‘ಪರ್ವ’ದ ಕೃಷ್ಣ : ರಾಜತಂತ್ರ ಮತ್ತು ರಾಜಕಾರಣ

ನಮ್ಮ ಭಾರತದ ಪರಂಪರೆಯಲ್ಲಿ ಎರಡು ದರ್ಶನಗಳು ಅತಿ ಮುಖ್ಯವಾದವು. ಒಂದು ಅದ್ವೈತ ದರ್ಶನ, ಮತ್ತೊಂದು ದ್ವೈತ ದರ್ಶನ. ಅದ್ವೈತವು ಆದರ್ಶ ಪ್ರಾಯವಾದರೆ, ದ್ವೈತವು ವಾಸ್ತವ ಪ್ರಾಯವಾದದ್ದು. ಅದರಂತೆ ವಾಲ್ಮೀಕಿಯ ರಾಮಾಯಣವು ಆದರ್ಶಪ್ರಾಯವಾದರೆ, ವ್ಯಾಸಭಾರತವು ವಾಸ್ತವ ಪ್ರಾಯ. ರಾಮನು ಆದರ್ಶ ಪ್ರಾಯನಾದರೆ, ಕೃಷ್ಣ ವಾಸ್ತವ ಪ್ರಾಯ. ನಮ್ಮ ಸನಾತನತೆಯ ವೇದ, ಉಪನಿಷತ್ತುಗಳ ಸಾರವು ಇವೆರೆಡೂ ಮಹಾಕಾವ್ಯದಲ್ಲಿ, ಅದರಲ್ಲಿನ ಪಾತ್ರಗಳಲ್ಲಿ ಅಡಕವಾಗಿದೆ. ವೇದ-ಉಪನಿಷತ್ತುಗಳು ಭಾರತದ ಮನೆ ಮನೆಯನ್ನು ತಲುಪದಿದ್ದರೂ, ಕಥಾನಕದ ರೂಪದಲ್ಲಿ, ಆದರ್ಶದ ಮತ್ತು ವಾಸ್ತವತೆಯ ರೂಪದಲ್ಲಿ ಈ ಮಹಾಕಾವ್ಯಗಳ ಮೂಲಕ ನಮ್ಮನ್ನು ತಲುಪಿ ಬೇರೂರಿದೆ. ಜಗತ್ತಿನ ಇನ್ನಾವುದೇ ಭಾಷೆಯ ಪುರಾತನ ಕಾವ್ಯವು ಪ್ರಸ್ತುತತೆಯ ತನಕ ಉಳಿದು ಬಂದಿಲ್ಲ. ಉಳಿದು ಬಂದಿದ್ದರೂ, ಅದರ ಮೂಲ ಒಳತೋಟಿ ಅರ್ಥವಾಗದಷ್ಟು ಭಿನ್ನವಾಗಿ ಅವರಿಗೆ ಕಾಣುತ್ತಿದೆ. ಸರಿ ಸುಮಾರು ನಾಲ್ಕು ಸಾವಿರ ಹಳೆದಷ್ಟಾದ ಕಾವ್ಯದ ಪಾತ್ರವನ್ನು, ಅದರಲ್ಲಿನ ಐತಿಹಾಸಿಕ ಅಂಶಗಳನ್ನು, ಇವತ್ತಿನ ಸಮಕಾಲೀನಸ್ಥಿತಿಯೊಂದಿಗೆ ಪರಿಶೀಲಿಸಿ ಮಾತನಾಡುವ ಮಟ್ಟಿಗೆ ನಮ್ಮ ಪರಂಪರೆ, ಭಾಷೆ, ತತ್ತ್ವ ಉಳಿದು ಬಂದಿದೆ ಎಂದರೆ ಅದು ಈ ನೆಲದ ಸತ್ವವನ್ನು ತೋರುವಂಥದ್ದು.
ಎಸ್ ಎಲ್ ಭೈರಪ್ಪನವರು ಪರ್ವ ಕಾದಂಬರಿಯನ್ನು ವ್ಯಾಸ ಪ್ರಮಾಣವಾಗೇ ಬರೆದಿದ್ದಾರೆ ಎಂದು ನಂಬಬೇಕಾಗಿದೆ. ಅದರಲ್ಲಿ ಹಲವಾರು ಭಾಗ ಸೃಜನಶೀಲ ರಸಸೃಷ್ಟಿಯೇ ಆದರೂ, ವ್ಯಾಸಭಾರತದ ಮೂಲವನ್ನು ಬಿಟ್ಟುಕೊಟ್ಟಿಲ್ಲ. ಮೂಲಭಾರತವನ್ನು ಸಾಣೆ ಹಿಡಿದು ನೋಡಿದ ಆಧುನಿಕ ಭಾರತ ‘ಪರ್ವ’ ಎಂಬುದು ವಿದ್ವಾಂಸರ, ಸಾಹಿತ್ಯಾಸಕ್ತರ ನಿಜನುಡಿಯಾಗಿದೆ. ಅಂಥಹ ಗದ್ಯರೂಪ ಭಾರತದ ಒಂದು ಪಾತ್ರದ ನೆಲೆಯನ್ನು, ಆ ಪಾತ್ರದ ಐತಿಹಾಸಿಕ ಮಾನ್ಯತೆಯನ್ನು, ಸ್ವರೂಪವನ್ನು, ಮುಖ್ಯವಾಗಿ ಆ ಪಾತ್ರದ ರಾಜತಂತ್ರ, ಯುದ್ಧತಂತ್ರ, ರಾಜಕಾರಣ, ಧರ್ಮಕಾರಣ ಇವೆಲ್ಲವನ್ನು ಒಟ್ಟು ರೂಪದಲ್ಲಿ ವಿಶ್ಲೇಷಿಸುವುದು ಧನ್ಯತೆಯ ವಿಚಾರವಾಗಿದೆ. ಆ ಸತ್ವಪೂರ್ಣ ಪಾತ್ರವೇ ‘ಕೃಷ್ಣ ವಾಸುದೇವ’. ಆತ ತಂತ್ರಗಾರ. ರಾಜ ತಾಂತ್ರಿಕ ಚತುರ, ಮೇಲಾಗಿ ಮಾನವನೇ ಆಗಿದ್ದರೂ ಅಸಮಾನ್ಯ ಗುಣದವ ಎಂಬ ಹೊಗಳಿಕೆ ಅವನಿಗಿದೆ.

ಪರ್ವ ಕಾದಂಬರಿಯಲ್ಲಿ ಕೃಷ್ಣನು ತಾನಾಗಿಯೇ ತನ್ನ ಪಾತ್ರದ ಹರಿವನ್ನು ಬಿಟ್ಟುಕೊಡುವುದಿಲ್ಲ. ಅದರ ಮಧ್ಯಭಾಗದಲ್ಲಿ ಮಿತ್ರನಾದ ಸಾತ್ಯಕಿಯ ಮೂಲಕವೇ ಪಾತ್ರದ ಅನಾವರಣವಾಗುವುದು. ಆದರೆ ಅದಕ್ಕೂ ಮುಂಚಿನ ಪಾತ್ರಗಳು ಕೃಷ್ಣನನ್ನು ನೆನೆಯದೇ ಬಿಡುವುದಿಲ್ಲ. ಯಾವಾಗ ದುಶ್ಯಾಸನನು, ಮಾದ್ರಿಯ ಅಣ್ಣ ಶಲ್ಯ ರಾಜನ ಬಳಿ ಬಂದು, ಯುದ್ಧಕ್ಕೆ ಬೆಂಬಲ ಕೋರಿ, ದುರ್ಯೋಧನ ಸಾಮರ್ಥ್ಯವನ್ನು ತಿಳಿಸಿ, ಆರ್ಯಾವರ್ತದ ಎಲ್ಲಾ ರಾಜರ ಅಭಿಮತವನ್ನು ಸೇರಿಸಿ, ಪಾಂಡವರ ಕುರಿತಾಗಿ ‘ಹಿಂದಿನ ವೈಭವದಿಂದ ರಾಜಕಾರಣಕ್ಕೆ ಶಕ್ತಿ ಬರುವುದಿಲ್ಲ, ಇವತ್ತು ಯಾರ ಬಳಿ ಅಧಿಕಾರ ಸೂತ್ರವಿದೆ ಎಂಬುದರ ಮೇಲೆ ನಿಶ್ಚಿತ’ ಎಂದು ಹೇಳುತ್ತಾನೋ, ಅಲ್ಲಿಂದಲೇ ರಾಜಕೀಯದ ಒಳಸುಳಿಗಳು ಪರ್ವದ ಕಥಾನಕದಲ್ಲಿ ಮೇಲೇಳುತ್ತದೆ. ಹಾಗೂ ಮಹಾಭಾರತ ಕಥಾನಕವೆಂದ ಮೇಲೆ ಕೃಷ್ಣನನ್ನು ರಾಜಕೀಯವನ್ನು ಬೇರೆಯದಾಗಿ ನೋಡಲು ಸಾಧ್ಯವಿಲ್ಲ.
ಕೃಷ್ಣನು ಇಂದಿನ ಉತ್ತರ ಭಾರತ ಅಥವಾ ಅಂದಿನ ಅರ್ಯಾವರ್ತಾದ ಎಲ್ಲಾ ರಾಜ ಮನೆತನ, ಪ್ರದೇಶ ಮತ್ತು ರಾಜರೊಂದಿಗೆ ಒಡನಾಟವನ್ನು, ಓಡಾಟವನ್ನು ಇಟ್ಟುಕೊಂಡಿದ್ದನು, ಎಂಬುದು ಪ್ರಚಲಿತದಲ್ಲಿದ್ದ ವಿಚಾರ. ಆರ್ಯಾವರ್ತದ ಪ್ರದೇಶವೆಂದರೆ ಈಗಿನ ಮಹಾರಾಷ್ಟ್ರ, ಗೋದಾವರಿಯಿಂದ ಉತ್ತರದ ಅಫ್ಘಾನಿಸ್ತಾನದವರೆಗೂ ಹಾಗೂ ಗುಜರಾತಿನಿಂದ-ಪೂರ್ವ ರಾಜ್ಯಗಳವರೆಗೂ ಇದ್ದಂತ ಭೂಪ್ರದೇಶವಾಗಿತ್ತು. ಕೃಷ್ಣ ವಾಸುದೇವ ಹುಟ್ಟಿದ್ದು ಮಥುರೆಯಲ್ಲಿ. ಇವತ್ತಿನ ಉತ್ತರಪ್ರದೇಶದ ಆಗ್ರಾ ಸಮೀಪ. ಅಲ್ಲಿ ಕಂಸನ ರಾಜ್ಯಾಡಳಿತವಿತ್ತು. ನಂತರ ಕಂಸನನ್ನು ಕೊಂದು, ಜರಾಸಂಧನಿಂದ ತಪ್ಪಿಸಿಕೊಂಡು, ದ್ವಾರಕೆಗೆ ಅಂದರೆ ಗುಜರಾತಿನ ತೀರಪ್ರದೇಶಕ್ಕೆ ಬಂದು ಯಾದವ ಕೃಷ್ಣ ಹೊಸನಗರಿಯನ್ನು ಕಟ್ಟಿದ್ದ. ಸಕಲ ಇನ್ನಿತರ ರಾಜ ಮನೆತನದೊಡನೆ ಒಡನಾಟವನ್ನು ಇಟ್ಟುಕೊಂಡು ಅದಗಾಲೇ ಆರ್ಯಾವರ್ತದ ಪ್ರಭಾವಿ ವ್ಯಕ್ತಿಯಾಗಿ ಕಾಣತೊಡಗಿದ್ದ. ಅಂದಿನ ರಾಜಮನೆತನದ ದೇಶಗಳಾದರು ಯಾವುದು? ಬಾಲ್ಹೀಕ-ಇವತ್ತಿನ ಪಂಜಾಬ್ ಸುತ್ತಮುತ್ತಲಿನ ಪ್ರದೇಶ, ಮದ್ರದೇಶ-ಪಾಕಿಸ್ತಾನದ ಪಂಜಾಬ್ ಪ್ರದೇಶ ಮತ್ತು ಪಂಜಾಬ್, ಕೈಕೇಯ-ಪಾಕಿಸ್ತಾನದ ಲಾಹೋರ್, ಫೈಸಲಾಬಾದ್ ಪ್ರದೇಶ, ಕುರುಗಳ ಹಸ್ತಿನಾಪುರ-ಉತ್ತರಖಾಂಡ್, ಹರಿಯಾಣ, ಪಾಂಡವರ ಇಂದ್ರಪ್ರಸ್ಥ- ದಿಲ್ಲಿಯ ಆಚೀಚೆ, ವಿದರ್ಭ- ನಾಗಪುರ, ಅಂಗ- ಪಶ್ಚಿಮ ಬಂಗಾಳ, ಜರಾಸಂಧನ ಮಗಧ-ಜಾರ್ಖಂಡ್, ಚೇದಿ-ಛತ್ತೀಸ್ ಘರ್, ಕಲಿಂಗ-ಒರಿಸ್ಸಾ. ಮಥುರೆಯಿಂದ ದ್ವಾರಕೆಗೆ ಸರಿಸುಮಾರು ಸಾವಿರದ ಇನ್ನೂರು ಕಿ.ಮೀ ದೂರವಾಗುತ್ತದೆ. ಇನ್ನು ಅಲ್ಲಿಂದ ಪ್ರತಿ ಪ್ರದೇಶಕ್ಕೂ ಐನೂರು ಕಿ.ಮೀ. ಹೆಚ್ಚಾಗುತ್ತಾ ಸಾವಿರ ಸಾವಿರ ಕಿ.ಮೀ ಆಗುತ್ತದೆ. ದೇಶದೇಶಗಳನ್ನು ಸುತ್ತಿ ರಾಜಕೀಯ ಸಂಬಂಧವನ್ನು ಭದ್ರಪಡಿಸಿ, ಅಲ್ಲಿನ ಪ್ರದೇಶದ ಸೂಕ್ಷ್ಮವನ್ನು ಗಮನಿಸುವುದು, ಅಂದಿನ ಸಾರಿಗೆಯಾದ ರಥ, ಕುದುರೆಗಳನ್ನು ಹೂಡಿಕೊಂಡು ಹೋಗುವುದು ಕೃಷ್ಣನ ವಿಶಿಷ್ಟ ಕ್ರಮದಂತೆ ಕಾಣುತ್ತದೆ. ಈ ಅರಿವು ಇಲ್ಲದೆ ರಾಜ ತಾಂತ್ರಿಕನಾಗಲೂ ಸಾಧ್ಯವಿಲ್ಲ. ಸಮಕಾಲೀನಕ್ಕೂ ಇದು ಅವಶ್ಯವಾದ ಸಂಗತಿಯಾಗಿದೆ. ಇಂಥಹ ಜನಪ್ರಿಯ ‘ಕೃಷ್ಣ ವಾಸುದೇವ’ ದ್ವಾರಕೆಯಲ್ಲಿ ತನ್ನ ಹಿಡಿತವನ್ನು ಬಿಟ್ಟಿದ್ದನೇ ಎಂಬ ಸಂಶಯ ಕಾಡುವುದು ಸಹಜ. ‘ಊರೂರು ತಿರುಗುವ ಕೃಷ್ಣನಿಗಿಂತ ಊರಿನಲ್ಲಿರುವ ಅಣ್ಣನ ಕಡೆ ಸೈನ್ಯವಿರುತ್ತದೆ’ ಸುಭದ್ರೆ, ಈ ಕಾರಣಕ್ಕಾಗಿಯೇ ಹೀಗೆನ್ನುತ್ತಾಳೆ. ಯುದ್ಧದ ಸಂದರ್ಭದಲ್ಲಿ ಈ ಮಾತು ನಿಜವಾದಂತೆಯೂ ಕಾಣುತ್ತದೆ. ಪೂರ್ಣ ಯಾದವರ ಸೇನೆ ಕೃತವರ್ಮನ ನೇತೃತ್ವದಲ್ಲಿ ಕೌರವರ ಕಡೆ ಕಾಯ್ದರೆ, ಕೃಷ್ಣನೊಡನೆ ಸಾತ್ಯಕಿಯು ಮಾತ್ರ ಪಾಂಡವರ ಕಡೆ ನಿಲ್ಲುತ್ತಾನೆ. ಇದು ತೀರಾ ಕೊನೆಯ ಹಂತದ ವಿಶ್ಲೇಷಣಾ ಸಾಮಾಗ್ರಿ. ಇದಕ್ಕೂ ಮುನ್ನ ಕಂಸನನ್ನು ಕೊಂದ ಕಿಶೋರ ಕೃಷ್ಣ, ಉಗ್ರಸೇನ, ವಸುದೇವ, ಬಲರಾಮಾದಿಯಾಗಿ ಮಥುರೆಯ ಜನರನ್ನು ವಲಸೆಗೆ ತೊಡಗಿಸಿರುತ್ತಾನೆ. ಮಥುರೆಯ ಜನ ‘ಹೇಡಿ ಕೃಷ್ಣ’ ಎನ್ನುತ್ತಾರೆ. ಇನ್ನಿತರ ಯಾದವ ಪ್ರಮುಖರು ‚ಜರಾಸಂಧನನ್ನು ಎದುರಿಸೋಣ, ಪ್ರಾಣ ಹೋದರೆ ಹೋಗಲಿ‛ ಎಂದು ಹೇಳಿಕೊಳ್ಳುತ್ತಾರೆ. ಆಗ ಕೃಷ್ಣನು ಕೊಡುವ ಉತ್ತರ, ಪರ್ವದ ಕೃಷ್ಣನ ಸ್ವರೂಪವನ್ನು ಬಿಚ್ಚಿಡುತ್ತದೆ. ‘ಬದುಕಿದ್ದರೆ ಶತ್ರುವನ್ನು ಕೊಲ್ಲಬಹುದು, ದೊಡ್ಡ ಸೈನ್ಯಕ್ಕೆ ತಲೆಕೊಟ್ಟರೆ ವ್ಯರ್ಥ’ ಎಂದು ಹೇಳಿದ ಕೃಷ್ಣನನ್ನು ಕಂಡು ಅವನ ಅತಿ ಮಿತ್ರನಾದ ಸಾತ್ಯಕಿಗೂ ಕೋಪ ಒಸರುತ್ತದೆ. ಎಲ್ಲಾ ನಿಂದನೆಯನ್ನು ಕೃಷ್ಣ ತಾನೇ ಭರಿಸುತ್ತಾನೆ. ವಾಸ್ತವವಾಗಿ ಮುದುಕರಾದಿ, ಹುಡುಗ ಪಡೆ ಹೊಂದಿದ್ದ ಮಥುರೆಯ ಯಾದವರಿಗೆ ಜರಾಸಂಧನಂತ ಸಾಮ್ರಾಟನನ್ನು ಎದುರಿಸುವುದು ಸಾಧ್ಯವಿರಲಿಲ್ಲ. ಕ್ಷಣ ಮಾತ್ರದಲ್ಲಿ ಯಾದವರು ತರಿದು ಹೋಗುತ್ತಿದ್ದರು. ಆವೇಶದಿಂದ ವಿನಾಶವಾಗುತ್ತದೆ, ವಿವೇಕದಿಂದ ವಿಜಯವಾಗುತ್ತದೆ ಎಂಬ ಸಾಮಾನ್ಯ ಜ್ಞಾನವನ್ನು ಕೃಷ್ಣನು ಎಲ್ಲರಿಗೂ ತಿಳಿಸಿದ. ಅವನ ಭವಿಷ್ಯೋತ್ತರ ಕ್ರಿಯೆಗಳ ಪ್ರಗತಿಯ ಮೆಟ್ಟಿಲು ಈ ನಿರ್ಣಯವೇ ಆಗಿತ್ತು. ಅವನು ಸಾವಧಾನದಿಂದ ಎಲ್ಲರನ್ನೂ ಒಪ್ಪಿಸಿ ವಲಸೆ ಹೋಗುತ್ತಾ, ಪಶ್ಚಿಮದ ತೀರ ಪ್ರದೇಶವನ್ನು ತಲುಪುತ್ತಾರೆ. ಜರಾಸಂಧನ ಸೈನ್ಯ ಕ್ರೋಧದಿಂದ ಮಥುರೆಯನ್ನು ನಾಶಪಡಿಸಿ ಬರಿಗೈಯಲ್ಲಿ ಹಿಂತಿರುಗುತ್ತದೆ. ಈ ಸಂದರ್ಭದಲ್ಲೇ ಒಮ್ಮೆ ಸಾತ್ಯಕಿ ಕೃಷ್ಣನನ್ನು ‘ಜನರ ಬೇಗುದಿಯ ಬಗ್ಗೆ, ವ­ಲಸೆ ಬಂದ ಸಂಕಟಕ್ಕೆ ಆಡಿತ ಮಾತುಗಳ ಬಗ್ಗೆ, ಹೇಡಿತನದ ಲಕ್ಷಣ ಹೊತ್ತ ಕ್ಷತ್ರಿಯ ಕು­ಲ ಎಂಬ ಹಣೆಪಟ್ಟಿಯ ಬಗ್ಗೆ’ ವಿವರಿಸಿ ಪ್ರಶ್ನಿಸುತ್ತಾನೆ. ಕೃಷ್ಣನು ಅದಕ್ಕೆ ಪ್ರತಿಯಾಗಿ ’ಜನರ ಮಾತನ್ನು ಗಣನೆಗೆ ತೆಗೆದುಕೊಳ್ಳಬಾರದು, ನೀನು ಎಷ್ಟೇ ಒಳ್ಳೆಯದು ಮಾಡಿದರೂ ಜನ ಬೈಯ್ಯಬಹುದು‛ ಎನ್ನುತ್ತಾನೆ. ಈ ಮಾತಿನಲ್ಲಿ ಯಾವ ತಂತ್ರವೂ ಇಲ್ಲ, ರಾಜ ಚತುರತೆ ಇಲ್ಲ, ಆದರೆ ಇಲ್ಲಿರುವುದು ಪ್ರಜೆಗಳನ್ನು ಪಾಲಿಸುವವರಿಗೆ ಇರಬೇಕಾದ ನಿರ್ಲಿಪ್ತಿಯ ಮತ್ತು ಸಂಯಮದ ಪಾಠವಾಗಿದೆ. ಮುಂದೆ ಜರಾಸಂಧನನ್ನು ಕೊಂದ ರೀತಿ ಮತ್ತು ಸಮಯ ಇವೆಲ್ಲದಕ್ಕೂ ಪ್ರಬುದ್ಧ ಉತ್ತರವನ್ನು ನೀಡಲಿತ್ತು.

***

ಪಾಂಡುವಿನ ಹೆಂಡತಿಯಾದ ಕುಂತಿ ಕೃಷ್ಣನಿಗೆ ಸೋದರ ಅತ್ತೆಯಾಗಬೇಕು. ತಂದೆ ವಸುದೇವನ ಹದಿನಾಲ್ಕು ಹೆಂಡತಿಯರಲ್ಲಿ ದೇವಕಿಯ ಮಗ ಕೃಷ್ಣನಾದರೆ, ರೋಹಿಣಿಯ ಮಗ ಬಲರಾಮ. ಪಾಂಡವರಲ್ಲಿ ಮತ್ತು ಯಾದವರಲ್ಲಿ ಸಂಬಂಧವೆಂದರೆ ಅದೊಂದು ಲಾಭದಾಯಕ, ರಾಜ್ಯಕ್ಕೆ ಶಕ್ತಿವರ್ಧಕ ಎಂದೆ ನಂಬಲಾಗಿತ್ತು (ಆಗಿನ ಎಲ್ಲಾ ರಾಜಮನೆತನದಲ್ಲೂ ಎನ್ನಬಹುದು). ಪರ್ವದಲ್ಲಿ ಕೃಷ್ಣನು ಮೊದಲಿನಿಂದಲೂ ಯಾದವರ, ಆರ್ಯಾವರ್ತಾದ ಪ್ರಮುಖನಾಗಿ, ತಂತ್ರಗಾರನಾಗಿಯೇ ಪ್ರವೇಶವನ್ನು ಪಡೆದುಕೊಳ್ಳುತ್ತಾನೆ. ‘ಗೋಪೀ ರಮಣ’ ಎಂಬ ಯಾವ ಉಲ್ಲೇಖವೂ ಕಾಣುವುದಿಲ್ಲ. ಮೂಲ ಮಹಾಭಾರತ ಎಂದೆನ್ನುವ ‘ಜಯ’ದಲ್ಲೂ ಕೂಡ ಈ ರೀತಿಯಾದ ಯಾವ ವರ್ಣನೆಯೂ ಇಲ್ಲ ಎಂಬುದು ವಿದ್ವಾಂಸರ ಅಭಿಮತ. ಪಾಂಡವರ-ಕೃಷ್ಣನ ಮೊದಲನೆಯ ಭೇಟಿ ದ್ರೌಪದಿಯ ಸ್ವಯಂವರದಲ್ಲಿ ಎಂದು ಹೇಳಬಹುದಾಗಿದೆ. ರಾಜನಲ್ಲದಿದ್ದರೂ ಕೃಷ್ಣನ ಪ್ರಭಾವವನ್ನು ಕಂಡು ಬ­ಲರಾಮ ‘ತಾನು ಎಂದು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ, ಮುದುಕ ಸಿಂಹಾಸನದ ಮೇಲೆ ಕೂತಿರಬೇಕು, ಬ­ಲರಾಮ ಹೇಳಿದಂತೆ ಕೇಳಬೇಕು’ ಎಂದು ಹೇಳುವುದುಂಟು. ಮುದುಕ ಎಂದದ್ದು ಉಗ್ರಸೇನನಿಗೆ, ತಾನು ಎಂಬುದು ಕೃಷ್ಣನಿಗೆ ಹೇಳಿದ್ದಾಗಿದೆ. ಕೃಷ್ಣ ವಿದರ್ಭದ ರುಕ್ಮಿಣಿಯನ್ನು ಮದುವೆಯಾದದ್ದಕ್ಕೆ ಬಲವಾದ ಕಾರಣವೇ ಇತ್ತು. ವಿದರ್ಭ ಮನೆತನದ ಜೊತೆಗಿನ ಸಂಬಂಧ ಯಾದವರಿಗೆ ಬಲವನ್ನು ನೀಡಲಿತ್ತು. ಮಥುರೆಗೆ ಒತ್ತಾಸೆಯಾಗುತ್ತಾರೆ ಎಂಬ ಆಲೋಚನೆಯು ಇದರಲ್ಲಿ ಅಡಕವಾಗಿತ್ತು. ಈ ರಾಜ ತಾಂತ್ರಿಕ ಉದ್ದೇಶವನ್ನು ಸಾತ್ಯಕಿಯು ನಂತರ ಬ­ಲರಾಮನಿಗೂ ಸೂಚಿಸುತ್ತಾನೆ. ಆದರೆ ಅದನ್ನು ಒಪ್ಪದ ಬಲರಾಮ ‘ಹೆಣ್ಣು ಸಿಕ್ಕುವುದಾದರೆ ಏನು ಬೇಕಾದರೂ ಮಾಡುತ್ತಾನೆ’ ಎಂದು ­ಲಘುವಾಗಿ ನುಡಿಯುತ್ತಾನೆ. ಇದು ಮುಂದೆ ಬಲ­ರಾಮನ ಮತ್ತು ರುಕ್ಮಿಣಿಯ ಜಗಳದಲ್ಲಿ ಮುಂದುವರೆದು, ದ್ವಾರಕೆಗೆ ಹಲವಾರು ವರ್ಷದ ನಂತರ ಬಂದಿದ್ದ ರುಕ್ಮಿಣಿಯ ಅಣ್ಣ ರುಕ್ಮಿಯನ್ನು ಬ­ಲರಾಮ ಕೊ­ಲ್ಲುವಲ್ಲಿ ಮುಗಿಯುತ್ತದೆ. ‘ಜರಾಸಂಧನನ್ನು ಭೀಮ ಕೊಂದ, ಶಿಶುಪಾಲ­ನನ್ನು ನೀನು ಕೊಂದೆ, ಈ ರುಕ್ಮಿಯನ್ನು ನಾನು ಕೊಂದೆ’ ಎಂದು ಬ­ಲರಾಮ ಸಮರ್ಥನೆ ಕೊಡುತ್ತಾನೆ. ಈ ವಿಚಾರ ಪ್ರಸ್ತಾಪವಾದಾಗ ಜರಾಸಂಧನ ಮತ್ತು ಶಿಶುಪಾಲನ ಹತ್ಯೆ ಮಹಾಭಾರತದ ಪ್ರಮುಖ ರಾಜಕೀಯ ವೃತ್ತಾಂತವೆಂದು ಗೋಚರಿಸತೊಡಗುತ್ತದೆ. ಪರ್ವದಲ್ಲಿ ಶಿಶುಪಾಲನ ಹತ್ಯೆಯ ವಿವರಣೆಯ ಪ್ರಸ್ತಾಪವಿಲ್ಲ ಆದರೆ ಜರಾಸಂಧನ ಹತ್ಯೆಯ ಹಿನ್ನಲೆ ಸೊಗಸಾಗಿ ಮೂಡಿಬಂದಿದೆ. ಕಥಾನಕವಾಗಿಯೂ, ಐತಿಹಾಸಿಕವಾಗಿಯೂ ಇದು ಪ್ರಮುಖ ಘಟ್ಟವಾಗಿದೆ. ಏಕೆಂದರೆ, ಜರಾಸಂಧನನ್ನು ಮುಗಿಸುವುದು ಯಾದವರಿಗೆ, ಮುಖ್ಯವಾಗಿ ಕೃಷ್ಣನಿಗೆ ಅವಶ್ಯವಿತ್ತು. ತನ್ನ ಅಂದಿನ ತಾಳ್ಮೆಯ ಫಲವನ್ನು ಕೃಷ್ಣನು ತೋರಬೇಕಿತ್ತು. ಎಷ್ಟೇ ದ್ವಾರಕೆಯನ್ನು ಸುಂದರವಾಗಿ ನಿರ್ಮಿಸಿದರೂ, ತನ್ನ ಮಥುರೆಯ ಹಿಡಿತ, ಕುರುಗಳ ಮೇಲೆ ಪಾಂಡವರ ಕಡೆಯಿಂದ ರಾಜತಾಂತ್ರಿಕ ಹಿಡಿತ ಮತ್ತು ಆರ್ಯಾವರ್ತದ ಎಲ್ಲಾ ರಾಜಕುಲದ ಮೇಲಿನ ಹಿಡಿತ ಸಾಧ್ಯವಾಗುವುದು ಇದರಿಂದ ಎಂದು ಅವನು ನಿಶ್ಚಯಿಸಿದಂತಿತ್ತು. ಜರಾಸಂಧನ ಹತ್ಯೆಯನ್ನು ಪಾಂಡವರಿಂದ ಮಾಡಿಸಲು ಕೃಷ್ಣನಿಗೆ ಪ್ರಮುಖವಾದ ರಾಜತಾಂತ್ರಿಕ ಕಾರಣಗಳಿದ್ದವು. ಇದಕ್ಕಾಗಿಯೇ ಪೂರ್ಣ ರೂಪುರೇಶೆ ಅವನಲ್ಲಿ ಸಿದ್ಧವಿದ್ದಂತೆ ಗೋಚರಿಸುತ್ತದೆ. ಮೊದಲನೆಯದಾಗಿ ಈ ಕಾರಣಕ್ಕಾಗಿಯೇ ಪಾಂಡವರ ಸಖ್ಯವನ್ನು ಅವನು ಬೆಳೆಸಿದ್ದ. ಅರ್ಜುನನ ಮಿತ್ರತ್ವದಿಂದ ಅದು ಇಮ್ಮಡಿಯಾಗಿತ್ತು. ಸುಭದ್ರೆಯನ್ನು ಅರ್ಜುನನಿಗೆ ಕೊಡುವ ಮೂಲಕ ಅರ್ಜುನನ ವಿಶ್ವಾಸವನ್ನು ಸಂಪಾದಿಸಿದ್ದ. ಜರಾಸಂಧನ ಹತ್ಯೆಗೆ ಇದು ಮೊದಲ ಅಡಿಪಾಯ. ತನ್ನ ಧ್ಯೇಯಕ್ಕಾಗಿ ನಮ್ಮನ್ನು ಬಳಸಿಕೊಂಡ ಎಂಬ ವೃಥಾ ಆರೋಪ ಬರಬಾರದು ಎಂಬ ದೃಷ್ಟಿಯಿಂದಲೇ ಧರ್ಮಜನಿಗೆ ರಾಜಸೂಯ ಮಾಡಲು ಹೇಳಿದ. ಎಷ್ಟಾದರೂ ಖಾಂಡವವನವನ್ನು ಸುಟ್ಟು ಸುಮಗೊಳಿಸಿ ಇಂದ್ರಪ್ರಸ್ಥವನ್ನು ಖುದ್ದು ಕೃಷ್ಣ-ಅರ್ಜುನರೇ ನಿಂತು ಮಯನ ನೇತೃತ್ವದಲ್ಲಿ ಕಟ್ಟಿಸಿದ್ದರು. ರಾಜಸೂಯವೆಂದರೆ ತನ್ನ ಸರೀಕ ಕ್ಷತ್ರಿಯ ಕುಲದಲ್ಲಿ ಶ್ರೇಷ್ಠನಾದವನು ನಡೆಸುವ ಯಾಗವಾಗಿತ್ತು. ಪಾಂಡವರು ಶ್ರೇಷ್ಠರೆನಿಸಬೇಕಾದರೆ ಸಾಮ್ರಾಟನಾದ ಜರಾಸಂಧನನ್ನು ಕೊಲ್ಲಲೇಬೇಕಿತ್ತು. ಆ ಮೂಲಕ ಇತರ ಆರ್ಯಾವರ್ತದ ರಾಜರನ್ನು ಗೆದ್ದಂತಾಗುತ್ತಿತ್ತು. ಇನ್ನು ಕುರುಗಳು ಕೂಡ ಪಾಂಡವರ ಶ್ರೇಷ್ಠತೆಯನ್ನು ಒಪ್ಪುವಂಥಾಗುತ್ತದೆ. ಒಮ್ಮೆ ಸರೀಕನು ರಾಜಸೂಯ ಮಾಡಿದರೆ ಕುರುಗಳು ಮಾಡುವಂತಿರಲಿಲ್ಲ. ಜರಾಸಂಧನು ಬಂಧಿಸಿ ಒತ್ತೆಯಲ್ಲಿರಿಸಿರುವ ಇತರ ರಾಜರು ಕೂಡ ಬಿಡುಗಡೆ ಹೊಂದಿ ಪಾಂಡವರ-ಕೃಷ್ಣನ ಪರವಾಗುವುದರಲ್ಲಿ ಸಂಶಯವಿರಲಿಲ್ಲ. ಇಷ್ಟು ಸರ್ವಮಾನ್ಯ ಫಲಗಳ ಕಾರಣದಿಂದಲೇ ರಾಜಸೂಯ ಎಂಬ ದಾಳದಿಂದ ಪಾಂಡವರ ಕೃತಜ್ಞತೆ – ಕುರುಗಳ ಮೇಲೆ ಹಿಡಿತ - ಜರಾಸಂಧನ ಹತ್ಯೆ ಮತ್ತು ಪ್ರತೀಕಾರ ಎಂಬ ಮೂರು ಕಾಯಿಯನ್ನು ಕೃಷ್ಣ ಗೆದ್ದುಕೊಂಡ. ಜರಾಸಂಧನ ಹತ್ಯೆಗಂತೂ ಕೃಷ್ಣ ಹುಚ್ಚು ಧೈರ್ಯದಿಂದ ಕೇವಲ ಅರ್ಜುನ, ಭೀಮರನ್ನು ಕರೆದುಕೊಂಡು ಹೋಗಿ ಚಾಣಾಕ್ಷತೆಯಿಂದ ದ್ವಂದ್ವ ಯುದ್ಧಕ್ಕೆ ಕರೆದು ಭೀಮನಿಂದ ಮುಗಿಸಿದ. ಫಲವನ್ನು ಮಾತ್ರ ಪಡೆದು ಕ್ರಿಯೆಯಲ್ಲಿ ಪಾಲ್ಗೊಳ್ಳದ ಒಣ ತಂತ್ರಗಾರನಾಗದೆ ಕೃಷ್ಣನೂ ಸಹ ಪ್ರಾಣ ಒತ್ತೆ ಇಟ್ಟು ಹೋದದ್ದು ಅವನ ನೀತಿಯ ಮೇಲ್ಮಟ್ಟವನ್ನು ತೋರುತ್ತದೆ. ಈ ಪ್ರಕರಣದ ಸೂಕ್ಷ್ಮತೆ ಇರುವುದು ಇದರಲ್ಲಿಯೇ. ಸಮಕಾಲೀನರಲ್ಲೂ ದ್ವಾರಕೆ ಅಥವಾ ಗುಜರಾತಿನ ತೀರ ಪ್ರದೇಶದಿಂದ ಬಂದು ಕುರುಗಳ ಮೇಲೆ ಅಥವಾ ದಿಲ್ಲಿಯ ಮೇಲೆ ಹಿಡಿತವನ್ನು ಬಯಸುವವರು, ಕೃಷ್ಣನಂತೆಯೇ ಯಾವ ರಾಜ ಪದವಿಯಿಲ್ಲದೇ, ರಾಜಕಾರಣದ ಹಿಂದೆ ನಿಂತು ಭಾರತಾದ್ಯಂತ ಮನ್ನಣೆ ಗಳಿಸಿದವರು ಇದ್ದಾರೆ. ಅವರು ‘ಅಹಿಂಸೋ ಪರಮೋ ಧರ್ಮಃ’ ಎಂಬುದನ್ನು ಮಾತ್ರ ನೆನಪಿನಲ್ಲಿಟ್ಟುಕೊಂಡಿದ್ದರು ಅಥವಾ ಬೇಕೆಂದಲೇ ಉಳಿದದ್ದನ್ನು ನಾಲಿಗೆಯಲ್ಲಿ ಕಚ್ಚಿಕೊಂಡಿದ್ದರು. ಅದರ ಮುಂದಿನ ತತ್ತ್ವವಾದ ‘ಧರ್ಮಹಿಂಸಾ ತಥೈವ ಚ’ ಎಂಬುದನ್ನು ಅರಿಯಲೇ ಇಲ್ಲ. ಆದರೆ ಕೃಷ್ಣ, ಕಾಲ, ಗುಣ, ಸ್ಥಿತಿ ಎಲ್ಲವನ್ನೂ ಗಮನಿಸಿ ಇವೆರೆಡರಲ್ಲಿ ಸೂಕ್ತವಾದುದನ್ನು ಅನುಸರಿಸುತ್ತಿದ್ದ. ಗುಜರಾತಿನಿಂದ ಬಂದು ಅದೇ ರೀತಿ ದಿಲ್ಲಿಯ ಮೇಲೆ ಹಿಡಿತ ಸಾಧಿಸುವ ಬಯಕೆ ಇಟ್ಟುಕೊಳ್ಳುವುದು ಮತ್ತು ಸಾಧಿಸುವುದು, ಅನೂಚಾನವಾಗಿ ಈಗಲೂ ಸಂಭವಿಸುತ್ತಿರುವುದು ಆಶ್ಚರ್ಯದ ಸಂಗತಿ!

***

‘ಹಾವು ಕಚ್ಚಿದರೆ ತಕ್ಷಣ ಅದನ್ನು ಹಿಡಿದು ವಿಷದ ಹಾವೋ ಅಥವಾ ವಿಷ ರಹಿತವೋ ಎಂದು ನೋಡುವ ಸಾವಧಾನ ಕೃಷ್ಣನದ್ದು’ ಎಂದು ಎಸ್ ಎಲ್ ಭೈರಪ್ಪನವರು ಕೃಷ್ಣನ ಗುಣದ ಬಗ್ಗೆ ನವಿರಾಗಿ ವರ್ಣಿಸುತ್ತಾರೆ. ಅದರಂತೆ ‘ಎಷ್ಟೇ ದೂರದ ಸಂಬಂಧವಿದ್ದರೂ, ಅಂತಃಕರಣ ಇಟ್ಟುಕೊಳ್ಳುವುದು ಕೃಷ್ಣನ ಸ್ವಭಾವ’ ಎಂಬ ಮಾತು ಬರುತ್ತದೆ. ಅವನ ಇಡೀ ಜೀವನವನ್ನು ನೋಡಿದಾಗ ಇದು ನಿಜವೆನ್ನಿಸುತ್ತದೆ. ಯಾವ ಅರ್ಜುನ, ದ್ರೌಪದಿಯಿಂದ ತಿರಸ್ಕೃತಗೊಂಡು, ಮಣಲೂರು, ನಾಗಾ ಮನೆತನದ ಹೆಣ್ಣುಗಳನ್ನು ಕೂಡಿ, ಕೊನೆಗೆ ಏನೂ ತಿಳಿಯದೆ ದ್ವಾರಕೆಗೆ ಬರುತ್ತಾನೊ, ಕೃಷ್ಣನು ಅವನನ್ನು ಆತ್ಮೀಯವಾಗಿ ಕಾಣುತ್ತಾನೆ. ನಿನ್ನ ನಿಜ ಸಖ ನಾನು ಎಂದು ಅಭಯವೀಯ್ಯುತ್ತಾನೆ. ಶೂರನಾದರೂ ದುಡುಕಿನ ಸ್ವಭಾವದ ಅರ್ಜುನನನ್ನು ತನ್ನದೇ ಆದ ಅಳತೆಯಲ್ಲಿ ಕಂಡು ತಂಗಿಯನ್ನು ಓಡಿಸಿಕೊಂಡು ಹೋಗಲು ಸಹಾಯ ಮಾಡುತ್ತಾನೆ ‘ತಾನು ನಿನ್ನೊಬ್ಬನಿಗೆ ಮಾತ್ರ ಹೆಂಡತಿ, ನಿಮ್ಮ ಅಣ್ಣ ತಮ್ಮಂದಿರಿಗಲ್ಲ. ನನ್ನ ಬಿಟ್ಟು ದಾಸಿಯರನ್ನು ಕೂಡಬಾರದು’ ಇಂಥಹ ನಿರ್ಬಂಧನೆಯನ್ನು ಸುಭದ್ರೆ ಅರ್ಜುನನಿಗೆ ತರುವಾಯ ವಿಧಿಸುತ್ತಾಳೆ. ವಿಶ್ವಾಸದ ಹೆಸರಿನಲ್ಲಿ ಕೃಷ್ಣ ತನ್ನ ತಂಗಿಯ ಬಾಳನ್ನು ದ್ರೌಪದಿಯಂತೆ ಆಗಲು ಬಿಡದೆ, ಈ ನಿರ್ಬಂಧಗಳನ್ನು ಅವನೇ ಹೇಳಿಕೊಟ್ಟಿರುವಲ್ಲಿ ಸಂಶಯವಿಲ್ಲ! ಸ್ವಜನ ಕ್ಷೇಮ, ಸ್ವಕುಲ ಹಿತ ಎಂಬುದು ಆಗಿನ ಕಾಲದಲ್ಲೂ ಮಾನವ ಸಹಜವಾದ ಧೋರಣೆಯೇ ಆಗಿತ್ತು. ಕೃಷ್ಣನ ಪ್ರತಿಯೊಂದು ಕಾರ್ಯವು ಕ್ಷತ್ರಿಯ ಕುಲದ ಸಂಘಟನೆಯ ಉದ್ದೇಶವನ್ನೇ ಹೊಂದಿತ್ತು. ರಾಜಸೂಯ ಅದರಲ್ಲಿ ಪ್ರಮುಖವಾದದ್ದು. ಹೋಮರನ ‘ಇಲಿಯಡ್’ ಕಾವ್ಯದಲ್ಲೂ ಈ ರೀತಿಯದನ್ನು ಕಾಣಬಹುದಾಗಿದೆ. ಈ ಪರಿಯ ಮುಂದಾಲೋಚನೆಯಲ್ಲಿ ನಡೆಯುತ್ತಿದ್ದ ಕೃಷ್ಣನ ಯೋಜನೆಯನ್ನು ಹಾಳುಗೆಡವಿದವರು ಪಾಂಡವರೇ. ಅವನು ದ್ವಾರಕೆಯಲ್ಲಿದ್ದ ಸಮಯದಲ್ಲಿ ಜೂಜಿನ ಮೋಹದಲ್ಲಿ, ದ್ರೌಪದಿಯನ್ನು ದಾಸಿಯಂತೆ ಮಾಡಿ, ರಾಜ್ಯವನ್ನೆಲ್ಲಾ ಕಳೆದುಕೊಂಡು, ಅದೇ ದ್ರೌಪದಿಯ ಭಿಕ್ಷೆಯಿಂದ ಬದುಕಿದವರು ಎಂದು ಅವಮಾನಿತರಾಗಿ, ವನವಾಸ ಅಜ್ಞಾತವಾಸಗಳನ್ನು ಅನುಭವಿಸಲಿಕ್ಕೆ ಸಿದ್ಧರಾಗಿದ್ದರು. ಈ ವಿಚಾರವನ್ನು ತಿಳಿದ ಕೃಷ್ಣ ಪಾಂಡವರನ್ನು ಸೇರಲು ಓಡಿಬರುತ್ತಾನೆ. ಹೆಚ್ಚೆಂದರೆ ತಂಗಿಯ ಗಂಡನ ಕಡೆಯವರು, ತುಸು ಹೆಚ್ಚೆಂದರೆ ಅರ್ಜುನ ಮಿತ್ರ, ಇಷ್ಟೇ ಇವರ ಹಣೆ ಬರಹ ಎಂದು ತಂಗಿಯನ್ನು ಕರೆಸಿಕೊಂಡು ಕೃಷ್ಣ ಸುಮ್ಮನಿರಬಹುದಿತ್ತು. ಆದರೆ ಕೃಷ್ಣ ಹಾಗೆ ಮಾಡಲಿಲ್ಲ, ಕಷ್ಟಕಾಲದಲ್ಲಿ ವಿಶ್ವಾಸವನ್ನು ಮರೆಯುವುದು ನೀತಿ ಭ್ರಷ್ಟತೆ ಎಂಬುದು ಇಲ್ಲಿ ಅರಿವಾಗುತ್ತದೆ ‘ನಾನಿದ್ದರೆ, ಜೂಜಾಡ­ಲು ಬಿಡುತ್ತಿರಲಿಲ್ಲ. ನನ್ನ ಮಾತನ್ನು ಕೇಳಿರದಿದ್ದರೆ ಇಬ್ಬರ ಕೈಗಳನ್ನು ಕಡಿದು ಹಾಕುತ್ತಿದ್ದೆ’ ಎಂದು ಕೃಷ್ಣ ಗುಡುಗುತ್ತಾನೆ. ಅಂದು ಅವನು ಗಡುಸಾಗಿ ವರ್ತಿಸದಿದ್ದಲ್ಲಿ, ಪಾಂಡವರಿಗೆ ತಮ್ಮ ತಪ್ಪಿನ ಗಾಢತೆ ಅರಿವಾಗುತ್ತಿರಲಿಲ್ಲ, ರಾಜಸೂಯವೆಲ್ಲ ಮಣ್ಣು ಪಾಲಾದ ಆಘಾತ ಅರ್ಥವಾಗುತ್ತಿರಲಿಲ್ಲ, ಮುಂದೆ ಇದೇ ಕಾರಣದಿಂದ ಯುದ್ಧವಾಗುತ್ತದೆ, ತಾವು ಯುದ್ಧ ಮಾಡುತ್ತೇವೆ ಎಂಬ ಮುನ್ನೆಚ್ಚರಿಕೆಯೂ ಅವರಿಗೆ ಬರುತ್ತಿರಲಿಲ್ಲ. ಈ ಘಟನೆಯಿಂದ ಅರ್ಯಾವರ್ತದ ರಾಜಕೀಯ ಸ್ಥಿತಿ ಕೃಷ್ಣನ ಯೋಜನೆಗೆ ವಿರುದ್ಧ ಗತಿಯಲ್ಲಿ ಹಾಯತೊಡಗಿತ್ತು.

ದ್ರೌಪದಿಗೆ ಸೀರೆಯನ್ನು ನೀಡಲು ಕೃಷ್ಣನು ಬಂದ ಎಂಬುದೆಲ್ಲಾ ನಂತರ ಭಾರತದಲ್ಲಿ ಸೇರಿಸಿದ ಪ್ರಕ್ಷಿಪ್ತ ಭಾಗ ಎಂಬುದು ಸಾಮಾನ್ಯವಾದ ತಿಳುವಳಿಕೆ. ಕೃಷ್ಣನು ನರಕಾಸುರನ ಒತ್ತೆಯಲ್ಲಿದ್ದ ಹೆಣ್ಣುಗಳನ್ನು ವಿವಾಹವಾದುದ್ದರ ಬಗ್ಗೆ ವಾಸ್ತವಕ್ಕೆ ಹತ್ತಿರವಾದ ವಿವರಣೆ ಪರ್ವದಲ್ಲಿದೆ. ಕೃಷ್ಣನ ಹೆಂಡತಿಯರಾದ ರುಕ್ಮಿಣಿ, ಸತ್ಯಭಾಮೆ, ಜಾಂಬವತಿ, ಭದ್ರೆ, ಮಿತ್ರವಿಂದೆ, ನೀಲೇ, ಕಾಲಿಂದೀ, ಲಕ್ಷಣೇ ಇವೆರೆಲ್ಲರನ್ನೂ ಆಯಾ ರಾಜ್ಯವನ್ನು ಗೆದ್ದಾಗ, ಸಂಧಿ ಮಾಡಿಕೊಂಡಾಗ ಸಂಬಂಧ ಬೆಳೆಸಲು ಆದ ಮದುವೆ ಎಂಬುದು ಹೊರನೋಟಕ್ಕೆ ಲಭ್ಯವಾಗುತ್ತದೆ. ಆದರೆ ಬಲರಾಮನು ಮಾತ್ರ ಕೃಷ್ಣನನ್ನು ತಂತ್ರದ ವಿಚಾರದಲ್ಲಿ ಒಪ್ಪಿಕೊಂಡರೂ, ರಾಜ ಸಂಬಂಧದ ಹೆಸರಿನಲ್ಲಿ ಹೆಣ್ಣು ಗಳಿಸುವವನು ಎಂದೇ ನಿರ್ಧರಿಸುತ್ತಿದ್ದ ಎನ್ನಬಹುದು. ದೊಡ್ಡ ಆರ್ಯಾವರ್ತವನ್ನು ಹಿಡಿದಿಟ್ಟುಕೊಳ್ಳವ ಶಕ್ತಿಯಿದ್ದ ಯಾದವರ ಕೃಷ್ಣ ವಾಸುದೇವ ತನ್ನ ಹೆಂಡಿರ ನಡುವಿನ ರಾಜಕೀಯವನ್ನು ಹೇಗೆ ಸಂಭಾಳಿಸುತ್ತಿದ್ದ ಎಂಬುದಕ್ಕೆ ಸ್ಪಷ್ಟ ಉತ್ತರವಿ­ಲ್ಲ. ‘ಹೆಂಡಿರ ಕಾಟಕ್ಕೆ, ಕೃಷ್ಣ ಉರೂರು ತಿರುಗುತ್ತಾನೆ’ ಎಂಬ ಸಾತ್ಯಕಿಯ ಸ್ವಗತ ಈ ವಿಚಾರಕ್ಕೆ ತಿಳಿಹಾಸ್ಯದ ನಿರ್ಣಯವನ್ನು ಹೇಳಿದಂತಿದೆ.

***

ಮಹಾಭಾರತವನ್ನು ಪುರಾಣವೆಂದು ಪರಿಗಣಿಸುವುದರಿಂದ ಅದರ ಐತಿಹಾಸಿಕ ಮಾನ್ಯತೆ ಕಳೆದು ಹೋಗುವ ಸಾಧ್ಯತೆ ಇದೆ. ಅದೇ ರೀತಿಯಲ್ಲಿ ಸಮಕಾಲೀನ ಪ್ರಸ್ತುತತೆಯ ಬಗ್ಗೆ ವಿಶ್ಲೇಷಿಸುವಾಗ ನೇರಾನೇರ ಘಟನೆಗಳನ್ನು ಉಲ್ಲೇಖಿಸುವುದು ಕ್ಷುಲ್ಲಕ ಪ್ರಯತ್ನವಾಗುತ್ತದೆ. ಇದು ನಮ್ಮ ನೆಲದ ಮಾನವೀ ಮೌಲ್ಯಗಳ, ಮನುಜ ಮುಖದ ಅನಾವರಣ ಎಂದುಕೊಂಡಾಗ ಮಾತ್ರ ಪ್ರಸ್ತುತಕ್ಕೆ ಅದು ದಕ್ಕುವುದು. ಪರ್ವ ಕಾದಂಬರಿಯು ಅದೇ ನೆಲೆಯಲ್ಲಿದೆ. ಕೃಷ್ಣನ ಪಾತ್ರವು ಆ ಹಿನ್ನಲೆಯದ್ದೇ ಆಗಿದೆ.
ಇತ್ತ ಕೃಷ್ಣ ಯುದ್ಧದ ಮುಂಚಿನ ದಿನಗಳಲ್ಲಿ ಉಪಪ್ಲಾವ್ಯಕ್ಕೆ ಬಂದು ಪಾಂಡವರನ್ನು ಕೂಡುತ್ತಾನೆ, ಆತ್ತ ದುರ್ಯೋಧನ ಬಲರಾಮನಲ್ಲಿಗೆ ಹೋಗಿರುತ್ತಾನೆ. ಯುದ್ಧವು ನಿಶ್ಚಿತ ಎಂದು ತಿಳಿದಿದ್ದರೂ ಕೃಷ್ಣನು ಯುದ್ಧವನ್ನು ನಿಲ್ಲಿಸುವ ಬಗ್ಗೆಯೇ ಆಲೋಚಿಸುತ್ತಿದ್ದ. ಅದಕ್ಕಾಗಿ ಅವನು ಮಾಡಿದ ಪ್ರಯತ್ನಗಳು ನಿಚ್ಚಳವಾಗಿತ್ತು. ದುರ್ಯೋಧನನ ಒಡ್ಡೋಲಗಕ್ಕೆ ತನ್ನ ಖಾಸಾ ಅಂಗರಕ್ಷಕರನ್ನು, ಸಭೆಯ ವೈಭವ ನೋಡಲು ಬಂದ ವೀಕ್ಷಕರೆಂದು ಮರೆಮಾಚಿ, ಸಂಧಾನದ ಮಾತನ್ನು ಕೃಷ್ಣನು ಮುಂದಿಡುತ್ತಾನೆ. ಅಲ್ಲಿದ್ದ ಪಿತಾಮಹ ಭೀಷ್ಮ, ಕೃಷ್ಣನ ಸಂಧಿಯ ನುಡಿಗೆ ‘ಸಾಧು ಸಾಧು’ ಎನ್ನುತ್ತಾರೆ. ಪ್ರಾರಂಭಿಕವಾಗಿ ಕೃಷ್ಣ, ಅಲ್ಲಿ ಯುದ್ಧವನ್ನು ನಿಲ್ಲಿಸುವ ದೃಷ್ಟಿಯಿಂದಲೇ ತನ್ನ ಎಂದಿನ ಸೂಕ್ಷ್ಮ ಮಾತನ್ನು ಮುಂದುವರೆಸಲು, ದುರ್ಯೋಧನನ ಅಸಡ್ಡೆ ಅವನ ಗ್ರಹಿಕೆಗೆ ಸಿಗುವಂತೆಯೇ ಇತ್ತು. ಎಷ್ಟಾದರೂ ದುರ್ಯೋಧನ ಕೃಷ್ಣನಿಗೆ ಬೀಗರಾದವನು, ದುರ್ಯೋಧನನ ಮಗಳು ಲಕ್ಷಣೆಯನ್ನು ಇಷ್ಟಪಟ್ಟ ಕೃಷ್ಣನ ಮಗ ಸಾಂಬನನ್ನು ಕೌರವರು ಕಟ್ಟಿ ಹಾಕಿ, ಕೊನೆಗೆ ಅದು ಮದುವೆಯಲ್ಲಿ ಸಮಾಪ್ತಿಯಾಗಿತ್ತು. ಈ ಪ್ರಕರಣದಿಂದಲೇ ತನ್ನ ಮತ್ತು ದುರ್ಯೋಧನನ ಲಹರಿ ಹೊಂದುವುದಿಲ್ಲ ಎಂದು ಕೃಷ್ಣ ಅರಿತಿದ್ದ. ಯುದ್ಧವನ್ನು ಮಾಡುವುದೇ ಇವರ ಗುರಿಯಾಗಿದೆ ಎನ್ನುವುದನ್ನು ಗ್ರಹಿಸಿದ ಕೃಷ್ಣ, ಭೀಮಾರ್ಜುನರ ಪರಾಕ್ರಮವನ್ನು ವರ್ಣಿಸುತ್ತಾನೆ. ‘ಸ್ವಪಕ್ಷದ ಸಾಮರ್ಥ್ಯದ ವರ್ಣನೆ, ಶತ್ರು ಪಕ್ಷಕ್ಕೆ ಮೊದಲ ಏಟು’ ಎಂಬುದು ತಂತ್ರದ ಒಂದು ಭಾಗ. ‘ನೀವು ಸೋ­ಲುವುದು ಖಚಿತ’ ಎಂಬ ಸೇರ್ಪಡೆಯು, ಕೃಷ್ಣ, ಮೌಖಿಕ ಆಕ್ರಮಣವನ್ನೇ ಮಾಡಿದಂತಿತ್ತು. ಇಂದಿನ ಚುನಾವಣೆಗಳಲ್ಲಿ, ಪ್ರಚಾರದ ಆರ್ಭಟದಲ್ಲೂ ಈ ಪ್ರವೃತ್ತಿ ಕಾಣಬಹುದಾಗಿದೆ. ಕೌರವರು ಕೃಷ್ಣನನ್ನು ಅಲ್ಲಿಯೇ ಬಂಧಿಸಲು ಯತ್ನಿಸಿದರು. ಕೃಷ್ಣ ಸಿಕ್ಕಿಹಾಕಿಕೊಳ್ಳುವಷ್ಟು ದಡ್ಡನಿರಲಿಲ್ಲ ಎಂಬುದನ್ನು ಗ್ರಹಿಸದ ಕೌರವರಿಗೆ, ಒಡ್ಡೋಲಗದಲ್ಲೇ ಮೊದಲ ಸೋಲಾಯಿತು. ಯುದ್ಧ ಸಂದರ್ಭದಲ್ಲಿನ ಘಟನೆ ಮತ್ತು ಕಾರ್ಯಗಳನ್ನು ರಾಜತಂತ್ರ ಮತ್ತು ರಾಜಕಾರಣ ಎನ್ನುವ ಬದಲಾಗಿ ಯಥಾವತ್ ಯುದ್ಧತಂತ್ರ ಮತ್ತು ಧರ್ಮಕಾರಣ ಎಂದು ಅಂಗೀಕರಿಸುವುದು ಉತ್ತಮ. ಅದಾಗಲೇ ಕೃಷ್ಣ ಕರ್ಣನಿಗೆ ಆತನ ಹುಟ್ಟಿನ ವಿಚಾರವಾದ, ಕುಂತಿಯ ಕಾನೀನ ಪುತ್ರ ಎಂಬುದನ್ನು ತಿಳಿಸಿ, ಪಾಂಡವರಿಂದ ವಿಚಾರವನ್ನು ಮುಚ್ಚಿಟ್ಟು, ಭಾವನಾತ್ಮಕ ತಂತ್ರವನ್ನು ಹೂಡತೊಡಗಿದ್ದ. ಕರ್ಣ ಇದಕ್ಕೆ ಯಶಸ್ವಿಯಾಗಿ ಬಲಿಯಾದದ್ದು ಪಾಂಡವರ ಪುಣ್ಯ. ‘ವೈರಿಯ ಮನಸ್ಸಿನ ಮರ್ಮವನ್ನು ಅರಿಯುವುದೇ ಯುದ್ಧದ ಮುಕ್ಕಾ­ಲು ಕೆಲಸ’ ಎಂಬುದನ್ನು ಕೃಷ್ಣ ಸ್ಪಷ್ಟಪಡಿಸುತ್ತಾನೆ. ಕೃಷ್ಣನು ಯುದ್ಧದಲ್ಲಿ ಸೇನಾಪತ್ಯವನ್ನು ವಹಿಸಿಕೊಂಡಿಲ್ಲ ಎಂಬುದೇ ಕೌರವರಿಗೆ ಆತಂಕದ ವಿಚಾರವಾಗಿತ್ತು. ದ್ರೋಣರು ಇದನ್ನು ಗಮನಿಸಿದ್ದರು. ಎರಡೂ ಪಕ್ಷದಲ್ಲಿ ಲೆಕ್ಕವಿಲ್ಲದಷ್ಟು ಸೈನಿಕರು ಸೇರಿರುತ್ತಾರೆ. ಯಾರು ಯಾವ ಪಕ್ಷ ಎಂದು ಗೊತ್ತಾಗದ ಪರಿಸ್ಥಿತಿ. ‘ಧರ್ಮಯುದ್ಧ’ವಾಗದೆ ಅಧಿಕ ಪ್ರಾಣ ಹಾನಿ ತಪ್ಪಿಸಲು ಸಾಧ್ಯವಿಲ್ಲವೆಂದೇ ಧರ್ಮಸಭೆಗೆ ಭೀಷ್ಮ, ದ್ರೋಣ, ಶಲ್ಯರು ಪಾಂಡವರಲ್ಲಿ ಬರುತ್ತಾರೆ. ಎಂದಿನಂತೆ ಕೃಷ್ಣನೇ ಯುದ್ಧ ಧರ್ಮದ ಬಗ್ಗೆ ವಿವರಿಸುತ್ತಾನೆ. ಆ ಮೂವರಲ್ಲಿ ಅನ್ಯ ಮನಸ್ಕನಾಗಿದ್ದ ಶಲ್ಯನನ್ನು ಕಂಡು ‘ನೀವು ಹಿರಿಯರು’ ಎಂದು ಸಂಬೋಧಿಸಿ ‘ಯಾವುದೋ ತಪ್ಪು ಸಂಪರ್ಕ ನುಡಿಯಿಂದ ನೀವು ಆ ಕಡೆಯಲ್ಲಿದ್ದೀರಿ, ನಿಮ್ಮ ತಂಗಿಯ ಮಕ್ಕಳಾದ ನಕುಲ-ಸಹದೇವ ಇಲ್ಲಿದ್ದಾರೆ ನೋಡಿ’ ಎಂದೆಲ್ಲಾ ಸೇರಿಸಿ, ‘ನಿಮ್ಮ ಆಶೀರ್ವಾದ ಮಾತ್ರ ನಮ್ಮ ಕಡೆಗಿರಲಿ’ ಎನ್ನುತ್ತಾನೆ ಕೃಷ್ಣ. ಎಂಥಹ ಭಾವನಾತ್ಮಕ ಬೇಟೆ! ಶತ್ರು ಪಕ್ಷದಲ್ಲಿನ ಮಿತ್ರ ಸಂಖ್ಯೆ ಹೆಚ್ಚಾದಷ್ಟು ವಿಜಯ ಸಲೀಸು ಎಂಬ ತಂತ್ರಕ್ಕೆ ಶಲ್ಯ ಬಲಿಯಾಗಿದ್ದ. ಧರ್ಮಯುದ್ಧದ ನಿಯಮಗಳು ಅಂದರೆ ರಥದವನು ರಥದವನಿಗೆ ಮಾತ್ರ ಹೊಡೆಯಬೇಕು, ಕಾಲಾಳು ಕಾಲಾಳುವಿನೊಂದಿಗೆ ಮಾತ್ರ ಸೆಣೆಸಬೇಕು, ಒಬ್ಬರ ಬಳಿ ಯುದ್ಧ ಮಾಡುತ್ತಿರುವವರನ್ನು ಇನ್ನೊಬ್ಬ ಮುಟ್ಟಬಾರದು, ಸಾರಥಿ ಇಲ್ಲದವನನ್ನು ಹೊಡೆಯಬಾರದು, ಯುದ್ಧದ ಸಮಯದ ನಂತರ ದಾಳಿ ಇಲ್ಲ, ಇಂಥದ್ದೇ ಇತರ ನಿಯಮಗಳಿದ್ದವು. ಯುದ್ಧದ ಬಿಸಿ ಏರಿದಾಗ ಇದಾವ ನಿಯಮ ಉಳಿಯುವುದಿಲ್ಲ ಎಂಬುದು ಕೌರವರಿಗೆ ನಂತರ ಅರಿವಾಯಿತು. ಕೃಷ್ಣನಿಗೆ ಧರ್ಮಸಭೆಯಲ್ಲೇ ತಿಳಿದಿತ್ತು!
ಯುದ್ಧಕ್ಕೆ ಮುನ್ನ ಎರಡು ದಿನದಲ್ಲಿ ಅರ್ಜುನನಿಗೆ ಗುರುವಾದ ದ್ರೋಣರ ಮೇಲೆ, ಪಿತಾಮಹರ ಮೇಲಿನ ಮೋಹ ಅತಿಯಾಗಿ ಕರ್ಮಭ್ರಷ್ಟನಾಗುವಾಗ,
ಕ್ರೋಧಾದ್ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿ ವಿಭ್ರಮಃ ಸ್ಮೃತಿ ಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾತ್ ಪ್ರಣಶ್ಯತಿ
ಎಂಬುದನ್ನು ಅರಿಯಲು ಕೃಷ್ಣ ಹೇಳುತ್ತಾನೆ. ಈ ಅವಧಿಯನ್ನೇ ಭಗವದ್ಗೀತೆಯ ಅವಧಿ ಎಂದು ಸ್ವೀಕರಿಸಬಹುದಾಗಿದೆ. ಪರ್ವದಲ್ಲಿ ಈ ಬಗ್ಗೆ ವಿವರಣೆಯಿ­ಲ್ಲ. ‘ಪ್ರಕೃತಿಸ್ತ್ವಾಂ ನಿಯೋಕ್ಷ್ಯತಿ, ನೀನು ಎಷ್ಟೇ ಬೇಡವೆಂದರೂ ಯುದ್ಧ ಮಾಡದೇ ಇರಲಾರೆ, ಆತ್ಮ ವಿಸ್ಮೃತಿ ಮಾಡಿಕೊಳ್ಳಬೇಡ’ ಎಂಬ ಮಾತು ಇಲ್ಲಿ ಗಣನೆಗೆ ಬರುತ್ತದೆ. ಎಲ್ಲವನ್ನೂ ನಿರ್ವಿಕಾರ ಸ್ಥಿತಿಯಲ್ಲಿ ನಿಂತು ಸ್ವೀಕರಿಸುವ ಕೃಷ್ಣ, ಭೀಷ್ಮನ ಮೇಲೆ ಚಕ್ರವಿಡಿದು ಹೋಗುವುದು ಅಸಂಭವವಾದ ವಿಚಾರ. ಆದರೇ ಭೀಷ್ಮನನ್ನು ಕೊಲ್ಲದೇ ಅರ್ಜುನ ಕ್ಷಮತೆ ತೋರುವುದಿಲ್ಲ ಎಂದು ಅರಿತೇ ಶಿಖಂಡಿಯನ್ನು ಮುಂದೆ ನಿಲ್ಲಿಸಿ, ಭೀಷ್ಮ ಪದತ್ಯಾಗ ಮಾಡುವಂತೆ ಮಾಡುತ್ತಾನೆ. ಪ್ರಭಾವಶಾಲಿಯ ಮುಂದೆ ಅಶಕ್ತನನ್ನು ನಿಲ್ಲಿಸುವ ತಂತ್ರ ಸಮಕಾಲೀನ ಚುನಾವಣೆ, ರಾಜಕೀಯದಲ್ಲಿ ನಿಲುಕುವ ನೋಟವೇ ಆಗಿದೆ. ಸೋತರೆ ಬೇಸರವಿಲ್ಲ, ಗೆದ್ದರೆ ದ್ವಿಲಾಭ. ಯುದ್ಧದ ಮಧ್ಯಭಾಗದಲ್ಲಿ ಸೇನಾಪತಿಯಾದ ದ್ರೋಣನನ್ನು ದ್ರುಪದನ ಮಗ ಧೃಷ್ಟದುಮ್ಯ ವಧಿಸುತ್ತಾನೆ. ಮತ್ತೊಮ್ಮೆ ವಿಸ್ಮೃತಿಗೆ ಒಳಗಾದ ಅರ್ಜುನ ಧೃಷ್ಟದುಮ್ಯನ ಮೇಲೆಯೇ ಎರಗುತ್ತಾನೆ. ಈ ಸಂದರ್ಭದಲ್ಲೂ ಕೃಷ್ಣನೇ ಅವನನ್ನು ಸಂಭಾಳಿಸುತ್ತಾನೆ. ಶತ್ರುಪಕ್ಷದ ಹೊಡೆತವನ್ನು ತಪ್ಪಿಸುವುದು ಎಷ್ಟು ಮುಖ್ಯವೋ, ಸ್ವಪಕ್ಷದ ಐಕ್ಯ ಅಷ್ಟೇ ಪ್ರಮುಖವಾದದ್ದು ಎಂಬುದು ಈ ನಂತರದ ಎಷ್ಟೋ ಪ್ರಕರಣದಲ್ಲಿ ಗಮನಕ್ಕೆ ಬರುತ್ತದೆ. ಕರ್ಣನಿಗೆ ಹೆದರಿ ಬಿಡಾರಕ್ಕೆ ಓಡಿಬಂದ ಧರ್ಮನನ್ನು, ಅಣ್ಣನ ಮೇಲೆ ಹೊಡೆಯಲು ಹೋದ ಅರ್ಜುನನನ್ನು ಕೃಷ್ಣನೇ ನಿಭಾಯಿಸಬೇಕಾಯಿತು. ಅಭಿಮನ್ಯುವಿನ ಮರಣದ ನಂತರ ಬಿಡಾರದಲ್ಲಿ ಅರ್ಜುನ ಕೋಪದಿಂದ ಪ್ರತಿಜ್ಞೆ ಮಾಡುತ್ತಾನೆ. ‘ಪ್ರತಿಜ್ಞೆಗಳಿಂದ ಯುದ್ಧ ಗೆಲ್ಲಲು ಸಾಧ್ಯವಿ­ಲ್ಲ, ಪೌರುಷದ ಷರತ್ತುಗಳ ಅವಶ್ಯಕೆತೆ ಏನಿತ್ತು?‛ ಎಂದು ಕೇಳಿದ ಕೃಷ್ಣನ ಮಾತಿಗೆ ಅರ್ಜುನ ಮೂಕನಾಗುತ್ತಾನೆ. ಸಾತ್ಯಕಿಯು ಈ ಸಂದರ್ಭದಲ್ಲಿ ‘ತ್ರಿಗರ್ತದ ರಾಜರು, ಧರ್ಮನನ್ನು ಯುದ್ಧಕ್ಕೆ ಕರೆದರು, ಅವನು ಪೌರುಷದ ಷರತ್ತಿಗೆ ಬಿದ್ದು ರಕ್ಷಣೆ ಮರೆತು ಹೋದ. ಆದರೆ ಜರಾಸಂಧನ ವಿಚಾರದಲ್ಲಿ ಕೃಷ್ಣ ‘ಹೇಡಿ’ ಎನ್ನಿಸಿಕೊಂಡರೂ ದುಡುಕು ಮಾಡಿಕೊಳ್ಳಲಿಲ್ಲ. ಕೃಷ್ಣನ ತಾಳ್ಮೆ ಪಾಲಿಸಿದ್ದರೆ ಅಭಿಮನ್ಯು ಸಾಯುತ್ತಿರಲಿಲ್ಲ’ ಎಂದು ಹೇಳುವುದು ಕೃಷ್ಣ ಪ್ರಜ್ಞೆಯನ್ನು ಸುಂದರವಾಗಿ ತಿಳಿಸಿದ ಭಾಗವಾಗಿದೆ. ಜಯದ್ರಥನ ವಧೆ ಮುಂದಿದ್ದ ಗುರಿಯಾಗಿತ್ತು. ಜಯದ್ರಥನ ವಿಚಾರವಾಗಿ ಭೀಮನಿಗೆ ಕೃಷ್ಣ ‘ಬರೀ ರೋಷದಿಂದ ಯುದ್ಧ ಮಾಡುವುದ­ಲ್ಲ’ ಎಂದು ವಿವೇಕದ ಮಾತನ್ನು ನೆನಪಿಸಿದ್ದ. ಯಾದವರ ಸೇನೆಯ ಕೃತವರ್ಮ ಕೃಷ್ಣಾರ್ಜುನರ ರಥಕ್ಕೆ ದಾರಿ ಮಾಡಿಕೊಟ್ಟದ್ದು ಈ ಪ್ರಕರಣದ ಇನ್ನೊಂದು ಮಜಲು. ಸಂಜೆಯಾಯಿತು ಎಂದು ಯುದ್ಧವನ್ನು ನಿಲ್ಲಿಸಿ, ದುರ್ಯೋಧನನು ಜಯದ್ರಥನೊಂದಿಗೆ ಸೇನೆಯ ವ್ಯೂಹದಿಂದ ಹೊರ ಬಂದಾಗ ಅವನನ್ನು ಕೊಂದದ್ದು ಮುಕ್ತಾಯದ ಮಜಲು. ದುರ್ಯೋಧನ ‘ಮೋಸ’ ಎಂದು ಕೂಗಿದ. ಆದರೆ ಧರ್ಮವನ್ನು ಮುರಿದು ರಥವಿಲ್ಲದೆ ಕೆಳಗಿದ್ದ ಅಭಿಮನ್ಯುವನ್ನು ಸುತ್ತವರಿದು ಕೊಂದದ್ದಕ್ಕೆ ಪ್ರತೀಕಾರವಿದು ಎಂಬತೆ ಈ ಕ್ರಿಯೆಯಾಗುತ್ತದೆ. ಈ ಹಿಂದಿನ ದಿನದಲ್ಲಿ ಭೂರಿಶ್ರವ ಸಾತ್ಯಕಿಯ ಮೇಲೆ ಗುರಿ ಇಟ್ಟಾಗ, ಇನ್ನೊಂದು ರಥದಿಂದ ಅರ್ಜುನನ ಕೈಯಲ್ಲಿ ಭೂರಿಶ್ರವನನ್ನು ಕೊಲ್ಲಿಸಿದ್ದು, ಧರ್ಮಯುದ್ಧಕ್ಕೆ ಬಾಹೀರವಾಗಿತ್ತಾದರೂ, ತನ್ನೊಡೊನೆ ಬಂದ ಯಾದವ ಮಿತ್ರ ಸಾತ್ಯಕಿಯನ್ನು ಉಳಿಸುವುದು ಕೃಷ್ಣನಿಗೆ ಮುಖ್ಯವಾಗಿತ್ತು.
ಕರ್ಣನನ್ನು ನಿಂದಿಸಿ ಅವನ ಸಾರಥಿಯಾದ ಶಲ್ಯನು ರಥದಿಂದ ಇಳಿದುಹೋದಾಗ, ಅರ್ಜುನನು ಕರ್ಣನ ಮೇಲೆ ಎರಗುತ್ತಾನೆ. ‘ಇದು ಯಾವ ಧರ್ಮ?’ ಎಂಬುದು ಕರ್ಣನ ಪ್ರಶ್ನೆಯಾದರೆ, ಬೇರೆಯವರೊಡನೆ ಕಾದಾಡುತ್ತಿದ್ದ ಘಟೋತ್ಕಚನ ಕತ್ತು ಕುಯ್ಯುವಾಗ ‘ಕರ್ಣ, ಕ್ವ ಧರ್ಮಸ್ಥದಾ ಗತಃ, ನಿನ್ನ ಧರ್ಮವು ಎಲ್ಲಿ ಹೋಗಿತ್ತು?’ ಎಂಬ ಪ್ರಶ್ನೆ ಕೃಷ್ಣನಲ್ಲಿ ಮೂಡಿತ್ತು. ಕರ್ಣನು ಭಾವನಾತ್ಮಕ ಭೇಟೆಯಿಂದ ಮೊದಲೇ ಸತ್ತು ಹೋಗಿದ್ದ. ಶಲ್ಯ ನಿಮಿತ್ತವಾದ. ಧರ್ಮಕಾರಣಗಳು ಹೇಡಿತನದ ಕುರುಹಾಗಬಾರದು ಎಂಬುದಕ್ಕಾಗಿಯೇ ಕೃಷ್ಣನು ತನ್ನ ಕ್ರಿಯೆಗಳನ್ನು ಮಾರ್ಪಾಡು ಮಾಡುತ್ತಿದ್ದ ಎನ್ನಿಸುತ್ತದೆ. ಯುದ್ಧಕ್ಕೆ ಮುನ್ನ ಶತಾಯಗತಾಯ ಯುದ್ಧ ನಿಲ್ಲಿಸಬೇಕು ಎಂದು ಓಡಾಡಿದವನು, ಯುದ್ಧ ಪ್ರಾರಂಭವಾದ ಮೇಲೆ ಗೆಲ್ಲಲೇ ಬೇಕೆಂದು ಧೃಡವಾಗಿ ನಿಂತುಬಿಟ್ಟಿದ್ದ. ದುರ್ಯೋಧನನನ್ನು ಕೊಲ್ಲುವ ಪ್ರಸಂಗ ಪರ್ವದಲ್ಲಿಲ್ಲ. ‘ಅವನನ್ನು ನೋಡು ಕೃಷ್ಣ, ಆಗಲೇ ಸತ್ತು ಹೋಗಿದ್ದಾನೆ. ಯುದ್ಧ ನೆನ್ನೆಯೆ ಮುಗಿದುಹೋಯಿತು’ ಎಂದು ಭೀಮ ಹೇಳುತ್ತಾನೆ. ಆದರೆ ಶತ್ರುಶೇಷ ಉಳಿಸಬಾರದು ಎಂಬುದನ್ನು ಕೃಷ್ಣ ಬಲವಾಗಿ ಪ್ರತಿಪಾದಿಸಿದ ಎನ್ನಬಹುದಾಗಿದೆ. ಯುದ್ಧಾನಂತರದಲ್ಲೂ ಪಾಂಡವರನ್ನು ಧೃತರಾಷ್ಟ್ರ ಮತ್ತು ಗಾಂಧಾರಿಯ ಬಳಿ ಕರೆದೊಯ್ಯುವಲ್ಲಿಯೂ ಕೃಷ್ಣನೇ ಮುಂದಾಗುತ್ತಾನೆ. ಧೃತರಾಷ್ಟ್ರ ‘ತಂತ್ರಗಾರ’ ಎಂದು ಒಳಗೆ ಸಿಡಿಯುತ್ತಿರುತ್ತಾನೆ. ಗಾಂಧಾರಿಯ ಕಣ್ಣ ಕಟ್ಟನ್ನು ಬಿಡಿಸಿ, ಅವಳ ಮನಸ್ಸನ್ನು ಹಗುರಾಗಿಸಿ ಪಾಂಡವರನ್ನು ನಿಮ್ಮವರೆಂದು ತಿಳಿ ಎಂದು ಕೃಷ್ಣ ಬೇಡುತ್ತಾನೆ.
ರಾಜಕೀಯ-ಯುದ್ಧ-ಧರ್ಮಕಾರಣಗಳಲ್ಲಿ ಈ ಪರಿಯಲ್ಲಿ ಮುಂದುವರೆದ ಕೃಷ್ಣ, ಕೊನೆಯಲ್ಲಿ ವಿಮುಖನಾಗುವುದು ಸಹಜವಾಗಿಯೇ ಕಾಣುತ್ತದೆ. ದೊಡ್ಡ ಯಶಸ್ಸಿನ ಮುಂದೆ ಹಲವಾರು ಸೋಲಿರುತ್ತದೆ ಎಂಬಂತೆ ಯಾದವರ- ಪಾಂಡವರ-ಕುರುನಾಡಿನ ಸ್ಥಿತಿಯಾಗಿತ್ತು. ಇಷ್ಟೆಲ್ಲದರ ಬಗ್ಗೆ ಶೂನ್ಯ ಕವಿಯುವುದು, ಇದರ ಅವಶ್ಯಕತೆ ಏನಿತ್ತು? ಎಂಬ ಯೋಚನೆ ಕೃಷ್ಣನಿಗೂ ಬಂದಿರಬಹುದು. ತಾನು ಸಾಧಿಸಿದ್ದೇನು ಎಂಬ ಅಳತೆಯನ್ನೂ ಮಾಡಿಕೊಂಡಿರಬಹುದು. ಆದರೆ ಇವೆಲ್ಲ ವೈರಾಗ್ಯ ಸಹಜ ಕ್ರಿಯೆಗಳು. ಬದುಕು ಎಂಬುದು ಕರ್ಮ ಮಾರ್ಗ, ಕರ್ಮವನ್ನು ನಿಭಾಯಿಸುವುದು, ಕರ್ಮದಲ್ಲಿ ನೈಪುಣ್ಯತೆ ಸಾಧಿಸುವುದೇ ಬದುಕಿನ ನಿಜವಾದ ಧರ್ಮ ಎಂಬುದನ್ನು ಆತ ಬರೀ ಉಪದೇಶಿಸಲಿಲ್ಲ, ಕೃತಿಯಲ್ಲೂ ಹಾಗೆಯೇ ನಡೆದುಕೊಂಡ. ಆದ್ದರಿಂದಲೇ ಕೃಷ್ಣನು ಮಾನವನೇ ಆದರೂ, ಅಸಮಾನ್ಯ ಮಾನವ. ಅಸಮಾನ್ಯತೆಯ ಉತ್ತುಂಗವನ್ನು ಏರಿದ ಕಾರಣಕ್ಕೆ ಕೃಷ್ಣನನ್ನು ದೈವ ಎಂದು ನೋಡುವ ಪ್ರಕ್ರಿಯೆ ಪ್ರಾರಂಭವಾಯಿತು ಎನ್ನಬಹುದಾಗಿದೆ.

- ಕರಣಂ ಪವನ್ ಪ್ರಸಾದ್
30.08.2015
5 likes ·   •  0 comments  •  flag
Share on Twitter
Published on March 06, 2017 22:27
No comments have been added yet.