Jogi Girish Rao Hatwar ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ ಪತ್ನಿ ಜ್ಯೋತಿ, ಮಗಳು ಖುಷಿಯೊಂದಿಗೆ ಜೀವಿಸುತ್ತಿದ್ದಾರೆ.
"L" ಇದು ಕವಿಯೊಬ್ಬ ಬರೆದ ಕವಿತೆಯಾ ಅಥವಾ ತನ್ನ ಕವಿತೆಯ ಬಗ್ಗೆ ತಾನೇ ಬರೆದ ವಿಮರ್ಶೆಯಾ? ತನ್ನ ಬದುಕಿನ ಬಗ್ಗೆ ಬರೆದ ಆತ್ಮಚರಿತ್ರೆಯಾ ಅಥವಾ ಅದರಿಂದ ತಪ್ಪಿಸಿಕೊಳ್ಳಲು ಬರೆದ ಕಾದಂಬರಿಯಾ? ಹೇಳುವುದು ಕಷ್ಟ. ಕವಿಯೊಬ್ಬ/ಲೇಖಕನೋಬ್ಬ ತನ್ನ ಬರಹಗಳ ಹಿಂದಿರುವ ಅನುಭವಗಳನ್ನು ಶೋಧಿಸಹೊರಟಾಗ ಬರೆಯಲೇ ಬಾರದ ಹಾಗೂ ಬರೆಯದೇ ಇರಲಾರದ ವಿಷಯಗಳಿರ್ತಾವಲ್ಲ ಅದನ್ನೆಲ್ಲಾ ಸೇರಿಸಿ ತನಗೆ ತಾನೇ ಬರಕೊಂಡ ಎಂದಿಗೂ ರವಾನೆಯಾಗದ ಪತ್ರ ಈ "L".
"ಮದುವೆಯನ್ನು ಸಂಭ್ರಮಿಸಲಿಕ್ಕೆ ಸಾವಿರಾರು ಜನ ಬರುತ್ತಾರೆ. ಭಗ್ನಪ್ರೇಮ ಏಕಾಂತದಲ್ಲಿ ಜರುಗುತ್ತದೆ. ಅದನ್ನು ಆಚರಿಸಿಕೊಳ್ಳಲಿಕ್ಕೆ ಗೆಳತಿ/ಗೆಳೆಯ ಕೂಡ ಇರುವುದಿಲ್ಲ." ಇಂತಹ ಭಗ್ನಪ್ರೇಮದ ಏಕ ವ್ಯಕ್ತಿಯ ಯಾತನೆಯ ಸಂಭ್ರಮಾಚರಣೆ ಈ "L"
ಇದನ್ನು ಓದುವಾಗ ನನಗೆ ಇಳಿಜಾರಿನಲ್ಲಿ ಕಾಲಿಟ್ಟ ಅನುಭವವಾಯಿತು. ಒಮ್ಮೆ ಇದರ ಗುಂಗು ಹತ್ತಿ ಮತ್ತೆ ಅಂಚಿನ ತನಕ ತಾನೇ ಎಳೆದುಕೊಂಡು ಹೋಯಿತು. ಮೇಲೆ ಬರಲು ತುಂಬಾ ಒದ್ದಾಡಿದ್ದೇನೆ. ಹಾಗಾಗಿ "L" ಎಂದರೆ ಅಸಹಾಯಕತೆ.
ಲಕ್ಷ್ಮಣ ನೀಲಂಗಿ ಹೇಳ್ತಾನೆ, ಕವಿತೆ ಎಂದರೆ ಆತ್ಮಹತ್ಯೆಯೇ. ನನ್ನನ್ನು ನಾನು ಕೊಂದುಕೊಳ್ಳದೇ ಕವಿತೆ ಹುಟ್ಟುವುದಿಲ್ಲ. ನಾನು ಕಣಕಣವಾಗಿ ಸಾಯುತ್ತಾ ಕಣಕ ಕುಟ್ಟುತ್ತಾ ಹೋಗುತ್ತೇನೆ. ನನ್ನ ಹೆಣಗಳನ್ನು ನಾನು ನನ್ನ ಕವಿತೆಗಳಲ್ಲಿ ಕಂಡೆ. "L" ಎಂದರೆ ಪೋಸ್ಟ್ ಮಾರ್ಟಮ್.
ಓದುತ್ತ ಓದುತ್ತ, ಬಾಲ್ಯ ಸ್ನೇಹಿತನೊಬ್ಬ ತುಂಬಾ ದಿನದ ನಂತರ ಸಿಕ್ಕಾಗ ಹೇಳದೇ ಉಳಿದ ಅನೇಕ ವಿಷಯಗಳನ್ನು, ಮೊದಲೇ ಗೊತ್ತಿದ್ದ ಆದರೆ ಸ್ಮೃತಿ ಪಟಲದಲ್ಲಿ ಎಲೆಮರೆಯಾಗಿದ್ದ ಅನೇಕ ವಿಷಯಗಳನ್ನು ಒಟ್ಟಿಗೆ ನೆನಪಿಸುತ್ತಾ ಯಾವುದೋ ಮರೆತು ಹೋದ ಲೋಕಕ್ಕೆ ಕರೆದುಕೊಂಡು ಹೋಗತ್ತೆ. "L" ಎಂದರೆ ಆಪ್ಯಾಯಮಾನ.
"L"ನ ಸಾಲುಗಳು, "ಅದೇ ಸಂಜೆ ಸೂರ್ಯ ಮುಳುಗುತ್ತಿರುವ ಹೊತ್ತಲ್ಲಿ ಗುರುವಾಯನಕೆರೆಯ ದಂಡೆಯಲ್ಲಿ ಕೂತುಕೊಂಡು ನಾನೊಂದು ಪದ್ಯ ಬರೆದು ಅವಳ ಕೈಗಿಟ್ಟೆ. ಅದು ಬೀಸುಗಾಳಿಗೆತೇಲಿಕೊಂಡು ಹೋಗಿ ಕೆರೆಗೆ ಬಿತ್ತು. ಅದರಲ್ಲಿನ ಅಕ್ಷರಗಳ ಕರಗಿಹೋದವು. ಅವಳು ಅಳತೊಡಗಿದಳು. ಅಳಬೇಡ. ನಿನಗೆ ಮತ್ತೊಂದು ಪದ್ಯ ಬರೆದುಕೊಡುತ್ತೇನೆ ಅಂದೆ. ಬರೆದುಕೊಟ್ಟೆ. ಇದು ಅದಲ್ಲ ಅಂತ ಮತ್ತೆ ಅತ್ತಳು. ಅದೇ ಇದು ಅಂದೆ. ಅಲ್ಲ ಅಂತ ಅವಳು ಹಟಹಿಡಿದಳು. ಆಗ ಬರೆದದ್ದೇ ಬೇರೆ. ಇದೇ ಬೇರೆ ಅಂತ ಜಗಳವಾಡಿದಳು. ಅದೂ ಇದೂ ಒಂದೇ ಎಂದು ನಾನು ಎಷ್ಟೇ ವಾದಿಸಿದರೂ ಕೇಳದೇ ಅವಳು ನನ್ನ ಕವಿತೆಯ ಶ್ವೇತವರ್ಣದ ಕುದುರೆಯೇರಲು ನಿರಾಕರಿಸಿ ಹೊರಟುಹೋದಳು. ನಾನು ಮೊದಲು ಬರೆದ ಪದ್ಯವೂ ಆಮೇಲೆ ಬರೆದ ಪದ್ಯವೂ ಬೇರೆಯಾಗಿತ್ತು. ಆದರೆ ಅವಳು ಮೊದಲಿನದನ್ನು ಓದದೇ ಇದ್ದರೂ ಇದು ಬೇರೆ ಅಂತ ಹೇಗೆ ಹೇಳಿದಳು ಅನ್ನುವ ಪ್ರಶ್ನೆಗೆ ನನಗೆ ಉತ್ತರ ಸಿಗಲೇ ಇಲ್ಲ." ಪದ್ಯ ಓದದೇ ಇದ್ದರೂ ವೇದ್ಯವಾಗುತ್ತದೆ ಅಂತ ನನಗೆ ಅನೇಕ ವರ್ಷಗಳ ನಂತರ ಅರಿವಾಯಿತು. ಈ ಅರಿವು "L"
ತುಂಬಾ ಕಡೆ ಓದಿದ್ದೆ ಕಾವ್ಯ ಅಂದ್ರೆ ನಿನಗೆ ಒಂದು ರೀತಿ ಅರ್ಥವಾದದ್ದು ಇನ್ನೊಬ್ಬರಿಗೆ ಇನ್ನೊಂದು ರೀತಿ ಆಗಬಹುದು, ಮತ್ತೊಬ್ಬರಿಗೆ ಮತ್ತೊಂದು ರೀತಿ ಅರ್ಥವಾಗಬಹುದು. ಅದು ವಿಭಿನ್ನವಾಗಿ ಅರ್ಥವಾಗಲು ದೇಶ-ಕಾಲ, ಮನಸ್ಥಿತಿ ಮುಖ್ಯವಾಗತ್ತೆ. ಅಷ್ಟಕ್ಕೂ ಕಾವ್ಯ ಅರ್ಥ ಆಗಬೇಕಾಗಿಯೇ ಇಲ್ಲ. ಅರ್ಥ ಆಗಬಹುದು ಆಗದೇ ಇರಬಹುದು. ಇವತ್ತು ಓದಿ ಅರ್ಥ ಆದದ್ದು ಮುಂದೊಂದು ದಿನ ಓದಿದಾಗ ಮತ್ತೊಂತರಾ ಅರ್ಥವಾಗಬಹುದು. ಈ "ಅರ್ಥ" ಅನ್ನುವುದು ಇದೆಯಲ್ಲ ಕಾವ್ಯದ ವಿಷದಲ್ಲಿ ಮಾತ್ರವಲ್ಲ ಅದು ಜೀವನದಲ್ಲಿ ಕೂಡ ಇದೇ ಪಾತ್ರ ವಹಿಸುತ್ತದೆ.ಅಷ್ಟಕ್ಕೂ ಜೀವನ ಬೇರೆ ಕಾವ್ಯ ಬೇರೆ ಅಲ್ಲವಲ್ಲ. ಜೀವನೇ ಕಾವ್ಯ, ಕಾವ್ಯವೇ ಜೀವನ. ಹಾಗಾಗಿ ಕಾವ್ಯ ಮತ್ತು ಜೀವನ ಇಷ್ಟೇ ದಕ್ಕಿತು ಎಂದು ಬೇಸರಪಡಬೇಕಾಗಿಲ್ಲ. ಜಾಸ್ತಿ ದಕ್ಕಿತು ಅಂತ ಖುಷಿ ಪಡಬೇಕಾಗಿಲ್ಲ. ಇಲ್ಲಿರುವುದು ಅದೇ. "L" ಎಂದರೆ ಸಿಕ್ಕಷ್ಟು ಶಿವಾಯನಮಃ.
ಈಗ ದಕ್ಕಿದ್ದು ಬರೆದದ್ದಕ್ಕಿಂತ ನೂರುಪಟ್ಟು. ದಕ್ಕಿದ್ದೆಲ್ಲ ಹೇಳುವುದು ಎಷ್ಟು ಕಷ್ಟ ಅಂತ ನಾನು ಇದನ್ನು ಓದಿದ ಮೇಲೆ ವೇದ್ಯಮಾಡಿಕೊಂಡೆ. ಇನ್ನೂ ಸಾವಿರಪಟ್ಟು ದಕ್ಕಲು ಬಾಕಿ ಇದೆ. ಮತ್ತೊಮ್ಮೆ ಮಗದೊಮ್ಮೆ ಓದಿದಾಗ ಬೇರೆ ಏನೋ ದಕ್ಕಬಹುದು. ಮರುಓದಿಗೆ ಕಾಯ್ತಾ ಇದ್ದಿನಿ.
ಇತ್ತೀಚೆನ ದಿನಗಳಲ್ಲಿ ನಾನು ಓದಿದ ಪುಸ್ತಕದಲ್ಲಿ ಈ "L" ಪುಸ್ತಕ ತುಂಬಾ ಕಾಡಿತು. ಜಾನಕಿ ಕಾಲಂ ಓದಿದಾಗ ತುಂಬಾ ಆಪ್ಯಾಯಮಾನ ಎನ್ನಿಸುತ್ತಿತ್ತು. ಜೋಗಿಯವರು ತಮ್ಮ ಅಂಕಣದಲ್ಲಿ ಕಾವ್ಯದ ಬಗ್ಗೆ ಬರೆದಿದ್ದನ್ನು ಓದುತ್ತಾ ಹೋದಂತೆ ಎಲ್ಲಿಯೋ ಕಳೆದು ಹೋದೆ ಎಂದೆನಿಸುತ್ತಿದ್ದು. ಅಂತಹ ಅನುಭವ ಮತ್ತೆ ಸಿಕ್ಕ ಖುಷಿ "L" ಓದಿದಾಗ.
ನನಗೆ ಜೋಗಿಯವರ ಕಾದಂಬರಿಗಳಲ್ಲಿ 'ಚಿಟ್ಟೆ ಹೆಜ್ಜೆ ಜಾಡು' ಮತ್ತು ' ಯಾಮಿನಿ' ಬಹಳ ಇಷ್ಟ.
ಮತ್ತೀಗ ಎಲ್..
ಅವತ್ತೊಮ್ಮೆ ಜಾನಕಿ ಕಾಲಂ ಅಲ್ಲಿ ಜೋಗಿ ಹೆಸರ ಬದಲು ಲೆಟರ್ ಒಂದೇ ಹೆಸರಾದ ಕವಿಯೊಬ್ಬನ ಬಗ್ಗೆ ಬರೆದಿದ್ದರು. ಎಲ್ ಅವನೇ ಇರಬಹುದಾ? ಗುಮಾನಿ ನನಗೆ.
ಮೂರು ಭಾಗಗಳಲ್ಲಿ ಬಿಚ್ಚಿಕೊಳ್ಳುವ ಕಥೆ ಅಪ್ಪ ,ಪ್ರೇಯಸಿ ಹಾಗೂ ತನ್ನ ನಡುವೆ ಹರಡಿಕೊಂಡಿದೆ. ತನ್ನ ತಳಮಳಗಳಿಗೆ ಕವಿತೆಯ ಮಾಧ್ಯಮ ಹುಡುಕುವ ಎಲ್ ಗೆ ಅದು ತನ್ನ ಮತ್ತು ಪ್ರೇಯಸಿಯ ಜೋಡಿಸುವ ಮಾಧ್ಯಮವಾಗಿ ಒದಗಿ ಬಂದರೆ, ಕೊನೆಗದರ ಹೊರತು ತನಗೆ ಸಂವಹನಕ್ಕೆ ದಾರಿಯೇ ಇಲ್ಲ ಎಂಬುದರ ಅರಿವಾಗುತ್ತದೆ. ಸಿಗರೇಟು ಮದ್ಯದಂತೆ ಕವಿತೆ ಬರೆಯುವ ಚಟವೂ ಅಪಾಯಕಾರಿ ಎಂಬಂತಹ ಸತ್ಯದ ಜೊತೆಗೆ ಅದಿಲ್ಲದೆ ತಾನಿಲ್ಲ ಎನ್ನುವುದೂ ಅವನಿಗೆ ಗೊತ್ತು. ಹಾಗಂತ ಎಲ್‌ಗೆ ಅದನ್ನು ಹೊರಜಗತ್ತಿಗೆ ತೋರಿಸಕೊಳ್ಳುವ ಹಪಹಪಿಯಿಲ್ಲ. ಅಸಂಖ್ಯಾತ ಕವಿತೆಗಳ ಬರೆದು ಸುಟ್ಟು,ಹರಿದು ಗೊತ್ತಿದೆ ಅವನಿಗೆ. (ಮಾತಿನಂತೆ! ಆಡಿದ ಮಾತು ಗಾಳಿಯಲ್ಲಿ ತೇಲಿ ಹೋದಂತೆ) ತನ್ನ ಕವಿತೆಗಳ ವಾಚನವೂ ಅವನಿಗೆ ಖುಷಿ ಕೊಡುವ ಸಂಗತಿ ಅಲ್ಲ. ಹೇಳಬೇಕಾದ್ದನ್ನು ಹೇಳುವ ಮಾಧ್ಯಮ ಅದು ಅವನಿಗೆ!
ಬಾಲ್ಯದಲ್ಲಿ ರೆಂಜೆ ಮರದ ಹೂ ಹೆಕ್ಕುತ್ತಿದ್ದ ಹುಡುಗನ ಮನಸನ್ನು ಕವಿತೆ ಬರೆದು ಕೊಂದ ಹಾಗೆ ಅವನಿಗೆ ಅನಿಸಿದೆ. ಇದು ಖಾಸಗಿಯಾಗಿ ಭೇಟಿ ಕೊಡುವ ನೆನಪುಗಳ ನಾವು ಬರೆದು ಅಥವಾ ಸಾರ್ವಜನಿಕಗೊಳಿಸಿ ಅದರ ಘನತೆ ಕಳೆಯುವ ಬಗೆಯಂತೆ ಅನಿಸಿತು.
ಅಪ್ಪ ಅಮ್ಮನ ಪ್ರೀತಿ ವಂಚಿತನಾಗಿ ಬೆಳೆದ ಎಲ್‌ಗೆ ತನ್ನ ಕವಿತೆಗಳು ಅರಳುವುದಕ್ಕೂ ಅವನ್ನು ಓದುಗರು ಪ್ರಶಂಸಿಸುವುದನ್ನೂ ನೋಡುವ ಬಾಲ್ಯ ಒದಗಿಲ್ಲ. ಓದಿಗೆಂದು ಅವನು ಬಂದ ಊರಲ್ಲಿ ಸಿಕ್ಕವಳಲ್ಲಿ ಅದು ಚಿಗುರಿ ಅವನಿಗೆ ಹೊಸದಾರಿ ತೆರೆಯುತ್ತದೆ. ಆದರೆ ಬದಲಾವಣೆಗೆ ಹಿಂಜರಿಯುವ ಮನಸು ಆಮೇಲೆ ಅದಕ್ಕೇ ಅಂಟಿಕೊಳ್ಳುವ ಹಾಗೆ ಅವನಿಗೆ ಅವಳು ಲೀಲಾವತಿ ಕಾಡುತ್ತಾಳೆ, ಹಿಂಸಿಸುತ್ತಾಳೆ, ಪ್ರೀತಿಸುತ್ತಾಳೆ (ಅಥವಾ ಹಾಗೆ ಭ್ರಮಿಸುತ್ತಾನೆ) ಎಲ್ಲ ಪ್ರೇಮಿಗಳ ನೋವಿಗದ್ದಿದ ಕುಂಚದ ಚಿತ್ರಣವೇ ಇಲ್ಲೂ!
ನನ್ನೊಬ್ಬ ಗೆಳೆಯನಿದ್ದ. ಪಿಯುಸಿಯ ಆ ದಿನಗಳಲ್ಲಿ ತಾನು ಪ್ರೀತಿಸಿದ ಹುಡುಗಿಯ ಹೆಸರ ಕೈಯ ಮೇಲೆ ಬ್ಲೇಡಲ್ಲಿ ಕುಯ್ದು ಬರಕೊಂಡಿದ್ದ. ಅವನಿಗೆ ಈಗ ಏನನಿಸಿರಬಹುದು? ಆ ದಿನಗಳ ಉನ್ಮಾದಗಳ ಚಿತ್ರಣ ಇಲ್ಲೂ ಸಿಗುತ್ತದೆ.
ಜೋಗಿ ಎರಡನೆಯ ಭಾಗದಲ್ಲಿ ಪ್ರೀತಿಯ ತೀವ್ರತೆಯ ಬರೆದಿದ್ದನ್ನು ಓದುತ್ತಾ ಓದುತ್ತಾ ಕಣ್ಣೆತ್ತಿ ನೋಡಿದರೆ ಪ್ರಯತ್ನಪೂರ್ವಕವಾಗಿ ಮರೆತ ಆ ದಿನಗಳ ಹುಚ್ಚಾಟಗಳೆಲ್ಲ ಕಣ್ಣೆದುರು ಬಂದು ಬೆತ್ತಲೆಯಾಗಿ ನಿಂತಷ್ಟು ಮುಜುಗರವಾಯಿತು..
ಇದು ಹುಡುಕಾಟದ ಕಥೆ; ಗುಟ್ಟುಗಳ ಕಥೆ.. ಕಾದಂಬರಿ ಶುರುವಾದ ಬಿಂದುವಿಗೇ ಬಂದು ನಿಂತು ವೃತ್ತ ಪೂರ್ಣಗೊಳ್ಳುತ್ತದೆ. ಆದರೆ ಚಂದ್ರನ ತರ ಗುಂಡಗೆ ಕಂಡರೂ ಇಡಿಯಾಗಿ ಕಂಡೆ ಅನ್ನಲಾಗದು!
ಎಲ್ ತನಗೆ ತೋಚಿದ ತಾನು ಸತ್ಯ ಅಂದುಕೊಂಡ ಸಂಗತಿಗಳ ಬಗ್ಗೆ ಮಾತ್ರ ಹೇಳುತ್ತಾ ಹೋಗುತ್ತಾನೆ. ಅದೇ ಸತ್ಯವಾ? ಲೀಲಾವತಿ ಆದ ಬಳಿಕ ಬಂದ ಪ್ರೆಯಸಿಯರ ಕಥೆ ಏನು? ಅವರಿಗೆ ಮಹತ್ವವೇ ಇಲ್ಲವೆ? ಹಾಗಾದರೆ ಖ್ಯಾತಿ ಬೇಡವೇ ಅವನಿಗೆ? ನೋವೇ ಸಾಕೇ? ಇಲ್ಲ ಉತ್ತರ ಸಿಗುವುದಿಲ್ಲ.
ಹುಡುಕಲೂ ಬಾರದು..
ಕವಿತೆ ಓದುಗನಿಗೆ ಅವನಿಗೆ ಮಾತ್ರ ಅವನದೇ ರೀತಿಯಲ್ಲಿ ಅರ್ಥವಾದರೆ ಅದು ಯಶಸ್ವಿ ಅನ್ನುತ್ತಾರೆ. ಜೋಗಿಯ ಈ ಕಾದಂಬರಿಯೂ ಹಾಗೇ..ಒಬ್ಬೊಬ್ಬನಿಗೆ ಒಂದೊಂದು ತರ!!
ಇತ್ತೀಚಿಗೆ ಓದಿದ ಕಾದಂಬರಿಗಳಲ್ಲಿ ಇದು ಬಹಳ ವಿಶೇಷ, ಹೊಸ ರೀತಿಯ ಅನುಭವ ನೀಡಿದ ಪುಸ್ತಕವಿದು. ಹೊಸ ಫಾರ್ಮ್ನಲ್ಲಿ ಬರೆದಿರುವ ಕಾದಂಬರಿ ಇದು. ಇದರಲ್ಲಿ ಮೂರು ಭಾಗಗಳಿವೆ - ಅಮ್ಮ, ಲೀಲಾವತಿ ಮತ್ತು ನಾನು. ಕೆಲವು ರೂಪಕಗಳಂತೂ ಮನಸ್ಸನ್ನು ತುಂಬಾ ನಾಟುತ್ತದೆ - ಅದರ ಒಂದು ತುಣುಕು ಇಲ್ಲಿದೆ.
"ನನಗೆ ಪುರು - ಯಯಾತಿಯ ಕಥೆಯಲ್ಲಿ ನಂಬಿಕೆ ಇರಲಿಲ್ಲ. ಅಪ್ಪನೇ ಮಗನ ಯೌವನವನ್ನು ಪಡೆದುಕೊಳ್ಳುವುದು. ಮಗನಿಗೆ ತನ್ನ ವೃದ್ದಾಪ್ಯವನ್ನು ಧಾರೆ ಎರೆದುಕೊಳ್ಳುವುದು. ಇದೆಲ್ಲ ಬರಿ ಸುಳ್ಳು, ಇಂಥದ್ದು ಓಬುದು ರೂಪಕವಾಗಿ ಮಾತ್ರ ಚೆನ್ನಾಗಿರುತ್ತದೆ. ವಾಸ್ತವದಲ್ಲಿ ಅದಕ್ಕೆ ಅರ್ಥವಿಲ್ಲ ಎಂದೆಲ್ಲ ವಾದ ಮಾಡುತ್ತಿದೆ. ಅಪ್ಪನಿಗೆ ಪಾರ್ಶ್ವವಾಯು ಹೊಡೆದು ಹಾಸಿಗೆ ಹಿಡಿಯುವ ತನಕ. ಅಮ್ಮ ಸತ್ತು ಹೋಗಿ ಈ ಯಾತನೆಯಿಂದ ಪಾರಾದಳು. ನಾನು ಅನುಭವಿಸಿದೆ. ಅಪ್ಪ ನನ್ನ ಯೌವನವನ್ನು ಕಿತ್ತುಕೊಂಡ. ಎಂಟು ವರ್ಷಗಳ ಕಾಲ ಒದ್ದಾಡಿದ. ನರಳಿದ. ನನ್ನನ್ನೂ ನರಳಿಸಿದ."
ತೀಕ್ಷ್ಣವಾದ ಪ್ರಶ್ನೆಗಳು, ಬಹಳಷ್ಟು ಜೀವನದ ಸೂಕ್ಷ್ಮತೆಗಳನ್ನು ಚಿತ್ರಿಸುವ ರೀತಿ, ಜೋಗಿಯವರ ನಿರೂಪಣೆ ಇವೆಲ್ಲ ಈ ಕಾದಂಬರಿಯ ವಿಶೇಷ . ಓದಾದ ಮೇಲೆಯೂ ತುಂಬಾ ಹೊತ್ತು ಮನಸ್ಸಿನಲ್ಲಿ ಉಳಿಯುವ, ಕಾಡುವ ಸಾಲುಗಳಿವೆ.
ಹುಡುಗರ ಜೀವನದಲ್ಲಿ ಪ್ರೀತಿಯ ಹುಣ್ಣೊಂದು ಆಗಿ, ಅದು ಮಾಯ್ದಿದ್ದರೆ 'L' ತುಂಬಾ ಆಳಕ್ಕಿಳಿಯುತ್ತದೆ ಎಂಬುದು ನನ್ನ ವೈಯಕ್ತಿಕ ಅನಿಸಿಕೆ.
ಇದೊಂದು ಕಾವ್ಯ ಕಥನ. ಲಕ್ಷ್ಮಣ ನೀಲಂಗಿಯ ಪ್ರೇಮ ಕಥನ. ಕತ್ತರಿಸುವಂತಹ, ಖಂಡ-ತುಂಡ ಮಾತುಗಳು, ಮಾತುಗಳೊಳಗಿನ ನೋವುಗಳು, ನೋವುಗಳೊಳಗಿನ ಕವಿತೆಗಳ ಕಥನ ಇಲ್ಲಿದೆ.
ಅಮ್ಮನ ಚಿತ್ತ ಚಂಚಲತೆ, ಲೀಲಾವತಿಯೊಂದಿಗಿನ ಅಮರ ಪ್ರೀತಿ, ರೋಗಿ ಅಪ್ಪನ ಸಿಡುಕು, ಮೋಹಿನಿ ಮೇಲಿನ ಅಸಹ್ಯತೆ, ಎಲ್ಲವೂ ಸೇರಿ 'L'ನ ಒಳಗೆ ಕಾಣದಂತ, ಕಾಡುವಂತ ಗಾಯ ಮಾಡಿರುತ್ತವೆ. ಆ ಗಾಯದ ನೋವುಗಳೇ ಕವಿತೆಗಳಾಗಿ ನೋಡಿ ಮೂಡಿದ್ದಾ? ಇಲ್ಲವಾ? ಎಂಬುದನ್ನು ಓದಿಯೇ ತಿಳಿಯಬೇಕು.
ಹೊಸತನದ ಈ ಕೃತಿ ಅವರವರ ಇಷ್ಟಾನುಸಾರವಾಗಿ ಇಷ್ಟವಾಗಬಹುದು. ಇಷ್ಟವಾಗದೆ ಇರಬಹುದು ಕೂಡ.
ಇದೊಂದು ಕಾವ್ಯವನ್ನು ಹೃದಯವಾಗಿ ಹೊಂದಿರುವ ಕಾದಂಬರಿ. ಸಾಲುಗಳನ್ನು ಓದುವಾಗ ಕತೆಯೇನೋ ಮುಂದೆ ಹೋಗುತ್ತಿತ್ತು ಆದರೆ ಅದರ ಒಳಗಿರುವ ಕಾವ್ಯ ಓದುಗನ ಒಳ ಹೊಕ್ಕು ವಿವಿಧ ಭಾವಗಳ ಸ್ಪುರಿಸಿ ಮತ್ತೆ ಮತ್ತೆ ಓದುವಂತೆ ಮಾಡಿತು. ಕತೆಗಿಂತ ಅದರ ನಿರೂಪಣೆ ನನಗೆ ಬಹಳ ಹಿಡಿಸಿತು. ಈಗ ಈ ಓದಿನಿಂದ ಓದಿದ್ದ ಹಲವು ಹಳೆಯ ಕವಿತೆಗಳು ನೆನಪಾಗಿವೆ. ಹಳೆಯ ಮೆಚ್ಚಿನ ಕವಿತೆಗಳನ್ನು ಮತ್ತೆ ಓದುವಂತೆ ಮಾಡಿದ್ದು ಈ ಪುಸ್ತಕ.
L is the best novel of the year in kannada released for the year 2019... I think this novel is influenced by a life of great poet Yeates.... L defines lot of things in the novel... Love, Life, Lust etc.... Good read.. must read
ಇದು ಕಾವ್ಯವಾ, ಕಾದಂಬರಿಯಾ, ಕವಿತೆಯಾ ಎಂದರೆ ಹೇಳುವುದು ಕಷ್ಟ. ಎಲ್ಲವೂ ಹೌದು ಎಂದೇ ಅನಿಸುತ್ತದೆ. ಓದುತ್ತಾ ಹೋದಂತೆ ಓದು ನಿಲ್ಲಿಸಲಾಗದ ಸ್ಥಿತಿ ಸುಖಕರವಾಗಿತ್ತು. ಓದಿದ ಮೇಲೆ, ಮುಗಿದೇ ಹೋಯಿತಲ್ಲಾ ಎಂಬ ವ್ಯಥೆ ಕಾಡುತ್ತಿದೆ. ಹೊಸ ರೀತಿಯ ಈ ಬರಹ ಚೆನ್ನಗಿದೆ.