ಇದು ಎಂ ಕೆ ಇಂದಿರಾ ಅವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದು ಕೊಟ್ಟ ಕಾದಂಬರಿ. ಮಹಿಳಾ ಪಾತ್ರಗಳನ್ನು ಕೇಂದ್ರಬಿಂದುವಾಗಿ ಇಟ್ಟುಕೊಂಡು ಹೆಣೆದಿರುವ ಕಥೆ. ಕಥೆ ಸಾಧಾರಣವಾಗಿದ್ದರೂ ಹೃದಯಕ್ಕೆ ನಾಟುವಂತಿದೆ.
ಮೂಲತಃ ಇದು ಮಲೆನಾಡಿನ ಸೊಂಪಲ್ಲಿ ಬೆಳೆದ ಚಿಣ್ಣರು ಮುಂದೆ ಜೀವನಸಂಗಾತಿಯನ್ನು ನಿರ್ಧರಿಸಲು ಹೊರಟಾಗ ಸವಾಲಾಗುವ ಹಲವು ತಡೆಗಳಲ್ಲಿ ಹತಾಶೆಯ ಕುರುಹುಗಳನ್ನು ಕಾಣುತ್ತಾರೆ. ಹಾಗೆಯೇ ಒಬ್ಬ ವಿಧವೆ ತನ್ನ ಜೀವನವನ್ನು ಮರುರೂಪಿಸಿಕೊಳ್ಳುತ್ತಾಳೆ.
ಒಂದೇ ಕುಟುಂಬದಲ್ಲಿ ಹುಟ್ಟಿದ ಮೂರ್ತಿ, ಗೌರಿ, ರಾಜು, ಜಾನಕಿ ಬಹಳ ಅನ್ಯೋನ್ಯವಾಗಿ ಇರುತ್ತಾರೆ. ಪ್ರಕೃತಿಯ ಮಡಿಲಲ್ಲಿ ಯಾವುದೇ ಕಡಿವಾಣವಿಲ್ಲದೆ ಸಂತೋಷದ ಹೊನಲಿನಲ್ಲಿ ತೇಲುತ್ತಿರುತ್ತಾರೆ. ಪುಸ್ತಕದ ಪ್ರಾರಂಭದಲ್ಲಿ ಮಕ್ಕಳ ಮೆಟ್ರಿಕ್ ಪರೀಕ್ಷೆ ಮುಗಿದು ತಮ್ಮ ಸೋದರತ್ತೆ ಪುಟ್ಟಮ್ಮನವರ ಮನೆಗೆ ಹೋಗುವ ಸಂದರ್ಭ. ಅಲ್ಲಿಗೆ ಇದ್ದಿದ್ದು ಎರಡೇ ಬಸ್ಸುಗಳು, ನುಕೋ ನರಸಿಂಹ ಮತ್ತು ಮಾರುತಿ. ಇವುಗಳ ಪ್ರಸಂಗವೇ ಒದತಕ್ಕದ್ದು. ಮಲೆನಾಡಿನಲ್ಲಿ ಈಗಲೂ ಇಂತಹ ಬಸ್ಸುಗಳನ್ನು ನಾವು ಕಾಣಬಹುದಾಗಿದೆ.
ಪುಟ್ಟಮ್ಮನವರಿಗೆ ಗೌರಿಯನ್ನು ಮೂರ್ತಿಗೆ ಕೊಡಬೇಕು ಅಂತ ಮನಸ್ಸು, ಹಾಗೇಟ್ ಮೂರ್ತಿಯವರ ಮನೆಯಲ್ಲಿಯೂ ಕೂಡ. ಈ ನಡುವೆ ಗೌರಿ ತನ್ನ ಉತ್ಸಾಹದಲ್ಲಿ ಕಾಲನ್ನು ಮುರಿದುಕೊಳ್ಳುತ್ತಾಳೆ. ಆದರೆ ಮೂರ್ತಿ ಮುಂದೆ ಓದಿಕೊಂಡು ಅಲ್ಪಮಟ್ಟಿಗೆ ದೊಡ್ಡ ಸ್ಥಾನದಲ್ಲಿದ್ದಾಗ ಗೌರಿ ಒಬ್ಬ ಹಳ್ಳಿಯ ಗೊಡ್ಡು, ಮತ್ತು ಕುಂಟಿ ಎನಿಸಿ ಅವಳನ್ನು ತೊರೆಯುತ್ತಾನೆ. ಇದರಿಂದ ಪುಟ್ಟಮ್ಮನವರಿಗೆ ದುಃಖವಾಗುತ್ತದೆ ಆದರೆ ಗೌರಿ, ಅವಳು ಇವುಗಳ ಗೊಡವೆಗೆ ಹೋಗದೆ ಹಾಯಾಗಿ ಪ್ರಕೃತಿಯ ಗೆಲುವಿಗೆ ಶರಣಾಗುತ್ತಾಳೆ. ಮದುವೆಯಾದ ಮೇಲೆ ಪ್ರತಿ ಸಾರಿ ಮೂರ್ತಿಯು ಗೌರಿಯನ್ನು ನೋಡಿದಾಗೊಮ್ಮೆ ಅವನಿಗೆ ತನ್ನ ತಪ್ಪಿನ ಅರಿವಾಗುತ್ತಿರುತ್ತದೆ.
ರಾಜು ಮತ್ತು ಜಾನಕಿಯರ ನಡುವೆ ಬಾಂಧವ್ಯ ಬೆಳೆದಿದ್ದರೂ, ಜಾನಕಿಯ ತಂದೆಗೆ ಅವಳನ್ನು ರಾಜುವಿಗೆ ಕೊಡಲು ಇಷ್ಟವಿರುವುದಿಲ್ಲ, ಇದರಿಂದ ಜಾನಕಿಯ ದಿನೇ ದಿನೇ ಕ್ಷೀಣಿಸುತ್ತಾ ಹೋಗುತ್ತದೆ. ಆದರೆ ರಾಜುವಿಗೆ ಗೌರಿಯಲ್ಲಿ ಪ್ರೀತಿ ಹುಟ್ಟುತ್ತದೆ. ಅವಳ ದಿಟ್ಟತನ, ಸದಾ ನಗುನಗುತ್ತಿರುವ ಅವಳ ಮುಖಸೌಂದರ್ಯ ಅವನಿಗೆ ತುಂಬಾ ಇಷ್ಟವಾಗಿ ಅವಳನ್ನೇ ವರಿಸುತ್ತಾನೆ.
ವಿಧವೆಯಾದ ಕಮಲೆಯು ಮನೆಯಿಂದ ಹೊರಗೆ ಹೋಗಲೂ ಇಚ್ಛಿಸದೇ ಪುಸ್ತಕಗಳ ನಡುವೆ ತನ್ನ ಕಾಲವನ್ನು ಕಳೆಯುತ್ತಿರುತ್ತಾಳೆ. ಅವಳಿಗೆ ಆಗ ಸಿಕ್ಕಿದುದು ರಮಾನಂದರ ಕಾದಂಬರಿಗಳು. ರಮಾನಂದರು ಕಾದಂಬರಿಗಳಿಂದ ಕಮಲೆಯು ಮನಸ್ಸನ್ನು ಆಕರ್ಷಿಸುತ್ತಾರೆ, ಎಷ್ಟೆಂದರೆ ಒಂದು ಸಲವಾದರೂ ಅವರನ್ನು ಭೇಟಿಯಾಗಬೇಕು ಅಂತ ಅವಳ ಮನಸು ಹಾತೊರೆಯುತ್ತದೆ.
ರಾಜುವು ತನ್ನ ಕೆಲಸದ ನಿಮಿತ್ತ ಬೊಂಬಾಯಿಗೆ ಹೋದಾಗ ಅವನು ಸದಾನಂದರನ್ನು ಸಂಧಿಸುತ್ತಾನೆ ಮತ್ತು ಅವನಿಗೆ ಅವರು ತುಂಬಾ ಹಿಡಿಸುತ್ತಾರೆ. ಮುಂದೆ ಸ್ನೇಹ ಸ್ವಲ್ಪ ಪ್ರಭಲಗೊಂಡಾಗ ಅವನಿಗೆ ತಿಳಿಯುತ್ತದೆ ಕಮಲೆಯ ನೆಚ್ಚಿನ ಲೇಖಕ ರಮಾನಂದ ಇವರೇ ಎಂದು.
ಸದಾನಂದರು ವಿವಾಹಿತರು, ಅವರ ಮುದ್ದಿನ ಮಡದಿ ರಮಾ ಅವರು ಬಾರದ ಲೋಕಕ್ಕೆ ಹೋದಾಗ ಸದಾನಂದರು ಖಿನ್ನತೆಯೊಳಗಾಗಿ ಬರೆಯುವುದನ್ನು ಪ್ರಾರಂಭಿಸುತ್ತಾರೆ. ಮುಂದೆ ರಾಜು ಸಹಾಯದಿಂದ ಕಮಲೆಯು ಸದಾನಂದರನ್ನು ಭೇಟಿಯಾಗಿ ಯಾವುದೇ ಅಡೆತಡೆಯಿಲ್ಲದೆ ಮದುವೆಗಾಗುತ್ತಾರೆ.
ಸದಾನಂದ ಮತ್ತು ಕಮಲೆಯ ವೈವಾಹಿಕ ಜೀವನವನ್ನು 'ಮಧುವನ' ಕಾದಂಬರಿಯಲ್ಲಿ ಮುಂದುವರೆಸಲಾಗಿದೆ.