ಕಾನ್‌ಸ್ಟೆಬಲ್‌ಗಳ ಖಾಕಿಗೆ ಖದರು, ಕಿಮ್ಮತ್ತೂ ಎರಡೂ ಇಲ್ಲ, ಆದರೆ ಅವರಿಲ್ಲದಿದ್ದರೆ ನಾವಿಲ್ಲ!

ಕಾನ್‌ಸ್ಟೆಬಲ್‌ಗಳ ಖಾಕಿಗೆ ಖದರು, ಕಿಮ್ಮತ್ತೂ ಎರಡೂ ಇಲ್ಲ, ಆದರೆ ಅವರಿಲ್ಲದಿದ್ದರೆ ನಾವಿಲ್ಲ!



ಕಳೆದ ಒಂದು ವಾರದಿಂದ ರಾಜ್ಯದ ಮೂಲೆ ಮೂಲೆಗಳಿಂದ ಕರೆ ಬಂದಿವೆ. ಇತ್ತೀಚೆಗೆ ನಮ್ಮ ಲೋಕೋಪಯೋಗಿ ಖಾತೆ ಸಚಿವರಾದ ಡಾ. ಮಹಾದೇವಪ್ಪನವರ ಮಗನ ಮದುವೆಗೆ ಹೋಗಿದ್ದಾಗ ಕಾನ್‌ಸ್ಟೆಬಲ್‌ಗಳ ಒಂದು ದಂಡೇ ಅಡ್ಡಹಾಕಿ ನಮ್ಮ ಪರ ಧ್ವನಿಯೆತ್ತಿ, ಈ ಹಿಂದೆ ಪೋಲೀಸ್ ಇಲಾಖೆಯ ಬಗ್ಗೆ ಅಭಿಮಾನದಿಂದ ಬರೆದಿದ್ದೀರಿ, ಈಗಲೂ ನಮ್ಮ ಬಗ್ಗೆ ಮಾತನಾಡಿ ಎಂದು ಕೇಳಿಕೊಂಡರು. ಅಷ್ಟು ಮಾತ್ರವಲ್ಲ, ನೆರೆರಾಜ್ಯಗಳಲ್ಲಿ ಕೆಲಸಕ್ಕೆ ಸೇರುವ ಕಾನ್‌ಸ್ಟೆಬಲ್‌ಗೆ 28 ಸಾವಿರ ಪ್ರಾರಂಭಿಕ ಸಂಬಳವಿದೆ, ಹೆಡ್‌ಕಾನ್‌ಸ್ಟೆಬಲ್‌ಗೆ 56 ಸಾವಿರ ಸಂಬಳ ಬರುತ್ತಿದೆ ಎಂದು ಪೇಸ್ಲಿಪ್ ಕಳುಹಿಸಿದ್ದಾರೆ. ಕಳೆದ ವರ್ಷ ಮೈಸೂರಿನ ಪೊಲೀಸರಿಗೆ ಸನ್ಮಾನ ಮಾಡುವ ಸಮಾರಂಭದಲ್ಲಿ ಕಾನ್‌ಸ್ಟೆಬಲ್ ಹುದ್ದೆಗೆ ಕನಿಷ್ಟ 25 ಸಾವಿರ ಪ್ರಾರಂಭಿಕ ಸಂಬಳ ಕೊಡಬೇಕು ಎಂದಿದ್ದೆ. ಈ ಮಧ್ಯೆ, ಕಳೆದ ಹತ್ತಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ, ಕಡತದಲ್ಲೇ ಕುಳಿತಿರುವ ಪೊಲೀಸರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೂನ್-4ರಂದು ಸಾಮೂಹಿಕ ರಜೆ ಹಾಕಲು ಕಾನ್‌ಸ್ಟೆಬಲ್ ಹಾಗೂ ಹೆಡ್‌ಕಾನ್‌ಸ್ಟೆಬಲ್‌ಗಳು ನಿರ್ಧರಿಸಿದ್ದಾರೆ.

1. ವೇತನ ತಾರತಮ್ಯ
2. ಮಾನವಹಕ್ಕು ಉಲ್ಲಂಘನೆ
3. ರಾಜಕೀಯ ಪ್ರಭಾವ
4. ಅಭದ್ರತೆ

ಇಂಥ ನಾಲ್ಕು ಪ್ರಮುಖ ವಿಚಾರಗಳನ್ನು ಕರ್ನಾಟಕ ಪೊಲೀಸ್ ಮಹಾಸಂಘ ಮುಂದಿಟ್ಟಿದೆ. ಇತ್ತ ಖಾಕಿ, ಖಾದಿ, ಕಾವಿ ಬಗ್ಗೆ ಸಮಾಜದಲ್ಲಿ ವಾಕರಿಕೆ ಮನಸ್ಥಿತಿ ಇರುವುದು ದಿಟವೇ. ಆದರೆ ಖಾದಿ, ಕಾವಿಯಿಲ್ಲದ ಪರಿಸ್ಥಿತಿ ಹೇಗಿದ್ದೀತು ಎಂದು ಊಹಿಸಿ ನೆಮ್ಮದಿ ಪಟ್ಟುಕೊಳ್ಳಬಹುದು.ಖಾಕಿಯಿಲ್ಲದ ಪರಿಸ್ಥಿತಿಯನ್ನು, ಸಮಾಜವನ್ನು, ವ್ಯವಸ್ಥೆಯನ್ನು ಊಹಿಸಿಕೊಳ್ಳಲಿಕ್ಕಾದರೂ ಸಾಧ್ಯವಿದೆಯೇ? ಅಂಥ ಭದ್ರತೆಯ ಭಾವನೆಯನ್ನು ಸಮಾಜಕ್ಕೆ ಕೊಟ್ಟಿರುವ ಆ ಖಾಕಿಗೆ ಅಥವಾ ಪೊಲೀಸ್ ವ್ಯವಸ್ಥೆಗೆ ತಕ್ಕಮಟ್ಟಿನ ವೃತ್ತಿ ಸ್ವಾತಂತ್ರ್ಯ ಕೊಡುವುದಕ್ಕಾಗಲಿ, ಅವರ ಯೋಗಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳವ ನಿಟ್ಟಿನಲ್ಲಾಗಲಿ ನಾವು ಎಂದಾದರೂ ಯೋಚಿಸಿದ್ದೇವೆಯೇ?

 ಅದಕ್ಕೂ ಮೊದಲು ಒಂದು ಘಟನೆ ಕೇಳಿ…

 Bullet for bullet ಎನ್ನುತ್ತಿದ್ದ ಡಿ.ಜಿ.ಪಿ ಜೂಲಿಯಸ್ ರಿಬೆರೋ ಅವರೇ ಅಸಹಾಯಕತೆಯಿಂದ ಕೈಚೆಲ್ಲುವಂತಾಗಿತ್ತು. ಇನ್ನೇನು ಪಂಜಾಬ್ ಸಿಡಿದು ಸ್ವತಂತ್ರಗೊಳ್ಳುತ್ತದೇನೋ ಎಂಬಂತಹ ವಾತಾವರಣ ಸೃಷ್ಟಿಯಾಗಿತ್ತು. ಇಡೀ ರಾಜ್ಯವೇ ಕದಡಿತ್ತು. ಇತ್ತ ಅಜಿತ್ ಸಿಂಗ್ ಸಂಧು , ಸೀನಿಯರ್ ಸೂಪರಿಂಟೆಂಡೆಂಟ್ ಆಫ್  ಪೊಲೀಸ್ ಆಗಿ ಪಂಜಾಬ್‌ನ ತರನ್ ತಾರನ್ ಜಿಲ್ಲೆಗೆ  ಕಾಲಿಟ್ಟಾಗ, ಸಾಮಾನ್ಯ ಜನರಿಗಿಂತ ಭಯೋತ್ಪಾದಕರೇ ಹೆಚ್ಚಿದ್ದರು! ಏಕೆಂದರೆ ಅದು ಖಲಿಸ್ತಾನಿ ಪ್ರತ್ಯೇಕತಾವಾದಿಗಳ ರಾಜಧಾನಿಯೆನಿಸಿತ್ತು. ತರನ್ ತಾರನ್‌ಗೆ ಕಾಲಿಡುವುದೆಂದರೆ ಸಾವಿಗೆ ಆಹ್ವಾನ ನೀಡಿದಂತೆಯೇ ಎಂಬತಿತ್ತು. ಜತೆಗೆ ಸ್ವತಃ ಸಿಖ್ ಪಂಥಕ್ಕೆ ಸೇರಿದ್ದರೂ ಸಂಧು, ಸಿಖ್ಹರ ವಿರುದ್ದವೇ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಸಾಲದೆಂಬಂತೆ, ಭಯೋತ್ಪಾದಕರ ವಿರುದ್ದ ಕಾರ್ಯಾಚರಣೆ ಕೈಗೊಳ್ಳುವ ಮೊದಲು ಪೊಲೀಸರಲ್ಲಿ ಆತ್ಮಸ್ಥ್ಯೆರ್ಯ ತುಂಬುವ ಕಾರ್ಯ ಮಾಡಿದರು. ಆನಂತರ ಪ್ರಾರಂಭವಾಗಿದ್ದೇ ಆಪರೇಶನ್ ವುಡ್ ರೋಸ್, ಆಪರೇಶನ್ ಲಿಲ್ಲಿ ವೈಟ್, ಆಪರೇಶನ್ ಪ್ಲಶೌಟ್! 1984 ರಿಂದ 94ರವರೆಗೂ ನಡೆದ ಈ ಕಾರ್ಯಾಚರಣೆಗಳ ಮೂಲಕ ಪ್ರತ್ಯೇಕತಾವಾದಾವನ್ನು ಬೇರು ಸಮೇತ ಕಿತ್ತೊಗೆಯಲಾಯಿತು. ಭಿಂದ್ರನ್ ವಾಲೆಯ ಟೈಗರ್ ಫೊರ್ಸನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲಾಯಿತು. ಒಟ್ಟು 13 ವರ್ಷ ನಡೆದ ಸಂಘರ್ಷದ ನಂತರ ಪಂಜಾಬ್‌ನಲ್ಲಿ ಶಾಂತಿಯೇನೋ ಸ್ಥಾಪನೆಯಾಯಿತು. ಆದರೆ ಅಂದು ಜೀವ ಒತ್ತೆಯಿಟ್ಟು , ಪ್ರಾಣದ ಹಂಗುತೊರೆದು ಹೋರಾಡಿದ ಪೊಲೀಸರಿಗೆ ಈ ದೇಶ ಕೃತಜ್ಞತೆ ಅರ್ಪಿಸುವ ಬದಲು ಕೋರ್ಟಿಗೆಳೆಯಿತು! ಅಜಿತ್ ಸಿಂಗ್ ಸಂಧು ವಿರುದ್ಧ 43 ಕೊಲೆ ಮತ್ತು ಮಾನವ ಹಕ್ಕು ಉಲ್ಲಂಘನೆ ಆರೋಪಗಳನ್ನು ಹೊರಿಸಲಾಯಿತು. ಮೊಕದ್ದಮೆ ಹೂಡಿ ನ್ಯಾಯಾಲಯಕ್ಕಳೆಯಲಾಯಿತು. ಭಿಂದ್ರನ್ ವಾಲೆಯ ರಕ್ಕಸೀ ಕೃತ್ಯವನ್ನು ಮೌನವಾಗಿ ವೀಕ್ಷಿಸುತ್ತಿದ್ದ ಮಾನವ ಹಕ್ಕು ಆಯೋಗ, ಸಂಧು ವಿರುದ್ಧ ಇಲ್ಲ – ಸಲ್ಲದ ಆರೋಪ ಹೊರಿಸಿತು. ದುರದೃಷ್ಟವಶಾತ್, 1996ರಲ್ಲಿ ಸಂಧು ಅವರನ್ನು ಕೆಲಸದಿಂದ ಕಿತ್ತೊಗೆದು ಜೈಲಿಗೆ ತಳ್ಳಲಾಯಿತು!

 ಕಟ್ಟಾ ಭಯೋತ್ಪಾದಕ ನಿಶಾನ್ ಸಿಂಗ್ ಕಲನೂರ್ ಅದೇ ಜೈಲಿನಲಿದ್ದ. ಪಂಜಾಬ್ ಪ್ರತ್ಯೇಕಗೊಳ್ಳುವ ಅಪಾಯ ಎದುರಾಗಿದ್ದಾಗ , ಎಂತಹ ಕಠಿಣ ಕ್ರಮವನ್ನಾದರೂ ತೆಗೆದುಕೊಂಡು ಪರಿಸ್ಥಿತಿಯನ್ನು ಹತೋಟಿಗೆ ತನ್ನಿ ಎಂದಿದ್ದ ಸರಕಾರ, ಜೈಲಿನಲ್ಲಿ ಸಂಧು ಮೇಲೆ ಆಕ್ರಮಣ ಮಾಡಲು ನಿಶಾನ್ ಸಿಂಗ್‌ಗೆ ಅವಕಾಶ ಮಾಡಿಕೊಟ್ಟಿತು! ಎಲ್ಲರೂ ಎಣಿಸಿದಂತೆಯೇ ಸಂಧು ಮೇಲೆ ಹಲ್ಲೆ  ನಡೆಯಿತು. ಹೇಗೋ ಒಂದು ವರ್ಷ ಜೈಲುವಾಸ ಅನುಭವಿಸಿದ ಸಂಧು, 1997ರಲ್ಲಿ ಬಿಡುಗಡೆಯಾದರು. ಆದರೆ ನ್ಯಾಯಾಲಯಕ್ಕೆ ಅಲೆಯುವುದು ತಪ್ಪಲಿಲ್ಲ. ಈ ಮಧ್ಯೆ, ಸಂಧು ಅವರಿಗೆ ನೀಡಿದ್ದ ಜಾಮೀನನ್ನು ವಜಾ ಮಾಡಬೇಕು ಎಂದು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬಂತು. ಆದರೆ ಜಾಮೀನು ವಜಾ ಗೊಂಡು ಮತ್ತೆ ಜೈಲು ಸೇರಬೇಕಾಗುತ್ತದೆಂಬ ಬಗ್ಗೆ ಸಂಧು ಮನದಲ್ಲಿ ಯಾವ ಸಂಶಯವೂ ಇರಲಿಲ್ಲ. ಅವತ್ತು 1997, ಮೇ 13, ಸಂಧು ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ. ಕಟಕಟೆಯಲ್ಲಿ ನಿಲ್ಲಲಿಲ್ಲ. ಕಳಂಕಿತ ಬದುಕಿಗಿಂತ ಸಾವೇ ಮೇಲು ಎಂದು ಬರೆದಿಟ್ಟು , ಹಿಮಾಲಯನ್ ಕ್ವೀನ್ ಎಕ್ಸ್ ಪ್ರೆಸ್ ರೈಲಿಗೆ ತಲೆಕೊಟ್ಟರು! ಆತ್ಮಹತ್ಯೆ ಮಾಡಿಕೊಂಡರು! ಟ್ರಕ್‌ಗಳಲ್ಲಿ ಹಣ ಆರ್‌ಡಿ ಎಕ್ಸ್, ಎಕೆ-47 ರೈಫಲ್‌ಗಳನ್ನು ತುಂಬಿ ಕಳುಹಿಸಿದರೂ ಕೈಗೂಡದ ಪಾಕಿಸ್ತಾನದ ಐಎಸ್‌ಐ ಕನಸನ್ನು ಮಾನವ ಹಕ್ಕುಗಳ ಹೆಸರಲ್ಲಿ ಭಾರತೀಯರೇ ಸಾಕಾರಗೊಳಿಸಿದರು!



Bolting the stable after the horse has left! ಅಂದರೆ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು ಅಂತಾ ಪೊಲೀಸರನ್ನು ಮೂದಲಿಸುವುದನ್ನು, ಕುಹಕವಾಡುವುದನ್ನು ನಾವೆಂದೂ ಮರೆಯುವುದಿಲ್ಲ.ಒಬ್ಬ ಸಾಮಾನ್ಯ ಸೈನಿಕ ಸತ್ತರೂ, ಆತ ಸೇನೆಯಲ್ಲಿ ಅಡುಗೆ ಭಟ್ಟನ ಕೆಲಸ ಮಾಡುತ್ತಿದ್ದರೂ ಪರವಾಗಿಲ್ಲ. ನಾವು ಕಣ್ಣೀರು ಸುರಿಸುತ್ತೇವೆ. ಹುತಾತ್ಮರಾದರು, ಪ್ರಾಣತ್ಯಾಗ ಮಾಡಿದರು, ವೀರ ಮರಣವನ್ನಪ್ಪಿದರು, ದೇಶಕ್ಕಾಗಿ ಮಡಿದರು ಎಂದು ಗುಣಗಾನ ಮಾಡುತ್ತೇವೆ. ಹೊಗಳಿ ಅಟ್ಟಕ್ಕೇರಿಸುತ್ತೇವೆ. ಹೊತ್ತು ಮರೆಯುತ್ತೇವೆ. ಒಬ್ಬ ಮಾಜಿ ಸಚಿವ ಅಥವಾ ಭ್ರಷ್ಟ ರಾಜಕಾರಣಿ ಸತ್ತರೂ ದೇಶ ಸೇವೆ ಮಾಡಿದರು, ಜನಸೇವೆಯೇ ಜನಾರ್ದನನ ಸೇವೆ ಎಂದು ನಂಬಿದ್ದರು ಎಂದು ಪುಟಗಟ್ಪಲೆ ಬರೆಯುತ್ತೇವೆ. ಹಾಲಿ ಸಚಿವರು ಹೂಗುಚ್ಚ ಇಟ್ಟು ಕಂಬನಿ ಮಿಡಿದು ಹೋಗುತ್ತಾರೆ, ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡುತ್ತೇವೆ. ಆದರೆ ಮಳೆ, ಚಳಿಯೆನ್ನದೆ ಮಣಭಾರದ ಬಂದೂಕು ಹೊತ್ತು ಹಗಲು ರಾತ್ರಿ ಗಸ್ತು ತಿರುಗುವ ಬೀಟ್ ಪೋಲಿಸರು, ಕಾನ್‌ಸ್ಟೆಬಲ್ ಗಳ  ಬಗ್ಗೆ ಏಕೆ ತಾತ್ಸಾರ? ಅವರ ಸೇವೆ ಖಾದಿಧಾರಿ ಪೊಲಿಟಿಕಲ್ ಪುಢಾರಿಗಳಿರಬಹುದು, ಇನ್ನಾವುದೇ ಸರಕಾರಿ ಉದ್ಯೋಗಿಗಿಂತ ಗುರುತರವಾದುದು, ಅವರ ಯೋಗಕ್ಷೇಮವನ್ನು ನೋಡಿಕೊಳ್ಳಬೇಕು ಎಂದು ಸಮಾಜ ಹಾಗೂ ಆಳುವ ವರ್ಗ ಇಬ್ಬರಿಗೂ ಏಕೆ ಅನಿಸುವುದಿಲ್ಲ?

 ಒಬ್ಬ ಪೇದೆ ಅಥವಾ ಕಾನ್‌ಸ್ಟೆಬಲ್ ಎಂದರೆ ಪೊಲೀಸ್ ವ್ಯವಸ್ಥೆಯಲ್ಲಿ ಅತ್ಯಂತ ತಳಮಟ್ಟದ ಹುದ್ದೆ. ಆದರೆ ಇಡೀ ಪೊಲೀಸ್ ವ್ಯವಸ್ಥೆ ನಿಂತಿರುವುದೇ ಅವರ ಮೇಲೆ. ಆದರೆ ಕಾನ್‌ಸ್ಟೆಬಲ್‌ಗಳ ಖಾಕಿಗೆ ಖದರೂ(ಗೌರವ) ಇಲ್ಲ, ಕಿಮ್ಮತ್ತೂ(ದುಡಿಮೆಗೆ ತಕ್ಕ ಸಂಬಳ) ಇಲ್ಲ! ಸಮಾಜ ಹಾಗೂ ಆಡಳಿವರ್ಗದ ಕಥೆ ಹಾಗಿರಲಿ, ಬಹಳಷ್ಟು ಕಡೆ ಪೊಲೀಸ್ ಇಲಾಖೆಯೊಳಗೂ ಕಾನ್‌ಸ್ಟೆಬಲ್‌ಗಳಿಗೆ ಕಾಳಜಿ, ಗೌರವ ಎರಡೂ ಸಿಗುವುದಿಲ್ಲ.
2009, ಫೆಬ್ರವರಿ 16ರಂದು ಹೀಗೊಂದು ಘಟನೆ ನಡೆದುಹೋಯಿತು. ಕೆಎಸ್‌ಆರ್‌ಪಿ ಕಾನ್‌ಸ್ಟೆಬಲ್ ಶಿವಕುಮಾರ್ ರಜೆ ಮೇಲೆ ತೆರಳಿದ್ದರು. ಆದರೆ ಕಮಾಂಡೆಂಟ್ ರಜೆ ದಯಪಾಲಿಸಿದ್ದರೂ ಅವರ ಕೆಳಗಿನ ಇನ್ಪೆಕ್ಟರ್ ನಾಗೇಗೌಡರಿಗೆ ಸಹಿಸಲಾಗಲಿಲ್ಲ. ಆ ರಜೆಯನ್ನು ಕಡಿತ ಮಾಡಿ, ವಾಪಸ್ ಬಾ ಎಂದರು. ಶಿವಕುಮಾರ್‌ಗೂ ಹತಾಶೆಯ ಕಟ್ಟೆಯೊಡೆಯಿತು, ಬಂದೂಕನ್ನೆತ್ತಿ ಇನ್ಸ್‌ಪೆಕ್ಟರ್ ನಾಗೇಗೌಡರ ಎದೆ ಸೀಳಿ, ಕೆಳಕ್ಕುರುಳಿಸಿದ. ಅಷ್ಟು ಮಾತ್ರವಲ್ಲ, ತಾನೂ ಆತ್ಮಹತ್ಯೆ ಮಾಡಿಕೊಂಡ. 2013ರಲ್ಲಿ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲೂ ರಕ್ತ ಹರಿಯಿತು. ಗೌರಿಬಿದನೂರಿನಲ್ಲಿ ಕಟ್ಟಿಸಿರುವ ಹೊಸಮನೆಯ ಗೃಹಪ್ರವೇಶಕ್ಕೆ ಕಾನ್‌ಸ್ಟೆಬಲ್ ಆನಂದ್ ಕುಮಾರ್ ಒಂದು ವಾರ ರಜೆ ಕೇಳಿದ್ದಾರೆ. ಈ ಮೊದಲು ಕಾನ್‌ಸ್ಟೆಬಲ್ ಆಗಿದ್ದು ಇತ್ತೀಚೆಗೆ ತಾನೇ ಸಬ್‌ಇನ್ಸ್‌ಪೆಕ್ಟರ್ ಪರೀಕ್ಷೆ ಪಾಸು ಮಾಡಿ ತರಬೇತಿ ಮುಗಿಸಿ ಡಿಸೆಂಬರ್‌ನಲ್ಲಷ್ಟೇ ರಾಜಾನುಕುಂಟೆ ಠಾಣೆಯ ಉಸ್ತುವಾರಿ ಪಡೆದುಕೊಂಡು ಬಂದಿದ್ದ ಎಸ್‌ಐ ವಿಜಯ್‌ಕುಮಾರ್ ರಜೆಯನ್ನು ನಿರಾಕರಿಸಿದ್ದಾರೆ. ಇದಕ್ಕೂ ಮೊದಲು ಆತ ಅನಧಿಕೃತ ರಜೆಗಳನ್ನು ಮಾಡಿದ್ದೇ ನಿರಾಕರಣೆಗೆ ಕಾರಣವಾಗಿತ್ತು.

 ಈ ಮಧ್ಯೆ ತನ್ನ ತಂದೆ, ಹೆಂಡತಿಯನ್ನು ಕರೆದುಕೊಂಡು ಬಂದ ಆನಂದ್ ರಜೆಗಾಗಿ ಅಂಗಲಾಚಿದ್ದಾರೆ. ಅಷ್ಟರಲ್ಲಿ ಮಾತಿನ ಚಕಮಕಿ, ಬೈಗುಳಗಳ ವಿನಿಮಯವೂ ನಡೆದಿದೆ. ಏಯ್ ನಿನ್ನ ಹೆಂಡ್ತೀನ ಕರ್ಕೊಂಡ್ ಬರ್ತಿಯೇನೋ ಎಂದು ಕೆಣಕಿದಾಗ ಆನಂದ್ ರೈಫಲ್ ಎತ್ತಿ ವಿಜಯ್‌ಕುಮಾರ್‌ಗೆ ಗುಂಡಿಕ್ಕಿದರು. ಸೇನೆಯಲ್ಲಿ ಇಂಥ ಘಟನೆಗಳು ಸರ್ವೇ ಸಾಮಾನ್ಯ. ರಜೆ ವಿಚಾರಕ್ಕೆ ಆಗಿಂದಾಗ್ಗೆ ಮೇಲಾಧಿಕಾರಿಗಳು ಮತ್ತು ಸೈನಿಕರ ನಡುವೆ ಜಟಾಪಟಿ, ಹತ್ಯೆ ನಡೆಯುತ್ತಿರುತ್ತವೆ. ಗಡಿ ಕಾಯುವ ಸಾಮಾನ್ಯ ಸೈನಿಕನಲ್ಲಿ ಮಾತ್ರ ಕಾಣುತ್ತಿದ್ದ ಹತಾಶೆಯ ಜತೆಗೆ ಮಗ್ಗುಲ ಮುಳ್ಳಾಗಿ ಚುಚ್ಚುತ್ತಿರುವ ಸಂಬಳ ನಮ್ಮ ರಾಜ್ಯದ ಪೊಲೀಸ್ ಕಾನ್‌ಸ್ಟೆಬಲ್‌ಗಳ ಬದುಕನ್ನು ದುಸ್ತರವಾಗಿಸುತ್ತಿದೆ. ಹಾಗಾಗಿ ಸಾಮೂಹಿಕ ರಜೆ ಹೋಗಲು ಮುಂದಾಗಿದ್ದಾರೆ.

ಈಗಲಾದರೂ ಅವರ ಬಗ್ಗೆ ಅಂತಃಕರಣವನ್ನಿಟ್ಟುಕೊಂಡು ನಾವು ನೋಡಬೇಕೋ ಬೇಡವೋ ಹೇಳಿ?

ಇಷ್ಟಕ್ಕೂ ಇವತ್ತು ಪೊಲೀಸ್ ಇಲಾಖೆ ನಿಂತಿರುವುದೇ ಕಾನ್‌ಸ್ಟೆಬಲ್‌ಗಳ ಮೇಲೆ ಅಲ್ಲವೆ? ರಸ್ತೆ ಬದಿ ಮಾರಾಟಗಾರರು, ಪಾನಿಪುರಿ ಮಾರುವವರಿಂದ ಐದೋ ಹತ್ತೋ ರೂಪಾಯಿ ತೆಗೆದುಕೊಳ್ಳುವ ಕಾನ್‌ಸ್ಟೆಬಲ್‌ಗಳ ಬಗ್ಗೆ ಸಾಮಾನ್ಯ ಜನರಾದ ನಾವೂ ತಾತ್ಸಾರ ಭಾವನೆ ಹೊಂದಿದ್ದೇವೆ.
ಆದರೆ ಕೋಮುಗಲಭೆಯಾಗಲಿ, ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಲಿ, ದೊಂಬಿ ನಡೆಯಲಿ, ಆರೋಪಿಯ ಬಂಧನವಿರಲಿ ಮೊದಲು ಜೀವದ ಹಂಗುತೊರೆದು ನುಗ್ಗುವವರೇ ಕಾನ್‌ಸ್ಟೆಬಲ್‌ಗಳು. ಪೊಲೀಸ್ ಇಲಾಖೆಯ ಪಾಲಿಗೆ ಕಾನ್‌ಸ್ಟೆಬಲ್‌ಗಳೇ   Foot Soldiers. 2003, ಡಿಸೆಂಬರ್ 13ರಂದು ನಮ್ಮ ಸಂಸತ್ ಮೇಲೆ ದಾಳಿ ನಡೆದಾಗಲೂ ಸತ್ತಿದ್ದು ಕಾನ್‌ಸ್ಟೆಬಲ್‌ಗಳೇ. ಇನ್ನೊಂದು ಮಜಾ ಕೇಳಿ, ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ, ಎಸ್ಪಿ ನೇತೃತ್ವದಲ್ಲಿ, ಡಿಸಿಪಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಇಂತಿಷ್ಟು ಜನ ಕಳ್ಳಕಾಕರು, ದರೋಡೆಕೋರರನ್ನು ಬಂಧಿಸಲಾಗಿದೆ ಎಂದು ಬಿರುದು ಬಾವಲಿ ತೆಗೆದುಕೊಳ್ಳುತ್ತಾರೆ. ಆದರೆ ಈ ‘ನೇತೃತ್ವ’ದ ಹಿಂದಿರುವ ವ್ಯಕ್ತಿ, ಶಕ್ತಿಗಳು ಸಾಮಾನ್ಯ ಕಾನ್‌ಸ್ಟೆಬಲ್‌ಗಳೇ ಅಲ್ಲವೆ? ಅದಿರಲಿ, ಮಣಭಾರದ ರೈಫಲ್ ಹೊತ್ತು ಹೆಣಕಾಯುವಂತೆ ರಸ್ತೆ ರಸ್ತೆ ಮೇಲೆ ನಿಗಾ ಇಡುವ ಕಾನ್‌ಸ್ಟೆಬಲ್‌ಗಳಿಗೆ, ವಾರದ ರಜೆಯಿಲ್ಲ ಎಂದರೆ ನಂಬುತ್ತೀರಾ? ಪೊಲೀಸ್ ಮ್ಯಾನ್ಯುವಲ್ ಪ್ರಕಾರ ಪೊಲೀಸರು ಯಾವಾಗಲೂ ಆನ್‌ಡ್ಯುಟಿಯೇ. ಯಾವಾಗ ಕರೆದರೂ ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲ ಅಂದರೆ ಅಶಿಸ್ತು ಎಂದೇ ಪರಿಗಣಿಸಲ್ಪಡುತ್ತದೆ. ಹಾಗಂತ ವಾರಕ್ಕೊಂದು ರಜೆಯೂ ಇಲ್ಲದೇ ದುಡಿಯುವುದು ಸಾಧ್ಯವೇ? ಇತ್ತೀಚಿನವರೆಗೂ ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದ್ದಕ್ಕೆ ದಿನಕ್ಕೆ 50 ರೂ. ಇತ್ತು! ಈಗ 200 ರೂಪಾಯಿಗೆ ಏರಿಸಿದ್ದಾರೆ. ಒಬ್ಬ ಕೂಲಿ ಕಾರ್ಮಿಕನಿಗಿಂತಲೂ ಕಡೆಯಾಯಿತೆ ಕಾನ್‌ಸ್ಟೆಬಲ್‌ಗಳ ಕಿಮ್ಮತ್ತು? ರಜೆ ಕೊಡುವುದಿಲ್ಲ ಅಂತ ಸಬ್ಇನ್‌ಸ್ಟೆಕ್ಟರ್, ಇನ್‌ಸ್ಪೆಕ್ಟರ್ ಅಥವಾ ಮೇಲಧಿಕಾರಿಗಳನ್ನು ದೂರಿಯೂ ಪ್ರಯೋಜನವಿಲ್ಲ. ಇಷ್ಟಕ್ಕೂ 6 ಕೋಟಿ ಜನಸಂಖ್ಯೆಯಿರುವ ಕರ್ನಾಟಕದಲ್ಲಿರುವ ಪೊಲೀಸರ ಸಂಖ್ಯೆಯೆಷ್ಟು? ಒಂದು ಲಕ್ಷ ಮೀರುವುದಿಲ್ಲ. ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ 150-200 ಜನರಿಗೆ ಒಬ್ಬ ಪೊಲೀಸ್ ಇರಬೇಕು. ನಮ್ಮ ರಾಜ್ಯದಲ್ಲಿ 700-800 ಜನರಿಗೆ ಒಬ್ಬ ಪೊಲೀಸ್ ಇದ್ದಾರೆ.
ಉಳಿದೆಡೆಗೆ ಹೋಲಿಸಿದರೆ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸ್ ಬಲ ಉತ್ತಮವಾಗಿದೆ. ಆದರೂ ಶೇ.20ರಷ್ಟು ಕೊರತೆ ಇದೆ. ಉಳಿದ ಪ್ರದೇಶಗಳಲ್ಲಿ ಈ ಕೊರತೆ ಇನ್ನೂ ಹೆಚ್ಚಿದೆ. ಪ್ರತಿ ಸ್ಟೇಷನ್‌ನಲ್ಲಿ ಕನಿಷ್ಠ 35 ಜನ ಇರಬೇಕು, ಅದರಲ್ಲಿ 30 ಪರ್ಸೆಂಟ್ ಮಹಿಳೆಯರಿರಬೇಕು ಎಂಬುದು ನಾಲ್ಕನೇ ಪೊಲೀಸ್ ಆಯೋಗದ ಪ್ರಮುಖ ಶಿಫಾರಸು. ಆದರೆ 35 ಪೊಲೀಸರಿರುವ ಎಷ್ಟು ಸ್ಟೇಷನ್‌ಗಳಿವೆ ಹೇಳಿ? ಪ್ರತಿವರ್ಷವೂ ಪೊಲೀಸ್ ನೇಮಕಾತಿ ನಡೆಯಬೇಕೆಂದೂ ಹೇಳಿದೆ. ಆದರೆ ಅದು ಬಿಜೆಪಿ ಇರಬಹುದು, ಕಾಂಗ್ರೆಸ್ ಆಗಿರಬಹುದು ಯಾವ ಪಕ್ಷಗಳು ತಾನೇ ಪೊಲೀಸರ ಬಗ್ಗೆ ಸಂವೇದನೆ, ಅಂತಃಕರಣ ತೋರಿದ್ದಾರೆ?


ಈಗಲಾದರೂ ಪೊಲೀಸ್ ಸುಧಾರಣೆಗಳನ್ನು ತರುವುದೇ ಸಮಸ್ಯೆಯ ಪರಿಹಾರಕ್ಕೆ ಯೋಗ್ಯ ಮಾರ್ಗ. ಆ ಮೂಲಕ ಸಿಬ್ಬಂದಿ ಕೊರತೆ ನೀಗಿಸಿ ಪ್ರತಿಯೊಬ್ಬ ಪೇದೆಗೂ ದಿನಕ್ಕೆ 8 ತಾಸು ಕೆಲಸ, ವಾರಕ್ಕೊಂದು ರಜೆ ಸಿಗುವಂತೆ, ಅನಿವಾರ್ಯ ಪರಿಸ್ಥಿತಿಯಲ್ಲಿ ತುರ್ತು ರಜೆ ದೊರೆಯುವಂತೆ ಮಾಡಬೇಕು. ಅವರ ಮಕ್ಕಳಿಗೆ ಉಚಿತ ಅಥವಾ ರಿಯಾಯಿತಿ ಶಿಕ್ಷಣ, ಪ್ರವಾಸ ರಜೆ ಹಾಗೂ ಭತ್ಯೆ ನೀಡಬೇಕು. ಎಂಪ್ಲಾಯಿ ಬೆನಿಫಿಟ್ ಎಲ್ಲವೂ ಅವರಿಗೆ ಸಿಗಬೇಕು. ಸುಲಭ ಸಾಲ ಹಾಗೂ ಎಲ್ಲ ಪೊಲೀಸರಿಗೂ ವಸತಿ ಕೊಡಬೇಕು, ವರ್ಗಾವಣೆಯಲ್ಲಿ ಪ್ರಭಾವ ಇರಬಾರದು, ಮೆರಿಟ್‌ಗೆ ಮಾತ್ರ ಬೆಲೆ ಎನ್ನುವಂತಾಗಬೇಕು. ಇದೆಲ್ಲ ಮಾಡಿದಾಗ ನಮ್ಮ ಸಮಾಜಕ್ಕೆ ಒಳ್ಳೆಯ ಭದ್ರತೆಯೂ ಸಿಗುತ್ತದೆ. ನಾನು ದುಡಿದರೆ ನನ್ನ ಭವಿಷ್ಯಕ್ಕೇ ಒಳ್ಳೆಯದಾಗುತ್ತದೆ, ಪ್ರಮೋಷನ್ ಸಿಗುತ್ತದೆ, ಕೆಲಸಕ್ಕೆ ಮನ್ನಣೆ, ಪ್ರತಿಫಲ ಸಿಗುತ್ತದೆ ಎಂದರೆ ಎಲ್ಲರು ಚೆನ್ನಾಗಿಯೂ ಕರ್ತವ್ಯ ನಿರ್ವಹಿಸುತ್ತಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಸಮಾಜದಲ್ಲಿ ಯಾವುದೇ ಅಹಿತರ ಘಟನೆಗಳು ನಡೆದರೂ ಅದನ್ನು ತಡೆಯಲು, ನಿಯಂತ್ರಿಸಲು ಮೊದಲು ಮುಂದಾಗುವವರು ಕಾನ್‌ಸ್ಟೆಬಲ್‌ಗಳೇ. ಗೂಡಂಗಡಿಯೋ, ತಳ್ಳುಗಾಡಿಯೋ, ಟೀಸ್ಟಾಲ್ ಬಳಿಯೋ ನಿಂತು ಕಳ್ಳಕಾಕರು, ಸಮಾಜಘಾತುಕ ಶಕ್ತಿಗಳ ಬಗ್ಗೆ ಮಾಹಿತಿ ಕಲೆಹಾಕುವವರು ಇವರೇ. ಪ್ರತಿಯೊಬ್ಬ ಜನಪ್ರತಿನಿಧಿಗೂ ಭದ್ರತೆ ಒದಗಿಸುವ ಗನ್‌ಮ್ಯಾನ್‌ಗಳು ಕೂಡ ಕಾನ್‌ಸ್ಟೆಬಲ್‌ಗಳೇ ಅಗಿರುತ್ತಾರೆ. ನಿಮ್ಮ ಮನೆಕಾಯುವವರು, ಹೋದಲೆಲ್ಲ ನಿಮ್ಮನ್ನು ಹಿಂಬಾಲಿಸಿ ಭದ್ರತೆ ಕೊಡುವವರೂ ಅವರೇ. ಅವರಿಗೂ ಒಳ್ಳೆಯ ಬದುಕು ನಡೆಸುವ ಅರ್ಹತೆ ಇದೆ. ಒಬ್ಬ ಕಾನ್‌ಸ್ಟೆಬಲ್‌ಗೂ ತನ್ನ ಮಗ, ಮಗಳನ್ನು ಒಳ್ಳೆಯ ಸ್ಕೂಲಿಗೆ ಸೇರಿಸಬೇಕು ಅನ್ನೋ ಆಸೆ ಇರುವುದಿಲ್ಲವಾ? ಯೋಚಿಸಿ…

police

 •  0 comments  •  flag
Share on Twitter
Published on May 28, 2016 04:47
No comments have been added yet.


Pratap Simha's Blog

Pratap Simha
Pratap Simha isn't a Goodreads Author (yet), but they do have a blog, so here are some recent posts imported from their feed.
Follow Pratap Simha's blog with rss.