Jump to ratings and reviews
Rate this book

ಕೇಶಕ್ಷಾಮ

Rate this book
ಹಾಸ್ಯ ಸಾಹಿತ್ಯ ರಚನೆಯಲ್ಲಿ ಹೊಸ ಮುಖಗಳು ಗೋಚರಿಸಿದಾಗೆಲ್ಲ ನಾನು ಕುತೂಹಲದಿಂದ ಆಶಾವಾದಿಯಾಗಿ ಅವರ ರಚನೆಗಳನ್ನು ಗಮನಿಸುತ್ತೇನೆ. ಹಾಸ್ಯವೆಂದರೆ ಬೇರೆಯವರ ಓರೆಕೋರೆಗಳನ್ನು ಅತಿರೇಕದ ವಿಡಂಬನೆಗೊಳಪಡಿಸುವುದಷ್ಟೆ ಅಲ್ಲ , ತನ್ನ ಒಳಗಿನ ಲೋಕವನ್ನೂ ಹಾಸ್ಯದ ನಿಕಷಕ್ಕೊಡ್ಡುವ ಧಾರ್ಷ್ಟ್ಯವಿರಬೇಕು ಎಂಬ ಅರಿವು ಇರುವ ಹೊಸಬರು ದೊರಕುವುದು ಅಪರೂಪ. To laugh at ಗಿಂತ laugh with ಎಂಬುದು ಶ್ರೇಷ್ಟ ಎನ್ನುತ್ತಾರೆ. ಇಂಥ ಸ್ವವಿನೋದ ವನ್ನು ತನಗರಿವಿಲ್ಲದೆಯೇ ಬಳಸಿರುವ ಗುರುಪ್ರಸಾದ ಕುರ್ತಕೋಟಿಯವರು ಮುನ್ನುಡಿಗಾಗಿ ಫೋನ್ ಮಾಡಿದಾಗ ನೀವು 'ತುರ್ತು ಕೋಟಿ' ಯಾಗದಿದ್ದರೆ ಬರೆಯುವೆ ಎಂದು ತಮಾಷೆ ಮಾಡಿದ್ದೆ. ಬರಹಗಳನ್ನು ಕೈಗೆ ಎತ್ತಿಕೊಂಡಾಗ ಸಂತೋಷವಾಯಿತು. ಹೊಸಬರಲ್ಲಿ ನಿರೀಕ್ಷಿಸಬಹುದಾದ ಹೆಚ್ಚಿನ ಧಾವಂತಗಳು ಕಾಣಿಸದೇ ಪಳಗಿದ ಲೇಖನಿಯಿಂದ ಹೊರಬಂದ ತಾಜಾ ಹಾಸ್ಯ ಪ್ರಬಂಧಗಳೇ ಗೋಚರಿಸಿದವು. ಉತ್ತರ ಕರ್ನಾಟಕದ ಭಾಷೆ , ಉತ್ತರ ಕನ್ನಡದ ಗಪ್ಪಣ್ಣ ಎರಡೂ ಗುರುಪ್ರಸಾದರ ಬರಹಗಳಲ್ಲಿ ಹಾಸ್ಯದ ಸಹಜ ಓಘವನ್ನು ತಂದಿತ್ತಿವೆ.
Head miss ಎಂದರೆ ತಲೆ ಇಲ್ಲದವರು!ಗುರುಪ್ರಸಾದ ಕುರ್ತುಕೋಟಿಯವರ ವಿನೋದತಪ್ಪಲೆಯಲ್ಲಿ ಹಾಸ್ಯದ ಅಗುಳುಗಳು ಬೆಂದಿವೆ ಎಂದು ಸೂಚಿಸಲು ಇದೊಂದು ಪದಪುಂಜವೇ ಸಾಕು. ಆದರೆ appetizer ಕೊಟ್ಟು full meals ನೀಡದೆಯೇ ಹೊರದಬ್ಬಿದರು ಎಂಬ ಆರೋಪದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಫುಲ್ ಮೀಲ್ಸ್ ಅಲ್ಲದಿದ್ದರೂ ಬಫೆಯ ಐಟಂಗಳಂತೆ ಅಲ್ಲೊಂದಿಲ್ಲೊಂದನ್ನು ಹೆಕ್ಕಿ ನಿಮ್ಮ ಮುಂದಿರಿಸುತ್ತಿದ್ದೇನೆ.
‘ಸೈಕ್ಲಿಂಗ್ ಮಾಡುತ್ತೇನೆ’ ಎನ್ನುತ್ತಾಳೆ ಸಹೋದ್ಯೋಗಿ ಲತಾ. ಬಳ್ಳಿಯಂತೆಯೂ ಇದ್ದಾಳೆ. ಇವನೂ ಸೈಕಲ್ ಕೊಂಡ. ಆದರೆ ಇವನ ಸೈಕಲ್ಲೋ, ಮುಖವೋ ಬೀದಿನಾಯಿಗಳಿಗೆ ಅಷ್ಟೊಂದು ಪ್ರಿಯವೆನಿಸಲಿಲ್ಲ. ಸೈಕ್ಲಿಂಗ್ನಲ್ಲಿ ಪಡಬಾರದ ಪಾಡು ಪಟ್ಟ ನಂತರ ತಿಳಿಯುವುದು ಲತಾ ಬಳಸಿದ್ದು ಬೀದಿಯಲ್ಲಿ ಓಡಿಸುವ ಸೈಕಲ್ಲಲ್ಲ, ಮನೆಯಲ್ಲೇ ನಿಂತಲ್ಲೇ ಪೆಡಲ್ ಮಾಡುವ ಸೈಕಲ್ ಎಂದು.
ಬಾಸ್ ಮತ್ತು ಉದ್ಯೋಗಿಗಳ ನಡುವಿನ ಹಲವು ಪ್ರಸಂಗಗಳು ಮನಕ್ಕೆ ಹತ್ತಿರವಾಗುವಂತಿದ್ದರೆ ಗಂಡ-ಹೆಂಡತಿಯರ ನಡುವಿನ ಸರಸ-ವಿನೋದ ಪ್ರಸಂಗಗಳು ಕಚಗುಳಿ ಇಡುವಂತಿವೆ. ‘ಗಂಡು ಹೆನ್ ಪೆಕ್ಡು; ಹೆಣ್ಣು ಹೆನ್ನು’ ಎನ್ನುವ ಧೋರಣೆ ಇವರಲ್ಲಿಯೂ ಪ್ರಕಟವಾಗಿರುವುದು ಇದೇ ರೀತಿಯ ಓದಿನಿಂದ ಇವರು ಪ್ರಭಾವಿತರಾಗಿರುವುದಕ್ಕೆ ದ್ಯೋತಕವಾಗಿದೆ.
ಹಾಸ್ಯಬರವಣಿಗೆ ನೇಯ್ಗೆ ಇದ್ದಂತೆ. ತೀರಾ ಹತ್ತಿರಕ್ಕೆ ಹೆಣೆದರೆ ಗಂಟು, ಕಗ್ಗಂಟು ಆಗಿ ಸುಲಭತೆ, ಸುಪ್ರಿಯತೆಗಳನ್ನು ಕಳೆದುಕೊಳ್ಳುತ್ತದೆ; ಕೊಂಚ ಸಡಿಲ ಬಿಟ್ಟರೆ ಜಾಳುಜಾಳಾಗುತ್ತದೆ. ಯಾವ ಹಾಸ್ಯಬರಹವನ್ನು ಎಲ್ಲಿಯವರೆಗೆ ಎಳೆದು ಎಲ್ಲಿ ನಿಲ್ಲಿಸಬೇಕೆಂಬ ಅರಿವಿದ್ದರೆ ಮಾತ್ರ ಯಶಸ್ವಿ ಹಾಸ್ಯಲೇಖನ ಸಾಧ್ಯ. ಕುರ್ತುಕೋಟಿಯದು ಈ ವಿಷಯದಲ್ಲಿ ಕುರ್ತೇಟು. ಈಗಿನ ಯಾವುದೇ ಕಾಮೆಡಿ (ಆಂಗ್ಲದಲ್ಲಿ ಅದನ್ನು ಕಾಮೆಡಿ ಎಂದೂ, ಹಾಸ್ಯಗಾರನನ್ನು ಕಮೆಡಿಯನ್ ಎಂದೂ ಕರೆದರೂ ಅದೇಕೋ ಕನ್ನಡದಲ್ಲಿ ಕಾಮೆಡಿ ಮಿಡಿ ತೊಟ್ಟು ನಿಂತು ಕಾಮಿಡಿ ಆಗಿದೆ) ಪ್ರಸ್ತುತ ಕನ್ನಡ ಹಾಸ್ಯ ಅಶ್ಲೀಲತೆಯತ್ತ ವಾಲಿರುವ ಭಯದಲ್ಲಿರುವಾಗ ಅದರ ಸುಳಿವೂ ಇರದಂತಹ ಶುದ್ಧ ಹಾಸ್ಯವನ್ನು ಕಟ್ಟಿಕೊಟ್ಟಿರುವ ಗುರುಪ್ರಸಾದ ಕುರ್ತುಕೋಟಿಯವರ ಶ್ರಮ ನನಗೆ ಮೆಚ್ಚುಗೆಯಾಯಿತು.

ನಾಯಿಪಾಡು ಸಂಕಲನದ ಒಂದೊಳ್ಳೆ ಪ್ರಬಂಧ. ನಾಯಿ ಸಾಕುವ ನಾಯಿಪ್ರಿಯರನ್ನು ' ನಾಯಿವಂತರು' ಎಂದು ಕರೆಯುತ್ತಾರೆ. ಪಕ್ಕದ ಮನೆಯಾತನ ನಾಯಿಯ ಬೊಗಳುವಿಕೆಯಿಂದ ಕಂಗೆಟ್ಟ ಒಬ್ಬ ಸಾಧು ಸಜ್ಜನ ಏನೂ ಮಾಡಲಾರದೇ ತಾನೂ ನಾಯಿವಂತನಾಗುವದರ ಮೂಲಕ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳುತ್ತಾನೆ. ಮತ್ತು ಅನಂತರ ಅದರಿಂದ ಅನೇಕ ಲಾಭಗಳನ್ನು ಪಡೆಯುತ್ತಾನೆ. ನಾಯಿಸಾಕುವ ಖಯಾಲಿಯವರ ಅತಿರೇಕಗಳನ್ನು ತುಂಬ ಸಂಯಮದಿಂದ ವಿಡಂಬಿಸುವ ಈ ಲೇಖನ ತಿಳಿಯಾಗಿ ತುಟಿ ಅರಳಿಸುತ್ತದೆ. ತಮ್ಮ ಮನೆಯ ನಾಯಿಗೆ ತಮ್ಮ ಬಾಸ್ ನ ಹೆಸರಿಟ್ಟು ಆಫೀಸಿನಲ್ಲಿನ ತಮ್ಮ ನಾಯಿಪಾಡನ್ನು ಮರೆಯುವ ಕಲ್ಪನೆಯೇ ಕಚಗುಳಿ ಕೊಡುವಂಥದ್ದು. ಇಂಥ ಅನೇಕ ಪ್ರಯೋಗ ಗಳು ಸಂಕಲನದುದ್ದಕ್ಕೂ ನಮಗೆ ದೊರೆಯುತ್ತವೆ. ಹಳ್ಳಿಗಾಡಿನ ಮುಗ್ಧತೆ ನಗರದ ಅನಿವಾರ್ಯತೆಗಳೆಲ್ಲ ಇಲ್ಲಿನ ಪ್ರಬಂಧಗಳಿಗೆ ವಸ್ತುಗಳಾಗಿವೆ. ಸಂಸಾರದ ಸಹಜ ಜಂಜಡಗಳು ಇಲ್ಲಿ ಹಗುರಾಗಿ ಬಗೆಹರುತ್ತವೆ. ಹಾಸ್ಯದ ಉದ್ದೇಶವೇ ಬದುಕನ್ನು ಹಗುರಾಗಿಸಿ ಸಹ್ಯವಾಗಿಸುವುದು. ಗುರುಪ್ರಸಾದರ ಹೆಜ್ಜೆಗಳು ಈ ದಿಕ್ಕಿನಲ್ಲಿ ಸ್ಪಷ್ಟವಾಗಿ ಹೊರಟಿವೆ.

ಯಶಸ್ವೀ ಹಾಸ್ಯ ಲೇಖಕ ಸುತ್ತಲಿನ ಲೋಕವನ್ನು ವೀಕ್ಷಿಸುವ ಚಾಕಚಕ್ಯತೆಯೊಂದಿಗೇ ಸಾಹಿತ್ಯ ಕಾವ್ಯಗಳ ವಿವಿಧ ಪ್ರಕಾರಗಳನ್ನು ಅಧ್ಯಯನ ಮಾಡಿ ಅವುಗಳನ್ನು ತನ್ನ ಬರವಣಿಗೆಯಲ್ಲಿ ಸೂಕ್ತವಾಗಿ ಬಳಸಿಕೊಳ್ಳುವುದರ ಮೂಲಕ ಸಾಹಿತ್ಯಿಕ ತೂಕವನ್ನು ಗಳಿಸಿಕೊಳ್ಳಬಹುದಾಗಿದೆ. ಗುರುಪ್ರಸಾದರ ಮುಂದಿನ ಕೃತಿಗಳಲ್ಲಿ ಈ ಬೆಳವಣಿಗೆಯನ್ನು ಖಂಡಿತವಾಗಿ ನಿರೀಕ್ಷಿಸಬಹುದಾಗಿದೆ. ತಮ್ಮ ಈ ಕ್ರತಿಯ ಮೂಲಕವಾಗಿ ಹೊಸವರ್ಷಕ್ಕೆ ಹೊಸದೊಂದು ಉತ್ಸಾಹವನ್ನು ಒದಗಿಸಿದ್ದಕ್ಕಾಗಿ ಗುರುಪ್ರಸಾದ ಕುರ್ತಕೋಟಿಯವರನ್ನು ಅಭಿನಂದಿಸುತ್ತೇನೆ**********

ಮಂಗಳೂರು. ಪ್ರೊ. ಭುವನೇಶ್ವರಿ ಹೆಗಡೆ.

98 pages, Hardcover

Published April 18, 2021

About the author

ಗುರುಪ್ರಸಾದ ಕುರ್ತಕೋಟಿ ರೈತರು ಹಾಗೂ ರೈಟರ್ರು!
ಇವರು ಸಂಪಾದಿಸಿದ ಹಾಗೂ ಬರೆದ ಕೃತಿಗಳು ಮೂರು...
೧. ಎಲ್ಲರಂಥವನಲ್ಲ ನನ್ನಪ್ಪ (ಸಂ)
೨. ಅಪ್ಪರೂಪ (ಸಂ)
೩. ಕೇಶಕ್ಷಾಮ (ನಗೆ ಬರಹಗಳು)

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
0 (0%)
4 stars
0 (0%)
3 stars
0 (0%)
2 stars
0 (0%)
1 star
0 (0%)
No one has reviewed this book yet.

Can't find what you're looking for?

Get help and learn more about the design.