ಚಕ್ರವರ್ತಿ ಸೂಲಿಬೆಲೆ ವಾಗ್ಮಿ, ಚಿಂತಕ, ಅಂಕಣಕಾರ, ಬರಹಹಾರ ಮತ್ತು ಸಾಮಾಜಿಕ ಕಾರ್ಯಕರ್ತ. ಜೊತೆಗೆ ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕರು. ಅವರ ಸಾಮಾಜಿಕ ಸೇವೆ ಮತ್ತು ಪರಿಹಾರ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರ ಮೂಲ ಹೆಸರು 'ಮಿಥುನ್ ಚಕ್ರವರ್ತಿ'. ಇವರು ೧೯೮೦ರ ಏಪ್ರಿಲ್ ೯ ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕೊಂಕಣಿ ಮಾತನಾಡುವ ದೈವಜ್ಞ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಂದೆಯ ಹೆಸರು ದೇವದಾಸ್ ಸುಬ್ರಾಯ ಶೇಟ್. ಇವರು ಸೂಲಿಬೆಲೆಯ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಓದಿ ಬೆಳೆದದ್ದು ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಎಂಬ ಗ್ರಾಮದಲ್ಲಿ. ನಂತರ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ವಿಶ್ವವಿದ್ಯಾಲಯ ಪೂರ್ವ ಶಿಕ್ಷಣವನ್ನು ಪಡೆದರು. ಮುಂದೆ ಭಟ್ಕಳದ ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗಣಕ ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಸ್ವಾಮಿ ವಿವೇಕಾನಂದರ ಲೇಖನಗಳ ಪ್ರಭಾವಕ್ಕೆ ಒಳಗಾದ ಇವರು ರಾಮಕೃಷ್ಣ ಪರಮಹಂಸರ ಚಿಂತನೆಗಳನ್ನು ಹೊತ್ತೊಯ್ಯುವ ರಾಮಕೃಷ್ಣ ಆಶ್ರಮದ ಸಂಪರ್ಕಕ್ಕೆ ಬಂದರು. ಆರಂಭದಲ್ಲಿ ಚಕ್ರವರ್ತಿಯವರು 'ಹೊಸ ಸ್ವಾಂತಂತ್ರ್ಯದ ಬೆಳಕು' ಮುಖ್ಯ ಸಂಪಾದಕರಾಗಿ ಕೆಲಸ ಮಾಡಿದರು. ನಂತರ ಅವರು 'ಗರ್ವ' ಟ್ಯಾಬ್ಲಾಯ್ಡ್ ವ್ಯವಸ್ಥಾಪಕ ಸಂಪಾದಕರಾಗಿ ಕೆಲಸ ಮಾಡಿದರು. ಎರಡು ವರ್ಷಗಳಿಗೂ ಹೆಚ್ಚು ಕಾಲ ವಿಜಯ ಕರ್ನಾಟಕದಲ್ಲಿ ಅಂಕಣಕಾರರಾಗಿದ್ದರು. 'ವಿಜಯವಾಣಿ', 'ಹೊಸ ದಿಗಂತ', 'ಸಂಯುಕ್ತ ಕರ್ನಾಟಕ', ಕರ್ಮವೀರ, ವಿವೇಕ ಸಂಪದ ಮತ್ತು ಇತರ ಕೆಲವು ನಿಯತಕಾಲಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದರು. ಇವರು ವಿಜಯವಾಣಿಯಲ್ಲಿ 'ವಿಶ್ವಗುರು' ಎಂಬ ಹೆಸರಿನ ಅಂಕಣಗಳನ್ನು ಬರೆಯುತ್ತಿದ್ದರು.