ಗೊರೂರು ರಾಮಸ್ವಾಮಿ ಅಯ್ಯಂಗಾರ್(ಜುಲೈ ೪, ೧೯೦೪ - ಸೆಪ್ಟೆಂಬರ್ ೮, ೧೯೯೧) ತಮ್ಮ ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದವರು. ಸ್ವಾತಂತ್ರ್ಯ ಚಳುವಳಿ, ಮೈಸೂರಿನಲ್ಲಿ ಪ್ರಜಾ ಸರ್ಕಾರಕ್ಕಾಗಿ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಹೋರಾಡಿ ಹರಿಜನೋದ್ಧಾರ ಮತ್ತು ಗ್ರಾಮೊದ್ಧಾರಕ್ಕಾಗಿ ಶ್ರಮಿಸಿದ ಅವರೊಬ್ಬ ಅಪ್ರತಿಮ ಗಾಂಧಿವಾದಿ. ಗೊರೂರು ಗ್ರಾಮ, ಹೇಮಾವತಿ ನದಿ – ಈ ಎರಡೂ ಗೊರೂರರ ಸಾಹಿತ್ಯದಿಂದ ಅಮರವಾದವು. ‘ಹೇಮಾವತಿ’, ಆ ಸಾಹಿತ್ಯ ಸಮಸ್ತಕ್ಕೂ ಸ್ಪೂರ್ತಿ. ಹೀಗೆ ಒಂದು ಊರಿನೊಡನೆ, ನದಿಯೊಡನೆ ಅಭಿನ್ನತೆ ಸಾಧಿಸಿದ ಲೇಖಕರು ವಿರಳವೇ. ‘ಹಳ್ಳಿಯ ಚಿತ್ರಗಳು’, ‘ಗರುಡಗಂಬದ ದಾಸಯ್ಯ’, ‘ನಮ್ಮ ಊರಿನ ರಸಿಕರು’, ‘ಬೆಟ್ಟದ ಮನೆಯಲ್ಲಿ ಮತ್ತು ಇತರ ಪ್ರಬಂಧಗಳು’, ‘ಕಥೆಗಳು ಮತ್ತು ವಿನೋದ ಚಿತ್ರಗಳು’, ‘ಬೆಸ್ತರ ಕರಿಯ’, ‘ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು’ – ಈ ಸಂಕಲನಗಳಲ್ಲಿನ ಗೊರೂರರ ಪ್ರಬಂಧಗಳಲ್ಲಿ ಕಥಾಂಶ ದಟ್ಟವಾಗಿ ಸೇರಿಕೊಂಡಿವೆ. ಆದ್ದರಿಂದ ಗೊರೂರರ ಪ್ರಬಂಧಗಳು, ‘ಪ್ರಬಂಧ’ ಎಂಬ ಶಬ್ದದ ಸೀಮಿತ ಅರ್ಥಕ್ಕಿಂತ ಹೆಚ್ಚಿನ ವ್ಯಾಪ್ತಿಯುಳ್ಳದ್ದು ಎಂಬುದು ಗಮನಾರ್ಹ. ಗೊರೂರರ ಬರವಣಿಗೆ ಅಪರೂಪದ್ದು ಮತ್ತು ಅವರಿಗೇ ಅನುರೂಪವಾದದ್ದು. ಗೊರೂರರು ಸೆಪ್ಟೆಂಬರ್ 28, 1991ರಲ್ಲಿ ನಿಧನರಾದರು.
ಸರಿಸುಮಾರು 1933-34 ರಲ್ಲಿ ಬರೆದ ಆಮೇಲೆ 1984ರಲ್ಲಿ ಪರಿಷ್ಕೃತ ಮುದ್ರಣ ಕಂಡ ಕತಾಸಂಕಲನ ಇದು. ಗೊರೂರರ ಕತಾಲೋಕದೊಳಗೆ ಹೋಗುವುದೆಂದರೆ ಹಸಿರು ತುಂಬಿದ ಗದ್ದೆಯಂಚಲ್ಲಿ ಸಂಜೆ ಬರಿಗಾಲಲ್ಲಿ ನಡೆದಂತೆ! ತಣ್ಣಗೆ ಬೀಸುವ ಗಾಳಿ,ಕಣ್ಣು ಹಾಯಿದಷ್ಟು ದೂರ ಹಸಿರು,ಆಗಾಗ ಚುಚ್ಚುವ ಮುಳ್ಳು ಹೀಗೆ! ಹಳ್ಳಿಯ ಜನರ ಜೀವನ ಚಿತ್ರಗಳ ಅವರಷ್ಟು ದಟ್ಟವಾಗಿ ಕಟ್ಟಿಕೊಟ್ಟವರು ಕಡಿಮೆ. ಜನರ ಒಳ್ಳೆಯತನಗಳಷ್ಟೇ ಅಲ್ಲದೆ ಸಣ್ಣತನ ಕೂಡ ನೋವಾಗದಂತೆ ಅದೊಂದು ಸಹಜ ಮಾನವ ಗುಣದಂತೆ ಬರೆವ ಆಪ್ತ ಶೈಲಿ. ಒಂದಕ್ಕಿಂತ ಒಂದು ಸೊಗಸು ಕತೆ. ಬೂತಯ್ಯನ ಮಗ ಅಯ್ಯು ಎಲ್ಲರಿಗೂ ಗೊತ್ತಿರುವ ಚಲನಚಿತ್ರವಾಗಿರುವ ಕತೆ. ಮನುಷ್ಯನ ಒಳ್ಳೆಯತನ ಕೊನೆಗೆ ಗೆಲ್ಲುತ್ತದೆ ಎಂಬ ಸಾರ ಈ ಕತೆಯದ್ದು. ನನಗೆ ಬಹಳ ಇಷ್ಟವಾದ ಕತೆ ಗಂಡುಬೀರಿ ಹೊಸಬಿ. ಹಳ್ಳಿಯ ಹೆಣ್ಣೊಬ್ಬಳ ಛಲ ಮತ್ತು ಬದುಕುವ ರೀತಿ ಎಷ್ಟು ಚೆನ್ನಾಗಿ ಚಿತ್ರಿಸಿದ್ದಾರೆ ಎಂದರೆ ಕೊನೆಗೆ ಅವಳು ಮಾದನಿಗೆ ನಾನು ಹೇಳಿದಂತೆ ಕೇಳಿಕೊಂಡು ಇರುವುದಾದರೆ ಮಾತ್ರ ಮದುವೆಯಾಗುತ್ತೇನೆ ಅಂದಾಗ ನಮಗೂ ಸರಿಯಾದ ಮಾತು ಅನಿಸುತ್ತದೆ.
ನಿಮಗೆ ತಂಪು ಸಂಜೆಯ ಹೊತ್ತಿಗೆ ಮನಸಿಗೆ ಹಾಯೆನಿಸಬೇಕಾದರೆ ಗೊರೂರರ ಓದಿರಿ. ಹಾಗೇ ಸುಮ್ಮನೆ ಸರಳ ನೇರ ಆಪ್ತ ಕತೆಗಳ ಓದಬೇಕಾದರೆ ಮಾಸ್ತಿಯವರ ಓದಿರಿ. ಬದುಕಲ್ಲಿ ನೆಮ್ಮದಿ ಕಾಣದೆ ಮಾನಸಿಕವಾಗಿ ಬೇಸರ ಇರುವುದಾದರೆ ಡಿ.ವಿ.ಜಿ.ಯವರ ಓದಿರಿ.
ಅಜ್ಜ ಅಜ್ಜಿ ನೆಟ್ಟ ದಾರಿಬದಿಯ ಮರ ಮೊಮ್ಮಕ್ಕಳ ಕಾಲಕ್ಕೆ ದಾರಿಹೋಕರಿಗೆ ನೆರಳು ಕೊಡುವಂತೆ ಕನ್ನಡ ಸಾಹಿತ್ಯವೆಂಬ ದಾರಿಗೆ ಇವರ ಬರಹಗಳೇ ಮರ!