ಬಹುಶಃ ನಮ್ಮ ನಡುವಿನ ದೊಡ್ಡ ಆದರೆ ನಿರ್ಲಕ್ಷಿತ ಕತೆಗಾರರ ಪೈಕಿ ಅಬ್ದುಲ್ ರಶೀದ್ ಒಬ್ಬರೋ ಅನಿಸುತ್ತಿದೆ. ಅವರ ಕತೆಗಳ ಚಿಟ್ಟೆಯ ಗುಣವ ಆಸ್ವಾದಿಸಲೆಂದೇ ಈ ಬೆಳಗಿನ ಜಾವ ಐದಕ್ಕೇ ಶುರು ಮಾಡಿದ್ದು ಈಗ ಮುಗಿಯಿತು.ಪುಟ್ಟ ಪುಸ್ತಕ ಆದರೆ ಪ್ರತಿಯೊಂದು ಕತೆಯೂ ನಿಮ್ಮನ್ನ ಎಲ್ಲಿಗೋ ಕರೆದುಕೊಂಡು ಹೋಗುತ್ತದೆ.ಮತ್ತು ಅಲ್ಲಿ ಬಿಟ್ಟು ಬರುತ್ತದೆ.ವಾಪಸು ದಾರಿ ನೀವೇ ಹುಡುಕಿ ಬರಬೇಕು.ಇಲ್ಲ.ನಿಮಗೆ ಅರ್ಥವಾಗಲಿಲ್ಲ ಅಲ್ಲವೇ? ಈ ಕೆಳಗಿನ ಪ್ಯಾರಾ ಓದಿ. ಇದು ಇಷ್ಟವಾದರೆ ರಶೀದರು ನಿಮಗೂ ಇಷ್ಟವಾಗುತ್ತಾರೆ. 'ಈ ಮಳೆಯ ನಂತರ ಈ ಊರೂ ಇರುವುದಿಲ್ಲ' ಕತೆಯ ಆರಂಭದ ಪ್ಯಾರಾ. "ಹಾಗೆ ನೋಡಿದರೆ ದೊಡ್ಡ ಹೇಳಿಕೊಳ್ಳುವಂತಹ ಚಂದದ ಊರೆನಲ್ಲ ಇದು.ಬಯಲು ಸೀಮೆ ಕಳೆದು,ತಿರುವಿನ ರಸ್ತೆ ಶುರುವಾಗಿ,ಕುರುಚಲು ಕಾಡು ಕಂಡು ಬಂದು,ಇದ್ದಕ್ಕಿದ್ದಂತೆ ತೇಗದ ದೊಡ್ಡದೊಂದು ನೆಡುತೋಪು ಆರಂಭವಾಗಿ ಮುಗಿಯುವಷ್ಟರಲ್ಲಿ ಈ ಊರು ಬಂದುಬಿಡುತ್ತದೆ. ನೋಡುವವರು ತಮ್ಮ ಕಣ್ಣುಗಳನ್ನು ಈ ಊರಿನ ಬಣ್ಣಗಳಿಗೆ ಹೊಂದಿಸಿಕೊಳ್ಳುವಷ್ಟರಲ್ಲಿ ಅದು ಕಳೆದೇ ಹೋಗಿ ರಸ್ತೆಯ ಎರಡೂ ಕಡೆಗಳಲ್ಲಿ ಕಾಫಿತೋಟಗಳು ಶುರುವಾಗಿ ಬಿಡುತ್ತವೆ.ಆಮೇಲೆ ಬರಿಯ ಬೇಲಿಗಳು ಮತ್ತು ಅದರೊಳಗಡೆ ಕಾಫಿ,ಕಿತ್ತಳೆ, ಕರಿಮೆಣಸು, ಹಾಲವಾನ,ಹಲಸು,ಬೀಟೆ ಮತ್ತು ಸಿಲ್ವರ್ ಮರಗಳು. ಮುಂದೆ ಹೋದಂತೆ ಮಂಜೋ ಮಳೆಯೋ ಎಳೆಬಿಸಿಲೋ ಏನೋ ಒಂದು ಕಾಲಕಾಲಕ್ಕೆ ತಮ್ಮ ಭಂಗಿಯನ್ನು ಬದಲು ಮಾಡಿಕೊಂಡು ಇನ್ನು ಇದು ಮುಗಿಯುವುದೇ ಇಲ್ಲವೇನೋ ಎಂದುಕೊಳ್ಳುವಷ್ಟರಲ್ಲಿ ಇಂತಹದೇ ಇನ್ನೊಂದು ಊರು ಬಂದುಬಿಡುತ್ತದೆ.ಅನಂತರ ಇಂತಹುದೇ ಇನ್ನೂ ಹಲವು ಊರುಗಳು ಮುಗಿದು ಕೊನೆಯಲ್ಲಿ ಈ ಊರಿನ ನೆನಪು ಮನಸಿನಿಂದ ಮರೆತೇಹೋಯಿತು ಎನ್ನುವಷ್ಟರಲ್ಲಿ ಅದು ಯಾಕೋ ಏನೋ ಬಣ್ಣ ಬಣ್ಣದ ಹಲವು ಮಾಸಲು ಚಿತ್ರಗಳು ಹಾಗೇ ಉಳಿದುಕೊಂಡುಬಿಡುತ್ತವೆ."