ಪೂರ್ಣ ರಂಜನೆ, ಅರ್ಧ ಸತ್ಯ ಮತ್ತು ಖಾಲಿ ಮೌಲ್ಯ...

ನಾವೀಗ ಕಥನ ಸ್ವರೂಪದ ಬಗ್ಗೆ ಮಾತನಾಡಲು ಹೊರಟಿದ್ದೇವೆ, ಭಾರತದ ಪ್ರಥಮ ಲಭ್ಯ ಸಾಹಿತ್ಯವಾದ ವೇದಗಳಿಂದ ಪ್ರಾರಂಭಿಸೋಣವೇ ಎಂದರೆ ಅದು ಕಥನವಲ್ಲ, ಇಲ್ಲ ಇಲ್ಲ... ಪುರುಷಸೂಕ್ತ ಮುಂತಾದ ಭಾಗಗಳು ಸೃಷ್ಟಿಶೀಲ ಕಥನವೇ ಎನ್ನುತ್ತಾರೆ ಕೆಲವರು. ನನ್ನ ಒಪ್ಪಿಗೆ ಅದಕ್ಕಿಲ್ಲ. ಮನುಷ್ಯ ಬುದ್ಧಿಯಿಂದ ಸ್ಫುರಿಸಲ್ಪಟ್ಟು ಅದಕ್ಕೆ ರಚನಾತ್ಮಕವಾದ ಬಂಧವನ್ನಿಟ್ಟು, ಕಲ್ಪನೆ, ಅಭಿವ್ಯಕ್ತಿ, ವಿಚಾರ ಮುಂತಾದ ಹೊಳಹುಗಳನ್ನು ಮನುಷ್ಯ ಜೀವನವೆಂಬ ಮಸೂರದ ಮೂಲಕ ಸಂಚರಿಸುವಂತೆ ಮಾಡುವುದೇ ಕಥನ. ಆದರೆ ವೇದವು ಪುರುಷ ಬುದ್ಧಿಪ್ರಯತ್ನದಿಂದ ರಚಿತವಾದದ್ದಲ್ಲ!(?) ಎಂದು ಶಂಕರರು ಹೇಳಿದ್ದಾರೆ (ಬೃಹ.ಭಾ.2.4.10) ಹಾಗಾಗಿ ರಾಮಾಯಣವನ್ನು ತೆಗೆದುಕೊಳ್ಳೋಣ. ಅದು ಶುದ್ಧ ಕಾವ್ಯವೇ, ಅದರ ಕಥನ ಸರಳ. ನಾಯಕ, ನಾಯಕಿ ಮತ್ತು ಕೇಡಿ ಇದ್ದಾನೆ, ನಾಯಕಿಯನ್ನು ಕೇಡಿ ಕಿಡ್ನಾಪ್ ಮಾಡುತ್ತಾನೆ, ನಾಯಕ ಕೇಡಿಯನ್ನು ಕೊಂದು ನಾಯಕಿಯನ್ನು ರಕ್ಷಿಸುತ್ತಾನೆ, ಅಷ್ಟೇ! ಉತ್ತರಕಾಂಡ ನನಗೇನೋ ಪ್ರಕ್ಷಿಪ್ತವೇ ಅನ್ನಿಸುತ್ತದೆ. ರಾಮಾಯಣದ ಮಿಕ್ಕೆಲ್ಲವೂ ಈ ಕಥಾ ಎಳೆಗೆ ಪೂರಕ ಮತ್ತು ಪ್ರೇರಕ ಅಂಶವೇ ಹೊರತು ಇನ್ನೊಂದು ಹೊಸ ಅಯಾಮ ಇಲ್ಲ (ವಾಲ್ಮೀಕಿ ರಾಮಾಯಣ ಋಣವಾಗಿಸಿಕೊಂಡರೆ). ಆದರೆ ವ್ಯಾಸ ಮಹಾಭಾರತ ಗಮನಿಸಿದರೆ ಇಷ್ಟು ಸರಳವಾದ ವಿವರಣೆ ಅದಕ್ಕೆ ದೊರಕುವುದಿಲ್ಲ. ಅದು ಸಂಕೀರ್ಣತೆಯನ್ನು ಮೈಗೂಡಿಸಿಕೊಂಡು ಪ್ರತಿ ಅಂಗವೂ ತನ್ನದೇ ಕೊಡುಗೆಯನ್ನು ಕಥನಕ್ಕೆ ನೀಡಿದೆ. ಕಥನ ಎಂದರೆ ಏನು? ಯಾವ ಕಥನ ಸ್ವರೂಪ ನಮ್ಮನ್ನು ಪೊರೆಯಬಲ್ಲದು? ಕಥನದ ಉದ್ದೇಶವೇನು ಎಂಬ ಎಲ್ಲಾ ಪ್ರಶ್ನೆಗೂ ಮಹಾಭಾರತ ಪ್ರಮಾಣಿತ ಉತ್ತರವಾಗಿ ನಿಲ್ಲುತ್ತದೆ. 19ನೇ ಶತಮಾನದವರೆಗೂ ಭಾರತದ ಎಲ್ಲಾ ಕವಿಗಳೂ ಈ ಕಥನ ಸ್ವರೂಪವನ್ನು ದಾಟಿ ಬೇರೇನೂ ಮಾಡಲಿಲ್ಲ ಎಂದು ಕಟುವಾಗಿ ಹೇಳಬೇಕಾಗುತ್ತದೆ. ವಾಲ್ಮೀಕಿ, ವ್ಯಾಸರ ಋಣದಲ್ಲಿದ್ದೇವೆ ಎಂಬುದನ್ನು ಸಂಕೋಚ ಬಿಟ್ಟು ಭಾರತದ ಕವಿಗಳು ಒಪ್ಪಬೇಕು.

ಕಥನ ಸ್ವರೂಪ ಬದಲಾಯಿತೇ?
ಪೂರ್ಣವಾಗಿ ಬದಲಾಯಿತು ಎನ್ನಲಿಕ್ಕೆ ಸಾಧ್ಯವಿಲ್ಲ. ಈ ಶತಮಾನದ ಉತ್ತಮ, ಶ್ರೇಷ್ಠ ಎಂದು ಪ್ರಚಲಿತದಲ್ಲಿರುವ ಭಾರತೀಯ ಕೃತಿಗಳೂ ಕೂಡ ಮೇಲೆ ತಿಳಿಸಿದಂತೆ ಋಣದಲ್ಲಿರುವುದು ಕಂಡುಬರುತ್ತದೆ. ಆದರೆ ಪಾಶ್ಚಾತ್ಯ ಸಾಹಿತ್ಯದ ಓದು ಹೆಚ್ಚಾದಂತೆ ಕಥನ ಸ್ವರೂಪಕ್ಕೆ ತಮ್ಮದೇ ವ್ಯಾಖ್ಯಾನಗಳನ್ನು ಸಾಹಿತಿಗಳು ನೀಡುತ್ತಾ ಹೋದರು. ಒಂದಷ್ಟು ಜನ ಅನುಭವವೇ ಅಂತಿಮ ಎಂದರು, ಈ ಋಣವನ್ನು ತಿರಸ್ಕರಿಸುವುದೇ ಹೊಸ ಕಥನ ಸ್ವರೂಪ ಎಂದರು, ಸಾಮಾಜಿಕ ಕ್ರಾಂತಿಯೇ ಕಥನದ ಉದ್ದೇಶ ಎಂದರು. ಏನೇ ಆದರೂ ಕಥನವು ಮನುಷ್ಯನನ್ನು ಬಿಟ್ಟು ಕದಲಲಿಲ್ಲ. ಆದ್ದರಿದಲೇ... ಮನುಷ್ಯ ಭಾವ ಮತ್ತು ಸಂಬಂಧಗಳ ಸೂಕ್ಷ್ಮಗಳನ್ನು ಸಂಶೋಧಿಸುತ್ತಾ ಸಾಗುವುದೇ ನಿಜ ಕಥನವೇ ಹೊರತು ಮಿಕ್ಕೆಲ್ಲ ಧೋರಣೆಗಳು ಅದರ ಹೊದಿಕೆಗಳಷ್ಟೇ ಎಂದೆನ್ನಬೇಕಾಗುತ್ತದೆ. ಮತೀಯ ಕಥನ, ರಾಜಕೀಯ ಕಥನ, ಸಾಮಾಜಿಕ ಕ್ರಾಂತಿಯ ಕಥನ, ಅಸಮಾನತೆಯ ಕಥನ ಇವೆಲ್ಲವೂ ಮನುಷ್ಯನ ಉಚ್ಛ, ನೀಚ ಭಾವಗಳ ಸಂಶೋಧನೆಯೇ ಅಲ್ಲವೇ? ಮನುಷ್ಯ ಸಂಬಂಧಗಳ ಹುಡುಕಾಟವಲ್ಲವೇ? ಹಾಗಾದರೆ ನಿಜವಾಗಲೂ ನಾವು ಈ ನಿಟ್ಟಿನಲ್ಲಿ ಕಥನ ಸ್ವರೂಪಗಳನ್ನು ಪರಾಮರ್ಶಿಸಿದ್ದೀವ? ಯಾವುದೇ ಕಲೆಯಾಗಲಿ ಅದು ಮನುಷ್ಯನಿಗೆ ಪ್ರತಿಯಾಗಿ ಇದನ್ನಲ್ಲದೇ ಇನ್ನೇನನ್ನು ಕೊಡುತ್ತಿದೆ? ಎಂದು ಕೇಳಿಕೊಳ್ಳಬೇಕಾಗುತ್ತದೆ.

ಕಥನದ ಸ್ವರೂಪ ಈಗ ಏನಾಗುತ್ತಿದೆ?
ಸಿನಿಮಾ, ವೆಬ್ ಸೀರಿಯಲ್, ಪೋಡ್’ಕಾಸ್ಟ್ ಹೀಗೆ ಕಥನದ ಮಾಧ್ಯಮಗಳು ಬದಲಾಗಿರಬಹುದು ಆದರೆ ಅದಕ್ಕೆ ಸಾಹಿತ್ಯವೇ ಮೂಲಧಾತು. ಭಾಷೆ ಮತ್ತು ದೃಶ್ಯವನ್ನು ಬಳಸುವ ಪ್ರತಿಯೊಂದು ಕಲೆಯು ಸಾಹಿತ್ಯವೇ. ಆ ಸಾಹಿತ್ಯದಲ್ಲಿ ಕಥನ ಸ್ವರೂಪವು ಮೇಲೆ ತಿಳಿಸಿದ ಆದರ್ಶದಂತೆ ರೂಪುಗೊಳ್ಳುವ ಪ್ರಯತ್ನವನ್ನಾದರು ಮಾಡಿದೆಯೇ ಇಲ್ಲವೇ ಎಂಬುದು ಸದ್ಯದ ಪ್ರಶ್ನೆ. ಇಲ್ಲಿ ಬೋಧಕ, ರಂಜಕ, ಸಿದ್ಧಾಂತ ಪ್ರತಿಪಾದಕ, ಸ್ವರತಿ ಹೀಗೆ ಹಲವಾರು ವಿಭಿನ್ನ ಕಥನಗಳಿದೆ. ಜನಕ್ಕೆ ಏನು ಬೇಕು ಅದಕ್ಕೆ ತಕ್ಕಂತೆ ಕೊಡುತ್ತೇವೆ ಎಂಬ ವ್ಯವಹಾರದ (ಆರ್ಥಿಕ ದೃಷ್ಟಿ ಮಾತ್ರವಲ್ಲ, ಸಮಾನ ಮನೋಧರ್ಮದ ವ್ಯಾಪಾರ ಎಂಬಂತೆಯೂ) ಮೇಲೆ ಸಾಹಿತ್ಯವನ್ನು ಸ್ಥಾಪಿಸಿದಾಗ ಇವೆಲ್ಲಾ ಹುಟ್ಟುಕೊಳ್ಳುತ್ತವೆ. ನಮ್ಮ ಪ್ರಜ್ಞೆಯನ್ನು ಜಾಗೃತಗೊಳಿಸಿದಂತ, ರಸ ಮತ್ತು ಮೌಲ್ಯ ಹದಗೆಡದಂತೆ ಕಥನವನ್ನು ಉಣಬಡಿಸಿದ ಜಗತ್ತಿನ ಕೃತಿಗಳು ಎಂದು ನಾವು ಯಾವುದಾವುದನ್ನು ಗುರುತಿಸುತ್ತೇವೆ ಅವೆಲ್ಲವೂ ಈ ರೀತಿಯ ವ್ಯವಹಾರದಿಂದ ಹುಟ್ಟಿದ ಉತ್ಪನ್ನಗಳಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಪೂರ್ಣ ರಂಜನೆ, ಅರ್ಧ ಸತ್ಯ ಮತ್ತು ಖಾಲಿ ಮೌಲ್ಯ ಎಂಬ ಯಶಸ್ವಿ ಸಿದ್ಧಸೂತ್ರದ ವ್ಯಭಿಚಾರಿ ಭಾವಗಳನ್ನೇ ಕೇಂದ್ರವಾಗಿಸಿಕೊಂಡ ಕಥನ ಸ್ವರೂಪವು ತಾತ್ಕಾಲಿಕವಾಗಿ ಒಂದು ಗುಂಪನ್ನು ಉದ್ದೀಪಿಸುವ ಪ್ರಚಂಡ ಶಕ್ತಿ ಹೊಂದಿರುತ್ತದೆ. ಕ್ರಾಂತಿಯ ಮಹತ್ವ, ಧರ್ಮ ಸ್ಥಾಪನೆ, ದೇಶ ಭಕ್ತಿ, ಅಸಮಾನತೆ ನಿವಾರಣೆಯಂಥ ಉದ್ದೇಶ ಸಾಧನೆ ಕಥನಗಳೂ ಕೂಡ ಈ ಗುಂಪಿನ ಅಡಿಯಲ್ಲೇ ಬರುತ್ತದೆ. ಮನರಂಜನೆಯ ತಳಪಾಯ ಸಿಕ್ಕಿಬಿಟ್ಟರಂತೂ ಇವುಗಳಿಗೆ ಎಲ್ಲಿಲ್ಲದ ಬೇಡಿಕೆ. ಪ್ರಚೋದನೆ ಮತ್ತು ರಂಜನೆಯೇ ಮೇಲುಗೈ ಪಡೆದಾಗ ಆ ಕಥನವು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಸಾಹಿತ್ಯದ ಓದು (ಅಥವಾ ಯಾವುದೇ ಕಲೆ) ನಮಗೆ ಪರಾಮರ್ಶೆಯ ಸಂಯಮವನ್ನು ಕಲಿಸಬೇಕೇ ವಿನಹ ರಾಗದ್ವೇಷದ ಉದ್ರೇಕವನ್ನು ಉದ್ದೀಪಿಸಬಾರದು. ದುರಂತವೆಂದರೆ ಈ ಸಿದ್ಧಸೂತ್ರಗಳು ಒಂದು ರೀತಿಯ ಸನ್ನಿಪಾತವನ್ನು ಓದುಗ-ನೋಡುಗ ವಲಯದಲ್ಲಿ ಉಂಟುಮಾಡುತ್ತದೆ, ಗಂಭೀರ ಬರೆಹಗಾರರು - ಪ್ರಾಜ್ಞ ಓದುಗರು ಕೂಡ ಇದಕ್ಕೆ ಬಲಿಯಾಗಿದ್ದಾರೆ, ಆಗುತ್ತಲೇ ಇರುತ್ತಾರೆ.

ಕಥನವು ರಸ, ಧ್ವನಿ, ಔಚಿತ್ಯ, ಮೌಲ್ಯಗಳನ್ನು ಒಳಗೊಂಡಿರಬೇಕೆ?
ದಾಸ್ತೋವಸ್ಕಿಯ ಕ್ರೈಂ ಅಂಡ್ ಪನಿಷ್ಮೆಂಟ್, ಪುಟ್ಟಪ್ಪರ ಮಲೆಗಳಲ್ಲಿ ಮದುಮಗಳು, ಭೈರಪ್ಪರ ಗೃಹಭಂಗ, ಇವುಗಳನ್ನೇ ತೆಗೆದುಕೊಳ್ಳಿ ಅಥವಾ ಅಕಿರಾ ಕುರಸೋವಾರ ಕಾಗೆಮುಷಾ, ಬರ್ಗಮನ್ನರ ಸವೆಂಥ್ ಸೀಲ್, ಸತ್ಯಜಿತ್ ರೇರ ನಾಯಕ್ ಮುಂತಾದ ಸಿನಿಮಾವನ್ನೇ ಗಮನಿಸಿ ಅಲ್ಲೇನೋ ಉಪದೇಶ ಮಾಡುವ ಧಾವಂತ ಇಲ್ಲ, ಜಗತ್ತನ್ನು ಬದಲಾಯಿಸಿಬಿಡುವ ಬೆಪ್ಪುತನವಿಲ್ಲ, ಧರ್ಮ, ರಾಜಕೀಯ, ಸಮಾಜ, ಸಂಬಂಧ, ಹಣ, ಅಧಿಕಾರ, ಜನಪ್ರಿಯತೆ ಇತ್ಯಾದಿ ಇತ್ಯಾದಿ ಮನುಷ್ಯ ವ್ಯವಸ್ಥೆಯ ಎಲ್ಲವೂ ಕಥನದಲ್ಲೇ ಬೆರೆತು ಅದೇ ಮೂಲವಾಗದೇ, ಮನುಷ್ಯ ಭಾವಮುಖೇನ ಸ್ಪರ್ಶಿಸಿ ನಿರೀಕ್ಷಿಸುತ್ತದೆ. ಅಲ್ಲಿ ರಸವೂ ಇದೆ, ಅದಕ್ಕೊಂದು ಧ್ವನಿಯೂ ಇದೆ, ಅದನ್ನು ಹೇಗೆ-ಎಷ್ಟು ಬಳಸಬೇಕು ಎಂಬ ಔಚಿತ್ಯವೂ ಇದೆ. ಇವೆಲ್ಲದರ ಹದಪಾಕವನ್ನು ಅಚ್ಚಿನಲ್ಲಿ ಹಾಕಿ ಕೃತಿಗೊಂದು ಸೌಂದರ್ಯ ಮತ್ತು ಮೌಲ್ಯ ಒದಗಿಸುವ ಜಾಣ್ಮೆಯೂ ಇದೆ.
“ಕತೆ ಹೊಡೀಬೇಡ” ಎಂಬುದನ್ನು ಒಬ್ಬರ ಮಾತನ್ನು ತಿರಸ್ಕರಿಸಲಿಕ್ಕೆ ನಾವು ಬಳಸುತ್ತೇವೆ. ಈ ರೂಪಕ ತುಂಬಾ ಅರ್ಥವತ್ತಾಗಿದೆ! ಕಥನವು ಕೇವಲ ಶಾಬ್ಧಿಕ ಹಾವ ಭಾವ ನಿರೂಪಣೆಯಲ್ಲ. ಕತೆಗಾಗಿ ಕತೆ, ಎಂಬ ಸ್ವರೂಪವನ್ನು ಪ್ರಮಾಣವಾಗಿಟ್ಟುಕೊಂಡರೆ ಎಲ್ಲಾ ಕಲ್ಲೂ ಕಲಾಕೃತಿಯೇ, ಎಲ್ಲರೂ ಕತೆಗಾರರೇ! ಆದ್ದರಿಂದ ಮೌಲ್ಯ ಪ್ರಜ್ಞೆ ಇಲ್ಲಿ ಬಹಳ ಮುಖ್ಯ. ಹೇಗೆ ಒಂದು ಕಲ್ಲು ಶಿಲ್ಪಿಯಿಂದ ಸಂಸ್ಕಾರ ಪಡೆದು ಕಲಾಕೃತಿಯಾಗಿ ಮೌಲ್ಯ ಪಡೆಯುತ್ತದೆಯೋ ಹಾಗೇ ಕಥನಕಾರ ಕಥೆಯೆಂಬ ಒಣಮಾತಿಗೆ ಸಂಸ್ಕಾರ ನೀಡಿ ಸಾಹಿತ್ಯಿಕ ಮೌಲ್ಯ ಒದಗಿಸಬೇಕು. “ಕತೆಯೆಲ್ಲಾ ಸಾಹಿತ್ಯ, ಪ್ರತಿಭೆ ಪ್ರದರ್ಶನವೆಲ್ಲಾ ಕಲೆ” ಎಂಬ ಸಾಮಾನ್ಯ ಧೋರಣೆಯ ಪ್ರಚಾರದ ಧೂಳು ಹೆಚ್ಚಾಗಿ ಈ ಸೂಕ್ಷ್ಮಗಳು ಗೋಚರಿಸುತ್ತಿಲ್ಲ.

-ಕರಣಂ ಪವನ್ ಪ್ರಸಾದ್
ಮಯೂರ-ನವೆಂಬರ್ ಸಂಚಿಕೆ-೨೦೧೮
25.10.2018
2 likes ·   •  0 comments  •  flag
Share on Twitter
Published on December 17, 2018 08:01
No comments have been added yet.