ಮಹಾಭಾರತದ ಯುದ್ಧ ಪರ್ವದಲ್ಲಿ ನಂತರದಲ್ಲಿ ಸ್ತ್ರೀ ಪಾತ್ರಗಳಾದ ಕುಂತಿ, ದ್ರೌಪದಿ, ಸುಭದ್ರೆ, ಗಾಂಧಾರಿಯರು ತಮ್ಮ ಮನಸ್ಸಿನ ತುಮುಲಗಳನ್ನು ವ್ಯಕ್ತಪಡಿಸುವುದೇ ಈ ಕಾದಂಬರಿಯ ಕಥಾನಕ. ಚಕ್ರವ್ಯೂಹದಲ್ಲಿ ಮಡಿದ ವೀರ ಅಭಿಮನ್ಯುವಿನ ಪತ್ನಿ ಉತ್ತರೆ, ತನ್ನ ಬಸಿರಲ್ಲಿ ಪರೀಕ್ಷಿತನಿದ್ದಾಗ ಮನಸ್ಸಿನಲ್ಲಿರುವ ಭಯ ವೇದನೆಯನ್ನು ಹೊರಹಾಕುವುದು ಒಂದು ಕಥೆಯಾದರೆ, ಮತ್ತೊಂದು ಕಥೆಯಲ್ಲಿ ಸುಭದ್ರೆ ತಾನು ಗಾಂಢೀವಿಯೊಂದಿಗೆ ಓಡಿ ಹೋದ ಸಂದರ್ಭವನ್ನು ಮೆಲುಕು ಹಾಕುವುದು ಕಾಣಬಹುದು. ಪಾಂಚಾಲಿ ತನ್ನ ಮಕ್ಕಳನ್ನೆಲ್ಲಾ ಯುದ್ದದಲ್ಲಿ ಕಳಕೊಂಡು ಕುಳಿತಿದ್ದಾಗ ತನ್ನ ಜೀವನದಲ್ಲಿ ತಾನು ಪಂಚ ಪಾಂಡವರೊಂದಿಗೆ ಹೇಗೆ ಬದುಕಿದ್ದೆ ಎಂಬುದರ ಕುರಿತು ಮಗದೊಂದು ಕಥೆ. ಗಾಂಧಾರಿ ತನ್ನೆಲ್ಲಾ ಮಕ್ಕಳು ಮಡಿದುದರ ಕಾರಣ ಹುಡುಕುತ್ತಾ ತಾನು ದುರ್ಯೋಧನನ ದುಸ್ಸಾಹಸಗಳಿಗೆ ತಡೆ ಹಾಕದೆ ನಿಸ್ಸಹಾಯಕಳಾದುದರ ಕುರಿತು ಚಿಂತಿಸಿ ಮುಂದೊಂದು ದಿನ ಧೃತರಾಷ್ಟ್ರ, ಕುಂತಿ, ವಿದುರನ್ನೊಳಗೊಂಡು ವಾನಪ್ರಸ್ಥರಾಗಿ ರಾಜ್ಯ ಬಿಟ್ಟು ಕಾಡಿಗೆ ಪೊಡಮಾಡುವುದು ಮತ್ತೊಂದು ಕಥೆ. ಹೀಗೆ ಮಹಾಭಾರತದ ಕೆಲವು ಪಾತ್ರಗಳನ್ನು ಆರಿಸಿ ಅವರ ಮನಸ್ಸಿನ ತುಮುಲಗಳನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ ಲೇಖಕರು. ಮುತ್ತಿನ ಹಾರದಲ್ಲಿರುವ ಮುತ್ತುಗಳಂತೆ ಎಲ್ಲಾ ಬೇರೆ ಬೇರೆ ಪಾತ್ರಗಳ ಕಥೆಗಳಾದರೂ ಒಂದು ಇಡಿಯ ಹಾರದಂತೆ ಪೋಣಿಸಿ ಚಿಕ್ಕವಾದರೂ ಚೊಕ್ಕವಾಗಿ ಕಾದಂಬರಿಯನ್ನು ಪ್ರಸ್ತುತಪಡಿಸಿದ್ದಾರೆ ಅವಧಾನಿ ಗಣೇಶ ಕೊಪ್ಪಲತೋಟ ಅವರು.