ಬರುತ್ತಿದೆ ಜುಲೈ ಇಪ್ಪತ್ತಾರು, ಮತ್ತೆ ನೆನಪಾಗುತ್ತಿದ್ದಾರೆ ಅವರು!

ಬರುತ್ತಿದೆ ಜುಲೈ ಇಪ್ಪತ್ತಾರು, ಮತ್ತೆ ನೆನಪಾಗುತ್ತಿದ್ದಾರೆ ಅವರು!


ಕ್ಯಾಪ್ಟನ್ ವಿಕ್ರಂ ಬಾತ್ರಾ

ಕ್ಯಾಪ್ಟನ್ ಹನೀಫುದ್ದೀನ್

ಲೆಫ್ಟಿನೆಂಟ್ ಸೌರಭ್ ಕಾಲಿಯಾ

ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ

ಮೇಜರ್ ಮರಿಯಪ್ಪನ್ ಸರವಣನ್

ಗ್ರನೇಡಿಯರ್ ಯೋಗೇಂದ್ರ ಸಿಂಗ್ ಯಾದವ್

ಲೆಫ್ಟಿನೆಂಟ್ ಕೀಸಿಂಗ್ ಕ್ಲಿಫೋರ್ಡ್ ನೊಂಗ್ರುಮ್

ರೈಫಲ್ಮನ್ ಮೊಹಮದ್ ಅಸ್ಲಾಂ


ಈ ಒಂದೊಂದು ಹೆಸರುಗಳೂ ನಮ್ಮ ಸಮಾಜದಲ್ಲಿ ಜನಪದ ಕಥೆಗಳಂಥ ಸ್ಥಾನ ಪಡೆದುಕೊಂಡಿವೆ, ಪ್ರೇರಣೆ ಕೊಡುತ್ತವೆ, ಅತ್ಯುನ್ನತ ತ್ಯಾಗವೇನನ್ನುವುದನ್ನು ಸೂಚಿಸುತ್ತವೆ, ವೀರಗಾಥೆಗಳನ್ನು ಹೇಳುತ್ತವೆ. ಪ್ರತಿವರ್ಷ ಮೇ-ಜೂನ್-ಜುಲೈಗಳು ಬಂತೆಂದರೆ ಮನಸ್ಸು ಕಾರ್ಗಿಲ್ ಬಗ್ಗೆ ಯೋಚಿಸಲಾರಂಭಿಸುತ್ತದೆ, ನಮಗಾಗಿ ಮಡಿದ 527 ವೀರಯೋಧರನ್ನು ನೆನಪಿಸಿಕೊಂಡು ಧನ್ಯತೆಯಿಂದ ತಲೆಬಾಗುತ್ತದೆ. ಇಷ್ಟಕ್ಕೂ ಇವರು ಮಾಡಿದ ತ್ಯಾಗ, ತೋರಿದ ಧೈರ್ಯ ಸಾಮಾನ್ಯವೇನು?


ಎಕ್ ಪಲ್ ಮೇ ಹೈ ಸಚ್ ಸಾರೀ ಝಿಂದಗೀ ಕಾ

ಇಸ್ ಪಲ್ ಮೇ ಜೀ ಲೋ ಯಾರೋ

ಯಹ ಕಲ್ ಹೈ ಕಿಸ್ನೆ ದೇಖಾ

ಇಪ್ಪತ್ನಾಲ್ಕು ವರ್ಷದ ಕ್ಯಾಪ್ಟನ್ ಹನೀಫುದ್ದೀನ್ ಬದುಕಿಗೂ ಆತನ ಕಿರಿಯ ಸಹೋದರ ಸಮೀರ್ ಬರೆದಿದ್ದ ಈ ಮೇಲಿನ ಹಾಡಿಗೂ ತಾಳ, ಮೇಳ, ಅರ್ಥ ಹಾಗೂ ಬದುಕಿನ ಅನಿಶ್ಚತತೆ ಎಲ್ಲವೂ ಒಂಥರಾ ಹೊಂದಾಣಿಕೆಯಾಗಿದ್ದವು. ದುರದೃಷ್ಟವಶಾತ್, ಅಪ್ಪನನ್ನು ಕಳೆದುಕೊಂಡಾಗ ಹನೀಫುದ್ದೀನ್‌ಗೆ ಕೇವಲ 8 ವರ್ಷ. ಜೀವಕ್ಕೆ ಆಸರೆಯಾಗುವ, ಬದುಕಿಗೆ ದಿಕ್ಕು ದೆಸೆ ತೋರುವ ತಂದೆಯನ್ನು ಕಳೆದುಕೊಂಡ ಕ್ಷಣದಲ್ಲೂ ಹನೀಫುದ್ದೀನ್ ಮನದ ಗುರಿಯನ್ನು ಬಿಡಲಿಲ್ಲ.


ಆತನಿಗೆ ‘ಸಮವಸ್ತ್ರ’ದ(ಯೂನಿಫಾರ್ಮ್) ಮೇಲೆ ಅದೇನೋ ಅಪರಿಮಿತ ಗೌರವ, ಆಸೆ. ಯೂನಿಫಾರ್ಮ್ ಎಂಬುದು ಕೇವಲ ಒಂದು ವಸ್ತ್ರವಲ್ಲ, ಅದರಲ್ಲಿ ಗುರುತರ ಜವಾಬ್ದಾರಿ, ಸೇವಾ ನಿರೀಕ್ಷೆ ಇದೆ ಎಂದು ಆತ ಭಾವಿಸಿದ್ದ. ಹಾಗಾಗಿ ಇಂಡಿಯನ್ ಮಿಲಿಟರಿ ಅಕಾಡೆಮಿಯತ್ತ ದೃಷ್ಟಿ ನೆಟ್ಟಿದ್ದ. ‘ಗಂಡನನ್ನು ಕಳೆದುಕೊಂಡ ಮೇಲೆ ನಾನು ವೃತ್ತಿ ಅರಸಬೇಕಾಯಿತು. ಮನೆಯಿಂದ ಹೊರಗೇ ಹೆಚ್ಚು ಕಾಲ ಕಳೆಯುತ್ತಿದ್ದೆ. ಆದರೆ ನನ್ನ ಮಗ ಮಾತ್ರ ಜವಾಬ್ದಾರಿಯುತನಾಗಿದ್ದ, ಮಹತ್ವಾಕಾಂಕ್ಷಿಯಾಗಿದ್ದ ಹಾಗೂ ಸ್ವಂತ ಪರಿಶ್ರಮದಿಂದ ಇಂಡಿಯನ್ ಮಿಲಿಟರಿ ಅಕಾಡೆಮಿ ಸೇರಿದ ಎನ್ನುತ್ತಾರೆ ತಾಯಿ ಹೇಮಾ ಅಝೀಝ್.


ಭದ್ರತಾ ಪಡೆಗಳಲ್ಲಿ ಸೇವೆ ಸಲ್ಲಿಸಿದ ಯಾರ ಪರಿಚಯವಾಗಲಿ, ಅಂತಹ ಕೌಟುಂಬಿಕ ಹಿನ್ನೆಲೆಯಾಗಲಿ ಯಾವುದೂ ಆತನಿಗಿರಲಿಲ್ಲ. ಆದರೂ ಮಿಲಿಟರಿ ಅಕಾಡೆಮಿಗೆ ಸೇರುವಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲ, ಒಬ್ಬ ಅನುಭವಿ ಸೈನಿಕನಂಥ ಪರಿಣತಿಯನ್ನೂ ಪಡೆದುಕೊಂಡ. ಹನೀಫುದ್ದೀನ್ ಭಾರತೀಯ ಸೇನೆಯನ್ನು ಸೇರಿದ್ದು 1997, ಜೂನ್ 7ರಂದು. ಎರಡು ವರ್ಷ ತುಂಬುವ ಮೊದಲೇ ಕಾರ್ಗಿಲ್ ಯುದ್ಧ ಆರಂಭವಾಯಿತು. ಅದಕ್ಕೂ ಮೊದಲು ಆತನನ್ನು ನರನಾಡಿಗಳು ಮಡುಗಟ್ಟುವಂಥ ಚಳಿಯ ಸಿಯಾಚಿನ್‌ನಲ್ಲಿ ನಿಯೋಜಿಸಲಾಗಿತ್ತು.


ಹನೀಫುದ್ದೀನ್‌ಗೆ ಹಾಡಿನ ಹುಚ್ಚು. ಅವನು ಬೆಟ್ಟದ ಮೇಲಿರಲಿ, ನಮ್ಮ ಜತೆಗಿರಲಿ ಮ್ಯೂಸಿಕ್ ಸಿಸ್ಟಮ್ ಮಾತ್ರ ಬಗಲಲ್ಲಿರುತ್ತಿತ್ತು ಎನ್ನುತ್ತಾರೆ ಆತನ ಹಿರಿಯಣ್ಣ ನಫೀಸ್. ಹನೀಫುದ್ದೀನ್ ತಾಯಿ ಹೇಮಾ ಅಝೀಝ್ ಶಾಸ್ತ್ರೀಯ ಸಂಗೀತ ಕಲಿತವರು. ಮಕ್ಕಳಿಗೂ ಸಂಗೀತ ರಕ್ತಗತವಾಗಿಯೇ ಬಂದಿತ್ತು. ಸಹೋದ್ಯೋಗಿ ಸೈನಿಕರಿಗೆ ಹನೀಫುದ್ದೀನ್‌ನದ್ದೇ ಮನರಂಜನೆ. ಕಿರಿಯ ಸಹೋದರ ಬರೆದಿದ್ದ ‘ಎಕ್ ಪಲ್ ಮೇ ಹೈ ಸಚ್ ಸಾರೀ ಝಿಂದಗೀ ಕಾ’ ಹಾಡನ್ನು ಇಂಪಾಗಿ ಹಾಡಿ ರಂಜಿಸುತ್ತಿದ್ದ.


ಹೀಗಿರುವಾಗ?

ಒಂದು ದಿನ ಹನೀಫುದ್ದೀನ್‌ನಿಂದ ಮನೆಗೆ ದೂರವಾಣಿ ಕರೆ ಬಂತು. ‘ಬಂದೂಕಿನ ನಳಿಕೆಯಿಂದ ಗುಂಡುಗಳು ಯಾವ ಕ್ಷಣದಲ್ಲೂ, ಯಾವ ದಿಕ್ಕಿನಿಂದಲೂ ಸೀಳಿ ಬರಬಹುದು. ಯಾವುದಕ್ಕೂ ಫೋನನ್ನು ಎಂಗೇಜ್‌ನಲ್ಲಿಡಬೇಡ ಅಮ್ಮಾ, ನಾನು ಸಿಯಾಚಿನ್‌ನಿಂದ ಕೆಳಕ್ಕೆ ಬರುತ್ತಿದ್ದೇನೆ’ ಎಂದ. ಅಷ್ಟರಲ್ಲಿ ಸಿಯಾಚಿನ್ ಬಿಟ್ಟು ಲದ್ದಾಕ್‌ನ ನುಬ್ರಾ ಕಣಿವೆಯಲ್ಲಿ ಬರುವ ತುರ್ತುಕ್ ಅನ್ನು ಶತ್ರುಗಳಿಂದ ವಶಪಡಿಸಿಕೊಳ್ಳಬೇಕೆಂದು ಅವರ ಸೇನಾ ತುಕಡಿಗೆ ಆದೇಶ ಬಂದಿತ್ತು. ಹೀಗೆ ಹಿಮಾಚ್ಛಾದಿತ ಕಣಿವೆಗಳನ್ನು ದಾಟಿ ಬಂದು ಶತ್ರುಗಳನ್ನು ಮಟ್ಟಹಾಕಲು ಮುಂದಾದರು. ಎಂತಹ ವೈಪರಿತ್ಯವೆಂದರೆ ಬೆಟ್ಟದ ತುದಿಯಲ್ಲಿ ಕುಳಿತಿರುವ ಶತ್ರುಗಳಿಗೆ ಸ್ವಾಭಾವಿಕ ಮೇಲುಗೈ ಜತೆಗೆ ಸಂಖ್ಯಾ ಬಲದಲ್ಲೂ ಮೇಲುಗೈ ದೊರೆತಿತ್ತು. ಆದರೂ ತನ್ನ ಸೇನಾ ತುಕಡಿಯನ್ನು ಮುನ್ನಡೆಸಿದ ಹನೀಫುದ್ದೀನ್.


ಹೊಸ ದಿಲ್ಲಿಯ ಶಿವಾಜಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ‘ಮಿಸ್ಟರ್ ಶಿವಾಜಿ’ ಪುರಸ್ಕಾರಕ್ಕೆ ಹನೀಫುದ್ದೀನ್ ಭಾಜನನಾಗಿದ್ದ. ಕಾರ್ಗಿಲ್ ರಣರಂಗದಲ್ಲೂ ಅದೇ ರೀತಿ ಹೋರಾಡಿದ. ಸಂಖ್ಯೆಯಲ್ಲಿ, ಮದ್ದುಗುಂಡಿನಲ್ಲಿ ಶತ್ರುಗಳಿಂತ ತೀರಾ ಕಡಿಮೆ ಇದ್ದರೂ ಶೌರ್ಯಕ್ಕೆ ಮಾತ್ರ ಕೊರತೆಯಾಗಿರಲಿಲ್ಲ. ಕೊನೆಗೆ ಚಿರಸ್ಥಾಯಿಯಾಗಿ ಉಳಿದಿದ್ದೂ ಅವರು ತೋರಿದ ಶೌರ್ಯವೇ ಹೊರತು, ಜೀವವಲ್ಲ! ಕಾರ್ಗಿಲ್ ರಣರಂಗದಲ್ಲೇ ಕ್ಯಾಪ್ಟನ್ ಹನೀಫುದ್ದೀನ್ ಮಡಿದಿದ್ದರು. ಅದೆಂಥ ಭಯಾನಕ ಪರ್ವತಶ್ರೇಣಿಯಾಗಿತ್ತೆಂದರೆ ಯುದ್ಧ ಮುಗಿಯುವವರೆಗೂ ಅವರ ಪಾರ್ಥಿವ ಶರೀರವನ್ನು ವಾಪಸ್ ತರಲು ಸಾಧ್ಯವಾಗಿರಲಿಲ್ಲ!


‘ಒಬ್ಬ ತಂದೆಯಾದವನ ಜೀವನದಲ್ಲಿ ಬರುವ ಅತ್ಯಂತ ದುಃಖಕರ ದಿನವೆಂದರೆ ಮಗನ ಚಟ್ಟಕ್ಕೆ ಹೆಗಲು ಕೊಡಬೇಕಾದ ಕ್ಷಣ’ ಎಂದಿದ್ದರು ದಿವಂಗತ ಪ್ರಮೋದ್ ಮಹಾಜನ್. ಹನೀಫುದ್ದೀನ್ ಹೆಣವಾಗಿ ತ್ರಿವರ್ಣ ಧ್ವಜದಲ್ಲಿ ಸುತ್ತಿಕೊಂಡು ಬಂದಾಗ ‘ಅಗತ್ಯ ಬಂದರೆ ತಾಯ್ನಾಡಿಗಾಗಿ ಅತ್ಯುನ್ನತ ತ್ಯಾಗವನ್ನೂ ಮಾಡುತ್ತೇನೆಂದು ನನ್ನ ಮಗನಿಂದ ಪ್ರಮಾಣ ಮಾಡಿಸಿಕೊಂಡಿದ್ದೆ. ನನ್ನ ಮಗ ಸಮವಸ್ತ್ರ ಧರಿಸಿ ಜೀವವನ್ನೇ ಕೊಟ್ಟು ದೇಶದ ಋಣ ತೀರಿಸಿದ್ದಾನೆ’ ಎಂಬ ಬಗ್ಗೆ ನನಗೆ ಹೆಮ್ಮೆಯಾಗುತ್ತದೆ ಎಂದಿದ್ದರು ಅಮ್ಮ ಹೇಮಾ ಅಝೀಝ್. ಇಂತಹ ತ್ಯಾಗಕ್ಕಾಗಿ ಸರಕಾರ ವೀರ ಚಕ್ರವನ್ನು ನೀಡಿತು; ಹನೀಫುದ್ದೀನ್ ದೇಶಪ್ರೇಮ ಸಾರುವ ವೀರಗಾಥೆಯೊಂದನ್ನು ಬಿಟ್ಟು ಹೋದರು. ಅಂದು ಕಾರ್ಗಿಲ್‌ನಲ್ಲಿ ಮಡಿದ 527 ಸೈನಿಕರ ಬದುಕೂ ಒಂದೊಂದು ಕಥೆ ಹೇಳುತ್ತವೆ!


If death strikes before I prove my blood, I promise (swear), I will kill death’ ಒಂದು ವೇಳೆ ನಾನು ನನ್ನ ತಾಕತ್ತನ್ನು ತೋರುವ ಮೊದಲೇ ಸಾವೇನಾದರೂ ಎದುರಾದರೆ ಮೊದಲು ಸಾವನ್ನೇ ಕೊಲ್ಲುತ್ತೇನೆ ಎನ್ನುತ್ತಿದ್ದ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ! 1975, ಜೂನ್ 25ರಂದು ಜನಿಸಿದ ಪಾಂಡೆ ಕಲಿತಿದ್ದು ಉತ್ತರ ಪ್ರದೇಶದ ಲಕ್ನೋ ಸೈನಿಕ ಶಾಲೆಯಲ್ಲಿ. ಆತ ಶಾಲೆಯಲ್ಲಿ ಪಡೆಯದ ಸರ್ಟಿಫಿಕೆಟ್‌ಗಳೇ ಇರಲಿಲ್ಲ. ಅತ್ಯಂತ ಕ್ಲಿಷ್ಟಕರವಾದ ನ್ಯಾಷನಲ್ ಡಿಫೆನ್ಸ್‌ ಅಕಾಡೆಮಿ ಪರೀಕ್ಷೆಯನ್ನು ಮೊದಲ ಯತ್ನದಲ್ಲೇ ಪಾಸು ಮಾಡಿದ.


ಆರ್ಮಿಯನ್ನು ಸೇರಿದ ಮೇಲೆ ಗೂರ್ಖಾ ರೈಫಲ್ಸ್‌‌ನಲ್ಲಿದ್ದ ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆಯ ತುಕಡಿಗೆ ಬಟಾಲಿಕ್ ಸೆಕ್ಟರ್‌ನಿಂದ ಭಯೋತ್ಪಾದಕರನ್ನು ಬಡಿದೋಡಿಸುವ ಜವಾಬ್ದಾರಿಯನ್ನು ನೀಡಲಾಯಿತು. ಅದು 1999, ಜೂನ್ 11. ಜುಬರ್ ಶಿಖರವನ್ನು ಮರುವಶಪಡಿಸಿಕೊಳ್ಳುವ ಕಾರ್ಯಾಚರಣೆಯೊಂದಿಗೆ ತನ್ನ ತುಕಡಿಯನ್ನು ಮುನ್ನೆಡೆಸಲಾರಂಭಿಸಿದರು. ಅದು ಸೇನಾ ಕಾರ್ಯಾಚರಣೆ ದೃಷ್ಟಿಯಿಂದ ಅತ್ಯಂತ ಮಹತ್ವದ ತುದಿಯಾಗಿತ್ತು. ಆತನ ಜೀವನದ ಅತ್ಯಂತ ಪ್ರಮುಖ ಕ್ಷಣವೆಂದರೆ 1999, ಜುಲೈ 3ರ ಬೆಳಗಿನ ಜಾವ.


ಖಲುಬಾರ್ ಶಿಖರದ ಮರುವಶವದು. ಮಧ್ಯರಾತ್ರಿಯ ವೇಳೆಗೆ ಅವರ ಬೆಟಾಲಿಯನ್ ಅಂತಿಮ ಗುರಿಯತ್ತ ಮುಂದಡಿಯಿಡುತ್ತಿತ್ತು. ಆದರೆ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತಿದ್ದ ಶತ್ರುಗಳು ತಡೆದು ನಿಲ್ಲಿಸಿದರು. ಆದರೆ ರಾತ್ರಿ ಕಳೆದು ಬೆಳಕು ಹರಿಯುವಷ್ಟರಲ್ಲಿ ವಿಘ್ನವನ್ನು ದೂರ ಮಾಡಲೇಬೇಕಿತ್ತು. ಬೆಳಕಿನಲ್ಲಿ ಶತ್ರುಗಳ ಕಣ್ಣಿಗೆ ಬಿದ್ದು ಉಳಿಗಾಲವಿಲ್ಲದಂತಾಗುವ ಅಪಾಯವಿತ್ತು. ಲೆಫ್ಟಿನೆಂಟ್ ಪಾಂಡೆಯವರೇ ಮುಂದೆ ಮುಂದೆ ಸಾಗತೊಡಗಿದರು. ಒಂದು ಕಿರಿದಾದ ಭಾಗದ ಮೂಲಕ ಶತ್ರುವಿನ ಸಮೀಪಕ್ಕೆ ತಮ್ಮ ತುಕಡಿಯನ್ನು ಕರೆತಂದರು. ಆದರೆ ಗುರಿ ಇನ್ನೂ ದೂರವಿತ್ತು. ಎಚ್ಚೆತ್ತ ಶತ್ರುಗಳು ಗುಂಡಿನ ಸುರಿಮಳೆಗೈಯ್ಯಲಾರಂಭಿಸಿದರು. ಆದರೆ ಪಾಂಡೆ ಅಧೀರರಾಗಲಿಲ್ಲ. ಅಷ್ಟರಲ್ಲಿ ಹೆಗಲು, ಕಾಲಿಗೆ ತೀವ್ರ ಗಾಯಗಳಾಗಿದ್ದವು.


ಆದರೂ ಮುನ್ನುಗ್ಗುವುದನ್ನು ನಿಲ್ಲಿಸಲಿಲ್ಲ. ಇಬ್ಬರು ಶತ್ರುಗಳನ್ನು ಹೊಡೆದುರುಳಿಸಿ ಮೊದಲ ಬಂಕರ್ ವಶಪಡಿಸಿಕೊಂಡರು. ತಮ್ಮ ನಾಯಕನ ಶೌರ್ಯ, ಛಲವನ್ನು ಕಂಡು ಉತ್ತೇಜಿತರಾದ ಸೈನಿಕರೂ ವೀರಾವೇಶ ತೋರಲಾಂಭಿಸಿದರು. ಕೊನೆಯ ಬಂಕರ್ ಕೂಡ ವಶವಾಯಿತು, ಶತ್ರುಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಯಿತು. ಆ ವೇಳೆಗಾಗಲೇ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ ಕಡೆಯ ಬಂಕರ್ ಬಳಿ ಕುಸಿದರು, ಮತ್ತೆ ಮೇಲೇಳಲಿಲ್ಲ!


ನ್ಯಾಷನಲ್ ಡಿಫೆನ್ಸ್‌ ಅಕಾಡೆಮಿ ಪರೀಕ್ಷೆಯನ್ನು ಪಾಸು ಮಾಡಿದ ಸಂದರ್ಭದಲ್ಲಿ ನಡೆದ ಸಂದರ್ಶನದ ವೇಳೆ, ‘ನೀನು ಏಕಾಗಿ ಸೇನೆಯನ್ನು ಸೇರಲು ಬಯಸುತ್ತೀಯಾ’ ಎಂದು ಕೇಳಿದಾಗ ‘ಪರಮವೀರ ಚಕ್ರ ಪಡೆಯಲು’ ಎಂದಿದ್ದರು ಪಾಂಡೆ! ಈ ದೇಶ ಯುದ್ಧ ಕಾಲದಲ್ಲಿ ನೀಡುವ ಅತ್ಯುಚ್ಛ ಶೌರ್ಯ ಪ್ರಶಸ್ತಿಯಾದ ‘ಪರಮವೀರ ಚಕ್ರ’ವನ್ನು ಅಪ್ಪ ಗೋಪಿಚಂದ್ ಪಾಂಡೆ ಮಗನ ಪರವಾಗಿ ಪಡೆದುಕೊಂಡರು. ಅಣಕವೆಂದರೆ “Some goals are so worthy, it’s glorious even to fail’ ಎನ್ನುತ್ತಿದ್ದ ಪಾಂಡೆ ಹೋರಾಟದಲ್ಲಿ ಗೆದ್ದರೂ ಪರಮವೀರ ಚಕ್ರವನ್ನು ಪಡೆದಿದ್ದು ಮಾತ್ರ ಮರಣೋತ್ತರವಾಗಿ!


ಕ್ಯಾಪ್ಟನ್ ಹನೀಫುದ್ದೀನ್, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಪ್ರಾಣತೆತ್ತಾಗ ಇಬ್ಬರಿಗೂ 24 ವರ್ಷ. ಸಾಮಾನ್ಯರಿಗೆ ಸರಿಯಾಗಿ ಬುದ್ಧಿ, ಜವಾಬ್ದಾರಿ ಬೆಳೆಯುವ ವಯಸ್ಸಿಗೆ ಇವರಿಬ್ಬರೂ ದೇಶಕ್ಕಾಗಿ ಅತ್ಯುನ್ನತ ತ್ಯಾಗವನ್ನೇ ಮಾಡಿದ್ದರು. ಬಂದೇ ಬಿಟ್ಟಿತು ಇಪ್ಪತ್ತಾರು, ಹಾಗಾಗಿ ಮತ್ತೆ ನೆನಪಾಗುತ್ತಿದ್ದಾರೆ ಅವರು.

 •  0 comments  •  flag
Share on Twitter
Published on July 22, 2017 06:24
No comments have been added yet.


Pratap Simha's Blog

Pratap Simha
Pratap Simha isn't a Goodreads Author (yet), but they do have a blog, so here are some recent posts imported from their feed.
Follow Pratap Simha's blog with rss.