ಗೊರೂರು ರಾಮಸ್ವಾಮಿ ಅಯ್ಯಂಗಾರ್(ಜುಲೈ ೪, ೧೯೦೪ - ಸೆಪ್ಟೆಂಬರ್ ೮, ೧೯೯೧) ತಮ್ಮ ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದವರು. ಸ್ವಾತಂತ್ರ್ಯ ಚಳುವಳಿ, ಮೈಸೂರಿನಲ್ಲಿ ಪ್ರಜಾ ಸರ್ಕಾರಕ್ಕಾಗಿ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಹೋರಾಡಿ ಹರಿಜನೋದ್ಧಾರ ಮತ್ತು ಗ್ರಾಮೊದ್ಧಾರಕ್ಕಾಗಿ ಶ್ರಮಿಸಿದ ಅವರೊಬ್ಬ ಅಪ್ರತಿಮ ಗಾಂಧಿವಾದಿ. ಗೊರೂರು ಗ್ರಾಮ, ಹೇಮಾವತಿ ನದಿ – ಈ ಎರಡೂ ಗೊರೂರರ ಸಾಹಿತ್ಯದಿಂದ ಅಮರವಾದವು. ‘ಹೇಮಾವತಿ’, ಆ ಸಾಹಿತ್ಯ ಸಮಸ್ತಕ್ಕೂ ಸ್ಪೂರ್ತಿ. ಹೀಗೆ ಒಂದು ಊರಿನೊಡನೆ, ನದಿಯೊಡನೆ ಅಭಿನ್ನತೆ ಸಾಧಿಸಿದ ಲೇಖಕರು ವಿರಳವೇ. ‘ಹಳ್ಳಿಯ ಚಿತ್ರಗಳು’, ‘ಗರುಡಗಂಬದ ದಾಸಯ್ಯ’, ‘ನಮ್ಮ ಊರಿನ ರಸಿಕರು’, ‘ಬೆಟ್ಟದ ಮನೆಯಲ್ಲಿ ಮತ್ತು ಇತರ ಪ್ರಬಂಧಗಳು’, ‘ಕಥೆಗಳು ಮತ್ತು ವಿನೋದ ಚಿತ್ರಗಳು’, ‘ಬೆಸ್ತರ ಕರಿಯ’, ‘ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು’ – ಈ ಸಂಕಲನಗಳಲ್ಲಿನ ಗೊರೂರರ ಪ್ರಬಂಧಗಳಲ್ಲಿ ಕಥಾಂಶ ದಟ್ಟವಾಗಿ ಸೇರಿಕೊಂಡಿವೆ. ಆದ್ದರಿಂದ ಗೊರೂರರ ಪ್ರಬಂಧಗಳು, ‘ಪ್ರಬಂಧ’ ಎಂಬ ಶಬ್ದದ ಸೀಮಿತ ಅರ್ಥಕ್ಕಿಂತ ಹೆಚ್ಚಿನ ವ್ಯಾಪ್ತಿಯುಳ್ಳದ್ದು ಎಂಬುದು ಗಮನಾರ್ಹ. ಗೊರೂರರ ಬರವಣಿಗೆ ಅಪರೂಪದ್ದು ಮತ್ತು ಅವರಿಗೇ ಅನುರೂಪವಾದದ್ದು. ಗೊರೂರರು ಸೆಪ್ಟೆಂಬರ್ 28, 1991ರಲ್ಲಿ ನಿಧನರಾದರು.
ಇದು ಮೂಲತಃ 18 ಸಣ್ಣ ಕಥೆಗಳ ಸಂಗ್ರಹವಾಗಿದ್ದು, ಇದನ್ನು ತಮಿಳು ಬರಹಗಾರ ಎಸ್.ಜಿ.ಶ್ರೀನಿವಾಸಾಚಾರಿ (ಕಾವ್ಯನಾಮ ಕೊನೆಷ್ಟೈ) ಬರೆದಿದ್ದಾರೆ ಮತ್ತು ಇದನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅನುವಾದಿಸಿದ್ದಾರೆ.
ಈ ಕಥೆಗಳು ಮುಗ್ಧ ಜನರ ದೈನಂದಿನ ಜೀವನದ ಘಟನೆಗಳನ್ನು ವಿವರಿಸುತ್ತವೆ. ಅಶ್ಲೀಲ ಪದಗಳನ್ನು ಬಳಸದೆ, ಸರಳ ಮತ್ತು ಶುದ್ಧ ಹಾಸ್ಯಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಲೇಖಕರ ಜಾಣ ನುಡಿಗಳು, ಗಂಡ ಹೆಂಡಿರ ನಡುವಿನ ಸರಸ-ವಿರಸ, ಒಂದಕ್ಕಿಂತ ಒಂದು ವಿಭಿನ್ನವಾದ ಕಥೆಗಳು ಮನಸ್ಸಿಗೆ ಮುದ ನೀಡುತ್ತವೆ. ವಿಶೇಷವಾಗಿ ಕಮೀಷನ್ನರ ಕೊರಗು, ಅರುವತ್ತು ಮೂವರು, ಪತ್ತೇದಾರಿ, ವನಮಾಲಾ ಮತ್ತು ಕುತ್ತಾಲಂ ಸೊಗಸಾಗಿವೆ.
ನಾನು ಓದಿದ ಪುಸ್ತಕದಲ್ಲಿ ಕೆಲವು ವ್ಯಾಕರಣೀಯ ಮತ್ತು ಕಾಗುಣಿತ ತಪ್ಪುಗಳಿದ್ದವು. ಇವು ಅನುವಾದ ಮಾಡುವಾಗಲೋ ಅಥವಾ ಮುದ್ರಣದ ಸಮಯದಲ್ಲಾಗಿರುವುದೋ ಗೊತ್ತಿಲ್ಲ. ಅದೇನೇ ಇದ್ದರೂ, ಇಂತಹ ಒಳ್ಳೆಯ ರಚನೆಯನ್ನು ಕನ್ನಡಕ್ಕೆ ಅನುವಾದಿಸಿ, ಅದನ್ನು ಹೆಚ್ಚಿನ ಓದುಗರಿಗೆ ಲಭ್ಯವಾಗುವಂತೆ ಮಾಡಿದ ಗೊರೂರುರವರಿಗೆ ನನ್ನ ವಂದನೆಗಳು.