ಛಂದ ಪ್ರಕಾಶನದ ಪುಸ್ತಕಗಳು ಎಂದರೆ ಮಿನಿಮಮ್ ಗ್ಯಾರಂಟಿಯ ಸ್ಟಾರ್ ನಟರ ಸಿನಿಮಾಗಳಂತೆ. ಕೊಟ್ಟ ಹಣಕ್ಕೂ,ಓದಿನ ಸುಖಕ್ಕೂ ಯಾವತ್ತೂ ಮೋಸ ಮಾಡಿಲ್ಲ.ಮುದ್ರಣವೂ ಅಚ್ಚುಕಟ್ಟು.
ಗುರುಪ್ರಸಾದ ಕಾಗಿನೆಲೆಯವರು ವೈದ್ಯರು.ದೂರದ ಅಮೆರಿಕದಲ್ಲಿ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ವೈದ್ಯರು. ಅವರ ಕತೆಗಳು,ಕಾದಂಬರಿಗಳು ದಟ್ಟವಾಗಿ ವೈದ್ಯರ ಜೀವನವ ತೆರೆದಿಡುತ್ತದೆ. ಆದರದು ಫಿಕ್ಷನ್. ಈ ಪ್ರಬಂಧಗಳು ನಿಜದ ಘಟನೆಗಳ ಚಿತ್ರಣ. ಏನನ್ನು ಬರೆದರೂ ತಟ್ಟುವಂತೆ ಬರೆಯುವುದು ಅವರ ಹೆಗ್ಗಳಿಕೆ.
ಈ ಪುಸ್ತಕದಲ್ಲಿ ತಾವು ವೈದ್ಯರಾಗಿ ಅನುಭವಿಸಿದ ಘಟನೆಗಳ, ತಮ್ಮ ಅಪ್ಪನ ಬಗೆಗಿನ ಚಿತ್ರಣದ ಹಲವಾರು ಪ್ರಬಂಧಗಳಿವೆ. 'ಫ್ಯಾನ್‍ಬಾಯ್ ಮೂಮೆಂಟ್' ಎಂದು ಕರೆಯಬಹುದಾದ ಶ್ರೀದೇವಿ ಬಗೆಗಿನ ಬರಹ ಆಪ್ತವಾಗಿದೆ. ಮುಖ್ಯವಾಗಿ ಇಲ್ಲಿನ ಬರಹಗಳ ಲಾಲಿತ್ಯ ತುಂಬಾ ಚೆನ್ನಾಗಿದೆ.
ವೃತ್ತಿ ಧರ್ಮ ನಿಭಾಯಿಸುವಾಗ ಎದುರಾಗುವ ಪೇಚಿನ ಪ್ರಸಂಗಗಳು, ಭಾವನೆಗಳ ಹತ್ತಿಕ್ಕಿ ಕರ್ತವ್ಯ ನಿರ್ವಹಿಸಲೇಬೇಕಾಗಿ ಬಂದ ಘಟನೆಗಳು, ಅಮೆರಿಕದಲ್ಲಿ ಭಾರತೀಯ ವೈದ್ಯನ ಬದುಕು ಇವೆಲ್ಲ ಮತ್ತೆ ಮತ್ತೆ ಎದುರಾಗುತ್ತದೆ.
ಇದನ್ನು ಖಂಡಿತಾ ಓದಿ. ಈ ತರಹ ಅನುಭವವ ಇಷ್ಟವಾಗುವಂತೆ ಬರೆಯುವವರು ಕಡಿಮೆ. ಓದಿದ ಬಳಿಕ ಮನಸು ಹಗುರವಾಗುತ್ತದೋ,ಭಾರವಾಗುತ್ತದೋ ನಿಮ್ಮ ಮನಸಿಗೆ ಸಂಬಂಧಪಟ್ಟ ವಿಷಯ.ಆದರೆ ಒಳ್ಳೆಯ ಓದಿನ ಖುಷಿಯಂತೂ ಸಿಗುತ್ತದೆ.