ನೀವೇನಾದರೂ ಮುರಕಮಿಯನ್ನು ಜೊತೆಗೆ ಸುರೇಂದ್ರನಾಥರನ್ನು ಒಟ್ಟಿಗೆಯೋ ಇಲ್ಲ ಹಿಂದೂ ಮುಂದಾಗಿ ಓದಿಕೊಂಡಿದ್ದರೆ ಇಬ್ಬರಿಗೂ ಅಂತಹ ವ್ಯತ್ಯಾಸ ಇಲ್ಲ. ಭಾಷೆ ,ಪ್ರದೇಶ ,ಪಾತ್ರಗಳು ,ದ್ವಂದ್ವಗಳು ಬೇರೆ ಬೇರೆ ಆದರೂ ಪ್ರಸ್ತುತಿ ಮತ್ತು ಪಾತ್ರಗಳ ಒದ್ದಾಟದಲ್ಲಿ ಒಂದೇ ಏನೋ ಅನಿಸುತ್ತೆ. ಮುರಕಮಿಯ ಕತೆಗಳಿಗೆ ಸುರೇಂದ್ರನಾಥರ ಭಾಷೆ ಸರಿಯಾಗಿ ಸಿಂಕ್ ಆಗುತ್ತದೆ.
ಬಂಡಲ್ ಕತೆಗಳು- ಕಟ್ಟು ಕತೆಗಳು ಅಂತ ಹೆಸರಿಟ್ಟು ಅದ್ಬುತ ಕತೆಗಳನ್ನು ಬರೆಯೋರು ಸುರೇಂದ್ರನಾಥರು. ಮಾಂತ್ರಿಕ ವಾಸ್ತವತೆ ಬಗ್ಗೆ ಕನ್ನಡದಲ್ಲಿ ಬಂದ ಬೆಸ್ಟ್ ರೈಟರು ಸೂರಿ ಅವರೆಂದರೆ ತಪ್ಪಾಗಲಾಗದು. ಅವರ ಕಾದಂಬರಿಯಲ್ಲೂ ,ಕತೆಗಳಲ್ಲೂ ,ಬರೆದ ನಾಟಕಗಳಲ್ಲೂ ಅದು ಕಾಣುತ್ತದೆ. ಹಾಸ್ಯ ,ಒಂದು ಭಾರಿ ತಿರುವು, ಅವಾಸ್ತವ ಟ್ವಿಸ್ಟ್, ಜೊತೆಗೆ ಏಕಾಏಕಿ ಬಾಗಿಲು ಮುಚ್ಚುವ ದೇವಸ್ಥಾನದಂತಹ ಕ್ಲೈಮಾಕ್ಸ್ . ಎಲ್ಲ ಕತೆಗಲ್ಲೂ ಒಂದೇ ಪ್ಯಾಟರ್ನ್ , ಆದರೂ ಎಲ್ಲ ಕತೆಗಳಲ್ಲೂ ಒಂದು ಎಂಗೇಜ್ ಮೆಂಟ್ ಇದೆ ಅದು ಬೇರೆ ಬರಹಗಾರರಿಗೆ ಅಷ್ಟಾಗಿ ಸಿದ್ಧಿಸಿಲ್ಲ. ಬೇರೆಯವರು ಪದೇ ಪದೇ ಅದೇ ಬರೆದಾಗ ಏನು ಗುರು ಇವರ ಸರಕು ಖಾಲಿ ಆಯ್ತಾ ಅನಿಸಿ ಕೈ ಮುಗಿದದ್ದು ಇದೆ. ಮತ್ತೆ ಇವರ ಎಲ್ಲ ಕತೆಗಳಿಗೂ ಸ್ಫೂರ್ತಿ ಇದೆ, ಅದನ್ನು ಹೇಳಿಕೊಂಡಿದ್ದಾರೆ ಕತೆಯ ಕೊನೆಯಲ್ಲಿ.
ಇನ್ನೂ ಈ ಪುಸ್ತಕದಲ್ಲಿ ಒಂಭತ್ತು ಕತೆಗಳಿವೆ, ಅದ್ರಲ್ಲಿನ ಕೊನೆ ಕತೆ ಗುಪ್ತ ಸಮಾಲೋಚನೆ ಅನ್ನು ದೇಶಕಾಲ ಮೂರನೇ ಸಂಚಿಕೆಯಲ್ಲೂ ನಾಲ್ಕನೇ ಸಂಚಿಕೆಯಲ್ಲೋ ಓದಿದ ನೆನಪು. ಆ ಕತೆಯ ಕೊನೆಯ ಸಾಲು ಸಕತ್. ಅವಳ ಹೆಣ ಬಾಗಿಲು ದಾಟಿತು. ನನಗೆ ಈಗಲೂ ಮೈ ಜುಮ್ಮೆನಿಸಿದ ಸಾಲುಗಳು.
ಮೀಸೆ ಬಂದ ಮಗಳು ಕಾಣೆಯಾಗಿ ಎಂದೋ ಅವಳು ಕಾಣೆಯಾದ ನೋಟೀಸು ಮನೆಗೆ ಬರುವ ಆರು ಎಂಟು ಇಪ್ಪತ್ತೊಂದು, ಏಕಾಏಕಿ ಪ್ರಭಾವಳಿ ಅಂಟಿಸಿಕೊಂಡ ದೇವರೇ ಆಗಿಬಿಡುವ ನೂಯಿ ಪಾಂಡುರಂಗರಾಯರು ಗಾಬರಿ ಬೀಳುವ ಅಂಬಕ್ಕ ಇರುವ ಕರುಣಾಳು ಬೆಳಕೇ ತೊಲಗು ಕತೆ,ನನಗೆ ಸಕತ್ ಮಜಾ ಕೊಟ್ಟ ಶನಿ ಕಾಟದ ಅಂಗಡಿ , ಎಂತ ಕತೆ ಅದು ,ಬೇರೆಯವರ ಶನಿ ಪೀಡೆ ತಾನು ಹೊತ್ತು ಕೊನೆಯಲ್ಲಿ ಅಲ್ಲಾಡಿ ಹೋಗುವ ಅದ್ಬುತ ಕತೆ.
ಪ್ರತಿ ಕತೆಯೂ ಒಂದು ವಾಸ್ತವದ ಬೋರಿಂಗ್ ರೂಟಿನ್, ಸಡನ್ನಾಗಿ ಶಿಫ್ಟ್ ಆಗುವ ಅವಾಸ್ತವ ಟ್ವಿಸ್ಟ್, ಒದ್ದಾಟ ಮತ್ತೆ ಕೊನೆಯಲ್ಲಿ ಮೈ ಜುಮ್ಮೆನಿಸುವ ಅಂತ್ಯ. ಗಿರಿಜಾ ಕಲ್ಯಾಣದ ಕತೆ ನೋಡಿ ಹೇಗಿದೆ, ಸ್ವರ್ಗಕ್ಕೆ ಹೋಗಿ ಗಿರಿಜೆಯನ್ನು ಮೀಟ್ ಮಾಡುವ ಗೋಪಾಲರಾಯ , ಅವನಿಗೆ ಸಪೋರ್ಟ್ ಮಾಡೋದು ಸಪ್ರೆ ಮಾಡಿದ ಟೈಮ್ ಟ್ರಾವೆಲ್ ಮಷೀನ್ . ಸರಿ ಸ್ವರ್ಗಕ್ಕೆ ಹೋಗಿ ಕುಮಾರ ಸಂಭವದ ಮೂವತ್ತೆಂಟು ಪೇಜಿನಲ್ಲಿ ಸಿಗುವ ಗಿರಿಜೆಯನ್ನು ನಿತ್ಯ ಮೀಟ್ ಮಾಡಿ ಒಂದಿನ ಅಲ್ಲಿಂದ ಭೂಮಿಗೆ ಎತ್ತಕೊಂಡು ಬಂದು ಲಾಡ್ಜಿನಲ್ಲಿ ನಾಲ್ಕು ದಿನ ಕಳೆದು ಆಮೇಲೆ ಬೋರಾಗಿ ವಾಪಸು ಕಲಿಸುವಾಗ ಎಡವಟ್ ಮಾಡ್ಕೋತಾರೆ ಕಳಿಸಬೇಕಾದರೆ ಸ್ವರ್ಗಕ್ಕೆ ಕಳಿಸುವ ಬದಲು ಕಾರಂತರ ಬೆಟ್ಟದ ಜೀವಕ್ಕೆ ಕಳಿಸಿಬಿಡುತ್ತಾರೆ ಅಲ್ಲಿ ಆ ಇಬ್ಬರು ದಂಪತಿಗಳು ಗಾಬ್ರಿ. ಯಾರಮ್ಮ ಈಯಮ್ಮ ಸಂಸ್ಕೃತ ಮಾತಾಡಿಕೊಂಡು ಬಳುಕುತ್ತ ಕಾಟ ಕೊಡ್ತಾ ಇದ್ದಳಲ್ಲ ಅಂತ. ಇತ್ತ ಭೂಮಿಯಲ್ಲಿ ವರ್ತಮಾನದಲ್ಲಿ ಕುಮಾರ ಸಂಭವ ಮತ್ತು ಬೆಟ್ಟದ ಜೀವ ಓದುತ್ತಿರೋರು ಫುಲ್ ಗಾಬರಿ, ಏನೇನೋ ಕಾದಂಬರಿ ಆಗಿ ಹೋಗ್ತಿದೆ ಅಂತ.ಕೊನೆಗೆ ಬೇರೇನೋ ಆಸೆಗೆ ನಮ್ ಗೋಪಾಲರಾಯರು ಯಾವುದೋ ಕ್ಯಾಬರೆ ಗೆ ಹೋಗಬೇಕಾದವರು ಕಿಂಕಿ ಆಂಟಿ ಕೈಯಲ್ಲಿ ಸಿಗಾಕೊಂಡು ಅಂಡಿಗೆ ಚಾಟಿ ಏಟು ಪಡೆಯುವಲ್ಲಿಗೆ ಎಂಡ್ ಆಗುತ್ತದೆ.
ಹೀಗೆ ಪ್ರತಿ ಕತೆಗಳು ಮಜವಾಗಿವೆ ಜೊತೆಗೆ ಬೇಗ ಓದಿಸಿಕೊಳ್ಳುತ್ತವೆ ಹೆಚ್ಚು ಕಮ್ಮಿ ಸೂರಿಯವರ ಎಲ್ಲ ಕತೆಗಳಲ್ಲಿ ಈ ಗುಣ ಇದೆ.
ಸೂರಿ ಕತೆಗಳ ಮಜಾ ಗೊತ್ತಿದ್ದವರು ತಪ್ಪದೆ ಓದಬೇಕಾದ ಪುಸ್ತಕ. ಸುರೇಂದ್ರನಾಥರ ಪುಸ್ತಕ ಓದದವರು ಅವರ ಯಾವ ಪುಸ್ತಕದಿಂದ ಓದು ಶುರು ಮಾಡಬಹುದು ಅವರು ಪಕ್ಕ ನಿಮಗೆ ಇಷ್ಟವಾಗುತ್ತಾರೆ ನಾನು ಗ್ಯಾರಂಟಿ
ಕಥಾಸಂಕಲನಗಳನ್ನು ಕೇವಲ ಚಹಾ ಸಮಯ ಕಳೆಯುವ ಜೊತೆಗಾರನಾಗಿ ನೋಡಬೇಕು ಮತ್ತೇನನ್ನು ಅದರಿಂದ ನಿರೀಕ್ಷಿಸಬಾರದು ಎಂಬುದು ನನ್ನ ಸೂತ್ರವಾದರೂ, ಪ್ರತಿಬಾರಿ ಈ ಸೂತ್ರದಿಂದ ಹೊರಬಂದು ಹೆಚ್ಚಿನದನ್ನು ನಿರೀಕ್ಷಿಸಿದಾಗ ಅವುಗಳಿಂದ ನಿರಾಸೆಯಾಗುತ್ತದೆ. ಇಲ್ಲೂ ಹಾಗೆ ಆಯಿತು. ಆದರೆ ನಿರೀಕ್ಷೆಗಳನ್ನು ಬದಿಗೊತ್ತಿ ಮಗುವಿನಂತೆ ಓದುತ್ತ ಹೋದರೆ ಇದು ಖಂಡಿತಾ ಉತ್ತಮ ಕಥಾಸಂಕಲನ. ಪುಸ್ತಕಗಳನ್ನು ಓದಿಸಿಕೊಳ್ಳುವ ಸಲುವಾಗಿ ಮಗುವಾಗುವ ಸಂಕಟ ಹೇಳ ತೀರದು!
ಸುರೇಂದ್ರನಾಥರ--ಅವರೇ ಹೇಳುವಂತೆ--ಒಂದು ಕಟ್ಟು ಕಥೆಗಳು ಈ ಸಂಕಲನದಲ್ಲಿವೆ. ಕನ್ನಡದಲ್ಲಿ ನಾವು ಸಾಮಾನ್ಯವಾಗಿ ಓದುವ ಕಥೆಗಳಿಗಿಂತ ವಿಭಿನ್ನವಾಗಿರುವ ಕಥೆಗಳು. ಸ್ವಾರಸ್ಯಕರವಾಗಿವೆ. ಅತಿರಂಜಿತ ಘಟನೆ ಹಾಗೂ ಪಾತ್ರಗಳು ಪ್ರತಿ ಕತೆಯಲ್ಲಿಯೂ ಬರುತ್ತವೆ. ಸಾಹಿತ್ಯದಲ್ಲಿ ಹೆಚ್ಚಿನಮಟ್ಟಿಗೆ ವರ್ಜ್ಯ ಎನ್ನಿಸಿಕೊಂಡ, ಅಥವಾ ಸೂಕ್ಷ್ಮವಾಗಿ ಮೂಡಿಬರುವ ವಸ್ತುವಿಷಯಗಳು ಇಲ್ಲಿ ಢಾಳಾಗಿ ಒದಗುತ್ತವೆ. ಆದರೆ ರಂಜನೆ ಹಾಗೂ ಶಾಕ್ ಕೊಡುವುದಕ್ಕಿಂತಲೂ ಹೆಚ್ಚಿನ ವೈಶಿಷ್ಟ್ಯವೇನೂ ನನಗೆ ಈ ಕತೆಗಳಲ್ಲಿ ತೋರಲಿಲ್ಲ. ಸುರೇಂದ್ರನಾಥರ ಕಥಾಪ್ರಪಂಚದ ಹರವೂ ಸೀಮಿತ ಎನ್ನಿಸುತ್ತದೆ.