Jump to ratings and reviews
Rate this book

ಹಳೆಯಪಳೆಯ ಮುಖಗಳು

Rate this book
Collection of essays

Unknown Binding

Published January 1, 1985

8 people want to read

About the author

Goruru Ramaswamy Iyengar

26 books57 followers
ಗೊರೂರು ರಾಮಸ್ವಾಮಿ ಅಯ್ಯಂಗಾರ್(ಜುಲೈ ೪, ೧೯೦೪ - ಸೆಪ್ಟೆಂಬರ್ ೮, ೧೯೯೧) ತಮ್ಮ ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದವರು. ಸ್ವಾತಂತ್ರ್ಯ ಚಳುವಳಿ, ಮೈಸೂರಿನಲ್ಲಿ ಪ್ರಜಾ ಸರ್ಕಾರಕ್ಕಾಗಿ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಹೋರಾಡಿ ಹರಿಜನೋದ್ಧಾರ ಮತ್ತು ಗ್ರಾಮೊದ್ಧಾರಕ್ಕಾಗಿ ಶ್ರಮಿಸಿದ ಅವರೊಬ್ಬ ಅಪ್ರತಿಮ ಗಾಂಧಿವಾದಿ. ಗೊರೂರು ಗ್ರಾಮ, ಹೇಮಾವತಿ ನದಿ – ಈ ಎರಡೂ ಗೊರೂರರ ಸಾಹಿತ್ಯದಿಂದ ಅಮರವಾದವು. ‘ಹೇಮಾವತಿ’, ಆ ಸಾಹಿತ್ಯ ಸಮಸ್ತಕ್ಕೂ ಸ್ಪೂರ್ತಿ. ಹೀಗೆ ಒಂದು ಊರಿನೊಡನೆ, ನದಿಯೊಡನೆ ಅಭಿನ್ನತೆ ಸಾಧಿಸಿದ ಲೇಖಕರು ವಿರಳವೇ. ‘ಹಳ್ಳಿಯ ಚಿತ್ರಗಳು’, ‘ಗರುಡಗಂಬದ ದಾಸಯ್ಯ’, ‘ನಮ್ಮ ಊರಿನ ರಸಿಕರು’, ‘ಬೆಟ್ಟದ ಮನೆಯಲ್ಲಿ ಮತ್ತು ಇತರ ಪ್ರಬಂಧಗಳು’, ‘ಕಥೆಗಳು ಮತ್ತು ವಿನೋದ ಚಿತ್ರಗಳು’, ‘ಬೆಸ್ತರ ಕರಿಯ’, ‘ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು’ – ಈ ಸಂಕಲನಗಳಲ್ಲಿನ ಗೊರೂರರ ಪ್ರಬಂಧಗಳಲ್ಲಿ ಕಥಾಂಶ ದಟ್ಟವಾಗಿ ಸೇರಿಕೊಂಡಿವೆ. ಆದ್ದರಿಂದ ಗೊರೂರರ ಪ್ರಬಂಧಗಳು, ‘ಪ್ರಬಂಧ’ ಎಂಬ ಶಬ್ದದ ಸೀಮಿತ ಅರ್ಥಕ್ಕಿಂತ ಹೆಚ್ಚಿನ ವ್ಯಾಪ್ತಿಯುಳ್ಳದ್ದು ಎಂಬುದು ಗಮನಾರ್ಹ. ಗೊರೂರರ ಬರವಣಿಗೆ ಅಪರೂಪದ್ದು ಮತ್ತು ಅವರಿಗೇ ಅನುರೂಪವಾದದ್ದು. ಗೊರೂರರು ಸೆಪ್ಟೆಂಬರ್ 28, 1991ರಲ್ಲಿ ನಿಧನರಾದರು.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
6 (75%)
4 stars
1 (12%)
3 stars
1 (12%)
2 stars
0 (0%)
1 star
0 (0%)
Displaying 1 - 4 of 4 reviews
Profile Image for Prashanth Bhat.
2,237 reviews143 followers
February 15, 2018
ಹಳೆಯ ಪಳೆಯ ಮುಖಗಳು - ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್.
ಕನ್ನಡ ಸಾಹಿತ್ಯದಲ್ಲಿ ಪ್ರಾತಃ ಸ್ಮರಣೀಯರಾದ ಅನೇಕ ಸಾಹಿತಿಗಳಿದ್ದಾರೆ. ಗೊರೂರರು ಅದರಲ್ಲಿ ಪ್ರಮುಖ ಹೆಸರು. ಸಹೃದಯ ರಸಿಕ ಬರವಣಿಗೆ ಇವರ ಹೆಗ್ಗುರುತು. ನಮ್ಮ ಊರಿನ ರಸಿಕರು ಓದಿದವರಿಗೆ ಇದರ ಪರಿಚಯವಿದ್ದೀತು.
ಹಳೆಯ ಪಳೆಯ ಮುಖಗಳು 1979ರಲ್ಲಿ ಪ್ರಕಟವಾದ ಪ್ರಬಂಧ ಸಂಕಲನ. ಕಳೆದು ಹೋದ ನಮಗೆ ಅಪರಿಚಿತವಾದ ಕಾಲದ ಕುರಿತ ಮೆಲುಕು ಹಾಕುವಂತಹ ಅನೇಕ ಪ್ರಬಂಧಗಳು. ಈ ಪುಸ್ತಕ ಅನಾಮತ್ತಾಗಿ ನಮ್ಮನ್ನು ಆ ಕಾಲಕ್ಕೆ ಕರೆದೊಯ್ಯುತ್ತದೆ. ಎಂತಹ ಅದ್ಭುತ ಬರವಣಿಗೆ!.
ಶ್ಯಾನುಭೋಗ ಪ್ರಬಂಧದಲ್ಲಿ ಆ ಪದದ ಉಗಮ, ಸ್ಥಾನಮಾನ, ಆ ಹುದ್ದೆಗುರುವ ಗೌರವ ಇತ್ಯಾದಿಗಳ ಎಳೆಎಳೆಯಾಗಿ ಬಿಡಿಸಿ, ಸಂಪೂರ್ಣವಾಗಿ ನಮಗೆ ಶ್ಯಾನುಭೋಗತನದ ಪರಿಚಯ ಮಾಡಿಕೊಡುತ್ತಾರೆ.
ಗಾಂಪರೊಡೆಯರ ಜೈತ್ರಯಾತ್ರೆ ಹೆಸರೇ ಹೇಳುವಂತೆ ಗಾಂಪರ ಕತೆ.ನಕ್ಕು ಹೊಟ್ಟೆ ಹುಣ್ಣಾಗುವ ಪ್ರಸಂಗ.
ದ್ಯೂತ ಪ್ರಸಂಗ ಜೂಜಿನ ವಿನೋದ ಪ್ರಸಂಗಗಳ ಕುರಿತು, ಅದರ ಮಾಯಾಜಾಲದ ಕುರಿತೂ ಬರೆದ ಲೇಖನ.
ಅಂತರರಾಷ್ಟ್ರೀಯ ಮಹಿಳಾ ವರ್ಷವಂತೂ ಈಗಲೂ ಪ್ರಸ್ತುತವೆನಿಸುವ ಲೇಖನ.ಇದರಲ್ಲಿ ಬರುವ ತೇರುಬೀದಿ ಮಹಾಲಕ್ಷ್ಮಮ್ಮನವರ ಬದುಕಿನ ಬಗೆಯಂತೂ ಬರಿಯ ಮಹಿಳಾವಾದಕ್ಕಿಂತ ಹಿರಿಯದು ಅನಿಸುತ್ತದೆ.
ಒಂದು ಆದಿವಾಸಿಗಳ ಜಾನಪದ ಸಂಸ್ಕೃತಿ ಹೆಸರೇ ಹೇಳುವಂತೆ ಉತ್ತರ ಭಾರತದ ಛೋಟಾನಾಗಪುರದ ಗುಡ್ಡಗಾಡಿನ ಮುಂಡರೆಅಮಬ ಆದಿವಾಸಿ ಪಂಗಡಗಳ ಕುರಿತಾದ ಪ್ರಬಂಧ.
ಬಾಬ ಪ್ರಭಾವದಲ್ಲಿ ನಕಲಿ ಬಾಬಾಗಳ ,ಗುರುಗಳ ಹಿಂದೆ ಹೋಗಿ ಹಾಳಾದ ಒಬ್ಬನ ಕತೆಯಿದೆ.
ಗಾಂಧೀಜಿ ಸಾನ್ನಿಧ್ಯದಲ್ಲಿ ವಿನೋದ ನಿಮಿಷಗಳು ಗಾಂಧೀಜಿಯವರ ಹಾಸ್ಯಪ್ರಜ್ಞೆ ಯ ಪ್ರಸಂಗಗಳು.

ಸಂಚಾರಿ ಚಲನಚಿತ್ರಗಳು ,ಕಳೆದ ಕಾಲದ ಅಪೂರ್ವ ಸ್ಮೃತಿ.
ಒಂದು ಸಂಜೆ ಪ್ರಬಂಧ ಪ್ರಕಾರಕ್ಕೆ ಹೇಳಿಟ್ಟ ವರ್ಣನೆ
ವಿರೋಧಾಭಾಸ ,ಪುಟ್ಟದೊಂದು ಪ್ರಸಂಗ

ಬಿಂದಿಗಮ್ಮನ ಜಾತ್ರೆ, ಇದರಲ್ಲಿ ಜಾತ್ರೆಯ ವರ್ಣನೆ,ಕತೆ ಎಲ್ಲವೂ ಇದೆ.
ಯುಗಾದಿ, ಗುರು ಶಿಷ್ಯ ಪ್ರಶ್ನೋತ್ತರದ ಮೂಲಕದ ಮಾಹಿತಿ ಹಂಚಿಕೆ
ಐವತ್ತು ವರುಷಗಳಿಗೆ ಹಿಂದೆ ನೋಡಿದ ನಾಟಕಗಳು ಹಳೆಯ ನಾಟಕಗಳು ಅದರ ಕತೆ ಮತ್ತು ಅದಕ್ಕೆ ತಗಲುಹಾಕಿಕೊಂಡಿರುವ ನೆನಪುಗಳು.

ಸರಸೋಕ್ತಿಗಳು ರಸಭರಿತ ಉಕ್ತಿಗಳ ಸಂಗ್ರಹ,ವಿವರಣೆ

ಹಳೆ ಮೈಸೂರಿನ ಸಂಗೀತ ವೈಭವ - ಸಹೃದಯವಾಗಿ ಬರೆದ ಮೈಸೂರಿನ‌ ಸಂಗೀತಗಾರರ ಕುರಿತಾದ ಬರವಣಿಗೆ. ‌ಖುಷಿ ತರುವಂತಹದ್ದು.

ದಿ ವಿಲೇಜ್ ಪೋಸ್ಟ್ ಮ್ಯಾನ್ - ಅಂಚೆಯಣ್ಣನ‌‌ ಕತೆ.

ಇನ್ನು ಇಡೀ ಸಂಗ್ರಹಕ್ಕೆ ಕಲಶಪ್ರಾಯವಾದ ಪ್ರಬಂಧ ಕ್ಷೌರಸಂಹಿತೆ. ಲೇಖಕರ ಕ್ಷೌರದ ಅನುಭವಗಳು,ಕ್ಷೌರಿಕರ ಜೀವನ, ಆಗಿನ‌ಕಾಲದ ಕ್ಷೌರ ಉಪಕರಣಗಳು ಏನುಂಟು ಏನಿಲ್ಲ ಅನ್ನುವಂತಹ ಲೇಖನ



ಒಟ್ಟಾರೆ ಈ ಸಂಗ್ರಹ ಒಂದು ಚಿನ್ನದ ಗಟ್ಟಿ. ಹಳೆಯ ಕಾಲದ ಒಂಚೂರು ನಂಜಿಲ್ಲದ ಮನಸಿಗೆ ಹಿತ ತರುವ ವಿವಿಧ ವಿಷಯಗಳ ಕುರಿತಾದ ಪ್ರಬಂಧ ಸಂಕಲನ.

ಓದನ್ನು ಅಪೇಕ್ಷಿಸಿದಾಗ ಕಳುಹಿಸಿಕೊಟ್ಟ ರತ್ನಸಿಂಧು ಅವರಿಗೆ ಅನಂತ ಧನ್ಯವಾದಗಳು.
Profile Image for Karthikeya Bhat.
115 reviews17 followers
January 27, 2023
ಹಳೆಯಪಳೆಯ ಮುಖಗಳು
ಗೊರೂರು ರಾಮಸ್ವಾಮಿ ಅಯ್ಯಂಗಾರ್

*ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ*


೧೭ ಸಂಕಲನಗಳನ್ನು ಹೊಂದಿರುವ ಈ ಕೃತಿಯಲ್ಲಿ ಒಂದೊಂದು ಸಂಕಲನಗಳೂ ಅತ್ಯದ್ಭುತವಾಗಿವೆ. ಅದರಲ್ಲಿ ಬರುವ ಪಾತ್ರಗಳು ನಾವು ನೋಡಿರುವಂತವು ಹಾಗು ನೋಡುತ್ತಿರುವವೂ ಕೂಡ, ತಮ್ಮ ಜೀವನದಲ್ಲಿ ಆ ವ್ಯಕ್ತಿಗಳನ್ನು ಭೇಟಿಯಾದಾಗ ಅವರ ಜೀವನದಲ್ಲಾದ ಅನುಭವಗಳನ್ನು ಕೆಲವು ಕಡೆ ಹಾಸ್ಯಮಯವಾಗಿ, ಮತ್ತು ಕೆಲವುಕಡೆ ಮಾಹಿತಿಪೂರ್ಣವಾಗಿ ಆ ವ್ಯಕ್ತಿಗಳು ನಮ್ಮ ಜೀವನದಲ್ಲಿ ಹೇಗೆ ಪ್ರಭಾವ ಬೀರುವರೆಂದು ಸುಂದರವಾಗಿ ಚಿತ್ರಿಸಿದ್ದಾರೆ.

೧.ಶ್ಯಾನುಭೋಗ:
ಹಿಂದಿನ ಕಾಲದಲ್ಲಿ ಶ್ಯಾನುಭೋಗನು ಇಲ್ಲದ ಊರಿಲ್ಲ, ಊರಿನ ಎಲ್ಲಾ ಕೆಲಸಗಳಿಗೆ ಪ್ರತ್ಯಕ್ಷವಾಗಿ ಆತನ ಹೊಣೆಗಾರಿಕೆಗೆ ಸೇರಿದ್ದವು. ಸರ್ಕಾರದ ಹಾಗು ಜನರ ಎಲ್ಲಾ ಕೆಲಸಗಳಿಗೆ ಶ್ಯಾನುಭೋಗನು ಸಂಪರ್ಕಧಾರಿಯಾಗಿದ್ದನು. ಈತನು ಸರ್ಕಾರಕ್ಕೆ ಬರಬೇಕಾದ ಭೂಕಂದಾಯದ ಮತ್ತು ಇನ್ನಿತರೆ ಲೆಕ್ಕಗಳನ್ನು ಇಡುವ ವ್ಯಕ್ತಿಯಾಗಿದ್ದನು. ಕೆಲವು ಕಡೆ ಆತನನ್ನು ಶಾನಭಾಗ, ಶಾನಭಾವ,ಸೇನಭೋವ ಎಂದೂ ಕರೆಯುತ್ತಿದ್ದರು. ಗೊರೂರುರವರು ತಮ್ಮ ಜೀವನದಲ್ಲಿ ಒಳ್ಳೆಯ ಶ್ಯಾನುಭೋಗರನ್ನು ಹಾಗು ಕೆಟ್ಟ ಶ್ಯಾನುಭೋಗರನ್ನೂ ಕಂಡಿದ್ದು, ಕೆಲವು ಉದಾಹರಣೆಗಳ ಮೂಲಕ ಅವರ ಬಗ್ಗೆ ಚಿತ್ರಿಸಿದ್ದಾರೆ. ಬಾರಾನಮೂನೆ ಫಾರಂ ಎಂದರೇನು? ಅದರಲ್ಲಿ ಬರುವ ೧೨ ನಂಬರುಗಳ ಪಟ್ಟಿಯ ಕುರಿತು (ಖೇತ್ವಾರ್, ಪಹಣಿ, ಹುಲ್ಲುಬನ್ನಿ, ಖಾತೆ, ರೆಂಟ್ರೋಲ್, ಕಮ್ಮಿಜಾಸ್ತಿ, ತಕರಾರು ತಖ್ತೆ, ಇನಾಂ ರೆಜಿಷ್ಟರಿ, ಗೋಷ್ವಾರೆ,ಖಿರದಿ ಲೆಡ್ಜರ್) ಸವಿವರವಾಗಿ ವಿವರಿಸಿದ್ದಾರೆ. “ಹೊಟ್ಟೆಗಿಲ್ಲದ ಶ್ಯಾನುಭೋಗ ಹಳೆ ಕಡತ ಹುಡುಕಿದ” ಹಾಗು “ಟವಣೆ ಶ್ಯಾನುಭೋಗನ ಮಿಂಡ” ಹಾಗು “ಕತ್ತೆ ಚಿತ್ರಗಾರನ ಮಿಂಡ” ಎಂಬ ಆತನಿಗೆ ಸೇರಿದ ಗಾದೆಯ ಮಾತುಗಳನ್ನು ಹಾಸ್ಯಮಯವಾಗಿ ಚಿತ್ರಿಸಿದ್ದಾರೆ.

೨. ಗಾಂಪರೊಡೆಯರ ಜೈತ್ರಯಾತ್ರೆ:
ಒಮ್ಮೆ ಗುರುಗಳಾದ ಗಾಂಪರೊಡೆಯರಿಗೆ ತಾನು ಮೊದಲಿಗಿಂತ ಹೆಚ್ಚು ಗಾಂಪನಾಗುತ್ತಿರುವುದಾಗಿ ಯೋಚನೆಯಾಗುತ್ತದೆ, ಅದಕ್ಕೆ ಕಾರಣ ಅವರ ಶಿಷ್ಯರು ಮಾಡುವ ಕೆಲಸಗಳಿಂದ, ಉದಾಹರೆಣೆಗೆ: ಮಂಕ, ಮಡೆಯ, ಮಡ್ಡಿ, ಮುಟ್ಠಾಲ ಇವರು ಗುರುಗಳ ಶಿಷ್ಯರು. ಒಮ್ಮೆ ನಿದ್ದೆಯಿಂದ ಎದ್ದಾಗ ಶಿಷ್ಯರೆಲ್ಲಾ ನಮಸ್ಕಾರ ಮಾಡುತ್ತಿದ್ದುದು ಕಣ್ಣಿಗೆ ಬೀಳುತ್ತದೆ, ಅವರ ನಮಸ್ಕಾರ ವೇಗ ಹೆಚ್ಚುತ್ತಲೇ ಇತ್ತು, ಇನ್ನು ನಿಲ್ಲಿಸಿ ಎಂದು ಗುರುಗಳು ಹೇಳಿದಾಗ ಶಿಷ್ಯರು ಎಲ್ಲರಿಗೂ ಒಟ್ಟಿಗೆ ನಿಲ್ಲಿಸುವಂತೆ ಹೇಗೆ ಹೇಳಿದಿರಿ ಎಂದು ಪ್ರಶ್ನಿಸುತ್ತಾರೆ. ಮೊದಲು ಪ್ರಾರಂಭಿಸಿದುದು ನಾನು ಎಂದು ಮಡ್ಡಿ ಒಂದುಕಡೆ, ಮುಟ್ಠಾಲ ಒಂದುಕಡೆ . ಹೀಗೆ ಎಲ್ಲರೂ ನಾನು ನಾನು ಎಂದು ಕೂಗಿಕೊಳ್ಳಲು ಶುರುಮಾಡುತ್ತಾರೆ, ಇವರ ಈ ವರ್ತನೆಯಿಂದ ಗುರುಗಳಿಗೆ ಸಾಕಾಗಿಹೋಗುತ್ತದೆ. ಹೀಗೆ ಹಲವಾರು ಪ್ರಸಂಗಗಳನ್ನು ಹಾಸ್ಯಮಯವಾಗಿ ಚಿತ್ರಿಸಿದ್ದಾರೆ. ಕುದುರೆಯನ್ನು ಕಟ್ಟಿ ಬಸ್ಸಿನ ಮೇಲೆ ಶಿಷ್ಯರೆಲ್ಲರೂ ಸೇರಿ ಎತ್ತಿ ಹಿಡಿಯುವ ಪ್ರಸಂಗನ್ನು ಓದಿದರೆ ನಕ್ಕು ನಕ್ಕು ಸಾಕಾಗುತ್ತದೆ.

೩.ದ್ಯೂತ ಪ್ರಸಂಗ:
ಜೂಜು ಮಾನವನ ಮೂಲಭೂತ ಅದಮ್ಯ ಸ್ವಾಭಾವಗಳಲ್ಲಿ ಒಂದು, ಜೂಜು ಯಾರಿಗೂ ಹೆದರುವುದಿಲ್ಲ, ರಾಜನೂ ನಮಸ್ಕರಿಸುತ್ತಾನೆ, ಆ ಜೂಜು ಕಾಯಿಗಳಿಗೆ ಅಷ್ಟು ಶಕ್ತಿಯಿದೆ, ಅವಕ್ಕೆ ಕೈಗಳಿಲ್ಲದಿದ್ದರೂ ಕೈಗಳು ಇರುವವರನ್ನು ಅವು ಸೋಲಿಸುತ್ತವೆ, ಅವು ಶೀತಳವಾಗಿದ್ದರೂ ಎದೆಯನ್ನು ಸುಡುತ್ತವೆ. ಅಂದಿನ ಕಾಲದಲ್ಲಿ ಪುರುಷರು ಮದುವೆಗಳಿಗೋ, ರಥೋತ್ಸವಕ್ಕೊ, ನೆಂಟರ ಮನೆಗೆ ಹೋಗುವುದು ಜೂಜಿಗಾಗಿಯೇ, ಮದುವೆಯಲ್ಲಿ, ಧಾರೆ, ಮಾಂಗಲ್ಯಧಾರಣೆ ಯಾವುದೂ ಮುಖ್ಯವಲ್ಲ ಅವರಿಗೆ ಜೂಜೇ ಮುಖ್ಯ. ರಥೋತ್ಸವಕ್ಕೆಂದು ಹೋದರೂ ದೇವರನ್ನೂ ನೋಡುವುದಿಲ್ಲ, ರಥವನ್ನೂ ನೋಡಿರುವುದಿಲ್ಲ, ಅವರೆಲ್ಲರ ಗಮನವೂ ಜೂಜಿನಕಡೆಯೇ. ಹಾಗೆ ಜೂಜಾಡಿ ಪಣ ತೊಟ್ಟು ಹಣವನ್ನು ಕಳೆದುಕೊಂಡು ಕಷ್ಟಕ್ಕೆ ಒಳಗಾದ ತಮ್ಮ ಜೀವನದಲ್ಲಿ ಕಂಡ ವ್ಯಕ್ತಿಗಳನ್ನು ಕುರಿತು ಕೆಲವು ಕಡೆ ಹಾಸ್ಯಮಯವಾಗಿ ಮತ್ತೊಂದು ಕಡೆ ಅವರ ಸುಖ ದುಃಖಗಳನ್ನೂ ಚಿತ್ರಿಸಿದ್ದಾರೆ.

೪. ಒಂದು ಆದಿವಾಸಿಗಳ ಜಾನಪದ ಸಂಸ್ಕೃತಿ:
ಉತ್ತರ ಭಾರತದ ಛೋಟಾನಾಗಪುರದ ರಾಂಚಿ ಜಿಲ್ಲೆಯ ನಿವಾಸಿಗಳ ಪೈಕಿ ಮುಂಡರೆಂಬ ಒಂದು ಪಂಗಡವಿದೆ. ಇವರ ಸಂಖ್ಯೆ ಸಾವಿರ ವಿರಬಹುದು. ಅವರ ಭಾಷೆಗೆ ಲಿಪಿ ಇಲ್ಲ, ಆ ಭಾಷೆ ಹಿಂದೀ ಭಾಷೆಯ ಒಂದು ಅಂಶ ಮಾತ್ರ. ಅವರ ಜನಪದ ಕಥೆಗಳಿಗೆ ಕಾಜಿ, ಕಹಾನಿ ಎಂದು ಹೆಸರು. ಮುಂಡಗಳು ಕಾಡು ಜನರಾದರೂ ಅವರಿಗೆ ಲಿಪಿ ಇಲ್ಲದಿದ್ದರೂ ಅವರಲ್ಲಿ ಅಕ್ಷರ ಪಾಂಡಿತ್ಯ, ಜನಪದ ಸಾಹಿತ್ಯ, ಜಾನಪದ ಚಟುವಟಿಕೆ ಆಟಗಳಿಂದಲೇ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಮುಂಡಜನತೆಯ ಕಥೆ, ಒಗಟು, ಜನಪದ ಸಾಹಿತ್ಯ, ಲಾವಣಿಗಳ ಕುರಿತು ಗೊರೂರಿನವರು ಕೆಲವು ಪ್ರಸಂಗಗಳ ಮೂಲಕ ಸುಂದರವಾಗಿ ಚಿತ್ರಿಸಿದ್ದಾರೆ.

೫. ಬಾಬ ಪ್ರಭಾವ:
ತಮ್ಮೂರಿನ ನರಸಿಂಹ ಉಪಾಧ್ಯಾಯನಾಗಿ, ಅದನ್ನು ಬಿಟ್ಟು ಜಮೀನನ್ನು ಗುತ್ತಿಗೆಗೆ ಹಿಡಿದು ವ್ಯವಸಾಯ ಮಾಡಲು ಶುರುಮಾಡಿ ಸಾಲ ಮಾಡಿ ಅದನ್ನು ತೀರಿಸಲಾಗದೆ ಊರಿನ ಜನರಿಂದ ತಪ್ಪಿಸಿಕೊಂಡು ಪರಾರಿಯಾಗಿ ಒಂದು ಕಡೆ ಬಾಬಾ ಆಶ್ರಮಕ್ಕೆ ಸೇರಿ ಅಲ್ಲಿ ಜನರಲ್ಲಿ ಬಾಬಾ ಪ್ರಭಾವವೆಂದು ಕೆಲವು ಘಟನೆಗಳಿಂದ ಜನರನ್ನು ನಂಬಿಸಿ ಮೋಸ ಮಾಡುತ್ತಾ ಜೀವನವನ್ನು ಸಾಗಿಸುತ್ತಾನೆ. ಹೀಗೆ ಒಮ್ಮೆ ಮಗುವಿಗೆ ಜ್ವರಾ ಬಂದಾಗ ಡಾಕ್ಟರ್ ಬಳಿ ಹೋಗಲು ಬಿಡದೇ ಆತನೆ ವಿಭೂತಿಯ ಔಷಧಿಯನ್ನು ಕೊಟ್ಟು ಉಳಿಸುತ್ತೇನೆಂದು ಇದು ಬಾಬ ರವರ ಆಜ್ಞೆಯಂದು ಜನರನ್ನು ನಂಬಿಸಿ ಅತ್ತ ಮಗುವನ್ನೂ ಉಳಿಸಿಕೊಳ್ಳಲಾಗದೆ ಇನ್ನು ಜನರ ಕೈಗೆ ಸಿಕ್ಕರೆ ತನ್ನನ್ನು ಕೊಂದೇ ಬಿಡುವರೆಂದು ಹೆದರಿ ಪರಾರಿಯಾಗುತ್ತಾನೆ. ನರಸಿಂಹನಂತವರಿಗೆ ಕೆಲವು ಜನರು ತಮಗೆ ಅರಿವಿಲ್ಲದೆ ಹೇಗೆ ಅವರು ಬಲಿ ಬೀಳುತ್ತಾರೆನ್ನುವುದು ಗೊರೂರಿನವರು ಈ ಸಂಕಲನದಲ್ಲಿ ಚಿತ್ರಿಸಿದ್ದಾರೆ.

೬. ಗಾಂಧೀಜಿ ಸಾನ್ನಿಧ್ಯದಲ್ಲಿ ವಿನೋದ ನಿಮಿಷಗಳು:
ಈ ಸಂಕಲನದಲ್ಲಿ, ಗಾಂಧೀಜಿಯವರ ���ೀವನದಲ್ಲಿ ನಡೆದ ಅನೇಕ ಹಾಸ್ಯ ಪ್ರಮೇಯಗಳನ್ನು ಎಳೆಎಳೆಯಾಗಿ ವಿವರಿಸಿದ್ದಾರೆ.

೭. ಸಂಚಾರಿ ಚಲನಚಿತ್ರಗಳು, ಯಕ್ಷಗಾನ ಬಯಲಾಟಗಳು, ರಾಮಾಯಣ, ಭಾರತ, ಹರಿಶ್ಚಂದ್ರ, ರೇಣುಕಾಮಹಾತ್ಮೆ, ಕೃಷ್ಣಲೀಲೆ ನಾಟಕಗಳನ್ನು ಹಾಗು ದಿನದಿನವೂ ಊರಿನಿಂದ ಊರಿಗೆ ತಿರುಗುತ್ತಾ ಕೆಲವು ಕಡೆ ಹಣ ಲಾಭ ಪಡೆದು ಕೆಲವು ಕಡೆ ನಷ್ಟವನ್ನೂ ಅನುಭವಿಸುವ ವ್ಯಕ್ತಿಗಳ ಜೀವನವನ್ನು ಕುರಿತು ಸುಂದರವಾಗಿ ಚಿತ್ರಿಸಿದ್ದಾರೆ.

೮. ಬಿಂದಿಗಮ್ಮನ ಜಾತ್ರೆ:
ಭರತೂರಿನಲ್ಲಿ ರಂಗನ ಬೆಟ್ಟದ ಜಾತ್ರೆಯ ಜೊತೆ ಬಿಂದಿಗಮ್ಮನ ಜಾತ್ರೆಯೂ ನಡಯುತ್ತದೆ. ಸಂಕ್ರಾಂತಿಯ ಮಾರನೆಯ ದಿನ ಈ ಜಾತ್ರೆ ನಡೆಯುತ್ತದೆ, ಬಿಂದಿಗಮ್ಮ ರಂಗನಾಥ ದೇವರ ಹೆಂಡತಿ, ಬರಿಯ ನಾಲ್ಕು ಕಂಬಗಳ ಒಂದು ಕಲ್ಲು ಮಂಟಪದ ಮಧ್ಯದಲ್ಲಿ ಒಂದು ಅಡಿ ಚೌಕದ ಒಂದು ಕಲ್ಲನ್ನು ನೆಲದಿಂದ ಒಂದು ಅಡಿ ಎತ್ತರದಲ್ಲಿ ಹೂಳಿದ್ದಾರೆ, ಅದರ ಮೇಲೆ ಸುಮಾರು ೧೫ ಅಂಗುಲ ಅಗಲದ ಒಂದು ತಟ್ಟೆಯಲ್ಲಿ ನೀರು ತುಂಬಿ ಒಂದು ಸಣ್ಣ ಗಡಿಗೆಯನ್ನು ಇಟ್ಟಿದ್ದಾರೆ. ಅದರೆ ಮೇಲೆ ಒಂದು ಛತ್ರಿ, ಹಡಿಗೆಯ ಸುತ್ತ ಹೂವು ತುಳಸಿ ಹಾಕಿ ಗಡಿಗೆ ಓಲಾಡದಂತೆ ಮಾಡಿರುತ್ತಾರೆ, ಇದಕ್ಕೆ ಜಾತ್ರೆಯ ದಿನ ಪೂಜೆ ಮಾಡುತ್ತಾರೆ. ಮುಂದುಗಡೆ ರಂಗದೇವರನ್ನು ನಾಲ್ಕು ಜನ ಹೆಗಲಿನ ಮೇಲೆಯೂ ಹಾಗು ಹಿಂದುಗಡೆ ಬಿಂದಿಗಮ್ಮ ಪೂಜಾರಿಯ ತಲೆಯ ಮೇಲೆಯೂ ಪಂಜಿನವರು ಓಡುತ್ತಾ ಹೋಗಿ ರಂಗನ ಬೆಟ್ಟ ದೇವಾಲಯವನ್ನು ಸೇರುವುದೇ ಬಿಂದಿಗಮ್ಮನ ಜಾತ್ರೆ.

೯. ಯುಗಾದಿ:
ಯುಗಾದಿ ಎಂಬಲ್ಲಿ ಒಂದು ಯುಗವೆಂದರೆ ವರುಷ ಎಂದೇ ಅರ್ಥ, ಯುಗ ಯುಗವು ಕಳೆದರೂ ಯುಗಾದಿ ಮರಳಿ ಬರುತಿದೆ ಎಂದು ಕವಿ ಹೇಳಿದ ಹಾಗೆ ಈ ಜಗತ್ತು ವರ್ಷಕ್ಕೊಮ್ಮೆ ಹೊಸ ಹುಟ್ಟನ್ನು ಹೊಂದಿ ಹಳೆಯ ಆಲಸಿಕ ಜಿಗುಪ್ಸೆಗಳನ್ನು ಕಳೆದು ನೂತನವಾದ ಆಸೆ ಆಕಾಂಕ್ಷೆಗಳ ಭವ್ಯ ಮಂಗಳ ನವೋದಯವನ್ನು ಕಾಣುತ್ತಿದೆ, ಇದಕ್ಕೆ ಮುಪ್ಪಿಲ್ಲ, ಮನುಷ್ಯರಾದ ನಾವೂ ಸಹ ಹಾಗೆಯೇ. ಹಾಗು ಅರವತ್ತು ಸಂವತ್ಸರಗಳೇಕೆ ಅದಕ್ಕೆ ಪ್ರಭವ, ವಿಭವ ಅಂತ ಹೇಗೆ ಹೆಸರು ಬಂದಿತೆನ್ನುವುದು ಎಳೆ ಎಳೆಯಾಗಿ ವಿವರಿಸಿದ್ದಾರೆ. ಒಮ್ಮೆ ನಾರದರಿಗೆ ಹೆಂಡತಿಯ ಆಸೆಯುಂಟಾಗಿ ಶ್ರೀಕೃಷ್ಣನ ಬಳಿ ತನ್ನ ಹದಿನಾರು ಸಾವಿರ ಹೆಂಡಿರ ಪೈಕಿ ನನಗೆ ಓಬ್ಬಳನ್ನು ಕೊಡು ಎಂದು ಕೇಳಿದಾಗ, ಕೃಷ್ಣ ನಗುತ್ತಾ ನನ್ನ ೧೬ ಸಾವಿರ ಹೆಂಡಿರ ಪೈಕಿ ಯಾರು ಒಂಟಿಯಾಗಿದ್ದಾಳೋ ಅವಳನ್ನು ಕರೆದುಕೊಂಡು ಹೋಗು ಎಂದು ನಾರದನಿಗೆ ಹೇಳಿದಾಗ ಪ್ರತಿಯೊಬ್ಬರ ಮನೆಯನ್ನೂ ಹುಡುಕಿದಾಗ ಶ್ರೀಕೃಷ್ಣನನ್ನು ಕಾಣುತ್ತಾನೆ, ಆಯಾಸದಿಂದ ಯಮುನಾ ನದಿಯಲ್ಲಿ ಮುಳುಗಿ ಏಳಿದಾಗ ನಾರದಿಯಾಗಿರುತ್ತಾನೆ, ಈಕೆಯನ್ನು ನೋಡಿದ ಒಬ್ಬ ಋಷಿ ಮನೆಯಲ್ಲಿ ಇಟ್ಟುಕೊಂಡು ಸಂಸಾರ ಮಾಡಿದ, ಹೆಂಡತಿಯನ್ನು ಹುಡುಕುತ್ತಾ ಹೋದ ನಾರದನು ತಾನೆೇ ಹೆಂಡತಿಯಾಗಬೇಕಾಯಿತು, ನಂತರ ಆಕೆಗೆ ವರುಷಕ್ಕೆ ಒಬ್ಬನಂತೆ ೬೦ ಗಂಡು ಮಕ್ಕಳಾದರು, ಹೆತ್ತೂ ಹೆತ್ತೂ ಸಾಕಾಯಿತು, ಆಗ ಆ ಮಕ್ಕಳ ರಕ್ಷಣೆ ಹೇಗೆ ಎಂದು ಯೋಚಿಸುತ್ತಿರುವಾಗ ವಿಷ್ಣುವೇ ಒಬ್ಬೊಬ್ಬ ಮಗನಿಗೂ ಒಂದೊಂದು ಹೆಸರಿಟ್ಟು ಒಂದೊಂದು ವರುಷ ಭೂಮಿಯ ಒಡೆತನವನ್ನು ಅವರಿಗೆ ಕೊಟ್ಟನು, ಅವರೇ ಈ ಪ್ರಭವ, ವಿಭವ, ಶುಕ್ಲ ಮೊದಲಾದವರು.

೧೦. ನಂತರ ಕ್ಷೌರ ಸಂಹಿತೆಲ್ಲಿ ಕ್ಷೌರಮಾಡುವ ವ್ಯಕ್ತಿಗಳ ಕುರಿತು ಹಾಗು ಅವರಿಗಿದ್ದ ಲೋಕಜ್ಞಾನದ ಕುರಿತು ತಮ್ಮ ಜೀವನದಲ್ಲಿ ಸಂಧಿಸಿದ ಕೆಲವರು ವ್ಯಕ್ತಿಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಐವತ್ತು ವರುಷಗಳ ಹಿಂದೆ ನೋಡಿದ ನಾಟಕಗಳ ಅನುಭವಗಳನ್ನೂ ಸುಂದರವಾಗಿ ಚಿತ್ರಿಸಿದ್ದಾರೆ. ಅದರಲ್ಲಿ ಗುಲೇಬಕಾವಳಿಯ ಕಥೆಯಂತೂ ಅತ್ಯದ್ಭುತ. ವರದಾಚಾರ್ಯರ ನಾಟಕಗಳು, ಶೇಷಣ್ಣನವರ ನಾಟಕಗಳು, ನಂತರ ಗುಬ್ಬಿ ಕಂಪನಿಯ ನಾಟಕಗಳನ್ನು ಕುರಿತೂ ಹೇಳಿದ್ದಾರೆ.

೧೧. ಹಳೆ ಮೈಸೂರಿನ ಸಂಗೀತ ವೈಭವ:
ನಾಲ್ವಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮಗಳ ಕುರಿತು ಹಾಗು ಅಲ್ಲಿಗೆ ಬರುತ್ತಿದ್ದ ಸಂಗೀತ ವಿದ್ವಾನ್ ಗಳ ಕುರಿತು ಸುಧೀರ್ಘವಾಹಿ ವಿವರಿಸಿದ್ದಾರೆ. ಘಂಟಾಕರ್ಣ ಸುಬ್ರಹ್ಮಣ್ಯ ಅಯ್ಯರ್, ಚಿಕ್ಕರಾಮರಾಯರು, ವೀಣೆ ಶೇಷಣ್ಣನವರು, ದೊರೆಸ್ವಾಮಿ ಅಯ್ಯಂಗರ್, ಅರೈಕುಡಿ ರಾಮಾನುಜಯ್ಯಂಗಾರ್, ಶೆಂಬಂಗುಡಿ ಶ್ರೀನಿವಾಸಯ್ಯಂಗಾರ್, ಚಂಪೆ ವೈದ್ಯನಾಥ ಭಾಗವತರ್, ಎಂ, ಎಸ್ ಸುಬ್ಬಲಕ್ಷ್ಮಿ ಇವರುಗಳ ಸಂಗೀತ ಕಾರ್ಯಕ್ರಮಗಳನ್ನು ಹಾಗು ಅವರ ಸಾಧನೆಗಳನ್ನು ಈ ಸಂಕಲನದಲ್ಲಿ ವಿವರಿಸಿದ್ದಾರೆ.

೧೨. ದಿ ವಿಲೇಜ್ ಪೋಸ್ಟ್ ಮನ್:
ಪ್ರಾಚೀನ ಕಾಲದಲ್ಲಿ ಜನತೆ ಒಬ್ಬರ ವಿಷಯವನ್ನು ಒಬ್ಬರು ತಿಳಿಯಲು ನಾನಾ ವಿಧವಾದ ಮಾರ್ಗಗಳನ್ನು ಕಲ್ಪಿಸಿಕೊಂಡಿದ್ದರು, ಈಸ್ಟ್ ಇಂಡಿಯಾ ಕಂಪನಿಯ ಕ್ಲೈವ್ ಅಧಿಕಾರಿ 1766ರಲ್ಲಿ ಪೋಸ್ಟ್ ಸರ್ವೀಸನ್ನು ಪ್ರಾರಂಭಿಸಿದನು. ಮೊದಲು ತಮ್ಮ ಪತ್ರ ವ್ಯವಹಾರಕ್ಕೆ ಸೀಮಿತವಾಗುದ್ದು ನಂತರ ಜನತೆಗೆ ಉಪಯುಕ್ತವಾಯಿತು. ನಂತರ ಟಪಾಲು ವಿತರಣೆ ಕ್ರಮ ಜಾರಿಗೆ ಬಂದು, ಊರು ಊರಿಗೂ ಟಪಾಲು ತಲುಪಿಸಲು ಉದ್ಯೋಗ ಅವಕಾಶ ದೊರಕಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಟಪಾಲನ್ನು ಸಾಗಿಸುವ ಕೆಲಸ ಆರಂಭವಾಯಿತು. ಪಟ್ಟಣದಲ್ಲಿ ಸೌಕರ್ಯಗಳಿತ್ತು ಆದರೆ ಹಳ್ಳಿಗಳಿಗೆ ತಲುಪಿಸಲು ಮೊದಲು ಕಷ್ಟಕರವಾಗಿತ್ತು, ಅಂದಿನ ಪೋಷ್ಟ್ ಮಾನ್ ಬಂದರೆ ಎಲ್ಲಿಲ್ಲದ ಗೌರವ ಅವನಿಗೆ ಊಟ, ತಿಂಡಿ, ಕಾಫೀ ಎಲ್ಲವೂ ಲಭ್ಯವಾಗುತ್ತಿದ್ದಿತು. ತಮ್ಮ ಜೀವನದಲ್ಲಿ ಯಾವ ಪತ್ರವನ್ನೂ ಓದದೇ ತಲುಪಿಸುತ್ತಿದ್ದ ಒಳ್ಳೆಯ ಪೋಸ್ಟ್ ಮನ್ ನನ್ನು ಹಾಗು ಇತರ ಪತ್ರಗಳನ್ನು ಓದಿ ತಲುಪಿಸುತ್ತಿದ್ದ ಕೆಟ್ಟ ಪೋಸ್ಟ್ ಮನ್ ಗಳನ್ನೂ ಕಂಡಿದ್ದರು. ಹೀಗೆ ಈ ಸಂಕಲನದಲ್ಲಿ ಪೋಸ್ಟ್ ಮನ್ ರವರ ವೃತ್ತಿಪರ ಜೀವನ ಕುರಿತು ಸುಂದರವಾಗಿ ವಿವರಿಸಿದ್ದಾರೆ.

*ಕಾರ್ತಿಕೇಯ*
Profile Image for ಸುಶಾಂತ ಕುರಂದವಾಡ.
462 reviews28 followers
February 11, 2022
ಗೊರೂರು ಅವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದು ಕೊಟ್ಟ ಪುಸ್ತಕ. ಇದು ಕಾದಂಬರಿ/ಕಥಾಸಂಕಲನ ಎಂದರೆ ತಪ್ಪಾಗುವುದು, ಇದೊಂದು 17 ಪ್ರಬಂಧಗಳನ್ನೊಳಗೊಂಡ ಪುಸ್ತಕ. ಪುಸ್ತಕದಲ್ಲಿ ಹಾಸ್ಯ, ವಿಡಂಬನೆ, ಸುಖ-ದುಃಖ, ರಾಜಕೀಯ ಹೀಗೆ ಹಲವು ವಿಷಯನ್ನೊಳಗೊಂಡ ಪ್ರಬಂಧಗಳಿವೆ. ಗೊರೂರು ಅವರ ನಮ್ಮ ಊರಿನ ರಸಿಕರು ಪುಸ್ತಕದ ಪ್ರಕಾರವೇ ಇದು ಪುಸ್ತಕವು ಕೂಡ.
ಈ ಪುಸ್ತಕದಲ್ಲಿ ಗೊರೂರು ಅವರು ತಮ್ಮ ಜೀವತಾವಧಿಯಲ್ಲಿ ತಾವು ಕಂಡ 'ಮುಖಗಳು' ಅಂದರೆ ಅವರು ಸಂಧಿಸಿದ ವ್ಯಕ್ತಿಗಳು ಮತ್ತು ಅವರ ಜೀವನದಲ್ಲಿ ಉಂಟಾದ ವಿನೋದ ಪ್ರಸಂಗಗಳನ್ನು ಇಲ್ಲಿ ಬರೆಯಲಾಗಿದೆ. ಅದರ ಜೊತೆಗೆ ಗಾಂಧೀಜಿ ಅವರ ಜೀವನದಲ್ಲಿ ನಡೆದ ಅನೇಕ ಹಾಸ್ಯ ಪ್ರಮೇಯಗಳನ್ನು, ಹಳೆಯ ಮೈಸೂರಿನಲ್ಲಿಯ ಸಂಗೀತ ವೈಭವ ಮತ್ತು ಸಂಗೀತ ರಸಿಕರ ಬಗ್ಗೆ ಬರೆಯಲಾಗಿದೆ. ಹಾಗೆಯೇ 'ಕ್ಷೌರಸಂಹಿತೆ', 'ದಿ ವಿಲೇಜ್ ಪೋಸ್ಟ್ ಮನ್' ಕಥೆಗಳಲ್ಲಿ ಅವರವರ ಜೀವನದಲ್ಲಿ ಅವರು ಹಾದು ಹೋಗುವ ದಾರಿ, ಅವರ ಜೀವನಪಥದಲ್ಲಿಯ ಅಡೆ ತಡೆಗಳು, ಏರಿಳಿವು ಕಂಡು ಬಂದರೂ ಜೀವನೋತ್ಸಾಹವನ್ನು ತಗ್ಗಿಸದೆ ಮುನ್ನುಗುವ ಜನರ ಬಗ್ಗೆ ಬರೆದಿದ್ದಾರೆ.
ಪುಸ್ತಕದ ಮೊದಲ ಪುಟದಲ್ಲಿ 'ಜಗತ್ತಿನ ಅತಿದೊಡ್ಡ ಚಿತ್ರಕಾರನೆಂದರೆ - ಕಾಲವೇ. ನಿರಂತರವಾಗಿ ಹರಿಯುತ್ತಾ ಅದು ತನ್ನಲ್ಲಿ ಆಯಾ ಸಮಯದ ವಿವರಗಳನ್ನು ದಾಖಲಿಸುತ್ತಾ ಹೋಗುತ್ತದೆ. ಮುಂದಿನ ಪೀಳಿಗೆಗೆ ಕಥೆಯ ರೂಪದಲ್ಲಿ ಅದನ್ನು ನೀಡುತ್ತದೆ.' ಅಕ್ಷರಶಃ ನಿಜ. ಅಂಬೇಡ್ಕರ್ ಅವರು ಹೇಳಿದಂತೆ 'ಇತಿಹಾಸ ತಿಳಿಯದವನು ಇತಿಹಾಸ ನಿರ್ಮಿಸಲಾರ' ಎಂದು. ನಮ್ಮ ಹಿಂದಿನ ಪೀಳಿಗೆ, ಹಿಂದಿನ ಜನರ ಕುರಿತು ತಿಳಿದುಕೊಂಡು ಮುಂದುವರಿಯಬೇಕು. ಆ ಹಳೆಯ ಪ್ರೀಳಿಗೆಯೇ ನಮ್ಮ ಈ ಅಸ್ತಿತ್ವಕ್ಕೆ ಕಾರಣವೆಂದು ನಾವು ಮರೆಯಬಾರದು.
Displaying 1 - 4 of 4 reviews