ನಾ.ಮೊಗಸಾಲೆ ಎನ್ನುವ ಹೆಸರಿನಲ್ಲಿ ಓದುಗರಿಗೆ ಪರಿಚಿತರಾದ ಡಾ| ನಾರಾಯಣ ಭಟ್ಟ, ಮೊಗಸಾಲೆ ಇವರು ಹುಟ್ಟಿದ್ದು ೧೯೪೪ ಅಗಸ್ಟ ೨೭ ರಂದು. ಅವರು ಹುಟ್ಟಿದ ಊರು ಸಾರ್ಕುಡೇಲು ಮನೆ. ಈ ಗ್ರಾಮ ಇದೀಗ ಕಾಸರಗೋಡು ಜಿಲ್ಲೆಯ ಕೇರಳ ರಾಜ್ಯದಲ್ಲಿ ಮಂಜೇಶ್ವರದ ಹತ್ತಿರ ಇದೆ. ೧೯೪೯ರಲ್ಲಿ ತಂದೆ ತೀರಿಕೊಂಡದ್ದರಿಂದ ಮೊಗಸಾಲೆಯವರು ಚಿಕ್ಕಪ್ಪನ ಸುಪರ್ದಿನಲ್ಲಿ ಬೆಳೆದರು. ೧೯೬೧ರಲ್ಲಿ ಎಸ್.ಎಸ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ, ಉಡುಪಿಯ ಆಯುರ್ವೇದ ಕಾಲೇಜಿನಲ್ಲಿ ಕಲಿತು, ೧೯೬೫ರಲ್ಲಿ ಡಿ.ಎಸ್.ಸಿ.ಎ. ಪದವಿಯನ್ನು ಪಡೆದರು.
ಬರವಣಿಗೆ ಸಂಘಟನೆಗಳ ಮೂಲಕ ನಾ.ಮೊಗಸಾಲೆಯವರು ಕನ್ನಡ ಸಾಹಿತ್ಯಕ್ಕೆ ಬಹುಮುಖ ಸೇವೆ ಸಲ್ಲಿಸಿದ್ದಾರೆ.
ವ್ಯಕ್ತಿಯೊಬ್ಬ ತನ್ನ ಆತ್ಮಕಥೆ ಯಾಕೆ ಬರೆಯುತ್ತಾನೆ? ತನ್ನ ನೆನಪುಗಳ ಹೇಳಿ ಹಗುರಾಗಲೋ? ಸಮಾಜಕ್ಕೆ ಸಂದೇಶ ಕೊಡಲೋ? ಬರೆಯಬೇಕೆಂಬ ಒತ್ತಡಕ್ಕೋ? ಹಾಗಾದರೆ ಕವಿತೆಗಳಿಗೂ,ಕಥೆ,ಕಾದಂಬರಿಗಳಿಗೂ ಇದಕ್ಕೂ ಏನು ವ್ಯತ್ಯಾಸ? ಹೀಗೆ ಹಲವಾರು ಪ್ರಶ್ನೆ ಓದುವಾಗ ನನಗೆ ಕಾಡಿದ್ದಿದೆ.
ಆದರೆ ಆತ್ಮಕಥೆಗಳ ಆಕರ್ಷಣೆಯೇ ಅಂತದ್ದು. ಎಲ್ಲರ ಬದುಕು ನಾವು ಬದುಕುವುದು ಹೇಗೆ ಅಸಾಧ್ಯವೋ ಹಾಗೇ ಎಲ್ಲರ ಅನುಭವಗಳ,ನಿರ್ಧಾರಗಳ ನಾವು ಇದು ಸರಿ ಇದು ತಪ್ಪು ಎಂದು ಹೇಳುವುದೂ ಕಷ್ಟ. ಅವರವರ ಬದುಕಿನ ಬುತ್ತಿಯಿಂದ ಅವರು ಕೊಟ್ಟಷ್ಟು ತಿನ್ನಬೇಕು ಅಷ್ಟೇ.
ಈ ಆತ್ಮಕಥೆ ನನಗಿಷ್ಟವಾಗಲು ಹಲವಾರು ಕಾರಣಗಳಿವೆ. ಅದರಲ್ಲಿ ಮುಖ್ಯವಾದ ಕಾರಣ ಲೇಖಕರ ಬಾಲ್ಯ ನನ್ನೂರಿನಲ್ಲಿ ಕಳೆದದ್ದು ಎನ್ನುವುದು. ನನ್ನ ಅಜ್ಜ, ಅಜ್ಜಿ ,ಅಪ್ಪ ಇವರೆಲ್ಲ ಹೇಳುತ್ತಿದ್ದ ಅವರ ಬದುಕಿನ ಕಷ್ಟಗಳ,ಓದಲು ಪಡಿಪಾಟಲು ಪಡುತ್ತಿದ್ದ ದಿನಗಳ ಕಥೆ ಕೇಳುವಾಗ ಇದೆಲ್ಲ ಕವಿಸಮಯ ಅನಿಸಿತ್ತು. ಆದರೆ ದಿನ ಕಳೆದಂತೆ ಬದುಕು ಅರ್ಥವಾದಂತೆ ,ಹೌದಲ್ಲ ಅನಿಸಿದ್ದು ನಿಜ. ಅಕ್ಷರಶಃ ಅದೇ ಚಿತ್ರಣವನ್ನು ಮೊಗಸಾಲೆಯವರ ಆತ್ಮಕಥೆಯಲ್ಲಿ ಓದಿ ಆ ಕಾಲಕ್ಕೆ ಹೋಗಿ ಜೀವಿಸಿದಂತಾಯ್ತು.
ಅವಿಭಕ್ತ ಕುಟುಂಬದ ಆರ್ಥಿಕ ಸಂಕಷ್ಟಗಳು, ಓದಿಗಾಗಿ ಪಟ್ಟ ಶ್ರಮ, ಉಡುಪಿಯ ಮಠಗಳ ಪರಿಸರ, ಕಾಂತಾವರದಲ್ಲಿ ನೆಲೆ ನಿಂತಾಗಿನ ಪರಿಸ್ಥಿತಿ, ಸಾಹಿತ್ಯಿಕ ಕೃಷಿ, ಅಲ್ಪ ಸ್ವಲ್ಪ ರಾಜಕೀಯ ಒಟ್ಟಾರೆ ಹೇಳುವುದಾದರೆ ಆತ್ಮಕಥೆಯಲ್ಲಿ ಏನೆಲ್ಲ ಇರಬೇಕು ಅಂತ ಒಂದು ಚಿತ್ರ ಇರುತ್ತದಲ್ಲ ಅದೆಲ್ಲವನ್ನೂ ಓದಿ ಅನುಭವಿಸಿದೆ.
ಏನೋ ಒಂದು ಕ್ಷುಲ್ಲಕ ಕಾರಣಕ್ಕೆ ಅಪ್ಪನ ಹತ್ತಿರ ಅದು ಬೇಡ ಇದು ಬೇಕು ಅಂತ ಹಟ ಮಾಡ್ತಾ ಇದ್ದಾಗ " ನಾನು ಚಿಕ್ಕವನಿದ್ದಾಗ ಶಾಲೆಗೆ ಹೋಗಲು ಒಂದೇ ಅಂಗಿ ಚಡ್ಡಿ, ಶಾಲೆಯಿಂದ ಬಂದು ಅದನ್ನು ಒಗೆದು ಒಣಗಲು ಹಾಕಿ ಮರುದಿನ ಅದನ್ನೇ ಹಾಕಬೇಕಾದ ಪರಿಸ್ಥಿತಿ. ನಿನಗೆ ಏನಕ್ಕೆ ಕಡಿಮೆಯಾಗಿದೆ?" ಅಂತ ಕೇಳಿ ಎರಡು ಪೆಟ್ಟು ಸರಿಯಾಗಿ ಕೊಟ್ಟಿದ್ದರು. ಇವರದು ಯಾವಾಗಲೂ ಹರಿಕಥೆ ಇದ್ದದ್ದೇ ಅನಿಸಿತ್ತು ಆಗ!ಪೆಟ್ಟು ಬಿದ್ದ ಜಾಗ ನೀವಿಕೊಂಡು ಮುಖ ಗಂಟು ಹಾಕಿ ಹೋದವನಿಗೆ ಸಂಜೆ ಕೇಳಿದ ವಸ್ತು ದೊರೆತಿತ್ತು!
ನಾ ಮೊಗಸಾಲೆಯವರ ಬರವಣಿಗೆ ಓದಿ ನನಗೆ ನನ್ನ ಬಾಲ್ಯ ನೆನಪಾದದ್ದು ಈ ಕೃತಿ ನನ್ನ ಎಷ್ಟರ ಮಟ್ಟಿಗೆ ತಟ್ಟಿತು ಅನ್ನುವುದಕ್ಕೆ ಸಾಕ್ಷಿ.ಅದೇ ಅದರ ಹೆಗ್ಗಳಿಕೆ ಕೂಡ!
ಎಷ್ಟೋ ಬಾರಿ ಬದುಕಿನಲ್ಲಿ ಆಯ್ಕೆ ಮಾಡುವ ಸಂದರ್ಭ ಒದಗಿ ಬರುವುದಿಲ್ಲ ಅಂತ ಒಂದು ಕಡೆ ಮೊಗಸಾಲೆ ಬರೆಯುತ್ತಾರೆ. ಎಷ್ಟು ನಿಜ ಅನಿಸಿತು.