ಇದೊಂತರ ಹಲವು ಕತೆಗಳ ಆಯ್ದ ಭಾಗಗಳನ್ನು ಒಟ್ಟಿಗೆ ಇಟ್ಟು ಹೊಲೆದ ಕೌದಿಯಂತಿದೆ. ಅದಕ್ಕೆ ಬೆನ್ನುಡಿಯಲ್ಲಿ ಕೋಲಾಜ್ ಮಾದರಿ ಎಂದಿರ ಬಹುದು. ಪ್ರೀತಿಯ ಹಲವು ಮಗ್ಗಲಿನ ಅನಾವರಣವಾಗುತ್ತದೆ. ಕತೆ ಸುಮಾರು ಕಡೆ ಕವಲೋಡೆದು ಮುಂದೆ ಎಲ್ಲೊ ಸೇರುತ್ತದೆ. ನನಗೆ ಕೆಲವು ಕತೆಗಳು ಇಷ್ಟವಾಯ್ತು, ಇನ್ನು ಕೆಲವು ಸ್ವಲ್ಪ predictable ಅನಿಸಿದವು. ಕತೆಗಿಂತ ನನಗೆ ಕತೆ ಸಾಗಿದ ದಾರಿ ಹಾಗೂ ಲೇಖಕಿಯವರ ಬರವಣಿಗೆಯ ಶೈಲಿ ಬಹಳ ಇಷ್ಟ ಆಯ್ತು.
ಪ್ರೀತಿ ಪ್ರೇಮ ಪುಸ್ತಕದಾಚೆಯ ಬದನೆಕಾಯಿ - ಪೂರ್ಣಿಮಾ ಮಾಳಗಿಮನಿ
ಕನ್ನಡದಲ್ಲಿ ಹೊಸ ರೀತಿಯ ನಿರೂಪಣೆಗಳ ಕೊರತೆ ಇದೆ. ಇಲ್ಲಿ ಕಾಮದ ಕುರಿತು ಬರೆವವರೂ ಅದನ್ನು ಹಸಿ ಹಸಿಯಾಗಿ ಬರೆದು ತಾವೇನೋ ದೊಡ್ಡದು ಬರೆದಿದ್ದೇವೆ ಎಂಬ ಭ್ರಮೆಯಲ್ಲಿ ಕಾಲರ್ ಅಪ್ ಮಾಡಿಕೊಂಡು ತಿರುಗಿದ ನವ್ಯರು ಅದರಲ್ಲೂ ಗಂಡಸರೇ ಜಾಸ್ತಿ.
ಪಾತ್ರಗಳ ಸ್ವಗತದ ಮೂಲಕ ಕಥೆ ಬೆಳೆವ ಕಥನಶೈಲಿಯ ತೆಗೆದುಕೊಂಡರೆ ನನಗೆ ನೆನಪಾಗುವುದು ಸತ್ಯನಾರಾಯಣ ಅವರ ಸನ್ನಿಧಾನ ಕಾದಂಬರಿ ಮತ್ತು ಭೈರಪ್ಪರ ಅನ್ವೇಷಣೆ.(ಗಿಬ್ರಾನ್‌ನ ಪ್ರಾಫೆಟ್ ಹಾಗೂ ಪ್ರಭುಶಂಕರ ಅವರ ಬೆರಗು ಬೇರೆಯೇ ಪ್ರಕಾರ)
ಪೂರ್ಣಿಮಾ ಅವರ ಈ ಕೃತಿ ಪ್ರಕಟಣೆಗೆ ಮೊದಲೇ ಓದುವ ಅವಕಾಶ ದೊರಕಿತ್ತು. ಕೆಲವು ಸಲಹೆಗಳ ಸ್ವೀಕರಿಸಿ ಬದಲಾಯಿಸುವ ತೆರೆದ ಮನಸ್ಸೂ ಅವರಿಗಿತ್ತು.
ಕನ್ನಡದ ಮಟ್ಟಿಗೆ ಬರಹದಲ್ಲಿ ಈ ಹೆಂಗಸರ ಒಳತೋಟಿಗಳ ಆಧುನಿಕ ಕಾಲಘಟ್ಟದಲ್ಲಿ ತೆರೆದು ಬಂದ ಕಥೆಗಳೇ ಕಡಿಮೆ. ಅದೇ ಸವಕಲು ವೃತ್ತಗಳಲ್ಲೇ ಸುತ್ತುತ್ತಾ ಅದೇ ಪದಪುಂಜಗಳಲ್ಲಿ ರೋಮಾಂಚನ ಅನುಭವಿಸುವ ಲೇಖಕರ ಪಾಡು ವರ್ಣಿಸಲಾಗದ್ದು.
ಅಂತಹದ್ದರಲ್ಲಿ ವಿಷಯ ಹಾಗೂ ನಿರೂಪಣಾ ವಿಧಾನದಲ್ಲಿ ಬೋಲ್ಡ್ ಆದ ಈ ಹಲವಾರು ಕಥೆಗಳ ಪುಟ್ಟ ಕಾದಂಬರಿ ಹೊಸ ದಿಕ್ಕಿಗೆ ಬಾಗಿಲು ತೆರೆದ ಹಾಗೆ.
ಪ್ರೀತಿ ,ಪ್ರೇಮದ ಟೊಳ್ಳು- ಗಟ್ಟಿಯ ಮಥಿಸುತ್ತಲೇ ಮದುವೆ ,ಲಿವ್ ಇನ್,ಆಕರ್ಷಣೆ ಇತ್ಯಾದಿಗಳ ಬಗ್ಗೆ ಅನೇಕ ಪಾತ್ರಗಳ ಮೂಲಕ ಹೇಳುವ ಕಾದಂಬರಿ ಇದು. ಎಲ್ಲರೂ ಗುಟ್ಟಾಗಿ ಆಸ್ವಾದಿಸುವ ಹೊರಗೆ ಗಟ್ಟಿಯಾಗಿ ಚರ್ಚಿಸಲು ಇಷ್ಟಪಡದ ಹಲವಾರು ವಿಷಯಗಳ ಚಿಪ್ಪೊಳಗಿಂದ ಹೊರಬಂದು ಚರ್ಚಿಸುವ ಕಾರಣಕ್ಕೇ ಈ ಕಾದಂಬರಿ ಇಷ್ಟವಾಗುತ್ತದೆ.
ಒಂದು ಪುಸ್ತಕದ ಮುಖಪುಟ, ಶೀರ್ಷಿಕೆ ನೋಡಿದರೆ ಒಳಗೇನಿದೆಯೋ ಸುಮಾರಾಗಿ ಅಂದಾಜಿಸಬಹುದು. ಅದರಲ್ಲೂ ಪ್ರೀತಿ ಪ್ರೇಮ ಅಂದರೆ ಇನ್ನೇನಿದ್ದೀತು, ಅದೇ ಹುಡುಕಾಟ, ಅಲೆದಾಟ, ಭಿಕ್ಷಾಟನೆ, ಯಾರೋ ಒಬ್ಬರು ಸೋಲುವುದು, ಕಡೆಗೆಲ್ಲರೂ ಗೆಲ್ಲುವುದು blah blah blah ಅನ್ನುವಷ್ಟು ಪ್ರೇಮಕತೆಗಳನ್ನು ಓದಿ ಜಡ್ಡಾಗಿದ್ದ ನನ್ನ ಮನಸ್ಸು ಬೇಸ್ತುಬೀಳುವಂತೆ ನನ್ನೆಲ್ಲಾ ಅಂದಾಜು, ನಿರೀಕ್ಷೆಗಳನ್ನೂ ಮೂಟೆಕಟ್ಟಿ ಮಿಕ್ಸರ್ ಗ್ರೈಂಡರ್ರಿಗೆ ಹಾಕಿ ಹೊಸದೇ ಇನ್ನೊಂದು ಕತೆಯನ್ನು ಕಡೆದಿಟ್ಟಿದ್ದಾರೆ ಪೂರ್ಣಿಮಾ ಮಾಳಗಿಮನಿ. 'ಇಜಯಾ'ದಿಂದ ಹುಟ್ಟಿಸಿದ್ದ ಭರವಸೆ, ನಿರೀಕ್ಷೆಗಳನ್ನು ಹುಸಿಯಾಗಿಸದೇ ಮತ್ತೊಂದು ಚೆಂದದ ಕಾದಂಬರಿ ಕೊಟ್ಟಿದ್ದಕ್ಕೆ ಪೂರ್ಣಿಮಾ ಮೇಡಂಗೆ much love and thanks.
ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು... ಉಹೂಂ.. ಬದುಕು ಈ ಸರಳ ರೇಖೆಗಳಾಚೆ ಸಾಗಿಹೋಗಿ ದಶಮಾನಗಳೇ ಆದುವಲ್ಲಾ..ಎಲ್ಲವೂ ಇದ್ದರೂ ಏನೋ ಒಂದು ಇಲ್ಲದ ಕೊರತೆ ಮನಸ್ಸಿಗೆ ನಿರಂತರ ಶಾಪ. ಆದರೂ ಮನಬಿಚ್ಚಿ ಇದರ ಕುರಿತು ಮಾತನಾಡುವ ಧೈರ್ಯ ನಮ್ಮಲ್ಲನೇಕರಿಗೆ ಇನ್ನೂ ಇಲ್ಲ. ಆ ನಿಟ್ಟಿನಲ್ಲಿ ಇದೊಂದು ಭಿನ್ನವಾದ ಕಥಾ ವಸ್ತು. ಪ್ರೇಮವಿವಾಹದ ಬಗ್ಗೆ, ಡೇಟಿಂಗ್ ಬಗ್ಗೆ ಹಿಂದೆ ಇದ್ದ ಮಡಿವಂತಿಕೆ ಈಗೀಗ ಕಡಿಮೆಯಾದಂತೆಯೇ ಮುಂದೊಂದು ದಿನ ಲಿವಿನ್ ಸಂಬಂಧಗಳ ಬಗ್ಗೆ, ಹೆಸರೇ ಬೇಡದ ಸಂಬಂಧಗಳ ಬಗ್ಗೆಯೂ ಸಮ್ಮತಿ ಮೂಡಬಹುದೋ ಏನೋ (ಹಾಗಾಗಿದ್ದೇ ಆದರೆ ದಿಗಿಲು ಬೆರೆತ ಖುಷಿಯಾಗತ್ತೆ ನಂಗಂತೂ!)
ಪುರ್ಣಿಮಾರ ಸೂಕ್ಷ್ಮ ದೃಷ್ಟಿ ಸೃಷ್ಟಿಸುವ ಪಾತ್ರಗಳು ಅದೆಷ್ಟು ಪಾರದರ್ಶಕವೆಂದರೆ ಸ್ವಲ್ಪ ದೂರ ನಿಂತು ನೋಡಿದರೆ ಎದುರಿನ ಪ್ರಪಂಚ ಕಾಣುತ್ತಿರುವಂತೆ ಭಾಸವಾಗುತ್ತದಾದರೂ ಒಂದು ಹೆಜ್ಜೆ ಹತ್ತಿರ ನಿಂತು ನೋಡಿದರೆ ಅವುಗಳಲ್ಲಿ ಕಾಣುವ ಬಿಂಬ ನಮ್ಮದೇ! ಪ್ರೀತಿಗಾಗಿ ಬಂಧನಗಳ ಜಟಿಲತೆಗೆ ಒಡ್ಡಿಕೊಳ್ಳಲೊಪ್ಪದ, ತನ್ನ ಹಕ್ಕಿನ ಪ್ರೀತಿಯೋ ಸುಖವೋ ಎಲ್ಲಕ್ಕೂ ಬಂಧನದಾಚೆಗೇ ಕೈಚಾಚುವ ದೀಪಿಕಾ, ಪ್ರೀತಿ ಇದೆಯೋ ಇಲ್ಲವೋ ಇರುವ ಬಂಧನ ಬಾಂಧವ್ಯವನ್ನಾದರೂ ಕಾಪಿಡಲು ತೊಳಲಾಡುವ ಪ್ರದೀಪ್, ಯಾರಾದರೂ ಸರಿ ಹೇಗಾದರೂ ಸರಿ ತನ್ನನ್ನು ಪ್ರೀತಿಸಲಿ ಎಂದು ಹಂಬಲಿಸುವ ಲಾವಣ್ಯ ಎಲ್ಲರಲ್ಲೂ ನಮ್ಮದೇ ಮನೋಲಹರಿಯ ಯಾವುದೋ ಒಂದು ಎಳೆ ಕಂಡಂತಾದರೆ ಖಂಡಿತಾ ಆಶ್ಚರ್ಯವಿಲ್ಲ. ಮಿಕ್ಕ ಪಾತ್ರಗಳಂತೂ ನಿತ್ಯ ಜೀವನದಲ್ಲಿ ನಾನು ನೀವೂ ನೋಡುತ್ತಿರುವಂತವೇ.. ಅವುಗಳ ಬಗ್ಗೆ ಏನೇ ಹೇಳಿದರೆ judgmental ಆಗಿ ಧ್ವನಿಸುತ್ತದೋ ಏನೋ .. ಇರಲಿ, whatever floats their boat 😀
Let me end this with a wee little bit of spoilers - ಖಂಡಿತಾ ಇದೊಂದು ಮಾಮೂಲಿ ಪ್ರೇಮಕಥೆಯಲ್ಲ; ಪ್ರೇಮಕಥೆಯೇ ಅಲ್ಲ. ಆದರೂ ಎಷ್ಟು ಶಕ್ತವಾಗಿದೆಯೆಂದ್ರೇ You can love it/ you can hate it.. But you can not ignore it . ಒಮ್ಮೆ ಓದಿದರೆ ಬಹಳಷ್ಟು ಕಾಲ ಗುಂಗಾಗಿ ಕಾಡಬಲ್ಲ ವಿಶೇಷವಾದ ಕಾದಂಬರಿ. ಬಿಡುವಾದರೆ, ಮನಸ್ಸಾದರೆ ಮರೆಯದೇ ಓದಿ 😊