ಅವನು : ತುಂಬಾ ದಿನ ಬೆಂಗಳೂರಲ್ಲಿ ಇರಕ್ಕಾಗಲ್ಲ. ಬೆಂಗಳೂರು : ನಿರ್ಧಾರ ನಿನ್ನದಲ್ಲ ಅವನು : ಇದು ಕರುಣೆ ಇಲ್ಲದ ಮಹಾನಗರ. ಬೆಂಗಳೂರು : ನೀನು ಪ್ರೀತಿ ಇಲ್ಲದ ಪಯಣಿಗ. ಅವನು : ಈ ಊರಿಗೆ ಕಣ್ಣಿಲ್ಲ. ಬೆಂಗಳೂರು :ಕನಸಿರದ ದಾರಿಯಲ್ಲಿ ಬೆಳಕೂ ಇರುವುದಿಲ್ಲ. ಅವನು :ಊರು ಬಾ ಅನ್ನುತ್ತಿಲ್ಲ. ಬೆಂಗಳೂರು :ನಾನೂ ಹೋಗು ಅನ್ನುತ್ತಿಲ್ಲ. ಅವನು :ಇದಕ್ಕೆ ಕೊನೆಯೇ ಇಲ್ಲವೇ . ಬೆಂಗಳೂರು :ಕೊನೆ ಇಲ್ಲದೇ ಇರುವುದೇ ಕೊನೆ . ಅವನು :ರಾಕ್ಷಸಿ ನಿನಗೇನು ಬೇಕು? ಬೆಂಗಳೂರು :ನೀ ಸತ್ತು ನೀ ಬದುಕಬೇಕು.
Jogi Girish Rao Hatwar ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ ಪತ್ನಿ ಜ್ಯೋತಿ, ಮಗಳು ಖುಷಿಯೊಂದಿಗೆ ಜೀವಿಸುತ್ತಿದ್ದಾರೆ.
ಹೈದರಾಬಾದಿನಲ್ಲಿ ಉದ್ಯೋಗದಲ್ಲಿದ್ದ ನಾನು ಅದ್ಯಾವಾಗ ಬೆಂಗಳೂರಿಗೆ ಹೋಗುತ್ತೇನೆ ಎಂದು ಸಾಕಷ್ಟು ಕೊರಗಿದ್ದೆ.ಹಾಗೆಯೇ ಆದಷ್ಟು ಬೇಗ ಬಂದುಬಿಡು ಮಾರಾಯ ಅಂತ ಆಗಾಗ ಕನಸಲ್ಲೂ ಕಾಡುತಿತ್ತು ಬೆಂಗಳೂರು ! ಯಾವಾಗ ೨೦೧೮ ರಲ್ಲಿ ಬೆಂಗಳೂರ ತೆಕ್ಕೆಗೆ ಬಿದ್ದೆನೋ , ಜೀವ್ನ ಮತ್ತು ಜೇವಕ್ಕೆ ಮತ್ತೆ ಹೊಸ ಕಳೆ ಬಂತು. ನಂಗೆ ಬೆಂಗಳೂರು ಅಂದ್ರೆ ಕೂಡ್ಲೇ ನೆನಪಾಗೋದು - "ಹಟ್ಟಿ ಕಾಫಿಯ" ಫಿಲ್ಟರ್ ಕಾಫೀ, ವಿಷ್ಣು ಪಾರ್ಕ್ ನ ಮಸಾಲೆ ದೋಸೆ,ಸಪ್ನಾ ಬುಕ್ ಹೌಸ್,vega city ಮಾಲ್, ದರ್ಶಿನಿ ಹೋಟೆಲುಗಳು, ಮೆಜೆಸ್ಟಿಕ್ ನ ಬಸ್ಸುಗಳ ರಾಶಿ, ೨೫-A , ೩೬೫-CW ಸಿಟಿ ಬಸ್ಸು, ಇಲೆಕ್ಟ್ರಾನಿಕ್ ಸಿಟಿ ಫ್ಲೈಓವರ್, ಬಿಟಿಎಂ ಲೇಔಟ್ ನ ಸಾಲು ಮರಗಳು,ಪೀಜಿ ಗಳು, ಗಲ್ಲಿಗಲ್ಲಿಗಳಲ್ಲಿ ಇರುವ ಬೇಕರಿ - ಬಾರುಗಳು, ಪಾರ್ಕು - ಲೇಕುಗಳು ಹಾಗು Infosys ಕ್ಯಾಂಪಸ್ !
B ಕ್ಯಾಪಿಟಲ್ ನಲ್ಲಿ ಜೋಗಿಯವರು ಓದುಗರನ್ನು ಬೆಂಗಳೂರಿನ ಅಂತರಂಗದೊಳಗೆ ಕರೆದೊಯ್ದಿದ್ದಾರೆ ಅಂದರೆ ಅತಿಶಯೋಕ್ತಿ ಆಗಲಾರದು ! ಅವರು ಕಂಡ ಹಳೇ ಬೆಂಗಳೂರನ್ನು ಬಹಳ ರಸವತ್ತಾಗಿ ಓದುಗರಿಗೆ ಉಣಬಡಿಸಿದ್ದಾರೆ. ಬೆಂಗಳೂರಿನ ಕಾಫಿ ಹೌಸ್, ಮಸಾಲೇ ದೋಸೆ,ಬಾರುಗಳು,ಪ್ರೆಸ್ ಕ್ಲಬ್ಬಿನ ಸ್ನೇಹಿತರು,ಸಿನಿಮಾ ಲೋಕ, ಸಾಹಿತ್ಯ ಲೋಕ,ವೈನ್ಕೆ ಅವರೊಂದಿಗಿನ ದಿನಗಳು,ಬಾಡಿಗೆ ಮನೆ, ಆಟೋಗಳು - ಹೀಗೇ ಹಲವಾರು ಸಂಗತಿಗಳು ಲೇಖಕರ ದೃಷ್ಟಿಕೋನದಲ್ಲಿ ಸೊಗಸಾಗಿ ವಿವರಿಸಲ್ಪಟ್ಟಿದೆ.
ಅಜ್ಜ ತೀರಿಹೋದ ಬಳಿಕ ಅಟ್ಟದಲ್ಲಿ ತಡಕಾಡುವಾಗ 'ಕೋಟ ವಾಸುದೇವ ಕಾರಂತ'ರ ' ದೇವರನ್ನು ನಂಬುವ' ಎಂಬ ಪುಸ್ತಕ ಸಿಕ್ಕಿತ್ತು. ಅದರಲ್ಲಿ ಗೋಕರ್ಣದ ಆತ್ಮಶಕ್ತಿಯನ್ನು ಪುರಿ ಜಗನ್ನಾಥನಲ್ಲಿ ತಗೊಂಡು ಹೋಗಿ ಸೇರಿಸಿದ ಘಟನೆಯ ಪ್ರಸ್ತಾಪವಿತ್ತು. ಜೋಗಿಯವರ 'ಬಿ ಕ್ಯಾಪಿಟಲ್' ನ ಆರಂಭದಲ್ಲಿ ಅದೇ ಘಟನೆಯ ಓದುವಾಗ ನೆನಪಿಗೆ ಬಂತು. ಬೆಂಗಳೂರು ಸರಣಿಯ ಎರಡನೆಯ ಪುಸ್ತಕ 'ಬಿ ಕ್ಯಾಪಿಟಲ್' ಮೊದಲನೆಯ ಪುಸ್ತಕದಲ್ಲಿ ನಗರದ ಕ್ರೌರ್ಯವ ಒಬ್ಬನ ಮುಖಾಂತರ ಹೇಳಹೊರಟ ಜೋಗಿ ಇಲ್ಲಿ ನಗರವ ಹುಡುಲಿ ಬದುಕು ಕಟ್ಟಿಕೊಳ್ಳಲು,ಬದುಕು ಕಂಡುಕೊಳ್ಳಲು ಬಂದ ಕತೆ ಹೇಳಿದ್ದಾರೆ. ಇದು ಬರಿಯ ಅವರೊಬ್ಬರ ಕತೆಯಲ್ಲ. ಇದರೊಳಗೂ ತುಂಬಾ ಕತೆಗಳಿವೆ. ಹೆಚ್ಚಿನ ಪಾತ್ರಗಳು ಕೊನೆಗೆ ಸಿಗಲಿಲ್ಲ ಅನ್ನುವುದು ಕಾಕತಾಳೀಯ ಅಂತ ಅನಿಸುವುದಿಲ್ಲ. ಮಹಾನಗರಗಳಲ್ಲಿ ಅದುವೇ ಸಹಜ ಸತ್ಯ. ಬಿಟ್ಟೆನೆಂದರೂ ಬಿಡದಿ ಮಾಯೆ ಎಂಬಂತೆ ಊರಿಗೆ ವಾಪಸು ಹೋಗಬೇಕು ಅಂದುಕೊಂಡೇ ಜೀವಮಾನವಿಡೀ ಸಾಗಿಸಿದವರ , 'ಅವತ್ತು ಮೂರು ಸಾವಿರ ಯಾರು ಕೊಡುವುದು ಅಂತ ಆ ಸೈಟು ಯಾರು ಕೊಳ್ಳುವುದು ಅಂತ ಬಿಟ್ಟೆ ಈಗ ನೋಡಿದರೆ ಮೂರು ಕೋಟಿ ಬೆಲೆಬಾಳುತ್ತಿತ್ತು' ಅಂತ ಲೊಚಗುಟ್ಟುವವರ, ಇಲ್ಲಿನ ಟ್ರಾಫಿಕಲ್ಲಿ ಕಳೆದ ಕನಸಲ್ಲಿ ಊರೇ ನೆನಪಿಗೆ ಬರುವವರ ಕಥನ ಇದು. ಜೋಗಿಯ ಟಿಪಿಕಲ್ ಶೈಲಿಯ ವಿಷಾದ ಈ ಪಯಣವ ಸಹ್ಯವಾಗಿಸಿದೆ. ಅನೇಕ ಪುಸ್ತಕಗಳಿಗೆ ವಸ್ತುವಾಗಬಹುದಾದ್ದು ಇಲ್ಲಿ ಅಧ್ಯಾಯಗಳಾಗಿದೆ. ಇದು ವಲಸಿಗರಾಗಿ ಇಲ್ಲಿಯೂ ಸಲ್ಲದ ಅಲ್ಲಿ ಊರಿಗೂ ಸಲ್ಲದವರ ತ್ರಿಶಂಕು ಕತೆ. ಹೆಸರು ಬದಲಾಯಿಸಿದರೆ ಹಳ್ಳಿ ಬಿಟ್ಟು ಪಟ್ಟಣಕ್ಕೆ ಬಂದ ನಮ್ಮ ಕತೆಯೂ ಹೌದು
ಚೆನ್ನಾಗಿದೆ. ಜೋಗಿ ಬೇರೆ ಊರಿಂದ ಬಂದು ಬೆಂಗಳೂರನ್ನು ತನ್ನ ಊರು ಅಂತ ಹೇಳುವ ನಡುವಿನ ಹಲವಾರು ಘಟನೆಗಳು ಈ ಪುಸ್ತಕದ ಕಥೆಗಳು. ತಮ್ಮ ಊರನ್ನು ಬಿಟ್ಟು ಬೇರೆ ಊರುಗಳಲ್ಲಿ ಕೆಲಸಕ್ಕಾಗಿ ಇರುವ ಮಂದಿ ಇಲ್ಲಿ ಬರುವ ಹಲವು ಸಾಮ್ಯತೆ ಕಾಣಬಹುದು. ಮಸಾಲೆ ದೋಸೆ ಮಲ್ಲಿಗೆ ಹೂ ಮತ್ತು ಬೆಂಗಳೂರು ಅಂದರೆ ಕಥೆ ತುಂಬಾ ಇಷ್ಟ ಆಯ್ತು.
ಹಳೆ ಮತ್ತು ಹೊಸ ಬೆಂಗಳೂರನ್ನು ಜೋಗಿ ಅವರು ಈ ಪುಸ್ತಕದಲ್ಲಿ ತುಂಬ ಚೆನ್ನಾಗಿ ಚಿತ್ರಿಸಿದ್ದಾರೆ. ಓದುವಾಗ ಎಸ್ಟೊ ಬಾರಿ ಇದು ನನ್ನದೇ ಕಥೆಯೇ ಎಂಬ ಅನುಮಾನ ಬಂದಿದ್ದೂ ಉಂಟು. ಕೆಲವೊಂದು ಸಾಲುಗಳನ್ನು ಓದುವಾಗ ಪಕ್ಕನೆ ನಕ್ಕು ಆ ಸಾಲಿನಲ್ಲಿಯ ವಿಷಾದ ಅರಿವಾಗಿ ಖೇದವೆನಿಸಿದ್ದೂ ಉಂಟು.
ಪದವಿ ಓದುವ ಸಮಯದಲ್ಲಿ ಅಪ್ಪ ತರುತ್ತಿದ್ದ 'ಹಾಯ್ ಬೆಂಗಳೂರ್' ಓದಿ ಮಾತ್ರ ಗೊತ್ತಿದ್ದ ಈ ನಗರದ ಪರಿಚಯವಾಗಿದ್ದು ಕೆಲಸೆಕ್ಕೆಂದು ಇಲ್ಲಿಗೆ ಬಂದಾಗಲೇ. ಈಗ ಈ ಪುಸ್ತಕವನ್ನು ಒದುತ್ತಿದ್ದರೆ, ಗೆಳೆಯರೊಂದಿಗೆ ಓಡಾಡಿದ ಏರಿಯಾಗಳೆಲ್ಲ ನೆನಪಾಗಿ 'ಅವು ಹಾಗಿದ್ದವೆ!' ಎಂದು ಅಚ್ಚರಿಯಾಗಿದ್ದೂ ಇದೆ. 'ಟೈಮ್ ಮಷೀನ್' ಇದ್ದಿದ್ದರೆ ಬಹುಷಃ ಮೂವತ್ತು ವರ್ಷ ಹಿಂದೆ ಹೋಗಿ ಆ ಹಳೆ ಬೆಂಗಳೂರನ್ನೊಮ್ಮೆ ನೋಡಿ ಬರುತ್ತಿದ್ದೆನೇನೋ?
ನಾವು ಏನೋ ಆಗಬೇಕು, ಏನೇನೋ ಮಾಡಬೇಕು ಎಂದುಕೊಂಡಿರಿತ್ತೇವೆ. ಆದರೆ ಕಾಲಕ್ರಮೇಣ, ನೈಜತೆಯ ಅರಿವಾಗುತ್ತ, ಹಳೆ ಕನಸುಗಳು ಕಮರಿ, ಹೊಸದಕ್ಕೆ ಜಾಗ ಮಾಡಿಕೊಡುತ್ತವೆ. ನಮಗೇ ಗೊತ್ತಿಲ್ಲದೆ ಯಾರೋ ಗೆಳೆಯರಾಗುತ್ತಾರೆ, ಮತ್ಯಾರೋ ನಮ್ಮ ಮೇಲೆ ವಿಷ ಕಾರುತ್ತಾರೆ. ಎಂದಿಗೂ ಜೊತೆಗಿರುತ್ತೇವೆ ಎಂದುಕೊಂಡವರು ಗೊತ್ತೇ ಇಲ್ಲದೇ ದೂರವಗಿರುತ್ತಾರೆ. ಪ್ರತಿಯೊಬ್ಬರೂ ಅವರದೇ ಆದ ಕನಸುಗಳನ್ನು ಬೆನ್ನತ್ತಿ ಹೋಗುವುದರಲ್ಲಿ 'ಬಿಸಿ'ಯಾಗಿರುತ್ತಾರೆ. ಇಂತಹಃ ಎಸ್ಟೋ ಸಂಗತಿಗಳು ಈ ಪುಸ್ತಕವನ್ನು ಒದುತ್ತಿದ್ದರೆ ಹೊಸದಾಗಿ ಜ್ನಾನೋದಯವಾದಂತೆ ಅನಿಸುತ್ತವೆ.
ಪುಸ್ತಕವು ತಾನಾಗೆ ಓದಿಸಿಕೊಂಡು ಹೋಗುತ್ತದೆ. ನೀವು ನಿಮ್ಮದೇ ಜೀವನದ ತುಣುಕುಳನ್ನು ಇಲ್ಲಿ ಕಂಡರೆ ಅಚ್ಚರಿಯಿಲ್ಲ.
"B ಕ್ಯಾಪಿಟಲ್" - ಇದು ಜೋಗಿಯವರ ಅನುಭವ ಕಥನ, ಬೆಂಗಳೂರು ಮಹಾನಗರ ಜೀವನದ ಅನುಭವ ಕಥನ.
ಸುಮಾರು ಎರಡು ದಶಕಗಳಿಂದ ಬೆಂಗಳೂರಿನಲ್ಲೇ ನೆಲೆಸಿರುವ ನನಗೆ ಹಳೆ ಬೆಂಗಳೂರಿನ ಕೆಲವು ಪ್ರಮುಖ ರಸ್ತೆಗಳ ಹಾಗೂ ಜಾಗಗಳ ಚಿತ್ರಗಳನ್ನು ನೋಡುವಾಗ ಅದೇನೋ ಒಂತರಾ ಖುಷಿ ಮತ್ತೆ ಆಶ್ಚರ್ಯ. ಬೆಂಗಳೂರು ಹೀಗೂ ಇತ್ತಾ? ಎಂದು. ಲೇಖಕರ ಅನುಭವ ಕಥನಗಳನ್ನು ಓದಬೇಕಾದರೂ ಅಷ್ಟೇ, ಆ ಹಳೆ ಬೆಂಗಳೂರಿನ ಒಂದಷ್ಟು ಚಿತ್ರಣ ನನ್ನ ಕಣ್ಮುಂದೆ ಬಂತು.
ಇದು ಜೋಗಿಯವರ 52ನೇ ಕೃತಿ, ಕಳೆದ 25 ವರ್ಷಗಳಿಂದ ಅಂಕಣಕಾರರಾಗಿ ಕನ್ನಡದ ಪ್ರಮುಖ ಪತ್ರಿಕೆಗಳಿಗೆ ಅಂಕಣ ಬರೆಯುತ್ತಾ ಬಂದಿದ್ದಾರೆ. ಆದರೆ ಇಷ್ಟೆಲ್ಲಾ ಹೇಗಾಯ್ತು ? ಜೋಗಿಯವರ ಬೆಂಗಳೂರಿನ ಆರಂಭದ ದಿನಗಳು ಹೇಗಿದ್ದವು ? ಯಾವೆಲ್ಲಾ ಕೆಲಸಗಳನ್ನು ಮಾಡಿದ್ದರು ? "B ಕ್ಯಾಪಿಟಲ್" ಓದಿದ್ರೆ ಇದೆಲ್ಲಾ ನಮಗೆ ತಿಳಿಯುತ್ತೆ.
ಅನುಭವಗಳಲ್ಲದೆ, ಕನ್ನಡದ ಪ್ರತಿಭಾವಂತ ಪತ್ರಕರ್ತರೊಂದಿಗಿದ್ದ ಒಡನಾಟವನ್ನು ಕೂಡ ಲೇಖಕರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ವ್ಯಕ್ತಿತ್ವಕ್ಕೆ ತಕ್ಕಂತೆ ಹೋಗಬಹುದಾದ ಹಳೆ ಬೆಂಗಳೂರಿನ ಬಾರು,ಕ್ಲಬ್ಬು ಯಾವುವು ? ಒಳ್ಳೆ ಮಸಾಲೆದೋಸೆ, ಕಾಫಿ ಸಿಗುವ ಹೋಟೆಲ್ಲುಗಳು ಎಲ್ಲಿವೆ ಅನ್ನುವುದನ್ನೂ ಸೂಚಿಸಿದ್ದಾರೆ. 😃
ಅವಕಾಶ ಸಿಕ್ಕರೆ ನೀವೂ ಈ 150 ಪುಟಗಳ "B ಕ್ಯಾಪಿಟಲ್" ಓದಿ.
ಪುಸ್ತಕದಿಂದ ನನಗಿಷ್ಟವಾದ ಒಂದೆರಡು ಸಾಲುಗಳು:
* "ಬೆಂಗಳೂರು ಎಂಬ ಮಹಾನಗರ ನಮ್ಮ ಅಹಂಕಾರವನ್ನೆಲ್ಲ ಅಡಗಿಸಿ, ನಮ್ಮನ್ನು ಎಂಥ ಕೆಲಸಕ್ಕೂ ಒಗ್ಗಿಸುತ್ತದೆ. ಜಾತಿ ವಿನಾಶದ ಮೊದಲ ಹೆಜ್ಜೆ ಎಂದರೆ ಯಾವುದೇ ಕಾಯಕವನ್ನು ಮಾಡಲು ಸಿದ್ದರಾಗುವುದು."
* "ಮಹಾನಗರಗಳು ಜಾತಿಯನ್ನು ನೀಗಿಕೊಂಡು ಸಮಾನತೆಯನ್ನು ಪ್ರತಿಪಾದಿಸುವಂತೆ ಮೇಲ್ನೋಟಕ್ಕೆ ಕಾಣಿಸಿದರೂ ಒಂದೊಂದು ಮನೆಗಳೂ ತನ್ನೊಂದಿಗೆ ತನ್ನ ಪರಂಪರೆಯನ್ನೂ ಹೊತ್ತುಕೊಂಡೇ ಮಹಾನಗರಕ್ಕೆ ವಲಸೆ ಬಂದಿರುತ್ತವೆ."