ಲೇಖಕರ ಪ್ರತಿ ಪ್ರಬಂದವು ಓದುಗನನ್ನು ಒಂದು ರೀತಿ ನೆನಪಿನ ಪಯಣಕೆ ಕರೆದೊಯುತ್ತದೆ . ಬೆಂಗಳೂರು ಮತ್ತು ಕರ್ನಾಟಕದ ೮೦ ಮತ್ತು ೯೦ರ ದಶಕದ ಚಿತ್ರಣ ಲೇಖಕರ ಪ್ರಬಂಧಗಳಲ್ಲಿ ಸೊಗಸಾಗಿ ಮೂಡಿ ಬಂದಿವೆ. ಮಾಧ್ಯಮ ವರ್ಗದ ಕುಟುಂಬದ ಮತ್ತು ಮಾನವ ಸಂಬಂಧಗಳ ವಿವರ ಇವ್ರ ಬರವಣಿಗೆಯಲ್ಲಿ ಚೆನ್ನಾಗಿದೆ .
ಮನೆಗೆ ಹಿರಿಯರು ಯಾರಾದರೂ ಬರುವಾಗ ಮನೆಯಲ್ಲಿ ಮಕ್ಕಳಿದ್ದರೆ ಚಾಕಲೇಟೋ ಇನ್ನೇನೋ ತಿನಿಸು ತರ್ತಾರೆ. ಅಮ್ಮ ಮಕ್ಕಳಿಗೆ ಎಲ್ಲಾ ಒಂದೇ ಪೆಟ್ಟಿಗೆ ತಿನ್ನಲು ಕೊಡದೆ " ಹೊಟ್ಟೆ ಹಾಳಾಗಬಹುದು " ಇತ್ಯಾದಿ ನೆಪ ಹೇಳಿ ಅದನ್ನು ಅಡಿಗೆಮನೆಯಲ್ಲಿ ಎತ್ತರದ ಜಾಗದಲ್ಲಿ ಇಡ್ತಾರೆ. ಮಕ್ಕಳು ಆಟ ಆಡುವಾಗ ಏನೋ ನೆಪ ಮಾಡಿಕೊಂಡು ಅಡಿಗೆ ಮನೆಗೆ ಹೋಗಿ ಅದನ್ನು ಹುಡುಕಾಡಿ ಸ್ವಲ್ಪ ಸ್ವಲ್ಪವೇ ತಿಂದು ಎರಡೇ ದಿನದಲ್ಲಿ ಖಾಲಿ ಮಾಡ್ತಾರೆ!. ನನಗೂ ಹಾಗೆಯೇ ಆಯ್ತು. ಚಂದ್ರಶೇಖರ ಆಲೂರು ಅವರ ಪ್ರಬಂಧ ಸಂಕಲನ ಹೊರ ಬರ್ತದೆ ಅನ್ನುವಾಗ ಹಿಂದು ಮುಂದು ನೋಡದೆ ಬುಕ್ ಮಾಡಿದ್ದೆ. ಅವರ 'ಒಲಿದಂತೆ ಹಾಡುವೆ ' ಮತ್ತು ಜೋಗಿಯವರ ' ಜಾನಕಿ ಕಾಲಂ' ಇವೆರಡನ್ನು ಮಾತ್ರ ಓದಲು ' ಹಾಯ್ ಬೆಂಗಳೂರ್' ತಗೋತಿದ್ದ ಕಾಲವಿತ್ತು.
ಇದನ್ನು ಯಾವಾಗಾದರೂ ರುಚಿ ರುಚಿಯಾಗಿ ಓದಬೇಕು ಅಂತ ಎತ್ತಿಟ್ಟಿದ್ದೆ. ಆಮೇಲೆ ಓದಬೇಕು ಅಂತ ಎತ್ತಿಟ್ಟರೆ ಆ ಓದಿನ ಕತೆ ನನಗಂತೂ ಮುಗಿದ ಹಾಗೆಯೇ! ಈಗೀಗ ಸುಮ್ಮನೆ ನನ್ನ ಪುಸ್ತಕ ರ‌್ಯಾಕ್ ಕಡೆ ಹೋಗೋದು ಕಣ್ಣಿಗೆ ಬಿದ್ದ ಒಂದು ಪುಸ್ತಕ ಎಳಕೊಳ್ಳೋದು ಓದೋದು ಇದರಿಂದ ಎಷ್ಟೋ ನೆಮ್ಮದಿ ಸಿಗುತ್ತದೆ!
ಮೊನ್ನೆ ಇದನ್ನು ತೆಗೆದು ಹೊರಗಿಟ್ಟು ಊಟ ಮುಗಿದಾಗ ಒಂದು, ಡ್ಯೂಟಿಗೆ ಹೋಗುವ ಮೊದಲು ಒಂದು ಹೀಗೆ 'ಖುಷಿಯ ಮಾತ್ರೆ' ಗಳ ತರಹ ಓದುತ್ತಾ ಹೋದೆ.
ಒಂದಿಷ್ಟೂ ಯಾರನ್ನೂ ನೋಯಿಸದ, ಮನಸನ್ನು ನೆನಪಿನ ರೈಲು ಬಂಡಿಯಲ್ಲಿ ಹತ್ತಿಸಿಬಿಡುವ, ಓದಿದ ಬಳಿಕ ಚೀಪಿದ ಚಾಕಲೇಟಿನ ರುಚಿ ನಾಲಿಗೆಯಲ್ಲಿ ಉಳಿದು ಹೋದ ಭಾವ ಕೊಡುವ ಪ್ರಬಂಧಗಳು.