ಭಾರತದ ರಾಷ್ಟ್ರೀಯತೆಯ ಸ್ವರೂಪಗಳು ಮತ್ತು ಅಡ್ಡಪರಿಣಾಮ

ಮಾನವನ ದೃಷ್ಟಿ ವ್ಯಾಪ್ತಿ ದೊಡ್ಡದಲ್ಲ. ಮೊದಲಿಗೆ ಇದು ನನ್ನ ಮನೆ, ಅವನ ಮನೆ, ನನ್ನ ಕೇರಿ, ಅವನ ಕೇರಿ, ನನ್ನ ರಾಜ್ಯ ಅವನ ರಾಜ್ಯ ಎಂದು ಶುರುವಾಗುವ ಆತನ ವರ್ತನೆ, ದೇಶ ಎಂಬಲ್ಲಿಗೆ ನಿಲ್ಲುತ್ತದೆ. ಅದು ಮಾನವ ದೃಷ್ಟಿಯ ಬ್ರೇಕ್’ಡೌನ್ ಬಿಂದು. ಅಲ್ಲಿಂದಾಚೆಗೆ ಆತ ತನ್ನನ್ನು ಈ ದೇಶದವ ಎಂದೇ ಗುರುತಿಸಿಕೊಳ್ಳುತ್ತಾನೆ. ಮುಂದೊಂದು ದಿನ ಬೇರೆ ಗ್ರಹದ ಜೀವಿಗಳು ಭೂಮಿಯ ಮೇಲೆ ದಾಳಿ ಮಾಡಿದರೆ, ಇದು ನನ್ನ ಭೂಮಿ ನಾನು ಈ ಭೂಮಿಗೆ ಸೇರಿದವ, ನನ್ನ ತಾಯಿ ಈ ಭೂಮಿ ಎಂತಲೂ... ನಮ್ಮ ಗೆಲಾಕ್ಸಿಯ ಮೇಲೆ ಇನ್ನೊಂದು ಗೆಲಾಕ್ಸಿಯ ಜೀವ ಸಂಕುಲ ದಾಳಿ ಮಾಡಿದರೆ ನಾನು ಮಿಲ್ಕಿ ವೇ ಗೆಲಾಕ್ಸಿಗೆ ಸೇರಿದವನು, ನಮ್ಮ ಮಿಲ್ಕಿ ವೇ ಗೆಲಾಕ್ಸಿ ಶ್ರೇಷ್ಠವಾದದ್ದು, ನಮ್ಮ ಮಿಲ್ಕಿವೇ ಬಾವುಟ, ಗೆಲಾಕ್ಸಿ ಗೀತೆ ಶ್ರೇಷ್ಠವಾದದ್ದು ಎಂದು ಹೊಡೆದಾಡಬಹುದು. ಆದರೆ ಸದ್ಯಕ್ಕಿನ್ನು ಆತನ ಬ್ರೇಕ್’ಡೌನ್ ಬಿಂದು ದೇಶ ಎಂಬಲ್ಲಿರುವುದರಿಂದ, ರಾಷ್ಟ್ರ‍ೀಯತೆ ಎಂಬುದರ ಬಗ್ಗೆ ಗಮನ ಹರಿಸೋಣ. ರಾಷ್ಟ್ರೀಯತೆ ಎಂಬುದು ಮಾನವನ ಮಿತಿಯೂ ಹೌದು, ಮಾನವನ ಅಸ್ತಿತ್ವ ದ್ಯೋತಕವು ಹೌದು. ಅಸಲಿಗೆ ಇತಿಹಾಸದಲ್ಲಿ ದೇಶಪ್ರೇಮ ಎಂಬುದೇ ಪರಮಗುರಿ ಎಂಬಂತೆ ಮಾನವನು ವರ್ತಿಸಿರುವುದನ್ನು ಕಾಣಬಹುದು.

ಭಾರತದಲ್ಲಿ ವೇದ ಕಾಲೀನ ಯುಗದಿಂದ ಪ್ರಾರಂಭಿಸಿದರೆ, ಪಂಗಂಡ, ಒಕ್ಕಲು, ಜನಪದಗಳಾಗಿ ಗುರ್ತಿಸಿಕೊಂಡಿದ್ದ ಜನ ಒಂದು ಕಾಲದಲ್ಲಿ ಸಾಮ್ರಾಜ್ಯಾಧಿಪತಿ, ಸಾಮ್ರಾಜ್ಯ ಎಂಬ ಕಲ್ಪನೆಗೆ ತೆರೆದುಕೊಂಡಿತು. ಈ ಬಗ್ಗೆ ಋಗ್ವೇದದಲ್ಲಿ ಉಲ್ಲೇಖವಾಗುವ ’ಸುದಾಸ’ ಒಂದು ಬಗೆಯ ದೊಡ್ಡ ಪ್ರದೇಶದ ಚಕ್ರವರ್ತಿ ಎಂಬಂತೆ ಬಿಂಬಿತಗೊಳ್ಳುವುದನ್ನು ಕಾಣಬಹುದು (ಋಗ್ವೇದ ೭ನೇ ಮಂಡಲ). ನಂತರದಲ್ಲಿ ಕೃಷ್ಣ ಅದೇ ರೀತಿಯಾಗಿ ರಾಷ್ಟ್ರ ಕಲ್ಪನೆಯನ್ನು ಮಹಾಭಾರತದ ಕಾಲದಲ್ಲಿ ತರಲು ಪ್ರಯತ್ನಿಸಿದ ಎಂಬಂತೆ ಕಾಣುತ್ತದೆ. ಆರ್ಯಾವರ್ತದ ಸಕಲ ಕ್ಷತ್ರಿಯರನ್ನು ಒಂದು ನೆಲೆಯಾಗಿಸುವ ಪ್ರಯತ್ನದ ಉಲ್ಲೇಖಗಳು ಇವೆ. ಮೌರ್ಯ ಸಾಮ್ರಾಜ್ಯ, ಭಾರತ ಎಂಬ ದೇಶದ ಒಟ್ಟುಗೂಡುವಿಕೆಯ ಅತಿ ದೊಡ್ಡ ಸಾಮ್ರಾಜ್ಯ ಎನ್ನಬಹುದು. ಈ ಸಾಮ್ರಾಜ್ಯವಾದವೇ ಇಂದಿನ ರಾಷ್ಟ್ರೀಯತೆಯ ಬೇರು. ಶ್ರಮಿಕರನ್ನು ಕೆಳಕ್ಕೆ ತಳ್ಳುವುದು, ಮೇಲ್ವರ್ಗದವರ ಹಿತಾಸಕ್ತಿ ಕಾಯುವುದೇ ಇದರ ಉದ್ದೇಶ ಎಂಬ ವಾದವು ಪ್ರಚಲಿತದಲ್ಲಿದೆ. ಹಲವಾರು ದಾಳಿಗೊಳಗಾಗಿ ಸೊರಗಿ ಹೋಗಿದ್ದ ಭಾರತ ಎಂಬ ಭೂಪ್ರದೇಶ ಸ್ವಾತಂತ್ರ್ಯದ ಸಂದರ್ಭದಲ್ಲಿ ತನ್ನ ರಾಷ್ಟ್ರೀಯತೆಗೆ ಹಲವಾರು ಸ್ವರೂಪಗಳನ್ನು ಕೊಟ್ಟುಕೊಂಡಿತು. ಗಾಂಧೀಜಿ ಅದಕ್ಕೆ ಐಕ್ಯತೆಯ ರಾಷ್ಟ್ರೀಯತೆ ಎಂದರು, ಟಾಗೂರರು ವಿಶ್ವಬಾಂಧವ್ಯಕ್ಕೆ ರಾಷ್ಟ್ರೀಯತೆ ಎಂದರು. ಮುಸಲ್ಮಾನರು ನಾವು ಈ ನೆಲಕ್ಕೆ ಸೇರಿದವರು ಎಂದು ಹೇಳಿಕೊಳ್ಳಲು ಇಂಡಿಯನ್ ಮುಸ್ಲಿಮ್ ನ್ಯಾಷನಲಿಸ್ಟ್ ಎಂದು ಕರೆದುಕೊಂಡರು. ಸಾವರ್ಕರರು ಹಿಂದುತ್ವ ಎಂಬ ಪದವನ್ನು ಚಿಮ್ಮಿಸಿದರು. ಆರೆಸ್ಸಿಸ್ಸಿನ ಕೇಶವರು ಹಿಂದೂ ರಾಷ್ಟ್ರೀಯತೆಯನ್ನು ಚಾಲ್ತಿಗೆ ತಂದರು. ಲಿಬರಲ್ ವಾದಿಗಳು ಎಲ್ಲಾ ದೇಶದ ಶ್ರಮಿಕರ ಉನ್ನತಿಯೇ ನಮ್ಮ ರಾಷ್ಟ್ರೀಯತೆ ಎಂದು ಬಾಯಲ್ಲಿ ಹೇಳಿದರು. ಹೀಗೆ ಸ್ವಾತಂತ್ರ್ಯ ನಂತರದ ಭಾರತದಲ್ಲಿ ಹಲವಾರು ರಾಷ್ಟ್ರೀಯತೆ ಹೊರಳಾಡುತ್ತಿತ್ತು. ಈಗಲೂ ಅಲೆದಾಡುತ್ತಿದೆ.

ಹಿಂದುತ್ವ ಎಂಬ ಪದವು ಸಂಚಲನ ಮೂಡಿಸಿದ್ದು ನಿಜ. ಆ ಪದಕ್ಕೆ ಕೇವಲ ಭೂರೇಖೆಯ ಅಳತೆ ಇಲ್ಲ, ಅದು ಸನಾತನ ಅದು ಅವಿನಾಶಿ ಎಂಬ ವೇದಾಂತ ನಿರೂಪಣೆಯನ್ನು ಮಾನವನ ಮಿತಿಗೆ ಜೋಡಿಸುವ ಪ್ರಯತ್ನವಾಯಿತು. ಹಿಂದೂ ರಾಷ್ಟ್ರೀಯವಾದವನ್ನು ಸಕ್ರಿಯವಾಗಿ ಬೆಳೆಸಿದ್ದು ಆರೆಸ್ಸೆಸ್ಸಿನ ಎರಡನೇ ಸರಸಂಘಚಾಲಕರಾದ ಮಾಧವ ಸದಾಶಿವ ಗೋಳ್ವಲ್ಕರ್. ನಮ್ಮ ರಾಷ್ಟ್ರೀಯತೆ ವಿಶ್ವದ ಒಳಿತನ್ನು ಬಯಸುವಂಥದ್ದು ಎಂದು ವೇದಾಂತದ ಎರಡು ವಾಕ್ಯವನ್ನು ರಾಷ್ಟ್ರೀಯತೆಗೆ ಅಂಟಿಸಿ ಪರಂಪರೆಯ ಬೌದ್ಧಿಕತೆಯನ್ನು, ಭೂಪ್ರದೇಶಾಭಿಮಾನ ಸಾಮಾನ್ಯತೆಯನ್ನು ಸಮೀಕರಿಸಲಾಯಿತು. ಈ ಭಾರತ ಎಂಬ ಪ್ರದೇಶದ ರಕ್ಷಣೆ, ಇಲ್ಲಿನ ಜನರ ಅಭಿವ್ಯಕ್ತಿ ಕಾಯಲು ಅವರು ನಿರೂಪಿಸಿದ ಎಷ್ಟೋ ಅಂಶ ದೇಶದ ಹಿತದೃಷ್ಟಿಯಿಂದ ಒಪ್ಪಬೇಕಾದ್ದು ಎನ್ನಿಸುತ್ತದೆ. ಮುಸ್ಲಿಮರು, ಕ್ರೈಸ್ತರು, ಕಮ್ಯೂನಿಷ್ಟರು ಒಳಗಿನ ಅಪಾಯಗಳು, ವೈರಿಗಳು ಎಂದು ನೇರವಾಗಿ ಅವರನ್ನು ದೂಷಿಸುವ ಯೋಚನಾ ಲಹರಿ (ಶ್ರೀ ಗುರೂಜಿ ಸಮಗ್ರ, ಸಂಪುಟ ೧೧ ಚಿಂತನಗಂಗಾ ಪುಟ ೨೪೧-೨೬೬), ಇತರ ನಂಬಿಕೆ-ಅಭಿಪ್ರಾಯ ಉಳ್ಳವರು, ಈ ಹಿಂದೂ ರಾಷ್ಟ್ರೀಯತೆಯನ್ನು ದ್ವೇಷಿಸುವಂತೆ ಮಾಡಿತು. ಪಾಕಿಸ್ತಾನಕ್ಕೆ ಹೋಗದೆ ಭಾರತದಲ್ಲಿ ಉಳಿದ ಮುಸ್ಲಿಮರೆಲ್ಲರೂ ರಾತ್ರೋ ರಾತ್ರಿ ದೇಶಭಕ್ತರಾಗಲಿಲ್ಲ. ನನಗೆ ಹಿಂದುಗಳು ಮುಖ್ಯ, ಮುಸ್ಲಿಮರಲ್ಲ. ಜಾತ್ಯಾತೀತತೆ ಅಂದರೆ ರಾಷ್ಟ್ರೀಯತೆ ಅಲ್ಲ, ಇಂಥಾ ಅವರ ಹಲವು ನಿರ್ಣಯಗಳನ್ನು ಕೆಲವರು ಉತ್ಸಾಹದಿಂದ ಸ್ವೀಕರಿಸಿದರು, ಕೆಲವರು ಪಟ್ಟಾಗಿ ವಿರೋಧಿಸಿದರು. ಗೋಳ್ವಲ್ಕರ್ ಅವರು ರಾಮ ಮನೋಹರ್ ಲೋಹಿಯಾರಂಥ ಸಮಾಜವಾದಿಗಳೊಂದಿಗೆ ಸಹ ಉತ್ತಮವಾದ ಸಂಬಂಧ ಹೊಂದಿದ್ದರಿಂದ ಅವರಲ್ಲಿ ಅಭಿಪ್ರಾಯ ಮಟ್ಟದಲ್ಲಿ ಮುಕ್ತತೆ ಇತ್ತು ಎನ್ನಬಹುದಾಗಿದೆ. ಹಿಂದೂ ರಾಷ್ಟ್ರೀಯವಾದ; ಗೋಳ್ವಲ್ಕರ್ ಅವರ ಚಿಂತನೆಯಲ್ಲಿ ಧ್ಯೇಯ ನಿಷ್ಠೆ, ಹಿಂದುಗಳ ಒಳಗಿನ ಒಗ್ಗಟ್ಟು, ಹೃದಯವಂತಿಕೆ, ಉಪೇಕ್ಷಿತ ಬಂಧುಗಳ ಸೇವೆಯೇ ಮುಖ್ಯ... ಎಂಬುದಾಗಿದ್ದರೆ ಅದು ಸಾಮಾನ್ಯ ಕಾರ್ಯಕರ್ತನ ಬಳಿ ಬರುವಲ್ಲಿ ಬೇರೆಯದೇ ರೂಪ ತಾಳುತ್ತಿತ್ತು. ಇನ್ನು ಹಿಂದೂ ರಾಷ್ಟ್ರೀಯವಾದದಿಂದ ಪ್ರಭಾವಿತರಾದ ಉನ್ಮಾದದ ಜನ ಇದನ್ನು ಸ್ವೀಕರಿಸಿದ್ದೇ ಬೇರೆ ರೀತಿಯಲ್ಲಿ. ಅದರ ಫಲವೇ ಗೋಡ್ಸೆ ಮನಸ್ಥಿತಿ. ಗೋಡ್ಸೆ ಆರೆಸ್ಸೆಸ್ಸಿನ ನೇರ ಕಾರ್ಯಕರ್ತನಲ್ಲ, ಸರಿಯಾಗಿ ಚಡ್ಡಿ ಹಾಕಿ ತೋಳು ಮಡಿಸಿದವನಲ್ಲ, ಹಿಂದುತ್ವವನ್ನು ಹೊರಗಿನಿಂದ ಕೇಳಿ ಉನ್ಮಾದಗೊಂಡವನು. ರಾತ್ರೋ ರಾತ್ರಿ ಹಿಂದುರಾಷ್ಟ್ರ ಮಾಡುವ ಅವಿವೇಕ ಹೊಂದಿದವನು. ಆದರೆ ಅವನು ನಿನ್ನ ಚಿಂತನೆ ಯಾವುದು ಎಂದರೆ ಹಿಂದೂ ರಾಷ್ಟ್ರೀಯತೆ ಎನ್ನುವನು. ಹಿಂದೂ ರಾಷ್ಟ್ರೀಯತೆಯ ಈ ಅಡ್ಡಪರಿಣಾಮ ಈಗಲಂತೂ ಹೆಚ್ಚುತ್ತಲೇ ಇದೆ. ಗೋಳ್ವಲ್ಕರ್ ಚಿಂತನೆಗಿಂತಲೂ, ಗೋಡ್ಸೆಯ ಉದ್ರೇಕ-ಅವಿವೇಕವೇ ಜನಕ್ಕೆ ಮುದ ನೀಡುತ್ತಿದೆ. ಗಾಂಧೀಜಿಯ ಕೊಲೆಯಾದಾಗ, ಆರೆಸ್ಸಿಸ್ಸಿನ ಕಾರ್ಯಕರ್ತರ ಮೇಲೆ ಜನರೆಲ್ಲ ಕಲ್ಲಲ್ಲಿ ಹೊಡೆಯಲು ಪ್ರಾರಂಭಿಸಿದ್ದರು, ಆಗ ಗೋಳ್ವಲ್ಕರ್ "ಯಾವುದೇ ಸ್ವಯಂಸೇವಕನು ಪ್ರತಿದಾಳಿ ಮಾಡಕೂಡದು. ನಾವು ಆರೋಪ ಮುಕ್ತರಾಗೋಣ, ಜನರ ವಿಶ್ವಾಸ ಗಳಿಸೋಣ" ಎಂದಿದ್ದರು. ಇಂದು ಇದನ್ನು ಕಲ್ಪಿಸಲು ಸಾಧ್ಯವಿಲ್ಲ! ಈ ರೀತಿಯಾಗಿ ಪ್ರಾರಂಭವಾದ ಹಿಂದೂ ರಾಷ್ಟ್ರೀಯತೆ ಇಂದು ಉದ್ರೇಕಾವಸ್ಥೆಯಲ್ಲಿದೆ. ಗೋಳ್ವಕರ್ ಅಲ್ಲ, ಆ ಸನಾತನ ಬ್ರಹ್ಮ ಸ್ವರೂಪ ಸಗುಣ ದೇವರೇ ಬಂದು ’ಇದಲ್ಲ ನಮ್ಮ ಚಿಂತನೆ, ಹೀಗಲ್ಲ ಎಂದರೆ’ ಅತನನ್ನೇ ಹೊಡೆಯುವ, ಹಿಂದೆ ಮುಂದೆ ನೋಡದೆ ವ್ಯಂಗ್ಯ, ಬೈಯ್ಯುವಿಕೆಯಲ್ಲಿ ಚಚ್ಚುವ, ಕೊಳಕು ಮಾತಿನ ಬೌದ್ಧಿಕ ಪ್ರದರ್ಶನ ಮಾಡಿ ಬಾಯಿ ಮುಚ್ಚಿಸುವ ವರ್ತನೆ ತೋರುತ್ತಾರೇನೋ. ಹಿಂದೂ ರಾಷ್ಟ್ರೀಯವಾದ ಒಂದು ಸಂಘಟನೆಯ ಮೂಲ ಚಿಂತನೆಯ ಹೊರತಾಗಿ, ಹಲವಾರು ಉಪಚಿಂತನೆಗಳು ಹುಟ್ಟಿಕೊಂಡಿದೆ, ಹಲವಾರು ಉಪ ಹಿತಾಸಕ್ತಿ ಜನರು ಬೆಳೆದಿದ್ದಾರೆ, ಅವರು ತಮ್ಮ ಹಿತಾಸಕ್ತಿ ಜಾಗೃತವಾದಾಗ ಮಾತ್ರ ನಾವು ಆರೆಸ್ಸೆಸ್ ಎಂದು ಹೇಳಿಕೊಳ್ಳುತ್ತಾರೆ, ಬೇಡದಿದ್ದಾಗ ತಮ್ಮ ಉದ್ರೇಕ ಮನಸ್ಥಿತಿಯನ್ನು ತೋರ್ಪಡಿಸಲು ತಮ್ಮದೇ ಕೂಟ, ಸಂಸ್ಥೆಗಳನ್ನು ಕಟ್ಟಿಕೊಂಡಿದ್ದಾರೆ. ರಾಜಕೀಯ ಹಿತಾಸಕ್ತಿ ತೋರುತ್ತಾರೆ. ಹಿಂದೂ ರಾಷ್ಟ್ರೀಯವಾದ ಅಧಿಕಾರ ಸ್ಥಾನದ ಮೂಲ ದ್ರವ್ಯವಾದಮೇಲಂತೂ ಇದು ಅತ್ಯಧಿಕವಾಗಿದೆ.

ಭಾರತದಲ್ಲಿರುವವರೆಲ್ಲ ಹಿಂದುಗಳೇ ಎಂಬ ರಾಷ್ಟ್ರ‍ೀಯತೆ ಸಫಲವಾಗುವುದಿಲ್ಲ. ಇದು ಬಾಯಿಮಾತಿಗೆ ಸೊಗಸಾಗಿ ಕಂಡರು ವಾಸ್ತವದಲ್ಲಿ ಅಸಾಧ್ಯ. ಮತನಿಷ್ಠೆ ಮಾನವನ ದೊಡ್ಡ ತೊಡಕು. ಮತನಿಷ್ಠೆಯನ್ನು ಬಿಟ್ಟು ಈ ನೆಲದಲ್ಲಿದ್ದೀನಿ ಎಂಬ ಕಾರಣಕ್ಕೆ ಇನ್ನೊಂದು ನಂಬಿಕೆಯ ಪದವನ್ನು ಇತರರು ಒಪ್ಪಿಕೊಳ್ಳುವುದಿಲ್ಲ. ಅದಕ್ಕೆ ನೂರು ಅರ್ಥ, ಒಳಾರ್ಥ, ಗೂಢಾರ್ಥದ ತೇಪೆ ಹಚ್ಚಿದರೂ ಅಷ್ಟೇ. ಭಾರತವು ತುಂಬಾ ಸಂಕೀರ್ಣವಾದುದು. ನಿಜ ಹೇಳಬೇಕೆಂದರೆ ಭಾರತವು ಹಲವು ದೇಶಗಳ ಒಕ್ಕೂಟ. ಇಲ್ಲಿರುವಷ್ಟು ಜನ, ಭಾಷೆ, ಊಟ, ಉಡುಪು, ಪದ್ಧತಿಯ ವೈವಿಧ್ಯತೆ ಜಗತ್ತಿನಲ್ಲಿ ಸಿಗಲಾರದು. ಇಲ್ಲಿರುವವರನ್ನೆಲ್ಲಾ ’ಹಿಂದು’ ಎಂದು ಒಪ್ಪಿಸುತ್ತೇನೆ, ಇದು ನಮ್ಮ ಪರಂಪರೆ... ಒಪ್ಪಿಕೊಳ್ಳಿ. ಇಲ್ಲವಾದರೆ ಇಲ್ಲಿಂದ ತೊಲಗಿ, ಎನ್ನುವುದು ವಾಸ್ತವದಲ್ಲಿ ಅವಿವೇಕವಾದರೆ. ಚಿಂತನೆಯಲ್ಲಿ ಅಪ್ರಾಮಾಣಿಕ ಚಿಂತನೆ. ಒಂದು ಕಾಲಘಟ್ಟದಲ್ಲಿ ದ್ವೈತಿಗಳು, ಅದ್ವೈತಿಗಳು ಎಂದುಕೊಳ್ಳುತ್ತಾ ಕೆಸರು ಎರಚಾಡಿದ ನೆಲವಿದು. ಇಂದಿಗೂ ನಮ್ಮಲ್ಲೇ ಬೇರೆ ಪಂಗಡದೊಂದಿಗೆ ಮದುವೆಯಾದರೆ ಕೊಲೆ ಮಾಡುವ ಮನಸ್ಥಿತಿ ಇರುವ ಅನಾಗರಿಕ ಜನರನ್ನೇ ಸರಿಪಡಿಸಲಾಗದ ನಾವು, ಇಂಥಾ ಬೃಹತ್ ರಾಷ್ಟ್ರವನ್ನು ಒಂದು ಚಿಂತನೆಯ ಅಡಿಯಲ್ಲಿ ಕಟ್ಟಿಹಾಕುವುದು ಅಸಾಧ್ಯವು, ಅಕ್ಷಮ್ಯವೂ ಆಗಿದೆ. ಪ್ರಾದೇಶಿಕತೆಯನ್ನು ನೆಹರು ಭಾಷಾವಾರು ರಾಜ್ಯ ವಿಂಗಡಣೆಯಿಂದ ಅತಿರೇಕಕ್ಕೆ ತೆಗೆದುಕೊಂಡು ಹೋದದ್ದರಿಂದ, ಹಿಂದೂ ರಾಷ್ಟ್ರೀಯವಾದ ಪ್ರಬಲವಾಯಿತು. ಹಲವಾರು ಭಾಷೆಯ, ಪದ್ಧತಿಯ ಜನರಲ್ಲಿ ರಾಷ್ಟ್ರೀಯತೆಯ ಕಲ್ಪನೆ ಬರಲು ’ಹಿಂದು’ ಎಂಬುದು ಪ್ರಮುಖ ಎಂಬ ವಾದ ಹೆಚ್ಚಾಯಿತು. ರಾಷ್ಟ್ರೀಯತೆ ಎಂಬ ಚಿಂತನೆಗೆ ಅತಿ ದೊಡ್ಡ ಸವಾಲು ಪ್ರಾದೇಶಿಕತೆ. ಆ ಸವಾಲನ್ನು ಎದುರಿಸುತ್ತಾ ಭಾರತ ರಾಷ್ಟ್ರವಾಗಿ ಇಂದಿಗೂ ನಿಂತಿರುವುದು ಅಚ್ಚರಿಯೇ ಸರಿ. ಆ ಅಚ್ಚರಿ ತುಂಬಾ ದಿನ ಉಳಿಯಲಾರದೇನೋ ಎಂಬ ಆತಂಕವೂ ಕಾಡುತ್ತದೆ.

ಹಾಗಾದರೆ ರಾಷ್ಟ್ರೀಯತೆ ಇರಬಾರದೇ? ಎಲ್ಲರೂ ವಿಶ್ವ ಮಾನವರು ಆಗಿಬಿಡುತ್ತಾರ? ದೇಶದ ಹಿತದೃಷ್ಟಿಗೆ ಏನು ಮಾಡಬೇಕು? ರಾಷ್ಟ್ರ ಕಲ್ಪನೆ ಇಲ್ಲದಿದ್ದರೆ ಅಸ್ತಿತ್ವ, ಅಸ್ಮಿತೆ ಉಳಿಯುವುದಾದರೂ ಹೇಗೆ? ಎಂಬುದು ನಿರೀಕ್ಷಿಸಬಹುದಾದ ಪ್ರಶ್ನೆಗಳು. ರಾಷ್ಟ್ರೀಯತೆ ಇದ್ದೇ ಇರುತ್ತದೆ. ಸ್ವಾಭಾವಿಕವಾಗಿ ತನ್ನ ನೆಲಕ್ಕೆ ನಾನು ಋಣಿಯಾಗಿರಬೇಕು ಎಂಬುದು ಮನುಷ್ಯನಲ್ಲಿ ಹರಡುತ್ತದೆ. ನಂತರದಲ್ಲಿ ಆ ಭಾವನೆ ಅವನಲ್ಲಿ ನಷ್ಟವಾಗುವುದಕ್ಕೆ ಅಥವಾ ಉದ್ರೇಕ ತಲುಪುವುದಕ್ಕೆ ಸಮಾಜ ಸೃಷ್ಟಿಸಿದ ಚೌಕಟ್ಟುಗಳು ಕಾರಣ. ರಾಷ್ಟ್ರೀಯತೆ ಎಂಬ ಸಹಜ ಭಾವನೆಯನ್ನು ಯಾವುದೇ ಸಿದ್ಧಾಂತಕ್ಕೆ ಅಂಟಿಸಿಕೊಳ್ಳದೇ ಸ್ವಸ್ಥವಾಗಿರಿಸಿಕೊಳ್ಳಬೇಕಾದ್ದು ಉತ್ತಮವಾದ ನಡೆ. ಬರ್ನಾಡ್ ಶಾ ಹೇಳುವಂತೆ "ಒಂದು ನೆಲದಲ್ಲಿ ನೀನು ಹುಟ್ಟಿದ ಮೆಲೆ, ಬೇಕೋ ಬೇಡವೋ, ಒಟ್ಟಿನಲ್ಲಿ ದೇಶಪ್ರೇಮದ ಒಪ್ಪಂದವಾಗಬೇಕು". ಬೇಡವೆಂದರು ನಮ್ಮ ನೆಲ ಎಂಬ ಭಾವನೆ ಎಲ್ಲರಲ್ಲೂ ಇರುತ್ತದೆ. ಕೀನ್ಯಾದಲ್ಲಿ ಹುಟ್ಟಿದವನಿಗೂ ಇರುತ್ತದೆ. ಜರ್ಮನಿಯಲ್ಲಿ ಹುಟ್ಟಿದವನಿಗೂ ಇರುತ್ತದೆ. ಮತ್ತು ಅವನ ನಿಷ್ಠೆ-ಪ್ರೇಮ ಆ ದೇಶ ಹಾಕಿದ ಭೂರೇಖೆಯ ಒಳಗೇ ಇರಬೇಕು ಎಂಬ ಒತ್ತಾಯ ಏರ್ಪಾಡಾಗುವುದು ಸಹಜವೇ ಆಗಿದೆ. ತಮ್ಮ ದೃಷ್ಟಿಯ ಬ್ರೇಕ್’ಡೌನ್ ಬಿಂದುವಾಗಿ ಮನುಷ್ಯ ಅದನ್ನು ಸ್ವೀಕರಿಸುತ್ತಾನೆ. ಎಲ್ಲ ದೇಶದಂತೆ ನನ್ನದೂ ಒಂದು ದೇಶ, ಎಲ್ಲರ ಅಮ್ಮನಂತೆ ನನ್ನವಳು ಒಬ್ಬ ಅಮ್ಮನೇ ಎಂದೆನ್ನುಕೊಳ್ಳುವ ವಿಶಾಲ ಭಾವನೆ ರಾಜಕೀಯ ಸಿದ್ಧಾಂತಗಳಲ್ಲಿ ಬರಲು ಸಾಧ್ಯವಿಲ್ಲ. ಮತ್ತು ಈ ವಿಶಾಲ ಚಿಂತನೆ ಎಲ್ಲರಿಗೂ ತಿಳಿಸಲು ಸಾಧ್ಯವಿಲ್ಲ. ರಾಷ್ಟ್ರೀಯತೆ ಶ್ರೇಷ್ಠತೆಯ ವ್ಯಸನವಾದಾಗ ಅಪಾಯಕಾರಿಯಾಗುತ್ತದೆ. ನನ್ನ ದೇಶವೇ ಶ್ರೇಷ್ಠ, ನಮ್ಮ ದೇಶವೇ ಎಲ್ಲರಿಗೆ ಗುರು ಎಂಬ ಅವಿವೇಕ ಹೆಚ್ಚಾಗುತ್ತದೆ. ಈ ಭೂಮಂಡಲ ವಿಭಿನ್ನ ಸಂಸ್ಕೃತಿಗೆ ಆಶ್ರಯ ಕೊಟ್ಟಿದೆ. ನಾನು ಶ್ರೇಷ್ಠ ಎಂದುಕೊಂಡರೆ ಇನ್ನೊಬ್ಬ ಕೀಳು ಎಂದಾಯ್ತು. ಇಲ್ಲಿ ಎಲ್ಲಾ ನೆಲವೂ ಶ್ರೇಷ್ಠವೇ. ಸಂಕುಚಿತ ಭಾವನೆಯ ಮನುಷ್ಯ ಮಾತ್ರ ಅಯೋಗ್ಯ. ಕಾಲಾಕಾಲದ ಅಂತರದಲ್ಲಿ ಎಲ್ಲಾ ಚಿಂತನೆಗಳು ಮನುಷ್ಯನ ಅಹಂಕಾರ, ಸ್ವಾರ್ಥ, ಬೂಟಾಟಿಕೆಗೆ ಮುಖವಾಡವಾಗುತ್ತವೆ.
 •  0 comments  •  flag
Share on Twitter
Published on March 06, 2017 22:23
No comments have been added yet.