'ತಳುಕು ರಾಮಸ್ವಾಮಯ್ಯ ಸುಬ್ಬರಾಯ' ಅವರು ಕನ್ನಡದ ಮೊದಲ ಪ್ರಾಧ್ಯಾಪಕರಾದ ತಳುಕಿನ ವೆಂಕಣ್ಣಯ್ಯನವರ ತಮ್ಮನವರ ಮಗ. ಇವರು ಹುಟ್ಟಿದ್ದು ೧೯೧೯ರಲ್ಲಿ. ಅವರು ಬರೆದ 'ನಾಗರಹಾವು' ಕಾದಂಬರಿಯಲ್ಲಿನ ರಾಮಾಚಾರಿಯ ಪಾತ್ರದಂತೆಯೇ ಅವರು ಛಲದ ಮನುಷ್ಯರಾಗಿದ್ದವರು. ಬಹಳ ಕಷ್ಟದಲ್ಲಿ ಜೀವಿಸಿದವರು. ಇವರ ಕೃತಿಗಳಾದ ಕಂಬನಿಯ ಕುಯಿಲು, ರಕ್ತರಾತ್ರಿ, ಮತ್ತು ತಿರುಗುಬಾಣ, ಚಿತ್ರದುರ್ಗದ ಇತಿಹಾಸವನ್ನು ಬಹಳ ರಸವತ್ತಾಗಿ ಚಿತ್ರಿಸಿವೆ ಎಂದು ವಿಮರ್ಶಕರ ಅಭಿಪ್ರಾಯ. ಏಪ್ರಿಲ್ ೧೦, ೧೯೮೪ರಲ್ಲಿ ಹೃದಯಾಘಾತವಾಗಿ ಬೆಂಗಳೂರಿನ ರಾಜಾಜಿನಗರದಲ್ಲಿರುವ 'ವರಲಕ್ಷ್ಮಿ ನರ್ಸಿಂಗ್ ಹೋಂ'ನಲ್ಲಿ ನಿಧನ ಹೊಂದಿದರು.
ತರಾಸು ಅವರ ಮತ್ತೊಂದು ದುರಂತಕರ ಕಥೆ. ತರಾಸು ಅವರ ಕಾದಂಬರಿಗಳನ್ನು ಜನರು ಓದುವುದು ಅವರ ಬರವಣಿಗೆ ಮತ್ತು ಅವರು ಹೆಣೆಯುವ ಕಥೆಗೆ. ಪುಸ್ತಕದಲ್ಲಿಯ ಸಂಭಾಷಣೆಗಳು ನೇರವಾಗಿ ಎದೆಗೆ ನಾಟುತ್ತವೆ. ಸಾಕುಮಗಳು ಪುಸ್ತಕದಲ್ಲಿ ಎಲ್ಲೋ ಹುಟ್ಟಿ ಎಲ್ಲೋ ಬೆಳೆದ ಎರಡು ಹೆಣ್ಣುಮಕ್ಕಳ ದುಃಖಕರವಾದ ಕಥೆಗಳಿವೆ. ನಾಗಮ್ಮ ಮತ್ತು ಅವಳ ಮಗಳು ಲಕ್ಷ್ಮಿ ನತದೃಷ್ಟ ಹೆಣ್ಣುಗಳು ಜೀವನಪರ್ಯಂತ ಅನಿಷ್ಟಗಳು ಎಂಬ ಪಟ್ಟವನ್ನು ಹಣೆಗಿಟ್ಟುಕೊಂಡು ತಮ್ಮ ಜೀವನವನ್ನು ಮುಗಿಸಿದವರು. ನಾಗಮ್ಮನಿಗೆ ತನ್ನ ತಂದೆತಾಯಿ ಯಾರು ಎಂಬುದೇ ನೆನಪಿಲ್ಲ. ಎಲ್ಲೋ ಬೆಳೆದು ಹನುಮಕ್ಕಳ ಪಾಲಿಗೆ ಮಗಳಂತೆ ಬರುತ್ತಾಳೆ. ಆದರೆ ಆಕಸ್ಮಿಕವಾಗಿ ಹನುಮಕ್ಕ ಸತ್ತುಹೋದಳು. ಅಂದಿನಿಂದ ನಾಗಮ್ಮಳಿಗೆ ಅನಿಷ್ಟ ಮುಖ ಅಂತ ಹೆಸರೊಂದು ಸಿದ್ಧವಾಯಿತು. ಅವಳು ಹೋದಲ್ಲೆಲ್ಲಾ ಅನಿಷ್ಟಮುಂಡೆ ಅಂತ ಜನರು ನಿರ್ದಯೆಯಿಂದ ಅವಳನ್ನು ಕೂಗಲು ಪ್ರಾರಂಭಿಸಿದರು. ಭಿಕ್ಷೆಕರಿಗೆ ಅನ್ನ ಹಾಕುವುದು ಗೌಡರ ಮನೆತನ ಸಂಪ್ರದಾಯ. ಒಂದು ದಿನ ಗೌಡರ ಸೊಸೆ ನೀಲಮ್ಮ ಅನ್ನ ಹಾಕುವಾಗ ನಾಗಮ್ಮಳನ್ನು ನೋಡುತ್ತಾಳೆ. ಅವಳಿಗೆ ಊಟಕ್ಕೆ ಹಾಕಿಯಾದಮೇಲೂ ಅವಳ ಕಡೆ ಯಾವುದೋ ಒಂದು ಪಾಶ ಎಳೆಯಲ್ಪಡುತ್ತದೆ. ಅತ್ತೆಯಿಂದ ನಾಗಮ್ಮಳ ಪೂರ್ವ ವೃತ್ತಾಂತ ತಿಳಿದಬಳಿಕವೂ ಅವಳನ್ನು ಮನೆಯಲ್ಲಿ ಉಳಿಸುವ ಯೋಚನೆಯನ್ನು ತನ್ನ ಅತ್ತೆಯ ಮುಂದೆ ಇಡುತ್ತಾಳೆ. ಅತ್ತೆಗೆ ಮನಸ್ಸಿಲ್ಲದಿದ್ದರೂ ಗೌಡರ ಮನವೊಲಿಸಿ ನಾಗಮ್ಮಳಿಗೆ ಮನೆಯಲ್ಲಿ ಜಾಗ ಕೊಡುತ್ತಾರೆ. ಮನಸ್ಸಿನಲ್ಲಿ ಅಷ್ಟೋ ಇಷ್ಟೊ ಇದ್ದ ಅಸಮಾಧಾನ ನಿಧಾನವಾಗಿ ಇಳಿಮುಖವಾಗಿ ನಾಗಮ್ಮ ನಾಗಿಯಾಗಿ ಮನೆಯಲ್ಲಿ ಎಲ್ಲ ಕೆಲಸಗಳಿಗೆ ಬೇಕಾಗುವವಳಾಗುತ್ತಾಳೆ. ದಿನ ಕಳೆದಂತೆ ನಾಗಮ್ಮ ದೊಡ್ಡವಳಾಗಿ ಜನರ ಕಣ್ಣು ಕುಕ್ಕುವಷ್ಟು ಸೌಂದರ್ಯವನ್ನು ಪಡೆಯುತ್ತಾಳೆ, ಆ ಜನರಲ್ಲಿ ನೀಲಮ್ಮನ ಗಂಡ ಚೆನ್ನಬಸವಣ್ಣನೂ ಒಬ್ಬ. ನೀಲಮ್ಮ ಮನೆಯಲ್ಲಿರದ ಸಮಯವನ್ನು ಸಾಧಿಸಿ ನಾಗಮ್ಮ ತನ್ನ ಕಾಮದ ಸಂತೃಪ್ತಿಗೋಸ್ಕರ ಬೆದರಿಕೆ ಹಾಕಿ ಉಪಯೋಗಿಸುತ್ತಾನೆ.
ಅದು ಹೇಗೋ ನೀಳಮ್ಮಳಿಗೆ ತಿಳಿದು ನಾಗಮ್ಮಳೇ ಅದಕ್ಕೆ ಕಾರಣವೆಂದು ತಿಳಿದು ಅವಳನ್ನು ಮನೆ ಬಿಟ್ಟು ಓಡಿಸುತ್ತಾಳೆ. ನಾಗಮ್ಮ ಮುಂದೆ ಹನುಮಕ್ಕನ ಗುಡಿಸಲಿಗೆ ಬಂದು ತನ್ನ ಹಳೆಯ ಜೀವನವನ್ನು ಮುಂದುವರೆಸುತ್ತಾಳೆ. ಅತ್ತ ಆ ಕಡೆ ನೀಲಮ್ಮ ಸತ್ಯವನ್ನು ತಿಳಿದು ಸಹಿಸಲಾರದೇ ಬಾವಿಗೆ ಬಿದ್ದು ಪ್ರಾಣವನ್ನು ಬಿಡುತ್ತಾಳೆ.
ಇತ್ತ ನಾಗಮ್ಮ ಜನರ ಹರಕುಬಾಯಿಯಿಂದ ನೊಂದು ದಿನ ಕಳೆದಂತೆ ಕ್ಷೀಣಿಸುತ್ತ ಹೋಗುತ್ತಾಳೆ. ಅವಳ ಕೊನೆಘಳಿಗೆಯಲ್ಲಿ ಬರಿವವರು ಪಂಡಿತರು. ಪಂಡಿತರು ನಾಲ್ಕು ಊರಿಗೆ ಬೇಕಾದ ಪ್ರಮುಖ ವ್ಯಕ್ತಿ. ತಂದೆಯಿಂದ ರಕ್ತಗತವಾಗಿ ಬಂದ ನಾಟಿ ವೈದ್ಯಕೀಯವನ್ನು ನಡೆಸಿಕೊಂಡು ಬಂದವರು. ಅವರಿಗೆ ಸುಂದರಮ್ಮ ಅಂತ ಹೆಂಡತಿ, ಹೆಸರಿಗೆ ಮಾತ್ರ ಸುಂದ್ರಮ್ಮ ಆದರೆ ಮನಸ್ಸಿನಲ್ಲಿ ಬರೀ ಹುಳುಕು. ಅದೇ ಅವಳ ಮಗಳು ರಾಧೆಗೂ ಮುಂದುವರೆಯಲ್ಪಟ್ಟಿತ್ತು. ಒಂದು ರಾತ್ರಿ ತುರ್ತಾಗಿ ನಾಗಮ್ಮನ ಅರೋಗ್ಯ ಕೆಟ್ಟು ಅವಳ ಕೊನೆಸಮಯದಲ್ಲಿ ಪಂಡಿತರು ಹೋದಾಗ ಅವಳು ಅವರಿಗೆ ಮಹೋತ್ತರವಾದ ಜವಾಬ್ದಾರಿ ನೀಡುತ್ತಾಳೆ - ತನ್ನ ಮಗಳು ಲಕ್ಷ್ಮಿಯನ್ನು ನೋಡಿಕೊಳ್ಳುವುದು. ಸುಂದರಮ್ಮ ಏನು ಹೇಳುವಳೋ ಎನ್ನೋ ಹೆದರಿಕೆಯಲ್ಲಿ ಪಂಡಿತರು ಅವಳನ್ನು ಮನೆಗೆ ಕರೆತಂದಾಗ ಸುಂದರಮ್ಮ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ, ಬದಲಿಗೆ ಲಕ್ಷ್ಮಿಯನ್ನು ಚೆನ್ನಾಗಿ ಸಾಕುತ್ತಾಳೆ. ಆದರೆ ರಾಧೇಯ ಆಗಮನ ನಂತರ ಅವಳ ಮೇಲೆ ವಿಷ ಕಾರಲು ಪ್ರಾರಂಭಿಸುತ್ತಾಳೆ. ಅದು ಯಾವ ಮಟ್ಟಕ್ಕೆ ಹೋಗುತ್ತದೆಂದರೆ ಲಕ್ಷ್ಮಿಗಾಗಿ ಇಬ್ಬರೂ ಒಂದೇ ಮನೆಯಲ್ಲಿ ಬೇರೆಯಾಗುತ್ತಾರೆ.
ಅದು ಹೊರಗಿನವರಿಗೆ ತಿಳಿದು ಇಲ್ಲದ ಕಥೆಯನ್ನು ತಾವೇ ರಚಿಸಿ ಊರತುಂಬಾ ಡಂಗುರ ಸಾರುತ್ತಾರೆ. ಇದು ಪಂಡಿತರ ಕಿವಿಮೇಲೆ ಬಿದ್ದು ಕೊನೆಗೆ ಲಕ್ಷ್ಮಿಗೆ ವಿಷ ನೀಡಿ ತಾವೂ ವಿಶಾಪ್ರಾಷನ ಮಾಡಿ ಕೊನೆಯುಸಿರೆಳೆಯುತ್ತಾರೆ.
ಸಮಾಜದಲ್ಲಿ ಒಂದು ಹೆಣ್ಣು ಒಂದು ಗಂಡು ಒಂದೇ ಜಾಗದಲ್ಲಿ ಇದ್ದರೆ ಎಷ್ಟೋ ಕಲ್ಪನಾರಚನೆಯನ್ನು ಅಲ್ಲಿಯ ಸುತ್ತಮುತ್ತಲಿನ ಜನರು ಸೃಷ್ಟಿಸಬಲ್ಲರು. ಅದರಿಂದ ಆ ಜೀವಿಗಳ ಮೇಲೆ ಯಾವ ರೀತಿಯಾಗಿ ಪ್ರಭಾವಬೀರಬಹುದು ಎಂಬುದನ್ನು ತರಾಸು ಅವರು ಈ ಕಾದಂಬರಿಯ ಮುಖಾಂತರ ಹೇಳಲು ಪ್ರಯತ್ನಿಸಿದ್ದಾರೆ.