅದನ್ನು ನೋಡಿದರೆ ಇಸ್ರೇಲ್‍ನ ಹೋಲೋಕಾಸ್ಟ್ ಮ್ಯೂಸಿಯಮ್ಮನ್ನು ನೋಡಿದಂತೆ ಭಾಸವಾಗುತ್ತಿತ್ತು. ಕಮ್ಯುನಿಸ್ಟರ ದಾಳಿಗೆ ತುತ್ತಾಗಿ ಪ್ರಾಣಕಳೆದುಕೊಂಡ ನೂರಾರು ಕಾರ್ಯಕರ್ತರ ರಕ್ತಸಿಕ್ತ ದೇಹಗಳ ಒಂದೊಂದೇ ಚಿತ್ರವನ್ನು ನೋಡಿದಾಗ ಕರುಳ ಹಿಂಡಿದಂತಾಗುತ್ತಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಾಳೆ ಭಾನುವಾರ ಬೆಂಗಳೂರಿನ ಜಯನಗರದಲ್ಲಿರುವ ಆರ್.ವಿ. ಟೀಚರ್ಸ್ ಕಾಲೇಜಿನಲ್ಲಿ ಒಂದು ಪುಸ್ತಕ ಬಿಡುಗಡೆ ಹಾಗೂ ಕಮ್ಯುನಿಸ್ಟ್ ಹಿಂಸಾಚಾರಕ್ಕೆ ಕೊನೆಹಾಡಿ ಎಂದು ಕರೆಕೊಡುವ ಕಾರ್ಯಕ್ರಮ ಬೆಳಗ್ಗೆ 10 ಗಂಟೆಗೆ ಆಯೋಜನೆಯಾಗಿದೆ. ಎರಡೂ ಕಾಲು ಕಳೆದುಕೊಂಡಿರುವ ಸದಾನಂದನ್ ಮಾಷ್ಟರ್ ಸ್ವತಃ ತಮ್ಮ ಕಥೆ ಹೇಳಲಿದ್ದಾರೆ. ಮರೆಯದೆ ಬನ್ನಿ.
ಇದೇನೇ ಇರಲಿ, ಇವತ್ತು ಯಾವುದಾದರೂ ಪೋಸ್ಟ್ ಅಥವಾ ಟಿಕೆಟ್ ಕೊಡುವುದಿದ್ದರೆ ಮಾತ್ರ ಪಕ್ಷಕ್ಕೆ ಸೇರುತ್ತೇವೆ ಎನ್ನುವವರನ್ನೇ ರಾಜಕಾರಣದಲ್ಲಿ ಕಾಣುತ್ತಿದ್ದೇವೆ. ಟಿಕೆಟ್ ಕೊಡುವಾಗ ಎಷ್ಟು ಖರ್ಚು ಮಾಡುತ್ತೀಯಾ ಎಂದು ಕೇಳುವ ರಾಜಕಾರಣ ನಮ್ಮಲ್ಲಿದೆ. ಇದರ ಮಧ್ಯೆ ರಕ್ತಚೆಲ್ಲಿ ಪಕ್ಷ ಕಟ್ಟುತ್ತಿರುವ ಕೇರಳದ ನಮ್ಮ ಕಾರ್ಯಕರ್ತರಿದ್ದಾರೆ. ತಮ್ಮ ಜೀವವನ್ನೇ ಪಕ್ಷ, ಸಂಘಟನೆಗಾಗಿ ಕೊಡುವ ಅವರ ತ್ಯಾಗದ ಮುಂದೆ ನಾವೆಂಥಾ ಕುಬ್ಜರು ಅಲ್ಲವೆ?
October 9, 2016
October 8, 2016
ರಾಘವೇಶ್ವರರಿಗೆ ಹಣದಾಸೆಯಿದ್ದರೆ ಗೋವಿನ ಬದಲು ಕಾಲೇಜೆಂಬ ಕಾಮಧೇನು ಕಟ್ಟುತ್ತಿದ್ದರು !
ರಾಘವೇಶ್ವರರಿಗೆ ಹಣದಾಸೆಯಿದ್ದರೆ ಗೋವಿನ ಬದಲು ಕಾಲೇಜೆಂಬ ಕಾಮಧೇನು ಕಟ್ಟುತ್ತಿದ್ದರು !
ಅತ್ರತಿಷ್ಠ ಯತಿಶ್ರೇಷ್ಠ ಗೋಕರ್ಣೇ ಮುನಿಸೇವಿತೇ
ಮಹಾಬಲಸ್ಯ ಲಿಂಗಂ ಚ ನಿತ್ಯಂ ವಿಧಿವದರ್ಚನಂ
ಗೋಕರ್ಣ ಮಂಡಲೇ ವ್ಯಕ್ತಂ ತವ ಶಿಷ್ಯ ಪರಂಪರೈಃ
ಆಚಾರ್ಯತ್ವಂಚ ಕುರುತಾಂ ವಿದ್ಯಾನಂದ ಮಹಾಮತೇ
ಅಂದರೆ, ‘ಯತಿಶ್ರೇಷ್ಠನಾದ ವಿದ್ಯಾನಂದನೇ, ಗೋಕರ್ಣ ದಲ್ಲಿ ನಿಲ್ಲು. ನಿತ್ಯವೂ ಮಹಾಬಲನ ಲಿಂಗವನ್ನು ವಿಧಿವತ್ತಾಗಿ ಅರ್ಚಿಸು. ನಿನ್ನ ಶಿಷ್ಯ ಪರಂಪರೆಯಿಂದ ಒಡಗೂಡಿ ಆಚಾರ್ಯತ್ವವನ್ನು ಮಾಡುತ್ತಾ ಮಹಾಮತಿಯಾದ ನೀನು ಇಲ್ಲಿರು’ ಎಂದು ನುಡಿದ ಆದಿ ಶಂಕರಾಚಾರ್ಯರೇ ಗೋಕರ್ಣದಲ್ಲಿ ಮಠವೊಂದನ್ನು ಸ್ಥಾಪಿಸಿದರು.
ವರದ ಮಹರ್ಷಿಯಿಂದ ಪ್ರಾಪ್ತವಾಗಿದ್ದ ಶ್ರೀರಾಮಾದಿ ವಿಗ್ರಹಗಳು, ಚಂದ್ರಮೌಳಿಯ ಲಿಂಗ, ಪಾದುಕೆಯನ್ನು ವಿದ್ಯಾನಂದರಿಗೆ ಒಪ್ಪಿಸಿದ ಶಂಕರಾ ಚಾರ್ಯರು ಈ ಮಠ ‘ರಘೂತ್ತಮ ಮಠ’ವೆಂದು ಪ್ರಸಿದ್ಧಿ ಯಾಗಲಿ ಎಂದು ಹಾರೈಸಿ ಜಗನ್ನಾಥ ಕ್ಷೇತ್ರಕ್ಕೆ ತೆರಳಿದರು. ಹೀಗೆ ಶಂಕರಾಚಾರ್ಯರಿಂದ ನೇರವಾಗಿ ದೀಕ್ಷೆ ಪಡೆದ ವಿದ್ಯಾನಂದರೇ ಈ ಮಠದ ಮೊದಲ ಪೀಠಾಧಿಪತಿಗಳು. ಗೋವಾದ ಮಾಂಡೋವಿ ನದಿಯಿಂದ ಕೇರಳದ ಚಂದ್ರ ಗಿರಿ ನದಿಯವರೆಗೆ ಮಠದ ವ್ಯಾಪ್ತಿ ಹರಡುತ್ತದೆ. ಇದು ಒಂದು ಜಾತಿಗೆ ಸೇರಿದ ಮಠವಲ್ಲ. ಈ ಪ್ರದೇಶಗಳಲ್ಲಿ ಕಂಡುಬರುವ ಹವ್ಯಕ, ದೇವಾಂಗ, ಮಡಿವಾಳ, ಭಂಡಾರಿ, ಹಾಲಕ್ಕಿ, ಅಮ್ಮಕೊಡವ, ಪದ್ಮಶಾಲಿ, ಭೋವಿ, ಹರಿಕಂತರು, ಮರಾಠಿ, ಕೋಕಾಬಿ, ಪಡಿಯಾರು, ಗುಡಿಗಾರ, ಭಜಂತ್ರಿ, ಗಾಣಿಗ, ಗೋಮಾಂತರು, ಕಂಚುಗಾರ, ಕೆಡಿಯ ಹೀಗೆ 18 ಜಾತಿಗಳು ರಘೂತ್ತಮ ಮಠಕ್ಕೆ ಸೇರಿವೆ.
ಇದೇನೇ ಇರಲಿ, ನಮ್ಮ ಕರ್ನಾಟಕದಲ್ಲಿ ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ತಲೆಯೆತ್ತಿದ ವಿಜಯ ನಗರ ಸಾಮ್ರಾಜ್ಯ ಹಾಗೂ ಆ ಸಾಮ್ರಾಜ್ಯದ ವ್ಯಾಪ್ತಿಗೆ ಸೇರಿದ್ದ ಮಂಡಲಾಧೀಶರು, ಪ್ರಾಂತಾಧಿಪತಿಗಳು, ಪಾಳೇಗಾರರು ಮಠಕ್ಕೆ ದಾನ, ದತ್ತಿ ನೀಡಲಾರಂಭಿಸಿದರು. ಅವರು ನೀಡಿದ ಹಗಲು ದೀವಟಿಗೆ, ಶ್ವೇತಛತ್ರಗಳು, ಕುದುರೆ, ಆನೆ, ಒಂಟೆಗಳಿಂದ ಶ್ರೀಕ್ಷೇತ್ರ ಗೋಕರ್ಣದಲ್ಲಿ ತಲೆಯೆತ್ತಿದ್ದ ರಘೂತ್ತಮ ಮಠಕ್ಕೂ ವೈಭವ ಬಂತು.
ಈ ರಘೂತ್ತಮ ಮಠಕ್ಕೂ ರಾಮಚಂದ್ರಾಪುರ ಮಠಕ್ಕೂ ಒಂದು ಕೊಂಡಿಯಿದೆ.
ರಘೂತ್ತಮ ಮಠದ 12ನೇ ಯತಿಗಳಾದ ಶ್ರೀ ರಾಮ ಚಂದ್ರ ಭಾರತೀ ಸ್ವಾಮಿಗಳು ಕಾರಣಾಂತರದಿಂದ ಹೊಸನಗರ ತಾಲೂಕಿನಲ್ಲಿರುವ ಶ್ರೀರಾಮಚಂದ್ರಾಪುರ ಗ್ರಾಮದ ಶರಾವತಿ ನದಿ ತೀರಕ್ಕೆ ವಲಸೆ ಬಂದರು. ಅಲ್ಲೇ ಒಂದು ಕುಟೀರವನ್ನು ನಿರ್ಮಿಸಿಕೊಂಡು ವಾಸಮಾಡಲಾರಂಭಿಸಿದರು. ಹಾಗೆ ಯತಿಗಳೇ ಆಗಮಿಸಿದ ಕಾರಣ ಶ್ರೀರಾಮಚಂದ್ರಾಪುರವೇ ಮಠದ ಮುಖ್ಯಕೇಂದ್ರವಾಯಿತು. ರಘೂತ್ತಮ ಮಠ ಹೋಗಿ ಶ್ರೀರಾಮಚಂದ್ರಾಪುರ ಮಠವಾಯಿತು. ಇತ್ತ 12ನೇ ಯತಿಗಳು ಇರುವವರೆಗೂ ಆದಿ ಶಂಕರಾಚಾರ್ಯರ ಅಣತಿಯಂತೆ ಗೋಕರ್ಣದಲ್ಲಿರುವ ವಿಶ್ವವಿಖ್ಯಾತ ಶ್ರೀಸಂಸ್ಥಾನ ಮಹಾಬಲೇಶ್ವರ ದೇವರ ಹಾಗೂ ಪರಿವಾರ ದೇವರ ಪೂಜಾದಿ ಸೇವೆಗಳನ್ನು ಮಠದ ಪೀಠಾಧಿಪತಿಗಳೇ ನೆರವೇರಿಸುತ್ತಾ ಬರುತ್ತಿದ್ದರು. ಅವರಿಗೆ ಪೂಜಾಕಾರ್ಯಗಳ ಸಂದರ್ಭದಲ್ಲಿ ಸಹಾಯ ಮಾಡಲು ಉಪಾಧಿವಂತರು ಎಂಬವವರಿದ್ದರು. ಆದರೆ 12ನೇ ಯತಿಗಳು ರಾಮಚಂದ್ರಾಪುರಕ್ಕೆ ಬಂದು ನೆಲೆಸಿದ ಕಾರಣ, ರಾಮಚಂದ್ರಾಪುರವೇ ಮುಖ್ಯವಾದ ಕೇಂದ್ರವಾದ ಸಲುವಾಗಿ ಗೋಕರ್ಣದ ಮಹಾಬಲೇಶ್ವರ ಹಾಗೂ ಪರಿವಾರ ದೇವರ ಪೂಜಾ ಸೇವೆಯನ್ನು ಯತಿಗಳೇ ನೆರವೇರಿ ಸಲು ಸಾಧ್ಯವಾಗದಂತಾಯಿತು. ಇಂತಹ ಪರಿಸ್ಥಿತಿಯಲ್ಲಿ ಯತಿಗಳಿಗೆ ಪೂಜಾ ಸಂದರ್ಭದಲ್ಲಿ ಸಹಾಯ ಮಾಡುತ್ತಿದ್ದ ಉಪಾಧಿವಂತರೇ ಅರ್ಚನೆ ಮಾಡಬೇಕಾಗಿ ಬಂತು. ಆದರೆ ಮಠ ಸ್ಥಳಾಂತರಗೊಂಡರೂ ಉಪಾಧಿವಂತರು ಪೀಠಾಧಿಪತಿಗಳ ಹತೋಟಿಯಲ್ಲೇ ಇದ್ದರು, ಅಣತಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದರು. ಇತ್ತೀಚಿನವರೆಗೂ, ಅಂದರೆ 1983 ರಲ್ಲಿ ಶ್ರೀಕ್ಷೇತ್ರ ಗೋಕರ್ಣದಲ್ಲಿ ಶ್ರೀಸಂಸ್ಥಾನ ಮಹಾಬಲೇಶ್ವರ ದೇವರಿಗೆ ಅಷ್ಟಬಂಧ ಕಾರ್ಯಕ್ರಮ ನಡೆದಾಗಲೂ ಮಠದ 35 ನೇ ಪೀಠಾಧಿಪತಿಗಳಾಗಿದ್ದ ರಾಘವೇಂದ್ರ ಭಾರತೀ ಅವರೇ ಮುಂದೆ ನಿಂತು ನವರತ್ನಾದಿಗಳನ್ನು ದೇವರಿಗೆ ಅರ್ಪಿಸಿ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟಿದ್ದರು. ಇಂದಿಗೂ ಪೀಠಾಧಿಪತಿಗಳ ಪರಾಕು ಹೇಳುವಾಗ “ಶ್ರೀಸಂಸ್ಥಾನ ಗೋಕರ್ಣ ಮಂಡಲಾಧೀಶ್ವರ ಶ್ರೀಮದ್ ಜಗದ್ಗುರು ಶಂಕರಾಚಾರ್ಯ” ಎನ್ನಲಾಗುತ್ತದೆ.
ಆದರೆ ಆದಿಶಂಕರರು ಹಾದುಹೋದ ಗೋಕರ್ಣಕ್ಕೆ, ರಾಮಚಂದ್ರಾಪುರ ಮಠ ವಹಿಸಿಕೊಳ್ಳುವುದಕ್ಕಿಂತ ಮೊದಲು ನೀವೇನಾದರೂ ಭೇಟಿ ಕೊಟ್ಟರೆ ದೇವರು ಇರುವಿಕೆಯ ಬಗ್ಗೆಯೇ ನಿಮ್ಮ ಮನದಲ್ಲಿ ಖಂಡಿತ ಅನು ಮಾನಗಳೇಳುವಂತಿತ್ತು .
ಬೆಂಗಳೂರಿನ ಮೆಜೆಸ್ಟಿಕ್ ಬಸ್‌ಸ್ಟಾಂಡ್ ಅಥವಾ ಗಾಂಧೀನಗರದಲ್ಲಿ ಬಸ್‌ನಿಂದ ಕೆಳಗಿಳಿದ ಕೂಡಲೇ “ನಿಮ್ಮ ಕೈಯಲ್ಲಿನ ಬ್ಯಾಗನ್ನು ಮೊದಲು ಕಿತ್ತುಕೊಂಡು, ಬನ್ನಿ ಸಾರ್ ಕುಳಿತುಕೊಳ್ಳಿ, ಎಲ್ಲಿಗೆ ಹೋಗಬೇಕು ಸಾರ್” ಎನ್ನುತ್ತಾ ಮುತ್ತಿಗೆ ಹಾಕುವ ಆಟೋ ಡ್ರೈವರ್‌ಗಳಂತೆ ಗೋಕರ್ಣದಲ್ಲಿ ಅರ್ಚಕರು ನಿಮ್ಮ ಮೇಲೆ ಮುಗಿಬೀಳುತ್ತಿದ್ದರು!! ಸಾಮಾನ್ಯ ಜನರೂ ದೇವರನ್ನು ಮಟ್ಟಬಹುದಾದ ಎರಡೇ ಎರಡು ಕ್ಷೇತ್ರಗಳೆಂದರೆ ಕಾಶಿ ಮತ್ತು ಗೋಕರ್ಣ. ಆದರೆ ಗೋಕರ್ಣದ ಅರ್ಚಕರು, ‘ದೇವರನ್ನು ಮುಟ್ಟಬೇಕಾ?’ ಅಂತ ಕೇಳಿದಾಗ ನೀವೇನಾದರೂ ‘ಹೌದು’ ಎಂದರೆ ಕೂಡಲೇ ‘ರೇಟ್’ ಹೇಳಿ ಬಿಡುತ್ತಿದ್ದರು! ಮೊದಲು ಉಪಾಧಿವಂತರ ಸುಮಾರು ಐದು ಕುಟುಂಬಗಳು ಇಲ್ಲಿ ಅರ್ಚನೆ ಕಾರ್ಯದಲ್ಲಿ ತೊಡಗಿದ್ದವು. ಆದರೆ ಕಾಲಾಂತರದಲ್ಲಿ ಕುಟುಂಬಗಳ ಗಾತ್ರ ದೊಡ್ಡದಾಗಿ, ಒಡೆದು ಹೋಳಾಗಿ, ಪ್ರತ್ಯೇಕವಾಗಿ ಇಂದು 30ಕ್ಕೂ ಹೆಚ್ಚು ಕುಟುಂಬಗಳಿವೆ. ಹಾಗಾಗಿ ಪೂಜಾ ಕಾರ್ಯ ನೆರವೇರಿಸುವುದಕ್ಕೂ ಪೈಪೋಟಿ ಸೃಷ್ಟಿಯಾಗಿದೆ, ಕಿತ್ತಾಟವೂ ನಡೆಯುತ್ತಿತ್ತು. ಹಾಗಾಗಿ ಒಳ ಒಪ್ಪಂದ ಏರ್ಪಟ್ಟು ತಿಂಗಳಲ್ಲಿ ಇಂತಿಷ್ಟು ದಿನ ಒಂದು ಕುಟುಂಬಕ್ಕೆ ಎಂದು ವಿಭಜನೆ ಮಾಡಿಕೊಳ್ಳಲಾಗಿತ್ತು . ಇಲ್ಲೂ ಒಂದು ರಾಜಕೀಯವಿತ್ತು. ಒಂದು ಕುಟುಂಬದ ಸರದಿ ಬಂದಾಗ ಉಳಿದ ಕುಟುಂಬಗಳ ಅರ್ಚಕರು ಖಾಲಿ ಕುಳಿತುಕೊಳ್ಳುವುದಿಲ್ಲ. ಪೂಜೆ, ಪುನಸ್ಕಾರವನ್ನು ಮಾತ್ರ ದೇವಸ್ಥಾನದಲ್ಲಿ ಮಾಡಿಸಿ, ಹೋಮ, ಹವನಗಳನ್ನು ನಾವು ಮನೆಯಲ್ಲೇ ಬೇಗ ಮಾಡಿಕೊಡುತ್ತೇವೆ ಎಂದು ಭಕ್ತಾದಿಗಳನ್ನೇ ಪುಸಲಾಯಿಸುತ್ತಿದ್ದರು !
ಇಂತಹ ಅರ್ಚಕರು(ದೇವರ ಏಜೆಂಟರು) ಇರುವ ಕ್ಷೇತ್ರ ಗಳ ಸ್ವಾಸ್ಥ್ಯ ಹಾಳಾಗಿರಲಿಲ್ಲ ಎಂದು ನಿರೀಕ್ಷಿಸುವುದು ಸಾಧ್ಯವಾ ? ಆದರೆ ರಾಮಚಂದ್ರಾಪುರ ಮಠದ ಸುಪರ್ದಿಗೆ ಗೋಕರ್ಣ ಬಂದ ಮೇಲೆ, ಇಲ್ಲಿನ ವ್ಯವಸ್ಥೆ ಬದಲು ವ್ಯವಸ್ಥೆ ಜಾರಿಯಾಯಿತು . ಅರ್ಚಕರು ಮೆಜೆಸ್ಟಿಕ್ ಡ್ರೈವರ್ ಗಳಾಗದೇ ಪೌರೋಹಿತ್ಯಕ್ಕೆ ಅಗೌರವ ತೋರದಂತೆ ನಡೆದುಕೊಳ್ಳಲಾರಂಭಿಸಿದರು ಒಬ್ಬೊಬ್ಬರು ಒಂದೊಂದು ದರ ಹೇಳುವ ಪದ್ದತಿ ನಿಂತಿತು .
ಇಲ್ಲಿನ “ಓಂ ಬೀಚ್”ಗೆ ಹಿಪ್ಪಿಗಳು ಬಂದಿದ್ದರು, ಬಾರ್ ಗಳಾಗಿತ್ತು, ಲಾಡ್ಜ್‌ಗಳಿತ್ತು, ‘ಚಿನ್ನವೀಡು’ ಸೌಲಭ್ಯವೂ ಇತ್ತು. ವಿದೇಶಿ ಮದ್ಯವೂ ದೊರೆಯುತ್ತಿತ್ತು, ಮಾನಿನಿಯರೂ ಸಿಗುತ್ತಿದ್ದರು. ದಕ್ಷಿಣದ ಕಾಶಿ ಎಂದೇ ಹೆಸರಾಗಿದ್ದ ಗೋಕರ್ಣ ಹೇಸಿಗೆ ಪಟ್ಟುಕೊಳ್ಳಬೇಕಾದ ಮಟ್ಟಕ್ಕೆ ಹೋಗಿತ್ತು . ದೇವಸ್ಥಾನಕ್ಕೆ ಬರುವವರಿಗಿಂತ ಓಂಬೀಚ್ ಗೆ ಹೋಗುವವರೇ ಹೆಚ್ಚಾಗಿದ್ದರು . ಇಷ್ಟಾಗಿಯೂ ಗೋಕರ್ಣದ ಕೊಳೆ ತೊಳೆಯಲು ಸಾಧ್ಯವಾಗುತ್ತಿರಲಿಲ್ಲ.
ಅದಕ್ಕೆ ಕಾರಣವೂ ಇದೆ.
1950 ರ ‘ಬಾಂಬೆ ದತ್ತಿ ಕಾಯಿದೆ’ ಒಂದು ದೊಡ್ಡ ಅಡಚಣೆಯಾಗಿತ್ತು. ಈ ಕಾಯಿದೆ ಜಾರಿಗೆ ಬಂದಾಗ ಮಠದ ನಿಯಂತ್ರಣದಲ್ಲಿದ್ದ ಗೋಕರ್ಣದ ಶ್ರೀಮಹಾ ಬಲೇಶ್ವರ ಹಾಗೂ ಅಲ್ಲಿನ ಪರಿವಾರ ದೇವರ ಗುಡಿಗಳನ್ನೂ ಕಾಯಿದೆಯ ವ್ಯಾಪ್ತಿಗೆ ತಪ್ಪಾಗಿ ಒಳಪಡಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಇತ್ತ 12ನೇ ಯತಿಗಳ ಕಾಲದಲ್ಲೇ, ಅಂದರೆ 16ನೇ ಶತಮಾನದಲ್ಲೇ ಗೋಕರ್ಣದಿಂದ ರಾಮ ಚಂದ್ರಾಪುರಕ್ಕೆ ಸ್ಥಳಾಂತರಗೊಂಡಿದ್ದ ಶ್ರೀರಾಮಚಂದ್ರಾಪುರ ಮಠ ದೇವಾಲಯದ ಮೇಲೆ ನಿಯಂತ್ರಣ ಹೊಂದಿದ್ದರೂ 1950 ರ ಕಾಯಿದೆಯಿಂದಾದ ತಪ್ಪನ್ನು ಸರಿಪಡಿಸಲು ಅಷ್ಟಾಗಿ ಪ್ರಯತ್ನಿಸಲಿಲ್ಲ. ಹಾಗಾಗಿ ದೇವಾಲಯ ಮಠಕ್ಕೆ ಬದಲು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿತು. ಅರ್ಚನೆ ಮಾಡಿಕೊಂಡು ಬರುತ್ತಿದ್ದ ಉಪಾಧಿವಂತರನ್ನೇ ದೇವಾಲಯದ ಟ್ರಸ್ಟಿಗಳಾಗಿ ನೇಮಕ ಮಾಡಲಾಗಿತ್ತು. ಇವರ ನೇಮಕದ ಹಿಂದೆ ಮಠದ ಅಸ್ತು ಕೂಡ ದೊರಕಿತ್ತು. ಆದರೆ ಮಠದ ನಿರ್ಲಕ್ಷ್ಯ ಹಾಗೂ ಕಾಯಿದೆಯಿಂದಾಗಿ ತಪ್ಪಿದ ನಿಯಂತ್ರಣದಿಂದಾಗಿ ಮಠಕ್ಕೆ ಅಧೀನವಾಗಿ ನಡೆದುಕೊಳ್ಳುವ ವಿಧಿವಿಧಾನಗಳು ಹೆಸರಿಗಷ್ಟೇ ಮುಂದುವರಿದುಕೊಂಡು ಹೋಗಿ ಕಾಲಾಂತರದಲ್ಲಿ ಉಪಾಧಿವಂತರೇ ಗೋಕರ್ಣದ ಬಾಸ್‌ಗಳಾದರು. 1957 ರಲ್ಲಿ ದೇವಾಲಯದ ಟ್ರಸ್ಟಿ ದಾಮೋದರ ದತ್ತಾತ್ರೇಯ ದೀಕ್ಷಿತರು ತೀರಿಕೊಂಡ ನಂತರ ಮತ್ತೆ ಅರ್ಚನೆಯ ಪ್ರಶ್ನೆ ಎದುರಾಯಿತು. ತಮ್ಮ ತಂದೆಯ ಮರಣದಿಂದಾಗಿ ತೆರವಾಗಿರುವ ಸ್ಥಾನವನ್ನು ತನಗೇ ನೀಡಬೇಕೆಂದು ದಾಮೋದರ ದತ್ತಾತ್ರೇಯ ಅವರ ಪುತ್ರ ವಿಘ್ನೇಶ್ವರ ದಾಮೋದರ ದೀಕ್ಷಿತ್ 1950ರ ಬಾಂಬೆ ದತ್ತಿ ಕಾಯಿದೆಯ ಸೆಕ್ಷನ್ 47ರ ಅಡಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ವಿಘ್ನೇಶ್ವರ ದೀಕ್ಷಿತರನ್ನು ಟ್ರಸ್ಟಿಯಾಗಿ ನೇಮಕ ಮಾಡಿತು. ದೇವಾಲಯದ ಏಕಮಾತ್ರ ಜೀವಂತ ಟ್ರಸ್ಟಿಯಾಗಿದ್ದ ಅವರು 2004 ರಲ್ಲಿ ವಿಧಿವಶರಾದಾಗ ಅವರ ಪುತ್ರ ಬಾಲಚಂದ್ರ ದೀಕ್ಷಿತ್ ದೇವಾಲಯ ತಮ್ಮ ಪಿತ್ರಾರ್ಜಿತ ಆಸ್ತಿಯೆಂಬಂತೆ ಹಕ್ಕುಪ್ರತಿಪಾದಿಸಿದರು. ಇವರ ಮಾತಿಗೆ ಕೋರ್ಟಿನಲ್ಲಿ ಕಿಮ್ಮತ್ತು ಸಿಗಲಿಲ್ಲ. ಅಷ್ಟಕ್ಕೂ “1997ರ ಕರ್ನಾಟಕ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ಕಾಯಿದೆ” ಜಾರಿಗೆ ಬಂದ ನಂತರ 1950ರ ಬಾಂಬೆ ದತ್ತಿ ಕಾಯಿದೆ ಅರ್ಥ ಕಳೆದುಕೊಂಡು, ಕರ್ನಾಟಕಕ್ಕೆ ಅನ್ವಯವಾಗುತ್ತಿಲ್ಲ. 1997ರ ಕಾಯಿದೆಯ ಸೆಕ್ಷನ್ 1(4)ಮಠಗಳು ಹಾಗೂ ಮಠಗಳಿಗೆ ಸೇರಿದ ದೇವಸ್ಥಾನಗಳನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಈ ಬಗ್ಗೆ ಎಚ್ಚೆತ್ತುಕೊಂಡ ಗೋಕರ್ಣದ ಸ್ಥಳೀಯರು ಹಾಗೂ ಶ್ರೀರಾಮಚಂದ್ರಾಪುರ ಮಠದ 36ನೇ ಯತಿಗಳಾದ ರಾಘವೇಶ್ವರ ಭಾರತೀ ಸ್ವಾಮೀಜಿಗಳು 58 ವರ್ಷಗಳ ಹಿಂದೆ ಆದ ತಪ್ಪನ್ನು ಸರಿಪಡಿಸಿ, ದೇವಾಲಯವನ್ನು ಅಧಿಸೂಚನೆಯ ವ್ಯಾಪ್ತಿಯಿಂದ ಹೊರಗಿಟ್ಟು ಮಠಕ್ಕೆ ಒಪ್ಪಿಸಬೇಕೆಂದು ಕರ್ನಾಟಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪನವರ ಸರಕಾರ ಆಗಸ್ಟ್ 12ರಂದು ದೇವಾಲಯದ ಆಡಳಿತ ವನ್ನು ಶ್ರೀರಾಮಚಂದ್ರಾಪುರ ಮಠದ ಸುಪರ್ದಿಗೆ ನ್ಯಾಯ ಸಮ್ಮತವಾಗಿ ಒಪ್ಪಿಸಿತ್ತು. ಸರಕಾರದ ಈ ನಿರ್ಧಾರದಿಂದಾಗಿ ಒಂದು ರೀತಿಯಲ್ಲಿ “Floodgates” ತೆರೆದಂತಾಗಿ, ಇತರ ಮಠಗಳೂ ಕೂಡ ಸರಕಾರದ ಈ ಆದೇಶವನ್ನು ಆಧಾರವಾಗಿಟ್ಟುಕೊಂಡು ಪರಂಪರಾಗತವಾಗಿ ತಮಗೆ ಸೇರಬೇಕಾಗಿರುವ, ಆದರೆ ಸದ್ಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ದೇವಾಲಯಗಳನ್ನು ಮರಳಿ ತಮಗೆ ನೀಡುವಂತೆ ಹಕ್ಕು ಪ್ರತಿಪಾದನೆ ಮಾಡಿದರು. ಮಠಗಳು ದೇವಾಲಯಗಳ ಆಡಳಿತವನ್ನು ಕೈಗೆತ್ತಿಕೊಂಡರೆ ತೀರ್ಥಕ್ಷೇತ್ರಗಳ ಅಭಿವೃದ್ಧಿಯೂ ಆಗುತ್ತದೆ ಎಂಬುದನ್ನು ರಾಘವೇಶ್ವರ ಶ್ರೀಗಳು ಗೋಕರ್ಣ ವನ್ನು ಶುದ್ಧಗೊಳಿಸಿ , ವ್ಯವಸ್ಥೆಯನ್ನು ತಂದು ಸಾಭೀತುಪಡಿಸಿದ್ದಾರೆ . ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು “ಧರ್ಮೋ ತ್ಥಾನ ಟ್ರಸ್ಟ್” ಸ್ಥಾಪಿಸಿ ಶಿಥಿಲಗೊಂಡಿರುವ ದೇವಾಲಯಗಳ ಜೀರ್ಣೋದ್ಧಾರದಂತಹ ಮಹತ್ಕಾರ್ಯ ಮಾಡುತ್ತಿದ್ದಾರೆ. ಆದಿ ಚುಂಚನಗಿರಿ ಸ್ವಾಮೀಜಿಯವರು ನಿರ್ಮಿಸಿರುವ ಕಾಲಭೈರವೇಶ್ವರ ದೇವಾಲಯವಂತೂ ಎಲ್ಲರ ಹುಬ್ಬೇರಿಸು ವಂತಿದೆ. ನಮ್ಮ ದೇವಾಲಯಗಳ ಮೇಲಿನ ನಿಯಂತ್ರಣ ಮಠಗಳಿಗೆ ದೊರೆತರೆ ಮುಜರಾಯಿ ಇಲಾಖೆ ಸೇರಿ ಮಸೀದಿ, ಚರ್ಚ್ ಅಭಿವೃದ್ಧಿಯ ಪಾಲಾಗುತ್ತಿದ್ದ ಹುಂಡಿ ಹಣ ದೇವಾಲಯಗಳ ಅಭಿವೃದ್ಧಿಯಂತಹ ಕಾರ್ಯಕ್ಕೆ ಸದ್ವಿನಿಯೋಗವೂ ಆಗುತ್ತದೆ. ಈ ಹಿನ್ನೆಲೆಯಲ್ಲಿ ಗೋಕರ್ಣ ದೇವಾಲಯವನ್ನು ಶ್ರೀರಾಮಚಂದ್ರಾಪುರ ಮಠಕ್ಕೆ ಹಸ್ತಾಂ ತರ ಮಾಡಿರುವುದನ್ನು ಮತ್ತು ಶ್ರೀ ಗಳು ಅಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಧರ್ಮದ ಬಗ್ಗೆ ಕಾಳಜಿ ಇರುವ ನಾಡಿನ ಎಲ್ಲ ಗಣ್ಯರೂ ಸ್ವಾಗತಿಸುವಂತಿದೆ.
ಆದರೆ ಗೋಕರ್ಣದ ಅರ್ಚಕರು ಸುಮ್ಮನಿದ್ದರೇ ?
ಮಹಾಬಲೇಶ್ವರ ದೇವಾಲಯ ತಮ್ಮ ಆಸ್ತಿ ಎಂಬಂತೆ ಬೊಬ್ಬೆ ಹಾಕಲಾರಂಭಿಸಿ, ವಿಷಯದ ಸತ್ಯಾಸತ್ಯತೆಯನ್ನು ಸರಿಯಾಗಿ ಅರಿಯದ ಹಾಗೂ ಅರಿತರೂ ಕಲಹ ತಂದಿಡುವ ಉದ್ದೇಶದಿಂದ ಕೆಲವರು ಬೊಬ್ಬೆ ಹಾಕುತ್ತಿರುವವರಿಗೆ ಕುಮ್ಮಕ್ಕು ನೀಡಿದ್ದರು. ಆದರೆ ಉಡುಪಿಯ ಶ್ರೀಕೃಷ್ಣ ಪೇಜಾವರ ಮಠಕ್ಕೆ ಹೇಗೋ, “ಲಕ್ಷ್ಮಿ”ಯಾಗಿರುವ ಶಾರದೆ ಶೃಂಗೇರಿ ಮಠಕ್ಕೆ ಹೇಗೋ ಹಾಗೆಯೇ ಗೋಕರ್ಣದ ದೇವಾಲಯದ ಮೇಲೆ ಶ್ರೀರಾಮಚಂದ್ರಾಪುರಕ್ಕೂ ಹಕ್ಕಿದೆ. ಹಾಗಂತ ದುಡ್ಡು ಮಾಡುವ ಉದ್ದೇಶದಿಂದ ರಾಘವೇಶ್ವರ ಭಾರತೀ ಅವರು ಯಾರಿಗೋ ಸೇರಿದ್ದ ದೇವಾಲಯವನ್ನು ನಮಗೆ ನೀಡಿ ಎಂದು ಕೇಳಿಕೊಂಡಿರಲಿಲ್ಲ. ಅಸಲಿಗೆ ಸರಕಾರಕ್ಕೆ ದೇವಸ್ಥಾನ ನೀಡಿ ಎಂದು ಮನವಿಯನ್ನೇ ಮಾಡಿಲ್ಲ .
ಇದರಲ್ಲಿ ತಪ್ಪೇನಿದೆ?
ನೀವೇ ಹೇಳಿ, ಮೊದಲಿದ್ದ ಪರಿಸ್ಥಿತಿಯಲ್ಲಿ ಗೋಕರ್ಣ ವೆಂದರೆ ನಿಮಗೆ ಭಕ್ತಿ ಮೂಡುತ್ತಿತ್ತೋ ಆಥವಾ ಓಂ ಬೀಚ್‌ನ ಬಿಕಿನಿಗಳು ನೆನಪಾಗುತ್ತಿದ್ದವೋ? ಒಂದು ದೇವಸ್ಥಾನ ಶಿಥಿಲಗೊಂಡರೆ ಅದರ ಜೀರ್ಣೋದ್ಧಾರ ಕಾರ್ಯವನ್ನು ಮಾಡಬೇಕಾಗುತ್ತದೆ. ಇಂದು ಇಡೀ ಗೋಕರ್ಣದ ಮಹಾ ಬಲೇಶ್ವರ ದೇವಾಲಯ, ಅದರ ಸುತ್ತಲಿನ ಪರಿಸರ ಮಾತ್ರವಲ್ಲ, ಅರ್ಚನೆಯಲ್ಲಿ ತೊಡಗಿರುವವರ ಮನಸ್ಸುಗಳ ಜೀರ್ಣೋದ್ಧಾರ ಕಾರ್ಯವೂ ಆಗುತ್ತಿದೆ . ಅಷ್ಟಕ್ಕೂ ನಾವು ನಮ್ಮ ವಿಶ್ವಾಸದ ಗಂಟನ್ನು ಇಟ್ಟಿರುವುದೇ ಮಠ, ಮಂದಿರಗಳಲ್ಲಿ. ಅಂತಹ ಸ್ಥಳಗಳೇ ರೇಜಿಗೆ ಹುಟ್ಟಿಸುವ ತಾಣಗಳಾದರೆ ಜನರಿಗೆ ದೇವರ ಮೇಲಿನ ವಿಶ್ವಾಸವೇ ಹೊರಟು ಹೋಗದೇ ಇದ್ದೀತೆ? ಮಂಗಳಾರತಿ ತಟ್ಟೆಯ ಮೇಲೆ ಹಾಕಿದ್ದು ನೋಟೋ, ನಾಣ್ಯವೋ ಎಂಬುದನ್ನು ನೋಡಿ ಪ್ರಸಾದ ನೀಡುವ ಅರ್ಚಕರು ಹೋಗಿ, ದೇವರಲ್ಲಿ ಪುರದ ಹಿತ ಬಯಸುವರು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಘವೇಶ್ವರ ಭಾರತೀ ಅವರು ಗೋಕರ್ಣದ ಕಡಲ ಕಿನಾರೆಯ ಕೊಳೆ ತೊಳೆದು ಶುದ್ಧೀಕರಣವನ್ನು ಮಾಡಿದ್ದಾರೆ . ಆದರೂ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ?
ಇನ್ನು ಇದಕ್ಕೆಲ್ಲ ಇನ್ನೊಂದು ಹೊಸ ಉಪದ್ರ ಸೇರ್ಪಡೆಯಾಗಿದೆ . ಸಚಿವ ಜಾರ್ಜ್ ಅವರು ಆರೋಪಮುಕ್ತರಾಗಿ ಬರುತ್ತಿದ್ದಂತೆ , ಈ ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ತುದಿಗಾಲಿನಲ್ಲಿ ನಿಂತಿದ್ದು , ಕೊಡಲಿ ಏಟು ಕೊಟ್ಟಂತಾಗಿದೆ . ಸುಸಜ್ಜಿತವಾಗಿ ಪೂಜಾ ಕಾರ್ಯಗಳು ನಡೆಯುತ್ತಿರುವುದಲ್ಲದೇ, ಮಠದ ಲೆಕ್ಕವನ್ನು ಒಂದು ರುಪಾಯಿ ಆಚೆ ಈಚೆ ಆಗುವುದಕ್ಕೆ ಬಿಟ್ಟಿಲ್ಲ . ಹೀಗಿರುವಾಗ ಇಲ್ಲಿಗೆ ಆಡಳಿತಾಧಿಕಾರಿಯೇಕೆ ? ಆರೋಪಮುಕ್ತರಾಗಿ ಬಂದ ಮೇಲೆ ಕೈಗೊಂಡ ಮೊದಲ ಕೆಲಸವೇ ಆಡಳಿತಾಧಿಕಾರಿಯನ್ನು ನೇಮಿಸುವುದು ಎಂದಾದರೆ ಇದರ ಉದ್ದೇಶವೇನು? ಇದೇ ರೀತಿ ಚರ್ಚ್ , ಮಸೀದಿಗಳನ್ನು ಮುಟ್ಟಲು ಸರಕಾರಕ್ಕೆ ತಾಕತ್ತಿದೆಯೇ ? ಅಸಲಿಗೆ ರಾಮಚಂದ್ರಾಪುರ ಮಠದಲ್ಲಿ ಅಂಥ ಅಕ್ರಮ, ಗಲಾಟೆ , ಗಲಭೆಗಾದರೂ ಏನಿವೆ ?
ಒಂದು ವೇಳೆ ರಾಘವೇಶ್ವರರಿಗೆ ದುಡ್ಡು ಮಾಡುವ ಹಂಬಲವಿದ್ದಿದ್ದರೆ ರಾಮಚಂದ್ರಾಪುರದ ಹಟ್ಟಿಯಲ್ಲಿ ದನಕರುಗಳ ಬದಲು ಒಂದೆರಡು ಇಂಜಿನಿಯ ರಿಂಗ್, ಮೆಡಿಕಲ್ ಕಾಲೇಜುಗಳೆಂಬ ‘ಕಾಮ ಧೇನು’ಗಳನ್ನು ಕಟ್ಟುತ್ತಿದ್ದರು. ಅವರ ಸಾಮಾಜಿಕ ಕಾಳಜಿ ಈಗಾಗಲೇ ಸಾಬೀತಾಗಿದೆ. ಇಲ್ಲದಿದ್ದರೆ ಗೋಮಾತೆಯ ಮಹತ್ವವನ್ನು ಸಾರುವ ಪ್ರತಿಫಲವಿಲ್ಲದ ಕೆಲಸಕ್ಕೆ ಅವರು ಕೈಹಾಕುತ್ತಿರಲಿಲ್ಲ.
ಇವತ್ತು ನಾಸ್ತಿಕವಾದಿ ಕಮ್ಯುನಿಸ್ಟರ ಕೇರಳದಲ್ಲಿ ಅಕ್ಕರೆಯ ಅಪ್ಪುಗೆಯ ಮೂಲಕ ದೇವರ ಮೇಲಿನ ವಿಶ್ವಾಸವನ್ನು ಗಟ್ಟಿಗೊಳಿಸುತ್ತಿರುವ ‘ಅಮ್ಮಾ’, ಆಧ್ಯಾತ್ಮದ ಮೂಲಕ ಜನರಿಗೆ ಮನಃಶಾಂತಿ ನೀಡುತ್ತಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿ, ಯೋಗದ ಮೂಲಕ ಆರೋಗ್ಯಯುತ ಜೀವನ ಮತ್ತು ಆಧ್ಯಾತ್ಮದತ್ತ ನಮ್ಮನ್ನು ಕರೆದೊಯ್ಯುತ್ತಿರುವ ಬಾಬಾ ರಾಮದೇವ್ ಮುಂತಾದವರು ಅಪ್ರತಿಮ ಸೇವೆ ಮಾಡುತ್ತಿದ್ದಾರೆ. ನಾವು ತಾಯಿಯ ನಂತರ ಸ್ಥಾನವನ್ನು ನೀಡಿರುವ ಗೋಮಾತೆಯ ಬಗ್ಗೆ ಅರಿವು ಮೂಡಿಸುತ್ತಿರುವ ರಾಘವೇಶ್ವರ ಭಾರತೀ ಸ್ವಾಮಿಗಳು ಮಾಡುತ್ತಿರುವುದೂ ಆ ರೀತಿಯ ಸೇವೆ ಮತ್ತು ಧರ್ಮಸಂಸ್ಥಾಪನಾ ಕಾರ್ಯವನ್ನೇ.
ಇಂಥವರ ಮಠಕ್ಕೆ ಆಡಳಿತಾಧಿಕಾರಿಯ ನೇಮಿಸುವ ನೆಪದಲ್ಲಿ ಮತ್ತೆ ಗೋಕರ್ಣ ವನ್ನೂ, ಮಠವನ್ನೂ ವಶಕ್ಕೆ ತೆಗೆದುಕೊಳ್ಳುವ ಹುನ್ನಾರ ನಡೆಸಿದ್ದಾರಲ್ಲ ? ಏನೆನ್ನೋಣ ಇವರ ಆಪತ್ಕಾಲದ ಬುದ್ಧಿಗೇ ?
ಹೇ ಆದಿಶಂಕರಾ!
October 4, 2016
October 1, 2016
ನಮಗೆ ಸರ್ಜಿಕಲ್ ಆಪರೇಷನ್ ಏಕೆ ಮುಖ್ಯವಾಗುತ್ತದೆ?
ನಮಗೆ ಸರ್ಜಿಕಲ್ ಆಪರೇಷನ್ ಏಕೆ ಮುಖ್ಯವಾಗುತ್ತದೆ?
ಕಳೆದೊಂದು ವಾರದಿಂದ ಎಲ್ಲರ ಮನಸ್ಸಲ್ಲೂ ಮೂಡುತ್ತಿದ್ದ ಪ್ರಶ್ನೆ ಒಂದೇ. ಉರಿ ದಾಳಿಗೆ ಪ್ರತಿಕಾರವೆಲ್ಲಿ? ನಮ್ಮ ಸೈನಿಕರ ಬಲಿದಾನಕ್ಕೆ ಗೌರವವೆಲ್ಲಿ? ಮೋದಿ ಏನು ಮಾಡುತ್ತಿದ್ದಾರೆ? ಆಗ ಮನಮೋಹನ ಸಿಂಗರನ್ನು ಟೀಕಿಸಿದವರೆಲ್ಲರೂ ಈಗ ಏನು ಹೇಳುತ್ತಾರೆ? ಭಯೋತ್ಪಾದಕ ದಾಳಿಗಳಿಗೆ ಪೂರ್ಣ ವಿರಾಮ ಬೀಳುವುದೆಂದು? ಪಾಕ್ ಸಮವಸ್ತ್ರ ಧಾರಿಗಳೆದುರು ಮಾತ್ರ ನಮ್ಮ ಸೈನ್ಯದ ತಾಕತ್ತೇ? ಸದ್ಯಕ್ಕೆ ಮುಗಿಯುವಂತೆ ಕಾಣದ ಕಾಶ್ಮೀರ ಸಮಸ್ಯೆ ಇರುವವರೆಗೂ ಭಾರತದ ಸ್ಥಿತಿ ಹೀಗೆಯೇ ಮುಂದುವರಿಯುವುದೇ?
ಇಂಥ ಮಾತುಗಳನ್ನು ದೇಶವಾಸಿಗಳು ಸಹಜವಾಗಿ ಆಡುತ್ತಿದ್ದರು.
ಆದರೆ ಆಡಿದಷ್ಟೂ ‘ಉರಿ’ ಆರುತ್ತಿರಲಿಲ್ಲ. ಸಾಮಾನ್ಯನಲ್ಲೂ ಪ್ರತಿಕಾರದ ಜ್ವಾಲೆ, ಕಾಶ್ಮೀರ ಸಮಸ್ಯೆ ಗೊತಿಲ್ಲದವರಲ್ಲೂ ಸೇಡಿನ ಮಾತುಗಳು, ಕೆಲವೊಮ್ಮೆ ಹುಚ್ಚು ಉನ್ಮಾದ, ಕೊನೆಗೆ ಮೋದಿಯತ್ತ ಒಂದು ಟೀಕಾಸ್ತ್ರ. ಅಂದರೆ ಉರಿ ಘಟನೆ ದೇಶವನ್ನು ಭಾವನಾತ್ಮಕವಾಗಿ ಒಂದುಗೂಡಿಸಿಬಿಟ್ಟಿತ್ತು.
ದೇಶ ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿರುವಾಗಲೇ ಆತ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇವೆಲ್ಲಕ್ಕೂ ಒಂದು ಅಂತ್ಯವನ್ನು ಕಾಣಿಸಲು ನಿದ್ರೆಗೆಡುತ್ತಿದ್ದರು. ಚೀಫ್ ಆಫ್ ಆರ್ಮಿ ಸ್ಟಾಫ್, ಅವರ ಡಿಜಿಎಂಒ, ಭದ್ರತಾ ಸಲಹೆಗಾರ ಅಜಿತ್ ಧೋವಲ್, ರಕ್ಷಣಾ ಸಚಿವರು, ವಿದೇಶಾಂಗ ಸಚಿವರು, ಗ್ರಹಸಚಿವರೆಲ್ಲರೂ ಕೋಟಿಗಟ್ಟಲೆ ಜನರ ಭಾವನೆಗೆ ಬೆಲೆ ಕೊಡಲು ಮತ್ತು ದೇಶದ ಧ್ವನಿಯಾಗಲು ಸಜ್ಜಾಗುತ್ತಿದ್ದರು. ಭಯೋತ್ಪಾದನೆಯನ್ನು ಅಂತ್ಯಗೊಳಿಸುವುದರ ಜೊತೆಗೆ ಉರಿಯಲ್ಲಿ ಬಲಿದಾನಿಯಾದ ಯೋಧರಿಗೆ ಅಸಲಿ ಗೌರವವನ್ನು ನೀಡಬೇಕಿತ್ತು. ಮುಖ್ಯವಾಗಿ ಸೈನ್ಯಕ್ಕೆ ತಕ್ಷಣಕ್ಕೆ ಸೇಡು ತೀರಿಸಿಕೊಳ್ಳಬೇಕಿತ್ತು. ಆದರೆ ಎಲ್ಲೆಲ್ಲೂ ಸಮಸ್ಯೆ ಮತ್ತು ಗೊಂದಲಗಳೇ ಗೋಚರವಾಗುತ್ತಿತ್ತು. ಏಕೆಂದರೆ ಭಾರತೀಯ ವ್ಯವಸ್ಥೆಯಲ್ಲಿ ಅಂಥ ತಕ್ಷಣದ ವ್ಯವಸ್ಥೆ ಅಷ್ಟು ಸುಲಭ ಸಾಧ್ಯವಾದ ಪ್ರಕ್ರಿಯೆಯಲ್ಲ. ಉರಿ ದಾಳಿಗೆ ಪ್ರತಿಕಾರ ಮತ್ತು ಭಯೋತ್ಪಾದಕ ನೆಲೆಗಳ ಧ್ವಂಸಕ್ಕೆ ಏನೇ ಯೋಜನೆಗಳನ್ನು ಹಾಕಿಕೊಂಡರೂ ಅದು ನಮ್ಮ ವ್ಯವಸ್ಥೆಯಲ್ಲಿ ಟೀಕೆಗೊಳಗಾಗುತ್ತಿತ್ತು. ಉರಿಯ ಸೇಡಿಗೆ, ಭಯೋತ್ಪಾದಕರ ಅಡ್ಡೆಗಳಿಗೆ ತಕ್ಕ ಉತ್ತರ ನೀಡುವ ಯೋಜನೆಗೆ ಹಲವು ಆಯಾಮಗಳ ತೊಡಕುಗಳು ಎದುರಿಗಿದ್ದವು. ಜೊತೆಗೆ ಸದ್ಯದಲ್ಲೇ ಸಾರ್ಕ್ ಸಮ್ಮೇಳನ ಆರಂಭವಾಗುವುದಿತ್ತು. ಅತ್ತ ಬಲೂಚಿಸ್ತಾನದ ವಿಷಯವನ್ನು ಭಾರತ ಪ್ರಸ್ತಾಪಿಸಿ ಅದು ವಿಶ್ವಾದ್ಯಂತ ಚರ್ಚೆಗೊಳಗಾಗಿತ್ತು. ಪಾಕಿಸ್ತಾನವನ್ನು ವಿಶ್ವದೆದುರು ಏಕಾಂಗಿಯಾಗಿಸದೆ ಯಾವ ಕಾರ್ಯಾಚರಣೆಯೂ ನಡೆಯುವಂತಿರಲಿಲ್ಲ. ಅಲ್ಲದೆ ಕಾಶ್ಮೀರದಲ್ಲಿ ಆಪರೇಷನ್ ಸದ್ಭಾವನಾ ಇದ್ದಾಗ್ಯೂ ಭಾರತೀಯ ಸೈನಿಕರ ದೌರ್ಜನ್ಯ ನಡೆಯುತ್ತಿದೆ ಎಂಬ ಮಿಥ್ಯಾರೋಪ ಜೋರಾಗಿ ಕೇಳಿಬರುತ್ತಿತ್ತು. ಒಂದರ್ಥದಲ್ಲಿ ಭಾರತದ ಸ್ಥಿತಿ ಹೇಗಿತ್ತೆಂದರೆ ವನವಾಸದಲ್ಲಿದ್ದ ಪಾಂಡವರ ಪರಿಸ್ಥಿತಿಯಂತಾಗಿತ್ತು. ಯಾರೇ ಅಧಿಕಾರದಲ್ಲಿದ್ದರೂ ಅದರ ಸ್ಥಿತಿ ಅಂಥದ್ದೇ. ಆದರೆ ಈ ಭಾರಿ ಪಾಂಡವರಲ್ಲಿ ಒಂದು ದೊಡ್ಡ ಅಸ್ತ್ರವಿತ್ತು. ಅವರ ಬಳಿ ಈಗ ಗೀತಾಚಾರ್ಯರಂತೆ ನರೇಂದ್ರ ಮೋದಿ ಇದ್ದರು. ಭದ್ರತಾ ಸಲಹೆಗಾರ ಅಜಿತ್ ಧೋವಲ್ ಇದ್ದರು. ಸಮಾನ ಮನಸ್ಕರ ತಂಡವಿತ್ತು. ಸ್ವಾಭಿಮಾನಕ್ಕೆ ತುಡಿಯುತ್ತಿದ್ದ ಶಕ್ತಿಶಾಲಿ ಪಡೆಯಿತ್ತು. ಅನುಕೂಲಕರವಾದ ಪರಿಸ್ಥಿತಿಯನ್ನು ಮೋದಿ ನಿರ್ಮಾಣ ಮಾಡಿಕೊಂಡಿದ್ದರು.
ಅಂದರೆ,
ಉರಿ ದಾಳಿ ನಡೆದಾಗಲೇ ಮೋದಿಯವರು ಈ ದಾಳಿಗೆ ಕಾರಣರಾದವರನ್ನು ಶಿಕ್ಷಿಸದೇ ಬಿಡೆವು ಮತ್ತು ಲೆಕ್ಕ ಚುಕ್ಕ ಮಾಡೇ ಮಾಡುತ್ತೇವೆ ಎಂದು ಹೇಳಿದ್ದರು. ಉರಿ ಘಟನೆ ನಡೆದ ನಂತರ ಮೊದಲ ಹಂತವಾಗಿ ವಿಶ್ವದ ಎಲ್ಲಾ ದೇಶಗಳಲ್ಲೂ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಬಗ್ಗೆ ರಾಜತಾಂತ್ರಿಕವಾಗಿ ತಮ್ಮ ನಡೆಯನ್ನು ಸ್ಪಷ್ಟಪಡಿಸಿದರು. ಅತ್ತ ವಿಶ್ವಸಂಸ್ಥೆಯಲ್ಲಿ ಸುಷ್ಮಾ ಸ್ವರಾಜ್ ಪಾಕಿಸ್ತಾನಕ್ಕೆ ಸ್ಪಷ್ಟ ತಿರುಗೇಟು ಕೊಟ್ಟುಬಂದರು. ಪಾಕಿಸ್ತಾನಕ್ಕೆ ಭಾರತ ರಾಜತಾಂತ್ರಿಕ ಮಟ್ಟದಲ್ಲಿ ಮುಂದುವರಿಯುತ್ತಿದೆ ಎಂದು ತಿಳಿವಳಿಕೆ ಮೂಡಿಸಿ ಅದರ ದಿಕ್ಕು ತಪ್ಪಿಸಿದ್ದರು. ಹೀಗೆ ಪಾಕಿಸ್ತಾನ ಊಹಿಸಲೂ ಆಗದಂತೆ ಸರ್ಜಿಕಲ್ ಆಪರೇಶನ್‍ಗೆ ಸಿದ್ಧವಾಗುತ್ತಿದ್ದಾಗಲೇ ಇತ್ತ ಅದರ ಅರಿವಿಲ್ಲದೆ ಜನ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಮೋದಿಯವರ ಮೇಲೆ ಎಸೆಯುತ್ತಿದ್ದರು. ಪ್ರಳಯಕಾಲದ ಮುನ್ನ ಮಹಾಮೌನವೊಂದು ನೆಲೆಸುತ್ತದೆ ಎಂಬ ರೂಪಕದಂತೆ ಎಲ್ಲವೂ ಕಂಡುಬರುತ್ತಿತ್ತು. ಅಂದು ಮಧ್ಯರಾತ್ರಿ ಸರ್ಜಿಕಲ್ ಆಪರೇಶನ್ ನಡೆದು ಮರುದಿನ ಅದು ಜಗತ್ತಿಗೆ ತಿಳಿಯುವ ಹೊತ್ತಿಗೂ ಜನರ ಮನಸ್ಸಿನಲ್ಲಿ ‘ಉರಿ’ ಯ ಕಾವು ಇನ್ನೂ ಇತ್ತು!
ಸರ್ಜಿಕಲ್ ಸ್ಟೈಕ್. ಬೆಳ್ಳಂಬೆಳಗ್ಗೆ ದೇಶಕ್ಕೆ ಅಪರಿಚಿತವಾದ ಈ ಪದ ಇಂದು ಎದೆಯಲ್ಲಿ ಪುಳಕಗಳನ್ನು ಹುಟ್ಟುಹಾಕುತ್ತಿದೆ. ಎದೆ ಉಬ್ಬುತ್ತಿದೆ. ದೇಶದ ನಕಾಶೆಯೇ ಬದಲಾಗಿಹೋದೆಯೇನೋ ಎನಿಸಲಾರಂಭಿಸುತ್ತಿದೆ. ಇದ್ದಕ್ಕಿದ್ದಂತೆ ಹೊಡೆದು ಬರುವುದು, ಭಯೋತ್ಪಾದಕರಿಗೆ ಆಘಾತ ಸೃಷ್ಟಿಸುವುದು, ಉಗ್ರರಿಗೆ ತಕ್ಕ ಉತ್ತರವನ್ನು ಕೊಡುವುದು ಭಾರತಕ್ಕೆ ಎಂದಾದರೂ ಸಾಧ್ಯವೇ ಎಂದು ಭಾವಿಸುತ್ತಿದ್ದವರ ಮನಸೀಗ ಮೂಕವಾಗಿದೆ. ಸರ್ಜಿಕಲ್ ಸ್ಟೈಕ್ ದೇಶವನ್ನು ಆವರಿಸಿಬಿಟ್ಟಿದೆ.
ಇಂಥ ಒಂದು ಕಾರ್ಯಾಚರಣೆ ಕೇವಲ ಒಂದು ಮಧ್ಯರಾತ್ರಿಯ ನಂತರ ಅಚಾನಕ್ಕಾಗಿ ನಡೆಯಿತು ಎಂದುಕೊಳ್ಳಬಹುದೇ? ವಿಶ್ವಸಂಸ್ಥೆಯ ಸಭೆಯಲ್ಲಿ ಭಾರತೀಯ ಪ್ರತಿನಿಧಿಯೊಬ್ಬರ ಬಾಯಿಂದ ಪಾಕಿನ ಭಯೋತ್ಪಾದಕ ನೀತಿಯನ್ನು ಬಯಲಿಗೆಳೆಸಿದ್ದು, ಸಾರ್ಕ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲಾರೆ ಎಂದಿದ್ದು, ಇತರ ದೇಶಗಳೂ ಪಾಕಿಸ್ತಾನದ ಸಾರ್ಕ್ ಸಮ್ಮೇಳನವನ್ನು ಬಹಿಷ್ಕರಿಸಿದ್ದು ಎಲ್ಲವೂ ಒಂದೆರಡು ಗಂಟೆಗಳ ಕಾಲದ ಪ್ರಕ್ರಿಯೆಗಳಲ್ಲ. ಹೆಡೆಮುರಿಕಟ್ಟಲು ಶತ್ರುವನ್ನು ಏಕಾಂಗಿ ಮಾಡಬೇಕು ಎಂದು ತಂತ್ರ ಹೂಡಿದ್ದರು ತಂತ್ರಗಾರ ಮೋದಿ ಮತ್ತು ಅವರ ಭದ್ರತಾ ಸಲಹೆಗಾರ ಅಜಿತ್ ಧೋವಲ್. ಜಗತ್ತಿನೆದುರು ಪಾಕಿಸ್ತಾನವನ್ನು ಏಕಾಂಗಿ ಮಾಡದೆ ಎಲ್ ಒಸಿ ದಾಟಿ ಆಪರೇಷನ್ ಕೈಗೊಂಡಿದ್ದರೆ ಪಾಕಿಸ್ತಾನ ಈಗಿರುವಂತೆ ತೆಪ್ಪಗಂತೂ ಇರುತ್ತಿರಲಿಲ್ಲ. ಅದು ಕಾಶ್ಮೀರ ವಿಷಯವನ್ನು ತೆಗೆದು ಅರಚಿಕೊಳ್ಳುತ್ತಿತ್ತು. ಮಾನವಹಕ್ಕುಗಳ ದಮನಕ್ಕೆ ಇದು ಉದಾಹರಣೆ ಎಂದು ಬೊಬ್ಬೆ ಹೊಡೆಯುತ್ತಿತ್ತು. ನರೇಂದ್ರ ಮೋದಿಯವರ ಚಾಣಾಕ್ಷ ನಡೆಯಿಂದ ಈಗ ಪಾಕಿಸ್ತಾನವೇನು ವಿಶ್ವದ ಎಲ್ಲಾ ದೇಶಗಳೂ ಕಾರ್ಯಾಚರಣೆಯ ವಿರುದ್ಧ ಉಸಿರೆತ್ತುತ್ತಿಲ್ಲ. ಕಾರ್ಯಾಚರಣೆಯ ಬಗ್ಗೆ ಯಾವ ದೇಶವೂ ಆಕ್ಷೇಪ ವ್ಯಕ್ತಪಡಿಸಿಲ್ಲ. ನೆರೆಯ ರಾಷ್ಟ್ರವಾದ ಬಾಂಗ್ಲಾದೇಶವೂ ಭಾರತದ ಕಾರ್ಯಾಚರಣೆಯನ್ನು ಬೆಂಬಲಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಪಡೆದಿರುವ ರಾಷ್ರಗಳೂ ಕಾರ್ಯಚರಣೆ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸುತ್ತಿಲ್ಲ. ಸ್ವತಃ ಅಮೆರಿಕವೇ ಇದು ಭಾರತ ಮತ್ತು ಪಾಕಿಸ್ತಾನಗಳ ಸಮಸ್ಯೆಯಾಗಿರುವುದರಿಂದ ನಾವು ಮಧ್ಯ ಪ್ರವೇಶಿಸಲಾರೆವು ಎಂದು ಹೇಳಿದೆ. ಪಾಕಿಸ್ತಾನದ ಆಪ್ತ ರಾಷ್ಟ್ರ ಚೀನಾ ಕೂಡ ನಿಶಬ್ದವಾಗಿದೆ.
ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ವಿದೇಶ ಪ್ರವಾಸ ಮಾಡಿದ್ದೊಂದನ್ನು ಬಿಟ್ಟು ಏನು ಮಾಡಿದ್ದಾರೆ ಎಂದು ಕೇಳುತ್ತಿದ್ದವರಿಗೆ ಈಗ ಉತ್ತರ ಸಿಕ್ಕಿದೆ. ನಾಯಕರ ಕೈಕುಲುಕಿ, ಒಪ್ಪಂದಗಳಿಗೆ ಸಹಿ ಹಾಕಿ ಬರುತ್ತಿದ್ದ ಪರಂಪರೆಯನ್ನು ದಾಟಿ ಆಯಾಯ ದೇಶಗಳ ಜನರ ಮನಸ್ಸು ಗೆಲ್ಲುತ್ತಿದ್ದ ಮೋದಿಯ ತಂತ್ರ ಈಗ ನಮ್ಮ ಅರಿವಿಗೆ ಬರುತ್ತಿದೆ.
ಈ ಸ್ಥಿತಿ 5 ವರ್ಷಗಳ ಹಿಂದೆ ನಡೆದಿದ್ದರೆ ಅಂತಾರಾಷ್ಟ್ರೀಯ ಸಮುದಾಯ ಹೇಗೆ ಪ್ರತಿಕ್ರಯಿಸುತ್ತಿತ್ತು ಎಂಬುದನ್ನು ಒಮ್ಮೆ ಆಲೋಚಿಸಬೇಕು! ಭಾರತ ಗಡಿ ನಿಯಮವನ್ನು ಉಲ್ಲಂಘಿಸಿದೆ ಎಂದು ಕೆಲವು ದೇಶವಾದರೂ ಹೇಳುತ್ತಿರಲಿಲ್ಲವೇ? ಭಯೋತ್ಪಾದಕರ ದಮನದ ಹೆಸರಿನಲ್ಲಿ ಭಾರತ ಪಾಕ್ ಅಕ್ರಮಿತ ಕಾಶ್ಮೀರದ ಕಬಳಿಕೆಗೆ ಮುಂದಾಗಿದೆ ಎಂದು ಹೇಳುತ್ತಿರಲಿಲ್ಲವೇ? ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡುತ್ತಿರಲಿಲ್ಲವೇ? ಖಂಡಿತಾ ಮಾಡುತ್ತಿತ್ತು. ವಿಚಿತ್ರ ಎಂದರೆ ಈಗ ಅದಾವುದೂ ನಡೆಯಲಿಲ್ಲ. ಕಾರಣ ಮೋದಿ ಮತ್ತು ಅವರ ಚಾಣಾಕ್ಷ ತಂಡ. ಅದರ ಫಲ ಸರ್ಜಿಕಲ್ ಅಪರೇಷನ್.
ಇದಕ್ಕಿಂತ ಮೊದಲು ನಾವು ಇಸ್ರೇಲಿನ ಕಥೆಗಳನ್ನು ಕೇಳುತ್ತಿದ್ದವು. ಆಪರೇಷನ್ ಎಂಟೆಬೆ, ಆಪರೇಷನ್ ಮ್ಯೂನಿಚ್, ಆಪರೇಷನ್ ಬ್ಯಾಬಿಲೋನ್ ಬಗ್ಗೆ ಕೇಳಿದ್ದೆವು ಸರ್ಜಿಕಲ್ ಆಪರೇಷನ್‍ಗಳನ್ನು ಇಸ್ರೇಲ್ ನಂಥ ದೇಶ ಮಾತ್ರ ಮಾಡಬಲ್ಲದು ಎಂದೇ ನಾವು ಅಂದುಕೊಂಡಿದ್ದೆವು.ಅಮೆರಿಕಾ ಕೂಡಾ ಅಂಥ ಕಾರ್ಯಚರಣೆ ನಡೆಸಿದ ಕಥೆಗಳನ್ನು ಕೇಳಿ ಪುಳಕಗೊಳ್ಳುವುದಷ್ಟೇ ಇದುವರೆಗೆ ನಮ್ಮ ಭಾಗ್ಯ ಎಂದುಕೊಳ್ಳುತ್ತಿದ್ದವು. ಈಗ ಅಂಥ ಪುಳಕದ ಭಾವವನ್ನು ಕೊಟ್ಟವರು ಮೋದಿ ಮತ್ತವರ ತಂಡ. ನಿಜ ಭಾರತೀಯ ಪಡೆಗಳು ಪಾಕಿಸ್ತಾನಕ್ಕೆ ನುಗ್ಗಲಿಲ್ಲ. ಕನಿಷ್ಟ ಎಲ್ ಒಸಿ ದಾಟುವ ತಾಕತ್ತೂ ನಮಗೆ ಇದುವರೆಗೆ ಇರಲಿಲ್ಲ! ಗಡಿ ದಾಟದೆ, ನಮ್ಮ ಅಧಿಕೃತ ಭೂಭಾಗದೊಳಗೆ ನುಗ್ಗಿ ಹೊಡೆದ ಕಾರ್ಯಾಚರಣೆ ನಮಗೆ ಇಷ್ಟು ಸಂತಸವನ್ನು ತರಲು ನಮಗೆ 70 ವರ್ಷಗಳು ಬೇಕಾದವು. ಅಷ್ಟು ವರ್ಷ ನಾವು ಉರಿಯಲ್ಲಿ ಬೇಯಬೇಕಾಯಿತು.
ಅದರ ಹೊರತಾಗಿಯೂ ನಮಗೆ ಸರ್ಜಿಕಲ್ ಆಪರೇಷನ್ ಏಕೆ ಮುಖ್ಯವಾಗುತ್ತದೆ?
1948ರಲ್ಲೂ ನಾವು ಪಾಕ್ ಗಡಿಗೆ ನುಗ್ಗಿದ್ದೆವು. ನಾರ್ದರ್ನ್ ಪ್ರಾನಿನ್ಸ್ ವರೆಗೂ ಮುಟ್ಟಿ ಪಾಕಿಸ್ತಾನವನ್ನು ಇನ್ನಿಲ್ಲದಂತೆ ಕಾಡಿದ್ದೆವು. ಒಂದೆಡೆ ಸಮಸ್ಯೆ ಅಂತಾರಾಷ್ಟ್ರೀಕರಣವಾಯಿತು. ಇನ್ನೊಂದೆಡೆ ನಮಗೆ ಕಾಶ್ಮೀರವನ್ನು ಉಳಿಸಿಕೊಳ್ಳಬೇಕಿತ್ತು. ಆಗ ಜನರಲ್ ತಿಮ್ಮಯ್ಯ ಎಂಬ ಮಹಾಯೋಧ ಹುಟ್ಟಿದ್ದ. ಎಷ್ಟೆಂದರೆ ಇಂದು ಪಾಕ್ ಆಕ್ರಮಿತ ಕಾಶ್ಮೀರ ಎಂದು ಯಾವುದನ್ನು ಕರೆಯುತ್ತೇವೆಯೋ ಆ ನೆಲದ ಜನರೇ ‘ನಮ್ಮನ್ನು ತಿಮ್ಮಯ್ಯ ಆಳುವುದಾದರೆ ನಾವು ಯಾವ ಸಂವಿಧಾನಕ್ಕೆ ಬೇಕಾದರೂ ತಲೆಬಾಗುತ್ತೇವೆ’ ಎಂದಿದ್ದರು. ಅಂದು ಉರಿಯನ್ನು ರಕ್ಷಿಸಿಕೊಳ್ಳಲು ನೌಶೇರ್ ಕಾ ಶೇರ್ ಬ್ರಿಗೇಡಿಯರ್ ಮಹಮ್ಮದ್ ಉಸ್ಮಾನ್ ಎಂಬವರು ಬಲಿದಾನಿಯಾಗಿದ್ದರು. ನಂತರ ಉಸ್ಮಾನ್ ಮಹಾವೀರ ಚಕ್ರ ಗೌರವಕ್ಕೆ ಪಾತ್ರರಾದರು. ಮತ್ತೆ ಅದೇ ನೆಲದಲ್ಲಿ ನಮ್ಮ ಸೈನಿಕರು ಗುಂಪು ಗುಂಪಾಗಿ ಸಾಯುವುದೆಂದರೆ? ಮಹಮದ್ ಉಸ್ಮಾನ್ ಅವರಿಗೆ ಸಂದ ಶೌರ್ಯ ಪದಕಕ್ಕೆ ಬೆಲೆಯೇನು ಬಂದೀತು? ಅಂಥ ನೂರಾರು ಜನ ಯೋಧರು ನಮ್ಮ ಕಾಶ್ಮೀರಕ್ಕಾಗಿ ಬಲಿಯಾಗಿದ್ದರು. ಆದರೂ ನಮಗೆ ಭಯೋತ್ಪಾದಕರ ಶಿಬಿರಗಳನ್ನು ಮಟ್ಟ ಹಾಕುವ ಧೈರ್ಯ ಬಂದಿರಲಿಲ್ಲ.
ಮುಂದೆ 1965ರಲ್ಲಿ ಪಾಕಿಸ್ತಾನ ಪಡೆಗಳ ವಿರುದ್ಧ ಭಾರತೀಯ ಪಡೆಗಳು ಭಾರೀ ಸಂಖ್ಯೆಯಲ್ಲಿ ಗಡಿ ನಿಯಂತ್ರಣಾ ರೇಖೆ ದಾಟಿ ಕಾರ್ಯಾಚರಣೆಯನ್ನು ನಡೆಸಿತ್ತು. ಸಿಂಧ್, ಹೈದರಾಬಾದ್, ಗದ್ರಾಗಳನ್ನು ವಶಪಡಿಸಿಕೊಂಡಿತ್ತು. ಆಗಲೂ ಪಾಕಿಸ್ತಾನ ಪತರಗುಟ್ಟಿಹೋಗಿತ್ತು. ಅದೂ ಕೂಡಾ ಮುಂದೆ ಯುದ್ಧದ ಸ್ವರೂಪಕ್ಕೆ ಬದಲಾಯಿತು. ಆಗಲೂ ಪಾಕಿಸ್ತಾನ ಘಟನೆಯನ್ನು ಅಂತಾರಾಷ್ಟ್ರೀಯ ರಂಗದ ಮುಂದಿಟ್ಟು ತನ್ನ ಎಂದಿನ ಚಾಳಿಯನ್ನು ಮುಂದುವರಿಸಿತು. ಮುಂದೆ 71ರಲ್ಲಿ ಬಾಂಗ್ಲಾ ವಿಮೋಚನೆ ಕಾರ್ಯಾಚರಣೆಯಲ್ಲೂ ಗಡಿ ದಾಟಿದ್ದೆವು. ಅದೇ ಕೊನೆ ಅಲ್ಲಿಂದ ಲೈನ್ ಆಫ್ ಕಂಟ್ರೋಲ್ ಎಂಬ ಅಗೋಚರ ಗೆರೆಯನ್ನು ದಾಟುವ ಧೈರ್ಯವೇ ನಮ್ಮನ್ನಾಳಿದವರಿಗೆ ಬರಲಿಲ್ಲ. ಅದನ್ನು ದಾಟುವ ಸಂದರ್ಭವಿದ್ದರೂ, ಅನಿವಾರ್ಯತೆಯಿದ್ದರೂ ನಾವು ಎಲ್‍ಒಸಿಯನ್ನು ದಾಟಲಿಲ್ಲ. ಕೊನೆಕೊನೆಗೆ ಅದೆಂಥಾ ಸಂದಿಗ್ದ ಪರಿಸ್ಥಿತಿ ಬಂದರೂ ಎಲ್‍ಒಸಿಯನ್ನು ದಾಟಬಾರದು ಎಂಬ ಭಾವನೆ ನಮ್ಮನ್ನಾಳಿದವರಿಗೆ ಬಲಿಯುತ್ತಾ ಬಂದುಬಿಟ್ಟಿತು. ಭಯೋತ್ಪಾದನೆ ಮೇರೆ ಮೀರಲು ನಮ್ಮ ಈ ಭಾವನೆಯೂ ಒಂದು ಕಾರಣ ಎಂಬುದನ್ನು ನಾವು ಮರೆಯಬಾರದು. ನಮ್ಮ ಎಲ್‍ಒಸಿ ದಾಟಲಾರದ ಮನಸ್ಥಿತಿಯನ್ನು ಭಯೋತ್ಪಾದಕರು ‘ಹಿಂದೂಸ್ಥಾನ್ ಏಕ್ ಪರಿಶಾನ್ ಮುಲ್ಕ್’ ಎಂದು ಹಗುರವಾಗಿ ಮಾತಾಡುವಷ್ಟು ಕೊಬ್ಬಿದ್ದರು. ಸರ್ಜಿಕಲ್ ಆಪರೇಷನ್ ನಂತರ ಈಗ
ಹಿಂದೂಸ್ಥಾನ್ ಏಕ್ ಪರಿಶಾನ್ ಮುಲ್ಕ್ ಎನ್ನುವ ಧೈರ್ಯಯನ್ನು ಯಾರು ತಾನೇ ತೋರಿಸಿಯಾನು?
ಇಷ್ಟೇ ಅಲ್ಲದೆ ಸರ್ಜಿಕಲ್ ಆಪರೇಶನ್ ಮತ್ತು ಒಂದು ರೀತಿಯಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತದೆ. ಈ ಆಪರೇಶನ್ ಮೂಲಕ ಮೋದಿಯವರು ಮುಂದಾಗಬಹುದಾದ ಬಹುದೊಡ್ಡ ಯುದ್ಧವೊಂದನ್ನು ತಪ್ಪಿಸಿದ್ದಾರೆ. ಇಂಥ ಸಮಸ್ಯೆ ಉತ್ತರ ಕೋರಿಯ ಮತ್ತು ದಕ್ಷಿಣ ಕೋರಿಯದಲ್ಲೂ ಇದೆ. ಚೀನಾ ಮತ್ತು ಜಪಾನ್ ನಡುವೆ ಕೂಡಾ ಇದೆ. ಭಾರತ ಕೈಗೊಳ್ಳುವ ಒಂದು ನಿರ್ಧಾರ ಏಷ್ಯಾದ ಸ್ಥಿತಿಯನ್ನೇ ಬದಲು ಮಾಡಿಬಿಡಬಲ್ಲದು. ಎರಡನೆಯ ಮಹಾಯುದ್ಧ ಕಾಲದ ಕೂಟಗಳು ಸುಲಭವಾಗಿ ರಚನೆಯಾಗಿ ಜಗತ್ತು ನಾಶವಾಗುವ ಸಂದರ್ಭವೂ ಇಲ್ಲದಿಲ್ಲ. ಬೆಟ್ಟವಾಗಬಹುದಾದ ಸಮಸ್ಯೆಯನ್ನು ಕಡ್ಡಿಯಿಂದ ನಿವಾರಿಸಿದಂತೆ ಮಾಡಲು ಮೋದಿಯಂತಹ ನಾಯಕನಿಂದ ಮಾತ್ರ ಸಾಧ್ಯ ಎಂದರೂ ಸುಳ್ಳಲ್ಲ.
ಇದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನ ಏರಿದೆ. ಭಯೋತ್ಪಾದನೆಯ ವಿರುದ್ಧ ಸಮರದಲ್ಲಿ ಭಾರತವೂ ಒಂದು ಪ್ರಮುಖ ರಾಷ್ಟ್ರವಾಗಿ ಮೂಡಿ ಬಂದಿದೆ. ಭಯೋತ್ಪಾದನೆಯಿಂದ ನರಳಿದ ಅನೇಕ ದೇಶಗಳ ಪಾಲಿಗೆ ಭಾರತದ ಈ ನಡೆ ಆಶಾಕಿರಣವಾಗಿದೆ. ಎಲ್ಲಾ ದೇಶಗಳ ಜೊತೆ ಮೋದಿ ಇಟ್ಟುಕೊಂಡ ಉತ್ತಮ ಸಂಬಂಧ, ಪ್ರಬಲ ರಾಷ್ರಗಳೂ ತಲೆದೂಗುವಂತಾ ನಿರ್ಧಾರಗಳು, ಶಾಂತಿಗೆ ಹಾತೊರೆಯುವ ದೇಶದ ಅಂತಸತ್ವದ ಮಂಡನೆ, ಭಾರತೀಯ ಪಿಲಾಸಫಿಯ ವಕ್ತಾರನಂತೆ ಕಾಣುವ ಮಾತುಗಾರಿಕೆ ಇವೆಲ್ಲವೂ ಮೊನ್ನೆ ನಡೆದ ಸರ್ಜಿಕಲ್ ಆಪರೇಶನ್‍ನಲ್ಲಿ ಪ್ರಮುಖ ಪಾತ್ರ ವಹಿಸಿದಂತೆ ಕಾಣುತ್ತಿತ್ತು .

September 30, 2016
September 28, 2016
September 24, 2016
ಕಳೆದಿದೆ 108 ವರ್ಷ, ಆದರೂ ಅವನೆಂದರೆ ಏನೋ ಹರುಷ!
ಕಳೆದಿದೆ 108 ವರ್ಷ, ಆದರೂ ಅವನೆಂದರೆ ಏನೋ ಹರುಷ!
ಒಂದು ದಿನ ಸಾಯಂಕಾಲ ವೀರಕಲಿಗಳ ಕತೆ ಹೇಳುತ್ತಿದ್ದ ಅಪ್ಪ ಮುಂದೆ ಮುಂದೆ ಸಾಗುತ್ತಿದ್ದರೆ, ಮೂರು ವರ್ಷದ ಮಗ ಹಿಂದೆ ಹಿಂದೆ ಹೆಜ್ಜೆ ಹಾಕುತ್ತಿದ್ದ. ಅಪ್ಪನ ಕತೆ ಮುಂದು ವರಿದಿತ್ತು. ಗದ್ದೆ ದಾಟಿ ಆಚೆ ಬದಿಗೆ ಬಂದು ಸೇರಿದ್ದೂ ಆಯಿತು. ಆದರೆ ಬರಬರುತ್ತಾ ಹೆಜ್ಜೆ ಸಪ್ಪಳವೇ ನಿಂತುಹೋಗಿತ್ತು. ಹಿಂದಿರುಗಿ ನೋಡಿದರೆ ಮಗನೇ ಇಲ್ಲ. ನಡೆದು ಬಂದ ದಾರಿಯಲ್ಲೇ ವಾಪಸ್ ಬಂದರೆ ಆ ಮೂರು ವರ್ಷದ ಬಾಲಕ ಗದ್ದೆಯಲ್ಲಿ ಗುಂಡಿ ತೋಡುತ್ತಿದ್ದ. ಆಶ್ಚರ್ಯಚಕಿತನಾದ ಅಪ್ಪ, ಏನು ಮಾಡುತ್ತಿ ದ್ದೀಯಾ? ಅಂತ ಪ್ರಶ್ನಿಸಿದಾಗ ಮಗ ಹೇಳಿದ-‘ಅಪ್ಪಾ, ಈ ಗದ್ದೆ ಯಲ್ಲೆಲ್ಲ ಬಾಂಬ್ ಬೆಳೆಯಬೇಕು. ಅದಕ್ಕೇ ಬಾಂಬ್ ಗಿಡ ನೆಡಲು ಗುಂಡಿ ತೋಡುತ್ತಿದ್ದೇನೆ’!
ಅವನೇ ಭಗತ್ ಸಿಂಗ್.
ಅತ್ಯಂತ ಎಳೆ ವಯಸ್ಸಿನಲ್ಲೇ ಆತನನ್ನು ಅತಿಯಾಗಿ ಕಾಡಿದ್ದು 1919ರಲ್ಲಿ ಸಂಭವಿಸಿದ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ. ಅಂದು ಸಾವಿರಾರು ಜನರು ಹತ್ಯೆಯಾಗಿರುವ ಸುದ್ದಿ ಎಲ್ಲೆಡೆಯೂ ಹಬ್ಬಿತ್ತು. ಶಾಲೆ ಬಿಟ್ಟ ಕೂಡಲೇ ತಂಗಿಯ ಕೈಗೆ ಬ್ಯಾಗ್ ಕೊಟ್ಟ ಭಗತ್, ಅದೆತ್ತಲೋ ಹೆಜ್ಜೆ ಹಾಕಿದ. ರಾತ್ರಿ ಮನೆಗೆ ಮರಳಿದಾಗ ಕೈಯಲ್ಲಿ ಇಂಕಿನ ಬಾಟಲಿಯಿತ್ತು. ಅದರಲ್ಲಿ ಶಾಯಿಯ ಬದಲು ಮಣ್ಣು ತುಂಬಿತ್ತು. ಆ ಮಣ್ಣು ಮನೆಯ ಪೂಜಾ ಕೊಠಡಿ ಸೇರಿ ನಿತ್ಯ ಆರಾಧನೆಗೆ ಭಾಜನವಾಯಿತು. ಅಷ್ಟಕ್ಕೂ ಅದು ಜಲಿಯನ್ ವಾಲಾಬಾಗ್‌ನಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದ ದೇಶವಾಸಿಗಳ ರಕ್ತದಿಂದ ತೊಯ್ದಿದ್ದ ಮಣ್ಣಾಗಿತ್ತು!
1922ರಲ್ಲಿ ಗೋರಕ್‌ಪುರ ಜಿಲ್ಲೆಯ ಚೌರಿಚೌರಾ ಎಂಬಲ್ಲಿ ಕಾಂಗ್ರೆಸ್ ಮೆರವಣಿಗೆಯೊಂದನ್ನು ಆಯೋಜಿಸಿತ್ತು. ಆದರೆ ಪೊಲೀಸರು ಅಮಾಯಕರ ಮೇಲೆ ಲಾಠಿ ಪ್ರಹಾರ ಮಾಡಿದಾಗ ರೊಚ್ಚಿಗೆದ್ದ ಜನ, 22 ಪೊಲೀಸರನ್ನು ಠಾಣೆಯೊಳಗೆ ಕೂಡಿಹಾಕಿ ಸಜೀವ ದಹನ ಮಾಡಿದರು. ಮನನೊಂದ ಗಾಂಧೀಜಿ ದೇಶಾದ್ಯಂತ ನಡೆಯುತ್ತಿದ್ದ ‘ಅಸಹಕಾರ ಚಳವಳಿ’ಯಿಂದಲೇ ಹಿಂದೆ ಸರಿದರು. 22 ಪೊಲೀಸರನ್ನು ಕೊಂದರೆಂಬ ಕಾರಣಕ್ಕೆ ಅಸಹಕಾರದಂತಹ ಮಹತ್ವದ ಚಳವಳಿಯನ್ನೇ ಕೈಬಿಟ್ಟಿದ್ದು ಸರಿಯೆ? ತನ್ನ ಬಾಲ್ಯದ ಹೀರೋ ಕರ್ತಾರ್ ಸಿಂಗ್‌ನನ್ನು ಗಲ್ಲಿಗೇರಿಸಿದಾಗ ಕಾಂಗ್ರೆಸ್ಸಿಗರೇಕೆ ಧ್ವನಿಯೆತ್ತಲಿಲ್ಲ? ಪೊಲೀಸರನ್ನು ಕೊಂದಾಗ ಮಾತ್ರ ಅಹಿಂಸಾವಾದ ಜಾಗೃತವಾಗುವುದೇಕೆ? ಎಂಬ ಪ್ರಶ್ನೆಗಳು 15 ವರ್ಷದ ಭಗತ್ ಸಿಂಗ್‌ನನ್ನು ಕಾಡಲಾರಂಭಿಸಿದವು. ಅದರಲ್ಲೂ ಲಾಲಾಲಜಪತ್ ರಾಯ್ ಪ್ರಾರಂಭಿಸಿದ್ದ ಲಾಹೋರ್‌ನ ನ್ಯಾಷನಲ್ ಕಾಲೇಜು ಸೇರಿದ ನಂತರ ಭಗತ್ ಸಂಪೂರ್ಣವಾಗಿ ಬದಲಾದ.
ಅದು 1928, ಅಕ್ಟೋಬರ್ 30.
ಸೈಮನ್ ಆಯೋಗ ಇಂಗ್ಲೆಂಡ್‌ನಿಂದ ಆಗಮಿಸಿತ್ತು, ಭಾರ ತೀಯರಿಗೆ ಎಷ್ಟು ಸ್ವಾತಂತ್ರ್ಯ ಕೊಡಬೇಕೆಂಬುದನ್ನು ನಿರ್ಧರಿಸಲು. ಅದು ಲಾಹೋರ್ ರೈಲು ನಿಲ್ದಾಣಕ್ಕೆ ಬಂದಿಳಿಯುವ ವೇಳೆಗೆ ಲಾಲಾ ಜಲಪತ್‌ರಾಯ್ ಹಾಗೂ ಪಂಡಿತ್ ಮದನ್ ಮೋಹನ್ ಮಾಳವೀಯ ನೇತೃತ್ವದಲ್ಲಿ ‘ನೌಜವಾನ್ ಭಾರತ್ ಸಭಾ’ ಭಾರಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಕಪ್ಪು ಬಾವುಟಗಳನ್ನು ಹಿಡಿದಿದ್ದ ಪ್ರತಿಭಟನಾಕಾರರಿಗೆ ಹಿಂದೆ ಸರಿಯುವಂತೆ ಖಾಕಿಧಾರಿಗಳು ಸೂಚನೆ ನೀಡಿದರು. ಯಾರೂ ಕದಲಲಿಲ್ಲ. ಪೊಲೀಸ್ ಸೂಪ ರಿಂಟೆಂಡೆಂಟ್ ಸ್ಯಾಂಡರ್ಸ್, ಲಾಠಿಚಾರ್ಜ್‌ಗೆ ಆದೇಶ ನೀಡಿದ. ಸ್ಕಾಟ್ ಎಂಬ ಪೊಲೀಸ್ ಅಧಿಕಾರಿ ವಯೋವೃದ್ಧ ಲಾಲಾ ಲಜಪತ್ ರಾಯ್ ಅವರ ಎದೆಗೆ ಲಾಠಿಯಿಂದ ಬಡಿದು ಪ್ರಾಣಾಂತಿಕವಾಗಿ ಗಾಯಗೊಳಿಸಿದ. 18 ದಿನಗಳ ಕಾಲ (1928, ನವೆಂಬರ್ 17) ನರಳಿದ ಲಜಪತ್ ರಾಯ್ ನಮ್ಮನ್ನಗಲಿದರು. ಕೆರಳಿದ ಭಗತ್ ಸಿಂಗ್ ಮತ್ತು ರಾಜಗುರು 1928, ಡಿಸೆಂಬರ್ 17ರ ಸಾಯಂ ಕಾಲ 4 ಗಂಟೆ ಸಮಯದಲ್ಲಿ ಠಾಣೆಯಿಂದ ಹೊರಬಂದ ಸ್ಯಾಂಡರ್ಸ್‌ನನ್ನು ಗುಂಡಿಕ್ಕಿ ಕೊಲೆಗೈದು ಪರಾರಿಯಾದರು.
ಆ ವೇಳೆಗಾಗಲೇ ಮತ್ತೊಬ್ಬ ಕ್ರಾಂತಿಕಾರಿ ಚಂದ್ರಶೇಖರ್ ಆಜಾದರ ಪರಿಚಯವಾಗಿತ್ತು. ಆಜಾದರ ಮಾರ್ಗದರ್ಶನದಲ್ಲಿ ಮತ್ತೊಂದು ಯೋಜನೆ ಸಿದ್ಧವಾಯಿತು. 1929, ಏಪ್ರಿಲ್‌ನಲ್ಲಿ ದಿಲ್ಲಿಯ ಕೇಂದ್ರೀಯ ಶಾಸನಸಭೆಯ ಮುಂದೆ ಬ್ರಿಟಿಷ್ ಸರಕಾರ ಎರಡು ಮಸೂದೆಗಳನ್ನು ಮುಂದಿಡಲಿತ್ತು. ಆ ಮಸೂದೆಗಳು ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕುವ ಉದ್ದೇಶ ಹೊಂದಿವೆ ಎಂಬುದು ಗೊತ್ತಾಗಿತ್ತು. ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು. ಕಾಂಗ್ರೆಸ್ ಕೂಡ ವಿರುದ್ಧವಾಗಿತ್ತು. ಹಾಗಾಗಿ ಮಸೂದೆಗಳು ಬಿದ್ದುಹೋಗುವ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ ವೈಸರಾಯ್ ತನ್ನ ‘ವೀಟೋ ಪವರ್’ ಉಪಯೋಗಿಸಿ ಮಸೂದೆಗೆ ಅಂಗೀಕಾರ ನೀಡುವ ಅವಕಾಶವಿತ್ತು. ಇತ್ತ ಚಂದ್ರಶೇಖರ್ ಆಜಾದ್ ಯೋಜನೆಯೊಂದನ್ನು ರೂಪಿಸಿದ್ದರು. 1929, ಏಪ್ರಿಲ್ 8ರಂದು ಅಧಿವೇಶನ ಆರಂಭವಾಯಿತು. ಪನಾಮ ಹ್ಯಾಟ್ ಧರಿಸಿದ್ದ ಭಗತ್ ಸಿಂಗ್ ಹಾಗೂ ಬಟುಕೇಶ್ವರ್ ದತ್ ಬಾಂಬ್ ಮತ್ತು ರಿವಾಲ್ವರ್‌ಗಳೊಂದಿಗೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಆಸೀನರಾಗಿದ್ದರು. ನಿರೀಕ್ಷೆಯಂತೆಯೇ ಮತದಾನದ ವೇಳೆ ಎರಡೂ ಮಸೂದೆಗಳು ಬಿದ್ದುಹೋದವು. ವೀಟೋ ಅಧಿಕಾರವನ್ನು ಬಳಸಿ ಮಸೂದೆಯನ್ನು ಕಾನೂನಾಗಿ ಮಾರ್ಪಡಿಸುವುದಾಗಿ ವೈಸರಾಯ್ ಘೋಷಣೆ ಮಾಡಿದ್ದೂ ಆಯಿತು. ಆದರೆ ವೀಟೋ ಪ್ರಯೋಗಿಸುವ ಮೊದಲು ಸದನದೊಳಗೆ ಬಾಂಬ್ ಸ್ಫೋಟ. ಇದ್ದಕ್ಕಿದ್ದಂತೆಯೇ ‘ಇಂಕ್ವಿಲಾಬ್ ಜಿಂದಾಬಾದ್’ ಎಂಬ ಘೋಷಣೆ. ಜನಜಂಗುಳಿಯಲ್ಲಿ ಭಗತ್ ಸಿಂಗ್ ಹಾಗೂ ಬಟುಕೇಶ್ವರ ದತ್ತ ತಪ್ಪಿಸಿಕೊಳ್ಳಬಹುದಿತ್ತು. ಆದರೆ ವಿಚಾರಣೆ ಎದುರಿಸುವ ಮೂಲಕ ಕ್ರಾಂತಿಯ ಸಂದೇಶವನ್ನು ದೇಶದುದ್ದಗಲಕ್ಕೂ ಪಸರಿಸುವ, ಸಾರುವ ಸಲುವಾಗಿ ಬಂಧಿತರಾದರು. 1930, ಅಕ್ಟೋಬರ್ 7ರಂದು ತೀರ್ಪು ಹೊರಬಿತ್ತು. ಶಾಸನಸಭೆಯಲ್ಲಿ ಬಾಂಬ್‌ಸ್ಫೋಟ ಮಾಡಿದ್ದಕ್ಕಾಗಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್‌ಗೆ ಗಲ್ಲುಶಿಕ್ಷೆ ನಿಗದಿಯಾಯಿತು.
ಈ ನಡುವೆ ಮಹಾತ್ಮ ಗಾಂಧೀಜಿ ದುಂಡುಮೇಜಿನ ಸಮ್ಮೇಳನ ದಲ್ಲಿ ಪಾಲ್ಗೊಳ್ಳಲು ಇಂಗ್ಲೆಂಡಿಗೆ ಹೊರಟು ನಿಂತರು.
ಆ ವೇಳೆಗಾಗಲೇ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್‌ರನ್ನು ಗಲ್ಲಿಗೇರಿಸುವ ವಿರುದ್ಧ ದೇಶಾದ್ಯಂತ ಸಹಿ ಸಂಗ್ರಹಣೆ ಆರಂಭವಾಗಿತ್ತು. ಗಲ್ಲುಶಿಕ್ಷೆಯನ್ನು ತೆಗೆದುಹಾಕುವಂತೆ ಬ್ರಿಟನ್ ಆಡಳಿತದ ಮನವೊಲಿಸಬೇಕೆಂದು ‘ಯುವ ವಾಹಿನಿ’, ‘ನೌಜವಾನ್ ಭಾರತ್ ಸಭಾ’ ಹಾಗೂ ಖ್ಯಾತ ಗಾಂಧೀವಾದಿ ಅರುಣಾ ಅಸಫ್ ಅಲಿ ಸೇರಿದಂತೆ ಇಡೀ ದೇಶವಾಸಿಗಳು ಒಕ್ಕೊರಲಿ ನಿಂದ ಮಹಾತ್ಮನಿಗೆ ಮನವಿ ಮಾಡಿದರು. ಇಂಗ್ಲೆಂಡ್‌ಗೆ ತೆರಳಿದ ಗಾಂಧೀಜಿ 1931, ಮಾರ್ಚ್ 5ರಂದು ಲಾರ್ಡ್ ಇರ್ವಿನ್ ಜತೆ ಒಪ್ಪಂದಕ್ಕೆ ಸಹಿ ಹಾಕಿದರು. ಅದರೊಂದಿಗೆ ಕಾಂಗ್ರೆಸ್ ಅಸಹಕಾರ ಚಳವಳಿಯನ್ನು ಅಧಿಕೃತವಾಗಿ ಕೈಬಿಡಲು ಒಪ್ಪಿತು. ಕಾಂಗ್ರೆಸ್ಸಿಗರ ವಿರುದ್ಧ ಹೇರಿದ್ದ ನಿರ್ಬಂಧವನ್ನು ತೆಗೆದು ಹಾಕಲು ಬ್ರಿಟಿಷ್ ಆಡಳಿತ ಕೂಡ ಸಮ್ಮತಿ ನೀಡಿತು.
ಆದರೆ…
ಗಾಂಧೀಜಿಯವರು, ಭಗತ್ ಸಿಂಗ್‌ಗೆ ಮಾಫಿ ನೀಡುವ ವಿಚಾರ ಬಿಟ್ಟು ಉಳಿದೆಲ್ಲ ವಿಷಯಗಳ ಬಗ್ಗೆಯೂ ಇರ್ವಿನ್ ಜತೆ ಚರ್ಚೆ ನಡೆಸಿದ್ದರು! ಒಂದು ವೇಳೆ, ಅಸಹಕಾರ ಚಳವಳಿಯನ್ನು ಕೈಬಿಡಬೇಕಾದರೆ, ಒಪ್ಪಂದಕ್ಕೆ ಸಹಿ ಹಾಕಬೇಕಾದರೆ ಭಗತ್ ಸಿಂಗ್‌ಗೆ ಗಲ್ಲುಶಿಕ್ಷೆಯಿಂದ ಮಾಫಿ ನೀಡಬೇಕೆಂದು ಗಾಂಧೀಜಿ ಯೇನಾದರೂ ಪೂರ್ವಷರತ್ತು ಹಾಕಿದ್ದರೆ, ಬ್ರಿಟಿಷರಿಗೆ ಬೇರೆ ಮಾರ್ಗವೇ ಇರುತ್ತಿರಲಿಲ್ಲ. ಆದರೆ ಭಗತ್ ಸಿಂಗ್ ಸಾಯುವುದು ಬ್ರಿಟಿಷರಿಗಿಂತ ಗಾಂಧೀಜಿಗೆ ಅನಿವಾರ್ಯವಾಗಿತ್ತು! ಬಾಲ ಗಂಗಾಧರ ತಿಲಕರ ಮರಣದ ಆ ಸ್ಥಾನವನ್ನು ಬಹಳ convenient ಆಗಿ ಆಕ್ರಮಿಸಿದ್ದ ಗಾಂಧೀಜಿಗೆ ಭಯವಿದ್ದಿದ್ದು ಭಗತ್ ಸಿಂಗ್ ಮತ್ತು ಸುಭಾಷ್‌ಚಂದ್ರ ಬೋಸ್ ಬಗ್ಗೆ ಮಾತ್ರ. 23 ವರ್ಷದ ಭಗತ್ ಸಿಂಗ್, 62 ವರ್ಷದ ಗಾಂಧೀಜಿಯಷ್ಟೇ ಹೆಸರುವಾಸಿಯಾಗಿದ್ದ. ಗಾಂಧೀಜಿ ಹೇಗೆತಾನೇ ಸಹಿಸಿಯಾರು? ಒಂದು ವೇಳೆ 1931ರಲ್ಲಿ ಭಗತ್ ಸಿಂಗ್‌ನನ್ನು ಗಲ್ಲಿಗೇರಿಸದಿದ್ದರೆ ಹೇಗೆ ಗಾಂಧಿ-ಭಗತ್ ಚಿಂತನೆ ನಡುವೆ ಸಂಘರ್ಷ ಆರಂಭವಾಗು ತ್ತಿತ್ತು ಎಂಬುದನ್ನು “To Make the Deaf Hear: Ideology and Programme of Bhagat Singh and His Comrades” ಪುಸ್ತಕದಲ್ಲಿ ವಿಶ್ಲೇಷಿಸಲಾಗಿದೆ. ಇದೇನೇ ಇರಲಿ, ಗಾಂಧೀಜಿ ದ್ರೋಹ ಬಗೆದ ನಂತರ, ಭಗತ್‌ನನ್ನು ಉಳಿಸಿಕೊಳ್ಳಲು ಬೇರಾವುದೇ ಮಾರ್ಗಗಳು ಉಳಿದಿರಲಿಲ್ಲ. 1931, ಮಾರ್ಚ್ ೨೩ರಂದು ರಾತ್ರಿ 7 ಗಂಟೆ 33 ನಿಮಿಷಕ್ಕೆ ಮೊದಲು ಸುಖದೇವ್, ನಂತರ ಭಗತ್ ಸಿಂಗ್, ಕೊನೆಯವನಾಗಿ ರಾಜಗುರು ಮುಖಕ್ಕೆ ಕಪ್ಪುಬಟ್ಟೆ ತೊಡದೆ, ಕೈಗೆ ಕೋಳ ಹಾಕಿಸಿಕೊಳ್ಳದೆ ಕುಣಿಕೆಯನ್ನು ಚುಂಬಿಸಿ ನಗುತ್ತಲೇ ತಲೆಕೊಟ್ಟು ನಮ್ಮಿಂದ ದೂರವಾದರು.
ಆದರೆ ಈ ದೇಶ ಇಂದಿಗೂ ಅವರ ತ್ಯಾಗವನ್ನು ಮರೆತಿಲ್ಲ.
ಅಕ್ಟೋಬರ್ 2, ನವೆಂಬರ್ 14ನೇ ದಿನಾಂಕವನ್ನು ಪ್ರತಿ ವರ್ಷವೂ ರಾಷ್ಟ್ರೀಯ ಹಬ್ಬವೆಂಬಂತೆ ಆಚರಿಸುತ್ತೇವೆ. ಆದರೆ ರಾಷ್ಟ್ರೀಯ ನಿಯತಕಾಲಿಕೆಯೊಂದು ಇತ್ತೀಚೆಗೆ ನಡೆಸಿದ ಸಮೀಕ್ಷೆ ಯಲ್ಲಿ ಜನಪ್ರಿಯ ಸ್ವಾತಂತ್ರ್ಯ ಹೋರಾಟಗಾರರ ಯಾದಿಯಲ್ಲಿ ಗಾಂಧೀಜಿಯ ಸ್ಥಾನ 6ನೇಯದ್ದಾದರೆ ಭಗತ್ ಸಿಂಗ್, ಸುಭಾಷ್‌ಚಂದ್ರ ಬೋಸ್ ಮೊದಲೆರಡು ಸ್ಥಾನಗಳಲಿದ್ದರು!!
ಏ ಮೇರೆ ವತನ್ ಕೆ ಲೋಗೋ
ಜರ ಆಂಖ್ ಮೆ ಭರಲೋ ಪಾನಿ
ಜೋ ಶಹೀದ್ ಹುವೇ ಹೈ ಉನ್ ಕಿ
ಜರಾ ಯಾದ್ ಕರೋ ಕುರ್‌ಬಾನಿ
ಈ ಹಾಡನ್ನು ನೆನಪಿಸಿಕೊಂಡಾಗಲೆಲ್ಲ ದೇಶಕ್ಕಾಗಿ ಮಡಿದ ವೀರಕಲಿಗಳು ನೆನಪಾಗುತ್ತಾರೆ. ಭಗತ್ ಸಿಂಗ್ ಜನಿಸಿದ್ದು ೧೯೦೭, ಸೆಪ್ಟೆಂಬರ್ ೨೭ರಂದು. ಆತ ಸರ್ದಾರ್ ಕಿಶನ್ ಸಿಂಗ್ ಮತ್ತು ವಿದ್ಯಾವತಿಯವರ ಮೂರನೇ ಪುತ್ರ. ಇಡೀ ಕುಟುಂಬವೇ ಕ್ರಾಂತಿಕಾರಿಗಳಿಂದ ಕೂಡಿತ್ತು. ಕಿಶನ್‌ಸಿಂಗ್ ಮತ್ತು ಅವರ ಕಿರಿಯ ಸೋದರರಾದ ಸ್ವರಣ್‌ಸಿಂಗ್ ಹಾಗೂ ಅಜಿತ್ ಸಿಂಗ್ ಮೂವರೂ ಜೈಲು ಸೇರಿದ್ದರು. ಭಗತ್ ಸಿಂಗ್ ಜನಿಸುವ ವೇಳೆಗೆ ಸರಿಯಾಗಿ ಕಿಶನ್ ಸಿಂಗ್ ಮತ್ತು ಸ್ವರಣ್ ಸಿಂಗ್ ಬಿಡುಗಡೆಯಾದರು. ಅಜಿತ್ ಸಿಂಗ್ ಕೂಡ ಬಿಡುಗಡೆಯಾಗುವ ಸಂದರ್ಭ ಬಂತು. ಹೀಗೆ ಜನನದೊಂದಿಗೆ ಇಡೀ ಕುಟುಂಬಕ್ಕೇ ಅದೃಷ್ಟ ತಂದನೆಂಬ ಕಾರಣಕ್ಕೆ ಆತನ ಅಜ್ಜಿ ಭಗತ್ ಸಿಂಗ್ ‘ಭಗವಾನ್‌ವಾಲಾ’ (ಅದೃಷ್ಟವಂತ) ಎಂದು ಪ್ರೀತಿಯಿಂದ ಕರೆಯಲಾರಂಭಿಸಿದರು.
ಅಂತಹ ಪುತ್ರನಿಗೆ ಜನ್ಮಕೊಟ್ಟ ಭಾರತಾಂಬೆ ಕೂಡ ಅದೃಷ್ಟ ವಂತಳಲ್ಲವೆ?!
ಆತ ನಾಸ್ತಿಕನಾಗಿದ್ದನೇ? ಕಮ್ಯುನಿಸ್ಟನಾ? ಅಥವಾ ರಾಷ್ಟ್ರೀಯವಾದಿಯೇ?
ಭಗತ್ ಸಿಂಗ್ ಜನಿಸಿ 108 ವರ್ಷಗಳಾದರೂ ಇಂಥದ್ದೊಂದು ಚರ್ಚೆ ಇಂದಿಗೂ ನಡೆಯುತ್ತಿದೆ. ಆತ ನಾಸಿಕ್ತನಾಗಿದ್ದ. ದೇವರಲ್ಲಿ ಅವನಿಗೆ ನಂಬಿಕೆ ಇರಲಿಲ್ಲ. ಹೀಗಾಗಿ ಹಿಂದುತ್ವದ ಜತೆಗೆ ಅವನು ಮಾಡುವಂಥದ್ದೇನೂ ಇರಲಿಲ್ಲ ಎನ್ನುವುದು ಕಮ್ಯುನಿಸ್ಟರ ವಾದ. ಕಮ್ಯನಿಸ್ಟ್ ಪಕ್ಷ ಭಾರತದಲ್ಲಿ ಸ್ಥಾಪನೆಯಾಗಿದ್ದು 1925ರಲ್ಲಿ. ಆದರೆ ಭಗತ್‌ಸಿಂಗ್ ಕೊನೆಯುಸಿರೆಳೆಯುವವರೆಗೂ ಕಮ್ಯುನಿಸ್ಟ್ ಪಕ್ಷದ ಸದಸ್ಯನಾಗಲಿಲ್ಲ.
ಆತ ಶುದ್ಧ ರಾಷ್ಟ್ರೀಯವಾದಿಯಾಗಿದ್ದ. ದೇಶವನ್ನು ವಿದೇಶಿ ಆಕ್ರಮಣಕಾರರಿಂದ ಬಿಡುಗಡೆಗೊಳಿಸುವುದು ಅವನ ಜೀವನದ ಪರಮ ಧ್ಯೇಯವಾಗಿತ್ತು. ಆತನಲ್ಲಿ ಅಪ್ರತಿಮ ದೇಶಭಕ್ತಿ ಮೂಡುವಲ್ಲಿ ಅವನ ಕುಟುಂಬ, ಅವನು ಬೆಳೆದ ವಾತಾವರಣು ಕಾರಣವಾಗಿದ್ದವು. ಭಗತ್ ಸಿಂಗ್ ಹುಟ್ಟಿದ್ದು ದೇಶಭಕ್ತ ಕುಟುಂಬದಲ್ಲಿ. ಆ ಕುಟುಂಬದವರು ಆರ್ಯ ಸಮಾಜದ ಅನುಯಾಯಿಗಳಾಗಿದ್ದರು. ಅವನ ತಾತ ಅರ್ಜುನ್ ಸಿಂಗ್, ಆರ್ಯ ಸಮಾಜದ ಸದಸ್ಯರಾಗಿದ್ದರು. ತಂದೆ ಕಿಶನ್ ಸಿಂಗ್, ಚಿಕ್ಕಪ್ಪ ಅಜಿತ್ ಸಿಂಗ್ ಗದಾರ್ ಪಕ್ಷದ ಸದಸ್ಯರಾಗಿದ್ದರು. ಭಾರತದಿಂದ ಬ್ರಿಟಿಷರನ್ನು ಒದ್ದೋಡಿಸುವ ನಿಟ್ಟಿನಲ್ಲಿ ಈ ಪಕ್ಷವನ್ನು ಅಮೆರಿಕದಲ್ಲಿ ಸ್ಥಾಪಿಸಲಾಗಿತ್ತು.
ದಯಾನಂದ ಸರಸ್ವತಿ ಸ್ಥಾಪಿಸಿದ ಆರ್ಯ ಸಮಾಜದ ತತ್ತ್ವ, ಸಿದ್ಧಾಂತಗಳಿಂದ ಭಗತ್ ಸಿಂಗ್ ಪ್ರಭಾವಿತನಾಗಿದ್ದ. ಆರ್ಯ ಸಮಾಜ ಸ್ಥಾಪನೆಯಾಗಿದ್ದೇ ಸಾಮಾಜಿಕ ಅಸಮಾನತೆಯನ್ನು ಹೊರ ಹಾಕುವುದು ಮತ್ತು ಯುವಕರಲ್ಲಿ ದೇಶಭಕ್ತಿಯನ್ನು ಮೂಡಿಸುವ ಉದ್ದೇಶದಿಂದ. ಆರ್ಯ ಸಮಾಜ ಮೂರ್ತಿ ಪೂಜೆಯನ್ನು ವಿರೋಧಿಸುತ್ತಾದರೂ, ವೇದಗಳ ಸಾರ್ವಭೌಮತೆಯನ್ನು ಅದು ಎತ್ತಿ ಹಿಡಿದಿತ್ತು. ಹೀಗಾಗಿ ಭಗತ್ ಸಿಂಗ್‌ನಲ್ಲಿ ರಾಷ್ಟ್ರೀಯತೆ ಪುಟಿದೇಳುತ್ತಿತ್ತು. ಅಲ್ಲದೆ ಛತ್ರಪತಿ ಶಿವಾಜಿ ಮತ್ತು ಮಹಾರಾಣಾ ಪ್ರತಾಪ್ ಅವರ ದೇಶಪ್ರೇಮದಿಂದ ಆತ ಪ್ರಭಾವಿತನಾಗಿದ್ದ. ಇದನ್ನು ಭಗತ್ ಸಿಂಗ್ ಬಹಿರಂಗವಾಗಿ ಹೇಳಿಕೊಂಡಿದ್ದ. ಅಲ್ಲದೆ, ಭಗತ್ ಸಿಂಗ್, ರಾಜಕೀಯದ ಪ್ರಥಮ ಪಾಠವನ್ನು ಕಲಿತುಕೊಂಡಿದ್ದು ಶಚೀಂದ್ರನಾಥ್ ಸನ್ಯಾಲ್ ಅವರಿಂದ. ಸನ್ಯಾಲ್ ಅವರು ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್‌ನ ಸ್ಥಾಪಕರು. ಹೀಗಾಗಿ ಭಗತ್ ಸಿಂಗ್ ಕಮ್ಯುನಿಸ್ಟ್ ಪಕ್ಷದಿಂದ ಯಾವುದೇ ರಾಜಕೀಯ ಪಾಠವನ್ನೂ ಕಲಿಯಲಿಲ್ಲ ಎನ್ನುವುದು ಸ್ಪಷ್ಟ. ಭಗತ್ ಸಿಂಗ್‌ನ ಆಪ್ತರಾಗಿದ್ದ ಆರ್ಯ ಸಮಾಜವಾದಿ ಮತ್ತು ಹಿಂದೂ ರಾಷ್ಟ್ರದ ಪ್ರಚಾರಕನಾಗಿದ್ದ ರಾಮ ಪ್ರಸಾದ್ ಬಿಸ್ಮಿಲ್, ಚಂದ್ರಶೇಖರ ಆಜಾದ್ ಎಲ್ಲರೂ ಸನಾತನ ಧರ್ಮದ ಪ್ರತಿಪಾದಕರಾಗಿದ್ದರು. ಅದರ ಅನುಯಾಯಿಗಳಾಗಿದ್ದರು. ಮಿಗಿಲಾಗಿ, ‘ಭಗತ್’ ಎಂದರೇ ‘ಭಕ್ತ’ ಎಂದರ್ಥ .
ಏನೇ ಆಗಲಿ, ಅಂಥ ಪುತ್ರನಿಗೆ ಜನ್ಮಕೊಟ್ಟ ಭಾರತಾಂಬೆ ಕೂಡ ಅದೃಷ್ಟವಂತಳಲ್ಲವೆ?! ಮುಂದಿನ ವಾರ ಈ ದೇಶಭಕ್ತನ ಹುಟ್ಟು ಹಬ್ಬವಿದೆ. ನೆನಪಿರಲಿ, ಅಂದು ದೇವರಿಗೆ ನಮಿಸುವಾಗ, ಭಗತ್ ಸಿಂಗ್ ಗೂ ಒಂದು ನಮಸ್ಕಾರ ಸಲ್ಲಿಸಿಬಿಡಿ.
Pratap Simha's Blog
- Pratap Simha's profile
- 58 followers
