"ಕೂರ್ಗ್ ರೆಜಿಮೆಂಟ್" ಎಂಬ ಹೆಸರು, ಮುಖಪುಟ, ಬರಹಗಾರರ ಭೀಷಣವಾದ ಹೆಸರು ಎಲ್ಲಾ ನೋಡಿ ಉರಿ, ಬಾರ್ಡರ್ ತರನಾದ ಸಿನಿಮಾಗಳ ಚಿತ್ರಣ ಮನಸಿನಲ್ಲಿಟ್ಟುಕೊಂಡು ಅಂತದ್ದೇ ಕಥೆಗಳ ನಿರೀಕ್ಷೆಯಲ್ಲಿ ಬುಕ್ ಕೊಂಡಿದ್ದೆ.
ಕೊಂಡಿದ್ದು ಅಷ್ಟೇ, ಆಮೇಲೆ ಓದುವ ಉತ್ಸಾಹ ಮೂಡದೇ ಅದು ಮೂಲೆ ಸೇರಿತ್ತು. ಓದುತ್ತಿರುವ ಬೇರೆ (ಈ ಬುಕ್) ಬುಕ್ ತೆರೆಯುವಾಗ ಕೈತಪ್ಪಿನಿಂದ ಕೂರ್ಗ್ ರೆಜಿಮೆಂಟ್ ಶೀರ್ಷಿಕೆಯದೇ ಕಥೆ ಇರುವ ಪುಟ ತೆರೆದು, ಕುತೂಹಲದಿಂದ ಓದಲು ಶುರುಮಾಡಿದ್ದು.. ಮುಗಿಸುವಾಗ ಮನಸ್ಸು ಭಾರ!
ಕೂರ್ಗ್ ರೆಜಿಮೆಂಟ್'ನಲ್ಲಿ ನಾನೆಂದುಕೊಂಡಂತೆ ಯುದ್ಧ, ಶತೃಪಾಳ್ಯ, ಗಡಿ ಸಂಘರ್ಷ, ವೀರಮರಣದ ಕಥೆಗಳಿಲ್ಲ ಬದಲಿಗೆ ಯುದ್ದ ರಂಗದಿಂದ ಬದುಕಿ ಹಿಂದಿರುಗಿ ಅನುದಿನದ ಯುದ್ದರಂಗದಲ್ಲಿ ಸೆಣೆಸಾಡುತ್ತಿರುವ ಯೋಧರ ಕಥೆಗಳಿವೆ. ಹೆಚ್ಚಾಗಿ ಕೇಳಲು ಸಿಗದ ಮಡಿದ ಸೈನಿಕರ ಹೆಂಡತಿ, ಮಕ್ಕಳ ಕಥೆಯಿದೆ. ಕೊಡಗಿನ ಜನಜೀವನ, ಹಬ್ಬಗಳ ಪ್ರಸ್ತಾಪವಿದೆ. ವಿಶಾದ, ಪ್ರೇಮ, ಆಕಾಂಕ್ಷೆ, ವಂಚನೆ, ಸಾಹಸ, ಎಲ್ಲ ಭಾವಗಳನ್ನೊಳಗೊಂಡ ಒಟ್ಟು ಹನ್ನೆರಡು ಕಥೆಗಳ ಗಾತ್ರ ಚಿಕ್ಕದಾದರೂ ಭಾವತೀವ್ರತೆ ದಟ್ಟವಾಗಿದೆ.
"ಡಾ. ಮುತ್ತಮ್ಮ" ಮತ್ತು "ಹುಲಿಮದುವೆ" ಎರಡೂ ಕಥೆಗಳೂ ಅಪೂರ್ಣ ಅಥವಾ ಬೇರೆ ಆಯಾಮಗಳಲ್ಲಿ ಮುಂದುವರಿಕೆ ಸಾಧ್ಯವಿತ್ತೇನೋ ಎನಿಸಿದ್ದು ಬಿಟ್ಟರೆ ಮಿಕ್ಕ ಕಥೆಗಳು as it is ಇಷ್ಟವಾದವು. ಅಲ್ಲಲ್ಲಿ ಕೆಲವೊಂದು ವಾಕ್ಯದ ಅಂದವನ್ನೇ ಹಾಳುಗೆಡವುವಷ್ಟು ಅಕ್ಷರ ದೋಷಗಳು ಓದಿನ ವೇಗಕ್ಕೆ ಅಡಚಣೆ ಎನಿಸುವಷ್ಟಿವೆ.
ಇಷ್ಟವಾದ/ಕಾಡುವ ಸಾಲುಗಳು ಬಹಳಷ್ಟಿವೆ ; ಅವುಗಳಲ್ಲಿ ಒಂದು -
"ಬಹುಶಃ ಊರಿನವರಿಗೆ ಒಬ್ಬ ಹೀರೋ ಬೇಕಾಗಿತ್ತು? ಭಾಷಣದಲ್ಲಿ ಪ್ರಸ್ತಾಪಿಸಲು, ರಸ್ತೆಗೆ ಹೆಸರಿಡಲು. ಮುಡಿಗೇರಿಸಿದ್ದ ಹೂವಿನಲ್ಲಿ ಸಂತೃಪ್ತಿ ಪಟ್ಟುಕೊಳ್ಳುವ ಹೆಣ್ಣಿಗೆ ಆ ರೀತಿ ಆಸೆಗಳಿರಲಿಲ್ಲ"
ಬರವಣಿಗೆ ಗೊತ್ತಿರುವವರು ,ಅದರಲ್ಲೂ ಸೇನೆಯಲ್ಲಿ ಸೇವೆ ಸಲ್ಲಿಸುವವರು ಬರೆದರೆ ಹೇಗಿರಬೇಕೋ ಹಾಗಿದೆ ಈ ಪುಟ್ಟ ಪುಸ್ತಕ. ದಟ್ಟ ಅನುಭವಗಳ ಬರಿಯ ಯುದ್ಧ ಅನುಭವಗಳಲ್ಲದ ವಾಸ್ತವ ಚಿತ್ರಣ. ಕತೆಗಳೆಲ್ಲ ಇನ್ನೂ ಸ್ವಲ್ಪ ದೀರ್ಘವಾಗಿರಬೇಕಿತ್ತು. ಇವರು ಕಾದಂಬರಿ ಬರೆಯಲಿ ಎಂಬುದು ಅನಿಸಿಕೆ. ಚಂದ ಬರೆಯುತ್ತಾರೆ.