ತಿರುಮಲೇಶ್ ಅಂದರೆ ಗೊತ್ತು ಅನ್ನುವವರು ಬಹಳ. ಆದರೆ ಅವರ ಕವಿತೆ,ಕತೆ,ಕಾದಂಬರಿಗಳ ಓದಿದ್ದೀರಾ ಎಂದರೆ ತಲೆಯಾಡಿಸುತ್ತಾರೆ. ನನಗೆ ದೂರದ ಸಂಬಂಧವಾಗಬೇಕಾದ ಕವಿ ಎಂ.ಗಂಗಾಧರ ಭಟ್ಟರ ಗೆಳೆಯ ಇವರು ಎಂದು ಗೊತ್ತಿತ್ತು. ಅವರ 'ಮುಸುಗು' ಕಾದಂಬರಿ ಸುಧಾದಲ್ಲಿ ಬಂದಾಗ ಯಾರದೊ ಮನೆಯಲ್ಲಿ ಫೈಲ್ ಮಾಡಿಟ್ಟಿದ್ದ ಅದನ್ನು ಓದಿ ಇಷ್ಟಪಟ್ಟಿದ್ದೆ. 'ಕಳ್ಳಿ ಗಿಡದ ಹೂ' ಎಂಬ ಕತಾಸಂಕಲನ ಓದುವಾಗ ಬೋರಾಗಿ ನಿಲ್ಲಿಸಿಬಿಟ್ಟೆ. ಅದೇ ರೀತಿ ಫ್ರೆಂಚ್ ಕಾದಂಬರಿ ಒಂದರ ಅನುವಾದ 'ಪೂರ್ವಯಾನ' ಅವರ ಲೇಖನಗಳು ಎಲ್ಲ ಒಳಗೇ ಬಿಟ್ಟುಕೊಳ್ಳಲಿಲ್ಲ.
ಗೆಳೆಯ ರಾಜುಗೌಡರು ಓದಿ ,ನಿಧಾನವಾಗಿ ಓದಿ ಅಂತ ಹೇಳಿ ಕೊಡದಿದ್ದರೆ ದೇವರಾಣೆಗೂ ಓದುತ್ತಾ ಇರಲಿಲ್ಲ. ಪ್ರಸ್ತಾವನೆಯಲ್ಲಿ ಇದನ್ನು ಅಪರೂಪದ ಕತೆಗಳು ಎಂದು ಯಾಕೆ ಕರೆದೆ ಎಂದರೆ ಇದು ಯಾರ ಗಮನಕ್ಕೂ ಬರದ ಕತೆಗಳು ಎಂದು ಹೇಳಿದುದರ ವಿಷಾದ ತಟ್ಟಿತ್ತು. ಧಾರವಾಡದ ಸಾಹಿತ್ಯ ಸಂಭ್ರಮದಲ್ಲಿ ಹಿರಿಯ ಸಾಹಿತಿಯೊಬ್ಬರ ಬಳಿ 'ಸಾರ್, ನಿಮ್ಮ ಅಭಿಮಾನಿ ನಾನು' ಎಂದಾಗ , 'ನನ್ನನ್ನೂ ಓದುವವರು ಇದ್ದಾರೆ ಅನ್ನುವಾಗ ಎಷ್ಟು ಖುಷಿಯಾಗುತ್ತದಪ್ಪಾ' ಎಂದು ಕಣ್ತುಂಬಿಕೊಂಡಿದ್ದರು.
ಅಪರೂಪದ ಕತೆಗಳು ಬರಹಗಾರನೊಬ್ಬನ ಪ್ರಾಮಾಣಿಕ ಬಡಬಡಿಕೆಗಳು. ಹಾಗಾಗಿಯೇ ಅಮುಖ್ಯವೆನಿಸುವ ವಿವರಗಳು ಅವರ ಪ್ರಜ್ಞೆಯಲ್ಲಿ ದಾಖಲಾಗಿ ಬರಹದಲ್ಲೂ ಬರುತ್ತದೆ(ನಿಮಗೆ ಕೆ.ಸತ್ಯನಾರಾಯಣರ ಓದಿದರೆ ಇದು ಸ್ಪಷ್ಟವಾಗುತ್ತದೆ.ಕತೆಗೆ ಸಂಬಂಧವೇ ಇಲ್ಲದ ವಿವರಗಳು ಉದ್ದಕ್ಕೆ ತುಂಬಿ ಓದು ಹಿಂಸೆಯಾಗುತ್ತದೆ)
ಇಲ್ಲಿ 'ಅವಿನಾಶನ ಜನ್ಮದಿನ ೧ ಮತ್ತು ೨' ತಿರುಮಲೇಶರ ಸ್ವಗತವೇ ಅನಿಸಿತು. 'ಬುಜ್' ಎಂಬ ಕತೆಯ ಚಂದವ ಹೇಗೆ ವರ್ಣಿಸಲಿ? ಇತ್ತೀಚೆಗೆ ನಾನೋದಿದ ಅತ್ಯುತ್ತಮ ಕತೆಗಳಲ್ಲೊಂದು. ಅದರಲ್ಲಿನ ಆತಂಕ ,ಆ ಪರಿಸರ ಎಲ್ಲ ನಮ್ಮದೇ ಆಗುತ್ತದೆ.ಯಾರಾದರೂ ಕಿರುಚಿತ್ರ ಮಾಡುತ್ತಿದ್ದರೆ ಒಳ್ಳೆಯ ಸರಕು ಇದು. 'ನಿನಾದಗಳು' ಕತೆ ಹೆಸರಿಗೆ ತಕ್ಕಂತೆ ಅನೇಕ ಭಾವಗಳ ಹೊಮ್ಮಿಸುತ್ತದೆ. ತಣ್ಣಗಿನ ಕ್ರೌರ್ಯದ ಪಾತಳಿಯ ಮೇಲಿನ ಅದು ವಿಷಾದವೋ,ದುಃಖವೋ ಗೊತ್ತಾಗುವುದಿಲ್ಲ. ಕಾಡಿನ ಯಕ್ಷಿಯೂ ಕಾಡಗದ ರಾಣಿಯೂ ಕತೆ ಥಟ್ ಅಂತ ತೇಜಸ್ವಿಯ ಲಿಂಗ ಬಂದ ಕತೆಯ ನೆನಪಿಸಿದರೂ ಇಲ್ಲಿ ಅದು ಇನ್ನಷ್ಟು ಆಳವಾಗುತ್ತದೆ.ಅತಿಥಿ ನಟಿಯ ವ್ಯಂಗ್ಯ, ಅರೇಬಿಯಾ ಕತೆಯ ದುಃಖ ಇವೆಲ್ಲ ನಿಧಾನ ಓದಿಗೆ ಅನುಭವಕ್ಕೆ ಬರುವವು.
ಹೇಗೆ ಬರಹಗಾರನಿಗೆ ಹೇಳಲಿಕ್ಕಿರುತ್ತದೋ ಹಾಗೇ ಕತೆಗಳಿಗೂ ಪಾತ್ರಗಳಿಗೂ ಹೇಳಲಿಕ್ಕಿರುತ್ತದೆ. ಅವು ತಮ್ಮ ದಾರಿ ಕಂಡಕೊಳ್ಳಲು ಬರಹಗಾರ ಒಂದು ಮಾಧ್ಯಮ ಅಷ್ಟೇ ಅಂತನಿಸಿತು. ಆದರೆ ಹೊರಬಂದ ಕತೆಗಳ ಯಾರೂ ಓದದಿದ್ದರೆ? ಅದು ಬಹುಶಃ ಎಲ್ಲ ಕತೆಗಳ, ಕತೆಗಾರರ ದುರಂತ. ಅಪರೂಪದ ಕತೆಗಳು ಅದನ್ನು ಮೆಲುದನಿಯಲ್ಲಿ ಹೇಳುತ್ತದೆ. ನಿರ್ಲಕ್ಷಿತನಾಗುತ್ತಿದ್ದೇನೆ ಅಂತ ಬಾಧೆ ಪಡುವ ಹಿರಿಯರೊಬ್ಬರ ಬೇಸರದಿಂದ ಬಂದ ಕತೆಗಳಿವು ಅಂತ ನನಗೆ ಗಾಢವಾಗಿ ಅನಿಸಿತು.
This entire review has been hidden because of spoilers.
ಹೆಸರಿಗೆ ತಕ್ಕಂತೆ ಅಪರೂಪದ ಕಥೆಗಳ ಗುಚ್ಛ ಇದು . ಕೆಲವು ಕಥೆಗಳ ಸನ್ನಿವೇಶಗಳು ಲೇಖಕರ ಅನುಭವ ಇರಬಹುದು ಅನ್ನೋ ಭಾವನೆ ಬರುತ್ತದೆ . ಈ ಕಥಾ ಸಂಕಲನ ನಿಮ್ಮಗೆ ಸಿಕ್ಕರೆ ಖಂಡಿತ ಓದಿ ಆಸ್ವಾದಿಸಿ ಅನ್ನೋದು ನನ್ನ ಅಭಿಪ್ರಾಯ