ಚಿಂತಕರೂ, ಹಿರಿಯ ವಿದ್ವಾಂಸರೂ ಆದ ಲಕ್ಷ್ಮೀಶ ತೋಳ್ಪಾಡಿ ಅವರ ’ಭಾರತ ಯಾತ್ರೆ’ ಪುಸ್ತಕವು ಪ್ರಜಾವಾಣಿಯ ಮುಕ್ತಛಂದದಲ್ಲಿ ಪ್ರಕಟವಾಗುತ್ತಿದ್ದ “ಮಹಾಭಾರತ ಅನುಸಂಧಾನ’ದ ಅಂಕಣಬರಹಗಳ ಸಂಗ್ರಹ. ಮಹಾಭಾರತ ಹಲವಾರು ಕವಲೊಡೆದ ಜೇಡರಬಲೆಯಂತಹ ಸಂಕೀರ್ಣ ಹಾದಿ, ಹಲವಾರು ಉಪಕತೆಗಳ ಚಿಲುಮೆ. ಶಬ್ದದಾಚೆಯ ನಿಶ್ಶಬ್ದದ ದನಿಯಾದ ಲಕ್ಷ್ಮೀಶ ತೋಳ್ಪಾಡಿಯವರು ಮಹಾಭಾರತದ ಮಂಥನವನ್ನು ವರ್ಣಮಯ ಪಾತ್ರಗಳು, ಸನ್ನಿವೇಶಗಳ ಮೂಲಕ ತಮ್ಮ ಆಧ್ಯಾತ್ಮಿಕ ನಿಗೂಢತೆಯನ್ನು ಜೀವನ ಪ್ರೀತಿಯ ಸರಳತೆಯನ್ನಾಗಿ ಕಾಣುವ ತುಡಿತದಲ್ಲಿಯೇ ಇವರ ಮಾತು, ಬರಹಗಳು ಸಾಗುವಂತದ್ದು.
ಮಹಾಭಾರತವನ್ನು ಅರ್ಥ ಮಾಡಿಕೊಳ್ಳುವುದು, ಇದರ ಜೊತೆಗೆ ಸಾಗುವುದು ಸರಳವಾದ ವಿಷಯವಲ್ಲ,ಮಹಾಭಾರತದ ಒಳಗಿನಿಂದಲೇ ಒಂದು ಕೇಶಪಾಶ ಪ್ರಪಂಚ ನಮ್ಮೆದುರು ತೀರ ಪ್ರಕಟಗೊಳ್ಳುವುದು ದೊಡ್ಡದೊಂದು ಬೀಸಿನಲ್ಲಿ ಬದುಕನ್ನು ನೋಡಬಯಸುವಂತಹ ಮತ್ತು ಕೇವಲ ಪಠ್ಯವಾಗಿ ಅಂತಿಮ ಅರ್ಥಕ್ಕೆ ಸಿಲುಕದೆ, ನಿಲುವಿಗೆ ತಲುಪದೆ ಸದಾ ಭಾಷೆ- ಬದುಕುಗಳ ನಡುವೆ ತೂಗುತ್ತಿರುವ ತೊಟ್ಟಿಲಿನಂತೆ ’ಭಾರತ ಯಾತ್ರೆ’ ಪ್ರಕಟಗೊಂಡಿದೆ.
ಪ್ರಾಮಾಣಿಕವಾಗಿ ಹೇಳುತ್ತೇನೆ. ಬಹಳ ಹಿಂದೆ ' ಬೆಟ್ಟ ಮಹಮದನ ಬಳಿ ಬಾರದಿದ್ದರೆ' ಎಂಬ ಕೃತಿ ಓದಿ ಈ ಲಕ್ಷ್ಮೀಶ ತೋಳ್ಪಾಡಿ ಸಹವಾಸ ಅಲ್ಲ ಎಂದು ದೂರವಾಗಿದ್ದೆ. ಕೂದಲು ಸೀಳುವ ಬರಹ ಅವರದು ಎಂಬ ಪೂರ್ವಗ್ರಹ. ಸರಳವಾದದ್ದನ್ನು ಕಠಿಣ ಮಾಡುತ್ತಾರೆ ಎಂಬ ಭಾವನೆ ಇತ್ತು.
ಆದರೆ ಈ ಕೃತಿ ಓದುತ್ತಾ ಹೋದ ಹಾಗೆ ಮಹಾಭಾರತದ ನಾವರಿಯದ ಒಳ ಮರ್ಮಗಳು ಆಯಾಮಗಳೂ ಹೊಳೆಯುತ್ತಾ ಇಡಿಯ ಮಹಾಭಾರತ ಮತ್ತೆ ಹೊಸ ದೃಷ್ಟಿಕೋನದಿಂದ ಓದುವ ಹಾಗೆ ಮಾಡಿತು. ಒಂದೊಂದು ಶ್ಲೋಕವೂ ಹೊಸ ಬಗೆಯ ಅರ್ಥದಲ್ಲಿ ಹೊಳೆಯುತ್ತದೆ.
ಈ ಕೆಳಗಿನ ಸಾಲುಗಳ ಗಮನಿಸಿ.
ಸಮತೋಲನವು ಏಕೆ ಕೆಡುತ್ತದೆಂದರೆ - ಪ್ರತ್ಯಕ್ಷವು ಪರೋಕ್ಷವನ್ನು ತನಗೆ ಬೇಕಾದಂತೆ ಬಳಸಿಕೊಳ್ಳಬಹುದು ಎಂದು ಭಾವಿಸುವುದರಿಂದ.
ಪಕ್ವವಾಗುವುದೆಂದರೆ ಬೇಯುವುದೇ ಅಲ್ಲವೇ! ಬೆಂದೇ ಪಕ್ವವಾಗಬೇಕಲ್ಲವೇ! ಬದುಕಿನ ಈ ಕಾವಿನಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲವೇನೋ; ತಪ್ಪಿಸಿಕೊಳ್ಳಬಾರದೇನೋ.
ಲೇಖಕರು ಹೇಳಿದಂತೆ, ಮಹಾಭಾರತ ಒಂದು ಗುಹೆ ಇದ್ದಂತೆ.. ಹಲವಾರು ದಾರಿಗಳು. handpicked ಘಟನೆಗಳನ್ನು ವಿಚಾರ ಮಾಡುವಂತೆ ಮಾಡಿದ್ದಾರೆ, ಅವರ ವಿಚಾರಧಾರೆ ನಮ್ಮ ನಮ್ಮ ಆಲೋಚನೆಯೊಂದಿಗೆ ಸೇರಿದರೂ, ಲೇಖಕರ ಮಹಾಭಾರತದ ತಿಳುವಳಿಕೆಯ ಆಳ ಸರಿಸಾಟಿ ಆಗಲಾರದು… ಮಹಾಭಾರತದಲ್ಲಿ ಬರೋ ನಮ್ಮ ಎಷ್ಟೋ ಸಂಶಯಗಳಿಗೆ ಉತ್ತರ ಕೊಡುವ ಈ ಪುಸ್ತಕ.. ಕೊನೆಯವರೆಗೂ ಇಟ್ಟುಕೊಳ್ಳಲೇಬೇಕಾದ ನಿಧಿ