ನಮಗೆ ಸರ್ಜಿಕಲ್ ಆಪರೇಷನ್ ಏಕೆ ಮುಖ್ಯವಾಗುತ್ತದೆ?

ನಮಗೆ ಸರ್ಜಿಕಲ್ ಆಪರೇಷನ್ ಏಕೆ ಮುಖ್ಯವಾಗುತ್ತದೆ?


ಕಳೆದೊಂದು ವಾರದಿಂದ ಎಲ್ಲರ ಮನಸ್ಸಲ್ಲೂ ಮೂಡುತ್ತಿದ್ದ ಪ್ರಶ್ನೆ ಒಂದೇ. ಉರಿ ದಾಳಿಗೆ ಪ್ರತಿಕಾರವೆಲ್ಲಿ? ನಮ್ಮ ಸೈನಿಕರ ಬಲಿದಾನಕ್ಕೆ ಗೌರವವೆಲ್ಲಿ? ಮೋದಿ ಏನು ಮಾಡುತ್ತಿದ್ದಾರೆ? ಆಗ ಮನಮೋಹನ ಸಿಂಗರನ್ನು ಟೀಕಿಸಿದವರೆಲ್ಲರೂ ಈಗ ಏನು ಹೇಳುತ್ತಾರೆ? ಭಯೋತ್ಪಾದಕ ದಾಳಿಗಳಿಗೆ ಪೂರ್ಣ ವಿರಾಮ ಬೀಳುವುದೆಂದು? ಪಾಕ್ ಸಮವಸ್ತ್ರ ಧಾರಿಗಳೆದುರು ಮಾತ್ರ ನಮ್ಮ ಸೈನ್ಯದ ತಾಕತ್ತೇ? ಸದ್ಯಕ್ಕೆ ಮುಗಿಯುವಂತೆ ಕಾಣದ ಕಾಶ್ಮೀರ ಸಮಸ್ಯೆ ಇರುವವರೆಗೂ ಭಾರತದ ಸ್ಥಿತಿ ಹೀಗೆಯೇ ಮುಂದುವರಿಯುವುದೇ?


ಇಂಥ ಮಾತುಗಳನ್ನು ದೇಶವಾಸಿಗಳು ಸಹಜವಾಗಿ ಆಡುತ್ತಿದ್ದರು.


ಆದರೆ ಆಡಿದಷ್ಟೂ ‘ಉರಿ’ ಆರುತ್ತಿರಲಿಲ್ಲ. ಸಾಮಾನ್ಯನಲ್ಲೂ ಪ್ರತಿಕಾರದ ಜ್ವಾಲೆ, ಕಾಶ್ಮೀರ ಸಮಸ್ಯೆ ಗೊತಿಲ್ಲದವರಲ್ಲೂ ಸೇಡಿನ ಮಾತುಗಳು, ಕೆಲವೊಮ್ಮೆ ಹುಚ್ಚು ಉನ್ಮಾದ, ಕೊನೆಗೆ ಮೋದಿಯತ್ತ ಒಂದು ಟೀಕಾಸ್ತ್ರ. ಅಂದರೆ ಉರಿ ಘಟನೆ ದೇಶವನ್ನು ಭಾವನಾತ್ಮಕವಾಗಿ ಒಂದುಗೂಡಿಸಿಬಿಟ್ಟಿತ್ತು.


ದೇಶ ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿರುವಾಗಲೇ ಆತ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇವೆಲ್ಲಕ್ಕೂ ಒಂದು  ಅಂತ್ಯವನ್ನು ಕಾಣಿಸಲು ನಿದ್ರೆಗೆಡುತ್ತಿದ್ದರು. ಚೀಫ್ ಆಫ್ ಆರ್ಮಿ ಸ್ಟಾಫ್, ಅವರ ಡಿಜಿಎಂಒ, ಭದ್ರತಾ ಸಲಹೆಗಾರ ಅಜಿತ್ ಧೋವಲ್, ರಕ್ಷಣಾ ಸಚಿವರು, ವಿದೇಶಾಂಗ ಸಚಿವರು, ಗ್ರಹಸಚಿವರೆಲ್ಲರೂ ಕೋಟಿಗಟ್ಟಲೆ ಜನರ ಭಾವನೆಗೆ ಬೆಲೆ ಕೊಡಲು ಮತ್ತು ದೇಶದ ಧ್ವನಿಯಾಗಲು ಸಜ್ಜಾಗುತ್ತಿದ್ದರು. ಭಯೋತ್ಪಾದನೆಯನ್ನು ಅಂತ್ಯಗೊಳಿಸುವುದರ ಜೊತೆಗೆ ಉರಿಯಲ್ಲಿ ಬಲಿದಾನಿಯಾದ ಯೋಧರಿಗೆ ಅಸಲಿ ಗೌರವವನ್ನು ನೀಡಬೇಕಿತ್ತು. ಮುಖ್ಯವಾಗಿ ಸೈನ್ಯಕ್ಕೆ ತಕ್ಷಣಕ್ಕೆ ಸೇಡು ತೀರಿಸಿಕೊಳ್ಳಬೇಕಿತ್ತು. ಆದರೆ ಎಲ್ಲೆಲ್ಲೂ ಸಮಸ್ಯೆ ಮತ್ತು ಗೊಂದಲಗಳೇ ಗೋಚರವಾಗುತ್ತಿತ್ತು. ಏಕೆಂದರೆ ಭಾರತೀಯ ವ್ಯವಸ್ಥೆಯಲ್ಲಿ ಅಂಥ ತಕ್ಷಣದ ವ್ಯವಸ್ಥೆ ಅಷ್ಟು ಸುಲಭ ಸಾಧ್ಯವಾದ ಪ್ರಕ್ರಿಯೆಯಲ್ಲ. ಉರಿ ದಾಳಿಗೆ ಪ್ರತಿಕಾರ ಮತ್ತು ಭಯೋತ್ಪಾದಕ ನೆಲೆಗಳ ಧ್ವಂಸಕ್ಕೆ ಏನೇ ಯೋಜನೆಗಳನ್ನು ಹಾಕಿಕೊಂಡರೂ ಅದು ನಮ್ಮ ವ್ಯವಸ್ಥೆಯಲ್ಲಿ ಟೀಕೆಗೊಳಗಾಗುತ್ತಿತ್ತು. ಉರಿಯ ಸೇಡಿಗೆ, ಭಯೋತ್ಪಾದಕರ ಅಡ್ಡೆಗಳಿಗೆ ತಕ್ಕ ಉತ್ತರ ನೀಡುವ ಯೋಜನೆಗೆ ಹಲವು ಆಯಾಮಗಳ  ತೊಡಕುಗಳು ಎದುರಿಗಿದ್ದವು. ಜೊತೆಗೆ ಸದ್ಯದಲ್ಲೇ ಸಾರ್ಕ್ ಸಮ್ಮೇಳನ ಆರಂಭವಾಗುವುದಿತ್ತು. ಅತ್ತ ಬಲೂಚಿಸ್ತಾನದ ವಿಷಯವನ್ನು ಭಾರತ ಪ್ರಸ್ತಾಪಿಸಿ ಅದು ವಿಶ್ವಾದ್ಯಂತ ಚರ್ಚೆಗೊಳಗಾಗಿತ್ತು. ಪಾಕಿಸ್ತಾನವನ್ನು ವಿಶ್ವದೆದುರು ಏಕಾಂಗಿಯಾಗಿಸದೆ ಯಾವ ಕಾರ್ಯಾಚರಣೆಯೂ ನಡೆಯುವಂತಿರಲಿಲ್ಲ. ಅಲ್ಲದೆ ಕಾಶ್ಮೀರದಲ್ಲಿ ಆಪರೇಷನ್ ಸದ್ಭಾವನಾ ಇದ್ದಾಗ್ಯೂ ಭಾರತೀಯ ಸೈನಿಕರ  ದೌರ್ಜನ್ಯ ನಡೆಯುತ್ತಿದೆ ಎಂಬ ಮಿಥ್ಯಾರೋಪ ಜೋರಾಗಿ ಕೇಳಿಬರುತ್ತಿತ್ತು. ಒಂದರ್ಥದಲ್ಲಿ ಭಾರತದ ಸ್ಥಿತಿ ಹೇಗಿತ್ತೆಂದರೆ ವನವಾಸದಲ್ಲಿದ್ದ ಪಾಂಡವರ ಪರಿಸ್ಥಿತಿಯಂತಾಗಿತ್ತು. ಯಾರೇ ಅಧಿಕಾರದಲ್ಲಿದ್ದರೂ ಅದರ ಸ್ಥಿತಿ ಅಂಥದ್ದೇ. ಆದರೆ ಈ ಭಾರಿ ಪಾಂಡವರಲ್ಲಿ ಒಂದು ದೊಡ್ಡ ಅಸ್ತ್ರವಿತ್ತು. ಅವರ ಬಳಿ ಈಗ ಗೀತಾಚಾರ್ಯರಂತೆ ನರೇಂದ್ರ ಮೋದಿ ಇದ್ದರು. ಭದ್ರತಾ ಸಲಹೆಗಾರ ಅಜಿತ್ ಧೋವಲ್ ಇದ್ದರು. ಸಮಾನ ಮನಸ್ಕರ ತಂಡವಿತ್ತು. ಸ್ವಾಭಿಮಾನಕ್ಕೆ ತುಡಿಯುತ್ತಿದ್ದ ಶಕ್ತಿಶಾಲಿ ಪಡೆಯಿತ್ತು. ಅನುಕೂಲಕರವಾದ ಪರಿಸ್ಥಿತಿಯನ್ನು ಮೋದಿ ನಿರ್ಮಾಣ ಮಾಡಿಕೊಂಡಿದ್ದರು.

ಅಂದರೆ,


ಉರಿ ದಾಳಿ  ನಡೆದಾಗಲೇ ಮೋದಿಯವರು ಈ ದಾಳಿಗೆ  ಕಾರಣರಾದವರನ್ನು ಶಿಕ್ಷಿಸದೇ  ಬಿಡೆವು  ಮತ್ತು  ಲೆಕ್ಕ ಚುಕ್ಕ ಮಾಡೇ ಮಾಡುತ್ತೇವೆ ಎಂದು  ಹೇಳಿದ್ದರು. ಉರಿ ಘಟನೆ  ನಡೆದ  ನಂತರ  ಮೊದಲ  ಹಂತವಾಗಿ  ವಿಶ್ವದ  ಎಲ್ಲಾ ದೇಶಗಳಲ್ಲೂ  ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಬಗ್ಗೆ ರಾಜತಾಂತ್ರಿಕವಾಗಿ ತಮ್ಮ ನಡೆಯನ್ನು ಸ್ಪಷ್ಟಪಡಿಸಿದರು. ಅತ್ತ ವಿಶ್ವಸಂಸ್ಥೆಯಲ್ಲಿ ಸುಷ್ಮಾ ಸ್ವರಾಜ್ ಪಾಕಿಸ್ತಾನಕ್ಕೆ ಸ್ಪಷ್ಟ ತಿರುಗೇಟು ಕೊಟ್ಟುಬಂದರು. ಪಾಕಿಸ್ತಾನಕ್ಕೆ  ಭಾರತ  ರಾಜತಾಂತ್ರಿಕ  ಮಟ್ಟದಲ್ಲಿ  ಮುಂದುವರಿಯುತ್ತಿದೆ ಎಂದು  ತಿಳಿವಳಿಕೆ  ಮೂಡಿಸಿ ಅದರ ದಿಕ್ಕು ತಪ್ಪಿಸಿದ್ದರು. ಹೀಗೆ ಪಾಕಿಸ್ತಾನ ಊಹಿಸಲೂ ಆಗದಂತೆ ಸರ್ಜಿಕಲ್ ಆಪರೇಶನ್‍ಗೆ ಸಿದ್ಧವಾಗುತ್ತಿದ್ದಾಗಲೇ ಇತ್ತ ಅದರ ಅರಿವಿಲ್ಲದೆ ಜನ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಮೋದಿಯವರ ಮೇಲೆ ಎಸೆಯುತ್ತಿದ್ದರು. ಪ್ರಳಯಕಾಲದ ಮುನ್ನ ಮಹಾಮೌನವೊಂದು ನೆಲೆಸುತ್ತದೆ ಎಂಬ ರೂಪಕದಂತೆ ಎಲ್ಲವೂ ಕಂಡುಬರುತ್ತಿತ್ತು. ಅಂದು ಮಧ್ಯರಾತ್ರಿ ಸರ್ಜಿಕಲ್ ಆಪರೇಶನ್ ನಡೆದು ಮರುದಿನ ಅದು ಜಗತ್ತಿಗೆ ತಿಳಿಯುವ ಹೊತ್ತಿಗೂ ಜನರ ಮನಸ್ಸಿನಲ್ಲಿ ‘ಉರಿ’ ಯ ಕಾವು ಇನ್ನೂ ಇತ್ತು!


ಸರ್ಜಿಕಲ್ ಸ್ಟೈಕ್. ಬೆಳ್ಳಂಬೆಳಗ್ಗೆ ದೇಶಕ್ಕೆ ಅಪರಿಚಿತವಾದ ಈ ಪದ ಇಂದು ಎದೆಯಲ್ಲಿ ಪುಳಕಗಳನ್ನು ಹುಟ್ಟುಹಾಕುತ್ತಿದೆ. ಎದೆ ಉಬ್ಬುತ್ತಿದೆ. ದೇಶದ ನಕಾಶೆಯೇ ಬದಲಾಗಿಹೋದೆಯೇನೋ ಎನಿಸಲಾರಂಭಿಸುತ್ತಿದೆ. ಇದ್ದಕ್ಕಿದ್ದಂತೆ ಹೊಡೆದು ಬರುವುದು, ಭಯೋತ್ಪಾದಕರಿಗೆ ಆಘಾತ ಸೃಷ್ಟಿಸುವುದು, ಉಗ್ರರಿಗೆ ತಕ್ಕ ಉತ್ತರವನ್ನು ಕೊಡುವುದು ಭಾರತಕ್ಕೆ ಎಂದಾದರೂ ಸಾಧ್ಯವೇ ಎಂದು ಭಾವಿಸುತ್ತಿದ್ದವರ ಮನಸೀಗ ಮೂಕವಾಗಿದೆ. ಸರ್ಜಿಕಲ್ ಸ್ಟೈಕ್ ದೇಶವನ್ನು ಆವರಿಸಿಬಿಟ್ಟಿದೆ.


ಇಂಥ ಒಂದು ಕಾರ್ಯಾಚರಣೆ ಕೇವಲ ಒಂದು ಮಧ್ಯರಾತ್ರಿಯ ನಂತರ ಅಚಾನಕ್ಕಾಗಿ ನಡೆಯಿತು ಎಂದುಕೊಳ್ಳಬಹುದೇ? ವಿಶ್ವಸಂಸ್ಥೆಯ ಸಭೆಯಲ್ಲಿ ಭಾರತೀಯ ಪ್ರತಿನಿಧಿಯೊಬ್ಬರ ಬಾಯಿಂದ ಪಾಕಿನ ಭಯೋತ್ಪಾದಕ ನೀತಿಯನ್ನು ಬಯಲಿಗೆಳೆಸಿದ್ದು, ಸಾರ್ಕ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲಾರೆ ಎಂದಿದ್ದು, ಇತರ ದೇಶಗಳೂ ಪಾಕಿಸ್ತಾನದ ಸಾರ್ಕ್ ಸಮ್ಮೇಳನವನ್ನು ಬಹಿಷ್ಕರಿಸಿದ್ದು ಎಲ್ಲವೂ ಒಂದೆರಡು ಗಂಟೆಗಳ ಕಾಲದ ಪ್ರಕ್ರಿಯೆಗಳಲ್ಲ. ಹೆಡೆಮುರಿಕಟ್ಟಲು ಶತ್ರುವನ್ನು ಏಕಾಂಗಿ ಮಾಡಬೇಕು ಎಂದು ತಂತ್ರ ಹೂಡಿದ್ದರು ತಂತ್ರಗಾರ ಮೋದಿ ಮತ್ತು ಅವರ ಭದ್ರತಾ ಸಲಹೆಗಾರ ಅಜಿತ್ ಧೋವಲ್. ಜಗತ್ತಿನೆದುರು ಪಾಕಿಸ್ತಾನವನ್ನು ಏಕಾಂಗಿ ಮಾಡದೆ ಎಲ್ ಒಸಿ ದಾಟಿ ಆಪರೇಷನ್ ಕೈಗೊಂಡಿದ್ದರೆ ಪಾಕಿಸ್ತಾನ ಈಗಿರುವಂತೆ ತೆಪ್ಪಗಂತೂ  ಇರುತ್ತಿರಲಿಲ್ಲ. ಅದು ಕಾಶ್ಮೀರ ವಿಷಯವನ್ನು ತೆಗೆದು ಅರಚಿಕೊಳ್ಳುತ್ತಿತ್ತು. ಮಾನವಹಕ್ಕುಗಳ ದಮನಕ್ಕೆ ಇದು ಉದಾಹರಣೆ ಎಂದು ಬೊಬ್ಬೆ ಹೊಡೆಯುತ್ತಿತ್ತು. ನರೇಂದ್ರ ಮೋದಿಯವರ ಚಾಣಾಕ್ಷ ನಡೆಯಿಂದ ಈಗ ಪಾಕಿಸ್ತಾನವೇನು ವಿಶ್ವದ ಎಲ್ಲಾ  ದೇಶಗಳೂ ಕಾರ್ಯಾಚರಣೆಯ ವಿರುದ್ಧ ಉಸಿರೆತ್ತುತ್ತಿಲ್ಲ. ಕಾರ್ಯಾಚರಣೆಯ ಬಗ್ಗೆ  ಯಾವ  ದೇಶವೂ  ಆಕ್ಷೇಪ  ವ್ಯಕ್ತಪಡಿಸಿಲ್ಲ. ನೆರೆಯ  ರಾಷ್ಟ್ರವಾದ ಬಾಂಗ್ಲಾದೇಶವೂ  ಭಾರತದ  ಕಾರ್ಯಾಚರಣೆಯನ್ನು  ಬೆಂಬಲಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ  ಕಾಯಂ  ಸದಸ್ಯತ್ವ  ಪಡೆದಿರುವ  ರಾಷ್ರಗಳೂ  ಕಾರ್ಯಚರಣೆ ಬಗ್ಗೆ  ಆಕ್ಷೇಪ  ವ್ಯಕ್ತ ಪಡಿಸುತ್ತಿಲ್ಲ. ಸ್ವತಃ  ಅಮೆರಿಕವೇ ಇದು ಭಾರತ ಮತ್ತು ಪಾಕಿಸ್ತಾನಗಳ ಸಮಸ್ಯೆಯಾಗಿರುವುದರಿಂದ ನಾವು  ಮಧ್ಯ ಪ್ರವೇಶಿಸಲಾರೆವು ಎಂದು ಹೇಳಿದೆ. ಪಾಕಿಸ್ತಾನದ ಆಪ್ತ ರಾಷ್ಟ್ರ ಚೀನಾ ಕೂಡ ನಿಶಬ್ದವಾಗಿದೆ.


ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ವಿದೇಶ ಪ್ರವಾಸ ಮಾಡಿದ್ದೊಂದನ್ನು ಬಿಟ್ಟು ಏನು ಮಾಡಿದ್ದಾರೆ ಎಂದು ಕೇಳುತ್ತಿದ್ದವರಿಗೆ ಈಗ ಉತ್ತರ ಸಿಕ್ಕಿದೆ. ನಾಯಕರ ಕೈಕುಲುಕಿ, ಒಪ್ಪಂದಗಳಿಗೆ ಸಹಿ ಹಾಕಿ ಬರುತ್ತಿದ್ದ ಪರಂಪರೆಯನ್ನು ದಾಟಿ ಆಯಾಯ ದೇಶಗಳ ಜನರ ಮನಸ್ಸು ಗೆಲ್ಲುತ್ತಿದ್ದ ಮೋದಿಯ ತಂತ್ರ ಈಗ ನಮ್ಮ ಅರಿವಿಗೆ ಬರುತ್ತಿದೆ.


ಈ ಸ್ಥಿತಿ 5 ವರ್ಷಗಳ ಹಿಂದೆ ನಡೆದಿದ್ದರೆ ಅಂತಾರಾಷ್ಟ್ರೀಯ ಸಮುದಾಯ ಹೇಗೆ ಪ್ರತಿಕ್ರಯಿಸುತ್ತಿತ್ತು ಎಂಬುದನ್ನು ಒಮ್ಮೆ ಆಲೋಚಿಸಬೇಕು! ಭಾರತ ಗಡಿ ನಿಯಮವನ್ನು ಉಲ್ಲಂಘಿಸಿದೆ ಎಂದು ಕೆಲವು ದೇಶವಾದರೂ ಹೇಳುತ್ತಿರಲಿಲ್ಲವೇ? ಭಯೋತ್ಪಾದಕರ ದಮನದ ಹೆಸರಿನಲ್ಲಿ ಭಾರತ ಪಾಕ್ ಅಕ್ರಮಿತ ಕಾಶ್ಮೀರದ ಕಬಳಿಕೆಗೆ ಮುಂದಾಗಿದೆ ಎಂದು ಹೇಳುತ್ತಿರಲಿಲ್ಲವೇ? ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡುತ್ತಿರಲಿಲ್ಲವೇ? ಖಂಡಿತಾ ಮಾಡುತ್ತಿತ್ತು. ವಿಚಿತ್ರ ಎಂದರೆ ಈಗ ಅದಾವುದೂ ನಡೆಯಲಿಲ್ಲ. ಕಾರಣ ಮೋದಿ ಮತ್ತು ಅವರ ಚಾಣಾಕ್ಷ ತಂಡ. ಅದರ ಫಲ ಸರ್ಜಿಕಲ್ ಅಪರೇಷನ್.


ಇದಕ್ಕಿಂತ ಮೊದಲು ನಾವು ಇಸ್ರೇಲಿನ ಕಥೆಗಳನ್ನು ಕೇಳುತ್ತಿದ್ದವು. ಆಪರೇಷನ್ ಎಂಟೆಬೆ, ಆಪರೇಷನ್ ಮ್ಯೂನಿಚ್, ಆಪರೇಷನ್ ಬ್ಯಾಬಿಲೋನ್ ಬಗ್ಗೆ ಕೇಳಿದ್ದೆವು ಸರ್ಜಿಕಲ್ ಆಪರೇಷನ್‍ಗಳನ್ನು ಇಸ್ರೇಲ್ ನಂಥ ದೇಶ  ಮಾತ್ರ ಮಾಡಬಲ್ಲದು ಎಂದೇ ನಾವು ಅಂದುಕೊಂಡಿದ್ದೆವು.ಅಮೆರಿಕಾ ಕೂಡಾ ಅಂಥ ಕಾರ್ಯಚರಣೆ ನಡೆಸಿದ ಕಥೆಗಳನ್ನು ಕೇಳಿ ಪುಳಕಗೊಳ್ಳುವುದಷ್ಟೇ ಇದುವರೆಗೆ ನಮ್ಮ ಭಾಗ್ಯ ಎಂದುಕೊಳ್ಳುತ್ತಿದ್ದವು. ಈಗ ಅಂಥ ಪುಳಕದ ಭಾವವನ್ನು ಕೊಟ್ಟವರು ಮೋದಿ ಮತ್ತವರ ತಂಡ. ನಿಜ ಭಾರತೀಯ ಪಡೆಗಳು ಪಾಕಿಸ್ತಾನಕ್ಕೆ ನುಗ್ಗಲಿಲ್ಲ. ಕನಿಷ್ಟ ಎಲ್ ಒಸಿ ದಾಟುವ ತಾಕತ್ತೂ ನಮಗೆ ಇದುವರೆಗೆ ಇರಲಿಲ್ಲ! ಗಡಿ ದಾಟದೆ, ನಮ್ಮ ಅಧಿಕೃತ ಭೂಭಾಗದೊಳಗೆ ನುಗ್ಗಿ ಹೊಡೆದ ಕಾರ್ಯಾಚರಣೆ ನಮಗೆ ಇಷ್ಟು ಸಂತಸವನ್ನು ತರಲು ನಮಗೆ 70 ವರ್ಷಗಳು ಬೇಕಾದವು. ಅಷ್ಟು ವರ್ಷ ನಾವು ಉರಿಯಲ್ಲಿ ಬೇಯಬೇಕಾಯಿತು.


ಅದರ ಹೊರತಾಗಿಯೂ ನಮಗೆ ಸರ್ಜಿಕಲ್ ಆಪರೇಷನ್ ಏಕೆ ಮುಖ್ಯವಾಗುತ್ತದೆ?


1948ರಲ್ಲೂ ನಾವು ಪಾಕ್ ಗಡಿಗೆ ನುಗ್ಗಿದ್ದೆವು. ನಾರ್ದರ್ನ್ ಪ್ರಾನಿನ್ಸ್ ವರೆಗೂ ಮುಟ್ಟಿ ಪಾಕಿಸ್ತಾನವನ್ನು ಇನ್ನಿಲ್ಲದಂತೆ ಕಾಡಿದ್ದೆವು. ಒಂದೆಡೆ ಸಮಸ್ಯೆ ಅಂತಾರಾಷ್ಟ್ರೀಕರಣವಾಯಿತು. ಇನ್ನೊಂದೆಡೆ ನಮಗೆ ಕಾಶ್ಮೀರವನ್ನು ಉಳಿಸಿಕೊಳ್ಳಬೇಕಿತ್ತು. ಆಗ ಜನರಲ್ ತಿಮ್ಮಯ್ಯ ಎಂಬ ಮಹಾಯೋಧ ಹುಟ್ಟಿದ್ದ. ಎಷ್ಟೆಂದರೆ ಇಂದು ಪಾಕ್ ಆಕ್ರಮಿತ ಕಾಶ್ಮೀರ ಎಂದು ಯಾವುದನ್ನು ಕರೆಯುತ್ತೇವೆಯೋ ಆ ನೆಲದ ಜನರೇ ‘ನಮ್ಮನ್ನು ತಿಮ್ಮಯ್ಯ ಆಳುವುದಾದರೆ ನಾವು ಯಾವ ಸಂವಿಧಾನಕ್ಕೆ ಬೇಕಾದರೂ ತಲೆಬಾಗುತ್ತೇವೆ’ ಎಂದಿದ್ದರು. ಅಂದು ಉರಿಯನ್ನು ರಕ್ಷಿಸಿಕೊಳ್ಳಲು ನೌಶೇರ್ ಕಾ ಶೇರ್ ಬ್ರಿಗೇಡಿಯರ್ ಮಹಮ್ಮದ್ ಉಸ್ಮಾನ್ ಎಂಬವರು ಬಲಿದಾನಿಯಾಗಿದ್ದರು. ನಂತರ ಉಸ್ಮಾನ್ ಮಹಾವೀರ ಚಕ್ರ ಗೌರವಕ್ಕೆ ಪಾತ್ರರಾದರು. ಮತ್ತೆ ಅದೇ ನೆಲದಲ್ಲಿ ನಮ್ಮ ಸೈನಿಕರು ಗುಂಪು ಗುಂಪಾಗಿ ಸಾಯುವುದೆಂದರೆ? ಮಹಮದ್ ಉಸ್ಮಾನ್ ಅವರಿಗೆ ಸಂದ ಶೌರ್ಯ ಪದಕಕ್ಕೆ ಬೆಲೆಯೇನು ಬಂದೀತು? ಅಂಥ ನೂರಾರು ಜನ ಯೋಧರು ನಮ್ಮ ಕಾಶ್ಮೀರಕ್ಕಾಗಿ ಬಲಿಯಾಗಿದ್ದರು. ಆದರೂ ನಮಗೆ ಭಯೋತ್ಪಾದಕರ ಶಿಬಿರಗಳನ್ನು ಮಟ್ಟ ಹಾಕುವ ಧೈರ್ಯ ಬಂದಿರಲಿಲ್ಲ.


ಮುಂದೆ 1965ರಲ್ಲಿ ಪಾಕಿಸ್ತಾನ ಪಡೆಗಳ ವಿರುದ್ಧ ಭಾರತೀಯ ಪಡೆಗಳು ಭಾರೀ ಸಂಖ್ಯೆಯಲ್ಲಿ ಗಡಿ ನಿಯಂತ್ರಣಾ ರೇಖೆ ದಾಟಿ ಕಾರ್ಯಾಚರಣೆಯನ್ನು ನಡೆಸಿತ್ತು. ಸಿಂಧ್, ಹೈದರಾಬಾದ್, ಗದ್ರಾಗಳನ್ನು ವಶಪಡಿಸಿಕೊಂಡಿತ್ತು. ಆಗಲೂ ಪಾಕಿಸ್ತಾನ ಪತರಗುಟ್ಟಿಹೋಗಿತ್ತು. ಅದೂ ಕೂಡಾ ಮುಂದೆ ಯುದ್ಧದ ಸ್ವರೂಪಕ್ಕೆ ಬದಲಾಯಿತು. ಆಗಲೂ ಪಾಕಿಸ್ತಾನ ಘಟನೆಯನ್ನು ಅಂತಾರಾಷ್ಟ್ರೀಯ ರಂಗದ ಮುಂದಿಟ್ಟು ತನ್ನ ಎಂದಿನ ಚಾಳಿಯನ್ನು ಮುಂದುವರಿಸಿತು. ಮುಂದೆ 71ರಲ್ಲಿ ಬಾಂಗ್ಲಾ ವಿಮೋಚನೆ ಕಾರ್ಯಾಚರಣೆಯಲ್ಲೂ ಗಡಿ ದಾಟಿದ್ದೆವು. ಅದೇ ಕೊನೆ ಅಲ್ಲಿಂದ ಲೈನ್ ಆಫ್ ಕಂಟ್ರೋಲ್ ಎಂಬ ಅಗೋಚರ ಗೆರೆಯನ್ನು ದಾಟುವ ಧೈರ್ಯವೇ ನಮ್ಮನ್ನಾಳಿದವರಿಗೆ ಬರಲಿಲ್ಲ. ಅದನ್ನು ದಾಟುವ ಸಂದರ್ಭವಿದ್ದರೂ, ಅನಿವಾರ್ಯತೆಯಿದ್ದರೂ ನಾವು ಎಲ್‍ಒಸಿಯನ್ನು ದಾಟಲಿಲ್ಲ. ಕೊನೆಕೊನೆಗೆ ಅದೆಂಥಾ ಸಂದಿಗ್ದ ಪರಿಸ್ಥಿತಿ ಬಂದರೂ ಎಲ್‍ಒಸಿಯನ್ನು ದಾಟಬಾರದು ಎಂಬ ಭಾವನೆ ನಮ್ಮನ್ನಾಳಿದವರಿಗೆ ಬಲಿಯುತ್ತಾ ಬಂದುಬಿಟ್ಟಿತು. ಭಯೋತ್ಪಾದನೆ ಮೇರೆ ಮೀರಲು ನಮ್ಮ ಈ ಭಾವನೆಯೂ ಒಂದು ಕಾರಣ ಎಂಬುದನ್ನು ನಾವು ಮರೆಯಬಾರದು. ನಮ್ಮ ಎಲ್‍ಒಸಿ ದಾಟಲಾರದ ಮನಸ್ಥಿತಿಯನ್ನು  ಭಯೋತ್ಪಾದಕರು ‘ಹಿಂದೂಸ್ಥಾನ್ ಏಕ್ ಪರಿಶಾನ್ ಮುಲ್ಕ್’ ಎಂದು ಹಗುರವಾಗಿ ಮಾತಾಡುವಷ್ಟು ಕೊಬ್ಬಿದ್ದರು. ಸರ್ಜಿಕಲ್ ಆಪರೇಷನ್ ನಂತರ ಈಗ


ಹಿಂದೂಸ್ಥಾನ್ ಏಕ್ ಪರಿಶಾನ್ ಮುಲ್ಕ್ ಎನ್ನುವ ಧೈರ್ಯಯನ್ನು ಯಾರು ತಾನೇ ತೋರಿಸಿಯಾನು?


ಇಷ್ಟೇ ಅಲ್ಲದೆ ಸರ್ಜಿಕಲ್ ಆಪರೇಶನ್ ಮತ್ತು ಒಂದು ರೀತಿಯಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತದೆ. ಈ ಆಪರೇಶನ್ ಮೂಲಕ ಮೋದಿಯವರು ಮುಂದಾಗಬಹುದಾದ ಬಹುದೊಡ್ಡ ಯುದ್ಧವೊಂದನ್ನು ತಪ್ಪಿಸಿದ್ದಾರೆ. ಇಂಥ ಸಮಸ್ಯೆ ಉತ್ತರ ಕೋರಿಯ ಮತ್ತು ದಕ್ಷಿಣ  ಕೋರಿಯದಲ್ಲೂ ಇದೆ. ಚೀನಾ ಮತ್ತು  ಜಪಾನ್ ನಡುವೆ ಕೂಡಾ ಇದೆ. ಭಾರತ ಕೈಗೊಳ್ಳುವ ಒಂದು ನಿರ್ಧಾರ ಏಷ್ಯಾದ ಸ್ಥಿತಿಯನ್ನೇ ಬದಲು ಮಾಡಿಬಿಡಬಲ್ಲದು. ಎರಡನೆಯ  ಮಹಾಯುದ್ಧ ಕಾಲದ ಕೂಟಗಳು ಸುಲಭವಾಗಿ ರಚನೆಯಾಗಿ ಜಗತ್ತು ನಾಶವಾಗುವ ಸಂದರ್ಭವೂ ಇಲ್ಲದಿಲ್ಲ. ಬೆಟ್ಟವಾಗಬಹುದಾದ ಸಮಸ್ಯೆಯನ್ನು ಕಡ್ಡಿಯಿಂದ ನಿವಾರಿಸಿದಂತೆ ಮಾಡಲು ಮೋದಿಯಂತಹ ನಾಯಕನಿಂದ ಮಾತ್ರ ಸಾಧ್ಯ ಎಂದರೂ ಸುಳ್ಳಲ್ಲ.


ಇದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನ ಏರಿದೆ. ಭಯೋತ್ಪಾದನೆಯ ವಿರುದ್ಧ ಸಮರದಲ್ಲಿ ಭಾರತವೂ ಒಂದು ಪ್ರಮುಖ ರಾಷ್ಟ್ರವಾಗಿ ಮೂಡಿ ಬಂದಿದೆ. ಭಯೋತ್ಪಾದನೆಯಿಂದ ನರಳಿದ ಅನೇಕ ದೇಶಗಳ ಪಾಲಿಗೆ ಭಾರತದ ಈ ನಡೆ ಆಶಾಕಿರಣವಾಗಿದೆ. ಎಲ್ಲಾ ದೇಶಗಳ ಜೊತೆ ಮೋದಿ ಇಟ್ಟುಕೊಂಡ ಉತ್ತಮ ಸಂಬಂಧ, ಪ್ರಬಲ ರಾಷ್ರಗಳೂ ತಲೆದೂಗುವಂತಾ ನಿರ್ಧಾರಗಳು, ಶಾಂತಿಗೆ ಹಾತೊರೆಯುವ ದೇಶದ ಅಂತಸತ್ವದ ಮಂಡನೆ, ಭಾರತೀಯ ಪಿಲಾಸಫಿಯ ವಕ್ತಾರನಂತೆ ಕಾಣುವ ಮಾತುಗಾರಿಕೆ ಇವೆಲ್ಲವೂ ಮೊನ್ನೆ ನಡೆದ ಸರ್ಜಿಕಲ್ ಆಪರೇಶನ್‍ನಲ್ಲಿ ಪ್ರಮುಖ ಪಾತ್ರ ವಹಿಸಿದಂತೆ ಕಾಣುತ್ತಿತ್ತು .







surgical-strike
 •  0 comments  •  flag
Share on Twitter
Published on October 01, 2016 03:59
No comments have been added yet.


Pratap Simha's Blog

Pratap Simha
Pratap Simha isn't a Goodreads Author (yet), but they do have a blog, so here are some recent posts imported from their feed.
Follow Pratap Simha's blog with rss.