Plus point - *ಕಥೆಗಾರ ಕಾರ್ತಿಕಾದಿತ್ಯರಿಗಿಂತ ಕಾದಂಬರಿಕಾರ ಕಾರ್ತಿಕಾದಿತ್ಯ readable. ಅವರ ಕಥಾಸಂಕಲನಗಳಿಗಿಂತ ಪ್ಯಾರಸೈಟ್ ಹೋಲಿಕೆಯಲ್ಲಿ ಚೆನ್ನಾಗಿದೆ. ಕಾಟಿಹರದಯ ತಿರುವು, ಕಾಡುಹಾದಿಯ ಜಾಡು ಹತ್ತಿ ಪುಸ್ತಕಗಳನ್ನು ಓದಿ ಇಷ್ಟಪಟ್ಟವರಿಗೆ ಖಂಡಿತಾ ಪ್ಯಾರಸೈಟ್ ಇಷ್ಟವಾಗುತ್ತದೆ. (ನನಗೆ ಅವೆರಡೂ ಇಷ್ಟವಾಗಿರಲಿಲ್ಲ) *ಲೇಖಕ ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿ, ಅವ್ರ ಬರಹಗಳಿಂದ ಪ್ರಭಾವಿತ ಅನ್ನೋದು ಪ್ರತಿ ಪುಟಕ್ಕೂ ಬರಹ ಶೈಲಿ, ಕಥೆಯ ನಿರೂಪಣಾ ಶೈಲಿಯಲ್ಲೂ ನಿಚ್ಚಳ. ಪ್ಯಾರಸೈಟ್ ಓದುವಾಗ ಪದೇಪದೇ ಓತಿ ಹುಡುಕಾಟದ ಕರ್ವಾಲೋ, ವಿಚಿತ್ರ ದೃಶ್ಯಾವಳಿಗಳಿಂದ ಸಂಪದ್ಭರಿತವಾದ ಪರಿಸರದ ಕತೆಗಳು, ಹತ್ತಾರು ದೃಷ್ಯಗಳೆಲ್ಲ ಒಟ್ಟಾಗಿ ಒಂದು ಚಿತ್ರವಾದಂತಿರುವ ಮಾಯಾಲೋಕ-೧ ಎಲ್ಲವೂ ನೆನಪಾದವು. ಲೇಖಕ ಪ್ರಕೃತಿಯ ಬಗ್ಗೆ ಅಪಾರವಾದ ಕುತೂಹಲ, ಕಾಳಜಿ ಹೊಂದಿರುವವರು ಅನ್ನೋದು ಸುಸ್ಪಷ್ಟ. ಸಂಬಂಧಪಟ್ಟ ವಿಷಯಗಳ ಬಗ್ಗೆ ಅವರ ಅಧ್ಯಯನ, ತಿಳುವಳಿಕೆ ಖಂಡಿತಕ್ಕೂ ಶ್ಲಾಘನೀಯ. *ನೈಜ ಘಟನೆಗಳಂತಹ ದೃಷ್ಯಮಾಲೆ, ಸರಳ ಭಾಷೆಯ ನಿರೂಪಣೆ.
minus points - *ತೇಜಸ್ವಿಯ ಗಾಢ ಪ್ರಭಾವ ಲೇಖಕರ ಮೂಲ ಧ್ವನಿಯನ್ನೇ ಮರೆಮಾಚಿದೆಯಾ ಅನಿಸಿದ್ದು ಸುಳ್ಳಲ್ಲ. ನಡಿಗೆ ಕಲಿಯುವವರೆಗಷ್ಟೆ ಹಿರಿಯರ ಆಧಾರದ ಅಗತ್ಯ, ನಂತರವೂ ಅದರೊಂದಿಗೇ ಮುನ್ನಡೆದರೆ ನಮ್ಮದೂಂತ ಹೆಜ್ಜೆಗಳು ಮೂಡೋದು ಹೇಗೆ ಅಲ್ಲವೇ? *ಲೇಖಕ ಒಂದು ಜೀವಿಗಾಗಿ ನಡೆಸುವ ಹುಡುಕಾಟದ ಸಾರವೇ ಕಾದಂಬರಿಯ ಕಥಾವಸ್ತು. ಹುಡುಕಾಟದ ದಾರಿಯಲ್ಲಿ ಹತ್ತಾರು ಆಸಕ್ತಿಕರ ವಿಷಯ ಎದುರಾಗಿ ನೂರೆಂಟು ದಿಕ್ಕಿಗೆ ಸಾಗಿ ಕಥೆಯ ಮೂಲ ವಸ್ತು- ಆ ಹುಡುಕಾಟ ಮತ್ತದರ ಉದ್ದೇಶ ಎಲ್ಲವೂ ಹಿನ್ನೆಲೆಗೆ ತಳ್ಳಲ್ಪಟ್ಟಿತಾ ಅನ್ನಿಸಿತು. ಪ್ರಕೃತಿಯ ಬಗ್ಗೆ ತಿಳಿದುಕೊಂಡಷ್ಟೂ ಮುಗಿಯದು. ಹಾಗಂತ ತಿಳಿದುಕೊಂಡದ್ದನ್ನೆಲ್ಲಾ ಕಥೆಗೆ ಅಗತ್ಯವೋ ಅಲ್ಲವೋ ನಡುನಡುವೆ ತೂರಿಸಿ ಓದುವ ನಮ್ಮನ್ನು ಹಿಂಸಿಸೋದು ಯಾವ ಖುಷಿಗೆ ಮಾರ್ರೆ 😪 ಈ ರೀತಿಯ ನಿರೂಪಣೆಯ ದೆಸೆಯಿಂದಲೇ ಕಥೆಗಾರನ ಹುಡುಕಾಟದಲ್ಲಿ ಓದುಗರಾದ ನಾವು ಭಾಗಿಯಾಗಲು ಸಾಧ್ಯವೇ ಆಗುವುದಿಲ್ಲ. ಹುಡುಕುತ್ತಿದ್ದ ವಿಷಯ ಸಿಗದಾಗ ಬೇಸರವೋ ಸಿಕ್ಕಾಗ ಸಂತೋಷವೋ ಆಗುವುದೂ ಇಲ್ಲ. ಸುಮ್ಮನೇ NGC ಯ ಒಂದು ಡಾಕ್ಯುಮೆಂಟರೀ ನೋಡಿದಂತೆ ಭಾಸವಾಗುತ್ತದೇ ಹೊರತು ನಾವೂ ಕಥೆಗಾರನೊಂದಿಗೆ ಆತನ ಸೃಷ್ಟಿಯ ಅದ್ಭುತ ಲೋಕದಲ್ಲಿ ಸಂಚರಿಸಿದ ಅನುಭವ ಆಗುವುದಿಲ್ಲ (ಅದಕ್ಕಾಗೇ ಅಲ್ಲವೇ ನಾವೆಲ್ಲ fiction ಓದುವುದು) *ಲೇಖಕ ಕಾದಂಬರಿಯ ಮೂಲಕ ಹೇಳಹೊರಟಿರುವುದನ್ನೆಲ್ಲ ಅವರ ದಿನನಿತ್ಯದ ಫೇಸ್ಬುಕ್ ಸ್ಟೇಟಸ್ಗಳೇ ಹೇಳುತ್ತವೆ. ಅಷ್ಟೆಲ್ಲ ಪರಿಸರ ಕಾಳಜಿ ಇದ್ದವರು ಪುಸ್ತಕ ಪ್ರಕಟಿಸದೇ ಒಂದಷ್ಟು ಮರಗಳನ್ನಾದರೂ ಉಳಿಸಬಹುದಿತ್ತೇನೋ 😜
ಒಟ್ಟಾರೆಯಾಗಿ ಕಾದಂಬರಿ ಚೆನ್ನಾಗಿದೆ. ಸುನಾಯಾಸವಾಗಿ ಓದಬಹುದು. ಓದಲೇಬೇಕಾದ ಪುಸ್ತಕ ಅಂತ ಹೇಳಲಾರೆ.
ಇದನ್ನು ಕಾದಂಬರಿ ಎಂದು ಕರೆಯಬಹುದೇ ಎಂದು ನನಗೆ ಗೊತ್ತಾಗಲಿಲ್ಲ. ಆದರೆ ಇಲ್ಲಿನ ಮಲೆನಾಡಿನ ಚಿತ್ರಣ, ತೇಜಸ್ವಿಯವರ ಕತೆಗಳಲ್ಲಿ ಬರುವಂತಹ ಅಪರೂಪದ ಪಾತ್ರಗಳು ನಿಮಗೆ ಪರಿಸರದ ಕತೆ ಓದಿದ ಅನುಭವ ಕೊಡುತ್ತದೆ. ಬಳ್ಳಿಯೊಂದನ್ನು ಹುಡುಕಿ ಅಲೆಯುವ ನಿರೂಪಕನ ಕತೆ ಆ ಬಳ್ಳಿ ಅಲೆಸುವ ಹಾಗೆ ನಮ್ಮನ್ನೂ ಅಲೆಸುತ್ತದೆ. ಆದರೆ ಇದು ತೇಜಸ್ವಿಯವರ ಮಲೆನಾಡು ಆದದ್ದರಿಂದ ಈ ಪಯಣ ಬೋರಾಗುವುದಿಲ್ಲ. ಧನಾತ್ಮಕ ಅಂಶಗಳು - ಮಲೆನಾಡಿನ ಚಿತ್ರಣ, ಸಹಜ ಭಾಷೆ ,ಕತೆಯ ಆಯ್ಕೆ ಮತ್ತು ನಿರೂಪಣಾ ಶೈಲಿ
ಋಣಾತ್ಮಕ ಎನಿಸಬಹುದಾದ ಅಂಶಗಳು ಲೇಖಕರು ಹಲವು ಕಡೆಗಳಲ್ಲಿ ಮತ್ತೆ ಮತ್ತೆ ತಮ್ಮ ಉದ್ದೇಶದ ಬಗ್ಗೆ ಹೇಳಿರುವುದು, ತೇಜಸ್ವಿ ಹ್ಯಾಂಗೋವರ್. ಲೇಖಕರು ನಡುವೆ ಹಣಿಕಿ ಹಾಕಿ ಕೊಡುವ ವಿಷಾದಮಯ ಉಪದೇಶ.ಇದೆಲ್ಲ ತಪ್ಪು ಅಂತಲ್ಲ. ಅದು ಕಾದಂಬರಿಯ ಸ್ವಾರಸ್ಯಕ್ಕೆ ಒಗ್ಗುವುದಿಲ್ಲ ಅಂತಷ್ಟೇ.
ಕಾದಂಬರಿಯ ಕೊನೆಯಲ್ಲಿ ರಹಸ್ಯ ಒಡೆದಾಗ ಕೂಡ ಇಡೀ ಕಾದಂಬರಿ ಓದಿದ್ದು ಇದಕ್ಕೆ ಮಾತ್ರ ಅನಿಸದಿರುವಂತಹ ಹಲವಾರು ಘಟನೆಗಳಿರುವ ಕಾರಣ ಈ ಕಾದಂಬರಿ ಅವರ ಹಿಂದಿನ ಕತಾಸಂಕಲನಗಳಿಂದ ಭಿನ್ನವಾಗಿ ನಿಲ್ಲುತ್ತದೆ.
ಈ ಲೇಖಕರ ಮೊದಲ ಎರಡು ಪುಸ್ತಕಗಳನ್ನು ಓದಿ, ಇದನ್ನು ತೆಗೆದುಕೊಳ್ಳದೆ ಇದ್ದೆ. ಅಂದ್ರೆ ಆ ಪುಸ್ತಕಗಳು ಚೆನ್ನಾಗಿಲ್ಲ ಎಂದಲ್ಲ ಆದರೆ ಅಂತಹ ವಿಶೇಷತೆ ಅನಿಸಲಿಲ್ಲ. ತೇಜಸ್ವಿ ಅವರ ಬರಹದ ಶೈಲಿ ಹಾಗೆಯೇ ಮುಂದುವರೆಸಿಕೊಂಡು ಹೋಗಿದ್ದಾರೆ. ಈ ಪುಸ್ತಕದಲ್ಲಿ ಸಹ ಅದೇ ಶೈಲಿಯಿದೆ. ಆದರೆ ಇದನ್ನು ಕಾದಂಬರಿ ಎನ್ನುವ ಬದಲು ಹಿಂದಿನ ಪುಸ್ತಕಗಳಂತೆ ಕಥಾ ಸಂಕಲನ ಎನ್ನಬಹುದು. ದಾಟು ಬಳ್ಳಿಯನ್ನು ಹುಡುಕ ಹೊರಟ ಲೇಖಕರು ಅಂತ್ಯವನ್ನು ತುಂಬಾ ಅವಸರದಲ್ಲಿ ಮುಗಿಸಿದ ಹಾಗೆ ಇದೆ. ತೇಜಸ್ವಿಯವರ ಪುಸ್ತಕದ ಎಷ್ಟೋ ವಿಷಯಗಳು ಇದರಲ್ಲಿ ಹಾಗೆಯೇ ಇದೆ. ಧನ್ಯವಾದಗಳು.