ಒಂದೊಳ್ಳೆ ಪುಸ್ತಕ ಕೊಡುವ ಖುಷಿ ಅಷ್ಟಿಷ್ಟಲ್ಲ. ಈ ಪುಸ್ತಕ ಮುಗಿದಾಗ ಆವರಿಸುವ ತಂಪು, ಮನಸ್ಸಿಗೆ ಆಗುವ ಮುದ ಓದಿಯೇ ಅನುಭವಿಸಬೇಕು. ಹಾಗಂತ ಕಾದಂಬರಿ ಪೂರ್ತಿ ಸಂತಸದ ಬುಗ್ಗೆಯ? ಏನಲ್ಲ. ನೇಮ, ನಿಷ್ಠೆಯಿಂದ, ಕರ್ತವ್ಯ ಪರತೆಯಿಂದ ತನ್ನ ಪಾಲಿನ ಕರ್ಮವನ್ನು ಮುಗಿಸಿ ಇಹ ಲೋಕ ತ್ಯಜಿಸಿದ ವಾಸುದೇವಾಚಾರ್ಯ ಪಂತ ಎನ್ನುವ ಒಬ್ಬರ ಜೀವನದ ಕಥೆ, ಆಂತರ್ಯದ ಕಥೆ, ನಮ್ಮ ನಿಮ್ಮೆಲ್ಲರ ಕಥೆ.
ಮೊದಲನೆಯದಾಗಿ ಹಿಡಿಸಿದ್ದು ಕಥೆ ಹೇಳಿದ ಭಾಷೆ ಪೂರ್ತ ನಮ್ಮ ಧಾರವಾಡದ ಭಾಷೆ, ಭಾಳ ಜನಕ್ಕ ಈ ಕಡಿ ದಕ್ಷಿಣದ ಮಂದಿಗಿ ತಿಳಿಯಂಗಿಲ್ಲ, ಆದರೆ ನನಗ ಭಾಳ ಅಂದರೆ ಭಾಳ ಸೇರ್ತು.
1857 ರ ಸಿಪಾಯಿ ದಂಗೆಯ ಕಾಲದಲ್ಲಿ ಪಾಟ್ನಾದ ನಾನಾ ಸಾಹೇಬರು ಕಳುಹಿಸಿದ ವಾರ್ತೆಯನ್ನು ನರಗುಂದದ ಬಾಬಾ ಸಾಹೇಬರಿಗೆ ಮುಟ್ಟಿಸಲು ಬರುವ ಇಬ್ಬರು ಬ್ರಾಹ್ಮಣ ಅಣ್ಣ ತಮ್ಮಂದಿರು - ಕಮಲನಾಭ ಪಂತ - ಪದ್ಮನಾಭ ಪಂತ. ನವಲಗುಂದದ ದೇಸಾಯರ ಕೈಸೆರೆಯಾಗಿ, ಪಿಂಡಾರಿಗಳೇನೋ ಎಂಬ ಅನುಮಾನದಿಂದ ಶುರುವಾಗಿ, ಪದ್ಮನಾಭ ಪಂತ ತಪ್ಪಿಸಿಕೊಂಡು ಓಡಿಹೋಗಿ ನರಗುಂದದ ದಂಗೆಯಲ್ಲಿ ಬಲಿಯಾಗಿ ವೈದ್ಯನಾದ ಕಮಲನಾಥ್ ಪಂತ ನವಲಗುಂದದಲ್ಲಿ ದೇಸಾಯರ ಆರೈಕೆಗೆ ನಿಂತು, ಕಮಲಯ್ಯನಾಗಿ ಮುಂದೆ ಸಾವಿತ್ರಿ ಬಾಯಿ ಎಂಬ ಮಾಧ್ವ ಹುಡುಗಿಯನ್ನು ಮದುವೆಯಾಗಿ ಕಮಲಾಚಾರ್ ಪಂತ ಆದರು. ಅವರ ಮಗನೇ ಈ ವಾಸುದೇವಾಚಾರ್ಯ ಪಂತ, ಅವರ ವಂಶ ವೃಕ್ಷದ ಕಥೆಯೇ ಈ 'ಹಳ್ಳ ಬಂತು ಹಳ್ಳ'.
ಕಮಲಯ್ಯ ಮತ್ತು ಸಾವಿತ್ರಿ ಬಾಯಿಯ ಮಕ್ಕಳಾದ ವಾಸುದೇವ - ವಾಸಣ್ಣ, ವೆಂಕಟ - ವೆಂಕಣ್ಣ ಮತ್ತು ಅಂಬಕ್ಕ. ಬಾಲ ವಿಧವೆಯಾಗಿ ಮಡಿಯಾಗಿ ತವರು ಸೇರುವ ಅಂಬಕ್ಕ , ಮೂರು ಮಕ್ಕಳ ನಂತರ ಹೆಂಡತಿಯನ್ನು ಕಳಕೊಂಡು ವಿದುರನಾಗುವ ವೆಂಕಣ್ಣ, ಮನೆಗೆಲ್ಲ ಹಿರಿಯರಾಗಿ ಕಾಕಾ ಮತ್ತು ಅವ್ವ ಆಗುವ ವಾಸುದೇವಾಚಾರ್ಯ ಮತ್ತು ಧರ್ಮ ಪತ್ನಿ ತುಳಸಕ್ಕ.
ಇವರ ವಂಶವೃಕ್ಷದ ಜೊತೆಗೆ ಹರಿದು ಬರುವ ದೇಶದಲ್ಲಾಗುವ ಬದಲಾವಣೆಗಳು, ಅಸಹಕಾರ ಚಳುವಳಿ, ಬಾಲಗಂಗಾಧರ ತಿಲಕರ, ನೆಹರೂ, ಗಾಂಧಿ, ಬೋಸರ ಕಾಲ.. ಕ್ವಿಟ್ ಇಂಡಿಯಾ ಚಳುವಳಿ, ಕೊನೆಗೆ ಹಣ್ಣು ಹಣ್ಣು ವಾಸುದೇವಾಚಾರ್ಯರೂ ಸಹ ನೋಡುವ ಸ್ವಾತಂತ್ರ್ಯ ಸಂಭ್ರಮ.
ನಂತರ ಕಾಡುವ ಗಂಟಲಿನ ಕ್ಯಾನ್ಸರ್.. ಅಂತರ್ಮುಖಿಯಾಗಿ ತಮ್ಮ ಇಡೀ ಜೀವನವನ್ನು ಒಮ್ಮೆ ಮೌನವಾಗಿ ಅವಲೋಕನ ಮಾಡಿಕೊಳ್ಳುವ ವಾಸುದೇವಾಚಾರ್ಯರು. ತಮ್ಮ ಇಡೀ ಜೀವನವನ್ನು ಜತನದಿಂದ ಶಿಸ್ತಿನಿಂದ ಇದ್ದರೂ ದುಷ್ಟನಾದ ಮಗ ಬೋಧರಾಯ, ಸ್ವಾತಂತ್ರ್ಯ ಸಂಗ್ರಾಮದ ಜ್ವಾಲೆಗೆ ಆಹುತಿಯಾಗುವ ಇನ್ನೊಬ್ಬ ಮಗ ರಾಮಚಂದ್ರ, 12 ನೆ ವಯಸ್ಸಿಗೆ ಗಂಡನ ಮನೆ ಸೇರಿದ 10ತಿಂಗಳಿಗೆ ಅತ್ತೆ ಮನೆಯವರು ಬಾವಿಗೆ ನೂಕಿ ಕೊಂದ ಮಗಳು ಸೋನಕ್ಕ. ಪ್ಲೇಗ್ ಮಾರಿಗೆ ಬಲಿಯಾದ ತಮ್ಮ ವೆಂಕಣ್ಣ, ಮನೆ ತುಂಬಾ ತಿನ್ನುವ ಬಾಯಿಗಳು ಏಕೈಕ ಆಸರೆ ವಾಸಣ್ಣಾ.
ಕಂಗೆಟ್ಟಾಗ ಮೊರೆ ಹೋಗುವ ಕುಲದೈವ ಲಕ್ಷ್ಮಿ ನರಸಿಂಹ, ಅವರ ಆತ್ಮ ಸಂಗಾತಿ ಮಾರುತಿ ರಾಯ, ಸ್ನೇಹಿತ, ಹಿತೈಷಿಗಳಾದ ಅಪಾವರು, ನಿಷ್ಠೆಯಿಂದ ಯಾರಿಂದಲೂ ಒಂದು ರೂಪಾಯಿ ತೆಗೆದುಕೊಳ್ಳದೆ ಮಾಡಿದ ವೈದ್ಯ ವೃತ್ತಿ ಈ ಎಲ್ಲವನ್ನೂ ನೆನೆಯುತ್ತಾ, ಕೊನೆಯ ದಿನ ಮನೆಯ ಎಲ್ಲ ದೇವರ ದರ್ಶನ ಮಾಡುತ್ತಾ - ಲಕ್ಷ್ಮಿ ನರಸಿಂಹ, ಶ್ರೀ ಮಠದ ಸ್ವಾಮಿಗಳು ನೀಡಿದ ಕೃಷ್ಣನ ಮೂರ್ತಿ, ಮನೆಯಲ್ಲಿರುವ ಮೂರು ಸಾಲಿಗ್ರಾಮ, ರಾಯರ ಬೃಂದಾವನ - ಎಲ್ಲ ನೋಡಿ ಕಣ್ತುಂಬಿಕೊಂಡು ಏಕಾದಶಿಯ ದಿನ ಬೆಳಗ್ಗೆ ಅವರ ಇಷ್ಟ ದೈವ ಮಾರುತಿರಾಯ ಅವರನ್ನು ಭೂ ಲೋಕದಿಂದ ಕರೆದುಕೊಂಡು ಹೋಗುತ್ತಾನೆ. ಇಡೀ ಊರಿಗೆ ಊರು, ಪಕ್ಕದ ಊರಿನ ಜನರು, ಜಾತಿ, ಮತ, ಧರ್ಮದ ಯಾವ ಹಂಗಿಲ್ಲದೆ ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತದೆ.
ವಂಶದ ಕವಲುಗಳು ಬೆಳೆಯುತ್ತಾ ಧಾರವಾಡ, ಮುಂಬೈ, ಮೀರಜ್ ಇಲ್ಲೆಲ್ಲಾ ಕಡೆ ಬೆಳೆದು ಬೇರು ಬಿಡುವುದು. ಅಂತರ್ಜಾತೀಯ ಮದುವೆಗಳು, ಕನ್ನಡ - ಮರಾಠಿ ಭಾಷೆಯ ತಿಕ್ಕಾಟ, ಸಂಪ್ರದಾಯ - ಆಚರಣೆಗಳ ಹಿಂದೆ ಇರುವ ನಿಷ್ಠೆ - ನೋವು, ಆದರ, ಹವಣಿಕೆ, ಎಲ್ಲವೂ ಲೇಖಕರು ಅತ್ಯದ್ಭುತವಾಗಿ ನಿರೂಪಿಸಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಕೃತಿ. ಎಲ್ಲರೂ ಓದಲೇ ಬೇಕಾದ ಕೃತಿ. ಓದು ಸಂಪನ್ನವಾದಾಗ ಆಗುವ ಖುಷಿ ಅನುಭವಿಸಿಯೇ ತಿಳಿಯಬೇಕು!