ಇದನ್ನು ಮೊದಲಿಗೆ ಇಂಗ್ಲೀಷಿಗೆ ಅನುವಾದ ಮಾಡಿ ಹೇಳಿದರೆ ಸ್ಪಷ್ಟತೆ ಸಿಗತ್ತೆ... Intellect and Inference. ಇಲ್ಲಿ ಅನುಮಾನ ಅಂದರೆ ಸಂದೇಹ ಎಂದರ್ಥವಲ್ಲ. ಅದು ತತ್ತ್ವಶಾಸ್ತ್ರೀಯ ಪದ. ರೀಸನಿಂಗ್ ಎನ್ನುತ್ತಾರಲ್ಲ ಆ ಪ್ರಕ್ರಿಯೆಯ ಫಲಿತಾಂಶದ ಉನ್ನತ ಘಟ್ಟ "ಅನುಮಾನ". ಇದಕ್ಕೂ ಇಂಟಲೆಕ್ಟ್ ಎಂಬುದಕ್ಕೂ ಏನು ವ್ಯತ್ಯಾಸ ಅಥವಾ ಸಮಾನ ಏನು ಎಂದು ಯೋಚಿಸಬೇಕಾಗುತ್ತದೆ.
ಚಿತ್ತಶಕ್ತಿ ಸಾಮಾನ್ಯವಾಗಿ ಸಂಪ್ರದಾಯದ ಮಗು. ಚಿತ್ತಕ್ಕೆ ಜಾತಗುಣವೇ ಪ್ರಧಾನ, ದತ್ತಗುಣವಲ್ಲ. ವಿಷಯ ಸಂಗ್ರಹ, ಪರಾಮರ್ಶೆ, ನಿರೂಪಣೆ, ಭೇದ ಎಲ್ಲವೂ ಇಲ್ಲಿ ಸಾಧ್ಯ. ಅನುಮಾನವು ಇರುತ್ತದೆ ಆದರೆ ಚಿತ್ತಶಕ್ತಿ ಅನುಮಾನವನ್ನು ಆದಷ್ಟು ತಿರಸ್ಕಾರದಲ್ಲಿ ನೋಡುತ್ತದೆ. ಅಂದರೆ ಚಿತ್ತಶಕ್ತಿ ಎಂಬುದು ನನಗೆ ತಿಳಿದಿದೆ ಎಂಬುದರ ಬಿಂದುವಾದರೆ, ಅನುಮಾನ ತಿಳಿದಿಲ್ಲ ಎಂಬುದರ ಬಿಂದು. ತಿಳಿದಿಲ್ಲ ಎಂಬುದನ್ನು ತಿಳಿಯಲು ಒಂದು ಕಲ್ಪನೆ (ಹೈಪಾಥಿಸಿಸ್) ಬೇಕು. ಅದಕ್ಕೆ ಪುನಃ ಚಿತ್ತಶಕ್ತಿಯೇ ಬೇಕು. ಈ ಹಂತದಲ್ಲಿ ಅನುಮಾನ ಪರಾವಲಂಬಿ ಎನ್ನಬೇಕಾಗುತ್ತದೆ. ಆದಾಗ್ಯೂ ಅನುಮಾನಕ್ಕೆ ದತ್ತಗುಣ ಮುಖ್ಯ ಜಾತಗುಣವಲ್ಲ. ಏಕೆಂದರೆ ದತ್ತಗುಣದಲ್ಲಿ ಮಾತ್ರ ಅನೇಕ ಆಯ್ಕೆಯ ವಿಚಾರ ಲಭ್ಯ. ಜಾತಗುಣದಲ್ಲಿ ’ಪೂರ್ವದ ವಾಸನೆ’ ಅಥವಾ ತನ್ನ ಶ್ರದ್ಧೆಯ ಚೌಕಟ್ಟು ಎಂಬ ಸೀಮಿತ ಪರಿಧಿ ಇರುತ್ತದೆ. ಜಾತಗುಣದಲ್ಲೂ ಅನುಮಾನ ಇರಲು ಸಾಧ್ಯವೇ ಎಂದರೆ, ಇರಬಹುದು... ಆದರೆ ಅದು ಚಿತ್ತಶಕ್ತಿಯನ್ನು ಮೀರಿ ಇರುವುದಿಲ್ಲ ಎಂಬುದು ಪ್ರಮುಖ ಅಂಶ.
ತುಂಬಾ ಕಲಸುಮೇಲೋಗರವಾದ ಚಿತ್ತಶಕ್ತಿ ಮತ್ತು ಅನುಮಾನದ ವಿವರಣೆ ಏಕೆ ಬೇಕು ಎಂಬುದು ಉತ್ತಮವಾದ ಪ್ರಶ್ನೆ. ನಾವು ಬುದ್ಧಿ ಎಂದು ಏನು ಹೇಳುತ್ತಿದ್ದೇವೋ ಅದು ಚಿತ್ತಶಕ್ತಿಯ ಕುರಿತಾದದ್ದು. ಅನುಮಾನ ಬರುವುದು ಪ್ರಶ್ನೆಯಿಂದ, ಪ್ರಶ್ನೆ ಕೇವಲ ಬುದ್ಧಿಯಿಂದ ಹುಟ್ಟುವುದಿಲ್ಲ. ಮನೋಧರ್ಮದಿಂದ ಹುಟ್ಟುತ್ತದೆ. ಅದನ್ನ ಚಿತ್ತವೃತ್ತಿ ಎನ್ನುತ್ತೇವೆ. ಚಿತ್ತಶಕ್ತಿಯನ್ನು ದತ್ತಗುಣ ಬದಲಾಯಿಸಲು ಕಷ್ಟಪಟ್ಟರೂ, ಚಿತ್ತವೃತ್ತಿಯನ್ನು ಬದಲಾಯಿಸುತ್ತದೆ. ಈಗ ನಮ್ಮ ನೆಲದಲ್ಲಿ ಚಿತ್ತಶಕ್ತಿ ಹೆಚ್ಚಿದೆ. ಪಾಶ್ಚಾತ್ಯರಲ್ಲಿ ಚಿತ್ತಶಕ್ತಿ ಮತ್ತು ಅನುಮಾನ ಎರಡೂ ಇದೆ. ಪೂರ್ವದಲ್ಲಿ ಪಾಶ್ಚಾತ್ಯರಲ್ಲಿ ಚಿತ್ತಶಕ್ತಿ ಇತ್ತು, ಅನುಮಾನ ಇರಲಿಲ್ಲ. ನಮ್ಮಲ್ಲಿ ಚಿತ್ತಶಕ್ತಿಯು ಇತ್ತು, ಅನುಮಾನವೂ ಇತ್ತು. ಹಾಗಾಗಿಯೇ ಬುದ್ಧನು ಬಂದ, ಚಾರ್ವಾಕನು ಬಂದ, ಆರ್ಯಭಟನೂ ಬಂದ, ಕಾಳಿದಾಸ-ಶಂಕರನೂ ಬಂದ. ನಂತರ ಈ ವೈಭವ ಬರಲಿಲ್ಲ, ಆದರೆ ಈಗ ಪಾಶ್ಚಾತ್ಯರಲ್ಲಿ ಆ ವೈಭವ ಕಾಣಬಹುದು. ವಿಜ್ಞಾನವೂ ಕೂಡ ಚಿತ್ತಶಕ್ತಿ ಮತ್ತು ಅನುಮಾನ ಎರಡನ್ನೂ ಒಪ್ಪಿಕೊಂಡಿದೆ.
ಇನ್ನೂ ಸರಳವಾಗಿ ವಿವರಕ್ಕೆ ಇಳಿಯೋಣ. ಇರುವುದನ್ನು ಅರ್ಥೈಸಿಕೊಳ್ಳುವುದು ಚಿತ್ತಶಕ್ತಿ, ಇಲ್ಲದೇ ಇರುವುದನ್ನೂ ಅರ್ಥೈಸಿಕೊಳ್ಳುವುದು ಅನುಮಾನ. ಇದ್ದದ್ದಕ್ಕೆ ರೀಸನಿಂಗ್ ಬಹಳ ಕಡಿಮೆ ಬೇಕು. ಇಲ್ಲದ್ದಕ್ಕೆ ರೀಸನಿಂಗ್ ಹೆಚ್ಚು ಬೇಕು. ಇಲ್ಲದ್ದು ಎಂಬುದು ಕಲ್ಪನೆಯೇ. ರಾಷ್ಟ್ರ ಎಂದುಕೊಳ್ಳೋಣ., ಅದು ಅನುಮಾನದ ಕೂಸು, ಮನುಷ್ಯ ಚಿತ್ತಶಕ್ತಿಯ ಕೂಸು. ಒಬ್ಬ ಮನುಷ್ಯ ಹೇಗಿದ್ದಾನೆ ಎಂದು ವಿವರಿಸಲು ಚಿತ್ತಶಕ್ತಿ ಸಾಕು, ಆದರೆ ರಾಷ್ಟ್ರ ಎಂದರೆ ಏನು ಎನ್ನಲು ಅನುಮಾನ ಬೇಕು. ಹಾಗೆಯೇ ಒಬ್ಬ ವಿಜ್ಞಾನಿ ಭೂಮಿ ಹೀಗಿದೆ ಎನ್ನುವುದು ಚಿತ್ತಶಕ್ತಿ. ಬ್ಲಾಕ್ ಹೋಲ್ ಹೀಗಿದೆ ಎನ್ನುವುದು ಅನುಮಾನ. ಅನುಮಾನವೂ ಸಹ ಆತ್ಯಂತಿಕ ಸತ್ಯ ಅಲ್ಲ ಎನ್ನುತ್ತಾರೆ. ಹೌದು, ಹಾಗಾದರೆ ಚಿತ್ತಶಕ್ತಿಯದ್ದು ಆತ್ಯಂತಿಕ ಸತ್ಯವೋ??? ಚಿತ್ತಶಕ್ತಿ ಎಂಬುದು ಚಲನಶೀಲವಲ್ಲದ ಜ್ಞಾನ. ಅನುಮಾನ ಎಂಬುದು ಚಲನಶೀಲತೆಯ ಜ್ಞಾನ.
ಪ್ರತ್ಯಕ್ಷವೇ ಪ್ರಮಾಣ ಎಂಬುದನ್ನು ಕೆಲವರು Inference ಎಂದುಕೊಂಡಿದ್ದಾರೆ. ಕಂಡಿದ್ದು ಮಾತ್ರ ನಂಬಬಹುದು, ಅನುಭವಕ್ಕೆ ಬಂದರೆ ಮಾತ್ರ ಸತ್ಯ ಎನ್ನುವುದು ಚಿತ್ತಶಕ್ತಿ ಅಷ್ಟೇ, ಅನುಮಾನ ಅಲ್ಲ. ’ಬಹುದು’ ಎಂಬ ಕಲ್ಪನೆ ಇಲ್ಲದಿದ್ದರೆ ಮಾನವ ಇಷ್ಟು ಮುಂದುವರೆಯಲು ಸಾಧ್ಯವೇ ಆಗುತ್ತಿರಲಿಲ್ಲ. ಹಿಂದೆ ’ಬಹುದು’ ಆಗಿದ್ದದ್ದು, ಇಂದು ’ಹೌದು’ ಎಂದಾದದ್ದು ಅನುಮಾನದಿಂದ. ಸಂಪ್ರದಾಯದ ವಿರೋಧ ಎಂಬುದೂ ಕೂಡ ಸಂಪ್ರದಾಯದ ಚಿತ್ತಶಕ್ತಿ ಮತ್ತು ಧಿಕ್ಕಾರದ ಚಿತ್ತಶಕ್ತಿಯ ಗಲಾಟೆ ಆಗಿದೆಯೇ ಹೊರತು. ಎರಡೂ ಅನುಮಾನವನ್ನು ಅಳವಡಿಸಿಕೊಂಡಿಲ್ಲ. ಏಕೆಂದರೆ ಅನುಮಾನ, ನಮ್ಮ ಚಿತ್ತಶಕ್ತಿಯನ್ನು ಪ್ರಶ್ನಿಸುತ್ತದೆ. ಸುಲಭವಾಗಿ ನಮಗೆ, ಪ್ರಶ್ನಿಸಿಕೊಳ್ಳುವ ಸ್ವಭಾವ ಬರುವುದಿಲ್ಲ. ಇಲ್ಲಿ ಸಂಪ್ರದಾಯ ಎಂಬುದನ್ನು ಕೇವಲ ಜಾತಿ, ರೂಢಿ, ದೇಶ ಎಂದು ತೆಗೆದುಕೊಳ್ಳಬಾರದು ವಿಜ್ಞಾನದಲ್ಲೂ ಸಂಪ್ರದಾಯತೆ ಇದೆ. ಸೈನ್ ಆರ್ಥಡಕ್ಸಿಯಲ್ಲೂ ಒಂದೊಂದು ವಿಜ್ಞಾನ ವಿಭಾಗ ಮಠ, ಅದಕ್ಕೊಬ್ಬ ವಿಜ್ಞಾನಿ ಮಠಾಧೀಶ ಇದ್ದಾನೆ. ಅದನ್ನು ಧಿಕ್ಕರಿಸಿ ಏನೂ ಮಾಡುವಂತಿಲ್ಲ. ಆದರೆ ಉನ್ನತವಾದ್ದು ಏನಾದರೂ ಸಾಧ್ಯವಾಗಬೇಕಾದರೆ ಚಿತ್ತಶಕ್ತಿ ಮತ್ತು ಅನುಮಾನ ಎರಡೂ ಸಮಪ್ರಮಾಣದಲ್ಲಿ ಇರಬೇಕು. ಆ ಸಮತೋಲನದ ನಿರ್ದಿಷ್ಟ ಬಿಂದುವಿನಲ್ಲಿ ಅಲ್ಲಾಡದೆ ನಿಲ್ಲುವುದನ್ನೇ ನಮ್ಮ ಪೂರ್ವಿಕರು ಬ್ರಹ್ಮತ್ವ, ಬುದ್ಧತ್ವ, ಲಿಬರೇಷನ್ ಇತ್ಯಾದಿಯಾಗಿ ಹೇಳಿರಬೇಕು.
Published on July 14, 2020 23:33