ಸಂಶೋಧನಾ ವಿಜ್ಞಾನಿಯಾಗಿರುವ ಚೀಮನಹಳ್ಳಿ ರಮೇಶಬಾಬು ಚಿಂತಾಮಣಿ ತಾಲ್ಲೂಕಿನ ಚೀಮನಹಳ್ಳಿಯವರು. ‘ಪ್ರಶ್ನೆ ಮತ್ತು ದೇವರು’, ‘ಎರಡು ಲೋಟಗಳು’, ‘ಮಾಯಾ ಸರೋವರ’ ಎಂಬ ಕವಿತಾ ಸಂಗ್ರಹಗಳನ್ನು ‘ನಾಗ್ದಾಳೆ’ ಎಂಬ ಖಂಡಕಾವ್ಯವನ್ನು ‘ಹಸ್ತಬಲಿ’ ಎಂಬ ಕಥಾ ಸಂಕಲನ ಹಾಗು ‘ಹದ’, ‘ಬಲಿಹಾರ’, ‘ಟೈರ್ಸಾಮಿ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ‘ಕಾಡು ಹುವ್ವು’ ಇವರ ಸಂಪಾದಕತ್ವದಲ್ಲಿ ಬಂದಿರುವ ಅನುವಾದಿತ ಕವಿತೆಗಳ ಸಂಗ್ರಹ. ಮಾಸ್ತಿ ಕಾದಂಬರಿ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಬೆಟಗೆರಿ ಕೃಷ್ಣಶರ್ಮ ಕಾದಂಬರಿ ಪ್ರಶಸ್ತಿ, ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ, ವೀಚಿ ಉದಯೋನ್ಮುಖ ಪ್ರಶಸ್ತಿ, ಅರಳು ಸಾಹಿತ್ಯ ಪ್ರಶಸ್ತಿ ಸೇರಿದಂತೆ ಇನ್ನೂ ಹಲವು ಬಹುಮಾನಗಳನ್ನು ಪಡೆದಿದ್ದಾರೆ.
ಹಲವಾರು ಕಾರಣಗಳಿಂದ ಈ ಕಾದಂಬರಿ ನನಗೆ ಖುಷಿ ಕೊಟ್ಟಿತು. ಒಂದು ಇಲ್ಲಿ ಕಥೆಯ ಹರಿವು. ಇದು ನದಿಯ ಪಾತ್ರದ ಹಾಗೆ. ಟೈರ್ಸಾಮಿ ಎಂಬ ಬಯಸದೆ ಪ್ರಸಿದ್ಧಿಗೆ ಬಂದ ಸನ್ಯಾಸಿಯ ತರಹದ ಮನುಷ್ಯನ ಅಂತಿಮ ಘಳಿಗೆಗಳಲ್ಲಿ ಇನ್ನೊಬ್ಬರ ಮೂಲಕ ಅವನ ಬದುಕಿನ ಹೆಣಿಗೆ ಕಾದಂಬರಿಯ ಹಾಗೆ ಬಿಚ್ಚಿಕೊಳ್ಳುವ ತಂತ್ರ. ಒಂದು ಊರಿನ ವಿವರಗಳ ಬರೆಯುವಾಗ ಕಣ್ಣಿಗೆ ಕಟ್ಟುವ ಹಾಗೆ ಬರೆದ ಶೈಲಿ, ಇಸಂಗಳ ಹಂಗಿಲ್ಲದೆ ಬರೆದ ರೀತಿ, ಅತ್ತ ಕಡೆ ಅಧ್ಯಾತ್ಮಿಕವಾಗಿ ಕಳೆದು ಹೋಗದ ಬರವಣಿಗೆ , ಕ್ಯಾಥರೀನ್‌ಳ ತುಮುಲಗಳ ಸಶಕ್ತ ಚಿತ್ರಣ, ನವೀನ(ಟೈರ್ಸಾಮಿ)ನ ತೊಳಲಾಟದ ಚಿತ್ರಣ ಇವೆಲ್ಲ ಬಹಳ ಹಿಡಿಸಿತು. ಕಾದಂಬರಿಯ ಚೌಕಟ್ಟಿಗೆ ಒಗ್ಗದ ಹಾಗೆ ಲೇಖಕರು ಅದನ್ನು ಹರಿಯಬಿಟ್ಟ ರೀತಿ ಸಂಪ್ರದಾಯವಾದಿ ಓದುಗರು ಒಪ್ಪದಿದ್ದರೂ ಈ ಪ್ರಯತ್ನ ಕುತೂಹಲ ಮೂಡಿಸಿತು. ಒಂದೆರಡು ಕಡೆ ನಾಟಕೀಯ ಅನಿಸಿತು. ಕನ್ನಡದ ಬರಹಗಾರರು ತಮ್ಮ ತಮ್ಮ ರಾಜಕೀಯ ನಿಲುವು ,ಸಿದ್ಧಾಂತಗಳಿಗೆ ಬರಹವನ್ನು ತಿರುಚುವ ಹೊತ್ತಲ್ಲಿ ಕಥೆ ಏನು ಅದಕ್ಕೆ ಮಾತ್ರ ನಿಷ್ಟವಾಗುವ ತರಹದ ಬರವಣಿಗೆ ಅಗತ್ಯ ಎಂದು ಅನಿಸಿತು .
ದಾರಿಯಲ್ಲಿ ಅಡ್ಡಾಡುವಾಗ ಕೆಲವೊಂದು ವ್ಯಕ್ತಿಗಳು ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ಗಮನಿಸಿರುತ್ತೇವೆ. ಕೆಲವರು ಬುದ್ಧಿಮಾಂದ್ಯರು, ಮಾನಸಿಕ ಅಸ್ವಸ್ಥರು, ಕುಡಿದು ತೂರಾಡುವವರನ್ನ ನೋಡಿರುತ್ತೇವೆ ಮತ್ತು ಇವರಲ್ಲದೆ ಬೇರೆ ಬಗೆಯ ವ್ಯಕ್ತಿಗಳು ಕಾಣ ಸಿಗುತ್ತಾರೆ. ಅವರಲ್ಲಿ ಏನೋ ವಿಶೇಷ ಶಕ್ತಿ ಇರಬಹುದು ಎಂದು ಅನಿಸುತ್ತಿರುತ್ತದೆ. ಅಂಥ ವ್ಯಕ್ತಿಗಳ ಸಾಲಿಗೆ ಸೇರುವ ಟೈರ್ಸಾಮಿ ಎಂಬ ವ್ಯಕ್ತಿಯ ಕತೆಯಿದು.
ಚಿಕ್ಕಬಳ್ಳಾಪುರ ಪರಿಸರದ ಅಮ್ಮನಕೆರೆ ಎಂಬ ಹಳ್ಳಿಯ ಚಿತ್ರಣದೊಂದಿಗೆ ಶುರುವಾಗುತ್ತದೆ ಕಾದಂಬರಿ. ಆ ಹಳ್ಳಿಯ ಕೆರೆಯ ಪಕ್ಕದಲ್ಲೊಂದು ಹುಣಸೇಮರ, ಅದಕ್ಕೊಂದು ಭಕ್ತಿಭಾವದ ಇತಿಹಾಸವಿದೆ. ಆ ಮರ ಇರುವ ಜಮೀನು ವೆಂಕಟರೆಡ್ಡಿ ಎಂಬ, ಎಲ್ಲವನ್ನೂ ಹಣದ ಕಣ್ಣಲ್ಲೇ ನೋಡುವ ವ್ಯಕ್ತಿಯದು. ಅವನಿಗೆ ಟೈರ್ಸಾಮಿಯ ಮೇಲೆ ಭಯ-ಭಕ್ತಿ ಮತ್ತು ಟೈರ್ಸಾಮಿಯ ಹೆಸರಿನಲ್ಲಿ ಹಣಗಳಿಸಲು ಆಶ್ರಮ ಕಟ್ಟುವ ಯೋಜನೆಯಲ್ಲಿರುತ್ತಾನೆ. ವೆಂಕಟರೆಡ್ಡಿ ಪಾತ್ರದ ಮೂಲಕ ಈಗಿನ ಸಮಾಜದ ಸ್ಥಿತಿಯನ್ನು ತೆರೆದಿಟ್ಟಿರುವುದು ಚೆನ್ನಾಗಿದೆ.
ಈಗ, ಹುಣಸೆ ಮರಕ್ಕೆ ಮತ್ತೊಂದಷ್ಟು ಪೂಜ್ಯಭಾವನೆ ತಂದುಕೊಟ್ಟಿರುವ ಟೈರ್ಸಾಮಿಯ ಕೊನೆಗಾಲದ ಕ್ಷಣಗಳು ಮರದ ಕೆಳಗಿನ ಮಂಚದ ಮೇಲೆ ಆರಂಭಗೊಂಡಿರುತ್ತವೆ. ಟೈರ್ಸಾಮಿಯ ಈ ಪರಿಸ್ಥಿತಿಯಲ್ಲಿ, ಆತನ ವಿಶಿಷ್ಟ ಶಕ್ತಿಗೆ ಆಕರ್ಷಣೆಗೊಳಗಾದ ನಟರಾಜ ಮತ್ತು ಅವನ ಗೆಳೆಯ ಪತ್ರಕರ್ತ ಸತೀಶ್ ಬೆಳ್ಳೂರ್.. ಅವನ ಬಗ್ಗೆ ವಿಷಯಗಳನ್ನು ಅರಹುತ್ತ, ಜೊತೆಗೆ ಬೇರೆ ಬೇರೆ ವಿಚಾರಗಳನ್ನು ತರ್ಕಿಸುವ ಸಂದರ್ಭಗಳ ಮೂಲಕ ಸಾಗುತ್ತದೆ ಕಾದಂಬರಿ. ಅವರಿಬ್ಬರ ತರ್ಕಸರಣಿ ಕುತೂಹಲಕಾರಿಯಾಗಿದೆ.
ಟೈರ್ಸಾಮಿ ಬಗ್ಗೆ ಸತೀಶ ಬೆಳ್ಳೂರ್ ಬರೆದ 'ಸಂತ' ಕಾದಂಬರಿಯೊಳಗೆ, ಟೈರ್ಸಾಮಿ ಅವಧೂತನಂತಹ ಸ್ಥಿತಿಗೆ ಬರಲು ಕಾರಣಗಳು, ಅವನ ಕುಟುಂಬ ಹಿನ್ನೆಲೆ ಎಲ್ಲವೂ ಬರುತ್ತದೆ.
ಸಾವು ಎಂಬುದು ಅತಿಯಾಗಿ ಕಾಡಿದಾಗ ಮನುಷ್ಯನಲ್ಲಾಗುವ ವಿವಿಧ ಬದಲಾವಣೆಗಳು ಯಾವ ಯಾವ ಹಂತಕ್ಕೆ ಕರೆದೊಯ್ಯುತ್ತವೆ ಎಂಬುದು ಟೈರ್ಸಾಮಿ ಮುಖಾಂತರ ಹೇಳಲಾಗಿದೆ. ಸಾವಿನ ಕುರಿತ ವಿಚಾರಗಳನ್ನ ವಿವಿಧ ರೂಪಕಗಳ ಮೂಲಕ ಚೆನ್ನಾಗಿ ಚಿತ್ರಿಸಿದ್ದಾರೆ.
ಟೈರ್ಸಾಮಿ ಪತ್ನಿ ಕ್ಯಾಥರಿನ್ ಳ ಮೂಲಕ.. ವಿಚಿತ್ರ ರೀತಿ ವರ್ತಿಸುವ ಗಂಡನಿಂದ ಅನುಭವಿಸುವ ಪಾಡು, ಗಾರ್ಮೆಂಟ್ ಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳ ಬವಣೆಗಳು, ವಿಶೇಷವಾಗಿ ಬಾಡಿಗೆ ತಾಯಿಯ ಚಿತ್ರಣ, ಎಲ್ಲವೂ ಈ ಪಾತ್ರದ ಮೂಲಕ ಒಪ್ಪಿತವಾಗುತ್ತದೆ.
ಷರೀಫರ ಗೀತೆಗಳನ್ನು ಅಳವಡಿಸಿಕೊಂಡಿರುವುದು ಚೆನ್ನಾಗಿದೆ. ಕೆಲವು ಕಡೆ ಬಳಸಿರುವ ರೂಪಕಗಳು ಅದ್ಭುತವಾಗಿವೆ ಮತ್ತೆ ಕೆಲವು ಕಡೆ ಕ್ಲೀಷೆಯಾಗಿವೆ. ಹಾಗೆಯೇ, ಕಾಣುವ ಪ್ರತಿಯೊಂದನ್ನೂ ಅಕ್ಷರ ರೂಪಕ್ಕಿಳಿಸಿರುವುದನ್ನ ಓದುವಾಗ ಇಷ್ಟೊಂದು ಬೇಡವಾಗಿತ್ತೋ ಅನಿಸಿದ್ದಂತೂ ನಿಜ. ಅದರಲ್ಲೂ ಕೆಲವು ಕಾದಂಬರಿಯ ಚೌಕಟ್ಟಿನೊಳಗೇ ಹೊಂದಿಕೆಯಾಗುತ್ತಿರಲಿಲ್ಲ ಅನ್ನಿಸಿತು.
ವಿಭಿನ್ನ ಕಥಾ ತಂತ್ರ ಹೊಂದಿರುವ ಈ ಕೃತಿಯಲ್ಲಿ ಇವುಗಳನ್ನೆಲ್ಲ ಕಮ್ಮಿ ಮಾಡಿದಿದ್ದರೆ ಕಾದಂಬರಿ ಇನ್ನೂ ಒಂದು ಹಂತಕ್ಕೆ ಬಿಗಿಯಾಗುತ್ತಿತ್ತು. ಒಂದು ಉತ್ತಮ ಕೃತಿಯಾಗುತಿತ್ತು ಎಂದು ಅನಿಸಿತು.
ಇಷ್ಟಾದರೂ ಒಂದು ವಿಶಿಷ್ಟ ಕೃತಿಯಾಗಿ ಮನಸ್ಸಿನಲ್ಲುಳಿಯುತ್ತದೆ.
This entire review has been hidden because of spoilers.
231 ಪುಟಗಳ ಈ ಕಾದಂಬರಿ ಓದಿ ಮುಗಿಸಲು ನನಗೆ ಹೆಚ್ಚೂ ಕಡಿಮೆ 20 ದಿನಗಳು ಬೇಕಾದವು. ಇನ್ನು ಇದರ ಗುಂಗಿನಿಂದ ಆಚೆ ಬರಲು ಬೇಕಾಗುವ ದಿನಗಳು ಅದೆಷ್ಟೋ..
ಕಾರಣ ಕಾದಂಬರಿಯ ಕಥಾವಸ್ತು ಮತ್ತು ಅದರ ವಿಸ್ತಾರವೇ. ರಮೇಶಬಾಬುರವರು ಎಲ್ಲೂ ಅವಸರಿಸದೇ ಒಂದುಕಡೆ ಸಾವನ್ನು ಮತ್ತೊಂದೆಡೆ ಬದುಕನ್ನು ಇಂಚಿಂಚಾಗಿ ಓದುಗರ ಒಳಗಿಳಿಸಲು ವಹಿಸಿರುವ ಶ್ರಮ ಕಾದಂಬರಿ ಓದಿಯೇ ತಿಳಿಯಬೇಕು. ಕಡೆಗೂ ಕಾದಂಬರಿಯ ಒಲವು ಸಾವಿನೆಡೇಗೇ ಹೆಚ್ಚಿದ್ದಂತೆ ತೋರಿತು.
ಸಾವಿನ ಹುಡುಕಾಟದಲ್ಲಿ ಕೈಯ್ಯಲ್ಲಿರುವ ಬದುಕಿನಿಂದ ವಿಮುಖನಾಗುವ ನವೀನ, ಕೈಜಾರಿ ಹೋಗುತ್ತಿರುವ ಬದುಕನ್ನು ದಕ್ಕಿಸಿಕೊಳ್ಳುವ ಛಲದಲ್ಲಿ ಅಹರ್ನಿಶಿ ಬಡಿದಾಡುವ ಕ್ಯಾಥರಿನ್, ಪಾರಮಾರ್ಥ್ಯದೆಡೆಗೆ ವಾಲುತ್ತಿರುವ ನಟರಾಜ್, ಎಲ್ಲವನ್ನೂ ಮತ್ತು ಎಲ್ಲರನ್ನೂ ತನ್ನ ಅನುಕೂಲಗಳಿಗೆ ಬಳಸಿಕೊಳ್ಳುವ ವೆಂಕಟ್ರೆಡ್ಡಿಯ ಮನಸ್ಥಿತಿಯ ಚಿತ್ರಣದೊಂದಿಗೇ ಚಿಂತಾಮಣಿ- ಶಿಡ್ಲಘಟ್ಟ ಪ್ರಾಂತ್ಯದ ಸ್ಥಳೀಯ ಚಿತ್ರಣವೂ ತುಂಬ ವಿವರವಾಗಿದ್ದು ಓದಿನ ಖುಷಿ ಒದಗಿಸುತ್ತದೆ. (ಅದೆಂತದೋ ದೋಸೆ-ಚಿತ್ರಾನ್ನ ಅಂತೆ , ಜೀವಮಾನದಲ್ಲೊಮ್ಮೆ ತಿನ್ನಬೇಕು ಎಂದುಕೊಂಡೆ :p ) ಹಾಗೆಯೇ ಬಾಡಿಗೆ ತಾಯಂದಿರ (ಸರೋಗೇಟ್ ಮದರ್) ಕುರಿತಾಗಿ ಪ್ರಸ್ತಾಪಿಸಿದ, ಇಷ್ಟು ವಿಸ್ತಾರವಾದ ವಿವರಗಳನ್ನೊಳಗೊಂಡ ಸಾಹಿತ್ಯ ರಚನೆ ಸಧ್ಯದಮಟ್ಟಿಗೆ ಇನ್ಯಾವುದೂ ಇಲ್ಲವೇನೋ. ಕಥೆಯ ಆ ಎಳೆಯನ್ನು ಒಂದು ಸರಿಯಾದ ಅಂತ್ಯವಿಲ್ಲದೇ ಮುಗಿಸಿದ್ದುದು ಮತ್ತು ಗುಣನ ಸಾವು ನನಗೆ ಸ್ವಲ್ಪ ಮಟ್ಟಿಗೆ ಅಸಮಾಧಾನ ತಂದುಕೊಟ್ಟ ವಿಷಯಗಳು. ಅಲ್ಲಲ್ಲಿ ಶರೀಫಜ್ಜರ ತತ್ವಪದಗಳನ್ನು ಅಳವಡಿಸಿಕೊಂಡಿರುವುದು ಸಂದರ್ಭಾನುಸಾರವಾಗಿ ಚೆನ್ನಾಗಿದೆ.
ಕಾದಂಬರಿಕಾರರು ಬರಿದೇ ನವೀನ-ಕ್ಯಾಥರೀನರ ದಾಂಪತ್ಯದ ಕಥೆಯನ್ನೇ ಮುಖ್ಯಭೂಮಿಕೆಯಲ್ಲಿರಿಸಿ ಟೈರ್ಸಾಮಿಯ ಕಥೆ ಹೇಳಬಹುದಿತ್ತು, ಆದರೆ ಅದನ್ನು flashbackನಲ್ಲಿರಿಸಿ ಟೈರ್ಸಾಮಿ ನಟರಾಜ, ಸತೀಶ್,ವೆಂಕಟ್ರೆಡ್ಡಿ ಮತ್ತವನ ರಾಜಕೀಯ ಇತ್ಯಾದಿ ಎಳೆಗಳೊಂದಿಗೆ ಸಧ್ಯದ ಜೀವನದೊಂದಿಗೆ ಸೇತುವೆ ನಿರ್ಮಿಸಿದಂತೆ ಹೆಣೆದಿರುವುದು ಇಹಕ್ಕೂ ಪರಕ್ಕೂ ನಡುವೆ ಹೊಯ್ದಾಡುವ ಬಾಳಿನ ಅಣಕುರೂಪದಂತೆ ಕಂಡು ಕೃತಿಯನ್ನು ಇನ್ನಷ್ಟು ಗಹನವಾಗಿಸಿದೆ ಎನಿಸಿತು.
ವ್ಯಕ್ತಿಯೊಬ್ಬನ ಬದುಕನ್ನು ನಿರ್ದೇಶಿಸುವುದು ಯಾವುದು? ಸಮಾಜವೋ? ಸಂಸಾರವೋ? ವ್ಯಕ್ತಿಗತ ಆಸೆಗಳೋ ಅಥವಾ ಎಲ್ಲವನ್ನೂ ಮೀರಿದ ಶೂನ್ಯವೋ? ನಮ್ಮ ನಮ್ಮ ಅಂತರಾಳದ ನಿರ್ದೇಶಕ ಧ್ವನಿಯ ಆಣತಿಯಂತೆಯೇ ನಮ್ಮ ನಮ್ಮ ಜೀವನದ ಚಿತ್ರಣವಲ್ಲವೇ?