ಈಗ ಓದಿರುವುದು ಮರೆಯಬಾರದು ಎಂದರೇ ಡ್ರೈಫ್ರೂಟ್ಸ್ ಕೊಡಿ ಎನ್ನುತ್ತಾರೆ, ನಮ್ಮ ಕಾಲದಲ್ಲಿ ಕೆನ್ನೆ ಮೇಲೆ ಎರಡು ಕೊಟ್ಟರೆ ಎಲ್ಲಾ ನೆನಪಾಗುತ್ತಿತ್ತು.
- ಗಂಗಾವತಿ ಪ್ರಾಣೇಶ್
ವಿಶ್ವೇಶ್ವರ್ ಭಟ್ ಅವರ ಪತ್ರಿಕೆಯೊಂದರಲ್ಲಿ ಅಂಕಣಗಳಾಗಿ ಬರುತ್ತಿದ್ದ ಗಂಗಾವತಿ ಪ್ರಾಣೇಶ್‌ರವರ ಬರಹಗಳನ್ನು ಒಂದುಗೂಡಿಸಿ ಮುದ್ರಿಸಲೂ ಕಾರಣೀಭೂತರಾದ ಸಕಲರಿಗೂ ರಾಶಿ ರಾಶಿ ಧನ್ಯವಾದ ಹೇಳಲೇಬೇಕು. ಬದುಕಿದವರ ಅನುಭವಾಮೃತವನ್ನು ಓದುವ ಮತ್ತು ಅವುಗಳಿಂದ ಕಲಿಯುವ ಸುಖ ಬೇರಯದ್ದೇ ಆಗಿರುತ್ತದೆ. ಹಾಗೇ ಬದುಕಿದ, ನಮ್ಮ ನಡುವೆ ನಕ್ಕು ನಲಿಸಿದ ಪ್ರಾಣೇಶ್‌ರವರ ಅನುಭವದ ಬುತ್ತಿ - ನಗ್ತಾ ನಲಿ ಅಳ್ತಾ ಕಲಿ.
ಅಭಿನವ ಬೀಚಿಯೆಂದೇ ಖ್ಯಾತರಾದ ಪ್ರಾಣೇಶ್‌ರ ವೃತ್ತಿಯಿರುವುದು ನಾಲಿಗೆಯಲ್ಲಿ. ಅವರ ವಾಕ್ ಚತುರತೆಯೇ ಅವರ ಬಂಡವಾಳ ಮತ್ತು ಕಾರ್ಪೋರೆಟ್‌ನಲ್ಲಿ ಕರೆಯುವಂತೆ ಯುಎಸ್‌ಪಿ. ಹಾಗೇ ಮನಸಾರೆ ಮಾತನಾಡಬಲ್ಲ, ಬದುಕಿನ ಹಲವಾರು ಮಜಲುಗಳನ್ನು ಕಂಡ ಪ್ರಾಣೇಶ್‌ರವರ ಕೈಗೆ ಲೇಖನಿಯಿತ್ತು ಬರೆಸಿದ ಮೂವತ್ತು ಅಂಕಣಗಳಲ್ಲೂ ಕಾಣಸಿಗುವುದು ಬದುಕಿನ ಅತ್ಯಮೂಲ್ಯ ಪಾಠಗಳು ಮಾತ್ರ! ನೀವು ಅವರ ನಗೆಭಾಷಣಗಳನ್ನು ನೋಡಿದ್ದರೇ, ಅಂದು ಮತ್ತು ಇಂದು ವಿಷಯಕ್ಕೆ ಅವರು ಸಾಕಷ್ಟು ಒತ್ತು ನೀಡಿ ಮಾತನಾಡುತ್ತಾರೆ. ಅರವತ್ತರ ದಶಕದಲ್ಲಿ ಜನಿಸಿದ ಜೀವವೊಂದು ಎರಡು ಸಾವಿರದ ಇಪ್ಪತ್ತರ ಪರಿಸರವನ್ನು ನೋಡುವ ಮತ್ತು ಅದೆರೆಡೆಗಿನ ವಿರೋಧಾಭಾಸಗಳನ್ನು ಮುಕ್ತವಾಗಿ ಬರೆದಿದ್ದಾರೆ.
ಅಲ್ಲಲ್ಲಿ ಬರುವ ವಚನಗಳು ಮತ್ತು ಕಗ್ಗಗಳು ಮನಸೆಳೆಯುತ್ತವೆ. ಅಂಬಕ್ಕನ ಬರಹವಂತೂ ಇತ್ತೀಚಿನ ಪೀಳಿಗೆಯ ಪುಣ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅವಿಭಕ್ತ ಕುಟುಂಬಗಳು, ಹಬ್ಬ ಹರಿದಿನಗಳು, ನಾನು ಎಂಬ ಅಹಂ, ಭಕ್ತಿ, ದೇವರು, ಊರು, ಕೆಲಸ, ಕಾರ್ಪೋರೆಟ್ ರಾಜ್ಯೋತ್ಸವ, ಆಡಂಬರ, ಶೋಕಿ, ಸೆಲ್ಫಿ, ಗೂಗಲ್, ಫೇಸ್‌ಬುಕ್ ಮುಂತಾದವುಗಳನ್ನು ಹಿಡಿ ಹಿಡಿ ಆಡಿಕೊಂಡಿದ್ದಾರೆ. ಮತ್ತು ಅದು ನಿಜ ಕೂಡ.
ನಿಮ್ಮ ಆಸಕ್ತಿಯನ್ನು ಕೆರಳಿಸಲು ಕೆಲವು ವಿಷಯಗಳನ್ನು ಹೇಳಲೇಬೇಕು. ಕಲ್ಲನ್ನು ನಾವೇಕೆ ಪೂಜಿಸುತ್ತೇವೆ? ಮೂರ್ತಿಯನ್ನು ಪ್ರತಿಷ್ಠಾಪಿಸಿ ಹೋಮ ಹವನಗಳನ್ನು ಮಾಡಿದ ಮಾತ್ರಕ್ಕೆ ಕಲ್ಲಿಗೆ ದೈವಾಂಶ ಬಂದು ಬಿಡುತ್ತದೆ ಎನ್ನಬಹುದಾ? ಹಾಗಾದಲ್ಲಿ ಸಾಮಾನ್ಯ ಕಲ್ಲಿಗೆ ಆ ಶಕ್ತಿ ಕೊಡಬಹುದಾ ಎಂಬ ಜಿಜ್ಞಾಸೆಗಳು ನಿಮ್ಮಲ್ಲಿ ಮೂಡಿದ್ದರೇ ಅದಕ್ಕೊಂದು ವಿಶೇಷವಾದ ಉತ್ತರವನ್ನು ಪ್ರೀತಿಯ ಪ್ರಾಣೇಶ್‌ರವರು ಬರೆದಿದ್ದಾರೆ. ಕರಣಂ ಪವನ ಪ್ರಸಾದ್ ಕರ್ಮ ಪುಸ್ತಕದಲ್ಲಿ ಬರೆದಿರುವ ಸಾಲುಗಳನ್ನು ಉಲ್ಲೇಖಿಸಿರುವುದು ಆ ಉತ್ತರಕ್ಕೆ ಮತ್ತಷ್ಟು ಮೆರುಗು ತಂದಿದೆ.
ಒಟ್ಟಾರೆ, ಈ ಪುಸ್ತಕದಲ್ಲಿ ಈ ಪೀಳಿಗೆಯ ನಾವುಗಳು ಮತ್ತೆಂದು ಹೋಗಲಾರದ ಸುವರ್ಣಯುಗದ ಚಿತ್ರಣವಿದೆ. ಬಡತನ ಬವಣೆಗಳನ್ನು ಅನುಭಾವಿಸುವಂತೆ ಮಾಡುತ್ತದೆ. ಒಂದು ಕ್ಷಣ ತಂತ್ರಜ್ಞಾನವೇ, ಸಾಮಾಜಿಕ ಜಾಲತಾಣಗಳು ಬೇಡವಿತ್ತಾ ಎಂದು ಕೇಳಿಕೊಳ್ಳುವಿರಿ. ನಾನಂತೂ ಹಲವಾರು ಬಾರಿ ಕೇಳಿಕೊಳ್ಳುತ್ತೇನೆ ಮತ್ತು ಅದನ್ನು ಹಂಚಿಕೊಳ್ಳಲು ಅವುಗಳದ್ದೇ ಸಹಾಯ ಪಡೆಯುತ್ತೇನೆ. ವಿಪರ್ಯಾಸವೆನ್ನಬೇಕೋ, ಅಸಹಾಯಕತೆ ಎನ್ನಬೇಕೋ ಅರಿಯೇ!!! ಇರಲಿ
ನಶಿಸಿ ಹೋಗುತ್ತಿರುವ ಮಾನವ ಸಂಬಂಧಗಳ ಬಗ್ಗೆ ಚಿಂತನೆಗೆ ಹಚ್ಚಬಲ್ಲ ಶಕ್ತಿಯುತ ಬರಹಗಳನ್ನೇ ತುಂಬಿಕೊಂಡಿರುವ ಈ ಪುಸ್ತಕ ಸರ್ವಮಾನ್ಯ!!! ಓದಿ, "ಕಾಪಿಗಳು ಖಾಲಿಯಾಗಿ ಮರುಮುದ್ರಣ ಕಾಣದಾಗುವ ಮುನ್ನ"