ಜಗತ್ತು ಮತ್ತು ಅನುಭವ

ನಮ್ಮ ಗ್ರಹಿಕೆ ಅನುಭವಜನ್ಯವಾದದ್ದು ಎಂದು ಹೇಳಿಕೊಳ್ಳುವುದು ಸಾಮಾನ್ಯ. ಯಾವಾಗ ನಾವು ನಮ್ಮ ಅನುಭವ ಆಧಾರಿತವಾಗಿ ನಮ್ಮ ಗ್ರಹಿಕೆ, ಅಭಿಪ್ರಾಯ, ನಿರ್ಣಯಗಳನ್ನು ಕಟ್ಟಿ ಹಾಕಿಕೊಳ್ಳುತ್ತೇವೋ ಆಗ ನಮ್ಮ ಪ್ರಪಂಚ ಚಿಕ್ಕದಾಗುತ್ತಾ ಹೋಗುತ್ತದೆ. ಏಕೆಂದರೆ ನಮ್ಮ ಅನುಭವವೆಲ್ಲಾ ಜಗತ್ತಿನದ್ದೇ ಆಗಿದೆ ಆದರೆ ಜಗತ್ತಿನ ಅನುಭವವೆಲ್ಲಾ ನಮ್ಮದಲ್ಲ! ನಮ್ಮ ಅನುಭವಕ್ಕೆ ದಕ್ಕಿದ್ದು ಮಾತ್ರ ಸತ್ಯ ಎಂದು ಹೇಳಿಕೊಳ್ಳುವ ಪರಂಪರೆಯು ಉಂಟು. ನಮ್ಮ ಅನುಭವ ನಮ್ಮ ಯೋಗ್ಯತೆ-ದೃಷ್ಟಿಯ ಅನುಸಾರವಿರುತ್ತದೆ. ನಮ್ಮ ಯೋಗ್ಯತೆಯನ್ನ ಮೀರಿದ್ದು ಇದೆ ಎಂದು ಒಪ್ಪಿಕೊಳ್ಳಲಾಗದ ಅಸ್ತಿತ್ವ ಹೇಡಿಗಳು ಸೃಷ್ಟಿಸಿದ ಚಿಂತನೆ ಇದಿರಬಹುದು. ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಎಷ್ಟು ಭೌತಿಕ ಅನುಭವ ಪಡೆಯಬಲ್ಲ!? ಎಷ್ಟು ವಿಧವಾದ ಸವಾಲು, ವಾತಾವರಣ, ಚಿಂತನೆಯನ್ನು ಎದುರಿಸಬಲ್ಲ!? ತನ್ನ ಸೀಮಿತ ವೃತ್ತದ, ಜನರ, ಸಮಾಜದ, ತನ್ನ ಸೀಮಿತ ಪರಂಪರೆಯ ಹಿಂದಿನ ಜನಾಂಗದ ಅನುಭವಗಳನ್ನೇ ಉಣ್ಣುತ್ತಾ ಬಂದವನು ಅದೇ ಜಗತ್ತಿನ ಸಮಷ್ಟಿ ಅನುಭವ ಎಂದು ತನ್ನ ಮಿತಿಯನ್ನು ಇತರರ ಮೇಲೆ ಹೇರುತ್ತಾನೆ. ಅನುಭವ ಮತ್ತು ಇತಿಹಾಸ ಒಂದೇ ಅರ್ಥ ಕೊಡುವ ಬೇರೆ ಬೇರೆ ಪದಗಳು. ಇತಿಹಾಸವು ಕೂಡ ಜಗತ್ತಿನ ಒಟ್ಟು ಅನುಭವವಲ್ಲ! ಇಂದು ನಡೆದ ಒಂದು ಭೌತಿಕ ಕ್ರ‍ಿಯೆಗೆ ತನ್ನ ಸೀಮಿತ ಅನುಭವದಿಂದ ಉಂಟಾದ ಗ್ರಹಿಕೆಯನ್ನು ಅದರ ಮೇಲೆ ಪ್ರಯೋಗಿಸಿ ತನ್ನದೇ ಒಂದು ವಿವರ ಒಬ್ಬ ದಾಖಲಿಸುತ್ತಾನೆ. ಖುದ್ದು ಅವನ ಆತ್ಮಕಥನವನ್ನು ಅವನೇ ಬರೆದರೂ, ತನ್ನ ಕಾಲದ ಇತಿಹಾಸವನ್ನು ಬರೆದರೂ ಅದೂ ಕೂಡ ಅವನ ಅನುಭವದ ಮಿತಿಯಲ್ಲೇ ಹೊಮ್ಮಿದ್ದಾಗಿರುತ್ತದೆ. ತನ್ನನ್ನು ಹೊಗಳಿಕೊಳ್ಳಲೋ, ತಾನು ಸಭ್ಯ ಎಂದು ತೋರಿಸಿಕೊಳ್ಳಲೋ ಅಲ್ಲಲ್ಲಿ ಆತ್ಮವಂಚನೆ ಮಾಡಿಕೊಂಡಿರುತ್ತಾರೆ. ಜಗತ್ತಿನಲ್ಲಿ ಯಾವನೂ ಕೂಡ ನೇರಾ ನೇರಾ ತನ್ನ ಅನುಭವವನ್ನ ನಿಷ್ಠವಾಗಿ ದಾಖಲಿಸಲು ಸಾಧ್ಯವಿಲ್ಲ. ಸತ್ಯನಿಷ್ಠತೆಯು ಕೇವಲ ಅವನಲ್ಲೇ... ಅವನು ತನ್ನೊಡನೆಯೇ ಮಾತಾಡಿಕೊಂಡಾಗ ಮಾತ್ರ ಗೋಚರಿಸುವುದ್ದಾಗಿದೆ. ತನ್ನ ಅನುಭವ ಅಧಾರಿತವಾದುದರಲ್ಲೇ ಸತ್ಯನಿಷ್ಠತೆ ಇಲ್ಲ ಎನ್ನಬೇಕಾದರೆ, ಜಗತ್ತಿನ ಒಟ್ಟು ಅನುಭವದಲ್ಲಿ ಸತ್ಯನಿಷ್ಠತೆ ತೋರುವುದಾದರೂ ಹೇಗೆ? ಅನುಭವ ಎಂಬುದೇ ‘ಮಿತಿ’ ಎಂದು ನಮಗರಿವಾಗಬೇಕು. ಜಗತ್ತು ಎಂದರೆಯೇ ‘ಆದರ್ಶ’ ಎಂದು ನಾವು ತಿಳಿಯಬೇಕು.

ಅನುಭವ ಕೇವಲ ಭೌತಿಕವಾದುದ್ದಲ್ಲ. ಅದು ನಾವು ನಮ್ಮಲ್ಲೇ ಗಳಿಸಿ ನಾವೇ ತಿಳಿದುಕೊಳ್ಳಬೇಕಾದ್ದು ಎಂಬುದು ಹಲವು ದಾರ್ಶನಿಕರು ಸ್ಪಷ್ಟಪಡಿಸಿದ ವಿಚಾರ. ಮತ್ತು ಅಂಥಹ ಇಂದ್ರಿಯಾತೀತ ಅನುಭವವು ವಿವರಣೆಗೆ ಸಿಲುಕುವುದಲ್ಲ. ಅನುಭವ ಮತ್ತು ಜಗತ್ತು ಎರಡೂ ಒಂದೇ ಆಗಿದೆ. ಅನುಭವವೇ ಜಗತ್ತು, ಜಗತ್ತೇ ಅನುಭವವು. ಈ ವಾದವು ಸಮುದಾಯಕ್ಕೆ ಎಂದಿಗೂ ಅರ್ಥವಾಗುವ, ಎಟುಕುವ ವಿಚಾರವಲ್ಲ. ಇದು ವೈಯುಕ್ತಿಕವಾಗಿ ಆಗುವುದು ಮತ್ತು ಅದನ್ನು ವ್ಯಕ್ತಪಡಿಸಲು ಸಾಧ್ಯವಾಗದ್ದು. ಮತ್ತು ಯಾರು ಜಗತ್ತು ಮತ್ತು ಅನುಭವ ಎಂಬುದನ್ನು ಏಕೀಕರಿಸಿಕೊಳ್ಳುತ್ತಾನೋ, ಅಂದರೆ ಎಲ್ಲಾ ಅನುಭವವನ್ನೂ ದಕ್ಕಿಸಿಕೊಂಡು ಜ್ಞಾನಿಯಾಗುತ್ತಾನೋ ಅವನು ಉಪದೇಶ ಮಾಡುವುದಿಲ್ಲ. ತಾನೇ ಜಗತ್ ಆಗಿಬಿಡುತ್ತಾನೆ. ಅಂದರೆ ಉಪದೇಶ, ದೊಂಬರಾಟ, ವ್ಯವಸ್ಥೆ, ರಾಜಕೀಯ ಇದೆಲ್ಲದರ ಹಂಗಿನಲ್ಲಿ ಬಿದ್ದುಕೊಂಡು ಜ್ಞಾನಿ ನಾನು ಎಂದು ಹೇಳಿಕೊಳ್ಳುತ್ತಾ, ತನ್ನ ಅನುಭವವನ್ನೇ ಲೋಕದರ್ಶನ ಎಂದುಕೊಂಡವನು ಅಜ್ಞಾನಿಯೇ ಆಗಿರುತ್ತಾನೆ. ಮಿತಿ ಮತ್ತು ಆದರ್ಶಗಳ ತುದಿಗಳು ಇಲ್ಲದ್ದು ಮಾತ್ರ ಪೂರ್ಣ!

ಇತರ ಪ್ರಾಣಿಗಳಿಗೂ ಅನುಭವವಿದೆ, ಕಡಲಾಳದಲ್ಲಿರುವ ಒಂದು ಜೀವಿ, ಇನ್ನೊಂದು ಜೀವಿಯನ್ನು ಹಿಡಿದು ತಿನ್ನುವಾಗ ಅದಕ್ಕಾದ ಅನುಭವವನ್ನು ಅಥವಾ ಅದಕ್ಕೂ ಇರಬಹುದಾದ ಇಂದ್ರಿಯಾತೀತ ಗ್ರಹಿಕೆಯನ್ನು ಈ ಮನುಷ್ಯ ಎಂಬ ಜೀವಿ ಎಷ್ಟೇ ತಿಣುಕಾಡಿದರೂ ತಿಳಿಯಲಾಗುವುದಿಲ್ಲ. ಅಷ್ಟೇಕೆ ಸಿಹಿ ತಿಂದಾಗ ನಮಗಾದ ಅನುಭವವನ್ನು ಇತರರಿಗೆ ವಿವರಿಸಲು ಸಾಧ್ಯವಿಲ್ಲ. ಇಂದು ನಾವು ಯಾವುದನ್ನು ಅನುಭವ ಎನ್ನುತ್ತಿದ್ದೀವೋ... ಅದನ್ನೇ ಜಗತ್ತು ಎಂದು ಪರಿಗಣಿಸಿದ್ದೀವೋ ಅದು ಕೇವಲ ಮನುಷ್ಯ ಎಂಬ ಜೀವಿಯ ಕಲ್ಪನೆಯ, ಅವನ ಅಸ್ತಿತ್ವ ಹೋರಾಟದ ತೆವಲಿನ ಪ್ರತಿಬಿಂಬವಷ್ಟೇ. ಎಷ್ಟೋ ವಿಸ್ತಾರವಾದ ಬ್ರಹ್ಮಾಂಡದಲ್ಲಿರುವ ಭೂಮಿ ಎಂಬ ಕ್ಷುಲ್ಲಕ ಧೂಳಿನ ಕಣದಲ್ಲಿರುವ, ಆ ಕಣದಲ್ಲಿನ ಧೂಳು ಎನ್ನಲಿಕ್ಕೂ ಲಾಯಕ್ಕಿಲ್ಲದ ಮನುಷ್ಯ ಎಂಬ ಪ್ರಾಣಿಯ ಅನುಭವವನ್ನು ಜಗತ್ತಿನ ಅನುಭವ ಎಂಬಂತೆ ಸ್ವೀಕರಿಸುವುದು ಹಾಸ್ಯಾಸ್ಪದವೇ ಸರಿ. ಮನುಷ್ಯ ಮಿತಿ ಮತ್ತು ಆದರ್ಶಗಳನ್ನು ಮೀರಿದವನಂತೂ ಅಲ್ಲವೇ ಅಲ್ಲ. ನಮ್ಮೆಲ್ಲರ ಒಟ್ಟು ಅನುಭವ, ಗ್ರಹಿಕೆ, ವಿಚಾರ, ನಿರ್ಣಯ, ವಾದ, ಪ್ರತಿವಾದ, ಇತರೆ ಇತರೆ ಎಲ್ಲವೂ ಮನುಷ್ಯನ ಮಿತಿಯ ಉತ್ಪನ್ನಗಳೇ ಆಗಿದೆ. ಅದಕ್ಕಾಗಿಯೇ ತನ್ನ ಮಿತಿಯನ್ನು ಮುಚ್ಚಿಕೊಳ್ಳಲು ಮನುಷ್ಯನು ಅಂಡಾಂಡವೇ ಬ್ರಹ್ಮಾಂಡ ಎಂದುಬಿಟ್ಟ ಎನ್ನಿಸುತ್ತದೆ.
3 likes ·   •  0 comments  •  flag
Share on Twitter
Published on May 18, 2017 03:30
No comments have been added yet.